ವಿಜಯನಗರ ಕಾಲದಲ್ಲಿ ಆನೆಗಳನ್ನು ಯುದ್ಧ, ದೇವಾಲಯಗಳ ಉತ್ಸವ, ರಾಜ ಪರಿವಾರದವರ ಉತ್ಸವ, ಬೇಟೆ ಮುಂತಾದ ಸಂದರ್ಭಗಳಲ್ಲಿ ಉಪಯೋಗಿಸುತ್ತಿದ್ದು, ಅಂತಹ ಆನೆಗಳ ಸಾಲಿನ ಶಿಲ್ಪಗಳನ್ನು ರಾಮಚಂದ್ರ ದೇವಾಲಯದ ಗೋಡೆಯ ಮೇಲೆ ಕಾಣಬಹುದು. ದೇವಾಲಯದ ಮೆಟ್ಟಿಲುಗಳ ಬದಿಯಲ್ಲಿ ಮತ್ತು ಅರಮನೆ ಕಟ್ಟಡಗಳ ಮೆಟ್ಟಿಲುಗಳ ಇಕ್ಕೆಲಗಳಲ್ಲಿ ಕೆಲವೊಮ್ಮೆ ಆನೆಯ ಪೂರ್ಣ ಆಕಾರದ ಶಿಲ್ಪಗಳನ್ನು ಅಥವಾ ಆನೆಯ ಸೊಂಡಿಲು ಭಾಗದ ಶಿಲ್ಪಗಳನ್ನು ಕಾಣಬಹುದಾಗಿದೆ. ವಿವಿಧ ಕೆಲಸ ಕಾರ್ಯಗಳಿಗೆ ಅನುಗುಣವಾಗಿ ಆನೆಗಳಲ್ಲಿ ಕೆಲವೊಂದು ವಿಂಗಡಣೆಗಳನ್ನು ಮಾಡಿರುವ ಅಂಶಗಳನ್ನು ಕಾಣಬಹುದು.

ವಿಜಯನಗರ ಪಟ್ಟಣದಲ್ಲಿ ಈಗಿರುವ ಆನೆ ಸಾಲೆಯ ಕಟ್ಟಡವನ್ನು ಆನೆಯ ಸಾಲೆ ಎಂದು ಒಪ್ಪಿಕೊಂಡರೂ ಸಹ ಅಲ್ಲಿರುವ ಸ್ಥಳಾವಕಾಶವೂ ಕೇವಲ ಹನ್ನೊಂದು ಆನೆಗಳಿಗೆ ಮಾತ್ರ ಇರುವುದನ್ನು ಕಾಣಬಹುದಾಗಿದೆ.[1] ಈ ಆನೆಗಳು ರಾಜಪರಿವಾರದವರಿಗೆ ಮೀಸಲಾಗಿದ್ದವೆಂದು ತೋರುತ್ತದೆ. ಆದರೆ ಉಳಿದ ಆಗಾಧ ಸಂಖ್ಯೆಯ ಸಾಮಾನ್ಯ ಆನೆಗಳಿಗಾಗಿ ಬೇರೊಂದು ಆನೆಯ ಸಾಲೆಯನ್ನು ನಿರ್ಮಿಸಿರಲೇಬೇಕು.[2] ಈ ದಿಸೆಯಲ್ಲಿ ಆನೆಯ ಸಾಲೆಯ ಸಂಶೋಧನೆಯೂ ಸಹ ಅಗತ್ಯವಾಗಿದೆ. ಒಂದು ಶಿಲಾಶಾಸನವು ಅಂತಹ ಒಂದು ಆನೆಯ ಸಾಲೆಯನ್ನು ಉಲ್ಲೇಖಿಸುತ್ತದೆ. ಆನೆಯ ಸಾಲೆಯ ಬಳಿಯ ನರಸಿಂಹ ದೇವರಿಗೆ ದಾನ ಕೊಟ್ಟದ್ದನ್ನು ಇದು ಉಲ್ಲೇಖಿಸುತ್ತದೆ. ಶಾಸನದ ಪಾಠ ಹೀಗಿದೆ.[3]

೧.   ಶುಭಕೃತು ಸಂವಚರದ ಚೈತ್ರಶುದ್ಧ ೭ಲು
೨.   ಶ್ರೀಮತು ಆನೆಯ ಸಾಲೆಯ ಬಳಿಯಣ ನಾರ
೩.   ಸಿಂಹ್ಯ ದೇವರಿಗೆ ಕೋನಮರ್ಸಯನವರು
೪.   ಕೊಟ್ಟ ಧರ್ಮಸಾಸನದ ಕ್ರಮವೆಂತೆಂದ
೫. ರೆ ಸ್ವಾಮಿ ನಮಗೆ ಪಾಲಿಸಿದ ವಿಜಯನಾಗ
೬.   ರದ ತಳವಾರಿಕೆಗೆ ಸಲುವ ಕಂದಾಯ | (ಕೊ)
೭.   ಟಟ್ ಮಾಲ ಕಾಣಿಕ್ಕೆ ಅಡಿಕಾಸು | ಕಂದಾಯವು
೮.   ಸಹಾರಾಯರಿಗೆ ಧರ್ಮವಾಗಬೇಕದು ನಾವು

ಈ ಶಾಸನವು ಹಂಪೆಯ ಅವಶೇಷಗಳ ಮಧ್ಯದಲ್ಲಿರುವ ಟೂರಿಸ್ಟ್‌ಕ್ಯಾಂಟೀನ್‌ಕಟ್ಟಡದ ಹಿಂಭಾಗದಲ್ಲಿ ಸಿಕ್ಕಿದ್ದು ಪ್ರಸ್ತುತ ಕ್ಯಾಂಟೀನಿನ ಆವರಣದಲ್ಲಿದೆ. ಈ ಟೂರಿಸ್ಟ್ ಕ್ಯಾಂಟೀನ ಕಟ್ಟಡವು ಒಂದು ದೊಡ್ಡದಾದ ಕೋಟೆ ಗೋಡೆಯ ಆವರಣದಲ್ಲಿದ್ದು, ಕಮಲ ಮಹಲ್‌ಮತ್ತು ರಾಮಚಂದ್ರ ದೇವಾಲಯದ ಮಧ್ಯ ಭಾಗದಲ್ಲಿದೆ. ಈ ಆವರಣವು ಉತ್ತರ-ದಕ್ಷಿಣವಾಗಿ ೧೬೮ ಮೀಟರ್ ಗಳಷ್ಟು ಉದ್ದವಾಗಿಯೂ, ಪೂರ್ವ ಪಶ್ಚಿಮ ೧೦೫ ಮೀಟರ್ ಗಳಷ್ಟು ಅಗಲವಾಗಿಯೂ ಇದ್ದು, ದಕ್ಷಿಣ ಭಾಗದಲ್ಲಿ ಬಾಗಿಲು ಇದೆ. ಈ ಆವರಣದ ದಕ್ಷಿಣ ದಿಕ್ಕಿನಲ್ಲಿ ಸ್ವಲ್ಪ ಭಾಗದಲ್ಲಿ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯವು ಉತ್ಖನನ ಕೆಲಸವನ್ನು ಕೈಗೊಂಡಿದ್ದು ಮಹತ್ವಪೂರ್ಣವಾದ ಅಂಶಗಳು ಬೆಳಕಿಗೆ ಬಂದಿವೆ. ಉತ್ಖನನದ ವರದಿಯಲ್ಲಿ ಆನೆಯ ಅಸ್ಥಿ ಪಂಜರ ಹಾಗೂ ಮಾನವರ ೨೮ ಅಸ್ಥಿ ಪಂಜರದ ಭಾಗಗಳು, ದ್ವಾರ ಬಾಗಿಲೂ, ನೀರಿನ ತೊಟ್ಟಿಗಳು ಮತ್ತು ಇತರ ಕಲ್ಲಿನ ದೀಪಸ್ತಂಭ ಮುಂತಾದ ಅವಶೇಷಗಳ ವಿವರಗಳು ಇವೆ.

ಈ ದೊಡ್ಡದಾದ ಆವರಣವನ್ನು ಸಾಮಾನ್ಯ ಆನೆಗಳಿಗಾಗಿ ಉಪಯೋಗಿಸಿರುವ ಸಾಧ್ಯತೆಗಳಿವೆ. ನೂರಾರು ಆನೆಗಳ ನಿರ್ವಹಣೆಗಾಗಿ ಈ ಆವರಣವು ಉಪಯುಕ್ತವೆಂದು ತೋರುತ್ತದೆ. ಈ ಆವರಣದ ಬಾಗಿಲಿನಲ್ಲಿ ಚಿಕ್ಕದೊಂದು ದೇವಾಲಯವೂ ಇದ್ದಂತೆ ತೋರುತ್ತದೆ. ಕಾರಣ ಅಲ್ಲಿರುವ ಪೀಠ ಮತ್ತು ದ್ವಾರದಲ್ಲಿ ಬಿದ್ದಿರುವ ದೀಪ ಸ್ತಂಭವೂ, ದೀಪಸ್ತಂಭದ ಎರಡೂ ಬದಿಗಳಲ್ಲಿ ಆನೆಯ ಚಿತ್ರಗಳು, ಒಂದು ಕಡೆ ಹಂಸ ಪಕ್ಷಿಯ ಚಿತ್ರವೂ, ಮತ್ತೊಂದು ಕಡೆ ನಾಮದ ಚಿತ್ರಗಳೂ ಇವೆ. ದ್ವಾರದ ಬದಿಯಲ್ಲಿರುವ ನೀರಿನ ತೊಟ್ಟಿಯು ಒಂದು ಮೀಟರ್ ನಷ್ಟು ಸ್ಥಳಾವಕಾಶವಿದೆ. ಬಾಗಿಲಿನ ಮೂಲಕ ಹಾಯ್ದು ಬರುವ ನೀರಿನ ಸಂಗ್ರಹಣೆಗಾಗಿ ಇರುವ ನೀರಿನತೊಟ್ಟಿಯಿದ್ದು ಅದರ ಮೇಲೆ ಗಣೇಶನ ಶಿಲ್ಪವಿದೆ. ಅಲ್ಲದೆ ಪೂರ್ವ ದಿಕ್ಕಿನ ಆವರಣದ ಗೋಡೆಯಲ್ಲಿ ಕಲ್ಲಿನ ನೀರಿನ ತೊಟ್ಟಿಯೂ ಇತ್ತೀಚೆಗೆ ಬೆಳಕಿಗೆ ಬಂದಿರುತ್ತದೆ. ಈ ಆವರಣದಲ್ಲಿರುವ ಅವಶೇಷಗಳು ಕೆಳಗಿನಂತಿವೆ.

೧. ಕಪ್ಪುಬೂದಿ ಮಣ್ಣು: ಆನೆಗಳ ಮೇವಿಗಾಗಿ ಶೇಖರಿಸಲಾಗಿದ್ದ ಹುಲ್ಲು, ಬಣವೆಗಳು, ಸೊಪ್ಪು ಮತ್ತು ಆನೆಯ ತ್ಯಾಜ್ಯ ವಸ್ತು ಲದ್ದಿ ಮುಂತಾದ ವಸ್ತುಗಳು ವಿಜಯನಗರದ ಪತನದ ಕಾಲದಲ್ಲಿ ಬೆಂಕಿಯಿಂದ ಸುಟ್ಟು ಹೋಗಿದ್ದು, ಹೇರಳವಾಗಿ ಕಪ್ಪು ಬೂದಿಯು ಈ ಸ್ಥಳದಲ್ಲಿ ಶೇಖರಣೆಗೊಂಡಿರಬಹುದು.

೨. ಆನೆಯ ಆಸ್ಥಿಪಂಜರ: ಆವರಣದ ಬಾಗಿಲಿನ ಪಶ್ಚಿಮ ಭಾಗದಲ್ಲಿ ಆನೆಯ ಆಸ್ಥಿಪಂಜರವು ದೊರಕಿದ್ದು, ಸತ್ತುಹೋದ ಆನೆಯನ್ನು ಹೊರಗೆ ಸಾಗಿಸಲು ಸಾಧ್ಯವಾಗದೆ ಆವರಣದ ಮೂಲೆಯಲ್ಲಿ ಹೂಳಿದ್ದಾರೆ.

೩. ಆನೆಯ ಸರಪಳಿ: ಉತ್ಖನನ ಮಾಡಿದ ಸ್ಥಳದಲ್ಲಿ ಒಂದು ಮೀಟರ್‌ನಷ್ಟು ಉದ್ದದ ಸರಪಳಿಯು ದೊರೆತಿದ್ದು ಇದು ಆನೆಯ ಕೊರಳು ಅಥವಾ ಕಾಲಿಗೆ ಕಟ್ಟಲು ಉಪಯೋಗಿಸಿರಬಹುದಾಗಿದೆ.

೪. ಗೋದಲಿಗಳು: ಬಾಗಿಲಿನ ಪಕ್ಕದಲ್ಲಿ ನೀರಿನ ತೊಟ್ಟಿಯ ಸಮೀಪದಲ್ಲಿರುವ ಕಟ್ಟಡಗಳಲ್ಲಿ ಆನೆಗಳಿಗೆ ತಿನ್ನಲು ಹುಲ್ಲು ಸೊಪ್ಪುಗಳನ್ನು ಹಾಕುವ ಸ್ಥಳಗಳಾಗಿರಬಹುದಗಿದೆ. ೧.೫ಮೀ. ಅಗಲ, ೬.೦ಮೀ.ಗಳಷ್ಟು ಉದ್ದ ಮತ್ತು ೧ಮೀ.ನಷ್ಟು ಎತ್ತರವಿರುವ ಕಟ್ಟಡಗಳು ಮಾನವನ ವಾಸಕ್ಕಾಗಿ ಉಪಯೋಗವಾಗವುದಿಲ್ಲ.

೫. ನೀರಿನ ಕಾಲುವೆ: ಆನೆಗಳಿಗೆ ಕುಡಿಯಲು ಬೇಕಾಗುವ ನೀರನ್ನು ನೀರಿನ ಕಾಲುವೆಗಳಿಂದ ಹೊರಗಿನಿಂದ ಪೂರೈಕೆ ವ್ಯವಸ್ಥೆ ಮಾಡಿದ್ದು, ಆನೆಗಳ ನಿರ್ವಹಣೆಗೆ ಅತಿ ಹೆಚ್ಚು ನೀರು ಅವಶ್ಯಕವಿರುವುದರಿಂದ ಹೊರ ಭಾಗದಿಂದ ನೀರಿನ ಸರಬರಾಜು ವ್ಯವಸ್ಥೆ ಮಾಡಿರಬಹುದಾಗಿದೆ.

೬. ನೀರಿನ ತೊಟ್ಟಿ: ನೀರಿನ ತೊಟ್ಟಿಯು ೫ ಮೀಟರ್‌ಗಳಷ್ಟು ಉದ್ದವಾಗಿದ್ದು ಇನ್ನೂ ಸ್ವಲ್ಪ ಭಾಗವು ಭೂಮಿಯಲ್ಲಿ ಮುಚ್ಚಿರುತ್ತವೆ. ಇದು ಕೇವಲ ೧ ಮೀಟರ್‌ನಷ್ಟು ಆಳವಿದ್ದು, ಒಂದು ಮೆಟ್ಟಿಲು ಮಾತ್ರವಿದೆ. ಆನೆಗಳು ಇಲ್ಲಿ ಬಂದು ನೀರು ಕುಡಿದು ಹೋಗುವುದಕ್ಕಾಗಿ ನಿರ್ಮಿಸಿರಬಹುದಾಗಿದೆ.

೭. ಮಾನವ ಆಸ್ಥಿಪಂಜರದ ಅವಶೇಷಗಳು: ೨೮ ಮಾನವರ ಆಸ್ಥಿಪಂಜರಗಳ ಅವಶೇಷಗಳು ದೊರತಿದ್ದು, ಇವುಗಳು ೨೦ ರಿಂದ ೬೦ ವರ್ಷದ ವಯೋಮಾನದ ವ್ಯಕ್ತಿಗಳವಾಗಿವೆ ಎಂದು ನ್ಯಾನ್ಸಿ ಮಾಲ್‌ವಿಲ್ಲೆ ಇವರು ಮೂಲೆಗಳ ಅಧ್ಯಯನದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಈ ಆನೆಗಳ ನಿರ್ವಹಣೆಗಾಗಿ ಇದ್ದಂತಹ ವ್ಯಕ್ತಿಗಳ ಆಸ್ಥಿಪಂಜರಗಳಾಗಿರಬಹದು. ಬಹಳಷ್ಟು ಸಂಖ್ಯೆಯ ಆನೆಗಳನ್ನು ನಿರ್ವಹಿಸಬೇಕಾದರೆ ಕೆಲಸಗಾರರು ಯಾವಾಗಲೂ ಆನೆಗಳ ಬಳಿಯಲ್ಲೇ ಇರಬೇಕಾಗುತ್ತದೆ.

೮. ರಂದ್ರಗಳಿರುವ ಕಲ್ಲಿನ ಕಂಬಗಳು: ಮುಖ್ಯದ್ವಾರದ ಒಳಭಾಗದ ಎರಡೂ ಬದಿಗಳಲ್ಲಿ ಎರಡೆರಡು ರಂದ್ರಗಳಿರುವ ಕಲ್ಲಿನ ಕಂಬಗಳಿವೆ ಇವುಗಳನ್ನು ಆನೆಗಳು ಹೊರಹೋಗದಂತೆ ಮರದ ಉದ್ದನೆಯ ಕಟ್ಟಿಗೆಗಳನ್ನು ಇರಿಸಲು ಉಪಯೋಗಿಸಿರಬಹುದಾಗಿದೆ. ಇದರ ಮಾದರಿಯಲ್ಲಿರುವ ಕಂಬಗಳು ಆವರಣದ ಉತ್ತರ ದಿಕ್ಕಿನ ಭಾಗದಲ್ಲಿಯೂ ಇವೆ. ಇವುಗಳಲ್ಲಿಯೂ ಇವೆ. ಇವುಗಳನ್ನು ಆನೆಗಳನ್ನು ಪಳಗಿಸಲು ಉಪಯೋಗ ಮಾಡಿರಬಹುದಾಗಿದೆ.

ಮೇಲಿನ ಈ ಎಲ್ಲಾ ಅಂಶಗಳನ್ನು ಕೂಲಂಕಶವಾಗಿ ಅಧ್ಯಯನ ಮಾಡಿದಾಗ ಮತ್ತು ಶಿಲಾಶಾಸನದಲ್ಲಿ ಉಲ್ಲೇಖಗೊಂಡ ವಿಷಯ, ಇಲ್ಲಿನ ಅವಶೇಷಗಳು, ಉತ್ಖನನ ಮಾಡಿದ ಸ್ಥಳದಲ್ಲಿ ದೊರೆತಿರುವ ಆನೆಯ ಆಸ್ಥಿ ಪಂಜರ, ಆನೆ ಕಟ್ಟುವ ಸರಪಳಿ, ನೀರಿನ ಕಾಲುವೆಗಳು, ನೀರಿನ ಶೇಖರಣೆಯ ತೊಟ್ಟಿಗಳು, ಗೋದಲಿಗಳು, ಕಟ್ಟಡದ ಅತೀ ಕಡಿಮೆ ಅವಶೇಷಗಳು, ಬೂದಿ, ದೊಡ್ಡದಾದ ಆವರಣಕ್ಕೆ ಒಂದು ಭಾಗದಲ್ಲಿ ಮಾತ್ರವಿರುವ ಬಾಗಿಲು, ದೀಪ ಸ್ತಂಭದ ಮೇಲೆ ಎರಡೂ ಬದಿಯಲ್ಲಿರುವ ಆನೆಯ ಚಿತ್ರಗಳು, ಸುತ್ತಲೂ ಇರುವ ಅರಮನೆಯ ಆವರಣದ ಅವಶೇಷಗಳಿಂದ ಪ್ರಸ್ತುತ ಕಟ್ಟಡವು ಆನೆ ಸಾಲೆಯಾಗಿತ್ತೆಂಬುದು ಸ್ಪಷ್ಟವಾಗುತ್ತದೆ. ಅಲ್ಲದೇ ಆವರಣದಲ್ಲಿ ಉಳಿದ ಭಾಗವನ್ನು ಪೂರ್ಣವಾಗಿ ಉತ್ಖನನ ಮಡಿದಲ್ಲಿ ಆನೆಯ ಸಾಲೆಗೆ ಬೇಕಾದ ಇನ್ನೂ ಹೆಚ್ಚಿನ ಮಹತ್ವವುಳ್ಳ ಅವಶೇಷಗಳು ದೊರೆತು ವಿಜಯನಗರದ ಇತಿಹಾಸದ ಹೆಚ್ಚಿನ ಬೆಳಕನ್ನು ಚೆಲ್ಲಬಹುದಾಗಿದೆ. ಈ ಆವರಣದ ಕೋಟೆ ಗೋಡೆಯ ಅರ್ಧದಷ್ಟು ಭಾಗವನ್ನು ಈಗಾಗಲೇ ಸಂರಕ್ಷಣೆ ಮಾಡಿದ್ದು ಉಳಿದ ಭಾಗವನ್ನು ಸಂರಕ್ಷಿಸಿದಲ್ಲಿ ಇದೊಂದು ಉತ್ತಮ ಕಾರ್ಯವಾಗುತ್ತದೆ.

ಆಕರ
ವಿಜಯನಗರ ಅಧ್ಯಯನ, ಸಂ.೫, ೨೦೦೦, ಪ್ರಾಚ್ಯವಸ್ತು ಮತ್ತು ವಸ್ತುಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು, ಪು. ೩೭-೪೩

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] Longhurst A.H., 1982 (Reprint), Hampi Ruins described and illustrated, pp. 82-84,; Devakunjari 1983, Hampi, p. 40; Fritz John M., George Michell and M.S. Nagaraja Rao, The Royal Centre Vijayanagara: Preliminary Report, pp. 17, 18, 33

[2] Sewell Robert, 1982 (Reprint), A Forgotten Empire, pu. ೧೫೦. ೪೦೦೦ ಆನೆಗಳ ಬಲವಿದ್ದುದನ್ನು ನ್ಯೂನಿಚ್‌ತಿಳಿಸುತ್ತಾನೆ ಪು. ೧೧೮, ವರ್ತೆಮಾ ೪೦೦ ಆನೆಗಳಿದ್ದವೆಂದು ಹೇಳುತ್ತಾನೆ ಪು. ೩೭೩, ಅಚ್ಯುತರಾಯನ ಆಳ್ವಿಕೆಯಲ್ಲೂ ೪೦೦ ಆನೆಗಳಿದ್ದವು.

[3] Nagaraja Rao M.S., (Ed), 1985, Vijyayanagara: Proress of Research 1983-84, P.34, Ins. No. 29; Channabasappa S. Patil and Vinoda C. Patil (Eds.) 1992. Inscriptions at Vijayanagara (Hampi), No.331