ರಾಮಸಾಗರವು ಹೊಸಪೇಟೆಯಿಂದ ಆಗ್ನೇಯ ದಿಕ್ಕಿಗೆ ಸುಮಾರು ೨೫ ಕಿ.ಮೀ. ದೂರದಲ್ಲಿದೆ. ರಾಮಸಾಗರದ ಈಶಾನ್ಯ ದಿಕ್ಕಿನ ಬೆಟ್ಟದ ಮೇಲೆ ಈ ಕಿರಿದಾದ ಕೋಟೆ ಇದೆ. ಇದರ ಬಗ್ಗೆ ಯಾವುದೇ ನಿಖರವಾದ ಆಧಾರಗಳಿಲ್ಲ ಆದರೂ ಸಿಕ್ಕಿರುವ ಕೆಲವು ಅಲ್ಪ ಮಾಹಿತಿಗಳಿಂದ ಈ ಕೋಟೆಯ ಬಗ್ಗೆ ಚರ್ಚಿಸಲಾಗಿದೆ.

ತೆಲುಗು ಭಾಷೆಯ ಕನ್ನಡ ಲಿಪಿಯ ತಾಮ್ರಶಾಸನವೊಂದು ತಿಳಿಸುವಂತೆ[1] ಭೀಮಾಜೆಟ್ಟಿ ಎಂಬುವವನು, ಬಲಿಷ್ಠರಾದ ಆನೆಗೊಂದಿ ರಾಜರ ಮರ್ಯಾದೆಗೆ ಕುಂದು ಉಂಟಾಗುವಂತೆ ಊರ ಬಾಗಿಲಿಗೆ ತನ್ನ ಇಜಾರವನ್ನು ಕಟ್ಟಿಸಿ ಮೆರೆಯುತ್ತಿದ್ದನು. ಜೋಡಿ ಮಲ್ಲಪ್ಪನಾಯಕ ಎನ್ನುವವನು, ಈ ಭೀಮಾಜೆಟ್ಟಿಯನ್ನು ಸೋಲಿಸಿದ್ದಕ್ಕಾಗಿ ಆನೆಗೊಂದಿ ಅರಸ ರಾಮರಾಯ ತಲಮಲರಾಜ ದೇವನು, ಬುಕ್ಕಸಾಗರ ಹರಿಯ ಸಮುದ್ರ ಗ್ರಾಮಗಳ ನಡುವೆ ಇದ್ದ ಕಳಸಾಪುರ ಗ್ರಾಮವನ್ನು ಅದರ ಸಮೀಪವೇ ಇದ್ದ ಕಮಲಾಪುರದ ಕೆರೆಯ ಕೆಳಗಿನ ೩ ಖಂಡುಗದ ಬೀಜಾವರ್ರಿ‍ಭೂಮಿಯನ್ನು ಉಂಬಳಿಯಾಗಿ ಕೊಟ್ಟನು. ಅಲ್ಲದೆ ಜೋಡಿಮಲ್ಲಪ್ಪನಾಯಕನಿಗೆ ಭೀಮ ಎಂಬ ಬಿರುದನ್ನು ನೀಡಿದರು. ಈ ಬಿರುದು ನೀಡಿದ ನೆನಪಿಗಾಗಿ ಭೀಮನಕೆರೆ, ಹಿರೇಕೆರೆ, ಚಿಕ್ಕಕೆರೆ, ಹೊಸಕೆರೆ ಹಾಗೂ ರಾಮಸಾಗರದ ಕೆರೆಯನ್ನು ನಿರ್ಮಿಸಿದರು. ಕೆರೆಗಳನ್ನು ಕಟ್ಟಿಸುವುದರ ಮೂಲಕ ಜನಪರ ಕಾರ್ಯಗಳನ್ನು ಮಾಡಿದುದಲ್ಲದೆ ಆನೆಗೊಂದು ರಾಜರ ಹೆಸರಿನಲ್ಲಿ ತಿಮ್ಮಾಪುರಹಳ್ಳಿ, ರಾಮಸಾಗರ ಗ್ರಾಮಗಳನ್ನು ಕಟ್ಟಿಸಿರುವಂತೆ, ಆನೆಗೊಂದಿ ಅರಸರೇ ಈ ಗ್ರಾಮವನ್ನು ಅಸ್ತಿತ್ವಕ್ಕೆ ತಂದರೆಂದು ಮೇಲಿನ ತಾಮ್ರಶಾಸನ ಹೇಳುತ್ತದೆ.[2]

ಕ್ರಿ.ಶ. ೧೫೬೧ರ ಸದಾಶಿವರಾಯನ ಶಾಸನದಲ್ಲಿ ವಿಠ್ಠಲ ದೇವರ ಅಮೃತ ಪಡಿಗೆ ರಾಮಸಾಗರದಲ್ಲಿ ಹತ್ತು ಕೊಳಗ ಗದ್ದೆ ನೀಡಿದಂತೆ ವ್ಯಕ್ತವಾಗುತ್ತದೆ.[3] ಬುಕ್ಕರಾಯನ ಶಾಸನವು ಇಂದಿನ ರಾಮಸಾಗರದ ಪಶ್ಚಿಮಾ ಭಾಗದಲ್ಲಿ ದೊರೆತಿದೆ ಆದರೂ ಅದರಲ್ಲಿ ರಾಮಸಾಗರದ ಉಲ್ಲೇಖವಿಲ್ಲ.[4] ಈ ಮೇಲಿನ ಆಧಾರಗಳಿಂದ ರಾಮಸಾಗರವು ಕ್ರಿ.ಶ. ೧೫೬೧ಕ್ಕಿಂತಲೂ ಮೊದಲೇ ಅಸ್ತಿತ್ವದಲ್ಲಿದ್ದುದು ಕಂಡುಬರುತ್ತದೆ. ಏಕೆಂದರೆ ತಾಮ್ರಶಾಸನದಲ್ಲಿ ಕಾಲದ ಉಲ್ಲೇಖವಿಲ್ಲ ಮತ್ತು ಬುಕ್ಕರಾಯನ ಶಾಸನದಲ್ಲಿ ರಾಮಸಾಗರದ ಪ್ರಸ್ತಾಪವೂ ಇಲ್ಲ.

ಈ ಮೇಲಿನ ಆಧಾರಗಳನ್ನು ಇಟ್ಟುಕೊಂಡು ಮುಂದುವರೆದಂತೆ ಕೋಟೆ ನಿರ್ಮಾಣವನ್ನು ಚರ್ಚಿಸಲಾಗುವುದು. ರಾಮಸಾಗರದ ಕೋಟೆಯ ಪ್ರವೇಶದಲ್ಲಿ ಮೊದಲು ಕಂಡುಬರುವುದು ಭೀಮೇಶ್ವರ ದೇವಸ್ಥಾನ. ಆನೆಗೊಂದಿ ಅರಸರು ಕಷ್ಟಕಾಲದಲ್ಲಿ ಸಹಾಯ ಮಾಡಿದ ಜೋಡಿ ಮಲ್ಲಪ್ಪನಾಯಕನಿಗೆ ‘ಭೀಮಾ’ ಎಂಬ ಬಿರುದನ್ನು ನೀಡಿ ಗೌರವಿಸಿದ್ದರು. ಈ ಸಹಾಯಾರ್ಥ ನೆನಪಿಗಾಗಿ ‘ಭೀಮಾ’ ಎಂಬ ಬಿರುದಿನ ಹೆಸರಿನಿಂದಲೇ ಭೀಮೇಶ್ವರ ದೇವಸ್ಥಾನ ನಿರ್ಮಾಣವಾಗಿರಬಹುದು. ಪ್ರಾಯಶಃ ಆಗಲೇ ಅಲ್ಲಿ ಕೋಟೆ ನಿರ್ಮಾಣ ಮಾಡಿರಬೇಕು. ಇಂಥಹ ಉದಾಹರಣೆಗಳು ನಮ್ಮಲ್ಲಿ ಸಾಕಷ್ಟಿವೆ.

ಕೋಟೆಯ ಲಕ್ಷಣಗಳು

ರಾಮಸಾಗರದ ಈಶಾನ್ಯಕ್ಕಿರುವ ಚಿಕ್ಕ ಬೆಟ್ಟವೊಂದರ ಮೇಲೆ ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಕೋಟೆಯನ್ನು ಕಟ್ಟಲಾಗಿದೆ. ಇದು ಗ್ರಾಮರಕ್ಷಣೆಯ ಗಿರುದುರ್ಗವಾಗಿದೆ. ಕೋಟೆ ಇರುವ ಬೆಟ್ಟದ ಪೂರ್ವಕ್ಕೆ ಕಣಿವೆ ಇದ್ದು ಇದರಲ್ಲಿ ಹೊಲಗಳಿವೆ. ಇದು ಹಿಂದೆ (ವಿಜಯನಗರ ಕಾಲದಲ್ಲಿ) ಉದಯಗಿರಿಗೆ ದಾರಿಯಾಗಿರಬಹುದು. ಏಕೆಂದರೆ ಈ ಕಣಿವೆ ನೈರುತ್ಯಕ್ಕೆ ಸಾಗಿದರೆ ಉದಯಗಿರಿ (ವಿಜಯನಗರ ಕೋಟೆಯ) ಹೆಬ್ಬಾಗಿಲು ಸಿಗುತ್ತದೆ.

ಪಶ್ಚಿಮ ದಿಕ್ಕಿಗೆ ರಾಮಸಾಗರ ಗ್ರಾಮವಿದೆ. ಉತ್ತರಕ್ಕೆ ಇತ್ತೀಚೆಗೆ ನಿರ್ಮಾಣವಾದ ಮನೆಗಳಿವೆ. ದಕ್ಷಿಣಕ್ಕೆ ರಾಮಸಾಗರ ಗ್ರಾಮವು ವಿಸ್ತರಿಸಿದೆ. ಈ ಕೋಟೆಯು ಉತ್ತರಾಭಿಮುಖವಾಗಿದ್ದು, ಸರಳ ಬಾಗಿಲುವಾಡವನ್ನು ಹೊಂದಿದೆ. ಒಳ ಮಧ್ಯಭಾಗದಲ್ಲಿ ದೊಡ್ಡ ಕೊತ್ತಳವಿದೆ. ಇದು ಸುಮಾರು ೩೦ಅಡಿ ಸುತ್ತಳತೆ ಹಾಗೂ ೩೦ ಅಡಿ ಎತ್ತರವಾಗಿದೆ. ವೃತ್ತಾಕಾರದಲ್ಲಿರುವ ಈ ಕೊತ್ತಳವನ್ನು ಮೇಲೇರಿ ಶತ್ರುಗಳನ್ನು ಗಮನಿಸಲು ಅನುಕೂಲವಾಗುವಂತೆ ಕಟ್ಟಲಾಗಿದೆ. ಇದೇ ಲಕ್ಷಣಗಳನ್ನು ಹೋಲುವ ಆರು ಕೊತ್ತಳಗಳು ಕೋಟೆ ಗೋಡೆಗಳಲ್ಲಿವೆ. ಕೋಟೆಯು ಸರಿ ಸುಮಾರು ೧೦ ಅಡಿ ಎತ್ತರವಾಗಿದೆ. ಇದು ೩ರಿಂದ ೫ ಅಡಿಗಳಷ್ಟು ಅಗಲವಾಗಿದ್ದು, ಸುಮಾರು ೩೦೦೦ ಮೀಟರುಗಳಷ್ಟು ಸುತ್ತಳತೆಯನ್ನು ಹೊಂದಿದ್ದು ಬಹು ಕಿರಿದಾದ ಕೋಟೆಯಾಗಿದೆ. ತಳಪಾಯವಿಲ್ಲದೆ ಹಾಸುಬಂಡೆಯ ಮೇಲೆ ಮಧ್ಯಮ ಗಾತ್ರದ ಕಲ್ಲುಗಳಿಂದ ಕೋಟೆಯನ್ನು ನಿರ್ಮಿಸಲಾಗಿದೆ. ಮಧ್ಯದಯಲ್ಲಿ ಕೆಲವು ವಾಸದ ಮನೆಗಳಿದ್ದ ಅವಶೇಷಗಳಿವೆ. ಇಲ್ಲಿ ವಾಸಿಸುತ್ತಿದ್ದ ಜನರಿಗಾಗಿ ಬಾವಿಯೊಂದನ್ನು ನಿರ್ಮಿಸಲಾಗಿತ್ತು. ಇಂದಿಗೂ ಬಾವಿಯಲ್ಲಿ ನೀರು ಇರುವುದು. ಕೋಟೆಯಲ್ಲಿ ಆಂಜನೇಯ ಹಾಗೂ ಭೀಮೇಶ್ವರ ದೇಗುಲಗಳಿವೆ. ಆಂಜನೇಯನ ಗುಡಿಯು ದಕ್ಷಿಣಾಭಿಮುಖವಾಗಿದ್ದು, ಉತ್ತರದ ಕೋಟೆಗೋಡೆಗೆ ಹೊಂದಿಕೊಂಡಿದೆ. ಇದರಲ್ಲಿ ಗರ್ಭಗೃಹ ಹಾಗೂ ತೆರೆದ ಸಭಾಮಂಪಗಳಿವೆ. ಗರ್ಭಗೃಹದಲ್ಲಿ ಆಂಜನೇಯನ ಉಬ್ಬುಗೆತ್ತನೆಯ ಶಿಲ್ಪ ಹಾಗೂ ಸಭಾಮಂಟಪದಲ್ಲಿ ಸಾದಾ ಕೆತ್ತನೆಯ ನಾಲ್ಕು ಕಂಬಗಳಿವೆ. ಭೀಮೇಶ್ವರ ದೇವಾಲಯವು ಪೂರ್ವಾಭಿಮುಖವಾಗಿದ್ದು, ಗರ್ಭಗೃಹ, ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಕಲ್ಲುಗುಂಡನಿಟ್ಟು ಆರಾಧಿಸುತ್ತಾರೆ. ಇಂದಿಗೂ ನಿತ್ಯ ಪೂಜೆ ನಡೆಯುತ್ತದೆ.

ಈ ಪ್ರದೇಶದ ಸುತ್ತಲೂ ಇರುವ ಬೆಟ್ಟಗಳಿಗಿಂತ ಇದು ಎತ್ತರವಾಗಿದೆ. ಮತ್ತು ಮೇಲ್ತುದಿಯಲ್ಲಿ ವಿಶಾಲ ಪ್ರದೇಶವನ್ನು ಹೊಂದಿದೆ. ಈ ಕಾರಣವಾಗಿಯೇ ಇಲ್ಲಿ ಕೋಟೆ ಕಟ್ಟಿರಬೇಕು. ಪ್ರಾಯಶಃ ವಿಜಯನಗರಕ್ಕೆ ಪೂರ್ವದಿಂದ ಶತ್ರುಗಳನ್ನು ತಡೆಹಿಡಿಯುವದಕ್ಕಾಗಿಯೇ ಈ ಚಿಕ್ಕ ಕೋಟೆಯನ್ನು ನಿರ್ಮಿಸಿ ಇಲ್ಲೊಂದು ಸೈನಿಕ ಠಾಣೆಯನ್ನು ಸ್ಥಾಪಿಸಿರಬಹುದಾಗಿದೆ. ಕ್ರಿ.ಶ.೧೮ನೇ ಶತಮಾನದಲ್ಲಿ ಈ ಕೋಟೆಯನ್ನು ಜೀರ್ಣೋದ್ಧಾರ ಮಾಡಿ ಪುನಃ ಉಪಯೋಗ ಮಾಡಿರುವ ಸಾಧ್ಯತೆಗಳು ಇರುವುವು.

ಆಕರ
ವಿಜಯನಗರ ಅಧ್ಯಯನ ಸಂ.೭, ೨೦೦೩, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಹೊಸಪೇಟೆ, ಪು.೧೨೦-೧೨೩

 

[1] ಮೀರಾಸಾಬಿಹಳ್ಳಿ ಶಿವಣ್ಣ, ೨೦೦೧, ನಾಯನಹಟ್ಟಿ ಪಾಳೆಯಗಾರರು, ದಕ್ಷಿಣ ಕರ್ನಾಟಕದ ಅರಸು ಮನೆತನಗಳು (ಸಂ ವಸು ಎಂ.ವಿ.) ಪು.೮೦, ಹಂಪಿ ಕನ್ನಡ ವಿಶ್ವವಿದ್ಯಾಲಯ

[2] ಅದೇ, ಪು.೮೧

[3] ದೇವರಕೊಂಡಾರೆಡ್ಡಿ ಮತ್ತು ಇತರರು, ೨೦೦೦, ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ಹಂಪಿ ೩, ಪು.೧೩೫, ಹಂಪಿ ಕನ್ನಡ ವಿಶ್ವವಿದ್ಯಾಲಯ

[4] ದೇವರಕೊಂಡಾರೆಡ್ಡಿ ಮತ್ತು ಇತರರು ೧೯೯೯೮ ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ಬಳ್ಳಾರಿ ಜಿಲ್ಲೆ ೧, ಪು.೧೭೭, ಹಂಪಿ ಕನ್ನಡ ವಿಶ್ವವಿದ್ಯಾಲಯ