ಋ. ವರದರಾಜಮ್ಮನ ಬಜಾರು

ವಿಜಯನಗರದ ಪ್ರಮುಖ ದೇವಾಲಯಗಳಲ್ಲಿ ಕಮಲಾಪುರ ಬಳಿಯಿರುವ ರಘುನಾಥ ದೇವಾಲಯವೂ ಒಂದು. ಇದನ್ನು ಸ್ಥಳೀಯರು ಪಟ್ಟಾಭಿರಾಮ ದೇವಾಲಯವೆಂದೇ ಕರೆಯುತ್ತಾರೆ. ಶಾಸನಗಳು ರಘುನಾಥನೆಂದು ಹೇಳಿವೆ.[1] ರಘುನಾಥ ದೇವಾಲಯವು ಅಚ್ಯುತರಾಯನ ಕಾಲದಲ್ಲಿ ನಿರ್ಮಾಣವಾಗಿದೆ. ದೇವಾಲಯವನ್ನು ಮೂರು ಗೋಪುರುಗಳನ್ನೊಳಗೊಂಡ ವಿಶಾಲ ಪ್ರಾಂಗಣದಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಎಡಬದಿಗೆ ಅಮ್ಮನವರ ಗುಡಿ ಇದ್ದರೆ, ಬಲಬದಿಗೆ ಸ್ವಲ್ಪ ಮುಂಭಾಗದಲ್ಲಿ ಕಲ್ಯಾಣಮಂಟಪವಿರುವುದು.

ರಘುನಾಥ ದೇವಾಲಯದ ಪೂರ್ವ ಗೋಪುರವನ್ನು ದಾಟಿದರೆ ಸಿಗುವುದು ವರದರಾಜಮ್ಮನ ಪಟ್ಟಣ. ಇದು ದೇವಾಲಯದ ಸುತ್ತಮುತ್ತಲೂ ಆವರಿಸಿದ್ದಿತು. ಈ ಪಟ್ಟಣವನ್ನು ಶಾಸನಗಳಲ್ಲಿ ವರದಾದೇವಿ ಅಮ್ಮನವರ ಪಟ್ಟಣ, ವರದರಾಜಮ್ಮನ ಪಟ್ಟಣ.[2] ವರದರಾಜಿಯಮ್ಮನ ಪಟ್ಟಣ[3]ವೆಂದು ಉಲ್ಲೇಖಿಸಲಾಗಿದೆ. ಡೊಮಿಂಗೋಪಾಯೇಸನು, ವಿಜಯನಗರದ ಪೂರ್ವದಿಕ್ಕಿನಲ್ಲಿ “Ardegema” ಎಂಬ ಪಟ್ಟಣವನ್ನು ರಾಜನು ತನ್ನ ರಾಣಿಯ ಮೇಲಿನ ಪ್ರೀತಿಗಾಗಿ ಕಟ್ಟಿಸಿದನೆಂದು ತಿಳಿಸಿದ್ದಾನೆ[4] ನ್ಯೂನಿಜ್‌ಇದನ್ನು “Ondegema” ಎಂಬುದಾಗಿ ಉಲ್ಲೇಖಿಸಿದ್ದು, ಈ ಹೊಸ ನಗರಕ್ಕೆ ನರ್ವರನೆಂಬುವನು ರತ್ನ ಭಂಡಾರಿಯೂ, ಮುಖ್ಯಾಧಿಕಾರಿಯೂ ಆಗಿದ್ದಾನೆಂದು ತಿಳಿಸಿದ್ದಾನೆ.[5] ಇವರು ಉಲ್ಲೇಖಿಸಿರುವ ಪಟ್ಟಣವು ವಿಜಯನಗರ ಪಟ್ಟಣದ ಪೂರ್ವಕ್ಕಿದ್ದ ವರದರಾಜಮ್ಮನ ಪಟ್ಟಣವೆಂಬುದಾಗಿಯೂ ಅಭಿಪ್ರಾಯಪಡಲಾಗಿದೆ.[6]

ಅಚ್ಯುತರಾಯನ ಪಟ್ಟದರಸಿಯಾದ ವರದಾದೇವಿಯ ನೆನಪಿಗಾಗಿ ಕಟ್ಟಿಸಿದ ಪಟ್ಟಣವೇ ವರದರಾಜಮ್ಮನ ಪಟ್ಟಣ. ಈ ಪಟ್ಟಣವು ಪ್ರಮುಖ ವ್ಯಾಪಾರ ಕೇಂದ್ರವೂ ಆಗಿದ್ದಿತು. ಇದಕ್ಕೆ ಪುಷ್ಟಿಯಾಗಿ ಶಾಸನಗಳು ವರದರಾಜಮ್ಮನ ಪೇಟೆಯೆಂದು ಕರೆದಿವೆ.[7] ಶಾಸನದಲ್ಲಿ ಕರೆದಿರುವ ವರದರಾಜಮ್ಮನ ಪೇಟೆಯನ್ನು ಪ್ರಸ್ತುತ ಅಧ್ಯಯನದಲ್ಲಿ ವರದರಾಜಮ್ಮನ ಬಜಾರೆಂದು ಸಂಬೋಧಿಸಲಾಗಿದೆ. ಸಾಮಾನ್ಯವಾಗಿ ಇತರ ಪೇಟೆಗಳೂ ಬಜಾರು ಎಂದು ವಿದ್ವಾಂಸರಿಂದ ಗುರುತಿಸಲ್ಪಟ್ಟಿರುವುದರಿಂದ ಈ ಅಧ್ಯಯನದಲ್ಲೂ ಪೇಟೆಯನ್ನು ಬಜಾರು ಎಂತಲೇ ಗುರುತಿಸಲಾಗಿದೆ. ವರದರಾಜಮ್ಮನ ಬಜಾರು ರಘುನಾಥ ದೇವಾಲಯದಿಂದ ಪೂರ್ವಕ್ಕೆ ವಿಜಯನಗರದ ಹೊರಬದಿಯ ಕೋಟೆ ಬಾಗಿಲಾದ ಪೆನುಗೊಂಡ ಬಾಗಿಲಿನವರೆಗೂ ವಿಸ್ತರಿಸಿದ್ದಿತು. ಈ ಬಾಗಿಲನ್ನು ಶಾಸನದಲ್ಲಿ ಪೆನುಗೊಂಡ ಬಾಗಿಲೆಂದು ಕರೆದರೆ, ಇಂದು ‘ಸಣ್ಣಕ್ಕೆಪ್ಪನ ಅಗಸೆ’ ಯೆಂದು ಸ್ಥಳೀಯರು ಕರೆಯುತ್ತಿರುವರು. ಪೆನುಗೊಂಡ ಬಾಗಿಲ ಹೊರ ಭಾಗದಲ್ಲಿ ಸಣ್ಣಕ್ಕಿ ವೀರಭದ್ರ ದೇವಾಲಯವು ಇಂದಿಗೂ ಅಸ್ತಿತ್ವದಲ್ಲಿರುವುದರಿಂದ, ದೇವಾಲಯದ ಹೆಸರನ್ನೇ ಬಾಗಿಲಿಗೂ ಅನ್ವಯಿಸಿರುವುದನ್ನು ಇಲ್ಲಿ ಕಾಣಬಹುದು.

ವರದರಾಜಮ್ಮನ ಬಜಾರದಲ್ಲಿ ಸಾಲು ಮಂಟಪಗಳಿದ್ದುದನ್ನು ಇಕ್ಕೆಲಗಳಲ್ಲಿ ಬಿದ್ದಿರುವ ಅವಶೇಷಗಳಿಂದ ಸ್ಪಷ್ಟವಾಗಿ ಗುರುತಿಸಬಹುದು. ಆದರೆ ಬಜಾರದ ಪರಿಸರವನ್ನು ತೋಟಗಳಾಗಿ ಮಾರ್ಪಡಿಸಿರುವುದು ಹಾಗೂ ಬಜಾರದ ಮಧ್ಯೆ ಇತ್ತೀಚೆಗೆ ಹೊಸದಾಗಿ ನೀರಿನ ಕಾಲುವೆಯನ್ನು ನಿರ್ಮಿಸಿರುವುದರಿಂದ ಸಾಲು ಮಂಟಪಗಳು ಭಗ್ನಗೊಂಡಿವೆ. ಬೀದಿಯ ಇಕ್ಕೆಲಗಳಲ್ಲಿ ಸಾಲು ಮಂಟಪಗಳ ಜೊತೆಗೆ ನೀರಿನ ಕೊಳ, ದೇವಾಲಯ ಹಾಗೂ ಇತರ ಧಾರ್ಮಿಕ ಕಟ್ಟಡಗಳು ಕಂಡುಬರುತ್ತವೆ. ಅವುಗಳಲ್ಲಿ ನೀರಿನ ಕಾಲುವೆಯ ಆಚೆ ಪೆನುಗೊಂಡ ಬಾಗಿಲವರೆಗೆ ಅನೇಕ ದೇವಾಲಯಗಳ ಅವಶೇಷಗಳು ಕಾಣಬರುವವು.

ವಿಜಯನಗರ ಕಾಲದ ವರದರಾಜಮ್ಮನಪೇಟೆಯು ಆರ್ಥಿಕವಾಗಿ, ಹಂಪೆಯ ಇತರ ಬಜಾರುಗಳಷ್ಟೇ ಮಹತ್ವ ಹೊಂದಿದ್ದಿತು. ಇಲ್ಲಿಯೂ ಕೂಡ ವಿವಿಧೆಡೆಗಳಿಂದ ತಂದಂತಹ ವಸ್ತುಗಳ ವ್ಯಾಪಾರ ನಡೆಯುತ್ತಿದ್ದಿತು. ವರದರಾಜಮ್ಮನ ಪಟ್ಟಣವನ್ನು ನೋಡಿಕೊಳ್ಳಲು ಪಟ್ಟಣಸ್ವಾಮಿಯೊಬ್ಬನನ್ನು ನೇಮಿಸಲಾಗಿತ್ತು. ಇವನನ್ನು ಸೆಟ್ಟಿಪಟ್ಟಣಸ್ವಾಮಿಯೆಂದು ಕರೆಯಲಾಗಿದೆ.[8] ಇವರು ಪಟ್ಟಣದ ಆಗು-ಹೋಗುಗಳನ್ನು ನೋಡಿಕೊಳ್ಳುತ್ತಿದ್ದುದಲ್ಲದೆ, ವರದರಾಜಮ್ಮನಪೇಟೆಯ ಮೇಲೆಯೂ ತಮ್ಮ ಹಿಡಿತವನ್ನು ಇರಿಸಿಕೊಂಡಿದ್ದರು. ಪೇಟೆಗೆ ಬರುತ್ತಿದ್ದ ವ್ಯಾಪಾರ ವಸ್ತುಗಳ ಮೇಲಿನ ತೆರಿಗೆಯನ್ನು ವಸೂಲಿ ಮಾಡುವ ಕಾರ್ಯವೂ ಇವರದೇ ಆಗಿದ್ದಿತು. ಇದರಿಂದ ಸೆಟ್ಟಿ-ವ್ಯಾಪಾರಿಗಳು ಇಲ್ಲಿ ಹೆಚ್ಚು ವಾಸವಾಗಿದ್ದುದೂ ಗೊತ್ತಾಗುತ್ತದೆ.

ಸಾಂಸ್ಕೃತಿಕವಾಗಿಯೂ ಬೆಳವಣಿಗೆ ಹೊಂದಿದ್ದುದನ್ನು ಬೀದಿಯ ಉದ್ದಕ್ಕೂ ಇರುವ ದೇವಾಲಯ, ಮಂಟಪ ಹಾಗೂ ಲೋಕಪಾವನ ಕೊಳಗಳಿಂದ ಕಾಣಬಹುದು. ಹಬ್ಬ ಹರಿದಿನಗಳ ಸಮಯದಲ್ಲಿ ರಘುನಾಥ ದೇವಾಲಯದಲ್ಲಿ ಉತ್ಸವಾಚರಣೆಗಳು ಜರುಗುತ್ತಿದ್ದವು. ಈ ಬಗೆಯ ಎಲ್ಲ ಉತ್ಸವಗಳಿಗೆ ಕೇಂದ್ರಬಿಂದುವಾಗಿದ್ದುದು ವರದರಾಜಮ್ಮನಪೇಟೆ ಬೀದಿಯೇ. ಇದು ರಘುನಾಥನ ತೇರುಬೀದಿಯೂ ಆಗಿದ್ದಿತು. ಬಜಾರದ ಎಡಬದಿಯಲ್ಲಿರುವ ಲೋಕಪಾವನ ಕೊಳವನ್ನು ತೆಪ್ಪೋತ್ಸವಕ್ಕೆಂದೇ ವಿಶಾಲವಾಗಿ ಕಟ್ಟಿಸಲಾಗಿದ್ದು, ಸುತ್ತಲೂ ಸಾಲುಮಂಟಪಗಳನ್ನು ಹಾಗೂ ಕೊಳದ ಮಧ್ಯಭಾಗದಲ್ಲಿ ಉತ್ಸವಮಂಟಪವನ್ನು ನಿರ್ಮಿಸಿರುವರು. ಉತ್ಸವಮಂಟಪವು ನಾಲ್ಕು ಕಂಬಗಳಿಂದ ಕೂಡಿದ್ದು, ವಿಮಾನವನ್ನು ಒಳಗೊಂಡಿದೆ. ಈ ಮೇಲಿನ ಅಂಶಗಳಿಂದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಂದಿನ ಜನರು ನೀಡಿದ್ದ ಪ್ರಾಶಸ್ತ್ಯವು ವ್ಯಕ್ತವಾಗುತ್ತದೆ.

ಹಂಪೆಯಲ್ಲಿದ್ದ ಈ ಮೇಲಿನ ಬಜಾರುಗಳಲ್ಲದೆ ಇತರೆಡೆಗಳಲ್ಲಿಯೂ ಬಜಾರುಗಳಿದ್ದವು. ಕೃಷ್ಣದೇವರಾಯನ ಕಾಲದಲ್ಲಿ ತನ್ನ ತಾಯಿ ನಾಗಲಾಂಬಿಕೆ ಮತ್ತು ರಾಣಿ ತಿರುಮಲಾ ದೇವಿಯರಿಗಾಗಿ ಅಂದಿನ ಹೊಸಪೇಟೆ ಮತ್ತು ನಾಗೇನಹಳ್ಳಿಗಳನ್ನು ಕಟ್ಟಿಸಲಾಯಿತು. ಅಂದು ಹೊಸಪಟ್ಟಣ ಅಥವಾ ತಿರುಮಲಾಂಬ ಪಟ್ಟಣದಲ್ಲೂ ಅಂಗಡಿ ಬೀದಿ ಇದ್ದಿತೆಂದು ನ್ಯೂನಿಜ್ ಹೇಳಿದ್ದಾನೆ. ಇಲ್ಲಿಯ ಅಂಗಡಿ ಬೀದಿಗಳು ಹಂಪೆಯಲ್ಲಿಯ ಬಜಾರುಗಳಂತೆ ವ್ಯವಸ್ಥಿತವಾಗಿ ಸಾಲುಮಂಟಪಗಳ ಸಹಿತ ಸಜ್ಜುಗೊಂಡುದು ಕಂಡುಬರುವುದಿಲ್ಲ.

ಬಜಾರುಗಳ ಕಾರ್ಯವೈಖರಿ

ಹಂಪೆಯ ಬಜಾರುಗಳು ವಿಜಯನಗರ ಸಾಮ್ರಾಜ್ಯದ ಪ್ರಮುಖ ಅಂಗಗಳು. ಇವುಗಳ ಮೂಲಕ ಅಂದಿನ ಸಾಮಾಜಿಕ ಪರಿಸ್ಥಿತಿ, ಆರ್ಥಿಕ ವ್ಯವಸ್ಥೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಗುರುತಿಸುವುದರ ಜೊತೆಗೆ ಪರಿಣಾಮಗಳನ್ನು ಅರಿಯುವುದು ಮುಖ್ಯ.

ಬಜಾರುಗಳು ಬೆಳವಣಿಗೆ ಹೊಂದಿದ್ದುದು ವಿಜಯನಗರದ ಅರಸರು ಹಂಪೆಯನ್ನು ತಮ್ಮ ರಾಜಧಾನಿಯಾಗಿ ಸ್ವೀಕರಿಸಿದ ನಂತರವೆಂಬುದನ್ನು ಈಗಾಗಲೇ ಪ್ರಸ್ತಾಪಿಸಲಾಗಿದೆ. ಬಜಾರುಗಳು ದೇವಾಲಯಗಳ ಮುಂಭಾಗದಲ್ಲಿ ನಿರ್ಮಾಣವಾಗಲು ಹಲವಾರು ಕಾರಣಗಳಿವೆ. ಮೊದಲನೆಯದು, ಹಂಪೆಯು ಭೌಗೋಳಿಕವಾಗಿ ಬೆಟ್ಟಗುಡ್ಡಗಳಿಂದ ಕೂಡಿದ ಪ್ರದೇಶ. ಎರಡನೆಯದು, ದೇವಾಲಯಗಳು ಪ್ರಮುಖ ಸ್ಥಳಗಳಾಗಿದ್ದು, ವಸತಿ ಪ್ರದೇಶಗಳನ್ನು ತಮ್ಮ ಸುತ್ತಲೂ ಹೊಂದಿದ್ದವು. ರಾಜಧಾನಿಯಾದ ಮೇಲೆ ಜನಸಂದಣಿ ಹೆಚ್ಚಾಗಿ ವ್ಯಾಪಾರ ವಹಿವಾಟು ಪ್ರಾರಂಭವಾಯಿತು. ಇದನ್ನು ಸುವ್ಯವಸ್ಥೆಗೊಳಿಸಲು ಪ್ರೌಢದೇವರಾಯನ ಕಾಲದಿಂದ ಸಾಲುಮಂಟಪಗಳನ್ನು ಕಟ್ಟಿ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಯಿತು. ಇಲ್ಲಿಯವರೆಗೆ ಬಜಾರುಗಳು ರಥವೀಧಿಗಾಗಿ ರಥೋತ್ಸವ, ತೆಪ್ಪೋತ್ಸವ ಇನ್ನಿತರ ಉತ್ಸಾವಾಚರಣೆಗಳನ್ನು ಆಚರಿಸುವ ಸ್ಥಳಗಳಾಗಿದ್ದವು.

ಹೀಗೆ ನಿರ್ಮಾಣವಾದ ಬಜಾರುಗಳು ಒಂದೊಂದು ಉಪನಗರಗಳಾಗಿ ಮಾರ್ಪಾಟು ಹೊಂದಿ ಪ್ರಮುಖ ವ್ಯಾಪಾರ ಮಾರುಕಟ್ಟೆಗಳಾಗಿದ್ದವು. ಇಂದಿನ ಆಧುನಿಕ ನಗರಗಳನ್ನು ಹೇಗೆ ಪ್ರತ್ಯೇಕ ಬಡಾವಣೆಗಳು, ಉಪನಗರಕ್ಕಾಗಿ ವಿಂಗಡಿಸಿ ಹೆಸರುಗಳನ್ನು ಸೂಚಿಸಿದ್ದಾರೆಯೋ, ಇದೇ ಪದ್ಧತಿಯನ್ನು ಐದನೂರು ವರ್ಷಗಳ ಹಿಂದೆ ಹಂಪೆಯ ತನ್ನಲ್ಲಿ ಅನುಸರಿಸಿತ್ತು.

ಬಜಾರುಗಳು ಪ್ರಮುಖ ಊರುಗಳಾಗಿ ಆಯಾಯ ದೇವಾಲಯದ ಹೆಸರನ್ನು ಹೊಂದಿದ್ದವು. ಈ ರೀತಿ ವಿಭಾಗಿಸಲ್ಪಟ್ಟ ಉಪನಗರಗಳನ್ನು ಪುರಗಳೆಂಬುದಾಗಿ ಕರೆಯುತ್ತಿದ್ದರು. ಅವೇ ವಿರೂಪಾಕ್ಷಪುರ, ಅಚ್ಯುತಾಪುರ, ವಿಠ್ಠಲಾಪುರ, ಕೃಷ್ಣಾಪುರಗಳು. ಉಪನಗರಗಳಾದ ಈ ಎಲ್ಲಾ ಪುರಗಳನ್ನು ಒಳಗೊಂಡ ನಗರವೇ ವಿದ್ಯಾನಗರ ಅಥವಾ ವಿಜಯನಗರ ಪಟ್ಟಣ. ದೇವಾಲಯಗಳೇ ಪುರಗಳ ಕೇಂದ್ರವೆನಿಸಿದ್ದವು. ದೇವಾಲಯಗಳ ಮುಂದಿನ ಬೀದಿಗಳು ವ್ಯಾಪಾರಸ್ಥಗಳೆಂಬುದು ಸ್ಪಷ್ಟ. ಈ ಬೀದಿಗಳು ವಿಶಾಲವಾದ ಬಯಲಿನಲ್ಲಿ ನೇರವಾದ, ಅಚ್ಚುಕಟ್ಟಾದ ಸಾಲುಮಂಟಪಗಳಿಂದ ಕೂಡಿವೆ. ವಿಜಯನಗರ ಕಾಲಕ್ಕೆ ಮುಂಚೆ ಇಷ್ಟೊಂದು ಅಚ್ಚುಕಟ್ಟಾಗಿ ವ್ಯಾಪಾರಕ್ಕೆಂದು ಕಟ್ಟಿಸಿರುವ ಸಾಲುಮಂಟಪಗಳು ಎಲ್ಲಿಯೂ ಕಂಡಬರುವದಿಲ್ಲ.

ಕ್ರಿ.ಶ. ೬೪೦ ರ ಸಮಯದಲ್ಲಿ ಭೇಟಿ ನೀಡಿದ್ದ ಚೀನಾದ ಪ್ರವಾಸಿ ಹೂ-ಯೆನ್‌ತ್ಸಾಂಗ್‌ನು ಇಂಡಿಯಾ ದೇಶದ ಅಂಗಡಿಗಳನ್ನು ಕುರಿತು, “ಪಟ್ಟಣಗಳ ಮತ್ತು ಹಳ್ಳಿಗಳ ಸುತ್ತ ದಪ್ಪವಾದ ಹಾಗೂ ಎತ್ತರವಾದ ಕೋಟೆಯ ಗೋಡೆಗಳಿವೆ. ಆದರೆ ಬೀದಿಗಳು ಕಿರಿದಾಗಿದ್ದು ಸೊಟ್ಟ ಸೊಟ್ಟವಾಗಿವೆ; ಅಲ್ಲದೆ ಹೊಲಸು, ತಿರುಗಾಡುವುದಕ್ಕೆ ಬಹುತೊಂದರೆ. ಅಂಗಡಿ ಮಳಿಗೆಗಳು ರಾಜಮಾರ್ಗದ ಉದ್ದಕ್ಕೂ ಎರಡೂ ಕಡೆಯೂ ಇವೆ. ಯಾವ ತರಹ ಅಂಗಡಿ ಮಳಿಗೆಗಳೆಂದು ಗುರುತಿಸಲು ಸೂಕ್ಷ್ಮವಾದ ಗುರುತುಗಳಿವೆ” ಎಂದಿದ್ದಾನೆ. ಈ ವಿವರಣೆಯನ್ನು ಗಮನಿಸಿದರೆ, ಚರಿತ್ರೆಯಲ್ಲಿ ವಿಜಯನಗರದಷ್ಟು ಅಚ್ಚುಕಟ್ಟಾದ ಬಜಾರುಗಳು ಇತರೆಡೆ ಕಂಡುಬರುವುದು ವಿರಳ.

ಹಂಪೆಯ ಬಜಾರುಗಳಲ್ಲಿ ಮಾತ್ರವಲ್ಲದೆ, ಪಟ್ಟಣದ ವಿವಿಧ ಭಾಗಗಳಲ್ಲಿದ್ದ ಬಿಡಿ ಬಿಡಿಯಾದ ಅಂಗಡಿಗಳ ಮೂಲಕವೂ ವ್ಯಾಪಾರ ನಡೆಯುತ್ತಿದ್ದಿತು. ಇದಕ್ಕೆ ಪುಷ್ಟಿಯಾಗಿ ಕ್ರಿ.ಶ.೧೫೨೫ರ ಶಾಸನವೊಂದು “ಆದಿನಾರಾಯಣ ದೇವರಿಗೆ ಬಿಟ್ಟ ಮಾನ್ಯದಂಗಡಿ” ಎಂದಿದೆ.[9] ಇದರಿಂದ ಬಜಾರುಗಳು ಒಂದು ನಿರ್ದಿಷ್ಟ ದಿನದಂದು ಕಾರ್ಯನಿರ್ವಹಿಸುತ್ತಿದ್ದರೆ, ಇಂತಹ ಅಂಗಡಿಗಳು ದಿನನಿತ್ಯವೂ ಅವಶ್ಯಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವೆಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಬಜಾರುಗಳು ದೇವಾಲಯದೊಂದಿಗೆ ಇರಿಸಿಕೊಂಡಿದ್ದ ಸಂಬಂಧಗಳನ್ನು ಅಲ್ಲಿ ನಡೆಯುತ್ತಿದ್ದ ರಥೋತ್ಸವ, ತೆಪ್ಪೋತ್ಸವ, ಇತರ ಉತ್ಸವಗಳಿಂದ ಅರಿಯಬಹುದು. ಮಠಗಳು ಹಾಗೂ ಬಜಾರದ ಸಾಲುಮಂಟಪಗಳು ಅಕ್ಕ-ಪಕ್ಕದಲ್ಲಿದ್ದವು. ವಿರೂಪಾಕ್ಷ ಬಜಾರ್ ನಲ್ಲಿ ಮಹಮಂತಿನ ಮಠ, ಕರಿಸಿದ್ದೇಶ್ವರ ಮಠಗಳು ಮತ್ತು ವಿಠ್ಠಲ ಬಜಾರದಲ್ಲಿ ರಾಮಾನುಜಮಠಗಳಿದ್ದವೆಂಬುದು ಶಾಸನಗಳಿಂದ ವ್ಯಕ್ತವಾಗುತ್ತದೆ. ಇವುಗಳಲ್ಲದೆ ಇನ್ನೂ ಅನೇಕ ಮಠಗಳು ಇದ್ದವು. ಇವು ಅಂದಿನ ವಿದ್ಯಾಕೇಂದ್ರಗಳಾಗಿದ್ದರೂ ಜನಸಾಮಾನ್ಯರಿಗೆ ಶಿಕ್ಷಣ ನೀಡುತ್ತಿರಲಿಲ್ಲವೆಂಬುದು ಕಾಣಬರುವ ಅಂಶ.

ಮಠಗಳು ಹಾಗೂ ಬಜಾರುಗಳು ಜಾತ್ರೆ ಅಥವಾ ರಥೋತ್ಸವಗಳ ಸಮಯದಲ್ಲಿ ಭಕ್ತಾದಿಗಳು ಮತ್ತು ಯಾತ್ರಾರ್ಥಿಗಳಿಗೆ ಹೇಗೆ ತಂಗುದಾಣಗಳಾಗಿರುತ್ತಿದ್ದವೆಂಬುದನ್ನು ಸಿದ್ದೇಶ್ವರ ಪುರಾಣವು ಹೀಗೆ ವರ್ಣಿಸುತ್ತದೆ ; “ಗುಡಿಗಳೊಳು ಗೋಪುರಗಳೊಳು ಪುರದ ಬೀದಿಯಂಗಡಿಗಳೊಳು ಮಠಗಳೊಗಾರವೆಗಳೊಳು ಕೆರೆಯ ತಡಿಗಳೊಳಗಡೆಯಿಲ್ಲವೆಂಬಂತೆ ಬೀಡುಗಳ ಬಿಟ್ಟ ಪರಿಸೆಯ ಮನುಜರು”[10]. ಇದು ಪಾಯೇಸನಿಂದಲೂ ತಿಳಿದು ಬರುವ ಅಂಶ.

ಬಜಾರುಗಳ ಮತ್ತೊಂದು ಮುಖ್ಯ ಲಕ್ಷಣವೆಂದರೆ, ಪ್ರತಿಯೊಂದು ಬಜಾರ್ ನಲ್ಲಿ ಆಯಾ ಧರ್ಮದ ದೇವಾಲಯಗಳು, ಮಠಗಳು ಇರುವುದು. ವಿರೂಪಾಕ್ಷ ಬಜಾರದಲ್ಲಿ ಶೈವ ಮಠಗಳು ; ಕೃಷ್ಣ, ವಿಠ್ಠಲ, ಮಾಲ್ಯವಂತ, ವರದರಾಜಮ್ಮ ಮತ್ತು ಅಚ್ಯುತ ಬಜಾರುಗಳಲ್ಲಿ ಶ್ರೀ ವೈಷ್ಣವ ಮಠಗಳು, ದೇವಾಲಯಗಳು ಇವೆ. ಈ ಸ್ಥಳಗಳಲ್ಲಿ ಕೇವಲ ಆ ಧರ್ಮದ ಸಂಬಂಧಿಸಿದ ಜನರು ಮಾತ್ರ ವಾಸಿಸಿದ್ದರೇ? ಆದರೆ ಇವು ಮಾರುಕಟ್ಟೆಗಳೂ ಆಗಿದ್ದುದರಿಂದ ವ್ಯಾಪಾರ ಚಟುವಟಿಕೆಗಳಲ್ಲಿ ಎಲ್ಲಾ ಧರ್ಮದವರೂ ಭಾಗವಹಿಸುತ್ತಿದ್ದುದು ಸಹಜ. ಪಾನ್‌ಸುಪಾರಿ ಬಜಾರು ಸರ್ವಧರ್ಮಗಳ ಸಂಗಮಸ್ಥಾನವಾಗಿದ್ದುದನ್ನು ಇಲ್ಲಿ ಉದಾಹರಿಸಬಹುದು. ರಾಮಚಂದ್ರ (ಹಜಾರರಾಮ) ದೇವಾಲಯವು ವೈಷ್ಣವ ಪಂಥಕ್ಕೆ ಸೇರಿದ್ದರೂ, ಅದರ ಮುಂದಿನ ಬಜಾರ್ ನಲ್ಲಿ ಪಟ್ಟಣದ ಯಲ್ಲಮ್ಮನ ಗುಡಿ, ಶಿವಾಲಯಗಳು, ಜಿನಾಲಯಗಳು, ಮುಸ್ಲಿಮರ ಗೋರಿ, ಧರ್ಮಶಾಲೆ, ಇತ್ಯಾದಿಗಳನ್ನು ನೋಡಬಹುದು.

ಪಾನ್‌ಸುಪಾರಿ ಬಜಾರ್ ಎಲ್ಲ ವರ್ಗದವರನ್ನು ಒಳಗೊಂಡಿದ್ದರೂ ರಜಾಕ್ ಮತ್ತು ಕನಕದಾಸರು ಹೇಳಿರುವಂತೆ, ಆಯಾಯ ಕುಶಲ ಕೆಲಸಗಾರರು ತಮಗೆ ಹಂಚಿಕೊಟ್ಟ ಸ್ಥಳಗಳಲ್ಲಿ ನೆಲೆಸಿದ್ದರು. ಶೈವ, ವೈಷ್ಣವ, ಜೈನಧರ್ಮಗಳ ದೇಗುಲಗಳು ಬಜಾರದಲ್ಲಿ ಒಂದೆಡೆ ಕಂಡುಬಂದರೆ, ಮುಸ್ಲಿಮರು ಬಜಾರದ ಕೊನೆಯಲ್ಲಿ ನೆಲೆಸಿದ್ದರು. ಇದು ಹಿಂದೂ ಮತ್ತು ಮುಸ್ಲಿಮರ ಮಧ್ಯೆ ಇದ್ದ ಅಂತರವೆಂಬಂತೆ ಕಂಡುಬಂದರೂ, ಅವರಿಗೆ ಸಾಮ್ರಾಜ್ಯದಲ್ಲಿ, ಸೈನ್ಯದಲ್ಲಿ ಪ್ರಾಶಸ್ತ್ಯ ನೀಡಿದ್ದುದು ನಿಜ. ಎಲ್ಲ ವರ್ಗದವರಿಗೂ ಆಯಾ ಧರ್ಮಗಳಿಗನುಗುಣವಾಗಿ ಸ್ಥಾನ-ಮಾನಗಳನ್ನು ನೀಡಿದ್ದರೆನ್ನುವುದು ಇಲ್ಲಿ ವ್ಯಕ್ತಪಡುತ್ತದೆ.

ಸಾಮ್ರಾಜ್ಯಕ್ಕೆ ಬರುತ್ತಿದ್ದ ಆದಾಯಗಳೆಂದರೆ ಭೂಕಂದಾಯ, ಮಾರುಕಟ್ಟೆಗಳ ಮೇಲಿನ ತೆರಿಗೆ ಹಾಗೂ ಸಾಗಾಟ ತೆರಿಗೆಗಳು. ಇವುಗಳಲ್ಲದೆ ಕಪ್ಪ-ಕಾಣಿಕೆ, ಯುದ್ಧಗಳಲ್ಲಿಯ ಕೊಳ್ಳೆಗಳಿಂದಲೂ ಅಪಾರ ಸಂಪತ್ತು ಸೇರುತ್ತಿದ್ದಿತು. ಈ ಆದಾಯವನ್ನು ವ್ಯವಸಾಯ, ಕೆರೆ-ಕಾಲುವೆಗಳ ನಿರ್ಮಾಣ ಮುಂತಾದವುಗಳಿಗೆ ವೆಚ್ಚ ಮಾಡಿರುವುದನ್ನು ಹಂಪೆಯಲ್ಲಿ ನೋಡಬಹುದು. ಅಷ್ಟೇ ಅಲ್ಲದೆ, ವಿದೇಶಿ ಪ್ರವಾಸಿಗಳು ಹೇಳಿರುವಂತೆ ಮುತ್ತು, ರತ್ನ, ವಜ್ರ, ವೈಢೂರ್ಯಗಳನ್ನು ಬೀದಿಗಳಲ್ಲಿಟ್ಟು, ಮಾರಾಟ ಮಾಡಲಾಗುತ್ತಿತ್ತು. ಆದರೆ ಇಷ್ಟೊಂದು ಸಂಪತ್ತು ಎಲ್ಲಿ ದೊರೆಯುತ್ತಿತ್ತೆಂಬುದಕ್ಕೆ ಪ್ರವಾಸಿಗಳ ಹೇಳಿಕೆಗಳು ಉತ್ತರಿಸುತ್ತವೆ. ವಿಜಯನಗರಕ್ಕೆ ವ್ಯಾಪಾರಿ ವರ್ತಕನಾಗಿ ಬಂದ ರಷ್ಯಾದ ನಿಕಿಟಿನ್ ಹೇಳುವಂತೆ, ರಾಯಚೂರಿನಲ್ಲಿ ವಜ್ರಗಳು ಸಿಕ್ಕುತ್ತವೆ. ವಜ್ರಗಳು ಕಲ್ಲುಬಂಡೆಯ ಬೆಟ್ಟದ ಮೇಲೆ ಸಿಕ್ಕುತ್ತವೆ. ಈ ಬಗೆಗೆ ವಸುಂಧರ ಫಿಯೋಜಾ ಅವರು ಹಸ್ತಪ್ರತಿಯೊಂದನ್ನಾಧರಿಸಿ ತಿಳಿಸಿರುವಂತೆ, ಜಂಭುಕೇಶ್ವರದಲ್ಲಿ ಕಬ್ಬಿಣದ ಖನಿಜಗಳಿವೆ. ದರೋಜಿಯ ಬಳಿ ತಾಮ್ರದ ಖನಿ, ಮಾಲ್ಯವಂತದಲ್ಲಿ ವಜ್ರದ ಖನಿ ಇವೆ. ಇದನ್ನು ಸಮರ್ಥಿಸುವಂತೆ ಬಾರ್ಬೊಸಾ ಹೇಳಿರುವುದು ; “ನರಸಿಂಗ ರಾಜ್ಯದಲ್ಲಿ ಒಂದು, ಮತ್ತು ದಖನಿ ರಾಜ್ಯದಲ್ಲಿ ಒಂದು ವಜ್ರದ ಗಣಿಗಳಿವೆ.”[11].

ಈ ಮೇಲಿನ ಹೇಳಿಕೆಗಳು ವಿಜಯನಗರ ಸಾಮ್ರಾಜ್ಯದಲ್ಲಿ ಅನೇಕ ಚಿನ್ನ, ವಜ್ರದ ಗಳಿಗಳಿದ್ದ ಬಗೆಗೆ ಸುಳಿವು ನೀಡುತ್ತವೆ. ಪ್ರಸ್ತುತ ಹಂಪೆ ಪರಿಸರವು ಭಾರತದಲ್ಲೇ ಯಥೇಚ್ಚವಾಗಿ ಕಬ್ಬಿಣದ ಅದಿರು ದೊರೆಯುವ ಸ್ಥಳ, ಹೇರಳ ಕಬ್ಬಿಣದ ಅದಿರುಗಳನ್ನು ಒಳಗೊಂಡ ಬೆಟ್ಟದ ಸಾಲುಗಳೇ ಇಲ್ಲಿ ಇವೆ. ಇವುಗಳಲ್ಲದೆ, ಪ್ರೌಢದೇವರಾಯನ ಕಾಲದಲ್ಲಿ ಶ್ರೀಮಂತ, ಪುಲಿಕಾಟ್‌, ಪೆಗು, ತೆನ್ನಾಸರಿ ಮತ್ತು ಇತರ ರಾಜ್ಯಗಳಿಂದ ಕಪ್ಪ-ಕಾಣಿಕೆ ಬರುತ್ತಿದ್ದಿತೆಂದು ನ್ಯೂನಿಜ್‌ಹೇಳಿದ್ದಾರೆ. ಶ್ರೀಲಂಕಾದಲ್ಲಿ ವಜ್ರದ ಗಣಿ ಇದ್ದು, ಅಲ್ಲಿಂದ ಬಂದ ವಜ್ರವೈಢೂರ್ಯಗಳು ಹಂಪೆಯಲ್ಲಿ ದೊರೆಯುತ್ತಿದ್ದವೆಂದು ಬಾರ್ಬೊಸಾ ತಿಳಿಸಿದ್ದಾನೆ. ಕಪ್ಪಗಳಲ್ಲದೆ, ಯುದ್ಧ ಕೊಳ್ಳೆಗಳಿಂದಲೂ ಸಂಪತ್ತು ಬರುತ್ತಿದ್ದುದನ್ನು ರಾಯಚೂರು ಯುದ್ಧದಲ್ಲಿ ದೊರೆತ ಕೊಳ್ಳೆಯನ್ನು ಉಲ್ಲೇಖಿಸಿ ನ್ಯೂನಿಜ್ ಹೀಗೆ ಹೇಳಿರುವನು; “ಮೂರರಿಗೆ ಸೇರಿದುದನ್ನೆಲ್ಲ ಕೊಳ್ಳೆ ಹೊಡೆಯುವ ಕೆಲಸ ಪ್ರಾರಂಭವಾಯಿತು….. ರಾಯನಿಗೆ (ಕೃಷ್ಣದೇವರಾಯ) ಓರ್ಮಸ್‌ನ ನಾಲ್ಕುಸಾವಿರ ಕುದುರೆಗಳೂ, ನೂರು ಆನೆಗಳೂ, ನೂರಾರು ಭಾರಿ ಫಿರಂಗಿಗಳೂ, ಇವನ್ನು ಹೊರುವ ಒಂಭೈನೂರು ಗಾಡಿಗಳೂ, ಅನೇಕ ಡೇರೆಗಳೂ ಸಿಕ್ಕಿದವು”.[12]

ಈ ರೀತಿಯಲ್ಲಿ ಸಂಪಾದಿಸಿದ ಸಂಪತ್ತನ್ನು ವಿಜಯನಗರದಸರು ತಮಗೆ ಅಗತ್ಯವಿದ್ದ ಯುದ್ಧ ಸಾಮಗ್ರಿ ಮತ್ತು ಸೈನ್ಯದ ಬಲವರ್ಧನೆಗೆ ಬೇಕಾದ ಉತ್ತಮ ತಳಿಯ ಕುದುರೆ, ಆನೆಗಳನ್ನು ಕೊಳ್ಳಲು ಬಳಸುತ್ತಿದ್ದರು. ಯುದ್ಧಗಳಲ್ಲಿ ಸೈನಿಕರು ದೋಚಿದ ಸಂಪತ್ತನ್ನು ವ್ಯಾಪಾರಿಗಳಿಗೆ ಹಾಗೂ ಇತರರಿಗೆ ನೀಡುತ್ತಿದ್ದು, ಅದನ್ನು ವ್ಯಾಪಾರಿಗಳು ಬಜಾರಗಳಲ್ಲಿಟ್ಟು ಮಾರಾಟ ಮಾಡುತ್ತಿದ್ದಿರಬೇಕು. ಇನ್ನೊಂದು ಅಂಶವೆಂದರೆ, ಪ್ರಸ್ತುತ ಸಮಾಜದೊಡನೆ ಹೋಲಿಸಿ ನೋಡಿದರೆ, ಪ್ರಮುಖ ನಗರಗಳಲ್ಲಿ ಲೋಹ, ಆಭರಣಗಳ ಪ್ರತ್ಯೇಕ ಅಂಗಡಿಬೀದಿಗಳಿರುವಂತೆಯೇ, ಹಂಪೆಯಲ್ಲಿ ವಿಫುಲವಾಗಿ ಲಭ್ಯವಿದ್ದ ಸಂಪತ್ತನ್ನು ಬಜಾರಗಳಲ್ಲಿಟ್ಟು ಮಾರಾಟ ಮಾಡುತ್ತಿದ್ದುದು ಸಹಜ.

ವಿಜಯನಗರದ ಅರಸರು ವಿದೇಶಗಳೊಂದಿಗೆ ನಿಕಟ ವ್ಯಾಪಾರ ಸಂಪರ್ಕವಿಟ್ಟು ಕೊಂಡಿದ್ದರು. ಹಾಗೆಯೇ ಸಾಮ್ರಾಜ್ಯದಲ್ಲಿ ಅನೇಕ ಸಗಟು ವ್ಯಾಪಾರಿಗಳಿದ್ದರು. ಅವರು ವಿದೇಶಗಳಿಂದ ಪ್ರಮುಖ ವಸ್ತುಗಳನ್ನು ಆಮದು ಮಾಡಿಕೊಂಡು ರಾಜರಿಗೆ, ಶ್ರೀಮಂತರಿಗೆ ಹಾಗೂ ಇತರರಿಗೆ ಮಾರಾಟ ಮಾಡುತ್ತಿದ್ದರು. ಅಂತಹ ವ್ಯಾಪಾರಿಯೊಬ್ಬನ ಬಗೆಗೆ ಶ್ರೀನಾಥನ ಹರವಿಲಾಸಮು ಹೀಗೆ ಹೇಳಿದೆ; ನೆಲ್ಲೂರಿನ ಅವಚಿ ತಿಪ್ಪಯ್ಯಸೆಟ್ಟಿ ಎಂಬುವನು ವಿದೇಶಿ ವ್ಯಾಪಾರ ವರ್ತಕನಾಗಿದ್ದು, ಈತನು ಜಲನಾಗಿಯಿಂದ ಚಿನ್ನ, ಪಂಜಾಬಿನಿಂದ ಕರ್ಪೂರ, ಶ್ರೀಲಂಕಾದಿಂದ ಆನೆ, ಓರ್ಮಜ್‌ನಿಂದ ಕುದುರೆ, ಚೋಟಂಗಿಯಿಂದ ಕಸ್ತೂರಿ, ಚೀನಾದಿಂದ ರೇಷ್ಮೆ[13] ಇನ್ನು ಮುಂತಾದ ವಸ್ತುಗಳನ್ನು ಆಮದು ಮಾಡಿಕೊಂಡು ವಿಜಯನಗರದ ಹರಿಹರರಾಯನಿಗೂ, ಬಹುಮನಿ ಸುಲ್ತಾನ ಫಿರೋಜ ಷಾನಿಗೂ, ಒರಿಸ್ಸಾದ ಗಜಪತಿಗೂ ಮಾರಾಟ ಮಾಡುತ್ತಿದ್ದನು.

ಇದರಿಂದ ತಿಪ್ಪಯ್ಯಸೆಟ್ಟಿಯು ಉತ್ತಮ ವ್ಯಾಪಾರಿಯೆಂಬುದು ದಿಟ. ಅಲ್ಲದೆ, ಇಂತಹ ಇನ್ನೂ ಅನೇಕ ಪ್ರಮುಖ ವ್ಯಾಪಾರಿಗಳು ವಿಜಯನಗರದಲ್ಲಿ ಇದ್ದರೆಂಬುದು ಗೊತ್ತಾಗುತ್ತದೆ. ಅಂದು ಕುದುರೆಗಳಿಗೆ ಹೆಚ್ಚಿನ ಬೇಡಿಕೆಯಿದ್ದ ಬಗೆಗೆ ಬಾರ್ಬೊಸನು, ಓರ್ಮಸ್ ರಾಜ್ಯದಿಂದ ಕುದುರೆಗಳನ್ನು ಹೊತ್ತುಕೊಂಡು ಅನೇಕ ಹಡಗುಗಳು ಇಲ್ಲಿಗೆ (ಗೋವಾ) ಬರುತ್ತವೆ. ಕುದುರೆಗಳನ್ನು ಕೊಳ್ಳಲು ನರಸಿಂಗುವಾ ಮತ್ತು ದಖನ್ ರಾಜ್ಯಗಳಿಂದ ಅನೇಕ ವರ್ತಕರು ಇಲ್ಲಿಗೆ ಬರುತ್ತಾರೆ.[14] ಎಂದಿರುವುದು, ಗೋವಾ ಪ್ರಮುಖ ಬಂದರು ಆಗಿದ್ದುದು ಮತ್ತು ಅಲ್ಲಿಗೆ ದಖನ್ ರಾಜ್ಯಗಳ ವರ್ತಕರು ಬರುತಿದ್ದುದರ ಬಗೆಗೆ ಸಮರ್ಥನೆ ನೀಡುತ್ತದೆ. ವಿಜಯನಗರದ ರಾಯರ ಕಾಲದಲ್ಲಿ ಪ್ರಸಿದ್ಧಿ ಹೊಂದಿದ್ದ ಗೋವಾದ ಬಂದರನ್ನು ರಾಯ್ ಬಂದರ್ ಎಂದೇ ಇಂದಿಗೂ ಕರೆಯುತ್ತಿರುವುದು ಗಮನಾರ್ಹ. ವಿಜಯನಗರದ ಅರಸರು ಕುದರೆಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಕೊಳ್ಳುತ್ತಿದ್ದರು. ಹಾಗೆಯೇ ಆನೆ ಮತ್ತು ಯುದ್ದಧ ಸಾಮಗ್ರಿಯನ್ನು ಕೊಳ್ಳಲು ಚಿನ್ನ ಮತ್ತು ಇತರ ಲೋಹಗಳ ನಾಣ್ಯಗಳು, ವೈಢೂರ್ಯಗಳನ್ನು ಕೊಡುತ್ತಿದ್ದರು. ಹೀಗೆ ಸಂಪತ್ತು ಹೇರಳವಾಗಿ ವಿದೇಶಗಳಿಗೆ ಹರಿದು ಹೋಗಿರುವುದನ್ನು ಕಾಣಬಹುದು. ವಿಜಯನಗರದೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದ ದೇಶಗಳೆಂದರೆ ಶ್ರೀಲಂಕಾ, ಪೆಗು, ಬರ್ಮಾ, ಓರ್ಮಸ್, ಅರೇಬಿಯಾ, ಪೋರ್ಚುಗಲ್, ಚೀನಾ, ಅಲೆಗ್ಸಾಂಡ್ರಿಯಾ ಮತ್ತಿತರ ರಾಜ್ಯಗಳು. ವಿಜಯನಗರದ ಪ್ರಮುಖ ವ್ಯಾಪಾರ ಕೇಂದ್ರ ಹಂಪೆಯಲ್ಲಿ ಈ ಎಲ್ಲ ದೇಶಗಳಿಂದ ಬಂದ ವಸ್ತುಗಳ ಮಾರಾಟ ನಡೆಯುತ್ತಿತ್ತು.

ಇವುಗಳಲ್ಲದೆ, ರಾಜ್ಯದಲ್ಲಿ ಬೆಳೆಯುತ್ತಿದ್ದ ದವಸ-ಧಾನ್ಯ, ಹಣ್ಣು-ಹೂ, ತರಕಾರಿಗಳನ್ನು ದಿನನಿತ್ಯವೂ ಪ್ರತಿಯೊಂದು ಬಜಾರದಲ್ಲಿ ನಡೆಯುತ್ತಿದ್ದ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಕನಕದಾಸರು ಮೋಹನ ತರಂಗಿಣಿಯಲ್ಲಿ ಸೋಮಸೂರಿಯ ಬೀದಿಯಲ್ಲಿದ್ದ ಅಂಗಡಿಗಳಲ್ಲೂ, ಅಲ್ಲಿ ಮಾರಾಟವಾಗುತ್ತಿದ್ದ ವಸ್ತುಗಳನ್ನೂ ಮನಸಾರೆ ವರ್ಣಿಸಿದ್ದಾರೆ. ಸುರಗಿ, ಸೇವಂತಿಗೆ, ಕುಂದ, ಮಂದಾರ, ಪಾದರಿ, ಕಂಚಿ, ಕಣಗಿಲೆಯಂತಹ ಹೂಗುಳು ; ಇವುಗಳಲ್ಲದೆ, ಕುಲಗಾರರು ತಯಾರಿಸಿದ ವಸ್ತುಗಳು; ತರಕಾರಿ ಇನ್ನಿತರ ಜೀವನಾವಶ್ಯಕ ವಸ್ತುಗಳು ಹೇಳಿರುವಂತೆ, ಬಜಾರುಗಳಲ್ಲಿ ಅಕ್ಕಿ, ಗೋಧಿ, ರಾಗಿ, ಅವರೆ, ಹೆಸರು, ಬೇಳೆ, ಹುರುಳಿ ಮತ್ತು ತರಕಾರಿಗಳು, ಹಣ್ಣು, ಹೂಗಳಲ್ಲಿ ಗುಲಾಬಿಯನ್ನು ಹೆಚ್ಚಾಗಿ ಮಾರಾಟ ಮಾಡುತ್ತಿದ್ದರು.

ಬಜಾರುಗಳಲ್ಲಿ ನಿತ್ಯವೂ ಒಂದೊಂದು ಕಡೆ ಸಂತೆ ನಡೆಯುತ್ತಿತ್ತೆಂದು ಪಾಯೇಸನು ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ವಿವಿಧ ಮೂಲಗಳಿಂದ ಗ್ರಹಿಸಲಾದಂತೆ, ಕೃಷ್ಣ ಬಜಾರದಲ್ಲಿ ಸೋಮವಾರ, ಅಚ್ಯುತ ಬಜಾರದಲ್ಲಿ ಮಂಗಳವಾರ ಹಾಗೂ ಪಾನ್‌ಸುಪಾರಿ ಬಜಾರದಲ್ಲಿ ಶುಕ್ರವಾರಗಳಂದು ಸಂತೆ ನಡೆಯುತ್ತಿದ್ದಿತು. ವಿರೂಪಾಕ್ಷ, ಮಾಲ್ಯವಂತ, ವರದರಾಜಮ್ಮ ಮತ್ತು ವಿಠ್ಠಲ ಬಜಾರುಗಳಲ್ಲಿ ಇನ್ನುಳಿದ ದಿನಗಳಲ್ಲಿ ಸಂತೆಯು ಸೇರುತ್ತಿದ್ದಿರಬೇಕು.

ಬಜಾರುಗಳಿಗೆ ದವಸ-ಧಾನ್ಯಗಳನ್ನು ತರುತ್ತಿದ್ದ ಸಾಗಣೆ ಮಾಧ್ಯಮಗಳನ್ನು ಕುರಿತಂತೆ ಪಾಯೇಸನು, ದವಸ-ಧಾನ್ಯಗಳನ್ನು ಹೇರಿಕೊಂಡು ಬಂದ ಲೆಕ್ಕವಿಲ್ಲದಷ್ಟು ಎತ್ತಿನಗಾಡಿಗಳು ಬೀದಿಯಲ್ಲಿ ಕಿಕ್ಕಿರುದು ಹೋಗಿರುತ್ತವೆ ಎಂದು ಹೇಳಿದ್ದಾನೆ. ನ್ಯೂನಿಜ್‌ನು, ಪ್ರತಿದಿನ ಎರಡು ಸಾವಿರ ಹೇರೆತ್ತುಗಳು ವಿಜಯನಗರಕ್ಕೆ ಪ್ರವೇಶಿಸುತ್ತವೆ. ಪ್ರತಿಯೊಂದು ಎತ್ತಿಗೂ ಮೂರು ವಿಂತೆಂ ಸುಂಕ. ಆದರೆ ಕೊಂಬಿಲ್ಲದ ಎತ್ತುಗಳಿಗೆ ರಾಜ್ಯದಲ್ಲಿ ಎಲ್ಲಿಯೂ ಸುಂಕವಿಲ್ಲ[15] ಎಂದು ಹೇಳಿರುವುದರಲ್ಲಿ, ಎತ್ತಿನ ಗಾಡಿಗಳು ಸಾಗಾಣಿಕೆಯ ಪ್ರಮುಖ ಅಂಗಗಳೆಂಬುದು ಅರಿವಾಗುವುದು. ಆದರೆ ಕೊಂಬಿಲ್ಲದ ಎತ್ತುಗಳೆಂದು ಹೇಳಿರುವ ಪ್ರಾಣಿಗಳು ಪ್ರಾಯಶಃ ಕತ್ತೆಗಳೇ ಇರಬೇಕು. ಕತ್ತೆಗಳು ಅಂದಿನ ಸಾಗಾಟದ ಮಾಧ್ಯಮಗಳೆಂದು ಬಾರ್ಬೊಸನಿಂದಲೂ ತಿಳಿಯುತ್ತದೆ. ಅವನು ಹೇಳಿರುವ ಹಾಗೆ, ಮೆಣಸನ್ನು ಎತ್ತು ಮತ್ತು ಕತ್ತೆಗಳ ಮೇಲೆ ಹೇರಿಕೊಂಡು (ವಿಜಯನಗರಕ್ಕೆ) ಬರುತ್ತಾರೆ. ಇದು ನ್ಯೂನಿಜ್‌ನ್ನು ಹೇಳಿಕೆಯನ್ನು ಸಮರ್ಥಿಸುತ್ತದೆ. ಹೇರುಗಳ ಸಾಗಾಟಕ್ಕೆ ಎತ್ತು ಕತ್ತೆಗಳಲ್ಲದೆ, ಕುದುರೆ, ಕೋಣ, ಆನೆಗಳನ್ನೂ ಬಳಸುತ್ತಿದ್ದರು. ಎತ್ತಿನ ಆಡಿಗಳಿಗೆ ಮೂರು ವಿಂತೆಂ ಸುಂಕವನ್ನು ಹಾಕುತ್ತಿದ್ದರೆಂದು ನ್ಯೂನಿಜ್‌ನಿಂದ ತಿಳಿದುಬಂದರೆ, ಪ್ರತಿ ಎತ್ತಿನ ಗಾಡಿಗೂ ಒಂದೊಂದು ಕಾಸು ವಸೂಲಿ ಮಾಡುತ್ತಿದ್ದರೆಂಬುದಾಗಿ ಇಶಾಸನಗಳು ಹೇಳುವುವು. ಇಷ್ಟೊಂದು ದವಸ-ಧಾನ್ಯ, ಆಭರಣ, ಮತ್ತಿತರ ಸಾಮಗ್ರಿಗಳ ವ್ಯಾಪಾರ ವಹಿವಾಟು ನಡೆಯುತ್ತಿದ್ದುದನ್ನು ಗಮನಿಸಿದರೆ, ವಿಜಯನಗರ ಪಟ್ಟಣದಲ್ಲಿ ವಾಸಿಸುತ್ತಿದ್ದ ಜನಸಂಖ್ಯೆಯ ಅಗಾಧತೆ ಎಷ್ಟಿತ್ತೆಂಬುದನ್ನು ಅರಿಯುವುದೂ ಮುಖ್ಯ. ವಿಜಯನಗರದ ಜನಸಂಖ್ಯೆಯನ್ನು ಪ್ರವಾಸಿಗರು ತಮ್ಮ ಬರವಣಿಗೆಗಳಲ್ಲಿ ಉಲ್ಲೇಖಿಸಿದ್ದಾರೆ. ಅಬ್ದುಲ್ ರಜಾಕ್ ಈ ಬಗೆಗೆ, “ವಿಜಯನಗರವು ಬಹಳ ದೊಡ್ಡದಾದ ಜನವಸತಿಯುಳ್ಳ ಊರು…. ಸೈನ್ಯದಲ್ಲಿ ಹನ್ನೊಂದು ಲಕ್ಷದಷ್ಟು ಯೋಧರಿದ್ದಾರೆ ಎಂಬುದಾಗಿ ಹೇಳಿದ್ದಾನೆ. ಅಲ್ಲದೆ, ವಿಜಯನಗರವನ್ನು ಕುರಿತು, ಬಿಜನಗರದಂಥ ನಗರವನ್ನು ಕಣ್ಣು ಕಂಡಿಲ್ಲ, ಕಿವಿ ಕೇಳಿಲ್ಲ, ಈ ನಗರವನ್ನು ಹೇಗೆ ನಿರ್ಮಿಸಿದ್ದಾರೆಂದರೆ ಏಳು ದುರ್ಗಗಳೂ, ಏಳು ಕೋಟೆಗಳೂ ಒಂದನ್ನೊಂದು ಆವರಿಸಿಕೊಂಡಿವೆ. ಮೂರನೆಯ ಕೋಟೆಯಿಂದ ಏಳನೆಯ ಕೋಟೆಯವರೆಗೆ ಅಸಂಖ್ಯಾತ ಜನಗಳನ್ನೂ, ಅನೇಕ ಅಂಗಡಿಗಳನ್ನೂ, ಅಂಗಡಿ ಬೀದಿಯನ್ನೂ ನೋಡಬಹುದು ಎಂದಿದ್ದಾನೆ.”[16] ಡೊಮಿಂಗೋ ಪಾಯೇಸನ್‌ನು, “ಈ ಊರಿನ ಜನಸಂಖ್ಯೆ ಹೇಳಲಸಾಧ್ಯ. ಹಾಗೇನಾದರೂ ಹೇಳಿದರೆ ಉತ್ಪ್ರೇಕ್ಷೆ ಎಂದು ನೀವು ಹೇಳಬಹುದೆಂದು ಹೆದರಿಕೆಯಿಂದ ಹೇಳಲು ಹಿಂಜರಿಯುತ್ತೇನೆ” ಎಂದಿರುವನು. ವಿಜಯನಗರದಲ್ಲಿ ಕಟ್ಟಲಾಗಿದ್ದ ಮನೆಗಳನ್ನು ಕುರಿತು ಅವನೇ ಹೇಳುವಂತೆ, “ಬಿಸ್ನಗರದಲ್ಲಿ ಒಂದು ಲಕ್ಷ ಮನೆಗಳಿಗಿಂತಲೂ ಹೆಚ್ಚು ವಾಸದ ಮನೆಗಳಿವೆ ಎಂದು ಹೇಳುತ್ತಾರೆ”[17] ಎಂದಿರುವುದು ಅಂದಿನ ಜನಸಂಖ್ಯೆಯನ್ನು ತಿಳಿಯಲು ನೆರವಾಗುವ ಪ್ರಮುಖ ಅಂಗವಾಗಿದೆ. ಬಾರ್ಬೋಸಾ ಈ ಬಗೆಗೆ, “ಪರ್ವತಗಳಿಂದಾಚೆ ನಲವತ್ತು ಹರಿದಾರಿಗಳು ಒಳನಾಡಿಗೆ ಹೋದರೆ ಬಿಜನಗರ್ ಎಂಬ ಬಹು ದೊಡ್ಡ ನಗರ ಸಿಕ್ಕುತ್ತದೆ. ಈ ನಗರದಲ್ಲಿ ಅಸಂಖ್ಯಾತ ಜನ ವಾಸಮಾಡುತ್ತಾರೆ.[18] ಎಂಬುದಾಗಿ ತಿಳಿಸಿದ್ದಾನೆ. ಈ ಮೇಲಿನ ಪ್ರವಾಸಿಗರ ಹೇಳಿಕೆಗಳಿಂದ ವಿಜಯನಗರ ಪಟ್ಟಣದಲ್ಲಿ ವಾಸಿಸುತ್ತಿದ್ದ ಜನಸಂಖ್ಯೆಯನ್ನು ಸ್ಪಷ್ಟವಾಗಿ ಗುರುತಿಸಲಾಗದಿದ್ದರೂ, ಅಂದಿನ ಜನಸಾಂದ್ರತೆಯ ಸಾಮಾನ್ಯ ಚಿತ್ರಣವನ್ನು ಕಂಡುಕೊಳ್ಳಬಹುದು.

ಇಷ್ಟೊಂದು ದವಸ-ಧಾನ್ಯ ಬಜಾರುಗಳಿಗೆ ಬರಬೇಕಾದರೆ ರಾಜರು ಕೃಷಿಗೆ ನೀಡಿದ್ದ ಆದ್ಯತೆಯೇ ಕಾರಣ. ಕೆರೆ-ಕಾಲುವೆಗಳನ್ನು ತೋಡಿಸಿ ನೀರಾವರಿ ವ್ಯವಸ್ಥೆಗೆ ಅನುವು ಮಾಡಿದ್ದರೆಂಬುದಕ್ಕೆ ತುರ್ತುಕಾಲುವೆ ಪ್ರಮುಖ ಉದಾಹರಣೆ. ರೈತರಿಗೆ ಸೌಕರ್ಯಗಳನ್ನು ಒದಗಿಸಿ ಅವರಿಂದ ಭೂ-ಕಂದಾಯವನ್ನು ಆಯಾಯ ಭೂಮಿಯ ಫಲವತ್ತತೆಗನುಗುನವಾಗಿ ಪಡೆಯುತ್ತಿದ್ದರು. ಹೀಗೆ ಬಜಾರುಗಳು ರಾಜ್ಯದ ಸಂಪತ್ತನ್ನು ತಮ್ಮನ್ನು ಬರಮಾಡಿಕೊಂಡು ಸಂಪತ್ತಿನ ಕೇಂದ್ರಗಳಾಗಿದ್ದವು. ಸಾಂಸ್ಕೃತಿಕ ಚಟುವಟಿಕೆಗಳ ರಂಗಭೂಮಿಯಾಗಿ ಮೆರೆದವು. ಸಾಮ್ರಾಜ್ಯದ ಏಳಿಗೆಯಲ್ಲಿ ಹಂಪೆಯ ಬಜಾರುಗಳು ಮಹತ್ವದ ಪಾತ್ರ ವಹಿಸಿದ್ದಂತೆಯೇ, ಈ ಸಂಪತ್ತಿನ ಕಾರಣದಿಂದಲೇ ವಿರೋಧಿ ರಾಜ್ಯಗಳು ವಿಜಯನಗರದತ್ತ ತಮ್ಮ ಗಮನವನ್ನು ಹರಿಸಲು ಕಾರಣವಾಗಿದ್ದಿತು.

ಆಕರ
ಹಂಪೆಯ ಬಜಾರುಗಳು, ೧೯೯೭, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಆಯ್ದ ಭಾಗಗಳು.

 

[1] ಅದೇ, ಸಂಖ್ಯೆ ೫೯೫

[2] ಅದೇ,

[3] ಅದೇ, ಸಂ.೪, ಸಂಖ್ಯೆ ೨೪೫

[4] ಎ.ಆ.ಎಸ್‌.ಐ.ಇ., ೧೯೯೨, ಸಂಖ್ಯೆ ೯೬೮

[5] ಎ ಫರ್ಗಾಟನ್‌ಎಂಪೈರ್, ೧೯೮೮, ಪು.೨೯೦

[6] ಅದೇ, ಪು. ೩೮೬

[7] ಮಹದೇವ ಸಿ., ೧೯೯೬, ವಿಜಯನಗರದಲ್ಲಿ ಅರ್ದ್ಯೆಗೆಮಾ ಅಥವಾ ಒಂದೆಗೆಮಾ ಪಟ್ಟಣ ಯಾವುದು?

[8] ಎ.ಆ.ಎಸ್‌.ಐ.ಇ., ಸಂ.೭೩೦

[9] ಇನ್‌ವಿಜಯನಗರ : ಪ್ರೋಗ್ರೆಸ್‌ಆಫ್ ರಿಸರ್ಚ್‌, ೧೯೮೪-೮೭, ಪು.೪೬

[10] ವಿಜಯನಗರ ಕಾಲದ ಕನ್ನಡ ಸಾಹಿತ್ಯದಲ್ಲಿ ಜನಜೀವನ ಚಿತ್ರ, ಪು.೨೬೮

[11] ಅಳಿದುಳಿದ ಹಂಪೆ, ಪು.೩

[12] ಪ್ರ.ಕಂ.ಇಂ.ಸಂ.೨, ಪು.೨೯೧

[13] ಸೋರ್ಸಸ್‌ಆಫ್ ವಿಜಯನಗರ ಹಿಸ್ಟರಿ, ಪು.೫೭

[14] ಪ್ರ.ಕಂ.ಇಂ.ಸಂ. ೨, ಪು.೨೯೧

[15] ಪ್ರ.ಕಂ.ಇಂ.ಸಂ. ಪು.೪೧೨

[16] ಪ್ರ.ಕಂ.ಇಂ.ಸಂ. ಪು.೧೫೪-೧೫೫

[17] ಪ್ರ.ಕಂ.ಇಂ.ಸಂ. ಪು.೩೮೩

[18] ಪ್ರ.ಕಂ.ಇಂ.ಸಂ. ಪು.೨೯೦