ಕ್ರಿ.ಶ. ೧೩೩೬ರಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯು ಸಂಗಮ ಸಹೋದರರಾದ ಹರಿಹರ, ಬುಕ್ಕ, ಕಂಪಣ್ಣ, ಮಾರಪ್ಪ ಮತ್ತು ಮುದ್ದಪ್ಪರಿಂದ ಆಯಿತು. ಈ ವಂಶದ ಮೊದಲ ಅರಸ ಒಂದನೇ ಹರಿಹರ (ಕ್ರಿ.ಶ. ೧೩೩೬-೧೩೫೬) ಮತ್ತು ಮೊದಲನೆಯ ಬುಕ್ಕ (ಕ್ರಿ.ಶ. ೧೩೫೬-೧೩೭೭) ಆನೆಗೊಂದಿಯಿಂದ ಆಳಿದರೆಂಬ ಪ್ರತೀತಿ ಇದೆ.[1] ಆದರೆ ಕ್ರಿ.ಶ. ೧೩೮೦ರ ಹಂಪೆಯ ಶಾಸನವು ವಿಜಯ ಎಂಬ ಹೆಸರಿನ ಪಟ್ಟಣದಲ್ಲಿ ಒಂದನೆಯ ಹರಿಹರ ಮತ್ತು ಬುಕ್ಕನು ಆಳುತ್ತಿದ್ದಂತೆಯೂ ಅದು ಇಂದ್ರನ ಅಮರಾವತಿಯಂತೆ ಇತ್ತೆಂದೂ ವರ್ಣಿತವಾಗಿದೆ.[2] ಆದರೆ ಹರಿಹರ ಮತ್ತು ಬುಕ್ಕರಾಯನ ರಾಜಧಾನಿಯು ಪಂಪಾಕ್ಷೇತ್ರದ ಬಳಿಯಿದ್ದ ‘ವಿಜಯ’ ಎಂಬ ಪಟ್ಟಣವೆಂದಾಗುವುದು. ಈ ವಿಜಯ ವಿರೂಪಾಕ್ಷಪುರವೇ ತನ್ನ ಹೆಸರನ್ನು ಮೊಟಕು ಮಾಡಿಕೊಂಡು ವಿಜಯನಗರವಾಗಿ ಬೆಳೆಯಿತು. ಈ ವಿಜಯನಗರದಲ್ಲಿ ಸಂಗಮ, ಸಾಳ್ವ, ತುಳು ಮತ್ತು ಅರವೀಡು ವಂಶಗಳು ಸುಮಾರು ೩೦೦ ವರ್ಷಗಳ ಕಾಲ ಆಳ್ವಿಕೆ ಮಾಡಿದವು. ಈ ವಂಶಗಳಲ್ಲಿ ಹರಿಹರ, ಪ್ರೌಢದೇವರಾಯ, ಕೃಷ್ಣದೇವರಾಯರು ಪ್ರಸಿದ್ಧಿ ಅರಸರು.

ಕೋಟೆಯ ಲಕ್ಷಣಗಳು

ಪ್ರಾರಂಭದಲ್ಲಿ ಚಿಕ್ಕದಾಗಿದ್ದ ಪಟ್ಟಣದ ಸುತ್ತಲೂ ಕಟ್ಟಿಸಿದ ಕೋಟೆಯು ಈಗ ಒಳಕೋಟೆಯಾಗಿದೆ. ಈ ಕೋಟೆಯು ಮಹಾನವಮಿ ದಿಬ್ಬವಿರುವ ಅರಮನೆ ಪ್ರದೇಶ, ಹಜಾರ ರಾಮಸ್ವಾಮಿ ದೇವಾಲಯ, ರಾಣಿ ಸ್ನಾನಗೃಹ, ಆನೆಸಾಲಿನ ಹಿಂದಿನ ಜೈನ ದೇವಾಲಯ, ಭೂಮಿಯ ಕೆಳಮಟ್ಟದ ದೇವಾಲಯ ಮುಂತಾದವುಗಳ ಪ್ರದೇಶವನ್ನು ಸುತ್ತುವರೆದಿದೆ. ಈ ಕೋಟೆಯಲ್ಲಿ ಸಿಂಘಾರದ ಹೆಬ್ಬಾಗಿಲು, ಸೋಮವಾರದ ಬಾಗಿಲು, ಗಾಣಿಗಿತ್ತಿ, ಜೈನದೇವಾಲಯದ ಉತ್ತರಕ್ಕಿರುವ ಬಾಗಿಲು, ಭೂಮಿಯ ಕೆಳಮಟ್ಟದ ದೇವಾಲಯದ ಉತ್ತಕ್ಕಿರುವ ಬಾಗಿಲು, ಅದೇ ದೇವಾಲಯದ ಆಗ್ನೇಯ ದಿಕ್ಕಿಗಿರುವ ಹೂವಿನ ಬಾಗಿಲು ಮತ್ತು ಪ್ರತಿಷ್ಠಿತ ವ್ಯಕ್ತಿಗಳ ಅರಮನೆ ಪ್ರದೇಶದ ಉತ್ತರಕ್ಕಿರುವ ಬಾಗಿಲುಗಳಿಗೆ. ಈ ಕೋಟೆಯ ಸುತ್ತು ಬುಕ್ಕನ ಕಾಲದಲ್ಲಿ ನಿರ್ಮಾಣಗೊಂಡಿರುವುದಕ್ಕೆ ಸಿಂಘಾರದ ಹೆಬ್ಬಾಗಿಲನ್ನು ಉಲ್ಲೇಖಿಸುವ ಶಾಸನವು ಪುಷ್ಟಿಕರಿಸುತ್ತದೆ. ಶಾಸನವು ಹೀಗಿದೆ”[3]

ಶ್ರೀ ವೀರ ಬುಕ್ಕರಾಯನ ವಿಜಯ
ನಗರ ಪಟ್ಟಣದ ಮೂಡಣ ಸಿಂ
ಘಾರದ ಹೆಬ್ಬಾಗಿಲ ಬಡಗಣ ಮೂಲೆ
ಯ ಅರೆಯ ಮೇಲಣ ಆನೆಯ ಗೊಂದಿಯ ಕೊತ್ತಣಕ್ಕೆ ಮಂಗಳಮ
ಹಾ ಶ್ರೀ ಶ್ರೀ……….

ಜೈನ ಬಸದಿಯ ಸಮೀಪದ ಸೋಮವಾರ ಬಾಗಿಲಿನ ಉತ್ತರಕ್ಕಿರುವ ಬೆಟ್ಟದ ಮೇಲಿನ ಗುಂಡಿನ ಶಾಸನದಲ್ಲಿ ಬರುವ “ಶ್ರೀ ವೀರಬುಕ್ಕರಾಯನ ವಿಜಯನಗರ ಪಟ್ಟಣದ ಮೂಡಣ ಸೋಮವಾರದ ಬಾಗಿಲ ಬಡಗಣ ಬೆಟ್ಟ ಸೋಮಯ ದೇವರ ಕೊತ್ತಳದ ಎಂಬ ವಿಷಯವು ಈ ಮೇಲಿನ ಅಂಶಕ್ಕೆ ಒತ್ತು ನೀಡುತ್ತದೆ.”[4]

ಸಾಮ್ರಾಜ್ಯ ಬೆಳೆದಂತೆ ರಾಜಧಾನಿಯೂ ಬೆಳೆಯತೊಡಗಿತು. ಬೆಳೆದ ಪಟ್ಟಣದ ಸುತ್ತಲೂ ಎರಡನೆಯ ಸುತ್ತಿನ ಕೋಟೆಯನ್ನು ಕಟ್ಟಲಾಯಿತು. ಈ ಸುತ್ತಿನ ಸ್ವಲ್ಪ ಭಾಗ ಮಾತ್ರ ಆಗ್ನೇಯ ಭಾಗದಲ್ಲಿ ಕಾಣುತ್ತದೆ. ಇದರಲ್ಲಿ ಭೀಮನ ಬಾಗಿಲು ಇರುತ್ತದೆ. ಎರಡನೆಯ ಹರಿಹರನ ಕಾಲದಲ್ಲಿ (ಕ್ರಿ.ಸ. ೧೩೭೭-೧೪೦೪) ಬೆಳೆದ ಪಟ್ಟಣದ ಸುತ್ತ ಮೂರನೆಯ ಕೋಟೆಯನ್ನು ಕಟ್ಟಲಾಯಿತು. ಈ ಕೋಟೆಯ ಸುತ್ತನ್ನು, ಬೇಟೆಕಾರರ ಹೆಬ್ಬಾಗಿಲು ಹಾಗೂ ಹೊದೆಯ ಬಾಗಿಲನ್ನು ಉಲ್ಲೇಖಿಸುವ ಶಾಸನಗಳು ದೃಢೀಕರಿಸುತ್ತವೆ. ಮಾಲ್ಯವಂತ ರಘುನಾಥ ದೇವಾಲಯದ ಆಗ್ನೇಯ ದಿಕ್ಕಿನ ಕಣಿವೆಯಲ್ಲಿರುವ ಬೇಟೆಕಾರರ ಹೆಬ್ಬಾಗಿಲಿನ ಪೂರ್ವಕ್ಕಿರುವ ಗುಂಡಿನ ಮೇಲಿನ ಕ್ರಿ.ಶ. ೧೩೮೦ರ ಶಾಸನದಲ್ಲಿ[5] ಈ ಮೊದಲೇ ಇಲ್ಲಿ ಕೋಟೆ ಇದ್ದುದನ್ನು ಸ್ಪಷ್ಟಪಡಿಸುತ್ತದೆ. ಸುಸ್ಥಿತಿಯಲ್ಲಿರುವ ಈ ಕೋಟೆಯು ಮಾಲ್ಯವಂತ ಪರ್ವತವನ್ನು ಒಳಗೊಂಡ ವಿಶಾಲ ಪ್ರದೇಶವನ್ನು ಸುತ್ತುವರೆದಿದೆ. ಇದರಲ್ಲಿ ಕೋಟಿಶಂಕರ ದೇವರ ಬಾಗಿಲು, ಜಡೆಶಂಕರ ದೇವರ ದಿಡ್ಡಿ, ಹಂಪಾದೇವಿಯ ದಿಡ್ಡಿ, ಹೊದೆಯ ಬಾಗಿಲು, ಅರೆಶಂಕರ ಬಾಗಿಲು ರೆಮ್ಮುದಿಡ್ಡಿ, ಉದಯಗಿರಿ ಬಾಗಿಲು ಮತ್ತು ಗುಮ್ಮಟದ ಹೆಬ್ಬಾಗಿಲುಗಳಿವೆ.

ಎರಡನೆಯ ದೇವರಾಯನ ಕಾಲದಲ್ಲಿ (ಕ್ರಿ.ಸ. ೧೪೨೪-೧೪೪೬) ಪಟ್ಟಣವು ಸಮೃದ್ಧಿಯಿಂದಿ ವಿಜೃಂಭಿಸಿತು. ಆಗಲೇ ರಾಜ್ಯದ ವಿಸ್ತಾರ ಹೆಚ್ಚುತ್ತಾ ಹೋಯಿತು. ಹಾಗಾಗಿ ಇಮ್ಮಡಿ ದೇವರಾಯನು ಕೋಟೆಯ ನಾಲ್ಕನೆಯ ಸುತ್ತನ್ನು ಕಟ್ಟಿಸಿರಬಹುದು.[6] ಇದು ಪ್ರಸ್ತುತ ಆಗ್ನೇಯ ಹಾಗೂ ನೈರುತ್ಯ ಭಾಗಗಳಲ್ಲಿ ಮಾತ್ರ ಉಳಿದುಕೊಂಡಿದೆ. ಇದರೊಳಗೆ ವರದರಾಜಮ್ಮನ ಪಟ್ಟಣವಿತ್ತು. ಈ ಕೋಟೆಯ ಸುತ್ತಿನಲ್ಲಿ ಪೆನುಗೊಂಡ ಬಾಗಿಲು ಇರುವುದನ್ನು ಶಾಸನದಲ್ಲಿ ಕಾಣಬಹುದು.[7]

ಕೋಟೆಯ ಕೊನೆಯ ಸುತ್ತಿನ ಹೊರಗೆ ಇನ್ನೊಂದು ತೆರನಾದ ಸಂರಕ್ಷಣಾ ವ್ಯವಸ್ಥೆ ಇದ್ದುದು ಕ್ರಿ.ಶ. ೧೫೦೨ ರಲ್ಲಿ ವಿಜಯನಗರಕ್ಕೆ ಭೇಟಿ ನೀಡಿದ್ದ ಪೋರ್ಚ್‌‌ಗೀಸ್ ಪ್ರವಾಸಿ ಡಾಮಿನಿಗೊ ಪಾಯಸ್‌ನಿಂದ ತಿಳಿಯುತ್ತದೆ. ಕೆಳಮಟ್ಟದಲ್ಲಿಯ ಭೂಮಿಯಲ್ಲಿ ಎದೆಮಟ್ಟದ ಚೂಪಾದ ಕಲ್ಲುಗಳನ್ನು ನೆಟ್ಟಿದ್ದರು. ಇವು ಗುಡ್ಡ ಪ್ರದೇಶಗಳನ್ನು ತಲುಪುವವರೆಗೆ ಮುಂದುವರೆದಿದ್ದವು. ಇಂತಹ ಕಲ್ಲುಗಳನ್ನು ಕುದುರೆ ಮತ್ತು ಮನುಷ್ಯನ ಚಲನೆಯನ್ನು ತಡೆಯಲು ನೆಟ್ಟಿದುದನ್ನು ಅಬ್ದುಲ್ ರಜಾಕ್ ಸಹ ದಾಖಲಿಸಿದ್ದಾನೆ. ಈ ಕಲ್ಲುಗಳು ಈಗ ಹಂಪಿ ಪರಿಸರದಲ್ಲಿ ಕಾಣದಿದ್ದರೂ ಕಂಪಿಲ, ಕುಮಾರರಾಮರ ಕಮ್ಮಟದುರ್ಗದಲ್ಲಿ ಕಾಣಬಹುದು.

ಕೋಟೆಯ ಕೊನೆಯ ಸುತ್ತು ಕಮಲಾಪುರದ ರಾಯರ ಕೆರೆಯ ಹಿಂಭಾಗದಿಂದ ಸಾಗಿ ಮಲಪನಗುಡಿಯ ಮೂಲಕ ಹೊಸಪೇಟೆಯನ್ನು ಬಳಸಿಕೊಂಡು ಈಗಿನ ತುಂಗಭದ್ರಾ ಆಣೆಕಟ್ಟಿನ ಹಿಂಭಾಗದವರೆಗೂ ವಿಸ್ತಾರಿಸುವುದನ್ನು ಗುರುತಿಸಬಹುದು. ಇದಕ್ಕೆ ಪೂರಕವೆಂಬಂತೆ ಮಲಪನಗುಡಿ ಹಾಗೂ ತುಂಗಭದ್ರಾ ಆಣೆಕಟ್ಟಿನ ಹಿಂಬದಿಯಲ್ಲಿ ಪ್ರವೇಶದ್ವಾರಗಳಿವೆ. ಆಣೆಕಟ್ಟಿನ ಹಿಂಬದಿಯ ದ್ವಾರಕ್ಕೆ ಗೋವಾ ಗೇಟ್ ಎಂದು ಕರೆಯಲಾಗುತ್ತಿದೆ. ಅದು ಇಂದಿಗೂ ಸುಸ್ಥಿತಿಯಲ್ಲಿದೆ. ಪ್ರಾಯಶಃ ವಿಜಯನಗರದಿಂದ ಗೋವಾಕ್ಕೆ ಹೋಗುವವರಿಗೆ ಹಾಗೂ ಬರುವವರಿಗಾಗಿ ಈ ಗೇಟ್ ಬಳಕೆಯಾಗುತ್ತಿದ್ದರಿಂದ ಗೋವಾ ಗೇಟ್ ಎಂದೇ ಖ್ಯಾತಿಯಾಗಿದೆ. ಇದು ಹಂಪಿಯ ಹಿಂಭಾಗದಿಂದ ನಗರಕ್ಕೆ ಪ್ರವೇಶವನ್ನು ಕೊಡುತ್ತಿತ್ತು.

ಸುಮಾರು ಮುನ್ನೂರು ವರ್ಷಗಳ ಕಾಲ ವಿಜೃಂಭಿಸಿದ ವಿಜಯನಗರ ಅವಸಾನ ಹೊಂದುವ ಕಾಲ ಹತ್ತಿರವಾಯಿತು. ಕ್ರಿಶ. ೧೫೬೫ ರಲ್ಲಿ ರಕ್ಕಸತಂಗಡಿಯಲ್ಲಿ ನಡೆದ ನಿರ್ಣಾಯಕ ಕದನದಲ್ಲಿ ವಿಜಯನಗರ ಪರಾಜಯ ಹೊಂದಿತು. ಆಗ ಅಳಿಯ ರಾಮರಾಯ ಹತನಾದ ಉಳಿದ ತಿರುಮಲ ರಾಜಧಾನಿಗೆ ಹಿಂದಿರುಗಿ ರಾಣಿವಾಸದವರನ್ನು ಹಾಗೂ ಬಂಧು ವರ್ಗದವರನ್ನು ಸಾಧ್ಯವಾದಷ್ಟು ಧನಕನಕಗಳನ್ನು ಸಾವಿರಾರು ಆನೆಗಳ ಮೇಲೆ ಹೇರಿಕೊಂಡು ಚಂದ್ರಗಿರಿಗೆ ಹೋದನೆಂದು ಕಂಡುಬರುತ್ತದೆ. ಬೆನ್ನಟ್ಟಿ ಬಂದ ಶತ್ರುಸೇನೆ ರಾಜಧಾನಿಯನ್ನು ಬೆಂಕಿ, ಖಡ್ಗ, ಹಾರೆ ಮತ್ತು ಕೊಡಲಿಗಳಿಂದ ಐದು ತಿಂಗಳು ಕಾಲ ಧ್ವಂಸ ಮಾಡಿ ಹಾಳುಗೆಡುವಿತಂತೆ. ಆಗ ಕೋಟೆಯ ಬಹುತೇಕ ಭಾಗಗಳು ಭಗ್ನಗೊಂಡಿವೆ.

ಸ್ವಾಭಾವಿಕವಾಗಿ ರಾಜಧಾನಿಯನ್ನು ಕಟ್ಟುವಾಗ, ಈ ಸ್ಥಳವನ್ನು ಆಯ್ಕೆ ಮಾಡಲು ರಕ್ಷಣೆ ನೀಡುವ ನದಿ ಮತ್ತು ಗುಡ್ಡಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ. ರಾಜಧಾನಿಯ ಉತ್ತರಕ್ಕೆ ತುಂಗಭದ್ರಾನದಿ ಮತ್ತು ಗುಡ್ಡಗಳ ಸಾಲು ನೈಸರ್ಗಿಕ ರಕ್ಷಣೆಯನ್ನು ನೀಡುತ್ತವೆ. ಪೂರ್ವ ದಿಕ್ಕಿಗೂ ಅನೇಕ ಗುಡ್ಡಗಳ ಸಾಲುಗಳಿವೆ. ಈ ಗುಡ್ಡಗಳ ಮಧ್ಯದಲ್ಲಿ, ಮೇಲೆ ಕೆಲವೆಡೆ ನೆಲಮಟ್ಟದಲ್ಲಿ ಕೋಟೆಯನ್ನು ಕಟ್ಟಲಾಗಿದೆ. ಭದ್ರವಾದ ಕೋಟೆಯು ಅನೇಕ ಸುತ್ತುಗಳಲ್ಲಿದ್ದು, ರಾಜಧಾನಿಯನ್ನು ರಕ್ಷಿಸುತ್ತಿತ್ತು. ಈ ಮೇಲಿನ ಅಂಶಗಳಿಂದ ಇದು ನೆಲ, ಗಿರಿ ಮತ್ತು ಜಲದುರ್ಗದ ಲಕ್ಷಣಗಳನ್ನು ಹೊಂದಿದೆ. ಸಂಪ್ರದಾಯ ಹಾಗೂ ವಿದೇಶಿ ಪ್ರವಾಸಿಗರ ಪ್ರಕಾರ ವಿಜಯನಗರ ಏಳುಸುತ್ತಿನ ಕೋಟೆಯಿಂದ ಸುತ್ತುವರೆಯಲ್ಪಟ್ಟಿತು. ಈಗ ಕೆಲವು ಸುತ್ತುಗಳು ಮಾತ್ರ ಕಾಣುತ್ತವೆ.

ಆಳ್ವೇರಿಗಳು ಬಹಳ ದಪ್ಪವಾಗಿದ್ದು, (ಆಳ್ವೇರಿ ಎಂದರೆ ಕೋಟೆ ಗೋಡೆ) ಹೊರಮೈಗೆ ದಪ್ಪ ಕಲ್ಲುಗಳಿದ್ದು, ಒಳಮೈಗೆ ಮಣ್ಣಿನ ಇಳಿವೊರೆ (ramp) ಇದೆ. ಹೊರಭಾಗದಲ್ಲಿ ದೊಡ್ಡ ಕಲ್ಲುಗಳ ಮಧ್ಯದಲ್ಲಿ ಯಾವುದೇ ಗಾರೆಯನ್ನು ಉಪಯೋಗಿಸದೆ ಒಂದು ಕಲ್ಲು ಮತ್ತೊಂದರ ಜೊತೆಗೆ ಸರಿಯಾಗಿ ಹೊಂದಿಕೊಳ್ಳುವಂತೆ ಸಂದುಗಳಿಲ್ಲದೆ ಕಟ್ಟಲಾಗಿದೆ. ದೊಡ್ಡ ಕಲ್ಲುಗಳನ್ನು ಮೇಲೆಕ್ಕೆತ್ತಲು ಆಗುವ ಭಾರವನ್ನು ಕಡಿಮೆ ಮಾಡುವುದಕ್ಕಾಗಿ ಬೆಣೆಯಾಕಾರದ (wedge-shaped)  ಕಲ್ಲುಗಳನ್ನು ಬಹಳ ಜಾಣ್ಮೆಯಿಂದ ಆಯಾತಾಕಾರದ ಕಲ್ಲುಗಳ ಬದಲಿಗೆ ಉಪಯೋಗಿಸಲಾಗಿದೆ. ಇವುಗಳ ಹೊರಭಾಗ ಅಗಲವಾಗಿದ್ದು, ಒಳಭಾಗವು ಚೂಪಾಗಿರುತ್ತದೆ. ಒಳಭಾಗದಲ್ಲಿ ಕಲ್ಲುಗಳ ಮಧ್ಯದ ಸಂದುಗಳನ್ನು ಸಣ್ಣಕಲ್ಲು ಮತ್ತು ಮಣ್ಣಿನಿಂದ ತುಂಬಲಾಗಿದೆ. ವಿಜಯನಗರದ ಅರಸರ ಈ ತಂತ್ರಜ್ಞಾನದ ಫಲವಾಗಿ ಗಾರೆ, ಸಿಮೆಂಟ್‌ಗಳಿಲ್ಲದೆ ಬೃಹತ್‌ಗಾತ್ರದ ಕೋಟೆಗೋಡೆ ಇಂದಿಗೂ ಉಳಿದಿದೆ. ಕೋಟೆಗೋಡೆಯ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ಅಲ್ಲಲ್ಲಿ ಚೌಕಾಕಾರದ ಕೊತ್ತಳಗಳನ್ನು ನಿರ್ಮಿಸಲಾಗಿದೆ. ಕೊತ್ತಳಗಳ ಹೊರಗಿನ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸುವ ವೀಕ್ಷಣಾ ಕೇಂದ್ರವಾಗಿದ್ದರಿಂದ ಅದರೊಳಗೆ ಅಂಬುಗುಂಡಿಯಿದ್ದಿರಬೇಕು. ಅಪಾಯಕಾರಿ ವ್ಯಕ್ತಿಗಳನ್ನು ಕಂಡೊಡನೆ ಕೊತ್ತಳದೊಳಗಿಂದಲೇ ಪ್ರಹರಿಸಿ ಬಿಡುತ್ತಿದ್ದರು. ಅಂಬುಗಂಡಿ ಮತ್ತು ಕೊತ್ತಳ ಬೇರೆ ಬೇರೆ ಅಲ್ಲ. ಕೊತ್ತಳದೊಳಗೇ ಅಂಬುಗಂಡಿಯಿರುತ್ತಿತ್ತು. ವಿರಾಜಿತ ಗೊಂಟುಗೊಂಡಿನೊಳ್‌ಬಳಸಿದ ಕೊತ್ತಳಂ ಹರಿಹರನ ವರ್ಣನೆಯಾಗಿದೆ. ಈ ಕೊತ್ತಳಗಳು ಚೌಕಾಕಾರದಲ್ಲಿದ್ದು ಮುಂದೆ ಚಾಚಿಕೊಂಡಿರುವ ಕೋಟೆ ಗೋಡೆಯ ಭಾಗಗಳಗಿವೆ. ಯುದ್ಧದ ಸಮಯದಲ್ಲಿ ಹೆಚ್ಚು ಸೈನಿಕರು ನಿಲ್ಲಲು ಸಹ ಕೊತ್ತಳಗಳು ಉಪಯೋಗವಾಗುತ್ತವೆ. ಕೊತ್ತಳಗಳ ಮೇಲೆ ಕಾವಲಿನವರು ನಿಂತು ಕೋಟೆಯನ್ನು ಸಂರಕ್ಷಿಸುತ್ತಿದ್ದರು. ಇವರಿಗಾಗಿ ನಿರ್ಮಿಸಿದ ಚಿಕ್ಕ ಕಟ್ಟಡಗಳ ಅವಶೇಷಗಳು ಕೆಲವು ಕೊತ್ತಳಗಳ ಮೇಲೆ ಈಗಲೂ ಕಾಣುತ್ತಿವೆ. ಕೋಟೆ ಪಕ್ಕದಲ್ಲಿ ನೈಸರ್ಗಿಕವಾಗಿ ಎತ್ತರದಲ್ಲಿರುವ ಕೆಲವು ಸ್ಥಳಗಳನ್ನು ಸಹ ಕೊತ್ತಳಗಳಂತೆ ಉಪಯೋಗಿಸಲಾಗಿದೆ. ಕೋಟೆಯ ಪಕ್ಕದಲ್ಲಿದ್ದ ಅಗಳು ಎಂದರೆ ಕಂದಕ ಅಥವಾ ತಗ್ಗಾದ ಪ್ರದೇಶ ಕಂದಕಕ್ಕೆ ಅಗಳು, ನಿರ್ಗಾದಿಗೆ ಪರಿಖೆ ಎಂಬ ಪದಗಳನ್ನು ಪರ್ಯಾಯವಾಗಿ ಬಳಸಿದೆ. ಈಗ ಮುಚ್ಚಿಹೋಗಿದೆ.

ಸಾಮಾನ್ಯವಾಗಿ ಬಾಗಿಲುಗಳ ಪಾರ್ಶ್ವದಲ್ಲಿ ಎರಡು ದೊಡ್ಡ ಕೊತ್ತಳಗಳಿವೆ. ಬಾಗಿಲನ ಮೂಲಕ ಅಂಕುಡೊಂಕಾದ ದಾರಿಯಲ್ಲಿ ಒಳಪ್ರವೇಶಿಸಲು ಪ್ರಯತ್ನಿಸುವ ವೈರಿ ಪಡೆಯನ್ನು ಕೋಟೆ ಗೋಡೆಯ ಮತ್ತು ಕೊತ್ತಳಗಳ ಮೇಲೆ ಸಂರಕ್ಷಣೆಗಾಗಿ ನಿಂತ ಸೈನಿಕರು ಸುಲಭವಾಗಿ ಸೆದೆ ಬಡಿಯಲು ಅನುಕೂಲವಾಗುತ್ತಿತ್ತು. ಈ ಬಗ್ಗೆ ಹಾನಗಲ್ಲು, ಲಕ್ಷ್ಮೀಶ್ವರ ಇತ್ಯಾದಿ ಶಾಸನಗಳಲ್ಲಿ ಹಾಗೂ ಮಧ್ಯಕಾಲೀನ ಸಾಹಿತ್ಯ ಕೃತಿಗಳಲ್ಲಿ ಕಾಣಬಹುದು. ಬಾಗಿಲುಗಳಲ್ಲಿ ಕಾವಲುಗಾರರಿರುತ್ತಿದ್ದರು. ಇವರು ಖಡ್ಗ, ದೊಣ್ಣೆ ಮತ್ತು ಚಾವಟಿಗಳನ್ನು ಹಿಡಿದುಕೊಂಡು ನಿಂತಿರುತ್ತಿದ್ದರು. ಇಂತಹ ಕೆಲವು ಶಿಲ್ಪಗಳನ್ನು ಬಾಗಿಲುಗಳ ತೋಳಗಂಬಗಳ ಮೇಲೆ ಕೆತ್ತಲಾಗಿದೆ. ಈ ವಿಶಾಲವಾದ ರಾಜಧಾನಿಯ ರಕ್ಷಣೆಗಾಗಿ ಬಲಾಢ್ಯವಾದ ಕೋಟೆಯನ್ನು ಹಂಪಿಯಲ್ಲಿ ವಿಜಯನಗರದರಸರು ನಿರ್ಮಿಸಿಕೊಂಡಿದ್ದರು. ದೇಶೀಯ ಹಾಗೂ ವಿದೇಶಿಯರ ಸಾಹಿತ್ಯಾಧಾರಗಳಲ್ಲಿ ಹಂಪಿಯು ಏಳುಸುತ್ತಿನ ಕೋಟೆಯನ್ನು ಹೊಂದಿರುವ ಬಗ್ಗೆ ಮಾಹಿತಿಗಳಿವೆ. ಪ್ರಸ್ತುತ ನಮಗೆ ಕಂಡುಬರುವುದು ಹರಕುಮುರುಕು ನಾಲ್ಕು ಸುತ್ತುಗಳು ಮಾತ್ರ.

ಈ ಕೋಟೆಯ ಪ್ರವೇಶಕ್ಕೆ ಯೋಗ್ಯವಾದ ಹಾಗೂ ಕೆಲವು ಸೂಕ್ಷ್ಮ ಸ್ಥಳಗಳನ್ನು ರಕ್ಷಣೆಗೆ ಯೋಗ್ಯ ರೀತಿಯಲ್ಲಿ ಗುರುತಿಸಿ ಪ್ರವೇಶದ್ವಾರಗಳನ್ನು ನಿರ್ಮಿಸಲಾಗಿದೆ. ಪ್ರತಿ ಮನೆಗೂ ಬಾಗಿಲುಗಳು ಇದ್ದಹಾಗೆ ಪ್ರತಿ ಕೋಟೆಗೂ ಪ್ರವೇಶ ದ್ವಾರಗಳಿರುತ್ತವೆ. ಕೋಟೆಗಳಿರುವ ಬಾಗಿಲುಗಳನ್ನು ಹೆಬ್ಬಾಗಿಲು, ಬಾಗಿಲು, ದಿಡ್ಡಿಬಾಗಿಲು ಎಂದು ಹೆಸರಿಸಲಾಗಿದೆ. ಪುಲಿಮೊಗ (ಪುಲಿಮೊಗದ ಬಗ್ಗೆ ಸಾಕಷ್ಟು ಸಾಹಿತ್ಯಿಕ ಆಧಾರಗಳಿವೆ) ಇದು ಕೋಟೆಗೆ ಇರುವ ಹೆಬ್ಬಾಗಿಲನ್ನು ಸೂಚಿಸುತ್ತದೆ. ಹೆಬ್ಬಾಗಿಲು ಐದು ಕೈಗಳ ಉದ್ದ, ಐದು ಕೈಗಳ ಅಗಲ ಮಾಡಬೇಕು. ಕುದುರೆ ಹತ್ತಿ ಬರುವವನ ಮೇಲೆ ಎರಡು ಕೈಗಳ ಉದ್ದ ಪ್ರಮಾಣವಿರುವ ಹಾಗೆ ಕೋಟೆ ದ್ವಾರವನ್ನು ಮಾಡಬೇಕೆಂದು ಈ ಕೆಳಗಿನ ಶ್ಲೋಕ ಹೇಳುತ್ತದೆ.

ಅಶ್ವಾರೂಢ ಸಮಾಯಾತೇತಸೊ ಪರಿತಥೋಭಯಂ
ಹಸ್ತ ಮಾತ್ರ ಪ್ರಾಮಣೇನದ್ವಾರಂ ಕುರ್ಯಾದ್ವಿಚಕ್ಷಣಃ |[8]

ಕೋಟೆಗೆ ಚೋರಕಿಂಡಿಗಳನ್ನು ಜೋಡಿಸಿರುತ್ತಿದ್ದರು, ಪೂರ್ವಾದಿ ದಿಕ್ಕುಗಳಾಗಲಿ ಅಗುಳಿಯ ಬಾಗಿಲವುಳ್ಳ ಕೋಟೆಯನ್ನು ವರ್ಣಿಸುವುದು ಖ್ಯಾತಕವಿಗಳಿಗೂ ಅಸಾಧ್ಯವಾದುದು ಎಂದು ಮೋಹನ ತರಂಗಣಿಯಲ್ಲಿ ವರ್ಣಿತವಾಗಿದೆ.

ಮದಹಸ್ತಿಗಳ ಕೈಯ ನೂಕಿ ಬಂದಿಸುವ ಪೆ
ರ್ಗದ ವಜ್ರಲಾಳ ವಿಂಡಿಗೆಯ
ಅದಟನ ದ್ವಾರಷ್ಟ್ರಕವ ವರ್ಣಿಸುವೊಡೆ
ಪದಕವಿ ಗಳಿ ಗೋಚರವು[9]

ಮಹತ್ವದ ವಿಜಯನಗರದ ರಾಜಧಾನಿ ಹಂಪಿ ಕೋಟೆಯ ದ್ವಾರಬಾಗಿಲು, ವಿಶೇಷಣೆಯ ಉದ್ದೇಶವನ್ನು ಇಲ್ಲಿ ವಿವರಿಸಲಾಗಿದೆ. ಮುಖ್ಯವಾದ ಹಂಪಿಕೋಟೆಯ ಪ್ರವೇಶ ದ್ವಾರಗಳಲ್ಲಿ ಸಿಂಘಾರದ ಹೆಬ್ಬಾಗಿಲು, ಬೇಟೆಕಾರರ ಹೆಬ್ಬಾಗಿಲು, ಗುಮ್ಮಟ್ಟದ ಹೆಬ್ಬಾಗಿಲು, ಕೋಟಿಶಂಕರದೇವರ ಬಾಗಿಲು, ಭೀಮನ ಹೆಬ್ಬಾಗಿಲು, ಸೋಮವಾರದ ಬಾಗಿಲು, ಉದಯಗಿರಿ ಬಾಗಿಲು, ಹರೆಶಂಕರ ಬಾಗಿಲು, ಪೆನುಗೊಂಡಬಾಗಿಲು ೧. ಪೆನುಗೊಂಡೆ ಬಾಗಿಲು, ೨. ಜಡೆಯ ಶಂಕರ ದೇವರದಿಡ್ಡಿ, ಹಂಪಾದೇವಿ ದಿಡ್ಡಿ, ರೆಮ್ಮ ದಿಡ್ಡಿ ಮುಖ್ಯವಾಗಿವೆ.

ಕೋಟೆ ಗೋಡೆಗಳಲ್ಲಿರುವ ಬಾಗಿಲುಗಳು ಒಂದೇ ತೆರನಾಗಿಲ್ಲ. ಪ್ರಾಮುಖ್ಯತೆ ಹಾಗೂ ಗಾತ್ರವನ್ನು ಗಮನದಲ್ಲಿಟ್ಟುಕೊಂಡು ಬಾಗಿಲುಗಳನ್ನು ವಿಜಯನಗರದವರು, ಹೆಬ್ಬಾಗಿಲು, ಬಾಗಿಲು ಮತ್ತು ದಿಡ್ಡಿಗಳೆಂದು ವಿಂಗಡಿಸಿದ್ದುದು ಅಲ್ಲಿನ ಶಾಸನಗಳಿಂದ ತಿಳಿದುಬರುತ್ತದೆ.

ಹೆಬ್ಬಾಗಿಲುಗಳು ಅತಿದೊಡ್ಡವು ಇವುಗಳನ್ನು ಮುಖ್ಯಪ್ರವೇಶ ದ್ವಾರಗಳಾಗಿ ಉಪಯೋಗಿಸುತ್ತಿದ್ದರು. ಬಾಗಿಲುಗಳ ಮಧ್ಯಮಗಾತ್ರದವು ದಿಡ್ಡಿಗಳು ಚಿಕ್ಕ ಬಾಗಿಲುಗಳಾಗಿದ್ದು ಜನರು ತಮ್ಮ ದಿನನಿತ್ಯದ ಕೆಲಸಗಳಿಗಾಗಿ ಪಟ್ಟಣದ ಎಲ್ಲಾ ದಿಕ್ಕಿಗೂ ಸುಲಭವಾಗಿ ಹೋಗಲು ಅನುಕೂಲವಾಗುವಂತೆ ನಿರ್ಮಿಸಲ್ಪಟ್ಟಿದೆ. ವಿನ್ಯಾಸವನ್ನು ಯುದ್ಧ ತಂತ್ರದ ದೃಷ್ಟಿಯಿಂದ ಬಹಳ ಎಚ್ಚರಿಕೆಯಿಂದ ಮಾಡಲಾಗಿದೆ. ಕೋಟೆಯೊಳಗೆ ನೇರವಾದ ಪ್ರವೇಶವನ್ನು ಇವು ನೀಡುವುದಿಲ್ಲ. ದೂರದಿಂದ ನೋಡಿದಾಗ ಪ್ರವೇಶ ದ್ವಾರವೇ ಕಾಣುವುದಿಲ್ಲ. ಪ್ರವೇಶದ್ವಾರದ ಎರಡೂ ಪಾರ್ಶ್ವದಲ್ಲಿ ಮತ್ತು ಮುಂಭಾಗದಲ್ಲಿ ಅದೇ ರೀತಿಯ ತೆರೆಯ ಗೋಡೆಗಳನ್ನು ಕಟ್ಟಿ ಅದನ್ನು ಮರೆಮಾಡಿ ಗೋಡೆಯಲ್ಲಿ ಎರಡನೆಯ ಪ್ರವೇಶದ್ವಾರವನ್ನು ಕಲ್ಪಿಸಲಾಗಿದೆ. ಹೀಗಾಗಿ ಒಳಗೆ ಬರುವ ದಾರಿ ಅಂಕುಡೊಂಕಾಗಿರುವುದು. ಸಾಮಾನ್ಯವಾಗಿ ಬಾಗಿಲುಗಳ ಪಾರ್ಶ್ವದಲ್ಲಿ ಎರಡು ದೊಡ್ಡ ಕೊತ್ತಳಗಳಿವೆ. ಬಾಗಿಲಿನ ಮೂಲಕ ಅಂಕುಡೊಂಕಾದ ದಾರಿಯಲ್ಲಿ ಒಳ ಪ್ರವೇಶಿಸಲು ಪ್ರಯತ್ನಿಸುವ ವೈರಿ ಸೈನ್ಯವನ್ನು ಕೋಟೆ ಗೋಡೆಯ ಮತ್ತು ಕೊತ್ತಳಗಳ ಮೇಲೆ ಸಂರಕ್ಷಣೆಗಾಗಿ ನಿಂತ ಸೈನಿಕರು ಸುಲಭವಾಗಿ ಸದೆ ಬಡಿಯಲು ಅನುಕೂಲವಾಗುತ್ತಿತ್ತು. ಬಾಗಿಲುಗಳಲ್ಲಿ ಕಾವಲುಗಾರರಿರುತ್ತಿದ್ದರು. ಇವರು ಖಡ್ಗ, ದೊಣ್ಣೆ ಮತ್ತು ಚಾವಟಿಗಳನ್ನು ಹಿಡಿದುಕೊಂಡು ನಿಂತಿರುತ್ತಿದ್ದರು. ಇಂತಹ ಕೆಲವು ಶಿಲ್ಪಗಳನ್ನು ಬಾಗಿಲುಗಳ ತೋಳಗಂಬಗಳ ಮೇಲೆ ಕೆತ್ತಲಾಗಿದೆ.

ಪ್ರವೇಶದ್ವಾರಗಳನ್ನು ಕಂಬ ಮತ್ತು ತೊಲೆಗಳಿಂದ, ಇಟ್ಟಿಗೆ, ಗಾರೆ, ಬಳಸದೆ, ಹಿಂದೂ ಶೈಲಿಯಲ್ಲಿ ಕಟ್ಟಲಾಗಿದೆ. ಬಾಗಿಲು ತೋಳುಗಳು ಮೇಲೆ ದ್ವಾರಪಾಲಕರು ಮತ್ತು ಆಲಂಕಾರಕ ಶಾಖೆಗಳನ್ನು ಕೆತ್ತಿದೆ. ಪ್ರವೇಶಕ್ಕಿಂತ ಮೊದಲು ದೊಡ್ಡ ಆವರಣವಿದೆ. ಪ್ರವೇಶದ ಇಕ್ಕೆಲಗಳಲ್ಲಿ ಕಂಬಗಳ ಅಂಕಣಗಳುಳ್ಳ ಕಟ್ಟೆಗಳಿವೆ. ಸೈನಿಕರು ಮತ್ತು ಪ್ರವಾಸಿಗರು ವಿಶ್ರಾಂತಿ ಪಡೆಯಲು ಇವು ಅನುಕೂಲವಾಗಿವೆ. ಮುಖ್ಯ ಪ್ರವೇಶದ ಕದಗಳನ್ನು ಹಾಕಿದಾಗ ದಾರಿಯನ್ನು ಪಕ್ಕದಲ್ಲಿ ಇಂಗ್ಲಿಷ್‌ನ U – ಆಕಾರದ ಉಪ ಪ್ರವೇಶಗಳನ್ನು ಒದಗಿಸಿವೆ. ಕೆಲವು ಪ್ರವೇಶ ದ್ವಾರಗಳ ರಚನೆಯಲ್ಲಿ ಮುಸ್ಲಿಂ ವಾಸ್ತುವಿನ ಪ್ರಭಾವವು ಕಾಣುತ್ತದೆ. ಗುಮ್ಮಟದ ಬಾಗಿಲೆಂದೆ ಕರೆಯುವ ಪ್ರವೇಶದ್ವಾರದ ಮೇಲಿನ ಗುಮಟ್ಟದ ಮತ್ತು ಬೇಟೆಕಾರರ ಹೆಬ್ಬಾಗಿಲುಮತ್ತು ಅರೆಶಂಕರ ಬಾಗಿಲುಗಳ ಮೇಲಿನ ಕಮಾನುಗಳು ಮುಸ್ಲಿಂ ಶೈಲಿಯಲ್ಲಿವೆ. ಕೆಲವು ಬಾಗಿಲುಗಳ ಗೋಡೆಗಳನ್ನು ಶಿಲ್ಪಗಳಿಂದ ಅಲಂಕರಿಸಿದೆ. ಹಾಗೂ ಕೆಲವು ಬಾಗಿಲುಗಳ ಆವರಣದಲ್ಲಿ ದೇವಾಲಯಗಳಿವೆ.

ವಿಜಯನಗರದ ಕೋಟೆಯು ಬಹುದೊಡ್ಡದಿದೆ. ಇದರ ಭಾಗಗಳನ್ನು ವೇಗವಾಗಿ ಪತ್ತೆ ಹಚ್ಚುವುದು ಯುದ್ಧ ಸಮಯದಲ್ಲಿ ಅತ್ಯವಶ್ಯಕವಾಗುತ್ತದೆ. ಕೋಟೆಯ ಯಾವುದಾದರೊಂದು ಭಾಗಕ್ಕೆ ಸೈನಿಕರನ್ನು ಕಳುಹಿಸುವಾಗ ಅವರು ಯಾವುದೇ ಗೊಂದಲಕ್ಕೊಳಪಡದೆ ನೇರವಾಗಿ ವೇಗದಲ್ಲಿ ಹೋಗಿ ಆ ಭಾಗವನ್ನು ಸೇರುವಂತೆ ಕೋಟೆಯ ವಿವಿಧ ಭಾಗಗಳಿಗೆ ಹೆಸರುಗಳನ್ನು ಕೊಟ್ಟು ಗುರುತಿಸುವುದು ಅತಿಮುಖ್ಯವಾದ ವಿಷಯ. ಹಂಪಿ ಕೋಟೆಯಲ್ಲಿ ಇಂತಹ ವ್ಯವಸ್ಥೆ ಇದ್ದುದು ಇತ್ತೀಚೆಗಷ್ಟೆ ಪತ್ತೆ ಮಾಡಿ ಹೊರತಂದ ಹಲವಾರು ಶಾಸನಗಳಿಂದ ಬೆಳಕಿಗೆ ಬಂದಿದೆ. ಕೋಟೆಯ ಬಾಗಿಲುಗಳಿಗೆ ಹಾಗೂ ಕೊತ್ತಳಗಳಿಗೆ ಹೆಸರುಗಳನ್ನಿಟ್ಟು ಅವುಗಳನ್ನು ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಮಾಡಲಾಗಿದೆ. ಶಾಸನ ಮತ್ತು ಇತರೆ ಆಧಾರದ ಮೇಲೆ ಇದುವರೆಗೆ ಪತ್ತೆ ಹಚ್ಚಿದ ಬಾಗಿಲು ಹಾಗೂ ಕೊತ್ತಳಗಳ ವಿವರಗಳನ್ನು ಕೆಳಗೆ ನೀಡಲಾಗಿದೆ.

ಸಿಂಘಾರದ ಹೆಬ್ಬಾಗಿಲು

ರಾಜಧಾನಿ ಸಿಂಘಾಪುರಕ್ಕೆ ಈ ಹೆಬ್ಬಾಗಿಲು ಪ್ರವೇಶ ನೀಡುವುದರಿಂದ ಇದನ್ನು ಸಿಂಘಾರದ ಹೆಬ್ಬಾಗಿಲೆಂದು ಕರೆಯಲಾಗಿದೆ. ಹಿಂಭಾಗದಲ್ಲಿ ಈ ಹೆಬ್ಬಾಗಿಲು ಬರುತ್ತದೆ. ಇದರ ಉಲ್ಲೇಖವು ಸಿಂಘಾರದ ಹೆಬ್ಬಾಗಿಲಿನ ಉತ್ತರಕ್ಕಿರುವ ಚಿಕ್ಕ ಬೆಟ್ಟವೊಂದರ ಬಂಡೆಯ ಮೇಲಿರುವ ಶಾಸನಗಳಲ್ಲಿ ಬರುತ್ತದೆ.[10] ದೂರದಿಂದ ನೋಡಿದಾಗ ಈ ಹೆಬ್ಬಾಗಿಲು ಕಾಣುವುದಿಲ್ಲ. ಪ್ರವೇಶ ದ್ವಾರದ ಎರಡೂ ಬದಿಗೆ ಬಲಿಷ್ಠವಾದ ಗೋಡೆಗಳಿವೆ. ಮುಂಭಾಗದಲ್ಲಿಯೂ ಇದೇ ರೀತಿಯ ಗೋಡೆಗಳಿವೆ. ಹಾಗಾಗಿ ಒಳಗೆ ಬರುವ ದಾರಿಯು ಅಂಕುಡೊಂಕಾಗುವುದು. ಮಧ್ಯದಲ್ಲಿ ವಿಶಾಲವಾದ ಆವರಣವಿದೆ. ಈ ಆವರಣದ ಎಡಭಾಗದ ವೇದಿಕೆಯ ಮೇಲೆ ವೈಷ್ಣವ ದೇವಾಲಯವಿದೆ. ಉತ್ತರಾಭಿಮುಖವಾಗಿರುವ ಈ ದೇವಾಲಯದಲ್ಲಿ ಗರ್ಭಗೃಹ, ಸಭಾಮಂಟಪಗಳಿವೆ. ಗರ್ಭಗೃಹದಲ್ಲಿ ಯಾವುದೇ ಶಿಲ್ಪಗಳಿಲ್ಲ. ಪ್ರವೇಶದ್ವಾರದ ಎರಡೂ ಬದಿಗೆ ಬಾಗಿಲು ತೋಳುಗಳಲ್ಲಿ ವೈಷ್ಣವ ದ್ವಾರಪಾಲಕರ ಉಬ್ಬು ಶಿಲ್ಪಗಳಿವೆ. ಸಭಾಮಂಟಪದಲ್ಲಿರುವ ನಾಲ್ಕು ಕಂಬದಲ್ಲಿ ಯಾಳಿ, ಆಂಜನೇಯ ಇತ್ಯಾದಿ ಉಬ್ಬುಗೆತ್ತನೆಗಳಿವೆ. ಆವರಣದ ಪಶ್ಚಿಮದ ಗೋಡೆಯಲ್ಲಿ ಗಣೇಶ, ಸಿಂಗಾರ ಮಾಡಿಕೊಳ್ಳುವ ಸ್ತ್ರೀ, ನಂದಿ, ಆನೆ, ವೀರರ ಉಬ್ಬುಶಿಲ್ಪಗಳಿವೆ. ಬಾಗಿಲು ತೋಳುಗಳಲ್ಲಿ ಎರಡೂಬದಿಗೆ ದ್ವಾರಪಾಲಕರ ಉಬ್ಬುಶಿಲ್ಪಗಳಿವೆ. ಪ್ರವೇಶದ್ವಾರದ ಉಪಬಾಗಿಲನ್ನು ನಿರ್ಮಿಸಲಾಗಿದೆ. ಈ ದ್ವಾರದ ಮೂಲಕ ಪಶ್ಚಿಮಕ್ಕೆ ಸಾಗಿದರೆ ಸಿಂಘಾರಪುರ ಪ್ರವೇಶ ಸಿಗುವುದು. ಸಿಂಘಾರಪುರದ ಉಲ್ಲೇಖ ಬರುವ ಶಾಸನವು ವಿಠ್ಠಲಸ್ವಾಮಿ ದೇವಾಲಯದ ಮುಂದಿರುವ ಮಂಟಪದ ದಕ್ಷಿಣ ಗೋಡೆಯಲ್ಲಿದೆ.[11]

ಬೇಟೆಕಾರರ ಹೆಬ್ಬಾಗಿಲು

ವಿಜಯನಗರ ಕಾಲದಲ್ಲಿ ಬೇಟೆಗೆ ಪ್ರಧಾನ ಪಾತ್ರವಿತ್ತು. ಅಂತೆಯೇ ಅರಸರು ತಮ್ಮ ಮನೋರಂಜನೆಗಾಗಿ ಬೇಟೆಯಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಅಡವಿಯಲ್ಲಿ ಬೇಟೆಯಾಡಿ ಈ ದ್ವಾರದ ಮೂಲಕ ನಗರದೊಳಕ್ಕೆ ಪ್ರವೇಶ ಮಾಡಲಾಗುತ್ತಿತ್ತು. ಹಾಗಾಗಿ ಇದನ್ನು ಬೇಟೆಕಾರರ ಹೆಬ್ಬಾಗಿಲೆಂದು ಕರೆಯಲಾಗಿದೆ. ಮಾಲ್ಯವಂತ ರಘುನಾಥ ದೇವಾಲಯದ ಆಗ್ನೇಯ ದಿಕ್ಕಿಗೆ ಬೇಟೆಕಾರರ ಹೆಬ್ಬಾಗಿಲು ಕಂಡುಬರುತ್ತದೆ. ಹೆಬ್ಬಾಗಿಲಿನ ಪೂರ್ವಕ್ಕಿರುವ ಕಲ್ಲು ಗುಂಡಿನ ಮೇಲಿರುವ ಶಾಸನವು ಈ ಕೆಳಗಿನಂತಿದೆ.

ಶ್ರೀ ಶಕ ವರುಷ ೧೩೧೨ರ ಉದ್ರಿ ಸಂವತ್ಸರದ ಆಶ್ವೀಜ ಸು ರಾ ಗು
ಶ್ರೀ ಮನ್ಮಹಾರಾಹಾಧಿರಾಜ
ರಾಜ ಪರಮೇಶ್ವರ ಶ್ರೀವೀರ ಪ್ರತಾಪ ಹರಿಹರ ಮಹಾರಾಯರರಮ
ನೆಯ ಎಡವಂಕದ ಬೇಟೆಕಾರ ಮಲಗೆಯ ನಾಯ್ಕನ ಮಗ ಬಥ್ಥೆಯನಾಯ್ಕ
ನು ‘ಬೇಟೆಕಾರರ ಹೆಬ್ಬಾಗಿಲ’ ಮೂಡಣ ದಿಕ್ಕಿನ ಒರತೆಯ ಮೈಲಾರದೇವರ ಪು
ತಿಷ್ಟೆ ಅಗ್ನಿ ದಿಸೆಯ ಆಲದ ಅರವೆ ಆ ದೇವರ ಹಿಂದಣ ವಾಯುವ್ಯದ ದಿಕ್ಕಿ[12]
ನ ಒರತೆಯ್ವ್ಯ ಕೊಂಡವನು ಮಾಡಿದನು ಮಂಗಳ ಮಹಾ ಶ್ರೀ ಶ್ರೀ ಶ್ರೀ

ಈ ಶಾಸನವು ಭೇಟೆಕಾರರ ಹೆಬ್ಬಾಗಿಲಿನ ಪರಿಚಯವನ್ನು ಸ್ಪಷ್ಟವಾಗಿ ಮಾಡಿಕೊಡುತ್ತದೆ. ಈ ಹೆಬ್ಬಾಗಿಲು ಸಿಂಘಾರದ ಹೆಬ್ಬಾಗಿಲಿನಂತೆ ಪ್ರಧಾನವಾದ ಮಹಾದ್ವಾರವೆನಿಸಿದೆ. ಸಿಂಘಾರದ ಹೆಬ್ಬಾಗಿಲು ೩ನೇ ಹಂತಕ್ಕೆ ಪೂರ್ವದಿಂದಲೇ ನಗರಕ್ಕೆ ಪ್ರವೇಶಕೊಟ್ಟರೆ, ಹೊರ ಕೋಟೆಯ ಬೇಟೆಕಾರರ ಹೆಬ್ಬಾಗಿಲು ಮೊದಲಿಗೆ ಪೂರ್ವದಿಂದಲೇ ನಗರಕ್ಕೆ ಪ್ರವೇಶವನ್ನು ಕೊಡುತ್ತದೆ. ಇದರ ಸುತ್ತಲೂ ಬೆಟ್ಟ, ಗುಡ್ಡ ಮತ್ತು ಕಾಡು ಆವರಿಸಿದೆ. ಎರಡೂ ಬೆಟ್ಟಗಳ ಸಂಧುಗಳ ಕಣಿವೆ ಉಪಯೋಗಿಸಿ ಬಹು ಜಾಣ್ಮೆಯಿಂದ ಈ ಹೆಬ್ಬಾಗಿಲನ್ನು ಕಟ್ಟಲಾಗಿದೆ. ದೂರದಿಂದ ನೋಡಲು ಕಾಣದಂತೆ ಗೋಡೆಗಳ ಮರೆಯಲ್ಲಿದೆ. ಪ್ರವೇಶದ್ವಾರದ ಪಾರ್ಶ್ವದಲ್ಲಿರುವ ಗೋಡೆಗಳು ವಿಶಾಲ ಆವರಣವನ್ನು ನಿರ್ಮಿಸಿ ಮುಂದೆ ಹಾಗೆಯೇ ಗೋಡೆಗಳನ್ನು ಉತ್ತರಕ್ಕೆ ತಿರುಗಿಸಲಾಗಿದೆ. ಮಧ್ಯದಲ್ಲಿರುವ ವಿಶಾಲವಾದ ಆವರನದಲ್ಲಿ ದಕ್ಷಿಣಾಭಿಮುಖವಾದ ದೇಗುಲವಿದೆ. ಇದು ಗರ್ಭಗೃಹ ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಯಾವುದೇ ಮೂರ್ತಿಗಳಿಲ್ಲ. ಸಭಾಮಂಟಪದಲ್ಲಿ ಆಂಜನೇಯನ ಶಿಲ್ಪವನ್ನು ಪ್ರತಿಷ್ಠಾಪಿಸಲಾಗಿದೆ. ಗರ್ಭಗೃಹದ ಮೇಲೆ ದ್ರಾವಿಡ ಶೈಲಿಯ ಶಿಖರವಿದೆ. ಸಭಾಮಂಟಪದ ಮೇಲೆ ಕೈಪಿಡಿ, ಗೋಡೆಯಲ್ಲಿ ದೇವ ಕೋಷ್ಠಕಗಳಿವೆ.

ಬೇಟಕಾರರ ಹೆಬ್ಬಾಗಿಲು ಪೂರ್ಣವಾಗಿ ಗೋಚರಿಸದಿದ್ದರೂ ಇಟ್ಟಿಗೆ ಗಾರೆ ಕಲ್ಲಿನ ಅವಶೇಷಗಳು ವ್ಯಾಪಕವಾಗಿ ಕಂಡುಬರುತ್ತವೆ. ಬೇಟೆಕಾರರಿಗೆ ಪ್ರತ್ಯೇಕ ಹೆಬ್ಬಾಗಿಲನ್ನು ನಿರ್ಮಿಸಿರುವ ವಿಜಯನಗರದರಸನು ಬೇಟೆಗೆ ಬಹು ಪ್ರಾಮುಖ್ಯತೆಯನ್ನು ನೀಡಿದ್ದರು. ಅಂತೆಯೇ ವಿದೇಶಿ ಯಾತ್ರಿಕರಾದ ಅಬ್ದುಲ್ ರಜಾಕ್ ನ್ಯೂನಿಜ್ ಮತ್ತು ಬಾರ್ಬೋಸರು ಬೇಟೆ ಸಂದರ್ಭಗಳನ್ನು ವಿಸ್ತೃತವಾಗಿ ಹೇಳಿದ್ದಾರೆ.[13]

ಗುಮ್ಮಟದ ಬಾಗಿಲು

ಕಮಲಾಪುರದ ಈಶಾನ್ಯದಿಕ್ಕಿಗೆ ಸುಮಾರು ೧ ಕಿ.ಮೀ. ದೂರದಲ್ಲಿ ಹೆಚ್.ಪಿ.ಸಿ.ಯ ಬಳಿ ಈ ಗುಮ್ಮಟದ ಬಾಗಿಲಿದೆ. ಗುಮ್ಮಟದಂತಿರುವುದರಿಂದ ಇದನ್ನು ಗುಮ್ಮಟದ ಬಾಗಿಲೆಂದು ಗುರುತಿಸುತ್ತಾರೆ. ಬೃಹದಾಕಾರದ ಆಗೂ ಸುಸ್ಥಿತಿಯಲ್ಲಿರುವ ಹೆಬ್ಬಾಗಿಲುಗಳನ್ನು ಇದು ಒಂದು. ಪೆನುಗೋಡದಿಂದ ಬರುವವರು ಮೊದಲು ಪೆನುಗೊಂಡೆ ಬಾಗಿಲನ್ನು ಬಳಸಿಕೊಂಡು ಗುಮ್ಮಟ ಹಾಗೂ ಭೀಮನ ಹೆಬ್ಬಾಗಿಲುಗಳ ಮೂಲಕ ನಗರ ಪ್ರವೇಶ ಮಾಡುತ್ತಿದ್ದರು. ಹಿಂದೂ ಮುಸ್ಲಿಮ್ ಶೈಲಿಯಲ್ಲಿ ನಿರ್ಮಾಣವಾಗಿರುವ ಸ್ಮಾರಕಗಳಲ್ಲಿ ಗುಮ್ಮಟದ ಬಾಗಿಲು ಒಂದು.

ಪ್ರವೇಶ ದ್ವಾರದ ಮುಂಭಾಗಕ್ಕೆ ೨೦ ಅಡಿ ಅಗಲ ಅಂತರದಲ್ಲಿ ಅಭಿಮುಖವಾದ ಎರಡು ಗೋಡೆಗಳು ದಕ್ಷಿಣಕ್ಕೆ ಮುಂಚಾಚಿವೆ. ಇವುಗಳ ಮುಂದಿರುವುದೇ ವಿಶಾಲವಾದ ಆವರಣ. ಈ ಆವರಣದ ಪಶ್ಚಿಮ ಗೋಡೆಯಲ್ಲಿ ಉಪಬಾಗಿಲನ್ನು ಜೋಡಿಸಲಾಗಿದೆ. ಈ ಆವರಣವನ್ನು ಸುತ್ತುವರೆದಿರುವ ಗೋಡೆಯು ಪೂರ್ವದಿಕ್ಕಿಗೆ ಸುಮಾರು ೧೦೦ ಅಡಿಗಳಷ್ಟು ಉದ್ದವಾಗಿದೆ. ಇದಕ್ಕೆ ಅಭಿಮುಖವಾದ ಇನ್ನೊಂದು ಗೋಡೆ ಇದೆ. ಇದರಲ್ಲಿ ಮೀನು ಮೊಸಳೆ ಉಬ್ಬುಗೆತ್ತನೆಗಳಿವೆ.

ಇದಕ್ಕೆ ಹೊಂದುಕೊಂಡು ಆಂಜನೇಯ ಗುಡಿಯನ್ನು ನಿರ್ಮಿಸಲಾಗಿದೆ. ಇದು ಗರ್ಭಗೃಹ ಮಾತ್ರ ಹೊಂದಿದ್ದು ಅದರಲ್ಲಿ ಸುಮಾರು ಆರು ಅಡಿ ಎತ್ತರದ ಆಂಜನೇಯನ ಉಬ್ಬುಶಿಲ್ಪವಿದೆ. ಈ ಗುಡಿಯ ಎದುರಿನ ಗೋಡೆಯಲ್ಲಿ ಇಮ್ಮಡಿ ದೇವರಾಯನನ್ನು ಪ್ರತಿನಿಧಿಸುವ ಉಬ್ಬುಶಿಲ್ಪವಿದೆ.[14] ಇಲ್ಲಿ ದೊರೆಯು ವಿಜಯನಗರ ಕಾಲದ ಸಾಂಪ್ರದಾಯಿಕ ಉಡುಗೆಯಲ್ಲಿ ಅಂಜಲಿ ಬದ್ಧನಾಗಿ ಶಿವಲಿಂಗ ಎದುರು ನಿಂತಿದ್ದಾನೆ. ಇವೆರಡು ಶಿಲ್ಪಗಳ ನಡುವೆ ನಂದಿ ವಿಗ್ರಹವಿದೆ. ಪೂರ್ವದಿಂದ ಈ ಬಾಗಲಿನೊಳಗೆ ಮೊದಲು ಪ್ರವೇಶ ಮಾಡುವಾಗ ಇಕ್ಕೆಲಗಳಲ್ಲಿ ಬೃಹದಾಕಾರದ ಗೋಡೆಗಳಿವೆ. ಈ ಗೋಡೆಗಳಲ್ಲಿ ಮೀನು, ವಿಜಯನಗರ ಲಾಂಛನವಾದ ವರಾಹದ ಉಬ್ಬುಗೆತ್ತನೆಗಳಿವೆ. ಈ ಪ್ರದೇಶದ ಮೇಲೆ ಕಮಾನಿನಾಕಾರದ ಗುಮ್ಮಟವಿದೆ. ಇದು ಮೂರು ಸ್ತರಗಳಲ್ಲಿದ್ದು, ಪ್ರಥಮ ಹಂತದಲ್ಲಿ ನಾಲ್ಕು ದಿಕ್ಕುಗಳಿಗೆ ಕಮಾನುಗಳಿವೆ. ಇದರ ಮೇಲೆ ಅಡ್ಡಪಟ್ಟಿಕೆ ಹಾಕಲಾಗಿದೆ. ಎರಡನೆಯ ಹಂತದಲ್ಲಿ ವೃತ್ತಾಕಾರದ ಗುಮ್ಮಟವಿದೆ. ಗೋಡೆಗೆ ಹಾಗೂ ಬಾಗಿಲಿನ ಪ್ರಥಮ ಹಂತಕ್ಕೆ ಮಧ್ಯಮ ಹಂತಕ್ಕೆ ಮಧ್ಯಮ ಗಾತ್ರದ ಕಲ್ಲು ಹಾಗೂ ಗಾರೆಯನ್ನು ಬಳಸಲಾಗಿದೆ. ಕಮಾನಿನ ಎರಡು ಮತ್ತು ಮೂರನೆಯ ಹಂತದಲ್ಲಿ ಇಟ್ಟಿಗೆ ಗಾರೆಯನ್ನು ಬಳಕೆ ಮಾಡಿದ್ದಾರೆ.

ಭೀಮನ ಹೆಬ್ಬಾಗಿಲು

ಕಮಲಾಪುರದಿಂದ ಕಂಪ್ಲಿಗೆ ಹೋಗುವ ರಸ್ತೆ ಬದಿಯಲ್ಲಿ ಬರುವ ಗಾಣಗಿತ್ತಿ ದೇವಾಲಯದ ಆಗ್ನೇಯ ದಿಕ್ಕಿಗೆ ಈ ಹೆಬ್ಬಾಗಿಲಿದೆ. ಸುಸ್ಥಿತಿಯಲ್ಲಿರುವ ಬೃಹದಾಕಾರದ ಬಾಗಿಲುಗಳಲ್ಲಿ ಇದು ಒಂದು. ಇದರ ಆಕಾರದ ಕಾರಣದಿಂದಾಗಿಯೇ ಇದಕ್ಕೆ ಭೀಮನ ಹೆಬ್ಬಾಗಿಲೆಂದು ಹೆಸರು ಬಂದಿರಬಹುದು. ಈ ಬಾಗಿಲು ಸುಮಾರು ೨೦ ಅಡಿ ಎತ್ತರ ಹಾಗೂ ೧೫ ಅಡಿ ಅಗಲವಾಗಿದೆ. ಇಳಿಬಿದ್ದ ಪದ್ಮದ ಮೊಗ್ಗುಗಳಿವೆ. ಹೆಬ್ಬಾಗಿಲ ಮುಂಭಾಗದಲ್ಲಿ ವಿಶಾಲವಾದ ಆವರಣವಿದೆ. ಇದು ದಕ್ಷಿಣಕ್ಕೆ ಹೆಚ್ಚು ವಿಸ್ತರಿಸಿದೆ. ಇಲ್ಲಿ ಸುಮಾರು ೮ ಅಡಿ ಎತ್ತರದ ಭೀಮನ ಬಿಡಿ ಶಿಲ್ಪ ಹಾಗೂ ಶಾಸನಗಳಿವೆ. ಹತ್ತಿರದ ಗೋಡೆಯಲ್ಲಿ ಭೀಮನು ಕೀಚಕನನ್ನು ಸಂಹಾರ ಮಾಡುವ ದೃಶ್ಯವನ್ನು ಕೆತ್ತಲಾಗಿದೆ. ಮಹಾಭಾರತಕ್ಕೆ ಸಂಬಂಧಿಸಿದ ಚಿತ್ರಗಳು ಕಂಡುಬರುವುದು ಈ ಹೆಬ್ಬಾಗಿಲಿನ ವಿಶೇಷತೆ. ದಕ್ಷಿಣದ ಗೋಡೆಗೆ ಹೊಂದಿಕೊಂಡು ಉತ್ತರಾಭಿಮುಖವಾಗಿರುವ ಮೂರು ಗರ್ಭಗೃಹಗಳಿವೆ. ಇವುಗಳಲ್ಲಿ ಯಾವುದೇ ಮೂರ್ತಿಶಿಲ್ಪಗಳಿಲ್ಲ. ಪ್ರವೇಶದ ಇಕ್ಕೆಲದ ತೋಳುಗಳಲ್ಲಿ ವೈಷ್ಣವ ದ್ವಾರಪಾಲಕರ ಉಬ್ಬುಗೆತ್ತನೆಗಳಿವೆ. ಇದೇ ಗೋಡೆ ಉಪಬಾಗಿಲನ್ನು ತೆರೆಯಲಾಗಿದೆ. ಈ ಭೀಮನ ಹೆಬ್ಬಾಗಿಲಿಗೆ ಪ್ರವೇಶ ಮಾಡಲು ಮೊದಲು ಉತ್ತರದಿಂದ ದಕ್ಷಿಣಕ್ಕೆ ಬಂದು ಅಲ್ಲಿಂದ ಪಶ್ಚಿಮಕ್ಕೆ ತಿರುಗಿ ಪೂರ್ವದಿಂದ ಮುಖ್ಯ ಪ್ರವೇಶದ್ವಾರಕ್ಕೆ ಪ್ರವೇಶಿಸಬೇಕಾಗುತ್ತದೆ.

ಸೋಮವಾರದ ಬಾಗಿಲು

ವಿಜಯನಗರದಲ್ಲಿ ಕೃಷಿ ಪ್ರಧಾನ ಸಂಸ್ಕೃತಿ ಇತ್ತು. ಕೃಷಿಕರಿಗೆ ಸೋಮವಾರ ಬಿಡುವಿನ ದಿನ. ಅಂದು ಬೇಸಾಯಕ್ಕೆ, ದನಗಳನ್ನು ಬಳಸುತ್ತಿರಲಿಲ್ಲ. ಆ ಸಂಸ್ಕೃತಿ ಇಂದಿಗೂ ಇದೆ. ಈ ಬಾಗಿಲಿನ ಸುತ್ತಮುತ್ತಲು ವಿಶಾಲವಾದ ಬಯಲು ಜಾಗವಿದೆ. ಇಲ್ಲಿಯೇ ಬೇಸಾಯದ ಹೊಲಗಳು, ತೋಟಗಳು ಇದ್ದವೆಂದು ಅಬ್ದುಲ್ ರಜಾಕ್ ಅಭಿಪ್ರಾಯ ಪಡುತ್ತಾನೆ.[15] ಈ ಹಿನ್ನೆಲೆಯಲ್ಲಿ ಕೃಷಿಕರಿಗೆ ಶ್ರೇಷ್ಠ ದಿನವಾದ ಸೋಮವಾರವೇ ಬಾಗಿಲಿಗೆ ಈ ನಾಮ ಅನ್ವರ್ಥವಾಗಿರಲು ಸಾಧ್ಯತೆಗಳಿವೆ. ಅಥವಾ ಸೋಮಯ್ಯ ಎನ್ನುವ ದೇವರ ಹೆಸರಿನಿಂದ ಈ ಬಾಗಿಲನ್ನು ಕರೆದಿರಬಹುದು. ಇದಕ್ಕೆ ಪೂರಕವೆಂಬಂತೆ ಈ ಬಾಗಿಲು ಮುಂಭಾಗದಲ್ಲಿ ಶೈವದೇಗುಲವಿದೆ. ಇಲ್ಲಿ ಸೋಮವಾರ ಸಂತೆ ನಡೆಯುತ್ತಿರಬಹುದು. ಈ ಹಿನ್ನೆಲೆಯಲ್ಲಿಯೂ ಈ ಹೆಸರು ಬಂದಿದೆಯೇ? ಯೋಚಿಸಬೇಕು. ಈ ಬಾಗಿಲು ಸಿಂಘಾರದ ಹೆಬ್ಬಾಗಿಲಿನ ದಕ್ಷಿಣಭಾಗದಲ್ಲಿದೆ.

ಇಲ್ಲಿಯೇ ಉತ್ತರದ ಬೆಟ್ಟದ ಮೇಲೆ ಗುಂಡಿನಲ್ಲಿರುವ ವೀರ ಬುಕ್ಕರಾಯನ ಶಾಶನವು ಸೋಮವಾರದ ಬಾಗಿಲ ಹೆಸರನ್ನು ಉಲ್ಲೇಖಿಸುತ್ತದೆ.[16] ಈ ಬಾಗಿಲು ಭಾಗಶಃ ಹಾಳಾಗಿದೆ. ಸುಮಾರು ೨೦ ಅಡಿ ಅಗಲ, ೨೦ ಅಡಿ ಎತ್ತರವಾಗಿರುವ ಬಾಗಿಲಿನ ಪಾರ್ಶ್ವದ ಗೋಡೆಗಳಲ್ಲಿ ಆಂಜನೇಯ, ಆನೆ, ಹಂಸ, ಗಣೇಶ, ಬಿಲ್ಲು ಬಾಣಗಳನ್ನು ಹಿಡಿದು ನಿಂತಿರುವ ವೀರನ ಉಬ್ಬುಗೆತ್ತನೆಗಳಿವೆ. ಮುಂಭಾಗದಲ್ಲಿ ದಕ್ಷಿಣಾಭಿಮುಖವಾಗಿರುವ ಶೈವ ದೇಗುಲವಿದೆ. ಇದರಲ್ಲಿ ಗರ್ಭಗೃಹ, ತೆರೆದ ಸಭಾಮಂಟಪಗಳಿವೆ. ಗರ್ಭಗೃಹದ ಪ್ರವೇಶದ ಇಕ್ಕೆಲಗಳಲ್ಲಿ ಶೈವದ್ವಾರ ಪಾಲಕರ ಉಬ್ಬುಗೆತ್ತನೆಗಳಿವೆ. ಸೋಮವಾರದ ಬಾಗಿಲು ಪೂರ್ವಾಭಿಮುಖವಾಗಿದೆ.

ಉದಯಗಿರಿ ಬಾಗಿಲು

ಕಮಲಾಪುರದಿಂದ ಕಂಪ್ಲಿಗೆ ಹೋಗುವ ರಸ್ತೆಯ ಬದಿಯಲ್ಲಿ, ಈ ಬಾಗಿಲಿದೆ ಇದನ್ನು ಎರಡು ಬೆಟ್ಟಗಳ ನಡುವಿನ ಕಣಿವೆಯನ್ನು ಬಳಸಿ ಕಟ್ಟಲಾಗಿದೆ. ಉದಯಗಿರಿಯಿಂದ ವಿಜಯನಗರಕ್ಕೆ ಬರುವವರು ಈ ಬಾಗಿಲನ್ನು ಬಳಸಿಕೊಂಡೇ ಬರಬೇಕು. ಹಾಗಾಗಿ ಇದಕ್ಕೆ ಉದಯಗಿರಿಯ ಬಾಗಿಲೆಂದೇ ಹೆಸರು ಬಂದಿದೆ. ವಿಠ್ಠಲ ದೇವಾಲಯದ ಗರ್ಭಗೃಹದ ಮುಂದಿನ ಮಂಟಪದಲ್ಲಿರುವ ಶಾಸನವು ಉದಯಗಿರಿ ಬಾಗಿಲನ್ನು ಉಲ್ಲೇಖಿಸುತ್ತದೆ.[17] ಪೂರ್ವಾಭಿಮುಖವಾಗಿರುವ ಈ ಬಾಗಿಲು ದೂರದಿಂದ ನೋಡಲು ಕಾಣದಂತೆ ಗೋಡೆಗಳನ್ನು ಮರೆಮಾಡಲಾಗಿದೆ. ಇತರೆ ಬಾಗಿಲುಗಳ ಲಕ್ಷಣಗಳನ್ನೇ ಇದು ಹೋಲುತ್ತದೆ. ಇಲ್ಲಿ ದೇವಾಲಯವು ಪಾಳು ಬಿದ್ದಿದೆ.

ಹರೆಶಂಕರ ಬಾಗಿಲು

ಕಮಲಾಪುರದಿಂದ ಆನೆಗೊಂದಿಗೆ ಹೋಗುವಾಗ ದಾರಿಯಲ್ಲಿ ಸುಮಾರು ೪ ಕಿ.ಮೀ. ದೂರದಲ್ಲಿದೆ ಈ ಬಾಗಿಲಿದೆ. ದಕ್ಷಿಣಾಭಿಮುಖವಾಗಿರುವ ಇದು ಸಂಪೂರ್ಣ ಹಾಳಾಗಿದೆ. ಇದನ್ನು ತಳವಾರಘಟ್ಟದ ಹೆಬ್ಬಾಗಿಲು (Talari gatha gateway) ಆನೆಗೊಂದಿ ಬಾಗಿಲು ಎಂತಲೂ ಕರೆಯುತ್ತಾರೆ. ಒಳಭಾಗದಲ್ಲಿ ಪೂರ್ವಾಭಿಮುಖವಾಗಿರುವ ಆಂಜನೇಯ ದೇಗುಲವಿದೆ. ಕಲ್ಲು ಗೋಡೆ ಹಾಗೂ ಹಿಂದೂ ಮುಸ್ಲಿಂ ಶೈಲಿಯ ಕಿಟಕಿಗಳದ್ದವೆಂದು ತಿಳೀದುಬರುತ್ತದೆ. ಪ್ರಸ್ತುತ ಮೂರು ಅಂತಸ್ತುಗಳ ಅವಶೇಷಗಳು ಗೋಚರಿಸುತ್ತವೆ. ಉದಯಗಿರಿ ಹೆಬ್ಬಾಗಿಲಿಂದ ಹರೆಶಂಕರಬಾಗಿಲು ಬಳಸಿಕೊಂಡು ವಿಜಯ ವಿಠ್ಠಲ ದೇವಾಲಯ ಹಾಗೂ ಮಾರುಕಟ್ಟೆಗೆ ಹೋಗಬಹುದಾಗಿತ್ತು. ಜೊತೆಗೆ ಆನೆಗೊಂದಿಗೂ ಪ್ರವೇಶವನ್ನು ಕೊಡುತ್ತದೆ.

ಒಂದನೆಯ ಪೆನುಗೊಂಡ ಬಾಗಿಲು

ಬಾಗಿಲು ಹೊರಬದಿ ಕೋಟೆಯ ಈ ಬಾಗಿಲು ಕಮಲಾಪುರದ ಆಗ್ನೇಯ ದಿಕ್ಕಿಗಿರುವ ಪಟ್ಟಾಭಿರಾಮ ದೇವಾಲಯದ ಹತ್ತಿರದಲ್ಲಿದೆ. ಇದು ಪೆನುಗೊಂಡದಿಂದ ವರದರಾಜಮ್ಮನ ಪಟ್ಟಣಕ್ಕೆ ಪ್ರವೇಶವನ್ನು ಕಲ್ಪಿಸುತ್ತದೆ. ವರದಾದೇವಿ ಶ್ರೀ ಅಚ್ಯುತರಾಯನ ಪಟ್ಟದರಸಿ ಈಕೆಯ ನೆನಪಿಗಾಗಿ ಕಟ್ಟಿಸಿದ ಪಟ್ಟಣವೇ ವರದರಾಜಮ್ಮನ ಪಟ್ಟಣ. ವರದಾದೇವಿ ಪೆನುಗೊಂಡದವಳೆಂದು ಕಾಣುತ್ತದೆ. ಈ ಕಾರಣಗಳಿಂದಾಗಿ ಪೆನುಗೊಂಡೆಯ ಬಾಗಿಲೆಂದು ಕರೆದಿರಬಹುದಾಗಿದೆ.

ಕ್ರಿ.ಶ. ೧೫೪೦ರ ಅಚ್ಯುತರಾಯನ ಶಾಸನದಲ್ಲಿ ಪೆನುಗೊಂಡ ಬಾಗಿಲು ಹಾಗೂ ಅಲ್ಲಿ ಪ್ರತಿಷ್ಠಾಪಿಸಿದ ರಘುನಾಥದೇವರ ಉಲ್ಲೇಖಗಳಿವೆ.[18] ಪೆನುಗೊಂಡ ಬಾಗಿಲಿಗೆ ಸಣ್ಣಕ್ಕೆಪ್ಪನ ಅಗಸೆಯೆಂದು ಸ್ಥಳೀಯರು ಅಭಿಪ್ರಾಯಿಸುವರು. ಬಾಗಿಲ ಹೊರಭಾಗದಲ್ಲಿ ಈಗಲೂ ಸಣ್ಣಕ್ಕಿ ವೀರಭದ್ರ ದೇವಾಲಯ ಇರುವಿಕೆಯನ್ನು ನೋಡಬಹುದು. ಅದರ ಹೆಸರನ್ನೆ ಈ ಬಾಗಿಲಿಗೆ ಅನ್ವಯಿಸಿರುವರು. ಇದರ ಹಿಂಬದಿ ಮುಂಬಂದಿಗೆ ಸಾಲುಮಂಟಪಗಳು ಮಧ್ಯದಲ್ಲಿ ಬೀದಿ ಇದೆ. ಇದನ್ನೇ ವರದರಾಜಮ್ಮನ ಬಜಾರು ಎಂದು ಕರೆಯುತ್ತಾರೆ. ಬಾಗಿಲು ಮತ್ತು ಕೋಟೆ ಗೋಡೆಗೆ ಹೊಂದಿಕೊಂಡು ಮೂರು ದೇವಾಲಯಗಳಿವೆ. ಅವುಗಳಲ್ಲಿ ಒಂದನೇ ಅಚ್ಯುತರಾಯನ ಕಾಲದಲ್ಲಿ ಕಟ್ಟಲಾದ ರಘುನಾತ ದೇವಾಲಯವೆಂದು ಶಾಸನವು ಸ್ಪಷ್ಟವಾಗಿ ಹೇಳಿದರೂ, ಸ್ಥಳೀಯರೂ ಮಾತ್ರ ಕಳ್ಳರ ಗುಡಿಯೆಂದು ಗುರುತಿಸುತ್ತಾರೆ. ಉತ್ತರಾಭಿಮುಖವಾಗಿರುವ ಈ ದೇಗುಲವು ಗರ್ಭಗೃಹಕ್ಕಿಂತ ಕೆಳಮಟ್ಟದಲ್ಲಿ ನಿರ್ಮಿಸಿದ ಪ್ರದಕ್ಷಿಣಾಪಥವಿದೆ. ಎದುರು ಭಾಗದಲ್ಲಿ ಒಂದೇ ದೇವಾಲಯವಿದೆ. ಇದು ದಕ್ಷಿಣಾಭಿಮುಖವಾಗಿದ್ದು, ಗರ್ಭಗೃಹ ಹಾಗೂ ತೆರೆದ ಸಭಾಮಂಟಪವನ್ನು ಹೊಂದಿದೆ. ಗರ್ಭಗೃಹದ ಬಾಗಿಲು ತೋಳುಗಳಲ್ಲಿರುವ ವೈಷ್ಣವದ್ವಾರ ಪಾಲಕರಿಂದ ಇದು ವೈಷ್ಣವ ದೇವಾಲಯವೆಂದು ದೃಢಪಟ್ಟರೂ ಗರ್ಭಗೃಹ ಖಾಲಿ ಇದೆ. ರಘುನಾಥ ದೇವಾಲಯದ ಬಲಬದಿಗೆ ಕೋಟೆ ಬಾಗಿಲಿಗೆ ಹೊಂದಿಕೊಂಡಿರುವ ಚಿಕ್ಕ ದೇವಾಲಯದ ಗರ್ಭಗೃಹದಲ್ಲಿ ಇಲಿಯನ್ನು ಕಡೆದಿರುವ ಪೀಠದ ಮೇಲೆ ಗಣೇಶನ ಭಗ್ನ ಶಿಲ್ಪವಿದೆ. ಹಾಗಾಗಿ ಇದು ಗಣೇಶನ ಗುಡಿಯೆಂದು ಖಚಿತವಾಗುವುದು. ಬಾಗಿಲಿನ ಮುಂಭಾಗದಲ್ಲಿ ವೀರಭದ್ರ ದೇವಾಲಯವಿದೆ. ಇದನ್ನು ಸಣ್ಣಕ್ಕಿ ವೀರಭದ್ರನೆಂದು ಕರೆಯುವರು. ಗರ್ಭಗೃಹದಲ್ಲಿ ವೀರಭದ್ರನ ಮೂರ್ತಿಯಿದೆ. ಈ ದೇವಾಲಯಕ್ಕೆ ಕಣಶಿಲೆ, ಶಿಖರ ಹಾಗೂ ಕೈಪಿಡಿ ಗೋಡೆಗಳಿಗೆ ಇಟ್ಟಿಗೆ ಮತ್ತು ಗಾರೆಯನ್ನು ಬಳಸಲಾಗಿದೆ. ಈಗ ಗೋಚರಿಸುವ ಬಾಗಿಲು ಎರಡು ಮಹಡಿಗಳನ್ನು ಹೊಂದಿದೆ. ಪ್ರವೇಶದ ಪಾರ್ಶ್ವದಲ್ಲಿ ಮಂಟಪಗಳಿವೆ. ಗ್ರೀನ್ ಲಾ (A. Green law, 1856) ಅವರು ೧೫೦ ವರ್ಷಗಳ ಹಿಂದೆ ತೆಗೆದಿರುವ ಈ ಬಾಗಿಲಿನ ಚಿತ್ರವು ಇತರೆ ಬಾಗಿಲುಗಳಂತೆಯೇ ದೊಡ್ಡ ಪ್ರಮಾಣದಲ್ಲಿರುವುದನ್ನು ತೋರಿಸುತ್ತದೆ. ಒಳಭಾಗದಲ್ಲಿ ಪೂರ್ವಾಭಿಮುಖವಾಗಿರುವ ಆಂಜನೇಯ ದೇಗುಲವಿದೆ. ಕಲ್ಲು ಗೋಡೆ ಹಾಗೂ ಹಿಂದೂ ಮುಸ್ಲಿಂ ಶೈಲಿಯ ಕಿಟಕಿಗಳದ್ದವೆಂದು ತಿಳಿದುಬರುತ್ತದೆ. (Splendours of the vijayanagara empire Hampi, p.26)

ಎರಡನೇ ಪೆನುಗೊಂಡ ಬಾಗಿಲು

ಇದು ಕಮಲಾಪುರದ ಆಗ್ನೇಯಕ್ಕೆ ಸುಮಾರು ೨ ಕಿ.ಮೀ. ಅಂತರದಲ್ಲಿದೆ. ಪೆನುಗೊಂಡೆಗೂ ವಿಜಯನಗರಕ್ಕೂ ನಿಕಟವಾದ ಸಂಬಂಧಗಳಿವೆ. ಪೆನುಗೊಂಡೆಯಿಂದ ಬರುವವರು ಈ ಮಾರ್ಗವಾಗಿಯೂ ಹೋಗಬೇಕಿತ್ತು. ಹಾಗಾಗಿ ಇದನ್ನು ಪೆನುಗೊಂಡೆ ಬಾಗಿಲು ಎಂದು ಗುರುತಿಸಿದ್ದಾರೆ.

ಕಮಲಾಪುರದ ಬಳಿ ಇರುವ ಚಿಕ್ಕ ಹುಡೇ ದೇವಾಲಯದ ದಕ್ಷಿಣಕ್ಕಿರುವ ಶಾಸನವು ಪೆನುಗೊಂಡೆ ಬಾಗಿಲನ್ನು ಹಾಗೂ ಅಲ್ಲಿ ಪ್ರತಿಷ್ಠಾಪಿಸಿದ ರಘುನಾಥ ದೇವರನ್ನು ಉಲ್ಲೇಖಿಸುತ್ತದೆ. ಕಳ್ಳರ ಗುಡಿ ಹತ್ತಿರ ಪೆನುಗೊಂಡ ಬೀದಿ ಇದೆ. ಇದರ ದಕ್ಷಿಣಕ್ಕೆ ಪೆನುಗೊಂಡ ಬಾಗಿಲು ಇರುತ್ತದೆ. ಪೆನುಗೊಂಡೆ ಬೀದಿಯ ಒಂದು ಮಾರ್ಗವು ಗುಮ್ಮಟದ ಬಾಗಿಲಿಗೆ ಹೋಗಿ ಅಲ್ಲಿಂದ ಭೀಮನ ಅಗಸಿ ಮೂಲಕ ವಿಜಯನಗರದತ್ತ ಕರೆದೊಯ್ಯುತ್ತದೆ. ಪೆನುಗೊಂಡ ಬಾಗಿಲಿಗೆ ಹೊಂದಿಕೊಂಡ ಗೋಡೆ ಮಲಪನಗುಡಿ ಕೋಟೆ ಗೋಡೆಗೆ ಹತ್ತಿಕೊಂಡಿದೆ ಎಂದು ಡಾ. ವಸುಂಧರ ಫಿಲೊಯೋಜ ಅವರು ಅಭಿಪ್ರಾಯಪಡುತ್ತಾರೆ.[19] ಪ್ರಸ್ತುತ ಪೆನುಗೊಂಡ ಬಾಗಿಲಿನಿಂದ ಕಮಲಾಪುರದ ಕೆರೆಯ ಹಿಂಭಾಗದವರೆಗೆ ಕೋಟೆಗೋಡೆ ಗೋಚರಿಸುತ್ತದೆ. ಪೂರ್ವಾಭಿಮುಖವಾಗಿರುವ ಈ ಬಾಗಿಲು ಸುಮಾರು ೧೫ ಅಡಿ ಅಗಲ, ೨೦ ಅಡಿ ಎತ್ತರವಾಗಿದೆ. ಬಾಗಿಲ ತೋಳುಗಳಲ್ಲಿ ದ್ವಾರಪಾಲಕರ ಉಬ್ಬು ಶಿಲ್ಪಗಳು, ಲಲಾಟಬಿಂಬದ ಎರಡೂ ಬದಿಯ ಕೆಳಗೆ ಇಳಿ ಬಿದ್ದ ಮೊಗ್ಗುಗಳಿವೆ. ಎಡಭಾಗದಲ್ಲಿ ಉಪಬಾಗಿಲು, ಬಲಭಾಗದ ಗೋಡೆಯಲ್ಲಿ ಶಿವಲಿಂಗ, ನಂದಿ ಅಂಜನ ಮುದ್ರೆಯಲ್ಲಿ ನಿಂತಿರುವ ರಾಜನ (ಇತನನ್ನು ಪ್ರೌಢದೇವ ರಾಯನೆಂದು ಕರೆದಿರುವರು) ಉಬ್ಬುಶಿಲ್ಪಗಳಿವೆ. ಪ್ರವೇಶದ ಎರಡೂ ಬದಿಗೆ ಕಟ್ಟೆಯ ಮೇಲೆ ಮಂಟಪವನ್ನು ನಿರ್ಮಿಸಿರುವರು. ಹತ್ತಿರದಲ್ಲಿ (ಒಳಭಾಗದಲ್ಲಿ) ಆಂಜನೇಯ, ರಘುನಾತ ಮತ್ತು ಗಣೇಶನ ದೇವಾಲಯಗಳಿವೆ.

 

[1] ಚನ್ನಬಸಪ್ಪ  ಎಸ್. ಪಾಟೀಲ, ೧೯೯೯, ಕರ್ನಾಟಕದ ಕೋಟೆಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು.೯೧

[2] ದೇವರಕೊಂಡಾರೆಡ್ಡಿ ಮತ್ತು ಇತರರು,೨೦೦೧, ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ೩, ಪೂರ್ವೋಕ್ತ, ಪು. ೭೭

[3] ಅದೇ ಪು. ೨೪೫

[4] ಅದೇ ಪು. ೨೪೨

[5] ಅದೇ ಪು. ೨೬೨

[6] ಪೆನುಗೊಂಡ ಮತ್ತು ಗುಮ್ಮಟದ ಬಾಗಿಲುಗಳ ಬಲಭಾಗದ ಗೋಡೆಗಳಲ್ಲಿ ನಂದಿ, ಶಿವಲಿಂಗ ಇದರ ಮುಂದೆಕೈಮುಗಿದು ನಿಂತಿರುವ ರಾಜ (ಪ್ರೌಢದೇವರಾಯ?)ನ ಉಬ್ಬುಶಿಲ್ಪಗಳಿವೆ.

[7] VPR.NO.2 of 1983-84; ವಿಶಾ, ಪು. ೩೪೬

[8] ಕೊಟ್ರೇಶ ಎಂ., ೨೦೦೨, ಕೋಟೆಕೊತ್ತಳಗಳು ಒಂದು ಅಧ್ಯಯನ ಅಪ್ರಕಟಿತ ಪಿಎಚ್.ಡಿ. ಪ್ರೌಢಪ್ರಬಂಧ, ಪು. ೨೨, ಹಂಪಿ, ಕನ್ನಡ ವಿಶ್ವವಿದ್ಯಾಲಯ

[9] ಕೋತಿನ ಎಸ್.ಎಸ್. ೧೯೮೪, ಅನು. ಮೋಹನ ತರಂಗಿಣಿ, ಪು.. ೨೯೫, ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ತು.

[10] ದೇವರಕೊಂಡಾರೆಡ್ಡಿ ಮತ್ತು ಇತರರು, ೨೦೦೦, ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ, ಹಂಪಿ೩, ಪು…. ಹಂಪಿ ಕನ್ನಡ ವಿಶ್ವವಿದ್ಯಾಲಯ

[11] ಅದೇ ಪು. ೧೬೪

[12] ಅದೇ ಪು. ೧೬೨

[13] ರಾಮರಾವ್ಜಿ.ಎನ್., ವಿದೇಶಿಯರು ಕಂಡ ವಿಜಯನಗರ, ಬೆಂಗಳೂರು, ಐ.ಬಿ.ಎಚ್. ಪ್ರಕಾಶನ

[14] ದೀಕ್ಷಿತ್ಜಿ.ಎಸ್., ಮತ್ತು ವಿಶ್ವೇಶ್ವರಯ್ಯಎಂ.ಪಿ., ೧೯೭೧, ಸಂಗಮರ ಕಾಲದ ವಿಜಯನಗರ, ಪು. ೯೪, ೯೫, ಬೆಂಗಳೂರು ಬಿ.ಎಂ.ಶ್ರೀ ಪ್ರತಿಷ್ಠಾನ

[15] ಬಾಲಸುಬ್ರಹ್ಮಣ್ಯಂ, ಅನು. ಮರೆಯಲಾಗದ ಮಹಾಸಾಮ್ರಾಜ್ಯ, ಪು. ೩೫೦, ಹಂಪಿ, ಕನ್ನಡ ವಿಶ್ವವಿದ್ಯಾಲಯ,

[16] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೩, ಪೂರ್ವೋಕ್ತ, ಪು. ೨೪೩

[17] ಅದೇ, ಪು. ೧೪೧

[18] ಅದೇ, ಪು. ೨೩೮-೩೯

[19] ವಸುಂಧರ ಫಿಲಿಯೋಜಾ, ೧೯೮೨, ಅಳಿದುಳಿದ ಹಂಪೆ, ಪು. ೧೦೪, ಬೆಂಗಳೂರು, ಮಾನಸೋಲ್ಲಾಸ ಪ್ರಕಾಶನ