ಇ. ವಿಠ್ಠಲ ಬಜಾರು

ಹಂಪೆಯ ಕಲಾತ್ಮಕತೆಗೆ ಕನ್ನಡಿಯಂತಿದ್ದು, ವಿಶ್ವ ಪ್ರಸಿದ್ಧಿ ಪಡೆದ ಕಲ್ಲಿನ ರಥವನ್ನುಳ್ಳದ್ದು ವಿಠ್ಠಲ ದೇವಾಲಯ. ಹಂಪೆಯ ಇತರ ದೇವಾಲಯಗಳಿಗಿಂತ ಇದು ವಿಶಿಷ್ಟವಾದುದು. ದೇವಾಲಯದಲ್ಲಿ ನಿಲ್ಲಿಸಿರುವ ಕಂಬಗಳು ಸಪ್ತಸ್ವರಗಳನ್ನು ಹೊಮ್ಮಿಸುವ ವಾದ್ಯಗಳು; ಸಂಗೀತ ಕಂಬಗಳು; ವಿಜಯನಗರ ಕಾಲದಲ್ಲಿ ಸಂಗೀತ, ನೃತ್ಯಗಳಿಗೆ ನೀಡಲಾದ ಪ್ರೋತ್ಸಾಹದ ಪ್ರತೀಕಗಳು. ಈ ದೇವಾಲಯದ ಪೂರ್ವ ಗೋಪುರದ ಮುಂಭಾಗದಿಂದ ಪರಾಂಕುಶ ಮಂಟಪದವರೆಗೆ ವಿಸ್ತಾರವಾಗಿ ನೆಲೆಗೊಂಡಿರುವ ಬೀದಿಯೇ ವಿಠ್ಠಲ ಬಜಾರು. ಇದನ್ನು ವಿಠ್ಠಲದೇವರ ತೇರುಬೀದಿಯೆಂತಲೂ, ವಿಠ್ಠಲಾಪುರವೆಂತಲೂ ಕರೆಯಲಾಗಿದೆ.

ವಿಠ್ಠಲ ಬಜಾರು ತುಂಗಭದ್ರಾ ‘ನದಿಯ ಬಲದಂಡೆಯ ವಿಶಾಲ ಬಯಲಿನಲ್ಲಿ ನಿರ್ಮಾಣವಾಗಿದೆ. ಇದರ ಉದ್ದ ೯೪೫ ಮೀ., ಅಗಲ ೩೯೬ ಮೀ. ಹಂಪೆಯ ಇತರ ಬಜಾರುಗಳಿಗಿಂತ ವಿಶಾಲವಾಗಿಯೂ, ಉದ್ದವಾಗಿಯೂ ಇರುವುದು ಇದರ ವಿಶೇಷ. ಇದು ದೇವಾಲಯದ ಎಡಬಾಗದಲ್ಲೂ ವಿಸ್ತರಿಸಿದ್ದು, ಬ್ರಹವಿಠ್ಠಲ ದೇವಾಲಯದವರೆಗೂ ಮುಂದುವರೆದಿದೆ. ಇಲ್ಲಿ ಈ ಬಜಾರಿನ ಉದ್ದ ೧೨೨ಮೀ., ಅಗಲ ೧೬.೩ ಮೀ. ಬೀದಿಯ ಇಕ್ಕೆಲಗಳಲೂ ಸಾಲುಮಂಟಪಗಳನ್ನು ನಿರ್ಮಿಸಲಾಗಿದ್ದು, ಇಂದು ಇವುಗಳ ಅವಶೇಷಗಳು ಮಾತ್ರ ಕಂಡುಬರುತ್ತವೆ.

ವಿಠ್ಠಲ ಬಜಾರು ಸ್ಥಾಪನೆಯಾಗಿರುವುದು ವಿಠ್ಠಲ ದೇವಾಲಯದ ನಂತರ. ವಿಠ್ಠಲ ದೇವಾಲಯವು ವಿಶಾಲವಾದ ಪ್ರಾಂಗಣದಲ್ಲಿ ಗರ್ಭಗೃಹ, ಪ್ರದಕ್ಷಿಣಪಥ, ಸುಕನಾಸಿ, ನವರಂಗ, ಮಹಾಮಂಟಪಗಳಲ್ಲದೆ, ಎಡಬದಿಯಲ್ಲಿ ಅಮ್ಮನವರ ಗುಡಿ, ಮುಂದೆ ಕಲ್ಲಿನ ರಥ, ಕಲ್ಯಾಣಮಂಟಪ, ಭೋಜನಮಂಟಪ ಮತ್ತು ನೂರಕಾಲ ಮಂಟಪಗಳನ್ನೊಳಗೊಂಡಿದೆ. ದೇವಾಲಯಕ್ಕೆ ಮೂರು ಗೋಪುರಗಳಿದ್ದು, ಈ ಗೋಪುರಗಳನ್ನು ಕೃಷ್ಣದೇವರಾಯನ ಪಟ್ಟದರಸಿಯರಾದ ತಿರುಮಲಾದೇವಿ ಮತ್ತು ಚಿನ್ನಾದೇವಿಯರು ಕ್ರಿ.ಶ. ೧೫೧೩ ರಲ್ಲಿ ಕಟ್ಟಿಸಿದರೆಂದು ಶಾಸನದಿಂದ ತಿಳಿಯುವುದು.[1] ಕೃಷ್ಣದೇವರಾಯನಿಂದ ಸದಾಶಿವರಾಯನ ಕಾಲದವರೆಗೂ ಈ ದೇವಾಲಯಕ್ಕೆ ಮಂಟಪಗಳು ಹಾಗೂ ಉಳಿದ ಭಾಗಗಳನ್ನು ಸೇರಿಸುವ ಕಾರ್ಯ ನಡೆದೇ ಇತ್ತು. ದೇವಾಲಯದ ಮಹಾಮಂಟಪದ ಕಂಬಗಳು ಅತ್ಯುನ್ನತ ಕಲಾತ್ಮಕತೆ ಪಡೆದಿವೆ. ಶಿಲ್ಲಿಗಳು ಕಂಬಗಳಲ್ಲಿ ಸಪ್ತಸ್ವರಗಳು ಬರುವಂತೆ ಮಾಡಿದ್ದಾರೆ. ಕಂಬಗಳ ಗಾತ್ರಕ್ಕನುಗುಣವಾಗಿ ಸ್ವರ ಬದಲಾವಣೆಯಾಗುತ್ತದೆಂಬ ತಂತ್ರವನ್ನು ಶಿಲ್ಪಿಗಳು ಅರಿತಿದ್ದುದನ್ನು ಕಾಣಬಹುದು.

ವಿಠ್ಠಲ ದೇವಾಲಯದಲ್ಲಿ ಅನೇಕ ಹಬ್ಬಗಳನ್ನು ಆಚರಿಸುತ್ತಿದ್ದ ಬಗೆಗೆ ಅಲ್ಲಿಯ ಶಾಸನವೊಂದರಲ್ಲಿ ಹೇಳಿದೆ.[2] ಮಹಾನವಿ, ಮಕರ ಸಂಕ್ರಾಂತಿ, ಗೋಕುಲಾಷ್ಟಮಿ ಇನ್ನಿತರ ಹಬ್ಬಗಳನ್ನು ಈ ಶಾಸನದಲ್ಲಿ ಹೇಳಲಾಗಿದೆ. ಈ ಹಬ್ಬ ಸಂದರ್ಭಗಳಲ್ಲಿ ವಿಠ್ಠಲದೇವರ ಉತ್ಸವ, ರಥೋತ್ಸವ, ತೆಪ್ಪೋತ್ಸವಗಳು ನಡೆಯುತ್ತಿದ್ದವು. ಶಾಸನವೊಂದು, ರಥದ ಶೃಂಗಾರಕ್ಕೆ ಸೀರೆ ಮತ್ತು ಬಣ್ಣಬಣ್ಣದ ದಾರಗಳನ್ನು, ಕರಮಣಿಗಳನ್ನು ಉಪಯೋಗಿಸುತ್ತಿದ್ದರೆಂದು ತಿಳಿಸುವುದು:

ಪರಾಂಕುಶ ಮಂಟಪದ ಮುಂದೆ ಚಪ್ಪರ ಹಾಕಲು
ಹಾಗೂ ಅದನ್ನು ಶೃಂಗಾರ ಮಾಡುವುದಕ್ಕೆ, ವಿಠ್ಠಲ
ದೇವರ ರಥದ ಶೃಂಗಾರಕ್ಕೆ ಬೇಕಾದ ಸೀರೆಗಳು,
ಬಣ್ಣ ಬಣ್ಣದ ಕರೆಗಳು, ಕರಮಣಿಗಳಿಗೆ ಮತ್ತು
ವಾದ್ಯದವರ ವಿನಿಯೋಗಕ್ಕಾಗಿ ಬಿಟ್ಟುಕೊಟ್ಟ ಗದ್ದೆ,

ಇದರಿಂದ ವಿಠ್ಠಲ ಬಜಾರದಲ್ಲಿ ರಥೋತ್ಸವ ನಡೆಯುತ್ತಿದ್ದು, ದೇವಾಲಯದ ಮುಂಬದಿಯಿಂದ ಪರಾಂಕುಶ ಮಂಟಪದವರೆಗೂ ರಥವನ್ನು ಎಳೆದು ತರುತ್ತಿದ್ದರೆಂಬುದು ಸ್ಪಷ್ಟ.

ವಿಠ್ಠಲ ಬಜಾರು ಸಹ ಇತರ ಬಜಾರುಗಳಂತೆ ಮಾರುಕಟ್ಟೆ ಪ್ರದೇಶವಾಗಿತ್ತು. ಸರಕು ಸಾಮಗ್ರಿಗಳು ಬೇರೆ ಬೇರೆ ಕಡೆಗಳಿಂದ ಇಲ್ಲಿಗೆ ಬರುತ್ತಿದ್ದವು. ವಿಠ್ಠಲ ಬಜಾರದ ವಾಯವ್ಯಕ್ಕೆ ತುಂಗಭದ್ರಾ ನದಿಯಲ್ಲಿ ಕಲ್ಲುಕಂಬದ ಸೇತುವೆಯನ್ನು ಎರಡನೇ ಹರಿಹರನ ಸಹೋದರ ಕಂಪಭೂಪನು ಕಟ್ಟಿಸಿದ್ದು,[3] ಉತ್ತರದಲ್ಲಿದ್ದ ಪ್ರದೇಶಗಳಿಗೆ ನೇರ ಸಂಪರ್ಕವನ್ನು ಕಲ್ಪಿಸುವುದರೊಡನೆ ವಿಠ್ಠಲ ಬಜಾರು ಹಾಗೂ ಹಂಪೆಯ ಇತರ ಬಜಾರುಗಳಿಗೆ ಉತ್ತರದಿಂದ ಸರಕು ಸಾಮಗ್ರಿಗಳ ಸಾಗಣೆಗೆ ಅನುಕೂಲ ಕಲ್ಪಿಸುವುದು ಇದರ ಉದ್ದೇಶವಾಗಿದ್ದಿತು.

ವ್ಯಾಪಾರಿಗಳು ಮತ್ತಿತರರಿಗೆ ದೇವಾಲಯಗಳು ಸಾಲ ನೀಡುತ್ತಿದ್ದವೆಂಬುದನ್ನು ಶಾಸನಗಳಲ್ಲಿಯ ಅಂಶಗಳಿಂದ ಗುರುತಿಸಬಹುದು. ರಾಜರು, ಶ್ರೀಮಂತರು, ವ್ಯಾಪಾರಿಗಳು ದೇವಾಲಯಗಳಿಗೆ ನೀಡುತ್ತಿದ್ದ ದಾನ-ದತ್ತಿಗಳ ಮೂಲದಿಂದಲೇ ದೇವಾಲಯದ ಬೊಕ್ಕಸದಿಂದ ಸಾಲ ಕೊಡಲಾಗುತ್ತಿತ್ತು; ಇದರಿಂದ ಬಂದ ಬಡ್ಡಿಯನ್ನು ದೇವಾಲಯದ ನಿತ್ಯ ಕಾರ್ಯಗಳಿಗೆ ಉಪಯೋಗಿಸಲಾಗುತ್ತಿತ್ತು. ವಿಠ್ಠಲ ದೇವಾಲಯದ ಕ್ರಿ.ಶ. ೧೫೩೬ ರಲ್ಲಿಯ ಶಾಸನವು.

……… ದೇವರ ಭಂಡಾರಕ್ಕೆ ಸಮರ್ಪಿಸಿದ ರೊಕ್ಕ
ಘಟ್ಟಿವರಹ ಯಿನ್ನೂರು ವರಹನೂ ಇ ವರಹಕಂ
ಬಡ್ಡಿ ತಿಂಗಳು ೧ಕ್ಕೆ ಘಟಿ ವರಹ ೫ಕ್ಕ ಸಲೆ
ಚಕ್ರಗ ೫೦[4]

ಎಂದು ತಿಳಿಸುತ್ತದೆ. ಇದರಲ್ಲಿ ಹೇಳಿರುವ ಬಡ್ಡಿಯು ಸಾಲವಾಗಿ ಕೊಟ್ಟಿದ್ದ ಹಣದಿಂದ ಬಂದುದಿರಬೇಕು. ವ್ಯಾಪಾರ-ವ್ಯವಹಾರಗಳಿಗೆ ದೇವಾಲಯಗಳು ಪ್ರೋತ್ಸಾಹ ನೀಡುತ್ತಿದ್ದುದೂ ಇಲ್ಲಿ ವ್ಯಕ್ತವಾಗುತ್ತದೆ. ವ್ಯಾಪಾರಿಗಳು ದೇವಾಲಯಗಳಿಗೆ, ಮಠಗಳಿಗೆ, ಮಂಟಪಗಳನ್ನು ಕಟ್ಟಿಸುವುದಕ್ಕೆ ಹಣದ ನೆರವು ನೀಡುತ್ತಿದ್ದರು. ಅಂಥವರಲ್ಲಿ ಗಂಧದ ತಿಪ್ಪಿಸೆಟ್ಟಿಯೆಂಬುವನು ವಿಠ್ಠಲ ದೇವಾಲಯದ ಉತ್ತರ ಭಾಗದಲ್ಲಿಯ ನಾಲ್ಕು ಅಂಕಣದ ಮಂಟಪದಲ್ಲಿ ಆಳ್ವಾರರ ಪ್ರತಿಮೆಗಳನ್ನು ಮಾಡಿಸಿದನೆಂದು ಶಾಸನವೊಂದು ಹೇಳುತ್ತದೆ:

…ವಾಣಿಜ್ಯ ವೈಶ್ಯನಗರದ ಶೆಟ್ಯಣದರುಶಿಗೋತ್ರದ
ಅಧಿಕಾರಿಯ ತಿಪ್ಪಿಸೆಟ್ಟಿಯರ ಮಗ ಗಂಧದ ತಿಪ್ಪಿ
ಸೆಟ್ಟಿಯರು ಅಚ್ಯುತಮಹಾರಾಯರಿಗೆ ಪುಣ್ಯವಾಗ
ಬೇಕೂ ಎಂದು ಪ್ರತಿಷ್ಠೆಯ ಮಾಡಿದ ಆಳ್ವಾರ
ದೇವರು ೧೨ ತಿರುಕಚಿ ನಂಬಿಯಾಳ್ವಾರು ೧ ಉಭಯಂ
ದೇವರು ಹದಿಮೂರು….[5]

ಎಂದು ಹೇಳಿದೆ. ಜೊತೆಗೆ ಇವುಗಳ ನಿತ್ಯ ನೈವೇದ್ಯ ಮುಂತಾದ ಪೂಜಾಕಾರ್ಯಗಳಿಗೆ ನೂರು ವರಹಗಳನ್ನು ನೀಡದವನೆಂದು ತಿಳಿಯುವುದು. ಇಂತಹ ಅನೇಕ ದಾನ ದತ್ತಿಗಳನ್ನು ವ್ಯಾಪಾರಿಗಳು ನೀಡುತ್ತಿದ್ದರು.

ಈ ಎಲ್ಲ ಅಂಶಗಳು ದೇವಾಲಯಗಳಿಗೂ, ಬಜಾರಗಳಲ್ಲಿ ವ್ಯಾಪಾರ ಮಾಡುತ್ತಿದ್ದ ವರ್ತಕರಿಗೂ ಇದ್ದ ನಿಕಟ ಸಂಬಂಧದ ಬಗೆಗೆ ಬೆಳಕು ಚೆಲ್ಲುತ್ತವೆ. ವಿಠ್ಠಲ ಬಜಾರು ಸಾಂಸ್ಕೃತಿಕವಾಗಿ ಮುಂದುವರಿದಿದ್ದಂತೆಯೇ, ಆರ್ಥಿಕವಾಗಿಯೂ ಉನ್ನತಿಯನ್ನು ಸಾಧಿಸಿತ್ತೆನ್ನುವುದು ಸ್ಪಷ್ಟ.

ಈ. ಕೃಷ್ಣ ಬಜಾರು

ಹಂಪೆಯ ಮುಖ್ಯ ದೇವಾಲಯಗಳಲ್ಲಿ ಬಾಲಕೃಷ್ಣ ದೇವಾಲಯವೂ ಒಂದು. ವಿರೂಪಾಕ್ಷ ಬಜಾರದ ದಕ್ಷಿಣಕ್ಕೆ ಕಮಲಾಪುರಕ್ಕೆ ಹೋಗುವ ರಸ್ತೆಯಲ್ಲಿದೆ. ಈ ದೇವಲಾಯದ ಮುಂಭಾಗ ಪ್ರದೇಶವೇ ಕೃಷ್ಣ ಬಜಾರು. ಈಗ ಗದ್ದೆಗಳಿಂದ ಆವೃತವಾಗಿದೆ.

ಬಾಲಕೃಷ್ಣ ದೇವಾಲಯಕ್ಕೆ ಐತಿಹಾಸಿಕ ಮಹತ್ವವಿದೆ. ಕೃಷ್ಣದೇವರಾಯನು ಕ್ರಿ.ಶ.೧೫೧೩ರಲ್ಲಿ ಒರಿಸ್ಸಾದ ಮೇಲೆ ದಂಡೆತ್ತಿ ಹೋಗಿ ಗಜಪತಿಯನ್ನು ಸೋಲಿಸಿ, ಉದಯಗಿರಿಯಿಂದ ತನ್ನ ವಿಜಯದ ನೆನಪಿಗೆ ಬಾಲಕೃಷ್ಣನ ಪ್ರತಿಮೆಯನ್ನು ತಂದನಲ್ಲದೆ, ಅದನ್ನು ತನ್ನ ರಾಜಧಾನಿ ಹಂಪೆಯಲ್ಲಿ ಪ್ರತಿಷ್ಠಾಪಿಸುವುದಕ್ಕಾಗಿ ಕಟ್ಟಿಸಿದ ಬೃಹತ್ ದೇವಾಲಯವೇ ಬಾಲಕೃಷ್ಣ ದೇವಾಲಯ. ಕ್ರಿ.ಶ.೧೫೧೯ರ ವೇಳೆಗೆ ಈ ದೇವಾಲಯ ಪೂರ್ಣಗೊಂಡ ಮೇಲೆ ಬಾಲಕೃಷ್ಣನನ್ನು ಇಲ್ಲಿ ಪ್ರತಿಷ್ಠಾಪಿಸಲಾಯಿತು. ದೇವಾಲಯದ ನಂತರ ಕೃಷ್ಣ ಬಜಾರು ನಿರ್ಮಾಣಗೊಂಡಿತು.

ದೇವಾಲಯವು ವಿಶಾಲವಾದ ಪ್ರಾಂಗಣದಲ್ಲಿ ದಕ್ಷಿಣ, ಉತ್ತರ ಮತ್ತು ಪೂರ್ವ ಗೋಪುರಗಳನ್ನು ಹೊಂದಿದೆ. ಗರ್ಭಗೃಹ, ಸುಕನಾಸಿ, ಪ್ರದಕ್ಷಿಣ ಪಥ, ನವರಂಗ ಮತ್ತು ಮಹಾಪಂಟಗಳು ದೇಗುಲದ ಪ್ರಮುಖ ಭಾಗಗಳು. ಎಡಭಾಗಗಳಲ್ಲಿ ಅಮ್ಮನವರ ಗುಡಿ, ಗರುಡಮಂಟಪ ಇನ್ನಿತರ ಮಂಟಪಗಳಿವೆ. ದೇವಾಲಯದ ಬಲಭಾಗದಲ್ಲಿ ದವಸ-ಧಾನ್ಯಗಳನ್ನು ಸಂಗ್ರಹಿಸಿಡುತ್ತಿದ್ದ ಉಗ್ರಾಣವಿದೆ. ಕೃಷ್ಣ ಬಜಾರನ್ನು ಶಾಸನಗಳಲ್ಲಿ ಕೃಷ್ಣಾಪುರ ಪೇಟೆ, ಬಾಲಕೃಷ್ಣದೇವರ ತೇರುಬೀದಿಯೆಂದು ಕರೆಯಲಾಗಿದೆ. ಕೃಷ್ಣ ಬಜಾರನ್ನು ಒಳಗೊಂಡಂತೆ ಇದರ ಸುತ್ತಮುತ್ತಲಿನ ಪ್ರದೇಶವನ್ನು ಕೃಷ್ಣಾಪುರವೆಂದು ಹೆಸರಿಸಲಾಗಿದೆ. ಕನಕದಾಸರು ದ್ವಾರಕಾಪುರ ವರ್ಣನೆಯಲ್ಲಿ,

ತಂಡ ತಂಡದೆ ಕೃಷ್ಣನಗರಿಯೊಳ್ ಚಲಿಸುವ
ಮಂಡಳಿಕರ ಕಾಲಕಡಗ
ಪೆಂಡೆಯ ತಾಟಾಡಿ ರತ್ನಗಳ ಕ್ಕೆ
ದಂಡೆಯೊಳ್ ಸಿಕ್ಕಿ ಬಾಚುವರು[6]

ಇಲ್ಲಿ ಹೇಳಿರುವ ‘ಕೃಷ್ಣನಗರಿ’ ಕೃಷ್ಣಾಪುರವೇ ಇರಬೇಕು. ಕೃಷ್ಣ ಬಜಾರದ ಉದ್ದ ೫೭೦ಮೀ., ಅಗಲ ೪೯.೫ಮೀ. ಇಕ್ಕೆಲಗಳಲ್ಲಿ ಮೂರು ಅಡಿಗಳೆತ್ತರದ ಅಧಿಷ್ಠಾನದ ಮೇಲೆ ಸಾಲು ಮಂಟಪಗಳನ್ನು ಕಟ್ಟಲಾಗಿದೆ.[7] ಸಾಲುಮಂಟಪಗಳು ಎರಡು ಅಂಕಣಗಳನ್ನು ಹೊಂದಿವೆ. ಇವುಗಳಲ್ಲಿ ಕೆಲವು ಎಂಟು ಅಂಕಣಗಳಷ್ಟು ವಿಶಾಲವಾಗಿದೆ. ಇವು ಶ್ರೀ ವೈಷ್ಣವ ಪಂಥದ ಮಠಗಳು ಇದ್ದಿರಬೇಕು. ಬಜಾರದ ಎಡಭಾಗದಲ್ಲಿ ತಪ್ಪೋತ್ಸವದ ಕೊಳವಿದೆ. ಮಧ್ಯ ಇರುವ ಉತ್ಸವ ಮಂಟಪವು ಗೋಪುರವನ್ನು ಹೊಂದಿದೆ. ಕೃಷ್ಣ ಬಜಾರದಲ್ಲಿಯೂ ಮಠಗಳಿದ್ದುದನ್ನು ಅಲ್ಲಿಯ ಅವಶೇಷಗಳಿಗಿಂದಲೂ ಉಬ್ಬುಶಿಲ್ಪಗಳಿಂದಲೂ ಗುರುತಿಸಬಹುದು. ಈ ಬಜಾರು ತೇರುಬೀದಿಯಾಗಿದ್ದು, ಬಾಲಕೃಷ್ಣನ ಪ್ರತಿಮೆಯನ್ನು ರಥದಲ್ಲಿಟ್ಟು ಬೀದಿಯಲ್ಲಿ ಎಳೆಯುತ್ತಿದ್ದರು. ಇದು ಬಜಾರದ ಕೊನೆಯಲ್ಲಿದ್ದ ಉತ್ಸವಮಂಟಪ (ಪಾದಗಟ್ಟಿ)ದವರೆಗೂ ಹೋಗುತ್ತಿತ್ತು. ಈ ಉತ್ಸವ ಮಂಟಪವು ಈಗ ನಾಶವಾಗಿದ್ದು, ಕೇವಲ ಅವಶೇಷಗಳು ಮಾತ್ರ ಉಳಿದಿವೆ.

ಕೃಷ್ಣಾಪುರವು ದೇವಾಲಯದ ಬಲಭಾಗಕ್ಕೆ ಉದ್ಧಾನ ವೀರಭದ್ರ ದೇಗುಲ ಮತ್ತು ಎಡಕ್ಕೆ ವಿರೂಪಾಕ್ಷ ಬಜಾರಗಳವರೆಗೂ ವಿಸ್ತರಿಸಿದ್ದಿತು. ಅಲ್ಲಿಯ ಮಂಟಪಗಳ ಅವಶೇಷಗಳಿಂದ ಇದನ್ನು ಸ್ಪಷ್ಟವಾಗಿ ತಿಳಿಯಬಹುದು.

ಕೃಷ್ಣ ಬಜಾರು ವಿಜಯನಗರ ಆಳ್ವಿಕೆಯ ಕಾಲದಲ್ಲಿ ಸಾಂಸ್ಕೃತಿಕ, ಧಾರ್ಮಿಕ ಆಚರಣೆಗಳ ಕೇಂದ್ರವಾಗಿರದೆ, ಪ್ರಮುಖ ವ್ಯಾಪಾರ ಕೇಂದ್ರವೂ ಆಗಿದ್ದಿತು. ಆದರೆ ಬಜಾರನ್ನು ಕಟ್ಟುವುದಕ್ಕೆ ಮೊದಲು ಈ ಪ್ರದೇಶವು ಇಂದಿನಂತೆ ಗದ್ದೆಯಾಗಿತ್ತು. ಶಾಸನದಲ್ಲಿ ಹೇಳಿರುವ ಹಾಗೆ, ಕ್ರಿ.ಶ.೧೫೧೩ರಲ್ಲಿ ಬಾಲಕೃಷ್ಣ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ ನಂತರ,

ಶ್ರೀ ಬಾಲಕೃಷ್ಣದೇವರ ತಿರುವೀಧಿ ವಿನಿಯೋಗಕ್ಕಾಗಿ
ಬಿಟ್ಟುಕೊಟ್ಟ ಗದ್ದೆ ಬಗ್ಗೆ, ಬ್ರಾಹ್ಮಣರ ನಿವೇಶನಗಳು
ಪೇಟೆಯ ಮಳಿಗೆಮನೆಗಳು ಸ್ಥಾನಿಕರು, ಸ್ಥಳಸೇನ
ಬೋವರು ಮುಂತಾದವರಿಗೆ ಬಿಟ್ಟುಕೊಟ್ಟ ಗದ್ದೆ[8]

ಎಂದು ತಿಳಿಸುವುದರಿಂದ, ಈ ಕುರಿತು ಖಚಿತ ವಿವರ ಸಿಕ್ಕುತ್ತದೆ. ಶಾಸನದಲ್ಲಿ ಪೇಟೆಯ ಮಳಿಗೆಗಳು ಎಂದು ಹೇಳಿರುವುದರಿಂದ, ಕೃಷ್ಣ ಬಜಾರು ಮಾರುಕಟ್ಟೆಯೆಂಬುದರಲ್ಲಿ ಸಂಶಯವಿಲ್ಲ. ಅಲ್ಲದೆ, ಈ ಬಜಾರಿನಲ್ಲಿ ದವಸದ ಅಂಗಡಿಗಳೇ ಹೆಚ್ಚಾಗಿ ಇದ್ದವೆಂಬುದು ಗಮನಾರ್ಹ. ಇನ್ನೊಂದು ಮುಖ್ಯಾಂಶವೆಂದರೆ, ಅಚ್ಯುತರಾಯ ಹಾಕಿಸಿರುವ ಶಾಸನವೊಂದಲ್ಲಿ,

…. ಕೃಷ್ಣಾಪುರದ ಪೇಠೆಯ ದವಸದಂಗಡಿಗಳ ತೊಡೆಯದ ಬಗೆಯಲೂ ಸಲುವ ಘಟಿ ವರಹ[9]

ಎಂದಿದೆ. ಇದರಿಂದ ಕೃಷ್ಣಾಪುರವು ದವಸ-ಧಾನ್ಯಗಳ ಮಾರುಕಟ್ಟೆಯಾಗಿತ್ತೆಂದು ಸ್ಪಷ್ಟ ಪಡುತ್ತದೆ. ಅಲ್ಲದೆ, ದವಸ ಸಂಗ್ರಹಿಸಿಡುವುದಕ್ಕಾಗಿ ಕೃಷ್ಣ ದೇವಾಲಯದ ಬಲಭಾಗದಲ್ಲಿ ಉಗ್ರಾಣವನ್ನು ನಿರ್ಮಿಸಿದುದೂ ಇದನ್ನು ಇನ್ನಷ್ಟು ಸಮರ್ಥಿಸುತ್ತದೆ. ಈ ಅಂಗಡಿಗಳಿಂದ ಬರುತ್ತಿದ್ದ ಆದಾಯವನ್ನು ಕೃಷ್ಣ ದೇವಾಲಯಕ್ಕೆ ಬಿಡಲಾಗಿದ್ದಿತೆಂದು ಮೇಲಿನ ಶಾಸನದಲ್ಲಿ ಹೇಳಿದೆ. ದವಸ ಧಾನ್ಯಗಳನ್ನು ಮಾತ್ರವಲ್ಲದೆ, ಇತರ ವಸ್ತುಗಳೂ ಈ ಬಜಾರ್ ನಲ್ಲಿ ಮಾರಾಟವಾಗುತ್ತಿದ್ದವು. ಪುರಾತತ್ವ ಇಲಾಖೆಯು ನಡೆಸಿದ ಉತ್ಖನನದಿಂದ ಈ ಬಗೆಗೆ ಹೆಚ್ಚಿನ ಆಧಾರಗಳು ದೊರೆತಿವೆ.[10] ಕೃಷ್ಣ ದೇವಾಲಯದ ಬಳಿಯಲ್ಲಿ ನಡೆದ ಉತ್ಖನನದಲ್ಲಿ ದೊರೆತ ವಸ್ತುಗಳಲ್ಲಿ ಚೀನಾದೇಶದ ಪಿಂಗಾಣಿ ಪಾತ್ರೆಗಳು ಮುಖ್ಯವಾದುವು. ಇವು ನೀಲಿಯ ಬಣ್ಣದವಾಗಿದ್ದು, ಅವುಗಳ ಮೇಲೆ ಹೂಬಳ್ಳಿ, ಮಂಡಲ, ಇನ್ನಿತರ ಸುಂದರ ವಿನ್ಯಾಸಗಳಿವೆ. ಚೀನಾ ದೇಶಗಳೊಂದಿಗೆ ವಿಜಯನಗರ ಸಾಮ್ರಾಜ್ಯವು ಇಟ್ಟುಕೊಂಡಿದ್ದ ವ್ಯಾಪಾರ ಸಂಬಂಧವನ್ನು ಇದು ಸಮರ್ಥಿಸುತ್ತದೆ. ಇದಕ್ಕೆ ಪೂರಕವಾಗಿ, ವಿಜಯನಗರದಲ್ಲಿ ಮಾರಾಟವಾಗತ್ತಿದ್ದ ವಸ್ತುಗಳು ಕುರಿತು ಬಾರ್ಬೊಸಾ ಹೀಗೆ ಹೇಳಿದ್ದಾನೆ; “….ಓರ್ಮಸ್ ಮತ್ತು ಕಾಯೆಲ್‌ಗಳಿಂದ ತಂದ ಮುತ್ತುಗಳೂ ಅಪಾರವಾಗಿದೆ. ಚೀನಾ ಮತ್ತು ಅಲೆಗ್ಸಾಂಡ್ರಿಯಾದಿಂದ ಬಂದ ನಾನಾ ತರಹ ರೇಷ್ಮೆ ಮತ್ತು ಸಾಧಾರಣ ಕಿಂಕಾಪು ಬಟ್ಟೆಗಳನ್ನು ಹೆಚ್ಚಾಗಿ ಜನ ಉಪಯೋಗಿಸುತ್ತಾರೆ.” ಇದರಿಂದ ಚೀನಾ ಮತ್ತಿತರ ದೇಶಗಳಿಂದ ವಿಜಯನಗರಕ್ಕೆ ಬರುತ್ತಿದ್ದ ವಸ್ತುಗಳ ಪರಿಚಯ ಉಂಟಾಗುತ್ತದೆ.

ಕೃಷ್ಣ ಬಜಾರು ಪ್ರಮುಖ ವ್ಯಾಪಾರ ಮಾರುಕಟ್ಟೆಯಾಗಿ ಕಾರ್ಯನಿರ್ವಹಿಸುತ್ತಿದ್ದುದರಿಂದ ಆದಾಯ ಯಥೇಚ್ಛವಾಗಿ ಬರುತ್ತಿತ್ತು. ಕೃಷ್ಣದೇವರಾಯನ ಕಾಲಕ್ಕೆ ಭೇಟಿ ನೀಡಿದ ಡೊಮಿಂಗೋ ಪಾಯೇಸನು, ಕೃಷ್ಣಾಪುರದ ಆದಾಯ ಒಂದು ನೂರು ಬಂಗಾರದ ಪರ್ದಾವೋಗಳೆಂದು, ಈ ಆದಾಯವು ಕೃಷ್ಣದೇವಾಲಯಕ್ಕೆ ಸೇರುತ್ತಿತ್ತೆಂದು ಹೇಳಿದ್ದಾನೆ.[11] ಅಚ್ಯುತರಾಯನು ಸಹಾ ಕೃಷ್ಣದೇವಾಲಯಕ್ಕೆ ಬಜಾರದ ಉತ್ಪನ್ನವನ್ನು ಬಿಟ್ಟುಕೊಟ್ಟಿದ್ದನು. ಬಜಾರದಲ್ಲಿಯ ಅಂಗಡಿಗಳಲ್ಲದೆ, ಹೇರೆತ್ತು (ಎತ್ತಿನ ಗಾಡಿ)ಗಳಿಂದಲೂ ಸುಂಕ ವಸೂಲಿ ಮಾಡುತ್ತಿದ್ದರು. ಸದಾಶಿವರಾಯನ ಕಾಲದ ಕ್ರಿ.ಶ.೧೫೪೫ರ ಶಾಶನವು.

ಕೃಷ್ಣಾಪುರದ ಪೇಟೆಯಲು ಮೂಲೆ ವೀಸ ನಾನಹೇರು
೧ಕ್ಕೆ ಸಲುವ ಕಾಸು ೧. ಸೋಮವಾರದಲು ಅಂಗಡಿ
೧ಕ್ಕೆ ಸಲುವ ಕಾಸು[12] ಎಂದು ತಿಳಿಸುತ್ತದೆ.

ವಸೂಲಿಯಲ್ಲಿ ವಸ್ತುಗಳ ಮೇಲೆ ಸುಂಕವನ್ನು ಎತ್ತಿನಗಾಡಿಗೆ ಒಂದು ಕಾಸು, ಸೋಮವಾರದ ದಿನ ಅಂಗಡಿ ಒಂದಕ್ಕೆ ಒಂದು ಕಾಸನ್ನು ಪಡೆಯುತ್ತಿದ್ದರೆಂದು ಶಾಸನದಲ್ಲಿ ಹೇಳಿದೆ. ಆದರೆ ಇಲ್ಲಿ ಸೋಮವಾರದ ದಿನವೇ ಅಂಗಡಿಗಳಿಂದ ಸುಂಕ ವಸೂಲಿ ಮಾಡುತ್ತಿರುವುದಕ್ಕೆ ಕಾರಣ, ಅಂದು ಕೃಷ್ಣ ಬಜಾರದಲ್ಲಿ ಸಂತೆ ನಡೆಯುತ್ತಿದ್ದು, ವ್ಯಾಪಾರಕ್ಕೆ ಅಂಗಡಿಗಳು ಸೇರುತ್ತಿದಿರಬೇಕು. ಇದರಿಂದ ಸೋಮವಾರದಂದೇ ಸುಂಕ ವಸೂಲಿಮಾಡುತ್ತಿದ್ದುದು ಸ್ಪಷ್ಟ, ಹಾಗೆಯೇ, ಅಚ್ಯುತಾಪುರದ ಪೇಟೆಯಲ್ಲಿ ಮಂಗಳವಾರದಂದು ಅಂಗಡಿಯೊಂದಕ್ಕೆ ಒಂದು ಕಾಸನ್ನು ಸುಂಕವಾಗಿ ಪಡೆಯುತ್ತಿದ್ದರೆಂದು ಇದೇ ಶಾಸನದಿಂದ ಗೊತ್ತಾಗುವುದು. ಪಾಯೇಸನು ಹೇಳಿರುವಂತೆ, ‘ನಗರದ ನಾನಾ ಭಾಗಗಳಲ್ಲಿ ದಿನಕ್ಕೊಂದು ಕಡೆ ವಾರವೆಲ್ಲಾ ಸಂತೆ ನಡೆಯುತ್ತದೆ’ ಎಂದಿರುವುದು ಈ ಮೇಲಿನ ಅಂಶಗಳಿಗೆ ಪುಷ್ಟಿ ನೀಡುತ್ತದೆ.

ಕೃಷ್ಣ ಬಜಾರು ವಿಜಯನಗರದ ಪ್ರಮುಖ ಬಜಾರುಗಳಲ್ಲಿ ಒಂದಾಗಿತ್ತೆನ್ನುವುದು ದಿಟ. ಇದು ಕೃಷ್ಣದೇವರಾಯನಿಂದ ಕಟ್ಟಿಸಲ್ಪಟ್ಟು ಉಳಿದ ಅರಸರ ಪ್ರೋತ್ಸಾಹ ಪಡೆದು ಸಾಂಸ್ಕೃತಿಕ, ಧಾರ್ಮಿಕ, ಆರ್ಥಿಕ ಚಟುವಟಿಕೆಗಳಲ್ಲಿ ಮುಖ್ಯ ಪಾತ್ರ ನಿರ್ವಹಿಸಿತು. ಕೃಷ್ಣಾಪುರದ ಪೇಟೆಯು ದವಸ-ಧಾನ್ಯಗಳನ್ನು ಮಾರಾಟ ಮಾಡಲಾಗುತ್ತಿದ್ದ ವಿಶೇಷ ಮಾರುಕಟ್ಟೆಯಾಗಿದ್ದಿತು. ಆದರೆ ಇಂದು ನೋಡಸಿಗುವುದು ಮೂರ್ತಿಯಿಲ್ಲದ ದೇವಾಲಯ, ಗದ್ದೆಗಳಾಗಿ ಮಾರ್ಪಾಟು ಹೊಂದಿರುವ ಬಜಾರು ಪರಿಸರ ಹಾಗೂ ನೆಲಕಚ್ಚಿರುವ ಸ್ಮಾರಕಗಳು.

ಉ. ಅಚ್ಯುತ ಬಜಾರು

ವಿರೂಪಾಕ್ಷ ಬಜಾರದ ಪೂರ್ವಕ್ಕೆ ಮೆಟ್ಟಿಲುಗಳಿಂದ ಕೂಡಿದ ದಾರಿಯನ್ನು ಅನುಸರಿಸಿ ಮುಂದೆ ನಡೆದರೆ ಕಾಣಸಿಕ್ಕುವುದೇ ತಿರುವೇಂಗಳನಾಥ ದೇವಾಲಯ. ಆದರೆ ಇದನ್ನು ಅಚ್ಯುತರಾಯ ದೇವಾಲಯವೆಂದೇ ಕರೆಯಲಾಗುತ್ತದೆ. ಈ ದೇವಾಲಯದ ಉತ್ತರಕ್ಕೆ ತುಂಗಭದ್ರಾ ನದಿಯ ದಂಡೆಯವರೆಗೆ ಹರಡಿರುವ ವಿಶಾಲವಾದ ಬೀದಿಯೇ ಅಚ್ಯುತ ಬಜಾರು. ಇದನ್ನು ಶಾಸನಗಳಲ್ಲಿ ಅಚ್ಯುತಾಪೇಟೆ, ತಿರುವೇಂಗಳನಾಥ ತೇರುಬೀದಿ, ‘ಸೂಳೆ ಬಜಾರು’ ಎಂದು ಕರೆಯಲಾಗಿದೆ. ಅಚುತ್ಯರಾಯನ ಆಳ್ವಿಕೆಯಲ್ಲಿ ನಿರ್ಮಾಣವಾದ ಕಾರಣ ಇದಕ್ಕೆ ಅಚ್ಯುತಾಪೇಟೆ ಎಂಬ ಹೆಸರು ಬಂದಿದೆ. ಆದರೆ ಈ ದೇವಾಲಯ ತಿರುವೇಂಗಳನಾಥನದೆಂದೇ ಶಾಸನಗಳು ತಿಳಿಸುತ್ತವೆ.

ದೇವಾಲಯವು ಎರಡು ಸುತ್ತಿನ ಗೋಡೆಗಳನ್ನು ಹೊಂದಿ ಗರ್ಭಗೃಹ, ಪ್ರದಕ್ಷಿಣ ಪಥ, ಸುಕನಾಸಿ, ನವರಂಗ, ಮಹಾಮಂಟಪಗಳನ್ನು ಒಳಗೊಂಡಿದೆ. ದೇವಾಲಯಕ್ಕೆ ನಾಲ್ಕು ಮುಖ್ಯ ಗೋಪುರಗಳು. ದೇವಾಲಯದ ಹಿರಿಯ ಗೋಪುರದ ಉತ್ತರಕ್ಕೆ ಅಚ್ಯುತ ಬಜಾರು ಮತ್ತು ಎಡಕ್ಕೆ ನೃತ್ಯತಮಂಟಪ ಅಥವಾ ನೃತ್ಯಶಾಲೆಗಳು ಇವೆ. ಅಚ್ಯುತ ಬಜಾರದ ಉದ್ದ ೩೬೬.೩ಮೀ. ಬಜಾರದಲ್ಲಿ ಕಂಡಬರುವ ಕಲ್ಲುಹಾಸಿನ ದಾರಿಯ ಅಗಲ ೨೨ಮೀ. ಈಗ ಮುಚ್ಚಿಹೋಗಿದೆ. ಅಚ್ಯುತ ಬಜಾರು ಈ ದೇವಾಲಯದ ಕಾಲದಲ್ಲೇ ನಿರ್ಮಾಣವಾದುದು.

ಶಾಸನಗಳಲ್ಲಿ “ಹಂಪೆಕಟ್ಟೆ ತಿರುಮಲೇಶ”,[13] “ನಾಲ್ಕು ಬಾಗಿಲ ತಿರುಮಲೇಶ”[14]ಗಳೆಂದು ಉಲ್ಲೇಖವಾಗಿರುವುದು ಅಚ್ಯುತಾಪೇಟೆಯ ತಿರುವೇಂಗಳನಾಥನ ದೇವಾಲಯವಿದ್ದಿರುವ ಸೂಚನೆಯನ್ನು ನೀಡುತ್ತದೆ. ಆದರೆ ಈ ಮೊದಲೇ ದೇವಾಲಯವಿದ್ದರೂ ಇದರ ಸಂಪೂರ್ಣ ಬೆಳವಣಿಗೆ ಆದುದು ಹಾಗೂ ಬಜಾರದ ನಿರ್ಮಾಣವಾದುದು ಅಚ್ಯುತರಾಯನ ಕಾಲದಲ್ಲೆ. ಈ ಹಿನ್ನೆಲೆಯಲ್ಲಿಯೇ ಅಚ್ಯುತಾಪೇಟೆಯೆಂಬುದಾಗಿ ಶಾಸನದಲ್ಲಿ ಕರೆದಿರುವುದು. ಇದೇ ಅಂದಿನ ಮಾರುಕಟ್ಟೆಯಾಗಿದ್ದುದಕ್ಕೆ ಸಾಕ್ಷಿ. ಈ ಅಚ್ಯುತಾಪೇಟೆಯ ಸೀಮಾವಿವರವನ್ನು ಶಾಸನದಲ್ಲಿ,

….. ಪಡುವಲು ಮತಂಗಪರ್ವತ
ಮೂಡಲು ತಿಪರಾಜ ತೋ(ಟ)
ಬಡಗ ತುಂಗಭದ್ರಾ ತೀರದ ಸೀತಾಕೊಂಡ
(ಟೆಂಕ)ಲು ಭೂಪತಿಕೆರೆ[15]

ಎಂದು ಗುರುತಿಸಿದ್ದು, ಅಚ್ಯುತಬಜಾರದ ಸ್ಪಷ್ಟ ಕಲ್ಪನೆ ಇಲ್ಲಿ ಮೂಡುತ್ತದೆ.

ಅಚ್ಯುತ ಬಜಾರು ಅಥವಾ ಅಚ್ಯುತಾಪೇಟೆಯು ಮಾರುಕಟ್ಟೆಯಾಗಿದ್ದು, ವಾರಕ್ಕೊಂದು ದಿನ ಇಲ್ಲಿ ಸಂತೆ ನೆರವೇರುತ್ತಿದ್ದಿತು. ಈ ಸಂತೆಯಲ್ಲಿ ಎಲ್ಲಾ ಕಡೆಗಳಿಂದ ತಂದಂತಹ ವಸ್ತುಗಳ ಮಾರಾಟ ಮಾಡಲಾಗುತ್ತಿದ್ದಿತು. ಈ ಸಂತೆಯಲ್ಲಿ ಎಲ್ಲಾ ಕಡೆಗಳಿಂದ ತಂದಂತಹ ವಸ್ತುಗಳ ಮಾರಾಟ ಮಾಡಲಾಗುತ್ತಿದ್ದಿತು. ಇಲ್ಲಿ ಮಂಗಳವಾರದಂದು ಸಂತೆ ಸೇರುತ್ತಿತ್ತೆಂದು ಉದ್ದಾನ ವೀರಭದ್ರ ದೇವಾಲಯದ ಶಾಸನದಲ್ಲಿ ಉಕ್ತವಾದ,

…….. ಅಚ್ಯುತಾಪುರದ ಪೇಟೆಯಲು ಮೂಲೆವೀಸ
ಒಳಹೇರು ೧ಕ್ಕೆ ಸಲು ಉದು ಕಾಸು ೧ ಮಂಗಳವಾರದಲೂ
ಅಂಗಡಿ ೧ಕ್ಕೆ ಸಲುವ ಕಾಸು[16]

ಎಂಬ ಸಾಲುಗಳಲ್ಲಿ ಗುರುತಿಸಲಾಗಿದೆ. ಮಂಗಳವಾರದಂದು ಇಲ್ಲಿಯ ಪ್ರತಿಯೊಂದು ಅಂಗಡಿಯಿಂದ ಒಂದೊಂದು ಕಾಸು ವಸೂಲಿ ಮಾಡುತ್ತಿದ್ದರೆಂದು ಹೇಳಿರುವುದು ಸಹ ಅಂದೇ ಸಂತೆ ನಡೆಯುತ್ತಿದ್ದಿತೆಂಬುದನ್ನು ಸಮರ್ಥಿಸುತ್ತದೆ. ಇಲ್ಲಿ ಕೂಡ ಹಂಪೆಯ ಇತರ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದ್ದ ಎಲ್ಲ ವಸ್ತುಗಳೂ ದೊರೆಯುತ್ತಿದ್ದವು.

ಸಾಂಸ್ಕೃತಿಕವಾಗಿಯೂ ಈ ಬಜಾರು ಮಹತ್ವವನ್ನು ಹೊಂದಿದ್ದಿತು. ಎಲ್ಲಾ ದೇವಾಲಯಗಳಲ್ಲಿ ನಡೆಸುತ್ತಿದ್ದ ಹಬ್ಬಗಳು, ರಥೋತ್ಸವಗಳು, ಉತ್ಸವಗಳನ್ನು ಇಲ್ಲಿಯೂ ಏರ್ಪಡಿಸಲಾಗುತ್ತಿದ್ದಿತು. ‘ತಿರುವೆಂಗಳನಾತಾನ ತೇರುಬೀದಿ’ಯೆಂದು ಶಾಸನದಲ್ಲಿ ಕರೆದಿರುವುದು, ಇಲ್ಲಿ ರಥೋತ್ಸವ ನಡೆಯುತ್ತಿದ್ದುದಕ್ಕೆ ಸ್ಪಷ್ಟ ಸೂಚನೆ. ಅಚ್ಯುತ ಬಜಾರದ ವಿಶೇಷತೆಯೆಂದರೆ ನೃತ್ಯಕ್ಕಾಗಿಯೇ ಇಲ್ಲಿ ಪ್ರತ್ಯೇಕವಾದ ಮಂಟಪವಿರುವುದು. ಇದು ಅಂದಿನ ನೃತ್ಯಶಾಲೆ. ರಾಜರು ಇದನ್ನು ಪ್ರತ್ಯೇಕವಾಗಿ ಕಟ್ಟಿಸಿರುವುದನ್ನು ನೋಡಿದರೆ, ನೃತ್ಯ-ಸಂಗೀತಗಳಿಗೆ ಅರಸರು ನೀಡಿದ ಪ್ರೋತ್ಸಾಹ ವ್ಯಕ್ತಪಡುತ್ತದೆ.

ಅಚ್ಯುತ ಬಜಾರನ್ನು ಲಾಂಗ್‌ಹರ್ಸ್ಟ್‌ಮುಂತಾದ ವಿದ್ವಾಂಸರು ‘ಸೂಳೆ ಬಜಾರು’ ಎಂದು ಕರೆದಿರುವದನ್ನು ಇಲ್ಲಿ ಚರ್ಚಿಸಬಹುದು. ನರ್ತಕಿಯರು ಇಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದರೆಂದೂ ವಿದ್ವಾಂಸರು ಹೇಳಿದ್ದಾರೆ. ಸೂಳೆ ಬಜಾರು ಎಂಬುದು ಇಂದಿಗೂ ಇಲ್ಲಿ ಪ್ರಚಲಿತವಿರುವುದು ಗಮನಾರ್ಹ. ಆದರೆ ಷ. ಶೆಟ್ಟರ್, ವಸುಂಧರಾ ಫಿಲಿಯೋಜಾ ಮುಂತಾದವರು ಈ ಬೀದಿಯು ಸೂಳೆ ಬಜಾರು ಆಗಿರಲಿಲ್ಲವೆಂದು ವಾದಿಸಿದ್ದಾರೆ.

ಸೂಳೆ ಬಜಾರು ಎಂಬ ಅಭಿಪ್ರಾಯವನ್ನು ಅಲ್ಲಗೆಳೆಯುವಂತಿಲ್ಲವೆಂಬುದಕ್ಕೆ ಹಲವಾರು ಕಾರಣಗಳಿವೆ. ಪ್ರಮುಖ ಉದಾಹರಣೆಯೆಂದರೆ, ವಿಜಯನಗರದಲ್ಲಿ ಎಲ್ಲಾ ಪ್ರಮುಖ ದೇವಾಲಯಗಳಿಗೂ ದೇವರ ಅಂಗ ರಂಗ ವೈಭೋಗ ಅಮೃತಪಡಿ ನೈವೇದ್ಯಕ್ಕೆಂದು ದಾನ ದತ್ತಿಗಳನ್ನು ನೀಡಿರುವುದು ಹಲವಾರು ಶಾಸನಗಳಲ್ಲಿ ಕಂಡುಬರುತ್ತದೆ.[17] ಅಂಗ ಭೋಗವು ದೇವರ ವಿಗ್ರಹಕ್ಕೆ ಸಲ್ಲುವ ಪೂಜೆ-ಪುನಸ್ಕಾರಗಳಾದರೆ, ರಂಗಭೋಗವು ಗರ್ಭಗೃಹದ ಮುಂದಿನ ರಂಗದ ಮೇಲೆ ಸುಂದರವಾದ ನರ್ತಕಿಯರಿಂದ ನಡೆಸುತ್ತಿದ್ದ ನರ್ತನ.[18] ಈ ಅಂಗಭೋಗಕ್ಕೆಂದೇ ನರ್ತಕಿಯರು ಅಥವಾ ದೇವದಾಸಿಯರನ್ನು ನೇಮಿಸಿಕೊಳ್ಳುತ್ತಿದ್ದರು. ದೇವಾಲಯದಲ್ಲಿರುವ ಆದಾಯದ ಒಂದು ಪಾಲನ್ನು ಇವರಿಗೂ ನೀಡುತ್ತಿದ್ದರು.[19] ನರ್ತಕಿಯರು ಅಥವಾ ದೇವದಾಸಿಯರಿಗೆ ದೇವಾಲಯದ ಹತ್ತಿರದಲ್ಲಿ ಪ್ರತ್ಯೇಕ ವಾಸಸ್ಥಳಗಳನ್ನು ಕಟ್ಟಿಕೊಡುತ್ತಿದ್ದರು. ಅಬ್ದುಲ್‌ರಜಾಕ್‌ಹೇಳಿರುವಂತೆ, “ದರಬ್‌ಖಾನೆಯ ಹಿಂಭಾಗದಲ್ಲಿ ಮುನ್ನೂರು ಗಜಕ್ಕಿಂತಲೂ ಹೆಚ್ಚು ಉದ್ದವಾದ, ಇಪ್ಪತ್ತು ಗಜಕ್ಕಿಂತಲೂ ಅಗಲವಾದ ಒಂದು ತರಹ ಅಂಗಡಿ ಬೀದಿಯಿದೆ. ….ಯಾರು ಬೇಕಾದರೂ ಈ ಬೀದಿಗೆ ಬಂದು ತನಗೆ ಮೆಚ್ಚಿಗೆಯಾದ ವೇಶ್ಯೆಯನ್ನು ಆರಿಸಿಕೊಂಡು ಅವಳೊಡನೆ ಕಾಲ ಕಳೆಯಬಹುದು.”[20]

ಇಲ್ಲಿ ಹೇಳಿರುವ ಬೀದಿ ಅಚ್ಯುತ ಬಜಾರಂತೂ ಅಲ್ಲ. ಅಚ್ಯುತ ಬಜಾರ್ ನಿರ್ಮಾಣಕ್ಕೆ ಮೊದಲೇ ರಜಾಕನು ವಿಜಯನಗರಕ್ಕೆ ಭೇಟಿ ನೀಡಿದ್ದನು. ಆದರೆ ಅವನು ಹೇಳಿರುವ ದರಬ್‌ಖಾನೆಯ ಹತ್ತಿರ ಎಂದಿರುವುದು ಅರಮನೆ ಪ್ರದೇಶದಲ್ಲಿ ಇದ್ದಿರಬಹುದು. ಪಾಯೇಸನು, ವೇಶ್ಯೆಯರನ್ನು ಸಮಾಜದಲ್ಲಿ ಗೌರವ ಭಾವನೆಯಿಂದ ಕಾಣಲಾಗುತ್ತಿತ್ತೆಂದು ತಿಳಿಸಿರುವುದರಿಂದ ವೇಶ್ಯಾಪದ್ಧತಿಯು ರಾಜ್ಯದಲ್ಲಿ ಸಾಮಾನ್ಯವಾಗಿತ್ತೆಂಬುದು ಸ್ಪಷ್ಟ. ತಿರುವೇಂಗಳನಾಥ ದೇವಾಲಯದಲ್ಲಿರುವ ನೃತ್ಯಮಂಟಪದಲ್ಲಿ ಮಿಥುನ ಶಿಲ್ಪಗಳು, ನರ್ತನದ ವಿವಿಧ ಬಗೆಗಳನ್ನು ಉಬ್ಬುಶಿಲ್ಪಗಳಲ್ಲಿ ತೋರಿಸಿರುವುದರಿಂದ ಇದು ನೃತ್ಯಶಾಲೆ ಅಥವಾ ನೃತ್ಯ ಪ್ರದರ್ಶನದ ಸ್ಥಳವಾಗಿದ್ದಿತೆಂಬುದು ಖಚಿತ. ಅಚ್ಯುತ ಬಜಾರನ್ನು ಇಂದಿಗೂ ಸೂಳೆ ಬಜಾರು ಎಂದು ಕರೆಯುತ್ತಿರುವುದು ಈ ಅಂಶಗಳ ಹಿನ್ನೆಲೆಯಲ್ಲಿ ಇರಬಹುದು. ಆದರೆ ಶಾಸನಗಳಲ್ಲಿ, ಇತರ ಮೂಲ ಆಧಾರಗಳಲ್ಲಿ ಸೂಳೆ ಬಜಾರು ಎಂಬುದನ್ನು ಇಲ್ಲಿಯೂ ಪ್ರಸ್ತಾಪಿಸಿರುವುದು ಕಂಡುಬಂದಿಲ್ಲ.

ಅಚ್ಯುತ ಬಜಾರು ಅಥವಾ ಅಚ್ಯುತಾಪೇಟೆಯು ಆರ್ಥಿಕವಾಗಿ, ವ್ಯಾಪಾರ ವಹಿವಾಟು ಮುಂತಾದವುಗಳಲ್ಲಿ ಪ್ರಸಿದ್ಧಿ ಹೊಂದಿದ್ದಂತೆಯೇ, ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವೂ ಆಗಿದ್ದಿತು. ಹಬ್ಬ, ರಥೋತ್ಸವ, ನ್ಯತ್ಯ, ಸಂಗೀತ ಮುಂತಾದವು ಇಲ್ಲಿ ಆಚರಣೆಯಲ್ಲಿದ್ದವು.

ಊ. ಮಾಲ್ಯವಂತ ಬಜಾರು

ಕಮಲಾಪುರದಿಂದ ಕಂಪ್ಲಿಗೆ ಹೋಗುವ ರಸ್ತೆಯಲ್ಲಿ ಮೂರು ಕಿ.ಮೀ.ಗಳ ಅಂತರದಲ್ಲಿ ಮಾಲ್ಯವಂತೆ ಬೆಟ್ಟವಿದೆ. ಈ ಬೆಟ್ಟದ ಮೇಲಿರುವ ದೇವಾಲಯ ರಘುನಾಥನದು. ಇದು ಮಾಲ್ಯವಂತ ರಘುನಾಥ ದೇವಾಲಯವೆಂದೇ ಪ್ರಸಿದ್ಧಿ. ವಿಜಯನಗರ ಕಾಲದ ವೈಷ್ಣವ ದೇವಾಲಯಗಳ ಪೈಕಿ ಇಂದಿಗೂ ಸುಸ್ಥಿತಿಯಲ್ಲಿರುವ ದೇವಾಲಯವಿದು. ಹಂಪೆಯ ಇತರ ಸ್ಮಾರಕಗಳಿಗಾದ ಯಾವ ಹಾನಿಯೂ ಇದಕ್ಕೆ ತಟ್ಟದಿರುವುದರಿಂದ ಸುರಕ್ಷಿತವಾಗಿದೆ. ಇದಕ್ಕೆ ಹಂಪೆಯಿಂದ ದೂರವಾಗಿ ಮಾಲ್ಯವಂತ ಬೆಟ್ಟದ ಮೇಲಿರುವುದೂ ಕಾರಣವಿರಬಹುದು.

ಮಾಲ್ಯವಂತ ಬೆಟ್ಟದ ಮೇಲಿನ ವಿಶಾಲವಾದ ಪ್ರಾಂಗಣದಲ್ಲಿ ಈ ದೇವಾಲಯವನ್ನು ನಿರ್ಮಿಸಿದ್ದಾರೆ. ಪ್ರಾಂಗಣ ಗೋಡೆಯಲ್ಲಿ ಎರಡು ಪ್ರಮುಖ ಗೋಪುರಗಳಿದ್ದು, ಉತ್ತರಕ್ಕೆ ಚಿಕ್ಕದಾದ ಬಾಗಿಲು ಮಾತ್ರವಿದೆ. ಪೂರ್ವ ಗೋಪುರವು ಮೂರು ತಲಗಳನ್ನು ಹೊಂದಿದ್ದರೆ, ದಕ್ಷಿಣ ದಿಕ್ಕಿನದು ಐದು ತಲಗಳಿಂದ ಕೂಡಿದೆ. ರಘುನಾಥ ದೇವಾಲಯವು ಗರ್ಭಗೃಹ, ಸುಕನಾಸಿ, ಪ್ರದಕ್ಷಿಣ ಪಥ, ನವರಂಗ, ಮಹಾಮಂಟಪಗಳಲ್ಲದೆ ಎಡಬದಿಗೆ ಅಮ್ಮನವರ ಗುಡಿಯನ್ನೂ, ಬಲಬದಿಯಲ್ಲಿ ಕಲ್ಯಾಣಮಂಟಪವನ್ನೂ ಹೊಂದಿದೆ. ಗರ್ಭಗೃಹದಲ್ಲಿ ರಾಮ, ಲಕ್ಷಣ, ಸೀತೆ ಮತ್ತು ಆಂಜನೇಯರ ಶಿಲ್ಪಗಳನ್ನು ಹುಟ್ಟುಬಂಡೆಯ ಮೇಲೆ ಕೆತ್ತಲಾಗಿದ್ದು, ಅದೇ ಬಂಡೆಯ ಮೇಲೆಯೇ ದೇವಾಲಯದ ವಿಮಾನವನ್ನೂ ನಿರ್ಮಿಸಿರುವುದು. ಇಂದಿಗೂ ಪೂಜೆ-ಪುನಸ್ಕಾರಗಳು ಮುಂದುವರೆದಿರುವುದನ್ನು ಇಲ್ಲಿ ಕಾಣಬಹುದು. ಕಲ್ಯಾಣಮಂಟಪವನ್ನು ವ್ಯವಸ್ಥಿತವಾಗಿಯೂ, ಉತ್ತಮ ಕಲಾವಂತಿಕೆಯಿಂದಲೂ ನಿರ್ಮಿಸಲಾಗಿದೆ. ಎತ್ತರವಾದ ಅಧಿಷ್ಠಾನದಲ್ಲಿ ಕುದುರೆ ಸವಾರರ ಹಾಗೂ ಅರಬ್ ವರ್ತಕರು ಕುದುರೆ ಹಿಡಿದು ನಿಂತಿರುವ, ಇನ್ನು ಮುಂತಾದ ದೃಶ್ಯಗಳನ್ನು ಕಾಣಬಹುದು. ಕಲ್ಯಾಣ ಮಂಟಪವು ಎತ್ತರವಾದ ವೇದಿಕೆಯನ್ನು ಹೊಂದಿದೆ.

ಕ್ರಿ.ಶ.೧೫೪೫ರಲ್ಲಿ ಆಗಿನ್ನು ಹಿರಿಯೂರಿನಲ್ಲಿ ವಿಜಯನಗರದ ರಾಜಪ್ರತಿನಿಧಿಯಾಗಿದ್ದ ಕಾಮಗೇತಿ ತಿಮ್ಮಣ್ಣ ನಾಯಕನು (ಚಿತ್ರದುರ್ಗ ನಾಯಕ ಸಂಸ್ಥಾನದ ಮೂಲಪುರುಷ) ಮಾಲ್ಯವಂತ ರಘುನಾಥದೇವರ ನೈವೇದ್ಯಕ್ಕೆಂದು ಬಿಟ್ಟುಕೊಟ್ಟ ದತ್ತಿಯ ವಿವರ ಹಿರಿಯೂರು ತಾಲೂಕಿನ ಶಾಸನವೊಂದರಲ್ಲಿ ಕಂಡುಬರುತ್ತದೆ.[21] ಕ್ರಿ.ಶ.೧೫೫೯ರ ಇನ್ನೊಂದು ಶಾಸನ ಸಹ ಕೂಡ ಮಾಲ್ಯವಂತ ರಘುನಾಥನಿಗೆ ಬಿಟ್ಟ ದಾನ-ದತ್ತಿಯ ವಿವರ ನೀಡುವುದು.[22]

ಮಾಲ್ಯವಂತ ಬೆಟ್ಟದಿಂದ ದಕ್ಷಿಣಕ್ಕೆ ಇಳಿದುಬಂದರೆ, ವಸತಿ ನೆಲೆ ಹಾಗೂ ಸಾಲುಮಂಟಪಗಳ ಅವಶೇಷಗಳು ಕಂಡುಬರುತ್ತದೆ. ಇತರ ಬಜಾರುಗಳಂತೆ ಇಲ್ಲಿಯೂ ಸಾಲುಮಂಟಪಗಳಿಂದ ಕೂಡಿದ ವಿಶಾಲ ಬೀದಿಯಿದೆ. ಇಲ್ಲಿ ಬಜಾರು ಅಥವಾ ಪೇಟೆ ಇತ್ತೆಂಬುದನ್ನು ಕ್ಷೇತ್ರಕಾರ್ಯದ ಮೂಲಕವಷ್ಟೇ ಗುರುತಿಸಬಹುದು. ಮಾಲ್ಯವಂತ ಬೆಟ್ಟದ ಕೆಳ ಭಾಗದಲ್ಲಿದ್ದ ಬಜಾರನ್ನು ಕುರಿತ ವಿವರ ಎಲ್ಲಿಯೂ ಕಂಡುಬಂದಿಲ್ಲ. ಬೀದಿಯ ಇಕ್ಕೆಲಗಳಲ್ಲಿ ಸುಮಾರು ೮೦೦ ಮೀಟರುಗಳಷ್ಟು ಉದ್ದ ಸಾಲುಮಂಟಪಗಳಿಂದ್ದುದನ್ನು ಅಲ್ಲಿಯ ಅವಶೇಷಗಳಿಂದ ಗುರುತಿಸಬಹುದಾಗಿದೆ. ಬೀದಿಯ ಬಲಬದಿಯಲ್ಲಿ ಇಂದು ಗೋಶಾಲೆಯಾಗಿ ಪರಿವರ್ತನೆಗೊಂಡಿರುವ ವಿಶಾಲ ಮಂಟಪವಿದೆ. ಇದು ವಿಜಯನಗರ ಅವಧಿಯಲ್ಲಿ ಮಠವಾಗಿದ್ದಿತೆಂಬುದನ್ನು ಅಲ್ಲಿನ ಬಾಗಿಲುವಾಡದಲ್ಲಿರುವ ವೈಷ್ಣವ ದ್ವಾರಪಾಲಕ ಶಿಲ್ಪಗಳಿಂದ ಸ್ಪಷ್ಟವಾಗುತ್ತದೆ. ಈ ಮಂಟಪದಿಂದ ಪೂರ್ವಕ್ಕೆ ಕಂಪ್ಲಿ ರಸ್ತೆಯ ಬಲಬದಿಯಲ್ಲಿ ಕಾಣಬರುವ ಉದಯಗಿರಿ ಬಾಗಿಲವರೆಗೆ ಇದ್ದ ವಿಶಾಲ ಬೀದಿಯೇ ಮಾಲ್ಯವಂತ ಬಜಾರು ಆಗಿರುವುದು.

ಮಾಲ್ಯವಂತ ಬಜಾರದ ಬೀದಿಯು ರಘುನಾಥನ ತೇರುಬೀದಿಯೂ ಆಗಿದ್ದಿತು. ಇದಕ್ಕೆ ಇಂದಿಗೂ ನಡೆಯುತ್ತಿರುವ ರಥೋತ್ಸವ ಪ್ರಮುಖ ಸಾಕ್ಷಿ. ಧಾರ್ಮಿಕವಾಗಿ ಮಹತ್ವ ಹೊಂದಿದ್ದುದನ್ನು ಇಂದಿಗೂ ಉಳಿದು ಬಂದಿರುವ ಅಲ್ಲಿಯ ಮಠ ಹಾಗೂ ಗೇಣೇಶ, ಬೈರವ, ಆಂಜನೇಯ ಮತ್ತಿತರ ಶಿಲ್ಪಗಳು ಸಮರ್ಥಿಸುತ್ತವೆ. ಅಲ್ಲದೆ ಇವುಗಳಿಗೆ ಪ್ರತ್ಯೇಕ ಮಂಟಪ ಹಾಗೂ ದೇವಾಲಯಗಳನ್ನು ನಿರ್ಮಿಸಿದ್ದುದೂ ಕಂಡುಬರುತ್ತವೆ.

 

[1] ಎಸ್‌.ಐ.ಐ., ಸಂ.೪, ಸಂಖ್ಯೆ ೨೭೮

[2] ಎಸ್‌.ಐ.ಐ., ಸಂ.೯-ii, ಸಂಖ್ಯೆ ೬೬೮

[3] ದೇವಕುಂಜರಿ, ಹಂಪಿ, ಪು.೬೨

[4] ಎಸ್‌.ಐ.ಐ., ಸಂ.೯-ii ಸಂಖ್ಯೆ ೬೬೮

[5] ಎಸ್‌.ಐ.ಐ., ಸಂಖ್ಯೆ ೫೬೬

[6] ಮೋಹನ ತರಂಗಿಣಿ, ಪದ್ಯ ೬೧, ಪು.೩೪

[7] ಕ್ಷೇತ್ರಕಾರ್ಯದಲ್ಲಿ ಕಂಡುಬಂದತೆ.

[8] ಎಸ್‌.ಐ.ಐ., ಸಂ.೪, ಸಂಖ್ಯೆ ೨೫೫

[9] ಎಸ್‌.ಐ.ಐ., ಸಂಖ್ಯೆ ೨೬೨

[10] ಇನ್‌ವಿಜಯನಗರ : ಪ್ರೋಗ್ರೆಸ್‌ಆಫ್‌ರಿಸರ್ಚ್‌, ೧೯೭೯-೮೩, ಪು.೩೦

[11] ಮ.ಹೋ.ಸಾ.ವಿಜಯನಗರ, ಪು.೩೦೩

[12] ಎಸ್‌.ಐ.ಐ., ಸಂ.೪, ಸಂಖ್ಯೆ ೨೬೬

[13] ಎಸ್‌.ಐ.ಐ., ಸಂ.೪, ಸಂಖ್ಯೆ ೨೫೪

[14] ಎಸ್‌.ಐ.ಐ., ಸಂಖ್ಯೆ ೨೫೫

[15] ಎಸ್‌.ಐ.ಐ., ಸಂ. ೯-ii, ಸಂಖ್ಯೆ ೫೬೪

[16] ಎಸ್‌.ಐ.ಐ., ಸಂ.೪, ಸಂಖ್ಯೆ ೨೬೬

[17] ಎಸ್‌.ಐ.ಐ., ೯-ii ಸಂಖ್ಯೆ ೪೯೦, ೫೧೦, ೫೬೪

[18] ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಪು.೧೮೧

[19] ಎಸ್‌.ಐ.ಐ., ಸಂ.೯-ii, ಸಂಖ್ಯೆ ೬೦೭ : ವಿಠ್ಠಲ ದೇವಾಲಯಕ್ಕೆ ನೀಡಿದ ದತ್ತಿಯಲ್ಲಿನ ಒಂದು ಭಾಗವನ್ನು ನಟುವ ರಂಗ್ಯಪಾಲು ನೀಡುತ್ತಿದ್ದರೆಂದು ತಿಳಿಯುತ್ತದೆ.

[20] ಪ್ರ.ಕಂ.ಇಂ.ಸಂ.೨, ಪು.೧೬೦

[21] ವಿಜಯನಗರ ಇನ್‌ಸ್ಕ್ರಿಪ್ಷನ್ಸ್‌, ಸಂ.೨, ಕೆ.ಎನ್‌.೫೮೬

[22] ಎಸ್‌.ಐ.ಐ., ೯-ii, ಸಂಖ್ಯೆ ೬೭೦