ವಿಜಯನಗರದ ಅರಸರ ಕಾಲಕ್ಕೆ ಶಾಸ್ತ್ರೀಯ ಸಂಗೀತ, ನೃತ್ಯ, ಶಿಲ್ಪ ಕಲೆಗಳಂತೆಯೇ ಜನಪದ ಕಲೆಗಳಿಗೂ ಹೆಚ್ಚಿನ ಮಹತ್ವ ದೊರೆತ್ತಿತ್ತು ಎಂಬುದು ಇಲ್ಲಿನ ಜನಜೀವನದ ಬಗೆಗೆ ಬೆಳಕು ಚೆಲ್ಲುವ ಆ ಕಾಲಕ್ಕೆ ರಚನೆಗೊಂಡ ಗ್ರಂಥಗಳು ಹಾಗೂ ಪ್ರವಾಸಿ ಬರಹಗಳು ಹಾಗೂ ಶಿಲ್ಪ ಸ್ಮಾರಕಗಳಿಂದ ತಿಳಿದು ಬರುತ್ತದೆ. ಇದು ಸರಿ ಎಂಬಂತೆ ಇಲ್ಲಿನ ಅನೇಕ ಉಬ್ಬುಶಿಲ್ಪಗಳಲ್ಲಿ ಅಂತಹ ವಿಚಾರಗಳು ತಿಳಿದು ಬರುತ್ತವೆ. ಅಂದಿನ ಕಾಲಘಟ್ಟದಲ್ಲಿ ಕಲೆಯೊಂದರ ಸ್ಥಿತಿಗತಿ ಹಾಗೂ ಆನಂತರ ಅದು ಬೆಳವಣಿಗೆ ಹೊಂದಿರುವ ಬಗೆಗೆ ಈಗ ಆ ಕಲಾ ಪ್ರಕಾರದ ಸ್ಥಿತಿ ಹೇಗಿದೆ, ಅದರ ಬದಲಾವಣೆಯ ಹಿಂದಿನ ಸಂಗತಿಗಳು ಇತ್ಯಾದಿ ವಿಚಾರಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಜಯನಗರದ ಉಬ್ಬುಶಿಲ್ಪಗಳು ತುಂಬ ಸಹಕಾರಿಯಾಗುತ್ತವೆ. ಪ್ರದರ್ಶನಾತ್ಮಕ ಜನಪದ ಕಲೆಗಳಲ್ಲಿ ಪ್ರಮುಖವಾಗಿ ಕೋಲಾಟ, ಕೊರವಂಜಿ ಕುಣಿತ, ಓಕುಳಿ ಆಟ, ದೊಂಬರಾಟ, ಹಾವಾಡಿಗರಾಟ ಹಾಗೂ ಇತರೆ ಜನಪದ ಗೀತಮೇಳಗಳನ್ನು ಗಮನಿಸಲಾಗಿದೆ.

ಕೋಲಾಟ

ಕೋಲಾಟ ಒಂದು ಸಮೂಹ ನೃತ್ಯ. ಇದರಲ್ಲಿ ಸಾಮಾನ್ಯವಾಗಿ ಹೆಣ್ಣು ಗಂಡುಗಳಿಬ್ಬರೂ ಭಾಗವಹಿಸುತ್ತಾರೆ. ದೇಶದ ಎಲ್ಲಾ ಕಡೆಯೂ ಈ ನೃತ್ಯ ಕಂಡುಬರುತ್ತದೆ. ಇದು ತುಂಬ ಪ್ರಾಚೀನ ಪಶುಪಾಲಕ, ಕೃಷಿ ಬದುಕಿನ ಜನಸಮುದಾಯಗಳಲ್ಲಿ ಅದರಲ್ಲೂ ಬುಡಕಟ್ಟು ಸಮುದಾಯಗಳಲ್ಲಿ ಈ ಕಲೆ ಹೆಚ್ಚಾಗಿ ಕಂಡು ಬರುತ್ತದೆ. ವಿಜಯನಗರ ಸಾಮ್ರಾಜ್ಯದ ಹಂಪಿ ಪರಿಸರದಲ್ಲಿ ಕಂಡುಬರುವ ಕೋಲಾಟದ ಉಬ್ಬುಶಿಲ್ಪಗಳು ಹೆಚ್ಚಾಗಿ ಹೆಂಗಸರು ನೃತ್ಯ ಮಾಡುತ್ತಿರುವಂತೆ ಕೆತ್ತಲಾಗಿದೆ. ಅದಕ್ಕೆ ಹೌದೆಂಬಂತೆ ಈ ಪ್ರದೇಶದಲ್ಲಿ ಅದರಲ್ಲೂ ವಿಶೇಷವಾಗಿ ಗೌರಿಹುಣ್ಣಿಮೆಯ ಸಂದರ್ಭದಲ್ಲಿ ಹೆಣ್ಣು ಮಕ್ಕಳು ‘ಗೌರಿ ಕೋಲು’ ಹಾಕುತ್ತ ಕುಣಿಯುತ್ತ, ಮನೆಮನೆಗೆ ಸಂಚರಿಸುವ ಸಂಪ್ರದಾಯ ವರ್ಷದ ಗೌರಿಹುಣ್ಣಿಮೆ ಸಂದರ್ಭದಲ್ಲಿ ಕಂಡುಬರುತ್ತದೆ. ಹಾಗೆಯೇ ಲಂಬಾಣಿ ಸಮುದಾಯದ ಹೆಣ್ಣು ಮಕ್ಕಳು ಹೋಳಿ ಹಬ್ಬದ ಸಂದರ್ಭದಲ್ಲಿ ಆಡುವ ಕೋಲಾಟ ಈ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ವಿಜಯನಗರದ ವಾಸ್ತುಶಿಲ್ಪ ಹಾಗೂ ಉಬ್ಬುಶಿಲ್ಪಗಳಲ್ಲಿ ಯಥೇಚ್ಚವಾದ ಕೋಲಾಟದ ದೃಶ್ಯಗಳನ್ನು ಕಾಣಬಹುದು.

ಅಲ್ಲದೆ ಇಲ್ಲಿನ ಕೋಲಾಟದ ಕುಣಿತಕ್ಕೆ ಹಿಮ್ಮೇಳವಾಗಿ ಮದ್ದಳೆ, ಮೃದಂಗ, ಢಕ್ಕೆ ತಾಳಗಳನ್ನು ಬಳಸಿರುವ ದೃಶ್ಯಗಳು ಕಂಡುಬರುತ್ತವೆ. ಹಾಗೂ ವಾದ್ಯ ನುಡಿಸುವವರು ಗಂಡಸರು ಹಾಗೂ ಕೋಲಾಟದಲ್ಲಿ ಕೋಬುಹಾಕಿ ಕುಣಿಯುವವರು ಹೆಣ್ಣು ಮಕ್ಕಳು. ಹೀಗಾಗಿ ಕೋಲಾಟ ಹೆಣ್ಣು ಮಕ್ಕಳ ಒಂದು ಪ್ರಮುಖ ನೃತ್ಯ ಕಲೆಯಾಗಿತ್ತೆಂದು ಇದರಿಂದ ತಿಳಿದು ಬರುತ್ತದೆ. ಅಲ್ಲದೆ ಕೋಲಾಟದ ವಿವಿಧ ಭಂಗಿಗಳು ಮಹಾನವಮಿ ದಿಬ್ಬ, ವಿಠಲ ದೇವಾಲಯ, ಹಜಾರರಾಮ ದೇವಾಲಯ, ವಿರೂಪಾಕ್ಷ ದೇವಾಲಯಗಳಲ್ಲಿ ಕಾಣಬಹುದು.

ಕೊರವಂಜಿ ಕುಣಿತ

‘ಈ ರಾಜ ತನ್ನ ದ್ವಾರಗಳೊಳಗೆ ನಾಲ್ಕು ಸಾವಿರಕ್ಕೂ ಹೆಚ್ಚು ಸ್ತ್ರೀಯರನ್ನು ಹೊಂದಿದ್ದಾನೆ’ ಎಂಬುದಾಗಿ ಸಿವೆಲ್ ತಿಳಿಸುತ್ತಾನೆ. ಆದರೆ ಅವರೆಲ್ಲ ಸಂಗೀತ ಹಾಗೂ ನೃತ್ಯಗಾರ್ತಿಯರು, ಕಣಿ ಹಾಗೂ ಭವಿಷ್ಯ ನುಡಿಯುವ ಸ್ತ್ರೀಯರೂ ಎಂಬುದಾಗಿ ತಿಳಿದು ಬರುತ್ತದೆ. ಅಲ್ಲದೆ ಕಣಿ ಪುಟ್ಟಿ ಹಿಡಿದು ನರ್ತಿಸುತ್ತಿರುವ ಕೊರವಂಜಿಯ ಉಬ್ಬುಶಿಲ್ಪವೊಂದು ಮಾಲ್ಯವಂತ ರಘುನಾಥ ದೇವಾಲಯದ ಮುಖಮಂಟಪದಲ್ಲಿ ಕಂಡುಬರುತ್ತದೆ. ರಾಜನಿಗೆ ಸಾಮ್ರಾಜ್ಯದ ಅಭಿವೃದ್ಧಿ, ಪ್ರಜೆಗಳ ಏಳಿಗೆಗಳ ಬಗೆಗೆ ವರದಿ ಸಲ್ಲಿಸಿ ಮಾರ್ಗದರ್ಶನ ನೀಡುತ್ತಿದ್ದ ಪುರೋಹಿತಶಾಹಿಗಳಂತೆಯೇ ರಾಜನ ಕಷ್ಟ, ಸುಖ ಮುಂದೆ ಆತನ ಆಡಳಿತದಲ್ಲಿನ ಸುಧಾರಣೆ, ಮಾರ್ಪಾಡುಗಳು, ಜನಸಾಮಾನ್ಯರ ಅಭಿಪ್ರಾಯಗಳನ್ನು ಸಂಗ್ರಹಿಸುವ ಮೂಲಕ ರಾಜನಿಗೆ ಆತನ ಆಡಳಿತದ ಸುಸ್ಥಿತಿಯ ವಿಷಯದಲ್ಲಿ ಕಣಿ ಕೊರವಂಜಿಗಳು ಮಹತ್ವದ ಪಾತ್ರವಹಿಸುತ್ತಿದ್ದರು.

ಓಕುಳಿ ಆಟ

ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ನಡೆಯುತ್ತಿದ್ದ ಮಹಾನವಮಿ ದಿಬ್ಬದಂತಹ ದೊಡ್ಡ ದೊಡ್ಡ ಉತ್ಸವಗಳಲ್ಲಿ, ನಗರದ ಪ್ರಮುಖ ಬೀದಿಗಳಲ್ಲಿ ಅಲ್ಲಿಗಲ್ಲಿಗೆ ತುಂಬಿಟ್ಟ ಬಣ್ಣದ ನೀರಿನಿಂದ ಓಕುಳಿ ಆಡುತ್ತಿದ್ದ ಬಗೆಗೆ ಹಲವಾರು ಉಲ್ಲೇಖಗಳು ಕಂಡು ಬರುತ್ತವೆ. ಅದನ್ನು ಮಹಾನವಮಿ ದಿಬ್ಬ, ವಿಠಲ ದೇವಸ್ಥಾನಗಳಲ್ಲಿನ ಹಲವಾರು ಉಬ್ಬು ಶಿಲ್ಪಗಳಲ್ಲಿ ಕಾಣಬಹುದು. ಈ ಮೂಲಕ ವಿಜಯನಗರದಲ್ಲಿನ ಸಾಂಸ್ಕೃತಿಕ ಬದುಕಿನ ಮತ್ತೊಂದು ಮುಖದ ಪರಿಚಯ ಆಗುತ್ತದೆ. ರಾಣಿ ವಾಸದವರು, ಆಪ್ತೇಷ್ಟರು ಉದ್ಯಾನಗಳಿಗೆ ಹೋಗಿ ನೀರಾಟ, ಉಯ್ಯಾಲೆ ಆಡುತ್ತಿದ್ದರು. ಜಲಕ್ರೀಡೆಗೆಂದೇ ಈಜುಕೊಳಗಳಿರುತ್ತಿದ್ದವು. ಈ ಕೊಳಗಳನ್ನು ಕಲ್ಲುಗಳಿಂದ ಕಟ್ಟಿಸಿ ಅವುಗಳಿಗೆ ಕಾಲುವೆ ಮಾಡಿ ನೀರು ಬಿಡುವ ವ್ಯವಸ್ಥೆ ಇದ್ದಿತು. ಅಲ್ಲದೆ ಈ ಜಲಕ್ರೀಡಾ ಕುಣಿಗಳಲ್ಲಿ ರಾಣಿವಾಸದವರು ನೀರಾಟವಾಡಿದ ವರ್ಣನೆಯನ್ನು ಕನಕದಾಸರು ತಮ್ಮ ರಾಮಧಾನ್ಯಚರಿತೆಯಲ್ಲಿ ಉಲ್ಲೇಖಿಸುತ್ತಾರೆ.

ದೊಂಬರಾಟ

ದೊಂಬರು ಮೂಲತಹ ಒಂದು ಅಲೆಮಾರಿ ಸಮುದಾಯ. ಇವರು ತಮ್ಮ ಜೀವನ ವೃತ್ತಿಯಾಗಿ ದೈಹಿಕ ಕಸರತ್ತುಗಳನ್ನು ಮಾಡುವುದರ ಮೂಲಕ ಪ್ರದರ್ಶನ ನಡೆಸುತ್ತಾರೆ. ದೊಂಬರು ಮಾಡಿತೋರಿಸುವ ದೈಹಿಕ ಕಸರತ್ತಿನ ಆಟವನ್ನು ‘ದೊಂಬರಾಟ’ ಎಂದು ಕರೆಯುತ್ತಾರೆ. ವಿಜಯನಗರ ಪೂರ್ವದ ಆನೆಗೊಂದಿ ಹಾಗೂ ಕಂಪಲಿ ಪಟ್ಟಣಗಳ ಚರಿತ್ರೆಯಲ್ಲಿ ಈ ಸಮುದಾಯದ ಪಾತ್ರ ಮಹತ್ವದ್ದಾಗಿ ಕಂಡುಬರುತ್ತವೆ. ಕಂಪಿಲ ರಾಯನ ಹೆಂಡತಿ ಹರಿಯಲಾ ದೇವಿಗೆ ಮಕ್ಕಳಿಲ್ಲದ ಕಾರಣ ಕಂಪಿಲರಾಯ ರತ್ನಾಜಿಯನ್ನು ಮದುವೆಯಾಗುತ್ತಾನೆ. ಈ ರತ್ನಾಜಿಯ ವಂಶದವರು ನಾವು ಎಂಬುದಾಗಿ ದೊಂಬರು ಹೇಳಿಕೊಳ್ಳುತ್ತಾರೆ. ಕಂಪಲಿಯ ಕುಮಾರರಾಮನ ಚರಿತ್ರೆ ಜನಸಾಮಾನ್ಯರ ಮೌಖಿಕ ಸಂಸ್ಕೃತಿಯಲ್ಲಿ ಸ್ಥಾನ ಪಡೆದಂತೆ ವಿಜಯನಗರ ಸಾಮ್ರಾಜ್ಯದ ಯಾವ ರಾಜ ಮಹಾರಾಜರೂ ಜನಪದರಲ್ಲಿ ಹಾಗೂ ಅವರ ಮೌಖಿಕ ಸಂಸ್ಕೃತಿಯಲ್ಲಿ ಸ್ಥಾನ ಪಡೆಯಲ್ಲಿಲ್ಲ ಎಂಬುದು ತುಂಬ ಕುತೂಹಲದ ವಿಷಯ. ರತ್ನಾಜಿ ತನ್ನ ಸಾಕುಮಗ ಕುಮಾರರಾಮನನ್ನೇ ತನ್ನ ಕಾಮತೃಷೆಗೆ ಬಯಸಿದ ಆಶಯವಂತು ಕನ್ನಡನಾಡಿನ ತುಂಬೆಲ್ಲ ಜನಪದರ ಮೌಖಿಕ ಸಾಹಿತ್ಯ, ಆಚರಣೆಯಲ್ಲಿ ಅನನ್ಯವಾದ ಸ್ಥಾನಪಡೆದು ನೀತಿ ಬೋಧಕ ರೂಪವಾಗಿ ರಚನೆ ಗೊಂಡಿದೆ. ಈ ಪಠ್ಯ ಕುಮಾರರಾಮ, ಸೀತಾಳರಾಮ, ಚನ್ನಿಗರಾಮ, ರತ್ನಾಜಿಕಥೆ, ಸಾರಂಗಧರನ ಕಥೆ, ತೆಲುಗಿನಲ್ಲಿ ಕುಮಾರರಾಮುನಿ ‘ಹೊಸ ಕುಮಾರರಾಮ’ ಕಥೆ ಇತ್ಯಾದಿ ಹೆಸರುಗಳಿಂದ ಪ್ರಚಲಿತವಿದೆ. ಪಠ್ಯಗಳ ನಡುವೆ ಮೂಲ ಆಶಯವನ್ನು ಬಿಟ್ಟು ಉಳಿದಂತೆ ಅಲ್ಪಸ್ವಲ್ಪ ವ್ಯತ್ಯಾಸಗಳು ಕಂಡುಬರುತ್ತವೆ. ಈ ಹಿಂದೆ ತಿಳಿಸಿರುವಂತೆ ದೊಂಬರು ವಿಜಯನಗರ ಸಾಮ್ರಾಜ್ಯದೊಡನೆ ಅನ್ಯೋನ್ಯ ಸಂಬಂಧ ಹೊಂದಿದ್ದಾರೆ.

ರತ್ನಾಕರವರ್ಣಿ ಕೊಡುವ ನಾನಾ ಕ್ರೀಡೆಗಳ ವರ್ಣನೆಯಲ್ಲಿ ದೊಂಬರಾಟವೂ ಒಂದು “ಗಣೆಯನೇರಿದ ದೊಂಬರು ಆ ಎತ್ತರದಿಂದಲೇ ರಾಜನ ಮುಖವನ್ನು ನೋಡುತ್ತಾ, ಅವನ ಕಣ್ಣ ಸೂಚನೆಯನ್ನು ಕಾಯುತ್ತ ತಟಪಟ ನುಬ್ಬಿ ತಮ್ಮ ಚಮತ್ಕಾರವನ್ನು ತೋರಿದರು” ಎಂದಿದ್ದಾನೆ. ವಚನಕಾರರಲ್ಲಿ ಹೊಟ್ಟೆಯ ಕಕ್ಕುಲತೆಗೆ ಕಷ್ಟ ಜೀವನ ಹೊರುವ ಹೆಬ್ಬೊಟ್ಟೆಯ ದೊಂಬರ ಕಂಡು ಬಟ್ಟ ಬಯಲಾದೆಯೇ (ಮೊಳಗೆ ಮಾರಯ್ಯನ ವಚನ ಪು.೧೩೨) ಅಲ್ಲದೆ ನಾಡಿನಾದ್ಯಂತ ಶಾಸನಗಳು, ಐತಿಹ್ಯಗಳಲ್ಲಿ ದೊಂಬರ ಬಗೆಗೆ ಹೆಚ್ಚಿನ ಮಾಹಿತಿಗಳು ದೊರಕುತ್ತವೆ. ವಿಜಯನಗರಕ್ಕೆ ಭೇಟಿ ನೀಡಿದ್ದ ವಿದೇಶಿ ಪ್ರವಾಸಿಗರಾದ ಅಬ್ದುಲ್ ರಜಾಕ ಹಾಗೂ ಲಿಲ್‌ಷಾಟನ್ ಎಂಬುವವರೂ ಸಹ ಇವರು ಕಲಾಪ್ರದರ್ಶನಕ್ಕೆ ಆಕರ್ಷಕರಾಗಿದ್ದಾರೆ. ಅದರ ಬಗೆಗೆ ತಮ್ಮ ದಿನಚರಿಯಲ್ಲಿ ದಾಖಲಿಸಿಕೊಂಡಿದ್ದಾರೆ ಕೂಡ. ಅಬ್ದುಲ್‌ರಜಾಕ್ ನವರಾತ್ರಿ ವೈಭವವನ್ನು ವರ್ಣಿಸುತ್ತಾ ಅದರಲ್ಲಿ ದೊಂಬರ ಅನೇಕ ಚಮತ್ಕಾರಗಳನ್ನು ಮತ್ತು ಪಳಗಿಸಿದ ಆನೆಗಳಿಂದ ಅವರು ಆಡಿಸಿದ ಅನೇಕ ಕಸರತ್ತಿನ ಆಟಗಳ ಬಗೆಗೆ ಹೇಳುತ್ತಾನೆ.

ಅಣ್ಣಾಜಿ ಕೊಡುವ ದೊಂಬರಾಟದ ಚಿತ್ರಣವೊಂದು ಹೀಗಿದೆ. “ಗಣೆಯ ತುದಿಯಲ್ಲಿ ಶಸ್ತವನಿಟ್ಟು ವುಂಗುಟದ ಕೊನೆಯಾಳ ಪುಟವೆದ್ದು ಲಾಗುಲಿದವಣಿಯ ಕೊಂಡು ಮಿಣಿಯ ಹಿಲಿಗಳ ಮೇಲೆ ಮರಗಾಲ ಕಟ್ಟಿ ದುವ್ವಾಳಿಸುತೆ ದೊಂಬತಿಯರು ಮಣಿದು ಹಿಂಗರಣ ಮಸೆಕೊಂಡು ವೊಳಿಯುಗಿದಲಗಪಣೆಯಲ್ಲಿ ಗುಂಜಿಯಗ್ರದೊಳಟ್ಟು ಬೇಯೆನುತೆ ತ್ರಿಣಯ ನಾಪರರೂಪನೇ ನೋಡು ನೋಡೆಂದು ಡೋಳು ಬಡಿದರು ದೊಂಬರು” ಎಂಬುದಾಗಿ ಹೇಳುತ್ತಾನೆ (‘ಕಚ’ ೭ ಪು. ೩೭). ಅಂದರೆ ದೊಂಬರ ಹೆಣ್ಣು ಮಕ್ಕಳು ಪ್ರದರ್ಶಿಸುವ ತುಂಬ ಅಪಾಯದ ಕಸರತ್ತೂ ಪ್ರದರ್ಶನದ ವಿವರಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.

‘ದೊಂಬನ ಸಾವು ಗಣೆಯ ಮೇಲೆ’ ಎಂಬ ಜನಪದರ ಹೇಳಿಕೆಯಂತೆ ಇಂತಹ ಕಸರತ್ತು ಪ್ರದರ್ಶನಗಳಲ್ಲಿ ಜೀವ ಕಳೆದುಕೊಂಡ ಹಲವಾರು ಸಾಹಸಿ ದೊಂಬರು ಜನಪದರ ಮೌಖಿಕ ಸಾಹಿತ್ಯದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ರಕ್ಕೆ ಕಟ್ಟಿಕೊಂಡು ಹಕ್ಕಿಯಂತೆ ಹಾರಿ, ಪ್ರಾಣ ಕಳೆದುಕೊಂಡ ದೊಂಬನೊಬ್ಬನ ಸಾಹಸದ ಸಾಕ್ಷಿಯಂತಿದೆ ಬೆಂಗಳೂರು ಜಿಲ್ಲೆ ರಾಮನಗರದ ‘ದೊಂಬನ ಕೊಡೆಗೆ’ ಪ್ರದೇಶ. ಹೀಗೆ ದೊಂಬರ ಬದುಕನ್ನು ಚಿತ್ರಿಸುವ ಹಲವಾರು ಉಬ್ಬುಶಿಲ್ಪಗಳು ಹಂಪಿ ಸ್ಮಾರಕಗಳಲ್ಲಿ ಕಾಣಬರುತ್ತವೆ.

ಆದಿಮ ಕಾಲದಿಂದಲೂ ಮಾನವ ಹಾಗೂ ಪ್ರಾಣಿಗಳ ನಡುವಿನ ಸಂಬಂಧ ಆತನ ಬದುಕಿನಷ್ಟೆ ಪುರಾತನವಾದುದು. ಮಾನವ ಪ್ರಾಣಿ ಪರಿಸರವನ್ನು ತನ್ನ ಹಿಡಿತದಲ್ಲಿ ಇರಿಸಿ ಕೊಂಡು ಪಶುಪಾಲನೆ, ಕೃಷಿಗಾಗಿ ಪಳಗಿಸಿ ಅವುಗಳನ್ನು ತನ್ನ ಬದುಕಿನ ಒಂದು ಭಾಗವಾಗಿ ಪರಿಗಣಿಸಿ ಬಳಸಿಕೊಳ್ಳತೊಡಗಿದ. ಅಲ್ಲದೆ ಕೆಲವು ಕ್ರೂರ ಪ್ರಾಣಿಗಳನ್ನು ತನ್ನ ಹಿಡಿತದಲ್ಲಿರಿಸಿಕೊಂಡು ಅವುಗಳ ಮೂಲಕ ಹಲವು ಬಗೆಯ ಪ್ರದರ್ಶನಗಳನ್ನು ನಡೆಸುತ್ತ ತನ್ನ ಜೀವನ ವೃತ್ತಿಯ ವಸ್ತುಗಳನ್ನಾಗಿ ಬಳಸಿಕೊಂಡ. ಹೀಗೆ ಬಳಸಿಕೊಂಡ ಜೀವಜಗತ್ತಿನ ಪ್ರಾಣಿಗಳಲ್ಲಿ ಹಾವುಗಳು ಬಹುಮುಖ್ಯವಾದವು. ವಿಷಜಂತುಗಳಲ್ಲಿ ಒಂದಾದ ಹಾವುಗಳನ್ನು ಹಿಡಿದು ಆಟವಾಡಿಸುವ ಹಾಗೂ ಅವುಗಳನ್ನು ಹಿಡಿದು ಚರ್ಮ ಸುಲಿದು ಮಾರಾಟಮಾಡುವ ಹಲವಾರು ಜನಸಮುದಾಯಗಳು ಇಂದಿಗೂ ಕಂಡು ಬರುತ್ತವೆ. ಆದರೆ ಹಾವನ್ನು ಹಿಡಿದು ಆಟವಾಡಿಸಿ ಜೀವನ ಸಾಗಿಸುವವರಿಗೆ ಹಾವಾಡಿಗರೆಂದು ಕರೆಯುತ್ತಾರೆ. ಹಾವು ಭಾರತೀಯ ಸಂಸ್ಕೃತಿಯಲ್ಲಿ ಹಾಗೂ ಜಗತ್ತಿನ ಹಲವಾರು ಬುಡಕಟ್ಟುಗಳಲ್ಲಿ ಕೃಷಿ ದೈವವಾಗಿ ಅದರಲ್ಲೂ ಫಲವಂತಿಕೆಯ ದೈವವಾಗಿ ಪೂಜೆಗೊಳ್ಳುತ್ತದೆ. ನಮ್ಮ ಪ್ರಾಚೀನ ಮಹಾಕಾವ್ಯಗಳಲ್ಲೂ ಹಲವಾರು ಉಲ್ಲೇಖಗಳು ಹಾವಾಡಿಗರಿಗೆ ಸಂಬಂಧಪಟ್ಟಂತೆ ಕಂಡುಬರುತ್ತವೆ.

‘ಉದರ ನಿಮಿತ್ತಂ ಬಹುಕೃತವೇಷಂ’ ಎಂಬಂತೆ ಹೊಟ್ಟೆಪಾಡಿಗಾಗಿ ಹತ್ತಾರುವೇಷ ಕಟ್ಟಿರುವ ಜಂಗಮ, ಜೋಗಿ, ದಾಸರನ್ನು ಹಾವಾಡಿಗರು ಈ ನಗರದಲ್ಲಿ ಇದ್ದ ಬಗ್ಗೆ ಸಾಹಿತ್ಯ ಗ್ರಂಥಗಳಲ್ಲಿ ಹಾಗೂ ವಿದೇಶಿ ಪ್ರವಾಸಿಗರ ಬರಹಗಳಿಂದ ತಿಳಿದು ಬರುತ್ತದೆ. ವಿಜಯನಗರ ಮಹಾನವಮಿ ಹಬ್ಬದ ಸಂದರ್ಭದಲ್ಲಿ ಹಾವಾಡಿಗರ ಪ್ರದರ್ಶನಗಳು ನಡೆಯುತ್ತಿದ್ದ ಬಗ್ಗೆ ಹೇಳಲಾಗಿದೆ. ವಿಜಯವಿಠಲ ದೇವಸ್ಥಾನದ ಕಲ್ಲಿನ ರಥಕ್ಕೆ ಎದುರಾಗಿ, ಸಂಗೀತದ ಕಲ್ಲಿನ ಕಂಬದ ಕೆಳಗೆ ಬುನಾದಿ ಚೌಕಟ್ಟಿನ ಸಮೀಪ ಹೊರಮೈಗೆ ಪುಂಗಿ ಊದುತ್ತಾ ಹಾವು ಹಾಡಿಸುತ್ತಿರುವ ಜೊತೆಗೆ ಕೋತಿಯನ್ನು ಇಟ್ಟುಕೊಂಡಿರುವ ಹಾವಾಡಿಗರ ಅಪರೂಪದ ಉಬ್ಬುಶಿಲ್ಪ ಕಂಡು ಬರುತ್ತದೆ. ಈ ಮೂಲಕ ವಿಜಯನಗರದ ಕಾಲಕ್ಕೆ ಹಾವಾಡಿಗರು ಹಾಗೂ ಆ ಕಲೆಯ ಜೀವಂತವಾಗಿದ್ದ ಬಗೆಗೆ ತಿಳಿದು ಬರುತ್ತದೆ.

ಆಕರ
ಹಂಪಿಯ ಸ್ಮಾರಕಗಳಲ್ಲಿ ಜಾನಪದೀಯ ಅಂಶಗಳು, ೨೦೦೦, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು. ೬೪-೭೦.