ದಕ್ಷಿಣ ಭಾರತದ ಮಧ್ಯಕಾಲೀನ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯವು ಪ್ರಸಿದ್ಧಿಯನ್ನು ಪಡೆದ ಅರಸು ಮನೆತನಗಳಲ್ಲಿ ಒಂದು. ಮಧ್ಯಕಾಲೀನ ಐತಿಹಾಸಿಕ ನೆಲೆಗಳಾದ ಚಂಪಾನೀ ಮತ್ತು ಫತೇಪು ಸಿಕ್ರಿ (ಅಗ್ರಾ) ಸಹ ವಿಜಯನಗರ ಸಾಮ್ರಾಜ್ಯದ ಸಮಕಾಲೀನ ನೆಲೆಗಳಾಗಿದ್ದರೂ ವಿಜಯನಗರ ಸಾಮ್ರಾಜ್ಯವು ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿರುವುದು ಗಮನಾರ್ಹ. ಬಳ್ಳಾರಿ ಜಿಲ್ಲೆಯಲ್ಲಿರುವ ಹಂಪಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ ವಿಜಯನಗರದ ಅರಸರು ಇಡೀ ದಕ್ಷಿಣ ಭಾರತವನ್ನೇ ಸುಮಾರು ಮೂರು ಶತಮಾನಗಳಿಗೂ ಅಧಿಕವಾಗಿ ತಮ್ಮ ಅಧೀನದಲ್ಲಿಟ್ಟುಕೊಂಡಿದ್ದರು. ಪ್ರಾಚೀನ ಭಾರತದ ಅರಸು ಮನೆತನಗಳು ತಮ್ಮ ರಾಜ್ಯಗಳನ್ನು ಶ್ರೇಣೀಕೃತ ವಿಭಾಗಗಳನ್ನಾಗಿ ವಿಭಜಿಸಿ ಆಡಳಿತವನ್ನು ನಡೆಸಿದಂತೆಯೇ ವಿಜಯನಗರದ ಅರಸು ಸಹ-ತಮ್ಮ ರಾಜ್ಯವನ್ನು ವಿಭಾಗಿಸಿ ಅಳಿದುದು ಇತಿಹಾಸಕಾರರು ಬಲ್ಲ ವಿಷಯವಷ್ಟೆ. ಇಂತಹ ಶ್ರೇಣೀಕೃತ ವಿಭಾಗದ ಒಂದು ವಿಭಾಗವೇ ನಗರ ಅಥವಾ ಪಟ್ಟಣ. ಈ ಲೇಖನದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯನ್ನು ಮತ್ತು ಅದರೊಂದಿಗೆ ಸಾವಯವ್ಯ ಸಂಬಂಧಗಳನ್ನು ಹೊಂದಿದ್ದಂತಹ ಉಪನಗರಗಳನ್ನು ಕುರಿತು ಚರ್ಚಿಸಲಾಗುವುದು.

ವಿಜಯನಗರ ಸಾಮ್ರಾಜ್ಯದ ಇತಿಹಾಸದೊಂದಿಗೆ, ಕಲೆ, ವಾಸ್ತುಶಿಲ್ಪ, ಸಮಾಜ ಮತ್ತು ಸಾಂಸ್ಕೃತಿಕ ಮಜಲುಗಳನ್ನು ಅರಿಯುವ ಪ್ರಯತ್ನವನ್ನು ವಿದ್ವಾಂಸರು ಸತತವಾಗಿ ಮಾಡುತ್ತಲೇ ಬಂದಿದ್ದಾರೆ. ವಿಜಯನಗರದ ಇತಿಹಾಸವನ್ನು ಸಂಪೂರ್ಣವಾಗಿ ಅರಿಯುವ ದಿಸೆಯಲ್ಲಿ ವಿಜಯನಗರದ ಅರಸರ ರಾಜಧಾನಿಯಾದ ಹಂಪೆಯನ್ನು ಭಾರತ ಮತ್ತು ವಿದೇಶದ ವಿದ್ವಾಂಸರುಗಳು ಅತೀ ಹೆಚ್ಚಿನ ಅಧ್ಯಯನಕ್ಕೆ ಗುರಿಪಡಿಸಿರುತ್ತಾರೆ. ಹಂಪೆಯನ್ನು ಶಾಸನಗಳಲ್ಲಿ ವಿಜಯನಗರಪಟ್ಟಣ ಎಂದು ಕರೆಯಲಾಗಿದೆ. ಈ ಪಟ್ಟಣಕ್ಕೆ ಭೇಟಿಯನ್ನಿತ್ತು ಅಂದಿನ ವೈಭವಗಳನ್ನು ದಾಖಲಿಸಿರುವ ವಿದೇಶಿ ಪ್ರವಾಸಿಗರ ಬರಹಗಳು ಮತ್ತು ವಿಜಯನಗರ ಕಾಲದ ಇತಿಹಾಸದಲ್ಲಿ ಆಸಕ್ತಿಯುಳ್ಳ ಪ್ರಾಕ್ತನ ಅನ್ವೇಷಣಕಾರರು ಮತ್ತು ಚರಿತ್ರಕಾರರು ವಿಜಯನಗರ ಪಟ್ಟಣವನ್ನು ಕುರಿತು ಒಂದು ದಶಕದಿಂದಲೂ ವಿಶೇಷ ಆಸಕ್ತಿಯನ್ನು ವಹಿಸಿ ಉತ್ಖನನ ಮತ್ತು ಸರ್ವೇಶಕ್ಷಣೆಯನ್ನು ನಡೆಸಿ ಅನೇಕ ಹೊಸ ವಿಚಾರಗಳನ್ನು ನಮ್ಮ ಮುಂದಿಟ್ಟಿರುವರು. ಇತ್ತೀಚೆಗೆ ಸಿ.ಎಸ್‌.ಪಾಟೀಲ್‌ರವರು ವಿಜಯನಗರ ಪಟ್ಟಣದ ನೀರಿನ ವ್ಯವಸ್ಥೆಯನ್ನು ಕುರಿತಂತೆ ಅಧ್ಯಯನವನ್ನು ನಡೆಸಿರುವರು.[1] ಬಿ.ಎಸ್‌. ನಾಗರಾಜ್‌ರವರು ವಿಜಯನಗರ ಸಾಮ್ರಾಜ್ಯದಲ್ಲಿ ನಗರ ಬೆಳವಣಿಗೆಯನ್ನು ಕುರಿತಂತೆ ಅಧ್ಯಯನವನ್ನು ನಡೆಸಿರುವರು. ಬಿ.ಎಸ್‌. ನಾಗರಾಜ್‌ರವರು ವಿಜಯನಗರ ಸಾಮ್ರಾಜ್ಯದಲ್ಲಿ ನಗರ ಬೆಳವಣಿಗೆಯನ್ನು ಕುರಿತಂತೆ ಅಧ್ಯಯನವನ್ನು ಕೈಗೊಂಡಿರುವರು.[2] ನಾಗರಾಜ್‌ರವರು ಮುಖ್ಯವಾಗಿ ಶಾಸನಗಳ ಆಧಾರಗಳಿಂದ ವಿಜಯನಗರ ಸಾಮ್ರಾಜ್ಯದಲ್ಲಿ, ಅಂದರೆ, ಇಡೀ ದಕ್ಷಿಣ ಭಾರತದಲ್ಲಿ ವ್ಯಾಪಿಸಿದ್ದ, ನಗರಗಳನ್ನು ಕುರಿತಂತೆ ತಮ್ಮ ವಿಚಾರಗಳನ್ನು ಮಂಡಿಸಿರುತ್ತಾರೆ. ಈ ಲೇಖನದ ವ್ಯಾಪ್ತಿಯನ್ನು ವಿಜಯನಗರ ಪಟ್ಟಣಕ್ಕೆ (ಹಂಪೆ) ಮಾತ್ರ ಸೀಮಿತಗೊಳಿಸಲಾಗಿದೆ.

‘ನಗರ’ ಎಂದರೆ ನಾಗರೀಕರು ವಾಸಿಸುವ ಸ್ಥಳ ಅಥವಾ ಪ್ರದೇಶಕ್ಕೆ ನಗರ ಎಂದು ಅರ್ಥೈಸಬಹುದು. ನಗರ ಎಂದರೆ ಮುಖ್ಯ ಪಟ್ಟಣ ಅಥವಾ ಪುರ ಎಂದು ಕರೆಯುವುದು ವಾಡಿಕೆಯಲ್ಲಿದೆ. ವಡ್ಡಾರಾಧನೆಯಲ್ಲಿ “ಗ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಮುಖಂಗಳಂ ವಿಹಾರಿಸುತ್ತಂ”[3] ಎಂದಿದ್ದರೆ, ಕ್ರಿ.ಶ.೧೦೩೨ರ ಒಂದು ಶಾಸನದಲ್ಲಿ “ಆಲಂದೆಯ ನಗರಂ ದೇವರಿಗೆ ಮಾಳೆದ ಪೇಳೆಂಗಯ್ಯವತ್ತೆಲೆಯಂ ಬಿಟ್ಟರಿಂತಿ ನಿತುಮಂ ನಗರ ಮಹಾಜನ ಪಂಚ ಮಠ ಸ್ಥಾನಮಾಚಂದ್ರಾರ್ಕ್ಯ ಸ್ಥಾಯಿವರಂ ನಡೆಯಿಸುವರು” ಎಂದು ನಗರವನ್ನು ಕುರಿತು ಉಲ್ಲೇಖಿಸಿದೆ.[4] ಹಲವಾರು ಶಾಸನಗಳಲ್ಲಿ ಇಂತಹ ಉಲ್ಲೇಖಗಳು ಇಲ್ಲದಿಲ್ಲ. ನಗರವನ್ನು ಅದರ ವ್ಯಾಪಕತೆ ಮತ್ತು ಅದರಲ್ಲಿ ವಾಸಿಸುವ ಜನಸಂಖ್ಯೆಯನ್ನು ಆಧರಿಸಿ ಆ ವಸತಿ ಪ್ರದೇಶವನ್ನು ನಗರ ಅಥವಾ ಪಟ್ಟಣ ಎಂದು ವರ್ಗೀಕರಿಸಬಹುದು. ಮತ್ತೊಂದು ವರ್ಗೀಕರಣದಂತೆ ನಗರದಲ್ಲಿ ಸುಸಂಸ್ಕೃತರು, ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಹೊಂದಿರುವರು, ಆಡಳಿತಗಾರರು ಮತ್ತು ಸಮಾಜದ ಶ್ರೇಷ್ಠಿಗಳು ವಾಸಿಸುವ ಜನವಸತಿ ಪ್ರದೇಶಕ್ಕೆ ನಗರ ಎಂದು ವರ್ಗೀಕರಿಸಿರುತ್ತಾರೆ.

ಒಂದು ಅರಸು ಮನೆತನದ ಆಳ್ವಿಕೆಗೆ ಒಳಪಟ್ಟ ಪ್ರದೇಶದ ಆಡಳಿತವನ್ನು ಸುಸೂತ್ರವಾಗಿ ನಡೆಸಲು ಆ ಪ್ರದೇಶವನ್ನು ಶ್ರೇಣೀಕೃತ ವಿಭಾಗಗಳನ್ನಾಗಿ ವಿಂಗಡಿಸಿರುವುದು ಚರಿತ್ರೆಯಿಂದ ತಿಳಿದ ವಿಷಯವೇ ಸರಿ, ಇಂತಹ ಶ್ರೇಣೀಕೃತ ವಿಭಾಗಗಳು ಯಾವುವೆಂದರೆ ರಾಜ್ಯ, ರಾಷ್ಟ್ರ, ನಾಡು, ಮಹಾನಾಡು, ಸೀಮೆ, ವೇಂಟೆ, ಸ್ಥಳ, ವಳಿತ, ಪಟ್ಟಣ, ನಗರ, ಪುರ, ಗ್ರಾಮ, ಹಳ್ಳಿ ಮುಂತಾದವುಗಳೇ ಆಗಿವೆ. ಸಾಮಾನ್ಯವಾಗಿ ರಾಜಧಾನಿಯನ್ನು ನಗರ ಅಥವಾ ಪುರ ಎಂದು ಗುರುತಿಸುತ್ತಾರೆ. ಇದಲ್ಲದೇ ರಾಜ್ಯದಲ್ಲಿನ ಮುಖ್ಯ ಪ್ರದೇಶದಲ್ಲಿ, ವಾಣಿಜ್ಯ ವ್ಯವಹಾರ, ನಾಗರೀಕ ಸೌಲಭ್ಯಗಳನ್ನು ಹೊಂದಿರುವಂತಹ ಪ್ರದೇಶಕ್ಕೆ ಸಹ ನಗರ ಎಂದಿರುವುದನ್ನು ಕಾಣಬಹುದು. ಅದರಂತೆಯೇ ಧಾರ್ಮಿಕವಾಗಿ ಪ್ರಸಿದ್ಧಿಯನ್ನು ಪಡೆದ ಪ್ರದೇಶವು ಸಹ ನಗರವಾಗಿರುವುದನ್ನು ನೋಡಬಹುದಾಗಿದೆ. ಇಂತಹ ನಗರಗಳು ವಿಜಯನಗರ ಕಾಲದಲ್ಲಿ ಪಟ್ಟಣ ಸ್ವಾಮಿಗಳು ಎಂಬ ಅಧಿಕಾರಿಗಳ ಉಸ್ತುವಾರಿಯಲ್ಲಿ ಇರುತ್ತಿದ್ದವೆಂಬುದು ಶಾಸನಗಳಿಂದ ತಿಳಿದುಬರುತ್ತದೆ.

ಭಾರತದಲ್ಲಿ ನಗರೀಕರಣದ ಪ್ರಕ್ರಿಯೆಯನ್ನು ನವಶಿಲಾಯುಗ ಕಾಲದಿಂದಲೂ ಕಾಣಬಹುದು. ಈ ಪ್ರಕ್ರಿಯೆಯು ಸ್ಪಷ್ಟವಾಗಿ ಗುರುತಿಸಲ್ಪಡುವುದು ಸಿಂಧೂ ಕಣಿವೆ ಸಂಸ್ಕೃತಿಯಲ್ಲಿಯೇ. ಈ ಸಂಸ್ಕೃತಿಗೆ ಸೇರಿದ ನೆಲೆಗಳ ಉತ್ಖನನಗಳಿಂದ ನಮಗೆ ಅನೇಕ ನಗರಗಳು ಉಪಲಬ್ಧವಾಗಿದ್ದು, ಇವುಗಳು ತಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸಿಕೊಳ್ಳುವಂತಹ ಘಟಕಗಳಾಗಿದ್ದವೆಂಬುದು ತಿಳಿದುಬರುತ್ತದೆ.[5] ಸಿಂಧೂ ಕಣಿವೆ ಸಂಸ್ಕೃತಿಯ ನೆಲೆಗಳ ನಗರ ರಚನಾ ವಿಧಾನ ಮತ್ತು ಶೈಲಿಯು ಮುಂದೆ ಆದಿ ಇತಿಹಾಸ ಮತ್ತು ಇತಿಹಾಸ ಕಾಲದಲ್ಲಿಯೂ ಮುಂದುವರೆದು ಮಧ್ಯಕಾಲೀನ ಯುಗದಲ್ಲಿ ಪ್ರಬುದ್ಧವಾಗಿ ಬೆಳೆಯಿತು. ಇಲ್ಲಿಯವರೆಗೆ, ಭಾರತದ ವಿವಿಧೆಡೆಗಳಲ್ಲಿ ನಡೆದಂತಹ ಉತ್ಖನನದಲ್ಲಿ ಅನೇಕ ನಗರಗಳನ್ನು ಹೊರ ತೆಗೆಯಲಾಗಿದೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಉಲ್ಲೇಖಿಸಿದ ನಗರ ರಚನಾ ವಿನ್ಯಾಸದಂತಹ ಕೆಲವು ನಗರಗಳನ್ನು ಉತ್ಖನನದಲ್ಲಿ ಗುರುತಿಸಲಾಗಿದೆ. ಇನಾಂಗಾವ್‌, ಶಿಶುಪಾಲ್‌ಗಡ್‌, ಕೌಸಾಂಬಿ, ಪಾಟಿಲೀಪುತ್ರ, ಅಹಿಚ್ಛತ್ರ, ಅಯೋಧ್ಯ, ಶ್ರಿಂಗವೇಪುರ್, ನಾಗಾರ್ಜುನಕೊಂಡ, ಇತ್ಯಾದಿಯಾಗಿ ಆದಿ ಇತಿಹಾಸ ಕಾಲದ ನೆಲೆಗಳ ಉತ್ಖನನಗಳಿಂದ ನಗರ ರಚನಾ ವಿಧಾನ, ರಕ್ಷಣಾ ವಿನ್ಯಾಸ ಮುಂತಾದ ವಿಷಯಗಳು ಬೆಳಕಿಗೆ ಬಂದಿವೆ.[6] ಆದುದರಿಂದ ಭಾರತದಲ್ಲಿ ನಗರೀಕರಣದ ಪ್ರಕ್ರಿಯೆಯು ಸುಮಾರು ನಾಲ್ಕು ಸಾವಿರ ವರ್ಷಗಳಿಂದ ನಿರಂತರವಾಗಿ ನಡೆದು ಬಂದಿರುವುದನ್ನು ಕಾಣಬಹುದು.

ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾದ ವಿಜಯನಗರ ಪಟ್ಟಣವು ಪಂಪಾಕ್ಷೇತ್ರದಲ್ಲಿ ಇದ್ದ ಕಾರಣ ಮುಂದೆ ಇದುವೇ ಹಂಪೆಯಾಗಿ ಮಾರ್ಪಾಡಾಯಿತು. ಇದಕ್ಕೂ ಮುಂಚಿತವಾಗಿ ಪ್ರಾರಂಭಿಕ ವಿಜಯನಗರ ಸಾಮ್ರಾಜ್ಯದ ಕೆಲವು ಅರಸರು ಇಂದಿನ ರಾಯಚೂರು ಜಿಲ್ಲೆಯಲ್ಲಿರುವ ಆನೆಗೊಂದಿಯನ್ನು ರಾಜಧಾನಿಯನ್ನಾಗಿರಿಸಿಕೊಂಡಿದ್ದರು. ನಂತರದಲ್ಲಿ ಆನೆಗೊಂದಿಯಲ್ಲಿದ್ದ ರಾಜಧಾನಿಯನ್ನು ಇಂದಿನ ಹಂಪೆಗೆ ವರ್ಗಾಯಿಸಲ್ಪಟ್ಟ ತರುವಾಯವೇ ಹಂಪೆಯು ನಗರವಾಗಿ ಬೆಳೆದು ಪ್ರಸಿದ್ಧಿಯನ್ನು ಹೊಂದಿತು. ವಿಜಯನಗರ ಪಟ್ಟಣಕ್ಕೆ ಒಟ್ಟು ಏಳು ಸುತ್ತುಗಳ ಕೋಟೆ ಇದ್ದವೆಂದು ನಮಗೆ ವಿದೇಶಿ ಪ್ರವಾಸಿಗರ ಬರಹಗಳಿಂದ ತಿಳಿದುಬರುತ್ತದೆ. ಇಂದು ವಿಜಯನಗರ ಪಟ್ಟಣವನ್ನು ಅದರ ಅವಶೇಷಗಳಿಂದ ಗುರುತಿಸಿ ಸುಮಾರು ಇಪ್ಪತ್ತೈದು ಚದುರ ಕಿ.ಮೀ.ಗಳಷ್ಟು ಪ್ರದೇಶಗಳಲ್ಲಿ ವ್ಯಾಪಿಸಿತ್ತೆಂದು ಅಭಿಪ್ರಾಯಪಡಲಾಗಿದೆ. ಕೋಟೆಯ ಏಳು ಸುತ್ತುಗಳನ್ನು ಇಲ್ಲಿಯವರೆಗೆ ಸ್ಪಷ್ಟವಾಗಿ ಗುರುತಿಸಲಾಗದಿದ್ದರೂ ಐದು ಸುತ್ತುಗಳನ್ನು ಖಚಿತವಾಗಿ ಗುರುತಿಸಲಾಗಿದೆ.

ವಿಜಯನಗರ ಪಟ್ಟಣವು ಏಳು ಸುತ್ತುಗಳನ್ನು ಒಳಗೊಂಡ ಕೋಟೆಯಾಗಿದ್ದರೂ, ಹಂಪೆಯನ್ನು ಮಾತ್ರವೇ ಪಟ್ಟಣವೆಂದು ಗುರುತಿಸಲಾಗಿದೆ. ಇಲ್ಲಿಯೇ ಅರಸರು ಮತ್ತು ಸಮಾಜದ ಉನ್ನತ ವ್ಯಕ್ತಿಗಳು ವಾಸಿಸಿದ ಪ್ರದೇಶವಾಗಿದ್ದರಿಂದ ಇದನ್ನು ರಾಜಧಾನಿಯೆಂದು ಗುರುತಿಸಲಾಗಿದೆ. ಈ ಏಳು ಸುತ್ತಿನ ಕೋಟೆಯೊಳಗೆ ವಿಜಯನಗರ ಪಟ್ಟಣಕ್ಕೆ ಹೊಂದಿಕೊಂಡಿದ್ದ ಚಿಕ್ಕ ಜನವಸತಿಯ ಪ್ರದೇಶಗಳನ್ನು ಉಪನಗರಗಳೆಂದು ಗುರುತಿಸಬಹುದು. ಈ ಉಪನಗರಗಳು, ಗಾತ್ರ, ವ್ಯಾಪ್ತಿ ಮತ್ತು ರಚನಾ ವಿನ್ಯಾಸದಲ್ಲಿ ನಗರಗಳಿಗಿಂತ ಚಿಕ್ಕವಾಗಿದ್ದು ಇವುಗಳನ್ನು ವಿಜಯನಗರ ಪಟ್ಟಣದ ಉಪನಗರಗಳೆಂದು (Suburb) ಕರೆಯಬಹುದು. ವಿಜಯನಗರ ಪಟ್ಟಣದ ಉಪನಗರಗಳು ಯಾವುವೆಂದರೆ;

೧. ಕಾಮಲಾಪುರ
೨. ಕೃಷ್ಣಾಪುರ
೩. ಅಚ್ಯುತಾಪುರ
೪. ವಿಠ್ಠಲಾಪುರ
೫. ಮಲಪನಗುಡಿ
೬. ಅನಂತಶಯನಗುಡಿ (ಶಾಲೆ ತಿರುಮಲರಾಯ ಪಟ್ಟಣ)
೭. ತಿರುಮಲಾದೇವಿ ಪಟ್ಟಣ
೮. ವರದರಾಜಮ್ಮನ ಪಟ್ಟಣ (ಅನಂತಾಪುರ)
೯. ವೆಂಕಟಾಪುರ
೧೦. ಆನೆಗೊಂದಿ
೧೧. ನಿಂಬಾಪುರ
೧೨. ನಾಗಲಾಪುರ ಇತ್ಯಾದಿ

ಈ ಉಪನಗರಗಳನ್ನು, ಭೌಗೋಳಿಕ ವ್ಯಾಪ್ತಿಯನ್ನು ಮಾನದಂಡವಾಗಿಟ್ಟುಕೊಂಡು ಪರಿಶೀಲಿಸಿದಾಗ ಇವು ಮೂರು ಖಚಿತವಾದ ವಲಯಗಳಲ್ಲಿರುವುದನ್ನು ಗಮನಿಸಬಹುದು. ಇವು ಯಾವುವೆಂದರೆ

೧. ಕೇಂದ್ರ ವಲಯ (Nucleus Region)
೨. ವ್ಯವಸಾಯ ಅಥವಾ ಕೃಷಿ ವಲಯ (Agro Region) ಮತ್ತು
೩. ಹೊಲ ವಲಯ (Distal Region)

ರಾಜಧಾನಿ, ಅರಮನೆ, ರಾಜರ ವಾಸಸ್ಥಾನ, ಅಧಿಕಾರಿಗಳು, ಮಂತ್ರಿಗಳು, ಪ್ರಮುಖರು ವಾಸಿಸುವ ಸ್ಥಳವನ್ನು ಕೇಂದ್ರ ವಲಯವೆಂದು ಗುರುತಿಸಿದ್ದೇನೆ. ಈ ವಲಯದಲ್ಲಿಯೇ ಕೆಲವು ಪ್ರಮುಖ ದೇವಾಲಯಗಳೂ ಸಹ ಇವೆ. ಈ ವಲಯದಲ್ಲಿಯೇ ವಾಣಿಜ್ಯ ಚಟುವಟಿಕೆಗಳು ಬಿರುಸಿನಿಂದ ಸಾಗಿದ್ದವು ಎಂಬುದಕ್ಕೆ ನಮಗೆ ಆಧಾರಗಳು ದೊರಕಿವೆ. ಕೇಂದ್ರ ವಲಯಕ್ಕೆ ಒಳಪಟ್ಟಂತಹ ಉಪನಗರಗಳೆಂದರೆ

೧. ಅಚ್ಯುತಾಪುರ
೨. ಕೃಷ್ಣಾಪುರ
೩. ವಿಠ್ಠಲಾಪುರ
೪. ವಿಜಯನಗರ ಪಟ್ಟಣ (ಹಂಪೆ)

ಮೇಲೆ ಉಲ್ಲೇಖಿಸಿದ ಉಪನಗರಗಳು ಹಂಪೆಯ ಅಥವಾ ವಿಜಯನಗರ ಪಟ್ಟಣದ ಪರಿಧಿಯಲ್ಲಿದ್ದ ಕಾರಣ, ಹಂಪೆಯನ್ನು ಹೊರತುಪಡಿಸಿ, ಇವುಗಳನ್ನು ನಾವು ರಾಜಧಾನಿಯ ಪ್ರತಿಷ್ಠಿತ ಉಪನಗರಗಳೆಂದರೆ ತಪ್ಪಾಗಲಾರದು. ಅಚ್ಯುತಾಪುರ, ವಿಠ್ಠಲಾಪುರ ಮತ್ತು ಕೃಷ್ಣಾಪುರಗಳು ಅರಸರು ನಿರ್ಮಿಸಿದಂತಹ ಪುರ ಅಥವಾ ಅಗ್ರಹಾರಗಳಾಗಿದ್ದವು. ಈ ಎಲ್ಲಾ ಉಪನಗರಗಳಲ್ಲಿಯೂ ಒಂದೊಂದು ದೇವಾಲಯವನ್ನು ಕಟ್ಟಿಸಿ ಅದಕ್ಕೆ ಪೂರಕವಾಗಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಬಜಾರುಗಳನ್ನು ಸಹ ಪ್ರಾರಂಭಿಸಿದ ಉಲ್ಲೇಖಗಳು ನಮಗೆ ಶಾಸನಗಳಿಂದ ತಿಳಿದುಬರುತ್ತವೆ. ಇವುಗಳಲ್ಲದೆ ಕೆಲವು ಉಪನಗರಗಳಾದ ವರದರಾಜಮ್ಮನ ಪಟ್ಟಣ, ಅನಂತಶಯನಗುಡಿ (ಶಾಲೆ ತಿರುಮಲರಾಯ ಪಟ್ಟಣ) ಮತ್ತು ನಾಗಲಾಪುರಗಳನ್ನು ಅರಸರೇ ನಿರ್ಮಿಸಿದ್ದರೂ, ಈ ಉಪನಗರಗಳು ರಾಜಧಾನಿ ಪಟ್ಟಣದ ಹೊರವಲಯಗಳಲ್ಲಿರುವುದು ಕುತೂಹಲಕರ ಸಂಗತಿ. ಇದಕ್ಕೆ ಕಾರಣವೇನೆಂದರೆ ರಾಜಧಾನಿ ಪ್ರದೇಶದಲ್ಲಿ ವಾಸಿಸಲು ಅನುಕೂಲವಾದ ಭೌಗೋಳಿಕ ಪ್ರದೇಶದ ಅಭಾವವಿದ್ದುದೇ ಕಾರಣ. ಈಗಾಗಲೇ ಹಂಪೆಯ ಪ್ರದೇಶದಲ್ಲಿ ಕೆಲವು ಉಪನಗರಗಳು ಅಸ್ತಿತ್ವದಲ್ಲಿ ಇದ್ದುದು ಎರಡನೆಯ ಕಾರಣ. ಹಂಪೆಯ ಪ್ರದೇಶವು ಬಂಡೆಗಲ್ಲುಗಳಿಂದ ಕೂಡಿದ್ದು ಸಮತಟ್ಟಾದ ಪ್ರದೇಶದ ಕೊರತೆಯಿದೆ. ಆದ್ದರಿಂದ ನಗರ ನಿರ್ಮಾಣಕ್ಕೆ ಅತ್ಯಲ್ಪ ಭೌಗೋಳಿಕ ಪ್ರದೇಶವು ಉಪಲಬ್ಧವಿರುವುದು ಹಂಪೆಯ ಪರಿಸರವನ್ನು ಪರಿವೀಕ್ಷಿಸಿದಾಗ ಕಂಡುಬರುವ ಸ್ಪಷ್ಟ ಅಂಶವಾಗಿದೆ.

ಎರಡನೆಯ ವಲಯದಲ್ಲಿ ಕಾಮಲಾಪುರ, ಮಲಪನಗುಡಿ, ವರದರಾಜಮ್ಮನ ಪಟ್ಟಣ, ಶಾಲೆ ತಿರುಮಲರಾಯಪಟ್ಟಣ, ವೆಂಕಟಾಪುರ, ನಾಗಲಾಪುರ ಮತ್ತು ನಿಂಬಾಪುರಗಳು ಇವೆ. ಈ ವಲಯವನ್ನು ಕೃಷಿ ಉತ್ಪನ್ನ ವಲಯವೆಂದು ಗುರುತಿಸಲಾಗಿದ್ದು ಇಲ್ಲಿಯ ಭೌಗೋಳಿಕ ಪರಿಸರವನ್ನು ಗಣನೆಗೆ ತೆಗೆದುಕೊಂಡು ಪರಿಶೀಲಿಸಿದಾಗ ಇದು ವ್ಯವಸಾಯ ಉತ್ಪನ್ನಗಳನ್ನು ಉತ್ಪಾದಿಸುವ ಕ್ಷೇತ್ರವಾಗಿರುವುದು ಸ್ಪಷ್ಟವಾಗಿರುತ್ತದೆ. ಇಲ್ಲಿ ಉತ್ಪನ್ನವಾಗುವ ಕೃಷಿ ಪದಾರ್ಥಗಳು ಬಹುತೇಕವಾಗಿ ವಿಜಯನಗರ ಪಟ್ಟಣದ ಅಗತ್ಯಗಳನ್ನು ಪೂರೈಸುತ್ತಿದ್ದವು ಎಂದು ಹೇಳಬಹುದು. ಹೊರ ವಲಯಗಳಿಂದಲೂ ಹಂಪೆಯ ಕೇಂದ್ರ ಸ್ಥಳಕ್ಕೆ ಅಗತ್ಯ ವಸ್ತುಗಳು ಪೂರೈಸಲ್ಪಟ್ಟರೂ, ನಿರಂತರವಾಗಿ ದೈನಂದಿನ ಅಗತ್ಯ ವಸ್ತುಗಳನ್ನು ಈ ಉಪನಗರಗಳೇ ಪೂರೈಸುತ್ತಿದ್ದವು ಎಂಬುದರಲ್ಲಿ ಯಾವ ಸಂಶಯವಿಲ್ಲ.[7] ಈ ಉಪನಗರಗಳಲ್ಲಿ ಭತ್ತ, ಕಬ್ಬು, ಜೋಳ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದರು ಎಂಬದು ಶಾಸನಗಳಿಂದ ತಿಳಿಯಬಹುದಾಗಿದೆ.

ಇದರೊಂದಿಗೆ ಉಲ್ಲೇಖಿಸಲ್ಪಟ್ಟ, ಉಪನಗರಗಳಲ್ಲಿ ತುಂಗಭದ್ರಾ ನದಿಯ ಕೆಲವು ಮುಖ್ಯ ಕಾಲವೆಗಳು ಹಾದು ಹೋಗುತ್ತವೆ.[8] ಇವು ವ್ಯವಸಾಯಕ್ಕೆ ಮತ್ತು ಕುಡಿಯುವುದಕ್ಕೆ ನೀರನ್ನು ಸಹ ಪೂರೈಸುತ್ತಿದ್ದವು. ಈ ಉಪನಗರಗಳಿಗಿರುವ ಪ್ರದೇಶಗಳು ಹೆಚ್ಚಾಗಿ ಸಮತಟ್ಟಾಗಿದ್ದು ಅಧಿಕಾಂಶವಾಗಿ ಪ್ರತಿ ಉಪನಗರವೂ ತನ್ನದೇ ಆದ ಕೆರೆಯನ್ನು ಹೊಂದಿದ್ದವು. ಇಂತಹ ಒಂದು ಉಪನಗರವಾದ ಕಾಮಲಾಪುರದ ಕೆರೆಯಿಂದ ವಿಜಯನಗರ ಪಟ್ಟಣಕ್ಕೆ ನೀರನ್ನು ಪೂರೈಸಲಾಗುತ್ತಿತ್ತು ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಮೂರನೆಯ ವಲಯವನ್ನು ಹೊರವಲಯವೆಂದು ಗುರುತಿಸಲಾಗಿದ್ದು, ಇದರ ವ್ಯಾಪ್ತಿಯ ಅತಿ ಹೆಚ್ಚಾಗಿದ್ದು ಕೋಟೆಗೋಡೆಯ ಹೊರಗಿರುವ ಎಲ್ಲಾ ಪ್ರದೇಶಗಳು ಮತ್ತು ರಾಜ್ಯದೊಳಗಿನ ಊರು, ನಗರ ಮುಂತಾದ ಪ್ರದೇಶಗಳು ಅಡಕಗೊಳ್ಳುತ್ತವೆ. ಈ ವಲಯವು ವಿಜಯನಗರ ಪಟ್ಟಣಕ್ಕೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ಕಾಲಕಾಲಕ್ಕೆ ಪೂರೈಸುತ್ತಿತ್ತು. ತಿಮ್ಮಲಾಪುರ, ದರೋಜಿ, ಮುಂತಾದ ಪ್ರದೇಶಗಳು ಈ ವಲಯದ ವ್ಯಾಪ್ತಿಗೆ ಬರುತ್ತವೆ.

ವಿಜಯನಗರ ಪಟ್ಟಣ ಮತ್ತು ಅದರ ಉಪನಗರಗಳನ್ನು ಭೌಗೋಳಿಕವಾಗಿ ಪರಿಶೀಲಿಸಿದಾಗ ನಮಗೆ ಕೆಲವು ಕುತೂಹಲಕಾರಿ ಮತ್ತು ಮಹತ್ವದ ಸಂಗತಿಗಳು ಸ್ಪಷ್ಟವಾಗುತ್ತವೆ. ಎರಡನೆಯ ವಲಯದಲ್ಲಿ ಅಂದರೆ ಕೃಷಿ ವಲಯದಲ್ಲಿ ಅಡಕಗೊಂಡಂತಹ ಉಪನಗರಗಳು ಸುಮಾರು ೪ ರಿಂದ ೬ ಕಿಲೋಮೀಟರ್ ಅಂತರಗಳಲ್ಲಿ ಇದ್ದು, ಇವು ವ್ಯವಸಾಯ ಉತ್ಪನ್ನಗಳನ್ನು ಉತ್ಪಾದಿಸುವ ಕ್ಷೇತ್ರವಾಗಿದ್ದವು. ಅಧಿಕಾಂಶವಾಗಿ ಈ ಎಲ್ಲಾ ಉಪನಗರಗಳಲ್ಲಿಯೂ ಒಂದೊಂದು ಕೆರೆಯಿರುವುದನ್ನು ಕಾಣಬಹುದಾಗಿದೆ.[9] ಅದರಂತೆಯೇ ಈ ಉಪನಗರಗಳೆಲ್ಲವೂ ಸರಾಸರಿಯಾಗಿ ಸಮುದ್ರ ಮಟ್ಟದಿಂದ ೫೦೦ ಮೀಟರ್ ನೈಸರ್ಗಿಕ ಕ್ಷಿತಿಜ ಭೂಮಟ್ಟದ (Contour) ಎತ್ತರದಲ್ಲಿಯೇ ಇವೆ. ಉಪನಗರಗಳ ಕೆರೆಗಳು ಸಹಾ ಇದೇ ೫೦೦ ಮೀಟರ್ ಎತ್ತರದಲ್ಲಿರುವುದು ವಿಶೇಷ ಸಂಗತಿ. ಇನ್ನು ವಿಜಯನಗರ ಪಟ್ಟಣ ಮತ್ತು ಅದರ ಉಪನಗರಗಳ ಜನಸಂಖ್ಯೆಯನ್ನು ಪರಿಶೀಲಿಸಿದಾಗ ನಮಗೆ ಖಚಿತವಾದ ಅಂಕಿಅಂಶಗಳು ದೊರಕುವುದಿಲ್ಲ.[10] ಅಂದಾಜಿನಂತೆ ಅಂದು ವಿಜಯನಗರ ಪಟ್ಟಣದ ಜನಸಂಖ್ಯೆಯು ಸುಮಾರು ಒಂದು ಲಕ್ಷದಷ್ಟು ಇತ್ತೆಂದು ಗಣಿಸಲಾಗಿದೆ. ವಿದೇಶಿ ಪ್ರವಾಸಿಗರ ಬರಹಗಳಿಂದಲೂ ನಮಗೆ ಕೆಲವು ಸುಳಿವುಗಳು ದೊರಕುತ್ತವೆ. ಆದರೆ ಅವುಗಳನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವುದು ಕಷ್ಟದ ಸಂಗತಿ. ವಿಜಯನಗರ ಪಟ್ಟಣದಲ್ಲಿ ಸಂಪೂರ್ಣವಾಗಿ ಉತ್ಖನನವನ್ನು ನಡೆಸದ ಕಾರಣ ನಾವು ಪ್ರಾಚೀನ ಜನಗಣತಿಯನ್ನು ಗಣಿಸಲಿಕ್ಕೆ ಕಷ್ಟವಾಗುತ್ತದೆ. ಸಾಂಖಿಕ ವಿಧಾನದಿಂದ ಮತ್ತು ಮಡಕೆ ಚೂರುಗಳ ಆಧಾರದಿಂದ ಸ್ವಲ್ಪಮಟ್ಟಿಗೆ ಮಾತ್ರ ಈ ದಿಸೆಯಲ್ಲಿ ಪ್ರಯತ್ನಪಡಬಹುದಾಗಿದೆ. ಹೀಗಿದ್ದರೂ ವಿಜಯನಗರ ಪಟ್ಟಣದ ಖಚಿತವಾದ ಜನಗಣತಿಯನ್ನು ಮಾಡುವುದು ಕಠಿಣವಾದ ಕೆಲಸವೇ ಸರಿ.

ಈ ಮೇಲೆ ಚರ್ಚಿಸಿದ ವಿಷಯಗಳನ್ನು ನಾವು ಪುನರಾವಲೋಕಿಸಿದಾಗ ಕಂಡುಬರುವ ಅಂಶಗಳು ಏನೆಂದರೆ ರಾಜಧಾನಿ ಪಟ್ಟಣಕ್ಕೆ ಹೊಂದಿಕೊಂಡಂತಹ ಉಪನಗರಗಳು ರಾಜಧಾನಿ ಬೇಡಿಕೆಯನ್ನು ಪೂರೈಸುತ್ತಿದ್ದವು. ಇದರೊಂದಿಗೆ ಹೊರವಲಯದಲ್ಲಿ ಇದ್ದಂತಹ ನಗರಗಳು ಮತ್ತು ಉಪನಗರಗಳು ಸಹ ರಾಜಧಾನಿಯೊಂದಿಗೆ ಸಂಬಂಧವನ್ನು ಇಟ್ಟುಕೊಂಡು ರಾಜಧಾನಿಯ ಉಪನಗರಗಳಿಗೆ ಪೂರಕವಾಗಿ ಕೆಲಸವನ್ನು ಮಾಡುತ್ತಿದ್ದವು. ವಿಜಯನಗರ ಪಟ್ಟಣವು ಮುಖ್ಯವಾಗಿ ದೊಡ್ಡ ವಾಣಿಜ್ಯ ಕೇಂದ್ರವಾಗಿಯೂ ಸಹ ಇತ್ತು. ಪ್ರಾಚೀನ ಮತ್ತು ಮಧ್ಯಕಾಲೀನ ಯುಗದಲ್ಲಿ ನಗರ ಮತ್ತು ಜನವಸತಿಯ ನೆಲೆಗಳನ್ನು ಅರಸರು ಮತ್ತು ವಾಸ್ತುಶಾಸ್ತ್ರಜ್ಞರು ನಿಸರ್ಗವನ್ನು ಪರಿಶೀಲಿಸಿ ಪ್ರದೇಶಗಳನ್ನು ಆಯ್ಕೆ ಮಾಡಿರುವುದು ಅವರ ಭೌಗೋಳಿಕ ಪ್ರಜ್ಞೆಯನ್ನು ನಮಗೆ ಪರಿಚಯಿಸುತ್ತದೆ.

ಆಕರಗಳು
ವಿಜಯನಗರ ಅಧ್ಯಯನ, ಸಂ.೨, ೧೯೯೭, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು, ಪು.೯೯-೧೦೪

 

[1] ಪಾಟೀಲ ಚನ್ನಬಸಪ್ಪ ಎಸ್‌., ‘ಶಾಸನಗಳಲ್ಲಿ ಕಂಡಂತೆ ವಿಜಯನಗರ ಪಟ್ಟಣದ ನೀರಿನ ವ್ಯವಸ್ಥೆ’, ವಿಜಯನಗರ ಅಧ್ಯಯನ, ಸಂಪುಟ ೧, (ಸಂ), ಡಿ.ವಿ.ದೇವರಾಜ್‌ಮತ್ತು ಚನ್ನಬಸಪ್ಪ ಎಸ್‌.ಪಾಟೀಲ, ಪು.೬೨-೭೫

[2] ನಾಗರಾಜ್ ಬಿ.ಎಸ್‌., ‘ವಿಜಯನಗರ ಸಾಮ್ರಾಜ್ಯದಲ್ಲಿ ನಗರ ಬೆಳವಣಿಗೆ’ ವಿಜಯನಗರ ಅಧ್ಯಯನ, ಸಂ.೨, ಪು.೯೪-೯೮

[3] ವಡ್ಡಾರಾಧನೆ ೭-೯

[4] ಎಫಿಗ್ರಾಫಿಯಾ ಇಂಡಿಯಾ, ಸಂ. XXVIII ಪು.೩೫-೩೮

[5] ಗೋರ್ಡಾನ್‌ಚೈಲ್ಡ್‌ರವರು ನಗರವನ್ನು ಕುರಿತು ಈ ರೀತಿಯಾಗಿ ಅರ್ಥೈಸುವರು. 1.Size, 2. Inclusion of additional Class – Craftsmen, Artisans 3. Centralization of Surplus food 4. Monumental Public building 5. Formulation of ruling Class, 6. System of recording administration (Script) 7. Exact and predictive Science regulating agricultural operation 8. Style of Art 9. Long distance trade 10. Social Organisation based on Kinship.

Shaffer ರವರು “Reurbanisation: The Eastern Punjab and beyond” ಎಂಬ ಲೇಖನವನ್ನು Urban Form and Meaning in South Asia: The Shaping of cities and Prehistoric to Pre Colonial Times ಎಂಬ ಪುಸ್ತಕದಲ್ಲಿ ಪ್ರಕಟಿಸಿರುತ್ತಾರೆ. ಅದರಲ್ಲಿ ನಗರವನ್ನು ಈ ರೀತಿಯಾಗಿ ಅರ್ಥೈಸುತ್ತಾರೆ.

An Economy incorporating agriculture and pastoralists 2. Large urban settlement 3. Use of stone, mud and fired bricks 4. Public architecture (Wells and tanks) 5. Development of Public and Private hydraulic features 6. Highly developed craft industry 7. Homogenous material Culture distributed over a large geographic region 8. Long distance trade 9. A unified system of weight and measure and 10. Written script. ಅಲ್‌ಚಿನ್‌ಎಫ್‌.ಆರ್., ಆರ್ಕಿಯಾಲಜಿ ಆಫ್ ಅರ್ಲಿ ಹಿಸ್ಟಾರಿಕ್‌ಸೌತ್‌ಏಷಿಯಾ ದಿ ಎಮರ್ಜೆನ್ಸ್‌ಆಫ್ ಸಿಟೀಸ್‌ಅಂಡ್‌ಸ್ಟೇಟ್ಸ್‌, ಪು. ೫೪-೭೨

[6] ಅಲ್‌ಚಿನ್‌ರವರು ಈ ಪುಸ್ತಕದಲ್ಲಿ ನಗರೀಕರಣವನ್ನು ಕುರಿತು ವಿಶ್ಲೇಷಣಾತ್ಮಕವಾಗಿ ಚರ್ಚಿಸಿದ್ದಾರೆ.

[7] ಅಲ್‌ಚಿನ್‌, ಅದೇ, ಪು.೬೫-೬೭ ಒಂದು ಸಾಂಖಿಕ ಸವೇಕ್ಷಣೆಯಂತೆ ಒಬ್ಬ ಮನುಷ್ಯನಿಗೆ ಒಂದು ವರ್ಷಕ್ಕೆ ೭,೦೬,೬೪೦ ಕ್ಯಾಲೋರಿಗಳನ್ನು ನೀಡಬಲ್ಲ ಆಹಾರ ಪದಾರ್ಥಗಳು ಬೇಕಾಗುತ್ತವೆ ಎಂದು ಗಣಿಸಲಾಗಿದೆ. ಅಂದರೆ ೭೨ರಷ್ಟು ಆಹಾರ ಪದಾರ್ಥಗಳು ಬೇಕಾಗುತ್ತವೆ. ಒಬ್ಬ ಮನುಷ್ಯನಿಗೆ ವರ್ಷಕ್ಕೆ ೧೪೪.೬ ಕೆ.ಜಿ.ಗಳಷ್ಟು ಆಹಾರ ಪದಾರ್ಥಗಳು ೭,೦೬,೬೪೦ ಕ್ಯಾಲೋರಿಗಳು ಒದಗಿಸುತ್ತವೆ. ಒಣ ಹವಾಮಾನ ವ್ಯವಸಾಯ, ಅಂದರೆ ಹೊಲಗಳಲ್ಲಿ ೧೮೦ ರಿಂದ ೨೩೦ ಕೆ.ಜಿ.ಗಳಷ್ಟು ಆಹಾರ ಧಾನ್ಯಗಳನ್ನು ಬೆಳೆಯಬಲ್ಲದು ಎಂದು ಗಣಿಸಲಾಗಿದೆ.

[8] ತುರ್ತುಕಾಲುವೆ, ಬಸವಣ್ಣ ಕಾಲುವೆ ಮತ್ತು ರಾಯಕಾಲುವೆಗಳು ಹಂಪೆಯ ಸಮೀಪವೇ ಹಾದು ಹೋಗುತ್ತವೆ.

[9] ವಾಸುದೇವನ್ ಸಿ.ಎಸ್‌., ಹಂಪಿ ಪರಿಸರದ ಕೆರೆಗಳು

[10] ಅಲ್‌ಚಿನ್‌, ಅದೇ. ಪು. ೬೭, ಹಸನ್‌ಎಫ್‌.ಎ., ಡೆಮೊಗ್ರಾಫಿಕ್‌ಮೆಥಡ್ಸ್‌ಇನ್‌ಅರ್ಕಿಯಾಲಜಿ, ಅಡ್ವಾನ್ಸಸ್‌ಇನ್‌ಆರ್ಕಿಯಾಲಜಿಕಲ್‌ಮೆಥಡ್‌ಅಂಡ್‌ಥಿಯರಿ, ಸಂಪುಟ ೧, (ಸಂ.), ಮೈಕೇಲ್‌ಶಾಫ್‌, ಪು.೪೮-೯೦