ಹಂಪಿ ಪರಿಸರದಲ್ಲಿ ಜನಪ್ರಿಯವಾಗಿರುವ ಕಲೆಗಳೆಲ್ಲ ವಿಜಯನಗರ ವಾಸ್ತುವಿನಲ್ಲಿ ಸ್ಥಾನ ಪಡೆದಿವೆ. ಹಾಗೆ ಸ್ಥಾನ ಪಡೆದವುಗಳಲ್ಲಿ ಮುಖ್ಯವಾದ ಕೆಲವನ್ನು ಕೆಳಗೆ ಪರಿಚಯಿಸಲಾಗಿದೆ.

೫.೧ ಕೋಲಾಟ

ಕೋಲಾಟವು ಈ ಪ್ರದೇಶದ ಅತ್ಯಂತ ಜನಪ್ರಿಯ ಕಲೆ.

ಹಂಪಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೋಲಾಟ ಎಲ್ಲಾ ಜಾತಿಯ ಜನರಲ್ಲಿಯೂ ಕಂಡುಬರುವ ಒಂದು ಸಾರ್ವತ್ರಿಕ ಕಲೆ. ಮಳೆಗಾಲ ಕಳೆದು, ಹೊಲದ ಬೆಳೆ ಮನೆ ಸೇರಿ ಬಿಡುವಾದ ಕಾಲಕ್ಕೆ, ತನ್ನೆಲ್ಲಾ ಕೆಲಸಕಾರ್ಯಗಳಿಂದ ಸ್ವಲ್ಪ ಬಿಡುವು ಪಡೆದ ರೈತ ಸಮೂಹ ಕೋಲಾಟ ಆಡುತ್ತಾನೆ. ಆ ಕಾಲಕ್ಕೆ ಹೆಚ್ಚಾಗಿ ನಡೆಯುವ ಹಬ್ಬ-ಹುಣ್ಣಿಮೆ, ಜಾತ್ರೆ, ಉತ್ಸವ, ಸುಗ್ಗಿ ಆಚರಣೆಗಳಲ್ಲಿ ಕೋಲಾಟ ಪ್ರದರ್ಶನ ನಡೆಯುತ್ತದೆ. ಹುಣ್ಣಿಮೆಯ ಕಾಲಕ್ಕೆ ಚೆಲ್ಲಿದ ಬೆಳದಿಂಗಳಲ್ಲಿ ಹನುಮಂತ ದೇವರ ಗುಡಿ, ಗರಡಿಮನೆ, ನಗರೇಶ್ವರ ಗುಡಿಯ ಮುಂದೆ ಓಣಿಯ ಯುವಕರು ಕೋಲಾಟವನ್ನು ಆಡುತ್ತಾರೆ. ಹಂಪಿಯ ಫಲಪೂಜೆ ಮತ್ತು ಜಾತ್ರೆಯ ಸಂದರ್ಭದಲ್ಲಿಯೂ ಕೋಲಾಟ ಆಡುತ್ತಾರೆ.

ಗೌರಿ ಹುಣ್ಣಿಮೆಯ ಸಂದರ್ಭದಲ್ಲಿ ಚಿಕ್ಕ ಚಿಕ್ಕ ಹೆಣ್ಣುಮಕ್ಕಳು ಗೌರಿ ಹುಣ್ಣಿಮೆಯ ಪದಗಳನ್ನೂ ಹಾಡುತ್ತಾ ಓಣಿಗಳಲ್ಲಿ ಕೋಲು ಹಾಕುತ್ತಾ ಮನೆಮನೆಗೆ ಹೋಗಿ ಹಣ ಸಂಗ್ರಹಿಸುತ್ತಾರೆ. ಹೋಳಿ ಹುಣ್ಣಿಮೆಯ ಕಾಲಕ್ಕೆ ಮರಿಯಮ್ಮನಹಳ್ಳಿ, ಹಂಪಿ, ಹೊಸಪೇಟೆ, ನಾಗಲಾಪುರ, ಮಲಪನಗುಡಿ, ರಾಮಸಾಗರ, ವೆಂಕಟಾಪುರ, ತಾಂಡ ಮುಂತಾದ ಕಡೆಗಳಲ್ಲಿ ಲಂಬಾಣಿ ಹೆಂಗಸರೇ ಪ್ರತ್ಯೇಕವಾಗಿ ಆಕರ್ಷಕವಾಗಿ ಕೋಲಾಟ ಆಡುತ್ತಾರೆ. ಇವರು ತಮ್ಮ ಕೋಲಾಟದ ಸಂದರ್ಭದಲ್ಲಿ ಹಲಗೆಯನ್ನೂ ಇರಿಸುತ್ತಾರೆ. ಲಂಬಾಣಿ ಕೋಲಾಟದಲ್ಲಿನ ಹಾಡುಗಳು ವಿಳಂಬಕಾಲದ ಲಯಗತಿಯನ್ನು ಹೊಂದಿದ್ದು ಏರಿಳಿತಗಳ ವೈವಿಧ್ಯತೆಯಿಂದ ರಂಜನೀಯವಾಗಿರುತ್ತದೆ. ಹಂಪಿಯ ಹಲವಾರು ದೇವಾಲಯಗಳಲ್ಲಿ ಉದಾ: ಮಹಾನವಮಿದಿಬ್ಬ, ಹಜಾರರಾಮಸ್ವಾಮಿ ದೇವಾಲಯ, ಹಳೆಪಟ್ಟಣದ ಕೆಲವು ಕಟ್ಟಡಗಳ ತಳಪಾಯದ ಭಾಗಗದಲ್ಲಿ ಮಹಿಳೆಯರ ಕೋಲಾಟದ ಹಲವಾರು ಭಂಗಿಗಳನ್ನು ಕೆತ್ತಲಾಗಿದ್ದು ಈ ಕಲೆ ಹೆಂಗಸರಿಂದ ಮಾತ್ರ ಪ್ರದರ್ಶನಗೊಳ್ಳುತ್ತಿತ್ತು ಎಂಬ ಊಹೆಗೆ ಎಡೆಮಾಡಿಕೊಡುತ್ತದೆ. ಹೊಸಪೇಟೆ, ಮಲಪನಗುಡಿ, ಅನಂತಶಯನ ಗುಡಿ, ಕಾಮಲಾಪುರ, ವೆಂಕಟಾಪುರ, ರಾಮಸಾಗರ, ಬುಕ್ಕಸಾಗರ, ಕಡ್ಡಿರಾಮಪುರ, ಹುಲಿಗಿ, ಮರಿಯಮ್ಮನಹಳ್ಳಿ ಇತ್ಯಾದಿ ಪ್ರದೇಶಗಳಲ್ಲಿ ಈಗಲೂ ಮಹಿಳೆಯರು ಕೋಲಾಟ ಆಡುತ್ತಾರೆ. ಇನ್ನು ಕೆಲವೆಡೆಗಳಲ್ಲಿ ಕೋಲಾಟವು ದೈವೀ ಆರಾಧನೆಗಾಗಿ ಬಳಸಲ್ಪಡುತ್ತಿದೆ. ಇಂಥ ಕಡೆ ಆಟಕ್ಕೆ ಮೊದಲು ಕೋಲುಗಳನ್ನು ಸಿದ್ಧಪಡಿಸುವುದರಿಂದ ಆರಂಭವಾಗಿ ಕೋಲಾಟ ಆಡುವವರಿಗೆ ಸಂಪ್ರದಾಯಬದ್ಧವಾಗಿ ಹಲವು ಆಚರಣೆಗಳಿರುತ್ತವೆ. ಕೋಲಾಟ ಪ್ರಾರಂಭಿಸುವ ಹದಿನೈದು ದಿನ ಮುಂಚಿತವಾಗಿ ಹುಣ್ಣಿಮೆಯಂದು ಕೋಲು ಕಡಿಯಲು ಕಾಡಿಗೆ ಹೋಗುವ ಪದ್ಧತಿಯಿದೆ. ಮರವನ್ನು ಪೂಜಿಸಿ ಪ್ರತಿ ಮರದಿಂದ ಒಂದೊಂದು ಜೊತೆ ಕೋಲುಗಳನ್ನು ಕಡಿಯುತ್ತಾರೆ. ಸಾಮಾನ್ಯವಾಗಿ ಶ್ರೀಗಂಧ, ಹೊನ್ನೆ, ಬೈನೆ, ಕೊಡಸು ಮುಂತಾದ ಮರಗಳಿಂದ ಕೋಲುಗಳನ್ನು ಕಡಿಯುತ್ತಾರೆ. ಅನಂತರ ಅವುಗಳನ್ನು ಒಣಗಿಸಿ ಒಂದೂವರೆ ಅಡಿ ಉದ್ದಕ್ಕೆ ಕತ್ತರಿಸಿ ದುಂಡಾಗಿಸಿ ಕೋಲಾಟಕ್ಕೆ ಕೋಲುಗಳನ್ನು ಸಿದ್ಧಗೊಳಿಸುತ್ತಾರೆ. ನಾಲ್ಕಾರು ದಿನಗಳ ಅಭ್ಯಾಸದ ಅನಂತರ ದೀಪಾವಳಿಯ ಮರುದಿನ ಊರದೇವರ ಗುಡಿಯ ಮುಂದೆ ಕೋಲಾಟದ ಪ್ರದರ್ಶನ ನಡೆಯುತ್ತದೆ. ಸಾಮಾನ್ಯವಾಗಿ ಕೋಲಾಟದ ಕಲಾವಿದರು ತಮ್ಮ ದೈನಂದಿನ ಉಡುಗೆ ತೊಡುಗೆಯಲ್ಲೇ ಇರುತ್ತಾರೆ. ಕಾಲಿಗೆ ಗೆಜ್ಜೆ ಕಟ್ಟಿಕೊಂಡಿರುತ್ತಾರೆ. ಇತ್ತೀಚಿನ ಕೆಲವು ಯುವಕ ಮಂಡಲಗಳ ಕೋಲಾಟದ ತಂಡಗಳು ಬಣ್ಣ ಬಣ್ಣದ ಅಂಗಿ ಚಡ್ಡಿ ಬನಿಯನ್ ಹಾಗೂ ಹಣೆಪೆಟ್ಟಿ ಧರಿಸಿದ್ದು ತಮ್ಮ ಬನಿಯನ್‌ಗಳ ಮೇಲೆ ತಮ್ಮ ಮಂಡಲದ ಹೆಸರು, ಊರಿನ ಹೆಸರುಗಳನ್ನು ಅಚ್ಚು ಹಾಕಿಸಿರುತ್ತಾರೆ.

ಕೋಲಾಟದ ತಂಡಗಳಲ್ಲಿ ಐದು, ಎಂಟು, ಹತ್ತು ಅಥವಾ ಹನ್ನೆರಡು ಮಂದಿ ಕಲಾವಿದರಿರುತ್ತಾರೆ. ಇಲ್ಲಿನ ಕೋಲಾಟದ ತಂಡಗಳಲ್ಲಿ ಪ್ರಮುಖವಾಗಿ ಎರಡು ಗುಂಪು ಗಳಿರುತ್ತವೆ. ಮೊದಲನೆಯದು ಕೋಲಾಟ ಮಾಡುವವರದು. ಎರಡನೆಯದು ಕೋಲಾಟದ ಹಾಡುಗಳನ್ನು ಹೇಳುವವರದು. ಕೋಲಾಟದಲ್ಲಿ ಹಾಡು ಕೋಲಾಟದಷ್ಟೇ ಮುಖ್ಯ. ಇವುಗಳು ಒಂದನ್ನೊಂದು ಮೇಳೈಸುವ ಕಾರ್ಯದಲ್ಲಿ ಪರಸ್ಪರ ಸಹಕಾರಿಗಳಾಗಿವೆ. ಕೋಲಾಟದ ಗತ್ತುಲಯ, ಏರಿಳಿತಗಳಿಗೆ ಹಾಗೂ ಕೋಲಾಟದ ಕಲಾವಿದರಿಗೆ ಉತ್ಸಾಹ ತುಂಬುವಲ್ಲಿ ಕೋಲಾಟದ ಪದಗಳು ಸಹಾಯಕವಾಗುತ್ತವೆ. ಹಾಡಿಲ್ಲದ ಕೋಲಾಟಕ್ಕೆ ಶೋಭೆಯಿಲ್ಲ. ಹಾಡಿಗೆ ಹೊಂದುವಂತೆ ಕೋಲು ಕಟ್ಟಿ ಹೆಜ್ಜೆ ಹಾಕುತ್ತಾರೆ.

ಕೋಲಾಟದ ಹಾಡುಗಳಲ್ಲಿ ರಾಮಾಯಣ, ಮಹಾಭಾರತ, ಪುರಾಣ ಕಥೆಗಳು ಹಾಗೂ ಸಮಕಾಲೀನ ಜೀವನದ ಹತ್ತಾರು ಮುಖಗಳಾದ ಹಾಸ್ಯ, ಕರುಣೆ, ರೌದ್ರ, ಪ್ರೇಮ, ಕಾಮ, ಸಂತೋಷದ ಘಟನಾವಳಿಗಳ ನಿರೂಪಣೆಯಿದೆ. ಕೋಲಾಟವು ಯಾವಾಗಲೂ ಕೋಲುಗಳಿಗೆ ಕಲಾವಿದರು ಶರಣು ಮಾಡುವುದರ ಮೂಲಕ ಆರಂಭವಾಗುತ್ತದೆ.

ಶರಣು ಶರಣುವಯ್ಯ ಗಣನಾಯ್ಕ
ನಮ್ಮ ಕರುಣದಿಂದ ಕಾಯೋ ಗಣನಾಯ್ಕ : ಶರಣು :

ಎಂದು ಗಣೇಶ ಸ್ತುತಿಯನ್ನು ಹಾಡುವುದರೊಂದಿಗೆ ಕೋಲಾಟ ಪ್ರಾರಂಭವಾಗುತ್ತದೆ. ಮುಂದೆ ಸರಸ್ವತಿ, ಲಕ್ಷ್ಮಿ, ಪಾರ್ವತಿ, ಈಶ್ವರ ಹಾಗೂ ಅವರ ಗ್ರಾಮದೇವತೆಗಳು ಹಾಡಿನಲ್ಲಿ ಸ್ಥಾನ ಪಡೆಯುತ್ತಾರೆ. ಮುಂದೆ ಇತರ ಕೋಲು ಪದಗಳನ್ನು ಹಾಡುತ್ತಾರೆ. ಹಂಪಿಯಲ್ಲಿಗೆ ಬೇರೆಡೆಯಿಂದ ಬಂದ ಕೋಲಾಟದ ತಂಡವು ಕೋಲು ಪ್ರಾರಂಭಿಸುವಾಗ

ಶರಣೆನ್ನಿರಣ್ಣಯ್ಯ ಶರಣೆನ್ನಿರೊ
ಹಂಪಿ ವಿರೂಪಾಕ್ಷಗೆ ಶರಣೆನ್ನಿರೊ ::

ತಾಯಿ ದುರುಗಮ್ಮಗೆ : ಶರಣೆನ್ನಿರೊ :
ತಾಯಿ ಗಾಳಮ್ಮಗೆ ಶರಣೆನ್ನಿರೊ ::
ಕೋದಂಡ ರಾಮಗೆ ಶರಣೆನ್ನಿರೊ ::
ಪಟ್ಟಣದ ಎಲ್ಲಮ್ಮಗೆ ಶರಣೆನ್ನಿರೊ :

ಎಂಬುದಾಗಿ ಇಲ್ಲಿನ ದೇವರುಗಳೆಲ್ಲವನ್ನೂ ನೆನೆಯುತ್ತಾರೆ. ಅಲ್ಲದೆ ಹಂಪಿಗೆ ಸಂಬಂಧಪಟ್ಟಂತೆ ಹಾಗೂ ಹಂಪಿಯನ್ನು ವರ್ಣಿಸುವ ಹಾಡುಗಳನ್ನೂ ಹಾಡುತ್ತಾರೆ. ಹಂಪಿಯಲ್ಲಿ ನಡೆಯುವ ‘ಫಲಪೂಜೆ’ ಹಾಗೂ ಹಂಪಿ ಜಾತ್ರೆಯ ಕಾಲಕ್ಕೆ ಉತ್ತರ ಕರ್ನಾಟಕದ ಹಲವಾರು ಕೋಲಾಟದ ತಂಡಗಳು ಬಂದು ಸೇರುತ್ತವೆ. ರಾತ್ರಿ ಇಡೀ ದೇವಸ್ಥಾನದ ಒಳಾಂಗಣದಲ್ಲಿ ಹಾಗೂ ಹೊರಾಂಗಣದಲ್ಲಿ ಇವರು ಪ್ರದರ್ಶನ ನೀಡುತ್ತಾರೆ. ಅಲ್ಲದೆ ಕೆಲವು ಹರಕೆ ತಂಡಗಳೂ ಸಹ ಇಲ್ಲಿ ಪ್ರದರ್ಶನ ನೀಡುತ್ತವೆ. ಕೋಲಾಟದಲ್ಲಿ ಅನೇಕ ಬಗೆಗಳನ್ನು ಕಾಣಬಹುದು. ಕತ್ರಿಕೋಲು, ತೆಕ್ಕಿಕೋಲು, ಜೋಡಿಕೋಲು, ಒಂಟಿಕೋಲು, ಚಿಟ್‌ಗೋಲು, ಚಿತ್ರಗೋಲು, ಆಳದಾಟುಕೋಲು, ಅಂಗಡಿಕೋಲು, ನಾಬಂದಿ ವಿಲಾಟ, ಬೆನ್ನಾಳಿಕೋಲು, ಬಾಗ್ಗೋಲು, ತೋಗೋಲು, ಹೂವಿನಕೋಲು, ತೊಟ್ಟಿಲಕೋಲು, ಬಿಚ್ಚುಗೋಲು ಸುತ್ತುಗೋಲು, ಬಳ್ಳಿಕೋಲು, ಪಳಿತುಕೋಲು, ಉಯ್ಯಾಲೆಕೋಲು ಜಡೆಕೋಲು ಇತ್ಯಾದಿ. ಕೋಲಾಟಕ್ಕೆ ಯಾವುದೇ ವಯಸ್ಸಿನ ಅಂತರವಿಲ್ಲದ ಅಬಾಲವೃದ್ಧ ರಾದಿಯಾಗಿ ಎಲ್ಲರೂ ಭಾಗವಹಿಸುತ್ತಾರೆ.

೫.೨ ಅಲಾವಿ ಕುಣಿತ

ವಿಜಯನಗರದ ದೊರೆಗಳ ಕಾಲದಲ್ಲಿ ಈ ಕುಣಿತ ಜನಪ್ರಿಯವಾಗಿತ್ತಂತೆ. ಈಗ ಹಂಪಿ ಪರಿಸರದಲ್ಲಿ ತುಂಬ ಜನಪ್ರಿಯವಾಗಿದೆ. ಇದನ್ನು ಮೊಹರಂ ತಿಂಗಳ ಹತ್ತನೇ ದಿನ ಮುಸ್ಲಿಮರು ಆಚರಿಸುತ್ತಾರೆ. ಉಳಿದವರೂ ಭಾಗವಹಿಸುತ್ತಾರೆ. ಕೆಂಡದಿಂದ ಮಾಡಿದ ಕೊಂಡವೊಂದರ ಸುತ್ತ ಕುಣಿಯುವುದರಿಂದಾಗಿ ಅದಕ್ಕೆ ಅಲಾವಿ ಕುಣಿತ ಎಂಬ ಹೆಸರು ಬಂದಿದೆ. ರಾಮಸಾಗರದ ಸುತ್ತಮುತ್ತ ಕೆಲವರು ಕೊಂಡ ಹಾಯುವುದೂ ಇದೆ.

ಹಂಪಿ ಪರಿಸರದಲ್ಲಿ ಕುಣಿತವು ಹಿಂದೂ ಮುಸ್ಲಿಮರ ಭ್ರಾತೃತ್ವದ ಸಂಕೇತವಾಗಿ ಉಳಿದುಬಂದಿದೆ. ಈ ಕುಣಿತದಲ್ಲಿ ಕಲಾವಿದರು ಪೈಗಂಬರ ಕುರಿತಾದ ಹಾಡುಗಳನ್ನು ಹಾಡುವುದರ ಜೊತೆಗೆ ವಚನಗಳನ್ನು ತತ್ತ್ವಪದಗಳನ್ನು ಹಾಡುತ್ತಾರೆ.

೫.೩. ಹನುಮಂತ ವೇಷ

ಹಂಪಿಯನ್ನು ಪ್ರಾಚೀನ ಕಿಷ್ಕಿಂದೆ ಎಂದು ಹೇಳಲಾಗುತ್ತಿದೆ. ಮೂಲತಃ ಇದು ಕಪಿಗಳ ಊರು. ರಾಮಾಯಣದಲ್ಲಿ ಪ್ರಸಿದ್ಧನಾದ ಆಂಜನೆಯ ಇಲ್ಲಿದ್ದನೆಂದೂ, ಆತ ಹುಟ್ಟಿದ ಅಂಜನಾದ್ರಿ ಪರ್ವತ ಹಂಪಿಯಲ್ಲಿದೆಯೆಂದು ಜನರ ನಂಬಿಕೆ. ಹಂಪಿ ಹೊಳೆಯಲ್ಲಿ ಜನರು ‘ಹನುಮನ ಸೆಳವು’ ಪ್ರದೇಶವನ್ನು ಗುರುತಿಸುತ್ತಾರೆ. ಇಲ್ಲಿ ಜನರು ಹರಕೆ ರೂಪದಲ್ಲಿ ಹನುಮಂತನ ವೇಷ ಹಾಕುತ್ತಾರೆ. ರಟ್ಟಿನಿಂದ ಮಾಡಿದ ಕಿರೀಟವೊಂದನ್ನು ತಲೆಗೆ ಇರಿಸಿಕೊಂಡು, ಮುಖಕ್ಕೆ ನೀಲಿ ಬಳಿದುಕೊಂಡು, ಮೈಗೆ ಹಸಿರು ಹೊದ್ದುಕೊಂಡು, ಒಂದು ಬಾಲ ಕಟ್ಟಿಕೊಂಡು ಹನುಮಂತನ ವೇಷಧಾರಿಗಳು ಅಡ್ಡಾಡುತ್ತಾರೆ. ಕೈಯಲ್ಲಿ ಒಂದು ಗದೆ ಸಾಮಾನ್ಯವಾಗಿ ಇರುತ್ತದೆ. ಹಂಪಿ ಜಾತ್ರೆ ಮತ್ತು ಫಲಪೂಜೆಯ ದಿನಗಳಲ್ಲಿ ಇಂಥ ಹನುಮಂತ ವೇಷಧಾರಿಗಳು ಹಂಪಿಯ ತುಂಬ ಎಲ್ಲೆಡೆಯೂ ಇರುತ್ತಾರೆ. ಹನುಮಂತ ವೇಷ ಹಾಕಿದರೆ ಮೈಯಲ್ಲಿರುವ ಖಾಯಲೆಗಳೆಲ್ಲ ಗುಣವಾಗುತ್ತವೆ ಎಂಬ ನಂಬಿಕೆ ಸಾರ್ವತ್ರಿಕವಾಗಿದೆ.

ಹನುಮಂತ

ಹನುಮಂತ

೫.೪. ಮಾರಮ್ಮನ ಕುಣಿತ

ಹಂಪಿ ಪ್ರದೇಶದಲ್ಲಿರುವ ಗ್ರಾಮದೇವತೆಗಳ ಗುಡಿಯಲ್ಲಿ ಆಗಾಗ ಮಾರಮ್ಮನ ಕುಣಿತ ಕಂಡುಬರುತ್ತದೆ. ಮಾರಮ್ಮನನ್ನು ಹೊತ್ತು ತರುವ ಜನರು ಡೋಲನ್ನು ಬಾರಿಸುತ್ತಾ ಗುಡಿಯ ಎದುರಿನಲ್ಲಿ ‘ಮಾರಮ್ಮ ಬಂದವಳೇ’ ಎನ್ನುತ್ತಾ ಕುಣಿಯುತ್ತಾರೆ. ಕುಣಿಯುವ ಪೂಜಾರಿಗೆ ಆವೇಶ ಬಂದರೆ ಚಾಟಿಯಲ್ಲಿ ಮೈಗೆಲ್ಲಾ ಹೊಡೆದುಕೊಳ್ಳುತ್ತಾನೆ. ಜನರು ಮಾರಿಗೂ, ಪೂಜಾರಿಗೂ ಕಾಣಿಕೆ ನೀಡುತ್ತಾರೆ. ಪಟ್ಟಣದ ಎಲ್ಲಮ್ಮ, ಗಾಳೆಮ್ಮ, ಹನುಮನ ಗುಡಿಗಳೆದುರು ಇಂಥ ಮಾರಿಕುಣಿತಗಳು ಆಗಾಗ ಕಂಡು ಬರುತ್ತವೆ.

೫.೫. ಏಕತಾರಿ ಮೇಳದವರು

ಫಲಪೂಜೆ ಮತ್ತು ವಿರೂಪಾಕ್ಷನ ಜಾತ್ರೆಯಲ್ಲಿ ಉತ್ತರ ಕರ್ನಾಟಕದ ಬಹುತೇಕ ಏಕತಾರಿ ಮೇಳಗಳೆಲ್ಲ ಹಂಪಿಯಲ್ಲಿ ಸೇರುತ್ತವೆ. ಗುಂಪು ಗುಂಪಾಗಿ, ಹಂಪಿಗೆ ಬರುವ ಈ ಮೇಳಗಳಿಗೆ ಒಬ್ಬ ಗುರು ಇರುತ್ತಾನೆ. ಆತ ತತ್ತ್ವಪದಗಳನ್ನು ಹಾಡುತ್ತಾನೆ. ಉಳಿದವರು ಅದನ್ನು ಪುನರಾವರ್ತಿಸುತ್ತಾರೆ. ಏಕಾತರಿಯೇ ಇಲ್ಲಿ ಪ್ರಧಾನ ವಾದ್ಯ. ಜೊತೆಗೆ ತಾಳ ಮತ್ತು ಹಾರ್ಮೋನಿಯಂ ಇರುತ್ತವೆ. ಜಾತ್ರೆಯ ದಿವಸ ಇವರು ಇಡೀ ರಾತ್ರಿ ತತ್ತ್ವಪದಗಳನ್ನು ಹಾಡಿಕೊಂಡಿರುತ್ತಾರೆ. ವಿರೂಪಾಕ್ಷನನ್ನು ಸ್ತುತಿಸುವ ಅನೇಕ ಶ್ಲೋಕಗಳನ್ನು ಹಾಡುತ್ತಾರೆ.

೫.೬. ಕಂಬಿಯವರು

ಶಿವರಾತ್ರಿ ಸಮಯದಲ್ಲಿ ಹಂಪಿಗೆ ಬರುವ ಭಕ್ತ ಸಮೂಹದಲ್ಲಿ ‘ಕಂಬಿ’ಯವರು ಇರುತ್ತಾರೆ. ಇಲ್ಲಿ ‘ಕಂಬಿ’ ಎಂದರೆ ಉದ್ದನೆಯ ಬಿದಿರಿನ ಗಳ. ಈ ಗಳಕ್ಕೆ ತೂಗುಹಾಕಿದ ನಂದಿ ವಿಗ್ರಹವಿರುತ್ತದೆ, ಬಣ್ಣದ ಪತಾಕೆ ಇರುತ್ತದೆ. ಬಿಳಿಭಸ್ಮ ಧರಿಸಿದ ‘ಅಯ್ಯ’ಗಳು ಇದನ್ನು ಹೊರುತ್ತಾರೆ. ಕಂಬಿ ಹೆತ್ತವರ ಸುತ್ತ ತಾಳ ಹಾರ್ಮೋನಿಯಂ ಹಿಡಿದ ಭಕ್ತರಿರುತ್ತಾರೆ. ಇವರು ವಿರೂಪಾಕ್ಷ ದೇವಸ್ಥಾನದಲ್ಲಿ ಒಂದು ರಾತ್ರಿ ಉಳಿದುಕೊಂಡು ದೇವರಿಗೆ ಪೂಜೆ ಸಲ್ಲಿಸಿ ಹಿಂದಿರುಗುತ್ತಾರೆ. ಸಾಮಾನ್ಯವಾಗಿ ಇವರು ಭಜನೆ ಹಾಡುಗಳನ್ನು ಹಾಡುತ್ತಾರೆ.

೫.೭. ಪೋತಗಾರರು

ಹಂಪಿ ಜಾತ್ರೆಯಲ್ಲಿ ಕಂಡುಬರುವ ಇನ್ನೊಂದು ವೇಷ. ಈ ವೇಷಧಾರಿ ಸೊಂಟದವರಿಗೆ ಮಾತ್ರ ಬಿಳಿ ಪಂಚೆ ಉಟ್ಟುಕೊಂಡಿರುತ್ತಾನೆ. ಮುಖಕ್ಕೆ ಮೈಗೆ ಎಲ್ಲಾ ಕೆಂಪು ಬಣ್ಣ ಹಾಕಿಕೊಂಡಿರುತ್ತಾನೆ. ಕೊರಳಿಗೆ ರುದ್ರಾಕ್ಷಿ ಮಾಲೆ, ಸೊಂಟಕ್ಕೆ ಚರ್ಮದ ಪಟ್ಟಿ, ಕಾಲಿಗೆ ಗೆಜ್ಜೆ ಕಟ್ಟಿಕೊಂಡಿರುತ್ತಾನೆ. ದವಡೆಯ ಎಡಬದಿಯಿಂದ ಬಲ ಬದಿಯವರೆಗೆ ಒಂದು ದಬ್ಬಳವನ್ನು ಸಿಕ್ಕಿಸಿಕೊಂಡಿರುತ್ತಾನೆ. ಕೈಯಲ್ಲಿ ಒಂದು ಭಿಕ್ಷಾಪಾತ್ರೆ ಇರುತ್ತದೆ. ಜನರು ಇದನ್ನು ‘ಪೋತವೇಷ’ ಎಂದು ಕರೆಯುತ್ತಾರೆ. ಹಂಪಿ ಜಾತ್ರೆ ಮುಗಿಯುತ್ತಲೆ ಇವರು ಎತ್ತಲೋ ಹೊರಟು ಹೋಗುತ್ತಾರೆ.

೫.೮. ಕರಡಿ ಮಜಲು

ಹರಕೆ ಹೇಳಿಕೊಂಡವರು ಫಲಪೂಜೆಯಂದು ಕರಡಿ ಮಜಲು ಸೇವೆ ನಡೆಸುತ್ತಾರೆ.

೫.೯. ಕರಡಿ ವೇಷ

ಹನುಮತಂನ ವೇಷದ ಹಾಗೆ ಹಂಪಿಯಲ್ಲಿ ಕರಡಿ ವೇಷಗಳೂ ಜನಪ್ರಿಯ. ಮಾತಂಗ ಪರ್ವತದಲ್ಲಿ ಜಾಂಬವ ಇದ್ದ ಎಂಬ ನಂಬಿಕೆ ಇರುವುದರಿಂದ, ಕರಡಿ ವೇಷವನ್ನು ಹರಕೆ ರೂಪದಲ್ಲಿ ಹೇಳುತ್ತಾರೆ. ಈ ವೇಷ ಹಾಕಿದರೆ ಮೈಯಲ್ಲಿರುವ ರೋಗಗಳೆಲ್ಲ ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ.

ಸಾಮಾನ್ಯವಾಗಿ ಹನುಮಂತನ ವೇಷವನ್ನು ತರುಣರೂ, ಕರಡಿ ವೇಷವನ್ನು ಮುದುಕರೂ ಹಾಕುತ್ತಾರೆ.

೫.೧೦. ಕಾಸೆಯವರು

ತನ್ನ ಹೆಂಡತಿಯಾದ ದಾಕ್ಷಾಯಣಿಯು ದಕ್ಷಯಜ್ಞದಲ್ಲಿ ಬೆಂದು ಹೋದ ಸುದ್ದಿ ಕೇಳಿ ಕೋಪಗೊಂಡ ಶಿವನು ವೀರಭದ್ರನನ್ನು ಸೃಷ್ಟಿಸುತ್ತಾನೆ. ಹೀಗೆ ವೀರಭದ್ರ ಸೃಷ್ಟಿಯಾದ ಸ್ಥಳ ಹೇಮಕೂಟವಂತೆ. ಶಿವನ ಮಾತು ಕೇಳಿ ವೀರಭದ್ರನು ಸಿಟ್ಟಿನಿಂದ ನರ್ತಿಸಿ, ದಕ್ಷನನ್ನು ವಧೆ ಮಾಡಲು ಹೊರಡುತ್ತಾನೆ. ಹೀಗೆ ವೀರಭದ್ರನು ಸಿಟ್ಟಿನಿಂದ ನರ್ತಿಸಿದ್ದನ್ನೇ ಕೆಲವರು ‘ಕಾಸೆ ಕುಣಿತ’ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಅವರು ಜಾತ್ರೆಯ ದಿವಸದಂದು ಹೇಮಕೂಟ ಪರಿಸರದಲ್ಲಿ ವಿಶೇಷವಾಗಿ ನರ್ತಿಸುತ್ತಾರೆ.

ಕೆಂಪು ಬಟ್ಟೆಯನ್ನು ಉಟ್ಟುಕೊಳ್ಳುವ ಈ ಕಾಸೆಯವರು, ಬಲಗೈಯಲ್ಲಿ ಖಡ್ಗ, ಹಿಡಿದಿರುತ್ತಾರೆ. ಎದೆಗೆ ರುದ್ರನ ಚಿತ್ರ ಕಟ್ಟಿರುತ್ತಾರೆ. ಕಾಲಿಗೆ ಬೆಳ್ಳಿ ಗೆಜ್ಜೆಯೂ ಇರುತ್ತದೆ. ತಲೆಗೆ ಉದ್ದನೆಯ ಕೂದಲನ್ನು ಇಳಿಬಿಟ್ಟಿರುತ್ತಾರೆ. ಇವರು ಶಿವನಿಗೆ ಮತ್ತು ವೀರಭದ್ರನಿಗೆ ಸಂಬಂಧಿಸಿದ ನಿಗೂಢ ಒಡಬುಗಳನ್ನು ಹೇಳುತ್ತ, ಖಡ್ಗದಿಂದ ಎದೆಗೆ ಅಪ್ಪಳಿಸಿಕೊಳ್ಳುತ್ತಾ ಭಯಾನಕವಾಗಿ ಕುಣಿಯುತ್ತಾರೆ. ಹೇಮಕೂಟವು ಶಿವನ ವಾಸಸ್ಥಾನವಾಗಿರುವುದರಿಂದ, ಇಲ್ಲಿ ಕಾಸೆಯವರ ಕುಣಿತ ವಿಶೇಷವಾಗಿರುತ್ತದೆ ಎಂದು ಜನ ಹೇಳುತ್ತಾರೆ.

೫.೧೧. ಕೊಂಡಮಾಮಗಳು

ಫಲಪೂಜೆ, ಶಿವರಾತ್ರಿ ಮತ್ತು ಹಂಪಿ ಜಾತ್ರೆಯ ದಿವಸದಂದು ತೆಲುಗು ಮಾತಾಡುವ ಅನೇಕ ಜನ ಕೊಂಡಮಾಮರು ಹಂಪಿ ಪರಿಸರದಲ್ಲಿ ಕಾಣಸಿಗುತ್ತಾರೆ. ಮುಡಿಗೆ ನವಿಲುಗರಿ, ಕೊರಳಿಗೆ ಮಣಿಸರ, ತೋಳುಗಳಿಗೆ ಲೋಹದ ಬಳೆ, ಕಿವಿಗೆ ದೊಡ್ಡದಾದ ಕುಂಡಲ, ಸೊಂಟಪಟ್ಟಿಗೆ ಮುಳ್ಳುಹಂದಿಯ ಮುಳ್ಳುಗಳನ್ನು ಸಿಕ್ಕಿಸಿಕೊಂಡಿರುವ ಇವರು ಭವಿಷ್ಯ ಹೇಳುತ್ತಾರೆ. ‘ನಾವು ಕೃಷ್ಣದೇವರಾಯನ ಕಾಲದಿಂದಲೂ ಹಂಪಿ ಜಾತ್ರೆಗೆ ಬರುತ್ತಿದ್ದೆವು’ ಎಂದು ಅವರು ಹೇಳಿಕೊಳ್ಳುತ್ತಾರೆ.

೫.೧೨. ಬಸವನಾಟ

ಕಾಮಲಾಪುರ, ಕಡ್ಡಿರಾಂಪುರ, ರಾಮಸಾಗರ, ಕಂಪ್ಲಿ, ಆನೆಗೊಂದಿ ಪರಿಸರದಲ್ಲಿ ‘ಕೋಲೆ ಬಸವನಾಟ’ದ ಕಲಾವಿದರಿದ್ದಾರೆ. ಇವರನ್ನು ‘ಗಂಗೆತ್ತಿನವರು’ ಎಂದು ಕರೆಯುತ್ತಾರೆ. ಇವರು ಶಿವ-ಪಾರ್ವತಿಯರ ಮದುವೆಯನ್ನು ಒಂದು ಎತ್ತು ಮತ್ತು ದನದ ಮೂಲಕ ಮಾಡಿಸಿ ತೋರಿಸುತ್ತಾರೆ. ಪಾರ್ವತಿಯ ತಪಸ್ಸಿನ ಸಂದರ್ಭದಲ್ಲಿ ಭಿಕ್ಷುಕನ ವೇಷ ಧರಿಸಿ ಬಂದ ಶಿವನನ್ನು, ಪಾರ್ವತಿಯೇ ಬೈದು ಬಿಡುವ ಸಂದರ್ಭವನ್ನು ಇವರು ಬಹಳ ಮನೋಜ್ಞವಾಗಿ ಆಡಿ ತೋರಿಸುತ್ತಾರೆ.

೫.೧೩. ಚೌಡಿಕೆಯವರು

ಚೌಡಿಕೆ ನುಡಿಸುವ ಜೋಗಯ್ಯ ಮತ್ತು ಜೋಗತಿಯರು ಹಂಪಿಗೆ ಭೇಟಿ ನೀಡುತ್ತಾರೆ. ಜಾತ್ರೆಯಲ್ಲಿ ಜೋಗ-ಜೋಗತಿಯರು ಒಟ್ಟಿಗೇ ಹಾಡಿ ಕುಣಿಯುತ್ತಾರೆ; ಎಲ್ಲಮ್ಮನ ಕತೆಯನ್ನು ನಿರೂಪಿಸುತ್ತಾರೆ. ನಪುಂಸಕರಾದವರು ಜೋಗತಿ ಅಥವಾ ಜೋಗಮ್ಮ ದೀಕ್ಷೆ ಪಡೆಯುವ ಕೆಲಸವೂ ಹಂಪಿಯಲ್ಲಿ ನಡೆಯುತ್ತದೆ.

೫.೧೪. ಡೊಳ್ಳಿನವರು

ಡೊಳ್ಳಿನ ಧ್ವನಿ ಶಿವನಿಗೆ ಬಹಳ ಪ್ರಿಯವಾದುದು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಫಲಪೂಜೆ ಮತ್ತು ಜಾತ್ರೆಯ ಸಮಯದಲ್ಲಿ ಅನೇಕ ಡೊಳ್ಳಿನ ಮೇಳಗಳು ಹಂಪಿಗೆ ಬರುತ್ತವೆ. ಮೇಳದವರು ರಾತ್ರಿಯಿಡೀ ಡೊಳ್ಳು ಬಾರಿಸಿ, ಹರಕೆ ಸಲ್ಲಿಸುತ್ತಾರೆ. ಬಳ್ಳಾರಿ, ರಾಯಚೂರು, ಧಾರವಾಡ ಮತ್ತು ಬಿಜಾಪುರ ಜಿಲ್ಲೆಗಳಿಂದಲೇ ಡೊಳ್ಳಿನ ತಂಡಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತವೆ.

ಕೆಲವು ನಿರೂಪಕರು ‘ನಮ್ಮ ಹಿರಿಯರು ಹಿಂದಿನ ಕಾಲದಲ್ಲಿ ನಡೆದ ಯುದ್ಧಗಳಲ್ಲಿ ಡೊಳ್ಳು ಬಾರಿಸುತ್ತಿದ್ದರು’ ಎಂದು ಹೇಳುತ್ತಾರೆ. ಹಂಪಿ ಪರಿಸರದ ಕುರುಬರು ವಿಶೇಷವಾಗಿ ಡೊಳ್ಳಿನ ಹರಕೆಯಲ್ಲಿ ಭಾಗವಹಿಸುತ್ತಾರೆ.

೫.೧೫. ಡೊಂಬರ ಕುಣಿತ

ಕಂಪಿಲಿಯ ಇತಿಹಾಸವನ್ನು ತಮ್ಮದೇ ಇತಿಹಾಸ ಎಂದು ಭಾವಿಸುವ ಡೊಂಬರು, ಹಂಪಿಯಲ್ಲಿ ಡೊಂಬರ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದಲ್ಲಿ ಮರದಿಂದ ಮಾಡಿದ ವಿವಿಧ ಮುಖವಾಡಗಳನ್ನು ಬಳಸುತ್ತಾರೆ. ಶೂಲದ ಮರವೊಂದನ್ನು ನೆಡುತ್ತಾರೆ. ಸಿದ್ಧರ ಕಳಸ ಮತ್ತು ಕುದುರೆಯ ಮುಖವಾಡಕ್ಕೆ ಹಬ್ಬದಲ್ಲಿ ವಿಶೇಷ ಸ್ಥಾವವಿದೆ.

ಡೊಂಬರ ಹಬ್ಬವು ಕಂಪಿಲಿಯ ಕುಮಾರರಾಮನ ಕತೆಯನ್ನು ಪುನರಭಿನಯಿಸಿ ತೋರಿಸುತ್ತದೆ. ಹಬ್ಬದಲ್ಲಿ ಬಳಕೆಯಾಗುವ ಶೂಲದ ಮರವನ್ನು ರತ್ನಾಜಿ ಎಂದು ಭಾವಿಸಲಾಗುತ್ತದೆ. ಸಿದ್ಧರ ಕಳಸವೇ ಕುಮಾರರಾಮನಂತೆ. ಹಾಗೆ ಕುದುರೆಯ ಮುಖವಾಡವು ಕುಮಾರರಾಮನ ಪ್ರೀತಿಯ ಕುದುರೆಯಾದ ಬೊಲ್ಲನನ್ನು ಸಂಕೇತಿಸುವುದಂತೆ. ಹಬ್ಬದಲ್ಲಿ ಕುಣಿಯುವ ಡೊಂಬತಿಯರು, ಕುಣಿಯುತ್ತಲೇ ಕುಮಾರರಾಮನ ಕತೆಯನ್ನು ನಿರೂಪಿಸುತ್ತಾರೆ. ನಿರೂಪಣೆಯ ಮಧ್ಯೆ ಚೆಂಡಾಟದ ಪ್ರಕರಣ, ಯುದ್ಧ ಪ್ರಕರಣಗಳನ್ನು ಅಭಿನಯಿಸಿ ತೋರಿಸಲಾಗುತ್ತದೆ.

ಡೊಂಬರಾಟದಲ್ಲಿ ಮನರಂಜಕ ಕುಣಿತಗಳೂ, ಕಸರತ್ತುಗಳೂ ಇರುತ್ತವೆ.

೫.೧೬. ನಗಾರಿಯವರು

ಫಲಪೂಜೆ ಮತ್ತು ಜಾತ್ರೆಗಳಲ್ಲಿ ಹಂಪಿಯ ವಿವಿಧ ಎಡೆಗಳಲ್ಲಿ ನಗಾರಿ ಬಾರಿಸುವ ಜನರನ್ನು ಕಾಣಬಹುದು.

ಹಿಂದೆ ಅರಸರ ಕಾಲಕ್ಕೆ ವೈರಿಗಳ ಸುಳಿವು ನೀಡಲು ಉಪಯೋಗಿಸುತ್ತಿದ್ದ ನಗಾರಿಯನ್ನು ಈಗ ವಿರೂಪಾಕ್ಷ ದೇವರ ಮೆರವಣಿಗೆಗೆ ಉಪಯೋಗಿಸುತ್ತಿದ್ದೇವೆ ಎಂದು ಕೆಲವು ನಿರೂಪಕರು ಹೇಳುವುದುಂಟು. ಹಂಪಿ ಜಾತ್ರೆಯಲ್ಲಿ ಹತ್ತರಿಂದ ಹದಿನೈದು ನಗಾರಿ ತಂಡಗಳಿರುತ್ತವೆ.

೫.೧೭. ನಂದಿಧ್ವಜ ಕುಣಿತ

ಫಲಪೂಜೆಯಲ್ಲಿ ಹಲವು ಜನ ಕಲಾವಿದರು ನಂದಿಧ್ವಜ ಕುಣಿತ ಮಾಡುತ್ತಾರೆ. ವಿರೂಪಾಕ್ಷನಿಗೆ ಸಂಬಂಧಿಸಿಯೇ ಈ ಕುಣಿತ ಹುಟ್ಟಿದೆ ಎಂದು ಕಲಾವಿದರು ಭಾವಿಸುತ್ತಾರೆ. ಅವರ ಪ್ರಕಾರ ‘ನಂದಿಧ್ವಜ ಕೋಲಿನಲ್ಲಿ ಕಾಣುವ ಬುರುಡೆಯಾಕಾರದ ರಚನೆಗಳು, ವೀರಭದ್ರನಿಂದ ಕೊಲ್ಲಲ್ಪಟ್ಟ ದಕ್ಷನ ಅನುಯಾಯಿಗಳಿದ್ದು, ಧ್ವಜಕೋಲಿನಲ್ಲಿ ಕಾಣುವ ಧ್ವಜವು ಸಿಂಹದ ಚರ್ಮದ್ದು’. ಹೀಗೆ ಈ ಕುಣಿತವು ಶಿವನಿಗೆ ಸಂಬಂಧಿಸಿರುವುದರಿಂದ, ಜಾತ್ರೆಯಲ್ಲಿ ಹೆಚ್ಚು ಜನರನ್ನು ತನ್ನೆಡೆಗೆ ಆಕರ್ಷಿಸುತ್ತದೆ. ತುಂಬ ಭಾರವಿರುವ ನಂದಿಕೋಲನ್ನು ಎತ್ತಿಕೊಂಡು ಕುಣಿಯುವ ಕಲಾವಿದರು ಚಾಕಚಕ್ಯತೆ ಮತ್ತು ಸಾಹಸಗಳಿಗೆ ಪೂರಕವಾಗಿ ನಗಾರಿ, ನಾಗಸ್ವರವನ್ನು ಬಾರಿಸುತ್ತಾರೆ.

೫.೧೮. ಭಜನೆ ಮಾಡುವವರು

ಹಂಪಿ ಪರಿಸರದಲ್ಲಿ ಭಜನೆ ಮಂಡಲಿಗಳು ಸಾಕಷ್ಟಿವೆ. ಇಲ್ಲಿ ವಯಸ್ಸಿನ ಅಂತರವೇನು ಇಲ್ಲ. ಗಂಡಸರೂ ಹಾಗೂ ಕೆಲವು ಕಡೆ ಹೆಂಗಸರೂ ಸಹ ಭಜನೆ ಮಂಡಲಿಗಳಲ್ಲಿ ಪಾಲ್ಗೊಳ್ಳುತ್ತಾರೆ. ಸಾಮಾನ್ಯವಾಗಿ ಭಜನೆಯನ್ನು ಪ್ರತಿದಿನ ಸಂಜೆ ದೇವಸ್ಥಾನದಲ್ಲಿ ನಡೆಸುತ್ತಾರೆ. ಅಲ್ಲದೆ ದೈವರಾಧನೆಗೆ ಪ್ರಶಸ್ತವಾದ ದಿನಗಳೆಂದು ಭಾವಿಸಲಾದ ಸೋಮವಾರ, ಶುಕ್ರವಾರ, ಶನಿಗಾರಗಳಂದು ಜನರು ವಿಶೇಷವಾಗಿ ಭಜನೆ ಮಾಡುತ್ತಾರೆ. ತಮ್ಮ ದಿನಗೆಲಸ ಮುಗಿಸಿ ಮನೆಗೆ ಬಂದು ಕೈಕಾಲು ಮುಖ ತೊಳೆದು ಹಣೆಗೆ ವಿಭೂತಿ ಧರಿಸಿ, ನಿತ್ಯದ ಉಡುಪಿನಲ್ಲೇ ದೇವಸ್ಥಾನದಲ್ಲಿ ಬಂದು ಸೇರುತ್ತಾರೆ. ಭಜನೆಯ ಹಾಡುಗಳನ್ನು ಹಾಡುವ ನುರಿತವರೆಲ್ಲ ಮುಂದೆ ಬರುತ್ತಾರೆ. ಚೆನ್ನಾಗಿ ಕಲಿತ ಹಾಡುಗಾರನೊಬ್ಬ ಮುಖ್ಯ ಹಾಡುಗಾರನಾಗುತ್ತಾನೆ. ಉಳಿದವರು ಹಿಮ್ಮೇಳದಲ್ಲಿ ಸಹಕರಿಸುತ್ತಾರೆ. ಭಜನೆ ಮೇಳಗಳಲ್ಲಿ ಹಾರ‍್ಮೋನಿಯಂ, ತಾಳ, ಗೆಜ್ಜೆ, ತಬಲ, ಡೋಲಾಕ್, ದಮ್ಮಡಿ, ಖಂಜರಿ, ಏಕತಾರಿ ಮುಂತಾದ ವಾದ್ಯಗಳನ್ನು ಉಪಯೋಗಿಸುತ್ತಾರೆ. ಭಜನೆಯ ತಂಡದ ಪ್ರತಿಯೊಬ್ಬನೂ ಈ ಎಲ್ಲಾ ವಾದ್ಯಗಳನ್ನು ನುಡಿಸಬಲ್ಲ ಅನುಭವ ಪಡೆದಿರುತ್ತಾನೆ. ಪ್ರತಿ ಹುಣ್ಣಿಮೆ ಅಮವಾಸೆ ಹಬ್ಬ ಹರಿದಿನಗಳ ಕಾಲಕ್ಕೆ ಹೊಸಪೇಟೆ, ಕಾಮಲಾಪುರ, ಮಲಪನಗುಡಿ ಹಾಘೂ ಹಂಪಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾತ್ರಿ ಇಡೀ ಭಜನೆ ಕಾರ್ಯಕ್ರಮ ನಡೆಯುತ್ತದೆ. ಅಲ್ಲದೆ ರಾಯಚೂರು, ಚಿತ್ರದುರ್ಗ, ಧಾಋವಾಡ ಹಾಗೂ ಬಳ್ಳಾರಿ ಜಿಲ್ಲೆಯ ವಿವಿಧ ಪ್ರದೇಶಘಳಿಂದ ಹಂಪಿಗೆ ಹಬ್ಬ ಹರಿದಿನಗಳ ಕಾಲಕ್ಕೆ ಅದರಲ್ಲೂ ಫಲಪೂಜೆ, ಜಾತ್ರೆ, ಶಿವರಾತ್ರಿ ಆಚರಣೆಯ ಸಂದರ್ಭದಲ್ಲಿ ಪಾದಯಾತ್ರೆ ಮಾಡಿಕೊಂಡು ಭಜನೆ ತಂಡಗಳು ಬರುತ್ತವೆ. ಹೀಗೆ ಬರುವ ತಂಡಗಳಿಗೆ ಮಾರ್ಗದ ಮಧ್ಯದಲ್ಲಿನ ಹಲವು ಗ್ರಾಮಸ್ಥರು ಹಾಗೂ ಅಲ್ಲಿನ ಭಜನೆ ಮಂಡಳಿಯವರು ಊಟ ವಸತಿ, ಹಣ ನೀಡಿ ಬೀಳ್ಕೊಡುತ್ತಾರೆ. ಸ್ಥಳೀಯರು ಮಳೆ ಬಾರದ ಕಾಲಕ್ಕೆ ಜಂಬುನಾಥನ ದೇವಸ್ಥಾನದಲ್ಲಿ ದೇವರ ಉತ್ಸವಮಾಡಿ ಒಂದು ತಿಂಗಳ ಕಾಲ ಜನರು ಭಜನೆ ಮಾಡುತ್ತಾರೆ. ಭಜನೆಗಳಲ್ಲಿ ಹೆಚ್ಚಾಗಿ ಶಿಶುನಾಳಶರೀಫರ ಪದಗಳು, ಬಸವಣ್ಣನವರ ವಚನಗಳು, ಶರಣರ ತತ್ವಪದಗಳು ಹಾಗೂ ದಾಸರ ಕೀರ್ತನೆಗಳನ್ನು ಹಾಡುತ್ತಾರೆ. ಯಾರಾದರೂ ಸತ್ತರೆ ಮರಣದ ಕಾಲದಲ್ಲಿ ಕಳೇಬರದ ಬಳಿ ಭಜನೆ ಮಾಡುವುದೂ ಉಂಟು. ಈ ಸಮಯದಲ್ಲಿ ಜೀವ, ಆತ್ಮ ನಶ್ವರ ಬದುಕು, ಮಾನವ ಬದುಕಿನ ಜಂಜಾಟ, ಕರ್ತವ್ಯ ಜೀವನದ ಬೆಲೆಯನ್ನು ಕುರಿತಾದ ಪದಗಳನ್ನು ತುಂಬ ಮಾರ್ಮಿಕವಾದ ಅರ್ಥಪೂರ್ಣ ರೀತಿಯಲ್ಲಿ ಹಾಡಲಾಗುತ್ತದೆ.

ಮೂರು ಕಾಲಿನ ಪಕ್ಷಿ
ನೀರೊಳಗೆ ನಿಂತಾದೋ
ಶಂಭೋಲಿಂಗಾ ::

ರೆಕ್ಕಿಲ್ಲ ಪುಕ್ಕಿಲ್ಲ
ಹಾರಿತು ಗಗನಕ್ಕೆ
ಶಂಭೋಲಿಂಗಾ ::

ಅಲ್ಲದೆ ಪ್ರಾಣಿ ಪಕ್ಷಿಯನ್ನು ಕುರಿತಂತೆ

ತನುವಿನೊಳನುದಿನವಿದ್ದು
ಎನ್ನ ಮನಕ್ಕೊಂದು ಮಾತು
ಹೇಳದೆ ಹೋದೆಯ ಹಂಸ ::

ಕಾಯದ ಕೊಂಬೆ ಮ್ಯಾಲೆ
ಮಾಯಾದ ಗಿಳಿಕೂತು
ಗೂಡುಕಟ್ಟಿತು ತನ್ನ ಸುಖಕೆಂದು
ಮರಿ ಮಾಡಿ ಗೂಡು ಬಿಟ್ಟು
ಗಿಳಿ ಹಾರಿ ಹೋಗುವಾಗ
ತನ್ನ ಕೊಂಬೆಗೊಂದು ಮಾತು
ಹೇಳದೆ ಹೋದೆಯ ಹಂಸ ::

ಇತ್ಯಾದಿಯಾಗಿ ಹಾಡುತ್ತಾರೆ.

ಭಜನೆ ಮೇಳದಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಹಾಡುತ್ತಾರೆ. ನಿಂತು ಹಾಡುವ ಪರಿಪಾಠ ಕಡಿಮೆ. ಒಳ್ಳೆಯ ಕಂಠವಿರುವವನು ಒಂದು ಚರಣ ಹಾಡಿದರೆ ಉಳಿದವರೆಲ್ಲ ಆ ಚರಣವನ್ನೋ ಅಥವಾ ಪಲ್ಲವಿಯನ್ನೋ ಪುನರುಚ್ಚರಿಸುತ್ತಾರೆ. ಪ್ರಾರಂಭದಲ್ಲಿ ಭಜನೆಯ ಚರಣವನ್ನು ನಿಧಾನವಾಗಿ ಹಾಡಿ ನಂತರ ಹಾಡಿನ ಗತಿಯನ್ನು ತ್ವರಿತಗೊಳಿಸಿ ಮತ್ತೆ ನಿಧಾನವಾಗಿ ಹಾಡುತ್ತಾರೆ. ಅದಕ್ಕೆ ತಕ್ಕ ತಾಳ, ದಮ್ಮಡಿ, ಖಂಜರ, ಲಯಬದ್ಧ ಬಡಿತಗಳ ಏರಿಳಿತಗಳಿಂದ ಭಜನೆ ಆಕರ್ಷಕವಾಗಿರುತ್ತದೆ. ಭಜನೆ ಪ್ರಾರಂಭಿಸುವಾಗ ಮತ್ತು ಪ್ರತಿಯೊಂದು ಹಾಡು ಮುಗಿದ ಕೂಡಲೇ ಒಬ್ಬರು ‘ಜಯಾ ಜಯ ನಮಃ ಪಾರ್ವತೀ ಪತೇ’ ಎಂದು ಹೇಳಿದರೆ ಉಳಿದವರು ‘ಹರಹರ ಮಹಾದೇವ’ ಎಂದು ಒಪ್ಪಿಗೆ ಹೇಳುತ್ತಾರೆ. ಭಜನೆಯ ಮೇಳದ ಕೊನೆಯಲ್ಲಿ ಮಂಗಳಾರತಿಯ ಪದವನ್ನು ಹಾಡಿ ಮಂಗಳಾರತಿ ಬೆಳಗುವುದರ ಮೂಲಕ ಮುಕ್ತಾಯಗೊಳಿಸುತ್ತಾರೆ.

ವಿರೂಪಾಕ್ಷನ ಜಾತ್ರೆ ಮತ್ತು ಫಲಪೂಜೆಗೆ ಬೇರೆ ಬೇರೆ ಪ್ರದೇಶಗಳಿಂದ ನೂರಾರು ಭಜನೆ ಮೇಳಗಳು ಆಗಮಿಸುತ್ತವೆ. ಇವರು ಜಾತ್ರೆಯ ಮುಖ್ಯ ಭಾಗವನ್ನು ಆಕ್ರಮಿಸಿ ಕೊಳ್ಳುತ್ತಾರೆ.

೫.೧೯. ಬುರ್ರ ಕತೆಗಾರರು

ಹಂಪಿಯಲ್ಲಿರುವ ತೇರುಬೀದಿಯ ಇಕ್ಕೆಲಗಳಲ್ಲಿ ವಾಸ ಮಾಡುತ್ತಿರುವ ಜನರಲ್ಲಿ ಕೆಲವು ಬುರ‍್ರ ಕತೆಗಳನ್ನು ನಿರೂಪಿಸುತ್ತಾರೆ. ಗಂಡ ಮತ್ತು ಹೆಂಡತಿಯರಿದ್ದರೆ, ಅದರಲ್ಲಿ ಹೆಂಡತಿ ಮದ್ದಳೆಯಂಥ ಒಂದು ವಾದ್ಯವನ್ನು ಬಾರಿಸುತ್ತಾಳೆ. ಗಂಡ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿಯುತ್ತ ಹಾಡುತ್ತಾನೆ. ಆತನ ಹಾಡು ನಿಂತಲ್ಲಿಂದ ಆಕೆ ಮುಂದು ವರಿಸುತ್ತಾಳೆ. ಹೀಗೆ ಇಬ್ಬರು ಪರಸ್ಪರ ಸೇರಿಕೊಂಡು ಇಡೀ ರಾತ್ರಿ ಹಾಡಿನ ರೂಪದ ಕತೆ ಹೇಳುತ್ತಾರೆ. ಈ ಕತೆಗಳು ಬಹುಮಟ್ಟಿಗೆ ತೆಲುಗು ಭಾಷೆಯಲ್ಲಿರುತ್ತವೆ. ಕಂಪ್ಲಿಯ ಕುಮಾರರಾಮನಿಗೆ ಸಂಬಂಧಿಸಿದ ಅನೇಕ ಕತೆಗಳನ್ನು ಇವರು ನಿರೂಪಿಸುತ್ತಾರೆ. ಕನ್ನಡದಲ್ಲಿ ‘ಬಾಲನಾಗಮ್ಮ’ ಕತೆಯನ್ನು ಇವರು ಆಕರ್ಷವಾಗಿ ಹೇಳುತ್ತಾರೆ.

೫.೨೦. ಬ್ಯಾಟಿ ಮರದ ಆಚರಣೆ

ಬೇಡರು ಕಾಳಮ್ಮನ ಹಬ್ಬ ಮಾಡುತ್ತಾರೆ. ಈ ಹಬ್ಬದ ಸಂದರ್ಭದಲ್ಲಿ ಕಾಳಮ್ಮನ ಗುಡಿಯ ಮುಂದೆ ಚಪ್ಪರ ಹಾಕಿ ಮರದ ಕೊಂಬೆಗಳನ್ನು ನೆಡುತ್ತಾರೆ. ಜೊತೆಗೆ ಬೇವು, ಆಲ, ಅತ್ತಿ, ಮಾವು, ನೀರಗನ್ನೆ, ಬಸರಿ ಮತ್ತು ಗೋಣಿ ಮರದ ಕೊಂಬೆಗಳನ್ನು ಕಡಿದು ಮೆರವಣಿಗೆ ಮಾಡುತ್ತಾರೆ ಮತ್ತು ಅದಕ್ಕೆ ಪೂಜೆ ಮಾಡುತ್ತಾರೆ. ಇದನ್ನು ಬ್ಯಾಟಿ ಮರದ ಆಚರಣೆ ಎಂದು ಕರೆಯುತ್ತಾರೆ. ಹಂಪಿ ಪರಿಸರದ ಬಹಳ ಜನಪ್ರಿಯವಾದ ಹಬ್ಬವಿದು.

೫.೨೧. ರಿವಾಯತ್ ಪದಗಳು

ಇವನ್ನು ಕರ್ಬಲಾ ಹಾಡುಗಳೆಂದು ಕರೆಯುತ್ತಾರೆ. ಹಂಪಿ ಜಾತ್ರೆಯಲ್ಲಿ ರಿವಾಯತ್ ಪದಗಳನ್ನು ಹಾಡುವ ಕಲಾವಿದರೂ ಕಾಣಸಿಗುತ್ತಾರೆ. ಇವರು ಪೈಗಂಬರರ ಪದಗಳನ್ನು ಹಾಡುವುದರ ಜೊತೆಗೆ ಶರಣರ ಪದ, ತತ್ತ್ವಪದಕಾರರ ಹಾಡು ಮತ್ತು ರಾಮಾಯಣ, ಮಹಾಭಾರತ ಪ್ರಸಂಗಗಳ ಪದಗಳನ್ನು ಹಾಡುತ್ತಾರೆ.

೫.೨೨. ಸಾರುವಯ್ಯಗಳು

ಉದ್ದನೆಯ ನಿಲುವಂಗಿ, ತಲೆಗೆ ಕೆಂಪು ಇಲ್ಲವೇ ಕಾವಿ ರುಮಾಲು, ಕೈಯಲ್ಲಿ ಕಂದೀಲು ಹಣೆಗೆ ವಿಭೂತಿ ಮತ್ತು ಕೊರಳಿಗೆ ರುದ್ರಾಕ್ಷಿ ಹಾಕಿರುವ ‘ಸಾರುವಯ್ಯ’ಗಳು ಹಂಪಿ ಜಾತ್ರೆಯಲ್ಲಿ ವಿಶೇಷವಾಗಿ ಕಂಡುಬರುತ್ತಾರೆ. ಇವರು ಜಾತ್ರೆಗೆ ಬಂದ ಜನರಿಗೆ ಭವಿಷ್ಯ ಹೇಳುತ್ತಾರೆ.

೫.೨೩. ಮೋಡಿಯಾಟ

ಆನೆಗೊಂದಿ ಪರಿಸರದಲ್ಲಿ ಮೋಡಿಯಾಟ ಜನಪ್ರಿಯವಾಗಿದೆ. ಈ ಮೋಡಿಯಾಟವಾಡುವ ಜನರು ತಾವು ಬಹಳ ಹಿಂದಿನಿಂದಲೂ, ಅಂದರೆ ರಾಜಮಹಾರಾಜರ ಕಾಲದಿಂದಲೂ ಈ ಆಟವನ್ನು ಆಡುತ್ತಾ ಬರುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ.

ಮೋಡಿಯಾಟವನ್ನು ಅಂಜನವಿದ್ಯೆ, ಯಕ್ಷಿಣಿವಿದ್ಯೆ, ಹಸಿರುವಿದ್ಯೆ, ಇಂದ್ರಜಾಲ, ಕಣ್ಕಟ್ಟು ವಿದ್ಯೆ, ಗಾರುಡಿ ವಿದ್ಯೆ, ಗಾರುಡಿಗರಾಟ, ಮೋಡಿಕಾರರ ಆಟ ಇತ್ಯಾದಿ ಹೆಸರುಗಳಿಂದ ಜನರು ಕರೆಯುತ್ತಾರೆ. ವಿಜಯನಗರದ ಅರಸರು ತಮ್ಮ ಮನರಂಜನೆಗಾಗಿ ಮೋಡಿಕಾರರನ್ನು ಇರಿಸಿಕೊಂಡಿದ್ದರೆಂದು ಹೇಳಲಾಗುತ್ತಿದೆ. ವಿರೋಧಿ ಅರಸನನ್ನು ಮೋಡಿಯ ಕಣಕ್ಕೆ ಆಹ್ವಾನಿಸಿ ಸೋಲಿಸುವುದು ಒಂದು ಪ್ರತಿಷ್ಠೆಯ ವಿಷಯವೇ ಆಗಿತ್ತಂತೆ. ತಮ್ಮ ಸಂಸ್ಥಾನದ ಕೆಲವು ಪ್ರದೇಶಗಳನ್ನು ಅರಸರು ಮೋಡಿ ಆಟಕ್ಕೆ ಪಣವಾಗಿ ಕಾಯ್ದಿರಿಸಿಕೊಳ್ಳುತ್ತಿದ್ದರು ಎಂದೂ ಹೇಳಲಾಗುತ್ತಿದೆ.

ವಿಜಯನಗರದಲ್ಲಿ ಪ್ರಖ್ಯಾತವಾಗಿದ್ದ ಮಹಾನವಮಿ ಹಬ್ಬದ ಸಂದರ್ಭದಲ್ಲಿ ಮೋಡಿಕಾರರು ಮೋಡಿಯಾಟ ಆಡುತ್ತಿದ್ದರೆಂಬ ನಂಬಿಕೆ ಹಂಪಿ ಪರಿಸರದಲ್ಲಿ ಜನಪ್ರಿಯವಾಗಿದೆ.

ಗೊಲ್ಲರಲ್ಲಿ ಮತ್ತು ಬೇಡರಲ್ಲಿ ಹೆಚ್ಚು ಸಂಖ್ಯೆಯಲ್ಲಿ ಮೋಡಿಕಾರರಿದ್ದಾರೆ. ಗೊಲ್ಲರಲ್ಲಿ ಮೋಡಿಯ ಬಗೆಗೆ ಹಲವು ಕತೆಗಳಿವೆ. ಒಂದು ಕತೆಯ ಪ್ರಕಾರ ಮೋಡಿಕಾರರ ಗುರು ತಿರುಪತಿ ಬಳಿಯಿರುವ ಪೆದ್ದಟ್ಟಿಯವನಂತೆ. ಗುರು ಗೊಲ್ಲ ಜಾತಿಯವನಾದ್ದರಿಂದ ಅವನ ವಂಶದವರಿಗೆ ಪೆದ್ದಟ್ಟಿ ಗೊಲ್ಲರೆಂದು ಹೆಸರು ಬಂದಿತು ಎನ್ನುತ್ತಾರೆ. ಹಿಂದೆ ಈ ಪೆದ್ದಟ್ಟಿ ಗೊಲ್ಲರಿಗೆ ದೊಡ್ಡ ರಾಜ್ಯವಿತ್ತಂತೆ. ಆ ರಾಜ್ಯವನ್ನಾಳುತ್ತಿದ್ದ ರಾಜನಿಗೆ ಇಬ್ಬರು ಹೆಂಡತಿಯರು, ಹಿರಿಯವಳಿಗೆ ಒಬ್ಬ ಮಗ, ಕಿರಿಯವಳಿಗೆ ಏಳು ಜನ ಮಕ್ಕಳಾದರು. ಕಿರಿಯ ಹೆಂಡತಿಯ ಮಕ್ಕಳಿಗೆ ಹಿರಿಯ ಹೆಂಡತಿ ಮಗನನ್ನು ಕಂಡರೆ ಆಗುತ್ತಿರಲಿಲ್ಲವಂತೆ. ರಾಜ್ಯ ಅವನಿಗೆ ದೊರೆಯುತ್ತದೆ ಎಂದು ತಿಳಿದು ಹೇಗಾದರೂ ಮಾಡಿ, ಅವನನ್ನು ಸಾಯಿಸಬೇಕೆಂದು ನಿರ್ಧರಿಸುತ್ತಾರೆ. ಅದಕ್ಕಾಗಿ ಅನೇಕ ರೀತಿಯಲ್ಲಿ ತೊಂದರೆ ಕೊಟ್ಟು ಕೊನೆಗೆ ಅವನನ್ನು ಒಂದು ಆಳದ ಬಾವಿಗೆ ನೂಕುತ್ತಾರೆ. ಹಿರಿಯ ಹೆಂಡತಿಯ ಮಗ ದೇವರನ್ನು ಕೂಗಿ ಕರೆದನಂತೆ. ಆಗ ದೇವರು ಪ್ರತ್ಯಕ್ಷನಾಗಿ ಹುಡುಗನ ಬಾಯಿ ತೆರೆಸಿ ಅವನ ನಾಲಿಗೆ ಮೇಲೆ ಮಂತ್ರಜಾಲದ ಬೀಝಾಕ್ಷರ ಬರೆದು ಆಶೀರ್ವದಿಸಿದನಂತೆ. ಆ ನಂತರ ಆ ಹುಡುಗ ರಾಜ್ಯಕ್ಕೆ ಹೋಗಿ ತಾನು ಗಳಿಸಿಕೊಂಡ ಶಕ್ತಿಯಿಂದ ಏಳು ಜನ ಸಹೋರರನ್ನು ಸೋಲಿಸಿ, ತಾನೇ ರಾಜನಾದನಂತೆ. ರಾಜನಾದ ಮೇಲೆ ತನ್ನಲ್ಲಿ ಇದ್ದ ಆ ವಿದ್ಯೆಯನ್ನು ಕೆಲವರಿಗೆ ಧಾರೆ ಎರೆದ ಎಂದೂ, ಮುಂದೇ ಇವರೇ ಮೋಡಿಕಾರರಾದರೆಂದು ಹೇಳಲಾಗುತ್ತದೆ.

ಮತ್ತೊಂದು ಕಥೆಯ ಪ್ರಕಾರ, ಹಿಂದೆ ಗೊಲ್ಲರಲ್ಲಿ ಒಂಬತ್ತು ಪಣದವರು ಮತ್ತು ಹದಿನೆಂಟು ಪಣದವರೆಂದು ಎರಡು ಪಂಗಡಗಳಿದ್ದವು. ತಮ್ಮ ತಮ್ಮ ಪಂಗಡದವರ ಹೆಚ್ಚುಗಾರಿಕೆಯ ಬಗ್ಗೆ ಒಮ್ಮೆ ಜಗಳವಾಡಿ ಹದಿನೆಂಟು ಪಣದವರು ಒಂಬತ್ತು ಪಣದವರನ್ನು ಹೊಡೆದು ಬಡಿದು ಮತ್ತೆ ತಲೆ ಎತ್ತದಂತೆ ಮಾಡುತ್ತಾರೆ. ಆ ಒಂಬತ್ತು ಪಣದವರಲ್ಲಿ ಒಬ್ಬ ಹುಡುಗ ಮಾಟ ಮಂತ್ರ ಬಲ್ಲ ಆಚಾರಿಯ ಬಳಿ ಸೇವೆಗಾಗಿ ಸೇರಿ ಅವನ ಸೇವೆ ಮಾಡುತ್ತಾ ಜೀವನ ಸಾಗಿಸುತ್ತಿದ್ದ. ಒಂದು ದಿನ ಆತ ದನ ಮೇಯಿಸಲು ಕಾಡಿಗೆ ಹೋಗಿದ್ದಾಗ ಹುಲಿಯೊಂದು ಹುಡುಗನಿಗೆ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಅಲ್ಲಿಯೇ ಇದ್ದ ‘ಹಾಲು ಚಿಲುಮೆ’ ಹಾಗೂ ‘ನೀರುಚಿಲುಮೆ’ಯನ್ನು ಬತುತುವಂತೆ ಮಾಡಲು ನಿರ್ಧರಿಸಿತು. ಪ್ರತಿದಿನ ಹುಡುಗ ಹಾಲು ಚಿಲುಮೆಯಲ್ಲಿ ನೀರು ಕುಡಿದರೆ ದನಗಳು ನೀರು ಚಿಲುಮೆಯಲ್ಲಿ ನೀರು ಕುಡಿದು ಬಾಯಾರಿಕೆಯನ್ನು ಹಿಂಗಿಸಿಕೊಳ್ಳುತ್ತಿದ್ದವು. ಆ ದಿನ ಹುಡುಗ ಕಾಣದ ಹಾಗೆ ಹುಲಿಯು ಎರಡು ಬೇರೆ ಬೇರೆ ಜಾತಿಯ ಸೊಪ್ಪನ್ನು ತಂದು ಎರಡು ಚಿಲುಮೆಗಳಿಗೆ ಒಂದೊಂದು ಸೊಪ್ಪಿನ ರಸವನ್ನು ಪ್ರತ್ಯೇಕವಾಗಿ ಹಿಂಡಿದಾಗ ಚಿಲುಮೆಗಳು ಬತ್ತಿ ಹೋಗುತ್ತವೆ. ಆ ನಂತರ ಹುಲಿ ಎಡಗಡೆಗೆ ಒಂದು ಸೊಪ್ಪಿನ ರಾಶಿಯನ್ನು, ಬಲಗಡೆಗೆ ಮತ್ತೊಂದು ಸೊಪ್ಪಿನ ರಾಶಿಯನ್ನು, ಮಾಡಿ ಹೊರಟು ಹೋಗುತ್ತದೆ. ಗೊಲ್ಲರ ಹುಡುಗ ಬಾಯಾರಿಕೆಯನ್ನು ಹಿಂಗಿಸಿಕೊಳ್ಳಲು ಬೆಟ್ಟದಿಂದ ಇಳಿದು ಬಂದು ಚಿಲುಮೆಯಲ್ಲಿ ನೋಡಿದಾಗ ಅಲ್ಲಿ ನೀರಿರಲಿಲ್ಲ. ಅವನಿಗೆ ಚಿಂತೆಯಾಯಿತು. ಮುಂದೆ ಸುಮ್ಮನೆ ಕುಳಿತರಲಾರದೆ ಬಲಗಡೆಯಿದ್ದ ಸೊಪ್ಪನ್ನು ತೆಗೆದು ಚಿಲುಮೆಗೆ ಹಾಕುತ್ತಾನೆ. ಆಗ ಮೊದಲಿನಂತೆ ನೀರು ತುಂಬಿಕೊಳ್ಳುತ್ತದೆ. ಹಾಗೆಯೇ ಎಡಗಡೆ ಇದ್ದ ಸೊಪ್ಪನ್ನು ಹಾಕಿದಾಗ ಮತ್ತೆ ನೀರು ಬತ್ತಿ ಹೋಗುತ್ತದೆ. ಈ ವಿಷಯವನ್ನು ತನ್ನ ಒಡೆಯನಿಗೆ ತಿಳಿಸುತ್ತಾನೆ. ಆಗ ಆ ಆಚಾರಿ ಇವನಿಗೆ ದೇವರು ಬಂದಿದ್ದಾನೆ. ಅದೃಷ್ಟದ ಬಾಗಿಲು ತಾನಾಗಿಯೇ ತೆರೆದಿದೆ ಎಂದು ಭಾವಿಸಿ ತನಗೆ ಗೊತ್ತಿದ್ದ ಎಲ್ಲಾ ವಿದ್ಯೆಗಳನ್ನೂ ಹೇಳಿಕೊಟ್ಟು, ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಅವನಿಗೇ ಮದುವೆ ಮಾಡಿಕೊಟ್ಟು ಕಳುಹಿಸುತ್ತಾನೆ. ಹುಡುಗ ನೆಮ್ಮದಿಯಿಂದ ಜೀವನ ನಡೆಸುತ್ತಾನೆ. ಹಿರಿಯ ಹೆಂಡತಿಗೆ ಮಕ್ಕಳಾಗದೆ ಕಿರಿಯವಳಿಗೆ ಆರು ಜನ ಮಕ್ಕಳಾಗಿ, ಮತ್ತೆ ಗರ್ಭಿಣಿಯಾಗುತ್ತಾಳೆ. ಈ ನಡುವೆ ಹದಿನೆಂಟು ಪಣದವರ ಪ್ರಾಬಲ್ಯ ಹೆಚ್ಚಾಗಿ ಒಂಬತ್ತು ಪಣದವರ ಆರಾಧ್ಯ ದೈವವಾದ ಕೃಷ್ಣದೇವರನ್ನು ರಥದ ಸಮೇತ ಪಾತಾಳಕ್ಕೆ ತಳ್ಳಿ ಬಿಡುತ್ತಾರೆ. ಆಗ ಗೊಲ್ಲರ ರಾಜ ಯಯಾತಿ ಕೋಟೆ ಬಾಗಿಲು ಹಾಕಿಸಿ ಎರಡೂ ಪಣದವರಲ್ಲಿ ಇದ್ದ ಒಳಜಗಳವನ್ನು ಬಗೆ ಹರಿಸುತ್ತಾನೆ. ಅವರಲ್ಲಿ ಯಾರು ಹೆಚ್ಚು ಎಂಬುದನ್ನು ತೋರಿಸಿಕೊಟ್ಟು ‘ಕೃಷ್ಣದೇವರ ರಥವನ್ನು ಮೇಲಕ್ಕೆ ಎತ್ತಿದವರಿಗೆ ಕೇಳಿದ್ದನ್ನು ಕೊಡುತ್ತೇನೆ’ ಎಂದು ದಿಕ್ಕು ದಿಕ್ಕಿಗೂ ಡಂಗೂರ ಹೊಡೆಸುತ್ತಾನೆ.

ಉತ್ತರ ದಿಕ್ಕಿನಲ್ಲಿದ್ದ ಆಚಾರಿ ಅಳಿಯನಿಗೆ ಈ ವಿಷಯ ತಿಳಿದು ಹೇಗಾದರೂ ಮಾಡಿ ಪರಿಹಾರವನ್ನು ಕಂಡುಹಿಡಿಯಲು ಬೇಕೆಂದು ನಿರ್ಧರಿಸಿ ಹೆಂಡತಿ ಮಕ್ಕಳ ಸಮೇತ ಹುಲಿಯ ಮೇಲೆ ಕುಳಿತು, ನಗಾರಿಯನ್ನು ಬಡಿಯುತ್ತಾ ರಾಜಧಾನಿಗೆ ಬಂದು, ರಾಜನನ್ನು ಕಂಡು, ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿ ಕೃಷ್ಣನನ್ನು ಭಕ್ತಿಯಿಂದ ಪ್ರಾರ್ಥಿಸುತ್ತಾನೆ. ಅದಕ್ಕೆ ಕೃಷ್ಣದೇವರು ‘ಗರ್ಭಿಣಿ ಹೆಂಗಸನ್ನು ಬಲಿ ಕೊಟ್ಟರೆ ನಾನು ಮೇಲಕ್ಕೆ ಬರುತ್ತೇನೆ’ ಎಂದು ಹೇಳುತ್ತಾನೆ. ಗೊಲ್ಲರ ಹುಡುಗ ಎರಡು ಹರಿತವಾದ ಚಿನ್ನದ ಕತ್ತಿಗಳನ್ನು ಮಾಡಿಸಿ ಬಾಯಲ್ಲಿಟ್ಟುಕೊಂಡು ತಪಸ್ಸು ಮಾಡುತ್ತಾನೆ. ಈತನ ಸಾಧನೆಗೆ ಕಾಳಿ ಮತ್ತು ಬೇತಾಳ ಒಲಿಯುತ್ತಾರೆ. ಆಗ ಹದಿನೆಂಟು ಪಣದವರಿಗೆ ರೋಗ ರುಜಿನ ಬಂದು ನೂರಾರು ಜನ ಸಾಯುತ್ತಾರೆ. ಹುಡುಗ ರಾಜನ ಬಳಿ ಹೋಗಿ ಗರ್ಭಿಣಿ ಹೆಂಗಸನ್ನು ಬಲಿಕೊಡಬೇಕೆಂದು ಹೇಳಿದಾಗ ರಾಜ ಒಪ್ಪುವುದಿಲ್ಲ. ಆಗ ಗರ್ಭಿಣಿಯಾಗಿದ್ದ ತನ್ನ ಕಿರಿಯ ಹೆಂಡತಿಯನ್ನೆ ಪೂಜೆ ಮಾಡುವಂತೆ ಹೇಳಿ ಪೂಜೆ ಮಾಡುವ ಕಾಲಕ್ಕೆ ಆಕೆಯನ್ನೇ ಬಲಿ ಕೊಡುತ್ತಾನೆ. ಅನಂತರ ಮೂರು ಮಕ್ಕಳ ಕೊರಳ ಕೊಯ್ದು ಒಂದು ಕೊಡದ ತುಂಬ ರಕ್ತ ಹಿಡಿದು, ನೂರು ಚಿಪ್ಪುಗಳನ್ನು ತಂದು ಹೆಂಡತಿ ಉಟ್ಟಿದ್ದ ಸೀರೆ ಹರಿದು, ಬತ್ತಿ ಮಾಡಿ, ರಕ್ತ ಹಾಕಿ ದೀಪ ಹಚ್ಚಿ ಹೆಂಡತಿ ಹೊಟ್ಟೆಯನ್ನು ಬಗೆಯುತ್ತಾನೆ. ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಎರಡು ಪಿಂಡಗಳನ್ನು ತೆಗೆದು ಕಾಳಿದೇವಿಯ ಕೈಯಲ್ಲಿರುವ ಎರಡು ಕತ್ತಿಯ ತುದಿಗೆ ಅವನ್ನು ನಿಂಬೆ ಹಣ್ಣಿನಂತೆ ಚುಚ್ಚುತ್ತಾನೆ. ಕರುಳನ್ನು ತೆಗೆದು ಮಾಲೆ ಹಾಕಿಕೊಂಡು ಹಿರಿ ಹೆಂಡತಿಯನ್ನು ಪಾತಾಳಕ್ಕೆ ಕರೆದುಕೊಂಡು ಹೋಗಿ ಅವಳ ಮೂಗಿಗೆ ದಾರದ ಒಂದು ತುದಿಯನ್ನು ಕಟ್ಟಿ ಅದನ್ನು ಕೃಷ್ಣದೇವರ ರಥಕ್ಕೆ ಕಟ್ಟಿ ಪಾತಾಳದಿಂದ ರಥವನ್ನು ಎಳೆದು ತರುತ್ತಾನೆ. ರಾಜ ಸಂತೋಷದಿಂದ ಮೊದಲು ಮಾತು ಕೊಟ್ಟಂತೆ ಏನು ಬೇಕಾದರೂ ಕೇಳು ಕೊಡುತ್ತೇನೆ ಎಂದು ಹೇಳುತ್ತಾನೆ. ಆ ವೇಳೆಗೆ ಹದಿನೆಂಟು ಪಣದವರ ಸಂಖ್ಯೆ ಒಂಬತ್ತು ಪಣದವರಿಗಿಂತ ಕಡಿಮೆಯಾಗಿರುತ್ತದೆ. ಗೊಲ್ಲರ ಹುಡುಗ ಬೇರೇನನ್ನು ಕೇಳುವುದಿಲ್ಲ. ಆದರೆ ‘ಉಪ್ಪು ಸಪ್ಪಗಾಗುವವರೆಗೆ, ಸೂರ್ಯ ಚಂದ್ರರರಿರುವವರೆಗೆ ನಾನು ದೇಶದ ಮೇಲೆ ಮೋಡಿ ವಿದ್ಯೆ ಪ್ರದರ್ಶಿಸಿಕೊಂಡಿರುತ್ತೇನೆ. ಅದಕ್ಕಾಗಿ ನನಗೊಂದು ‘ಜಯರೇಖೆ’ಯನ್ನು ಬರೆಸಿಕೊಡಿ ಸ್ವಾಮಿ ಎಂದು’ ಕೇಳುತ್ತಾನೆ. ಅದರಂತೆ ರಾಜರು ಅವನು ಬಯಸಿದ ‘ಜಯರೇಖೆ’ಯನ್ನು ಕೊಡುತ್ತಾರೆ. ಈ ‘ಜಯರೇಖೆ’ ಈಗಲೂ ಗೊಲ್ಲರ ಮೋಡಿಕಾರಲ್ಲಿ  ಇದೆಯಂತೆ.

ಮೋಡಿಯಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ ‘ರಾಜಮೋಡಿ’ ಮತ್ತು ‘ರಣಮೋಡಿ’. ‘ರಾಜಮೋಡಿ’ ಕೇವಲ ಮನರಂಜನೆಗಾಗಿ ಮೀಸಲಾದರೆ ‘ರಣಮೋಡಿ’ ಮನರಂಜನೆಯ ಜೊತೆಗೆ ಎದುರಾಳಿಯನ್ನು ಗೆಲ್ಲುವ ಸ್ಪರ್ಧೆಯಾಗಿರುತ್ತದೆ. ಹಂಪಿಯ ಆಸುಪಾಸಿನ ಕೆಲವು ಸ್ಥಳಗಳಲ್ಲಿ ಈಗಲೂ ವರ್ಷಕ್ಕೊಮ್ಮೆ ರಾಜಮೋಡಿ, ರಣಮೋಡಿಗಳು ನಡೆಯುತ್ತವೆ.

ಮೋಡಿಕಾರರಲ್ಲಿ ಪ್ರಾದೇಶಿಕ ಹಂಚಿಕೆ ಇದೆ. ಒಂದು ಗೊತ್ತಾದ ಪ್ರದೇಶದಲ್ಲಿ ಬೇರೊಬ್ಬ ಮೋಡಿಕಾರ ಬಂದು ತನ್ನ ಪ್ರದರ್ಶನ ನೀಡಬೇಕಾದರೆ ಮೊದಲು ಆ ಪ್ರದೇಶದ ಮೋಡಿಕಾರರ ಅಪ್ಪಣೆಯನ್ನು ಪಡೆಯಬೇಕಾಗುತ್ತದೆ. ಅಪ್ಪಣೆ ಪಡೆಯದೆ ತಾವು ಪ್ರದರ್ಶನ ನೀಡುವುದಾಗಿ ಸ್ಪರ್ಧೆ ಒಡ್ಡಿದರೆ, ಇಬ್ಬರ ನಡುವೆಯೂ ಸ್ಪರ್ಧೆ ನಡೆದು ಸೋತವರು ಗೆದ್ದವರಿಗೆ ತಮ್ಮ ಜೀವನದ ಕೊನೆತನಕ ಸ್ಪರ್ಧೆಗೆ ನಿಲ್ಲದಂತೆ ಶರಣಾಗಬೇಕಾಗುತ್ತದೆ. ಇಂತಹ ಹಲವಾರು ಘಟನೆಗಳು ಆನೆಗೊಂದಿಯಲ್ಲಿ ನಡೆದಿರುವುದರ ಬಗ್ಗೆ ಗೊಲ್ಲರು ಮಾಹಿತಿ ನೀಡುತ್ತಾರೆ.

ರಾಯಚೂರು ಜಿಲ್ಲೆಯ ಕೊಪ್ಪಳ, ಗಂಗಾವತಿ, ಧಾರವಾಡ ಜಿಲ್ಲೆಯ ಗದಗ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮೊದಲಾದ ಸ್ಥಳಗಳಿಂದ ಈ ಪ್ರದೇಶಕ್ಕೆ ಹಲವಾರು ಮೋಡಿಕಾರರು ಸುಗ್ಗಿ ಕಾಲಕ್ಕೆ ಬಂದು ಪ್ರದರ್ಶನ ನೀಡುತ್ತಾರೆ. ಜನರು ಇವರುಗಳನ್ನು ಊರಿನ ಒಳಗೆ ಸೇರಿಸುವುದಿಲ್ಲ. ಇವರು ರಾತ್ರಿಯ ಕಾಲಕ್ಕೆ ಊರಿನ ಹೊರಗೆ ತಂಗುತ್ತಾರೆ.

ಮೋಡಿಕಾರರು ಸಾಮಾನ್ಯವಾಗಿ ತಲೆಗೆ ಕೆಂಪು ವಸ್ತ್ರದ ಪೇಟ ಸುತ್ತಿರುತ್ತಾರೆ. ಅರ್ಧತೋಳಿನ ಅಂಗಿ, ಮೇಲೊಂದು ವಾಸ್ ಕೋಟು, ಕೆಂಪು ವಸ್ತ್ರದ ನಡುಕಟ್ಟು ಕಟ್ಟಿರುತ್ತಾರೆ. ಕಾಲಿಎ ‘ಪ್ಯಾಂಡೆ’ಯನ್ನು ಹಾಕಿರುತ್ತಾರೆ. ಇದನ್ನು ‘ಪೆಂಡೆ’ ಎಂದೂ ಕರೆಯುವುದುಂಟು. ಇದು ಬಳಕೆಯಾಕಾರವಾಗಿದ್ದು ಟೊಳ್ಳಾಗಿ ಇರುತ್ತದೆ. ಇದನ್ನು ತಾಮ್ರ ಮತ್ತು ಹಿತ್ತಾಳೆಯ ಮಿಶ್ರಣದಿಂದ ಮಾಡಿರುತ್ತಾರೆ. ಇದನ್ನು ‘ವೈರಿಗಗ್ಗರ’ ಎಂದೂ ಸಹ ಕರೆಯುತ್ತಾರೆ. ಇದನ್ನು ಕಾಲಿಗೆ ಧರಿಸಿ ಯಾವುದಾದರೂ ಗ್ರಾಮಕ್ಕೆ ಹೋದಾಗ ಆ ಗ್ರಾಮದಲ್ಲಿ ಮೋಡಿ ಬಲ್ಲವರಿದ್ದರೆ, ಪ್ರತಿಸ್ಪರ್ಧಿ ಬಂದನೆಂಬ ‘ಕುರುಹು’ ತಿಳಿಯುತ್ತದೆ. ಆ ಊರಿನಲ್ಲಿ ಮತ್ತೊಬ್ಬ ಮೋಡಿಕಾರನಿದ್ದರೆ, ಗಗ್ಗರದ ಕಾಲಿನ ಆ ವ್ಯಕ್ತಿಯನ್ನು ಕಂಡು ಅವನ ಗಗ್ಗರವನ್ನು ಕಾಲಿನಿಂದ ಒದೆಯುತ್ತಾನೆ. ಇದು ವೈರಿಯನ್ನು ಸ್ಪರ್ಧೆಗೆ ಆಹ್ವಾನಿಸುವ ರೀತಿಯಾಗಿರುತ್ತದೆ.

ಈಗ ಒಂದು ಊರಿನಲ್ಲಿ ಮೋಡಿ ಪ್ರದರ್ಶನ ನಡೆಸಬೇಕೆಂದರೆ ಸ್ಪರ್ಧಿ ಮತ್ತು ಪ್ರತಿಸ್ಪರ್ಧಿಗಳಿಬ್ಬರು ಆ ಊರಿನ ಮುಖ್ಯಸ್ಥರಲ್ಲಿ ಹೋಗಿ ‘ಊರಿನಲ್ಲಿ ಯಾವುದೇ ಗಲಭೆ ಗೊಂದಲವಿಲ್ಲದಂತೆ ಅಣ್ಣ ತಮ್ಮರಂತೆ ತಾವು ಕಲಿತ ವಿದ್ಯೆಯನ್ನು ಪ್ರದರ್ಶಿಸುತ್ತೇವೆ. ಅಪ್ಪಣೆ ಕೊಡಿ’ ಎಂದು ಕೇಳಿಕೊಳ್ಳುತ್ತಾರೆ. ಮುಖಂಡರು ಒಪ್ಪಿಗೆ ನೀಡಿದ ಆ ನಂತರ ತಮ್ಮ ಪ್ರದರ್ಶನವನ್ನು ಪ್ರಾರಂಭಿಸುತ್ತಾರೆ.

ರಾಜಮೋಡಿ

ಹಂಪಿ ಜಾತ್ರೆ, ಫಲಪೂಜೆಗಳಲ್ಲಿ ರಾಜಮೋಡಿ ಹಾಕುವ ಜನರಿರುತ್ತಾರೆ. ಜನರಿಗೆ ಮನರಂಜನೆ ನೀಡುವುದೇ ಇವರ ಪ್ರಧಾನ ಉದ್ದೇಶ. ಈ ಆಟಕ್ಕೂ ಎರಡು ಪಕ್ಷಗಳು ಬೇಕು. ಒಂದು ಪಕ್ಷದವರು ಮೋಡಿ ಕಟ್ಟುತ್ತಾರೆ. ಇನ್ನೊಂದು ಪಕ್ಷದವರು ಮೋಡಿ ತೆಗೆಯುತ್ತಾರೆ. ಮೋಡಿ ಕಟ್ಟುವವರು ಮೊದಲು ಏಳು ಅಂಕಣದ ಮನೆ ಬರೆಯುತ್ತಾರೆ. ಇದರಲ್ಲಿ ಮೊದಲನೆಯ ಅಂಕಣದಲ್ಲಿ ನಿಂಬೆಹಣ್ಣು, ಎರಡನೆ ಅಂಕಣದಲ್ಲಿ ಕೋಳಿ ಮೊಟ್ಟೆ, ಮೂರನೇ ಅಂಕಣದಲ್ಲಿ ಮಡಕೆಯಲ್ಲಿ ತುಂಬಿಸಿಟ್ಟ ಕಳ್ಳಿ, ನಾಲ್ಕನೇ ಅಂಕಣದಲ್ಲಿ ಕುಂಬಳಕಾಯಿ, ಐದನೇ ಅಂಕಣದಲ್ಲಿ ಚಪ್ಪಲಿ, ಆರನೇ ಅಂಕಣದಲ್ಲಿ ಮಂತ್ರದಂಡ, ಏಳನೇ ಅಂಕಣದಲ್ಲಿ ನೂರು ರೂಪಾಯಿ ನೋಟ ಇಟ್ಟಿರುತ್ತಾರೆ. ಏಳನೇ ಅಂಕಣದ ಹೊರಬದಿಯಲ್ಲಿ ಬಾಯಿಯಲ್ಲಿ ಚಕ್ರವನ್ನು ಎತ್ತಿಹಿಡಿದ ಚೌಡಿಯನ್ನು ಪ್ರತಿಷ್ಠಾಪಿಸಿರುತ್ತಾರೆ. ಇದರ ರಚನೆ ಈ ಕೆಳಗಿನಂತಿದೆ.

ರೂ.೧೦೦/- ನೋಟು ದಂಡ ಚಪ್ಪಲಿ ಕುಂಬಳ ಕಾಯಿ ಮಡಿಕೆ ಮತ್ತು ಕಳ್ಳಿ ಮೊಟ್ಟೆ  ನಿಂಬೆ

ಈ ಅಂಕಣಗಳನ್ನು ಕಟ್ಟಿದವರು, ಅಂಕಣದಲ್ಲಿ ಇರಿಸಲಾದ ವಸ್ತುಗಳನ್ನು ಮಂತ್ರದಿಂದ ದಿಗ್ಭಂಧಿಸಿರುತ್ತಾರೆ ಮತ್ತು ಎದುರಾಳಿಗೆ ಕ್ರಮವಾಗಿ ಒಂದರಿಂದ ಏಳರವರೆಗೆ ಇರಿಸಲಾದ ವಸ್ತುಗಳನ್ನು ತೆಗೆಯಲು ಸವಾಲು ಹಾಕುತ್ತಾರೆ. ಎದುರಾಳಿಯು ವೀರಾವೇಶದಿಂದ ಒಂದೊಂದೇ ವಸ್ತುಗಳನ್ನು ತೆಗೆಯಲು ಮುಂದೆ ಬರುತ್ತಾನೆ. ಆದರೆ ವಸ್ತುಗಳನ್ನು ಮಂತ್ರದಲ್ಲಿ ದಿಗ್ಭಂಧಿಸಿರುವುದರಿಂದ ಅದನ್ನು ತೆಗೆಯಲು ಆತ ಶತ ಪ್ರಯತ್ನ ಮಾಡಬೇಕಾಗುತ್ತದೆ. ಉದಾಹರಣೆಗೆ ನಿಂಬೆ ಹಣ್ಣನ್ನು ತೆಗೆಯಲು ಅದರ ಹತ್ತಿರ ಬರುತ್ತಿರುವಂತೆ, ಆತನಿಗೆ ಅಲ್ಲಿ ಹಾವುಗಳು ಚೇಳುಗಳು ಕಾಣಬಹುದು. ಇಲ್ಲವೇ ನಿಂಬೆಯ ಹಣ್ಣೇ ದೊಡ್ಡ ಬಂಡೆಯಂತೆ ಅಲುಗಾಡದೆ ನಿಲ್ಲಬಹುದು. ಕೆಲವು ಬಾರಿ ನಿಂಬೆಹಣ್ಣನ್ನು ಮುಟ್ಟುತ್ತಿರುವಂತೆ, ಅವನ ಮೇಲೆ ಮಂತ್ರಿಸಿದ ಅಕ್ಕಿಕಾಳನ್ನು ಹಾಕಲಾಗುತ್ತದೆ. ಆ ಅಕ್ಕಿಕಾಳು ಅವನ ಮೈಗೆ ತಗುಲುತ್ತಲೇ ಅವನಿಗೆ ಮೈಯೆಲ್ಲಾ ಉರಿ ಹತ್ತುತ್ತದೆ. ಇಲ್ಲವೇ ತುರಿಕೆ ಹತ್ತುತ್ತದೆ. ಕೆಲವು ವೇಳೆ ಆತ ಅಲ್ಲಿಯೇ ಮೂರ್ಛೆ ಬೀಳುವುದು ಇದೆ. ಇಬ್ಬರು ತೆಗೆಯಲು ಬಂದರೆ ಇಬ್ಬರ ಮೈಗಳೂ ಅಂಟಿಕೊಂಡು ಬಿಡುತ್ತವೆ. ಹೆಂಗಸರು ಬಂದರೆ ಅವರ ಸೀರೆಗಳು ಗಾಳಿಯಲ್ಲಿ ಮೇಲಕ್ಕೇರುತ್ತವೆ. ಇಂಥ ಅನಾಹುತಗಳ ಮಧ್ಯೆ  ಕೇವಲ ಒಂದು ನಿಂಬೆಹಣ್ಣನ್ನು ತೆಗೆಯಲು ಇದಿರಾಳಿಗಳು ಗಂಟೆಗಟ್ಲೆ ಕೆಲಸ ಮಾಡಬೇಕಾಗುತ್ತದೆ. ಇಡೀ ರಾಜಮೋಡಿಯು ಮೂರು ದಿವಸ ಪರಿಯಂತ್ರ ನಡೆಯುತ್ತದೆ. ಕೊನೆಯ ದಿವಸದಲ್ಲಿ ಇದಿರಾಳಿಗಳು ಏಳನೇ ಅಂಕಣದಲ್ಲಿ ತಲುಪುತ್ತಾರೆ ಇಲ್ಲವೇ ಮೊದಲನೇ ಅಂಕಣದಲ್ಲಿಯೇ ಒದ್ದಾಡುತ್ತಿರುತ್ತಾರೆ. ಸಾವಿರಾರು ಜನ ಇದನ್ನು ವೀಕ್ಷಿಸುತ್ತಾರೆ.

ರಣಮೋಡಿ

ರಣಮೋಡಿ ತುಂಬ ಭಯಾನಕವಾದುದು. ಇದನ್ನು ಆಡುವವರ ಪ್ರಾಣಕ್ಕೆ ಅನೇಕ ಬಾರಿ ಅಪಾಯ ಬರುವುದುಂಟಂತೆ. ಹಾಗಾಗಿ ಈ ಆಟವನ್ನು ಆಉಡವ ಮುನ್ನ ‘ಯಾರಾದರೂ ಸತ್ತರೆ ಯಾರ ಮೇಲೂ ಫಿರ್ಯಾದಿ ಮಾಡಕೂಡದು’ ಎಂಬ ಒಪ್ಪಂದಕ್ಕೆ ಎರಡೂ ತಂಡದವರೂ ಸಹಿ ಹಾಕುತ್ತಾರೆ.

ರಣಮೋಡಿಯನ್ನು ಆಡುವವರು ಅನೇಕ ವರ್ಷಗಳ ಸಾಧನೆಯಿಂದ ಮೋಡಿ ಮಾಡುವ ಶಕ್ತಿಯನ್ನು ಪಡೆದಿರುತ್ತಾರೆ ಎಂದು ಹೇಳಲಾಗುತ್ತದೆ. ಒಂದು ನಿರೂಪಣೆಯ ಪ್ರಕಾರ ಈ ಶಕ್ತಿಯನ್ನು ಸತ್ತು ಹೋದ ಎಳೆಯ ಮಕ್ಕಳ ತಲೆ ಮತ್ತು ಕೈ ಅಥವಾ ಸತ್ತು ಹೋದ ಬಾಣಂತಿಯ ತಲೆ ಮತ್ತು ಕೈಯಿಂದ ಪಡೆಯಲಾಗುತ್ತದೆ. ಸತ್ತು ಹೋದ ಮಗುವನ್ನು ಅಥವಾ ಬಾಣಂತಿಯನ್ನು ಸಾಮಾನ್ಯವಾಗಿ ಸುಡುವುದಿಲ್ಲ. ಬದಲು ಹೊಂಡಕ್ಕೆ ಹಾಕುತ್ತಾರೆ. ಮೋಡಿ ಕಲಿಯುವವನು ಆದಿತ್ಯವಾರ ಬರುವ ಅಮವಾಸ್ಯೆಯಂದು ಹೆಣ ಹುಗಿದ ಸ್ಥಳಕ್ಕೆ ಹೋಗುತ್ತಾನೆ. ಹಾಗೆ ಹೋಗುವಾಗ ಮೈಯಲ್ಲಿ ಯಾವ ಮಂತ್ರಗಳನ್ನು ಹೇಳಬೇಕು. ಮಂತ್ರ ಹೇಳುತ್ತಲೇ ಮಣ್ಣು ಸುರಿದು ಕೊಳೆತ ಹೆಣ ಕಾಣಬರುತ್ತದೆ. ಮಂತ್ರ ಮುಂದುವರಿಯುತ್ತಲೇ ಹೆಣವು ಗುಡಿಯಿಂದ ಮೇಲೇರುತ್ತದೆ. ತಾನೇ ಕೈಯಿಂದ ಕೂದಲನ್ನು ಕತ್ತರಿಸಿ, ಮಂತ್ರ ಹೇಳುವವನ ಕೈಗೆ ಕೊಡುತ್ತದೆ. ಮತ್ತೆ ಹೊಂಡ ಸೇರುತ್ತದೆ. ಮಣ್ಣು ಮುಚ್ಚಿ ಕೊಳ್ಳುತ್ತದೆ. ಹೀಗೆ ಹೆಣ ಕೊಟ್ಟ ಕೂದಲನ್ನು ಮೋಡಿಕಾರರು ಸದಾ ತಮ್ಮ ಬಳಿಯಲ್ಲಿ ಇಟ್ಟುಕೊಂಡಿರುತ್ತಾರೆ ಎಂದು ಹೇಳಲಾಗುತ್ತದೆ.

ಇನ್ನೊಂದು ನಿರೂಪಣೆಯ ಪ್ರಕಾರ ಮೋಡಿಕಾರರ ಓತಿಕ್ಯಾತಗಳನ್ನು ಹಿಡಿದುಕೊಂದು ಕಿತ್ತಲೆ ಕೋಣೆಯಲ್ಲಿ ತೂಗು ಹಾಕುತ್ತಾರೆ. ದಿನ ಕಳೆದಂತೆ ಅದು ಕೊಳೆತು ಅದರಿಂದ ಬಿಳಿ ದ್ರವ್ಯವೊಂದು ಸುರಿಯುತ್ತದೆ. ಈ ಬಿಳಿ ಲೋಳೆಯನ್ನು ಸಂಗ್ರಹಿಸಿ, ಅದಕ್ಕೆ ಮುಟ್ಟಾದ ಹೆಂಗಸಿನ ಮೈಯಿಂದ ಬರುವ ರಕ್ತವನ್ನು ಸೇರಿಸಬೇಕು. ಅಮವಾಸ್ಯೆ ರಾತ್ರಿ ಅದಕ್ಕೆ ಉಗುರು ಮತ್ತು ಕೂದಲು ಬೆರೆಸಿ, ಕಲಸಿ, ಸಣ್ಣ ಗುಳಿಗೆಗಳನ್ನು ಮಾಡಬೇಕು, ಈ ಗುಳಿಗೆಯನ್ನು ಕೈಯಲ್ಲಿ ಇರಿಸಿಕೊಂಡರೆ ಮೋಡಿಯ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆಯಿದೆ.

ಹೀಗೆ ರಣಮೋಡಿಗೆ ಸಂಬಂಧಿಸಿದ ಕತೆಗಳೇ ರೋಚಕವಾಗಿವೆ. ರಾಜಮೋಡಿಯಾಡುವ ಹಾಗೆ ರಣಮೋಡಿಯನ್ನು ಆಡುವವರಲ್ಲಿಯೂ ಎರಡು ಪಂಗಡಗಳಿರುತ್ತವೆ. ಒಂದು ಪಕ್ಷ ಮೋಡಿ ಕಟ್ಟುತ್ತದೆ. ಇನ್ನೊಂದು ಪಕ್ಷ ಮೋಡಿ ಬಿಡಿಸುತ್ತದೆ. ಇಲ್ಲಿ ಒಂಬತ್ತು ಅಂಕಣ ಗಳಿರುತ್ತವೆ.

ಪ್ರತಿ ಅಂಕಣದಲ್ಲಿಯೂ ಮೇಲೆ ತೋರಿಸಿದ ವಸ್ತುಗಳನ್ನು ಇಟ್ಟು, ಅವನ್ನು ಮಂತ್ರದಿಂದ ದಿ‌ಗ್ಭಂದಿಸಲಾಗುತ್ತದೆ. ಇದಿರಾಳಿಯು ಈ ಎಲ್ಲಾ ಅಂಕಣದಲ್ಲಿರುವ ವಸ್ತುಗಳನ್ನು ಒಂದೊಂದಾಗಿ ತೆಗೆಯಲು ಆತ ಶತ ಪ್ರಯತ್ನ ಮಾಡುತ್ತಾನೆ. ಎಲ್ಲ ಅಂಕಣಗಳಿಂದಲೂ ಆತ ವಸ್ತುಗಳನ್ನು ತೆಗೆದರೆ, ಅವನು ಗೆದ್ದಂತೆ. ಆದರೆ ಮೋಡಿ ಕಟ್ಟುವವರು ಅಂಥ ಪ್ರಯತ್ನಗಳನ್ನು ವಿಫಲವಾಗಿಸುತ್ತಾರೆ. ರಣಮೋಡಿಯ ಭಯಾನಕ ಘಟನೆಗಳು ನಡೆಯುವುದು ಇಲ್ಲಿಯೇ. ಇದಿರಾಳಿ ಅಂಕಣವನ್ನು ಪ್ರವೇಶಿಸುತ್ತಿದ್ದಂತೆ, ಮೋಡಿಕಟ್ಟಿದವರು ತಮ್ಮ ಮಂತ್ರವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಾರೆ. ಹಾಗಾಗಿ ಇದಿರಾಳಿ ನಿಂಬೆಹಣ್ಣನ್ನು ಮುಟ್ಟಲು ಬರುತ್ತಿರುವಂತೆ ಅಲ್ಲಿ ಭಯಾನಕ ಹಾವುಗಳು, ಚೇಳುಗಳೂ ಕಾಣಿಸಿಕೊಳ್ಳುತ್ತವೆ. ಎಷ್ಟೋ ಬಾರಿ ಆತ ಅಲ್ಲಿಯೇ ಸ್ಮೃತಿ ತಪ್ಪಿ ಬೀಳುತ್ತಾನೆ. ಕೆಲವು ಬಾರಿ ಪ್ರಜ್ಞೆ ಕಳೆದುಕೊಂಡು ಕಳ್ಳಿಯನ್ನು ತಿನ್ನುತ್ತಾನೆ. ಗಾಜನ್ನು ಅಗಿಯುತ್ತಾನೆ. ಒಮ್ಮೊಮ್ಮೆ ಮೈಮೇಲೆ ಎಚ್ಚರದಪ್ಪಿ ಎಷ್ಟೋ ದೂರ ಓಡುತ್ತಾನೆ. ಈ ಮಧ್ಯೆ ಮೈಕೈಗಳಿಗೆಲ್ಲ ಶಸ್ತ್ರಾಸ್ತ್ರಗಳನ್ನು ಚುಚ್ಚಿಕೊಂಡು, ಪವಾಡ ಪ್ರದರ್ಶನ ಮಾಡುವುದೂ ಇದೆ. ಮಹಿಳೆಯರಂತೂ ವಿಕಾರವಾಗಿ ಕಿರುಚುತ್ತಾ, ಬಟ್ಟೆಯನ್ನು ಮೇಲೆತ್ತಿಕೊಂಡು ಓಡುತ್ತಾರೆ.

ಮೋಡಿಕಾರ ಮಂಡಲದಲ್ಲಿರುವ ನಿಂಬೆಹಣ್ಣನ್ನು ನಿಧಾನವಾಗಿ ಕ್ಯೊದರೆ, ಇದಿರಾಳಿಯ ಕಾಲನ್ನು ಕೊಯ್ದಂತೆ ರಕ್ತ ಬರುತ್ತದೆ. ಮಮತ್ರದಂಡವನ್ನು ಎತ್ತಿದರೆ, ತಲೆಕೆಳಗಾಗಿ ಹಿಡಿದರೆ ಇದಿರಾಳಿಯ ತಲೆಕಳಗಾಗಿ ನಿಲ್ಲುತ್ತಾನೆ. ಹೀಗೆ ಎರಡು ಕಡೆಯವರೂ ಪರಸ್ಪರ ಹೋರಾಡುತ್ತಾರೆ. ಯಾರ ಕಡೆ ಮಂತ್ರಶಕ್ತಿ ಹೆಚ್ಚಿಗೆ ಇದೆಯೋ ಅವರು ಗೆಲ್ಲುತ್ತಾರೆ.

ಚೌಡಿ ೧೮
೧ ಮೊಟ್ಟೆ
೧೫
ನಿಂಬೆ
೧೪
ಕುಂಬಳಕಾಯಿ
೧೧
ಮಡಿಕೆ

೩ ನಿಂಬೆ

ಎಲೆ

ಚಪ್ಪಲಿ

೨ ನಿಂಬೆ

೧ ಮೊಟ್ಟೆ
ಮೋಡಿಯ ಕಳ
೧೭
ದಂಡ
೧೬
ಕುಂಬಳಕಾಯಿ
೧೩
ಮಡಿಕೆ
೧೨
ತೆಂಗಿನಕಾಯಿ
೧೦
ತೆಂಗಿನಕಾಯಿ

೩ ಮೊಟ್ಟೆ

ಕಳ್ಳಿ

ಮೊಟ್ಟೆ

೧ ನಿಂಬೆ
ಮೋಡಿ ಎತ್ತುವುದು

ರಣಮೋಡಿ ಮೂರು ದಿನಗಳ ಕಾಲ ನಡೆಯುತ್ತದೆ. ದಿನದಿಂದ ದಿನಕ್ಕೆ ಹೋರಾಟ ನಿಬಿಡವಾಗುತ್ತಾ ಹೋಗುತ್ತದೆ. ಹಾಗೆ ಮಂಡಲದಿಂದ ಮಂಡಲಕ್ಕೆ ಅದು ಹೆಚ್ಚು ತೀವ್ರವಾಗುತ್ತದೆ. ರಣಮೋಡಿಯಲ್ಲಿ ನಡೆಯುವ ಘಟನೆಗಳ ಸತ್ಯಾಸತ್ಯತೆ ಏನೇ ಇರಲಿ. ಅದು ಜನರಲ್ಲಿ ರೋಮಾಂಚನ ಹುಟ್ಟಿಸುತ್ತದೆ ಮತ್ತು ಜನರ ಮಧ್ಯೆ ಅದು ಅತ್ಯಂತ ಜನಪ್ರಿಯವಾಗಿದೆ.

ಆಕರ
ಹಂಪಿ ಜಾನಪದ, ೧೯೯೭, ಕನ್ನಡ ವಿಶ್ವವಿದ್ಯಾಲಯ, ಹಂಪಿ. ಪು. ೧೩೯-೧೫೮.