ಹೊಸಪೇಟೆ ತಾಲೂಕಿನ ವಿಶ್ವವಿಖ್ಯಾತ ಸ್ಮಾರಕವೆಂದು ಮನ್ನಣೆ ಪಡೆದ ಹಂಪಿಗೆ ಹೊಂದಿಕೊಂಡಿರುವ ಕಮಲಾಪುರವು ಒಂದು ಪಟ್ಟಣ ಪ್ರದೇಶ. ಹೊಸಪೇಟೆಯಿಂದ ಇದು ೧೧ ಕಿ.ಮೀ. ದೂರದಲ್ಲಿದೆ. ಇದರ ತೀವ್ರತರ ಬೆಳವಣಿಗೆಗೆ ಪ್ರವಾಸಿ ತಾಣವಾದ ಹಂಪಿಯು ಒಂದು ಕಾರಣ. ಹಂಪಿಗೂ ಕಮಲಾಪುರಕ್ಕೂ ನಿಕಟವಾದ ಸಂಬಂಧಗಳಿವೆ. ಹಾಗಾಗಿ ವಿಜಯನಗರ ಕಾಲದ ಕೋಟೆ ಈ ಪಟ್ಟಣದ ದಕ್ಷಿಣ ಭಾಗದಲ್ಲಿದೆ.

ಕಮಲಾದೇವಿ ಎಂಬ ಇಲ್ಲಿಯ ಆರಾಧ್ಯ ದೇವತೆಯ ಹೆಸರಿನಿಂದ ಈ ಗ್ರಾಮವನ್ನು ಕಮಲಾಪುರವೆಂದು ಕರೆದಿರುವುದಾಗಿ ಕೈಫಿಯತ್ತು ಹೇಳುತ್ತದೆ.[1] ಕಂಪಿಲನ ನಾಲ್ಕು ಜನ ಹೆಂಡತಿಯರಲ್ಲಿ ಕಮಲಾಜಿ ಎಂಬುವವಳು ಒಬ್ಬಳು. ಆ ಹಿನ್ನೆಲೆಯಲ್ಲಿ ಕಂಪಿಲನ ರಾಜ್ಯದ ಹೃದಯಭಾಗದಲ್ಲಿದ್ದ ಈ ಗ್ರಾಮಕ್ಕೆ ಆ ಹೆಸರು ಅನ್ವರ್ಥವಾಗಿರಬಹುದೆ?[2] ವಿಜಯನಗರ ಕಾಲದಲ್ಲಿ ವರದರಾಜಮ್ಮನ ಪಟ್ಟಣವೆಂದು ಕರೆಯುತ್ತಿದ್ದುದು ತಿಳಿಯುವುದು.[3] ಕ್ರಿ.ಶ. ೧೫೧೮ರ ಕೃಷ್ಣದೇವರಾಯನ ಶಾಸನದಲ್ಲಿ ಕೃಷ್ಣದೇವರಾಯನ ಹಿರಿಯರಾಣಿ ತಿರುಮಲದೇವಿ ಹಂಪಿ ಹತ್ತಿರದ ಅಂಜನಗಿರಿಯ ಕುಮಾರಗುಂಟೆ ತಿರುವೆಂಗಲನಾಥ ದೇವರ ಸೇವೆಗಾಗಿ ಒಂದು ಮತ್ತರು ಭೂಮಿದಾನ ಮಾಡಿದ ಉಲ್ಲಖವಿದೆ. ಇದರಲ್ಲಿ ಬರುವ ಕುಮಾರಗುಂಟೆ ಮುಂದೆ ಕಮಲಾಪುರವಾಯಿತ್ತೆಂದು ಕುಂ.ಬಾ., ಸದಾಶಿವಪ್ಪ ಅಭಿಪ್ರಾಯಪಡುತ್ತಾರೆ.[4] ಕ್ರಿಶ. ೧೫೩೧ರ ಶಾಸನದಲ್ಲಿ ಕಮಲಾಪುರವು ಕೊಂಡಮಾರಸಯ್ಯನ ಪಾಳ್ಯದಲ್ಲಿರುವುದು ಪ್ರಸ್ತಾಪವಾಗುತ್ತದೆ.[5]

ಮೊದಲನೆಯದಾಗಿ ಈ ಗ್ರಾಮವು ವಿಜಯನಗರ ಕಾಲಾವಧಿಯಲ್ಲಿ ನಿರ್ಮಾಣಗೊಂಡಿರುವುದು ಖಚಿತವಾಗುತ್ತದೆ. ಏಕೆಂದರೆ ಈ ಮುಂಚೆ ಕಮಲಾಪುರ ಇದ್ದ ಬಗ್ಗೆ ಯಾವುದೇ ಆಧಾರವಿಲ್ಲ. ಎರಡನೆಯದಾಗಿ ವಿಜಯನಗರ ಅವಧಿಯಲ್ಲಿ ಸ್ಥಾಪನೆಗೊಂಡ ಬಹುತೇಕ ಗ್ರಾಮಗಳಿಗೆ ವಿಜಯನಗರದ ಅರಸರು ಮತ್ತವರ ರಾಣಿಯರು ಹಾಗೂ ಮಕ್ಕಳುಗಳ ಹೆಸರುಗಳನ್ನೆ ಇಡುತ್ತಿದ್ದುದು ವಾಡಿಕೆ. ಉದಾಹರಣೆಗಾಗಿ ತಿರುಮಲದೇವಿ ಪಟ್ಟಣ (ಹೊಸಪೇಟೆ), ಚಿನ್ನಾಪುರ, ನಾಗಲಾಪುರ, ಕೃಷ್ಣಾನಗರ, ಸಾಲೆ ತಿರುಮಲಪಟ್ಟಣ ಇತ್ಯಾದಿಯಾಗಿ ಈ ಹಿನ್ನೆಲೆಯಲ್ಲಿ ಕಮಲಾ ಎಂದರೆ ಲಕ್ಷ್ಮಿ, ಉತ್ತಮ ಸ್ತ್ರೀ, ಕುಮಾರ, ಲಕ್ಷ್ಮಿಯ ಮಗ, ಮನ್ಮಥ ಇತ್ಯಾದಿ ಅರ್ಥಗಳಿವೆ.

ಕಮಲಾದೇವಿ ಎಂಬುವವಳು ಉತ್ತಮ ಸ್ತ್ರೀ ಇದ್ದು, ಇವಳು ವಿಜಯನಗರದ ಅರಸರೊಂದಿಗೆ ಸಂಬಂಧ ಹೊಂದಿದವಳಾಗಿರಬೇಕು. ಹೀಗಾಗಿ ಅವಳ ಹೆಸರಿನಿಂದಲೇ ಈ ಗ್ರಾಮಕ್ಕೆ ಕಮಲಾಪುರುವೆಂದು ಕರೆದಿರಬಹುದು. ಇದಕ್ಕೆ ಪೂರಕವೆಂಬಂತೆ ವಿಜಯನಗರದ ಅರಸರ “ಗಾಣ (ಸೇವಕಿಯಾದ) ಗಿತ್ತಿ” ಹೆಸರಿನಲ್ಲಿಯೇ ಒಂದು ದೇವಾಲಯ ನಿರ್ವಿಸಿರುವುದು ಕಾಣಬಹುದು.[6]

ಪ್ರಾಚೀನ ಮಾನವನ ಅವಾಸ ಸ್ಥಾನವಾಗಿ ಇತಿಹಾಸ ಕಾಲದಿಂದಲೂ ಇಂದಿನವರೆಗೂ ಚಾರಿತ್ರಿಕ ಹಿನ್ನೆಲೆಯಲ್ಲಿ ಅಸ್ತಿತ್ವದಲ್ಲಿರುವ ಕಮಲಾಪುರದಲ್ಲಿ ವಿಜಯನಗರ ಕಾಲದ ಕೋಟೆಯೊಂದು ಈ ಗ್ರಾಮ ರಕ್ಷಣೆಗಾಗಿ ನಿರ್ಮಾಣಗೊಂಡಂತೆ ಕಂಡುಬರುತ್ತದೆ.

ಕೋಟೆಯ ಲಕ್ಷಣಗಳು

ಕಮಲಾಪುರವು ಬೆಳೆದಂತೆ ಇಲ್ಲಿಯ ಕೋಟೆ ಹಾಳಾಗಿದೆ. ಈಗ ಉಳಿದಿರುವ ಕೆಲವು ಅವಶೇಷಗಳಿಂದ ಈ ಕೋಟೆಯ ಲಕ್ಷಣಗಳನ್ನು ಅರಿಯಲು ಯತ್ನಿಸಿದೆ.

ಸುಮಾರು ೨೦ ಎಕರೆ ಪ್ರದೇಶಗಳಲ್ಲಿ ವಿಸ್ತರಿಸುವ ಈ ಕೋಟೆಯು ಪರಿಘಾ ನೆಲದುರ್ಗ ಪ್ರಕಾರಕ್ಕೆ ಸೇರುತ್ತದೆ. ಚೌಕಾಕಾರದ ಕೋಟೆಯನ್ನು ಬೃಹತ್ ಮತ್ತು ಮಧ್ಯಗಾತ್ರದ ಕಲ್ಲುಹಾಗೂ ಗಾರೆಯಿಂದ ಕಟ್ಟಿದೆ. ಕೋಟೆಯ ಮೇಲ್ಭಾಗದಲ್ಲಿ ಕೈಪಿಡಿ ಗೋಡೆಯನ್ನು ಇಟ್ಟಿಗೆ ಹಾಗೂ ಗಾರೆಯಿಂದ ಕಟ್ಟಿರಬಹುದಾದರೂ ಈಗ ಗೋಚರಿಸುವುದಿಲ್ಲ. ಕೋಟೆಯ ಉತ್ತರ ದಿಕ್ಕಿನಲ್ಲಿ ಗೋಡೆಯ ಮಧ್ಯದಲ್ಲಿ ದೊಡ್ಡ ಬಾಗಿಲಿದೆ. ದಕ್ಷಿಣ ದಿಕ್ಕಿನ ಗೋಡೆಯ ಮಧ್ಯದಲ್ಲಿ ಚಿಕ್ಕ ದಿಡ್ಡಿ ಇದ್ದ ಬಗ್ಗೆ ಪ್ರತೀತಿ ಇದೆ. ಕೋಟೆಯ ಆಯಾಕಟ್ಟಿನ ಸ್ಥಳಗಳಲ್ಲಿ ಕೊತ್ತಳಗಳಿವೆ. ಕೋಟೆಯ ಸುತ್ತಲೂ ಕಂದಕವಿದ್ದ ಬಗ್ಗೆ ಅನುಮಾನವಿದೆ.

ಉತ್ತರ ದಿಕ್ಕಿನ ಬಾಗಿಲಿನ ಮೇಲಿನ ಕೈಪಿಡಿ ಗೋಡೆಯಲ್ಲಿ ಚಿಕ್ಕ ಚಿಕ್ಕ ರಂಧ್ರಗಳಿವೆ. ಇಕ್ಕೆಲದ ಗೋಡೆಗಳಲ್ಲಿ ಮೀನು, ಮೊಸಳೆ, ನವಿಲು, ಹಂಸಗಳ ಉಬ್ಬುಗೆತ್ತನೆಗಳಿವೆ. ಈ ಬಾಗಿಲಿನ ಎರಡೂ (ಪೂರ್ವ ಮತ್ತು ಪಶ್ಚಿಮ) ದಿಕ್ಕಿಗೆ ವೃತ್ತಾಕಾರದ ಕೊತ್ತಳಗಳಿವೆ. ಪ್ರವೇಶದ ಎರಡೂ ಬದಿಗೂ ಎತ್ತರವಾದ ಕಟ್ಟೆಗಳಿವೆ. ಈ ಕಟ್ಟೆಗಳಿಗೆ ಹೊಂದಿಕೊಂಡು ನಗರೇಶ್ವರ ದೇವಾಲಯವಿದೆ. ಕೋಟೆಯ ಒಳಗೆ ಕಮಲಾಪುರದ ಗ್ರಾಮವಿದೆ. ಈ ಪ್ರದೇಶವನ್ನು ಕ್ವಾಟೆ, ಕೋಟೆ ಎಂದು ಸ್ಥಳೀಯರು ಈಗಲೂ ಗುರುತಿಸುತ್ತಾರೆ. ಇದರ ಮಧ್ಯಭಾಗದಲ್ಲಿ ಬೃಹದಾಕಾರದ ಕೊತ್ತಳವಿದೆ. ಇದು ೬೦ ಅಡಿ ಎತ್ತರ, ಸುಮಾರು ೧೫೦ ಅಡಿ ಸುತ್ತಳತೆಯನ್ನು ಹೊಂದಿದೆ. ಕೊತ್ತಳದ ಮೇಲೇರಲು ಅನುಕೂಲವಾಗುವಂತೆ ಪಶ್ಚಿಮಾ ದಿಕ್ಕಿಗೆ ಮೆಟ್ಟಿಲುಗಳನ್ನು ನಿರ್ಮಿಸಿ, ಇದಕ್ಕೆ ಚಿಕ್ಕ ಬಾಗಿಲನ್ನು ಜೋಡಿಸಲಾಗಿದೆ. ಈ ಎತ್ತರದ ಕೊತ್ತಳದ ಮೇಲಿಂದ ಇಡೀ ಹಂಪೆ ಪ್ರದೇಶವಲ್ಲದೆ ಸುತ್ತಮುತ್ತಲಿನ ಬಹುತೇಕ ಪ್ರದೇಶಗಳು ಕಂಡುಬರುತ್ತವೆ. ಇದರಿಂದ ಈ ಕೊತ್ತಳದ ಉದ್ದೇಶವನ್ನು ತಿಳಿಯಬಹುದು. ಕೊತ್ತಳದ ಕಾಂಡಭಾಗದಲ್ಲಿ ಚಿಕ್ಕ ಗೂಡೊಂದು ನಿರ್ಮಿಸಿ, ಇದರಲ್ಲಿ ಕಲ್ಲು ಗುಂಡನ್ನಿಟ್ಟು ತಾಯಾಮ್ಮನೆಂದು ಆರಾಧಿಸುತ್ತಾರೆ.

ಕೋಟೆಯ ನಿರ್ಮಾಣ

ಕ್ರಿಶ. ೧೫೬೫ರ ನಂತರ ವಿಜಯನಗರ ಅವಸಾನದತ್ತ ನಡೆದಿರುವಾಗ ಅನೇಕ ಪಾಳೆಯಗಾರರು ಸ್ವತಂತ್ರರಾದರು. ಈ ಹಿನ್ನೆಲೆಯಲ್ಲಿ ಕುರುಗೋಡಿನ ಪರಗಣಿಯಲ್ಲಿ ಕಮಲಾಪುರವು ಸೇರಿತ್ತು. ಆಗ ಕುರುಗೋಡಿನ ಪರಗಣಿಯನ್ನು ಆಳುತ್ತಿದ್ದ ಚಿನ್ನರಾಯ ಕ್ರಿ.ಶ. ೧೭೦೩ ರಲ್ಲಿ ಕಮಲಾಪುರ ಕೋಟೆ, ಹುಲಿಮುಖ, ಹುಡೇವುಗಳನ್ನು ಕಟ್ಟಿಸಿದನೆಂದು ಕೈಫಿಯತ್ತಿನಲ್ಲಿ ಹೇಳಲಾಗಿದೆ.[7] ಕಮಲಾಪುರದ ಕೋಟೆಯ ಲಕ್ಷಣಗಳಿಗೂ ಮತ್ತು ವಿಜಯನಗರದ ಕೋಟೆ ಹಂಪಿಯ ಲಕ್ಷಣಗಳಿಗೂ ವ್ಯತ್ಯಾಸಗಳು ಬಹಳ ಕಡಿಮೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಈ ಕೋಟೆಯು ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡಿದ್ದು, ಪಾಳೆಯಗಾರರ ಅವಧಿಯಲ್ಲಿ ಜೀರ್ಣೋದ್ಧಾರ ಕಂಡಿದೆ.

ಆಕರ
ಕೋಟೆ ಕೊತ್ತಳಗಳು : ಒಂದು ಅಧ್ಯಯನ (ಬಳ್ಳಾರಿ ಜಿಲ್ಲೆ), ೨೦೦೨, ಪಿಎಚ್‌.ಡಿ. ಮಹಾಪ್ರಬಂಧ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು. ೨೨೦-೨೨೨

 

[1] ಕಲಬುರ್ಗಿ ಎಂ.ಎಂ., ಸಂ., ೧೯೯೪, ಕರ್ನಾಟಕದ ಕೈಫಿಯತ್ತುಗಳು, ಉಪ. ೪೩೧, ಹಂಪಿ, ಕನ್ನಡ ವಿಶ್ವವಿದ್ಯಾಲಯ

[2] ನಾಗಯ್ಯ ಜೆ.ಎಂ., ೨೦೦೨, ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸ, ಉಪ. ೧೨೧, ಬಳ್ಳಾರಿ ಲೋಹಿಯಾ ಪ್ರಕಾಶನ

[3] ಸುರೇಶ್ ಕೆ.ಎಂ. ಮತ್ತು ಇತರರು, ೧೯೯೮, ಕರ್ನಾಟಕ ದೇವಾಲಯ ಕೋಶ ಬಳ್ಳಾರಿ ಜಿಲ್ಲೆ, ಪು. ೬೫, ಹಂಪಿ, ಕನ್ನಡ ವಿಶ್ವವಿದ್ಯಾಲಯ

[4] ಕುಂಬಾಸ, ೧೯೯೦, ಬಳ್ಳಾರಿ ಜಿಲ್ಲಾ ಸಾಂಸ್ಕೃತಿಕ ದರ್ಶನ, ಪು. ೨೫, ಕುಂಚೂರು, ಮಾಲತೇಶ ಪ್ರಕಾಶನ

[5] SII, IX (pt. II), No. 533

[6] ಕಮಲಾಪುರದಿಂದ ಕಂಪ್ಲಿಗೆ ಹೋಗುವ ರಸ್ತೆಯ ಬದಿಯಲ್ಲಿ ಅಂದರೆ ಕಮಲಾಪುರದಿಂದ ೧ ಕಿ.ಮೀ. ಅಂತರದಲ್ಲಿ ಈ ದೇಗುಲವಿದೆ.

[7] ಕಲಬುರ್ಗಿ, ಎಂ.ಎಂ., ಸಂ. ೧೯೯೪, ಕರ್ನಾಟಕದ ಕೈಫಿಯತ್ತುಗಳು, ಪು. ೪೩೬, ಹಂಪಿ ಕನ್ನಡ ವಿಶ್ವವಿದ್ಯಾಲಯ.