ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಮೊದಲೇ ಹಂಪೆ ರಾಜಕೀಯ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರವಾಗಿ ವಿಶಿಷ್ಟ ಸ್ಥಾನವನ್ನು ಪಡೆದಿತ್ತು. ಇದರ ಪ್ರಾಮುಖ್ಯತೆ ಹೆಚ್ಚಿದ್ದು ಹೊಯ್ಸಳ ವೀರಬಲ್ಲಾಳನ ಕಾಲದಲ್ಲಿ ಮತ್ತು ವಿಜಯನಗರದ ಸಂಗಮ ಮನೆತನದ ಅರಸರ ಆಳ್ವಿಕೆಯಲ್ಲಿ, ಈ ಮನೆತನದ ಆಳ್ವಿಕೆಯ ಆರಂಭದ ಕಾಲದಲ್ಲಿ ಒಂದು ಚಿಕ್ಕ ಕೇಂದ್ರವಾಗಿದ್ದ ಹಂಪೆ ಮುಂದೆ ರಾಜಧಾನಿಯಾಗಿ ಹಿಂದೂ ಮಹಾಸಾಮ್ರಾಜ್ಯದ ನಿರ್ಮಾಣಕ್ಕೆ ಸ್ಫೂರ್ತಿ ಚೇತನವನ್ನು ಒದಗಿಸಿತ್ತು. ಚರಿತ್ರಾರ್ಹ ‘ವಿಜಯನಗರ’ ಸಾಮ್ರಾಜ್ಯದ ರಾಜಧಾನಿಯಾಗಿ ಕ್ರಿ.ಶ.೧೫೩೧ರ ನಂತರದ ಶಾಸನಗಳಲ್ಲಿ ‘ವಿದ್ಯಾನಗರ’ ಅಥವಾ ‘ವಿದ್ಯಾನಗರಿ’ ಎಂದು ಕರೆಯಲಾಗಿದೆ.[1]

ರಾಜಧಾನಿ ವಿಜಯನಗರವು ಪಟ್ಟಣ ಆನೆಗುಂದಿ, ಹೊಸಪೇಟೆ, ಹಂಪೆ, ಕಮಲಾಪುರ, ಬುಕ್ಕಸಾಗರ, ಶಿವಪುರ, ನೆಲ್ಲಾಪುರ, ದರೋಜಿ ಗ್ರಾಮಗಳನ್ನು ಒಳಗೊಂಡಿತ್ತು. ಈ ವಿಶಾಲ ಗಡಿಗಳ ನಡುವೆ ವಿಜಯನಗರವು ಹಲವು ‘ಪುರ’ಗಳಿಂದ ಕೂಡಿತ್ತು. ಆ ಪುರಗಳೆಂದರೆ ‘ವಿರೂಪಾಕ್ಷಪುರ’, ‘ಕೃಷ್ಣಾಪುರ’, ‘ವಿಠ್ಠಲಾಪುರ’, ‘ಅಚ್ಯುತಾಪುರ’, ‘ಕಡೆರಾಂಪುರ’, ‘ಕಮಲಾಪುರ’, ‘ವರದಾದೇವಿ ಅಮ್ಮನ ಪಟ್ಟಣ’ ಇವಲ್ಲದೆ ನಗರದ ಸುತ್ತಮುತ್ತಲಿನಲ್ಲಿ ನಿರ್ಮಾಣಗೊಂಡ ಉಪನಗರಗಳಾದ ‘ಮಲಪನಗುಡಿ’, ‘ಸಾಲೆ ತಿರುಮಲರಾಯ ಪಟ್ಟಣ, ‘ನಾಗಲಾದೇವಿಪುರ’, ‘ತಿರುಮಲದೇವಿ ಅಮ್ಮನ ಪಟ್ಟಣ’, ‘ಚಿನ್ನವಾಡಿ’ ಅಥವಾ ‘ಚಿತ್ತವಾಡಿ’ಗಳಿಂದ ಕೂಡಿತ್ತು. ವಿರೂಪಾಕ್ಷಪುರ, ಅಚ್ಯುತಾಪುರ, ವಿಠ್ಠಲಾಪುರಗಳು ಕೃಷ್ಣಾಪುರ, ಕಮಲಾಪುರ, ಕಡೆರಾಂಪುರ, ವರದಾದೇವಿ ಅಮ್ಮನ ಪಟ್ಟಣಗಳು ಬೆಳೆದುಬಂದಿವೆ.

ವಿರೂಪಾಕ್ಷಪುರ, ಕೃಷ್ಣಾಪುರ, ವಿಠ್ಠಲಾಪುರ, ಅಚ್ಯುತಾಪುರ, ಕಮಲಾಪುರ, ವರದಾದೇವಿ ಅಮ್ಮನ ಪಟ್ಟಣಗಳು ಪರ್ವತಗಳಿಂದ ಅವೃತವಾಗಿದ್ದು, ನದಿ, ಕೆರೆ, ಕಾಲುವೆ ತೋಟ, ಕೋಟೆ ಕೊತ್ತಳಗಳಿಂದ ಕೂಡಿವೆ. ಹೇಮಕೂಟ, ಮಾತಂಗ, ಕಿಷ್ಕಿಂಧ, ಮಾಲ್ಯವಂತದ, ಋಷ್ಯಮೂಕ ಪರ್ವತಗಳು ಪ್ರಕೃತಿದತ್ತವಾಗಿ ನಿರ್ಮಾಣವಾದ ಬೃಹತ್ ಭದ್ರಕೋಟೆಗಳಂತಿವೆ. ವಿರೂಪಾಕ್ಷಪುರದಿಂದ ಪೆನುಗೊಂಡೆ ಬಾಗಿಲವರೆಗೆ, ಕಮಲಾಪುರ ಕೆರೆಯಿಂದ ತಳವಾರ ಘಟ್ಟದವರೆಗೂ ಇರುವ ಅಂತರ ೬ ಕಿ.ಮೀ. ಇದೆ. ಇದೇ ರೀತಿ ಕಮಲಾಪುರ, ಹೊಸಪೇಟೆ ರಸ್ತೆಯಲ್ಲಿ ಬರುವ ನೈರುತ್ಯ ದಿಕ್ಕಿನ ಐದು ಹೊರವಲಯಗಳ ಅಂತರವೂ ಸುಮಾರು ೬ ಕಿ.ಮೀ. ಇದ್ದು, ನಗರ ಯೋಜಕರು ಮುಂದೆ ಬೆಳೆಯಬಹುದಾಗಿದ್ದ ನಗರದ ಬೆಳವಣಿಗೆಯನ್ನು ಗಮನವಿರಿಸಿಕೊಂಡೇ ಉಪನಗರಗಳನ್ನು ವಿಜಯನಗರದ ಸುತ್ತಮುತ್ತಲು ನಿರ್ಮಿಸಿದ್ದರು.

ವಿಜಯನಗರದ ಪುರಗಳಲ್ಲೇ ಪ್ರಾಚೀನ ಪುರ ವಿರೂಪಾಕ್ಷಪುರ, ಹಂಪೆಯ ಪ್ರಮುಖ ದೇವಾಲಯವೆಂದರೆ ಪಂಪಾ ವಿರೂಪಾಕ್ಷನದು. ತುಂಗಭದ್ರಾ ನದಿಯ ತೀರದಲ್ಲಿದ್ದು ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕ್ಷೇತ್ರಗಳಲ್ಲೊಂದಾಗಿದೆ. ಶ್ರೀ ವಿರೂಪಾಕ್ಷ ಹಂಪೆಯ ಪಾಲಕದೇವರಾಗಿದ್ದ[2] ವಿಜಯನಗರದ ಪೂರ್ವ ಶಾಸನಗಳು ೭ನೇ ಶತಮಾನದಿಂದ ೧೪ನೇ ಕ್ರಿ.ಶ.ದ ಶಾಸನಗಳು ಹಂಪೆಯನ್ನು ವಿವಿಧ ಹೆಸರುಗಳಿಂದ ಕರೆದಿವೆ. ವಿರೂಪಾಕ್ಷ ದೇವಾಲಯ ಕ್ರಿ.ಶ.೬೮೯ರ ವಿನಯಾದಿತ್ಯನ ಕಾಲದಲ್ಲಿತ್ತೆಂದು ಶಾಸನದಿಂದ ತಿಳಿಯಬಹುದಾಗಿದೆ.[3] ಈ ಶಾಸನದಲ್ಲಿ ಹಂಪೆಯನ್ನು ‘ಪಂಪಾತೀರ್ಥ’ ಎಂದು ಕರೆಯಲಾಗಿದೆ. ಇನ್ನೂ ಕೆಲವು ಶಾಸನಗಳು ‘ಪಂಪಾ’, ‘ಪಂಪಾಕ್ಷೇತ್ರ’, ‘ಪಂಪಾಪುರ’, ‘ಪಂಪಾಸ್ಥಳ’, ‘ವಿರೂಪಾಕ್ಷತೀರ್ಥ’, ‘ಹಂಪೆ’, ‘ವಿರೂಪಾಕ್ಷಪುರ’, ಎಂದು ಕರೆದಿರುವುದನ್ನು ತಿಳಿಸುತ್ತವೆ. ವಿರೂಪಾಕ್ಷಪುರವು ವಿಜಯನಗರ ಕಾಲಕ್ಕಿಂತಲೂ ಮುಂಚೆ ಸುದೀರ್ಘ ಇತಿಹಾಸವನ್ನು ಹೊಂದಿತ್ತೆಂದರೆ ತಪ್ಪಾಗಲಿಕ್ಕಿಲ್ಲ.

ಸಂಗಮ ಮನೆತನದ ಅರಸರ ಆಳ್ವಿಕೆ ಆರಂಭವಾಗಿ ಹಂಪೆ ರಾಜಧಾನಿಯಾದ ನಂತರ ಬೆಳವಣಿಗೆ ಹೊಂದಿತು. ಈ ಅವಧಿಯಲ್ಲಿ ವಿರೂಪಾಕ್ಷ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ, ಗೋಪುರ, ಮಂಟಪಗಳನ್ನು ಸೇರಿಸಿ ವಿಶಾಲವಾಗಿಸಿದರು. ಎರಡನೇ ಪ್ರೌಢದೇವರಾಯ ವಿರೂಪಾಕ್ಷಪುರದ ಬೆಳವಣಿಗೆಯ ಬಗ್ಗೆ ಆಸಕ್ತಿ ವಹಿಸಿದ್ದರ ಬಗ್ಗೆ ಲಕ್ಕಣದಂಡೇಶನು ತನ್ನ ‘ಶಿವತತ್ವ, ಚಿಂತಾಮಣಿ’ಯಲ್ಲಿ ಉಲ್ಲೇಖಿಸಿರುವುದನ್ನು ಕಾಣಬಹುದಾಗಿದೆ.[4] ಇದೇ ರೀತಿ ಮುಂದೆ ತುಳುವ ಮನೆತನದ ಕೃಷ್ಣದೇವರಾಯನ ತನ್ನ ಪಟ್ಟಾಭಿಷೇಕೋತ್ಸದ ನೆನಪಿಗಾಗಿ ಸಿಂಗಿನಾಯಕನಹಳ್ಳಿಯನ್ನು ವಿರೂಪಾಕ್ಷ ದೇವಾಲಯಕ್ಕೆ ದತ್ತಿ ಬಿಟ್ಟು, ಮಹಾಮಂಟಪ ಮತ್ತು ರಾಯ ಗೋಪುರವನ್ನು ಕಟ್ಟಿಸಿದರ ಬಗ್ಗೆ ಕ್ರಿ.ಶ. ೧೫೧೦ರ ಶಾಸನ ವಿವರವಾಗಿ ತಿಳಿಸುತ್ತದೆ.[5] ವಿರೂಪಾಕ್ಷ ದೇವಾಲಯದ ಮುಂಭಾಗದಿಂದ ಪ್ರಾರಂಭವಾಗಿ ಕೊನೆಗೆ ಎದುರು ಬಸವಣ್ಣನ ಮಂಟಪದವರೆಗೂ ಇರುವ ಉದ್ದನೆಯ ಬೀದಿಯೇ ವಿರೂಪಾಕ್ಷ ಬಜಾರು ಇದನ್ನೇ ‘ಪಂಪಾರಥವೀಧಿ’, ‘ತೇರುಬೀದಿ’, ‘ಹಂಪೆ ಬಜಾರು’ ಎಂದು ವಿವಿಧ ಹೆಸರುಗಳಿಂದ ಕರೆಯಲಾಗಿದೆ. ವಿರೂಪಾಕ್ಷ ಬಜಾರು ವಿರೂಪಾಕ್ಷ ದೇವಾಲಯದಷ್ಟೇ ಪ್ರಾಚೀನ. ಈ ಬಜಾರದ ಉದ್ದ ೭೨೦ ಮೀಟ್‌ಅಗಲ ದೇವಾಲಯದ ಹತ್ತಿರ ೩೦ ಮೀಟರ್ ಇದ್ದು ಬಜಾರದ ಕೊನೆಯಲ್ಲಿ ೩೮ ಮೀಟರ್ ಇದೆ.[6] ಬಜಾರದ ಎಡಬಲಗಳಲ್ಲಿ ಪ್ರಾರಂಭದಿಂದ ಕೊನೆಯ ಮಂಟಪದವರೆಗೂ ಸಾಲುಕಲ್ಲಿನ ಮಂಟಪಗಳನ್ನು ಮೂರು ಅಡಿ ಎತ್ತರದ ಅಧಿಷ್ಠಾನದ ಮೇಲೆ ಕಟ್ಟಲಾಗಿದೆ. ಕೆಲವು ಮಂಟಪಗಳು ಎರಡು ಅಂಕಣಗಳಿಂದ ಕೂಡಿದ್ದರೆ ಇನ್ನೂ ಕೆಲವು ಎರಡು ಅಂಕಣಗಳಿಗಿಂತ ಹೆಚ್ಚು ವಿಸ್ತಾರವಾಗಿದೆ. ಈ ಬೀದಿಯಲ್ಲಿದ್ದ ಕಲ್ಲು ಮುಳ್ಳುಗಳನ್ನು ತೆಗೆದು ಹಾಕಿಸಿ ವಿಶಾಲವಾಗಿಸಿದುದರ ಬಗ್ಗೆ ಮತ್ತು ವೀಥಿ (ಬೀದಿ)ಯನ್ನು ಯಾವ ಉದ್ದೇಶಕ್ಕಾಗಿ ಪ್ರೌಢದೇವರಾಯನು ನಿರ್ಮಿಸಿದನೆಂದು, ವಿರೂಪಾಕ್ಷ, ಪಂಪಾಂಬಿಕಾ ಮತ್ತು ಗಣಾಧಿಪರ ರಥ ಎಳೆಯುತ್ತಿದ್ದುದರ ಬಗ್ಗೆ ತನ್ನ ಗ್ರಂಥದಲ್ಲಿ ತಿಳಿಸುತ್ತಾನೆ. ವಿದೇಶಿ ಪ್ರವಾಸಿಗರಾದ ನಿಕೋಲೊ-ದಿ-ಕಾಂಟಿ ಮತ್ತು ಡೊಮಿಂಗೊ ಪಾಯೇಸ ಸಹಾ ರಥಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಬೀದಿ ಆರಂಭದಲ್ಲಿ ಕೇವಲ ತೇರುಬೀದಿಯಾಗಿ ಕಾರ್ಯನಿರ್ವಹಿಸಿದ್ದು, ಅನಂತರ ರಥೋತ್ಸವಗಳೂ, ಮೆರವಣಿಗೆಗಳೂ ನಡೆಯುತ್ತಿದ್ದವು. ನಿಕೋಲೆ-ದಿ-ಕಾಂಟಿ ಹೋಳಿ ಹಬ್ಬದಲ್ಲಿ ಹೋಳಿಯನ್ನು (ಬಣ್ಣವನ್ನು) ಬೀದಿಯ ಎರಡೂ ಬದಿಯಲ್ಲಿಟ್ಟು ರಾಜ-ರಾಣಿಯರನ್ನು ಬಿಡದೆ ಎಲ್ಲರ ಮೇಲೆ ಎರಚುತ್ತಿದ್ದರೆಂದು ವಿವರಣೆ ನೀಡುತ್ತಾನೆ.

ವಿರೂಪಾಕ್ಷ ದೇವಾಲಯದ ಸುತ್ತಮುತ್ತಲೂ ಬಜಾರನ್ನು ಒಳಗೊಂಡಂತೆ ವಿರೂಪಾಕ್ಷಪುರ ಬೆಳೆದು, ವಿರೂಪಾಕ್ಷ ಬಜಾರು ಮಾರುಕಟ್ಟೆಯಾಗಿದ್ದಿತು. ಬೀದಿಯ ಎಡ-ಬಲಗಳಲ್ಲಿ ಕಟ್ಟಲಾದ ಮಂಟಪಗಳು ಅಂದಿನ ವ್ಯಾಪಾರದ ಮಳೆಗೆಗಳಾಗಿದ್ದವು.

ವಿರೂಪಾಕ್ಷ ಬಜಾರು ಕೇವಲ ಧಾರ್ಮಿಕ ಆಚರಣೆಗಳ ಮತ್ತು ವ್ಯಾಪಾರಗಳ ಕೇಂದ್ರವಾಗಿರದೆ ಅನೇಕ ಮಠಗಳು ಇಲ್ಲಿದ್ದವು. ಈ ಬಜಾರದಲ್ಲಿ ನಿತ್ಯದಾಸೋಹ ಮಾಡುತ್ತ ಪಂಪಾಪತಿ ರಥವೀಥಿಯಲ್ಲಿ ನೆಲೆಸಿದ್ದ ಗುರುಮೂರ್ತಿ ಒಂದೊತ್ತಿನಯ್ಯಗಳು, ಅಲ್ಲದೆ ಕ್ರಿಯಾಶಕ್ತಿ ಒಡೆಯತಿರಾಯ, ದಕ್ಷಿಣಾಮೂರ್ತಿ ಯತಿಚಕ್ರವರ್ತಿಗಳ ಉಲ್ಲೇಖವನ್ನು ಲಕ್ಕಣ ದಂಡೇಶ ಪ್ರಸ್ತಾಪಿಸಿರುವುದನ್ನು ತಿಳಿಯಬಹುದಾಗಿದೆ.[7] ಈ ವಿರೂಪಾಕ್ಷ ಬಜಾರದಲ್ಲೇ ಕೆಲವು ವೀರಶೈವ ಮಠಗಳನ್ನು ಮಂಟಪದ ರೂಪದಲ್ಲಿ ನೋಡಬಹುದುದಾಗಿದ್ದು, ಕೆಲವೊಂದು ಮಠಗಳಲ್ಲಿ ಎರಡು ಮಹಡಿಯನ್ನು ಕಾಣಬಹುದಾಗಿದೆ.[8] ಮಠಗಳು ಅಂದು ವಿದ್ಯಾದಾನದ ಕೇಂದ್ರಗಳಾಗಿದ್ದವು. ಕನಕದಾಸರು ತಮ್ಮ ‘ಮೋಹನ ತರಂಗಿಣಿ’ಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಉಚಿತ ಊಟ-ಬಟ್ಟೆಗಳ ವ್ಯವಸ್ಥೆಯನ್ನು ಮಠಗಳಲ್ಲಿ ಮಾಡುತ್ತಿದ್ದ ಬಗ್ಗೆ ಉಲ್ಲೇಖಿಸುತ್ತಾರೆ.[9] ಒಟ್ಟಾರೆ ವಿರೂಪಾಕ್ಷಪುರ ಕೇವಲ ಪವಿತ್ರ ಧಾರ್ಮಿಕ ಶಿಕ್ಷಣ ವಾಣಿಜ್ಯ ಕೇಂದ್ರವಾಗಿ ಅಚ್ಚಳಿಯದ ಛಾಪನ್ನು ಮೂಡಿಸಿದ್ದು ವಿಜಯನಗರದ ಏಳಿಗೆಗೆ ತನ್ನದೇ ಆದ ವಿಶಿಷ್ಟ ರೀತಿಯ ಕೊಡುಗೆಯನ್ನು ನೀಡಿದೆ.

ವಿರೂಪಾಕ್ಷಪುರಕ್ಕಿರುವಂತೆ ಕೃಷ್ಣಾಪುರ[10], ವಿಠ್ಠಲಾಪುರ[11], ಅಚ್ಯುತಾಪುರ[12], ವರದಾದೇವಿ ಅಮ್ಮನಪಟ್ಟಣ[13], ಕಮಲಾಪುರ[14], ಸಾಲೆ ತಿರುಮಲರಾಯ ಪಟ್ಟಣ[15], ನಾಗಲಾದೇವಿಪುರ[16], ತಿರುಮಲಾದೇವಿ ಅಮ್ಮನ ಪಟ್ಟಣ[17], ಚಿಕ್ಕವಾಡಿ ಅಥವಾ ಚಿನ್ನಾದೇವಿವಾಡ[18] ಗಳಿಗೆ ಶಾಸನಗಳ ಉಲ್ಲೇಖ ಇರುವುದು ನಿಚ್ಚಳವಾಗಿ ಕಂಡುಬರುತ್ತದೆ.

ಈ ಎಲ್ಲಾ ಪುರಪಟ್ಟಣಗಳು ಶಾಸನ ಉಲ್ಲೇಖ ಹೊಂದಿದ್ದು ಕೆಳಕಂಡ ಮುಖ್ಯ ಲಕ್ಷಣಗಳನ್ನು ಹೊಂದಿವೆ:

೧. ಪುರ ಪಟ್ಟಣಗಳು ಮುಖ್ಯ ದೇವಾಲಯದ ಸುತ್ತಮುತ್ತಲು ಬೆಳೆದಿದ್ದವು.

೨. ಒಂದೊಂದು ಪುರದಲ್ಲೂ ಮಾರುಕಟ್ಟೆ ಇದ್ದು, ವಿವಿಧ ಅಂಗಡಿಗಳನ್ನು ರಸ್ತೆಯ (ಬೀದಿಯ) ಎರಡೂ ಬದಿಯಲ್ಲಿ ಕಾಣಬಹುದಾಗಿದೆ.

೩. ಎಲ್ಲಾ ಪುರಗಳ ಮುಖ್ಯ ದೇವಾಲಯಗಳ ಎಡ ಭಾಗದಲ್ಲಿ ಪುಷ್ಕರಿಣಿ, ಕೊಳ ಅಥವಾ ಹೊಂಡಗಳನ್ನು ಕಾಣಬಹುದು.

೪. ಪುರದ ದೇವಾಲಯಗಳು ವಿದ್ಯಾಪ್ರಸಾರಾದ ಕೇಂದ್ರಗಳಾಗಿದ್ದವು.

೫. ಈ ಎಲ್ಲಾ ಪುರಗಳ ಮುಖ್ಯ ದೇವಾಲಯಗಳಲ್ಲಿ ಧಾರ್ಮಿಕ ಹಬ್ಬ ಹರಿದಿನಗಳ ಆಚರಣೆಗಳನ್ನು ನಿರಂತರವಾಗಿ, ನಿಯಮಿತವಾಗಿ ಆಚರಿಸಲಾಗುತ್ತಿತ್ತು. ಕಾಲಾಂತರದಲ್ಲಿ ಮಠಗಳು ಸಹಾ ಪುರಗಳಲ್ಲಿ ತಲೆ ಎತ್ತಿದವು.

೬. ಪುರಗಳು ವ್ಯಾಪಾರ-ವಾಣಿಜ್ಯೋದಮದ ಕೇಂದ್ರಗಳಷ್ಟೇ ಆಗಿರದೆ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರಗಳೂ ಆಗಿದ್ದವು.

೭. ಪುರಗಳು ವಿವಿಧ ಜನಾಂಗಕ್ಕೆ ಸೇರಿದ ಜನವಸತಿಯ ತಾಣಗಳಾಗಿದ್ದವು.

೮. ಪುರಗಳ ಬೆಳವಣಿಗೆಯಿಂದಾಗಿ ಅಗ್ರಹಾರಗಳು ಹುಟ್ಟಿಕೊಂಡವು.

೯. ಪುರಗಳು ಯಾವುದೇ ದೇವರ ಹೆಸರಲ್ಲಿ ಇದ್ದರೂ ರಾಜರು ಅಲ್ಲಿ ಸಾಮಾಜಿಕ ಸೌಹಾರ್ದತೆಯನ್ನು ರಕ್ಷಿಸಿ ರಾಜ್ಯದ ಅಭಿವೃದ್ಧಿಗೆ ಕಾರಣರಾಗಿದ್ದರು.

೧೦. ಈ ಎಲ್ಲಾ ಪುರಗಳ ಆಡಳಿತ ನಗರ ನಿಯಂತ್ರಣಾಡಳಿತಕ್ಕೆ ಒಳಪಟ್ಟಿದ್ದವು. ಈ ಎಲ್ಲಾ ಲಕ್ಷಣಗಳನ್ನು ಕೂಲಂಕಷವಾಗಿ ಅವಲೋಕಿಸಿದಾಗ ತಿಳಿದುಬರುವ ಮುಖ್ಯ ವಿಚಾರಗಳು.

ಅ. ವಿಜಯನಗರದ ಎಲ್ಲಾ ಪುರ ಮತ್ತು ಪಟ್ಟಣಗಳನ್ನು ರಾಜಧಾನಿಯ ಒಳಗೋ ಅಥವಾ ಹೊರಗೋ ರಾಜನಿಂದಾಗಲಿ ಅಥವಾ ಅವನ ಸಂಬಂಧಿಗಳಿಂದ ಇಂತಹ ಪುರ ಅಥವಾ ಪಟ್ಟಣ ಸ್ಥಾಪಿಸಿದ್ದು ತಿಳಿದುಬರುತ್ತದೆ.

ಆ. ಈ ಪುರ ಅಥವಾ ಪಟ್ಟಣಗಳು ಇಷ್ಟ ದೈವದ ಹೆಸರಲ್ಲಿ ಅಥವಾ ತಾಯಿಯ ಜ್ಞಾಪಕಾರ್ಥವಾಗಿ ಅಥವಾ ಮಡದಿಗಾಗಿ ಅಥವಾ ಮಕ್ಕಳ ಹೆಸರಲ್ಲಿ ನಿರ್ಮಿಸಿದ್ದು ಕಂಡುಬರುತ್ತದೆ. ಉದಾ. ಕೃಷ್ಣದೇವರಾಯ ತಾಯಿಗಾಗಿ ನಾಗಲಾದೇವಿಪುರವನ್ನು, ಮಗನಿಗಾಗಿ ಸಾಲೆ ತಿರುಮಲರಾಯ ಪಟ್ಟಣವನ್ನು ಮುಖ್ಯ ಮಡದಿಗಾಗಿ ತಿರುಮಲದೇವಿ ಅಮ್ಮನ ಪಟ್ಟಣ, ಚಿಕ್ಕ ಮಡದಿಗಾಗಿ ಚಿಕ್ಕವಾಡಿ ಅಥವಾ ಚಿನ್ನಾದೇವಿವಾಡ ಸ್ಥಾಪಿಸಿದ್ದನ್ನು ನೋಡಬಹುದಾಗಿದೆ.

ಇ. ತುಳವ ಮನೆತನದ ಕೃಷ್ಣದೇವರಾಯ ಮತ್ತು ಅಚ್ಯುತದೇವರಾಯ ವಿಜಯನಗರದಲ್ಲಿ ಒಂದಕ್ಕಿಂತ ಹೆಚ್ಚು ಪುರ-ಪಟ್ಟಣಗಳನ್ನು ಸ್ಥಾಪಿಸಿ ವಿಜಯನಗರದ ವಿಸ್ತಾರದ ಕೀರ್ತಿಗೆ ಪಾತ್ರರಾಗಿದ್ದಾರೆ.

೫. ಪುರಗಳು ಮುಖ್ಯ ದೇವಾಲಯದ ಸುತ್ತಮುತ್ತಲು ಬೆಳೆದರೂ ಆಯಾ ಧರ್ಮಕ್ಕನುಗುಣವಾಗಿಯೇ ಸ್ಥಾಪಿಸಲಾಗಿತ್ತು.

ಉ. ಹೆಚ್ಚುತ್ತಿದ್ದ ಜನಸಂಖ್ಯೆಯನ್ನು ಗಮನದಲ್ಲಿರಿಸಿಕೊಂಡೇ ಉತ್ತಮ ಸೌಲಭ್ಯಗಳನ್ನು ನೀಡುವ ದೃಷ್ಟಿಯಿಂದ ಪುರ-ಪಟ್ಟಣಗಳನ್ನು ರಾಜಧಾನಿಯ ಎಲ್ಲಾ ದಿಕ್ಕುಗಳಲ್ಲಿ ಸ್ಥಾಪಿಸಿ ಅಭಿವೃದ್ಧಿಪಡಿಸಲಾಗಿತ್ತು.

ದೇವಾಲಯದ ಸುತ್ತ-ಮುತ್ತ ಅಥವಾ ದೇವಾಲಯದ ಬಜಾರುಗಳ ಸುತ್ತ-ಮುತ್ತಲೇ ಪುರ ಅಥವಾ ಪಟ್ಟಣಗಳೇಕೆ ಬೆಳೆದು ಬಂದವು ಎನ್ನುವುದು ಅತ್ಯಂತ ಕುತೂಹಲ ಮೂಡಿಸುತ್ತದೆ.

ದೇವಾಲಯಗಳು ವಿದ್ಯಾ ಪ್ರಸಾರಾಂಗದ ಕೇಂದ್ರಗಳಾಗಿದ್ದು ಪುರಗಳಲ್ಲಿ ಕ್ರಮೇಣ ಅಗ್ರಹಾರಗಳು, ಮಠಗಳು ಬೆಳೆದುಬಂದವು. ಕೃಷ್ಣಾಪುರ[19], ನೆಳಲಹುಣಸೆ[20], ನಾಗಲಾದೇವಿಪುರ[21], ಕುಮಾರಗಿರಿ[22],ಅಗ್ರಹಾರಗಳು ರಾಜಧಾನಿ ವಿಜಯನಗರದಲ್ಲಿ ಬೆಳೆದುಬಂದಿದ್ದವು. ಕಲಿಯುವ ಮತ್ತು ಕಲಿಸುವ ವಿಚಾರಕ್ಕಾಗಿ ಸಾಮ್ರಾಜ್ಯದ ನಾನಾ ಭಾಗಗಳಿಂದ ಪಂಡಿತರು ಮತ್ತು ವಿದ್ಯಾರ್ಥಿಗಳು ಬಂದು ವಿವಿಧ ಪುರಗಳಲ್ಲಿ ನೆಲೆಸಿದರು. ರಾಜರು, ಅಧಿಕಾರಿಗಳು, ವರ್ತಕರು ಇಂತಹ ಅಗ್ರಹಾರಗಳ ಬೆಳವಣಿಗೆಗೆ ಉದಾರ ದಾನದತ್ತಿ ಕೊಡುಗೆಗಳನ್ನು ನೀಡಿದ್ದನ್ನು ಶಾಸನಗಳು ಉಲ್ಲೇಖಿಸುತ್ತುವೆ.[23] ಇದು ಸಾಮಾಜಿಕವಾಗಿ ಅಗ್ರಹಾರಗಳ ಸ್ಥಾನಮಾನವನ್ನು ಹೆಚ್ಚಿಸಿದ್ದವು. ಕನಕದಾಸರು ‘ಮೋಹನ ತರಂಗಿಣಿ’ ಯಲ್ಲಿ ಇತಿಹಾಸ, ವೇದ, ವೇದಾಂತ, ಆಗಮ, ಗಣಿತ, ಖಗೋಳಶಾಸ್ತ್ರ, ವ್ಯಾಕರಣ, ತರ್ಕ, ಆಯುರ್ವೇದ, ಕಾವ್ಯ, ನಾಟಕ, ಸಂಗೀತಗಳಲ್ಲಿ ಪರಿಣಿತರಾದವರನ್ನು ಶಿಕ್ಷಕರೆಂದು ಅಗ್ರಹಾರಗಳಲ್ಲಿ ನೇಮಕ ಮಾಡುತ್ತಿದ್ದರ ಬಗ್ಗೆ ಗಮನ ಹರಿಸುತ್ತಾರೆ. ಅಗ್ರಹಾರಗಳಷ್ಟೇ ಮಠಗಳು ಸಹ ವಿದ್ಯಾಪ್ರಸಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವು. ವಿಜಯನಗರದ ಸಾಮ್ರಾಜ್ಯ ಸ್ಥಾಪನಾಪೂರ್ವ ಹಂಪೆ ಶೈವ ವಿದ್ಯಾಕೇಂದ್ರವಾಗಿತ್ತು.[24] ಮಠಗಳಲ್ಲಿ ಅಲ್ಲದೆ ದೇವಾಲಯಗಳಲ್ಲೂ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಊಟ ಮತ್ತು ವಸತಿಗಳನ್ನು ಉಚಿತವಾಗಿ ಏರ್ಪಡಿಸಲಾಗಿರುತ್ತಿತ್ತು. ಈ ದೆಸೆಯಲ್ಲಿ ವಿರೂಪಾಕ್ಷ ದೇವಾಲಯದ ಬಗ್ಗೆ ಶಾಸನ ಮಾಹಿತಿ ಸಿಗುತ್ತದೆ.[25] ಸಾಮಾನ್ಯವಾಗಿ ಮಠ ದೇವಾಲಯಗಳಲ್ಲಿನ ಶಿಕ್ಷಕರೇ ಜನತೆಗೆ ಧಾರ್ಮಿಕ ಆಚರಣೆಗಳ ಬಗ್ಗೆ ತಿಳುವಳಿಕೆ ನೀಡುತ್ತಿದ್ದರು.

ಜನತೆಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ಯಾವುದೇ ಒಂದು ಸ್ಥಳದಲ್ಲಿ ಬೆಳೆಯಲು ಸಾಧ್ಯವಾಗದು ಅಥವಾ ತಯಾರಿಸಲಾಗದು. ಹಾಗಾಗಿ ಈಗಾಗಲೆ ಬಂದು ನೆಲೆಸಿದ ಮತ್ತು ಇನ್ನಿತರ ಜನತೆಯ ಬೇಡಿಕೆಗಳನ್ನು ಈಡೇರಿಸಲು ಮಾರುಕಟ್ಟೆಗಳು ವಿವಿಧ ಪುರಗಳಲ್ಲಿ ಅಸ್ತಿತ್ವಕ್ಕೆ ಬಂದವು. ವ್ಯಾಪಾರ ವಹಿವಾಟಿಗಾಗಿ ಸಾಮ್ರಾಜ್ಯದ ನಾನಾ ಭಾಗಗಳಿಂದ ವ್ಯಾಪಾರಿಗಳು ತಮ್ಮ ವಿವಿಧ ವಸ್ತುಗಳೊಂದಿಗೆ ಬಂದು ಪುರದಲ್ಲಿ ನೆಲೆಸಿದರು. ಹೀಗೆ ಬೇರೆ ಬೇರೆ ಪುರಗಳಲ್ಲಿ ಬೇರೆ ಬೇರೆ ದಿನದಂದು ಮಾರುಕಟ್ಟೆಯ ದಿನಗಳು ನಗದಿಯಾಗಿ ನಿರಂತರವಾಗಿ ನಡೆದಿದ್ದವು. ಉದಾಹರಣೆಗೆ ಹೇಳುವುದಾದರೆ ಡೊಮಿಂಗೊ ಪಾಯೇಸ್‌ತಿಳಿಸುವಂತೆ ದಿನಾಲು ನಗರದ ಬೇರೆ ಬೇರೆ ಭಾಗಗಳಲ್ಲಿ ಸಂತೆ ಜರುಗುತ್ತಿತ್ತು. ಕೃಷ್ಣಾಪುರದಲ್ಲಿ ಪ್ರತಿ ಸೋಮವಾರ[26] ಅಚ್ಯುತಾಪುರದಲ್ಲಿ ಪ್ರತಿ ಮಂಗಳವಾರ, ಸಂತೆ ನಡೆಯುತ್ತಿದ್ದುದರ ಬಗ್ಗೆ ಶಾಸನಗಳು ವಿವರಣೆಗಳನ್ನು ನೀಡುತ್ತವೆ. ಕಾಲಾಂತರದಲ್ಲಿ ಈ ಪುರಗಳ ಮಾರುಕಟ್ಟೆಗಳ ಮೂಲಕವೇ ವಿದೇಶಿ ವ್ಯಾಪಾರ ನಡೆದು ರಾಜ್ಯದ ಸಮಗ್ರ ಸಮೃದ್ಧ ಅಭಿವೃದ್ಧಿ ವೈಭವಕ್ಕೆ ಕಾರಣವಾಗಿದ್ದವು.

ಒಟ್ಟಾರೆ ಈ ಎಲ್ಲಾ ಪುರಗಳು ವಿಜಯನಗರದ ಅವಿಭಾಜ್ಯ ಅಂಗಗಳಾಗಿದ್ದವು. ಈ ಪುರಗಳು ಇಂದಿನ ಆಧುನಿಕ ಪಟ್ಟಣಗಳಲ್ಲಿ ಬೇರೆ ಬೇರೆ ಬಡಾವಣೆಗಳಿರುವಂತೆ ಅಂದು ವಿಜಯನಗರದಲ್ಲಿದ್ದವು. ದೇವಾಲಯಗಳು ಹಲವಿದ್ದು, ಮಠಗಳೂ ಸಹ ಆಯಾ ಧರ್ಮಕ್ಕನುಗುಣವಾಗಿ ವಿರೂಪಾಕ್ಷಪುರದಲ್ಲಿ ಶೈವಮಠಗಳು, ವಿಠ್ಠಲಾಪುರದಲ್ಲಿ ಶ್ರೀ ವೈಷ್ಣವಮಠಗಳು ಇದ್ದುದರ ಬಗ್ಗೆ ಶಾಸನಗಳು ತಿಳಿಸುತ್ತವೆ. ಇವು ಅಂದಿನ ವಿದ್ಯಾದಾನದ ಕೇಂದ್ರಗಳಾಗಿದ್ದವು. ಕನಕದಾಸರು ತಮ್ಮ ‘ಮೋಹನ ತರಂಗಿಣಿ’ ಯಲ್ಲಿ ಸೋಮಸೂರಿಯ ಬೀದಿಯಲ್ಲಿದ್ದ ಅಂಗಡಿಗಳು, ವಿವಿಧ ಪುರಗಳಲ್ಲಿ ಸಂತೆ ನಡೆಯುತ್ತಿದ್ದು, ಎತ್ತಿನಗಾಡಿಗಳು ಸಾಗಾಣಿಕೆಯ ಮುಖ್ಯ ಅಂಗಗಳಾಗಿದ್ದವು. ಹೇರುಗಳು ಸಾಗಾಟಕ್ಕೆ ಎತ್ತು ಎಮ್ಮೆ-ಕತ್ತೆಗಳಲ್ಲದೆ ಕುದರೆ-ಕೋಣ-ಆನೆಗಳನ್ನು ಬಳಸುತ್ತಿದ್ದುದರ ಬಗ್ಗೆ ವಿದೇಶಿ ಪ್ರವಾಸಿಗರ ಬರಹಗಳು ತಿಳಿಸುತ್ತವೆ. ಪುರಗಳು ಪ್ರಮುಖ ವ್ಯಾಪಾರ ಕೇಂದ್ರಗಳೂ ಆಗಿ ರಾಜಧಾನಿಯ ಸಮೃದ್ಧತೆಗೆ ಸಮರ್ಥವಾಗಿ ಬೆಂಬಲಿಸಿ ಸಂಪತ್ತಿನ ಕೇಂದ್ರಗಳಾಗಿದ್ದವು.

ಆಕರ
ವಿಜಯನಗರ ಅಧ್ಯಯನ, ಸಂ.೮, ೨೦೦೩, ಪ್ರಾಚ್ಯವಸ್ತು ಮತ್ತು ವಸ್ತುಸಂಗ್ರಹಾಲಯಗಳ ನಿರ್ದೇಶನಾಲಯ, ಹೊಸಪೇಟೆ, ಪು. ೧೦೬-೧೧೫

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] Saletore, B.A: Social and Political life in the Vijayanagara Empire, Vol. I. P. 112, S.I.I. Vol. IV, Nos. 248, 265, etc.

[2] EI, III, P.22, V.p. 42

[3] ಲಕ್ಕಣ್ಣ ದಂಡೇಶ- ಶಿವತತ್ವ ಚಿಂತಾಮಣಿ

[4] Kannada University Epigraphical Series-III, No.34, AR No. 29 of 1889

[5] Nagaraja Rao, M.S. (Ed)- Vijayanagar Porgress of Research, 1979-83, p.9

[6] ಭೂಸನೂರಮಠ- ಸಂ.ಶಿ. ವಿಜಯಕಲ್ಯಾಣ, ಪು. ೭೫-೭೬

[7] ಕೊಟ್ರಯ್ಯ ಸಿ.ಟಿ. ಎಂ., ಹಂಪೆ ವೀರಶೈವ ಮಠಗಳು ಮತ್ತು ಸಾಹಿತ್ಯ ಪರಂಪರೆ, ಪು. ೨೦

[8] ಕೃಷ್ಣಶರ್ಮ ಬಿ, ಕರ್ನಾಟಕ ಜನಜೀವನ, ಪು. ೯೦-೯೩

[9] S.I.I. Vol. IV, No. 254, p. 44

[10] S.I.I. Vol. IV, No. 272, p. 68; No. 280, pp. 74-75

[11] S.I.I. Vol. IX, pt-II, No. 564,

[12] S.I.I. Vol. IX, pt-II, No.573,595,No.245

[13] S.I.I. Vol. IX, pt-II, No. 533

[14] A.R. on S.I. epigraphy, 1922,No.573

[15] S.I.I. Vol. IX, pt-II, No. 504,

[16] S.I.I. Vol. IX, pt-II, No.539,No.573

[17] S.I.I. Vol. IX, pt-II, No.636

[18] ARSIE 1935-36, No. 377, S.I.I.Vol-IV, No. 254, p. 44

[19] S.I.I. Vol. IV, No.255

[20] S.I.I. Vol. IV, pt-II, No.504

[21] S.I.I. Vol. IV, pt-II, No.533, S.I.I. Vol. XVI, No.26

[22] S.I.I. Vol. IV, No. 55, A.R. No. 24 of 1903

[23] S.I.I. Vol. IV, No.260,

[24] Ibid

[25] ಸದಾನಂದ ಕನವಳ್ಳಿ (ಅನು.) ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಪು. ೨೭೪

[26] Ibid