ವಿಜಯನಗರ ಮತ್ತು ಹಂಪೆ ಇವೆರಡರಲ್ಲಿ ಒಂದನ್ನು ಮತ್ತೊಂದರಿಂದ ಬೇರ್ಪಡಿಸುವುದು ಕಷ್ಟಕರ. ವಿಜಯನಗರ ಸ್ಥಾಪನೆಗಿಂತ ಮೊದಲು ಹಂಪೆ ಒಂದು ಪುಣ್ಯ ಕ್ಷೇತ್ರವಾಗಿದ್ದರೂ ಅದೊಂದು ಗ್ರಾಮವಾಗಿತ್ತು. ವಿಜಯನಗರ ಸ್ಥಾಪನೆಯ ನಂತರ ಹಂಪೆ ವಿಜಯನಗರ ಪಟ್ಟಣದ ಒಂದು ಭಾಗವಾಯಿತು. ರಾಜಕೀಯವಾಗಿ ಪತನಹೊಂದಿ ಹಾಳಾದ ಮೇಲೆ ವಿಜಯನಗರ ಪೊಟ್ಟಣ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು. ಆದರೆ ಹಂಪೆಯು ಪುಣ್ಯಕ್ಷೇತ್ರವಾಗಿ ಮುಂದುವರಿಯಿತಲ್ಲದೆ ಅಳಿದುಳಿದ ವಿಜಯನಗರ ಪಟ್ಟಣವನ್ನು ತನ್ನ ಭಾಗವನ್ನಾಗಿಸಿಕೊಂಡಿತು. ಈಗ ಸಾಮಾನ್ಯವಾಗಿ ಹಂಪೆ ಎಂದರೆ ಸುಮಾರು ೨೫ ಚ.ಕಿ.ಮೀ. ಪ್ರದೇಶದಲ್ಲಿ ಹರಡಿದ ವಿಜಯನಗರ ಪಟ್ಟಣದ ಅವಶೇಷಗಳನ್ನೊಳಗೊಂಡ ಪ್ರದೇಶವೆಂದೇ ಪರಿಗಣಿಸಲಾಗುತ್ತದೆ. ವಿಜಯನಗರ ಅಥವಾ ಹಂಪೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನಲ್ಲಿದೆ.

ಐತಿಹಾಸಿಕವಾಗಿ ಹಂಪೆಯ ಪ್ರಾಚೀನತೆ ಏಳನೆಯ ಶತಮಾನದಷ್ಟು ಹಿಂದಕ್ಕೆ ಹೋಗುತ್ತದೆ. ಬಾದಾಮಿ ಬಾಲುಕ್ಯ ಅರಸ ವಿನಯಾದಿತ್ಯ ಕ್ರಿ.ಶ.೬೯೧ ರಲ್ಲಿ ಪಂಪಾ (ತುಂಗಭದ್ರ) ನದಿಯ ದಡದಲ್ಲಿ ಬೀಡು ಬಿಟ್ಟಿದ್ದನ್ನು ಅಲ್ಲಿಂದ ಮುಂದೆ ಇದು ಪುಣ್ಯಕ್ಷೇತ್ರವಾಗಿ ಬೆಳೆಯಿತು. ಅನೇಕ ಅರಸರು ಇಲ್ಲಿಗೆ ಬಂದು ವಿರೂಪಾಕ್ಷನ ಸನ್ನಿಧಿಯಲ್ಲಿ ದಾನಗಳನ್ನು ಮಾಡಿದರು. ಕ್ರಿ.ಶ. ೧೧೯೯ ರಲ್ಲಿ ಸಿಂದ ಕಲಿದೇವರಸನು ಕುರುಗೋಡಿನಿಂದ ಆಳುತ್ತಿದ್ದಾಗ ಸಾಮಂತ ಮಾದೆಯನಾಯಕರು ವಿರೂಪಾಕ್ಷ ತೀರ್ಥನ ರಕ್ಷಣಾರ್ಥವಾಗಿ ಮಾತಂತ ಪರ್ವತವನ್ನು ಪ್ರತಿಪಾಳಿಸುತ್ತಿದ್ದನು. ಹೊಯ್ಸಳ ಅರಸ ಸೋಮೇಶ್ವರನು ಕ್ರಿ.ಶ. ೧೨೩೬ ರಲ್ಲಿ ಪಂಪಾಕ್ಷೇತ್ರದ ವಿರೂಪಾಕ್ಷನಿಗೆ ಒಂದು ಹಳ್ಳಿಯನ್ನು ದಾನ ಮಾಡಿದನು. ದೋರಸಮುದ್ರವು ಮುಸ್ಲಿಮರ ದಾಳಿಯಿಂದ ನಾಶವಾದ ಮೇಲೆ ಮೂರನೆಯ ಬಲ್ಲಾಳನು ಕ್ರಿ.ಶ. ೧೩೩೧ ರಲ್ಲಿ ವಿರೂಪಾಕ್ಷ ಹೊಸದುರ್ಗದಿಂದ ಆಳುತ್ತಿದ್ದನು. ಆಗ ಮಗ ವಿರೂಪಾಕ್ಷ ಬಲ್ಲಾಳನ ಯುವರಾಜ ಪಟ್ಟಾಭಿಷೇಕವು ಹಂಪೆಯಲ್ಲಿ ನಡೆಯಿತು. ಹಂಪೆಯನ್ನು ವಿರೂಪಾಕ್ಷ ಹೊಸದುರ್ಗವೆಂದು ಕರೆದಿರುವುದರಿಂದ ಬಲ್ಲಾಳನು ಇಲ್ಲಿ ಹೊಸತಾಗಿ ಕೋಟೆಯನ್ನು ಕಟ್ಟಿಸಿರಲೇಬೇಕು.

ಕ್ರಿಶ. ೧೩೩೬ ರಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯು ಸಂಗಮ ಸಹೋದರರಾದ ಹರಿಹರ, ಬುಕ್ಕ, ಕಂಪಣ್ಣ, ಮಾರಪ್ಪ ಮತ್ತು ಮುದ್ದಪ್ಪರಿಂದ ಆಯಿತು. ಈ ವಂಶದ ಮೊದಲು ಇಬ್ಬರು ಅರಸರು ಮೊದಲನೆಯ ಹರಿಹರ (ಕ್ರಿ.ಶ. ೧೩೩೬-೧೩೫೬) ಮತ್ತು ಮೊದಲನೆಯ ಬುಕ್ಕ (ಕ್ರಿ.ಶ.೧೩೫೬-೧೩೭೭) ಆನೆಗೊಂದಿಯಿಂದ ಆಳಿದರು. ಹಂಪೆಯ ಹತ್ತಿರ ತುಂಗಭದ್ರಾ ನದಿಯ ಆಚೆಯ ದಡದ ಮೇಲಿರುವ ಈ ಪಟ್ಟಣವನ್ನು ಹಸ್ತಿನಾವತಿ ಎಂದೂ ಕರೆಯುತ್ತಿದ್ದರು. ಮೊದಲನೆಯ ಬುಕ್ಕನು ವಿಜಯನಗರ ಪಟ್ಟಣದಲ್ಲಿ ಕೋಟೆಯನ್ನು ಕಟ್ಟಿಸಿ ರಾಜಧಾನಿಯನ್ನು ಆನೆಗೊಂದಿಯಿಂದ ವಿಜಯನಗರಕ್ಕೆ ಸ್ಥಳಾಂತರಿಸಿದನು. ಪ್ರಾರಂಬದಲ್ಲಿ ಚಿಕ್ಕದಾಗಿದ್ದ ಪಟ್ಟಣದ ಸುತ್ತಲು ಕಟ್ಟಿಸಿದ ಕೋಟೆಯು ಈಗ ಒಳಕೋಟೆಯಾಗಿದೆ. ಈ ಕೋಟೆಯು ಮಹಾನವಮಿ ದಿಬ್ಬವಿರುವ ಅರಮನೆ ಪ್ರದೇಶ, ರಾಣಿಯ ಸ್ನಾನಗೃಹ, ಆನೆಸಾಲಿನ ಹಿಂದಿನ ಜೈನ ದೈವಾಲಯ, ಭೂಮಿಯ ಕೆಳಮಟ್ಟದ ದೇವಾಲಯ ಮುಂತಾದವುಗಳ ಪ್ರದೇಶವನ್ನು ಸುತ್ತುವರಿದಿದೆ. ಈ ಕೋಟೆಯಲ್ಲಿ ಸಿಂಘಾರದ ಹೆ‌ಬ್ಬಾಗಿಲು, ಸೋಮವಾರದ ಬಾಗಿಲು, ಗಾಣಗಿತ್ತಿ ಜೈನ ದೇವಾಲಯದ ಉತ್ತರಕ್ಕಿರುವ ಬಾಗಿಲು, ಭೂಮಿಯು ಕೆಳಮಟ್ಟದ ದೇವಾಲಯದ ಉತ್ತರಕ್ಕಿರುವ ಬಾಗಿಲು, ಅದೇ ದೇವಾಲಯದ ಆಗ್ನೇಯಕ್ಕಿರುವ ಹೂವಿನ ಬಾಗಿಲು ಮತ್ತು ಪ್ರತಿಷ್ಠಿತ ವ್ಯಕ್ತಿಗಳ ಅರಮನೆ ಪ್ರದೇಶದ ಉತ್ತರಕ್ಕಿರುವ ಬಾಗಿಲು ಇವೆ. ಈ ಕೋಟೆಯು ಬುಕ್ಕನ ಕಾಲದಲ್ಲಿ ನಿರ್ಮಾಣಗೊಂಡಿದ್ದನ್ನು ಸಿಂಘಾರದ ಹೆಬ್ಬಾಗಿಲನ್ನು ಉಲ್ಲೇಖಿಸುವ ಶಾಸನವು ಪುಷ್ಟೀಕರಿಸುತ್ತದೆ. ಶಾಸನವು ಹೀಗಿದೆ. “ಶ್ರೀ ವೀರಬುಕ್ಕರಾಯನ ವಿಜಯನಗರ ಪಟ್ಟಣದ ಮೂಡಣ ಸಿಂಘಾರದ ಹೆಬ್ಬಾಗಿಲು ಬಡಗಣ ಮೂಲೆಯ ಅರೆಯ ಮೇಲಣ ಆನೆಗೊಂದಿಯ ಕೊತ್ತಣಕ್ಕೆ ಮಂಗಳಮಹಾ ಶ್ರೀ”.

ಸಾಮ್ರಾಜ್ಯ ಬೆಳೆದಂತೆ ರಾಜಧಾನಿಯೂ ಬೆಳೆಯತೊಡಗಿತು. ಬೆಳೆದ ಪಟ್ಟಣದ ಸುತ್ತಲು ಎರಡನೆಯ ಕೋಟೆಯನ್ನು ಕಟ್ಟಲಾಯಿತು. ಈ ಕೋಟೆಯ ಸ್ವಲ್ಪ ಭಾಗ ಮಾತ್ರ ಆಗ್ನೇಯ ಭಾಗದಲ್ಲಿ ಕಾಣುತ್ತದೆ. ಇದರಲ್ಲಿ ಭೀಮನ ಬಾಗಿಲು ಇದೆ. ಎರಡನೆಯ ಹರಿಹರನ ಕಾಲದಲ್ಲಿ (ಕ್ರಿ.ಶ. ೧೩೭೭-೧೪೦೪) ಬೆಳೆದ ಪಟ್ಟಣದ ಸುತ್ತ ಮೂರನೆಯ ಕೋಟೆಯನ್ನು ಕಟ್ಟಲಾಯಿತು. ಇದನ್ನು ಬೇಟೆಕಾರರ ಹೆಬ್ಬಾಗಿಲನ್ನು ಮತ್ತು ಹೊದೆಯ ಬಾಗಿಲನ್ನು ಉಲ್ಲೇಖಿಸುವ ಶಾಸನಗಳು ಪುಷ್ಟೀಕರಿಸುತ್ತವೆ. ಸುಸ್ಥಿತಿಯಲ್ಲಿರುವ ಈ ಕೋಟೆಯು ಮಾಲ್ಯವಂತ ಪರ್ವತವನ್ನು ಒಳಗೊಂಡ ವಿಶಾಲ ಪ್ರದೇಶವನ್ನು ಸುತ್ತುವರಿದಿದೆ. ಇದರಲ್ಲಿ ಕೋಟಿಶಂಕರ ದೇವರ ಬಾಗಿಲು, ಜಡೆಯಶಂಕರದೇವರ ದಿಡ್ಡಿ, ಹಂಪಾದೇವಿಯ ದಿಡ್ಡಿ, ಹೊದೆಯ ಬಾಗಿಲು, ಅರೆಶಂಕರ ಬಾಗಿಲು, ರೆಮ್ಮು ದಿಡ್ಡಿ, ಉದಯಗಿರಿಯ ಬಾಗಿಲು, ಬೇಟೆಕಾರರ ಹೆಬ್ಬಾಗಿಲು, ಗುಮ್ಮಟ ಬಾಗಿಲು ಮುಂತಾದವುಗಳಿವೆ.

ಇಮ್ಮಡಿ ದೇವರಾಯನ ಕಾಲದಲ್ಲಿ (ಕ್ರಿ.ಶ. ೧೪೨೪-೪೬) ಪಟ್ಟಣವು ಸಮೃದ್ಧಿಯಿಂದ ವಿಜೃಂಭಿಸಿ ವಿದೇಶಿಯರನ್ನು ಆಕರ್ಷಿಸಿತು. ಕ್ರಿ.ಶ. ೧೪೪೩ ರಲ್ಲಿ ಇಲ್ಲಿಗೆ ಬಂದ ಪರ್ಶಿಯಾ ದೇಶದ ರಾಯಭಾರಿ ಅಬ್ದುಲ್‌ರಜಾಕ್, “ವಿಜಯನಗರ ಪಟ್ಟಣ ಹೇಗಿದೆಯೆಂದರೆ ಇಂತಹ ಸ್ಥಳವನ್ನು ಕಣ್ಣುಗಳು ಎಂದೂ ಕಂಡಿಲ್ಲ ಮತ್ತು ಇದಕ್ಕೆ ಸಮನಾದುದು ಜತ್ತಿನಲ್ಲಿ ಯಾವುದಾದರೂ ಇದ್ದುದರ ಸುದ್ದಿ ಕಿವಿಗೆ ಬಿದ್ದಿಲ್ಲ… ಬಚಾರಗಳು ಬಹಳ ಅಗಲವಾಗಿವೆ…. ತನ್ನ ವ್ಯಾಪಾರಿಗಳು ಮುತ್ತು, ಮಾಣಿಕ್ಯ, ಪಚ್ಚೆ ಮತ್ತು ವಜ್ರಗಳನ್ನು ಬಜಾರಗಳಲ್ಲಿ ಸಾರ್ವಜನಿಕವಾಗಿ ಮಾರುತ್ತಾರೆ” ಎಂದು ಬಣ್ಣಿಸಿದ್ದಾನೆ. ಕೃಷ್ಣದೇವರಾಯನ ಕಾಲದಲ್ಲಿ (ಕ್ರಿ.ಶ. ೧೫೧೦-೨೯) ವಿಜಯನಗರ ಸಾಮ್ರಾಜ್ಯವು ಇಡೀ ದಕ್ಷಿಣ ಭಾರತವನ್ನು ಆವರಿಸಿದಾಗ ರಾಜಧಾನಿಯೂ ಗಣನೀಯವಾಗಿ ಬೆಳೆಯಿತು. ಅಚ್ಯುತರಾಯನ ಕಾಲದಲ್ಲಿ (ಕ್ರಿ.ಶ. ೧೫೨೯-೪೨) ವಿಜಯನಗರದ ಆಗ್ನೇಯಕ್ಕೆ ಆತನ ರಾಣಿಯ ಹೆಸರಿನಲ್ಲಿ ವರದಾಜಮ್ಮನ ಪಟ್ಟಣವನ್ನು ಸ್ಥಾಪಿಸಲಾಯಿತು. ನಾಲ್ಕನೆಯ ಕೋಟೆಯು ವಿಜಯನಗರದೊಂದಿಗೆ ಈ ಭಾಗವನ್ನೂ ಸುತ್ತುವರಿದಿದೆ. ಇದು ಈಗ ಆಗ್ನೇಯ ಮತ್ತು ನೈರುತ್ಯ ಭಾಗಗಳಲ್ಲಿ ಮಾತ್ರ ಉಳಿದಿದೆ. ಈ ಕೋಟೆಯಲ್ಲಿರುವ ಬಾಗಿಲನ್ನು ಅಚ್ಯುತರಾಯನ ಕ್ರಿ.ಶ. ೧೫೪೦ರ ಶಾಸನವು ಪೆನುಗೊಂಡೆ ಬಾಗಿಲು ಎಂದು ಉಲ್ಲೇಖಿಸುತ್ತದೆ.

ಹೊರಕೋಟೆಯ ಹೊರಗೆ ಇನ್ನೊಂದು ತರಹದ ಸಂರಕ್ಷಣಾ ವ್ಯವಸ್ಥೆ ಇದ್ದುದು ಕ್ರಿ.ಶ. ೧೫೨೦ ರಲ್ಲಿ ವಿಜಯನಗರಕ್ಕೆ ಭೇಟಿ ನೀಡಿದ ಪೋರ್ಚುಗೀಸ್ ಪ್ರವಾಸಿ ಡಾಮಿಂಗೊ ಪಾಯೆಸ್‌ನಿಂದ ತಿಳಿಯುತ್ತದೆ. ಕೆಳಮಟ್ಟದಲ್ಲಿಯ ಭೂಮಿಯಲ್ಲಿ ಎದೆಮಟ್ಟದ ಚೂಪಾದ ಕಲ್ಲುಗಳನ್ನು ನೆಟ್ಟಿದ್ದರು. ಇವು ಗುಡ್ಡ ಪ್ರದೇಶವನ್ನು ತಲುಪುವವರೆಗೆ ಮುಂದುವರಿದಿದ್ದವು. ಇಂತಹ ಕಲ್ಲುಗಳನ್ನು ಕುದುರೆ ಮತ್ತು ಮನುಷ್ಯರ ಚಲನೆಯನ್ನು ತಡೆಯಲು ನೆಟ್ಟಿದ್ದುದನ್ನು ಅಬ್ದುಲ್ ರಜಾಕ್ ಸಹ ದಾಖಲಿಸಿದ್ದಾನೆ. ಈ ಕಲ್ಲುಗಳು ಈಗ ವಿಜಯನಗರದಲ್ಲಿ ಕಾಣುವುದಿಲ್ಲವಾದರೂ ಇಂತಹ ಕುದುರೆ ಕಲ್ಲುಗಳನ್ನು ಕಮ್ಮಟದುರ್ಗದಲ್ಲಿ ಕಾಣಬಹುದು.

ಇನ್ನೂರಕ್ಕೂ ಹೆಚ್ಚು ವರ್ಷಗಳ ಕಾಲ ವಿಜೃಂಭಿಸಿದ ವಿಜಯನಗರ ಅವಸಾನ ಹೊಂದುವ ಕಾಲ ಹತ್ತಿರವಾಯಿತು. ಕ್ರಿ.ಶ. ೧೫೬೫ ರಲ್ಲಿ ರಕ್ಕಸ ತಂಗಡಿಯಲ್ಲಿ ವಿಜಯನಗರದ ರಾಮರಾಯ ಮತ್ತು ಗೋಲ್ಕೊಂಡ, ಅಹ್ಮದ್‌ನಗರ, ಬೀದರ್, ಬೇರಾರ್ ಮತ್ತು ಬಿಜಾಪುರ ಸುಲ್ತಾನರ ಸಂಯುಕ್ತ ಕೂಟದ ನಡುವೆ ಭೀಕರ ಯುದ್ಧ ನಡೆಯಿತು. ಯುದ್ಧದಲ್ಲಿ ರಾಮರಾಯನು ಹತನಾದನು, ವಿಜಯನಗರ ಸೈನ್ಯ ಪರಾಜಯಗೊಂಡಿತು. ತಿರುಮಲನು ರಾಜಧಾನಿಗೆ ಹಿಂದಿರುಗು ರಾಣಿವಾಸದವರನ್ನು, ಬಂಧು ವರ್ಗದವರನ್ನು, ಸಾಧ್ಯವಾದಷ್ಟು ಧನ ಕನಕಗಳನ್ನು ೧೫೫೦ ಆನೆಗಳ ಮೇಲೆ ಹೇರಿಕೊಂಡು ಚಂದ್ರಗಿರಿಗೆ ಹೋದನು. ಬೆನ್ನಟ್ಟಿ ಬಂದ ಶತ್ರುಸೇನೆ ರಾಜಧಾನಿಯನ್ನು ಬೆಂಕಿ, ಖಡ್ಗ, ಹಾರೆ ಮತ್ತು ಕೊಡಲಿಗಳಿಂದ ಐದು ತಿಂಗಳ ಕಾಲ ಧ್ವಂಸ ಮಾಡಿ ಹಾಳುಗೆಡವಿತು. ಅಂದಿನಿಂದ ವಿಜಯನಗರವು ಹಾಳು ಹಂಪೆಯಾಗಿ ಉಳಿದಿದೆ.

ರಾಜಧಾನಿಯನ್ನು ಕಟ್ಟಲು ಈ ಸ್ಥಳವನ್ನು ಆಯ್ಕೆ ಮಾಡುವಾಗ ಸ್ವಾಭಾವಿಕವಾಗಿ ರಕ್ಷಣೆ ನೀಡುವ ನದಿ ಮತ್ತು ಗುಡ್ಡಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ. ರಾಜಧಾನಿಯ ಉತ್ತರಕ್ಕೆ ತುಂಗಭದ್ರಾ ನದಿ ಮತ್ತು ಗುಡ್ಡಗಳ ಸಾಲು ನೈಸಗಿಕ ರಕ್ಷಣೆಯನ್ನು ನೀಡುತ್ತವೆ. ಪೂರ್ವ ದಿಕ್ಕಿಗೂ ಅನೇಕ ಗುಡ್ಡಗಳ ಸಾಲುಗಳಿವೆ. ಅಲ್ಲದೆ ಭದ್ರವಾದ ಕೋಟೆಯು ಅನೇಕ ಸುತ್ತುಗಳಲ್ಲಿ ರಾಜಧಾನಿಯನ್ನು ರಕ್ಷಿಸುತ್ತದೆ. ಕೋಟೆಯನ್ನು ನೆಲದ ಮಟ್ಟದಲ್ಲಿ, ಗುಡ್ಡಗಳ ಮಧ್ಯದಲ್ಲಿ ಮತ್ತು ಗುಡ್ಡಗಳ ಮೇಲೆ ಸಹ ಕಟ್ಟಲಾಗಿದೆ. ಸಂಪ್ರದಾಯ ಮತ್ತು ವಿದೇಶಿ ಪ್ರವಾಸಿಗರ ಪ್ರಕಾರ ವಿಜಯನಗರ ಏಳು ಸುತ್ತಿನ ಕೋಟೆಯಿಂದ ಸುತ್ತುವರಿಯಲ್ಪಟ್ಟಿತ್ತು. ಈಗ ಕೆಲವು ಸುತ್ತುಗಳು ಮಾತ್ರ ಕಾಣುತ್ತಿವೆ.

ಕೋಟೆಗೋಡೆಗಳು ಬಹಳ ದಪ್ಪವಾಗಿದ್ದು, ಹೊರಮೈಗೆ ದಪ್ಪ ಕಲ್ಲುಗಳಿದ್ದು, ಒಳಮೈಗೆ ಮಣ್ಣಿನ ಇಳಿವೋರೆ ಇದೆ. ಹೊರಭಾಗದಲ್ಲಿ ದೊಡ್ಡ ಕಲ್ಲುಗಳ ಮಧ್ಯದಲ್ಲಿ ಯಾವುದೇ ಗಾರೆಯನ್ನು ಉಪಯೋಗಿಸಿದೆ. ಒಂದು ಕಲ್ಲು ಮತ್ತೊಂದರ ಜೊತೆಗೆ ಸರಿಯಾಗಿ ಹೊಂದಿಕೊಳ್ಳುವಂತೆ ಸಂದುಗಳಿಲ್ಲದೆ ಕಟ್ಟಲಾಗಿದೆ. ದೊಡ್ಡ ಕಲ್ಲುಗಳನ್ನು ಮೇಲಕ್ಕೆತ್ತುವಾಗ ಆಗುವ ಭಾರವನ್ನು ಕಡಿಮೆ ಮಾಡುವುದಕ್ಕಾಗಿ ಬೆಣೆಯಾಕಾರದ ಕಲ್ಲುಗಳನ್ನು ಬಹಳ ಜಾಣ್ಮೆಯಿಂದ ಆಯತಾಕಾರದ ಕಲ್ಲುಗಳ ಬದಲಿಗೆ ಉಪಯೋಗಿಸಲಾಗಿದೆ. ಇವುಗಳ ಹೊರಭಾಗ ಅಗಲವಾಗಿದ್ದು, ಒಳಭಾಗವು ಚೂಪಾಗಿರುತ್ತದೆ. ಒಳಭಾಗದಲ್ಲಿ ಕಲ್ಲುಗಳ ಮಧ್ಯದ ಸಂದುಗಳನ್ನು ಸಣ್ಣಕಲ್ಲು ಮತ್ತು ಮಣ್ಣಿನಿಂದ ತುಂಬಲಾಗಿದೆ. ಕೋಟೆಗೋಡೆಯ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ಅಲ್ಲಲ್ಲಿ ಚೌಕಾಕಾರದ ಕೊತ್ತಳಗಳನ್ನು ನಿರ್ಮಿಸಲಾಗಿದೆ. ಈ ಕೊತ್ತಳಗಳು ಚೌಕಾಕಾರದಲ್ಲಿ ಮುಂದೆ ಚಾಚಿಕೊಂಡಿರುವ ಕೋಟೆ ಗೋಡೆಯ ಭಾಗಗಳಾಗಿವೆ. ಯುದ್ಧ ಸಮಯದಲ್ಲಿ ಹೆಚ್ಚು ಸೈನಿಕರುನಿಲ್ಲಲು ಸಹ ಕೊತ್ತಳಗಳು ಉಪಯೋಗವಾಗುತ್ತವೆ. ಕೊತ್ತಳಗಳ ಮೇಲೆ ಕಾವಲಿನವರು ನಿಂತು ಕೋಟೆಯನ್ನು ಸಂರಕ್ಷಿಸುತ್ತಿದ್ದರು. ಇವರಿಗಾಗಿ ನಿರ್ಮಿಸಿದ ಚಿಕ್ಕ ಕಟ್ಟಡಗಳ ಅವಶೇಷಗಳು ಕೆಲವು ಕೊತ್ತಳಗಳ ಮೇಲೆ ಈಗಲೂ ಕಾಣುತ್ತಿವೆ. ಕೋಟೆ ಪಕ್ಕದಲ್ಲಿ ನೈಸರ್ಗಿಕವಾಗಿ ಎತ್ತರದಲ್ಲಿರುವ ಕೆಲವು ಸ್ಥಳಗಳನ್ನು ಸಹ ಕೊತ್ತಳಗಳಂತೆ ಉಪಯೋಗಿಸಲಾಗಿದೆ. ಕೋಟೆ ಪಕ್ಕದಲ್ಲಿದ್ದ ಕಂದಕ ಈಗ ಮುಚ್ಚಿ ಹೋಗಿದೆ. ಕೋಟೆಗೋಡೆಗಳಲ್ಲಿರುವ ಬಾಗಿಲುಗಳು ಒಂದೇ ವಿಧದಲ್ಲಿಲ್ಲ. ಗಾತ್ರವನ್ನು ಗಮನದಲ್ಲಿಟ್ಟುಕೊಂಡು ಬಾಗಿಲುಗಳನ್ನು ಹೆಬ್ಬಾಗಿಲು, ಬಾಗಿಲು ಮತ್ತು ದಿಡ್ಡಿಗಳೆಂದು ವಿಂಗಡಿಸಿದ್ದುದು ಅಲ್ಲಿಯ ಶಾಸನಗಳಿಂದ ತಿಳಿಯುತ್ತದೆ. ಹೆಬ್ಬಾಗಿಲುಗಳು ಅತಿದೊಡ್ಡ ಬಾಗಿಲುಗಳು. ಇವುಗಳನ್ನು ಮುಖ್ಯ ಬಾಗಿಲುಗಳನ್ನಾಗಿ ಉಪಯೋಗಿಸುತ್ತಿದ್ದರು. ಬಾಗಿಲುಗಳು ಮಧ್ಯಮ ಗಾತ್ರದವು. ದಿಡ್ಡಿಗಳು ಚಿಕ್ಕ ಬಾಗಿಲುಗಳಾಗಿದ್ದು, ಜನರು ತಮ್ಮ ದಿನ ನಿತ್ಯದ ಕೆಲಗಳಿಗಾಗಿ ಪಟ್ಟಣದ ಎಲ್ಲಾ ದಿಕ್ಕಿಗೂ ಸುಲಭವಾಗಿ ಹೋಗಲು ಅನುಕೂಲವಾಗುವಂತೆ ರಚಿಸಲ್ಪಟ್ಟವು. ಹೆಬ್ಬಾಗಿಲು, ಬಾಗಿಲು ಮತ್ತು ದಿಡ್ಡಿಗಳ ವಿನ್ಯಾಸವನ್ನು ಯುದ್ಧತಂತ್ರದ ದೃಷ್ಟಿಯಿಂದ ಬಹಳ ಎಚ್ಚರಿಕೆಯಿಂದ ಮಾಡಲಾಗಿದೆ. ಕೋಟೆಯೊಳಗೆ ನೇರವಾದ ಪ್ರವೇಶವನ್ನು ಇವು ನೀಡುವುದಿಲ್ಲ. ದೂರದಿಂದ ನೋಡಿದಾಗ ಪ್ರವೇಶ ದ್ವಾರವೇ ಕಾಣುವುದಿಲ್ಲ. ಪ್ರವೇಶ ದ್ವಾರದ ಎರಡು ಪಾಶ್ವಗಳಲ್ಲಿ ಮತ್ತು ಮುಂಭಾಗದಲ್ಲಿ ಅದೇ ರೀತಿಯ ಗೋಡೆಗಳನ್ನು ಕಟ್ಟಿ, ಅದನ್ನು ಮರೆಮಾಡಿ ಗೋಡೆಯಲ್ಲಿ ಎರಡನೆಯ ಪ್ರವೇಶ ದ್ವಾರವನ್ನು ಕಲ್ಪಿಸಲಾಗಿದೆ. ಎರಡನೆಯ ದ್ವಾರವು ಪಾರ್ಶ್ವದಲ್ಲಿರುವುದರಿಂದ ಇದೂ ಸಹ ದೂರದಿಂದ ಕಾಣುವುದಿಲ್ಲ. ಹೀಗಾಗಿ ಒಳಗೆ ಬರುವ ದಾರಿಯು ಅಂಕುಡೊಂಕಾಗುವುದು. ಸಾಮಾನ್ಯವಾಗಿ ಬಾಗಿಲುಗಳು ಪಾರ್ಶ್ವದಲ್ಲಿ ಎರಡು ದೊಡ್ಡ ಕೊತ್ತಳಗಳಿವೆ. ಬಾಗಿಲಿನ ಮೂಲಕ ಅಂಕುಡೊಂಕಾದ ದಾರಿಯಲ್ಲಿ ಒಳ ಪ್ರವೇಶಿಸಲು ಪ್ರಯತ್ನಿಸುವ ವೈರಿ ಸೈನ್ಯವನ್ನು ಕೋಟೆಗೋಡೆಯ ಮತ್ತು ಕೊತ್ತಳಗಳ ಮೇಲೆ ಸಂರಕ್ಷಣೆಗಾಗಿ ನಿಂತ ಸೈನಿಕರು ಸುಲಭವಾಗಿ ಸದೆಬಡೆಯಲು ಅನುಕೂಲವಾಗುತ್ತಿತ್ತು. ಬಾಗಿಲುಗಳಲ್ಲಿ ಕಾವಲುಗಾರರಿರುತ್ತಿದ್ದರು. ಇವರು ಖಡ್ಗ, ದೊಣ್ಣೆ ಮತ್ತು ಚಾವಟಿಗಳನ್ನು ಹಿಡಿದುಕೊಂಡು ನಿಂತಿರುತ್ತಿದ್ದರು. ಇಂತಹ ಕೆಲವು ಶಿಲ್ಪಗಳನ್ನು ಬಾಗಿಲುಗಳ ತೋಳುಗಂಬಗಳ ಮೇಲೆ ಕೆತ್ತಲಾಗಿದೆ.

ಬಾಗಿಲುಗಳನ್ನು ಕಂಬ ಮತ್ತು ತೊಲೆಗಳಿಂದ, ಇಟ್ಟಿಗೆ ಗಾರೆ ಬಳಸದೆ, ಹಿಂದೂ ಶೈಲಿಯಲ್ಲಿ ಕಟ್ಟಲಾಗಿದೆ. ಬಾಗಿಲು ತೋಳುಗಳ ಮೇಲೆ ದ್ವಾರಪಾಲಕರು ಮತ್ತು ಅಲಂಕಾರಿಕ ಶಾಖೆಗಳನ್ನು ಕೆತ್ತಿದೆ. ಪ್ರವೇಶಕ್ಕಿಂತ ಮೊದಲು ದೊಡ್ಡ ಆವರಣವಿದೆ. ಪ್ರವೇಶದ ಇಕ್ಕೆಲಗಳಲ್ಲಿ ಕಂಬಗಳ ಅಂಕಣಗಳುಳ್ಳ ಕಟ್ಟೆಗಳಿವೆ. ಸೈನಿಕರು ಮತ್ತು ಪ್ರವಾಸಿಗರು ವಿಶ್ರಾಂತಿ ಪಡೆಯಲು ಇವು ಅನುಕೂಲವಾಗಿವೆ. ನೇರ ಪ್ರವೇಶದ ಕದಗಳನ್ನು ಹಾಕಿದಾಗ ಬಳಸಲು ಪಕ್ಕದಲ್ಲಿ L ಅಥವಾ U ಆಕಾರದ ಉಪ ಪ್ರವೇಶವನ್ನು ಒದಗಿಸಿದೆ. ಕೆಲವು ಬಾಗಿಲುಗಳ ರಚನೆಯಲ್ಲಿ ಮುಸ್ಲಿಮ್ ವಾಸ್ತುವಿನ ಪ್ರಭಾವವು ಕಾಣುತ್ತದೆ. ಗುಮ್ಮಟದ ಬಾಗಿಲೆಂದೇ ಕರೆಯುವ ಬಾಗಿಲು ಮೇಲಿನ ಗುಮ್ಮಟ ಮತ್ತು ಬೇಟೆಕಾರರ ಹೆಬ್ಬಾಗಿಲ ಮತ್ತು ಅರೆಶಂಕರ ಬಾಗಿಲುಗಳ ಮೇಲಿನ ಕಮಾನುಗಳು ಮುಸ್ಲಿಮ್ ಶೈಲಿಯಲ್ಲಿವೆ. ಕೆಲವು ಬಾಗಿಲುಗಳ ಗೋಡೆಗಳನ್ನು ಶಿಲ್ಪಗಳಿಂದ ಅಲಂಕರಿಸಿದೆ ಮತ್ತು ಕೆಲವು ಬಾಗಿಲುಗಳ ಆವರಣಗಳಲ್ಲಿ ದೇವಾಲಯಗಳಿವೆ.

ವಿಶಾಲವಾದ ಕೋಟೆಯ ಭಾಗಗಳನ್ನು ತೀವ್ರವಾಗಿ ಗುರುತಿಸುವುದು ಯುದ್ಧ ಸಮಯದಲ್ಲಿ ಅತ್ಯವಶ್ಯಕವಾಗುತ್ತದೆ. ಯಾವುದೇ ಒಂದು ಭಾಗಕ್ಕೆ ಸೈನಿಕರನ್ನು ಕಳುಹಿಸುವಾಗ ಅವರು ಯಾವುದೇ ಗೊಂದಲಕ್ಕೊಳಪಡದೆ, ನೇರವಾಗಿ ತೀವ್ರಗತಿಯಲ್ಲಿ ಹೋಗಿ ಆ ಭಾಗವನ್ನು ಸೇರುವಂತೆ ಕೋಟೆಯ ವಿವಿಧ ಭಾಗಗಳಿಗೆ ಹೆಸರುಗಳನ್ನು ಕೊಟ್ಟು ಗುರುತಿಸುವುದು ಅತಿಮುಖ್ಯವಾದ ವಿಷಯ. ವಿಜಯನಗರ ಕೋಟೆಯಲ್ಲಿ ಇಂತಹ ವ್ಯವಸ್ಥೆ ಇದ್ದುದು ಇತ್ತೀಚೆಗೆ ಸಂಶೋಧನೆ ಮಾಡಿ ಹೊರೆತಂದ ಅನೇಕ ಶಾಸನಗಳಿಂದ ಬೆಳಕಿಗೆ ಬಂದಿದೆ. ಕೋಟೆಯ ಬಾಗಿಲುಗಳಿಗೆ ಮತ್ತು ಕೊತ್ತಳಗಳಿಗೆ ಹೆಸರುಗಳನ್ನಿಟ್ಟು, ಅವುಗಳನ್ನು ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಮಾಡಲಾಗಿದೆ. ಶಾಸನಗಳ ಆಧಾರದ ಮೇಲೆ ಇದುವರೆಗೆ ಪತ್ತೆ ಹಚ್ಚಿದ ಬಾಗಿಲು ಮತ್ತು ಕೊತ್ತಳಗಳ ಹೆಸರುಗಳು ಹೀಗಿವೆ. ಸಿಂಘಾರದ ಹೆಬ್ಬಾಗಿಲು, ಬೇಟೆಕಾರರ ಹೆಬ್ಬಾಗಿಲು, ಸೋಮವಾರದ ಬಾಗಿಲು, ಉಪ್ಪರಿಗೆ ಬಾಗಿಲು, ಉದಯಗಿರಿಯ ಬಾಗಿಲು, ಅರೆಶಂಕರ ಬಾಗಿಲು, ಪೆನುಕೊಂಡೆ ಬಾಗಿಲು, ಕೋಟಿಶಂಕರದೇವರ ಬಾಗಿಲು, ಅರೆಶಂಕರ ಬಾಗಿಲು, ಪೆನುಕೊಂಡ ಬಾಗಿಲು, ಕೋಟಿಶಂಕರದೇವರ ಬಾಗಿಲು, ಹೊದೆಯ ಬಾಗಿಲು, ಕೊಠಾರದ ಬಾಗಿಲು, ಹೂವಿನ ಬಾಗಿಲು, ಜಡೆಯಶಂಕರದೇವರ ದಿಡ್ಡಿ, ಹಂಪಾದೇವಿಯ ದಿಡ್ಡಿ, ಮತಂಗೇಶ್ವರದೇವರ ದಿಡ್ಡಿ, ರೆಮ್ಮು ದಿಡ್ಡಿ, ಪ್ರತಾಪ ಕೊತ್ತಳ, ಸ್ವಾಮಿದ್ರೋಹರಗಂಡನ ಕೊತ್ತಳ, ಮಾತಂಗದೇವರ ಕೊತ್ತಳ, ಮಳಲ ವಿನಾಯಕ ಕೊತ್ತಳ, ಜಲಸೇನದೇವರ ಕೊತ್ತಳ, ಹಂಪೆಯ ಕೊತ್ತಳ, ಹನುಮನ ಕೊತ್ತಳ, ಶಂಕರದೇವರ ಕೊತ್ತಳ, ಮದನ ಕೊತ್ತಳ, ಮೀಸರಗಂಡನ ಕೊತ್ತಳ, ಆನೆಗೊಂದಿಯ ಕೊತ್ತಳ ಮತ್ತು ಸಮಯ ದೇವರ ಕೊತ್ತಳ ಇಂತಹ ಸುವ್ಯವಸ್ಥಿತವಾದ ಮತ್ತು ಭದ್ರವಾದ ಕೋಟೆಯಿಂದ ವಿಜಯನಗರ ಸಾಮ್ರಾಜ್ಯವು ಬಹುಕಾಲ ವಿಜೃಂಭಿಸಿತು.

ಆಕರ
ಕರ್ನಾಟಕದ ಕೋಟೆಗಳು, ೧೯೯೯, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು. ೯೧-೯೯