ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪೆಯು ದಕ್ಷಿಣ ಭಾರತ ಪ್ರಮುಖ ಪಟ್ಟಣ ಮತ್ತು ವ್ಯಾಪಾರ ಕೇಂದ್ರವಾಗಿದ್ದಿತು. ವಿಜಯನಗರ ಅರಸರು ಆರ್ಥಿಕ ಚಟುವಟಿಕೆಗಳನ್ನು ಅಪಾರವಾಗಿ ಪ್ರೋತ್ಸಾಹಿಸಿದರು. ಹಂಪೆಯ ಪ್ರಮುಖ ದೇವಾಲಯಗಳ ಮುಂಭಾಗದ ಸಾಲುಮಂಟಪಗಳು ವ್ಯಾಪಾರದ ತಾಣಗಳಾಗಿದ್ದವು. ಒಂದು ವಿಧದಲ್ಲಿ ವಿಜಯನಗರದ ಆರ್ಥಿಕ ಚಟುವಟಿಕೆಗಳನ್ನೂ ಸಾಮಾಜಿಕ, ಸಾಂಸ್ಕೃತಿಕ ಆಚರಣೆಗಳನ್ನೂ ಹಿಡಿತದಲ್ಲಿರಿಸಿಕೊಂಡಿದ್ದವೆನ್ನಬಹುದು.

ಸಾಲುಮಂಟಪಗಳಿಂದ ಕೂಡಿದ ಸ್ಥಳವನ್ನು ಇಲ್ಲಿ ‘ಬಜಾರ’ ಎಂದು ಸಂಬೋಧಿಸಲಾಗಿದೆ. ಬಜಾರ್ ಪದವು ಪರ್ಶಿಯನ್‌ಮೂಲದ್ದು ಹಾಗೂ ವ್ಯಾಪಾರ ಸಂಪರ್ಕಗಳ ಮೂಲಕ ನಮ್ಮಲ್ಲಿ ಬಳಕೆಗೆ ಬಂದಿದೆನ್ನುವುದು ಸ್ಪಷ್ಟ. ಇದು ಹಂಪೆಯ ರಥಬೀದಿ ಅಥವಾ ಮುಖ್ಯಬೀದಿಗಳಿಗೆ ಸಂಬಂಧಿಸಿದಂತೆ ಈಚಿನ ವರುಷಗಳಲ್ಲಿ ಕನ್ನಡದೊಡನೆ ಬಳಸಲ್ಪಡುತ್ತಿದೆ. ಸ್ಥಳೀಯವಾಗಿಯೂ ಬಜಾರ ಪದವು ಹೆಚ್ಚು ಪ್ರಚಲಿತವಾಗಿದೆ. ಈ ಹಿನ್ನೆಲೆಯಲ್ಲಿ ವಿಜಯನಗರ ಅವಧಿಯಲ್ಲಿ ಬಳಕೆಯಿದ್ದ‘ಪೇಟೆ’ ಅಥವಾ ‘ಅಂಗಡಿ ಬೀದಿ’ ಗಳಿಗೆ ಸಂವಾದಿಯಾಗಿ ಪ್ರಸ್ತುತ ಅಧ್ಯಯನದಲ್ಲಿ ಬಜಾರ್ ಪದವನ್ನೇ ಪ್ರಯೋಗಿಸಲಾಗಿದೆ.

ಹಂಪೆಯಲ್ಲಿ ಮುಖ್ಯವೆನಿಸಿದ್ದ ಏಳು ಬಜಾರುಗಳನ್ನು ಕುರಿತು ಅಧ್ಯಯನಿಸಲಾಗಿದ್ದು, ಉಳಿದ ಕೆಲವನ್ನು ಕುರಿತು ಆನುಷಂಗಿಕವಾಗಿ ಚರ್ಚಿಸಲಾಗಿದೆ. ವಿಜಯನಗರ ಕಾಲದ ಬಜಾರುಗಳ ಬೆಳವಣಿಗೆ, ಅವುಗಳ ಪಾತ್ರ, ಮಹತ್ವಗಳನ್ನು ಕಂಡುಕೊಳ್ಳವುದರೊಡನೆ ‍ಬಜಾರ್‌ಗಳಿಗೂ, ದೇವಾಲಯಗಳಿಗೂ, ಅರಸರಿಗೂ ಇದ್ದ ನಿಕಟ ಸಂಬಂಧಗಳನ್ನು ಗುರುತಿಸಲು ಪ್ರಯತ್ನಿಸಿದೆ.

ಬಜಾರುಗಳು ಮುಖ್ಯ ವ್ಯಾಪಾರ ಕೇಂದ್ರಗಳಾಗಿದ್ದರಿಂದ, ಸಾಮ್ರಾಜ್ಯದಲ್ಲಿ ಹೇರಳವಾಗಿ ಉತ್ಪಾದನೆಗೊಳ್ಳುತ್ತಿದ್ದ ವಸ್ತುಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿತ್ತು. ಬೆಲೆಬಾಳುವ ಮುತ್ತು, ರತ್ನ, ವಜ್ರ, ಹರಳು ಮುಂತಾದುವನ್ನು ಬೀದಿಗಳಲ್ಲಿಟ್ಟು ಮಾರಾಟ ಮಾಡುತ್ತಿದ್ದರೆಂದು ವಿದೇಶಿ ಪ್ರವಾಸಿಗರ ವರದಿಗಳಿಂದಲೂ, ಸಮಕಾಲೀನ ಸಾಹಿತ್ಯ ಕೃತಿಗಳಿಂದಲೂ ತಿಳಿದುಬರುವುದು. ಇಂತಹ ಅಮೂಲ್ಯ ಸರಕನ್ನು ವಿಪುಲವಾಗಿ, ನಿರಾತಂಕವಾಗಿ, ಸಾರ್ವಜನಿಕವಾಗಿ ಮಾರಾಟಮಾಡುತ್ತಿದ್ದುದನ್ನು ಗಮನಿಸಿದರೆ, ಅವುಗಳು ದೊರೆಯುತ್ತಿದ್ದ ಮೂಲಗಳು ಸಾಮ್ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದುವೆಂದೂ, ಈ ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದವರ ಸಂಖ್ಯೆಯೂ ಹೆಚ್ಚಿದ್ದಿತೆಂದೂ ಭಾವಿಸಲು ಅಸ್ಪದವಾಗುತ್ತದೆ.

ವಿಜಯನಗರವು ಅನೇಕ ದೇಶಗಳೊಂದಿಗೆ ವ್ಯಾಪಾರ ಸಂಪರ್ಕ ಇಟ್ಟುಕೊಂಡಿದ್ದಿತು. ಅಂತಹ ದೇಶಗಳಿಂದ ಸರಕನ್ನು ಆಮದು ಮಾಡಿಕೊಳ್ಳುತ್ತಿದ್ದುದಲ್ಲದೆ, ಇಲ್ಲಿಂದಲೂ ವಿವಿಧ ಪದಾರ್ಥಗಳನ್ನು ರಫ್ತು ಮಾಡಲಾಗುತ್ತಿದ್ದಿತು. ವಿದೇಶಿ ವ್ಯಾಪಾರಕ್ಕೆ ವಿಜಯನಗರದ ಅರಸರು ನೀಡಿದ ಪ್ರೋತ್ಸಾಹದಿಂದಾಗಿ ಹಂಪೆಯ ಬಜಾರುಗಳು ವಿಜಯನಗರ ಸಾಮ್ರಾಜ್ಯದ ಔನ್ನತ್ಯಕ್ಕೆ ಸಹಾಯಕವಾಗಿದ್ದವು. ಹಾಗೆಯೇ, ಸಾಮ್ರಾಜ್ಯದ ಅವನತಿಗೂ ಇವುಗಳೇ ಕಾರಣವಾಗಿದ್ದವು ಎಂಬುದೂ ಕುತೂಹಲಕಾರಿ ಅಂಶ.

ಪ್ರಸ್ತುತ ಅಧ್ಯಯನದ ಇನ್ನೊಂದು ಉದ್ದೇಶವೇನೆಂದರೆ, ವಿಜಯನಗರದ ಬಗೆಗೆ ಇದುವರೆಗೆ ವಿಪುಲ ಸಂಶೋಧನೆ ನಡೆದು ಹಲವಾರು ಗ್ರಂಥಗಳು ಹೊರಬಂದಿದ್ದರೂ ಹಂಪೆಯ ಬಜಾರುಗಳು ಕುರಿತು ಪ್ರತ್ಯೇಕ ಅಧ್ಯಯನ ನಡೆದಿಲ್ಲ. ಈ ಹಿನ್ನೆಲೆಯಲ್ಲಿ, ಹಂಪಿಯ ಪ್ರಮುಖ ಬಜಾರುಗಳನ್ನು ಗುರುತಿಸಿ, ವಿಜಯನಗರದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅವು ನಿರ್ವಹಿಸಿದ ಪಾತ್ರವನ್ನು ಚಿತ್ರಿಸಲು ಪ್ರಯತ್ನಿಸಿದೆ; ಇದೊಂದು ಸ್ಥೂಲ ಚಿತ್ರವೆನ್ನಬಹುದು.

ಧಾರ್ಮಿಕವಾಗಿ, ವಿಜಯನಗರದ ರಾಜಧಾನಿಯಲ್ಲಿ ಆಯಾಯ ಧರ್ಮದ ಜನರಿಗೆ ಪ್ರತ್ಯೇಕ ಸ್ಥಳ ಮೀಸಲಿದ್ದಿತು. ಶೈವ, ವೈಷ್ಣವ ಪಂಥದ ಪ್ರಾಬಲ್ಯ ಹೆಚ್ಚಿದ್ದಿತು. ಆದರೂ ಈ ಪಂಥಗಳವರೊಡನೆ ಜೈನ ಮತ್ತು ಮುಸ್ಲಿಮರೂ ವಾಸವಾಗಿದ್ದರು. ಮುಸ್ಲಿಮರ ಪ್ರತ್ಯೇಕ ಸ್ಥಳವನ್ನು ಗೋರಿ ಕೆಳಗಣ ಗ್ರಾಮವೆಂದೇ ಶಾಸನಗಳು ಹೇಳಿವೆ. ಮುಸ್ಲಿಮರಿಗೂ ಸಮಾನ ಸ್ಥಾನ-ಮಾನಗಳನ್ನು ನೀಡಲಾಗಿದ್ದಿತು.

ಆರ್ಥಿಕವಾಗಿ, ವಿಜಯನಗರ ಸಾಮ್ರಾಜ್ಯವು ಅತ್ಯುನ್ನತ ಸ್ಥಿತಿಯನ್ನು ತಲುಪಿದ್ದಿತು. ವ್ಯವಸಾಯಕ್ಕೆ ಪ್ರೋತ್ಸಾಹವಿದ್ದು, ಕೆರೆ-ಕಾಲುವೆಗಳನ್ನು ಕಟ್ಟಿಸಿದ್ದರೆಂಬುದಕ್ಕೆ ಹಂಪೆಯ ತುರ್ತುಕಾಲುವೆ ಮುಖ್ಯ ಉದಾಹರಣೆ. ವ್ಯವಸಾಯದಿಂದ ರಾಜ್ಯಕ್ಕೆ ಯಥೇಚ್ಚ ಆದಾಯವಿದ್ದಿತು. ದವಸ-ಧಾನ್ಯ, ಹಣ್ಣು-ಹಂಪಲು, ಹೂ-ತರಕಾರಿ ಮುಂತಾದುವನ್ನು ಮಾರಾಟ ಮಾಡಲು ಬಜಾರುಗಳು ಸಹಾಯಕವಾಗಿದ್ದವು. ವ್ಯಾಪಾರಕ್ಕೆ ವಿಶೇಷ ಪ್ರೋತ್ಸಾಹ ನೀಡಿದ್ದರಿಂದ ಬಜಾರುಗಳು ಪ್ರಗತಿ ಹೊಂದಿದ್ದವು. ಅರಸರು ತಮಗೆ ಅವಶ್ಯಕವಾಗಿದ್ದ ಯುದ್ಧ ಸಾಮಗ್ರಿಗಳನ್ನು ವಿದೇಶಿಯರಿಂದ ಕೊಳ್ಳುತ್ತಿದ್ದರು. ರಜಾಕ್‌, “ಈ ದೇಶದಲ್ಲಿ ಮುನ್ನೂರು ಬಂದರುಗಳಿವೆ”[1] ಎಂದು ಹೇಳಿರುವುದು, ವಿಜಯನಗರ ವಿದೇಶಗಳೊಂದಿಗೆ ಹೊಂದಿದ್ದ ವ್ಯಾಪಾರ ಸಂಬಂಧ ಕುರಿತು ಪರೋಕ್ಷ ಸೂಚನೆ ನೀಡುತ್ತದೆ. ವಿದೇಶಗಳಿಂದ ಮುಖ್ಯವಾಗಿ ಆನೆ, ಕುದುರೆ ಮುಂತಾದವುವನ್ನು ಆಮದು ಮಾಡಿಕೊಳ್ಳುತ್ತಿದ್ದರೆಂದು ಪ್ರವಾಸಿಗರು ಹೇಳಿದ್ದಾರೆ. ಇವು ಸೈನ್ಯದ ಬಲವರ್ಧನೆಗೆ ಅಗತ್ಯವೆನಿಸಿದ್ದವು. ಅರಬ್‌, ಪರ್ಶಿಯಾ, ಯುರೋಪ್‌ಗಳಿಂದ ಕುದುರೆಗಳನ್ನೂ ಶ್ರೀಲಂಕಾ ಮತ್ತಿತರ ರಾಜ್ಯಗಳಿಂದ ಆನೆ, ಇತ್ಯಾದಿಯನ್ನೂ ತರಸುತ್ತಿದ್ದರು. ಸಾಮ್ರಾಜ್ಯದ ಹಣಕಾಸು ವ್ಯವಸ್ಥೆ, ತೆರಿಗೆ, ಇತ್ಯಾದಿಗಳನ್ನು ನಿರ್ಧರಿಸುವ ಕಾರ್ಯವನ್ನು ಈ ಬಜಾರುಗಳೇ ನಿರ್ವಹಿಸುತ್ತಿದ್ದವೆನ್ನಬಹುದು.

ಸಾಂಸ್ಕೃತಿಕವಾಗಿಯೂ ಬಜಾರುಗಳು ಬಹುಮುಖ್ಯ ಪಾತ್ರ ನಿರ್ವಹಿಸುತ್ತಿದ್ದವು. ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪೆಯು ಹಬ್ಬ ಹರಿದಿನ, ಉತ್ಸವ, ಮೆರವಣಿಗೆ, ರಥೋತ್ಸವಗಳ ಜೊತೆಗೆ ಶಿಕ್ಷಣ, ಸಂಗೀತ, ನೃತ್ಯ, ಕಲೆ ವಾಸ್ತುಶಿಲ್ಪ ಮುಂತಾದವುಗಳ ಆಗರವಾಗಿದ್ದು, ಬಜಾರುಗಳೇ ಇವುಗಳ ಕೇಂದ್ರವೆನಿಸಿದ್ದವು.

ಹಂಪೆಯಲ್ಲಿ ಏಳು ಪ್ರಮುಖ ಬಜಾರುಗಳನ್ನು ಕಾಣಬಹುದು:

ಅ. ವಿರೂಪಾಕ್ಷ ಬಜಾರು
ಆ. ಪಾನ್‌ಸುಪಾರಿ ಬಜಾರು
ಇ. ವಿಠ್ಠಲ ಬಜಾರು
ಈ. ಕೃಷ್ಣ ಬಜಾರು
ಉ. ಅಚ್ಯುತ ಬಜಾರು
ಊ. ಮಾಲ್ಯವಂತ ಬಜಾರು
ಋ. ವರದರಾಜಮ್ಮನ ಬಜಾರು

ವಿಜಯನಗರದ ರಾಜಧಾನಿ ಹಂಪೆಯಲ್ಲಿರುವ ಈ ಬಜಾರುಗಳಲ್ಲದೆ, ಉಳಿದೆಡೆಗಳಲ್ಲಿಯೂ ಇಂತಹ ಕೆಲವು ಬಜಾರುಗಳಿದ್ದುದನ್ನು ಗುರುತಿಸಬಹುದು. ಇಂದಿನ ಹೊಸಪೇಟೆ ಮತ್ತು ನಾಗೇನಹಳ್ಳಿಗಳೂ ಬಜಾರುಗಳೆನಿಸಿದ್ದವು. ಹಂಪೆಯ ಬಜಾರುಗಳು ವಿಜಯನಗರ ಸಾಮ್ರಾಜ್ಯ ಬೆಳವಣಿಗೆ ಹೊಂದಲು ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆಯಲು ಹೇಗೆ ನೆರವಾಗಿದ್ದವೆಂಬುದನ್ನು ಇಲ್ಲಿ ಪ್ರತ್ಯೇಕವಾಗಿ ಗಮನಿಸಲಾಗಿದೆ.

ಅ. ವಿರೂಪಾಕ್ಷ ಬಜಾರು

ಹಂಪೆಯ ಪ್ರಾಚೀನ ಮತ್ತು ಪ್ರಮುಖ ದೇವಾಲಯವೆಂದರೆ ಪಂಪಾವಿರೂಪಾಕ್ಷನದು. ಇದು ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾಕ್ಷೇತ್ರಗಳಲ್ಲೊಂದು, ತುಂಗಭದ್ರಾ ನದಿಯ ಬಲ ದಂಡೆಯ ಮೇಲಿದೆ. ಈ ದೇವಾಲಯದ ದಕ್ಷಿಣಕ್ಕೆ ಹೇಮಕೂಟ, ಪೂರ್ವಕ್ಕೆ ಮತಂಗ ಪರ್ವತಗಳಿವೆ. ಸುತ್ತಲೂ ಪ್ರಕೃತಿದತ್ತವಾಗಿ ನಿರ್ಮಾಣವಾದ ಭದ್ರ ಕೋಟೆಗಳಂತೆ ಈ ಪರ್ವತಗಳು ನಿಂತಿವೆ. ತುಂಗಭದ್ರಾ ನದಿಯು ದೇವಾಲಯಕ್ಕೆ ರಕ್ಷಣೆ ಒದಗಿಸಿದೆ.

ವಿರೂಪಾಕ್ಷ ದೇವಾಲಯ ಕ್ರಿ.ಶ. ೬೮೯ರ ವಿನಯಾದಿತ್ಯನ ಕಾಲದಲ್ಲಿತ್ತೆಂದು ಶಾಸನವೊಂದು ತಿಳಿಸುವುದು.[2] ಅದರಲ್ಲಿ ಹಂಪೆಯನ್ನು ‘ಪಂಪಾತೀರ್ಥ’ ಎಂದು ಕರೆದಿದೆ. ಇದರಿಂದ ಚಾಳುಕ್ಯರ ಕಾಲದಲ್ಲಿ ಈ ದೇವಾಲಯದ ನಿರ್ಮಾಣವಾಗಿರಬೇಕು. ಇದಕ್ಕೂ ಮುಂಚೆಯೇ ಇಲ್ಲಿ ದೇವಾಲಯವಿತ್ತೆಂದು ಊಹಿಸಬಹುದಾಗಿದೆ. ಇದನ್ನು ಬಿಟ್ಟರೆ ನಮಗೆ ದೊರೆಯುವ ಶಾಸನ ಕ್ರಿ.ಶ. ೧೧೯೯ರದು. ದುರ್ಗಾ ದೇವಾಲಯದಲ್ಲಿಯ ಈ ಶಾಸನವು ಹಂಪೆಯನ್ನು ‘ಪಂಪಾತೀರ್ಥ’, ‘ವಿರೂಪಾಕ್ಷ ತೀರ್ಥ’ ಎಂಬುದಾಗಿ ಕರೆದಿರುವುದನ್ನು ಕಾಣಬಹುದು. ಹೊಯ್ಸಳ ಸೋಮೇಶ್ವರನ ಕಾಲದ ಶಾಸನವೊಂದು ವಿರೂಪಾಕ್ಷ ದೇಗುಲಕ್ಕೆ ದಾನ ಮಾಡಿದುದನ್ನು ತಿಳಿಸುವುದು.[3] ಆ ನಂತರ ಬಂದ ಹೊಯ್ಸಳ ವೀರಬಲ್ಲಾಳನು ಕ್ರಿ.ಶ. ೧೩೩೯ರಲ್ಲಿ ವೀರ ವಿಜಯ ವಿರೂಪಾಕ್ಷಪುರಕ್ಕೆ ಭೇಟಿ ನೀಡಿ, ತನ್ನ ಮಗ ವಿರೂಪಾಕ್ಷ ಬಲ್ಲಾಳನನ್ನು ಹಂಪೆಯ ಒಡೆಯನನ್ನಾಗಿ ನೇಮಿಸಿ ಹಂಪೆಯನ್ನು ವಿರೂಪಾಕ್ಷ ಹೊಸಪಟ್ಟಣವೆಂದು ಕರೆದನು.[4]

ಹೀಗೆ ವಿರೂಪಾಕ್ಷ ದೇವಾಲಯವು ವಿಜಯನಗರ ಕಾಲಕ್ಕಿಂತ ಮುಂಚೆ ದೀರ್ಘ ಇತಿಹಾಸವನ್ನು ಹೊಂದಿತ್ತು. ವಿಜಯನಗರ ಅರಸರ ಆಳ್ವಿಕೆ ಪ್ರಾರಂಭವಾಗಿ ಅವರ ರಾಜಧಾನಿಯಾದ ನಂತರ ಹಂಪೆಯು ಬೆಳವಣಿಗೆ ಹೊಂದಿತು. ಈ ಸಮಯದಲ್ಲಿ ವಿರೂಪಾಕ್ಷ ದೇವಾಲಯವನ್ನು ಜೀರ್ಣೋದ್ದಾರಗೊಳಿಸಿ, ಗೋಪುರಗಳು, ಮಂಟಪಗಳನ್ನು ಸೇರಿಸಿ ವಿಶಾಲಗೊಳಿಸಿದರು. ಸಂಗಮ ವಂಶದ ಅರಸನಾದ ಪ್ರೌಢದೇವರಾಯನು ಗೋಪುರಗಳನ್ನು ತನ್ನ ಅಧಿಕಾರಿಯಾದ ಪ್ರೋಳುಗಂಟಿ ತಿಪ್ಪನಿಂದ ಕಟ್ಟಿಸಿದನೆಂದು ಉತ್ತರ ನರಸಿಂಹಪುರಾಣದಿಂದ ತಿಳಿಯುತ್ತದೆ. ಶಿವತತ್ತ್ವ ಚಿಂತಾಮಣಿಯಿಂದಲೂ ಗೋಪುರಗಳನ್ನು ಕಟ್ಟಿಸಿದ ಬಗೆಗೆ ತಿಳಿಯುವುದು.[5] ಕೃಷ್ಣದೇವರಾಯನು ತನ್ನ ಪಟ್ಟಾಭಿಷೇಕೋತ್ಸವ ಕಾಲದಲ್ಲಿ ಸಿಂಗಿನಾಯಕನಹಳ್ಳಿಯನ್ನು ವಿರೂಪಾಕ್ಷ ದೇವಾಲಯಕ್ಕೆ ದತ್ತಿ ಬಿಟ್ಟನು. ಜೊತೆಗೆ ದೇವಾಲಯದ ಮಹಾಮಂಟಪ ಮತ್ತು ರಾಯಗೋಪುರಗಳನ್ನು ಕಟ್ಟಿಸಿ ಹಿರಿಯ ಗೋಪುರಗಳನ್ನು ಜೀಣೋದ್ಧಾರಗೊಳಿಸಿದನೆಂದು ಅಲ್ಲಿಯ ಶಾಸನವು ಹೇಳುತ್ತದೆ. ಹೀಗೆ ಕಾಲಾಂತರದಲ್ಲಿ ಈ ದೇವಾಲಯಕ್ಕೆ ಅನೇಕ ಮಂಟಪಗಳು ಸೇರ್ಪಡೆಯಾದವು.

ವಿರೂಪಾಕ್ಷ ದೇವಾಲಯದ ಪೂರ್ವಗೋಪುರದ ಮುಂಭಾಗದಿಂದ ಎದುರು ಬಸವಣ್ಣ ಮಂಟಪದವರೆಗೆ ಇರುವ ಬೀದಿಯೇ ವಿರೂಪಾಕ್ಷ ಬಜಾರು, ಬಜಾರದ ಉದ್ದ ೭೧೭ಮೀ. ಅಗಲ ದೇವಾಲಯದ ಬಳಿ ೩೦ಮೀ. ಇದ್ದು, ಕೊನೆಯಲ್ಲಿ ೩೮ ಮೀಟರುಗಳಷ್ಟು ವಿಸ್ತಾರವಾಗಿದೆ.[6] ಕ್ರಿ.ಶ. ೧೯೭೯-೮೩ರ ಉತ್ಖನನ ವರದಿಯ ಪ್ರಕಾರ, ಬಜಾರದ ಉದ್ದ ೭೨೦ಮೀ. ಅಗಲ ೩೫ ಮೀಟರು,[7] ಬಜಾರದ ಇಕ್ಕೆಲಗಳಲ್ಲಿ ಪ್ರಾರಂಭದಿಂದ ಕೊನೆಯವರೆಗೂ ಕಟ್ಟಿಸಿರುವ ಸಾಲುಮಂಟಪಗಳು ಮೂರು ಅಡಿಗಳೆತ್ತರದ ಅಧಿಷ್ಠಾನದ ಮೇಲಿವೆ. ಸಾಲುಮಂಟಪಗಳು ಎರಡು ಅಂಕಣಗಳಿಂದ ಕೂಡಿದ್ದು, ಕೆಲವು ಮಂಟಪಗಳು ಎರಡಕ್ಕಿಂತ ಹೆಚ್ಚು ಅಂಕಣಗಳನ್ನು ಹೊಂದಿವೆ.

ವಿರೂಪಾಕ್ಷ ಬಜಾರನ್ನು ವಿರೂಪಾಕ್ಷಪುರ, ಪಂಪಾರಥವೀಧಿ, ಹಂಪೆ ಬಜಾರು, ತೇರುಬೀದಿ, ಇತ್ಯಾದಿಯಾಗಿ ಕರೆಯಲಾಗಿದೆ. ಇಲ್ಲಿಯ ಬಜಾರು ವಿರೂಪಾಕ್ಷ ದೇವಾಲಯದಷ್ಟೇ ಹಳೆಯದು. ಆದರೆ ಆರಂಭದಲ್ಲಿ ಇದು ಕಾರ್ಯನಿರ್ವಹಿಸುತ್ತಿದ್ದುದು ಕೇವಲ ತೇರು ಬೀದಿಯಾಗಿ ಮಾತ್ರ. ಪ್ರೌಢದೇವರಾಯನು ಈ ಬೀದಿಯಲ್ಲಿದ್ದ ಕಲ್ಲು ಮುಳ್ಳುಗಳನ್ನು ತೆಗೆಸಿ ವಿಶಾಲವಾಗಿಸಿದುದನ್ನು ಕುರಿತು ಲಕ್ಕಣ್ಣದಂಡೇಶನು ಶಿವತತ್ತ್ವ ಚಿಂತಾಮಣಿಯಲ್ಲಿ ಹೀಗೆ ಹೇಳಿದ್ದಾನೆ.

ತ್ರಿಪುರ ವಿಜಯಿತ ವಿರೂಪಾಕ್ಷನ ಮನೋರಥಕೆ
ಸುಪಥವಾದುದು ದೇವರಾಜೇಂದ್ರನುದಯದಿಂ
ವಿಪುಳೆಯೊಳುದೃಷ್ಟವಿದೆಯಿಂದೆಂಬ ಮಾಳ್ಕೆಯಿಂ ಪಂಪಾಪುರದೊಳನುದಿನಂ
ಅಪರಿಮಿತಗೋಪುರಂಗಳ ಮಧ್ಯವೀಥಯಿಂ
ರಿಪುಕಂಟಕಂಗಳಂ ಸವರುವಂದದಿ ಸವರಿ
ಸುಪವತ್ರವೆನಿಸಿದಂ ರಥಪಥವನರುವವರ ಚರಣಾಂಬುಜಕ್ಕೆ ಶರಣು.

ಈ ಬೀದಿಯನ್ನು ಯಾವ ಉದ್ದೇಶಕ್ಕಾಗಿ ನಿರ್ಮಿಸಲಾಯಿತೆಂಬುದು ಸಹಾ ಇದೇ ಗ್ರಂಥದಿಂದ ತಿಳಿಯುವುದು:

ಪಂಪಾಪತಿಯ ಮನೋರಥರೂಪ ತಾನಾದ
ಪಂಪಂ ಜಗಕ್ಕರೂಪಿ ತೋರಿದನೋ ಎಂಬಂತೆ
ಸೊಂಪೇರಿ ಮೆರೆಸುವ ವಿರೂಪಾಕ್ಷನತುಳರಥ ಪಂಪಾಂಬಿಕಾರಥವನು
ಝಂಪಳಿಪ ನಾನಾ ರಸದ ಗಣಾಧಿಪ ರಥವ
ಗುಂಪರಿವರಳಲ್ಲವೆನೆ ರೂಡಿವರಸಿದನ
ದೇಂ ಪ್ರತಾಪನೊ ದೇವರಾಜೇಂದ್ರನವರುವವರ ಚರಣಾಂಬುಜಕ್ಕೆ ಶರಣು.[8]

ವಿರೂಪಾಕ್ಷ ದೇವಾಲಯದಲ್ಲಿ ನಡೆಯುತ್ತಿದ್ದ ಹಬ್ಬಗಳಲ್ಲಿ ಉತ್ಸವಗಳು, ರಥೋತ್ಸವಗಳನ್ನು ಆಚರಿಸುತ್ತಿದ್ದುದು ಇಲ್ಲಿ ತಿಳಿದುಬರುತ್ತದೆ. ಇಲ್ಲಿ ವಿರೂಪಾಕ್ಷ ಪಂಪಾಂಬಿಕೆ ಮತ್ತು ಗಣಾಧಿಪ (ಗಣೇಶ) ರ ಮೂರು ರಥಗಳನ್ನು ಎಳೆಯುತ್ತಿದ್ದುದನ್ನು ಲಕ್ಕಣ್ಣ ದಂಡೇಶನು ಹೇಳಿದ್ದಾನೆ. ಆದರೆ ಈ ಕುರಿತು ಬೇರೆಲ್ಲೂ ಮಾಹಿತಿ ದೊರೆತಿಲ್ಲ. ಆದರೆ ವೆನಿಷಿಯಾದ ವರ್ತಕ ನಿಕೊಲೊ ದೆ ಕೊಂತಿಯು, ಬಿಜನೆಗೇಲಿಯಾದಲ್ಲಿಯೂ ಕೂಡ ವರ್ಷಕ್ಕೊಮ್ಮೆ ದೇವರ ವಿಗ್ರಹವನ್ನು ಎರಡು ರಥಗಳ ಮಧ್ಯೆ ಇಟ್ಟು ಮೆರವಣಿಗೆ ಮಾಡುತ್ತಾರೆ ಎಂದು ಬರೆದಿದ್ದಾನೆ. ಇಲ್ಲಿ ಕೊಂತಿಯು ಎರಡು ರಥಗಳೆಂದು ಹೇಳಿರುವುದು ಗಮನಾರ್ಹ. ಪಾಯೇಸನೂ ಈ ಕುರಿತು ಸೂಚನೆ ನೀಡಿದ್ದಾನೆ.

ಈ ರಥೋತ್ಸವ ಪದ್ಧತಿಯು ಹಂಪೆಯಲ್ಲಿ ಇಂದಿಗೂ ನಡೆಯುತ್ತಿದೆ. ಪಂಪಾ ವಿರೂಪಾಕ್ಷರನ್ನು ಹೊತ್ತ ರಥ ಮತ್ತು ವಿದ್ಯಾರಣ್ಯರ ಗುರುಗಳದೆಂದು ಹೇಳುವ ಚಂದ್ರಮೌಳೀಶ್ವರ ರಥ. ಈ ಎರಡು ರಥೋತ್ಸವಗಳು ವಿರೂಪಾಕ್ಷ ಬಜಾರಿನಲ್ಲಿ ನೆರವೇರುತ್ತವೆ. ಇದು ವರ್ಷಕ್ಕೊಂದು ಬಾರಿ ದವನದ ಹುಣ್ಣಿಮೆಯೆಂದು ನೇರವೇರುವ ಉತ್ಸವ. ಈ ಹುಣ್ಣಿಮೆಯು ಈ ಪ್ರದೇಶದಲ್ಲಿ ಹಂಪೆ ಹುಣ್ಣಿಮೆಯೆಂದೇ ಪ್ರಸಿದ್ಧವಾಗಿದೆ. ಅಂದರೆ ಈ ಬೀದಿಯು ನಿರ್ಮಾಣವಾದುದು ರಥೋತ್ಸವಗಳಿಗೆಂದೇ. ಹಿಂದೆ ಈ ಬೀದಿಯಲ್ಲಿ ರಥೋತ್ಸವಗಳ ಜೊತೆಗೆ ಹಬ್ಬಾಚರಣೆಯ ಸಂದರ್ಭದಲ್ಲಿ ಇನ್ನಿತರ ಉತ್ಸವಗಳೂ, ಮೆರವಣಿಗೆಗಳೂ ನಡೆಯುತ್ತಿದ್ದವು. ಹೋಳಿಹಬ್ಬದಲ್ಲಿ ಹೋಳಿಯನ್ನು ಬೀದಿಯ ಎರಡೂ ಕಡೆಗಳಲ್ಲಿಟ್ಟು, ಎಲ್ಲರ ಮೇಲೂ-ರಾಜ ರಾಣಿಯರನ್ನೂ ಬಿಡದೆ ಎರಚುತ್ತಾರೆಂದು ಕೊಂತಿ ಹೇಳಿದ್ದಾನೆ. ಈ ಅಂಶಗಳು ವಿರೂಪಾಕ್ಷ ಬಜಾರು ನಿರ್ಮಾಣವಾದುದು ಧಾರ್ಮಿಕ ಆಚರಣೆಗಳಿಗಾಗಿಯೇ ಎಂಬುದನ್ನು ಸ್ಪಷ್ಟಪಡಿಸುತ್ತವೆ.

ವಿರೂಪಾಕ್ಷ ಬಜಾರು ಮಾರುಕಟ್ಟೆಯೂ ಆಗಿದ್ದಿತು. ಆದರೆ ವ್ಯಾಪಾರವು ಇಲ್ಲಿ ಪ್ರಾರಂಭವಾದುದು ಕೇವಲ ದೇವಾಲಯಕ್ಕೆ ಅವಶ್ಯಕತೆಯಿರುವ ವಸ್ತುಗಳ ಸಂಬಂಧದಿಂದ ಎಂಬುದು ಮುಖ್ಯ. ಹಂಪೆಯು ರಾಜಧಾನಿಯಾದ ಮೇಲೆ ವಸತಿ ಪ್ರದೇಶಗಳು ನಿರ್ಮಾಣವಾಗಿ, ಹೆಚ್ಚು ಹೆಚ್ಚು ಜನು ಈ ಪರಿಸರದಲ್ಲಿ ವಾಸಮಾಡಲು ಪ್ರಾರಂಭಿಸಿದರು. ಅಲ್ಲದೇ, ಬೀದಿಯ ಇಕ್ಕೆಲಗಳಲ್ಲಿ ಸಾಲುಮಂಟಪಗಳು ನಿರ್ಮಾಣವಾದವು. ದೇವಾಲಯದ ಬಳಿ ಬಜಾರನ್ನು ಒಳಗೊಂಡಂತೆ ಒಂದು ಉಪನಗರವು ಇತ್ತು. ಇದನ್ನು ವಿರೂಪಾಕ್ಷಪುರ ಎಂದೂ ಕರೆಯುತ್ತಿದ್ದರು.

ಡೊಮಿಂಗೋ ಪಾಯೇಸನು ವಿರೂಪಾಕ್ಷ ಬಜಾರನ್ನು ಕುರಿತು, ಈ ದೇವಾಲಯದಲ್ಲಿ, ಪೂರ್ವಕ್ಕಿರುವ ಅದರ ಪ್ರಧಾನ ಹೆಬ್ಬಾಗಿಲಿಗೆ ಎದುರಾಗಿ ಉಪ್ಪರಿಗೆಯ ಮೊಗಸಾಲೆ ಹಾಗೂ ಕಮಾನುದಾರಿಗಳುಳ್ಳ ಬಲು ಸುಂದರ ಮನೆಗಳ ಬಲು ಸುಂದರ ಬೀದಿಯಿದೆ. ಇವುಗಳಲ್ಲಿ ಅಲ್ಲಿಗೆ ಬರುವ ಯಾತ್ರಿಗಳಿಗೆ ಆಶ್ರಯ ನೀಡಲಾಗುತ್ತದೆ ಎಂದು ಹೇಳಿರುವುದು, ಈ ಸಾಲುಮಂಟಪಗಳು ಯಾತ್ರಾರ್ಥಿಗಳು ಉಳಿದುಕೊಳ್ಳಲು ಮಾತ್ರ ಉಪಯೋಗಿಸಲ್ಪಡುತ್ತಿದ್ದವೆಂಬುದನ್ನು ಸಮರ್ಥಿಸುತ್ತದೆ. ಆದರೆ ಇವುಗಳನ್ನು ಧಾರ್ಮಿಕ ಆಚರಣೆಗಳಿಗಲ್ಲದೆ, ವ್ಯಾಪಾರ ಚಟುವಟಿಕೆಗಳಿಗೂ ಉಪಯೋಗಿಸಲಾಗುತ್ತಿತ್ತು ಎನ್ನುವುದಕ್ಕೆ ಆಧಾರಗಳಿವೆ.

ಪ್ರಾಚೀನ ಕಾಲದಿಂದಲೂ ಕೇವಲ ತೇರುಬೀದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವಿರೂಪಾಕ್ಷ ಬಜಾರು ವಿಜಯನಗರಾವಧಿಯಲ್ಲಿ ವ್ಯವಸ್ಥಿತವಾದ ಸಾಲುಮಂಟಪಗಳ ನಿರ್ಮಾಣದ ಮೂಲಕ ಪ್ರಮುಖ ವ್ಯಾಪಾರ ಕೇಂದ್ರವಾಗಿ ಬೆಳವಣಿಗೆ ಹೊಂದಿದ್ದಿತು. ಆರ್ಥಿಕವಾಗಿ ಪ್ರಸಿದ್ಧ ಹೊಂದಿದ ಈ ಬಜಾರು ಧಾರ್ಮಿಕವಾಗಿಯೂ, ಪ್ರಾಮುಖ್ಯತೆ ಪಡೆದಿದ್ದುದು ಅಂದಿನ ಮಠ-ಮಾನ್ಯಗಳು ಹಾಗೂ ಪ್ರವಾಸಿಗರ ಹೇಳಿಕೆಗಳಿಂದ ತಿಳಿದು ಬರುವ ಸಂಗತಿ. ಅಂತೆಯೇ ವಿಜಯನಗರ ಕಾಲದ ಉತ್ಸಾವಾಚರಣೆಗಳು ಇಂದಿಗೂ ಜೀವಂತವಾಗಿದ್ದು, ಅಂದಿನ ಆಚರಣೆಗಳನ್ನು ನೆನೆಪಿಸಿಕೊಡುತ್ತಿರುವದನ್ನು ಹಂಪೆಯಲ್ಲಿ ಕಾಣಬಹುದಾಗಿದೆ.

ವಿರೂಪಾಕ್ಷ ಬಜಾರು ಇತರ ಬಜಾರುಗಳಿಗಿಂತ ವಿಶಿಷ್ಟತವಾದುದು. ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ಕೇಂದ್ರವಾಗಿ ಹಿಂದಿನಂತೆಯೇ ಇಂದಿಗೂ ಜೀವಂತವಾಗಿರುವುದು ಇದನ್ನು ಎತ್ತಿ ತೋರುತ್ತದೆ. ವಿಜಯನಗರ ಸಾಮ್ರಾಜ್ಯದ ವೈಭವಪೂರ್ಣ ಸಂದರ್ಭವನ್ನು ನೆನಪಿಗೆ ತರುವುದಿಲ್ಲವಾದರೂ, ಇಂದಿನ ಪರಿಸ್ಥಿತಿಯ ಮಟ್ಟಿಗೆ ಈ ಬಜಾರು ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ.

ಆ. ಪಾನ್‌ಸುಪಾರಿ ಬಜಾರು

ವಿಜಯನಗರದ ಕೇಂದ್ರ ಹಾಗೂ ರಾಯರ ವಾಸಸ್ಥಾನವೆಂದು ಗುರುತಿಸಿರುವ ಅರಮೆನಯ ಆವರಣದಲ್ಲಿರುವುದೇ ರಾಮಚಂದ್ರ ಅಥವಾ ಹಜಾರರಾಮ ದೇಗುಲ. ಈ ದೇವಾಲಯದಿಂದ ಈಶಾನ್ಯಕ್ಕೆ ಶೃಂಗಾರದ ಹೆಬ್ಬಾಗಿಲಿನ ಆಚೆಯವರೆಗೂ ವಿಸ್ತರಿಸಿದ್ದ ಬೀದಿಯೇ ಪಾನ್‌ಸುಪಾರಿ ಬಜಾರು. ಇದು ನಿರ್ಮಾಣಗೊಂಡುದು ವಿಶಾಲವಾದ ಮೈದಾನ ಪ್ರದೇಶದಲ್ಲಿ. ಅರಮನೆ ಪ್ರದೇಶದಲ್ಲಿದ್ದ ಈ ಬಜಾರಿಗೆ ವಿಶಿಷ್ಟವಾದ ಸ್ಥಾನಮಾನ. ಹಂಪೆಯ ಮುಖ್ಯ ವಸತಿ ಪ್ರದೇಶ ಇದರ ಸುತ್ತಮುತ್ತ ಆವರಿಸಿತ್ತು. ಇದು ಹಂಪೆಯ ಬಜಾರುಗಳಲ್ಲಿ ಪ್ರಮುಖ ಮಾರುಕಟ್ಟೆಯಾಗಿತ್ತು. ಈ ಬಜಾರದ ಉದ್ದ ಸುಮಾರು ೯೩೦ ಮೀ. ಅಗಲ ಸ್ಪಷ್ಟವಾಗಿ ತಿಳಿಯುವುದಿಲ್ಲ. ಆದರೆ ಇದು ರಾಮಚಂದ್ರ ದೇವಾಲಯದ ಮುಂಬದಿಯ ಮಂಟಪಗಳ ಬಳಿ ೧೫ ಮೀ. ಇರುವುದು ಕಂಡುಬರುತ್ತದೆ.[9] ‘ಪಾನಸುಪಾರಿ’ ಎಂಬುದು ಕನ್ನಡ ಮೂಲದ್ದಲ್ಲ, ಹಿಂದಿ ಭಾಷೆಯಿಂದ ಬಂದುದು, ಇದರಲ್ಲಿರುವ ಶಬ್ದಗಳಲ್ಲಿ ‘ಪಾನ್‌’ ಎಂಬುದು ವೀಳೆಯದೆಲೆಯನ್ನೂ, ‘ಸುಪಾರಿ’ಯೆಂಬುದು ಅಡಕೆಯನ್ನೂ ಸೂಚಿಸುತ್ತದೆ.

ಹಂಪೆಯಲ್ಲಿ ಪ್ರಚಲಿತವಿದ್ದ ಪಾನ್‌ಸುಪಾರಿ ಬಜಾರವೆಂಬುದು ಕ್ರಿ.ಶ.೧೪೨೬ರ ಪಾರ್ಶ್ವನಾಥ ಜಿನಾಲಯದ ಶಾಸನದಲ್ಲಿ ಹೇಳಿರುವ ‘ಕ್ರಮುಕಪರ್ಣಾಪಣ’ (ಕ್ರಮುಕ = ಅಡಕೆ, ಪರ್ಣ = ಎಲೆ, ಆಪಣ=ಅಂಗಡಿ) ಅಥವಾ ‘ಪರ್ಣಪೂಗಿ ಫಲಾಪಣ’ (ಪರ್ಣ = ಎಲೆ, ಪೂಗಿ = ಅಡಕೆ)ದ ಹಿಂದಿ ರೂಪಾಂತರ. ಕ್ರಿ.ಶ. ೧೮೯೦ರ ‘ಸೌತ್‌ಇಂಡಿಯನ್‌ಇನ್‌ಸ್ಕ್ರಿಪ್ಷ್‌ನ್ಸ್’ ಸಂಪುಟದ ಮೊದಲನೇ ಭಾಗದಲ್ಲಿ ಅಚ್ಚು ಮಾಡಲಾದ ಈ ಶಾಸನದ ಅನುವಾದದಲ್ಲಿ ‘ಪಾನ್‌ಸುಪಾರಿ ಬಜಾರ’ ಎಂದೇ ಕಾಣಿಸಿದೆ. ಮೂಲ ಹೆಸರಾದ ಕ್ರಮುಕಪರ್ಣಾಪಣ ಬೀದಿಯು ಹೆಚ್ಚಾಗಿ ಬಳಕೆಗೆ ಬಾರದುದರಿಂದ, ಕ್ರಮೇಣ ಅದು ಮರೆಯಾಗಿ ಇಂದಿನ ಹೆಸರೇ ಸ್ಥಿರವಾಯಿತು.

ಪಾನ್‌ಸುಪಾರಿ ಬಜಾರನ್ನು ಆ ನಂತರದ ಶಾಸನಗಳಲ್ಲಿ ಪೆದ್ದಂಗಡಿ ಅಥವಾ ದೊಡ್ಡ ಅಂಗಡಿಬೀದಿ ಹಾಗೂ ರಾಜಬೀದಿ ಎಂತಲೂ ಕರೆಯಲಾಗಿದೆ. ಇದು ಪ್ರೌಢದೇವರಾಯನ ಪೂರ್ವದಲ್ಲಿ ನಿರ್ಮಾಣಗೊಂಡುದೆಂದು ಹೇಳಬಹುದು. ಕ್ರಿ.ಶ.೧೪೨೬ರ ಪಾಶ್ವನಾಥ ಜಿನಾಲಯದ ಶಾಸನವು ಪ್ರೌಢದೇವರಾಯನ ಕಾಲಕ್ಕೆ ಸೇರಿದ್ದು,[10] ಇದರಲ್ಲಿ ಕ್ರಮುಕಪರ್ಣಾಪಣ ಬೀದಿಯಲ್ಲಿ ಪಾರ್ಶ್ವನಾಥ ಜಿನಾಲಯವನ್ನು ಕಟ್ಟಿಸಿದ ಬಗೆಗೆ ಹೇಳಿರುವದರಿಂದ, ಕ್ರಿ.ಶ. ೧೪೨೬ಕ್ಕಿಂತ ಮುಂಚೆಯೇ ಈ ಬೀದಿಯು ಪ್ರಚಲಿತವಿದ್ದರಬೇಕೆಂದು ತಿಳಿಯಬಹುದು. ಕ್ರಿ.ಶ. ೧೫೪೫ರ ರಂಗಾ (ಮಾಧವ) ದೇವಾಲಯದ ಶಾಸನವು ಸದಾಶಿವರಾಯನ ಆಳ್ವಿಕೆಯದು. ತಿಮ್ಮರಾಜನೆಂಬುವನು ವಿದ್ಯಾನಗರದ ಪೆದ್ದಂಗಡಿ ಬೀದಿಯಲ್ಲಿ ಮಾಧವ ದೇವರಿಗೆ ೨೫ ಅಂಕಣದ ರಂಗಮಂಟಪವನ್ನು ಸ್ಥಾಪಿಸಿದನೆಂದು ತಿಳಿಸುತ್ತದೆ.[11] ಇದೇ ಬೀದಿಯನ್ನು ಕ್ರಿ.ಶ. ೧೫೫೭ರ ಗಾಣಗಿತ್ತಿ ಜಿನಾಲಯದ ಶಾಸನದಲ್ಲಿ ರಾಜಬೀದಿಯೆಂದಿರುವುದನ್ನು ಗುರುತಿಸಬಹುದು. ಶಾಂತಿನಾಥ ಬಸದಿಯ ಸೀಮಾ ವಿವರವನ್ನು ಕುರಿತಂತೆ ಶಾಸನವು,

……. ಮೂಡಲು ಕುಂಗು ತೋಟಲು ಬಡಗಲು
ರಾಜಾಬೀದಿ ಪಡುವಲು ಉಪ್ಪರಿಗೆ ಬಾಗಿಲು
ತೆಂಕಲು ದೇವರಗುಡಿ ಪವುಳಿ ಮೇರೆ

ಎಂದು ಹೇಳಿದೆ. ಇಲ್ಲಿಯ ರಾಜಬೀದಿಯನ್ನು ಪಾನ್‌ಸುಪಾರಿ ಬಜಾರ್ ಎಂದೇ ಗುರುತಿಸಬಹುದು. ಡೊಮಿಂಗೋ ಪಾಯೇಸನು ಅರಮನೆಯ ಮುಂಬದಿಯನ್ನು ಕುರಿತು ಹೇಳುವಾಗ, “…….. ಕೋಟೆಯನ್ನು ಪ್ರವೇಶಿಸಿದರೆ ಹೆಬ್ಬಾಗಿಲು ಸಿಕ್ಕುತ್ತದೆ. ಇಲ್ಲಿಂದ ಒಳಗೆ ಹೋದರೆ ರಾಜನ ಅರಮನೆಯವರೆಗೂ ದಳವಾಯಿಗಳ, ಶ್ರೀಮಂತರ ಮತ್ತು ವರ್ತಕರ ಸುಂದರವಾದ ಬೀದಿಗಳೋ ಬೀದಿಗಳು, ಮನೆಗಳೋ ಮನೆಗಳು. ರಾಜಬೀದಿಯನ್ನೇ ಹಿಡಿದು ಹೋದರೆ ಅರಮನೆಯ ಮುಂಭಾಗದ ದ್ವಾರವಿದೆ”[12] ಎನ್ನುತ್ತಾರೆ; ರಾಜಬೀದಿಯ ಪ್ರಸ್ತಾಪವನ್ನೂ ಮಾಡುತ್ತಾನೆ. ಅಂದರೆ, ಕ್ರಿ.ಶ. ೧೪೨೬ರ ಕ್ರಮುಕಪರ್ಣಾಪಣ ಬೀದಿಯನ್ನು ಕ್ರಿ.ಶ.೧೪೪೫ರ ಶಾಸನದಲ್ಲಿ ರಾಜಾಬೀದಿಯೆಂದೂ ಕರೆಯಲಾಗಿದೆ.

ಹಂಪೆಯು ಕ್ರಿ.ಶ. ೧೫೦೦ ರ ನಂತರ ಪ್ರಬುದ್ಧಮಾನಕ್ಕೆ ಬಂದಂತೆಯೇ, ಇಲ್ಲಿ ವ್ಯಾಪಾರ, ವಹಿವಾಟು ಯಥೇಚ್ಛವಾಗಿ ನಡೆಯುತ್ತಿತ್ತು. ಇದರಿಂದ ಶಾಸನೋಕ್ತ ಪೆದ್ದಂಗಡಿ ಬೀದಿಯು ದೊಡ್ಡ ಅಂಗಡಿ ಬೀದಿಯಾಗಿಯೇ ಬೆಳೆದುದು ಅನ್ವರ್ಥಕವಾಗಿದೆ. ಇದು ರಾಜನ ವಾಸಸ್ಥಾನದ ಮುಂಭಾಗದಲ್ಲಿರುವುದರಿಂದಲೂ, ರಾಜನು ಯುದ್ಧಕ್ಕೆ ಅಥವಾ ಇತರ ಕೆಲಸ ಕಾರ್ಯಗಳಿಗೆ ಹೋಗಬೇಕಾದರೆ ಈ ಬೀದಿಯಲ್ಲೇ ಸೈನ್ಯವನ್ನು ತೆಗೆದುಕೊಂಡು ಹೋಗುತ್ತಿದ್ದರಿಂದಲೂ, ಇದನ್ನು ರಾಜಬೀದಿಯೆಂದು ಕರೆದುದರಲ್ಲಿ ಔಚಿತ್ಯವಿದೆ.

ಪಾನ್‌ಸುಪಾರಿ ಬಜಾರು ಇತರ ಎಲ್ಲಾ ಬಜಾರುಗಳಿಗಿಂತಲೂ ಭಿನ್ನವಾಗಿ ತೋರುತ್ತದೆ. ವಿರೂಪಾಕ್ಷ ಬಜಾರದಲ್ಲಿ ಶೈವಧರ್ಮಕ್ಕೆ ಸಂಬಂಧಿಸಿದ ದೇವಾಲಯಗಳು, ಮಠಗಳು ಇವೆ. ಶಯವರು, ವೈಷ್ಣವರು ಮಾತ್ರವಲ್ಲದೆ, ಜೈನರು, ಮುಸ್ಲಿಮರು ಮತ್ತು ಇತರ ಧರ್ಮಗಳವರ ಸಂಗಮವೆನಿಸಿದ್ದಿತು. ಇಲ್ಲಿರುವ ಪಟ್ಟಣದ ಯಲ್ಲಮ್ಮಳು ವಿಜಯನಗರ ಅರಸ ಮುಖ್ಯ ದೇವತೆಯಾಗಿದ್ದಳು. ರಾಜರು ಯುದ್ಧಗಳಿಗೆ ಹೋಗುವಾಗ ಇಲ್ಲಿ ರಣವೀಳ್ಯವನ್ನು ಪಡೆದು ಮುನ್ನಡೆಯುತ್ತಿದ್ದರೆಂದು ಜನಪದರು ಹೇಳುವರು. ಈ ಪಟ್ಟಣದ ಯಲ್ಲಮ್ಮನಗುಡಿ ಹಾಗೂ ಶಿವಾಲಯಗಳು ಶೈವಧರ್ಮದವು. ರಂಗಾ ದೇವಾಲಯ ಹಾಗೂ ಇತರ ಮಂಟಪಗಳು ವೈಷ್ಣವ ಧರ್ಮದವು. ಜೈನಬಸದಿಗಳು ಹಾಗೂ ಗೋರಿ ಮತ್ತು ಅಹಮದಖಾನನ ಧರ್ಮ ಶಾಲೆಗಳು ಆಯಾ ಧರ್ಮಗಳನ್ನು ಧರ್ಮಗಳನ್ನು ಪ್ರತಿನಿಧಿಸುವಂಥವು.

ಅಬ್ದುಲ್‌ರಜಾಕನು, “ರಾಜನ ಅರಮನೆಯ ಹೆಬ್ಬಾಗಿಲಿನಲ್ಲಿ ಎದುರು ಬದಿರಾಗಿ ನಾಲ್ಕು ಅಂಗಡಿ ಬೀದಿಗಳಿವೆ. ….. ಪ್ರತಿಯೊಂದು ಅಂಗಡಿಯ ಸಾಲಿನ ಮೇಲುಗಡೆ ಭವ್ಯವಾದ ಉಪ್ಪರಿಗೆಯುಳ್ಳ ಕಮಾನು ಹಾದಿ ಇದೆ. …. ಅಂಗಡಿ ಬೀದಿಗಳು ಬಹು ಉದ್ದವಾಗಿಯೂ, ಅಗಲವಾಗಿಯೂ ಇವೆ”[13] ಎಂದಿದ್ದಾನೆ.

ಇಲ್ಲಿಯ ಬೀದಿಗಳಲ್ಲಿ ಒಂದು ಸೋಮವಾರದ ಬಾಗಿಲ ಕಡೆಗೂ, ಎರಡನೆಯದು ರಾಣಿಯ ಜನಾನಾದ ಕಡೆಗೂ ಇದ್ದುವೆಂದು ತಿಳಿದುಬರುತ್ತದೆ. ಮೂರನೆಯದು ಗಾಣಗಿತ್ತಿ ಜಿನಾಲಯದ ಶಾಸನದಲ್ಲಿ ಉಲ್ಲೇಖಿಸಲಾದ ಭೀಮಾ ಬಾಗಿಲವರೆಗಿದ್ದ ಮಣಿಕುಟ್ಟಿಮ ಬೀದಿಯೆಂದೂ, ನಾಲ್ಕನೆಯದು ಪಾನ್‌ಸುಪಾರಿ ಬಜಾರು ಎಂದೂ ತಿಳಿಯುತ್ತದೆ.

ಪಾನ್‌ಸುಪಾರಿ ಬಜಾರು ಪ್ರಸಿದ್ಧ ವ್ಯಾಪಾರ ಕೇಂದ್ರವಾಗಿತ್ತು. ಇಲ್ಲಿಯ ಕುಶಲಕರ್ಮಿಗಳು, ವ್ಯಾಪಾರಿಗಳು ಇಲ್ಲಿ ಮಾರಾಟವಾಗುತ್ತಿದ್ದ ವಸ್ತುಗಳು ಹಾಗೂ ಮಾರಾಟ ಮಾಡುತ್ತಿದ್ದ ಬಗೆಗಳನ್ನು ಕುರಿತು ಸಮಕಾಲೀನ ಸಾಹಿತ್ಯ ಕೃತಿಗಳಾದ ಮೋಹನ ತರಂಗಿಣಿ, ಸನತ್ಕುಮಾರಚರಿತೆಗಳಲ್ಲದೆ, ವಿದೇಶಿ ಬರಹಗಳೂ ತಿಳಿಸುತ್ತವೆ. ಪುರಾತತ್ವ ವಿಭಾಗದವರು ನಡೆಸಿದ ಉತ್ಖನನದಲ್ಲಿ ಇತರ ಬಜಾರುಗಳಲ್ಲಿರುವಂತೆ ಕಲ್ಲುಹಾಸಿನ ದಾರಿಯು ಇಲ್ಲಿ ಸಿಕ್ಕಿಲ್ಲ. ಆದರೆ ಇಲ್ಲಿ ೩೫೦ ತಾಮ್ರದ ನಾಣ್ಯಗಳು ದೊರೆತಿರುವುದು ಗಮನಾರ್ಹ. ಇದರ ಜೊತೆಗೆ ಕ್ರಮುಕಪರ್ಣಾಪಣ ಬೀದಿಯೆಂದು ಕರೆದಿರುವುನನು ಸಮರ್ಥಿಸಲು ಅಡಕೆಯ ಅವಶೇಷಗಳು ದೊರೆತಿರುವುದು ಮಹತ್ವದ ಅಂಶವಾಗಿದೆ.

ಪಾನ್‌ಸುಪಾರಿ ಬಜಾರಿನಲ್ಲಿ ಕೇವಲ ಎಲೆ – ಅಡಕೆಗಳಲ್ಲದೆ ; ವಜ್ರವೈಢೂರ್ಯಗಳು; ಕುದುರೆ, ಆನೆ, ಕೋಳಿ, ಕುರಿ ಇತ್ಯಾದಿಗಳನ್ನೂ ಮಾರಾಟ ಮಾಡಲಾಗುತ್ತಿತ್ತು. ಇಲ್ಲಿ ದೊರೆಯುತ್ತಿದ್ದ ದೇಶೀಯ ವಸ್ತುಗಳ ಜೊತೆಗೆ ವಿದೇಶಿ ವಸ್ತುಗಳನ್ನೂ ಕಾಣಬಹುದಿತ್ತು. ಅರಬ್‌, ಪರ್ಶಿಯಾ, ಓರ್ಮಸ್‌, ಶ್ರೀಲಂಕಾ, ಪೆಗು, ಬರ್ಮಾ, ಚೀನಾ ಮುಂತಾದ ದೇಶಗಳೊಂದಿಗೆ ವ್ಯಾಪಾರ ಸಂಬಂಧವನ್ನು ವಿಜಯನಗರ ಹೊಂದಿತ್ತು. ಪಾಯೇಸನು ಅರಮನೆ ಮುಂಬದಿಯ ಬೀದಿಯಲ್ಲಿ ಮಾರಾಟವನ್ನು ಕುರಿತು ಹೇಳಿರುವುದು. “… ಶ್ರೀಮಂತರ ಮನೆಗಳುಳ್ಳ ಅಗಲವಾದ ಹಾಗೂ ಸುಂದರವಾದ ಬೀದಿ ಇದೆ. ಇಲ್ಲಿ ಅನೇಕ ವರ್ತಕರು ವಾಸಮಾಡುತ್ತಾರೆ. ವಜ್ರ ವೈಢೂರ್ಯಗಳೂ, ಮುತ್ತು ಮಾಣಿಕ್ಯಗಳನ್ನೂ, ತಟ್ಟು (ಈ ‘ತಟ್ಟು’ ಎಂಬುದು ‘ತೊತ್ತು’ ಇರಬಹುದೇ?) ಗಳನ್ನೂ, ಕಿತ್ತಳೆ, ದ್ರಾಕ್ಷಿ, ದಾಳಿಂಬೆ, ನಿಂಬೆ, ಮಾದಳ ಮುಂತಾದ ಹಣ್ಣುಗಳನ್ನೂ ಮಾರುತ್ತಾರೆ.”

ಅರಮನೆಯ ಮುಂಬದಿಯ ಬೀದಿಯೇ ಪಾನ್‌ಸುಪಾರಿ ಬಜಾರು ಎಂಬುದರಲ್ಲಿ ಸಂಶಯವಿಲ್ಲ. ಪಾನ್‌ಸುಪಾರಿ ಬಜಾರು ಎಂಬುದರಲ್ಲಿ ಸಂಶಯವಿಲ್ಲ. ಇಲ್ಲಿ ಅನೇಕ ಉಪಬೀದಿಗಳನ್ನೂ ಕಾಣಬಹುದು. ವ್ಯಾಪಾರಿಗಳು ಬೀದಿಗಳಲ್ಲಿ, ಪ್ರತ್ಯೇಕ ಸ್ಥಳಗಳಲ್ಲಿ ಆಯಾಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಪಾಯೇಸನು, ಕುಶಲಗಾರರು ವಾಸಮಾಡುವ ಪ್ರತ್ಯೇಕ ಬೀದಿ ಇದ್ದು, ಅವರು ನಾನಾ ತರ ಸಾಮಾನುಗಳನ್ನು ತಯಾರಿಸಿ ಮಾರುತ್ತಾರೆ ಎಂದಿದ್ದಾನೆ. ಇದನ್ನು ಸಮರ್ಥಿಸುವಂತೆ, ಕನಕದಾಸರು ತಮ್ಮ ಮೋಹನತರಂಗಿಣಿಯಲ್ಲಿ, ‘ಸೋಮಸೂರಿಯ ವೀಧಿ’ ಯನ್ನು ಪ್ರಸ್ತಾಪಿಸಿದ್ದಾರೆ. ಈ ಬೀದಿಯು ಯಾವುದೆಂದು ಖಚಿತವಾಗದಿದ್ದರೂ ಇಲ್ಲಿಯ ಹೋಲಿಕೆಗಳನ್ನನುಸರಿಸಿ ಇದು ಪಾನ್‌ಸುಪಾರಿ ಬಜಾರು ಎಂದೇ ಹೇಳಬೇಕಾಗುತ್ತದೆ. ಪಾಯೇಸನು ಪ್ರಸ್ತಾಪಿಸಿರುವ ಕುಶಲಗಾರರನ್ನು ಕುರಿತು ಕನಕದಾಸರು,

ಕಂಚುಗಾರರು ಕೈದುಗಾರರು ಹೊಳೆವ ಹೊಂ
ಮಂಚಗಾರರು ಶಿಲ್ಪಿಗರು
ಸಂಚುಗಾರರು ಸದ್ವಿದ್ಯಾಧಿಕರಾದ
ಪಂಚಾಳರಿರ್ದರಿಕ್ಕೆಲದಿ

ಎಂದು ಹೇಳಿದ್ದಾರೆ. ಇವರೇ ಅಲ್ಲದೆ, ಬಟ್ಟೆಯ ಮಳಿಗೆಗಳು, ದವಸದ ಅಂಗಡಿಗಳು, ಬಳೆಗಳನ್ನು ಮಾರುತ್ತಿದ್ದ ವ್ಯಾಪಾರಿಗಳೂ, ಸೆಟ್ಟಿಗಳೂ ಇದ್ದರೆಂದು ತಿಳಿಸುತ್ತಾರೆ.

ವಾರದಲ್ಲಿ ಒಂದೊಂದು ದಿನ ಎಲ್ಲಾ ಬಜಾರುಗಳಲ್ಲೂ ಸಂತೆ ನಡೆಯುತ್ತಿತ್ತು. ಅದರಂತೆ ಪಾನ್‌ಸುಪಾರಿ ಬಜಾರ್‌ನಲ್ಲಿ ಸಂತೆ ಸೇರುತ್ತಿದ್ದ ದಿನವನ್ನು ಕುರಿತು ಪಾಯೇಸನು ದಾಖಲಿಸಿರುವುದು : “ಪ್ರತಿ ಶುಕ್ರವಾರ ಇಲ್ಲಿ ಸಂತೆಯಾಗುತ್ತದೆ. ಸಂತೆಯಲ್ಲಿ ಅನೇಕಾನೇಕ ಹಂದಿ, ಕೋಳಿ, ಸಮುದ್ರದಿಂದ ತಂದ ಒಣ ಮೀನು, ಇನ್ನೂ ಇತರ ಈ ದೇಶದ ನನಗೆ ಗೊತ್ತಿಲ್ಲದ ಸಾಮಾನುಗಳನ್ನು ಮಾರುತ್ತಾರೆ. ಇದೇ ರೀತಿ ನಗರದ ನಾನಾ ಭಾಗಗಳಲ್ಲಿ ದಿನಕ್ಕೊಂದು ಕಡೆ ವಾರವೆಲ್ಲಾ ಸಂತೆ ನಡೆಯುತ್ತದೆ.”[14] ಇಲ್ಲಿ ಹೇಳಿರುವಂತೆ, ಪಾನ್‌ಸುಪಾರಿ ಬಜಾರದಲ್ಲಿ ಶುಕ್ರವಾರದಂದು ವಿಶೇಷ ಸಂತೆ ನಡೆಯುತ್ತಿದ್ದಿತು. ಈ ಬಜಾರು ರಾಜಧಾನಿಯ ಕೇಂದ್ರದಲ್ಲಿದ್ದುದು ಹಾಗೂ ರಾಯರ ವಾಸಸ್ಥಾನದ ಬಳಿಯಿದ್ದುದರಿಂದ ಶುಕ್ರವಾರ ಮಾತ್ರವಲ್ಲದೆ, ಪ್ರತಿದಿನದ ಸಂಜೆ ಸಂತೆ ಸೇರುತ್ತಿದ್ದುದು ಪಾಯೇಸನಿಂದಲೇ ತಿಳಿದುಬರುವ ಅಂಶ.

ಪಾನ್‌ಸುಪಾರಿ ಬಜಾರು ರಾಜಧಾನಿಯ ಮುಖ್ಯ ಪ್ರದೇಶದಲ್ಲಿದ್ದುದರಿಂದ ಇತರ ಬಜಾರುಗಳಿಗಿಂತ ಮಹತ್ವದ ಸ್ಥಾನ ಪಡೆದಿದ್ದಿತು. ಮೊದಲನೆಯದಾಗಿ, ಹಂಪೆಯ ಇತರ ಬಜಾರುಗಳಲ್ಲಿ ಒಂದೇ ಧರ್ಮಕ್ಕೆ ಸಂಬಂಧಿಸಿದ ಕಟ್ಟಡಗಳು ಕಂಡುಬಂದರೆ, ಇಲ್ಲಿ ಎಲ್ಲಾ ಧರ್ಮಗಳಿಗೆ ಸೇರಿದ ಕಟ್ಟಡಗಳನ್ನೂ ಕಾಣಬಹುದು. ಇದರಿಂದ ಪಾನ್‌ಸುಪಾರಿ ಬಜಾರು ಸರ್ವಧರ್ಮಗಳ ಸಂಗಮಸ್ಥಾನವಾಗಿದ್ದುದು ತಿಳಿದುಬರುವ ಸಂಗತಿ. ಸಮಾಜದ ಎಲ್ಲಾ ವರ್ಗಗಳಗೂ ಸಮಾನ ಅವಕಾಶವಿದ್ದುದನ್ನು ಇಲ್ಲಿ ಕಾಣಬಹುದು. ಎರಡನೆಯದಾಗಿ, ಇತರೆ ಬಜಾರುಗಳಲ್ಲಿ ವಾರದ ಒಂದು ದಿನ ಸಂತೆ ನಡೆಯುತ್ತಿದ್ದರೆ, ಇಲ್ಲಿ ವಿಶೇಷ ಸಂತೆಯ ಜೊತೆಗೆ ಪ್ರತಿದಿನದ ಸಂಜೆ ವೇಳೆಯಲ್ಲಿಯೂ ಸಂತೆ ಸೇರಿ ವ್ಯಾಪಾರ-ವಹಿವಾಟು ನಡೆಯುತ್ತಿದ್ದಿತು. ಹಂಪೆಯು ವಿಜಯನಗರ ಕಾಲದ ಪ್ರಸಿದ್ಧ ವ್ಯಾಪಾರ ಕೇಂದ್ರವೆಂದು ಹೇಳುವುದಾದರೆ, ಅಷ್ಟೊಂದು ಅಗಾಧವಾದ ವ್ಯಾಪಾರ ನಡೆಯುತ್ತಿದ್ದುದು ಪಾನ್‌ಸುಪಾರಿ ಬಜಾರದಲ್ಲೆ ಎಂಬುದಂತೂ ಸ್ಪಷ್ಟ.

 

[1] ಪ್ರ.ಕಂ.ಸಂ.೨, ಪು.೧೫೪

[2] ಇಂಡಿಯನ್ ಆಂಟಿಕ್ಟೆರಿ ಸಂ.೬, ಪು.೮೫

[3] ವಿಜಯನಗರ – ಸಿಟಿ ಅಂಡ್‌ಎಂಪೈರ್, ಸಂ.೧, ಪು.೧೧೭

[4] ವಿಜಯನಗರ ಸಿಟಿ ಅಂಡ್‌ಎಂಪೈ, ಪು.೧೦೨

[5] ಶಿವತತ್ತ್ವ ಚಿಂತಾಮಣಿ, ಸಂಧಿ ೩೮, ಪದ್ಯ ೨೫೧, ಪು.೪೪೦

[6] ಕ್ಷೇತ್ರಕಾರ್ಯದಲ್ಲಿ ಕಂಡುಬಂತೆ.

[7] ಇನ್‌ವಿಜಯನಗರ : ಪ್ರೋಗ್ರೆಸ್‌ ಆಫ್‌ರಿಸರ್ಚ್‌, ೧೯೭೯ ೮೩, ಪು.೯

[8] ಶಿವತತ್ತ್ವ ಚಿಂತಾಮಣಿ, ಸಂಧಿ ೩೫, ಪದ್ಯ ೨೫೪, ಪು.೪೪೦

[9] ಕ್ಷೇತ್ರಕಾರ್ಯದಲ್ಲಿ ಕಂಡುಬಂದಂತೆ.

[10] ಎಸ್‌.ಐ.ಐ., ಸಂ.೧, ಸಂಖ್ಯೆ ೧೫೩

[11] ಎಸ್‌.ಐ.ಐ., ಸಂ.೪, ಸಂಖ್ಯೆ ೨೪೮

[12] ಪ್ರ.ಕಂ.ಇಂ.ಸಂ.೨, ಪು.೩೬೭

[13] ಪ್ರ.ಕಂ.ಇಂ.ಸಂ. ಪು.೩೧೫೫-೧೫೬

[14] ಪ್ರ.ಕಂ.ಇಂ.ಸಂ. ಪು.೩೬೮