ಕೋಟಿ ಶಂಕರ ದೇವರ ಬಾಗಿಲು

ಕಮಲಾಪುರದಿಂದ ಹಂಪಿಗೆ ಹೋಗುವ ರಸ್ತೆಯ ಬದಿಯಲ್ಲಿರುವ ಅಕ್ಕಿತಂಗಿಯರ ಗುಂಡಿನ ಹಿಂಬದಿಗೆ ಕೋಟಿ ಶಂಕರ ದೇವರ ಬಾಗಿಲಿದೆ. ಕೋಟೆಗೆ ಹೊಂದಿಕೊಂಡು ಶಂಕರದೇವರ ಗುಡಿ ಇದೆ. ತುಂಗಭದ್ರಾ ನದಿಯ ಕಲ್ಲುಬಂಡೆಯ ಮೇಲೆ ಲಿಂಗಗಳ ಸಮೂಹವೇ ಇದೆ. ಈ ಹಿನ್ನೆಲೆಯಲ್ಲಿ ಬಾಗಿಲಿಗೆ ಆ ಹೆಸರೇ ರೂಢಿಗತವಾಗಿ ಬಂದಿದೆ. ಪ್ರಸನ್ನ ವಿರೂಪಾಕ್ಷ ದೇವಾಲಯದ ಹತ್ತಿರವಿರುವ ಗುಂಡಿನ ಮೇಲಿರುವ

[1] ಹಾಗೂ ಇದರ ಪಕ್ಕದಲ್ಲಿರುವ ಬಂಡೆಯ ಶಾಸನಗಳಲ್ಲಿ[2] ಕೋಟೆ ಶಂಕರ ದೇವರ ಬಾಗಿಲಿನ ಪ್ರಸ್ತಾಪಗಳಿವೆ.

ಈ ಬಾಗಿಲು ದಕ್ಷಿಣಾಭಿಮುಖವಾಗಿದ್ದು, ಪ್ರವೇಶದ ಆರಂಭದಲ್ಲಿ ಬೃಹದಾಕಾರದ ಬಂಡೆಯ ಮೇಲೆ ಕೆತ್ತನೆಯಿದೆ. ಭಗ್ನಾವಸ್ಥೆಯಲ್ಲಿರುವ ಈ ಬಾಗಿಲು ಸುಮಾರು ೧೦ ಅಡಿ ಅಗಲ ಹಾಗೂ ೨೦ ಅಡಿ ಎತ್ತರವಾಗಿದೆ.

ಹೊದೆಯ ಬಾಗಿಲು

ಇದು ಉತ್ತರಾಭಿಮುಖವಾಗಿದ್ದು ಅರಮನೆ ಪ್ರದೇಶದಿಂದ ಮಾತಂಗ ಗುಡ್ಡ ಪರ್ವತಕ್ಕೆ ಹೋಗುವುದಕ್ಕಾಗಿ ನಿರ್ಮಿಸಿರುವುದು. ಮಾಲ್ಯಾವಂತ ಪರ್ವತದ ಪಶ್ಚಿಮಕ್ಕಿರುವ ಶಾಸನದಲ್ಲಿ ಹೊದೆಯ ಬಾಗಿಲು ವಿನಾಯಕನಿಗೆ ವೀರ ಹರಿಹರ ರಾಯನು ದಾನ ನೀಡಿದಂತೆ ಉಲ್ಲೇಖವಿದೆ.[3]

ಹೂವಿನ ಬಾಗಿಲು

ಕೋಟೆಯ ನೈರುತ್ಯದಿಕ್ಕಿನಲ್ಲಿ ಹೂವಿನ ಬಾಗಿಲಿದೆ. ದಕ್ಷಿಣಾಭಿಮುಖವಾಗಿರುವ ಇದು ನೇರ ಅಂತಃಪುರಕ್ಕೆ ಪ್ರವೇಶವನ್ನು ಕೊಡುತ್ತದೆ. ಸಂಡೂರು ತಾಲೂಕಿನ ಹೊಸಮಲೈದುರ್ಗದ ರಾಮನ ದೇಗುಲದ ಮುಂದಿರುವ ಶಾಸನದಲ್ಲಿ ಹೂವಿನ ಬಾಗಿಲ ವಿಜಯನಗರದ ಆಂಜನೇಯ ದೇವಾಲಯದ ಪೂಜಾರಿಯ ಪ್ರಸ್ತಾಪಗಳಿವೆ.[4] ಇದಕ್ಕೆ ಪೂರಕವೆಂಬಂತೆ ಹೂವಿನ ಬಾಗಿಲ ಮುಂಭಾಗದಲ್ಲಿ ಆಂಜನೇಯ ಗುಡಿ ಇದೆ. ಇದು ವಿಜಯನಗರದ ಅರಸ ಮಲ್ಲಿಕಾರ್ಜುನ (ಕ್ರಿ.ಶ. ೧೪೪೭-೧೪೬೬) ಅವಧಿಯಲ್ಲಿ ನಿರ್ಮಾಣಗೊಂಡಿದೆ.[5]

ದೂರದಿಂದ ಈ ಬಾಗಿಲು ಗೋಚರಿಸುವುದಿಲ್ಲ. ೧೦ ಅಡಿ ಅಗಲ, ೨೦ ಅಡಿ, ಎತ್ತರವಾಗಿರುವ ಇದರ ಲಲಾಟದ ಬಿಂಬದ ಕೆಳಬದಿಗೆ ಇಳಿಬಿದ್ದ ಮೊಗ್ಗುಗಳಿವೆ. ಮುಂಭಾಗದಲ್ಲಿ ವಿಶಾಲವಾದ ಆವರಣವಿದೆ. ಈ ಆವರಣದಿಂದ ಪೂರ್ವಕ್ಕೆ ಆಂಜನೇಯ ಶಿಲ್ಪವಿದೆ. ಸಭಾಮಂಟಪದಲ್ಲಿರುವ ನಾಲ್ಕು ಕಂಬಗಳಲ್ಲಿ ಆನೆ, ಯಾಳಿ, ಆಂಜನೇಯ, ಗಣೇಶ ಇತ್ಯಾದಿ ಉಬ್ಬುಶಿಲ್ಪಗಳಿವೆ. ಗರ್ಭಗೃಹದ ಮೇಲೆ ಇಟ್ಟಿಗೆ ಗಾರೆಯಿಂದ ಶಿಖರವನ್ನು ನಿರ್ಮಿಸಲಾಗಿದೆ. ಸಭಾಮಂಟಪದ ಮೇಲಿರುವ ಕೈಪಿಡಿ ಗೋಡೆಯಲ್ಲಿ ದೇವರ ಕೋಷ್ಠಗಳಿವೆ. ಹೊಸಪೇಟೆಯ ಅಮರಾವತಿ, ಹಿಂದೆ ಹೂವಿನ ತೋಟವಾಗಿದ್ದ ಉಲ್ಲೇಖವು ಶಾಸನ (ಅಮರಾಮ ಪೂಜಾರ ಹನುಮಂತಪ್ಪನ ಹಿತ್ತಲಿನಲ್ಲಿ ಶಾಸನ ಇದೆ) ದಲ್ಲಿದೆ ಇಲ್ಲಿಂದ ಹೂವನ್ನು ಈ ಬಾಗಿಲ ಮೂಲಕವೆ. ಅಂತಃಪುರ ಹಾಗೂ ವಿರೂಪಾಕ್ಷ ದೇವಾಲಯಕ್ಕೆ ಸಾಗಿಸುತ್ತಿರಬಹುದು. ಈ ಹಿನ್ನೆಲೆಯಲ್ಲಿಯೂ ಹೂವ್ವಿನವಾಗಿಲೆಂದು ಹೆಸರು ಬಂದಿರುವ ಸಾಧ್ಯತೆ ಇದೆ.

ಕೊಠಾರದ ಬಾಗಿಲು

ಕೋಟೆಯ ಈಶಾನ್ಯದಿಕ್ಕಿಗೆ ಈ ಬಾಗಿಲಿದೆ. ಪೂರ್ವಾಭಿಮುಖವಾಗಿರುವ ಈ ಬಾಗಿಲು ಇಂದು ಪೂರ್ವ ಭಗ್ನಾವಸ್ಥೆಯಲ್ಲಿದೆ. ಕೋಷ್ಠಾಗಾರ ಎಂದರೆ ಕೊಟ್ಯಗಾರ, ಸಂಗ್ರಹಾಲಯ, ಖಜಾನೆ, ಕಣಜ ಎಂಬರ್ಥಗಳಿವೆ.

ಖಜಾನೆ, ಕಣಜಗಳು ಇದ್ದಿರುವ ಈ ಕಾರಣವಾಗಿಯೇ ಇದಕ್ಕೆ ಕೋಠಾರದ ಬಾಗಿಲೆಂದು ಕರೆದಿರಬೇಕು. ನಿಂಬಾಪುರದ ಕಪಿಲಾಶ್ರಮದ ಬಳಿಯ ಶಾಸನದಲ್ಲಿ ಈ ಬಾಗಿಲಿನ ಉಲ್ಲೇಖವಿದೆ.[6]

ಜಡೆಯಶಂಕರದೇವರ ದಿಡ್ಡಿ

ಇದು ಕಮಲಾಪುರದಿಂದ ಹಂಪೆಗೆ ಹೋಗುವ ರಸ್ತೆಯ ಬದಿಯಲ್ಲಿರುವ ಅಕ್ಕತಂಗಿಯರ ಗುಂಡಿನ ಹಿಂಬದಿಗೆ ಇದೆ. ಶಾಸನದಲ್ಲಿ ಜಡೆಯಶಂಕರದೇವರ ದಿಡ್ಡಿ ಸ್ಥಳ ನಿರ್ದೇಶನವನ್ನು ನೀಡುತ್ತದೆ.[7]

ಹಂಪಾದೇವಿಯ ದಿಡ್ಡಿ

ಜಡೆಯಶಂಕರದೇವರ ದಿಡ್ಡಿ ಬಾಗಿಲನ ಉತ್ತರಕ್ಕೆ ಸ್ವಲ್ಪ ಅಂತರದಲ್ಲಿಯೇ ಹಂಪಾದೇವಿಯ ದಿಡ್ಡಿ ಬಾಗಿಲಿದೆ. ಈಗ ಪೂರ್ವ ಭಗ್ನಾವಸ್ಥೆಯಲ್ಲಿದೆ. ಬಂಡೆಯ ಮೇಲಿರುವ ಶಾಸನದಲ್ಲಿ ಹಂಪಾದೇವಿಯ ದಿಡ್ಡಿ ಎಂದಿದೆ.[8]

ರೆಮ್ಮು ದಿಡ್ಡಿ

ಬೇಟೆಕಾರ ಹಾಗೂ ಹರೆಶಂಕರ ಹೆಬ್ಬಾಗಿಲುಗಳ ಮಧ್ಯದ ಬೆಟ್ಟಗಳ ಕಣಿವೆಯಲ್ಲಿ ರೆಮ್ಮು ದಿಡ್ಡಿಬಾಗಿಲಿದೆ. ಪೂರ್ವಾಭಿಮುಖವಾಗಿರುವ ಇದು ಸಂಪೂರ್ಣ ಹಾಳಾಗಿದೆ. ಪ್ರಸ್ತುತ ಎರಡು ಮಂಟಪಗಳು ಮಾತ್ರ ಗೋಚರಿಸುತ್ತವೆ. ಇಲ್ಲಿಯೇ ಇರುವ ಬಂಡೆಯ ಮೇಲಿನ ಶಾಸನದಲ್ಲಿ ಈ ದಿಡ್ಡಿ ಉಲ್ಲೇಖವಿದೆ.[9]

ಉಪ್ಪರಿಗೆ ಬಾಗಿಲು ಮತ್ತು ಮತಂಗೇಶ್ವರದೇವರ ದಿಡ್ಡಿ ಬಾಗಿಲುಗಳು ಕೂಡಾ ಮುಖ್ಯವಾಗಿವೆ.

ಕೊತ್ತಳಗಳು

ಹೆಬ್ಬಾಗಿಲು, ಬಾಗಿಲು ಮತ್ತು ದಿಡ್ಡಿಗಳ ಇಕ್ಕೆಲಗಳಲ್ಲಿ, ಕೋಟೆಯ ಆಯಕಟ್ಟಿನ ಸ್ಥಳಗಳಲ್ಲಿ, ಕೋಟೆ ಗೋಡೆಯ ಮೇಲೆ ನಿಂತು ಹೋರಾಟ ಮಾಡಲು ಅನುಕೂಲವಾಗುವಂತೆ ಮತ್ತು ಕೆಲವು ಗುಪ್ತ ಸ್ಥಳಗಳಲ್ಲಿ ಕೊತ್ತಳಗಳನ್ನು ನಿರ್ಮಿಸಲಾಗಿದೆ. ಇವುಗಳ ಲಕ್ಷಣಗಳನ್ನು ಈಗಾಗಲೇ ಮೇಲೆ ತಿಳಿಸಲಾಗಿದೆ. ಇಲ್ಲಿ ಶಾಸನೋಕ್ತ ಮತ್ತು ಇತರೆ ಕೊತ್ತಳಗಳ ವಿವರಣೆಗಳನ್ನು ನೀಡಲಾಗಿದೆ.

ಪ್ರತಾಪ ಕೊತ್ತಳ : ಪ್ರತಾಪ ಕೊತ್ತಳವು ಕೋಟಿ ಶಂಕರ ಬಾಗಿಲು ಮುಂಭಾಗದಲ್ಲಿದ್ದು, ಅಕ್ಕತಂಗಿಯರ ಗುಂಡುಗಳ ಪಶ್ಚಿಮದ ಬಂಡೆಯ ಮೇಲಿನ ಶಾಸನವು ಇದನ್ನು ಗುರುತಿಸುತ್ತದೆ.[10] ಪ್ರತಾಪ ಎನ್ನುವುದು ವಿಜಯನಗರದ ಅರಸರುಗಳಿಗಿದ್ದ ಬಿರುದು.

ಸ್ವಾಮಿ ದ್ರೋಹರ ಗಂಡನ ಕೊತ್ತಳ : ಹಂಪಾದೇವಿ ದಿಡ್ಡಿಬಾಗಿಲು ಹಾಗೂ ಜಡೆಯಶಂಕರ ದೇವರ ದಿಡ್ಡಿಬಾಗಿಲುಗಳ ಮಧ್ಯದಲ್ಲಿರುವುದೇ ಸ್ವಾಮಿದ್ರೋಹರ ಗಂಡನ ಕೊತ್ತಳ, ಕೋಟೆ ಗೋಡೆಯಲ್ಲಿರುವ ಶಾಸನವು ಈ ಕೊತ್ತಳವನ್ನು ಸೂಚಿಸುತ್ತದೆ.[11]

ಮಾತಂಗದೇವರ ಕೊತ್ತಳ : ಹೊದೆಯ ಬಾಗಿಲ ಪಶ್ಚಿಮ ದಿಕ್ಕಿಗಿರುವುದೇ ಮತಂಗ ದೇವರ ಕೊತ್ತಳ. ಹಂಪಾದೇವಿ ದಿಡ್ಡಿಯ ಉತ್ತರಕ್ಕಿರುವ ಬಂಡೆ ಶಾಸನವು ಮತಂಗದೇವರ ಕೊತ್ತಳವನ್ನು ಹೆಸರಿಸುತ್ತದೆ.[12] ಮಾತಂಗಿ ವಿಜಯನಗರದ ಅರಸರ ಆರಾಧ್ಯ ದೇವತೆ. ಮಾತಂಗ ಪರ್ವತದ ಮೇಲೆ ಈ ದೇವತೆಯ ಗುಡಿ ಇದೆ. ಮತಂಗ ಪರ್ವತದ ಉಲ್ಲೇಖಗಳು ಕ್ರಿ.ಶ.೧೧ನೇ ಶತಮಾನದ ಶಾಸನಗಳಲ್ಲಿದೆ. ಅಲ್ಲದೆ ಸಾಹಿತ್ಯಿಕ ಹಾಗೂ ಪುರಾಣದ ಉಲ್ಲೇಖಗಳು ಮತಂಗ ಪರ್ವತದ ಪ್ರಾಚೀನತೆಯನ್ನು ರಾಮಾಯಣ ಕಾಲಕ್ಕೆ ತೆಗೆದುಕೊಂಡು ಹೋಗುತ್ತವೆ.

ಮಳಲ ವಿನಾಯಕ ಕೊತ್ತಳ: ಇದು ಮತಂಗ ದೇವರ ಕೊತ್ತಳದ ಉತ್ತರ ದಿಕ್ಕಿಗಿದೆ. ಇಲ್ಲಿಯೇ ಕೋಟೆ ಗೋಡೆಯಲ್ಲಿರುವ ಶಾಸನವು ಮಳಲ ವಿನಾಯಕ ಕೊತ್ತಳವನ್ನು ಹೆಸರಿಸಿದೆ.[13]

ಜಲಸೇನದೇವ ಕೊತ್ತಳ: ಇದು ಮಳಲ ವಿನಾಯಕ ಕೊತ್ತಳದ ಆಗ್ನೇಯ ದಿಕ್ಕಿಗಿದೆ. ಜಲಸೇನ ವಿಜಯನಗರ ಅರಸರು ಆರಾಧಿಸುತ್ತಿದ್ದ ದೇವರು. ಈ ಕೊತ್ತಳವನ್ನು ಹೆಸರಿಸುವ ಶಾಸನವು ಉದ್ದಾರ ವೀರಭದ್ರ ದೇವಾಲಯದ ಪೂರ್ವದ ಕೋಟೆಗೋಡೆಯಲ್ಲಿದೆ.[14]

ಹಂಪೆಯ ಕೊತ್ತಳ: ಕೋಟಿ ಶಂಕರ ದೇವರ ಬಾಗಿಲಿನ ಪೂರ್ವ ದಿಕ್ಕಿಗಿದೆ. ಹಂಪಿ ವಿಜಯನಗರದ ಅರಸರ ರಾಜಧಾನಿ, ಇಂದು ಪ್ರಸಿದ್ಧ ಪ್ರವಾಸಿ ತಾಣ.

ಹನುಮನ ಕೊತ್ತಳ: ಹೊದೆಯ ಬಾಗಿಲಿನ ಆಗ್ನೇಯ ದಿಕ್ಕಿಗಿರುವುದೇ ಹನುಮನ ಕೊತ್ತಳ. ಹನುಮನ ಇನ್ನೊಂದು ಹೆಸರು ಆಂಜನೇಯ. ರಾಮಾಯಣದಲ್ಲಿ ಶ್ರೀರಾಮಚಂದ್ರನ ಭಕ್ತ, ಸೇವಕ ಹಂಪಿಯಲ್ಲಿ ಆಂಜನೇಯರ ಗುಡಿಗಳು ಸಾಕಷ್ಟಿವೆ.

ಶಂಕರದೇವರ ಕೊತ್ತಳ: ಈ ಕೊತ್ತಳವು ಹನುಮನ ಕೊತ್ತಳದ ಪೂರ್ವ ದಿಕ್ಕಿಗಿದೆ. ಶಂಕರ ದೇವರ ಕೊತ್ತಳವನ್ನು ಹೆಸರಿಸುವ ಶಾಸನವು ಈ ಕೊತ್ತಳದ ದಕ್ಷಿಣದ ಬಂಡೆಯ ಮೇಲಿದೆ.[15] ಶಂಕರ ದೇವರ ಹೆಸರನ್ನು ಈ ಕೊತ್ತಳಕ್ಕೆ ಇಡಲಾಗಿದೆ.

ಮದನ ಕೊತ್ತಳ : ಮತಂಗೇಶ್ವರ ದೇವರ ದಿಡ್ಡಿ ಬಾಗಿಲಿನ ಆಗ್ನೇಯ ದಿಕ್ಕಿಗಿರುವುದೇ ಮದನ ಕೊತ್ತಳ. ರಾಣಿವಾಸದ ಆವರಣದ ಉತ್ತರಕ್ಕೆ ಬೆಟ್ಟದ ಮೇಲೆ ನಾಲ್ಕು ಕಂಬಗಳುಳ್ಳ ಕಾವಲು ಗೋಪುರದ ಕೆಳಬಂಡೆಯ ಮೇಲಿನ ಶಾಸನದಲ್ಲಿ ಇದರ ಉಲ್ಲೇಖವಿದೆ.[16]

ಮೀಸರಗಂಡನ ಕೊತ್ತಳ : ಈ ಕೊತ್ತಳವು ಮದನ ಕೊತ್ತಳದ ಪೂರ್ವ ದಿಕ್ಕಿಗಿದೆ. ಹತ್ತಿರದ ಬಂಡೆಯ ಮೇಲೆ ಮೀಸರ ಗಂಡನ ಕೊತ್ತಳವೆಂದು ಕಡೆಯಲಾಗಿದೆ.[17]

ಆನೆಗೊಂದಿಯ ಕೊತ್ತಳ : ಈ ಕೊತ್ತಳವು ಸಿಂಘಾಪುರದ ಹೆಬ್ಬಾಗಿಲಿನ ಉತ್ತರಕ್ಕಿರುವ ಬೆಟ್ಟದ ಮೇಲಿದೆ. ಆನೆಗೊಂದಿ ವಿಜಯನಗರದ ಅರಸರ ಎರಡನೆಯ ರಾಜಧಾನಿ. ಈಗಲೂ ವಿಜಯನಗರದ ವಂಶಸ್ಥರು ಇಲ್ಲಿದ್ದಾರೆ. ಗಜಶಾಲೆಯಲ್ಲಿ ಹಿಂಭಾಗದ ಬೆಟ್ಟದಲ್ಲಿರುವ ಬಂಡೆಯಮೇಲೆ ಆನೆಗೊಂದಿ ಕೊತ್ತಳವೆಂದು ಕೆತ್ತಲಾಗಿದೆ.[18]

ಸೋಮಯ ದೇವರ ಕೊತ್ತಳ : ಈ ಕೊತ್ತಳವು ಸಿಂಘಾರದ ಹಾಗೂ ಸೋಮವಾರದ ಬಾಗಿಲುಗಳ ಮಧ್ಯಭಾಗದಲ್ಲಿದೆ. ಇಲ್ಲಿಯೇ ಉತ್ತರಕ್ಕಿರುವ ಬೆಟ್ಟದ ಮೇಲೆ ಸೋಮಯ್ಯ ದೇವರ ಕೊತ್ತಳವೆಂದು ಕಡೆಯಲಾಗಿದೆ.[19] ಸೋಮಯ್ಯ ದೇವರ ಹೆಸರಿನಿಂದ ಅಥವಾ ಸೋಮವಾರ ಮಾರುಕಟ್ಟೆ ಸಂತೆ ನಡೆಯುವ ದಿನವೆಂದು, ಈ ಹೆಸರಿನಿಂದಲೇ ಕೊತ್ತಳಕ್ಕೆ ಸೋಮಯ್ಯದೇವರ ಕೊತ್ತಳವೆಂದು ಕರೆದಿರುವುದು.

ಕೋಟೆಯಲ್ಲಿ ನೀರಿನ ಪೂರೈಕೆ

ವಿಜಯನಗರ ಕೋಟೆಯೊಳಗೆ ಉತ್ತಮವಾದ ನೀರಿನ ಸೌಕರ್ಯವಿದ್ದುದು ಇತಿಹಾಸಕಾರರಿಗೆ ತಿಳಿದಿರುವ ವಿಷಯವೆ. ಕೋಟೆಯಲ್ಲಿ ವಾಸಿಸುವ ಜನರ ದೈನಂದಿನ ಉಪಯೋಗಕ್ಕೆ ಹೊಲಗದ್ದೆ ತೋಟಗಳಿಗೆ ಮತ್ತು ಪ್ರವಾಸಿಗಳಿಗೆ ಒದಗಿಸಿದ್ದ ನೀರಿನ ಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ಆಣೆಕಟ್ಟು, ಕಾಲುವೆ, ಕೆರೆ ಬಾವಿ ಅರವಟ್ಟಿಗೆಗಳನ್ನು ಕಟ್ಟಿಸಿದ್ದರು.

ಜನರಿಗೆ, ಪ್ರಾಣಿಗಳಿಗೆ ಮತ್ತು ವ್ಯವಸಾಯಕ್ಕೆ ನೀರಿನ ವ್ಯವಸ್ಥೆಯನ್ನು ಒದಗಿಸುವುದು ಒಂದು ಸಾಮಾಜಿಕ ಜವಾಬ್ದಾರಿಯಾಗಿತ್ತೆಂಬುದಕ್ಕೆ ಹಂಪಿಯ ಕಡಲೆಕಾಳು ಗಣೇಶನ ಗುಡಿಯ ಮುಂದಿರುವ ಶಾಸನವು ಮುಖ್ಯ ಸಾಕ್ಷಿಯಾಗುತ್ತದೆ. ಕ್ರಿ.ಶ. ೧೪೧೧ರ ಪ್ರೌಢದೇವರಾಯನ ಶಾಸನದಲ್ಲಿ ಈತನ ಮಂತ್ರಿಯಾದ ಲಕ್ಷ್ಮೀಧರನು ಕೂಸಾಗಿದ್ದಾಗ ಅವನ ತಾಯಿ ಹಾಡಿ ಹಾಲೆರೆಯುತ್ತಾ ಕಿವಿಯಲ್ಲಿ ಹೇಳಿದ ಒಂದು ಪದ್ಯ ಹೀಗಿದೆ.[20]

ಕೆರೆಯಂ ಕಟ್ಟಿಸು ಬಾವಿಯಂ ಸವಸು ದೇವಗಾರಮಂ
ಮಾಡಿಸಜ್ಜೆರೆ ಯೊಳ್ಸಿಲ್ಕಿದರನಾಥರಂ ಬಿಡಿಸು ಮಿತ್ರರ್ಗ್ಗಿಬುಕೆಯಿ
ನಂಬಿದರ್ಗ್ಗೆರೆವೆಟ್ಟಾಗಿರು ಶಿಷ್ಟರಂ ಪೊರೆಯೆನುತ್ತಿಂ ತೆಲ್ಲವಂ
ಪಿಂದೆ ತಾಂಯೆರದಳ್ವಾಲೆರವಂದು ತೊಟ್ಟು ಕಿವಿಯೊಳ್
ಲಕ್ಷ್ಮೀಧರಾಮಾತ್ಯನಾ

ಆಣೆಕಟ್ಟು ಮತ್ತು ಕಾಲುವೆಗಳು : ವಿಜಯನಗರ ಪಟ್ಟಣದ ಪಕ್ಕದಲ್ಲಿಯೇ ಹರಿಯುತ್ತಿರುವ ತುಂಗಭದ್ರಾ ನದಿಗೆ ಆಣೆಕಟ್ಟನ್ನು ಕಟ್ಟಿ ಅಲ್ಲಿಂದ ಕಾಲುವೆ ಮುಖಾಂತರ ಕೋಟೆಯೊಳಗೆ ನೀರು ಹರಿಸಲಾಗಿತ್ತು. ಇಂದಿಗೂ ಅಂಥ ಕಾಲುವೆಗಳು ಅಸ್ತಿತ್ವದಲ್ಲಿರುವುದನ್ನು ಕಾಣಬಹುದು. ಮುಖ್ಯವಾದ ಕಾಲುವೆಗಳಲ್ಲಿ ವಿಜಯನಗರ ತುರ್ತಾ ಕಾಲುವೆ[21]ಯೂ ಒಂದು. ಇದನ್ನು ಶಾಸನಗಳು ಹಿರಿಯ ಕಾಲುವೆ ಎಂದು ಕರೆದಿವೆ. ಈ ಕಾಲುವೆಯು ಆಣೆಕಟ್ಟಿನಿಂದ ಪ್ರಾರಂಭವಾಗಿ ೬.೨ ಕಿ.ಮೀ. ದೂರದಲ್ಲಿ ಮಾತಂಗ ಪರ್ವತದ ಕಲ್ಲು ಬಂಡೆಯನ್ನು ಸೀಳಿಕೊಂಡು ಮುಂದೆ ಸಾಗುತ್ತದೆ. ಬಂಡೆಯನ್ನು ಒಡೆಸಿ ಕಾಲುವೆಯನ್ನು ಕಟ್ಟಿಸಿದ್ದು, ಶಾಸನಗಳಿಂದ ತಿಳಿಯುತ್ತದೆ. ಈ ಕಾಲುವೆಯು ಕೋಟೆಯೊಳಗಿನ ಉದ್ದಾನ ವೀರಭದ್ರ ದೇವಾಲಯದ ಹತ್ತಿರ ಹರಿದು ಕೃಷ್ಣಾಪುರದ ಪೇಟೆಗೆ ನೀರನ್ನು ಒದಗಿಸಿದೆ.[22] ಊಟದ ಕಾಲುವೆಯ ಮಹಾನವಮಿ ದಿಬ್ಬವಿರುವ ಆವರಣದ ಬಳಿ ರಸ್ತೆಯ ಎಡಕ್ಕೆ ಭೋಜನಶಾಲೆಯೆಂದು ಕರೆಯುವ ಸ್ಥಳದ ಬಳಿ ಹರಿದಿದೆ. ಇಲ್ಲಿ ಒಂದು ಚಿಕ್ಕ ಕಾಲುವೆಯ ದಂಡೆಯ ಮೇಲೆ ಹಸಿರು ಬಣ್ಣದ ಕಲ್ಲುಚಪ್ಪಡಿಗಳನ್ನು ಜೋಡಿಸಿದೆ. ಚಪ್ಪಡಿಗಳ ಮಧ್ಯದಲ್ಲಿ ತಟ್ಟೆ ಮತ್ತು ಬಾಳೆ ಎಲೆಯ ಆಕಾರದ ತಗ್ಗು ಇದ್ದು ಸುತ್ತಲೂ ಬಟ್ಟಲಿನಾಕಾರದ ತಗ್ಗುಗಳಿವೆ. ಇವುಗಳನ್ನು ಊಟಕ್ಕೆ ಉಪಯೋಗಿಸುತ್ತಿದ್ದರೆಂಬುದು ಸ್ಥಳಿಯ ಪ್ರತೀತಿ. ಹಾಗಾಗಿ ಇದರ ಪಕ್ಕದಲ್ಲಿ ಹರಿದಿರುವ ಕಾಲುವೆಗೆ ಊಟದ ಕಾಲುವೆ ಎಂದು ಹೆಸರು ಬಂದಿದಿದೆ. ಹಿಗೆ ತುರ್ತಾ ಹಾಗೂ ಊಟದ ಕಾಲುವೆಗಳು ಕೋಟೆಯೊಳಗಿನ ಜನರ ದಾಹವನ್ನು ಇಂಗಿಸಿವೆ.

ಕೆರೆಗಳು : ವಿಜಯನಗರದ ರಾಜಧಾನಿಯಲ್ಲಿ ಕೆರೆಗಳು ಬಹಳ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿವೆ. ಅರಸರು ಈ ಭಾಗದ ಮಳೆಯ ವೈಪರೀತ್ಯ ಸ್ವಭಾವಗಳನ್ನು ಪರಿಗಣಿಸಿ ಕೆರೆಗಳನ್ನು ನಿರ್ಮಿಸಿದ್ದಾರೆ.[23] ವಿಜಯನಗರ ಕೆರೆಗಳ ಬಗ್ಗೆ ಎಂ.ಎಲ್. ಸರಸ್ವತಿಯವರು, ಜಿ.ಎಸ್.ದೀಕ್ಷಿತ್, ಜಿ.ಆರ್. ಕುಪ್ಪುಸ್ವಾಮಿ, ಸಿ.ಟಿ.ಎಂ. ಕೊಟ್ರಯ್ಯ, ಡಾ. ವಾಸುದೇವನ್, ಎಂ.ಕೊಟ್ರೇಶ್ ಇವರು ಸಂಶೋಧನೆ ಮಾಡಿರುವರು. ರಾಜಧಾನಿಯ ಕೋಟೆಯ ಒಳಗೂ ನೀರಿನ ವ್ಯವಸ್ಥೆಗಾಗಿ ಕೆರೆಗಳನ್ನು ನಿರ್ಮಿಸಿರುವುದು ಶಾಸನಗಳಿಂದ ತಿಳಿದುಬರುವ ಅಂಶ. ಇಲ್ಲಿ ಭೂಪತಿ ಕೆರೆ,[24] ಕಮಲಾಪುರದ ಕೆರೆ,[25] ಕೃಷ್ಣರಾಯ ಸಮುದ್ರದ ಕೆರೆ,[26] ಕೋಟೆಯೊಳಗಿರುವ ಮುಖ್ಯ ಕೆರೆಗಳಾಗಿವೆ. ಇವುಗಳಲ್ಲಿ ಕಮಲಾಪುರದ ಕೆರೆ ಮಾತ್ರ ಉಳಿದುಕೊಂಡಿದೆ.

ಕೊಂಡಗಳು : ನಿಸರ್ಗದತ್ತ ಕಲ್ಲುಬಂಡೆಗಳನ್ನು ಕಡಿದು ನೀರಿನ ವ್ಯವಸ್ಥೆಗಾಗಿ ಕೊಂಡಗಳನ್ನು ನಿರ್ಮಿಸಿಕೊಂಡಿದ್ದರು. ಅವುಗಳಲ್ಲಿ ನರಸಿಂಹ ದೇವಾಲಯದ ಉತ್ತರಕ್ಕೆ ನದಿಯ ದಡದಲ್ಲಿರುವ ಸೀತಾಕೊಂಡ.[27] ಬೇಟೆಕಾರರ ಹೆಬ್ಬಗಿಲಿನ ಹಿಂದೆ ಇರುವ ಒರತೆಯ ಕೊಂಡ[28] ಮುಖ್ಯವಾಗಿವೆ.

ಬಂಡೆಯ ಮೇಲೆ ಪ್ರಕೃತಿ ನಿರ್ಮಿತ ಚಿಕ್ಕ ತೊಟ್ಟಿಯಾಕಾರದ ತಗ್ಗುಗಳನ್ನು ನೀರಿನ ಸಂಗ್ರಹಣೆಗಾಗಿ ಉಪಯೋಗಿಸಿಕೊಂಡಿದ್ದರು. ಇಂಥ ತೊಟ್ಟಿಗಳನ್ನು ರಾಜಧಾನಿಯ ಅನೇಕ ಭಾಗಗಳಲ್ಲಿ ಕಾಣಬಹುದು ಮತ್ತು ಕೆಲವು ತೊಟ್ಟಿಗಳನ್ನು ಸಮಾಜದ ಬಗ್ಗೆ ಕಾಳಜಿ ಇರುವವರು ಮಾಡಿಸಿರುವಂತೆ ಶಾಸನಗಳು ಹೇಳುತ್ತವೆ. ವಿರೂಪಾಕ್ಷ ತೇರುಬೀದಿಯಲ್ಲಿ ಕಂಪ್ಲಿಮಠದ ಪಕ್ಕದಲ್ಲಿರುವ ತೊಟ್ಟಿಯನ್ನು ಅಬರಾಜು ತಿಮಪ ಮಾಡಿಸಿದ.[29] ಕೋದಂಡರಾಮ ದೇವಾಲಯದ ಹತ್ತಿರವಿರುವ ತೊಟ್ಟಿಯನ್ನು ತುಳು ಬನವಾಸಿಯ ಮಗ ಕತ್ತೆಲಬಯ್ಯನು ಮಾಡಿಸಿದ.[30] ಮಾಲ್ಯವಂತ ಪರ್ವತದ ಈಶಾನ್ಯಕ್ಕೆ ತುರ್ತಾ ಕಾಲುವೆಯ ಬಲದಂಡೆಯ ಹತ್ತಿರ ದೊಡ್ಡ ಕಲ್ಲಿನೊಳಗೆ ತೊಟ್ಟಿಯನ್ನು[31] ಕಟ್ಟಿಸಿರುವಂತೆ ತಿಳಿದುಬರುವುದು.

ಬಾವಿಗಳು : ಬಾವಿಗಳು ಮಾನವ ನಿರ್ಮಿತವಾದವು. ಇವುಗಳಲ್ಲಿ ಎರಡು ಪ್ರಕಾರಗಳಿವೆ, ಕುಡಿಯುವ ನೀರಿನ ಬಾವಿ ಮತ್ತು ಬಳಸುವ ನೀರಿನ ಬಾವಿಗಳೆಂದು. ವಿಜಯನಗರ ರಾಜಧಾನಿಯಲ್ಲಿ ನೂರಾರು ಬಾವಿಗಳು ಇದ್ದವಾದರೂ ಇಲ್ಲಿ ಶಾಸನಗಳಲ್ಲಿ ಬರುವ ಬಾವಿಗಳನ್ನು ಮಾತ್ರ ಹೇಳಲಾಗಿದೆ. ಮಾತಂಗ ಪರ್ವತದ ಹತ್ತಿರ ದೊಡ್ಡಬಾವಿ ಇದೆ. ಇದನ್ನು ಶಾಸನಗಳಲ್ಲಿ ಮಹಾದೇವಿ ಅಕ್ಕನ ಬಾವಿ ಮತ್ತು ಕೆಳಬಾವಿಯೆಂದು ಉಲ್ಲೇಖಿಸಿದೆ.[32] ಹೊದೆಯ ಬಾಗಿಲ ಉತ್ತರಕ್ಕೆ ಗುಡ್ಡದ ಪಕ್ಕದಲ್ಲಿರುವ ಬಾವಿಯನ್ನು ದೇವರಾಯನು ಕ್ರಿ.ಶ. ೧೪೧೧ ರಲ್ಲಿ ಕಟ್ಟಿಸಿದಂತೆ ಶಾಸನವು ಹೇಳುತ್ತದೆ.[33] ಸಿಂಗಾಪುರದ ಹೆಬ್ಬಾಗಿಲಿನ ಈಶಾನ್ಯಕ್ಕೆ ಕಟ್ಟಿಗೆ ಅಹ್ಮದ್ ಖಾನನ ಧರ್ಮಶಾಲೆ ಇರುವುದು ಇದರ ಪಕ್ಕದಲ್ಲಿ ಬಾವಿ ಇದೆ. ಇದನ್ನು ಅಹ್ಮದ್ ಖಾನನು ಕ್ರಿ.ಶ. ೧೪೩೯ ರಲ್ಲಿ ನಿರ್ಮಿಸಿದಂತೆ ಶಾಸನವಿದೆ.[34] ಬೇಟೆಕಾರರ ಹೆಬ್ಬಾಗಿಲಿನ ಈಶಾನ್ಯಕ್ಕೆ ಲಿಂಗನಬಾವಿ ಮತ್ತು ರಂಗನಾಥನ ಬಾವಿಗಳಿವೆ.[35] ಇವುಗಳು ಕೋಟೆಯೊಳಗಿನ ಜನತೆಯ ಜೀವಸೆಲೆಯಾಗಿದ್ದವು.

ವಿದೇಶಿಯರು ಕಂಡ ವಿಜಯನಗರದ ಕೋಟೆ

ವಿಶ್ವವಿಖ್ಯಾತ ಹಂಪಿಗೆ ಕ್ರಿ.ಶ. ೧೪ನೆಯ ಶತಮಾನದಿಂದ ಇಂದಿನವರೆಗೂ ವಿದೇಶಿ ಪ್ರವಾಸಿಗರು, ಸಂಶೋಧಕರು, ವ್ಯಾಪಾರಿಗಳು, ಸಂದರ್ಶಕರು, ರಾಯಭಾರಿಗಳು ಬರುತ್ತಲೇ ಇದ್ದು, ಅವರು ತಮಗಾದ ಅನುಭವಗಳನ್ನು ದಾಖಲಿಸುತ್ತಲೇ ಬಂದಿದ್ದಾರೆ. ವಿಜಯನಗರದ ಸಮಕಾಲೀನ ಪಾಶ್ಚಾತ್ಯ ಬರಹಗಾರರು ಮತ್ತು ಪ್ರವಾಸಿಗರು ತಾವು ಇಲ್ಲಿ ಕಂಡುಂಡ ಅನುಭವ ಕಥನಗಳನ್ನು ತಮ್ಮ ಬುದ್ಧಿಮತಕ್ಕೆ ಅನುಸಾರವಾಗಿ ಆತ್ಮಕಥನಗಳಲ್ಲಿ, ದಿನಚರಿಗಳಲ್ಲಿ ಬರೆದಿಟ್ಟಿದ್ದಾರೆ. ಅಂಥವರಲ್ಲಿ ವಿಜಯನಗರಕ್ಕೆ ಭೇಟಿ ನೀಡಿದವರೆಂದರೆ ನೀಕೋಲೆ ಕೌಂಟಿ, ಅಬ್ದುಲ್ ರಜಾಕ್, ನಿಕೇಟಿನ್, ಡ್ಯೂರಾಟಿ ಬಾರ್ಬೋಸ್, ಡಾಮಿನಿಗೊ ಪೇಸ್, ವಾರ್ಥಿಮಾ, ನ್ಯೂನಿಜ್ ಇವರುಗಳು ತಾವು ಕಂಡ ವಿಜಯನಗರದ ಕೋಟೆಯ ಬಗ್ಗೆ ಈ ಕೆಳಗಿನಂತೆ ವರ್ಣಿಸಿದ್ದಾರೆ.

ನೀಕೋಲೆ ಕೌಂಟಿ : ಇವನು ದಕ್ಷಿಣ ಯುರೋಪಿನ ವೆನಿಸ್ ಪಟ್ಟಣದವನು. ಈತ ತನ್ನ ಹೆಂಡತಿಯೊಡನೆ ಕ್ರಿ.ಶ. ೧೪೨೦ ರಲ್ಲಿ ಎರಡನೇ ದೇವರಾಯನ ಆಳ್ವಿಕೆಯಲ್ಲಿ ವಿಜಯನಗರಕ್ಕೆ ಬಂದಿದ್ದನು. ಈತನು ಕೋಟೆಯ ಬಗ್ಗೆ ಈ ಕೆಳಗಿನಂತೆ ಹೇಳಿದ್ದಾನೆ. ದೊಡ್ಡಪಟ್ಟಣವಾದ ವಿಜಯನಗರವು ಕಡಿದಾದ ಗುಡ್ಡಗಳ ಹತ್ತಿರ ಇದೆ. ಈ ಪಟ್ಟಣದ ಸುತ್ತಳತೆ ೬೦ ಮೈಲಿಗಳು. ಪಟ್ಟಣದ ಕೋಟೆ ಗೋಡೆಗಳನ್ನು ಗುಡ್ಡದ ಮೇಲೆಯೂ ಏರಿಸಲಾಗಿದೆ. ಆ ಪಟ್ಟಣದಲ್ಲಿ ೯೦,೦೦೦ ಸೈನಿಕರಿದ್ದಾರೆ.[36]

“The great city of Bijenegalia is situated near very steep mountains. The circumtrance of the city si sixty miles, its walls are carried up to mountains and Enclose the valleys at their foot, so that its Extent is there by increased in this city there are ninety thousand men fit to bear arms.”[37]

ಅಬ್ದುಲ್ ರಜಾಕ್ : ಇವನು ಪರ್ಶಿಯಾದ ರಾಯಭಾರಿ. ಕ್ರಿಶ. ೧೪೪೩ ರಲ್ಲಿ ವಿಜಯನಗರಕ್ಕೆ ಭೇಟಿ ನೀಡಿದ್ದನು. ಆತ ತನ್ನ ಪ್ರವಾಸ ಕಥನದ ಅನುಭವದಲ್ಲಿ ವಿಜಯನಗರದ ಕೋಟೆಯ ಬಗ್ಗೆ ಹೀಗೆ ಹೇಳುತ್ತಾನೆ. ಬಿಜನಗರದಂಥ ನಗರವನ್ನು ಕಣ್ಣು ಕಂಡಿಲ್ಲ, ಕಿವಿ ಕೇಳಿಲ್ಲ. ಈ ನಗರವನ್ನು ಹೇಗೆ ನಿರ್ಮಿಸಿದ್ದಾರೆಂದರೆ ಏಳು ದುರ್ಗಗಳು ಏಳು ಕೋಟೆಗಳು ಒಂದನ್ನೊಂದು ಆವರಿಸಿಕೊಂಡಿವೆ.

ಒಂದನೆಯದುರ್ಗದ ಸುತ್ತ ಮನುಷ್ಯನ ಎತ್ತರದ ಕಲ್ಲು ಕಂಬಗಳನ್ನು ಭೂಮಿಯಲ್ಲಿ ಅರ್ಧ ಹೂತು ಇನ್ನರ್ಧ ಮೇಲೆ ಕಾಣುವಂತೆ ನೆಟ್ಟಿದ್ದಾರೆ. ಇವುಗಳನ್ನು ಒಂದರ ಪಕ್ಕದಲ್ಲಿ ಒಂದನ್ನು ಹೇಗ ಹೂತಿದ್ದಾರೆಂದರೆ ರಾವುತನಾಗಲೀ ಪದಾತಿಯಾಗಲೀ ಧೈರ್ಯವಾಗಿ ಅಥವಾ ಸುಲಭವಾಗಿ ದುರ್ಗದ ಕಡೆ ಹೋಗುವಂತಿಲ್ಲ. ಈ ಕೋಟೆ ಚಕ್ರಾಕಾರವಾಗಿದೆ. ಇದನ್ನು ಬೆಟ್ಟದ ತುದಿಯಮೇಲೆ ಕಲ್ಲು ಮತ್ತು ಗಾರೆಯಿಂದ ಕಟ್ಟಿದ್ದಾರೆ. ಇದರ ಹೆಬ್ಬಾಗಿಲುಳು ಬಹು ಬಲವಾಗಿವೆ. ಈ ಹೆಬ್ಬಾಗಿಲುಗಳನ್ನು ಒಂದೇ ಸಮನೆ ಕಾಯುತ್ತಾರೆ. ಯಾರನ್ನೂ ಸಂಪೂರ್ಣ ಪರೀಕ್ಷೆ ಮಾಡದೇ ಒಳಗೆ ಬಿಡುವುದಿಲ್ಲ. ಇವರು ಸುಂಕವಸೂಲಿಯನ್ನು ಮಾಡುತ್ತಾರೆ ಎರಡನೆಯ ಕೋಟೆ ವಿಶಾಲವಾದ ಜಾಗವನ್ನು ಆಕ್ರಮಿಸಿದೆ. ಇದರಂತೆ ನಾಲ್ಕು ಐದು ಮತ್ತು ಆರನೆಯ ಕೋಟೆಗಳಿವೆ. ಎಲ್ಲಾ ಕೊಟೆಗಳ ಮಧ್ಯದಲ್ಲಿರುವ ಏಳಣೆಯ ಕೋಟೆ ಆಕ್ರಮಿಸಿಕೊಂಡಿರುವ ಜಾಗ ಹೆರಾತ್ ನಗರದ ಮಾರ್ಕೆಟ್ ಜಾಗದ ಹತ್ತರಷ್ಟು ವಿಶಾಲವಾಗಿದೆ. ಇಲ್ಲಿ ರಾಜನು ವಾಸಮಾಡುವ ಅರಮನೆಯಿದೆ. ಉತ್ತರದಿಕ್ಕಿನಲ್ಲಿ ಮೊದಲನೆ ಕೋಟೆಯ ಹೆಬ್ಬಾಗಿಲಿನಿಂದ ಹಿಡಿದು ದಕ್ಷಿಣದಲ್ಲಿರುವ ಹೆಬ್ಬಾಗಿಲಿಗೆ ಎರಡು ಪರಸಾಂಗುಗಳಷ್ಟು ದೂರವಿದೆ. ಪೂರ್ವದಿಂದ ಪಶ್ಚಿಮಕ್ಕೂ ಅಷ್ಟೇ ದೂರ.[38]

ಮೊದಲನೆಯ ಕೋಟೆಗೂ ಎರಡನೆಯಕೋಟೆಗೂ ಮಧ್ಯ ಇರುವ ಜಾಗದಲ್ಲಿ ಅಂದರೆ ಮೂರನೆ ಕೋಟೆವರೆಗೆ ಇರುವ ಜಾಗದಲ್ಲಿ ಬೇಸಾಯದ ಹೊಲಗಳೂ, ಮನೆಗಳೂ ಮತ್ತು ತೋಟಗಳಿವೆ. ಮೂರನೆ ಕೋಟೆಯಿಂದ ಎರಡನೆಯ ಕೋಟೆಯವರೆಗೆ ಅಸಂಖ್ಯಾತ ಜನಗಳನ್ನು ಅನೇಕ ಅಂಗಡಿಗಳನ್ನೂ, ಅಂಗಡಿ ಬೀದಿಗಳನ್ನೂ ನೋಡಬಹುದು. ರಾಜನ ಅರಮನೆಯ ಹೆಬ್ಬಾಗಿಲಿನಲ್ಲಿ ಎದುರು ಬದಿರಾಗಿ ನಾಲ್ಕು ಅಂಗಡಿ ಬೀದಿಗಳಿವೆ. ಉತ್ತರದಲ್ಲಿ ರಾಯ್‌ನ ಅರಮನೆಯ ಮಹಾದ್ವಾರವಿದೆ.[39]

“The city of Bidinagar is such that the pupil of the eye has never seen a place like it,and the year of interlligence has never been informed that there existed any thing to equal it in the wold. it is build in such a manner that seven citadels and the same number of walls enclose each other. Around the first citadel are stones of the height of a man, one half of which sunk in the ground while the other half rises above it. These are fixed one beside other in such a manner that no horse or foot soldier could boldly or with ease approach the citadel”

“Other citadel appaered like round shape build on summit of mountain and constructed of stone and lime. It has very solid gates, the guards of which are constantly at thair post and examine every thing with severe inspection.”

“The seventh fortress is to north and is the place of the king. The space which seperates the first fortress, is filled with the third fields and with ouses and gardens. In the space from the third to the seventh, one meets a numberless crowed of people, many shops and bazars. By the king’s palace are four bazars, placed opposite each other. On the north is the portico of ‘Rai’. Above eac bazar is lofty arcode with magnificante gallery, but the audiancehall of the king’s palace is elevated above all the rest. The bazars are extremely long and Broad.”

“Each elephant has seperate compartment, the walls of which are solid, and roof compose of strong pieces of wood… opposite the mint is the house of the Governor, where are stationed twele thousand soldiers on guards.”[40]

ನಿಕೆಟಿನ್ : ಈತ ರಷ್ಯಾದ ಪ್ರವಾಸಿ. ವ್ಯಾಪಾರಕ್ಕಾಗಿ ಕ್ರಿ.ಶ ೧೪೭೦ ರಲ್ಲಿ ಭಾರತಕ್ಕೆ ಬಂದ. ಬೀದರ್‌ನಲ್ಲಿ ನಾಲ್ಕು ವರ್ಷಗಳಿದ್ದು, ಬಹುಮನಿ ರಾಜ್ಯದ ಬಗ್ಗೆ ತನ್ನ ಅನುಭವಗಳನ್ನು ಹೇಳುತ್ತಾ ವಿಜಯನಗರದ ಬಗ್ಗೆಯೂ ಪ್ರಸ್ತಾಪಿಸಿದ್ದಾನೆ. ವಿಜಯನಗರದಲ್ಲಿ ಒಂದು ಲಕ್ಷ ಸೈನಿಕರು ಮತ್ತು ೫೦,೦೦೦ ಕುದುರೆಗಳುಳ್ಳ ಅಶ್ವದಳವೂ ಇದೆ. ಇಲ್ಲಿ ಹಿಂದೂ ಸುಲ್ತಾನನಾದ ಕದಮ್ ಬಹಳ ಬಲಶಾಲಿಯಾಗಿದ್ದಾನೆ. ಅವನಲ್ಲಿ ದೊಡ್ಡ ಸೈನ್ಯವಿರುವುದರಿಂದ ವಿಜಯನಗರದ ಸುತ್ತಲೂ ಮೂರು ಕೋಟೆಗಳಿವೆ. ಒಂದು ಬದಿಗೆ ನದಿ ಹರಿಯುತ್ತಿದೆ. ಇನ್ನೊಂದು ಬದಿಗೆ ದಟ್ಟವಾದ ಕಾಡು ಇದೆ.[41]

Vijayanagara City is surrounded by theree Forts and interesected by a River, bordering on the side by a dreadful jungle and on the other a dale, the town is impregnable.[42]

ಡ್ಯೂರಾಟಿ ಬಾರ್ಬೋಸ್: ಇವನು ಕ್ರಿ.ಶ. ೧೫೧೪೧೫ ರಲ್ಲಿ ಕೃಷ್ಣದೇವರಾಯನ ಆಳ್ವಿಕೆ ಅವಧಿಯಲ್ಲಿ ವ್ಯಾಪಾರಕ್ಕಾಗಿ ಭಾರತಕ್ಕೆ ಪೋರ್ಚುಗಲ್ಲಿನಿಂದ ಬಂದಿದ್ದನು. ವಿಜಯನಗರದ ಬಗ್ಗೆ ಹೇಳುವಾಗ ಕೋಟೆಯನ್ನು ಕುರಿತು ಪರ್ವತಗಳಿಂದ ೪೫ ರಹದಾರಿ ದೂರದಲ್ಲಿ ಬಿಜನಗರ ಎಂಬ ಬಹುದೊಡ್ಡ ನಗರವಿದೆ. ಅದು ವಿಪುಲ ಜನಸಂಖ್ಯೆ ಉಳ್ಳದ್ದೂ, ಒಂದು ಬದಿಯಲ್ಲಿ ಉತ್ತಮ ಗೋಡೆಯಿಂದ ಇನ್ನೊಂದು ಬದಿಯಲ್ಲಿ ನದಿಯಿಂದ ಮತ್ತೊಂದು ಬದಿಯಲ್ಲಿ ಪರ್ವತದಿಂದ ಸುತ್ತುವರೆಯಲ್ಪಟ್ಟಿದೆ. ನಗರವು ಸಮತಲ ನೆಲದ ಮೇಲಿದೆ[43] ಎಂದು ದಾಖಲಿಸಿದ್ದಾನೆ.

“Forty five leauges from these mountains, there is very large city, which is called Bijanagar, Very populaors and surrounded on one side by a very good wal and another by river and on the another by mountain. The city is on a level ground….” “The King keeps at all times nine hundred elephants and more twenty thousand houses, all are brought with his own money.[44]

ಡಾಮಿನಿಗೊ ಪೇಸ್ : ಈತನು ಕ್ರಿಶ. ೧೫೨೦ ರಲ್ಲಿ ವಿಜಯನಗರಕ್ಕೆ ಭೇಟಿಕೊಟ್ಟ ಪೋರ್ಚ್‌‌ಗೀಸ್ ಪ್ರವಾಸಿಗ. ವಿಜಯನಗರ ಕೋಟೆಯ ಬಗ್ಗೆ ಇಲ್ಲಿಯ ನಗರ ಮತ್ತು ಪಟ್ಟಣಗಳು ಕೋಟೆಗಳನ್ನು ಹೊಂದಿದ್ದು, ಅವು ಸ್ವಾವಲಂಬಿಯಾಗಿದ್ದು, ಸುಂದರವಾಗಿದೆ. ಪಶ್ಚಿಮಾ ಕರಾವಳಿಯಿಂದ ವಿಜಯನಗರಕ್ಕೆ ಮಾರ್ಗದ ಬಗೆಗೆ ಹೇಳುತ್ತಾ ಪ್ರಥಮಶ್ರೇಣಿ ಅರ್ಥಾತ್ ಬಯಲಿನಿಂದ ಮೇಲೆ ಕಾಣುವ ಶ್ರೇಣಿಯನ್ನು ವರ್ಣಿಸುತ್ತಾ ಈ ಗುಡ್ಡಗಳಲ್ಲಿ ಆ ಬದಿಯಿಂದ ಮುಖ್ಯ ಪ್ರವೇಸ ಮಾರ್ಗವಿತ್ತು ಎಂದು ಹೇಳುತ್ತಾನೆ. ಇದನ್ನು ಸೇರಿದಂತೆ ಇಲ್ಲಿಯ ಗೋಡೆಯನ್ನು ರಾಜಾಕೃಷ್ಣ ಕಟ್ಟಿಸಿದನೆಂದು ಹೇಳುತ್ತಾನೆ.[45]

“Bisanga (Hampi-Vijayanagara) is the capital of all the kinglond where the kind always resides, inside the city, very beautiful rows of building made after their manner with flat roofs…. and on the pillers are other images, smaller images, yet more subordinable, between these images and piller run a desing oif ofliage.”[46]

ವಾರ್ಥಿಮಾ : ವಿಜಯನಗರಕ್ಕೆ ಕ್ರಿ.ಶ. ೧೫೦೫ ರಲ್ಲಿ ಬಂದ ಇಟಾಲಿಯನ್ ಪ್ರವಾಸಿಯಾಗಿದ್ದಾನೆ. ವಿಜಯನಗರವನ್ನು ಬಲ ಮತ್ತು ಭದ್ರ ಗೋಡೆಗಳುಳ್ಳ ಮಹಾನಗರವೆಂದು ವರ್ಣಿಸಿದ್ದಾನೆ. ಅದು ಗುಡ್ಡದ ಬದಿಯಲ್ಲಿ ಸ್ಥಾಪಿತವಾಗಿದೆ ಮತ್ತು ಅದರ ಸುತ್ತಳತೆ ೭ ಮೈಲು ಇದೆ. ಅದಕ್ಕೆ ಗೋಡೆಗಳ ಮುಮ್ಮಡಿ ವೃತ್ತಕವಿದೆ ಎಂದಿದ್ದಾನೆ.[47]

“A very large and strongly walled city, seven miles in circumference, well sheltered by mountains, very wealthy and well equipped city situated on a beautiful site and enjoying and excellent climate”[48]

 

ಹಂಪಿ ಕೋಟೆಯ ನಕ್ಷೆ: ೧. ಸಿಂಘಾರದ ಹೆಬ್ಬಾಗಿಉಲ, ೨. ಸೋಮವಾರದ ಬಾಗಿಲು, ೩. ಅರಮನೆ ಪ್ರದೇಶ, ೪. ಕೋಟಿಶಂಕರದೇವರ ಬಾಗಿಲು, ೫. ಭೀಮನ ಹೆಬ್ಬಾಗಿಲು, ೬. ಗುಮ್ಮಟದ ಬಾಗಿಲು, ೭. ಬೇಟೆಕಾರರ ಹೆಬ್ಬಾಗಿಲು, ೮. ಉದಯಗಿರಿ ಬಾಗಿಲು, ೯. ಅರೆಶಂಕರ ಬಾಗಿಲು, ೧೦. ಎರಡನೆಯ ಪೆನುಗೊಂಡ ಬಾಗಿಲು, ೧೧. ಒಂದನೆಯ ಪೆನುಗೊಂಡ ಬಾಗಿಲು, ೧೨.  ಹೂವಿನ ಬಾಗಿಲು ೧೩. ಆನೆಗೊಂದಿ, ೧೪. ಹೇಮಕೂಟ, ೧೫. ಮಾತಂಗ ಪರ್ವತ,  ೧೬. ಮಲ್ಯವಂತ ಪರ್ವತ, ೧೭. ದೇವಾಲಯದ ಪುಷ್ಕರಣೆಗಳು, ೧೮. ಅಚ್ಯುತಪುರದ ಅಚ್ಯುತಪೇಟೆ, ೧೯. ರೆಮ್ಮುದಿಡಡಿ, ೨೦. ಮೀಸರಗಂಡನ ಕೊತ್ತಳ, ೨೧. ಮದನ ಕೊತ್ತಳ, ೨೨. ಆನೆಗೊಂದಿ ಕೊತ್ತಳ, ೨೩. ಪ್ರತಾಪ ಕೊತ್ತಳ, ೨೪. ಮಾತಂಗ ದೇವರ ಕೊತ್ತಳ, ೨೫. ಮಳಲ ವಿನಾಯಕ ಕೊತ್ತಳ, ೨೬. ಹಂಪೆಯ ಕೊತ್ತಳ.

ಹಂಪಿ ಕೋಟೆಯ ನಕ್ಷೆ: ೧. ಸಿಂಘಾರದ ಹೆಬ್ಬಾಗಿಉಲ, ೨. ಸೋಮವಾರದ ಬಾಗಿಲು, ೩. ಅರಮನೆ ಪ್ರದೇಶ, ೪. ಕೋಟಿಶಂಕರದೇವರ ಬಾಗಿಲು, ೫. ಭೀಮನ ಹೆಬ್ಬಾಗಿಲು, ೬. ಗುಮ್ಮಟದ ಬಾಗಿಲು, ೭. ಬೇಟೆಕಾರರ ಹೆಬ್ಬಾಗಿಲು, ೮. ಉದಯಗಿರಿ ಬಾಗಿಲು, ೯. ಅರೆಶಂಕರ ಬಾಗಿಲು, ೧೦. ಎರಡನೆಯ ಪೆನುಗೊಂಡ ಬಾಗಿಲು, ೧೧. ಒಂದನೆಯ ಪೆನುಗೊಂಡ ಬಾಗಿಲು, ೧೨. ಹೂವಿನ ಬಾಗಿಲು ೧೩. ಆನೆಗೊಂದಿ, ೧೪. ಹೇಮಕೂಟ, ೧೫. ಮಾತಂಗ ಪರ್ವತ, ೧೬. ಮಲ್ಯವಂತ ಪರ್ವತ, ೧೭. ದೇವಾಲಯದ ಪುಷ್ಕರಣೆಗಳು, ೧೮. ಅಚ್ಯುತಪುರದ ಅಚ್ಯುತಪೇಟೆ, ೧೯. ರೆಮ್ಮುದಿಡಡಿ, ೨೦. ಮೀಸರಗಂಡನ ಕೊತ್ತಳ, ೨೧. ಮದನ ಕೊತ್ತಳ, ೨೨. ಆನೆಗೊಂದಿ ಕೊತ್ತಳ, ೨೩. ಪ್ರತಾಪ ಕೊತ್ತಳ, ೨೪. ಮಾತಂಗ ದೇವರ ಕೊತ್ತಳ, ೨೫. ಮಳಲ ವಿನಾಯಕ ಕೊತ್ತಳ, ೨೬. ಹಂಪೆಯ ಕೊತ್ತಳ.

ನ್ಯೂನಿಜ್ : ಪೋರ್ಚಗೀಸ್ ಪ್ರವಾಸಿಯಾದ ಈತನು ಕ್ರಿ.ಶ. ೧೫೩೫-೩೬ ರಲ್ಲಿ ಅಂದರೆ ಅಚ್ಯುತದೇವರಾಯನ ಕಾಲದಲ್ಲಿ ವಿಜಯನಗರಕ್ಕೆ ಭೇಟಿನೀಡಿದ್ದನು. ೨ನೇ ಹರಿಹರನ ಉತ್ತರಾಧಿಕಾರಿ ಹೊಸ ಗೋಡೆಗಳು ಮತ್ತು ಗೋಪುರಗಳನ್ನು ಕಟ್ಟಿ ಅದರ ವ್ಯಾಪ್ತಿಯನ್ನು ವಿಸ್ತರಿಸಿ ಮತ್ತು ಕೋಟೆಗಳು ಇನ್ನು ಹೆಚ್ಚು ಸುತ್ತುಗಳನ್ನು ಕಟ್ಟಿಸಿ ವಿಜಯನಗರ ಪಟ್ಟಣವನ್ನು ಬಹಳ ಅಭಿವೃದ್ಧಿ ಪಡಿಸಿದನೆಂದು ಹೇಳಿದ್ದಾನೆ.[49]

“His Cronick is more historical than descriptive of the empire or its capital. He laboured to gather full History of Vijayanagara empire right from the days of its foundation by Harihara and his brothers. He says it was best provided city in the wolrd.[50]

ಸಮಾರೋಪ

ಹದಿನಾಲ್ಕನೆಯ ಶತಮಾನದಲ್ಲಿ ವಿಜಯನಗರ ಕಾಲದ ಕೋಟೆಯ ರಚನೆಯಲ್ಲಿ ಹಲವು ವ್ಯತ್ಯಾಸಗಳನ್ನು ನೋಡಬಹುದು. ಈ ವ್ಯತ್ಯಾಸವು ಹಂಪಿ ಕೋಟೆಯ ಬಾಗಿಲುಗಳಲ್ಲಿ ಗುರುತಿಸಬಹುದು. ಈ ಕೋಟೆಯ ಬಾಗಿಲುಗಳು ಕಂಬ ತೊಲೆಗಳಿಂದ ರಚಿತವಾದ ಚೌಕಟ್ಟುಗಳನ್ನು ಹೊಂದಿವೆ. ಈ ಚೌಕಟ್ಟು ಮುಟ್ಟುವ ಮೊದಲು ಪ್ರವೇಶವು ಹಲವು ಕೊನೆಗಳಲ್ಲಿ ತಿರುಗಿ ಅಂಕುಡೊಂಕಾಗಿದೆ. ಬಾಗಿಲು ಮುಂದಿನ ದೊಡ್ಡ ಆವರಣ ಕೋಟೆಯಷ್ಟೇ ಎತ್ತರವಾದ ಗೋಡೆಗಳಿಂದ ಸುತ್ತುವರೆದಿವೆ. ಚೌಕ ಮತ್ತು ಆಯತಾಕಾರದ ಕೊತ್ತಳಗಳ ಮೇಲೆ ಕಾವಲುಗಾರ ಮಂಟಪ ತಾಣಗಳಿವೆ. ಭೀಮನ ಹೆಬ್ಬಾಗಿಲು ಸಿಂಘಾರದ ಹೆಬ್ಬಾಗಿಲು, ಹೂವಿನ ಹೆಬ್ಬಾಗಿಲುಗಳಲ್ಲಿ ಮೇಲಿನ ಕೆಲವು ಲಕ್ಷಣಗಳನ್ನು ನಾವಿಂದು ಕಾಣಬಹುದು. ಬಾಗಿಲುಗಳಿಗೆ ಅಲಂಕರಿಸುವ ಗಾರೆಯ ಕಮಾನು ಮತ್ತು ಗುಮ್ಮಟಗಳನ್ನು ವಿಜಯನಗರ ಕಾಲದ ಮಧ್ಯಾವಧಿಯಲ್ಲಿ ಅಳವಡಿಸಿದೆ. ಇದಕ್ಕೆ ಉದಾಹರಣೆ ಎಂದರೆ ಹರೆಶಂಕರ ಹಾಗೂ ಗುಮ್ಮಟದ ಬಾಗಿಲುಗಳು. ಇದರಿಂದ ಹಂಪಿಕೋಟೆಯ ರಚನೆಯಲ್ಲಿ ಮುಸ್ಲಿಂ ಪ್ರಭಾವವನ್ನು ಗುರುತಿಸಬಹುದು. ಬಾಗಿಲುಗಳನ್ನು ಹೆಬ್ಬಾಗಿಲು, ಬಾಗಿಲು, ದಿಡ್ಡಿ ಬಾಗಿಲುಗಳೆಂದು ವಿಂಗಡಿಸಿದುದು ವಿಶೇಷ. ಕ್ರಿ.ಶ. ೧೩೯೯ರ ಹಂಪಿ ಶಾಸನವು ಬೇಟೆಕಾರರ ಬಾಗಿಲನ್ನು ಹೆಬ್ಬಾಗಿಲೆಂದು ಸೂಚಿಸುತ್ತದೆ. ವಿಜಯ ವಿಠ್ಠಲ ದೇವಾಲಯ ಗರ್ಭಗೃಹದ ಮುಂದಿನ ಮಂಟಪದಲ್ಲಿರುವ ಶಾಸನವು ಉದಯಗಿರಿಯ ಪ್ರವೇಶದ್ವಾರವನ್ನು ಬಾಗಿಲೆಂದು ಕರೆದಿದೆ. ಬಹುಪಾಲು ಶಾಸನಗಳು ದಿಡ್ಡಿ ಹಾಗೂ ಕೊತ್ತಳಗಳನ್ನು ಹೆಸರಿಸುತ್ತವೆ. ಯುದ್ದದ ಸಮಯದಲ್ಲಿ ಈ ಬೃಹದಾಕಾರದ ಕೋಟೆಯ ವಿವಿಧ ಭಾಗಗಳನ್ನು ಶೀಘ್ರದಲ್ಲಿ ಗುರುತಿಸುವ ಉದ್ದೇಶದಿಂದಾಗಿ ಹೆಸರುಗಳನ್ನು ಇಟ್ಟಿರಬಹುದು. ಇದೇ ರೀತಿ ವಿಜಯನಗರ ವ್ಯಾಪ್ತಿಯಲ್ಲಿ ಬರುವ ರಾಯಚೂರು, ಮುದಗಲ್ಲು ಕೋಟೆಯ ಭಾಗಗಳನ್ನು ಗುರುತಿಸುವುದಕ್ಕಾಗಿ ಹೆಸರುಗಳನ್ನು ಇಟ್ಟುಕೊಂಡಿರುವುದು ಅಲ್ಲಿಯ ಶಾಸನಗಳಿಂದ ತಿಳಿಯುವುದು.

ಆಕರ
ಕೋಟೆ ಕೊತ್ತಳಗಳು : ಒಂದು ಅಧ್ಯಯನ (ಬಳ್ಳಾರಿ ಜಲ್ಲೆ), ೨೦೦೨, ಪಿಎಚ್‌.ಡಿ. ಮಹಾಪ್ರಬಂಧ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಉ. ೨೩೦-೨೬೨

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೩, ಪೂರ್ವೋಕ್ತ, ಪು. ೧೮೯

[2] ಅದೇ, ಪು. ೧೮೯

[3] Supra Ins. No. 124 Pp.23-24

[4] ದೇವರಕೊಂಡಾರೆಡ್ಡಿ ಮತ್ತು ಇತರರು, ೧೯೮೮, ಕನ್ನಡ ವಿಶ್ವವಿದ್ಯಾಲಯ, ಶಾಸನ ಸಂಪುಟ ೧, ಬಳ್ಳಾರಿ ಜಿಲ್ಲೆ, ಪು. ೨೦೩, ಹಂಪಿ. ಕನ್ನಡ ವಿಶ್ವವಿದ್ಯಾಲಯ

[5] ಹೂವಿನ ಬಾಗಿಲು ಮುಂದಿರು ಆಂಜನೇಯ ದೇವಾಲಯದ ಗರ್ಭಗೃಹ ಪ್ರವೇಶದ್ವಾರದ ಪಾರ್ಶ್ವಗಳಲ್ಲಿರುವ ಬಾಗಿಲು ತೋಳಿನ ಮೇಲಿನ ಶಾಸನದಲ್ಲಿ

[6] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೩, ಹಂಪಿ ಪೂರ್ವೋಕ್ತ ಪು. ೨೮೨

[7] ಅದೇ ಪು. ೧೮೮

[8] ಅದೇ ಪು. ೧೮೬

[9] ಅದೇ ಪು. ೨೭೦

[10] ಅದೇ ಪು.೧೮೯

[11] ಅದೇ ಪು.೧೮೮

[12] ಅದೇ ಪು.೧೮೫

[13] ಅದೇ ಪು. ೧೮೫

[14] ಅದೇ ಪು. ೧೨೦

[15] ಅದೇ ಪು. ೨೧೫

[16] ಅದೇ ಪು. ೨೧೫

[17] ಅದೇ ಪು. ೨೧೬

[18] ಅದೇ ಪು. ೨೪೫

[19] ಅದೇ ಪು.೨೪೨

[20] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೩, ಪೂರ್ವೋಕ್ತ, ಪು. ೫೬

[21] ಅದೇ, ಪು.೧

[22] ಅದೇ, ಪು.೮೨

[23] ಕೊಟ್ರೇಶ್ ಎಂ., ೧೯೯೭, ವಿಜಯನಗರ ಕೆರೆಗಳು, ವಿಜಯನಗರ ಸಾಂಸ್ಕೃತಿಕ ಆಯಾಮಗಳು, ಪು. ೮೨, ಆನೆಗೊಂದಿ, ಹೊಸಪೇಟೆ, ಶ್ರೀ ವಿದ್ಯಾ ವಿಜಯನಗರ ಹಂಪಿ ಹೆರಿಟೇಜ್ ಟ್ರಸ್ಟ್

[24] ಚನ್ನಬಸಪ್ಪ, ಎಸ್.ಪಾಟೀಲ್, ೧೯೯೬, ಶಾಸನಗಳಲ್ಲಿ ಕಂಡಂತೆ ವಿಜಯನಗರ ಪಟ್ಟಣದ ನೀರಿನ ವ್ಯವಸ್ಥೆ, ವಿಜಯನಗರ ಅಧ್ಯಯನ ಸಂಪುಟ ೨, ಪು. ೮೨, ಮೈಸೂರು ಪ್ರಾಚ್ಯವಾಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ

[25] ಅದೇ, ಪು. ೬೩

[26] ಅದೇ, ಪು. ೬೩

[27] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೩, ಪೂರ್ವೋಕ್ತ, ಪು. ೬೮

[28] ಅದೇ, ಪು. ೮೭

[29] ಅದೇ, ಪು. ೯೨

[30] ಅದೇ, ಪು. ೬೮

[31] ಶಾಸನಗಳಲ್ಲಿ ಕಂಡಂತೆ ವಿಜಯನಗರ ಪಟ್ಟಣದ ನೀರಿನ ವ್ಯವಸ್ಥೆ, ಪೂರ್ವೋಕ್ತ ಪುಟ.೬೪

[32] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೩, ಪೂರ್ವೋಕ್ತ ಪು. ೯೩

[33] ಶಾಸನಗಳಲ್ಲಿ ಕಂಡಂತೆ ವಿಜಯನಗರ ಪಟ್ಟಣದ ನೀರಿನ ವ್ಯವಸ್ಥೆ, ಪೂರ್ವೋಕ್ತ, ಉಪ.೬೫

[34] SII ix (pt II), No. 447

[35] ಶಾಸನಗಳಲ್ಲಿ ಕಂಡಂತೆ ವಿಜಯನಗರ ಪಟ್ಟಣದ ನೀರಿನ ವ್ಯವಸ್ಥೆ, ಪೂರ್ವೋಕ್ತ, ಪು.೬೫

[36] ಬಾಲಸುಬ್ರಹ್ಮಣ್ಯ, ಅನುವಾದ, ೨೦೦೦, ಮರೆಯಲಾಗದ ಮಹಾಸಾಮ್ರಾಜ್ಯ, ಪು. ೩೨೫, ಹಂಪಿ, ಕನ್ನಡ ವಿಶ್ವವಿದ್ಯಾಲಯ

[37] Major, India in the 15 th Century, Kaklayuts, London, 1857, p.12

[38] ಅದೇ, ಪು. ೩೫೦

[39] ನಾಗೇಗೌಡ ಎಚ್.ಎಲ್., ೧೯೯೬, ಪ್ರವಾಸಿ ಕಂಡ ಇಂಡಿಯಾ, ಪು. ೧೫೫, ಮೈಸೂರು, ವಿಶ್ವವಿದ್ಯಾಲಯ

[40] Suresh K.M. 1993, Sculptural Art of Hampi, p.9, Mysore: Directorate of Archealog and Museums

[41] ಅಪರಂಜಿ, ಎನ್.ಆರ್.೧೯೮೨, ಕರ್ನಾಟಕ ಇತಿಹಾಸ, ಪು. ೧೭೪, ಗದಗ, ವಿಜಯ ಬುಕ್ ಡಿಪೊ

[42] Sewell Robert, 1962, Forgatton Empire, p. 138, New Delhi.

[43] ಸದಾನಂದ ಕನವಳ್ಳಿ, ಅನುವಾದ, ೧೯೯೨, ಮರೆತು ಹೋದ ಮಹಾಸಾಮ್ರಾಜ್ಯ ವಿಜಯನಗರ, ಪು. ೧೩೮, ಹಂಪಿ, ಕನ್ನಡ ವಿಶ್ವವಿದ್ಯಾಲಯ

[44] ಅದೇ, ಪು. ೧೨೯

[45] ಅದೇ, ಪು. ೧೭೬

[46] ಅದೇ, ಪು. ೨೪೩, ೨೭೭

[47] ಅದೇ, ಪು. ೧೨೭

[48] ಅದೇ, ಪು. ೧೦೮

[49] ಅದೇ, ಪು. ೫೪

[50] ಅದೇ, ಪು. ೩೦೧, ೩೦೩