ಜನಪದರು  ತಮ್ಮ ಬಿಡುವಿನ ವೇಳೆಯಲ್ಲಿ, ತಮ್ಮದೇ ಆದ ಹಲವಾರು ನೀತಿ ನಿಯಮಗಳ ಚೌಕಟ್ಟಿನಲ್ಲಿ ಪರಸ್ಪರ ಸ್ಪರ್ಧಾತ್ಮಕ ಮನೋಭಾವಕ್ಕಿಂತ ಹೆಚ್ಚಾಗಿ ಜಾಣ್ತನದ ಕೆಲವು ಆಟಗಳನ್ನು ಆಡುತ್ತಾರೆ. ಇವುಗಳಾವು ಇಂದಿನ ಪಠ್ಯರೂಪಿ ಆಟಗಳಾಗಿರದೆ ಜನಪದರೆ ಸೃಷ್ಟಿಸಿಕೊಂಡು ಆಡುವಂತಹವು. ಇವುಗಳಿಗೆ ಜನಪದ ಆಟ ಎಂಬುದಾಗಿ ಕರೆಯುತ್ತೇವೆ.

ಜನಪದ ಆಟಗಳನ್ನು ಕೇವಲ ಒಂದು ಕಾಲಹರಣದ, ಸಮಯ ಕಳೆಯುವ ಆಟ, ಬಿಡುವಿನ ವೇಳೆಯ ಆಟ, ಜನಸಾಮಾನ್ಯರ ಆಟ ಎಂಬುದನ್ನು ದೂರಮಾಡಿ ಯೋಚಿಸಿದಾಗ ಮಾತ್ರ ಜನಪದ ಆಟಗಳ ಸಾಂಸ್ಕೃತಿಕ ಜಗತ್ತಿಗೆ ದಾರಿಯನ್ನು ಕಂಡುಕೊಳ್ಳಲು ಸಾಧ್ಯವಾಗುತದೆ. ಜನಪದ ಆಟಗಳು ಜನಪದರ ಬುದ್ಧಿಯನ್ನು ಸಾಣೆ ಹಿಡಿಯುವ ಕುಲುಮೆಗಳು. ಹಾಗಾಗಿ ಜನಪದ ಆಟಗಳಲ್ಲಿ ಚಮತ್ಕಾರತೆ, ತೀಕ್ಷ್ಣಬುದ್ಧಿವಂತಿಕೆ ಹಾಗೂ ದಟ್ಟವಾದ ಅರಿವು ಮಹತ್ವದ ಪಾತ್ರವಹಿಸುತ್ತದೆ. ಹಾಗೆಯೇ ಜನಪದರ ಜನಸಾಮಾನ್ಯರ ಯೋಚನೆಯ ಚಿಂತನೆಯ ವಿಷಯಗಳು ಫಲಗೊಳ್ಳುವುದು ಜನಪದ ಆಟಗಳಲ್ಲಿ. ತನ್ನ ಚಿಂತನೆ ಆಲೋಚನೆ ಹಾಗೂ ದೂರದೃಷ್ಟಿಗಳನ್ನು ಒಂದು ನಕಾಶೆ ಚೌಕಟ್ಟಿಗೆ ಜೋಡಿಸಿ ಆ ಮೂಲಕ ತನ್ನ ಫಲಯಾಚನೆಯನ್ನು ಕಂಡುಕೊಳ್ಳಲು ಮಾನವ ಪ್ರಯತ್ನಿಸಿರಬೇಕು. ಸಾಮಾನ್ಯವಾಗಿ ಗ್ರಾಮೀಣ ಬದುಕಿನ ಜನರಲ್ಲಿ ನಾವು ಸೂಕ್ಷ್ಮವಾಗಿ ಗಮನಿಸಿದರೆ ಅವರು ತಾವು ಕುಳಿತು ಮಾತನ್ನಾಡುವಾಗ ಹಲವಾರು ವಿಷಯಗಳಿಗೆ ನೆಲದ ಮೇಲೆ, ಅಥವಾ ತಾವು ಕುಳಿತ ಸ್ಥಳದಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ಗೆರೆ ಎಳೆಯುತ್ತ ಗೀಚುತ್ತ ಮಾತನ್ನಾಡುತ್ತಾರೆ. ಹಾಗೆಯೇ ಹಲವು ವಿದ್ಯಾವಂತ ವರ್ಗದಲ್ಲೂ ಬೇರೆಯವರೊಡನೆ ಮಾತನ್ನಾಡುವಾಗ ತಮ್ಮ ಮುಂದಿನ ಕುರ್ಚಿ ಅಥವಾ ಮೇಜಿನ ಕಾಗದದ ಮೇಲೆ ಗೀಚುತ್ತ ಮಾತನ್ನಾಡಿಸುತ್ತಾರೆ. ಇಲ್ಲಿ ನಿರ್ಮಾಣವಾಗುವ ಒಂದೊಂದು ಗೀಚು ಗೆರೆಗಳು ಅವರು ಏನು ಹೇಳಬೇಕು ಎನ್ನುತ್ತಾರೋ ಅದರ ಸಾಂಕೇತಿಕ ಅಂಶಗಳನ್ನು ಸೂಚಿಸುತ್ತವೆ. ಇದನ್ನೇ ಆದಿಮ ಸಂಸ್ಕೃತಿಯ ಜನರಲ್ಲೂ ಕಾಣಬಹುದು. ಹೀಗೆಯೇ ಮಾನವ ತನ್ನ ಬದುಕಿನ ಹಲವಾರು ವಿಚಾರಗಳನ್ನು ಸಾಂಕೇತಿಕ ಗೆರೆಗಳ ಮೂಲಕ ರೂಪಿಸಿಕೊಂಡು ಅದಕ್ಕೆ ಕಂಡುಕೊಂಡ ಪರಿಹಾರದ ಬಗೆಗೆ ಯೋಚಿಸುತ್ತ ಮತ್ತೆಮತ್ತೆ ಅದನ್ನು ಮನನ ಮಾಡುತ್ತ ತನ್ನ ಹಿಂದಿನ ಆಲೋಚನೆಯ ಪುನಃ ಮನನವನ್ನು ಆರಂಭಿಸಿದಾಗಿನಿಂದ ಇಂತಹ ನಕಾಶೆಯ ಚಿಂತನ ಮಂಥನದ ಜನಪದ ಆಟಗಳು ಆರಂಭಗೊಂಡಿರಬಹುದೆಂದು ತೋರುತ್ತದೆ.

ಹುಲಿಮನೆ ಆಟ

ಜನಪದರಲ್ಲಿ ಹೆಚ್ಚಾಗಿ ಕಂಡುಬರುವ ನಕಾಶೆ ಮನೆಗಳನ್ನು ನಿರ್ಮಿಸಿಕೊಂಡು ಆಡುವ ಆಟವೆಂದರೆ ಹುಲಿಮನಿ ಆಟ, ಚಕಾರಮನಿಯಾಟ, ಕೈಲಾಸ ಪಟದಾಟ, ಪಗಡಿಮನಿ ಆಟ, ಸರಿಸೋ ಆಟ, ಇತ್ಯಾದಿ ಜನಪದ ಆಟಗಳು ಪ್ರಮುಖವಾಗಿ ಕಂಡುಬರುತ್ತವೆ. ಹುಲಿಮನೆ ಯಾಟದ ಬಗೆಗೆ ಹೀಗೆ ಅರ್ಥೈಸಬಹುದೆನಿಸುತ್ತದೆ. ಸಾಮಾನ್ಯವಾಗಿ ಎಲ್ಲಾ ಗ್ರಾಮೀಣ ಬದುಕಿನ ಜನರಲ್ಲೂ ಪ್ರಚಲಿತವಿರುವ ಆಟ ‘ಹುಲಿಮನಿ’ ಆಟ. ಕೃಷಿ ಹಾಗೂ ಪಶುಪಾಲಕ ಬದುಕಿನ ಸಮುದಾಯಗಳಲ್ಲಿ ಇಂದಿಗೂ ಹೆಚ್ಚಾಗಿ ಕಂಡುಬರುವುದು.  ಈ ಆಟಕ್ಕೆ ತ್ರಿಭುಜಾಕಾರದ ನಕಾಶೆಪಟ ಬರೆದು ಅದರ ಒಂದೊಂದು ಗೆರೆಗಳು ಸಂಧಿಸುವ ಸ್ಥಳಗಳಲ್ಲಿ ಒಂದು ಎರಡು, ನಾಲ್ಕು ಹೀಗೆ ಹುಲಿ ಎಂಬುದಾಗಿ ಸಂಕೇತಿಸಿ ಕೆಲವು ಕಲ್ಲುಗಳನ್ನು ಇಡುತ್ತಾರೆ. ಅನಂತರ ಹೆಚ್ಚಿನ ಸಂಖ್ಯೆಯ ಸಣ್ಣ ಸಣ್ಣ ಕಲ್ಲುಗಳನ್ನು ನಕಾಶೆಯ ಗೆರೆಗಳು ಸಂಧಿಸುವ ಸ್ಥಳಗಳಲ್ಲಿ ಇಟ್ಟಿರುತ್ತಾರೆ. ಇಲ್ಲಿ ಆಟ ನಡೆಯುವುದು ಹುಲಿ ಆಕಳುಗಳನ್ನು ತಿನ್ನಲು ಹೊಂಚು ಹಾಕುವುದು. ಅದರಿಂದ ಆಕಳು ಹೇಗೆ ತಪ್ಪಿಸಿಕೊಳ್ಳಬೇಕು ಹುಲಿಯನ್ನು ಹೇಗೆ ಬಂಧಿಸಿಡಬೇಕು ಎಂಬ ಚಿಂತನಮಂತನದ ಚಾಣಾಕ್ಷ ಆಟ ಇದಾಗಿದೆ. ಇಲ್ಲಿ ಒಬ್ಬರು ಹುಲಿಯ ಸಂಕೇತದ ಕಾಯಿ (ಕಲ್ಲು)ಗಳನ್ನು ಮತ್ತೊಬ್ಬರು ಆಕಳುಗಳ ಸಂಕೇತದ ಕಾಯಿ (ಕಲ್ಲು) ಗಳನ್ನು ನಡೆಸುತ್ತಾರೆ.  ಬಲಿಷ್ಠವಾದ ಹುಲಿಯು ರಾಸುಗಳ ಗುಂಪಿನ ಮೇಲೆ ಬೀಳದಂತೆ ಅದನ್ನು ತಡೆಯುವ ಹಾಗೂ ಕಟ್ಟಿಹಾಕುವ ಬೌದ್ಧಿಕ ಕಸರತ್ತು ಈ ಆಟದಲ್ಲಿ ಕಂಡುಬರುತ್ತದೆ. ಈ ಮೇಲಿನ ಎಲ್ಲಾ ವಿವರಗಳು ಹಾಗೂ ಆಟದ ಗುಣಧರ್ಮ, ಈ ಆಟ ಪ್ರಚಲಿತದಲ್ಲಿರುವ ಸಮುದಾಯಗಳೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ಪಶುಪಾಲಕ ಸಮುದಾಯವೊಂದು ಸೃಷ್ಟಿಸಿರಬಹುದಾದ ಆಟ ಎಂಬುದಾಗಿ ತಿಳಿದುಬರುತ್ತದೆ. ಸಾಮಾನ್ಯವಾಗಿ ಜಾನಪದ ಅಭಿವ್ಯಕ್ತಿ ಎಂಬುದು ಅನುಭವದ ಮೂಸೆಯಿಂದ ಕಾವುಗೊಂಡು ಸೃಷ್ಟಿಗೊಳ್ಳುವಂತಹದು.

ನಿರಂತರವಾಗಿ ಪಶುಪಾಲನ ವೃತ್ತಿಯನ್ನೇ ಅವಲಂಬಿಸಿ ಬದುಕುತ್ತಿದ್ದ ಜಪದರು (ಪಶುಪಾಲಕರು) ತಾವುಗಳು ಬದುಕುತ್ತಿದ್ದ ನದಿ ಕಣಿವೆ ಅಥವಾ ಬೆಟ್ಟಗುಡ್ಡ ಪ್ರದೇಶಗಳಲ್ಲಿ ತಮ್ಮ ಜೀವನ ಸಂಪತ್ತಾದ ರಾಸುಗಳನ್ನು ಸಂರಕ್ಷಿಸಿ ಉಳಿಸಿಕೊಂಡು ಬದುಕುವುದು ಅವರ ಬಹುಮುಖ್ಯ ಕೆಲಸ ಕೂಡ. ಹಾಗಾಗಿ, ಆಗಿಂದಾಗ್ಗೆ ತಮ್ಮ ರಾಸುಗಳ ಮೇಲೆ ದಾಳಿ ನಡೆಸುತ್ತಿದ್ದ ಕ್ರೂರ ಪ್ರಾಣಿಗಳನ್ನೂ ಹೇಗೆ ತಡೆಯಬೇಕು. ಹಾಗೂ ಕ್ರೂರ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ತಾವು ಹಾಗೂ ತಮ್ಮ ರಾಸುಗಳು ಎಂತಹ ಸ್ಥಳದಲ್ಲಿ ನೆಲೆ ನಿಲ್ಲಬೇಕು ಇತ್ಯಾದಿಯಾಗಿ ಯೋಚಿಸುತ್ತಿದ್ದ ಪಶುಪಾಲಕ ಮನಸ್ಸುಗಳ ಆಲೋಚನೆಯ ಸೃಷ್ಟಿಯೇ ಹುಲಿಮನಿ ಆಟ ಎನಿಸುತ್ತದೆ . ಏಕೆಂದರೆ ಇದೊಂದು ಆಲೋಚಿತ ಪಶುಪಾಲಕ ಮನಸ್ಸುಗಳು ಕಂಡುಕೊಳ್ಳ ಬಯಸಿದ ತಮ್ಮ ರಾಸುಗಳ ಸಂರಕ್ಷಣೆಯ ತಂತ್ರ ಶೈಲಿ ಕೂಡ. ನಂತರ ಇದು ಅವರಲ್ಲೇ ಒಂದು ಆಟವಾಗಿ ರೂಪುಗೊಂಡಿರಬಹುದೆನಿಸುತ್ತದೆ . ಇಂದಿಗೂ ಕುರಿ, ದನ, ಎಮ್ಮೆ, ಕಾಯುವವರು ತಮ್ಮ ರಾಸುಗಳನ್ನು ಮೇಯಲು ಬಿಟ್ಟು, ತಾವು ಕುಳಿತ ಬಂಡೆಕಲ್ಲಿನ ಮೇಲೆ ಹಲವಾರು ನಕಾಶೆಪಟಗಳನ್ನು ಬರೆದು ಇಂತಹ ಆಟಗಳನ್ನು ಆಡುತ್ತಿರುತ್ತಾರೆ . ‘ಹುಲಿಮನಿ’ ಆಟದಲ್ಲಿ ಹಲವು ಬಗೆಯ ನಕಾಶೆ ಪಟಗಳು ಕಂಡುಬರುತ್ತವೆ.

ಈ ನಕಾಶೆ ಪಟವು ಒಂಟಿ ಹುಲಿಮನಿ ಆಟದ್ದು. ಇದು ಒಂದು ಹುಲಿಯನ್ನು ಬಂಧಿಸುವ ಅಥವಾ ಕಟ್ಟಿ ಹಾಕುವ ಬಗೆಗಿನ ಈ ಆಟವನ್ನು ಸಹ ಪರಸ್ಪರ ಇಬ್ಬರು ಆಟಗಾರರು ಆಡುತ್ತಾರೆ . ಇದು ಹುಲಿಮನಿ ಆಟದ ಕಲಿಕೆಯ ಹಂತವೂ ಹೌದು.  ಈ ನಕಾಶೆ ಪಟವು ಒಂಟಿ ಬೆಟ್ಟದ ಜಾಡನ್ನು ನೆನಪಿಗೆ ತರುವಂತೆ ಕಂಡು ಬರುತ್ತದೆ.

ಒಂಟಿ ಹುಲಿಮನಿ ಆಟದ ವಿಸ್ತ್ರುತ ರೂಪ ಈ ಜೋಡಿ ಹುಲಿಮನಿ ಆಟ. ಇಲ್ಲಿ ಎರಡು ಹುಲಿಗಳ (ಕಾಯಿ) ಕಲ್ಲುಗಳಿದ್ದು ತಮ್ಮ ಆಕಳನ್ನು ತಿನ್ನಲು ಬರುವ ಹುಲಿಯನ್ನು ಬಂಧಿಸಿ ಕಟ್ಟಿಹಾಕುವ ಚಾಣಾಕ್ಷ ಆಲೋಚನೆಯ ಮೂಲಕ ಆಟ ಆಡಲಾಗುತ್ತದೆ. ಇಲ್ಲೂ ಪರಸ್ಪರ ಇಬ್ಬರು ಆಟಗಾರರಿದ್ದು, ಹುಲಿ ಹಾಗೂ ಇತರೆ (ಕಾಯಿ) ಕಲ್ಲುಗಳನ್ನು ನಡೆಸುತ್ತಾರೆ.

ಜೋಡಿ ಹುಲಿಮನೆ ಆಟದಲ್ಲಿ ಎರಡು ಹುಲಿಗಳಿದ್ದು ಅವುಗಳು ಎರಡು ಪರಸ್ಪರ ವಿರುದ್ಧ ದಿಕ್ಕಿನಿಂದ ಕುರಿಮನೆಯನ್ನು ಪ್ರವೇಶಿಸುತ್ತವೆ. ಹೀಗೆ ಪ್ರವೇಶಿಸುವ ಎರಡು ಹುಲಿಗಳನ್ನು ನಿಯಂತ್ರಿಸುವ ಚುರುಕುತನವನ್ನು  ಈ ಆಟದಲ್ಲಿ ಪರಸ್ಪರ ಆಟಗಾರರು ಪ್ರದರ್ಶಿಸುತ್ತಾರೆ.

ಈ ನಕಾಶೆ ಪಟವು ಸಂಕೀರ್ಣವಾಗಿದ್ದು ಇಲ್ಲಿ ನಾಲ್ಕು ಹುಲಿ (ಕಾಯಿ) ಕಲ್ಲುಗಳನ್ನು ಇಟ್ಟು ಆಡಲಾಗುತ್ತದೆ. ಇಲ್ಲಿನ ನಾಲ್ಕು ದಿಕ್ಕುಗಳಲ್ಲಿನ ತ್ರಿಕೋನದ ಸಂದಿನಲ್ಲಿ ಹುಲಿಕಲ್ಲುಗಳಿರುತ್ತವೆ. ಉಳಿದಂತೆ ಚೌಕಾಕಾರದ ಗೆರೆಗಳ ಸಂದು ಸ್ಥಳಗಳಲ್ಲಿ ಆಕಳುಗಳ ಕಲ್ಲುಗಳು ಇರುತ್ತವೆ. ಹುಲಿ ಆಕಳುಗಳನ್ನು ತಿನ್ನಲು ಅವಕಾಶವಾಗದಂತೆ ಅವುಗಳನ್ನು ಮೂಲೆ ಮನೆಗಳಲ್ಲಿ ಕಟ್ಟಿಹಾಕುವ ಇಲ್ಲವೆ ಬಂಧಿಸುವ ಪ್ರಯತ್ನ ಇಲ್ಲಿ ಕಂಡು ಬರುತ್ತದೆ. ಇಲ್ಲೂ ಸಹ ಪರಸ್ಪರ ಇಬ್ಬರು  ಈ ಆಟವನ್ನು ಆಡುತ್ತಾರೆ.  ಇಲ್ಲಿ ನಾಲ್ಕು ದಿಕ್ಕಕುಗಳಲ್ಲಿನ ತ್ರಿಕೋನಗಳು ಬೆಟ್ಟಗಳ ಸಂಕೇತವನ್ನು ನಡುವಿನ ಚೌಕಾಕಾರದ ಸ್ಥಳ ಕಣಿವೆಯ ಸಮೀಪದ ಸಮತಟ್ಟಾದ ಮೈದಾನ ಪ್ರದೇಶ ಪಶುಪಾಲಕ ನೆಲೆಯನ್ನು ಸಂಕೇತಿಸುತ್ತವೆ.

ಈ ಆಟದಲ್ಲಿ ಹುಲಿ ಗುಡ್ಡದಿಂದಲೇ ಪ್ರವೇಶ ಮಾಡುತ್ತದೆ. ಹೀಗೆ ಹುಲಿಮನಿ ಆಟದ ಬೆಳವಣಿಗೆ ಹಾಗೂ ಅದರ ಸಾಂಕೇತಿಕತೆ ಪಶುಪಾಲಕ ಬದುಕನ್ನು ಕಟ್ಟಿ ಕೊಡುವಂತಿದೆ. ಹಾಗಾಗಿ ಹುಲಿಮನಿ ಆಟ ಪಶುಪಾಲನ ಬದುಕಿನಷ್ಟೇ ಪ್ರಾಚೀನವಾದ ಆಟ ಎಂಬುದಾಗಿ ಹೇಳಬಹುದು.

ಹಂಪಿಯ ದೇವಾಲಯಗಳ ಜಗಲಿ, ರಂಗಮಂಟಪದ ಹಾಸುಗಲ್ಲುಗಳ ಮೇಲೆ, ಕಲ್ಯಾಣ ಮಂಟಪಗಳ ಹಾಗೂ ಬಂಡೆಗಳ ಮೇಲೆ, ಇಂತಹ ಹಲವಾರು ಹುಲಿಮನಿ ಆಟದ ನಕಾಶೆಪಟಗಳು ಕಂಡು ಬರುತ್ತವೆ. ಇಂದಿಗೂ ಈ ಆಟ ಇಲ್ಲಿನ ಜನಸಾಮಾನ್ಯರಲ್ಲಿ ತುಂಬ ಪ್ರಚಲಿತವಿದ್ದು. ಹೆಂಗಸರು ಗಂಡಸರು ಮಕ್ಕಳಾದಿಯಾಗಿ ಆಡುವುದನ್ನು ಕಾಣಬಹುದು.

ಇಬ್ಬರು ಪರಸ್ಪರ ಎದುರು ಬದುರು ಕುಳಿತು ಆಡುವ ಆಟ. ಮೇಲಿನ ನಕಾಶೆಯಂತೆ ಬರೆದು ಎರಡು ದೊಡ್ಡ ಕಲ್ಲುಗಳು ಇವುಗಳಿಗೆ ಹುಲಿಗಳೆಂದು ಕರೆಯುತ್ತಾರೆ. ಮತ್ತೆ ಉಳಿದ ಸಣ್ಣ ಕಲ್ಲುಗಳು ಅವುಗಳನ್ನು ಕುರಿ ಅಥವಾ ಆಕಳಗಳೆಂದು ಕರೆಯುತ್ತಾರೆ. ದೊಡ್ಡ ಕಲ್ಲನ್ನು ನಡೆಸುವವನು ಸಣ್ಣಕಲ್ಲನ್ನು ನಡೆಸುವಂತಿಲ್ಲ. ಸಣ್ಣ ಕಲ್ಲುಗಳನ್ನು (ಕುರಿ ಆಕಳು) ಮತ್ತೊಬ್ಬರು ನಡೆಸುತ್ತಾರೆ. ನಕಾಶೆಯ ಎಂಟು ಮನೆಗಳ ನಡುವೆ ಒಂದು ಹುಲಿಯಿರುತ್ತದೆ. ಹೊರ ಚೌಕದ ಪೈಕಿ ಒಂದು ನಡುಮನೆಯಲ್ಲಿ ಒಂದು ಹುಲಿಯಿರುತ್ತದೆ. ಮೊದಲು ಹುಲಿ ತನ್ನ ಚಲನೆಯನ್ನು ಪ್ರಾರಂಭಿಸುತ್ತದೆ. ಹುಲಿ, ಕುರಿ, ಆಕಳಗಳನ್ನು ಹಿಡಿಯಲು ಹೊಂಚು ಹಾಕುತ್ತಾ ತನ್ನ ನೇರವಾದ ದಿಕ್ಕಿನಲ್ಲಿನ ಮುಂದಿನ ಖಾಲಿ ಮನೆಗಳಿರುವಲ್ಲಿ ಕೂರುತ್ತದೆ. ಹುಲಿಯ ಎದುರಿಗೆ ನೇರವಾಗಿ ಕುರಿ, ಆಕಳು ಇದ್ದು ಅದರ ನೇರವಾದ ಮುಂದಿನ ಮನೆ ಖಾಲಿ ಇದ್ದರೆ ಹುಲಿ ಖಾಲಿ ಮನೆಗೆ ಹಾರಿ ತನ್ನ ಎದುರಿಗೆ ಸಿಕ್ಕಿದ ಕುರಿ, ಆಕಳನ್ನು ತಿನ್ನುತ್ತದೆ. ಹೀಗೆ ಹುಲಿಗೆ ಕುರಿ ಆಕಳ ಸಿಗದಂತೆ ಖಾಲಿ ಇರುವ ಮನೆಗಳನ್ನು ಗಮನದಲ್ಲಿರಿಸಿ ಅವುಗಳನ್ನು ಬಿತ್ತುವ ಕೆಲಸ ಮಾಡುತ್ತಾನೆ. ಹೀಗೆ ಎರಡೂ ಹೊರ ಚೌಕಗಳಿಂದ ಹುಲಿಗಳು ಮಧ್ಯದ ಚೌಕಕ್ಕೆ ಪ್ರವೇಶ ಪಡೆಯಲು ಹವಣಿಸುತ್ತವೆ. ಹೀಗೆ ಹವಣಿಸುವ ಹುಲಿಗಳನ್ನು ಕುರಿಗಳನ್ನೂ ತಿನ್ನುತ್ತ ಅವುಗಳ ಸಂಖ್ಯೆ ಕಡಿಮೆಯಾಗಿ ಹುಲಿ ಕಟ್ಟಲು ಸಾಧ್ಯವಾಗದಿದ್ದಾಗ ಹುಲಿ ಕಡೆಯವರು ಗೆದ್ದಂತೆ. ಉತ್ತರ ಕರ್ನಾಟಕದ ಕೆಲವೆಡೆಗಳಲ್ಲಿ ಹುಲಿ ಆಕಳು ಆಟ, ಹುಲಿ, ಕುರಿ ಆಟ ಇತ್ಯಾದಿಯಾಗಿ ಕರೆಯಲ್ಪಡುತ್ತದೆ. ಒಟ್ಟಿನಲ್ಲಿ ಇದೊಂದು ಪಶುಪಾಲಕರ ಒಂದು ಪ್ರಮುಖ ಆಟವೆಂದೇ ಹೇಳಬೇಕು.

ಪಗಡೆಯಾಟ

ಪಗಡೆಯಾಟ ಉಲ್ಲೇಖ ಮಹಾಭಾರತದಲ್ಲಿ ಕಂಡುಬರುತ್ತದೆ. ಅಲ್ಲದೆ ದೇಶದಾದ್ಯಂತ ಈ ಆಟ ಪ್ರಚಲಿತವಿದ್ದರೂ ಹುಲಿಮನಿ ಆಟದಂತೆ ಜನಸಾಮಾನ್ಯರಿಂದ ಹೆಚ್ಚಾಗಿ ಆಡಲ್ಪಡುವುದಿಲ್ಲ. ಹೆಚ್ಚಾಗಿ ಮಧ್ಯಮವರ್ಗದ ಜನರಲ್ಲಿ ಈ ಆಟ ಪ್ರಚಲಿತದಲ್ಲಿದೆ. ಇದು ಪ್ರಭುತ್ವಶಾಹಿ ಜನರ ಆಟವೂ ಹೌದೆನಿಸುತ್ತದೆ. ವಿಶೇಷ ಹಬ್ಬ ಹುಣ್ಣಿಮೆಯ ಸಂದರ್ಭಗಳಲ್ಲಿ ಪಗಡೆಯ ಆಟ ಆಡುತ್ತಾರೆ. ಇದು ಜನಪದ ಆಟಗಳಲ್ಲಿ ಅತ್ಯಂತ ಜನಪ್ರಿಯವಾದದ್ದು.

ಇಲ್ಲಿ ಚೌಕಾಕೃತಿ ಎರಡು ಆರು ಮುಖ ದಾಳಗಳಿರುತ್ತವೆ. ಇವುಗಳ ಆರು ಮುಖ ದಾಳಗಳಲ್ಲಿ ನಾಲ್ಕೂ ಮುಖಗಳಲ್ಲಿ ಒಂದರಿಂದ ಆರರವರೆಗಿನ ಸಂಖ್ಯೆಗಳನ್ನೂ ಕೂಡಿದಾ ಏಳು ಬರುವಂತೆ. ಒಂದು ಜೋಡಿಯ ವಿರುದ್ಧ ಮುಖಗಳಲ್ಲಿ ಮೂರು ನಾಲ್ಕು ಇನ್ನೊಂದು  ಜೋಡಿ ವಿರುದ್ಧ ಮುಖಗಳಲ್ಲಿ ಕೆತ್ತಿರುತ್ತಾರೆ. ಹೀಗಿರುವ ಎರಡು ದಾಳಗಳನ್ನು ಕೈಹಿಡಿದು ಕೆಳಕ್ಕೆ ಉರುಳಿಸಿ ಹಾಕಿದಾಗ ಒಂದು, ಒಂದು ಬಿದ್ದರೆ ‘ದುಗ್ಗ’ ‘ಮೂರುವಿದ್ದರೆ ‘ಇತ್ತಿಗ’ ನಾಲ್ಕು ನಾಲ್ಕುವಿದ್ದರೆ ಎಂಟು ಹಾಗೆಯೇ ಆರು ಬಿದ್ದರೆ ಹನ್ನೆರಡು ಎಂಬುದಾಗಿ ಲೆಕ್ಕ ಮಾಡಲಾಗುತ್ತದೆ. ಇಲ್ಲಿನ ದೇವಾಲಯದ ಜಗಲಿಗಳ ಹಾಸು ಬಂಡೆಯ ಮೇಲೆ ಹಾಗೂ ರಂಗಮಂಟಪದ ಮಧ್ಯದಲ್ಲಿ ಹಾಗೂ ಬಂಡೆಗಳ ಮೇಲೆ ಪಗಡೆಯಾಟದ ನಕಾಶೆಗಳು ಕಂಡುಬರುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಇವುಗಳನ್ನು ವಿವಿಧ ಬಣ್ಣಗಳ ತುಂಡು ಬಟ್ಟೆಗಳನ್ನು ಬಳಸಿ ಮೂರು ಸಾಲಿನ ೮ ಮನೆಗಳು ಇರುವಂತೆ ನಾಲ್ಕು ಪಟ್ಟಿ  ಮಾಡಿ ಮಧ್ಯದ ಚೌಕುಳಿ ಮನೆಗೆ ನಾಲ್ಕು ಕಡೆಗಳಲ್ಲೂ ನಾಲ್ಕು ಪಟ್ಟಿಮಾಡಿ ಮಧ್ಯದ ಚೌಕುಳಿ ಮನೆಗೆ ನಾಲ್ಕು ಕಡೆಗಳಲ್ಲೂ ನಾಲ್ಕು ಪಟ್ಟಿಗಳನ್ನೂ ಸೇರಿಸಿ ಹೊಲಿದು ಸಿದ್ಧಗೊಳಿಸುತ್ತಾರೆ. ಇದನ್ನು ಸುಲಭವಾಗಿ ಸ್ಥಳದಿಂದ ಸ್ಥಳಕ್ಕೆ ಸಾಗಿಸಬಹುದು. ಕೆಲವರು ಕೌದಿಯಲ್ಲಿ ಇಂತಹ ನಕಾಶೆ ಪಟವನ್ನು ಸಿದ್ಧಗೊಳಿಸುವುದು ಕಂಡು ಬರುತ್ತದೆ. ಹೀಗಾಗಿ ಹಾಸಿಗೆ, ಹೊದಿಗೆ ಹಾಗೂ ಆಟದ ನಕಾಶೆಪಟವಾಗಿ ಕೌದಿಯೊಂದು ಜನಪದರಲ್ಲಿ ಬಳಕೆಗೊಳ್ಳುತ್ತದೆ. ಅಷ್ಟೇ ಅಲ್ಲದೆ ಜನಪದರ ವಂಶಾವಳಿಯ ವರಹಾ ಗ್ರಂಥವಾಗಿಯೂ ಕೌದಿ ಕೆಲಸ ನಿರ್ವಹಿಸುತ್ತದೆ. ಹಾಸಿನ ನಕಾಶೆಪಟದ ಕೆಳಭಾಗದಿಂದ ಮೊದಲನೇ, ನಾಲ್ಕನೇ ಹಾಗೂ ದಳಾಸಿಯ ಮನೆಗಳು ಮತ್ತು ಮಧ್ಯಸಾಲಿನ ಮೂರನೇ, ಆರನೇ ಮನೆಗಳಿಗೆ X ಆಕಾರ ನೀಡಲಾಗಿರುತ್ತದೆ. ಇವುಗಳು ಕಟ್ಟೇಮನೆಗಳೆಂದು ಗುರುತಿಸಲಾಗುತ್ತದೆ. ಇಲ್ಲಿ ಒಟ್ಟು ಹದಿನಾರು ಕಾಯಿಗಳಿರುತ್ತವೆ. ಕೈಯಿಂದ ಉರುಳುಬೀಳುವ ಆಯತಾಕಾರದ ಲೋಹ, ದಂತ ಇಲ್ಲವೆ ಕಲ್ಲಿನಿಂದ ಮಾಡಿದ ಇವುಗಳನ್ನು ದಾಳಗಳೆಂದು ಕರೆಯುತ್ತಾರೆ. ಈ ಆಟವನ್ನು ಸಾಮಾನ್ಯವಾಗಿ ಇಬ್ಬರು ಪರಸ್ಪರ ಎದುರುಬದುರಾಗಿ ಕುಳಿತು ಆಡುತ್ತಾರೆ. ಒಬ್ಬೊಬ್ಬರು ಎರಡು ಬಣ್ಣದ ನಾಲ್ಕು ನಾಲ್ಕು ಕಾಯಿಗಳನ್ನಿಟ್ಟು ನಡೆಸಬೇಕು. ದಾಳಗಳನಹ್ನು ಉರುಳಿಸಿದಾಗ ಬೀಳುವ ಸಂಖ್ಯೆಗೆ ಅನುಸಾರವಾಗಿ ಮನೆಗಳ ಕಾಯಿ ನಡೆಸಬೇಕು. ನಕಾಶೆ ಪಟದ ನಾಲ್ಕು ಮೂಲೆಗಳಲ್ಲೂ ಕಾಯಿ ಸಂಚಾರ ಮಾಡಿ ಕೊನೆಗೆ ಮೊದಲು ಕಾಯಿ ಇದ್ದ ಮನೆಯ ಮಧ್ಯಸಾಲಿನ ಮೂಲಕ ಬಳಸಾಗಿ ನಡು ಚೌಕಿಯಲ್ಲಿ ಕಾಯಿಯನ್ನು ಹಣ್ಣು ಮಾಡಬೇಕು. ಕೆಲವೊಮ್ಮೆ ನಾಲ್ಕು ದಿಕ್ಕಗಳಲ್ಲೂ ಪರಸ್ಪರ ನಾಲ್ಕು ಜನರು ಕುಳಿತು ನಾಲ್ಕು ಕಾಯಿಗಳನ್ನು ನಡೆಸಿ ಆಟವಾಟಬಹುದು ಹಾಗೂ ಈ ಜನಪದ ಆಟದಲ್ಲಿ ಒಂದೇ ಆಟವನ್ನು ವೈವಿಧ್ಯಮಯವಾದ ನೀತಿನಿಯಮಗಳನ್ನು ಅಳವಡಿಸಿ ಆಡಲಾಗುತ್ತದೆ. ಹೇಮಕೂಟದ ಜೈನ ದೇವಸ್ಥಾನದಲ್ಲಿ ಕಂಡುಬರುವ ಪಗಡೆ ಆಟದ ನಕಾಶೆ ಮನೆಗಳ ರಚನಾ ದೃಷ್ಟಿಯಿಂದ ಪಗಡೆಯಾಟದಿನ್ನೊಂದು ಸಾಧ್ಯತೆಯನ್ನು ತಿಳಿಸುವಂತಿದೆ.

ಮೂರು ಮನೆಯಾಟ

ಮತ್ತೊಂದು ಪ್ರಮುಖ ಆಟ ಮೂರುಮನೆಯಾಟ. ಇಲ್ಲಿ ಪ್ರಮುಖವಾಗಿ ಇಬ್ಬರು ಆಟಗಾರರು ಪರಸ್ಪರ ಎದುರುಬದುರಾಗಿ ಕುಳಿತು ಆಟವಾಡುತ್ತಾರೆ. ಒಂದು ಚೌಕದ ಒಳಗೆ ಇನ್ನೊಂದು, ಅದರೊಳಗೆ ಮತ್ತೊಂದು ಹೀಗೆ ಮೂರು ಚೌಕಗಳಿರುತ್ತವೆ. ಮೂರು ಚೌಕಗಳಿಗೂ ನಾಲ್ಕೂ ದಿಕ್ಕುಗಳಿಂದ ಮೂರು ಚೌಕಗಳನ್ನೂ ಸ್ಪರ್ಶಿಸುವಂತೆ ಗೆರೆಗಳನ್ನು ಎಳೆಯಾಗುತ್ತದೆ. ಆಟವಾಡುವಾಗ ಯಾವುದೇ ರೀತಿಯ ವಸ್ತುಗಹಳನ್ನು ಲೆಕ್ಕಚಾರಕ್ಕೆ ಅಥವಾ ಉರುಳು ಬಿಡಲು ಬಳಸುವುದಿಲ್ಲ. ಇದೊಂದು ಮಾನಸಿಕ ಕಸರತ್ತಿನ ಆಟವೇ ಸರಿ. ಮೊದಲು ಒಬ್ಬ ವ್ಯಕ್ತಿ ಎರಡು ಗೆರೆಗಳು ಕೂಡಿದ ಸ್ಥಳದಲ್ಲಿ ಒಂದು ಕಲ್ಲು ಅಥವಾ ಹರಳನ್ನು ಇಡುತ್ತಾನೆ. ಮತ್ತೊಬ್ಬ ಎದುರಿನ ವ್ಯಕ್ತಿ ಮತ್ತು ಎರಡು ಗೆರೆಗಳು ಕೂಡಿದ ಸ್ಥಳದಲ್ಲಿ ಹರಳನ್ನು ಇಡಬೇಕು. ಹೀಗೆ ಪರಸ್ಪರ ಆಡುವಾಗ ಒಬ್ಬನೇ ವ್ಯಕ್ತಿಯ ಮೂರು ಹರಳುಗಳು ಒಂದೇ ಸಾಲಿನಲ್ಲಿ (ಒಂದೇ ರೇಖೆಯಲ್ಲಿ) ಬಂದರೆ ಆ ವ್ಯಕ್ತಿ ಗೆಲವು ಸಾಧಿಸಿದಂತೆ. ಹಾಗಾಗಿ ಒಬ್ಬ ವ್ಯಕ್ತಿಯೆರಡು ಹರಳುಗಳು ಒಂದೇ ರೇಖೆಯ ಮೇಲೆ ಬಂದಾಗ ಎದುರಿನ ವ್ಯಕ್ತಿ ಮೂರನೆಯ ಮನೆಗೆ ತನ್ನ ಹರಳು ಕೂರಿಸಿ ತನ್ನ ಪ್ರತಿ ಸ್ಪರ್ಧಿಯನ್ನು ತಡೆಯುತ್ತಾನೆ. ಹೀಗೆ ಹರಳುಗಳನ್ನು ಗೆಲ್ಲುವ ಮೂಲಕ ಆಟ ಮುಕ್ತಾಯಗೊಳ್ಳುತ್ತದೆ.

ಚನ್ನಮಣೆ ಆಟ

ಗ್ರಾಮೀಣ ಒಳಾಂಗಣದ ಆಟಗಳಲ್ಲಿ ಚನ್ನಮಣೇ ಆಟವೂ ಒಂದು. ಸಾಮಾನ್ಯವಾಗಿ ಈ ಒಳಾಂಗಣದ ಆಟಗಳನ್ನು ಮಹಿಳೆಯರು ಹಾಗೂ ಹೆಣ್ಣುಮಕ್ಕಳು ಆಡುತ್ತಾರೆ. ಸುಮಾರು ಎರಡೂವರೆ ಅಡಿ ಉದ್ದ ಹಾಗೂ ಒಂದು ಅಡಿ ಅಗಲದ ಮರದ ಹಲಗೆಯ ಮೇಲೆ ಏಳೇಳು ಗುಣಿಗಳ ಎರಡು ಸಾಲುಗಳಿರುತ್ತವೆ. ಒಂದೊಂದು ಸಾಲಿನ ಗುಣಿಗಳಿಗೆ ಎದುರುಬದುರಾಗಿ ಇಬ್ಬರು ಆಟಗಾರರು ಕುಳಿತು ಈ ಆಟವಾಡುತ್ತಾರೆ. ಗುಣಿಗೆ ಸಾಮಾನ್ಯವಾಗಿ, ಹುಣಸೆ ಬೀಜ, ಅಂಟುವಾಳು, ಬೀಜ, ಗೆಜ್ಜುಗ, ಗುಲಗಂಜಿಯಂತಹ ಬೀಜಗಳನ್ನು ಬಳಸುತ್ತಾರೆ. ಪ್ರತಿ ಗುಣೆಗಳಿಗೂ ನಾಲ್ಕು ನಾಲ್ಕು ಇಲ್ಲವೆ ಐದೈದು ಹರಳುಗಳನ್ನು ಹಾಕಿರುತ್ತಾರೆ. ಮೊದಲು ಆಟ ಆರಂಭಿಸುವವರು ಒಂದು ಮನೆಯ (ಗುಣಿ) ಎಲ್ಲಾ ಹರಳುಗಳನ್ನು ತೆಗೆದುಕೊಂಡು ಅದರ ಮುಂದಿನ ಮನೆಗೆ ಒಂದೊಂದರಂತೆ ಹಾಕಬೇಕು. ಹರಳು ಹಾಕಿ ನಿಂತ ಮುಂದಿನ ಗುಣಿಯಿಂದ ಮತ್ತೆ ಹರಳು ತೆಗೆದು ಹಾಗೆಯೇ ಹಾಕುತ್ತ ಹೋಗಬೇಕು. ಕೊನೆಗೆ ಹರಳು ನಿಂತು ಮುಂದಿನ ಗುಣಿ ಖಾಲಿ ಇದ್ದರೆ ಅದರ ಮುಂದಿನ ಗುಣಿ ಹಾಗೂ ಅದರ ಎದುರು ಸಾಲಿನ ಗುಣಿಯ ಹರಳುಗಳು ಆಡುತ್ತಿದ್ದವರಿಗೆ ಸೇರುತ್ತವೆ. ಇದಕ್ಕೆ ಹೆಗ್ಗ ಎಂಬುದಾಗಿ ಕರೆಯುತ್ತಾರೆ. ಆಟ ಆಡುವಾಗ ಬಿತ್ತುವ ಹರಳುಗಳು ಮುಗಿದು ಮುಂದಿನ ಎರಡು ಗುಣಿಗಳು ಖಾಲಿ ಇದ್ದರೆ ಅವರಿಗೆ ಯಾವ ಹರಳೂ ದೊರಕುವುದಿಲ್ಲ. ಹೀಗೆ ಆಡುವಾಗ ತಮ್ಮ ಪರಸ್ಪರ ಸಾಲುಗಳಲ್ಲಿನ ಗುಣಿಗಳಲ್ಲಿ ನಾಳ್ಕು ಹರಳಲುಗಳು ಸೇರಿದಾಗ ಅದನ್ನು ಎಮ್ಮೆ ಈದಿದೆ ಎಂಬುದಾಗಿ ಎತ್ತಿಟ್ಟಕೊಳ್ಳುತ್ತಾರೆ. ಹೀಗೆ ಆಟ ಕೊನೆಗೆ ಒಂಟಿ ಮನೆಯ ಆಟದವರೆಗೆ ಸಾಗುತ್ತದೆ. ಯಾರು ಗೆಲ್ಲುತ್ತಾರೋ ಅವರು ಈ ಆಟದಲ್ಲಿ ಗೆಲ್ಲುತ್ತಾರೆ.

ಚನ್ನೇಮಣೆ ಆಟವನ್ನು, ಹರಳುಮಣೆ ಆಟ ಎಂದೂ ಕರೆಯುತ್ತಾರೆ. ಈ ಆಟದಲ್ಲೂ ಇಂದಿಗೂ ಹಲವಾರು ವೈವಿಧ್ಯತೆಯನ್ನು ಕಾಣಬಹದು. ಹಂಪಿಯ ಸ್ಮಾರಕಗಳಲ್ಲಿ ಕಂಡುಬರುವ ಚನ್ನೇಮಣೆ ಆಟದ ಗುಣಿಗಳು ಹಾಸು ಬಂಡೆಗಳ ಮೇಲೆಲ ಕೋಟೆ ಬಾಗಿಲುಗಳ ಸಮೀಪ, ದೇವಾಲಯಗಳ ಜಗಲಿಯ ಹಾಗೂ ಬಂಡೆಗಳ ಮೇಲೆ ಕಂಡುಬರುತ್ತವೆ. ಕೆಲವು ಕುಣಿಗಳು ಸಣ್ಣವಾಗಿದ್ದು ಗುಲಗಂಜೀ ಬೀಜಗಳನ್ನು ಆಟಕ್ಕೆ ಬಳಸಿರಬಹುದಾದ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತದೆ. ಮಹಾನವಮಿ ದಿಬ್ಬದ ಎದುರಿಗಿನ ರಾಣಿ ವಾಸದ ಬುನಾದಿಯ ಹಾಸುಬಂಡೆಯ ಮೇಲಿನ ಚನ್ನೇಮಣೆ ಕುಣಿಗಳು, ರಾಜನ ಆಸ್ಥಾನದ ಮಹಿಳೆಯರಿಗೆ ಸೇವಕಿಯರಾಗಿ ಹಾಗೂ ಕಾವಲುಗಾರರಾಗಿ ನೇಮಿಸಲ್ಪಡುತ್ತಿದ್ದ (ಶಿಖಂಡಿ) ವ್ಯಕ್ತಿಗಳು ಆಟವಾಡುತ್ತಿದ್ದ ಸ್ಥಳ ಅದಾಗಿರಬಹುದೆಂದು ತೋರುತ್ತದೆ.

ಚೌಕಾದ ಮನಿಯಾಟ

ಇದು ಪಗಡೆಯಾಟದಷ್ಟೇ ಜನಪ್ರಿಯವಾದ ಆಟ. ಇದನ್ನು ಚೌಕದ ಮನಿ ಆಟ ಎಂಬುದಾಗಿಯೂ ಕರೆಯುತ್ತಾರೆ. ಸ್ತ್ರೀಯರು ಹೆಚ್ಚಾಗಿ ಈ ಆಟವನ್ನು ಆಡುತ್ತಾರೆ.

ಹೀಗೆ ಹಂಪಿ ಪರಿಸರದ ಸ್ಮಾರಕಗಳಲ್ಲಿ ಹಲವಾರು ಬಗೆಯ ಜನಪದ ಆಟಗಳ ನಕಾಶೆ ಪಟಗಳು ಕಂಡು ಬರುತ್ತವೆ. ಆದರೆ ಇವುಗಳಲ್ಲಿ ಕೆಲವು ಅಂದಿನ ದೇವಾಲಯ ಹಾಗೂ ಜಿನಾಲಯಗಳು ಪೂಜೆಗೊಳ್ಳುವ ಕಾಲಕ್ಕೆ ದೇವಾಲಯಗಳ ಜಗಲಿ ಹಾಗೂ ರಂಗಮಂಟಪದ ಹಾಸುಬಂಡೆಗಳ ಮೇಲೆ ಬಿಡಿಸಲ್ಪಟ್ಟಿವೆ. ಇನ್ನು ಕೆಲವು ಸಾಮ್ರಾಜ್ಯದ ಪತನ ನಂತರ ಪಶುಪಾಲಕ ಹಾಗೂ ಕೃಷಿ ಜನಸಮುದಾಯಗಳಿಂದ ಬಿಡಿಸಲ್ಪಟ್ಟಿವೆ ಎನ್ನಬಹುದು. ಆದರೆ ಇಲ್ಲಿ ದೊರೆತಿರುವ ಕೆಲವು ಜನಪದ ಆಟಗಳ ನಕಾಶೆ ಪಟಗಳು ಅವುಗಳ ಆಟದ ಕ್ರಮ ಇತ್ತೀಚೆಗೆ ಕಂಡುಬರುವುದಿಲ್ಲ. ಇಲ್ಲಿನ ನಕಾಶೆ ಪಟಗಳಲ್ಲಿ ಹಾಗೂ ಹಳ್ಳು ಕುಣಿ ಆಟದಲ್ಲಿ ಗುಲಗಂಜಿ ಗೆಜ್ಜುಗ ಹುಣಸೆ ಬೀಜಗಳನ್ನು ಬಳಸಿರುವ ಸಾಧ್ಯತೆ ಇದೆ. ಇಲ್ಲಿ ರಚನೆಗೊಂಡಿರುವ ಹಳ್ಳು ಕುಣಿ(ಚನ್ನೇಮಣೆ) ಆಟದ ಗುರುತುಗಳು ಅದನ್ನು ಸಾಬೀತುಪಡಿಸುತ್ತವೆ. ಸಾಮಾನ್ಯವಾಗಿ ಚನ್ನೇಮಣಿ ಆಟ ಹೆಣ್ಣುಮಕ್ಕಳು ಮನೆಗಳಲ್ಲಿ ಹುಣಸೆಬೀಜ ಅಥವಾ ಗಜ್ಜುಗಗಳನ್ನು ಬಳಸಿ ಈ ಆಟ ಆಡುತ್ತಾರೆ. ಮಳೆ ಇಲ್ಲದಾಗ ಚನ್ನೇಮಣೆ ಆಟ ಆಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಜನಪದರಲ್ಲಿ ಕಂಡು ಬರುತ್ತದೆ.

ಆಕರ
ಹಂಪಿಯ ಸ್ಮಾರಕಗಳಲ್ಲಿ ಜಾನಪದೀಯ ಅಂಶಗಳು, ೨೦೦೦, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು. ೧೦೮-೧೧೭.