ಕುದುರೆಕಲ್ಲು: ವಿಜಯನಗರದ ರಕ್ಷಣಾ ವ್ಯವಸ್ಥೆಗೆ ಕುದುರೆ ಕಲ್ಲುಗಳು ಒಂದು ಉತ್ತಮ ಉದಾಹರಣೆ. ನೂರಾರು ಕಲ್ಲುಗಳನ್ನು ಒಂದೆಡೆ ಕಾಣಬಹುದು. ಸಾಕಷ್ಟು ದೊಡ್ಡದಾದ ಕಲ್ಲುಗಳನ್ನು ಎರಡು ಬೆಟ್ಟಗಳ ನಡುವಿನ ಕಣಿವೆಯಲ್ಲಿ ಅಡ್ಡಲಾಗಿ ನೆಡಲಾಗಿದೆ. ಇವುಗಳ ಅನೇಕ ಸಾಲುಗಳು ಕಂಡುಬರುತ್ತವೆ. ಕುಮ್ಮಟದುರ್ಗದ ಹಿರೇ ಕಣಿವೆಯ ಪ್ರದೇಶದಲ್ಲಿ ಕುದುರೆ ಕಲ್ಲುಗಳ ಸಾಲುಗಳು ಇರುವುದನ್ನು ಕಾಣಬಹುದು. ಹಂಪಿಯಲ್ಲಿ ಈ ಕಲ್ಲುಗಳು ಮೊದಲನೆಯ ಕೋಟೆಯ ಹೊರಭಾಗದಲ್ಲಿ ಅಂದರೆ ಪುರಪ್ರವೇಶದ ಮೊದಲ ಕೋಟೆಯ ಹೊರಭಾಗದಲ್ಲಿ ನೆಟ್ಟಿರಲಾಗುತ್ತಿತ್ತು. ಈ ಕಲ್ಲುಗಳನ್ನು ನೋಡಿದ್ದಲ್ಲಿ ಒಂದು ಕಲ್ಲಿನ ಹಿಂದೆ ಇನ್ನೊಂದು ಕಲ್ಲು ನೇರವಾಗಿರದೆ ಪಕ್ಕದಲ್ಲಿರುವುದು ಸಾಮಾನ್ಯ. ಈ ರೀತಿ ಒಂದ ಪಕ್ಕದಲ್ಲೊಂದು ಸಾಲಾಗಿ ಕಲ್ಲುಗಳನ್ನು ಜೋಡಿಸಿರುವುದರಿಂದ ಶತ್ರುಸೈನ್ಯದ ಮುನ್ನಡೆ, ಅದರಲ್ಲೂ ಆಶ್ವದಳದ ಮುನ್ನಡೆಯನ್ನು ಸಮರ್ಥವಾಗಿ ತಡೆಯುವಲ್ಲಿ ಸಹಾಯಕರವಾಗುತ್ತಿತ್ತು. ವೈರಿಯು ನಗರ ಪ್ರವೇಶ ಮಾಡಲು ಗುಡ್ಡ ಕಣಿವೆ ಅಥವಾ ಕೋಟೆ ದ್ವಾರಗಳನ್ನು ದಾಟಿ ಮುನ್ನಡೆಯಬೇಕಾಗಿತ್ತು. ಕೋಟೆಗಳನ್ನು ಹೊರತುಪಡಿಸಿ ಕಣಿವೆಯ ಪ್ರದೇಶದಲ್ಲಿ ಒಳನುಗ್ಗಲು ಪ್ರಯತ್ನಿಸಿದರೆ ಈ ಕುದುರೆ ಕಲ್ಲುಗಳು ಉತ್ತಮವಾದ ತಡೆಗೋಡೆಗಳಾಗುತ್ತಿದ್ದವು. ಆ ಸಂದರ್ಭದಲ್ಲಿ ಎರಡೂ ಕಡೆಯ ಗುಡ್ಡಗಳ ಮೇಲಿಂದ ಶತ್ರುಪಡೆಯ ಸೈನಿಕರ ಮೇಲೆ ಬಿಲ್ಲು ಬಾಣ ಭರ್ಜಿಗಳಿಂದ ಆಕ್ರಮಣ ಮಾಡಿ ಅವರನ್ನು ನಾಶಮಾಡಲಾಗುತ್ತಿತ್ತು. ದೊಡ್ಡ ಗುಡ್ಡಗಳನ್ನು ಸುತ್ತುವರಿದು ಕಣಿವೆಗಳನ್ನು ಹುಡುಕಿಕೊಂಡು ಅವುಗಳ ಮೂಲಕ ಒಳನುಗ್ಗಲು ಪ್ರಯತ್ನಿಸಿದರೆ ಅಲ್ಲಿ ಮೊದಲು ಅಡ್ಡಬರುತ್ತಿದುದು ಕುದರೆ ಕಲ್ಲುಗಳು. ಭಾರತದ ಯುದ್ಧ ತಂತ್ರದಲ್ಲಿ ಇವು ವಿಶಿಷ್ಟ ಸ್ಥಾನ ಪಡೆದಿವೆ.

ಕುಮ್ಮಟದುರ್ಗದಲ್ಲಿ ದೊಡ್ಡ ಉಂಡೆಕಲ್ಲುಗಳನ್ನು ಎರಡು ಭಾಗವಾಗಿ ನೇರವಾಗಿ ಸೀಳಿ ಒಂದರ ಪಕ್ಕದಲ್ಲಿ ಒಂದರಂತೆ ಭೂಮಿಯಲ್ಲಿ ಹೂಳಲಾಗುತ್ತಿತ್ತು. ಒಂದು ಸಾಲಿನ ಕಲ್ಲಿಗೂ ಇನ್ನೊಂದು ಸಾಲಿನ ಕಲ್ಲಿಗೂ ಸಮಾನ ಅಂತರವಿದ್ದರೂ ವಿವಿಧ ಎತ್ತರಗಳಿದ್ದುದರಿಂದ ಸೈನ್ಯವು ಈ ಕಲ್ಲುಗಳನ್ನು ದಾಟಿಹೋಗಲು ತೀವ್ರ ಶ್ರಮಪಡಬೇಕಾಗುತ್ತಿತ್ತು. ಈ ರೀತಿಯ ಕುದುರೆ ಕಲ್ಲುಗಳು ವಿಜಯನಗರ ಪೂರ್ವ ಹಾಗೂ ವಿಜಯನಗರ ಕಾಲದ ಸೈನಿಕ ಯುದ್ಧ ಕಲೆಗೆ ಉತ್ತಮವಾದ ಉದಾಹರಣೆಗಳಾಗಿವೆ.

ವಿಜಯನಗರದಲ್ಲಿ ಇಂತಹ ಕಲ್ಲುಗಳು ಇದ್ದ ಬಗ್ಗೆ ವಿದೇಶೀ ಪ್ರವಾಸಿಗರಾದ ಅಬ್ದುಲ್‌ರಜಾಕ್‌ಹಾಗೂ ಡೊಮೆಂಗೋ ಪಯಾಸ್‌ಉಲ್ಲೇಖ ಮಾಡಿದ್ದಾರೆ. ಬಹುಶಃ ಕುದುರೆ ಕಲ್ಲುಗಳ ತಂತ್ರಗಾರಿಕೆ ವಿಜಯನಗರ ಪೂರ್ವಕಾಲದಿಂದಲೂ ಮುಂದುವರೆದಿದೆ ಎಂಬುದಕ್ಕೆ ಹಂಪೆ ಹತ್ತಿರವಿರುವ ವಿಜಯನಗರವನ್ನು ೧೪೪೨-೪೩ರಲ್ಲಿ ಸಂದರ್ಶಿಸಿ ಇಲ್ಲಿನ ವೈಭವವನ್ನು ತಿಳಿಸಿದ್ದಾನೆ. ಮೊದಲನೆಯ ಕೋಟೆಯ ಹೊರಭಾಗದಲ್ಲಿ ಸುಮಾರು ಮನುಷ್ಯನೆತ್ತರದ ಕಲ್ಲುಗಳಿದ್ದು, ಅರ್ಧಭಾಗವನ್ನು ಭೂಮಿಯಲ್ಲಿ ಹೂತಿದ್ದು ಉಳಿದರ್ಧ ಭಾಗ ಮೇಲೆ ಇದ್ದ ಬಗ್ಗೆ ತಿಳಿಸಿದ್ದಾರೆ. ಈ ಕಲ್ಲುಗಳು ಹಲವು ಸಾಲುಗಳಲ್ಲಿದ್ದು ಪ್ರತೀ ಎರಡನೇ ಸಾಲಿನ ಕಲ್ಲು ಅದರ ಮುಂದಿನ ಸಾಲಿನ ಎರಡು ಕಲ್ಲುಗಳ ಮಧ್ಯೆ ಬರುವಂತೆ ನೆಟ್ಟಿರುವುದನ್ನು ಗಮನಿಸಿ ಉಲ್ಲೇಖಿಸಿದ್ದಾನೆ. ಇದರಿಂದಾಗಿ ಸೈನ್ಯವೂ, ಅಶ್ವದಳವೂ ಸುಲಭವಾಗಿ ನಗರಪ್ರವೇಶ ಮಾಡುವುದನ್ನು ನಿರ್ಬಂಧಿಸಿದಂತೆ ಆಗುತ್ತಿತ್ತು ಎಂದು ತಿಳಿಸಿದ್ದಾನೆ.

೧೫೨೦ರಲ್ಲಿ ಬಂದ ಪೋರ್ಚುಗೀಸ್‌ಪ್ರವಾಸಿ ಡೊಮೆಂಗೋ ಪಾಯಸ್‌ಹೆಚ್ಚಾಗಿ ಮೇಲಿನ ರೀತಿಯ ವಿವರಣೆಯನ್ನೇ ನೀಡಿದ್ದಾನೆ. ಇಲ್ಲಿಯ ರಕ್ಷಣಾ ವ್ಯವಸ್ಥೆಗೆ ಕೋಟೆಗಳು ಅತೀ ಮುಖ್ಯವಾಗಿದ್ದು, ನಗರದ ಹೊರ ಕೋಟೆಯ ಹೆಬ್ಬಾಗಿಲ ಬಳಿ ಬಂದರೆ ಹಿಂದಿನ ಸುತ್ತಿನ ಕೋಟೆಗಳು ಒಂದರ ಹಿಂದೆ ಬಂದಿರುವಂತೆ ಕಾಣುತ್ತಿತ್ತು. ಅಲ್ಲದೆ ಕೋಟೆಗೋಡೆಯನ್ನು ಬೃಹತ್‌ಬಂಡೆಗಳನ್ನು ಸೀಳಿ ಚೌಕಾಕಾರದ ಅಥವಾ ಆಯತಾಕಾರದ ಕಲ್ಲುಗಳಾಗಿ ಒಡೆದು ನಿರ್ಮಿಸಲಾಗುತ್ತಿತ್ತು. ಈ ರೀತಿಯ ಕೋಟೆ ಕೆಲವು ಕಡೆ ಹಾಳಾಗುವತ್ತ ಸಾಗಿದೆ ಎನ್ನುವುದನ್ನು ಉಲ್ಲೇಖಿಸಿದ್ದಾನೆ. ಈ ಕೋಟೆಗೋಡೆಯು ತಗ್ಗಿನ ಪ್ರದೇಶಗಳಲ್ಲಿ ಹಾಯ್ದು ಹೋಗಬೇಕಾದರೆ ಮತ್ತು ಕೆಲವು ಕಡೆ ಕಂದಕಗಳಿದ್ದು ಅಲ್ಲಿ ನೀರಿನಿಂದ ತುಂಬಿಕೊಂಡಿರುವುದನ್ನು ಕಂಡಿರುವುದಾಗಿ ತಿಳಿಸಿದ್ದಾನೆ. ಈ ರೀತಿಯ ತಡೆಗಳಲ್ಲದೆ ಕೆಲವು ಚೂಪಾದ ಕಲ್ಲುಗಳನ್ನು ಭೂಮಿಯಲ್ಲಿ ನೆಟ್ಟು, ಅದರ ಮೇಲ್ಭಾಗವು ಸುಮಾರು ಮನುಷ್ಯನ ಎದೆಮಟ್ಟದವರೆಗೂ ಬರುವಂತೆ ವ್ಯವಸ್ಥೆಗೊಳಿಸಿರುವುದನ್ನು ತಿಳಿಸಿದ್ದಾನೆ. ಈ ಕಲ್ಲುಗಳು ಭರ್ಜಿಯ ಹಿಡಿಯ ಒಂದರಿಂದ ಒಂದೂವರೆ ಪಟ್ಟು ಅಗಲವನ್ನು ಹೊಂದಿದ್ದವು ಎಂದು ಹೇಳಿದ್ದಾನೆ. ಈ ಕಲ್ಲುಗಳು ಹಲವು ಸಾಲುಗಳಲ್ಲಿದ್ದು, ಕೋಟೆ ಗೋಡೆಯಿಂದ ಮತ್ತು ಸಾಲುಗಳ ಮಧ್ಯೆ ಒಂದು ಸಮಾನ ಅಂತರವಿದ್ದ ಬಗ್ಗೆ ಗಮನಿಸಲಾಗಿದೆ. ಅಲ್ಲದೆ ಕಣಿವೆಯ ಪ್ರದೇಶದಿಂದ ಬೆಟ್ಟದ ತಪ್ಪಲಿನವರೆಗೂ ವ್ಯವಸ್ಥಿತವಾಗಿ ನಡೆಲಾಗಿತ್ತು ಎಂದು ತಿಳಿಸಲಾಗಿದೆ.

ರಾಬರ್ಟ್‌ಸೀವೆಲ್‌ರವರು, ಡೊಮೆಂಗೋ ಪಯಾಸ್‌ಮತ್ತು ಅಬ್ದುಲ್‌ರಜಾಕ್‌ಕುದುರೆ ಕಲ್ಲುಗಳ ಬಗೆಗೆ ಪ್ರಸ್ತಾಪ ಮಾಡಿದ್ದಾರೆ ಎಂದು ತಮ್ಮ ಕೃತಿ ‘ಫರ್ಗಟಾನ್‌ಎಂಪೈರ್’ನಲ್ಲಿ ತಿಳಿಸಿದ್ದಾರೆ. ಆದರೆ ತಾವು ಆ ಕಲ್ಲುಗಳನ್ನು ನೋಡಿಲ್ಲವೆಂದು ಹೇಳುತ್ತಾರೆ.

ವಿಜಯನಗರಕ್ಕೆ ಏಳುಸುತ್ತಿನ ಕೋಟೆಗಳಿದ್ದು, ಅದರಲ್ಲಿ ಒಳಸುತ್ತಿನ ಕೋಟೆಯ ಹೆಬ್ಬಾಗಿಲಿನ ಕಾವಲುಗಾರರು ಸುಂಕದ ವಸೂಲಿ ಮಾಡುತ್ತಿದ್ದ ಬಗ್ಗೆ ತಿಳಿಸಿದ್ದಾರೆ. ಅಲ್ಲದೆ ಕೋಟೆಗಳನ್ನು ಕಾಯಲು ಸದೃಢವಾದ ಕಾವಲುಗಾರರು ಇದ್ದ ಬಗ್ಗೆ ಉಲ್ಲೇಖಿಸಿದ್ದಾರೆ.

ವಿಜಯನಗರ ಪಟ್ಟಣ ಮತ್ತು ಅದರ ಸುತ್ತಮುತ್ತ ಬೆಟ್ಟಗುಡ್ಡಗಳ ಪ್ರಾಕೃತಿಕ ರಕ್ಷಣೆ ಇದ್ದ ಬಗ್ಗೆ ಗಮನಿಸಬಹುದಾಗಿದೆ. ಪಟ್ಟಣದ ಸುತ್ತ ಗುಡ್ಡಗಳ ಪ್ರಾಕೃತಿಕ ರಕ್ಷಣೆ ಇದ್ದ ಬಗ್ಗೆ ಗಮನಿಸಬಹುದಾಗಿದೆ. ಪಟ್ಟಣದ ಸುತ್ತ ಗುಡ್ಡಗಳಿದ್ದು, ಕಣಿವೆ ಪ್ರದೇಶದಲ್ಲಿ ಕೋಟೆಗಳನ್ನು ಕಟ್ಟಿ ಅಬೇಧ್ಯವಾದ ಪಟ್ಟಣವನ್ನು ನಿರ್ಮಿಸಲಾಗಿತ್ತು. ಪ್ರವಾಸಿಗರು ಏಳುಸುತ್ತಿನ ಕೋಟೆಯ ಬಗ್ಗೆ ತಿಳಿಸಿದ್ದರೂ ಈಗ ಕೆಲವು ಸುತ್ತುಗಳು ಮಾತ್ರ ಇರುವುದನ್ನು ಗಮನಿಸಬಹುದು. ಪ್ರಾಕೃತಿಕವಾಗಿ ಈ ಪ್ರದೇಶವು ಬೃಹತ್‌ಬಂಡೆಗಳನ್ನು ಹಾಗೂ ಬೆಟ್ಟಗಳನ್ನು ಹೊಂದಿದ್ದರಿಂದ ಕೋಟೆಯನ್ನು ನಿರ್ಮಿಸುವುದು ಸುಲಭವಾಗಿತ್ತು. ದೊಡ್ಡ ಕಲ್ಲುಗಳನ್ನು ಆಯತಾಕಾರ ಅಥವಾ ಚೌಕಾಕಾರದ ಮುಂಭಾಗವನ್ನು ಹೊಂದಿ ಬೆಣೆಯ ರೂಪದಲ್ಲಿ ಸಿದ್ಧಪಡಿಸಿ ಒಂದರಮೇಲೊಂದನ್ನಿಟ್ಟು ಅಗಲವು ಕಿರಿದಾಗುತ್ತಾ ಸಾಗಿ ಮೇಲ್ಭಾಗವು ಚೂಪಾಗಿರುವಂತೆ ನಿರ್ಮಿಸಲಾಗಿದೆ. ಈ ಕಲ್ಲುಗಳ ಮಧ್ಯೆ ಯಾವುದೇ ರೀತಿಯ ಸುಣ್ಣ ಅಥವಾ ಗಾರೆಯನ್ನು ಉಪಯೋಗಿಸದೇ ಇರುವುದನ್ನು ಕಾಣಬಹುದು. ಕೋಟೆಯ ಹೊರಭಾಗ ಎತ್ತರವಾಗುತ್ತಾ ಸಾಗಿದರೆ ಹಿಂಭಾಗ ಇಳಿಜಾರಾಗಿರುವುದನ್ನು ಅನೇಕ ಕಡೆ ಇಂದೂ ಗಮನಿಸಬಹುದು. ಕೋಟೆಯ ಮಧ್ಯೆ ಸಮಾನಾಂತರದಲ್ಲಿ ಕೊತ್ತಳಗಳನ್ನು ನಿರ್ಮಿಸಿ ಅಲ್ಲಿ ಕಾವಲುಗಾರರನ್ನು ಇರಿಸಲಾಗುತ್ತಿತ್ತು. ಈ ಕೋಟೆ ಗೋಡೆಗಳಲ್ಲಿ ಅಲ್ಲಲ್ಲಿ ವಿವಿಧ ಬಗೆಯ ಬಾಗಿಲುಗಳಿದ್ದವು. ನೇರ ಪ್ರವೇಶದ ನಿಯಂತ್ರಣ ಮಾಡಿದ್ದಲ್ಲದೆ ಅಂಕುಡೊಂಕಾದ ದಾರಿಗಳಿಂದ ಪುರಪ್ರವೇಶ ಅಷ್ಟು, ಸುಲಭ ಸಾಧ್ಯವಾಗದೆ ತೀವ್ರ ನಿಗಾಕ್ಕೆ ಒಳಪಟ್ಟಿತ್ತು ಎಂಬುದನ್ನು ಗಮನಿಸಬಹುದು.

ವಿಜಯನಗರದ ಕೋಟೆಗೋಡೆಗಳ ನಿರ್ಮಾಣ, ನಗರದ ಬೆಳವಣಿಗೆಯಾದಂತೆ ಹಲವು ಸುತ್ತುಗಳಾಗಿ ವರ್ಧಿಸುತ್ತಾ ಕಾಲಕಾಲಕ್ಕೆ ವಿಸ್ತಾರಗೊಂಡು ಹಲವು ಸುತ್ತುಗಳಾಗಿ ಬೆಳೆದಿರುವುದನ್ನು ಶಾಸನಗಳಿಂದ ಗುರುತಿಸಬಹುದಾಗಿದೆ. ಕೋಟೆಬಾಗಿಲುಗಳು, ಕೊತ್ತಳಗಳು, ಉಪನಗರಗಳು ಅಲ್ಲದೆ ಕೆಲವು ಪ್ರದೇಶಗಳಿಗೆ ನಿರ್ದಿಷ್ಟವಾದ ಹೆಸರನ್ನಿಟ್ಟಿದ್ದರಿಂದ ಅವುಗಳನ್ನು ಗುರುತಿಸಲು ಸುಲಭ ಸಾಧ್ಯವಾದ ಉಪಾಯವನ್ನು ಮಾಡಿಕೊಂಡಿದ್ದರು. ಈ ಬಗ್ಗೆ ಅನೇಕ ಶಾಸನಗಳು ಉಲ್ಲೇಖಿಸಿವೆ.

ಅಂದಿನ ವಿಜಯನಗರ ಪೂರ್ವ ದಿಕ್ಕಿನ ಕಣಿವೆಯಲ್ಲಿ ಅಂದರೆ ಇಂದಿನ ಕಮಲಾಪುರದ ಪೂರ್ವಕ್ಕೆ ಈ ಕುದುರೆ ಕಲ್ಲುಗಳು ಕಂಡುಬರುತ್ತವೆ. ಉದ್ದನೆಯ ಕಲ್ಲುಗಳನ್ನು ಎರಡೂ ಕಡೆಯ ತುದಿಯಲ್ಲಿ ನೆಟ್ಟು ಮಧ್ಯಭಾಗದಲ್ಲಿ ವಿವಿಧ ಗಾತ್ರದ ಸ್ವಾಭಾವಿಕವಾಗಿ ದೊರಕುವ ದುಂಡನೆಯ ಕಲ್ಲುಗಳನ್ನು ನೆಟ್ಟಿದ್ದಾರೆ. ಈ ಉಂಡೆ ಕಲ್ಲುಗಳನ್ನು ಗೊತ್ತಾದ ರೀತಿಯಲ್ಲಿ ವ್ಯವಸ್ಥಿತವಾಗಿ ನಿಲ್ಲಿಸಲಾಗಿದೆ. ಅದರೊಡನೆ ಕೆಲವು ಪ್ರದೇಶದಲ್ಲಿ ಚದುರಿದಂತೆಯೂ ನಡೆಲಾಗಿದೆ. ಇವು ಸುಮಾರು ಹತ್ತುಮೀಟರ್ ಅಗಲದವರೆಗೂ ಹರಡಿಕೊಂಡಿವೆ.

ಆಕರ
ವಿಜಯನಗರ ಅಧ್ಯಯನ, ಸಂ.೯, ೨೦೦೫, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಹೊಸಪೇಟೆ, ಪು.೨೮೧-೨೮೪