ವಿಜಯನಗರ ಪಟ್ಟಣ ಸುಮಾರು ೨೬ ಚ.ಕಿ.ಮೀ.ಗೂ ಮಿಕ್ಕಿದ್ದು, ಅದರಲ್ಲಿ ಅನೇಕ ಬಗೆಯ ಬೀದಿಗಳು ಇದ್ದ ಬಗ್ಗೆ ಶಾಸನಗಳಲ್ಲಿ ಉಲ್ಲೇಖ ದೊರಕುತ್ತದೆ. ಈ ಎಲ್ಲಾ ಬೀದಿಗಳನ್ನು ಸ್ಥಳ ಪರಿವೀಕ್ಷಣೆಯ ಮೂಲಕ ಗುರುತಿಸಬಹುದಾಗಿದೆ. ಪಟ್ಟಣದ ಕೇಂದ್ರ ಭಾಗದಲ್ಲಿ ಅನೇಕ ರೀತಿಯ ಚಟುವಟಿಕೆಗಳಿದ್ದು, ಸಮರ್ಪಕ ಸಂಪರ್ಕಕ್ಕೆ ಬೀದಿಗಳು ಬಹು ಮುಖ್ಯಪಾತ್ರ ವಹಿಸಿದ್ದವು. ಇದರ ಬಗ್ಗೆ ಅರಿಯಲು ವಿಜಯನಗರ ವೈಭವವನ್ನು ಕಣ್ಣಾರೆ ಕಂಡು ವರ್ಣಿಸಿದ ವಿದೇಶಿ ಪ್ರವಾಸಿಗರ ಬರವಣಿಗೆಗಳು ಬಹು ಮುಖ್ಯವಾದವು. ವಿಜಯನಗರವನ್ನು ಸಂದರ್ಶಿಸಿದ ಅಬ್ದುಲ್ ರಜಾಕ್, ಡೊಮಿಂಗೊ ಪೆಯಾಸ್‌ರು ಇಲ್ಲಿನ ರಸ್ತೆಗಳು, ಬಜಾರುಗಳು ಮತ್ತು ಮಾರಾಟ ಮಾಡುತ್ತಿದ್ದ ವಸ್ತುಗಳ ದೊಡ್ಡ ಪಟ್ಟಿಯನ್ನು ನೀಡಿದ್ದಾರೆ. ಇತ್ತೀಚೆಗೆ ಇಲ್ಲಿನ ದಾರಿಗಳನ್ನು ಗುರುತಿಸಲಾಗಿದೆ. (Fritz, 1984, pp. 48-50) ಕೆಲವು ದಾರಿಗಳ ಬಗ್ಗೆ ಮರು ವಿಶ್ಲೇಷಣೆ ಮಾಡಬೇಕಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಅಬ್ದುಲ್ ರಾಜಕ್ ನೀಡಿರುವ ವಿವರಣೆಯಂತೆ ಇಲ್ಲಿ ಅರಮನೆಯ ಎದುರು, ಎದರು ಬದಿರಾದ ನಾಲ್ಕು ಅಂಗಡಿ ಬೀದಿಗಳು, ಉಪ್ಪರಿಗೆ, ಕಮಾನುಗಳನ್ನು ಹೊಂದಿದ ಉದ್ದವಾದ ಮತ್ತು ಅಗಲವಾದ ಬೀದಿಗಳಿರಬೇಕು. ಆದರೆ ವಾಸ್ತವದಲ್ಲಿ ಎರಡು ರಸ್ತೆಗಳು ಒಂದನ್ನೊಂದು ಛೇದಿಸಿದಲ್ಲಿ ಆಗ ನಾಲ್ಕು ರಸ್ತೆಗಳಾಗುತ್ತವೆ. (Mator, R.H. 1855, p. 24)

ರಾಜ ಪ್ರಾಂಗಣ ಎಂದರೆ ಸಾಮಾನ್ಯವಾಗಿ ಅರ್ಥೈಸುವ ಒಂದು ರಾಜರ ಅರಮನೆಗಳಿರುವ ಜಾಗ ಮತ್ತು ಅದರ ಪಶ್ಚಿಮಕ್ಕಿರುವ ಟಂಕಸಾಲೆ, ಟಂಕಸಾಲೆಯ ಉತ್ತರಕ್ಕಿರುವ ದಂಡನಾಯಕನ ಕೋಟೆ ಮತ್ತು ಈಶಾನ್ಯದಲ್ಲಿರುವ ಜನಾನದ ಕೋಟೆ. ಈ ಹೆಸರುಗಳು ಸರಿಸುಮಾರು ಕಳೆದ ಶತಮಾನದಿಂದ ಚಾಲ್ತಿಯಲ್ಲಿದ್ದು, ಹಾಗೆಯೇ ಇಂದೂ ಸಹ ಕರೆಯಲ್ಪಡುತ್ತದೆ. ಈ ಮೇಲೆ ತಿಳಿಸಿದ ಪ್ರತಿಯೊಂದು ಪ್ರದೇಶವು ತನ್ನದೇ ಆದ ಹೆಗ್ಗುರುತುಗಳು ಮತ್ತು ಕಟ್ಟಡಗಳನ್ನು ಹಾಗೂ ಇತರ ಸೌಲಭ್ಯಗಳನ್ನು ಹೊಂದಿದೆ. ಅದರ ಸುತ್ತಲೂ ಪ್ರಾಕಾರ ಗೋಡೆಗಳಿವೆ. ಇಲ್ಲಿನ ಭಾಗಗಳು ಒಂದಕ್ಕೊಂದು ಹೊಂದಿಕೊಂಡಿದ್ದು ಕೆಲವು ಸ್ಥಳಗಳ ಸುತ್ತ ಎರಡು ಸುತ್ತಿನ ಕೋಟೆ ಗೋಡೆಗಳು ಇರುವ ನಿದರ್ಶನಗಳುಂಟು. ಇದಕ್ಕೆ ಉತ್ತಮ ಉದಾ. ರಾಜ ಪ್ರಾಂಗಣ. ಇಲ್ಲಿ ಪಶ್ಚಿಮ, ಪೂರ್ವ ಹಾಗೂ ದಕ್ಷಿಣ ಭಾಗಕ್ಕೆ ಬೇರೆ ಕೋಟೆಗಳ ಸಾಲುಗಳಿರುವುದರಿಂದ ೨ ಕೋಟೆಗಳ ನಡುವೆ ಸ್ಥಳ ಒಂದು ಬೀದಿಯಾಗಿ ಅಥವಾ ದಾರಿಯಾಗಿ ಕಾರ್ಯನಿರ್ವಹಿಸುತ್ತಿದೆ.

ರಾಜ ಪ್ರಾಂಗಣದ ಪಶ್ಚಿಮ ಭಾಗ ಹಾಗೂ ಟಂಕಸಾಲೆಯ ಪೂರ್ವಭಾಗದ ಕೋಟೆ ಗೋಡೆಗಳ ಮಧ್ಯ ದಾರಿಯಿದೆ. ರಾಜ ಪ್ರಾಂಗಣದ ಪಶ್ಚಿಮ ಕೋಟೆ ಗೋಡೆಯಲ್ಲಿರುವ ಬಾಗಿಲಿನಿಂದ ರಾಜ ಪ್ರಮುಖರು ಯಾವುದೇ ಅಡೆತಡೆಯಿಲ್ಲದೆ ನೇರವಾಗಿ ಹಜಾರರಾಮ ದೇವಸ್ಥಾನದ ದಕ್ಷಿಣ ಭಾಗವನ್ನು ಕಿರಿದಾದ ಬಾಗಿಲ ಮೂಲಕ ಪ್ರವೇಶಿಸಬಹುದಾಗಿದೆ. ಹಾಗೆಯೇ ಹಜಾರಮದ ವಾಯವ್ಯ ಗೋಡೆಯು ಮುಂದುವರಿದಿದ್ದು ಉತ್ತರದ ತುದಿಯಲ್ಲಿರುವ ದ್ವಾರದ ಮೂಲಕ ಹಜಾರರಾಮ ದೇವಾಲಯದ ಹಿಂಭಾಗಕ್ಕೆ ಅಂದರೆ ಪಶ್ಚಿಮ ಭಾಗದಲ್ಲಿರುವ ಮಂಟಪಗಳು ಸನಿಹದಿಂದ ಇನ್ನೆರಡು ದ್ವಾರಗಳ ಮೂಲಕ ದಕ್ಷಿಣಾಭಿಮುಖವಾಗಿ ಒಂದು ಪಶ್ಚಿಮಕ್ಕೆ ಸುಮಾರು ೩೦ ಕಿ.ಮೀ. ಚಲಿಸಿ ಪುನಃ ಉತ್ತರಕ್ಕೂ ಅಷ್ಟೇ ಚಲಿಸಿ ಮತ್ತೆ ಪಶ್ಚಿಮಕ್ಕೆ ತಿರುಗಿ ನಂತರ ದಕ್ಷಿಣದ ದ್ವಾರದ ಮೂಲಕ ಟಂಕಸಾಲೆಯ ಮುಖ್ಯ ಅರಮನೆಯ ಹಾಗೂ ಅದರ ಪಶ್ಚಿಮಕ್ಕಿರುವ ಎರಡು ಚಿಕ್ಕ ಅರಮನೆಗಳು ಮತ್ತು ಅದಕ್ಕಿರುವ ವ್ಯವಸ್ಥೆ ಇತ್ತೀಚಿನ ಉತ್ಖನಗಳಿಂದ ಹೊರಬಂದಿದೆ. ಟಂಕಸಾಲೆಯ ದಕ್ಷಿಣದ ಗೋಡೆಯಲ್ಲಿ ೩ ಬಾಗಿಲುಗಳಿದ್ದು ಅವು ದಕ್ಷಿಣಕ್ಕಿರುವ ಮತ್ತೊಂದು ಪ್ರಾಂಗಣಕ್ಕೆ ಹಾದಿಯನ್ನು ಒದಗಿಸಿದೆ.

ಈಗಾಗಲೆ ತಿಳಿಸಿರುವ ಹಜಾರರಾಮದ ಉತ್ತರದಲ್ಲಿರುವ ದ್ವಾರದ ಮೂಲಕ ಪಶ್ಚಿಮಾಭಿಮುಖವಾಗಿ ಒಂದು ದಕ್ಷಿಣಕ್ಕೆ ಸುಮಾರು ೩೦ ಕಿ.ಮೀ.ಗಳಷ್ಟು ನಡೆದು ಪುನಃ ಪಶ್ಚಿಮ-ದಕ್ಷಿಣ, ಪಶ್ಚಿಮ, ಉತ್ತರ-ಪಶ್ಚಿಮದ ಮೂಲಕ ದಂಡನಾಯಕನ ಕೋಟೆಯ ಈಶಾನ್ಯದಲ್ಲಿರುವ ದೊಡ್ಡ ಕಟ್ಟಡದ (ಅರಮನೆಯ) ಭಾಗಕ್ಕೆ ಹೋಗಬಹುದಾಗಿದೆ. ಈ ಅರಮನೆಯು ಬಹಳಷ್ಟು ರಕ್ಷಣಾ ವ್ಯವಸ್ಥೆಯನ್ನು ಹೊಂದಿರುವುದರಿಂದ ದಂಡನಾಯಕ ಅಥವಾ ರಾಜರಿಗೆ ಸೇರಿದೆ ಎನ್ನಬಹುದಾಗಿದೆ. ಕೆಲವು ಹಾದಿಗಳು ಬಹಳ ಅಂಕುಡೊಂಕಾಗಿದ್ದು ಕೆಲವು ತಡೆಗಳನ್ನು ದಾಟಿಬರುವುದರಿಂದ ಇದರ ಪ್ರಾಮುಖ್ಯತೆ ಅರಿವಾಗುತ್ತದೆ.

ದಂಡನಾಯಕನ ಕೋಟೆಯ ಮಧ್ಯದಲ್ಲಿ ಉತ್ತರ ದಕ್ಷಿಣವಾಗಿರುವ ಬೃಹತ್ ಗೋಡೆ ದಂಡನಾಯಕನ ಕೋಟೆಯನ್ನು ಎರಡು ಭಾಗಗಳನ್ನಾಗಿ ವಿಂಗಡಿಸಿದೆ. ದಂಡನಾಯಕನ ಕೋಟೆ ವಾಯವ್ಯದಲ್ಲಿರುವ ಅರಮನೆಗೆ ಭದ್ರವಾದ ಕೋಟೆ ಗೋಡೆಯನ್ನು ನಾಲ್ಕು ಪಕ್ಕದಲ್ಲಿರುವ ಅರಮನೆಗೆ ಭದ್ರವಾದ ಕೋಟೆಯ ಗೋಡೆಯನ್ನು ನಾಲ್ಕು ಪಕ್ಕದಲ್ಲಿ ಕಾಣಬಹುದು. ಮೇಲೆ ಹೇಳಿದ ಉತ್ತರ ದಕ್ಷಿಣದ ಗೋಡೆ ಈ ಅರಮನೆಗೆ ಪಶ್ಚಿಮ ಭಾಗದಲ್ಲಿದ್ದು ಇದರ ಮಧ್ಯದಲ್ಲಿ ಸಣ್ಣ ಬಾಗಿಲಿರುವುದರಿಂದ ಎರಡೂ ಪಕ್ಕದಲ್ಲಿ ಸಂಚರಿಸಲು ಉತ್ತಮವಾದ ದಾರಿಯನ್ನು ಹೊಂದಿದೆ. ದಂಡನಾಯಕನ ಕೋಟೆಯ ವಾಯವ್ಯದಲ್ಲಿ ಗುಮ್ಮಟವಿರುವ ಕಾವಲು ಗೋಪುರವಿದೆ. ಇದು ದಂಡನಾಯಕನ ಕೋಟೆಗೆ ಉತ್ತರ ಬಾಗಿಲಿನಿಂದ ಬರುವ ಜನರನ್ನು ನಿಯಂತ್ರಿಸಲು ಅನುಕೂಲವಾಗಿರುತ್ತದೆ. ದಂಡನಾಯಕನ ಕೋಟೆಯ ದಕ್ಷಿಣದ ಭಾಗ ತುದಿಯಲ್ಲಿ ಮತ್ತೊಂದು ಅರಮನೆಯ ಬುನಾದಿಯಿದೆ. ಇದರ ಆಗ್ನೇಯಕ್ಕೆ ಕಾವಲು ಗೋಪುರ ಹಾಗೂ ಇಸ್ಲಾಮಿಕ್ ಶೈಲಿಯ ಕಟ್ಟಡವಿದೆ. ಆದುದರಿಂದ ಇವುಗಳ ಮಧ್ಯೆ ಸಂಚರಿಸಲು ಪೂರ್ವ ಪಶ್ಚಿಮದ ದಾರಿ ಇರಲೇಬೇಕು. ಹಾಗೆಯೇ ದಂಡನಾಯಕನ ಕೋಟೆಯ ವಾಯವ್ಯದಲ್ಲಿರುವ ಬಾಗಿಲಿನಿಂದ ಈ ದಾರಿಗೆ ಸೇರಲು ಮತ್ತೊಂದು ದಾರಿ ಇರಲೇಬೇಕು.

ರಾಜ ಪ್ರಾಂಗಣದ ಮೂರು ಭಾಗದಲ್ಲಿ ಅಂದರೆ ಪೂರ್ವ ಪಶ್ಚಿಮ ದಕ್ಷಿಣದಲ್ಲಿ ಸುಗಮವಾಗಿ ಸಂಚರಿಸಲು ದಾರಿಯಿದೆ. ಈ ಮೂರು ಪಕ್ಕದಲ್ಲಿ ಸ್ವತಂತ್ರವಾದ ಆವರಣಗಳಿವೆ. ಈ ಹೊರ ಸುತ್ತಿನ ದಾರಿಯಿಂದ ಮಹಾನವಮಿ ದಿಬ್ಬಕ್ಕೆ ಉತ್ತರ ಮೆಟ್ಟಿಲುಗಳಿಂದ ಏರು ದಿಬ್ಬದ ಪಶ್ಚಿಮ ಭಾಗಕ್ಕೆ ಬಂದು ಅಲ್ಲಿಂದ ಮಹಾನವಮಿ ದಿಬ್ಬದ ಮೆಟ್ಟಿಲನ್ನೇರುವ ವ್ಯವಸ್ಥೆ ಇರಬೇಕು. ಮೇಲೆ ಹೇಳಿದ ಪಶ್ಚಿಮದ ಸಮತಟ್ಟು ಪ್ರದೇಶದಿಂದ ದಕ್ಷಿಣಕ್ಕೆ ಚಲಿಸಿ ಪೂರ್ವಕ್ಕೆ ತಿರುಗಿ, ಪೂರ್ವದಲ್ಲಿರುವ ಮೆಟ್ಟಿಲುಗಳನ್ನೇರುವ ಇನ್ನೊಂದು ದಾರಿಯೂ ಮಹಾನವಮಿ ದಿಬ್ಬಕ್ಕಿದೆ. ಮಹಾನವಮಿ ದಿಬ್ಬದಿಂದ ದಕ್ಷಿಣಕ್ಕಿರುವ ಕೊಳಕ್ಕೆ ಹಾಗೂ ನೈಋತ್ಯದಲ್ಲಿರುವ ಮಂಟಪಗಳ ಸಾಲಿಗೆ ಹೋಗಲು ದಾರಿ ಇರಬೇಕು. ಮಹಾನವಮಿ ದಿಬ್ಬದಿಂದ ಪಬ್ಲಿಕ್‌ಆಡಿಯನ್ಸ್‌ಹಾಲ್‌ಗೆ ಹೋಗಲು ಮತ್ತೊಂದು ದಾರಿಯಿದೆ. ಇವು ಡೊಮೆಂಗೋ ಪಯಾಸ್‌ತಿಳಿಸಿರುವ ಅರಮನೆಯ ಪ್ರದೇಶದಿಂದ ಹಾದು ಹೋಗುತ್ತದೆ. ಪಬ್ಲಿಕ್‌ಆಡಿಯನ್ಸ್‌ಹಾಲ್‌ನ ಪೂರ್ವಕ್ಕಿರುವ ಹೆಬ್ಬಾಗಿಲಿನಿಂದ ಹಜಾರರಾಮದ ಮುಂಭಾಗಕ್ಕೆ ಬರಲು ಎರಡು ಹೆಬ್ಬಾಗಿಲುಗಳನ್ನು, ಅಂದರೆ ಎರಡು ಆವರಣಗಳನ್ನು ಹಾಯ್ದು ಬರಬೇಕಾಗುತ್ತದೆ. ಹಜಾರರಾಮನಿಂದ ಮುಂದಕ್ಕೆ ಈ ಹಾದಿಯು ಇಂದಿನ ಕ್ಯಾಂಟೀನ್‌ನ ಹಿಂಭಾಗದಲ್ಲಿರುವ ಹಾದಿಗೆ ದಾರಿಯಾಗುತ್ತದೆ. ಇಂದಿನ ಕ್ಯಾಂಟೀನ್‌ಭಾಗಕ್ಕೆ ಬರಲು ಈ ಹಾದಿಯ ಸಂಪರ್ಕವಿರಲೇಬೇಕು. ಈ ಉತ್ತರ ದಕ್ಷಿಣದ ದಾರಿಗೆ ಪಶ್ಚಿಮದಿಂದ ಇನ್ನೊಂದು ದಾರಿಯೂ ಲಂಬವಾಗಿ ಬಂದು ಸೇರುತ್ತದೆ. ಹೀಗೆ ಸೇರುವ ದಾರಿಯ ದಂಡನಾಯಕನ ಕೋಟೆಯ ಉತ್ತರ ಭಾಗದಿಂದ ಅಂದರೆ ಹೆಚ್ಚು ಕಡಿಮೆ ಇವತ್ತಿನ ದಾರಿಯನ್ನೇ ಅನುಸರಿಸಿ ಹಜಾರರಾಮನ ದಕ್ಷಿಣದ ಪಕ್ಕದಲ್ಲಿ ಅಂದರೆ ಈಗಿರುವ ಬೋರ್ವೆಲ್‌ನ ಹತ್ತಿರ ಸೇರಿರಬೇಕು.

ಕೃಪೆ: ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು.

ಕೃಪೆ: ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು.

ಹಜಾರಾಮ ದೇವಸ್ಥಾನದಿಂದ ಪೂರ್ವಕ್ಕೆ ಪೆದ್ದಂಗಡಿ ಬೀದಿಗೆ ಸೇರುವ ದೊಡ್ಡದಾರಿಯಿದೆ. ಈ ದಾರಿಯು ಹಜಾರರಾಮ ದೇವಸ್ಥಾನದ ಕೊಳದ ಹಿಂಬದಿಯಲ್ಲಿ ಕವಲೊಡೆದು ದಕ್ಷಿಣಕ್ಕೆ ತಿರುಗಿ ಪೂರ್ವದಲ್ಲಿರುವ ಹೆಬ್ಬಾಗಿಲಿನ ಮೂಲಕ ಬಂದು ಆವರಣಕ್ಕೆ ಹೋದರೆ, ಮೊದಲನೇ ದಾರಿಯೂ ಹಾಗೇ ಮುಂದುವರಿದು ರಾಜ ಪ್ರಾಂಗಣದ ಉತ್ತರದ ಕೋಟೆ ಗೋಡೆಯ ಪಕ್ಕದಲ್ಲಿ ಹೋಗಿ ಮಹಾನವಮಿ ದಿಬ್ಬದ ದಾರಿಗೆ ಸೇರುತ್ತದೆ ಹಜಾರರಾಮ ದೇವಸ್ಥಾನದ ಮುಂದೆ ಅಡ್ಡಲಾಗಿ ಅಂದರೆ ಉತ್ತರ ದಕ್ಷಿಣ ದಾರಿಯ ಒಂದು ಟಿಸಿಲು ಇಂದಿನ ಈ ಕ್ಯಾಂಟೀನ್‌ಆವರಣಕ್ಕೆ ಬರುತ್ತದೆ.

ಇಲ್ಲಿಯ ಆವರಣದ ಈಶಾನ್ಯ ಭಾಗದಲ್ಲಿ ಒಂದು ಸಣ್ಣ ದ್ವಾರದ ಮೂಲಕ ಜನರು ಆವರಣಕ್ಕೆ ಪಶ್ಚಿಮದ ಮೂಲಕ ಸೇರುವ ವ್ಯವಸ್ಥೆಯನ್ನು ಹೊಂದಿರಬೇಕು.

ಜನಾನ ಆವರಣಕ್ಕೆ ಪಶ್ಚಿಮದಲ್ಲಿ ಈಗಾಗಲೇ ಹೇಳಿರುವ ಒಂದು ಬಾಗಿಲಿದ್ದರೆ, ಉತ್ತರಕ್ಕೆ ಮೂರು ಬಾಗಿಲುಗಳಿವೆ. ಉತ್ತರದ ೩ ಬಾಗಿಲುಗಳಲ್ಲಿ ಮಧ್ಯದ ಬಾಗಿಲು ಸಾಕಷ್ಟು ದೊಡ್ಡದಿದ್ದು ಕಾವಲುಗಾರರು (ಇದು ಬೃಹತ್‌) ಸಣ್ಣ ಗೋಪುರದ ಮೂಲಕ ಜನಾನ ಆವರಣದಲ್ಲಿರುವ ಅರಮನೆಗೆ ಪ್ರವೇಶವನ್ನು ಒದಗಿಸುತ್ತದೆ. ಹಾಗೆಯೇ ಪಶ್ಚಿಮದ ತುದಿಯಲ್ಲಿರುವ ಬಾಗಿಲಿನಿಂದ ಜನಾನದ ಆವರಣದಲ್ಲಿರುವ ಗಾರ್ಡ್‌ಕ್ವಾರ್ಟಸ್‌ಗೂ ಬರಬಹುದಾಗಿದೆ. ಪೂರ್ವದ ತುದಿಯಲ್ಲಿರುವ ಬಾಗಿಲಿನಿಂದ ಆನೆಸಾಲೆ ಎದುರಿನ ಆಯತಾಕಾರದ ಇನ್ನೊಂದು ಆವರಣಕ್ಕೆ ಹೋಗಬಹುದಾಗಿದೆ. ಜನಾನದ ಉತ್ತರ ಭಾಗದ ಈ ಮೂರು ಬಾಗಿಲುಗಳು ಹಜಾರರಾಮ ದೇವಸ್ಥಾನದಿಂದ ಬರುವ ದಕ್ಷಿಣೋತ್ತರ ದಾರಿಗೆ ಸೇರುತ್ತದೆ.

ಆನೆಯ ಸಾಲೆಯ ಎದುರು ಒಂದು ಹೆಬ್ಬಾಗಿಲಿದ್ದು ಅದರ ಮೂಲಕ ಹೋಗುವ ದಾರಿ ಜನಾನದ ಉತ್ತರ ದಿಕ್ಕಿಗಿರುವ ದಾರಿಗೆ ಸೇರಿ ಮುಂದೆ ಹಜಾರರಾಮದ ದಕ್ಷಿಣೋತ್ತರದ ದಾರಿಯನ್ನೇ ಸೇರುತ್ತದೆ.

ಪ್ರತಿಷ್ಠಿತ ವ್ಯಕ್ತಿಗಳ ಅರಮನೆಯ ಪಕ್ಕದಲ್ಲಿ ದಕ್ಷಿಣೋತ್ತರ ದಾರಿಯಿದ್ದು ಇದು ಹಂಪಾದೇವಿ ದಿಡ್ಡಿ ಮೂಲಕ ಹಾಯ್ದು ದಂಡನಾಯಕನ ಕೋಟೆಯ ವಾಯವ್ಯ ಬಜಾರ್, ಗೋರಿಕೆಳಗಣ ಮಾಗಣೆಯ ಹಾದಿ, ಸೋಮವೀದಿ ಹೀಗೆ ಅನೇಕ ಹೆಸರುಗಳಿವೆ. ಈ ರೀತಿಯ ಹೆಸರುಗಳು ಇಲ್ಲಿಯೂ ಇರಬೇಕು. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಶೋಧನೆಯಿಂದ ಇವು ತಿಳಿಯಬಹುದಾಗಿದೆ. ಪ್ರಸ್ತುತ ಇಲ್ಲಿರುವ ಆವರಣಗಳಿಗೆ ದಾರಿಗಳಿದ್ದು, ಅವು ಹಿಂದಿನ ದಾರಿಗಳನ್ನು ಕೆಲವೊಮ್ಮೆ ಸಂಧಿಸಿ, ಭಾಗಶಃ ಅವುಗಳ ಮೇಲಿದ್ದ ಕೆಲವೊಮ್ಮೆ ಭಿನ್ನವಾದ ಹೊಸ ದಾರಿಯಾಗಿದೆ. ಇತ್ತೀಚಿನ ಉತ್ಖನನಗಳಿಂದ ಅನೇಕ ಹೆಬ್ಬಾಗಿಲುಗಳು, ಬಾಗಿಲುಗಳು, ದಾರಿ, ದಾರಿಯ ಕೆಲವು ಭಾಗ ದೊರಕಿದೆ. ಇವೆಲ್ಲವನ್ನೂ ಸರಿಯಾಗಿ ಅಧ್ಯಯನ ಮಾಡಿ ಒಂದು ನಕ್ಷೆಯ ಮೇಲೆ ವಿನ್ಯಾಸಗೊಳಿಸಿದರೆ, ವಿಜಯನಗರದ ಕಾಲದ ರಾಜಪ್ರಾಂಗಣದ ದಾರಿಗಳು ಹೆಚ್ಚು ಸ್ಫುಟುಗೊಳ್ಳುತ್ತವೆ.

ಆಧಾರ ಗ್ರಂಥಗಳು

John Fritz: The Royal centre at Vijayanagara

Suryanarayana Rao: A History of Vijayanagara the never to be

Forgotton empire

Robert Sewell: A Forgetten Empire.

ಎಚ್‌.ಎಲ್‌.ನಾಗೇಗೌಡ, ಪ್ರವಾಸಿ ಕಂಡ ಇಂಡಿಯಾ, ಭಾಗ-೨

ಆಕರ
ವಿಜಯನಗರ ಅಧ್ಯಯನ, ಸಂ.೧೦, ೨೦೦೫, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು, ಪು.೧೮೨-೧೮೬