ಹಂಪಿಯಲ್ಲಿ ನಡೆದಿರುವ ಉತ್ಖನನಗಳಲ್ಲಿ ವಿಜಯನಗರದ ಅರಸರ ಅರಮನೆಗಳು, ಶ್ರೇಷ್ಠಿಗಳ ಮನೆಗಳು, ಧಾರ್ಮಿಕ, ಲೌಕಿಕ ಹಾಗೂ ಬಹುಉಪಯೋಗಿ ಕಟ್ಟಡಗಳು ಬೆಳಕಿಗೆ ಬಂದಿವೆ. ಕೇಂದ್ರ ಸರ್ಕಾರದ ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆಯವರು ಮತ್ತು ಕರ್ನಾಟಕ ರಾಜ್ಯ ಪ್ರಾಚ್ಯವಸ್ತು ಮತ್ತು ವಸ್ತುಸಂಗ್ರಹಾಲಯ ನಿರ್ದೇಶನಾಲಯದವರು ೧೯೭೯ ರಿಂದ ಸತತವಾಗಿ ಹಂಪಿಯ ಬಗ್ಗೆ ಕುರಿತು ಸಂಶೋಧನೆ ಮತ್ತು ಉತ್ಖನನಗಳನ್ನು ಕೈಗೊಳ್ಳುತ್ತಾ ಬಂದಿದ್ದಾರೆ. ಈ ಯೋಜನೆಯು ಇಂದಿಗೂ ಮುಂದುವರಿದಿರುವುದು ಗಮನಾರ್ಹ. ಮಧ್ಯಕಾಲೀನ ಯುಗದಲ್ಲಿ ವಿಜಯನಗರವು ಅತ್ಯಂತ ವೈಭವದಿಂದ ಕೂಡಿದ್ದ ಸಾಮ್ರಾಜ್ಯವಾಗಿದ್ದು ಇಡೀ ದೇಶದ ಗಮನವನ್ನು ತನ್ನಡೆ ಸೆಳೆದಿತ್ತು. ಇದರೊಂದಿಗೆ ವಿದೇಶಿಯರನ್ನು ಸಾಕಷ್ಟು ಆಕರ್ಷಿಸಿತ್ತು. ಪಯಾಸ್‌, ನ್ಯೂನಿಜ್‌, ಅಬ್ದು ರಜಾಕ್‌ರಂತಹವರು ಇಲ್ಲಿಗೆ ಭೇಟಿ ನೀಡಿ ವಿಜಯನಗರದ ವೈಭವ ಹಾಗೂ ಜನಜೀವನ ದಾಖಲಿಸಿರುವ ಕೆಲವು ಅಂಶಗಳು ಉತ್ಖನನಗಳಿಂದಲೂ ದೃಢಪಟ್ಟಿದೆ.

ತುಂಗಭದ್ರಾ ನದಿಯ ಎಡದಂಡೆಯಲ್ಲಿರುವ ಆನೆಗೊಂದಿಯು ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿಯಾಗಿತ್ತು. ಅಲ್ಲಿಂದ ಬಲದಂಡೆಯಲ್ಲಿರುವ ಪಂಪಾಕ್ಷೇತ್ರಕ್ಕೆ ವರ್ಗಾಯಿಸಲಾಯಿತು. ಸುಮಾರು ೨೫ ಚದುರ ಮೈಲಿಗಳಷ್ಟು ವಿಸ್ತಾರವಾಗಿರುವ ವಿಜಯನಗರ ಪಟ್ಟಣಕ್ಕೆ ಏಳು ಸುತ್ತುಗಳ ಕೋಟೆಯಿದ್ದ ಬಗೆಗೆ ಉಲ್ಲೇಖಗಳಿವೆ. ಆದರೆ ಇಂದು ಐದು ಸುತ್ತುಗಳು ಮಾತ್ರ ಉಳಿದುಬಂದಿದೆ. ವಿಜಯನಗರ ಕಾಲದ ಅವಶೇಷಗಳು ಕಮಲಾಪುರ ಗ್ರಾಮಕ್ಕೆ ಸಮೀಪದಲ್ಲಿದ್ದು ಅದನ್ನು ಅರಮನೆಯ ವಾಸಸ್ಥನ (citadel) ಎಂದು ಗುರುತಿಸಲಾಗಿದೆ. ಕಟ್ಟಡಗಳ ಅವಶೇಷಗಳಿರುವ ಸ್ಥಳವನ್ನು ಸ್ಥಳೀಯವಾಗಿ ಹಾಳುಪಟ್ಟಣವೆಂದು ಕರೆಯಲಾಗುತ್ತದೆ. ಈ ಪ್ರದೇಶದಲ್ಲಿಯೇ ಪುರಾತತ್ವ ಅನ್ವೇಷಣೆಯ ಮುಂದುವರಿಯುತ್ತಾ ಬಂದಿದೆ.

ಇಲ್ಲಿನ ಅವರ ಕಾಲದ ಕಟ್ಟಡಗಳಲ್ಲಿ ಕೆಲವು ಉತ್ತಮ ಸ್ಥಿತಿಯಲ್ಲಿದ್ದು, ಬಹುತೇಕ ಕಟ್ಟಡಗಳು ಹಲವಾರು ಕಾರಣಗಳಿಂದ ನಾಶವಾಗಿದೆ. ಕಟ್ಟಡಗಳು ಅವಶೇಷಗಳಲ್ಲಿ ಅಧಿಷ್ಠಾನ ಅಥವಾ ತಳಪಾಯದ ಭಾಗಗಳು ಮಾತ್ರವೇ ಇಂದು ಕಾಣಸಿಗುತ್ತವೆ. ಗೋಡೆಗಳು ಮತ್ತು ಸೂರಿನ ಭಾಗಗಳು ನಶಿಸಿವೆ. ಪಟ್ಟಣದ ದಕ್ಷಿಣ ಭಾಗವು ನಗರ ಭಾಗವಾಗಿದ್ದು, ಕೋಟೆ ಗೋಡೆಯಿಂದ ಸುತ್ತವರಿಯಲ್ಪಟ್ಟಿದೆ. ಇಲ್ಲಿಯ ಕಟ್ಟಡಗಳು ಧಾರ್ಮಿಕೇತರ ಕಟ್ಟಡಗಳಾಗಿವೆ. ಸುಮಾರು ೨೦೦ ಎಕರೆಗೂ ಅಧಿಕವಾದ ಸ್ಥಳದಲ್ಲಿ ಕಟ್ಟಡಗಳ ಅವಶೇಷಗಳು ಇಂದು ಕಾಣಸಿಗುತ್ತೆ. ಅವುಗಳನ್ನು ೧೯೮೦ರಿಂದಲೂ ಉತ್ಖನನ ಮಾಡಲಾಗುತ್ತಿದೆ. ಇಲ್ಲಿರುವ ಜಾಗಗಳನ್ನು ಹಲವಾರು ಹೆಸರುಗಳಿಂದ ಗುರುತಿಸಲಾಗುತ್ತದೆ. ವಿದ್ವಾಂಸರು ಮತ್ತು ಜನಪದರು ತಮ್ಮ ಅನುಕೂಲತೆಗಾಗಿ ಪಟ್ಟಣದ ವಿವಿಧ ಭಾಗಗಳನ್ನು ವಿವಿಧ ಹೆಸರುಗಳಿಂದ ಗುರುತಿಸುತ್ತಾರೆ. ಆ ಹೆಸರುಗಳು ಇಂತಿವೆ: ಟಂಕಶಾಲೆ (mint), ಡಣಾನಾಯಕನ ಆವರಣ, ಜನಾನ ಆವರಣ, ಗುಹಾಂತರ ದೇವಾಲಯದ ಸಮೀಪದ ಅಷ್ಟಕೋನಾಕೃತಿಯ ನೀರಿನ ಕಾರಂಜಿ, ಕೋಟೆಯ ಉತ್ತರ ಪ್ರವೇಶದ್ವಾರ, ಗಜಶಾಲೆ ಆವರಣ ಮತ್ತು ಶ್ರೇಷ್ಠರ ಮನೆ ಅಥವಾ ಅರಮನೆ ಪ್ರದೇಶಗಳು. ಟಂಕಸಾಲೆಯ ಬಳಿ ನೂರು ಕಂಬಗಳಿರುವ ಸಭಾಂಗಣ ಮತ್ತು ಮಧ್ಯದಲ್ಲಿ ನಾಲ್ಕು ಅರಮನೆಗಳ ಅವಶೇಷಗಳಿವೆ. ಪೂರ್ವಾಭಿಮುಖ ದೊಡ್ಡ ಅರಮನೆಯ ದಕ್ಷಿಣಕ್ಕೆ ನಾಲ್ಕು ಕಿರು ಅರಮನೆಗಳು ಪೂರ್ವ, ಉತ್ತರ ಮತ್ತು ಪಶ್ಚಿಮಾಭಿಮುಖವಾಗಿವೆ. ಇವುಗಳಲ್ಲಿ ಉತ್ತರ ಮತ್ತು ಪಶ್ಚಿಮಾಭಿಮುಖವಾಗಿರುವ ಅರಮನೆಗಳು ಸಾಕಷ್ಟು ನಶಿಸಿವೆ.

[1]

ಡಣಾಯಕನ ಆವರಣ

ಈ ಆವರಣದಲ್ಲಿ ಉತ್ತರ ಮತ್ತು ಪಶ್ಚಿಮಾಭಿಮುಖಾಗಿರುವ ಎರಡು ಅರಮನೆಗಳಿವೆ. ಮೂರು ಅರಮನೆಗಳು ನೆಲದಲ್ಲಿ ಹುದುಗಿರುವುದು ಕಂಡುಬರುತ್ತದೆ. ಪೂರ್ವಾಭಿಮುಖವಾಗಿರುವ ಕಟ್ಟಡ ಸಂಕೀರ್ಣಕ್ಕೆ ಪ್ರವೇಶದ್ವರವಾಗಿದ್ದು, ಇದರಲ್ಲಿ ಸಭಾಂಗಣಗಳ ಶೃಂಖಲೆಯಿದೆ. ಇದರ ದಕ್ಷಿಣಕ್ಕೆ ಉತ್ತರ ದಿಕ್ಕಿಗೆ ಮುಖ ಮಾಡಿರುವ ಅರಮನೆಯೊಂದಿದೆ. ಇದರ ಸಮೀಪವೇ ಎರಡು ಅಂತಸ್ತಿನ ಅಷ್ಟಕೋನಾಕೃತಿಯ ರಚನೆಯಿದೆ. ಈ ಆವರಣದಲ್ಲಿಯೇ ಎರಡು ಕಾವಲುಗೋಪುರಗಳು ವಾಯವ್ಯ ಮತ್ತು ಆಗ್ನೇಯ ಮೂಲೆಗಳಲ್ಲಿವೆ.

ಜನಾನ ಆವರಣ

ಇದು ನಿರ್ಧಿಷ್ಟ ಆಕಾರದಲ್ಲಿ ಇಲ್ಲ. ವಾಯವ್ಯ ದಿಕ್ಕಿಗೆ ಒಂದು ದೊಡ್ಡ ಅರಮನೆಯ ತಳಪಾಯವು ದೊರಕಿದೆ. ಇದು ಈ ಆವರಣದಲ್ಲಿರುವ ದೊಡ್ಡ ಅರಮನೆಯಾಗಿದೆ. ಇದರ ದಕ್ಷಿಣಕ್ಕೆ ಒಂದು ಕೊಳ ಮತ್ತು ಅರಮನೆಯಿದೆ. ದೊಡ್ಡ ಅರಮನೆಯ ವಾಯವ್ಯಕ್ಕೆ ಆಯತಾಕಾರವಾಗಿರುವ ಒಂದು ಕಟ್ಟಡವಿದ್ದು ಅದಕ್ಕೆ ಕೋನಾಕೃತಿಯ ಸೂರಿದೆ. ಗಾಳಿ ಮತ್ತು ಬೆಳಕು ಬರಲು ಅನುಕೂಲವಾಗಿರುವಂತೆ ಗವಾಕ್ಷಿಗಳಿವೆ. ಈ ಆವರಣದಲ್ಲಿ ಎರಡು ಅಂತಸ್ಥಿನ ಕಮಲ್‌ಮಹಲಿದೆ.ಉತ್ತರ ದಿಕ್ಕಿನಲ್ಲಿ ಗುಮ್ಮಟವಿರುವ ಕಟ್ಟಡವು ಕಾವಲುಗಾರರ ಉಪಯೋಗಕ್ಕೆ ಇದ್ದಿರಬಹುದೆಂದು ಊಹಿಸಲಾಗಿದೆ.

ಕೃಪೆ: ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು

ಕೃಪೆ: ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು

ಶ್ರೇಷ್ಠರ ಅರಮನೆ ಆವರಣ

ಈ ಆವರಣದಲ್ಲಿ ೧೮ಕ್ಕೂ ಅಧಿಕ ಶ್ರೇಷ್ಠರ ಅಥವಾ ಪ್ರಮುಖರ ಮನೆಗಳಿದ್ದು ಅವುಗಳಲ್ಲಿ ಕೆಲವನ್ನು ಉತ್ಖನನ ಮಾಡಲಾಗಿದೆ. ಡಣಾಯಕನ ಆವರಣದ ಉತ್ತರಕ್ಕಿರುವ ಭಾಗದಲ್ಲಿ ಈ ರಚನೆಗಳು ಕಂಡುಬಂದಿದ್ದು, ಆವರಣವು ಆಯತಾಕಾರವಾಗಿರುವ ಎತ್ತರದ ಗೋಡೆಯಿಂದ ಆವರಿಸಿದೆ. ಮುಖ್ಯ ಕಟ್ಟಡ ಮತ್ತು ಗೋಡೆಗಳ ನಡುವೆ ಒಂದು ಪ್ರವೇಶದ್ವಾರವಿದೆ.

ಗುಹಾಂತರ ದೇವಾಲಯದ ಸಮೀಪವಿರುವ ಅರಮನೆ

ಮಹಾನವಮಿ ದಿಬ್ಬದ ಪೂರ್ವಕ್ಕೆ ಇರುವ ಈ ಪ್ರದೇಶದಲ್ಲಿ ಪೂರ್ವಾಭಿಮುಖವಾಗಿರುವ ನಾಲ್ಕು ಅರಮನೆಗಳನ್ನು ಉತ್ಖನನ ಮಾಡಲಾಗಿದೆ. ಶ್ರೇಷ್ಠರ ಅರಮನೆಗಳನ್ನು ಹೋಲುತ್ತವೆ. ಇದರ ದಕ್ಷಿಣಕ್ಕೆ ಗುಹಾಂತರ ದೇವಾಲಯವಿದ್ದು, ಅದರ ಮುಂದೆ ಅಷ್ಠಕೋನಾಕೃತಿಯ ಸ್ನಾನದ ಮನೆಯಿದೆ. ಸಿಂಘಾರದ ಹೆಬ್ಬಾಗಿಲು ಮತ್ತು ಗಜಶಾಲೆಯ ಆಗ್ನೇಯದಲ್ಲಿ ಕಟ್ಟಡಗಳ ಕುರುಹುಗಳು ಕಂಡುಬಂದಿದೆ. ಇವುಗಳಲ್ಲಿ ಕೆಲವನ್ನು ಉತ್ಖನನಕ್ಕೆ ಒಳಪಡಿಸಿದರೆ, ಇನ್ನೂ ಕೆಲವನ್ನು ಅದರ ಮೇಲಿರುವ ಕಲ್ಲು ಮತ್ತು ಮಣ್ಣನ್ನು ತೆಗೆದು ಬೆಳಕಿಗೆ ತರಲಾಗಿದೆ. ಅರಮನೆಗಳು ಎಲ್ಲಾ ಪ್ರದೇಶಗಳಲ್ಲಿದ್ದರೂ ಶ್ರೇಷ್ಠರ ಅರಮನೆ ಆವರಣ ಮತ್ತು ಟಂಕಸಾಲೆಯ ಆವರಣದಲ್ಲಿರುವ ಅರಮನೆಗಳು ಮುಖ್ಯವಾಗಿದ್ದು, ಅದರ ರಚನಾ ಶೈಲಿಯ ಎಲ್ಲಾ ಅರಮನೆಗಳ ರಚನಾ ಶೈಲಿಯನ್ನು ಪ್ರತಿನಿಧಿಸುತ್ತವೆ.

ಡಣಾಯಕನ ಆವರಣದ ಉತ್ತರಕ್ಕಿರುವ ಶ್ರೇಷ್ಠರ ಅರಮನೆಗಳ ಆವರಣದಲ್ಲಿನ ಮನೆಗಳಲ್ಲಿ ಯಾರು ವಾಸಿಸುತ್ತಿದ್ದರು ಎಂಬುದು ಇನ್ನೂ ಖಚಿತವಾಗಿಲ್ಲ. ಬಹುಶಃ ಈ ಮನೆಗಳನ್ನು ಶ್ರೇಷ್ಠರು ಅಥವಾ ಅತಿಥಿಗಳು ಬಳಸುತ್ತಿದ್ದರು ಎಂದು ಊಹಿಸಲಾಗಿದೆ. ಮಧ್ಯಕಾಲದಲ್ಲಿ ಧಾರ್ಮಿಕ ಕಟ್ಟಡಗಳು ದೊರೆಯುತ್ತವೆಯಾದರೂ ಧಾರ್ಮಿಕೇತರ ಕಟ್ಟಡಗಳಲ್ಲಿ ಬಳಸುವ ವಸ್ತುಗಳು ಬಹುಬೇಗ ನಶಿಸುವದರಿಂದ, ಅವುಗಳು ಇಂದು ನಮಗೆ ದೊರೆಯುತ್ತಿಲ್ಲ. ಈ ಕಟ್ಟಡಗಳಿಗೆ ಕಲ್ಲಿನ ತಳಪಾಯವಿದ್ದು, ಅವುಗಳು ಮಾತ್ರವೇ ನಮಗೆ ಲಭ್ಯವಿದೆ. ಸುಮಾರು ೧೩೦ ಎಕರೆಯಷ್ಟು ವಿಸ್ತಾರ ಆವರಣದಲ್ಲಿನ ಶ್ರೇಷ್ಠರ ಮನೆಗಳ ೧೭ ಅರಮನೆಗಳನ್ನು ಉತ್ಖನನ ಮಾಡಲಾಗಿದೆ. ಈ ಅರಮನೆಗಳನ್ನು ರಾಜರ ವಂಶಸ್ಥರು, ಶ್ರೇಷ್ಠರು ಅಥವಾ ಮುಖ್ಯ ಅತಿಥಿಗಳು ವಾಸಮಾಡಿರಬಹುದೆಂದು, ಅವುಗಳ ವಿಸ್ತಾರತೆ ಮತ್ತು ರಚನಾಶೈಲಿ ಆಧರಿಸಿ ತರ್ಕಿಸಲಾಗಿದೆ.

ಶ್ರೇಷ್ಠರ ಅರಮನೆಗಳಲ್ಲಿ ಎನ್‌ಎಂಕ್ಯೂ ೧, ೨, ಮತ್ತು ೪ ಇಲ್ಲಿ ವಿವರಿಸಲಾಗಿದೆ. ಅರಮನೆ ೧ ದೊಡ್ಡ ಆವರಣ ಗೋಡೆಯ ಒಳಭಾಗದಲ್ಲಿದೆ. ಇದನ್ನು ಕಂಡರಿಸಿದ ಕಲ್ಲುಗಳಿಂದ ಕಟ್ಟಲಾಗಿದೆ. ಮುಖ್ಯ ಕಟ್ಟಡವು ಉತ್ತರಾಭಿಮುಖವಾಗಿದ್ದು, ೬೪.೫ x ೫೬.೫ ಮೀಟರ್‌ಉದ್ದವಿದೆ. ಕಟ್ಟಡದ ಇಕ್ಕೆಲಗಳಲ್ಲಿಯೂ ಕಂಬಗಳಿರುವ ಸಭಾಂಗಣವಿದೆ. ಅದರ ವಾಯವ್ಯದಲ್ಲಿ ಒಂದು ಬಾವಿಯಿದೆ. ನೈರುತ್ಯಕ್ಕೆ ನೀರಿನ ಕೊಳವು ಸಹ ಇದೆ. ಹೊರಭಾಗದಲ್ಲಿರುವ ಗೋಡೆಯನ್ನು ಸುಂದರವಾಗಿ ರೂಪಿಸಲಾಗಿದ್ದು, ಕಲ್ಲುಗಳನ್ನು ಒಂದಕ್ಕೊಂದು ಹೊಂದಿಕೊಂಡಿರುವಂತೆ ಇಟ್ಟು ರಚಿಸಲಾಗಿದೆ. ಹೊರ ಮತ್ತು ಒಳಭಾಗದ ಕಲ್ಲುಗಳ ನಡುವೆ ಮಣ್ಣು ಮತ್ತು ಚಿಕ್ಕ ಕಲ್ಲುಗಳಿಂದ ತುಂಬಲಾಗಿದೆ. ಇದು ಗೋಡೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಸಹಕಾರಿಯಾಗಿದೆ. ಉತ್ತರದ ಆವರಣ ಗೋಡೆಗೆ ಸೇರಿದಂತೆ ೧೩ ಮೆಟ್ಟಿಲುಗಳಿವೆ. ಇದರ ಮೇಲಿನ ಮೂರು ಮೆಟ್ಟಿಲುಗಳ ಇಕ್ಕೆಲಗಳ ಯಾಳಿಯನ್ನು ಇರಿಸಿ ಸಿಂಗರಿಸಲಾಗಿದೆ. ಕೈಪಿಡಿ ಗೋಡೆಯ ಬದಲು ಯಾಳಿಯನ್ನು ಇಟ್ಟು ರಚಿಸಲಾಗಿದೆ. ಈ ಮೆಟ್ಟಿಲುಗಳು ಮನೆಯ ಒಳ ಮೊಗಸಾಲೆಗೆ ದಾರಿ ಮಾಡಿಕೊಡುತ್ತವೆ. ಮನೆಯ ಒಳ ಆವರಣ ಗೋಡೆಯು ಮೂರು ಕಡೆಗಳಲ್ಲಿ ಆವರಿಸಿದೆ. ಗೋಡೆಯ ಹೊರ ಭಾಗದಲ್ಲಿ ದೊಡ್ಡ ಕಲ್ಲುಗಳನ್ನು ಇಡಲಾಗಿದ್ದರೆ, ಒಳಭಾಗಕ್ಕೆ ಸಣ್ಣಕಲ್ಲುಗಳನ್ನು ಇರಿಸಿ ರಚಿಸಲಾಗಿದೆ.

ಮನೆಯ ಎರಡೂ ಕಡೆಗಳಲ್ಲಿ, ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ, ಕಂಬಗಳಿರುವ ಸಭಾಂಗಣಗಳಿವೆ. ಒಂದು ಸಭಾಂಗಣದಲ್ಲಿ ಕಂಬಗಳ ತಳಭಾಗಗಳು ಕಂಡುಬಂದಿದೆ. ಪೂರ್ವದ ಸಭಾಂಗಣವು ೨೦.೦ x ೧೧.೧೦ ಮೀಟರ್‌ಅಳತೆಯದ್ದಾಗಿದೆ. ಅದಕ್ಕೆ ಅಧಿಷ್ಠಾನ ಮತ್ತು ಮೆಟ್ಟಿಲುಗಳಿವೆ. ಅಧಿಷ್ಠಾನವಿರುವ ಪಶ್ಚಿಮದ ಸಭಾಂಗಣವು ೧೦.೧೦ x ೮.೪೫ ಮೀಟರ್‌ಅಳತೆಯಷ್ಟು ಇದೆ. ಅರಮನೆಯ ದಕ್ಷಿಣಕ್ಕೆ ತೆರೆದ ಸಭಾಂಗಣ ಅಥವ ಮೊಗಸಾಲೆಯಿದೆ. ದಕ್ಷಿಣ ಗೋಡೆಯ ಬಳಿ ನೀರಿನ ನಾಲೆಗಳು ಇದ್ದು ಅದರಲ್ಲಿ ಹಾಯುವ ನೀರು ನೈರುತ್ಯ ಭಾಗದಲ್ಲಿರುವ ದೊಡ್ಡ ತೊಟ್ಟಿಯೊಂದರಲ್ಲಿ ಸಂಗ್ರಹವಾಗುವಂತೆ ರೂಪಿಸಲಾಗಿದೆ.

ಮುಖ್ಯ ಅರಮನೆಯು ಉತ್ತರಾಭಿಮುಖವಾಗಿದ್ದು, ಅಲ್ಲಿಂದ ಪ್ರವೇಶಿಸಿದರೆ ಮನೆಯ ಮೊಗಸಾಲೆಗೆ ಬಂದು ನಿಲ್ಲಬಹುದು. ವಾಯವ್ಯಕ್ಕೆ ಕಾವಲುಗಾರರ ಕೊಠಡಿಯಿದ್ದು, ಅದರ ಸಮೀಪವೇ ಕಲ್ಲಿನಿಂದ ನಿರ್ಮಿಸಿದ ಚೌಕಾಕಾರದ ಬಾವಿಯಿದೆ. ಈ ಮನೆಗೆ ಎರಡು ಅಧಿಷ್ಠಾನಗಳು, ಒಂದರ ಮೇಲೊಂದು ನಿರ್ಮಿಸಲಾಗಿದೆ. ನೆಲಮಟ್ಟದ ಅಧಿಷ್ಠಾನದಲ್ಲಿ ಹೂವಿನ ಎಲೆ, ದಳಗಳು ಮತ್ತು ಕೀರ್ತಿಮುಖದ ಅಲಂಕರಣೆಗಳಿವೆ. ಇದರ ಮೇಲಿರುವ ಅಧಿಷ್ಠಾನದಲ್ಲಿ ಸುಂದರ ಅಲಂಕರಣಗಳಿವೆ. ಮನೆಯ ಮೊದಲ ಹಂತವನ್ನು ಐದು ಮೆಟ್ಟಿಲುಗಳ ಮೂಲಕ ಪ್ರವೇಶಿಸಬಹುದು. ಇದರ ಪೂರ್ವ ಮತ್ತು ಪಶ್ಚಿಮಗಳ ಎರಡು ಕೊಠಡಿಗಳು ಎತ್ತರದ ಅಧಿಷ್ಠಾನ ಅಥವಾ ವೇದಿಕೆಯ ಮೇಲಿದೆ.

ಎರಡನೆಯ ಹಂತವನ್ನು ಯಾಳಿಗಳಿರುವ ಐದು ಮೆಟ್ಟಿಲುಗಳ ಮೂಲಕ ಪ್ರವೇಶಿಸಬಹುದು. ಯಾಳಿಯನ್ನು ಇಟ್ಟಿಗೆ ಮತ್ತು ಗಚ್ಚುಗಾರೆಯನ್ನು ಬಳಸಿ ನಿರ್ಮಿಸಲಾಗಿದೆ. ಈ ಹಂತದ ಗೋಡೆಗಳಲ್ಲಿ ಕೂಡುಗಳಿವೆ. ಇಂತಹ ಕೂಡು ರಚನೆಗಳು ರಂಗಶಾಲೆಯ ಕಟ್ಟಡದಲ್ಲಿ ದೊರಕಿವೆ. ಮೂರನೆಯ ಹಂತವನ್ನು ಪೂರ್ವ ಮತ್ತು ಪಶ್ಚಿಮದ ಎರಡೂ ಕಡೆಗಳಲ್ಲಿರುವ ಮೆಟ್ಟಿಲುಗಳ ಮೂಲಕ ಪ್ರವೇಶಿಸಬಹುದು. ಮೆಟ್ಟಿಲುಗಳ ಇಕ್ಕೆಲಗಳಲ್ಲಿ ಅಲಂಕರಣಗಳಿರುವ ಗೋಡೆಗಳಿವೆ. ಮೂರನೆಯ ಹಂತಕ್ಕೆ ಸಹ ಎಲೆಗಳ ಅಲಂಕರಣಗಳಿರುವ ಅಧಿಷ್ಠಾನವಿದೆ. ಇದರೊಂದಿಗೆ ಮಧ್ಯದ ಭಾಗದಲ್ಲಿ ಕೋಲಾಟ ಆಡುತ್ತಿರುವ ನರ್ತಕಿಯರ ಚಿತ್ರಣವಿದೆ. ಮೂರನೆಯ ಹಂತದಲ್ಲಿ ನಾಲ್ಕು ಕೊಠಡಿಗಳಿವೆ. ಮಧ್ಯ ಭಾಗದಲ್ಲಿರುವ ಆಯತಾಕಾರವಾಗಿರುವ ಕೊಠಡಿಯು ೫.೭೫ x ೩.೮೫ ಮೀ. ಉದ್ದಗಲವಿದೆ. ಈ ಕೊಠಡಿಯ ಸುತ್ತ ಒಂದು ಹಾದಿಯಿದೆ. ಇದರ ಪೂರ್ವ ಮತ್ತು ಪಶ್ಚಿಮಕ್ಕಿರುವ ಎರಡು ಕೊಠಡಿಗಳ ಅಳತೆಯು ೫.೮೫ x ೩.೬೦ ಮೀ. ದಕ್ಷಿಣಕ್ಕೆ ಇನ್ನೊಂದು ಕೊಠಡಿಯು ೫.೭೫ x ೨.೬೦ ಮೀ. ಅಳತೆಯದ್ದಾಗಿದೆ. ಈಶಾನ್ಯದ ಮೂಲೆಯಲ್ಲಿ ಸ್ನಾನದ ಗೃಹವಿದ್ದು ಇದರ ದಕ್ಷಿಣಕ್ಕೆ ಕೈತೊಳೆಯುವ ಸ್ಥಳವಿದೆ. ಮಧ್ಯ ಕೊಠಡಿಯ ಆಗ್ನೇಯ ಭಾಗದಲ್ಲಿ L ಆಕಾರದ ಕೊಠಡಿಯಿದ್ದು ಅದಕ್ಕೆ ಉತ್ತರ ಮತ್ತು ಪೂರ್ವಕ್ಕೆ ಪ್ರವೇಶ ದ್ವಾರಗಳಿವೆ.

ಕೃಪೆ: ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು.

ಕೃಪೆ: ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು.

ಕೃಪೆ: ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು.

ಕೃಪೆ: ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು. 

ಅರಮನೆಯ ಗೋಡೆಗಳನ್ನು ಒರಟು ಕಲ್ಲುಗಳಿಂದ ರಚಿಸಿ, ಕಲಸುಮಣ್ಣಿನ ಲೇಪನವನ್ನು ನೀಡಲಾಗಿದೆ. ಇದರ ಮೇಲೆ ಗಾರೆಯ ಲೇಪನವಿರುವುದು ಕಂಡುಬಂದಿದೆ. ಮುಂದಿರುವ ಮೊಗಸಾಲೆಯಲ್ಲಿ ಮರದ ಕಂಬಗಳನ್ನು ನೆಡುವ ಕಂಬಗುಳಿ ಅಥವಾ ಕಟ್ಟೆಗಳಿವೆ. ಕಂಬಗಳಿರುವ ಸಭಾಂಗಣದಲ್ಲಿ ಗಾರೆಯ ಲೇಪನಗಳು ದೊರೆತಿದೆ. ಎರಡನೆಯ ಹಂತದಲ್ಲಿ ಅರೆಯುವ ಕಲ್ಲು, ಚೀನ ಮೂಲದ ಪೋರ್ ಸಲೀನ್ ಮೃತ್ಪಾತ್ರೆಗಳು ದೊರಕಿವೆ. ಈ ಮೃತ್ಪಾತ್ರೆಗಳು ವಿವಿಧ ಆಕಾರಗಳಿದ್ದು ಅಧಿಕವಾಗಿ ಬೋಗುಣಿಗಳು ದೊರಕಿವೆ. ಮೃತ್ಪಾತ್ರೆಯ ಒಳ ಮತ್ತು ಹೊರ ಭಾಗಗಳಲ್ಲಿ ಕೆಂಪು, ನೀಲಿ ಹಸಿರು ಬಣ್ಣಗಳಿಂದ ಚಿತ್ರಿಸಲಾಗಿದೆ. ಜೊತೆಗೆ ಜಾಮಿತಿ, ಹೂವುಗಳು ಮತ್ತು ಮಾನವರ ಚಿತ್ರಗಳನ್ನು ಕಾಣಬಹುದು.

ಅರಮನೆ ೨

ಈ ಅರಮನೆಯು (ಎಂಎನ್‌ಕ್ಯೂ ೨) ಪ್ರಸನ್ನ ವಿರೂಪಾಕ್ಷ ದೇವಾಲಯದ ಆಗ್ನೇಯಕ್ಕೆ ಇದೆ. ಪೂರ್ವಾಭಿಮುಖವಾಗಿರುವ ಈ ಅರಮನೆಯ ಅಧಿಷ್ಠಾನ ಭಾಗಗಳು ಮೂರು ಕಡೆಗಳಲ್ಲಿ ಕಂಡುಬರುತ್ತವೆ. ಅರಮನೆಗೆ ಆವರಣ ಗೋಡೆಯಿದೆ. ಇದು ನಿರ್ದಿಷ್ಟ ಆಕಾರದಲ್ಲಿ ಇಲ್ಲ. ೪೭.೮೦ x ೪೨ ಮೀಟರ್ ಅಳತೆಯ ಗೋಡೆಯನ್ನು ಕಂಡರಿಸಿದ (dressed) ಕಲ್ಲುಗಳಿಂದ ರಚಿಸಲಾಗಿದೆ. ಪೂರ್ವದ ಗೋಡೆಯು ಸಾಕಷ್ಟು ನಶಿಸಿದೆಯಾದರೂ ಪಶ್ಚಿಮ ಮತ್ತು ಉತ್ತರ ಗೋಡೆಗಳು ಅಷ್ಟಾಗಿ ಹಾಳಾಗಿಲ್ಲ. ಮುಖ್ಯ ಅರಮನೆಗೆ ಎರಡು ಅಧಿಷ್ಠಾನಗಳಿದ್ದು, ಅವುಗಳನ್ನು ಸುಣ್ಣದ ಗಾರೆಯಿಂದ ಲೇಪಿಸಲಾಗಿದೆ. ಕೆಳ ಅಧಿಷ್ಠಾನವು ನಾಲ್ಕು ಹಂತ ಅಥವಾ ಭಾಗಗಳನ್ನು ಹೊಂದಿದೆ. ಆ ಭಾಗಗಳಲ್ಲಿ ಸುಂದರವಾದ ಕೂಡು ಮತ್ತು ಅಷ್ಠಕೋನಾಕೃತಿಯ ಚಿತ್ರಣಗಳಿಂದ ಅಲಂಕರಿಸಲಾಗಿದೆ. ಮೇಲಿರುವ ಅಧಿಷ್ಠಾನದ ಭಾಗದಲ್ಲಿ ಯಾವ ಅಲಂಕರಣಗಳೂ ಇಲ್ಲ. ಅರಮನೆಯು ಪೂರ್ವಾಭಿಮುಖವಾಗಿದ್ದು, ಸುತ್ತಲಿನ ಮೂರು ಗೋಡೆಗಳ ಹೊರಭಾಗವನ್ನು ದೊಡ್ಡ ಕಲ್ಲುಗಳಿಂದ ಮತ್ತು ಒಳಭಾಗವನ್ನು ಚಿಕ್ಕ ಕಲ್ಲುಗಳಿಂದ ಕಟ್ಟಲಾಗಿದೆ. ಈ ಕಟ್ಟಡವು ನಾಲ್ಕು ಹಂತಗಳಲ್ಲಿದ್ದು, ಅವುಗಳು ಒಂದರ ಮೇಲೆ ಇನ್ನೊಂದು ಬರುವಂತೆ ಕಟ್ಟಲಾಗಿದೆ. ಪ್ರತಿ ಹಂತವೂ ಒಂದು ಚಿಕ್ಕ ಅಧಿಷ್ಠಾನವನ್ನು ಹೊಂದಿದೆ. ನಾಲ್ಕನೆಯ ಹಂತವು ಮನೆಯ ಎತ್ತರದ ಭಾಗವಾಗಿದ್ದು ಪಶ್ಚಿಮಾಭಿಮುಖವಾಗಿದೆ. ನಾಲ್ಕೂ ಹಂತಗಳ ನೆಲಗಳನ್ನು ಗಾರೆಯಿಂದ ಲೇಪಿಸಲಾಗಿದೆ.

ಮನೆಯ ಮುಂಭಾಗದ ನೆಲಕ್ಕೆ ಗಾರೆಯ ದಪ್ಪ ಲೇಪನವಿದೆ. ಕೈಪಿಡಿಯ ಯಾಳಿ ಮೆಟ್ಟಿಲುಗಳಿಂದ ಮನೆಯನ್ನು ಪ್ರವೇಶಿಸಬಹುದು. ಇದರ ಪಶ್ಚಿಮಕ್ಕೆ ಎರಡನೆಯ ಹಂತದ ಭಾಗವಿದ್ದು ಇದು ಉತ್ತರ ಮತ್ತು ದಕ್ಷಿಣದ ಭಾಗಗಳಿಗೆ ವಿಸ್ತರಿಸುತ್ತದೆ. ಎರಡನೆಯ ಹಂತಕ್ಕೆ ಸಹ ಎರಡು ಮೆಟ್ಟಿಲುಗಳಿದ್ದು, ಆನೆಯ ಶಿಲ್ಪಗಳು ಅದರ ಇಕ್ಕೆಲಗಳಲ್ಲಿವೆ. ಈ ಆನೆಗಳು ಕಮಲಗಳನ್ನು ತಮ್ಮ ಸೊಂಡಿಲಿನಿಂದ ಎತ್ತುತ್ತಿರುವಂತೆ ರೂಪಿಸಲಾಗಿದೆ. ಆನೆಯ ಸೊಂಡಿಲು, ಬಹುಶಃ ಅಗ್ನಿಯ ಆಹುತಿಗೆ ಒಳಗಾಗಿರುವುದರಿಂದ ಮುರಿದಿದೆ. ಮೊದಲ ಹಂತದಲ್ಲಿರುವಂತೆ ಈ ಹಂತದಲ್ಲಿಯೂ ನಾಲ್ಕು ಕಂಬಗಳಿರುವ ಗುಳಿಗಳನ್ನು ಪೂರ್ವ ಮತ್ತು ಪಶ್ಚಿಮದ ನೆಲದಲ್ಲಿ ಕಾಣಬಹುದು. ಮೂರನೆಯ ಹಂತವನ್ನು ಪಶ್ಚಿಮದ ಕಡೆಯಿರುವ ಮೆಟ್ಟಿಲುಗಳ ಮೂಲಕ ಪ್ರವೇಶಿಸಬಹುದು. ಇದಕ್ಕೆ ಸಹ ಯಾಳಿಯಿರುವ ಮೆಟ್ಟಿಲುಗಳಿವೆ. ಅಧಿಷ್ಠಾನ ಭಾಗದಲ್ಲಿ ಮೂರು ಹಂತಗಳು ಇದ್ದು, ಅವುಗಳಲ್ಲಿ ಅಷ್ಠಾಕೃತಿ ಮತ್ತು ಕಂಡರಿಸಿದ ಕೂಡು ಅಲಂಕರಣವಿದೆ. ಉತ್ತರ ಮತ್ತು ದಕ್ಷಿಣಗಳಲ್ಲಿ ಎರಡು ಕಿರಿದಾದ ಅಧಿಷ್ಠಾನಗಳಿವೆ.

ಪಶ್ಚಿಮದ ಮೂಲೆಯಲ್ಲಿ ಎರಡು ಮೆಟ್ಟಿಲುಗಳಿದ್ದು, ಅಲ್ಲಿಂದ ಮನೆಯ ನಾಲ್ಕನೆಯ ಹಂತವನ್ನು ತಲುಪಬಹುದು. ಈ ಮೆಟ್ಟಿಲುಗಳನ್ನು ಸಹ ಯಾಳಿ ಕೈಪಿಡಿಗೋಡೆಯಂತೆ ರೂಪಿಸಲಾಗಿದೆ. ಹಿಂದಿನ ಹಂತದಲ್ಲಿರುವಂತೆ ನೆಲದಲ್ಲಿ ಕಂಬದ ಪೀಠಗಳು ಮತ್ತು ಅಧಿಷ್ಠಾನದಲ್ಲಿ ಅಲಂಕರಣಗಳಿವೆ. ಆಯುತಾಕಾರವಾಗಿರುವ ಒಂದು ಕೊಠಡಿಯು ಮನೆಯ ತುತ್ತತುದಿಯ ಹಂತದಲ್ಲಿದೆ. ಈ ಕೊಠಡಿಯು ಪೂರ್ವಾಭಿಮುಖವಾಗಿದ್ದು ಅದರ ಸುತ್ತ ಹಾದಿಯಿದೆ. ಇಟ್ಟಿಗೆಯಿಂದ ನಿರ್ಮಿಸಿದ ಕಮಾನಿನ ಪ್ರವೇಶ ದ್ವಾರವು ಪೂರ್ವ ಮತ್ತು ಪಶ್ಚಿಮದ ಭಾಗಗಳಲ್ಲಿವೆ. ಸುಮಾರು ೧ x ೦.೭೧ ಮೀಟರ್ ಅಗಲದ ಗಾರೆಯ ಪೀಠವಿದೆ. ಬಹುಶಃ ಇದು ಮೇಲಿನ ಅಂತಸ್ತಿಗೆ ತೆರಳಲು ಬಳಸುವ ಮರದ ಏಣಿಯನ್ನು ಇಡಲು ರಚಿಸಿರುವ ಸಾಧ್ಯತೆಯಿದೆ. ಮರದ ದಿಬ್ಬಗಳು ಅಥವಾ ಪಟ್ಟಿಗಳನ್ನು ಇರಿಸಲು ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಭಾಗದ ಗೋಡೆಗಳಲ್ಲಿ ಕೂಡುಗಳಿವೆ. ಇವು ಮೇಲಿನ ಅಂತಸ್ತನ್ನು ಹೊತ್ತಿರುವ ಸಾಧ್ಯತೆಗಳಿವೆ. ಮುಖ್ಯ ಅರಮನೆಯ, ದಕ್ಷಿಣ, ಪಶ್ಚಿಮ ಮತ್ತು ಉತ್ತರದ ಮೂರು ಕಡೆಗಳಲ್ಲಿ ಕೊಠಡಿಗಳ ಶೃಂಖಲೆಯಿದೆ. ಈ ಕೊಠಡಿಗಳ ನೆಲಗಳ ಹಾಸುಗಳನ್ನು ಗಾರೆಯಿಂದ ಲೇಪಿಸಲಾಗಿವೆ. ಇವುಗಳ ಮೇಲೆ ಎತ್ತರದಲ್ಲಿ ಒಂದು ಅಧಿಷ್ಠಾನವಿರುವ ಮೊಗಸಾಲೆಯಿದ್ದು ಅವುಗಳಲ್ಲಿ ಕಂಬಗಳನ್ನು ನೆಡುವ ಪೀಠಗಳ ಇದ್ದು, ಅದರಲ್ಲಿ ಕಬ್ಬಿಣದ ಕಂಬಗಳನ್ನು ಬಳಸಿರುವ ಕುರುಹುಗಳಿವೆ. ಇವುಗಳ ಪೂರ್ವ ಮತ್ತು ಉತ್ತರಕ್ಕಿರುವ ಕೊಠಡಿಗಳು ನೆಲದಲ್ಲಿ ಹುದುಗಿದ್ದು, ಸಾಕಷ್ಟು ನಾಶವಾಗಿದೆ. ದಕ್ಷಿಣ ಭಾಗದಲ್ಲಿರುವ ಕೊನೆಯಲ್ಲಿರುವ ಸಣ್ಣ ಕೊಠಡಿಯ, ಹಿಂದೆ ದೊಡ್ಡದೊಂದು ಕೊಠಡಿ ಮತ್ತು ಮೊಗಸಾಲೆಯಿದೆ. ದೊಡ್ಡ ಕೊಠಡಿಯ ನೆಲದಲ್ಲಿ ಮರದ ಅಡ್ಡಗೋಡೆಯಿದ್ದಿರುವ ಸಾಧ್ಯತೆಗಳಿವೆ. ಇದರಿಂದ ಕೊಠಡಿಯು ಮೂರು ಭಾಗವಾಗುತ್ತದೆ. ಅದರ ಪಕ್ಕಕ್ಕೆ ಇನ್ನೊಂದು ಕೊಠಡಿ ಮತ್ತು ಪ್ರವೇಶ ದ್ವಾರವಿದೆ. ಮುಂದೆ, ಪಶ್ಚಿಮಕ್ಕೆ ಒಂದು ಹಾದಿಯಿದೆ. ಆ ಸಾಲಿನಲ್ಲಿ ಮೂರು ಕೊಠಡಿಗಳಿವೆ. ಈ ಎಲ್ಲಾ ಕೊಠಡಿಗಳು ಮತ್ತು ಹಾದಿಯನ್ನು ಗಚ್ಚುಗಾರೆಯಿಂದ ನಿರ್ಮಿಸಲಾಗಿದೆ. ನೈರುತ್ಯಕ್ಕೆ ಎರಡು ನಾಲೆಗಳು ಪೂರ್ವದಿಂದ ಪಶ್ಚಿಮಕ್ಕೆ ಸಾಗಿದೆ. ಕೊಠಡಿಗಳಲ್ಲಿ ನೀರಿನ ನಾಲೆಗಳು ಇವೆ. ಬಹುಶಃ ಇದರ ಪಕ್ಕಕ್ಕೆ ಇರುವ ಕೊಠಡಿಯು ಸ್ನಾನದ ಮನೆಯಾಗಿರುವ ಸಾಧ್ಯತೆಗಳಿವೆ. ಈ ಸಂಕೀರ್ಣದಲ್ಲಿ ದೊರಕಿರುವ ಅವಶೇಷಗಳಿಂದ ಪ್ರಸ್ತುತ ಮನೆಯು ವಾಸಗೃಹವಾಗಿರುವ ಸಾಧ್ಯತೆಯನ್ನು ದೃಢಪಡಿಸುತ್ತದೆ.

ಕೃಪೆ: ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು.

ಕೃಪೆ: ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು.

ಅರಮನೆ ೪

ಈ ಮನೆಯು (ಎನ್‌ಎಂಕ್ಯೂ ೪) ಒಂದನೆಯ ಅರಮನೆಯ ವಾಯವ್ಯಕ್ಕಿದೆ. ಸದರಿ ಮನೆಯನ್ನು ಈ ಹಿಂದೆ ರಚಿಸಿರುವ ಮನೆಯ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ. ಹಿಂದಿನ ಮನೆಯ ಅವಶೇಷಗಳು ಸಹ ಕಂಡುಬರುತ್ತವೆ. ಪ್ರಸ್ತುತ ಮನೆಯು ೨೫ x ೨೪.೧೦ ಮೀ. ಉದ್ದಗಲವಿದೆ. ಇದು ಕಲ್ಲುಗಳಿಂದ ಕಟ್ಟಿದ ಆವರಣದ ಗೋಡೆಯಲ್ಲಿದೆ. ಮನೆಯ ಮೊದಲ ಹಂತವನ್ನು ಮೂರು ಮೆಟ್ಟಿಲುಗಳ ಮೂಲಕ ಪ್ರವೇಶಿಸಿದರೆ ವರಾಂಡದ ಭಾಗವು ದೊರಕುತ್ತದೆ. ಮನೆಯ ಎರಡನೆಯ ಹಂತದ ಇಕ್ಕೆಲಗಳಲ್ಲಿ ಎರಡು ಕೊಠಡಿಗಳಿವೆ. ಇವುಗಳ ಮಧ್ಯೆ ಎತ್ತರದ ವೇದಿಕೆಯ ಭಾಗವಿದೆ. ತೆರೆದಿರುವ ಮೊಗಸಾಲೆಯನ್ನು ಪೂರ್ವದ ಆವರಣ ಗೋಡೆಯ ಕಡೆಯಿಂದ, ಪ್ರವೇಶ ಮಾಡಬಹುದು. ಉತ್ತರದ ಆವರಣ ಗೋಡೆಯ ಭಾಗದಿಂದ ಕೊಠಡಿ ಮತ್ತು ಶೌಚಾಲಯವನ್ನು ಪ್ರವೇಶಿಸಬಹುದು.

ಮನೆಯ ಮೊದಲ ಹಂತದಲ್ಲಿ ಸರಳ ಭಾಗಗಳಿರುವ ಅಧಿಷ್ಠಾನವಿದೆ. ಇದಕ್ಕೆ ಮೂರು ಮೆಟ್ಟಿಲುಗಳಿವೆ. ಇವುಗಳ ಮಧ್ಯೆ ಉತ್ತರ ಮತ್ತು ದಕ್ಷಿಣದಲ್ಲಿ ಸುಮಾರು ೦.೬೨ ಮೀಟರ್ ಎತ್ತರದಲ್ಲಿ ಮೊದಲ ನೆಲಗಟ್ಟು ಕಂಡುಬಂದಿದೆ. ಮೊದಲ ಹಂತದಲ್ಲಿ ಎರಡು ವರಾಂಡಗಳು ಅಕ್ಕಪಕ್ಕದಲ್ಲಿವೆ. ನಾಲ್ಕು ದೊಡ್ಡ ಕಂಬದ ಪೀಠಗಳಿವೆ. ಇವುಗಳು ಸೂರನ್ನು ಆಧಾರಿಸುವಲ್ಲಿ ಸಹಕಾರಿಯಾಗಿದ್ದವು. ಈ ವರಾಂಡಗಳು ಎತ್ತರದ ಜಗತಿಯ ಮೇಲಿದ್ದು, ಜಗತಿಯನ್ನು ಸಹ ಗಾರೆಯಿಂದ ಲೇಪಿಸಲಾಗಿದೆ. ಕಬ್ಬಿಣವನ್ನು ಕಂಬಕ್ಕೆ ಬಳಸಿರುವ ಕುರುಹುಗಳಿವೆ. ಮನೆಯ ಎರಡನೆಯ ಹಂತದಲ್ಲಿನ ಅಧಿಷ್ಠಾನವು ಸರಳವಾಗಿದೆ. ಈ ಹಂತವನ್ನು ಎರಡು ಮೆಟ್ಟಿಲುಗಳ ಮೂಲಕ ಪ್ರವೇಶಿಸಬಹುದು. ಮೆಟ್ಟಿಲುಗಳು ಇಟ್ಟಿಗೆ, ಕಲ್ಲು, ಕಲಸುಮಣ್ಣು ಮತ್ತು ಗಾರೆಯ ಲೇಪನಗಳನ್ನು ಹೊಂದಿದೆ. ಎರಡನೆಯ ಹಂತದ ಸೂರನ್ನು ಪೀಠದಲ್ಲಿದ್ದ ಮರದ ಕಂಬಗಳು ಹೊತ್ತಿರುವ ಸಾಧ್ಯತೆಗಳಿವೆ. ಮರದ ಕಂಬಗಳ ಪೀಠಗಳು ಮುಂಭಾಗದಲ್ಲಿದ್ದು, ಉಳಿದವು ಗೋಡೆಗೆ ಅನಿಸಿದಂತೆ ಇವೆ. ಆರು ಮರದ ಕಂಬಗಳು ದಕ್ಷಿಣ, ಉತ್ತರ ಮತ್ತು ಪಶ್ಚಿಮದ ಗೋಡೆಗಳಲ್ಲಿದ್ದು, ಅಗ್ನಿಯ ದುರಂತದಿಂದ ನಶಿಸಿರುವುದು ಕಂಡುಬಂದಿದೆ. ಈ ಹಂತದಲ್ಲಿ ಉತ್ತರ ಮತ್ತು ದಕ್ಷಿಣದಲ್ಲಿ ಎರಡು ಕೊಠಡಿಗಳಿವೆ. (೨.೭೫ x ೩.೫೦ ಮೀಟರ್) ಕೊಠಡಿಯ ಗೋಡೆಗಳನ್ನು ಕಂಡರಿಸಿದ ಕಲ್ಲು ಮತ್ತು ಕಲಸುಮಣ್ಣಿನಿಂದ ಕಟ್ಟಲಾಗಿದೆ. ಹೊರಭಾಗದ ನೆಲವನ್ನು ಗಾರೆಯಿಂದ ಲೇಪಿಸಲಾಗಿದೆ. ಮನೆಗೆ ಅಲಂಕರಿಸಿದ ಪ್ರವೇಶ ದ್ವಾರವಿದ್ದ ಕುರುಹುಗಳಿವೆ. ದ್ವಾರದ ಮಧ್ಯಭಾಗದಲ್ಲಿ ಹೂವಿನ ಅಲಂಕರಣೆ, ಕೀರ್ತಿಮುಖ, ಯಾಳಿ ಮತ್ತು ಸಿಂಹದ ತಲೆಗಳು ತೊಲೆಯ ಭಾಗದಲ್ಲಿದ್ದುದು ಕಂಡುಬಂದಿದೆ. ದಕ್ಷಿಣ ಕೊಠಡಿಯಲ್ಲಿ ಆಯತಾಕಾರವಾಗಿರುವ, ೦.೬೦ x ೦.೪೨ ಮೀ. ಅಳತೆಯ ಒಂದು ಕ್ವಾರ್ಟ್ಜ್‌ಕಲ್ಲು ಕೊರಕಿದೆ. ಇಂತಹ ಉದಾಹರಣೆಗಳು ಎನ್‌ಎಂಕ್ಯೂ ೧ ಮತ್ತು ೧೨ರ ಅರಮನೆಗಳಲ್ಲಿ ದೊರಕಿವೆ.

ಎರಡನೆಯ ಹಂತದಲ್ಲಿನ ಮಧ್ಯಭಾಗದಲ್ಲಿ ಚೌಕಾಕಾರದ ವೇದಿಕೆಯಿದ್ದು, ಅದನ್ನು ನಾಲ್ಕು ಮೆಟ್ಟಿಲುಗಳ ಮೂಲಕ ಪ್ರವೇಶಿಸಬಹುದು. ಮೆಟ್ಟಿಲುಗಳನ್ನು ಇಟ್ಟಿಗೆ, ಕಲ್ಲು ಮತ್ತು ಸುಣ್ಣದ ಗಾರೆಯಿಂದ ನಿರ್ಮಿಸಲಾಗಿದೆ. ಈ ಹಂತದಲ್ಲಿ ಸುಮಾರು ೫.೩೫ ಚದುರ ಮೀ. ಭಾಗವು ಸುಣ್ಣದ ಗಾರೆಯಿಂದ ಲೇಪಿಸಲಾಗಿದೆ. ವೇದಿಕೆಯಲ್ಲಿದ್ದ ನಾಲ್ಕು ಮರದ ಕಂಬಗಳು ಸೂರನ್ನು ಹೊತ್ತಿರುವ ಸಾಧ್ಯತೆಯಿದೆ. ಕಂಬಗಳ ಪೀಠಗಳು ನಾಲ್ಕು ಮೂಲೆಗಳಲ್ಲಿ ಕಂಡುಬರುತ್ತವೆ.

ಈ ಮನೆಗಳಲ್ಲಿ ದೊರಕಿರುವ ಅವಶೇಷಗಳಲ್ಲಿ ಕಬ್ಬಿಣದ ಮೊಳೆಗಳು ಮತ್ತು ಗೂಟಗಳು ಮುಖ್ಯವಾಗಿದೆ. ಇವುಗಳು ಮರದ ತೊಲೆಯ ಭಾಗಗಳಲ್ಲಿ ಹುದುಗಿರುವಂತೆ ದೊರಕಿವೆ. ತಾಮ್ರದ ನಾಣ್ಯಗಳು, ಗಾಜಿನ ಬಳೆಗಳು, ವಿವಿಧ ಆಕಾರದ ಸುಡಾವೆ ಮಣ್ಣಿನ ಮಣಿಗಳು, ಬಳಪದ ಕಲ್ಲು, ಕವಡೆ, ಚೀನಾ ಮೂಲದ ಪೋರ್ ಸಲೀನ್‌ಮೃತ್ಪಾತ್ರೆಗಳು, ಎರಡು ಚಿನ್ನದ ಆಭರಣಗಳು, ಚಿನ್ನದ ತಗಡು, ಮೂಗುತಿ ಮತ್ತು ಇತರೆ ಅವಶೇಷಗಳು ದೊರಕಿವೆ. ಇಲ್ಲಿ ದೊರಕಿರುವ ಅವಶೇಷಗಳಿಂದ ಇದು ಸಾರ್ವಜನಿಕರ ಸಭಾಂಗಣವಾಗಿ ಅಥವಾ ಶ್ರೇಷ್ಠರ ಅತಿಥಿಗೃಹವಾಗಿ ಉಪಯೋಗಿಸಿರುವ ಸಾಧ್ಯತೆಗಳಿವೆ.

ಅರಮನೆಗಳ ನಿರ್ಮಾಣ ವೈಶಿಷ್ಟ್ಯವನ್ನು ಒಟ್ಟಾರೆಯಾಗಿ ಹೇಳುವುದಾದರೆ, ಬಹುತೇಕ ಎಲ್ಲಾ ಮನೆಗಳನ್ನು ಉತ್ತರ ಅಥವಾ ಪೂರ್ವಭಿಮುಖವಾಗಿ ನಿರ್ಮಿಸಲಾಗಿದೆ. ಇದಕ್ಕೆ ಅಪವಾದಗಳೆಂಬಂತೆ ಕೆಲವು ದಕ್ಷಿಣ ಮತ್ತು ಪಶ್ಚಿಮಾಭಿಮುಖವಾದ ಮನೆಗಳು ಸಹ ಇವೆ. ಎಲ್ಲಾ ಮನೆಗಳಿಗೂ ಮೆಟ್ಟಿಲುಗಳಿದ್ದು, ಮಧ್ಯದ ಹಂತವು ‘U’ ಆಕಾರದ ವೇದಿಕೆ ಭಾಗವನ್ನು ಹೊಂದಿದ್ದು, ಸರಳ ಅಥವಾ ಅಲಂಕರಣಗಳಿಂದ ಕೂಡಿದ ಒಂದು, ಎರಡೂ ಅಥವಾ ಮೂರು ಭಾಗಗಳಿರುವ ಅಧಿಷ್ಠಾನವಿದೆ. ಮನೆಗಳಿಗೆ ಆವರಣ ಗೋಡೆಗಳಿದ್ದು, ಗೋಡೆಯ ತುದಿಯು ಕಿರಿದಾಗುತ್ತ ಸಾಗುತ್ತದೆ. ಮನೆಗಳಿಗೆ ಗಾರೆಯ ಲೇಪನವಿರುವುದರಿಂದ ಇವುಗಳು ಸಾಕಷ್ಟು ಕಾಲದವರೆಗೆ ಬಳಕೆಯಲ್ಲಿದ್ದವೆಂದು ಹೇಳಬಹುದು. ಎರಡು ಅಥವಾ ಮೂರು ಹಂತಗಳಿರುವ ಮನೆಗಳಿಗೆ ಮೆಟ್ಟಿಲುಗಳ ಮೂಲಕ ಪ್ರವೇಶ ಮಾಡಬಹುದು. ಮೆಟ್ಟಿಲುಗಳಿಗೆ ಕೈಪಿಡಿ ಗೋಡೆಗಳ ಬದಲಿಗೆ ಯಾಳಿ, ಆನೆ ಅಥವಾ ಹೂವಿನ ಅಲಂಕರಣಗಳನ್ನು ಬಳಸಲಾಗಿದೆ. ಅದರ ಮೂಲಕ ಪ್ರವೇಶಿಸಿದಾಗ ತೆರೆದ ಮೊಗಸಾಲೆಯು ದೊರಕುತ್ತದೆ. ಇಲ್ಲಿಂದ ಮೇಲಿನ ಹಂತಗಳನ್ನು ಮೆಟ್ಟಿಲುಗಳ ಮೂಲಕವೇ ಪ್ರವೇಶ ಪಡೆಯಬೇಕು. ಎತ್ತರದ ಮನೆಯ ಭಾಗವು ಹಿಂಭಾಗದಲ್ಲಿದ್ದು ಅವುಗಳ ಸಾಮಾನ್ಯವಾಗಿ ಪಶ್ಚಿಮ ಅಥವಾ ದಕ್ಷಿಣದಲ್ಲಿರುತ್ತದೆ. ಈ ಎಲ್ಲಾ ಹಂತಗಳಲ್ಲಿ ಕಂಬಗಳಿದ್ದು, ಅವುಗಳು ಸೂರನ್ನು ಹೊತ್ತಿರುತ್ತಿದ್ದವು. ಮನೆಯ ಭಾಗದಿಂದ ಗಾಳಿ ಮತ್ತು ಬೆಳಕು ಹಾಯ್ದು ಬರುವಂತೆ ಅನುಕೂಲ ಮಾಡಲಾಗಿದೆ. ಮಧ್ಯದ ಕೊಠಡಿಯು ಎತ್ತರದ ಭಾಗದಲ್ಲಿದ್ದು ಅವುಗಳ ಪಕ್ಕದಲ್ಲಿ ಹಾದಿ ಮತ್ತು ಇನ್ನೂ ಕೆಲವು ಕೊಠಡಿಗಳು ಕಂಡುಬಂದಿವೆ. ಇವುಗಳಲ್ಲಿ ಕೆಲವುಗಳನ್ನು ಶೌಚಾಲಯ ಮತ್ತು ಸ್ನಾನದ ಗೃಹಗಳಾಗಿ ಬಳಸಲಾಗಿದೆ. ಗಾರೆಯನ್ನು ಬಳಸಿರುವುದರಿಂದ ಈ ಮನೆಗಳು ವಾಸಕ್ಕಾಗಿ ರೂಪಿಸಲಾಗಿದೆ ಎಂದು ತಿಳಿಯಬರುತ್ತದೆ. ಎಲ್ಲ ಮನೆಗಳನ್ನು ಕಲ್ಲು, ಕಲಸುಮಣ್ಣು, ಇಟ್ಟಿಗೆಗಳಿಂದ ಕಟ್ಟಿ, ಸುಣ್ಣವನ್ನು ಲೇಪಿಸಲಾಗಿದೆ. ಮೆಟ್ಟಿಲು ಮತ್ತು ಗೂಡುಗಳನ್ನು ಇಟ್ಟಿಗೆ ಮತ್ತು ಕಲಸು ಮಣ್ಣಿನಿಂದ ರಚಿಸಲಾಗಿದೆ.

ಕೃಪೆ: ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು.

ಕೃಪೆ: ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು.

ಕೃಪೆ: ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು.

ಕೃಪೆ: ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು. 

ಕೆಲವು ಅರಮನೆಗಳ ಗೋಡೆಗಳಲ್ಲಿ ವರ್ಣ ಲೇಪನ ಅಥವಾ ವರ್ಣಚಿತ್ರಗಳಿವೆ. ಇದನ್ನು ಪೋರ್ಚುಗೀಸರ ಬರಹಗಳು ದೃಢಪಡಿಸಿವೆ. ಗಚ್ಚುಗಾರೆಯ ಮಾನವ ಮತ್ತ ಹೂವಿನ ಅಲಂಕರಣಗಳು ಇರುವುದರಿಂದ ಈ ಮನೆಗಳನ್ನು ಸಮಾಜದ ಪ್ರತಿಷ್ಠಿತರು ಉಪಯೋಗಿಸಿರಬಹುದೆಂದು ತೋರುತ್ತದೆ. ಮನೆಯ ವಿವಿಧ ಹಂತಗಳಲ್ಲಿ ಕಂಬಗಳಿಗಾಗಿ ಪೀಠಗಳು ಇವೆ. ಇವುಗಳಲ್ಲಿ ಮರದ ಕಂಬಗಳು ಇದ್ದಿರುವ ಸಾಧ್ಯತೆಗಳಿವೆ. ಅವುಗಳು ಸೂರನ್ನು ಆಧರಿಸಿರುತ್ತಿದ್ದವು. ಮನೆಯ ಹಾದಿಗಳು ಅಥವಾ ಪಡಸಾಲೆಯ ಹಾದಿಗಳಲ್ಲಿ ಕಂಬಗಳ ಸಾಲುಗಳು ಇದ್ದುದು ಕಂಡುಬರುತ್ತದೆ. ಮಹಡಿಯ ಮೆಟ್ಟಿಲುಗಳು ಇರುವುದರಿಂದ, ಮನೆಗಳು ಒಂದು ಅಥವಾ ಎರಡು ಅಂತಸ್ತುಗಳನ್ನು ಹೊಂದಿದ್ದವು ಎಂದು ಹೇಳಬಹುದು. ಮೇಲಿನ ಅಂತಸ್ತು ಸಾಮಾನ್ಯವಾಗಿ ಮರದಿಂದ ನಿರ್ಮಿಸಿರುವುದು ಕಂಡುಬಂದಿದೆ. ಅಂತಸ್ತಿನ ಮನೆಗಳು ಇದ್ದವೆಂಬುದು ಪಯಾಸ್‌ನ ವರ್ಣನೆಯಿಂದಲೂ ತಿಳಿದುಬರುತ್ತದೆ. ಮನೆಗಳ ಸೂರುಗಳು ದೇವಾಲಯದ ಗೋಪುರದಂತೆ ರಚಿಸಿರುವ ಸಾಧ್ಯತೆಗಳಿವೆಯೆಂದು, ಉತ್ಖನನದಲ್ಲಿ ದೊರಕಿರುವ ಅವಶೇಷಗಳಿಂದ ತರ್ಕಿಸಲಾಗಿದೆ. ಕೆಲವು ಶಿಲ್ಪಗಳಲ್ಲಿಯೂ ಮನೆಗಳಿಗೆ ಅಂತಹ ಸೂರು ಮತ್ತು ರಚನೆಗಳಿದ್ದವು ಎಂಬುದು ತಿಳಿಯಬರುತ್ತದೆ. ಈ ಮನೆಗಳು ಅಗ್ನಿಯ ದುರಂತದಿಂದ ನಾಶವಾಗಿರುವುದಕ್ಕೆ ಸಾಕ್ಷಿಯಾಗಿ ಉತ್ಖನನದಲ್ಲಿ ಇದ್ದಿಲು, ಬೂದಿ ಮತ್ತು ತ್ರುಟಿತ ಕಲ್ಲುಗಳು ದೊರಕಿವೆ.[2]

ಹಂಪೆಯ ಟಂಕಸಾಲೆಯ ಪ್ರದೇಶವು ಮುಖ್ಯವಾಗಿದ್ದು ಇಲ್ಲಿ ರಾಜರ ನಿವಾಸಗಳು, ಸಭಾಂಗಣಗಳು ಹಾಗೂ ಕೆಲವು ಧಾರ್ಮಿಕ ಕಟ್ಟಡಗಳು ಉತ್ಖನನದಲ್ಲಿ ಶೋಧವಾಗಿವೆ. ಈ ರಾಜ ಸಭಾಂಗಣ ಪ್ರದೇಶದ ಹಿಂಭಾಗದಲ್ಲಿ ಉತ್ಖನನ ಕೈಕೊಂಡಾಗ, ಅಧಿಷ್ಠಾನಯುಕ್ತ ಕಲ್ಲಿನ ಕಟ್ಟಡಗಳ ಅವಶೇಷಗಳು ಬೆಳಕಿಗೆ ಬಂದವು. ಗೋಡೆಯ ಭಾಗಗಳು ದೊರಕಿಲ್ಲ. ಈ ಕಟ್ಟಡವನ್ನು ಮೂರು ಹಂತಗಳಲ್ಲಿ ನಿರ್ಮಿಸಿದ ಪುರಾವೆಗಳಿವೆ. ಮೊದಲ ಎರಡು ಹಂತಗಳನ್ನು ಸುಂದರವಾಗಿ ಕೆತ್ತಿದ ಅಥವಾ ನಯಗೊಳಿಸಿದ ಕಲ್ಲುಗಳನ್ನು ಬಳಸಿ ಕಟ್ಟಲಾಗಿದ್ದು, ಅವುಗಳನ್ನು ಆಶ್‌ಲ್ಯಾರ್ (Ashlar) ಪದ್ಧತಿಯಿಂತೆ ಕಲಾತ್ಮಕವಾಗಿ ರಚಿಸಲಾಗಿದೆ. ಈ ಕಟ್ಟಡದ ಪಕ್ಕದಲ್ಲಿ ಒಂದು ಚಿಕ್ಕ ದ್ವಾರವಿರುವ ಕಂಬಗಳುಳ್ಳ ಒಂದು ಗುಡಿಯ ರಚನೆಯು ಬೆಳಕಿಗೆ ಬಂದವು. ಒಂದು ಚಿಕ್ಕ ಕೊಳವನ್ನು (tank) ಮತ್ತು ಪತ್ತೆ ಹಚ್ಚಲಾಯಿತು. ಸುತ್ತಲೂ ಮಂಟಪದಂತಿರುವ (cloister) ಒಂದು ರಚನೆಯನ್ನು ಉತ್ಖನನದಲ್ಲಿ ಪತ್ತೆ ಹಚ್ಚಲಾಯಿತು. ಇದು ರಂಗಮಹಲ್ ಎಂದು ಹೆಸರಿಸಿರುವ ಸ್ಥಳದ ಸಮೀಪ ದೊರಕಿದೆ. ಇದರ ಒಂದು ಪಕ್ಕದಲ್ಲಿ ಕಂಬಗಳು ಇರುವ ಮೊಗಸಾಲೆಯು ಕಂಡುಬಂದಿದೆ. ಇಲ್ಲಿರುವ ಒಂದು ಕೋಣೆಯಲ್ಲಿ ಕಕ್ಕಸು ಗುಂಡಿಯನ್ನು ಮತ್ತು ಅದರ ನಾಲೆಯನ್ನು ಪತ್ತೆಹಚ್ಚಲಾಗಿದೆ. ರಂಗಮಹಲಿನ ಪೂರ್ಣ ಸ್ವರೂಪವನ್ನು ಉತ್ಖನನದಲ್ಲಿ ಬಹಿರಂಗಗೊಳಿಸಲಾಯಿತು. ಚಿನ್ನದ ಉಂಗುರು, ಸೂಡಾವೆ ಮಣ್ಣಿನ ಮುದ್ರೆಯು ಈ ಉತ್ಖನನದಲ್ಲಿ ದೊರಕಿದ ಪ್ರಮುಖದ ಅವಶೇಷಗಳಾಗಿವೆ.[3]

ಕೃಪೆ: ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು.

ಕೃಪೆ: ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು.

ರಾಜ ಸಭಾಂಗಣ (King’s Audience Hall) ಮತ್ತು ಮಹಾನವಮಿ ದಿಬ್ಬದ ಬಳಿಯ ಟಂಕಸಾಲೆಯ ಪ್ರದೇಶದಲ್ಲಿನ ಉತ್ಖನನದಲ್ಲಿ ಮೂರು ಕಟ್ಟಡಗಳನ್ನು ಬೆಳಕಿಗೆ ತರಲಾಯಿತು. ಮೂರು ಹಂತಗಳಲ್ಲಿ ರಚಿಸಿರುವ ಕಟ್ಟಡದ ಮೊದಲ ಎರಡು ಹಂತಗಳಲ್ಲಿ ಕಂಡರಿಸಿದ ಕಲ್ಲು ಮತ್ತು ಮೂರನೆಯ ಹಂತದಲ್ಲಿ ಒರಟು ಕಲ್ಲುಗಳನ್ನು ಬಳಸಿ ಅದರ ಮೇಲೆ ಸುಣ್ಣದ ಗಾರೆಯ ದಪ್ಪ ಲೇಪನವನ್ನು ಮಾಡಲಾಗಿದೆ. ಕಂಬಗಳುಳ್ಳ ಆಯತಾಕಾರದ ಒಂದು ಉದ್ದನೆಯ ಸಭಾಂಗಣವನ್ನು ಬೆಳಕಿಗೆ ತರಲಾಯಿತು. ಇದರ ಉದ್ದವು ಪೂರ್ವ ಪಶ್ಚಿಮವಾಗಿ ೪೦ ಮೀಟರ್ ಉತ್ತರ ದಕ್ಷಿಣವಾಗಿ ೩೨.೩೫ ಅಗಲ, ಮಹಾನವಮಿ ಮತ್ತು ಭೂಗತ ಕೊಠಡಿಯ ಬಳಿಯ ಈ ಕಟ್ಟಡಕ್ಕೆ ಮೆಟ್ಟಿಲುಗಳು ಇರುವುದು ಕಂಡುಬಂದಿದೆ. ಈ ಸಭಾಂಗಣವನ್ನು ಮಧ್ಯದಿಂದ ಬೇರ್ಪಡಿಸದಂತೆ ಎರಡು ಭಾಗಗಳು ಇದ್ದು ಪ್ರತಿಯೊಂದು ಭಾಗದಲ್ಲಿಯೂ ನಾಲ್ಕು ಕೋಣೆಗಳು ಇವೆ. ಸಭಾಂಗಣಕ್ಕೆ ಗಚ್ಚುಗಾರೆಯ ನೆಲ ಸಮೀಪವೇ ಕಂಬಗಳಿರುವ ಸಭಾಂಗಣಗಳ ಸಾಲುಗಳು ಬೆಳಕಿಗೆ ಬಂದವು. ಇವುಗಳಿಗೆ ಅಲಂಕೃತ ಅಧಿಷ್ಠಾನ ಭಾಗಗಳು ಇವೆ. ಎರಡು ಸಭಾಂಗಣಗಳ ನಡುವೆ ನಡೆದಾಡುವ ಹಾದಿಯಿದೆ. ಇವುಗಳಲ್ಲಿ ಮೂರು ಕಟ್ಟಡಗಳ ಅಳತೆಗಳು ಹೀಗಿವೆ. ಉತ್ತರ-ದಕ್ಷಿಣವಾಗಿ ೨೧ ಮೀಟರ್, ಉದ್ದ, ೧೬.೫೦ ಅಗಲ ಮತ್ತು ೨.೫ ಮೀಟರ್ ಗಳ ಸಮಾನಂತರದಲ್ಲಿ ಕಂಬಗುಳಿಗಳು ಇವೆ. ಎರಡನೆಯ ಕಟ್ಟಡವು ಪೂರ್ವ-ಪಶ್ಚಿಮವಾಗಿ ೧೬.೩೦ ಮೀ. ಉತ್ತರ-ದಕ್ಷಿಣವಾಗಿ ೬.೮೨ ಮೀ. ಇದ್ದರೆ ಮೂರನೆಯದು ಪೂರ್ವ-ಪಶ್ಚಿಮವಾಗಿ ೩೯.೭೦ ಮೀ. ಮತ್ತು ಉತ್ತರ ದಕ್ಷಿಣವಾಗಿ ೧೯.೧೦ ಮೀ.ಳತೆಯಷ್ಟಿದೆ. ಈ ಕಟ್ಟಡಗಳ ಸಮೀಪವೇ, ಮುಚ್ಚಿದ ನಾಲೆ ಅಥವಾ ಚರಂಡಿಯನ್ನು ಬೆಳಕಿಗೆ ತರಲಾಯಿತು. ಚರಂಡಿಯ ಉದ್ದವು ೭೦ ಸೆಂ.ಮೀ. ಮತ್ತು ೫೦ ಸೆಂ.ಮೀ. ಅಗಲ ಇನ್ನೊಂದು ಚರಂಡಿಯನ್ನು ಸಹ ಈ ಕಟ್ಟಡಗಳ ಸಂಕೀರ್ಣದಲ್ಲಿ ಪತ್ತೆಹಚ್ಚಲಾಗಿದೆ. ಇವುಗಳನ್ನು ವಿವಿಧ ಹಂತ ಮತ್ತು ಕಾಲಘಟ್ಟಗಳಲ್ಲಿ ರಚಿಸಲಾಗಿದೆ. ಟಂಕಸಾಲೆ ಪ್ರದೇಶದಲ್ಲಿಯೇ ಹಲವು ಪೆರಿಸ್ಟ್ಯೆಲಾರ್ (peristylar) ಆವರಣವಿರುವ ದೊಡ್ಡ ನಿರ್ಮಿತಿಗಳ ಅಧಿಷ್ಠಾನ ಭಾಗಗಳನ್ನು ಹೊರತೆಗೆಯಲಾಗಿದೆ. ಈ ನಿರ್ಮಿತಿಗಳ ಕೊಠಡಿಗಳು ವಿವಿಧ ಅಳತೆಯಲ್ಲಿದ್ದುದು ಕಂಡುಬಂದಿದೆ. ಇಲ್ಲಿ ಸುಡಾವೆ ಮಣ್ಮಿನ ಕೊಳವೆಗಳು ಪತ್ತೆಯಾದವು. ಮೆಟ್ಟಿಲುಗಳಿರುವ ಬಾವಿ, ಇಂಗುಗುಳಿಗಳು (sockpit) ಸಹ ಉತ್ಖನನದಲ್ಲಿ ಪತ್ತೆಯಾಗಿದೆ.[4]

ಈ ಪ್ರದೇಶದಲ್ಲಿ ಒಂದು ದೊಡ್ಡ ಮನೆಯನ್ನು ಉತ್ಖನನದಲ್ಲಿ ಬೆಳಕಿಗೆ ತರಲಾಯಿತು. ರಾಜ ಸಭಾಂಗಣದ ಸಮೀಪದಲ್ಲಿರುವ ಈ ಮನೆಯಲ್ಲಿ ಆರು ಕೊಠಡಿಗಳು ಇದ್ದು, ಇದನ್ನು ರಾಜರು ತಮ್ಮ ಖಾಸಗಿ ಸಭೆಗಳಿಗೆ ಉಪಯೋಗಿಸುತ್ತಿದ್ದರು ಎಂದು ಊಹಿಸಲಾಗಿದೆ. ಮನೆಯು ರಾಜ ಸಭಾಂಗಣದ ಸಮೀಪವಿರುವದರಿಂದ ಇದು ಖಾಸಗಿ ಸಭಾಂಗಣವೆಂದು ಅಭಿಪ್ರಾಯಪಡಲಾಗಿದೆ. ಒರಟು ಕಲ್ಲುಗಳಿಂದ ಕಟ್ಟಿರುವ ಗೋಡೆಯು ೦.೬೦ ಮೀ. ಎತ್ತರ ಮತ್ತು ೦.೬೦-೦.೯೦ ಮೀ. ನಷ್ಟು ದಪ್ಪಿವಿದೆ. ಗೋಡೆಯ ಹೊರ ಮತ್ತು ಒಳಭಾಗಗಳನ್ನು ಕಲಸುಮಣ್ಣಿನಿಂದ ಲೇಪಿಸಿರುವುದು ಗಮನಾರ್ಹ. ಇದರ ಸಮೀಪವೇ ಮೆಟ್ಟಿಲುಗಳಿರುವ ಕೊಳವನ್ನು ಸಹ ಉತ್ಖನನ ಮಾಡಲಾಯಿತು. [5] ೭.೨೫ x ೭.೨೫ ಮೀ. ಉದ್ದಗಲದ ಇನ್ನೊಂದು ಕೊಳವನ್ನು ಬೆಳಕಿಗೆ ತರಲಾಯಿತು. ಇದನ್ನು ಕಣಶಿಲೆಯ ಮೇಲೆ ನಿರ್ಮಿಸಿದೆ. ಮೇಲಿನಿಂದ ಕೆಳಭಾಗದವರೆಗಿನ ಮೆಟ್ಟಿಲುಗಳ ಅಳತೆಯು ಕ್ರಮವಾಗಿ ಕಿರಿದಾಗುವಂತೆ ರಚಿಸಿರುವುದು ಗಮನಾರ್ಹ. ಕೊಳದ ಕೆಲಭಾಗಕ್ಕೆ ಇಟ್ಟಿಗೆಗಳನ್ನು ಬಳಸಲಾಗಿದೆ. ಅದರ ಅಳತೆಯ ೨೨ x ೧೮ x ೬ ಸೆ.ಮೀ. ಕೊಳದ ಕೆಳಭಾಗದ ಮೆಟ್ಟಿಲುಗಳಿಗೆ ದಪ್ಪವಾದ ಗಚ್ಚುಗಾರೆಯ ಲೇಪನವಿದೆ. ಕೊಳಗಳಿಗೆ ನೀರು ಹರಿಯಲು ಕಾಲುವೆಗಳನ್ನು ಸಹ ನಿರ್ಮಿಸಲಾಗಿದೆ. [6]

ಆಕರ
ಪುರಾತತ್ವ ಸಂಪುಟ ಯೋಜನೆ, ಸಂ. ೩, (ಆದಿ ಇತಿಹಾಸ ಮತ್ತು ಮಧ್ಯಕಾಲೀನ ಯುಗ), ೨೦೦೧, ಕನ್ನಡ ವಿಶ್ವವಿದ್ಯಾಲಯ ಹಂಪಿ.

 

[1] ವಿಜಯನಗರ ಪ್ರೊಗ್ರೆಸ್‌ರಿಪೋರ್ಟ್‌, ೧೯೭೯ ರಿಂದ ೧೯೮೩ ರವರೆಗೆ, ಇಂಡಿಯನ್‌ಆರ್ಕಿಯಾಲಜಿ ಎ ರಿವ್ಯೂ, ೧೯೭೮-೭೯ ರಿಂದ ೧೯೮೯-೯೦ ರವರೆಗೆ.

[2] ಅದೇ, ವಿಜಯನಗರ ಪ್ರೋಗ್ರಸ್‌ರಿರ್ಪೋರ್ಟ್‌, ೧೯೭೯ ರಿಂದ ೧೯೮೩ ರವರೆಗೆ.

[3] ಐಎಆರ್‌, ೧೯೭೯-೮೦ ಮತ್ತು ೧೯೮೦-೮೧, ಪು. ೩೩ ಮತ್ತು ೨೬-೨೭

[4] ಅದೇ, ೧೯೮೦-೮೧ ಮತ್ತು ೧೯೮೧-೮೨, ಪು. ೨೭ ಮತ್ತು ೨೫-೨೬

[5] ಅದೇ, ೧೯೮೧-೮೨, ಪು. ೨೫-೨೬

[6] ಅದೇ, ಪು. ೧೯೮೨-೯೩, ಪು. ೩೨-೩೫