ಪೂರ್ವಕಾಲದಿಂದಲೂ ರಚಿತವಾಗಿರುವ ಪುರಾಣ, ಕಾವ್ಯ, ಮತ್ತಿತರ ಸಾಹಿತ್ಯ ಕೃತಿಗಳಲ್ಲಿ, ರಾಜಮಹಾರಾಜರ ಅರಮನೆಗಳು, ಅವರ ಓಲಗ ಶಾಲೆಗಳು, ಸಭಾಮಂಟಪಗಳು, ಮಹಲುಗಳು, ಮುಂತಾದ ವಾಸ್ತು ರಚನೆಗಳು, ಅವುಗಳಲ್ಲಿ ಏರ್ಪಡಿಸಲಾಗಿರುತ್ತಿದ್ದ ವ್ಯವಸ್ಥೆಗಳು ಮತ್ತು ಅಲ್ಲಿ ಜರುಗುತ್ತಿದ್ದ ವೈಭವಯುಕ್ತ ಸಭೆ ಸಮಾರಂಭಗಳನ್ನು ಕುರಿತು, ಸಾಮಾನ್ಯವಾಗಿ ಉತ್ಪ್ರೇಕ್ಷಣೆಗಳಿಂದ ಕೂಡಿದ್ದರೂ ವಿಸ್ಮಯವನ್ನುಂಟು ಮಾಡುವ ರೀತಿಯಲ್ಲಿ ವಿಫುಲವಾಗಿ ಮತ್ತು ವಿಶೇಷವಾಗಿ ವರ್ಣಿತವಾಗಿರುವುದನ್ನು ನೋಡುತ್ತೇವೆ. ಆದರೆ ಆ ‘ವಿಷಯಾಂಶಗಳಲ್ಲಿ ಹಲವನ್ನಾದರೂ ಸ್ಥಿರೀಕರಿಸಿ, ಸಮರ್ಥಿಸುವಂತಹ ವಾಸ್ತು ಕಟ್ಟಡಗಳು ಕಾಣಬರುವುದು ವಿಜಯನಗರದ ಕಾಲದಿಂದೀಚೆಗೆ ಮಾತ್ರ ಎಂದರೆ ಕ್ರಿ.ಶ.೧೪ನೇ ಶತಮಾನದಿಂದೀಚೆಗೆ ಅವುಗಳಲ್ಲಿಯೂ ಹಲವೇ ಹಲವು ಉಳಿದು ಬಂದಿರುತ್ತದೆ. ಅವುಗಳನ್ನು ಮತ್ತು ಅವುಗಳು ನಿರ್ವಹಿಸಿದ ವಿದ್ಯುಕ್ತ ಕಾರ್ಯಾಚರಣೆಗಳು, ಸಂಪ್ರದಾಯಗಳ ಪಾತ್ರ ಪ್ರಕಾರಗಳ ವೈವಿಧ್ಯತೆಯನ್ನು ಗುರುತಿಸಿ, ವಿಶ್ಲೇಷಿಸಿ, ಸರಿಸಮಾನವಾದ ಚಿತ್ರಣವನ್ನು ಪಡೆಯಬೇಕಾದರೆ, ಸಮಕಾಲೀನ ದೇಶೀಯ ಸಾಹಿತ್ಯ ಕೃತಿಗಳನ್ನು ಮತ್ತು ಅವುಗಳ ಜೊತೆಗೆನೇ ವಿದೇಶೀ ಪ್ರವಾಸಿಗಳು ಸಂದರ್ಶಿಸಿ ಬರೆದು ದಾಖಲಿಸಿರುವ ವಿವರಣಗಳನ್ನೇ ಅವಲಂಬಿಸಬೇಕಾಗುತ್ತದೆ. ಪ್ರಸ್ತುತದಲ್ಲಿ, ವಿಜಯನಗರದ ಅರಮನೆ ಪ್ರದೇಶ (citadel) ಈಗಲೂ ಕಾಣಬರುತ್ತಿರುವ ಓಲಗ ಶಾಲೆ ಅಥವಾ ಸಭಾಮಂಟಪದ (audience hall) ಎಂದು ಗುರುತಿಸಲಾಗಿರುವ ವಾಸ್ತುಸ್ಮಾರಕ ಮತ್ತು ಅಲ್ಲಿ ಏರ್ಪಡಿಸಿದ್ದಿರಬಹುದಾದ ವಿಶೇಷ ವ್ಯವಸ್ಥೆಗಳನ್ನು ಕುರಿತು ಪ್ರಸ್ತಾಪಿಸಲಾಗಿದೆ.

ಆ ಓಲಗ ಶಾಲೆಯ ಕಟ್ಟಡದ ಅಧಿಷ್ಠಾನದ ಭಾಗ ಮಾತ್ರ ಈಗ ಕಾಣಬರುತ್ತಿದ್ದು ಅದರ ಮೇಲಿದ್ದಿರಬಹುದಾದ ವಾಸ್ತು ಮತ್ತು ಮರಮುಟ್ಟುಗಳಿಂದ ರಚನೆಯಾಗಿದ್ದ ಭಾಗಗಳು ಅಲಂಕಾರ ವ್ಯವಸ್ಥೆಗಳು ಮತ್ತಿತರ ಏರ್ಪಾಟುಗಳು ಮುಸಲ್ಮಾನ ಸೈನಿಕರ ಸುಲಿಗೆ, ವಿಧ್ವಂಸಕ ಕೃತ್ಯಗಳಿಗೆ ಗುರಿಯಾಗಿ, ಹಾಳಾಗಿ, ಸುಟ್ಟು ನಾಶವಾಗಿ ಹೋಗಿರುತ್ತದೆ. ಆದರೂ, ಅದು ಒಂದು ವಿಶಾಲವಾದ, ಬೃಹತ್‌ಪ್ರಮಾಣದ ಮತ್ತು ನೂರು ಸ್ತಂಭಗಳನ್ನು ಹೊಂದಿದ್ದ ಸಭಾ ಮಂಟಪವಾಗಿದ್ದಿತೆಂದು ಖಚಿತವಾಗಿ ಸಾರಿ ಹೇಳುವ ಕುರುಹುಗಳೆಂದರೆ, ಅಲ್ಲಿ ಈಗಲೂ ಕಾಣಬರುವ ಆ ನೂರು ಸ್ತಂಭಗಳ ಅಡಿಗಲ್ಲುಗಳು, ಆ ಕಟ್ಟಡವು ಚೌಕದ ೪೦ ಮೀಟರು x ೪೦ ಮೀಟರು ಅಳತೆಗಳ ತಳ ವಿನ್ಯಾಸವನ್ನು ಹೊಂದಿದ್ದು (೧೬೦೦ ಚ.ಮೀಟರುಗಳು) ಉತ್ತರಾಭಿಮುಖವಾಗಿ ನಿರ್ಮಿತವಾದುದಾಗಿದೆ. ಅದನ್ನು ಎರಡು ಹಂತಗಳಲ್ಲಿ ಅಥವಾ ಕಾಲಾಂತರಗಳಲ್ಲಿ ನಿರ್ಮಿಸಲಾಗಿರುವ ಸಾಧ್ಯತೆಗಳನ್ನೂ ಗುರುತಿಸಬಹುದು. ಎಂದರೆ ಮೊದಲನೆ ಹಂತಕ್ಕೆ ಸಂಬಂಧಿಸಿದ್ದೆಂದು ಹೇಳಬಹುದಾದ ಜಗಲಿಯು (ಅದರ ಅಗಲ ಸುಮಾರು ಒಂದು ಮೀಟರು) ಮೂರು ಪಾರ್ಶ್ವಗಳಲ್ಲಿ ಕಾಣಬರುತ್ತಿದ್ದು, ಸುತ್ತಲೂ ಜನರು (ಸೇವಕರು, ಪರಿಚಾರಕರು) ಕಾರ್ಯನಿಮಿತ್ತ ನಡೆದಾಡುವುದಕ್ಕೆ ಮಾತ್ರ ಉಪಯೋಗಿಸಲು ರಚಿತವಾಗಿದ್ದಂತೆ ವೇದ್ಯವಾಗುತ್ತದೆ. ಅದರಿಂದ ಮೇಲೆ, ಸುಮಾರು ಒಂದು ಮೀಟರು ಎತ್ತರದಲ್ಲಿ ನಿರ್ಮಿತವಾಗಿರುವುದೇ; ಆ ಸಭಾಮಂಟಪದ ತಲಭಾಗ (floor level) ಅಥವಾ ಒಳಾಂಗಣ, ಅಲ್ಲಿಯೇ ಕಣಶಿಲೆಯಲ್ಲಿ ನಿರ್ಮಿತವಾಗಿರುವ ಒಂದು ನೂರು ಕಂಭಗಳ ಅಡಿಗಲ್ಲುಗಳು ಈಗಲೂ ಕಾಣಬರುತ್ತವೆ. ಅವುಗಳೆಲ್ಲವೂ ಒಂದು ನಿರ್ದಿಷ್ಟ ಯೋಜನೆಗನುಗುಣವಾಗಿ, ಎಂದರೆ ಒಂದೊಂದು ಸಾಲಿನಲ್ಲಿ ಹತ್ತರಂತೆ ಹತ್ತು ಸಾಲುಗಳಲ್ಲಿ ವ್ಯವಸ್ಥೆಗೊಳಿಸಲ್ಪಟ್ಟಿದ್ದುವೆಂಬ ವಿಷಯವನ್ನು ಅವುಗಳ ತಲವಿನ್ಯಾಸದ ಚಿತ್ರವು ತಿಳಿಸುತ್ತದೆ. ಆ ಅಡಿಗಲ್ಲುಗಳ ಮೇಲೆ ಮರದಿಂದ ತಯಾರಿಸಲಾಗಿದ್ದ ಸ್ತಂಭಗಳನ್ನು ಭದ್ರವಾಗಿ ನೆಲೆಗೊಳಿಸಲು ಅನುಕೂಲವಾಗುವಂತೆ ೮೦-೮೫ ಸೆಂಟಿಮೀಟರು ಅಳತೆಗಳಲ್ಲಿ, ಚೌಕಾಕಾರದ, ಅಷ್ಟಾಗಿ ಆಳವಾಗಿಲ್ಲದ ತಗ್ಗುಗಳು ಮತ್ತು ಅವುಗಳ ಮಧ್ಯದಲ್ಲಿ ಚೌಕಾದ ಗೂಟಗಳಿಗೆ\ ಬೆಣೆಗಳಿಗೆ ಸರಿ ಹೊಂದುವ ರಂಧ್ರಗಳನ್ನೂ ನೋಡುತ್ತೇವೆ. ಆ ಅಳತೆಗಳಿಂದಲೇ, ಆ ಸ್ತಂಭಗಳ ಗಾತ್ರ, ಅವುಗಳಿಗನುಗುಣವಾದ ಎತ್ತರ ಮತ್ತು ಬೃಹದಾಕಾರಗಳನ್ನು ಕಲ್ಪಿಸಿಕೊಳ್ಳಬಹುದು ಮತ್ತು ಮುಂದೆ ವಿವರಿಸಲಾಗುವಂತೆ, ಅವುಗಳೆಲ್ಲವೂ ರಾಜರ ಕಲಾಭಿರುಚಿ, ರಸಿಕತನ, ಸಂಪತ್ತು ಮತ್ತು ಪ್ರತಿಷ್ಠೆಗನುಗುಣವಾಗಿ ಚಿನ್ನ, ಬೆಳ್ಳಿಗಳ ತಗಡುಗಳ ಹೊದಿಕೆಗಳಿಂದ, ಕುಸುರಿ ಕೆತ್ತನೆಗಳಿಂದ, ಸುಂದರಮೂರ್ತಿ ಶಿಲ್ಪಗಳಿಂದ, ಅಮೂಲ್ಯ ಮತ್ತು ಮಾಣಿಕ್ಯಗಳಿಂದ ಅಲಂಕೃತ ವಾಗಿದ್ದಿರಬೇಕು.

ಪೂರ್ವದಲ್ಲಿರಬಹುದಾದ ಒಳಾಂಗಣದ ಗಾರೆ ನೆಲ, ಮತ್ತಿತರ ಅಲಂಕಾರಿಕ ಗಾರೆ ಕೆಲಸಗಳು ಈಗ ಕಾಣಬರುತ್ತಿಲ್ಲ. ಅದಿಷ್ಠಾನದ ಮೇಲಕ್ಕೇರಿ ಹೋಗಲು ಉತ್ತರದ (ಪ್ರಮುಖ ಪ್ರವೇಶ) ಮತ್ತು ಪೂರ್ವದ ಪಾರ್ಶ್ವಗಳಿಗೆ ಹೊಂದಿಕೊಂಡಂತೆ, ಕ್ರಮವಾಗಿ ಎರಡು ಕಡೆ ಮತ್ತು ಒಂದು ಕಡೆ ಮೆಟ್ಟಿಲುಗಳ ಏರ್ಪಾಟುಗಳನ್ನು ಈಗಲೂ ನೋಡಬಹುದು. ಅಲ್ಲದೆ ದಕ್ಷಿಣದ ಕಡೆಯಿಂದ, ಬಹುಶಃ ರಾಜನ ಮತ್ತು ಆತನ ಆಪ್ತಪರಿವಾರದವರ ಉಪಯೋಗಕ್ಕಾಗಿಯೇ ನಿರ್ಮಿತವಾಗಿದ್ದಿರಬಹುದಾದ, ಬಹು ಎತ್ತರಕ್ಕೆ ಕೊಂಡು ಹೋಗುವ (ಈಗ ಕಾಣಬರುವ ಅಳಿದುಳಿದಿರುವ ಮೆಟ್ಟಿಲುಗಳು ೪.೫ ಮೀಟರು ಎತ್ತರದವರೆಗಿವೆ) ಸೋಪಾನಗಳನ್ನು ನೋಡಬಹುದು. ಬಹುಶಃ ಅವು ರಾಜನು ಆಸೀನವಾಗಿರುತ್ತಿದ್ದ ಉಪ್ಪರಿಗೆ ಕೈಸಾಲೆ (balcony) ವರೆಗೆ ನಿರ್ಮಿತವಾಗಿದ್ದಿರಬೇಕು. ಆ ಎಲ್ಲಾ ಸೋಪಾನ ವ್ಯವಸ್ಥೆಗಳು ಆಧುನಿಕ ದುರಸ್ತಿ ಕಾರ್ಯಾಚರಣೆಗಳ ಸಮಯದಲ್ಲಿ ಬಹುವಾಗಿ ವ್ಯತ್ಯಾಸಗೊಂಡಿರುವ ಸಾಧ್ಯತೆಗಳೂ ಇವೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಈ ಕಟ್ಟಡದ ಹೊರಮೈಯ ಭಾಗದ ಕಲ್ಲುಗಳು, ರಾಜನ ಅಭಿರುಚಿಗನುಗುಣವಾಗಿ ಬಹು ನುಣುಪಾಗಿಸಿ ಕಡೆದು ನಿರ್ಮಿಸಲಾದವುಗಳಾಗಿವೆಯಲ್ಲದೆ, ಒಂದು ವಿಶಿಷ್ಟ ಅಲಂಕಾರದ ವಿನ್ಯಾಸವನ್ನು ಹೊಂದಿರುವ ಆಕರ್ಷಕ ಅಧಿಷ್ಟಾನವಾಗಿದೆ.

ಆ ಸ್ಮಾರಕ ಕಟ್ಟಡದ ಅಕ್ಕಪಕ್ಕಗಳಲ್ಲಿ ಕಪ್ಪು ಹಸಿರು ಕಲ್ಲಿನಲ್ಲಿ (chlorite schist) ನಿರ್ಮಾಣವಾಗಿದ್ದು, ಆದರೆ ಈಗ ವಿಕೃತವಾಗಿರುವ ವಾಸ್ತು ಶಿಲ್ಪ ಭಾಗಗಳು, ಹಾಳಾಗಿರುವ ನಾಲ್ಕಾರು ಚಿಕ್ಕ ಮಂಟಪಗಳ ವೇದಿಕೆಗಳ ಅವಶೇಷಗಳು, ವಿವಿಧ ಆಕಾರ ಮತ್ತು ಪ್ರಮಾಣಗಳ ನೀರು ಶೇಖರಣೆ ವ್ಯವಸ್ಥೆಗಳು ನೀರು ಸರಬರಾಜಿಗೆ ಉಪಯೋಗವಾಗುತ್ತಿದ್ದ ಸುಟ್ಟ ಮಣ್ಣಿನ ಕೊಳವೆಗಳು ೧೨ ಮೀಟರು ಉದ್ದದ ಏಕಶಿಲಾ ನಿರ್ಮಿತ ನೀರಿನ ತೊಟ್ಟಿ, ಪ್ರವೇಶದ್ವಾರಗಳ ಶೇಷ ಭಾಗಗಳು ಮತ್ತಿತರ ಪುರಾತತ್ವ ಅವಶೇಷಗಳ ಲಭ್ಯತೆಯನ್ನು ಪರಿಗಣಿಸಿದಾಗ, ಅರಮನೆ ಪ್ರವೇಶದ ಈ ಕಟ್ಟಡವು ಹಿಂದೆ ಬಹು ಪ್ರಾಮುಖ್ಯವಾದುದಾಗಿತ್ತು ಮತ್ತು ರಾಜ ಪ್ರೋತ್ಸಾಹ ಮತ್ತು ಪೋಷಣೆಗಳಿಂದಾಗಿ, ರಾಜ ಪ್ರೇರಿತ ವಿವಿಧ ಚಟುವಟಿಕೆಗಳ ಕೇಂದ್ರವಾಗಿತ್ತೆಂದು ತರ್ಕಿಸಬಹುದಾಗಿದೆ. ಆ ಎಲ್ಲಾ ಕಾರಣಗಳಿಂದಾಗಿ ಅದು ಹಿಂದಿನ ಕಾಲದಲ್ಲಿ ರಾಜವೈಭವದಿಂದ ವಿಜೃಂಭಸುತ್ತಿದ್ದ ಕಟ್ಟಡಗಳಲ್ಲೊಂದಾಗಿತ್ತೆಂದು ಹೇಳಬಹುದು.

ಮೇಲಿನ ವಿಷಯವನ್ನು ಸಮರ್ಥಿಸುವಲ್ಲಿ ಸಮಕಾಲೀನ ವಿದೇಶಿ ಪ್ರವಾಸಿಗರು ವಿಜಯನಗರವನ್ನು ಸ್ವತಃ ಸಂದರ್ಶಿಸಿ ದಾಖಲಿಸಿರುವ ವಿವರಣೆಗಳೂ ಸಹಾಯಕ್ಕೆ ಬರುತ್ತವೆ. ಅವರುಗಳಲ್ಲಿ ಪರ್ಶಿಯಾ ದೇಶದ ರಾಯಭಾರಿ ಅಬ್ದುಲ್‌ರಜಾಕ್‌, ಪೋರ್ಚುಗಲ್‌ದೇಶದವರಾದ ದುಆರ್ತೆ ಬಾರ್ಬೊಸಾ, ಡೊಮಿಂಗೋ ಪಾಯೆಸ್‌, ಫರ್ನಾವೋ ನೋನಿಜ್‌ರ ಬರವಣೆಗೆಗಳು ಪ್ರಮುಖವಾದವುಗಳಾಗಿವೆ. ರಾಜನ ಆ ಓಲಗ ಶಾಲೆಯನ್ನು, ‘Hall of Victory’ ಎಂದು ಕರೆಯಲಾಗಿತ್ತೆಂದು ಡೊಮಿಂಗೋಪಾಯಸನು ಹೇಳಿ ಅದು ಅನೇಕ ಸ್ತಂಭಗಳನ್ನು ಹೊಂದಿದ್ದ, ಹೊರಗೋಡೆಗಳಿಲ್ಲದ, ಆದರೆ ಎಲ್ಲಾ ಪಾಶ್ವಗಳಲ್ಲಿ ಎತ್ತರದಿಂದ ಇಳಿಬಿಟ್ಟ ಬಣ್ಣ ಬಣ್ಣಗಳಿಂದ ರಂಜಿತ ಪರದೆಗಳ ಏರ್ಪಾಟುಗಳಿಂದ ಹೊಂದಿದ್ದ, ಹೊರಗೋಡೆಗಳಿಲ್ಲದ, ಮತ್ತಿತರ ವೈಭಯುಕ್ತ ಅಲಂಕಾರಗಳಿಂದ ಮನೋಹರವಾಗಿ ನಿರ್ಮಿತವಾದುದಾಗಿತ್ತೆಂದು ವಿವರಿಸಿರುತ್ತಾನೆ. ಅಲ್ಲಿ ವ್ಯವಸ್ಥೆಗೊಳಿಸಲಾಗಿದ್ದ ಸ್ತಂಭಗಳೋ, ಆನೆ, ಸಿಂಹ ಮುಂತಾದವುಗಳನ್ನು ಹೋಲುವ ಮತ್ತು ಕಾಲದಲ್ಲಿ ಪ್ರಚಲಿತದಲ್ಲಿದ್ದ ಆಕರ್ಷಕ ವಾಸ್ತು ಶಿಲ್ಪಶೈಲಿಯ ಕೆತ್ತನೆಗಳಿಂದ ಕೂಡಿದ್ದವು. ಅದು ಉನ್ನತವಾದ ಕಟ್ಟಡವಾಗಿದ್ದುದರಿಂದ ಮೇಲೇರಿ ಹೋಗಲು ಅವಶ್ಯಕವಾದ ಸೋಪಾನಗಳ ಏರ್ಪಾಟುಗಳು ಇದ್ದವು. ಆ ಭವ್ಯವಾದ ವಾಸ್ತು ರಚನೆಯನ್ನು (ಕೃಷ್ಣದೇವರಾಯನು) ಓರಿಯಾ ರಾಜ್ಯದ ಮೇಲೆ ಸಾಧಿಸಿದ ವಿಜಯದ ಜ್ಞಾಪಕಾರ್ಥವಾಗಿ, ವಿಶೇಷ ಸಂತೋಷದಿಂದ ನಿರ್ಮಿಸಿದ್ದುದರಿಂದಾಗಿ, ‘House of Victory’ (ಭುವನ ವಿಜಯ) ಎಂದು ಕರೆಯಲಾಗುತ್ತಿತ್ತು. ಆ ಮಂಟಪದಲ್ಲಿ, ರಾಜನ ಆಸನವು ಅಲ್ಲಿ ಜರುಗುತ್ತಿದ್ದ ಕಾರ್ಯಕಲಾಪಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ಬಹುಶಃ ದಕ್ಷಿಣದ ಕೊನೆಯಲ್ಲಿ, ಎತ್ತರದಲ್ಲಿ ನಿರ್ಮಿತವಾಗಿತ್ತು. ಆ ಸಭಾಮಂಟಪದಲ್ಲಿ, ರಾಯನು ಪ್ರತಿ ದಿನ ಬೆಳಿಗ್ಗೆ, ಆಸೀನನಾಗಿ ಮಂತ್ರಿ, ಅಮಾತ್ಯರು, ದಂಡನಾಯಕರು, ಮಂಡಲಾಧಿಪರು, ಪ್ರಜಾ ಪ್ರಮುಖರು ಮುಂತಾದವರೊಡನೆ ರಾಜ್ಯಾಡಳಿತಕ್ಕೆ ಸಂಬಂಧಿಸಿದ ಮತ್ತಿತರ ವಿಷಯಗಳ ಕುರಿತು ಸಮಾಲೋಚನೆ ನಡೆಸುತ್ತಾ ಒಡ್ಡೈಸುತ್ತಿದ್ದನೆಂದು ಮುಂತಾಗಿ ದಾಖಲಿಸಿರುತ್ತಾರೆ. ಈಗ ಕಾಣಬರುವ ಆ ಮಹಾಸಭಾಮಂಟಪವು ವಿಜಯನಗರದ ಸ್ಥಾಪನೆ ಕಾಲದಿಂದಲ್ಲದಿದ್ದರೂ ಒಂದು ಮಿತ ಪ್ರಮಾಣದಲ್ಲಿ ಪರ್ಶಿಯಾ ದೇಶದ ಅಬ್ದುಲ್‌ರಾಜಕನು ಸಂದರ್ಶಿಸಿದ ವರ್ಷ ಕ್ರಿ.ಶ.೧೪೪೨ರಿಂದಲೇ ಅಸ್ತಿತ್ವದಲ್ಲಿದ್ದುದು ಖಚಿತವಾಗಿ ತಿಳಿದುಬರುತ್ತದೆ. ಅವನು ಬರೆದಿಟ್ಟಿರುವ ಪ್ರಕಾರ ಅದು ಅರಮನೆಯೋಪಾದಿಯಲ್ಲಿ ಕಾಣುವ ಬಹು ದೊಡ್ಡ, ಎತ್ತರವಾದ, ರಾಜ ವೈಭವಗಳಿಂದ ಕೂಡಿದ್ದ ದಿವಾನ ಖಾನೆಯಾಗಿತ್ತು.

ಈಗ ಸಮಕಾಲೀನ ಕನ್ನಡ ಸಾಹಿತ್ಯ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಒಂದೆರಡು ಪ್ರಸಂಗೋಚಿತ ವಿವರಣೆಗಳನ್ನು ಪರಿಶೀಲಿಸೋಣ. ಅವುಗಳನ್ನು ರಚಿಸಿದ ಕವಿಗಳು, ಆಗಲೇ ಬಹುವಾದ ಪ್ರಸಿದ್ಧಿ, ಪ್ರತಿಷ್ಠೆ ಮತ್ತು ಪ್ರಚಾರಗಳನ್ನು ಪಡೆದಿದ್ದ ಆ ವಿಜಯನಗರ ಮಹಾಪಟ್ಟಣ ಅಥವಾ ಇನ್ನಾವುದೇ ಸಮಕಾಲೀನ ಪ್ರಮುಖ ನಗರವನ್ನು ಮತ್ತು ಅಲ್ಲಿ ಸಾಮ್ರಾಟರಿಂದ ಅಥವಾ ಸಾಮಂತರಿಂದ, ಪೋಷಿತ, ವೈಭವಾಡಂಬರಗಳಿಂದ ವಿಜೃಂಭಸುತ್ತಿದ್ದ ಕಾರ್ಯಕಲಾಪಗಳನ್ನು ನೋಡಿ ಅಥವಾ ಕೇಳಿ ತಿಳಿದು ಪ್ರಭಾವಿತರಾಗಿದ್ದಿರಬೇಕು. ತತ್ಪರಿಣಾಮವಾಗಿ, ಅವರ ಕಾವ್ಯ ಗ್ರಂಥಗಳಲ್ಲಿ, ವಿಶೇಷ ಕುತೂಹಲಕಾರಿಯಾದ ವಿವರಣೆಗಳಿಂದ ಕೂಡಿರುವ ಚಿತ್ರಣವು ಕಾಣಬರುತ್ತದೆ. ಇಲ್ಲಿ ದೇವರಾಜನ ಸೊಬಗಿನ ಸೋನೆ, ಕನಕದಾಸರ ‘ಮೋಹನ ತರಂಗಿಣಿ’, ರತ್ನಾಕರ ವರ್ಣಿಯ ‘ಭರತೇಶ ವೈಭವ’ ಎಂಬ ಗ್ರಂಥಗಳಲ್ಲಿ ಬರುವ, ವಿಜಯನಗರ ಕಾಲಕ್ಕೆ ಸಂಬಂಧಿಸಿದ ವಿಶೇಷ ವರ್ಣನೆಗಳನ್ನು ಗಮನಿಸಬೇಕಾಗುತ್ತದೆ. ಎಂದರೆ ಆ ಗ್ರಂಥ ರಚನಾಕಾರರು, ತಮ್ಮ ಗ್ರಂಥಗಳ ವಿಷಯಕ್ಕೆ ಪ್ರಸಂಗಗಳಿಗೆ ಅನುಗುಣವಾಗುವಂತೆ ತಮ್ಮ ಅನುಭವ ಅಥವಾ ತಿಳುವಳಿಕೆಗಳನ್ನು ಅಳವಡಿಸಿಕೊಂಡು ವಿಸ್ತಾರವಾದ ವಿವರಣೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಎಂದರೆ, ವಿಜಯನಗರ ಸಾಮ್ರಾಟರ ಓಲಗ ಶಾಲೆಯನ್ನು ಕುರಿತಂತೆ ನೇರವಾಗಿ ಪ್ರಸ್ತಾಪಿಸಿರುವುದಿಲ್ಲವಾದರೂ, ಪ್ರಸ್ತುತದಲ್ಲಿ ಆ ವಿವರಣೆಗಳು ಪ್ರಸಂಗೋಚಿತ ಹಾಗೂ ಉಪಯುಕ್ತ ಎಂಬುದು ವ್ಯಕ್ತವಾಗುತ್ತದೆ.

ಬಾಹುಬಲಿ ಪಂಡಿತನು ತನ್ನ ಕವಿತಾಗ್ರಂಥ, ‘ಧರ್ಮನಾಥಪುರಾಣ’, (೧೪ನೇ ಶತಮಾನ)ದಲ್ಲಿ ರಾಜನ ಓಲಗ ಶಾಲೆಯನ್ನು ಮಹಾಮಂಡಪ, ಸಭಾಮಂಡಪ, ಸಭಾಸದನ, ಆಸ್ಥಾನರಂಗಂ, ಧರಣೀಶನೋಲಗದ ಶಾಲೆ, ಎಂದು ಮುಂತಾಗಿ ಕರೆದಿರುತ್ತಾನೆ. (ಬಾಹುಬಲಿ) ವಿರಚಿತ ‘ಧರ್ಮನಾಥ ಪುರಾಣ’, ಸಂಪಾದಕ: ಎನ್‌.ಬಸವರಾಧ್ಯ, ಮೈಸೂರು ವಿಶ್ವವಿದ್ಯಾಲಯ ೧೯೭೫, ಆಶ್ವಾಸ-೬ ಪುಟ ೧೦೯ ಮತ್ತು ಅದು ವಿಶಾಲವಾಗಿದ್ದು ಕೆಂಪು ಕಲ್ಲಿನ ಅಥವಾ ಹರಳುಗಳಿಂದಲಂಕರಿಸಿದ ಕಂಬಗಳ ಸಾಲುಗಳಿಂದ, ಹರಿನೀಳಗಳಿಂದ ಶೋಭಿಸುವ ವಿಸ್ತಾರವಾದ ಗೋಡೆಗಳಿಂದ, ಅಲ್ಲಲ್ಲಿಗೆ ಮುತ್ತುಗಳ ಗೊಂಡೆ, ಕುಚ್ಚುಗಳು ಹಾಗೂ ಹೊಳೆಯುತ್ತಿರುವ ಪುತ್ಥಳಿಗಳಿಂದ, ಮನೋಹರಕ ವ್ಯವಸ್ಥೆಗೊಂಡಿದ್ದು ಸದಾ ಥಳಥಳಿಸುತ್ತಿತ್ತೆಂದು ವಿವರಿಸುತ್ತಾನೆ (ಆಶ್ವಾಸ ೬, ಪದ್ಯ ೨ ರಿಂದ ೪ ಪುಟ ೧೦೯-೧೧೦), ಅಲ್ಲದೆ ಸಭಾಮಂಟಪದಲ್ಲಿ ಕರ್ಪೂರದ ಹುಡಿಯನ್ನು ಅಪರಿಮಿತತೆಯಿಂದ ಹರಡಿ, ಸುವಾಸನಾಯುಕ್ತ, ಆಹ್ಲಾದಕರ ಪರಿಸರವನ್ನು ನಿರ್ಮಿಸಲಾಗಿತ್ತು. ಮತ್ತು ಆ ಓಲಗ ಶಾಲೆಯಲ್ಲಿ, ಧರಣೀಶನ ಉಪಯೋಗಕ್ಕಾಗಿಯೇ ಕನಕಮಯವಾದ ಸಿಂಹಾಸನವನ್ನು ಇರಿಸಲಾಗಿತ್ತು. ರಾಜನ ಆ ಓಡ್ಲೋಲಗದಲ್ಲಿ ಆಸೀನರಾಗಿರುತ್ತಿದ್ದ ಮಂತ್ರಿಗಳು, ಪ್ರತಿಷ್ಠಿತರು, ಅಧಿಕಾರಿಗಳು, ಪರಿಚಾರಕರು ಮತ್ತಿತರು, ಅವರಿಗಾಗಿ ಏರ್ಪಡಿಸಲಾಗಿರುತ್ತಿದ್ದ ಪೀಠೋಪಕರಣ ವ್ಯವಸ್ಥೆಗಳು, ಅಲ್ಲಿ ಜರುಗುತ್ತಿದ್ದ ಕಾರ್ಯಕಲಾಪಗಳು ಮುಂತಾದ ವಿವರಗಳು ಈ ಲೇಖನದಲ್ಲಿ ಅಪ್ರಸ್ತುತ.

ಈಗ ಪ್ರಸ್ತುತ ವಿಷಯಕ್ಕೆ ಬಹು ಉಪುಯಕ್ತವಾದ ಸಮಕಾಲೀನ ಕನ್ನಡ ಸಾಹಿತ್ಯ ಗ್ರಂಥವೆಂದರೆ, ಕನ್ನಡದ ಪ್ರಸಿದ್ಧ ಕವಿಗಳಲ್ಲೊಬ್ಬರು ಲಕ್ಷ್ಮೀಶ ಕವಿಯು ರಚಿಸಿರುವ ‘ಜೈಮಿನಿ ಭಾರತ’ವೆಂಬ ಕವಿತಾಗ್ರಂಥವು ಕವಿಯ ಜೀವಿತಕಾಲವು ೧೪-೧೫ನೇ ಶತಮಾನವಾಗಿರಬೇಕೆಂದು ಮತ್ತು ಆತನು ಈಗಿನ ಚಿಕ್ಕಮಗಳೂರು ಜಿಲ್ಲೆಗೆ ಸೇರಿರುವ ದೇವನೂರು ಎಂಬ ಗ್ರಾಮದಲ್ಲಿ ವಾಸವಾಗಿದ್ದು ಗ್ರಂಥರಚನೆ ಮಾಡಿರಬೇಕೆಂದು ವಿಮರ್ಶಕರಿಂದ ಹೇಳಲಾಗುತ್ತದೆ. ಆ ಗ್ರಂಥದ ೧೭ನೇ ಸಂಧಿಯ, ಪದ್ಯ ೨೨ರಿಂದ ೨೭ರ ವರೆಗೆ ವರ್ಣಿತವಾಗಿರುವ ವಿವರಗಳನ್ನಾಧರಿಸಿ, ರಾಜನ ಓಲಗ ಶಾಲೆಯು ಒಂದು ಆಕರ್ಷಕ ಕಲಾ ಸಂಗ್ರಹಾಲಯದೋಪಾದಿಯಲ್ಲಿ ವ್ಯವಸ್ಥೆಗೊಳಿಸಲಾಗಿತ್ತೆಂದು ವಿಶ್ಲೇಷಿಸಿ ಹೇಳಬಹುದು. ಇಲ್ಲಿ ಕೊಡಲಾಗಿರುವ ವಿವರಣೆಗಳೆಲ್ಲವೂ ಒಬ್ಬ ರಾಜನ (ಕಥಾ ಪ್ರಸಂಗದಲ್ಲಿ, ಬಬ್ರುವಾಹನ) ಸಭಾಸ್ಥಾನ (ಓಲಗಮಂಟಪ – audience hall)ದಲ್ಲಿ ಕಾಣಬರುತ್ತಿದ್ದ ವ್ಯವಸ್ಥೆಗಳನ್ನು ಕುರಿತು ವರ್ಣಿಸಿದವುಗಳಾಗಿರುತ್ತವೆ.

ನಮ್ಮ ನಾಡಿನ ಪೂರ್ವಕಾಲದ ಕಾವ್ಯ ಗ್ರಂಥದಲ್ಲಿ ಸಾಮಾನ್ಯವಾಗಿ ಕಾಣಬರುವ ಉತ್ಪ್ರೇಕ್ಷಿತ ವರ್ಣನೆಗಳು ಈ ಗ್ರಂಥಗಳಲ್ಲಿಯೂ ಇವೆಯಾದರೂ ಅವುಗಳಿಗೆ, ಹೆಚ್ಚಿನ ಗಮನ ಕೊಡದೆ ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದ ಮೂಲ, ಸೂಚಿತ ಮತ್ತು ವಿವಕ್ಷಿತ ಅಂಶಗಳನ್ನು ಮಾತ್ರ ಪರಿಗಣಿಸಿ ವಿಶ್ಲೇಷಿಸಿ ನಿವೇದಿಸಲಾಗಿದೆ. ಲಕ್ಷ್ಮೀಶನು ವಿವರಿಸಿರುವ ನಿವೇಶನವು ಹತ್ತು ಸಾವಿರ ಕಂಬಗಳಿಂದ ಕೂಡಿದ್ದು, ಬಹು ವಿಶಾಲವಾದ ಮತ್ತು ಅನುಕೂಲವಾದ (“…. ಪತ್ತು ಸಾಸಿರ ಕಂಬದೆಸ ಕದಾಸ್ಥಾನಮಂಟಪ…”) ಚೌಕಾಕಾರದ ರಾಜನ ಓಲಗ ಮಂಟಪವಾಗಿತ್ತು (“…. ಚೌರಸದ ಚಾವಡಿ…”) ಆ ಕಾರಣದಿಂದಾಗಿ ಅದನ್ನು ರಾಜನ ಅಭಿರುಚಿಗನುಗುಣವಾಗಿ ನಿರ್ಮಿಸಿ ಮತ್ತು ವಿಶೇಷವಾಗಿ ಅಲಂಕರಣಗೊಳಿಸಲಾಗಿತ್ತು. ಎಂದರೆ, ಗ್ರಂಥದಲ್ಲಿ ವಿವರಿಸಿರುವಂತೆ ಅದರ ನೆಲೆಗಟ್ಟನ್ನು ಅಮೃತ ಶಿಲೆಯಿಂದ ನಿರ್ಮಿಸಲಾಗಿತ್ತು; ಜಗುಲಿಯನ್ನು ಮರಕತ (ಹಸಿರು ರತ್ನ)ಗಳಿಂದ, ಗೋಡೆಗಳನ್ನು ನೀಲರತ್ನಗಳಿಂದ, ಕಂಬಗಳನ್ನು ವಜ್ರಗಳಿಂದ, ಮದನಕ್ಕೆಗಳನ್ನು ಹೊಳೆಯುವ ವೈಢೂರ್ಯಗಳಿಂದ, ಬೋದಿಗೆಗಳನ್ನು ಗೋಮೇದಿಕ ರತ್ನಗಳಿಂದ, ತೊಲೆಗಳನ್ನು ಪುಷ್ಯರಾಗಗಳಿಂದ, ಲೋವೆಗಳನ್ನು ಹೊಳೆಯುವ ಮಾಣಿಕಗಳಿಂದ ಅಲಂಕರಿಸಲಾಗಿತ್ತು ಮತ್ತು ಮುತ್ತುಗಳ ಗೊಂಡೆ, ಕಟ್ಟುಗಳಿಂದ ಬಂಗಾರದ ತಗಡಿನ ಹೊದಿಕೆಯಿಂದ ಆ ಓಲಗ ಮಂಟಪವು (ಚಾವಡಿಯು) ರಂಜಿಸುತ್ತಿತ್ತು (ಸಂಧಿ ೧೭, ಪದ್ಯ ೨೩). ಇಲ್ಲಿ ಉತ್ಪ್ರೇಕ್ಷೆಗಳಿಂದ ಕೂಡಿರುವ ವರ್ಣನೆಗಳನ್ನು ಕಡೆಗಣಿಸಿ, ಆ ನಿವೇಶನವು ಒಂದು ವಿಶಾಲವಾದ, ಸೂಕ್ತವಾದ ಮತ್ತು ರಮಣೀಯವಾದ ಓಲಗ ಮಂಟಪವಾಗಿತ್ತೆಂದು ಮಾತ್ರ ಗ್ರಹಿಸಬೇಕು ಎಂದರೆ ಅದು ವಿಚಾರ ಮಾಡದೇ ಅಡ್ಡಾದಿಡ್ಡಿಯಾಗಿ ನಿರ್ಮಿತವಾದ ನಿವೇಶನವಾಗಿರಲಿಲ್ಲ. ಇಲ್ಲಿ ಆರಂಭದಲ್ಲಿ ವಿವರಿಸಲಾಗಿರುವ ಹಂಪೆಯ ನೂರು ಕಂಬಗಳ ಚತುರಾಕಾರದ ಓಲಗಶಾಲೆಯ ವಿನ್ಯಾಸವನ್ನು ಸ್ಮರಿಸಿಕೊಳ್ಳಬಹುದು.

ಅಲ್ಲಿ ಪ್ರದರ್ಶಿತ ಕಲಾಕೃತಿಗಳು

೧. “…. ಮಿಸುಪ ಪ
ವಳದ ಪುತ್ಥಳಿ ಪೊನ್ನ ಪೊದಕೆ ರಂಜಿಸಿತು ಚಾವಡಿಯು
ಚೌರಸದೆಡೆಯೋಳು ||೨೩||
ಸಜ್ಜುಕಂ ಮುಡಿವ ತಿಲಕಮ ನಿಡುವ ಮೊಗಮುರಿವ |
ಕಜ್ಜಳಂ ಬರೆವ ಕನ್ನಡಿಯ ನಿಟ್ಟಿಪ ಪಾಡು |
ವುಜ್ಜುಗಲ ನರ್ತನದ ಕೋಪುಗಳ ವೀಣಾದಿ ವಾದ್ಯಮಂ ಬಿತ್ತರಿಸುವ ||
ಕಜ್ಜದ ಪಲವು ಕಲೆಗಳಂ ತೋರುವಭಿನವದ |
ಸಜ್ಜೀವ ಮಾಗಿರ್ದ ಪುತ್ಥಳಿಗಳ ವಯವದ |
ಪಜ್ಜಳಿಪ ನವರತ್ನ ಭೂಷಣದ ಕಾಂತಿಗಳಕ್ಕಣ್ಗೆಸೆದುವಾ ಸಭೆಯೊಳು ||೨೪||

ರಾಜನ ಆ ಸಭಾಸ್ಥಾನದಲ್ಲಿ ಏರ್ಪಡಿಸಲಾಗಿದ್ದ ಕಲಾಕೃತಿಗಳಲ್ಲಿ ಬಹುಮುಖ್ಯವಾದವುಗಳೆಂದರೆ ಲೋಹಗಳಿಂದ ಮಾಡಲಾದ ಬೊಂಬೆಗಳು ಅಥವಾ ಪುತ್ಥಳಿಗಳು. ಬಹುಶಃ ಆಗ ಪ್ರಚಲಿತದಲ್ಲಿದ್ದ ಪದ್ಧತಿಯ ಪ್ರಕಾರ, ಕಂಚು, ತಾಮ್ರ ಅಥವಾ ಹಿತ್ತಾಳೆ ಲೋಹಗಳಲ್ಲಿ ಎರಕಹೊಯ್ಯುವ ಕ್ರಮದಲ್ಲಿ ಅವು ತಯಾರಾದವುಗಳಾಗಿರಬೇಕು. ಅವುಗಳೆಲ್ಲವೂ ಸುಂದರ ಸ್ತ್ರೀರೂಪದ ಬೊಂಬೆಗಳಾಗಿದ್ದು, ಸಜೀವವಾಗಿದ್ದವುಗಳಂತೆ ವಿವಿಧ ರೀತಿಯಲ್ಲಿ ಕಾಣಿಸುತ್ತಿದ್ದವು. ಎಂದರೆ, ಅವುಗಳನ್ನು ಅಷ್ಟೊಂದು ಕುಶಲತೆಯಿಂದ ಮತ್ತು ಬೇರೆ ಬೇರೆ ಭಾವನೆ, ಭಂಗಿಗಳನ್ನು ಪ್ರಕಟಪಡಿಸುತ್ತಿರುವಂತೆ ತಯಾರಿಸಲಾಗಿತ್ತು. ಅವುಗಳಲ್ಲಿ ಓರ್ವಳು ಹೂವುಗಳಿಂದ ತನ್ನ ಮುಡಿಯನ್ನು ಅಲಂಕರಿಸಿಕೊಳ್ಳುವ ಭಂಗಿಯಲ್ಲಿದ್ದರೆ, ಇತರರು ಹಣೆಯ ಮೇಲೆ ಕುಂಕುಮದ ತಿಲಕವನ್ನು ಇಟ್ಟುಕೊಳ್ಳುವಂತೆ, ವೈಯ್ಯಾರದಿಂದ ಮೊಗಮುರಿದು ತಿರುಗಿ ನಿಂತಿರುವಂತೆ, ಕಣ್ಣಿಗೆ ಕಾಡಿಗೆಯನ್ನು ಹಚ್ಚಿಕೊಳ್ಳುತ್ತಿರುವಂತೆ, ಕನ್ನಡಿಯಲ್ಲಿ ಮುಖವನ್ನಿಟ್ಟು ನಿಟ್ಟಿಸಿ ನೋಡುತ್ತಿರುವಂತೆ ಅಥವಾ ಮೆಲ್ಲಗೆ ಹಾಡೊಂದನ್ನು ಗುನುಗುನಿಸುತ್ತಿರುವಂತೆ, ಹೀಗೆ ನಾನಾ ವಿವಿಧ ಕ್ರಿಯೆ ಮತ್ತು ಭಂಗಿಗಳಲ್ಲಿ ನಿರಾತರಾಗಿದ್ದವಂತೆ ಕಾಣಬರುತ್ತಿದ್ದವು. ಮತ್ತೆ ಕೆಲವು, ಶಾಸ್ತ್ರೀಯ ನರ್ತನದ ಪ್ರದರ್ಶನಾ ಸಮಯದಲ್ಲಿ ಹಾಗೂ ಕೊನೆಯಲ್ಲಿ ತೋರಿಸುವ ಭಾವಾಭಿನಯಗಳನ್ನು ಪ್ರಕಟಪಡಿಸುವ ಭಂಗಿಗಳಲ್ಲಿ ಇದ್ದವು. ಇನ್ನೂ ಹಲವು ವೀಣೆ, ಮುಂತಾದ ವಾದ್ಯ ವಿಶೇಷಗಳನ್ನು ನುಡಿಸುವುದರಲ್ಲಿ ತಲ್ಲೀನರಾಗಿರುವಂತೆ ಕಾಣಿಸುತ್ತಿದ್ದವು. ಅಲ್ಲದೆ, ಆ ಪುತ್ಥಳಿಗಳೆಲ್ಲವೂ ನವರತ್ನ ಖಚಿತವಾದ ಆಭರಣಗಳಿಂದ ಅಲಂಕೃತವಾಗಿದ್ದು ಬಹು ಆಕರ್ಷಣೀಯವಾಗಿದ್ದವು. ಹೀಗೆ, ಆ ಸುಂದರ ಪುತ್ಥಳಿಗಳು ನಾನಾ ವಿಧದ ಕಲಾಪ್ರಕಾರಗಳನ್ನು ಪ್ರಕಟಪಡಿಸಿ, ನಿವೇದಿಸುತ್ತಿರುವಂತೆ ಮತ್ತು ಸಜೀವವಾಗಿಯೇನೋ ಎಂಬಂತೆ ನಿರ್ಮಾಣಗೊಂಡವುಗಳಾಗಿದ್ದವು. ಆ ನಿವೇಶನವು ಮುಖ್ಯವಾಗಿ ರಾಜಸಭಾ ಭವನವಾಗಿದ್ದುದರಿಂದ ಆ ಪುತ್ಥಳಿಗಳೆಲ್ಲವೂ, ಒಳಗಿನ ಗೋಡೆಗಳಿಗೆ ಅಥವಾ ಸ್ತಂಭಗಳಿಗೆ ಹೊಂದಿಕೊಂಡಂತೆ ಸೂಕ್ತ ಪೀಠಗಳ ಮೇಲೆ ಪ್ರದರ್ಶಿತವಾಗಿದ್ದಿರಬೇಕು.

ಅವುಗಳಲ್ಲದೆ ಪ್ರತಿ ಸ್ತಂಭಕ್ಕೆ ಹೊಂದಿಕೊಂಡಂತೆ ವೈಡೂರ್ಯಗಳಿಂದ ಅಲಂಕಾರಗೊಂಡಿದ್ದ ಮದನ ಕೈಗಳು (bracket figures) ಸಹ ಅಲ್ಲಿ ಶೋಭಿಸುತ್ತಿದ್ದವೆಂದು ಕವಿಯು ತಿಳಿಸಿರುತ್ತಾನೆ.

೨.   ಅಂಚೆಗಳ್ಕೊಳರ್ವಕ್ಕಿಗ ಳ್ಜೊನ್ನವಕ್ಕಿಗ |
ಳ್ವಿಂಚೆಗಳ್ಗಿಳಿಗ ಳೆಣೆವಕ್ಕಿಗ ಳ್ಪರಮೆಗ |
ಳ್ಕೊಂಚೆಗೆ ಳ್ಕೋಗಿಲೆಗ ಳಲ್ಲಲ್ಲಿಗೊಪ್ಪಿದುವು ಸಜೀವ ಭಾವದಿಂದ …. ||೨೫||

ಮೇಲೆ ವಿವರಿಸಿದ ಕಲಾತ್ಮಕ ಪುತ್ಥಳಿಗಳಲ್ಲದೆ, ಅದೇ ಸಭಾಭವನದಲ್ಲಿ ಬಹು ಜಾಣ್ಮೆಯಿಂದ ತಯಾರಿಸಲಾಗಿದ್ದ ವಿವಿಧ ಪಕ್ಷಿ ಸಂಕುಲದ ಪ್ರತಿಕೃತಿಗಳು ಸಹ ಪ್ರದರ್ಶಿತವಾಗಿದ್ದವು. ಅವು ಕೂಡಾ ಜೀವಂತ ಪಕ್ಷಿಗಳೇನೋ ಎಂದು ಭಾಸವಾಗುವಂತೆ ಬಹುವಾದ ಕುಶಲತೆಯಿಂದ ತಯಾರಿಸಲ್ಪಟ್ಟವುಗಳಾಗಿದ್ದವು. ಅವುಗಳಲ್ಲಿ, ಅಂಚೆಗಳು, ಕೊಳರ್ವಕ್ಕಿಗಳು, ಚಕೋರಗಳು, ನವಿಲುಗಳು, ಗಿಳಿಗಳು, ಚಕ್ರವಾಕಗಳು, ಪರಮೆಗಳು ಭ್ರಮರಗಳು, ಕ್ರೌಂಚಗಳು, ಕೋಗಿಲೆಗಳೇ ಮುಖ್ಯವಾದವುಗಳಾಗಿದ್ದವು.

೩.   “…. ಪಂಚಾನನಾದಿ ಮೃಗತತಿ ಗಜಹಯಾಳಿ ವಿ |
ರಿಂಚಿ ಸೃಷ್ಟಿಯೊಳುಳ್ಳ ಮೂಜಗದ ನಾನಾ |
….. ಳೆಸಗಿರ್ದುವಾ ಸಭೆಯೊಳ್ಮ ನೋಹರ ಮೆನೆ ||೨೫||

ನಂತರ, ಅದೇ ನಿವೇಶನದಲ್ಲಿ ಪ್ರಸ್ತುತಪಡಿಸಲಾಗಿದ್ದ ಇತರ ವಸ್ತುಗಳೆಂದರೆ ವನ್ಯ ಮೃಗಗಳ ಮತ್ತು ಸಾಕುಪ್ರಾಣಿಗಳ ಪ್ರಕೃತಿಗಳಾಗಿದ್ದವು. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಸಿಂಹ, ಮತ್ತಿತರ ವನ್ಯಮೃಗಗಳು ಮತ್ತು ಸಾಕುಪ್ರಾಣಿಗಳಾದ ಆನೆ ಮತ್ತು ಕುದುರೆ ಮುಂತಾದವುಗಳು.

೪.   “….ವಿರಿಂಚ ಸೃಷ್ಟಿಯೊಳುಳ್ಳ ಮೂಜಗದ ನಾನಾ ಪ್ರ |
ಪಂಚಗಳ ಚಿತ್ರಪತ್ರಂಗಳೆಸೆದಿರ್ದುವಾ ಸಬೆಯೊಳ್ಮ ನೋಹರಮೆನೆ ||೨೫||

ಈಗ, ಅದೇ ಓಲಗಶಾಲೆಯಲ್ಲಿ ಪ್ರದರ್ಶಿತವಾಗಿದ್ದ ಬಹು ಮುಖ್ಯ ಶ್ರೇಣಿಯ ಕಲಾಕೃತಿಗಳೆಂದರೆ ವರ್ಣ ಚಿತ್ರಗಳ ಸಮೂಹವು. ಅವುಗಳೋ ಪ್ರಪಂಚದ (ಮೂರು ಜಗತ್ತಿನ) ನಾನಾ ದೇಶಗಳಿಂದ ಸಂಗ್ರಹಿಸಲ್ಪಟ್ಟಂತಹುಗಳಾಗಿದ್ದವು. ಅವು ಪತ್ರಗಳ (ಎಲೆ, ಬಟ್ಟೆ ಅಥವಾ ಕೋರೆ ಕಾಗದಗಳ) ಮೇಲೆ ನುರಿತ ಪರಿಣಿತರಿಂದ ಚಿತ್ರಿತವಾದವುಗಳಾಗಿದ್ದಿರಬೇಕು.

ಮೇಲೆ ವಿವರಿಸಿದಂತೆ ನಾಲ್ಕು ಶ್ರೇಣಿಗಳ ಕಲಾಕೃತಿಗಳು ಆ ಓಲಗ ಮಂಟಪದಲ್ಲಿ ಪ್ರದರ್ಶಿತವಾಗಿದ್ದುವೆಂದು ಖಚಿತವಾಯಿತು.

ದೀಪ ಅಥವಾ ಬೆಳಕಿನ ವ್ಯವಸ್ಥೆ

ನೀಲ ಮಣಿಕಾಂತಿಗಳ ಕತ್ತಲೆಯ ಮುತ್ತುಗಲ |
ಡಾಳಗಳ ಕೌಮುದಿಯ ಮಾಣಿಕದ ರಶ್ಮಿಗಳ |
ಬಾಲಾತಪದ ವಿದ್ರುಮಚ್ಛವಿಯ ಸಂಜೆಗಂಪಿನ ಪಗಲಿರುಳ್ಗಳಲ್ಲಿ |
ತೇಲದಿಹುವಲ್ಲದೆ ದಿವಾರಾತ್ರಿಯುಂ ಟೆಂಬ |
ಕಾಲಭೇದವನರಿಯದಾ ಮಹಾಸಭೆ ಸುರುಪ |
ನೋಲಗದ ಮಂಟಪದ ಸೌಭಾಗ್ಯಕೆಂಟುಮಡಿಯಾಗಿರ್ದುದಚ್ಚರಿಯೆನೆ ||೨೬||

ಎಂದರೆ, ಆ ಸಭಾಭವನದಲ್ಲಿ ಪರಿಣಾಮಕಾರಿಯಾದ ಬೆಳಕಿನ (ಪ್ರಕಾಶದ) ವ್ಯವಸ್ಥೆಯನ್ನು ಏರ್ಪಡಿಸುವ ದಿಸೆಯಲ್ಲಿ ನಾನಾ ವಿಧದ ವಜ್ರ ಮುಂತಾದ ಅಮೂಲ್ಯ ಹರಳುಗಳನ್ನು ಸೂಕ್ತ ರೀತಿಯಲ್ಲಿ ಅಲ್ಲಲ್ಲಿಗೆ ಅಳವಡಿಸಿದ್ದರು. ಅವುಗಳು ಹೊರಸೂಸುತ್ತಿದ್ದ ವಿವಿಧ ಮತ್ತು ನಸುಬಣ್ಣಗಳಿಂದ ಕೂಡಿದ ಹೊಳಪು, ಪ್ರಕಾಶಗಳಿಂದಾಗಿ ಆ ಶಾಲೆಯಲ್ಲಿ ಒಂದು ವಿಶಿಷ್ಟ ರೀತಿಯ, ಸೌಮ್ಯವಾದ, ಬೆಳಕಿನ ಪ್ರಕಾಶದ ಹರವು ಏರ್ಪಾಟಾಗಿ, ಬಹು ಆನಂದದಾಯಕವಾಗಿದ್ದು, ಪ್ರದರ್ಶನವನ್ನು ವೀಕ್ಷಿಸುವವರಿಗೆ ಪ್ರೋತ್ಸಾಹದಾಯಕ ವಾದುದಾಗಿಯೂ ಇದ್ದಿರಬೇಕು. ಹಾಗೆ ಜೋಡಿಸಲ್ಪಟ್ಟ ಆ ಅಮೂಲ್ಯ ಹರಳುಗಲೋ ಹಲವು, ನೀಲಮಣಿ, ಮಾಣಿಕಗಳು, ಹವಳುಗಳು, ಮುತ್ತುಗಳು ಮುಂತಾದವುಗಳಾಗಿದ್ದವು. ಇವುಗಳ ಜೊತೆಗೆ ಸೂರ್ಯನ ನೆರವಲ್ಲದ ಬೆಳಕು (ಪ್ರಕಾಶ) ಇದ್ದಿರಲೇಬೇಕಲ್ಲವೇ? ಆ ಎಲ್ಲಾ ಏರ್ಪಾಟುಗಳಿಂದಾಗಿ ಅಲ್ಲಿ ಉಂಟಾದ ಪ್ರಕಾಶದ ಸಮಗ್ರ ಪರಿಣಾಮವು ರಾತ್ರಿಯಾಗುವುದು ಎಂಬ ಭೇದವೇ ಅರಿವಿಗೆ ಬಾರದಂತಿತ್ತು. ಎಂದರೆ ಬೆಳಕಿನ ಪ್ರಕಾಶವು ಅಷ್ಟೊಂದು ಪರಿಣಾಮಕಾರಿಯೂ, ಆಹ್ಲಾದಕರವಾಗಿಯೂ ಇತ್ತು. ಅಂತಹ ಪರಿಣಾಮಕಾರಿ ವ್ಯವಸ್ಥೆಯ ಯಾವುದೇ ಕಲಾಪ್ರದರ್ಶನ ಶಾಲೆಯಲ್ಲಿ ಶ್ಲಾಘನೀಯವಾದುದಲ್ಲವೇ?

ಮೇಲಿನ ಏರ್ಪಾಟುಗಳ ಜೊತೆಗೆ ಅದೇ ಸಭಾಮಂಟಪದಲ್ಲಿ, ಅಲ್ಲಲ್ಲಿ ಕರ್ಪೂರ ತೈಲದಿಂದ ಉರಿಯುತ್ತಿದ್ದ ಕೈದೀವಿಗೆಗಳನ್ನು ದೀಪ ಲಕ್ಷ್ಮಿಗಳು ಬೊಂಬಾಳಂಗಳು ಸಹ ಅಳವಡಿಸಿದ್ದರು.

“…. ವಿಸ್ತರದ ಕರ್ಪೂರ ತೈಲದಿಂದಲ್ಲಲ್ಲಿಗುರಿವ ಬೊಂಬಾಳಂಗಳ ||
ಶಸ್ತರತ್ನಪ್ರದೀಪ ಜ್ವಾಲೆಗಳ ಸಭೆ ಸ |
ಮಸ್ತ ಸೌಭಾಗ್ಯದಿಂದೊಪ್ಪುತಿರಲಾಗ…. ||೨೭||

ಆ ದೀಪಲಕ್ಷ್ಮಿಗಳು ಸಹಾ ಹೆಚ್ಚಾದ ಪ್ರಕಾಶವನ್ನು ನೀಡುತ್ತಿದ್ದುದರ ಜೊತೆಗೆ, ನಮಗೆಲ್ಲಾ ತಿಳಿದಿರುವಂತೆ, ಕಲಾ ಪ್ರತೀಕಗಳಾಗಿಯೂ ಶೋಭಿಸುತ್ತಿದ್ದವು. ಅವುಗಳನ್ನು ಅಲ್ಲಲ್ಲಿ, ಸೂಕ್ತ ಸ್ಥಳಗಳಲ್ಲಿ, ಬಹುಶಃ ಸಾಲಾಗಿ, ಪ್ರದರ್ಶಿಸಿ ಹೆಚ್ಚಿನ ಆಕರ್ಷಣೆಯನ್ನು ಕಲ್ಪಿಸಿದ್ದರು. ಹಾಗೂ ಸುವಾಸನೆಯುಕ್ತ ವಾತಾವರಣವನ್ನು ನಿರ್ಮಿಸಲಾಗಿತ್ತು.

ಹೀಗೆ, ಕಲಾ ಪ್ರದರ್ಶನಾಲಯಗಳಲ್ಲಿ ಬೆಳಕಿನ ಸುವ್ಯವಸ್ಥೆಯೂ ಒಂದು ಅವಶ್ಯಕ ವಿಷಯವೆಂಬುದರ ಪರಿಜ್ಞಾನ ಆ ಕಾಲದಲ್ಲಿಯೇ ಗಮನದಲ್ಲಿದ್ದು, ಅದನ್ನು ಪರಿಣಾಮಕಾರಿಯಾಗಿ ಮತ್ತು ಯಶಸ್ವಿಯಾಗಿ ಹೇಗೆ ನಿರ್ವಹಿಸಲಾಗುತ್ತಿತ್ತೆಂಬುದು ಮೇಲಿನ ವಿವರಣೆಗಳಿಂದ ವೇದ್ಯವಾಗುತ್ತದೆ.

ಇತರ ಏರ್ಪಾಟುಗಳು

ಮೇಲೆ ವಿವರಿಸಲಾದ ಏರ್ಪಾಟುಗಳ ಜೊತೆಗೆ, ಅದೇ ನಿವೇಶನದಲ್ಲಿ ಸುವಾಸನಾಯುಕ್ತವಾದ ಮತ್ತು ಆಹ್ಲಾದಕರವಾದ ವಾತಾವರಣವನ್ನು ನಿರ್ಮಿಸುವ ವಿಷಯಕ್ಕೂ ಸಾಕಷ್ಟು ಗಮನ ಕೊಡಲಾಗಿತ್ತೆಂಬುದು ಕೆಳಗೆ ಉಲ್ಲೇಖಿಸಿರುವ ಪದ್ಯದಿಂದ ತಿಳಿದುಬರುತ್ತದೆ.

ಕಸ್ತೂರಿ ಜವಾದಿಗಳ ಸಾರಣೆಯ ಕುಂಕುಮ ಪ |
ದಿಸ್ತರಣದಗರು ಚಂದನ ಧೂಪವಾಸಿತದ |
….. ಸಭೆ ಸಮಸ್ತ ಸೌಭಾಗ್ಯದಿಂದೊಪ್ಪತಿರ ಲಾಗ…. ||೨೭||

ಎಂದರೆ ಆ ಓಲಗ ಶಾಲೆಯಲ್ಲಿ ಸೂಕ್ತ ರೀತಿಯಲ್ಲಿ ಕಸ್ತೂರಿ, ಜವಾದಿಗಳಿಂದ ಸಾರಣೆ, ಕಾರಣಿಗಳನ್ನು ಮಾಡಿ ಹೆಚ್ಚಿನ ಸುಂದರ ಮತ್ತು ಆಕರ್ಷಕ ಪರಿಸರವನ್ನು ನಿರ್ಮಿಸಲಾಗಿತ್ತು. ಅಷ್ಟಲ್ಲದೆ ಅಗರು, ಚಂದನ ಮುಂತಾದವುಗಳ ಸುಗಂಧ ಪರಿಮಳಯುಕ್ತ ಧೂಪದಿಂದ ವಾತಾವರಣವನ್ನು ಸಮೃದ್ಧಗೊಳಿಸಿದ್ದರು. ಆಗಲೇ ವಿವರಿಸಿರುವಂತೆ ಸುವಾಸನೆಯಿಂದ ಕೂಡಿದ, ಕರ್ಪೂರ ತೈಲದಿಂದ ಉರಿಯುತ್ತಿದ್ದ ದೀಪಲಕ್ಷ್ಮಿ ಪುತ್ಥಳಿಗಳ ಸಮೂಹವನ್ನು ಅಲ್ಲಿ ಸಜ್ಜುಗೊಳಿಸಲಾಗಿತ್ತು.

ಹೀಗೆ, ಸಮಸ್ತ ಸೌಭಾಗ್ಯದಿಂದೊಪ್ಪುತ್ತಿದ್ದ ಆ ಓಲಗ ಶಾಲೆಯು ಮೇಲೆ ವಿವರಿಸಿದಂತೆ ಅನೇಕ ವಿಷಯಾಂಶಗಳಲ್ಲಿ ಆಧುನಿಕ ಕಲಾಸಂಗ್ರಹಾಲಯವನ್ನು ಹೋಲುವಂತಿತ್ತೆಂದು ಪರಿಕಲ್ಪಿಸಿ ಹೇಳಬಹುದಲ್ಲವೇ? ಮತ್ತು ಆ ವೈಭವಯುಕ್ತ ಕಲಾತ್ಮಕ ವ್ಯವಸ್ಥೆಗಳನ್ನು ವಿಜಯನಗರದ ಸಾಮ್ರಾಟರು ಹೊಂದಿದ್ದ ವೈಯಕ್ತಿಕ ಪ್ರತಿಷ್ಠೆ, ಅಭಿಲಾಷೆಗಳ ಜೊತೆಗೆ ಅವರ ಕುಶಲಕಲಾ ಪ್ರಜ್ಞೆ, ಸಾಂಸ್ಕೃತಿಕ ಅಭಿಮಾನ, ಅವುಗಳ ಪಾಲನೆ ಪೋಷಣಾಭಿವೃದ್ಧಿಗಳಲ್ಲಿ ಆಸಕ್ತಿ, ಮುಂತಾದ ಉದಾತ್ತ ಸುಸಂಸ್ಕೃತ, ವಿನೂತನ ಗುಣವಿಶೇಷಗಳು ಪ್ರದರ್ಶಿತವಾಗಿದ್ದುವೆಂದು ಹೇಳಬಹುದು.

ಆಧಾರ ಸಾಹಿತ್ಯ

೧.   Devakunjari D., 1970, Hampi, Archaeological Survey or India, Delhi

೨.   John M. Fritz, George Michell and M.S.Narayana Rao, 1984, The Royal Centre of Vijayangara – Preliminary Report, University of Melborne, Victoria

೩.   Narasimhaiah B., 1992, Metropolis Vijayangara, Book India pub. Co., Delhi.

೪.   George Michell, 1992, The Vijayangara; Courtly Style, Manohar, American Institute of India Studies, Delhi

೫.   Vasundhara Filliozat (Ed.), 1999, Vijayangara, National Book Trust of India, NewDelhi

೬.   ಎನ್‌.ಬಸವಾರಾಧ್ಯ, ಸಂ., ೧೯೭೫, ಬಾಹುಬಲಿ ಪಂಡಿತ ವಿರಚಿತ ಧರ್ಮನಾಥ ಪುರಾಣ, ಮೈಸೂರು ವಿಶ್ವವಿದ್ಯಾಲಯ.

೭.   ಭೀಮಶೇನ ರಾವ್‌.ಬಿ. ಸಂ., ೧೯೭೩, ಲಕ್ಷ್ಮೀಶನ ಜೈಮಿನಿ ಭಾರತ, ಬೆಂಗಳೂರು.

ಆಕರ
ವಿಜಯನಗರ ಅಧ್ಯಯನ, ಸಂ.೬, ೨೦೦೨ ಪ್ರಾಚ್ಯವಸ್ತು ಮತ್ತು ವಸ್ತುಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು, ಪು. ೬೬-೭೩