ವಿಜಯನಗರ ಕಾಲದ ಹಬ್ಬಾಚರಣೆಗಳ ಕುರುಹಾಗಿ ಇಂದು ಕರ್ನಾಟಕದಾದ್ಯಂತ ಉಳಿದಿರುವ ಬೊಂಬೆಹಬ್ಬ ಮುಂತಾದವು ಗಮನಾರ್ಹ. ಅದೇ ತೆರನಾಗಿ ಈ ದಸರಾ ಉತ್ಸವದಲ್ಲಿ ಸೈನಿಕರಿಗೆ ಹೆಚ್ಚಿನ ಮಹತ್ವವಿತ್ತು. ರಾಯರ ಕಾಲದಲ್ಲಿ ಸೈನಿಕರು ಪ್ರದರ್ಶಿಸುತ್ತಿದ್ದ ವಿವಿಧ ಬಗೆಯ ಖಡ್ಗದಾಟ, ಬಾಣದ ಸಿಡಿತ, ಕುಸ್ತಿ ಮೊದಲಾದವು ಉತ್ಸವದಲ್ಲಿ ಹೆಚ್ಚಿನ ಮಹತ್ವವನ್ನು ಹೊಂದಿದ್ದವು. ಅದರ ಕುರುಹು ಎಂಬಂತೆ ಇಂದಿಗೂ ಮೀನಗೊಂದಿ ಮಲ್ಲಯ್ಯನ ದಸರಾ ಉತ್ಸವದಲ್ಲಿ ನಡೆಯುವ ಬಡಿಗೆ ಆಟವು ವಿಜಯನಗರ ಕಾಲದ ಯೋಧ ಪರಂಪರೆಯ ಪ್ರತೀಕ ಎಂಬುದನ್ನು ಗುರುತಿಸಬಹುದು. ವರ್ತಮಾನದಲ್ಲಿ ನಿಂತು ಗತಕಾಲವನ್ನು ಅವಲೋಕಿಸಿದರೆ ಅದೆಷ್ಟೋ ಸಾಂಸ್ಕೃತಿಕ ಚಹರೆಗಳ ರೂಪರೇಷೆಯು ನಮಗೆ ದೊರೆಯುತ್ತವೆ. ಇದರಿಂದ ಗತದ ಚರಿತ್ರೆಯು ನಮ್ಮೆದುರಿಗೆ ಕಟ್ಟಿಕೊಳ್ಳುತ್ತದೆ. ಇಂದು ಅಲ್ಲಲ್ಲಿ ಸಾಂಕೇತಿಕವಾಗಿ ಉಳಿದುಕೊಂಡಿರುವ ಹಲವಾರು ಹಬ್ಬಾಚರಣೆಗಳು ಚರಿತ್ರೆಯ ಮುಖ್ಯ ಘಟನೆಗಳನ್ನು ಪ್ರತಿನಿಧಿಸುತ್ತವೆಯೆಂಬುದನ್ನು ಗಮನಿಸಬೇಕು.

ಮೀನಗೊಂದಿಯು ಇಂದು ಆಲೂರು ತಾಲ್ಲೂಕು ಕರ್ನೂಲು ಜಿಲ್ಲೆಯಲ್ಲಿದೆ. ಇದನ್ನು ‘ದೇವರಗುಡ್ಡ’ ಎಂದು ಕರೆಯಲಾಗುತ್ತದೆ. ಇಲ್ಲಿನ ಮುಖ್ಯ ದೈವ ಮಲ್ಲಯ್ಯ. ಮೂಲತಃ ಇದು ಮೈಲಾರ ಕ್ಷೇತ್ರ. ಮೈಲಾರ ಕ್ಷೇತ್ರಗಳೆಲ್ಲವುಗಳಲ್ಲಿ ಕಾರಣಿಕ ಮುಂತಾದ ಆಚರಣೆಗಳಿವೆ. ಆದರೆ ಮೀನಗೊಂದಿಯಲ್ಲಿ ಈ ಬಡಿಗೆಯಿಂದ ಹೊಡೆದಾಡುವ ಅಥವಾ ಬಡಿಗೆಯಿಂದ ಉತ್ಸವ ಮೂರ್ತಿಗಳನ್ನು ಮೆರೆಸುತ್ತಾ ಬರುವ ಪದ್ಧತಿಯು ವಿಜಯನಗರೋತ್ತರ ಕಾಲಾವಧಿಯಲ್ಲಿ ರೂಢಿಯಾಗಿರಬೇಕು. ಮೀನಗೊಂದಿಯ ಪರಿಸರದ ಆದವಾನಿ, ಕೌತಾಳಂ, ಕೋಟಕಲ್ಲು, ಬೂದೂರು, ಕುರುಕುಂದೆ, ಗೂಳ್ಯ, ಚಿಪ್ಪಗಿರಿ,  ಬೆಳ್ಡೊಣೆ, ಬೊಳಗೋಟಿ, ಸುಳುವಾಯಿ, ಹತ್ತಿಬೆಳಗಲ್ಲುಗಳಲ್ಲಿ ದೊರೆಯುವ ವಿಜಯನಗರ ಕಾಲದ ಅನೇಕ ಶಾಸನಗಳಲ್ಲಿ ಈ ಬಡಿಗೆಹಬ್ಬ ಕುರಿತಾದ ಉಲ್ಲೇಖಗಳು ಕಂಡುಬರುವುದಿಲ್ಲ. ಆದರೂ ಮೌಖಿಕ ಕಥನಗಳು ಮತ್ತು ಸ್ಥಳೀಯ ಮೌಖಿಕ ಹೇಳಿಕೆಗಳಿಂದ ಇದನ್ನು ನಿರೂಪಿಸಿಕೊಳ್ಳಬೇಕಾಗಿದೆ. ಅಂತೆಯೇ ವಿದೇಶೀಯರು ವಿಜಯನಗರವನ್ನು ಕಂಡು ಬರೆದ ಪ್ರವಾಸಿ ಬರೆಹ, ರತ್ನಾಕರವರ್ಣಿಯ ‘ಭರತೇಶ ವೈಭವಗಳು’ ಇದಕ್ಕೆ ಮತ್ತಷ್ಟು ಆಧಾರಗಳನ್ನು ಒದಗಿಸುತ್ತವೆ.

ವಿಜಯನಗರದ ದಸಾರ ಉತ್ಸವವನ್ನು ಪಯಾಸ್‌“ವಿಜಯದಶಮಿಯ ದಿನ ರಾಜಧಾನಿಯ ಪ್ರಮುಖ ಸ್ಥಳಗಳಲ್ಲಿಯೂ ರಸ್ತೆಗಳಲ್ಲಿಯೂ ಸೈನ್ಯಗಳು ಸಾಲುಗಟ್ಟಿ ನಿಂತಿರುತ್ತಿದ್ದವು. ಸರೋವರ ಅಥವಾ ಕೆರೆಗಳಿದ್ದೆಡೆಯಲ್ಲಿಯೂ ಸೈನಿಕರು ನಿಂತಿದ್ದರು. ರಸ್ತೆಗಳು ಕಿರಿದಾಗಿದ್ದರಿಂದ ಬೆಟ್ಟ-ಗುಡ್ಡಗಳ ಹತ್ತಿರ, ಮೇಲೆ ನಿಲ್ಲಿಸುತ್ತಿದ್ದರು. ಪ್ರತಿಯೊಂದು ದಂಡಿನ ತುಕಡಿಯ ಮುಂದೆ ಒಬ್ಬ ದಂಡನಾಯಕ ಇರುತ್ತಿದ್ದ . ಆನೆ, ಕುದುರೆಗಳೂ ಇರುತ್ತಿದ್ದವು. ಯುದ್ಧಕ್ಕೆ ಹೊರಟವರಂತೆ ಕಾಣುತ್ತಿರುತ್ತಾರೆ.  ಸೇನೆಗಳ ಹತ್ತಿರ ರಾಯನು ಬಂದಾಗ ಸಿಡಿಮದ್ದನ್ನು ಹಾರಿಸುತ್ತಿದ್ದರು” ಎಂದು ವರ್ಣಿಸುತ್ತಾನೆ. ಮೀನಗೊಂದಿಯ ಪರಿಸರದಲ್ಲಿಯೂ ಈ ಬಗೆಯ ಭೌಗೋಳಿಕ ಚಹರೆಯಿದ್ದು ಕೆರೆಯ ದಂಡೆ, ಬೆಟ್ಟ. ಗುಡ್ಡಗಳ ಮೇಲೆ ಬಡಿಗೆಯನ್ನಿಡಿದು ಸೈನಿಕರೋಪಾದಿಯಲ್ಲಿ ಜನರು ನಿಂತಿರುತ್ತಾರೆ. ಹೆಗ್ಗಡೆಯು ಕುದುರೆಯ ಮೇಲೆ ಬಂದನಂತರ ಇಲ್ಲಿಯೂ ಔಟನ್ನು (ಸಿಡಿಮದ್ದು) ಹಾರಿಸುತ್ತಾರೆ.

ಅದೇ ರೀತಿಯಾಗಿ ಪಯಾಸ್‌ಉಲ್ಲೇಖಿಸುವಂತೆ, ‘ರಾಜನು ಸಿಂಹಾಸನದ ಮೇಲೆ ಕುಳಿತು ನಾರಿಯರ ಹಾಗೂ ನೃತ್ಯಗಾತಿಯರ, ವೇಶ್ಯಾ ಸ್ತ್ರೀಯರ ಹಲವಾರು ನೃತ್ಯ ವೀಕ್ಷಿಸುತ್ತಿದ್ದನು’ ಎಂದು ಹೇಳುತ್ತಾನೆ. ಮೀನಗೊಂದಿಯಲ್ಲಿಯೂ ದೊರೆ ಎಂದೆನಿಸಿಕೊಂಡ ಹೆಗ್ಗಡೆಯು ಸಿಂಹಾಸನ ಕಟ್ಟೆಯ ಮೇಲೆ ಕುಳಿತುಕೊಲ್ಳುತ್ತಾನೆ. ಆಗ ಬಸವಿಯರು ಕುಣಿದು ನೃತ್ಯ ಮಾಡುವುದನ್ನು ವೀಕ್ಷಿಸುತ್ತಾನೆ.

ವಿಜಯದಶಮಿಯ ದಿನ ದಂಡಾಳುಗಳಲ್ಲದೇ ಸಾಮಾನ್ಯ ಜನರೂ ಇದರಲ್ಲಿ ಭಾಗವಹಿಸಿ ತಮ್ಮ ಆನಂದೋತ್ಸಾಹಗಳಲನ್ನು ಗಮನಾರ್ಹವಾಗಿ ಪ್ರಕಟಿಸುತ್ತಿದ್ದರು. ದಂಡಾಳುಗಳು ಆಗಾಗ್ಗೆ ತಂಡೋಪತಂಡವಗಿ ಬೆಟ್ಟಗುಡ್ಡಗಳ ಇಳಿಜಾರಿನಿಂದ ಕೆಳಗಡೆಗೆ ನುಗ್ಗಿ ಬರುತ್ತಾ ಕೇಕೆಗಳನ್ನು ಹಾಕುತ್ತಾ ತಮ್ಮ ಕೈಗಳಲ್ಲಿದ್ದ ಗುರಾಣಿಗಳನ್ನು ಬಡಿಯುತ್ತಾ ಹಿಡಿದಿದ್ದ ಆಯುಧಗಳನ್ನು ಝಳಪಿಸುತ್ತಿದ್ದರೆಂದು ವಿಜಯನಗರದ ಉತ್ಸವ ಕುರಿತು ಹೇಳುತ್ತಾರೆ. ಅದರಂತೆ ಮೀನಗೊಂದಿಯಲ್ಲಿಯೂ ಜನರು ತಮ್ಮ ಕೈಗಳಲ್ಲಿ ಹಿಡಿದ ಉದ್ದವಾದ ಬಡಿಗೆಗಳಲನ್ನು ತಂಡೋಪತಂಡವಾಗಿ ನಿಂತು ಬಡಿಯುತ್ತಾರೆ. ನೆರೆದ ಸಾಮಾನ್ಯ ನೋಡುಗರು ಅವರಿಗೆ ಭಂಡಾರವನ್ನು ಚೆಲ್ಲಿ ಕೇಕೆ ಹೊಡೆದು ಹುರಿದುಂಬಿಸುತ್ತಾರೆ. ಆಯಾ ಗ್ರಾಮಗಳಿಂದ ಬಂದ ಬಡಿಗೆ ಹಿಡಿದ ಗುಂಪು ಅಲ್ಲಲ್ಲಿ ಚಿಕ್ಕ ಬೆಟ್ಟಗಳ ಮೇಲಿನಿಂದ ಬಡಿಗೆಯ ನಾದವನ್ನು ಪ್ರದರ್ಶಿಸುತ್ತಾರೆ.

ಭರತೇಶ ವೈಭವದಲ್ಲಿ ದಿಗ್ವಿಜಯ ಪ್ರಕರಣದ ನವರಾತ್ರಿ ಸಂಧಿಯಲ್ಲಿ ರತ್ನಾಕರ ವರ್ಣಿಯು ರಾಯನ ಕಾಲದ ನವರಾತ್ರಿಯ ವೈಭವವನ್ನು ವರ್ಣಿಸಿದ್ದಾನೆ. ಅಲ್ಲಿ ಓಲಗ ರಾತ್ರಿ ನೆರೆಯಿತು. ಅನೇಕ ಬಗೆಯ ಬಾಣಗಳನಹ್ನು ಉರಿಸುತ್ತಿದ್ದರು. ಕತ್ತಿ, ಕಠಾರಿ, ಬೆತ್ತ, ಕಕ್ಕಡೆ, ಕೊಡಲಿ, ಚೂರಿ ಮುಂತಾದವುನ್ನು ಪ್ರದರ್ಶಿಸುತ್ತಿದ್ದ ಜನರನ್ನು ಭೂಪಾಲ ನಿಂತು ನೋಡಿದ ವಿವರಗಳಿವೆ. ಇದಕ್ಕೆ ಹೋಲುವಂತೆಯೇ ದೇವರಗುಡ್ಡ (ಮೀನಗೊಂದಿ)ದಲ್ಲಿ ಬಡಿಗೆಹಬ್ಬ ರಾತ್ರಿ ನೆರವೇರುತ್ತದೆ. ಬಂದಂತಹ ಭಕ್ತಾದಿಗಳು ತಮ್ಮ ಆಯುಧಗಳನ್ನು ಪ್ರದರ್ಶಿಸುತ್ತಾರೆ.

ಮೀನಗೊಂದಿಯಲ್ಲಿಯೂ ಹೆಗ್ಗಡೆ ಅಥವಾ ಗೊರವಪ್ಪ ಸೈನಿಕರೋಪಾದಿಯಲ್ಲಿ ನಿಂತ ಬಡಿಗೆಧಾರಿಗಳನ್ನು ನೋಡುತ್ತಾ ಬನ್ನಿಮರದ ಕಟ್ಟೆಗೆ ಬಂದು ಪೂಜೆಯಾದ ಬಳಿಕ ಮಹಾನವಮಿ ಮುಕ್ತಾಯವಾಗುತ್ತದೆ.

ವಿಜಯನಗರದಲ್ಲಿ ನಡೆಯುತ್ತಿದ್ದ ಮಹಾನವಮಿ ಹಬ್ಬದ ವಿವರಗಳನ್ನು ಮೀನಗೊಂದಿ ಹಬ್ಬಕ್ಕೆ ಹೋಲಿಸಲು ಕಾರಣವಿಷ್ಟೇ, ರಾಜಧಾನಿಯಾದ ಹಂಪಿಯಲ್ಲಿ ಚಕ್ರವರ್ತಿಯ ಸಮ್ಮುಖದಲ್ಲಿ ನಡೆಯುತ್ತಿದ್ದ ಈ ಸೈನಿಕರ ಕವಾಯತು, ಶೌರ್ಯ ಪ್ರದರ್ಶನ ಅವರ ಆಡಳಿತಕ್ಕೆ ಒಳಪಟ್ಟ ಎಲ್ಲಾ ಪ್ರದೇಶಗಳಲ್ಲಿಯೂ ಆಯಾ ರಾಜರು, ಸಾಮಂತರು, ನಾಯಕರು ಮುಂತಾದವರು ಆಚಸಿರಬೇಕು. ಅಲ್ಲದೇ ವಿಜಯನಗರದ ಈ ಸಮೃದ್ಧಿಯು ಕೃಷ್ಣದೇವರಾಯನ ದಂಡುಬೀಡು ಬಿಟ್ಟಿದ್ದ ಪಾಳೆಯದಲ್ಲಿಯೂ ಕಾಣಬಹುದು ಎಂದು ವಿದೇಶಿ ಪ್ರವಾಸಿಗ ನ್ಯೂನಿಜ್‌ಉಲ್ಲೇಖಿಸುತ್ತಾನೆ. ಬಹುಶಃ ವಿಜಯನಗರ ಕಾಲದಲ್ಲಿ ಸೈನಿಕರು ಈ ಮೀನಗೊಂದಿ ಪರಿಸರದ ವಿಶಾಲವಾದ ಬೆಟ್ಟಗಳ ನಡುವಿನ ಮೈದಾನದಲ್ಲಿ ಬೀಡುಬಿಟ್ಟಿದ್ದಿರಬೇಕು. ಅಲ್ಲದೇ ಇಲ್ಲಿರುವ ‘ಮದ್ದಿನಮನೆ’ ಎಂಬುದು ಅವರ ಮದ್ದುಗುಂಡು, ಆಯುಧಾಗಾರವಾಗಿದ್ದಿರಬೇಕು. ಇದನ್ನು ಜನಸಾಮಾನ್ಯರೂ ಐತಿಹ್ಯಕಟ್ಟಿ ಕೃಷ್ನದೇವರಾಯನ ಸೈನಿಕರು ಇದ್ದ ಜಾಗ’ ಎಂದು ಹೇಳುತ್ತಾರೆ. ದಂಡು ಬೀಡು ಬಿಟ್ಟಿದ್ದ ಈ ಪ್ರದೇಶದಲ್ಲಿ ವಿಜಯದಶಮಿಯ ದಿನದಂದು ಆನಂದೋತ್ಸಾಹದಿಂದ ಕುಣಿದಾಡಿರಬೇಕು. ಈ ಪರಂಪರೆಯೇ ಇಂದಿಗೂ ಉಳಿದಿರುವ ಸಾಧ್ಯತೆಯಿದೆ. ಮೂಲತಃ ಈ ಮೀನಗೊಂದಿ ಕ್ಷೇತ್ರವು ಮೈಲಾರ ಕ್ಷೇತ್ರವಾದರೂ, ವಿಜಯನಗರ ಕಾಲಕ್ಕೆ ಈ ಸೈನಿಕರು ಇಲ್ಲಿ ಬೀಡುಬಿಟ್ಟು ಇಂತಹ ಸೈನಿಕ ಹಬ್ಬಕ್ಕೆ ಕಾರಣವಾಗಿರಬಹುದು. ಇಂದು  ಅದು ಬಡಿಗೆಯಿಂದ ಹೊಡೆದಾಡುವ ರೂಪದಲ್ಲಿ ವಿಜಯನಗರದ ಯೋಧ ಪರಂಪರೆಯ ಪ್ರತೀಕವಾಗಿರಬಹುದೆಂದು ಊಹಿಸಬಹುದು.

ಆಕರ
ವಿಜಯನಗರ ಅಧ್ಯಯನ, ಸಂ. ೯, ೨೦೦೪, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಹೊಸಪೇಟೆ, ಪು. ೫೪-೫೭.