‘…ಈ ಭುವಿಯಲ್ಲೆಲ್ಲೂ ಕಣ್ಣುಗಳು ಕಂಡರಿಯದಂಥ ಅಥವಾ ಕಿವಿಗಳು ಕೇಳರಿಯದಂಥ ವೈಭವಯುಕ್ತವಾಗಿತ್ತು. ಈ ವಿಜಯನಗರ ಮಹಾ ಪಟ್ಟಣವು ಎಂದು ಪರ್ಶಿಯಾ ದೇಶದಿಂದ ರಾಯಭಾರಿಯಾಗಿ ಆಗಮಿಸಿ ವಿಜಯನಗರವನ್ನು ಸಂದರ್ಶಿಸಿದ್ದಲ್ಲದೇ ಅಲ್ಲಿ ಕೆಲ ದಿನ ತಂಗಿದ್ದ ಅಬ್ದುಲ್ ರಝಾಕನೆಂಬವನು, ಕ್ರಿ.ಶ.೧೪೪೩ರಲ್ಲಿಯೇ ಹೊಗಳಿ ಬರೆದಿಟ್ಟಿರುವುದು ಸರ್ವವಿದಿತಷ್ಟೆ? ಅಲ್ಲದೆ ಇವನಂತೆಯೇ ವಿಜಯನಗರವನ್ನು ಸಂದರ್ಶಿಸಿದ ಇತರ ಪರದೇಶಿಯರು ಸಹ ಈ ಮಹಾನಗರದ ವರ್ಣನೆಯನ್ನು ಅದರ ವೈಭವವನ್ನು, ಸಂಪತ್ತು ಸಮೃದ್ಧಿಗಳನ್ನು, ಉಚ್ಚಮಟ್ಟದ ಜನಜೀವನವನ್ನು, ಅದರ ಚರಿತ್ರೆಯನ್ನು ಅನೇಕ ವಿವರಗಳೊಂದಿಗೆ ಮತ್ತು ವಿಶೇಷ ಮೆಚ್ಚುಗೆಯನ್ನು ವ್ಯಕ್ತಪಡಿಸುವುದರೊಂದಿಗೆ ಬರೆದ ದಾಖಲೆಗಳನೇಕ ಸಿಕ್ಕಿರುತ್ತವೆ. ಹೀಗೆ ಸಂದರ್ಶಿಸಿದ ವಿದೇಶಿ ಪ್ರವಾಸಿಗರಲ್ಲಿ ಮುಖ್ಯರಾದವರ ಹೆಸರುಗಳು, ಅವರ ಮಾತೃದೇಶ, ಅವರು ವಿಜಯನಗರವನ್ನು ಸಂದರ್ಶಿಸಿದ ಕಾಲ, ಅವರು ಸಂದರ್ಶಿಸಿದ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯವನ್ನಾಳುತ್ತಿದ್ದ ಮಹಾರಾಜರುಗಳ ಹೆಸರು ಮುಂತಾದ ವಿವರಗಳು ಮುಂದಿನ ಪುಟದಲ್ಲಿ ಕೊಟ್ಟಿರುವ ಪಟ್ಟಿಯಿಂದ ತಿಳಿಯುತ್ತವೆ.

ಈ ವಿದೇಶಿಯರ ದಾಖಲೆಗಳಲ್ಲದೇ, ವಿಜಯನಗರ ಸಾಮ್ರಾಜ್ಯದ ಸಮಕಾಲೀನ ರಾಜ್ಯಗಳಾದ ಬಹುಮನಿ ರಾಜ್ಯಗಳಲ್ಲಿದ್ದ ಚರಿತ್ರಕಾರರು ಮತ್ತು ಸಾಹಿತಿಗಳು ಬರೆದಿರುವುದೂ ಸಹ ವಿಫುಲವಾಗಿದೆ. ಆದರೆ ಇವರುಗಳ ದಾಖಲೆಗಳಲ್ಲಿ ಒಂದು ವ್ಯತ್ಯಾಸವನ್ನು ಕಾಣುತ್ತೇವೆ ಎಂದರೆ, ಅವರೆಲ್ಲರೂ ತಮಗೆ ಆಶ್ರಯದಾತರಾದ ಮುಸಲ್ಮಾನ ದೊರೆಗಳನ್ನು ಹೆಚ್ಚಾಗಿ ಹೊಗಳಿ ಬರೆದಿರುತ್ತಾರೆ. ಆದರೂ ಅವರ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದಲ್ಲಿ ವಿಜಯನಗರ ಸಾಮ್ರಾಜ್ಯ ಮತ್ತು ಅದರ ರಾಜಧಾನಿಗಳ ವೈಭವಗಳ ವಿವರಣೆಗಳನ್ನು ಗ್ರಹಿಸುವಲ್ಲಿ ಶ್ರಮವೇನೂ ಬೇಕಾಗುವುದಿಲ್ಲ. ನಂತರ ದೇಶೀಯ ಸಾಹಿತ್ಯವೂ ಸಾಕಷ್ಟು ವಿವರಣೆಗಳನ್ನೊದಗಿಸುತ್ತದೆ. ವಿಜಯನಗರ ಸಾಮ್ರಾಜ್ಯವು, ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಿ ಭಾಷೆಯ ಪ್ರದೇಶಗಳನ್ನೆಲ್ಲಾ ಒಳಗೊಂಡಿದ್ದುದರಿಂದ, ಈ ಎಲ್ಲ ಭಾಷೆಗಳಲ್ಲಿ ಮತ್ತು ಸಂಸ್ಕೃತದಲ್ಲಿ ರಚಿತವಾದ ಸಮಕಾಲೀನ ಸಾಹಿತ್ಯ ಗ್ರಂಥಗಳಲ್ಲಿ ಕೆಲವುಗಳಲ್ಲಿಯಾದರೂ ವಿಜಯನಗರ ಕುರಿತಾದ ವಿವರಣೆಗಳನ್ನು ಕಾಣಬಹುದು. ಕೆಲವು ಬಾರಿ ಕಥಾವಸ್ತು ನಿರೂಪಣೆಗನುಗುಣವಾಗಿ, ನಗರವನ್ನು ಬೇರೆ ಹೆಸರಿನಿಂದ ಕರೆದು ವಿವರಿಸಿದ್ದರೂ, ಆ ವಿವರಣೆಗಳೆಲ್ಲವೂ ಅವರ ಸಮಕಾಲೀನ ನಗರವಾದ ವಿಜಯನಗರ ಮಹಾಪಟ್ಟಣಕ್ಕೆ ಅನ್ವಯಿಸುತ್ತಿದ್ದವೆಂದು ಬೇರೆ ಹೇಳಬೇಕಾಗಿಲ್ಲ. ಉದಾಹರಣೆಗೆ ಚೆನ್ನಬಸವಪುರಾಣದ ಕರ್ತೃ ಕವಿ ವಿರೂಪಾಕ್ಷ ಪಂಡಿತನು ಹಂಪೆಯ ಹಿರಿಯಮಠದಲ್ಲಿ ವಾಸವಾಗಿದ್ದುಕೊಂಡು ಸಾಹಿತ್ಯ ನಿರ್ಮಾಣದಲ್ಲಿ ತೊಡಗಿದ್ದನಷ್ಟೇ? ಆ ಬೃಹದ್ ಪುರಣಾವನ್ನು ಕವಿ ವಿರೂಪಾಕ್ಷ ಪಂಡಿತನು ಕ್ರಿ.ಶ. ೧೫೮೫ರಲ್ಲಿ ಪೂರ್ತಿಗೊಳಿಸಿದನೆಂದು ಉಲ್ಲೇಖಿಸಲಾಗಿದೆ. ಆತನು ಕಥಾ ಸಂದರ್ಭಗಳಿಗನುಗುಣವಾಗಿ ಬಿಜ್ಜಳ ಮತ್ತು ಬಸವೇಶ್ವರ ಕಾಲದ ಕಲ್ಯಾಣವನ್ನು ವರ್ಣಿಸುತ್ತಾನೆ. ಆ ಕಲ್ಯಾಣವಾದರೂ ಕೆಲ ಶತಮಾನಗಳ ಮೊದಲೇ ಮೆರೆದು ಅವನತಿಗೊಂಡುದಾಗಿತ್ತಲ್ಲವೇ? ಎಂದ ಬಳಿಕ, ದಾರ್ಶನಿಕ, ಶರಣ ಮತ್ತು ಕವಿಯೂ ಆಗಿದ್ದ ವಿರೂಪಾಕ್ಷ ಪಂಡಿತನು ತಾನು ವಾಸವಾಗಿದ್ದು ದಿನವೂ ನೋಡುತ್ತಿದ್ದ ವಿಜಯನಗರ ಪರಿಸರವನ್ನು ಕಲ್ಯಾಣವೆಂದು ಹೆಸರಿಸಿ ವರ್ಣಿಸಿರಬೇಕೆಂಬುದು ಸಮಂಜಸವಾಗಿ ಕಾಣುವುದಲ್ಲವೇ? ಅದೇ ರೀತಿಯಲ್ಲಿ ಕೃಷ್ಣದೇವರಾಯ ಮಹಾರಾಜನು ರಚಿಸಿದ ತೆಲಗು ಕೃತಿಗಳಾದ ‘ಅಮುಕ್ತಮಾಲ್ಯದ’ ಮುಂತಾದ ಗ್ರಂಥಗಳಲ್ಲಿನ ಬರುವ ನಗರಗಳ ವರ್ಣನೆಯೂ ಕೂಡ, ತನ್ನ ರಾಜಧಾನಿಯಾದ ವಿಜಯನಗರದಲ್ಲಿ ದಿನವೂ ನೋಡುತ್ತಿದ್ದುದೇ ಆಗಿರಬೇಕು.

ಕ್ರ. ಸಂ. ಪ್ರವಾಸಿಗರ ಹೆಸರು ಅವರ ಮಾತೃದೇಶ ವಿಜಯನಗರವನ್ನು ಸಂದರ್ಶಿಸಿದ ಕಾಲ ಆಗ ಆಳುತ್ತಿದ್ದ ಮಹಾರಾಜರ ಹೆಸರು ಇತರ ವಿವರ
೧. ನಿಕೊಲೊ-ಡಿ-ಕೊಂಟಿ ಇಟಲಿ ದೇಶ ಕ್ರಿ.ಶ. ೧೪೨೦ ಮೊದಲನೇ ದೇವರಾಯ ಮಹಾರಾಜ  
೨. ಅಬ್ದುಲ್ ರಝಾಕ ಪರ್ಶಿಯಾ ಕ್ರಿ.ಶ.೧೪೪೩ ಎರಡನೇ ದೇವರಾಯ ಮಹಾರಾಜ ಇವನು ಪರ್ಶಿಯಾ ದೇಶದ ರಾಯಭಾರಿ
೩. ಅಥನೇಶಿಯಸ ನಿಕಟನ ರಶಿಯಾ ಕ್ರಿ.ಶ.೧೪೬೮ರಿಂದ ೧೪೭೪ರ ವರೆಗೆ ಮಲ್ಲಿಕಾರ್ಜುನ ಮಹಾರಾಜ  
೪. ವಾರ್ಥೆಮ್ ಇಟಲಿ ಕ್ರಿ.ಶ.೧೫೦೫ ಎರಡನೇ ನರಸಿಂಹ ಮಹಾರಾಜ  
೫. ಡುರೇಟ ಬಾರ್ಬೋಸ್ ಪೋರ್ಚುಗಲ್ ಕ್ರಿ.ಶ.೧೫೧೪ ಕೃಷ್ಣದೇವರಾಯ ಮಹಾರಾಜ  
೬. ಡಾಮಿಂಗೊ ಪೀಸ್ ಪೋರ್ಚುಗಲ್ ಕ್ರಿ.ಶ.೧೫೨೦ ಕೃಷ್ಣದೇವರಾಯ ಮಹಾರಾಜ  
೭. ನೂನಿಝ ಪೋರ್ಚುಗಲ್ ಕ್ರಿ.ಶ.೧೫೩೫ ಮತ್ತು ೧೫೩೭ರ ಮಧ್ಯದಲ್ಲಿ ಅಚ್ಯುತರಾಯ ಮಹಾರಾಜ  
೮. ಸಿಸಿರೋ ಫ್ರೆಡರಿಕ್ ಇಟಲಿ ಕ್ರಿ.ಶ.೧೫೬೫-೬೬ ಸದಾಶಿವರಾಯ ಮಹಾರಾಜ  

ಮೊದಲಿಗೆ ವಿಜಯನಗರ ಸ್ಥಾಪನೆಯ ಬಗ್ಗೆ ಲಭ್ಯವಿರುವ ಮುಖ್ಯ ವಿವರಣೆಗಳನ್ನು ನೋಡೋಣ.

ಅ. ಶಿವಪ್ಪ ಕವಿ ವಿರಚಿತ ಕೆಳದಿ ನೃಪವಿಜಯ ಗ್ರಂಥದಲ್ಲಿ;

‘…. ಮಾಧವಭಟ್ಟನೆಂಬಾತಂ ದಕ್ಷಿಣ ದೇಶಕ್ಕೆ ಬಂದು ಕುಂತಳ ದೇಶದೊಳಗಣ ಪಂಪಾಕ್ಷೇತ್ರದಲ್ಲಿ ನಿಂದು…. ವಿದ್ಯಾರಣ್ಯರಂದು ಪ್ರಸಿದ್ಧ ನಾಮಾಂಕಿತರಾಗಿರುತ್ತ ವಿರಲಾಗಿ…. ವಿದ್ಯರಣ್ಯರು ಹರಹರಬುಕ್ಕರಂ ಕರದು….  ಸದ್ಧರ್ಮದಿಂದ ರಾಜ್ಯವನ್ನಳಿ ಕೂಂಡಿರ್ಪುದಂದು ಕಟ್ಟಳಯಂ ರಚಿಸಿ…. ವಿದ್ಯಾನಗರವೆಂಬ ಪಟ್ಟಣಮಂ ನಿರ್ಮಾಣ ಮಾಡಿಸುವ ಕಾಲದಲ್ಲಿ…. ಆ ವಿದ್ಯಾರಣ್ಯರು ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ೧೨೫೮ನೆಯ ಸಂವತ್ಸರದಲ್ಲಿ ಆ ವಿದ್ಯಾನಗರೀ ರತ್ನ ಸಿಂಹಾಸನದಲ್ಲಿ ಹರಿಹರ ರಾಯಂಗ ಪಟ್ಟಮಂ ಕಟ್ಟಿ ನಿಲಿಸಿದರ್ ….

ಬ. ಕಂದನವೋಲು ಕೈಫಿಯತರನದಲ್ಲಿ (ತೆಲಗು ಭಾಷೆಯಲ್ಲಿದೆ):

‘….. ತರುವಾತ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮುಲವಾರು. ಕರ್ನಾಟಕ ದೇಶ ಮಂದಲಿ ತುಂಗಭದ್ರಾ ತೀರಮ್ಮನ ವಿರೂಪಾಕ್ಷ ಮಹಾ ಕ್ಷೇತ್ರಮುನ ತಮ ಪೇರಟ ವಿದ್ಯಾನಗರ ಮನೇಃ ಪಟ್ನಂ ನಿರ್ಮಾಣಂ ಚೇಸಿ….’

‘ಕ. ವಿರೂಪಾಕ್ಷ ಪಂಡಿತನ ಚನ್ನಬಸವ ಪುರಾಣದಲ್ಲಿ:

….. ಆಲಿಸೈ ಶಾಲಿವಾಹನಶಕದ ಸಾವಿರದ |
ಮೇಲದಿನ್ನೂರೈವತೆಂಟರಿಂದಂ ಮುಂದ |
ಪೇಳಲೇಂ ಧಾತುಸಂವತ್ಸರದ ವೈಶಾಖ
ಶುದ್ಧ ಸಪ್ತಮಿ ಸುದಿನದ್ದೆ ||
ಲೀಲೆಯಿಂ ಹರಿಹರಗ ಪಟ್ಟವಂ ಕಟ್ಟಲವ |
….. ಹರಿಹರ ನೈ |
ಪಾಲವಂಶೋದ್ಭವಂ ಪಂಪಾವಿರೂಪಾಕ್ಷ |
ನಾಲಯ ಸಮೀಪದೂಳ ವಿದ್ಯಾನಗರಿಯೆಂಬ
ಪಟ್ಟಣವ ರಚಿಪನಿತ್ತ ||
ಲೀಲೆಯಂ…..’

ಈಗ ಮಹಾನಗರದ ವಿವಿಧ ಬಡಾವಣೆಗಳಿಗೆ ಏನೆಲ್ಲ ಹೆಸರುಗಳಿದ್ದುವು ಎಂಬುದನ್ನು ತಿಳಿಯುವುದು ಕುತೂಹಲಕಾರಿ ವಿಷಯವಲ್ಲವೇ? ಈ ವಿವರಣೆಗಳಿಗೆಲ್ಲಾ, ಈಗಲೂ ಈ ನಿವೇಶನದಲ್ಲಿ ಕಾಣಬರುವ ಶಿಲಾಶಾಸನಗಳೇ ಆಧಾರಗಳೆಂದ ಬಳಿಕ ಮತ್ತಷ್ಟು ಕುತೂಹಲಕಾರಿಯಾದ ಮತ್ತು ಖಚಿತವಾಗಿ ತಿಳಿದುಬರುವಂಥ ವಿಷಯವಾಗುತ್ತದೆಯಲ್ಲವೇ? ಈ ಶಾಸನಗಳಾದರೂ ವಿಫುಲವಾಗಿ ಕಾಣಬರುತ್ತಿದ್ದ, ವಿಜಯನಗರ ಪಟ್ಟಣದ ವಿಶಾಲತೆಯನ್ನು ಸೂಚಿಸುತ್ತವೆಯಲ್ಲದೇ ಆ ಉಪನಗರಗಳ ವಿವಿಧ ಹೆಸರುಗಳು, ಅಲ್ಲಿರುವ ಕೆಲ ಕಟ್ಟಡಗಳು, ಮುಂತಾದವುಗಳ ಬಗ್ಗೆ ವಿವರಣೆಗಳನ್ನು ನೀಡುತ್ತವೆ.

ಮೊದಲಿಗೆ, ಈಗಾಗಲೇ ತಿಳಿಸಿರುವ ಬಾಗೇಪಲ್ಲಿ ಶಾಸನದಲ್ಲಿ ಉಲ್ಲೇಖಗೊಂಡಿರುವಂತ, ವಿಜಯನಗರ ಪಟ್ಟಣವು ವಿದ್ಯಾನಗರವೆಂದು ಕರೆಯಲ್ಪಡುತ್ತಿತ್ತು. ಬಹುಶಃ ಆರಂಭದಲ್ಲಿ ಅದಕ್ಕೆ ವಿದ್ಯಾನಗರವೆಂದೂ ನಾಮಕರಣ ಮಾಡಲ್ಪಟ್ಟಿರಬೇಕು. ಆ ವಿದ್ಯಾನಗರವು ವಿದ್ಯಾರಣ್ಯಯತಿಗಳ ತಪೋಬಲ, ಸಂಘಟನಾಬಲ, ಧಾರ್ಮಿಕ ಮತ್ತು ನೈತಿಕ ಬಲಗಳ ಸಹಾಯದಿಂದ ಸ್ಥಾಪಿತವಾಯಿತೆಂಬುದು ಕೆಲವು ವಿದ್ವಾಂಸರ ಮತವಾಗಿದೆ. ಹೀಗಿರುವಾಗ ಈ ಅರಸರು ತಮ್ಮ ರಾಜಧಾನಿಯನ್ನು ತಮ್ಮ ರಾಜಗುರುಗಳ ಹೆಸರಿನಲ್ಲಿ ಕರೆದಿದ್ದಲ್ಲಿ ಅಚ್ಚರಿಯೇನೂ ಅಲ್ಲ. ತದನಂತರ ಈ ಅರಸರ ಸೇನಾಶಕ್ತಿ, ಸಂಪದಭಿವೃದ್ಧಿಗಳು, ವಿಸ್ತೃತ ಅಧಿಕಾರ ಸಾಮ್ರಾಜ್ಯ, ಇತರ ಸಮಕಾಲೀನ ಅರಸರ ಮೇಲೆ ಪ್ರಭಾವ ಮುಂತಾದವುಗಳು ವಿಸ್ತಾರಗೊಂಡಂತೆ, ಎಂದರೆ ಸರ್ವತೋಮುಖ ವಿಜಯವು ಇವರದಾದನಂತರ, ಅದರ ಸಂಕೇತವಾಗಿ, ಈ ಅರಸರು ತಮ್ಮ ರಾಜಧಾನಿಯನ್ನು ಹೆಮ್ಮೆಯಿಂದ ವಿಜಯನಗರವೆಂದು ಕರೆಯಲು ಆರಂಭಿಸಿರಬೇಕು. ಅದರೂ, ಈ ಎರಡೂ ಹೆಸರುಗಳು, ಎಂದರೆ ವಿದ್ಯಾನಗರ ಮತ್ತು ವಿಜಯನಗರ, ಏಕಕಾಲದಲ್ಲಿ ಅದರ ಕೊನೆಯ ವರ್ಷಗಳವರೆಗೂ ಪ್ರಚಲಿತದ್ದಲಿದ್ದಂತೆ ಶಿಲಾಶಾಸನಗಳಲ್ಲಿ ಮತ್ತು ತಾಮ್ರ, ಪತ್ರಗಳಲ್ಲಿ ಕಾಣಬರುವ ಉಲ್ಲೇಖನಗಳಿಂದ ತಿಳಿದುಬರುತ್ತದೆ. ಇಲ್ಲಿ ನಾವು ಒಂದು ವಿಷಯವನ್ನು ಗಮನದಲ್ಲಿ ತೆಗೆದುಕೊಳ್ಳಬೇಕಾಗುತ್ತದೆ. ಎಂದರೆ, ‘ವಿದ್ಯಾನಗರ’ ವೆಂಬುದು ಆರಂಭದ ದೆಸೆಯಲ್ಲಿದ್ದ ಪಟ್ಟಣ, ಎಂದರೆ ಈಗ ಹಾಳು ಪಟ್ಟಣವೆಂದು ಕರೆಯಲ್ಪಡುವ ಭಾಗಕ್ಕೆ ಮಾತ್ರ ಅನ್ವಯವಾಗುತ್ತಿದ್ದಿರಬೇಕು. ಕಾಲಾಂತರದಲ್ಲಿ, ನಗರವು ವಿಸ್ತಾರಗೊಂಡಂತೆ ಮತ್ತು ಹಾಗೆ ಬೆಳೆದು ಬಂದಂಥ ಮಹಾನಗರಕ್ಕೆ ವಿಜಯನಗರವೆಂದು ಕರೆಯಲು ಆರಂಭಿಸಬೇಕು. ಹಾಗೆ ಕರೆಯಲ್ಪಟ್ಟ ವಿಜಯನಗರ ಮಹಾನಗರವು ಅನೇಕ ಬಡವಾಣೆಗಳನ್ನು ಒಳಗೊಂಡಿದ್ದಿತೆಂಬುದು ಇತರ ವಿವರಣೆಗಳಿಂದ ವೇದ್ಯವಾಗುತ್ತದೆ.

a. ಈಗಿನ ಹಂಪೆಯ ವಿಭಾಗವು, ವಿವಿಧ ಮೂಲಾಧಾರಗಳಲ್ಲಿ ಉಲ್ಲೇಖಗೊಂಡಿರುವಂಥ ಪಂಪಾಕ್ಷೇತ್ರ, ಭಾಸ್ಕರಕ್ಷೇತ್ರ, ಪಂಪಾತೀರ್ಥ, ವಿರೂಪಾಕ್ಷ ಮಹಾಕ್ಷೇತ್ರ, ಎಂದು ಮುಂತಾಗಿ ಕರೆಯಲ್ಪಡುತ್ತಿತ್ತು ಮತ್ತು ಹಂಪೆಯ ಹೇಮಕೂಟದ ಮೇಲಿರುವ ಕಡಲೆಕಾಳು ಗಣೇಶನ ಮಂದಿರದ ಹತ್ತಿರುವಿರುವ ರಾಜಮಾರ್ಗದ ದ್ವಾರ ಮಂಟಪದಲ್ಲಿ ಕಾಣಬರುವ ಶಿಲಾಶಾಸನದ ಪ್ರಕಾರ ಹಂಪೆಯನ್ನು ಪಂಪಾಪುರವೆಂದು ಹಾಗೂ ಪಂಪಾಕ್ಷೇತ್ರವೆಂದು ಕರೆಯಲಾಗುತ್ತಿತೆಂದು ತಿಳಿದುಬರುತ್ತದೆ. ಈ ಒಂದು ಪ್ರಸಿದ್ಧವಾದ, ಹಂಪೆಯ (ಪಂಪಾಕ್ಷೇತ್ರದ) ಪರಿಸರದಲ್ಲಿ ಆಗ್ನೇಯ ದಿಕ್ಕಿನಲ್ಲಿ, ವಿದ್ಯಾನಗರ (ವಿಜಯನಗರ) ನಿವೇಶನವು ಸ್ಥಾಪನೆಗೊಂಡಿತು. ಅದು, ಸಂಗಮ ವಂಶದ ಹರಿಹರನೆಂಬ ರಾಜನಿಂದ, ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ಶಾ.ಶ. ೧೨೫೮, ಧಾತು ಸಂವತ್ಸರದ, ವೈಶಾಖ ಶುದ್ಧ ೭ ಆದಿತ್ಯವಾರ, ಮಘನಕ್ಷತ್ರದ ಯೋಗದಲ್ಲಿ ಸ್ಥಾಪನೆಯಾಯಿತು. ಇದೇ ವಿಷಯವನ್ನು ಶರಣ ಕವಿ ವಿರೂಪಾಕ್ಷ ಪಂಡಿತನು ಸಹ, ತನ್ನ ಕಾವ್ಯ ‘ಚನ್ನಬಸವ ಪುರಾಣ’ದಲ್ಲಿ ದೃಢೀಕರಿಸುತ್ತಾನೆ. ನಗರವು, ರಾಜಗುರುಗಳಾದ ವಿದ್ಯಾರಣ್ಯರ ಹೆಸರಿನಲ್ಲಿ ಕರೆಯಲಾಯಿತು. ಕೆಲವೇ ವರ್ಷಗಳ ನಂತರ, ನಿಶ್ಚಯವಾಗಿಯೂ ಕ್ರಿ.ಶ. ೧೩೫೩ರಿಂದ, ಈ ರಾಜರು ಸರ್ವತೋಮುಖ ಅಭಿವೃದ್ಧಿ, ಜಯ ಗಳಿಸಕೊಂಡು ನಂತರ, ಈ ನಗರಕ್ಕೆ ವಿಜಯನಗರವೆಂದು ಕರೆಯಲು ಆರಂಭಿಸಿರಬೇಕು. ನಾವು ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಈ ಮಹಾನಗರಕ್ಕೆ ಎರಡೂ ಹೆಸರುಗಳು, ವಿದ್ಯಾನಗರ ಮತ್ತು ವಿಜಯನಗರ, ಪ್ರಚಲಿತದಲ್ಲಿದ್ದುದು. ಕ್ರಿ.ಶ. ೧೩೫೩ರಲ್ಲಿ ಹೊರಡಿಸಲಾದ ಒಂದು ಕೈಬರಹದ ಸಾಕ್ಷ್ಯಧಾರದ ಪ್ರಕಾರ ವಿಜಯನಗರವೆಂಬುದು ವಿದ್ಯಾನಗರ ಎಂಬುದಕ್ಕೆ ಪ್ರತಿನಾಮ ಎಂದರೆ ಎರಡನೆಯ ಹೆಸರು ಎಂದು ತಿಳಿಸುತ್ತದೆ. ಅದು ತೆಲುಗು ಭಾಷೆಯಲ್ಲಿದೆ. ಅದರ ಒಕ್ಕಣೆಯು ಈ ರೀತಿಯಾಗಿದೆ: ‘ಶಕವರ್ಷಂಬುಲು ೧೨೭೫…….ಹರಿಹರರಾಯಲುಗಾರು ವಿದ್ಯಾನಗರ ಮುನಕು ಪ್ರತಿನಾಮುಗಲ ಶ್ರೀವಿಜಯನಗರಮಂದು ವಜ್ರಸಿಂಹಾಸನೂಢುಲೈ….’ ಮುಂತಾಗಿ.

ಈ ಎರಡೂ ಹೆಸರುಗಳು ಆ ನಗರದ ಕೊನೆಯ ದಿನಗಳವರೆಗೂ ಬಳಕೆಯಲ್ಲಿದ್ದವು. ಈ ವಿಷಯವನ್ನು ಸ್ಪಷ್ಟೀಕರಿಸುವಲ್ಲಿ, ನೂರಾರು ಶಿಲಾಶಾಸನಗಳಲ್ಲಿ ಕಾಣಬರುವ ಉಲ್ಲೇಖನಗಳೇ ಸಾಕ್ಷಿ.

ತದನಂತರ, ಅಧಿಕಾರ, ಐಶ್ವರ್ಯ, ನಗರ ವೈಶಾಲ್ಯ, ಜನಸಂಖ್ಯೆ ಮುಂತಾದವುಗಳು ವಿಸ್ತೃತಗೊಂಡಂತೆ, ಅನೇಕ ಉಪನಗರಗಳು ಅಸ್ತಿತ್ವಕ್ಕೆ ಬಂದು, ಅವುಗಳೆಲ್ಲಾ ಮೂಲ ನಗರಕ್ಕೆ ಪೂರಕವಾದವು. ಹಾಗೆ ಬೆಳೆದು ವಿಶಾಲವಾದ ನಗರಕ್ಕೆ ವಿಜಯನಗರವೆಂದು ಕರೆಯಲಾಗುತ್ತಿದ್ದಿರಬೇಕು. ಆದರೂ ವಿದ್ಯಾನಗರವೆಂದು ಕರೆದಾಗ ಈಗಿನ ಹಾಳುಪಟ್ಟಣ (ಆಗಿನ ರಾಜವಾಡೆಗೆ) ಅನ್ವಯಿಸುತ್ತಿದ್ದಿರಬೇಕು. ಶಾಸನಗಳನ್ನು ಬರೆಯುವಾಗ, ಅವರವರ ಅಭಿಲಾಷೆಗನುಸಾರವಾಗಿ ಯಾವುದಾರೊಂದನ್ನು ಬಳಸಿಕೊಳ್ಳಲಾಗಿದೆ.

b. ಮೇಲೆಯೇ ತಿಳಿಸಿದಂತೆ, ರಾಜಧಾನಿಯ ಕೇಂದ್ರಭಾಗವು ಅಥವಾ ರಾಜವಾಡೆಯು, ಈಗಲೂ ಕಾಣಬರುವ ಹಜಾರರಾಮ ದೇವಸ್ಥಾನದ ಸುತ್ತಲಿನ ಪ್ರದೇಶವಾಗಿತ್ತು. ಈ ಪರಿಸರದಲ್ಲಿ ಈಗಲೂ ಕಾಣಬರುವ ಅರಮನೆಗಳ ನೆಲಕಟ್ಟುಗಳು, ರಾಣಿವಾಸದ ಆವರಣದಲ್ಲಿ ಕಾಣಬರುವ ನೆಲಗಟ್ಟುಗಳು, ಮಹಾನವಮಿ ದಿಬ್ಬಗಳೇ ಇದಕ್ಕೆ ಮುಖ್ಯ ಆಧಾರಗಳಾಗಿವೆ. ಈ ದಿಸೆಯಲ್ಲಿ ಇನ್ನೊಂದು ಆಧಾರವೆಂದರೆ, ಪಟ್ಟಣದ ಎಲ್ಲಮ್ಮನ ಗುಡಿಯು ಸಹ ಇದೇ ಭಾಗದಲ್ಲಿ, ರಾಣಿವಾಸದಿಂದ ಕೇವಲ ಅರವತ್ತು ಗಜಗಳಷ್ಟು ದೂರದಲ್ಲಿ ಈಗಲೂ ಕಾಣಬರುತ್ತದೆ. ಹೆಸರೇ ಸೂಚಿಸುವಂತೆ ಈ ಭಾಗಕ್ಕೆ ಪಟ್ಟಣವೆಂದಿತ್ತೆಂಬುದು ಖಚಿತವಾಗುತ್ತದಲ್ಲವೆ? ನಂತರ, ಹಜಾರರಾಮ ಚಂದ್ರದೇವರ ಗುಡಿಯಿಂದ ಹೊರಡುವ ಮುಖ್ಯ ಬೀದಿಗೆ, ಪಾನಸುಪಾರಿ ಬಜಾರವೆಂದು ವದಂತಿ. ಬಹುಶಃ ಈ ಹೆಸರು ಬಹುಮನೀ ಸೈನಿಕರು ವಿಜಯನಗರವನ್ನು ಆಕ್ರಮಿಸಿದ್ದ ಕಾಲದಲ್ಲಿ ಪ್ರಚಲಿತಕ್ಕೆ ಬಂದಿರಬೇಕು. ಇದೇ ಆಗಿನ ಕಾಲದಲ್ಲಿ ಮುಖ್ಯ ಬೀದಿಯಾಗಿತ್ತು. ಈ ಬೀದಿಯ ಇಕ್ಕೆಲಗಳಲ್ಲಿ, ಮಹಡಿಗಳನ್ನು ಹೊಂದಿರುವ ಕಟ್ಟಡಗಳ ಅವಶೇಷಗಳನ್ನು ಈಗಲೂ ನೋಡಬಹುದು. ಅಲ್ಲದೇ ಈ ಬೀದಿಯಿಂದ ಕೆಲವೇ ಅಡಿಗಳ ದೂರದಲ್ಲಿರುವ ರಂಗನ ಗುಡಿಯಲ್ಲಿ ಈಗಲೂ ಕಾಣಬರುವ ತೆಲುಗು ಶಿಲಾಶಾಸನದ ಪ್ರಕಾರ ಇದಕ್ಕೆ ‘ಪೆದ್ದ ಅಂಗಡಿ ವೀದಿ’ (ದೊಡ್ಡ ಅಂಗಡಿ ಬೀದಿ) ಎಂದು ಕರೆಯಲಾಗುತ್ತಿತ್ತು. ಇದೇ ಬಜಾರದಲ್ಲಿ ಇನ್ನೂ ಸ್ವಲ್ಪ ಮುಂದೆ ಹೋದಲ್ಲಿ ಒಂದು ಪಕ್ಕದಲ್ಲಿ ಜೈನರ ಶಾಂತಿನಾಥ ಸ್ವಾಮಿಯ ದೇವಸ್ಥಾನವೊಂದು ಈಗಲೂ ಕಾಣಬರುತ್ತದೆ. ಇಲ್ಲಿರುವ ಒಂದು ಶಿಲಾಶಾಸನವು, ಕ್ರಿ.ಶ. ೧೫೫೬ರಲ್ಲಿ ಹೊರಡಸಲಾಗಿದ್ದು ಏಳು ಅಂಕಣಗಳ ಮಂಟಪವನ್ನು ಕಟ್ಟಿಸಿದುದರ ಬಗ್ಗೆ ತಿಳಿಸುತ್ತದೆ. ಅದು ಮುಂದುವರಿಯುತ್ತಾ ಆ ಮಂಟಪದ ಉತ್ತರಕ್ಕೆ ‘ರಾಜಬೀದಿ.’ ಪಶ್ಚಿಮಕ್ಕೆ ಉಪ್ಪರಿಗೆ ಬೀದಿ, ದಕ್ಷಿಣಕ್ಕೆ ದೇವರ ಗುಡಿಯ (ಶಾಂತನಾಥ ಸ್ವಾಮಿಯ) ಪೌಳಿ ಇದ್ದುದಾಗಿ ತಿಳಿಸುತ್ತದೆ ಎಂದ ಬಳಿಕ ಮೇಲೆ ಹೇಳಿದ ದೊಡ್ಡ ಅಂಗಡಿ ಬೀದಿಯೇ ಈ ರಾಜಬೀದಿ ಎಂದ ಹಾಗಾಯಿತು. ಈ ಸ್ಥಳಗಳನ್ನು ಪರಿಶೀಲಿಸಿದಲ್ಲಿ, ಈ ವಿಷಯವು ವೇದ್ಯವಾಗುತ್ತದೆ. ಈ ಎಲ್ಲ ಕಾರಣಗಳಿಂದ ಹಜಾರರಾಮಚಂದ್ರ ದೇವಾಲಯದ ಮುಂದಿನಿಂದ ಹೊರಡುವ ಬೀದಿಗೆ ರಾಜಬೀದಿ ಎಂದು ಖಚಿತವಾಗಿ ಹೇಳಬಹುದು.

ಇನ್ನೊಂದು ವಿಷಯವೆಂದರೆ, ಈಗಿನ ಹಜಾರರಾಮನ ಗುಡಿಗೆ ರಾಮಚಂದ್ರ ದೇವಾಲಯವೆಂದು ಮಾತ್ರ ಹೆಸರಿದ್ದುದಾಗಿ, ಅಲ್ಲಿ ಈಗಲೂ ಕಾಣಬರುವ ಶಿಲಾಶಾಸನಗಳಿಂದ ತಿಳಿದುಬರುತ್ತದೆ.

c. ಈ ರಾಜವಾಡೆಯಿಂದ ಈಗ ಹಂಪೆಯ ಕಡೆಗೆ ಸ್ವಲ್ಪದೂರ ಹೋದ ನಂತರ ಉದ್ದಾನ ವೀರಭದ್ರಸ್ವಾಮಿಯ ದೇವಸ್ಥಾನವು ಕಾಣಸಿಗುತ್ತದೆ. ಅಲ್ಲಿ ಪೂಜಾಕಾರ್ಯಗಳು ಈಗಲೂ ಜರುಗುತ್ತವೆ. ಈ ದೇವಸ್ಥಾನದ ಆವರಣದಲ್ಲಿಯೆ ಈಗಲೂ ಕಾಣಸಿಗುವ ಒಂದು ಶಿಲಾಶಾಸನದ ಪ್ರಕಾರ, ಈ ಭಾಗಕ್ಕೆ ಕೃಷ್ಣಾಪುರವೆಂದು ಕರೆಯಲಾಗುತ್ತಿತ್ತು. ಮತ್ತು ಈಗಲೂ ಕೆಲವರು ಹಾಗೆಯೆ ಕರೆಯುತ್ತಾರೆ. ಸ್ಥಾಪನೆಯಾದ ಸಮಯದಲ್ಲಿ ಈ ಮೂರ್ತಿಗೆ ಮುದುವೀರಣ್ಣನೆಂದು ಹೆಸರು. ಈ ದೇವಸ್ಥಾನದ ಪಕ್ಕದಲ್ಲಿ ಒಂದು ದೊಡ್ಡ ಮಠವಿದ್ದುದಾಗಿಯೂ ತಿಳಿಯುತ್ತದೆ. ಅದರ ಅವಶೇಷಗಳು ಈಗಲೂ ಕಾಣಬರುತ್ತಿದ್ದು, ಸುಮಾರು ೬೦೦ಕ್ಕಿಂತಲೂ ಹೆಚ್ಚು ಸ್ತಂಭಗಳುಳ್ಳ ಮತ್ತು ಭಾಗಶಃ ಛಾವಣಿಯುಳ್ಳ ಮಠದ ಕಟ್ಟಡವು ಈಗಲೂ ಕಾಣಬರುತ್ತದೆ. ಶಾಸನದ ರೀತ್ಯ ಇದರ ಹೆಸರು ‘ಹಿರಿಯ ಸತ್ರ’ವೆಂದು ಅದರ ವಿನ್ಯಾಸವು ಸಹ, ಅದನ್ನೇ ನಿವೇದಿಸುತ್ತದೆ. ಈ ದೇವಸ್ಥಾನದ ಸಮೀಪದಲ್ಲಿಯೇ ತುರ್ತುಕಾಲುವೆ ಹರಿಯುತ್ತದೆ. ಈ ಕಾಲುವೆಯ ಹಿಂದಿನ ಹೆಸರು ‘ಹಿರಿಯ ಕಾಲುವೆ’. ಈ ಕಾಲುವೆಯು, ಇದರ ಉಪಕಾಲುವೆಯ ಮತ್ತು ಇವುಗಳಿಗೆ ನೀರನ್ನೊದಗಿಸುವ ಆಣೆಕಟ್ಟೆ (ತುರ್ತು ಕಾಲುವೆ ಆಣೆಕಟ್ಟೆ) ಇವೆಲ್ಲವೂ ವಿಜಯನಗರ ಸ್ಥಾಪನಾನಂತರ ನಿರ್ಮಾಣಗೊಂಡವು ಎಂಬುದು ಆಗಲೇ ತಿಳಿದಿದೆ. ಈಗಾಗಲೇ ತಿಳಿಸಿರುವಂತೆ, ಈ ಭಾಗಕ್ಕೆ ಮತ್ತು ಮುಂದೆ ಕಾಣಬರುವ ಕೃಷ್ಣದೇವಸ್ಥಾನದ ಭಾಗಕ್ಕೆಲ್ಲಾ ಕೃಷ್ಣಾಪುರವೆಂದು ಕರೆಯಲಾಗುತ್ತಿತ್ತು. ಬಹುಶಃ ಈ ಹೆಸರು ಕ್ರಿ.ಶ. ೧೫೧೩ರಿಂದ ಪ್ರಚಿಲಿತದಲ್ಲಿ ಬಂದಿರಲು ಸಾಕು, ಏಕೆಂದರೆ, ಅರಸ ಕೃಷ್ಣದೇವರಾಯ ಮಹಾರಾಜನು, ತನ್ನ ದಿಗ್ವಿಜಯದಿಂದ ಹಿಂತಿರುಗಿದ ನಂತರ, ಉದಯಗಿರಿಯಿಂದ ತಂದ ‘ಬಾಲಕೃಷ್ಣ ಮೂರ್ತಿಯನ್ನು’ ಈ ದೇವಸ್ಥಾನದಲ್ಲಿ ಸ್ಥಾಪಿಸಿದನೆಂದು ತಿಳಿಸುವ ಒಂದು ಶಾಸನವು ದೊರೆತಿದೆ. ಈ ದೇವಸ್ಥಾನ ಮುಂದೆ ಯಥಾ ಪ್ರಕಾರವಾಗಿ ಸಾಲು ಮಂಟಪಗಳನ್ನು ಹೊಂದಿರುವ ತೇರು ಬಜಾರ ಇದೆ. ಅದನ್ನು ಕೃಷ್ಣಾಪುರ ಪೇಟೆ ಎಂದು ಕರೆಯಲಾಗುತ್ತದೆ.

d. ಈ ಕೃಷ್ಣಾಪುರ ಪೇಟೆಯ ಮೂಲಕ ಮುಂದೆ ಹೋಗಿ, ಮತಂಗ ಪರ್ವತವನ್ನು ಸುತ್ತು ಬಳಸಿ, ಉತ್ತರಕ್ಕೆ ತಿರುಗಿದರೆ ಅಚ್ಯುತರಾಯನ ಗುಡಿ ಸಿಗುತ್ತದೆ. ಇದರ ಉತ್ತರ ಮಹಾದ್ವಾರದ ಒಂದು ಗೋಡೆಯ ಮೇಲೆ ಕಾಣಬರುವ ಶಿಲಾಶಾಸನದ ಪ್ರಕಾರ, ಇದು ತಿರುವೆಂಗಳನಾಥನ ಗುಡಿಯಾಗಿದ್ದಿತೆಂದು ತಿಳಿಸುತ್ತದೆ ಮತ್ತು ಅಚ್ಯುತಾಪುರವೆಂಬ ಉಪನಗರಕ್ಕೆ ಸೇರಿದುದಾಗಿತ್ತು. ಈ ಭಾಗಕ್ಕೆ ಅಚ್ಯುತಾಪುರವೆಂದು ಕರೆಯಲಾಗುತ್ತಿದ್ದಿತೆಂಬ ವಿಷಯವು, ಈ ಗುಡಿಯ ಹಿಂದೆ ಈಗಲೂ ಕಾಣಬರುವ ಒಂದು ಅಪ್ರಕಟಿತ ಶಿಲಾಶಾಸನದಿಂದ ತಿಳಿಯುತ್ತದೆ.

ವಿಜಯನಗರದ ಅರಸರ ಕಾಲದಲ್ಲಿ ಪ್ರಚಲಿತವಿದ್ದ ಪ್ರಕಾರ ಈ ತಿರುವೆಂಗಳನಾಥ (ಅಚ್ಯುತರಾಯನ) ಗುಡಿಯ ಮುಖ್ಯದ್ವಾರದ ಮುಂದೆ (ಇದು ಉತ್ತರಾಭಿಮುಖವಾಗಿದೆ) ಸಾಲು ಮಂಟಪಗಳ ಪೇಟೆ ಬೀದಿ ಇರುತ್ತದೆ. ಇದಕ್ಕೆ ‘ಸೂಳೆ ಬಜಾರು’ ಎಂದು ಜನವಾಡಿಕೆ. ಇದು ಸಂಪೂರ್ಣವಾಗಿ ತಪ್ಪಾದ ಹೆಸರೆಂದು ತಿಳಿಸುವಲ್ಲಿ ಒಂದು ಶಿಲಾಶಾಸನವು ಸಹಾಯಕವಾಗುತ್ತದೆ. ಈ ಶಾಸನದ ಪ್ರಕಾರ, ಇದಕ್ಕೆ ಅಚ್ಯುತರಾಯ ಪೇಟೆಯೆಂದು ಹೆಸರು. ಈ ಅಚ್ಯುತರಾಯ ಪೇಟೆಯನ್ನು ಮಹಾಮಂಡೇಶ್ವರರಲ್ಲೊಬ್ಬನು, ಸಕಲ ರಾಜ ಒಡೆಯರರ ಮಗನೂ ಹಿರಿಯ ತಿರುಮಲರಾಜನೆಂಬವನು ನಿರ್ಮಿಸಿದನು. ಈ ಶಾಸನವು ಈ ಅಚ್ಯುತರಾಯ ಪೇಟೆಗೆ ಇದ್ದ ಮೇರೆಗಳನ್ನು ತಿಳಿಸಿ, ನಮಗೆ ಇನ್ನಷ್ಟು ಸಹಾಯ ಮಾಡುತ್ತದೆ. ಅದರ ಪ್ರಕಾರ ಮೇರೆಗಳು ಈ ರೀತಿ ಇದ್ದವು: ಪಶ್ಚಿಮಕ್ಕೆ ಮತಂಗ ಪರ್ವತ ಪರ್ವತ, ಪೂರ್ವಕ್ಕೆ ತಿಪ್ಪರಾಜನ ತೋಟ, ಉತ್ತರಕ್ಕೆ ಸೀತೆಯ ಕುಂಡ ಮತ್ತು ದಕ್ಷಿಣಕ್ಕೆ ಭೂಪತಿ ಕರೆ, ತಿಪ್ಪರಾಜನ ತೋಟವೊಂದನ್ನು ಬಿಟ್ಟರೆ, ಇತರೆ ವೈಶಿಷ್ಟ್ಯಗಳೆಲ್ಲಾ ಈಗಲೂ ಕಾಣಬರುತ್ತಿರುವದರಿಂದ, ಇದು ‘ಇದು ನಿಶ್ಚಿತವಾಗಿಯೂ ಸೂಳೆ ಬಜಾರು ಅಲ್ಲ ಮತ್ತು ಇದು ‘ಅಚ್ಯುತರಾಯ ಪೇಟೆ’ ಎಂದು ತಿಳಿದಂತಾಯಿತು.

e. ಅಲ್ಲಿಂದ ನದಿಯ ಬಲದಂಡೆಯ ಮೇಲೆ ಮುಂದೆ ಸಾಗಿದಲ್ಲಿ, ವಿಠಲನ ಗುಡಿ ಕಾಣಸಿಗುತ್ತದೆ. ಅದರ ಸುತ್ತಲಿನ ಉಪನಗರಕ್ಕೆ ವಿಠಲಾಪುರವೆಂದು ಕರೆಯಲಾಗುತ್ತಿತ್ತು. ಈ ವಿಷಯವನ್ನು, ಅದೇ ದೇವಸ್ಥಾನದಲ್ಲಿ ಕಾಣಬರುವ ಅನೇಕ ಶಿಲಾಶಾಸನಗಳು ತಿಳಿಸುತ್ತವೆ. ಈ ದೇವಸ್ಥಾನದ ಪೂರ್ವಕ್ಕೆ ಮಹಾದ್ವಾರದ ನಂತರ ಕಾಣಬರುವ ಸಾಲು ಮಂಟಪಗಳ ತೇರು ಬೀದಿಗೆ, ವಿಠಲ ಪೇಟೆ ಎಂದು ಶಿಲಾಲೇಖನಗಳಲ್ಲಿ ಉಲ್ಲೇಖನವಿದೆ. ಈ ಪೇಟೆಯ ಇನ್ನೊಂದು ಕೊನೆಯಲ್ಲಿರುವ ಸುಂದರವಾದ ಮಂಟಪಕ್ಕೆ ‘ಶ್ರೀ ಪರಾಂಕುಶ ಮಂಟಪ’ವೆಂದು ಹೆಸರು. ಈ ವಿಷಯವನ್ನು ತಿಳಿಸುವ ಶಾಸನವು, ಇನ್ನೂ ಅನೇಕ ವಿವರಗಳನ್ನು ಎಂದರೆ, ಭಾವಿಗಳ, ಕಾಲುವೆಗಳ, ತೋಟಗಳ ಮುಂತಾದವುಗಳ ಹೆಸರುಗಳನ್ನು ತಿಳಿಸುತ್ತದೆ. ಆದರೆ ಅನೇಕ ಮಾರ್ಪಾಟುಗಳಿಂದಾಗಿ ಅವುಗಳನ್ನು ಈಗ ಗುರುತಿಸಲು ಸಾಧ್ಯವಾಗುತ್ತಿಲ್ಲ.

f. ಈ ಪರಾಂಕುಶ ಮಂಟಪದಿಂದ ದಕ್ಷಿಣಕ್ಕೆ, ಈಗಿನ ತಳವಾರು ಕಟ್ಟೆಯ ರಸ್ತೆಯಿಂದ ಆಚೆಗೆ, ಜನ ನಿಬಿಡ ನಿವೇಶನವಿದ್ದುದಾಗಿ ತಿಳಿಯುತ್ತದೆ. ಈ ಭಾಗಕ್ಕೆ ಗೋರಿ ಕೆಳಗಣ ಗ್ರಾಮವೆಂದು ಹೆಸರಿತ್ತು.

ಈ ನಿವೇಶನದ ಮೇಲಕ್ಕೆ ಎಂದರೆ ಪಶ್ಚಿಮಕ್ಕೆ, ಅನತಿ ದೂರದಲ್ಲಿಯೇ ಚಿಕ್ಕ ಗುಡ್ಡಗಳ ಮೇಲೆ, ಮುಸಲ್ಮಾನರ ಅನೇಕ ಗೋರಿಗಳನ್ನು ಈಗಲೂ ನೋಡಬಹುದು. ಆದುದರಿಂದ ಈ ಗೋರಿ ಕೆಳಗಣ ಗ್ರಾಮದ ನಿವಾಸಿಗಳನ್ನು ಬಹುಶಃ ಮುಸಲ್ಮಾನರಾಗಿದ್ದಿರಬೇಕೆಂದು ತರ್ಕಿಸಬಹುದು. ವಿಜಯನಗರದ ಇತರ ಉಪನಗರಗಳೆಲ್ಲಾ ಯಾವುದಾದರೊಂದು ಹಿಂದೂ ದೇವರ ಹೆಸರನ್ನು ಹೊಂದಿದ್ದರೆ, ಇದಕ್ಕೆ ಮಾತ್ರ ಯಾವ ಹೆಸರನ್ನೂ ಕೊಡದೆ, ಗೋರಿ ಕೆಳಗಣ ಗ್ರಾಮವೆಂದು ಕರೆಯಲಾಗಿದೆ.

ಮೇಲೆಯೇ ತಿಳಿದು ಬಂದಿರುವಂತೆ, ಅನೇಕ ಶಾಸನಗಳಲ್ಲಿ ಈ ಉಲ್ಲೇಖನವಿದ್ದು, ಅವುಗಳೆಲ್ಲವೂ, ತಾಳಿಕೋಟೆಯ ಕದನಕ್ಕಿಂತ ಮೊದಲಿನವು ಎಂದು ಬೇರೆ ಹೇಳಬೇಕಾಗಿಲ್ಲ. ಅಲ್ಲದೇ ಇತರ ಆಧಾರಗಳ ಪ್ರಕಾರ ಮುಸಲ್ಮಾನರು ವಿಜಯನಗರ ವಿಜಯನಗರ ಅರಸರ ಕೈ ಕೆಳಗೆ ಅಧಿಕಾರಿಗಳಾಗಿಯೋ, ಸೈನಿಕರಾಗಿಯೋ ಅನೇಕರು ಇದ್ದರು. ಅದರಲ್ಲೂ ಎರಡನೇ ದೇವರಾಯನ ಆಳ್ವಿಕೆಯ ಕಾಲದಿಂದ, ಮುಸಲ್ಮಾನರಿಗೆ ಹೆಚ್ಚಿನ ಪ್ರೋತ್ಸಾಹ ದೊರೆತು, ಅನೇಕರು ವಿಜಯನಗರದಲ್ಲಿಯೇ ವಾಸವಾಗಿದ್ದರು. ಇದೇ ಪರಿಸರದಲ್ಲಿ ಈಗಲೂ ಕಾಣಬರುವ ಒಂದು ಶಿಲಾಶಾಸನದ ಪ್ರಕಾರ, ಎರಡನೇ ದೇವರಾಯನ ಅಡಿಯಲ್ಲಿ ಅಧಿಕಾರಿಯಾಗಿದ್ದ ಅಹಮ್ಮದಖಾನನೆಂಬವನು ತನ್ನ ಒಡೆಯನಿಗೆ ಪುಣ್ಯವಾಗಬೇಕೆಂದು, ಮಸೀದೆಯೊಂದರ ಪಕ್ಕದಲ್ಲಿ ಒಂದು ಭಾವಿಯನ್ನು ತೋಡಿಸಿ ಮತ್ತು ಒಂದು ಅನ್ನ ಛತ್ರವನ್ನು ಕಟ್ಟಿಸಿ ದಾನ ಮಾಡಿದನು. ಈ ಉಪನಗರವು, ಈ ದಿಕ್ಕಿನಲ್ಲಿ, ಮಹಾನಗರದ ಕೊನೆಯಾಗಿದ್ದಿರಬೇಕು. ಈ ವಿಷಯವನ್ನು ಸಮರ್ಥಿಸುವಲ್ಲಿ ಪೀಸ ಎಂಬ ಪೋರ್ಚುಗೀಸ ಪ್ರವಾಸಿಗರು ಬರೆದಿರುವುದೂ ಸಹ ತಾಳೆಯಾಗುತ್ತದೆ. ಅವನ ಪ್ರಕಾರ ‘…. ಬೀದಿಯ ಕೊನೆಯಲ್ಲಿ ಮೂರಿಷರ (ಮುಸಲ್ಮಾನರ) ಮನೆಗಳಿವೆ. ಅದೇ ನಗರದ ಕೊನೆ….’ ಎಂದು. ಇದೇ ಈ ಗೋರಿ ಕೆಳಗಣ ಗ್ರಾಮವಾಗಿರಬೇಕಲ್ಲವೇ?

g. ಅಲ್ಲಿಂದ ದಕ್ಷಿಣಕ್ಕೆ ಹೋದರೆ ಈಗಿನ ಕಾಮಲಾಪುರ ಗ್ರಾಮವು ಸಿಗುತ್ತದೆ. ಈ ಗ್ರಾಮವು, ವಿಜಯನಗರ ಸಾಮ್ರಾಜ್ಯದ ಕಾಲದಲ್ಲೂ ಸಹ ಇದೇ ಹೆಸರಿನಿಂದ ಕರೆಯಲ್ಪಡುತ್ತಿದ್ದಿತೆಂದು, ಕಾಮಲಾಪುರದಲ್ಲಿರುವ ಒಂದು ಶಿಲಾಶಾಸನವು ತಿಳಿಸುತ್ತದೆ. ಇಂತಹುದೇ ಇನ್ನೊಂದು ಶಿಲಾಶಾಸನವು ಈ ಗ್ರಾಮದ ಹೆಸರನ್ನು ಉಲ್ಲೇಖಿಸುವುದಲ್ಲದೇ, ಅದರ ಪರಿಸರದಲ್ಲಿರುವ ಯಾವಾಗಲೂ ಬತ್ತದ ದೊಡ್ಡ ಕೆರೆ ಮತ್ತು ಅದಕ್ಕೆ ನೀರನ್ನೊದಗಿಸುವ ನಿರಂತರ ಏರ್ಪಾಟಿನ ಬಗ್ಗೆಯೂ ತಿಳಿಸುತ್ತದೆ.

h. ಕಾಮಲಾಪುರದಿಂದ ಪೂರ್ವಕ್ಕೆ ಮತ್ತು ಪಟ್ಟಾಭಿರಾಮ ದೇವಸ್ಥಾನಕ್ಕಿಂತಲೂ ಮೊದಲು ಕಾಣಬರುವ ಪ್ರದೇಶವು ಆ ಕಾಲದಲ್ಲಿ ಒಂದು ಜನವಸತಿ ಕೇಂದ್ರವಾಗಿದ್ದು, ಅದಕ್ಕೆ ಕೊಂಡಮರಸಯ್ಯನ ಪಾಳ್ಯವೆಂದು ಹೆಸರಿದ್ದುದಾಗಿ ತಿಳಿದುಬರುತ್ತದೆ. ಕ್ರಿ.ಶ.೧೫೩೧ರಲ್ಲಿ, ಎಂದರೆ ಅಚ್ಯುತದೇವ ಮಹಾರಾಜನು ಆಳುತ್ತಿದ್ದ ಕಾಲದಲ್ಲಿ, ಹೊರಡಿಸಲಾದ ಒಂದು ಶಿಲಾಶಾಸನವು ಈ ವಿಷಯವನ್ನು ತಿಳಿಸುತ್ತದೆ.

i. ಅಲ್ಲಿಂದ ಇನ್ನೂ ಮುಂದೆ ಪೂರ್ವಕ್ಕೆ ಹೋದಲ್ಲಿ ವರದರಾಜಮ್ಮನ ಪಟ್ಟಣವೆಂಬ ಉಪನಗರವಿದ್ದುದಾಗಿ ತಿಳಿಯುತ್ತದೆ. ಈಗಿನ ‘ಹಂಪಿ ಪವರ್ ಹೌಸ್‌ಕ್ಯಾಂಪ್‌’ ಪ್ರದೇಶವೇ ಆ ಉಪನಗರವಾಗಿತ್ತು. ಈ ಭಾಗದಲ್ಲಿ ಒಂದು ಹಾಳು ದೇವಸ್ಥಾನವಿದೆ. ಈಗ ಅದಕ್ಕೆ ಕಳ್ಳರ ಗುಡಿ ಎಂದು ಪ್ರತೀತಿ, ಆದರೆ ಶಾಸನಗಳ ಪ್ರಕಾರ ಆ ಗುಡಿಯು ರಘುನಾಥ ದೇವರ ಗುಡಿಯ ಬಳಿಯಲ್ಲಿ ಒಂದು ಕೋಟೆ ದ್ವಾರವಿದೆ. ಈ ದ್ವಾರಕ್ಕೆ ಪೆನುಗೊಂಡೆ ಬಾಗಿಲು ಎಂದು ಹೆಸರಿದ್ದುದಾಗಿ ತಿಳಿಯುತ್ತದೆ. ಎಂದರೆ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ, ಪೆನುಗೊಂಡೆ ಎಂಬುದು ಮುಖ್ಯ ಮಾಂಡಲೀಕನೊಬ್ಬನ ಪಟ್ಟಣವಾಗಿದ್ದು ಈ ದ್ವಾರವು, ಆ ಪೆನುಗೊಂಡೆಗೆ ಹೋಗುವ ರಾಜಮಾರ್ಗದಲ್ಲಿತ್ತೆಂಬುದು. ಆದರೆ ಆಗಿನ ರಾಜಮಾರ್ಗವು ಈಗ ಹಾಳಾಗಿದ್ದು ಬಳಕೆಯಲ್ಲಿರುವುದಿಲ್ಲ.

ಈ ಪೆನುಗೊಂಡೆ ಬಾಗಿಲಿನಿಂದ ಸ್ವಲ್ಪದೂರ ಉತ್ತರಕ್ಕೆ,ಎಂದರೆ ಈಗಿನ ಕಂಪಲಿ ರಸ್ತೆಗೆ ಹತ್ತಿರದಲ್ಲಿ, ಇದೇ ಸುತ್ತಿನ ಕೋಟೆಗೋಡೆಗೆ ಸೇರಿದ ಇನ್ನೊಂದು ಕೋಟೆದ್ವಾರವಿದೆ. ಇದರ ಹೆಸರು ‘ಉದಯಗಿರಿ ಬಾಗಿಲು’ ಎಂದಿತ್ತೆಂದು ಕ್ರಿ.ಶ.೧೫೫೪ರಲ್ಲಿಯ ಶಿಲಾಶಾಸನದಿಂದ ತಿಳಿದುಬರುತ್ತದೆ.

j. ಇಲ್ಲಿಂದ ಹೊಸಪೇಟೆಗಭಿಮುಖವಾಗಿ ಮಾರ್ಗಕ್ರಮಣ ಮಾಡಿದಂತೆ, ಮಲಪನಗುಡಿ ಗ್ರಾಮವು ಸಿಗುತ್ತದೆ. ಆ ಗ್ರಾಮದ ಹೊರವಲಯದಲ್ಲಿ ‘ಸೂಳೆಭಾವಿ’ ಎಂದು ಕರೆಯಲಾಗುತ್ತಿರುವ ಭಾವಿ ಇದೆಯಷ್ಟೇ? ಇದೂ ಸಹ ಅಸಂಬದ್ಧವಾದ ಹೆಸರಾಗಿದೆ. ಹಿಂದೆ ಈ ಭಾವಿಗೆ ‘ಮಾಳಿಗೆ ಕೂಪಾರಾಮ’ವೆಂದು ಹೆಸರಿದ್ದುದಾಗಿ, ಶಿಲಾಶಾಸನವೊಂದರಿಂದ ತಿಳಿದುಬರುತ್ತದೆ. ಎಂದರೆ, ಮಾಳಿಗೆಯ ಅಥವಾ ಛಾವಣೆಯಿಂದ ಹೊದಿಸಿದ್ದು, ಭಾವಿಚಿತ್ರ, ಇಲ್ಲಿ ಛತ್ರವು ಭಾವಿಯಿಂದ ಪ್ರತ್ಯೇಕವಾಗಿ ಇರದೆ, ಭಾವಿಯ ಸುತ್ತಲೂ, ಕಮಾನುಗಳು ಮತ್ತು ಛಾವಣಿಗಳಿಂದ ಕೂಡಿದ್ದು, ಸಾಕಷ್ಟು ಅಗಲವಾದ ತಂಗುದಾಣವನ್ನು ನಿರ್ಮಿಸಿ, ಪ್ರವಾಸಿಗಳು ಅಲ್ಲಿ ತಂಗುವುದಕ್ಕೂ ಮಧ್ಯದಲ್ಲಿ ಭಾವಿಯಲ್ಲಿದ್ದ ನೀರನ್ನು ಉಪಯೋಗಿಸಲಿಕ್ಕೂ ಅನುಕೂಲವಾಗುವಂತೆ ಇದರ ವಿನ್ಯಾಸವನ್ನು ಏರ್ಪಡಿಸಲಾಗಿದೆ. ಈ ಏರ್ಪಾಟು ಎರಡು ಅಂತಸ್ತು (ಮಜಲು)ಗಳಲ್ಲಿದೆ. ಎಂದರೆ ಋತು ಧರ್ಮಕ್ಕನುಗುಣವಾಗಿ ಬದಲಾಗುವ ನೀರಿನ ಮಟ್ಟಕ್ಕನುಗುಣವಾಗಿ, ಅನುಕೂಲವಾದ ಮಜಲನ್ನೇ ದಾರಿಹೋಕರು ಉಪಯೋಗಿಸಿಕೊಳ್ಳಬೇಕಂಬ ಉದ್ದೇಶದಿಂದ ಹಾಗೆ ಏರ್ಪಡಿಸಲಾಗಿದೆ.

ಇಂಥ ಏರ್ಪಾಟಿನ ಬಾವಿಗಳು, ಆ ಕಾಲದಲ್ಲಿ ಸಾಮಾನ್ಯವಾಗಿ ರಾಜಮಾರ್ಗಗಳ ಬದಿಯಲ್ಲಿ, ದಾರಿಹೋಕರ ಅನುಕೂಲತೆಗಳಿಗಾಗಿ ನಿರ್ಮಾಣಗೊಳ್ಳುತ್ತಿದ್ದವು. ಈ ‘ಸೂಳೆ ಭಾವಿ’ಯಾದರೋ, ಆ ಕಾಲದಲ್ಲಿ ಉಪಯೋಗದಲ್ಲಿದ್ದ ವಿವಿಧ ರಾಜಮಾರ್ಗಗಳ ಕೂಟ ಕೇಂದ್ರದಲ್ಲಿ ನಿರ್ಮಾಣಗೊಂಡಿತ್ತು. ಎಂದರೆ, ಪಶ್ಚಿಮ ಕರಾವಳಿಯ ಬಸರೂರು, ಬಾರಕೂರು, ಭಟ್ಕಳ, ಗೋವ ಮುಂತಾದ ವ್ಯಾಪಾರೀ ಕೇಂದ್ರಗಳಿಗೆ, ವಾಣಿಜ್ಯ ರಾಜಮಾರ್ಗವು ಇಲ್ಲಿಂದಲೇ ಹೋಗುತ್ತಿದ್ದವು. ಸೊಂಡೂರಿನ ಕಡೆಗೆ ಹೋಗುತ್ತಿದ್ದ, ಬಿಸಿಲಹಳ್ಳಿ ಕಣಿವೆ ಮಾರ್ಗವೂ ಸಹ ಇಲ್ಲಿಂದಲೇ ಇತ್ತು. ಅಲ್ಲದೇ ಇದೇ ಸ್ಥಳದಲ್ಲಿ, ವಿಜಯನಗರ ಶೈಲಿಯಲ್ಲಿ ಕಟ್ಟಲಾಗಿರುವ ರಾಜಮಾರ್ಗದ ವಿರಾಮ ದ್ವಾರವೊಂದು ಈಗಲೂ ಕಾಣಬರುತ್ತದೆ. ಈ ವಿವರಗಳೆಲ್ಲಾ ಮೇಲೆ ತಿಳಿಸಿರುವ ಶಾಸನದಿಂದ ವೇದ್ಯವಾಗುತ್ತದೆ.

k. ಅಲ್ಲಿಂದ ಮುಂದೆ ಸಾಗಿದಲ್ಲಿ ಈಗಿನ ಅನಂತಶಯನ ಗುಡಿ ಗ್ರಾಮವು ಬರುತ್ತದೆ. ಈ ಹೆಸರೇ ಸೂಚಿಸುವಂತೆ, ಈ ಗ್ರಾಮದಲ್ಲಿ ಒಂದು ಬೃಹದಾಕಾರದ ‘ಶಾಲಶಿಖರ’ವನ್ನು ಹೊಂದಿರುವ ಮತ್ತು ಅದಕ್ಕನುಗುಣವಾದ ವಿನ್ಯಾಸದ ಗರ್ಭಗೃಹವಿರುವ ದೇವಾಲಯವಿದೆ. ಅದು ಶೇಷಶಾಯಿಯಾದ ವಿಷ್ಣುಮೂರ್ತಿಗಾಗಿ ನಿರ್ಮಾಣವಾದುದು. ಈಗ ಅದರಲ್ಲಿ ಮೂರ್ತಿ ಇರುವುದಿಲ್ಲ. ಈ ವಿಷಯದ ಬಗ್ಗೆ ಇಲ್ಲಿಯ ಜನರಲ್ಲಿ ಬೇರೆಯೇ ವದಂತಿ ಇದೆ. ಮೂರ್ತಿ ಸ್ಥಾಪನೆಯೇ ಈ ಗುಡಿಯಲ್ಲಿ ಜರುಗಲಿಲ್ಲ. ಅದಕ್ಕಾಗಿ ಕಟೆಯಲಾದ ಮೂರ್ತಿಯು ಈಗಿನ ಹೊಳಲು ಗ್ರಾಮದಲ್ಲಿಯೇ ಉಳಿದುಹೋಗಿದೆ ಎಂದು ಮುಂತಾಗಿ, ಆದರೆ ಈ ದೇವಾಲಯದಲ್ಲಿಯೇ ಕಾಣಬರುವ ಶಿಲಾಶಾಸನಗಳ ಪ್ರಕಾರ, ಮೂರ್ತಿ ಸ್ಥಾಪನೆಯಾಗಿದ್ದು, ಅದರ ಆರಾಧನೆ ಮುಂತಾದ ಕಾರ್ಯಗಳಿಗಾಗಿ ನೀಡಲಾದ ದಾನಗಳ ಬಗ್ಗೆ ವಿವರಗಳು ಸಾಕಷ್ಟು ಇವೆ. ಈ ವಿಷಯವೇ ಬೇರೆ.

ಇಲ್ಲಿ ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದ ವಿವರವೆಂದರೆ, ಈ ದೇವಾಲಯವಿರುವ ಉಪನಗರಕ್ಕೆ, ಆ ಕಾಲದಲ್ಲಿ ‘ಸಾಲೆ ತಿರುಮಲರಾಯನ ನಗರ’ವೆಂದು ಹೆಸರಿದ್ದುದು. ಈ ವಿಷಯವನ್ನು ಸಹ, ಮೇಲೆ ತಿಳಿಸಿದ ಶಿಲಾಶಾಸನವೇ ಹೇಳುತ್ತದೆ. ಈ ಸಾಲೆ ತಿರುಮಲರಾಯನು ಅಪ್ರಾಪ್ತ ವಯಸ್ಸಿನಲ್ಲೇ ಮರಣಹೊಂದಿದ ಕೃಷ್ಣದೇವರಾಯ ಮಹಾರಾಜನ ಏಕಮಾತ್ರ ಪುತ್ರನಾಗಿದ್ದನು. ಅವನ ಮಗನ ಹೆಸರಿನಲ್ಲಿ ಈ ಉಪನಗರವು ನಾಮಕರಣವನ್ನು ಹೊಂದಿತತೆಂಬುದು ಖಚಿತವಾಗಿ ತಿಳಿದಂತಾಯಿತು.

ಅಲ್ಲದೇ ಕೃಷ್ಣದೇವರಾಯ ಮಹಾರಾಜನು ಆತ್ಮೀಯ ಹೆಸರಿನಲ್ಲಿ, ಉಪನಗರಗಳಿಗೆ ನಾಮಕರಣ ಮಾಡುವುದು ಬಹುವಾಗಿ ಕಂಡುಬರುತ್ತದೆ. ಈ ವಿಷಯ ಕುರಿತು ಲಭ್ಯವಿರುವ ಇನ್ನು ಕೆಲವು ವಿವರಗಳು ಕೆಳಗಿನ ಉದಾಹರಣೆಗಳಿಂದಲೂ ತಿಳಿಯುತ್ತವೆ.

l. ಈ ಅನಂತಶಯನ ಗುಡಿ ಗ್ರಾಮದಿಂದ ತುಸು ಉತ್ತರಕ್ಕೆ ನಡೆದರೆ ನಾಗೇನಹಳ್ಳಿ ಎಂಬ ಚಿಕ್ಕ ಗ್ರಾಮವು ಕಾಣಬರುತ್ತದೆ. ಈ ಗ್ರಾಮವು ಹಿಂದೆ ನಾಗಲಾಪುರವೆಂದು ಪ್ರಸಿದ್ಧಿಯಾಗಿದ್ದು, ಕೃಷ್ಣದೇವರಾಯ ಮಹಾರಾಜನ ತಾಯಿಯಾದ ನಾಗಲಾದೇವಿಯ ಹೆಸರಿನಲ್ಲಿ, ನಾಮಕರಣ ಹೊಂದಿತ್ತು. ಇದೇ ಗ್ರಾಮದಲ್ಲಿ ಈಗಲೂ ಕಾಣಬರುವ ರಂಗನಾಥ ದೇವಾಲಯದಲ್ಲಿ ಒಂದು ಶಿಲಾಶಾಸನವಿದ್ದು ಅದು ಕ್ರಿ.ಶ. ೧೫೧೬ರಲ್ಲಿ ಹೊರಡಿಸಲಾದುದಾಗಿದೆ. ಈ ಶಾಸನವು ಇನ್ನೂ ತಿಳಿಸುವುದೇನೆಂದರೆ, ಈ ಗ್ರಾಮವು ನಾಗಲಾಪುರವೆಂಬ ಅಗ್ರಹಾರವೆಂದು ತಿಳಿಸುತ್ತಾ, ಈ ಅಗ್ರಹಾರವನ್ನು ರಂಗನಾಥ ದೀಕ್ಷಿತರೆಂಬ ಬ್ರಾಹ್ಮಣರಿಗೆ ದಾನವಾಗಿ ಕೊಡಲ್ಪಟ್ಟಿತ್ತು ಮತ್ತು ಕೃಷ್ಣದೇವರಾಯ ಮಹಾರಾಯನ ತಾಯಿಯಾದ ನಾಗಲಾದೇವಿಗೆ ಪುಣ್ಯಾಗಲೆಂದು ಹಾಗೆ ದಾನವಾಗಿ ಕೊಡಲ್ಪಟ್ಟಿತ್ತು ಎಂದು ಮುಂತಾಗಿ, ತದನಂತರ ಆ ರಂಗನಾಥ ದೀಕ್ಷಿತರು ಈ ಅಗ್ರಹಾರದಲ್ಲಿಯೇ ಒಂದು ಕೆರೆಯನ್ನು ಕಟ್ಟಿಸಿ ಅದಕ್ಕೆ ನಾಗೇಶ್ವರನೆಂದು ಮತ್ತು ಒಂದು ವಿಷ್ಣು ದೇವಾಲಯವನ್ನು ಕಟ್ಟಿಸಿ ಅದಕ್ಕೆ ನಾಗೇಂದ್ರಶಯನ (ರಂಗನಾಥ)ವೆಂದು ನಾಮಕರಣ ಮಾಡಿ, ಕೆಲವು ದತ್ತಿಗಳನ್ನು ಬಿಟ್ಟನು. ಹೀಗೆ ಈ ಉಪನಗರವು, ನಾಗಲಾಪುರವೆಂಬ ಅಗ್ರಹಾರವಾಗಿ ಪ್ರಸಿದ್ಧಿಯಾಗಿತ್ತು.

m. ಈಗ ಹೊಸಪೇಟೆಯ ಬಗ್ಗೆ ವಿವೇಚಿಸೋಣ. ಆ ಹೆಸರೇ ತಿಳಿಸುವಂತೆ, ಅದು ಹಿಂದಿನಿಂದಲೂ ವ್ಯಾಪಾರೀ ಕೇಂದ್ರವಾಗಿ ಮತ್ತು ಕಾಲಗತಿಗನುಗುಣವಾದ ಮಾರ್ಪಾಟುಗಳೊಂದಿಗೆ ಬೆಳೆದು ಬಂದುದಾಗಿರಬೇಕು. ಆದರೆ ಹಿಂದಿನ ಜನ ನಿಬಿಡವಾದ ಉಪನಗರವು ಈಗಿನ ಸಣ್ಣಕ್ಕಿ ವೀರಭದ್ರದೇವರ ಗುಡಿ ಮತ್ತು ಕೋಟೆ ಎಂದು ಕರೆಯಿಸಿಕೊಳ್ಳುವ ಭಾಗಕ್ಕೆ ಸೀಮಿತವಾಗಿದ್ದಿರಬೇಕು. ಅಲ್ಲದೇ ಈ ಉಪನಗರಕ್ಕೆ ತಿರುಮಲಾದೇವಿ ಪಟ್ಟಣವೆಂದು ಕರೆಯಲಾಗುತ್ತಿತ್ತೆಂದು, ಇಲ್ಲಿ ದೊರೆತಿರುವ ಎರಡು ಶಿಲಾಶಾಸನಗಳಿಂದ ವೇದ್ಯವಾಗುತ್ತದೆ. ಇವುಗಳಲ್ಲಿ ಒಂದು ತಿರುವೆಂಗಳನಾಥ ದೇವರಗುಡಿ ಈಗ ಕಾಣಬರುತ್ತಿಲ್ಲ. ಮತ್ತು ಈಗಿನ ಸಣ್ಣಕ್ಕಿ ವೀರಭದ್ರ ದೇವರ ಗುಡಿಯು ಮೊದಲಿಗೆ ಗೌರೀಶ್ವರ ದೇವರಗುಡಿಯಾಗಿದ್ದಿರಬೇಕು. ಈ ಗುಡಿಯ ವಿನ್ಯಾಸ, ಅಲ್ಲಿಯ ಈಗಿನ ಮೂರ್ತಿ ಮುಂತಾದ ಅವಶೇಷಗಳನ್ನು ಪರಿಶೀಲಿಸಿದಲ್ಲಿ ಈ ವಿಷಯವು ಖಚಿತವಾಗಿ ತಿಳಿದುಬರುತ್ತದೆ.

ಈ ತಿರುಮಲಾದೇವಿಯು, ಕೃಷ್ಣದೇವರಾಯ ಮಹಾರಾಜನ ಪಟ್ಟದರಸಿಯರಲ್ಲೊಬ್ಬಳಾಗಿದ್ದಳೆಂಬುದು ನಿಸ್ಸಂದೇಹವಾದ ವಿಷಯ. ಏಕೆಂದರೆ ಈ ಬಗ್ಗೆ ಅನೇಕ ದಾಖಲೆಗಳು ದೊರೆತಿವೆ.

ಈ ಸಂದರ್ಭದಲ್ಲಿ ಇನ್ನೊಂದು ಮುಖ್ಯ ವಿಷಯವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಮೇಲಿನ ಎರಡೂ ಶಾಸನಗಳಲ್ಲಿ, ವ್ಯಾಪಾರೀ ಬಣಗಳಾದ ಶೆಟ್ಟಿ ಪಟ್ಟಣದ ಸ್ವಾಮಿಗಳು (ತಿರುಮಲಾದೇವಿ ಪಟ್ಟಣ, ವರದರಾಜಮ್ಮನ ಪಟ್ಟಣ ಮತ್ತು ಕೃಷ್ಣಾಪುರ ಶೆಟ್ಟಿ ಪಟ್ಟಣಗಳ ಸ್ವಾಮಿಗಳು ವಣಿಜಕರು) ದಾನಗಳನ್ನು ನೀಡಿದ ಉಲ್ಲೇಖನವಿದೆ ಎಂದ ಬಳಿಕ, ಇಲ್ಲಿ ವ್ಯಾಪಾರಿಗಳು (ವಣಿಜಕರು) ಪ್ರಾಮುಖ್ಯತೆಯಿಂದ ಇದ್ದುದಕ್ಕೆ, ಹೊಸಪೇಟೆ ಎಂಬುದು ವ್ಯಾಪಾರೀ ಕೇಂದ್ರವಾಗಿದ್ದಿತೆಂಬ ತರ್ಕ ಸರಣಿಗೂ, ತಾಳೆಯಾದಂತಾಯಿತಲ್ಲವೇ? ಇದೇ ಕಾರಣದಿಂದಾಗಿ ಕಾಲಾಂತರದಲ್ಲಿ, ತಿರುಮಲಾದೇವಿ ಪಟ್ಟಣವೆಂಬ ಹೆಸರು ಒಂದಾಗಿ, ಬರಿಯೆ ಪೇಟೆ ಅಥವಾ ಹೊಸಪೇಟೆ ಎಂಬುದಾಗಿ ಉಳಿದುಬಂದಿದೆ.

n. ಕೊನೆಯಲ್ಲಿ ಈಗಿನ ಚಿತ್ತವಾಡಿಗಿಯ ಬಗ್ಗೆಯೂ ವಿವೇಚಿಸೋಣ. ಈಗಾಗಲೇ ತಿಳಿದುಬಂದಂತೆ, ಕೃಷ್ಣದೇವರಾಯ ಮಹಾರಾಜನು ತನಗೆ ಆತ್ಮೀಯರೂ ಮತ್ತು ಹತ್ತಿರದ ಸಂಬಂಧಿಗಳೂ ಆದ ತಾಯಿ ಮಗ ಮತ್ತು ಒಬ್ಬ ಪಟ್ಟದರಸಿ ಅವರುಗಳ ಹೆಸರಿನಲ್ಲಿ, ಉಪನಗರಗಳಿಗೆ ನಾಮಕರಣ ಮಾಡಿದ್ದನು. ಹೀಗಿರುವಾಗ, ಅವನಿಗೆ ಹೆಚ್ಚಲ್ಲದಿದ್ದರೂ ಅಷ್ಟೇ ಆತ್ಮೀಯಳಾದ ಮತ್ತು ಅವನ ಅನುರಾಗಗಳಿಗೆ ಪಾತ್ರಳಾದ ಇನ್ನೊಬ್ಬ ಪಟ್ಟದರಸಿಯುಳಿದ್ದಳಷ್ಟೇ? ಅವಳೇ ಚಿನ್ನಾದೇವಿ. ಈ ವಿಷಯದ ಬಗ್ಗೆಯೂ ಅನೇಕ ದಾಖಲೆಗಳು ದೊರೆತಿವೆ. ಅವುಗಳಲ್ಲಿ ಮುಖ್ಯವಾದುದೆಂದರೆ, ತಿರುಮಲೆಯ ವೆಂಕಟೇಶ್ವರ ಸ್ವಾಮಿಯ ಸಾನ್ನಿಧ್ಯದಲ್ಲಿರುವ ಮೂರು ಕಂಚಿನ ಮೂರ್ತಿಗಳು, ಅವುಗಳಲ್ಲಿ ಮಧ್ಯದಲ್ಲಿ ಕೃಷ್ಣದೇವರಾಯನದಿದ್ದರೆ, ಎಡಬಲಗಳಲ್ಲಿ ತಿರುಮಲಾದೇವಿ ಮತ್ತು ಚಿನ್ನಾದೇವಿಯರ ಮೂರ್ತಿಗಳಿವೆ. ಈ ಮೂರ್ತಿಗಳ ಮೇಲೆ, ಅವರವರುಗಳ ಹೆಸರುಗಳನ್ನು ಕೆತ್ತಲಾಗಿದೆ. ಇವೆಲ್ಲವೂ ಭಕ್ತ ವಿಗ್ರಹಗಳು. (ಇವುಗಳ ಪ್ರತೀಕಗಳನ್ನು ಹಂಪೆಯಲ್ಲಿರುವ ಪುರಾತತ್ವ ಸಂಗ್ರಹಾಲಯದಲ್ಲಿ ನೋಡಬಹುದು.) ಎಂದರೆ ಈ ಇಬ್ಬರು ಅರಸಿಯರನ್ನು ಅರಸನು ಸಮನಾಗಿ ಕಾಣುತ್ತಿದ್ದನು. ಅದುದರಿಂದ ಈ ಚಿನ್ನಾದೇವಿಯನ್ನು, ಕೃಷ್ಣದೇವರಾಯ ಮಹಾರಾಜನು, ಉಪೇಕ್ಷೆ ಮಾಡಿರಲಾರನಲ್ಲವೇ? ಎಂದೇ ಈಗಿನ ಚಿತ್ತವಾಡ್ಗಿಯನ್ನು, ಈ ಇನ್ನೊಬ್ಬ ಪಟ್ಟದರಸಿಯಾದ ಚಿನ್ನಾದೇವಿಯ ಹೆಸರಿನಲ್ಲಿ ನಾಮಕರಣ ಮಾಡಿದ್ದನೆಂದು ತರ್ಕಿಸಬಹುದು. ಈ ತರ್ಕಕ್ಕೆ ಸಹಾಯವಾಗುವಂತೆ, ಶಿಲಾಶಾಸನವೊಂದು ಚಿಕ್ಕವಾಡಿ ಎಂಬ ಉಪನಗರವನ್ನು ಸೂಚಿಸುತ್ತದೆ. ಅದು ಈಗಿನ ಚಿತ್ತವಾಡ್ಗಿಯಾಗಿ ಏರ್ಪಾಟಾಗಿರಬೇಕೆಂದು ಹೇಳಬಹುದು. ಎಂದರೆ ಅದು ಆರಂಭದಲ್ಲಿ ಚಿನ್ನಾದೇವಿವಾಡವಾಗಿದ್ದುದು, ಜನರ ಬಾಯಲ್ಲಿ ಬರಬರುತ್ತಾ ಚಿಕ್ಕದೇವಿವಾಡ, ಚಿಕ್ಕವಾಡ್ಗಿಯಾಗಿ ಉಳಿದು ಬಂದಿರಬೇಕು. ಈ ಸಂದರ್ಭದಲ್ಲಿ ಈ ಎಲ್ಲ ಉಪನಗರಗಳು, ಅದರಲ್ಲೂ ಕೃಷ್ಣದೇವರಾಯ ಮಹಾರಾಜನಿಗೆ ಆತ್ಮೀಯರಾದವರುಗಳ ಹೆಸರಿನಲ್ಲಿದ್ದ ನಾಗಲಾಪುರ (ನಾಗೇನಹಳ್ಳಿ), ಸಾಲೆ ತಿರುಮಲ ರಾಯಪುರ (ಅನಂತಶಯನ ಗುಡಿ), ವರದರಾಜಮ್ಮನ ಪಟ್ಟಣ (ಹೊಸಪೇಟೆ), ಚಿನ್ನಾದೇವಿವಾಡ (ಚಿತ್ತವಾಡ್ಗಿ) ಹತ್ತಿರ ಹತ್ತಿರದಲ್ಲಿದ್ದು, ಒಂದಕ್ಕೊಂದು ಪೂರಕವಾದುವುಗಳಾಗಿದ್ದಿರಬೇಕು. ಆದರೆ ಈಗ ಮಾತ್ರ ಹೊಸಪೇಟೆಯ ವಿಸ್ತೃತಗೊಳ್ಳುತ್ತದೆ ಕಾಲಧರ್ಮಕ್ಕನುಗುಣವಾಗಿ.

(The Metropolis of the Vijayanagara Empire by C.T.M. Kotraiah, Published in the Vijayanagara Urbanity Published by National Symposium Urban Development Edited by Dr. K.R. Basavaraj, Hospet, 1978)

ಆಕರ
ಹಂಪೆ, ೧೯೯೫, ಶರಣರ ಸುವಾಸಿನಿ ಬಳಗ, ಹೊಸಪೇಟೆ, ಪು.೧೪-೨೭