ಹೊಸಪೇಟೆಯು ಒಂದು ತಾಲೂಕು ಕೇಂದ್ರ. ಹೊಸಪೇಟೆ ತಾಲೂಕು ಇತಿಹಾಸ ಎಂಬುವುದರಲ್ಲಿ ನಗರದ ಇತಿಹಾಸದ ಬಗ್ಗೆ ಈಗಾಗಲೇ ಚರ್ಚಿಸಲಾಗಿದೆ. ನಗರದ ದಕ್ಷಿಣ ಭಾಗಕ್ಕೆ ಇರುವ ಹಳೇ ಊರಿನ ಜನವಸತಿ ಪ್ರದೇಶವನ್ನು ಈಗಲೂ ಕ್ವಾಟೆ, ಕೋಟೆ ಎಂದು ಕರೆಯುವರು. ಆದರೆ ಕೋಟೆ ಕೊತ್ತಳಗಳ ಯಾವುದೇ ಅವಶೇಷಗಳು ಇಂದು ಅಲ್ಲಿ ಕಾಣುವುದಿಲ್ಲ. ನಗರವು ವೇಗವಾಗಿ ಬೆಳೆಯುತ್ತಿರುವುದರಿಂದ ಇಲ್ಲಿನ ಕೋಟೆ ಕೊತ್ತಲಾವಶೇಷಗಳನ್ನು ನುಂಗಿ ಹಾಕಿದೆ. ಇಲ್ಲಿಯ ಭೌಗೋಳಿಕ ಲಕ್ಷಣಗಳು ಹಾಗೂ ಸ್ಥಳೀಯರ ಹೇಳಿಕೆಯಿಂದಾಗಿ ಕೋಟೆಯ ಉತ್ತರಾಭಿಮುಖವಾಗಿದಂತೆ ತಿಳಿದುಬರುವುದು.

ಹೊಸಪೇಟೆ ಪಟ್ಟಣದ ಇಂದಿರಾನಗರ ಬಡಾವಣೆಯ ಈಶ್ವರನ ಗುಡಿಯಲ್ಲಿರುವ ಶಾಸನದಲ್ಲಿ ಹೊಸಪೇಟೆ ಪ್ರದೇಶದಲ್ಲಿ ಕೋಟೆ ಇದ್ದುದಕ್ಕೆ ಪೂರಕವಾಗಿ ಪ್ರಸ್ತಾಪವು ಕೆಳಗಿನಂತಿದೆ.[1]

ಶುಭಮಸ್ತು ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ
ಶಕ ವರ್ಷಗಳು ೧೪೪೩ನೆಯ ವಿಷು ಸಂವತ್ಸರ ಕಾರ್ತಿ
ಕ ಶು ೧೧ ಪುಣ್ಯಕಾಲದಲ್ಲು ಶ್ರೀಮನ್‌ಮಹಾರಾಜಾಧಿ ರಾ
ಜಾ ರಾಜಪರಮೇಶ್ವರ ಶ್ರೀ ವೀರ ಪ್ರತಪ ಶ್ರೀ ವೀರ ಕೃಷ್ಣರಾಯಮ
ಹರಾಯರು ಪ್ರುಥವಿ ರಾಜ್ಯಂ ಗೈಉತಯಿರಲು ತಿರುಮ
ಲದೇವಿಯರ ಪಟ್ಟಣದ ನಾಲ್ಕು ಬಾಗಿಲು ಬಳಿಯ ಶ್ರೀ ಕಾಸಿ ವಿ
ಶ್ವೇಶ್ವರನಂ ಪ್ರತಿಷ್ಠಾಕಾಲದಲ್ಲು ಅಭಿಷೇಕ ಪೂಜಾ ನೈವೇದ್ಯಕ್ಕೆ
ತಿರುಮಲದೇವಿ ಪಟ್ಟಣಕ್ಕೆ ಸಲ್ಲುವ ಕೋಟೆಗೆ ಬಡಗಲು ನ
ಯಲ್ಲಂಪಣನ ಕೆರೆಯನು ಶ್ರೀ ಕಾಸಿ ವಿಶ್ವನಾಥ ದೇವರಿಗೆ….

ಈ ಶಾಸನವು ತಿರುಮಲದೇವಿ ಅಮ್ಮನವರ ಪಟ್ಟಣದಲ್ಲಿ ಯಲ್ಲಪಣ್ಣನ ಕೆರೆಯ ದಕ್ಷಿಣಕ್ಕೆ ಕೋಟೆ ಇರುವುದನ್ನು ಸೂಚಿಸುತ್ತದೆ. ಯಲ್ಲಪಣ್ಣನ ಕೆರೆಯು ಇಂದು ಬಸವೇಶ್ವರ ಬಡಾವಣೆಯಾಗಿದೆ. ಈಗ ಕೋಟೆಯೆಂದು ಕರೆಯುವ ಪ್ರದೇಶವು ಬಸವೇಶ್ವರ ಬಡಾವಣೆಯಿಂದ ದಕ್ಷಿಣ ದಿಕ್ಕಿಗೆ ೧ ಕಿ.ಮೀ. ದೂರದಲ್ಲಿದೆ. ಕೋಟೆಯಲ್ಲಿ ವಿಜಯನಗರ ಕಾಲದ ರಾಮಲಿಂಗೇಶ್ವರ, ಈಶ್ವರ, ಒಡಕರಾಯ ಆಂಜನೇಯನ ಗುಡಿಗಳಿಲ್ಲದೆ, ಒಂದೆರಡು ಕಡೆ ಕೋಟೆಗೆ ಬಳಸಿದ್ದ ಮಧ್ಯಮಗಾತ್ರದ ಕಣಶಿಲೆಗಳು ಕಂಡುಬಂದಿದೆ.

ವಾಸ್ತವವಾಗಿ ಹೊಸಪೇಟೆಯ ಚಾರಿತ್ರಿಕ ಮಹತ್ವ ಕಳಚೂರಿ ಬಿಜ್ಜಳ ದೇವನ ಕಾಲದಿಂದ ಅಥವಾ ಅದಕ್ಕೂ ಪೂರ್ವದಿಂದ ಪ್ರಾರಂಭವಾಗುತ್ತದೆ.[2] ಹೊಸಪೇಟೆಯ ಸಣ್ಣಕ್ಕಿ ವೀರಭದ್ರ ದೇವಾಲಯದ ಹಿಂಭಾಗದಲ್ಲಿರುವ ಮರದ ಬುಡದಲ್ಲಿ ಕಲ್ಯಾಣ ಚಾಳುಕ್ಯರ ಶಾಸನ ಶಿಲ್ಪಗಳು ಕಂಡುಬರುತ್ತವೆ. ಇಲ್ಲಿ ಕೋಟೆ ಇದ್ದುದರ ಬಗ್ಗೆ ಚಾಳುಕ್ಯರ ಶಾಸನಗಳು ಏನು ಹೇಳುವುದಿಲ್ಲ. ಆಗ ಹೊಸಪೇಟೆಯ ಚಿಕ್ಕ ಗ್ರಾಮವಾಗಿತ್ತೆಂದು ತಿಳಿಯುವುದು.[3]

ಹೊಸಪೇಟೆಯ ಜಂಬುನಾಥ ದೇವಾಲಯದ ಪೂಜಾರಿ ವೀರಯ್ಯಸ್ವಾಮಿ ಅವನ ವಶದಲ್ಲಿದ್ದ ತಾಮ್ರಶಾಸನದ ಕಾಗದ ಪ್ರತಿಯಲ್ಲಿ ಚೋಳರಾಯನ ಹೊಸಪೇಟೆಯ ಕೋಟೆ ಕಟ್ಟಿಸಿ, ಜೋಳದ ರಾಶಿ ಗುಡ್ಡದ ಬಳಿಯ ಕೆರೆಗಳನ್ನು ಕಟ್ಟಿಸಿದನೆಂದು ಹೇಳಿದೆ.[4] ಈ ತಾಮ್ರ ಪತ್ರವು ಇತ್ತೀಚೆಗೆ ಅಂದರೆ ೨೦ನೆಯ ಶತಮಾನದಲ್ಲಿ ನಿರ್ಮಾಣವಾಗಿದೆ. ಇದರಲ್ಲಿ ವಿಷಯಗಳು ಕ್ರಮಬದ್ಧವಾಗಿಲ್ಲ. ಕ್ರಿ.ಶ. ೧೫೨೧ರ ಕೃಷ್ಣದೇವರಾಯನ ಕಾಲದಲ್ಲಿ ಶಾಸನವು ತಿರುಮಲದೇವಿ ಅಮ್ಮನವರ ಪಟ್ಟಣದಲ್ಲಿ ಕೋಟೆ ಇದ್ದುದನ್ನು ಹೇಳುತ್ತದೆ. ಆದರೆ ಕಲ್ಯಾಣ ಚಾಳುಕ್ಯರ ಇಲ್ಲಿಯ ಶಾಸನಗಳಲ್ಲಿ ಕೋಟೆಯ ಯಾವುದೇ ಉಲ್ಲೇಖಗಳು ಬರುವುದಿಲ್ಲ. ಹಾಗಾಗಿ ಇವೆರಡರ ಮಧ್ಯದ ಅವಧಿಯಲ್ಲಿ ಹೊಸಪೇಟೆ ತಿರುಮಲದೇವಿ ಪಟ್ಟಣದಲ್ಲಿ ಕೋಟೆ ನಿರ್ಮಾಣವಾಗಿರಬಹುದು.

ಸ್ಥಳೀಯ ಮಾಹಿತಿಯನ್ನು ಗಮನಿಸಿದಾಗ ದ್ವಾರಸಮುದ್ರದ ಅರಸನಾದ ೩ನೇ ಬಲ್ಲಾಳನು ತನ್ನ ಕೋಟೆಯ ರಕ್ಷಣೆಗಾಗಿ ಸುತ್ತಲೂ ಕಿರಾತಪಡೆಗಳನ್ನು ಸ್ಥಾಪಿಸಿದನೆಂದು ಅವೇ ಕಾಲಕ್ರಮದಲ್ಲಿ ಗ್ರಾಮಗಳಾದವೆಂದು ತಿಳಿದುಬರುತ್ತದೆ.[5] ಅವುಗಳೆಂದರೆ ಇಂದಿನ ಹೊಸಪೇಟೆಯ ಶ್ರೀ ಜಗಳೀ ಕಟ್ಟೆರಾಯನೆಂಬ ಆಂಜನೇಯ ಗುಡಿಯ ಹತ್ತಿರ ಜಗಳೀಕಟ್ಟೆ, ಬೈಲುಹನುಮಪ್ಪನ ಗುಡಿಯ ಹತ್ತಿರ ಹಂದಿಗನೂರು, ಉತ್ತರಾದಿ ಮಠದ ಹತ್ತಿರ ವಿರೂಪಾಕ್ಷಪುರ, ಸಣ್ಣಕ್ಕಿ ವೀರಭದ್ರನ ಗುಡಿಯ ಹತ್ತಿರ ತಿರುಮಲಾಪುರ ಮತ್ತು ಶ್ರೀ ವೇಣುಗೋಪಾಲಕೃಷ್ಣ ದೇವಾಲಯದ ಹತ್ತಿರ ವಿಜಯಪುರ ಗ್ರಾಮಗಳು ಮತ್ತೊಂದು ಮಾಹಿತಿಯಂತೆ ಹರಪನಹಳ್ಳಿ ಸೋಮಶೇಖರ ನಾಯಕನ (೧೭೪೨-೬೬) ಕಾಲದಲ್ಲಿ ಜಗಳೀಕಟ್ಟೆ ವಿರೂಪಾಕ್ಷಪುರ, ವಿಜಯಪುರ, ತಿರುಮಲಪುರ ಮತ್ತು ಹಂದಿಗನೂರು ಗ್ರಾಮಗಳನ್ನು ಒಂದುಗೂಡಿಸಿ ಹೊಸಪೇಟೆಯನ್ನಾಗಿ ಪರಿವರ್ತಿಸಲಾಯಿತ್ತೆಂದು ತಿಳಿದುಬರುತ್ತದೆ.[6] ಹೊಸಪೇಟೆಯ ಹಳೆಯ ವಸತಿ ಸ್ಥಾನಗಳಲ್ಲಿ ಕೋಟೆಯ ಪ್ರದೇಶ ಮುಖ್ಯವಾಗಿದ್ದು, ಪ್ರಾಯಶಃ ವಿಜಯನಗರ ಕಾಲದ ತಿರುಮಲದೇವಿ ಪಟ್ಟಣವೇ ಇದಾಗಿದೆ. ಇದರ ಮೇರೆಗಳು ಪೂರ್ವಕ್ಕೆ ಮುದಿಯಪ್ಪನ ಗುಡಿ, ಉತ್ತರಕ್ಕೆ ಬಳ್ಳಾರಿ ದುರ್ಗಮ್ಮನ ಗುಡಿ, ಪಶ್ಚಿಮ ಮತ್ತು ದಕ್ಷಿಣದಲ್ಲಿ ಕೋಟೆ ಗೋಡೆಯಿದ್ದು, ಉತ್ತರದಲ್ಲಿ ಗೋಡೆಯ ಹೊರಗೆ ಕಬ್ಬೇರ, ಅಗಸ ಮತ್ತು ಕುರುಬರ ಕೇರಿಗಳಿವೆಯೆಂದು ಹೇಳಲಾಗುತ್ತದೆ. ಇಲ್ಲಿನ ದೇಸಾಯಿ ಮನೆತನದ ನರಸಪ್ಪನಿಗೆ ಸಹಾಯಕರಾಗಿದ್ದ ೭೦೦೦ ಬೇಡರಿಗೆ ಹೊಸಪೇಟೆ ಕೋಟೆಯ ಸುತ್ತಲೂ ವಾಸಿಸಲು ನಿವಾಸಗಳನ್ನು ಏರ್ಪಡಿಸಲಾಯಿತು. ನಂತರದ ಕಾಲದಲ್ಲಿ ಸಂಭವಿಸಿದ ಮಲೇರಿಯಾ ಕಾಯಿಲೆ ಪರಿಣಾಮವಾಗಿ ಸಮೀಪದ ಗ್ರಾಮಗಳಿಂದ ಎತ್ತರದ ಹೊಸಪೇಟೆಗೆ ಜನರ ವಲಸೆ ಬಂದಿತು. ಹಾಗೂ ಪ್ಲೇಗ್‌ನಂತಹ ಕಾಯಿಲೆ ನಿಯಂತ್ರಣಕ್ಕೆ ಇಲ್ಲಿನ ಕೋಟೆಗಳನ್ನು ಕೆಡವಿ ಹಳ್ಳಕೊಳ್ಳಗಳನ್ನು ಮುಚ್ಚಲಾಯಿತೆಂದು ಸ್ಥಳೀಯರು ಹೇಳುತ್ತಾರೆ. ಈ ಮೇಲಿನ ವಿಷಯಕ್ಕೆ ಪೂರಕವೆಂಬಂತೆ ಈ ಕೋಟೆಯ ಪ್ರದೇಶದ ಪಶ್ಚಿಮಕ್ಕೆ ಸಂಪೂರ್ಣವಾಗಿ ನಾಯಕರ ಮನೆಗಳೇ ಇವೆ. ಕೋಟೆಯೊಳಗೆ ದೇಸಾಯಿಗಳು, ಪಾಂಡೆಯವರ ವಂಶದವರು ಈಗಲೂ ತಮ್ಮ ಪುರಾತನ ಸ್ಥಳದಲ್ಲಿಯೇ ಇದ್ದಾರೆ. ಹೊಸಪೇಟೆ ಎಂಬ ಗ್ರಾಮವು ಪೂರ್ವಕಾಲದಲ್ಲಿ ವಿಜಯನಗರ ರಾಜ್ಯದ ರಕ್ಷಾದುರ್ಗವಾಗಿದ್ದಿತು. ಇದೊಂದು ಚಿಕ್ಕಹಳ್ಳಿಯಾಗಿದ್ದರೂ ಭದ್ರತರವಾದ ಕೋಟೆ ಕೊತ್ತಲಗಳಿಂದ ಸುರಕ್ಷಿತವಾಗಿತ್ತೆಂದು ಚಿಕ್ಕೋರೂರು ಗೋವಿಂದಚಾರ್ಯರು ಅಭಿಪ್ರಾಯಪಡುತ್ತಾರೆ.[7] ಹೊಸಪೇಟೆಯ ದುರ್ಗವನ್ನು ಮಾತ್ರ ಅಚ್ಚಳಿಯದೇ ಉಳಿಸಿಕೊಂಡು ಇಲ್ಲಿಯೇ ಕೋಟೆಯಲ್ಲಿ ಒಂದು ಸಿಂಹಾಸನವನ್ನು ಸ್ಥಾಪಿಸಿಕೊಂಡು ಒಂದನೇ ಬುಕ್ಕನು ಆಳ್ವಿಕೆ ಮಾಡಿದಂತೆ ತಿಳಿದುಬರುತ್ತದೆ.[8] “ಹಾಳು ಬಿದ್ದ ಕಂದಕ ಕೋಟೆ ಕೊತ್ತಳಗಳು ಕ್ರಿ.ಶ.೧೯೫೭ರ ವರೆಗೆ ಇದ್ದವೆಂದು ತಿಳಿಯುವುದು.”[9]

ಆಕರ
ಕೋಟೆ-ಕೊತ್ತಳಗಳು: ಒಂದು ಅಧ್ಯಯನ (ಬಳ್ಳಾರಿ ಜಿಲ್ಲೆ), ೨೦೦೨, ಪಿಎಚ್‌.ಡಿ. ಮಹಾಪ್ರಬಂಧ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು.೨೬೩-೨೬೫

 

[1] ದೇವರಕೊಂಡಾರೆಡ್ಡಿ ಮತ್ತು ಇತರರು, ೧೯೯೮, ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ಬಳ್ಳಾರಿ ಜಿಲ್ಲೆ ೧, ಪು.೧೪೧, ಹಂಪಿ, ಕನ್ನಡ ವಿಶ್ವವಿದ್ಯಾಲಯ

[2] Annual Report on Indian Epigraphy, No. 122, Date About 12th Century A.D. 1980-81, Hospet

[3] ಗೋವಿಂದಚಾರ್ಯ ಚಿಕ್ಕೋರೂರು, ೧೯೯೭, ಹೊಸಪೇಟೆ ಐತಿಹ್ಯ, ಹೊಸಪೇಟೆ ಚಾರಿತ್ರಿಕ ವಿವೇಚನೆ ಐತಿಹ್ಯ, ಪರಿಶೀಲನೆ, ಪು. ೧೨, ಹೊಸಪೇಟೆ, ಶರಣರ ಸುವಾಸಿನಿ ಬಳಗ

[4] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೧, ಪೂರ್ವೋಕ್ತ, ಪು.೧೪೮

[5] ಮಹದೇವ ಸಿ. ೧೯೯೭, ಹೊಸಪೇಟೆ ಐತಿಹ್ಯ, ಹೊಸಪೇಟೆ ಚಾರಿತ್ರಿಕ ವಿವೇಚನೆ, ಐತಿಹ್ಯ, ಪರಿಶೀಲನೆ, ಪು.೨೦, ಹೊಸಪೇಟೆ, ಶರಣರ ಸುವಾಸಿನಿ ಬಳಗ

[6] ಅದೇ, ಪು.೨೦

[7] ಗೋವಿಂದಚಾರ್ಯ ಚಿಕ್ಕೇರೂರು, ೧೯೯೭, ಪೂರ್ವೋಕ್ತ, ಪು.೧೨

[8] ಅದೇ, ಪು.೧೩

[9] ಅದೇ, ಪು.೧೫