ಯಾವುದೇ ರಾಜ್ಯ ಅಥವಾ ರಾಷ್ಟ್ರದ ಅಭಿವೃದ್ಧಿಗೆ ಸಾರಿಗೆ ವ್ಯವಸ್ಥೆಯು ಬಹುಮುಖ್ಯ ಆರ್ಥಿಕ ಅಭಿವೃದ್ಧಿ ಹಾಗೂ ಸಾಂಸ್ಕೃತಿ ಕೊಡುಕೊಳ್ಳುವಿಕೆಗೆ ಸಮರ್ಪಕ ಸಾರಿಗೆ ವ್ಯವಸ್ಥೆಯ ಮುಖ್ಯ ಕಾರಣವಾಗುತ್ತದೆ ಎಂಬುದರಲ್ಲಿ ಯಾವ ಸಂಶಯವಿಲ್ಲ. ಪ್ರಾಚೀನ ಭಾರತದ ಹರಪ್ಪಾ ಸಂಸ್ಕೃತಿಯ ಕಾಲದಿಂದಲೂ ನಮಗೆ ಸಾರಿಗೆ ವ್ಯವಸ್ಥೆಯ ಬಗೆಗೆ ಮಾಹಿತಿಗಳು ಲಭ್ಯವಿದೆ. ನಗರೀಕರಣ ಪ್ರಕ್ರಿಯೆಯು ಪ್ರಾರಂಭಗೊಂಡ ಕಾಲದಿಂದಲೂ ನಗರ, ಗ್ರಾಮ, ಹಳ್ಳಿ ಮುಂತಾದ ಮಾನವನ ನೆಲೆಗಳಲ್ಲಿ ರಸ್ತೆಗಳನ್ನು ನಿರ್ಮಿಸಿಕೊಂಡ ಉದಾಹರಣೆಗಳು ದೊರಕಿವೆ. ಆದಿ ಇತಿಹಾಸ ಕಾಲದ ಅನೇಕ ನೆಲೆಗಳಲ್ಲಿ ರಸ್ತೆಗಳು ಇದ್ದುದಕ್ಕೆ ಸಾಕ್ಷ್ಯಾಧಾರಗಳು ಲಭ್ಯವಿದೆ. ಹರಪ್ಪಾ ಸಂಸ್ಕೃತಿಯ ನೆಲೆಗಳಲ್ಲಿ ಒಂದಾದ ಕಾಳಿಬಂಗಾನ್‌ನ ಉತ್ಖನನದಲ್ಲಿ ರಸ್ತೆಗಳು ದೊರಕಿವೆ. ಅವುಗಳ ಅಳತೆಯ ನಿರ್ದಿಷ್ಟವಾದ ೧:೨:೩:೪ರ ಪ್ರಮಾಣದಲ್ಲಿ ಇರುವುದು ಕುತೂಹಲಕಾರಿಯಾದ ಸಂಗತಿ.[1]

ಕರ್ನಾಟಕದಲ್ಲಿ ಹಲವಾರು ಪ್ರಾಚೀನ ನೆಲೆಗಳಿದ್ದರೂ ಅವುಗಳ ಸಂಪೂರ್ಣ ಉತ್ಖನನಗಳು ಆಗಿರುವುದಿಲ್ಲ. ಇದರಿಂದ ನಗರ ಅಥವಾ ಗ್ರಾಮಗಳ ರಚನೆ, ವಿನ್ಯಾಸ ಮತ್ತು ವಿಸ್ತೀರ್ಣತೆಗಳು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ ಪ್ರತಿ ನೆಲೆಯಲ್ಲಿಯೂ ಜನರ ಮತ್ತು ವಾಹನಗಳ ಓಡಾಟಕ್ಕೆ ಅವಶ್ಯಕವಾದ ಬೀದಿಗಳು ಇತ್ತೆಂಬುದು ಸಾಮಾನ್ಯವಾದ ಗ್ರಹಿಕೆಯೆಂದರೆ ತಪ್ಪಾಗಲಾರದು. ಕರ್ನಾಟಕದ ಆದಿಇತಿಹಾಸ ಕಾಲದ ನೆಲೆಗಳಲ್ಲಿ ಒಂದಾದ ವಡಂಗಾವ್‌ಮಾಧವಪುರದಲ್ಲಿ ಒಂದು ಸುಂದರ ರಸ್ತೆಯು ದೊರಕಿರುವುದು ಗಮನಾರ್ಹ. ವಡಗಾಂವ್‌ಮಾಧವಪುರವು ಪ್ರಸ್ತುತ ಬೆಳಗಾವಿ ನಗರದ ಹೊರವಲಯ ಪ್ರದೇಶವಾಗಿದ್ದು, ಸರಿಸುಮಾರು ೧೫ ಹೆಕ್ಟೇರ್ ನಷ್ಟು ಪ್ರದೇಶದಲ್ಲಿ ವಿಸ್ತರಿಸಿದ್ದು ಅಲ್ಲಿ ಆದಿಇತಿಹಾಸ ಕಾಲದ ಅವಶೇಷಗಳು ದೊರಕಿವೆ. ಈ ನೆಲೆಯನ್ನು ವಿದ್ವಾಂಸರು ಉತ್ಖನನ ನಡೆಸಿ ಆ ಕಾಲದ ಅನೇಕ ಕಟ್ಟಡ, ಬಾವಿ, ಧಾನ್ಯಗಳ ಕಣಜ, ವಿವಿಧ ಪ್ರಕಾರದ ನಾಣ್ಯ, ಮಣ್ಣಿನ ಗೊಂಬೆ, ಆಭರಣ, ಮಣಿ, ತಾಮ್ರದ ಸಾಮಾನು ಮತ್ತು ಮೃತ್ಪಾತ್ರೆಗಳನ್ನು ಬೆಳಕಿಗೆ ತಂದಿದ್ದಾರೆ.

ಈ ಪ್ರಾಚೀನ ನೆಲೆಯ ದಕ್ಷಿಣ ಭಾಗದಲ್ಲಿ ಸುಮಾರು ಒಂದನೆಯ ಶತಮಾನದ ರಸ್ತೆಯ ಕೆಲವು ಭಾಗಗಳು ಉತ್ಖನನದಲ್ಲಿ ಶೋಧವಾಗಿದೆ. ಇವು ಗಚ್ಚಿನ ಹಾಗೆ ಗಟ್ಟಿಯಾಗಿರುವ ಪದರುಗಳುಳ್ಳ ನೆಲದ ಭಾಗಗಳಾಗಿದ್ದು ಒಂದೇ ಅಕ್ಷರೇಖೆಯಲ್ಲಿದೆ. ಸುಮಾರು ೧.೪ ಕಿ.ಮೀ. ಉದ್ದದಷ್ಟು ಭಾಗಗಳು ಬೆಳಕಿಗೆ ಬಂದಿವೆ. ಇದರ ಎರಡು ಬದಿಗಳಲ್ಲಿ ಕಟ್ಟಡಗಳ ಅವಶೇಷಗಳು ಹಾಗೂ ಸೂರಿನ ಹೆಂಚುಗಳು ಇದ್ದುದರಿಂದ ಇವು ನಗರದ ಒಂದು ಪ್ರಮುಖ ಬೀದಿಯೇ ಆಗಿರಬೇಕು ಎಂದು ಅಭಿಪ್ರಾಯಪಡಲಾಗಿದೆ. ಪ್ರಸ್ತುತ ರಸ್ತೆಯನ್ನು ಆಗಿಂದ್ದಾಗ್ಗೆ ಸರಿಮಾಡುತ್ತಿದ್ದುದರ ಕುರುಹಾಗಿ ರಸ್ತೆಯಲ್ಲಿ ಒಂದು ಪದರದ ಮೇಲೆ ಇನ್ನೊಂದನ್ನು ಹಾಕಲಾಗಿದೆ. ಬೀದಿಯಲ್ಲಿ ಗಾಡಿಗಳು ಒಡಾಡಿದ ಗುರುತುಗಳು ಇಲ್ಲದ ಕಾರಣ ಈ ಬೀದಿಯನ್ನು ಜನರು ಕಾಲ್ನಡಿಗೆಗೆ ಬಳಸುತ್ತಿದ್ದರು ಎಂದು ಉತ್ಖನನಕಾರರು ತರ್ಕಿಸಿದ್ದಾರೆ. ರಸ್ತೆಯನ್ನು ಸುಮಾರು ೧ನೆಯ ಶತಮಾನದ ಆದಿಭಾಗದಲ್ಲಿ ನಿರ್ಮಿಸಿದ್ದು ೨ನೆಯ ಶತಮಾನದ ಅಂತ್ಯದವರೆಗೆ ಉಪಯೋಗದಲ್ಲಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿದೆ. ಉತ್ಖನನಕಾರರಾದ ಅ.ಸುಂದರ ಅವರ ಪ್ರಕಾರ “ಇಷ್ಟು ಉದ್ದಗಲದ ಉತ್ತಮ ತರಗತಿಯ ಪ್ರಾಚೀನ ಬೀದಿ ಸಿಕ್ಕಿರುವುದು ದಕ್ಷಿಣ ಭಾರತದಲ್ಲೇ ಇದೇ ಪ್ರಪ್ರಥಮ.”[2]

ಮಧ್ಯಕಾಲೀನ ಯುಗಕ್ಕೆ ಸೇರಿದ ವಿಜಯನಗರ ಸಾಮ್ರಾಜ್ಯದಲ್ಲಿಯೂ ವ್ಯಾಪಕವಾದ ಸಾರಿಗೆ ವ್ಯವಸ್ಥೆಯು ಇತ್ತೆಂಬುದು ತಿಳಿದ ವಿಷಯವೇ ಸರಿ. ಸಾಹಿತ್ಯಿಕ ಮತ್ತು ಶಾಸನಾಧಾರಗಳು ವಿಜಯನಗರ ಸಾಮ್ರಾಜ್ಯದ ಸಾರಿಗೆ ವ್ಯವಸ್ಥೆಯನ್ನು ಕುರಿತ ಮಾಹಿತಿಗಳನ್ನು ಒದಗಿಸುತ್ತವೆ. ರಾಜಧಾನಿಯಾದ ವಿಜಯನಗರ ಪಟ್ಟಣ ಅಥವಾ ಹಂಪೆಯು ರಾಜ್ಯದ ಇತರ ಪ್ರದೇಶಗಳೊಂದಿಗೆ ರಸ್ತೆಯ ಸಂಪರ್ಕವನ್ನು ಹೊಂದಿತ್ತು. ಆದರೆ ಅವುಗಳನ್ನು ನಿಖರವಾಗಿ ಗುರುತಿಸುವಲ್ಲಿ ಹಲವಾರು ತೊಡಕುಗಳಿವೆ. ಅಂದಿನಿಂದ ಇಂದಿನವರೆಗೆ ಸಾಗಿ ಬಂದಿರುವ ನಗರೀಕರಣ ಪ್ರಕ್ರಿಯೆ, ವ್ಯವಸಯ, ಭೂಕಬಳಿಕೆ, ಪ್ರಾಕೃತಿಕ ವಿಕೋಪ ಮತ್ತು ಮುಂತಾದ ಹಲವಾರು ಕಾರಣಗಳಿಂದಾಗಿ ರಾಜಧಾನಿ ಮತ್ತು ಇತರೆ ಪ್ರದೇಶಗಳೊಂದಿಗಿನ ರಸ್ತೆಯ ಸಂಪರ್ಕ ಜಾಲವನ್ನು ಗುರುತಿಸಲು ಸಾಧ್ಯವಾಗಿಲ್ಲ.

ವಿಜಯನಗರ ಪಟ್ಟಣ ಅಥವಾ ಹಂಪೆಯಲ್ಲಿ ನಡೆಸಿದ ಉತ್ಖನನದಲ್ಲಿ ಪ್ರಾಚೀನ ರಸ್ತೆಗಳನ್ನು ಬೆಳಕಿಗೆ ತರಲಾಗಿದೆ. ಈ ರಸ್ತೆಯು ಬಹಳ ಸುಂದರವಾಗಿದ್ದು, ಹಲವಾರು ಭಾಗಗಳಿಗೆ ಉತ್ತಮವಾದ ಸಂಪರ್ಕ ಜಾಲವನ್ನು ಏರ್ಪಡಿಸಿತ್ತು.[3] ರಾಜಧಾನಿಯು ಒಂದು ವ್ಯವಸ್ಥಿತ ಕೋಟೆಯ ಒಳಭಾಗದಲ್ಲಿದ್ದು, ಅದಕ್ಕೆ ಅನೇಕ ಪ್ರದೇಶ ದ್ವಾರಗಳಿದ್ದವು ಹಾಗೂ ಅವುಗಳಿಗೆ ವಿವಿಧ ಹೆಸರುಗಳಿಂದ ಕರೆಯಲಾಗುತ್ತಿತ್ತು ಎಂಬುದು ಶಾಸನ ಮತ್ತು ಸಾಹಿತ್ಯ ಆಧಾರಗಳಿಂದ ತಿಳಿದುಬರುತ್ತದೆ. ಉದಾಹರಣೆಗೆ ಸಿಂಗಾರದ ಹೆಬ್ಬಾಗಿಲು, ಪೆನಗೊಂಡೆ ಹೆಬ್ಬಾಗಿಲು, ಅರೆಯಶಂಕರ ಹೆಬ್ಬಾಗಿಲು, ಬೇಟೆಗಾರರ ಹೆಬ್ಬಾಗಿಲು ಮುಂತಾದವುಗಳು. ಅವುಗಳ ಪಳೆಯುಳಿಕೆಗಳು ಹಂಪೆಯಲ್ಲಿ ಇಂದಿಗೂ ಕಾಣಸಿಗುತ್ತವೆ. ಹಂಪೆಯಲ್ಲಿ ನಡೆಸಲಾಗುತ್ತಿರುವ ಉತ್ಖನನಗಳಲ್ಲಿ ರಸ್ತೆಯ ಭಾಗಗಳು ಇಂದಿಗೂ ದೊರಕುತ್ತಲಿವೆ. ಉತ್ಖನನ ಕಾರ್ಯ ಸಂಪೂರ್ಣಗೊಂಡಾಗ ರಾಜಧಾನಿ ಪಟ್ಟಣದ ಸಮಗ್ರ ಸಂಪರ್ಕ ಜಾಲವನ್ನು ಅರಿಯಬಹುದು.

ಸಾರಿಗೆ ವ್ಯವಸ್ಥೆಯಲ್ಲಿ ರಸ್ತೆಯಷ್ಟೇ ಪ್ರಮುಖವಾದುದು ಜಲಸಾರಿಗೆ ವ್ಯವಸ್ಥೆ. ಹರಪ್ಪ ಸಂಸ್ಕೃತಿಯ ಕಾಲದಿಂದಲೂ ಜಲಸಾರಿಗೆ ವ್ಯವಸ್ಥೆ ಇತ್ತೆಂಬುದು ಉತ್ಖನನಗಳಿಂದ ದೃಢಪಟ್ಟಿದೆ. ಹರಪ್ಪ ಸಂಸ್ಕೃತಿಯ ನೆಲೆಗಳಲ್ಲಿ ಒಂದಾದ ಲೋಥಲ್‌ನಲ್ಲಿ (ಗುಜರಾತ್‌ರಾಜ್ಯದಲ್ಲಿದೆ) ಒಂದು ಬಂದರು ಉತ್ಖನನದಿಂದ ಬೆಳಕಿಗೆ ಬಂದಿದೆ.[4] ಇದರಿಂದ ಆ ಸಂಸ್ಕೃತಿಗೆ ಸೇರಿದವರು ಸಾಗರೋತ್ತರ ವಾಣಿಜ್ಯ ಚಟುವಟಿಕೆಗಳಲ್ಲಿ ಭಾಗಿಗಳಾಗುತ್ತಿದ್ದರು ಹಾಗೂ ಜಲಸಾರಿಗೆ ವ್ಯವಸ್ಥೆಯು ಸುವ್ಯವಸ್ಥಿತವಾಗಿ ನಡೆಯುತ್ತಿದ್ದವು. ಎಂದು ಗ್ರಹಿಸಬಹುದು. ದೊರಕಿರುವ ಅಲ್ಪ ಆಧಾರಗಳಿಂದ ಆಂತರಿಕ ಜಲಸಂಪರ್ಕವು ಸಹ ಅಂದು ಪ್ರಚಲಿತವಾಗಿದ್ದವು ಎಂದು ಊಹಿಸಿದರೆ ತಪ್ಪಾಗಲಾರದು. ಆದಿ ಇತಿಹಾಸಕಾಲದಲ್ಲಿ ಮತ್ತು ಚಾರಿತ್ರಿಕ ಕಾಲಗಳಲ್ಲಿಯೂ ನದಿಗಳು ಮತ್ತು ಕಡಲುಗಳಿದ್ದು ಪ್ರದೇಶಗಳಲ್ಲಿ ಜಲಸಾರಿಗೆಯು ಸುಗಮವಾಗಿ ಸಾಗುತ್ತಿದ್ದವು ಎಂಬುದು ಅಂದಿನ ಕಾಲದ ಶಾಸನ, ಶಿಲ್ಪ, ನಾಣ್ಯ ಮತ್ತು ಸಾಹಿತ್ಯಿಕ ಆಧಾರಗಳಿಂದ ತಿಳಿದುಬರುವ ಸಂಗತಿಯಾಗಿದೆ.[5] ಇನಾಮ್‌ಗಾವ್‌[6] ಮತ್ತು ಬೆಸನಗರಗಳಲ್ಲಿಯೂ ಕೃತಕ ಕಾಲುವೆಗಳನ್ನು ನಿರ್ಮಿಸಿ ಜಲಸಂಪರ್ಕ ಸಾಧಿಸಿದ್ದರು ಎಂದು ಉತ್ಖನಗಳಿಂದ ತಿಳಿದುಬಂದಿದೆ. ಇದರಂತೆಯೇ ಆದಿಇತಿಹಾಸ ಕಾಲದ ನೆಲೆಯಾದ ಕುಮ್ರಹಾರದಲ್ಲಿ (ಇಂದಿನ ಪಾಟ್ನ) ೧೩ ಮೀ ಅಗಲ ೩ ಮೀ. ಆಳದ ಕಾಲುವೆಯು, ಅಶೋಕನ ಕಾಲದ (ಮೌರ್ಯರ ಕಾಲ) ಕಂಬಗಳುಳ್ಳ ಮಂಟಪದ ಪಕ್ಕಕ್ಕೆ ಹಾಯ್ದುಹೋಗಿದೆ. ಇದನ್ನು ಗಂಗಾನದಿಗೆ ಜೋಡಿಸಲಾಗಿದೆ. ಸಭಾಮಂಟಪಕ್ಕೆ ಬೇಕಾದ ವಸ್ತುಗಳನ್ನು ಮತ್ತು ಚುನಾರ್ ಗಣಿಗಳಲ್ಲಿ ರೂಪಸಿದ ಕಲ್ಲಿನ ಬೃಹತ್‌ಕಂಬಗಳನ್ನು ಗಂಗಾ ನದಿಯಲ್ಲಿ ಸಾಗಿಸಿ ನಂತರ ಮೇಲೆ ಉಲ್ಲೇಖಿಸಿದ ಕಾಲುವೆಯ ಮೂಲಕ ಸಭಾಮಂಟಪಕ್ಕೆ ತರಲಾಗುತ್ತಿತ್ತು ಎಂದು ತರ್ಕಿಸಲಾಗಿದೆ.[7] ನಾಗಾರ್ಜುನಕೊಂಡದಲ್ಲಿಯೂ ಸಹ ಇಂತಹ ವ್ಯವಸ್ಥೆಯು ಇತ್ತೆಂಬುದು ಉತ್ಖನನದಿಂದ ತಿಳಿದುಬಂದಿದೆ. ಕ್ರಿ.ಶ.೩ ನೇ ಶತಮಾನಕ್ಕೆ ಸೇರಿದ ೮೦೦ಮೀ. ಉದ್ದ, ೧೫ ಮೀ. ಅಗಲ ಮತ್ತು ೩ ಮೀ. ಆಳದ ಕಾಲುವೆಯು ಉತ್ಖನನದಲ್ಲಿ ದೊರಕಿದೆ. ಅದರ ಎರಡೂ ಓ ಬದಿಗಳನ್ನು ಒರಟುಕಲ್ಲು ಮತ್ತು ಗಟ್ಟಿಸುಣ್ಣದ ಗಾರೆಯಿಂದ ಗಟ್ಟಿ ಮಾಡಲಾಗಿದೆ. ನೀರಿನ ರಭಸವನ್ನು ತಡೆಯಲು ಇಂತಹ ವ್ಯವಸ್ಥೆ ಮಾಡಲಾಗಿದೆ ಎಂದು ಉತ್ಖನನಕಾರರು ಅಭಿಪ್ರಾಯಪಡುತ್ತಾರೆ. ಅಲ್ಲಿರುವ ಬೆಟ್ಟದಿಂದ ಉರುಳುವ ಕಲ್ಲು ಮತ್ತು ಮಣ್ಣಿನಿಂದ ಆಗಬಹುದಾದ ಸವಕಳಿಯನ್ನು ತಡೆಯಲು ಇದೇ ಕಾಲುವೆಯ ಉತ್ತರ ಬದಿಯನ್ನು ಸಹ ಒರಟುಕಲ್ಲುಗಳನ್ನು ಬಳಸಿ ಗೋಡೆಯನ್ನು ಕಟ್ಟಲಾಗಿದೆ.[8] ವಿಜಯನಗರ ಪಟ್ಟಣದಲ್ಲಿ ಜಲಸಾರಿಗೆ ವ್ಯವಸ್ಥೆ ಇದ್ದ ಬಗ್ಗೆ ಸಾಹಿತ್ಯ, ಶಾಸನ ಮತ್ತು ಶಿಲ್ಪಗಳು ತಿಳಿಸುತ್ತವೆ. ವಿಜಯನಗರ ಪಟ್ಟಣವು ತುಂಗಾಭದ್ರ ನದಿಯ ಬಲದಂಡೆಯ ಮೇಲಿದೆ. ವಿಜಯನಗರ ಸಾಮ್ರಾಜ್ಯದ ಪ್ರಾರಂಭಿಕ ದಿನಗಳಲ್ಲಿ ತುಂಗಭದ್ರಾ ಎಡದಂಡೆಯಲ್ಲಿರುವ ಆನೆಗೊಂದಿಯು ರಾಜಧಾನಿಯಾಗಿತ್ತು. ಕಾಲಕ್ರಮದಲ್ಲಿ ರಾಜಧಾನಿಯನ್ನು ಅಲ್ಲಿಂದ ವಿಜಯನಗರ ಅಥವಾ ವಿದ್ಯಾನಗರ ಅಥವಾ ವಿಜಯನಗರ ಪಟ್ಟಣಕ್ಕೆ (ಇಂದಿನ ಹಕಂಪೆಗೆ) ಸ್ಥಳಾಂತರಿಸಲಾಯಿತು. ಜನಸಾಮಾನ್ಯರು ನದಿಯನ್ನು ದಾಟಲು ಅಂದು ಪುಟ್ಟ ದೋಣಿಗಳು ಮತ್ತು ಹರಗೋಲುಗಳನ್ನು ಬಳಸುತ್ತಿದ್ದರು. ಇದು ಅತ್ಯಂತ ಅಲ್ಪವೆಚ್ಚ ಮತ್ತು ಸಮಯದಲ್ಲಿ ನದಿ ದಾಟಬಹುದಾದದ ವ್ಯವಸ್ಥೆಯಾಗಿದೆ. ಇದನ್ನು ಬಳಸದಿದ್ದರೆ, ಅವರು ಬಳಸು ಮಾರ್ಗಗಳನ್ನು ಅನುಸರಿಸಿ ತೆರಳಬೇಕಾಗುತ್ತಿತ್ತು. ವಿಠ್ಠಲ ದೇವಾಲಯದ ಬಳಿ ಇಂದಿಗೂ ವಿಜಯನಗರ ಕಾಲದ ಸಂಪರ್ಕ ಸೇತುವೆಯ ಪಳೆಯುಳಿಕೆಗಳನ್ನು ಕಾಣಬಹುದು. ಆಂತರಿಕ ಸಂಪರ್ಕಕ್ಕಾಗಿ ಜನರು ನದಿಯನ್ನು ಅವಲಂಬಿಸುತ್ತಿದ್ದರು ಎಂಬುದು ಗಮನಾರ್ಹ. ಈ ವ್ಯವಸ್ಥೆಯು ಇಂದಿಗೂ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವುದು ಗಮನಿಸಬೇಕಾದ ಸಂಗತಿ.[9] ನದಿ ದಂಡೆಯ ಆಚೆಗಿರುವ ಊರುಗಳಾದ ಆನೆಗೊಂದಿ, ಹುಲಗಿ, ಗಂಗಾವತಿ ಮತ್ತು ಇತರೆ ಸ್ಥಳಗಳಿಗೆ ನದಿಯ ಮೂಲಕ ಸಾಗಿದರೆ ಸಮಯ ಹಾಗೂ ಹಣವನ್ನು ಉಳಿಸಬಹುದು.

ವಿದೇಶಿ ಪ್ರವಾಸಿಗರು ಅಂದಿನ ವಿಜಯನಗರಕ್ಕೆ ಭೇಟಿ ನಿಡಿ ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ. ವಿದೇಶಿ ಪ್ರವಾಸಿಗರು ಹರಗೋಲಿನ ಮೂಲಕ ತಳವಾರಘಟ್ಟದಿಂದ ಆನೆಗೊಂದಿಗೆ ತೆರಳುತ್ತಿದ್ದರು ಎಂಬ ವಿಷಯ ಒಂದು ಮೂಲದಲ್ಲಿ ದಾಖಲಾಗಿದೆ. ಇದರೊಂದಿಗೆ ನದಿ ದಂಡೆಯಲ್ಲಿದ್ದ ಸ್ಥಳಗಳಾದ ವಾಲಿಭಂಡಾರ, ಶಬರಿ ಆಶ್ರಮ ಹಾಗೂ ಕೇವಟ ಎಂದು ಕರೆಯಲಾದ ಗುಹೆ ಮುಂತಾದವುಗಳನ್ನು ಕುರಿತು ಉಲ್ಲೇಖಿಸಲಾಗಿದೆ.[10] ಡೋಮಿಂಗೊ ಪಯಾಸ್‌ಈ ರೀತಿಯಾಗಿ ತಿಳಿಸುತ್ತಾನೆ.[11] “ ಈ ನಗರದಲ್ಲಿ ರಾಜನ ಪರವಾಗಿ ಒಬ್ಬ ದಳವಾಯಿ ಇರುತ್ತಾನೆ. ಜನರು ಈ ಊರಿಗೆ ಬುಟ್ಟಿಗಳಂತೆ ದುಂಡಾಗಿರುವ ದೋಣಿಗಳಲ್ಲಿ ದಾಟಿ ಬರುತ್ತಾರೆ. ಅವುಗಳನ್ನು ಒಳಗಡೆ ಬೆತ್ತದಿಂದ ಮಾಡಿ ಹೊರಮೈಗೆ ಚರ್ಮ ಹೊದಿಸಿರುತ್ತಾರೆ. ಅವುಗಳು ೧೫-೨೦ ಜನರನ್ನು ಒಯ್ಯಬಲ್ಲವು ಮತ್ತು ಅಗತ್ಯಬಿದ್ದರೆ ಕುದುರೆ ಮತ್ತು ಎತ್ತಗಳು ಅವುಗಳಲ್ಲಿ ದಾಟುತ್ತವೆ. ಆದರೆ, ಬಹುಮಟ್ಟಿಗೆ ಈ ಪ್ರಾಣಿಗಳು ಈಜಿ ದಾಟುತ್ತವೆ, ಜನರು ಅವುಗಳನ್ನು ಒಂದು ಮೋಟು ಹುಟ್ಟಿನಿಂದ ಹುಟ್ಟು ಹಾಕುತ್ತಾರೆ ಮತ್ತು ಅವು ಇತರ ದೋಣಿಗಳಂತೆ ನೇರವಾಗಿ ಹೋಗಲಾರವಾದುದರಿಂದ ಈ ದೋಣಿಗಳು ಯಾವಾಗಲೂ ದುಂಡಗೆ ತಿರುಗುತ್ತವೆ. ರಾಜ್ಯದಲ್ಲಿ ನದಿಗಳಿರುವೆಡೆಗಳೆಲ್ಲ ಇವುಗಳನ್ನು ಬಿಟ್ಟರೆ ಬೇರೆ ದೋಣಿಗಳಿಲ್ಲ.” ಮತ್ತೊಬ್ಬ ವಿದೇಶಿ ಪ್ರವಾಸಿಗ ಬಾರ್ಬೋಸಾನು ವ್ಯಾಪಾರ ಮತ್ತು ವಾಣಿಜ್ಯವನ್ನು ಕುರಿತು ವಿವರಿಸುವಾಗ ದಬುಲ್‌ನಿಂದ ದಕ್ಷಿಣಕ್ಕೆ ಮುಂದೆ ಹೋದರೆ ಬೆಕಲ ನದಿಯ ಅಕ್ಕ ಪಕ್ಕದ ಸುಂದರ ತೋಟಗಳಿಂದ ವೀಳೆದೆಲೆ ಕೊಯ್ದು ಸಣ್ಣ ದೋಣಿಗಳ ಮೂಲಕ ನಾನಾ ಸ್ಥಳಗಳಿಗೆ ಸಾಗಿಸುತ್ತಿದ್ದರು ಎಂದು ದಾಖಲಿಸಿದ್ದಾನೆ. [12]

ನದಿಯಲ್ಲಿ ಪ್ರವಾಹ ಬಂದಾಗ ಮತ್ತು ನೀರು ಅತಿ ಕಡಿಮೆ ಇದ್ದಾಗ ಅಶ್ವದಳ ಮತ್ತು ಆನೆಗಳ ಮೂಲಕ ಸವಾರಿ ಮಾಡಿ ನದಿ ದಾಟುತ್ತಿದ್ದರು ಎಂದು ಫೆರಿಸ್ತಾ ತಿಳಿಸಿದ್ದಾನೆ. ವಿಜಯನಗರದ ಅರಸರ ಕಾಲದಲ್ಲಿ ಜರುಗುತ್ತಿದ್ದ ಯುದ್ಧಗಳಲ್ಲಿಯೂ ನದಿಯನ್ನು ದಾಟಲು ದೋಣಿ ಮತ್ತು ಹರಗೋಲುಗಳನ್ನು ಬಳಸುತ್ತಿದ್ದರು ಎಂದು ಪ್ರವಾಸಿ ಕಥಾನಕಗಳಲ್ಲಿ ದಾಖಲಾಗಿವೆ. ಅದರಂತೆ ಸುಲ್ತಾನನು ನದಿ ದಾಟಲು ಸುದೀರ್ಘವಾಗಿ ಆಲೋಚಿಸಿ ತನ್ನ ಅಧಿಕಾರಿಗಳ ಸಹಾಯದದಿಂದ ಅನುಕೂಲವಾದ ನೂರಾರು ಅಡ್ಡಪಟ್ಟಿಗಳನ್ನು ಸಿದ್ಧಗೊಳಿಸುತ್ತಾನೆ. ಇವುಗಳ ಚರ್ಮದಿಂದ ಆವೃತಗೊಂಡಿವೆಯೆಂದು ವಿವರಿಸಲಾಗಿದೆ. ಬುಟ್ಟಿಯಾಕಾರದ ಹರಗೋಲು ಅಂದು ಮತ್ತು ಇಂದು ಸಹ ಬಳಕೆಯಲ್ಲಿವೆ. ಈ ಹರಗೋಲುಗಳು ಬಿದಿರಿನ ಸೀಳಿನಿಂದ ಒಂದರೊಳಗೆ ಇನ್ನೊಂದು ಬರುವಂತೆ ಹೆಣೆದು ಹೊರಮೈಯನ್ನು ಚರ್ಮದಿಂದ ಪೂರ್ತಿಯಾಗಿ ಹೊದಿಸಲಾಗುತ್ತದೆ. ಬ್ರಿಟ್‌ಷ್‌ಸೈನ್ಯದ ಒಂದು ಪಡೆ ೧೮೧೨ರಲ್ಲಿ ಈ ಹರಗೋಲುಗಳಲ್ಲಿ ಫಿರಂಗಿಗಳನ್ನು ವಾಹನಗಳಿಂದ ಇಳಿಸದೆ ತುಂಗಭದ್ರಾ ನದಿ ದಾಟಿಸಿತಂತೆ ಎಂದು ಕರ್ನಲ್‌ಬ್ರಿಗ್ಜ್‌ರವರು ದಾಖಲಿಸಿರುವುದನ್ನು ರಾಬರ್ಟ್‌ಸಿವಲ್‌ರವರು ಪ್ರಸ್ತಾಪಿಸಿರುತ್ತಾರೆ.[13] ವಿಜಯನಗರದ ದೇವರಾಯನ ಮೇಲೆ ದಾಳಿ ಮಾಡಿದ ಗುಲ್ಬರ್ಗದ ಫಿರೋಜಷಾ ಸುಲ್ತಾನನ ಸುಮಾರು ೪೦೦೦ ಸೈನಿಕರು ಅದಕ್ಕಾಗಿಯೇ ಸಿದ್ಧಪಡಿಸಲಾಗಿದ್ದ ದೋಣಿ ಮತ್ತು ತೆಪ್ಪಗಳಲ್ಲಿ ನದಿಯನ್ನು ದಾಟಿದ್ದರೆಂದು ಹಾಗೂ ಯುದ್ಧದ ಸಂದರ್ಭದಲ್ಲಿ ಬಳಸಲಾಗುತ್ತಿದ್ದ ದೋಣಿ, ತೆಪ್ಪ ಮತ್ತು ಅಂಬಿಗರ ಮಹತ್ವದ ಪಾತ್ರವನ್ನು ಕುರಿತು ವಿದೇಶಿ ಯಾತ್ರಿಕನು ವಿವರಿಸಿದ್ದಾನೆ.[14]

ಹಂಪಿ ಹೊಳೆಯ (ತುಂಗಭದ್ರಾ ನದಿ) ಉತ್ತರಕ್ಕೆ, ಆಚೆ ದಡದಲ್ಲಿ ಆನೆಗೊಂದಿಯ ಪ್ರವೇಶ ದ್ವಾರವಿದೆ. ಅಂಬಿಗರ ಎರಡು ವೀರಗಲ್ಲುಗಳು ಕೋಟೆಯ ಪ್ರವೇಶ ದ್ವಾರದಲ್ಲಿ ಪಶ್ಚಿಮಾಭಿಮುಖವಾಗಿದೆ. ಇದರಲ್ಲಿ ಇಬ್ಬರು ವೀರರು ತಮ್ಮ ಹುಟ್ಟುಗಳನ್ನು ಕೈಯಲ್ಲಿ ಹಿಡಿದಿರುವಂತೆ ಶಿಲ್ಪಗಳನ್ನು ಬಿಡಲಾಗಿದೆ. ಇವುಗಳಲ್ಲಿ ಶಾಸನಗಳಿಲ್ಲ. ಶಿಲ್ಪದಲ್ಲಿ ತೋರಲಾಗಿರುವ ವ್ಯಕ್ತಿಗಳನ್ನು ಜನರನ್ನು ಒಂದು ದಡದಿಂದ ಮತ್ತೊಂದು ದಡಕ್ಕೆ ಸಾಗಿಸುವಲ್ಲಿ ತಮ್ಮ ಸಾಹಸವನ್ನು ತೋರಿ ನೀರಿನಲ್ಲಿ ಮಡಿದಿರಬಹುದಾದ ವೀರರು ಎಂದು ಶೇಷಶಾಸ್ತ್ರೀಯವರು ಅಭಿಪ್ರಾಯಪಟ್ಟಿರುತ್ತಾರೆ.[15] ಇಂದಿಗೂ ಅಂಬಿಗರು ವಿಶೇಷ ಸಂದರ್ಭಗಳಲ್ಲಿ ಈ ವೀರಗಲ್ಲುಗಳನ್ನು ಆರಾಧಿಸುತ್ತಾರೆ ಮತ್ತು ಅವುಗಳನ್ನು ವೀರಗಾರರು ಎಂಬುದಾಗಿ ಕರೆಯುತ್ತಾರೆ.[16]

ವಿಜಯನಗರದ ಅರಸರುಗಳು ಗಮನಾರ್ಹವಾದ ಕೆಲಸಗಳನ್ನು ಮಾಡಿ ಜಲಸಾರಿಗೆ ವ್ಯವಸ್ಥೆಯನ್ನು ರೂಪಿಸಿದ್ದರೆಂಬುದು ಶಾಸನಗಳಿಂದ ತಿಳಿದುಬರುತ್ತದೆ. ರಾಜ್ಯದ ಇತರೆಡೆಗಳಲ್ಲಿಯೂ ಇಂತಹ ವ್ಯವಸ್ಥೆಯನ್ನು ಮಾಡಿದ್ದರು.[17] ಹಂಪೆಯ ಮತ್ತು ಅದರ ಸುತ್ತಲಿನ ಪರಿಸರದ ಕೆಲವು ಶಾಸನಗಳು ನೇರವಾಗಿ ಇಂತಹ ವ್ಯವಸ್ಥೆಯನ್ನು ಕುರಿತು ಉಲ್ಲೇಖಿಸುವುದು ಗಮನಾರ್ಹ. ಕ್ರಿ.ಶ. ೧೫೧೭ರ ಒಂದು ಶಾಸನವು ಶ್ರೀಕೃಷ್ಣದೇವರಾಯನು ತನ್ನ ಪಟ್ಟದ ಕಾಲದಲ್ಲಿ ವಿಠ್ಠಲೇಶ್ವರ ದೇವರ ಅಮೃತಪಡಿ ನೈವೇದ್ಯಕ್ಕೆ ಅಂಗರಂಗಭೋಗ ವೈಭವ, ಮಾಸ ಪೂಜೆ, ಮಾಸೋತ್ಸವ, ನಿತ್ಯನೈಮಿತ್ತಿಕ, ದೀಪಾರಾಧನೆ ಪಂಚಪರ್ವ ಮುಂತಾದ ಕಾಲಗಳಲ್ಲಿ ಮಾಡುವ ಮಹಾಪೂಜೆ, ನೈವೇದ್ಯಕ್ಕಾಗಿ, ಮಳಲಕೋಟೆಯ ಗೋರಿಯ ಕೆಳಗಣ ಸಿಂಘಾರಪುರ, ಹುಲಿಗೆಯ ಮಾಗಣೆಯ ಹರಿಯಲಾಪುರವನ್ನು ದಾನವಾಗಿ ನೀಡುತ್ತಾನೆ. ಮುಂದೆ ಬಾವ ಸಂವತ್ಸರದಲ್ಲಿ ತಿಪ್ಪರಾಜನ ತೋಟವನ್ನು, ಪ್ರಮಾದಿ ಸಂವತ್ಸರದಲ್ಲಿ ರಾಯದುರ್ಗದ ಸೀಮೆಯಲ್ಲಿನ ದೇವಸಮುದ್ರ, ಉರುತಹಾಳ, ಮುರುವಡಿ, ದಡಗೂರು, ಪೋಕುಕೆ, ಜಂಬಲಮಡಿಕೆ, ದಾಕವಾಡಿ ಮತ್ತು ಬಡಲಾಪುರವನ್ನು ಸಮರ್ಪಿಸಿದ. ಅದೇ ವರ್ಷ ಪುಶ್ಯ ಮಾಸದಲ್ಲಿ ಹೊವೂರ ಮಾಗಣೆಯ ವಿರುಪಾಪುರ, ಜೆಂತಗಲ ಮಾಗಣೆಯ ಮುಷ್ಟೂರು ಮತ್ತು ಕುಂಟಜಿಯನ್ನು ದಾನ ನೀಡಿದ. ವ್ಯಯ ಸಂವತ್ಸರದ ಶು. ಆಷಾಢ ೧೫ರಲ್ಲಿ ಹೊಳೆಯಲ್ಲಿ ಎಂಟು ಜಾಗಗಳಿಂದ ಹರಿಗೋಲುಗಳನ್ನು ಬಿಟ್ಟನೆಂದು ಶಾಸನವು ತಿಳಿಸುತ್ತದೆ. ಅವುಗಳ ವಿವರ ಇಂತಿದೆ. ವಿಠಲದ ಬಳಿ ಸಂಕಲಾಪುರ ಹೊಳೆ ಮತ್ತು ಕಾಳಗಟಿಯ ಹೊಳೆ, ಹುಲಿಗೆಯ ಹೊಳೆ, ಹೊಂನ್ನೂರ ಹೊಳೆ, ಹಂಪೆಯ ಹೊಳೆ ಮತ್ತು ಕೊರಗಲ ಹೊಳೆಗಳು ಪಶ್ಚಿಮದ ಹೊಳೆಗಳು. ಮುಷ್ಟೂರು ಮತ್ತು ಕಂಪಿಲೆಯ ಹೊಳೆಗಳು ಪೂರ್ವದ ಹೊಳೆಗಳು. ತುಂಗಭದ್ರಾ ಹೊಳೆಯಲ್ಲಿ ಉಲ್ಲೇಖಿತ ಸ್ಥಳಗಳಿಂದ ಹರಿಗೋಲುಗಳನ್ನು ಬಿಡುತ್ತಿದ್ದರು. ಇದರೊಂದಿಗೆ ಸುಂಕಗಳಾದ ಸುವರ್ಣಾದಾಯ, ಸಕಲ ಭತ್ತಾದಾಯ, ಸ್ಥಳ ಸುಂಕ, ತಳವಾರಿಕೆ, ಸಾಮ್ಯ, ಹಾರಿಕಾ, ಜೋಡಿಬಿರಾಡ ಮತ್ತು ಕಾಲುವೆಯ ನೀರ ಬಿರಾಡಗಳನ್ನು ದೇವಾಲಯಕ್ಕೆ ದಾನ ನೀಡುತ್ತಾನೆ. ಹೊಳೆಗಳಲ್ಲಿ ಆಯ್ದ ಪ್ರದೇಶಗಳಿಂದ ಮಾತ್ರವೇ ಹರಿಗೋಲುಗಳನ್ನು ಬಿಡುತ್ತಿದ್ದರು ಎಂದು ಹಾಗೂ ಅವುಗಳಿರುವ ಪ್ರದೇಶ ನಿರ್ದೇಶನಳಾದ ಪಡುವಣ ಮತ್ತು ಮೂಡಣ ಹೊಳೆಗಳೆಂದು ಶಾಸನದಲ್ಲಿ ಉಲ್ಲೇಖಿಸಿರುವುದು ಕುತೂಹಲಕಾರಿ ಸಂಗತಿಯಾಗಿದೆ.[18] ಈ ಜಾಗಗಳಿಂದ ಹರಿಗೋಲುಗಳನ್ನು ಬಿಡಲು ಅನುಮತಿಯನ್ನು ನೀಡಿ ಬಹುಶಃ ಹರಿಗೋಲು ನಡೆಸುವವರಿಂದ ಸುಂಕವನ್ನು ಸಂಗ್ರಹಿಸುತ್ತಿದ್ದರು ಎಂದು ಅಭಿಪ್ರಾಯಪಡಬಹುದು. ದೇವಾಲಯಕ್ಕೆ ದಾನ ನೀಡುವ ಸಂದರ್ಭದಲ್ಲಿ ಹರಿಗೋಲುಗಳನ್ನು ಬಿಡಲು ಅನುವು ಮಾಡಿಕೊಟ್ಟಿರುವುದು ರಾಜಧಾನಿಗೆ ಹಾಗೂ ಅಲ್ಲಿದ್ದ ದೇವಾಲಯಗಳ ಆರ್ಥಿಕ, ಧಾರ್ಮಿಕ ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ದೃಢಪಡಿಸುವ ಸಲುವಾಗಿ ಎಂದು ಪ್ರಸ್ತುತ ಶಾಸನದಿಂದ ತಿಳಿಯಬಹುದು.

ಈ ಶಾಸನವು ಹರಿಗೋಲುಗಳನ್ನು ಬಿಡುತ್ತಿದ್ದ ಸ್ಥಳಗಳನ್ನು ತಿಳಿಸಿದರೆ, ಅವನ ಕಾಲಕ್ಕೆ ಸೇರಿದ ಮತ್ತೊಂದು ಶಾಸನವು ಹರಿಗೋಲುಗಳ ವೈವಿಧ್ಯತೆಯತ್ತ ಬೆಳಕು ಚೆಲ್ಲುತ್ತದೆ.[19] ಕೃಷ್ಣದೇವರಾಯನು ಉದಯಗಿರಿಯಿಂದ ತಂದ ಬಾಲಕೃಷ್ಣ ದೇವರನ್ನು ಹಂಪೆಯಲ್ಲಿ ಪ್ರತಿಷ್ಠಾಪಿಸಿ ದೇವರ ನಿತ್ಯ ಪೂಜೆಗೆ, ಅಂಗರಂಗಭೋಗ, ಪಂಚಪರ್ವಗಳಿಗಾಗಿ ಅನೇಕ ದಾನ, ನವರತ್ನ ಖಚಿತ ಆಭರಣಗಳು, ಗ್ರಾಮ, ಭೂಮಿ, ಗದ್ದೆ, ಸುಂಕ, ಮೊದಲಾದವುಗಳನ್ನು ನೀಡುತ್ತಾನೆ. ಶಾಸನವು ಜೋಡಿ, ಬಿರಾಡ, ಸಾಮ್ಯ, ನಾಡ ತಳವಾರಿಕೆ, ಸುಂಕ ಕರಣಿಕರ ಮಾನ್ಯದ ಗದ್ದೆಗಳು, ಸುವರ್ಣಾದಾಯ, ಸಕಲ ಭತ್ತಾದಾಯ, ಹಲವು ಕುರ್ವಗಳ ಆದಾಯ ಎಂಬ ತೆರಿಗೆಗಳೊಂದಿಗೆ ಕಟಿಗೆ ಪಣಬಿನ ಹರುಗೋಲವರು, ಹರಿಗೋಲು ನಡೆಸಲು ತೆರಿಗೆಗಳನ್ನು ರಾಜ್ಯಕ್ಕೆ ನೀಡುತ್ತಿದ್ದರು ಎಂದು ತಿಳಿದುಬರುತ್ತದೆ. ಜೊತೆಗೆ ಕಟಿಗೆ ಪಣಬಿನ ಹರಗೋಲು ಎಂದು ತಿಳಿಸುವುದರಿಂದ ಹರಗೋಲುಗಳು, ಕನಿಷ್ಟ ಎರಡು ಪ್ರಕಾರಗಳಿದ್ದವು ಎಂದು ತರ್ಕಿಸಬಹುದು. ಮೊದಲನೆಯದಾಗಿ ಜನಸಾಮಾನ್ಯರು ಓಡಾಡಲು ಅನುಕೂಲವಾಗುವಂತಹದಾದರೆ ಮತ್ತೊಂದು, ಬಗೆಯದು ಸರಕು ಸಾಗಾಣೆ ಮಾಡಲು ಬಳಸುತ್ತಿದ್ದ ಹರಗೋಲುಗಳು. ಪ್ರಸ್ತುತ ಶಾಸನವು ‘ಹೊಳೆಯಾಛೆ ಅನುಪು ಕಟಿಗೆ ಪಣಬಿನ ಹರುಗೋಲುವರು ಕೊಡುವ ತೆರಿಗೆ’ ಎಂದು ಉಲ್ಲೇಖಿಸುತ್ತದೆ. ಹೊಳೆಯಾಛೆ ಅನುಪು ಎಂಬ ಪದದ ಅರ್ಥವು ಸ್ಪಷ್ಟವಾಗುವುದಿಲ್ಲ. ಕಟ್ಟಿಗೆಗಳ ಹೇರು ಪಣಬುಗಳನ್ನು ನಿಯಮಿತವಾಗಿ ಸಾಗಾಣೆ ಮಾಡುತ್ತಿದ್ದರು ಎಂದು ಗ್ರಹಿಸಬಹುದು. ಈ ಶಾಸನವನ್ನು ಕ್ರಿ.ಶ.೧೫೧೭ರಿಂದ ಪ್ರಾರಂಭಿಸಿ ೧೫೧೯, ೧೫೨೨ ಮತ್ತು ೧೫೨೫ರವೆರಗೆ ಮುಂದುವರಿಸಲಾಗಿದೆ.

ಕ್ರಿ.ಶ. ೧೫೩೧ರ ಶಾಸನವು ಅಚ್ಯುತರಾಯನು ವಿಠಲ ದೇವರ ನಿತ್ಯಕಟ್ಟೆಳೆಗೆ ಗ್ರಾಮವೊಂದನ್ನು ಸಮರ್ಪಿಸಿದಂತೆ ತಿಳಿಸುತ್ತದೆ.[20] ಗ್ರಾಮದ ಹೆಸರು ತಿಳಿಸಿಲ್ಲ. ಇದರೊಂದಿಗೆ ಆನೆಗೊಂದಿಯ ಅಂಬಿಗ ಬೋಉಗಣ್ಣನು ವಿಠಲಾಹುತಿಗೆ, ಅಂದರೆ ವಿಠಲದೇವರ ನೈವೇದ್ಯಕ್ಕೆ, ಹೊಂನೂರು, ಕೊಳೆಗಟೆ, ಕಂಪಿಲಾಪುರಗಳ ಬಳಿಯ ಹರಿಗೋಲುಗಳ ಸಾಮ್ಯವನ್ನು ಆತನು ವಿಠಲ ದೇವರಿಗೆ ನೀಡುತ್ತಾನೆ. ಇದು ಅಂದಿನ ಕಾಲದ ಅಂಬಿಗರಿಗೆ ಇದ್ದ ಸ್ವಾತಂತ್ರ್ಯವನ್ನು ತಿಳಿಸುತ್ತದೆ. ದೇವರ ಸೇವೆಯಲ್ಲಿ ಅವರೂ ಸಹ ಪಾಲ್ಗೊಳ್ಳುತ್ತಿದ್ದರು ಎಂದು ತಿಳಿಯಬಹುದು.

ಸದಾಶಿವರಾಯನ ಕಾಲಕ್ಕೆ ಸೇರಿದ ಕ್ರಿ.ಶ.೧೫೫೬ರ ಒಂದು ಶಾಸನವು ಹರುಗೋಲುಗಳ ಗಾತ್ರದ ಬಗೆಗೆ ಪರಿಚಯಿಸುತ್ತದೆ.[21] ಈ ಶಾಸನವು ತಳವಾರಘಟ್ಟದ ಬಂಡೆಯ ಮೇಲಿದೆ. ಸದಾಶಿವರಾಯನ ಕಾಲದಲ್ಲಿ ಆನೆಗೊಂದಿ ಹೊಳೆಯ ೧೪ ಬೋವರು ೩೦೦ ಮಂದಿ ಅಂಬಿಗರು ಅಂಬಲಿಯ ಮಹಲಿಂಗವೊಡೆಯರಿಗೆ ತಾವು ಹೊಳೆಯಲ್ಲಿ ಬಿಡುವ ಚಿಕ್ಕ ಹರಗೋಲು, ದೊಡ್ಡ ಹರುಗೋಲುಗಳ ಮೇಲಿನ ಹಣವನ್ನು ನೀಡುವುದಾಗಿ ತಿಳಿಸುತ್ತದೆ. ಶಾಸನವು ‘ಕವದರ ಹರಗೋಲುವೊಂದಕ್ಕೆ ಒಂದು ತಾರ, (ಹಣ) ದೊಡ್ಡ ರೊಕವದು, ಸು(ಂಕ) ಎರಡು ಕಾಸು, ಚಿಕ್ಕಹರಗೋಲುವೊಂದಕ್ಕೆ ಕಾಸು, ಒಂದು’ ಎಂದು ಉಲ್ಲೇಖಿಸುತ್ತದೆ. ಹರಿಗೋಲಿನ ಗಾತ್ರವನ್ನು ಆಧರಿಸಿ ಅವುಗಳ ಮೇಲೆ ತೆರಿಗೆಗಳನ್ನು ವಿಧಿಸಲಾಗುತ್ತಿತ್ತು. ದೊಡ್ಡ ಹರಿಗೋಲಿಗೆ ಒಂದು ತಾರವಾದರೆ ಚಿಕ್ಕದಕ್ಕೆ ಒಂದು ಕಾಸು ಎಂದು ತಿಳಿಯಬಹುದು. ತಾರೆಯ (ಹಣದ) ಅಂದಿನ ಸಮಕಾಲೀನ ಮೌಲ್ಯವನ್ನು ಅರಿಯುವುದು ಪ್ರಸ್ತುತ ಕಷ್ಟ. ಆನೆಗೊಂದಿಯ ಅಂಬಿಗರಿಗೆ ತಿಮರಾಜೆಯನ ಕಾಲದಲ್ಲಿ ರಾಮಾಪುರದಲ್ಲಿ ಒಂದು ಖಂಡುಗ ಗದ್ದೆಯನ್ನು ನೀಡಿದ್ದು ಅದನ್ನು ಶ್ರೀರಂಗರಾಜನು ಮುಂದುವರಿಸಿದಂತೆ ಇದೇ ಜಾಗದಲ್ಲಿರುವ ಮತ್ತೊಂದು ಶಾಸನವು ತಿಳಿಸುತ್ತದೆ.[22]

ಆನೆಗೊಂದಿ ಅಂಬಿಗರ ದೊಡ್ಡ ತಾಯಣ್ಣ ಬಳಿ ಸದಾಶಿವರಾಯನ ಕಾಲದ ಒಂದು ತಾಮ್ರಪಟ ಶಾಸನವಿದೆ. ಅದರಲ್ಲಿರುವ ತೇದಿಯು ಕ್ರಿ.ಶ.೧೪೭೮ (ಕ್ರಿ.ಶ.೧೫೫೬) ಎಂದಿದೆ.[23] ಆದರೆ ಭಾಷೆ ಮತ್ತು ಲಿಪಿಯ ಆಧಾರಗಳ ಮೇಲೆ ಅದನ್ನು ೧೭-೧೮ನೆಯ ಶತಮಾನದ್ದೆಂದು ಹೇಳಬಹುದು. ಆ ಶಾಸನದಂತೆ ಸದಾಶಿವರಾಯನು ತುಂಗಭದ್ರಾ ನದಿಯ ಆನೆಗೊಂದಿ ತಳವಾರ ಕಟ್ಟೆಯಲ್ಲಿ ೧೦ ಹರಗೋಲು ೧೦ ಅಂಬಿಗರು ನಿರಂತರವಾಗಿ ಸಹಕಾರದ ಸೇವೆಯಲ್ಲಿ ಕಾರ್ಯನಿರತರಾಗಿದ್ದು, ರಾಜನಿಗೆ ವಿಜ್ಞಾಪನೆ ಮಾಡಿಕೊಂಡರು. ಅದರಂತೆ ರಾಜನು ಇವರಿಗೆ ಆನೆಗೊಂದಿಯಲ್ಲಿ ೧೫ ಕೊಳಗ ನೀರು ಭೂಮಿ, ತಳವಾರ ಕೋಟೆಯಲ್ಲಿ ೧೫ ಕೊಳಗ ಒಟ್ಟು ೩೦ ಕೊಳಗ ನೀರು ಭೂಮಿ, ತಳವಾರ ಕೋಟೆಯಲ್ಲಿ ೧೫ ಕೊಳಗ ಒಟ್ಟು ೩೦ ಕೊಳಗ ನೀರು ಭೂಮಿಯನ್ನು ನಾಗಜೋಗಿ ಮತ್ತು ಬಸವಜೋಗಿಗೆ ನೀಡಿ ಅದರ ಆದಾಯವನ್ನು ಅವರು ಅನುಭವಿಸುತ್ತಾ ಬ್ರಾಹ್ಮಣ, ಸಾಧುಸಂತರ ಸೇವೆ ಮಾಡಿಕೊಂಡಿರಬೇಕೆಂದು ಷರತ್ತು ವಿಧಿಸುತ್ತಾನೆ. ಅಂಬಿಗರಿಗೆ ಕಟೆಮಣೆ ಅಧಿಕಾರವಿದ್ದರೂ ಕುಲಾಚಾರದ ನ್ಯಾಯ ಬಹಷಕಾರ ಸುದ್ಧಪತ್ರ ಕೊಡಲಿಕ್ಕೆ ಅಧಿಕಾರ ಇದೆ ಎಂದು ಶಾಸನ ತಿಳಿಸುತ್ತದೆ. ಇವುಗಳ ಆಧಾರದ ಮೇಲೆ ಈ ಶಾಸನವು ಇತ್ತೀಚಿನದು, ಅಂದರೆ ೧೭-೧೮ನೆಯ ಶತಮಾನದ್ದೆಂದು ಹೇಳಬಹುದು. ಈ ಭಾಗದಲ್ಲಿ ಸುಮಾರು ೧೦ ಹರಿಗೋಲುಗಳು ಅಥವಾ ಅವುಗಳಿಗಿಂತ ಅಧಿಕ ಸಂಖ್ಯೆಯಲ್ಲಿ ಹರಗೋಲುಗಳು ಜಲಸಾರಿಗೆಯಲ್ಲಿ ತೊಡಗಿದ್ದವು ಎಂದು ತರ್ಕಿಸಬಹುದು.

ಇನ್ನೊಂದು ಹಿತ್ತಾಳೆ ಶಾಸನವು ಅದೇ ದೊಡ್ಡ ತಾಯಣ್ಣನ ವಶದಲ್ಲಿದ್ದು, ಅದು ಆನೆಗೊಂದಿ ಸಂಸ್ಥಾನದವರ ಕಾಲಕ್ಕೆ ಸೇರಿದ್ದಾಗಿದೆ.[24] ಶಕ ೧೬೫೦ರ (ಕ್ರಿ.ಶ.೧೭೨೧) ಶಾಸನವು ತೆಲುಗು ಲಿಪಿ ಮತ್ತು ಭಾಷೆಯಲ್ಲಿದೆ. ಆನೆಗೊಂದಿ ಸಂಸ್ಥಾನದವರು ಅಂಬಿಗರ ಬರಮ ಮತ್ತು ಬಸವ ಎಂಬುವವರಿಗೆ ನೀಡಿದ ಸನ್ನದು. ಇವರು ಸಂಸ್ಥಾನದ ಕಾರ್ಯವನ್ನು ದಕ್ಷತೆಯಿಂದ ನಿರ್ವಹಿಸುತ್ತಿರುವುದರಿಂದ ಅವುಗಳಲ್ಲಿ ಎರಡು ಹುಟ್ಟುಗಳನ್ನು ಇನಾಂ ಆಗಿ ನೀಡಿರುತ್ತಾರೆ. ಇದರೊಂದಿಗೆ ಅವರಿಗೆ ತುಂಗಭದ್ರಾ ನದಿಯಲ್ಲಿ ಐದು ಹುಟ್ಟುಗಳಾಗುತ್ತವೆ. ಹಾಗೆಯೇ ಇವರು ಕಟೆ ಮನೆಯರಾಗಿದ್ದು ಅವರ ಜಾತಿಯ ರೀತಿ ರಿವಾಜುಗಳನ್ನು ನಿಯಂತ್ರಿಸುವವರೂ ಆಗಿರುತ್ತಾರೆಂದು ಶಾಸನವು ತಿಳಿಸುತ್ತದೆ. ಈ ಶಾಸನವು ಮೇಲೆ ಉಲ್ಲೇಖಿಸಿದ ಶಾಸನದಂತೆಯೇ ಇರುವುದು ಗಮನಾರ್ಹ.

ಅಂಬಿಗರು ರಾಜ್ಯದ ಆಡಳಿತಕ್ಕೆ ಸೇರಿದ್ದು ಅವರ ಸೇವೆಗೆ ಸೂಕ್ತವಾಗಿ ದಾನ ಅಥವಾ ಆದಾಯವನ್ನು ಪಡೆಯುತ್ತಿದ್ದರು ಎಂದು ತಿಳಿದುಬರುತ್ತದೆ. ಇದರೊಂದಿಗೆ ಅವರದೇ ಆದ ಕೆಲವು ಸಂಪ್ರದಾಯಗಳು, ರೀತಿ ರಿವಾಜುಗಳು ಸಹ ಪ್ರಚಲಿತದಲ್ಲಿದ್ದವು ಎಂಬ ಅಂಶವು ಸ್ಪಷ್ಟವಾಗುತ್ತದೆ. ಇದರೊಂದಿಗೆ ಈ ಕಾಯಕವು ವಂಶಪಾರಂಪರ್ಯವಾಗಿ ಸಾಗಿಬರುತ್ತಿದ್ದವು ಎನ್ನುವುದರಲ್ಲಿ ಅನುಮಾನಗಳಿಲ್ಲ.

ಕೃತಜ್ಞತೆ: ಮಾಹಿತಿ ಒದಗಿಸಿದ ಡಾ.ಟಿ.ಎಂ.ಮಂಜುನಾಥಯ್ಯ, ಡಾ.ಕಲವೀರ ಮನ್ವಾಚಾರ್ ಮತ್ತು ಛಾಯಾಚಿತ್ರ ಒದಗಿಸಿದ ಶ್ರೀ ಗಣೇಶ್‌ಯಾಜಿ ಅವರಿಗೆ ಕೃತಜ್ಞತೆಗಳು.

ಆಕರ
ವಿಜಯನಗರ ಅಧ್ಯಯನ, ಸಂ.೯, ೨೦೦೪, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು, ಪು.೨೯೧-೩೦೨

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] ಎನ್‌ಸೈಕ್ಲೋಪಿಡಿಯಾ ಆಫ್‌ಇಂಡಿಯನ್‌ಆರ್ಕಿಯಾಲಜಿ (ಇನ್ನು ಮುಂದೆ ಇ.ಐ.ಎ.ಸಂ.೧, ಪು.೮೧.)

[2] ಸುಂದರ ಅ. “ವಡಗಾಂವ್‌ಮಾಧವಪುರದಲ್ಲಿಯ ೨೦೦೦ ವರ್ಷ ಹಿಂದಿನ ವ್ಯಾಪಾರ ಕೇಂದ್ರದ ಮಹಾನಗರ” ವೇಣುನಾದ, ವಿಶೇಷ ಸಂಪುಟ, ಅಖಿಲ ಭಾರತ ೫೨ನೆಯ ಕನ್ನಡ ಸಾಹಿತ್ಯ ಸಮ್ಮೇಳನ, ಬೆಳಗಾವಿ, ಫೆಬ್ರವರಿ, ೧೯೮೦. ಪು.೩-೫, ವಾಸುದೇವನ್‌ಸಿ.ಎಸ್‌., ಪುರಾತತ್ವ ಸಂಪುಟ, ಸಂಪುಟ ೩, (ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಯೋಜನೆ, ೨೦೦೦, ಅಪ್ರಕಟಿತ)

[3] ನಾಗರಾಜರಾವ್‌ಎಂ.ಎಸ್‌. ವಿಜಯನಗರ ಪ್ರೋಗ್ರೆಸ್‌ಆಫ್ ರಿಸರ್ಚ್‌, ೧೯೮೩ ವಿದೇಶಿ ಪ್ರವಾಸಿಗರು ವಿಜಯನಗರ ಪಟ್ಟಣವನ್ನು ವಿವರಿಸುವಾಗ ಅವರ ಬಹುಪಾಲು ವರ್ಣನೆಗಳಲ್ಲಿ ಇಲ್ಲಿಯ ಬೀದಿಗಳ ವಿನ್ಯಾಸ ಮತ್ತು ವೈಭವಗಳನ್ನು ಪದೇ ಪದೇ ತಮ್ಮ ಪ್ರವಾಸಿ ಕಥಾನಕಗಳಲ್ಲಿ ವಿವರಿಸಿದ್ದಾರೆ. ಅವರು ರಾಜಧಾನಿಯ ಪೇಟೆ, ಅರಮನೆ ಮತ್ತು ಬೀದಿಗಳಲ್ಲಿ ಜರುಗುತ್ತಿದ್ದ ದೈನಂದಿನ ಜೀವನಶೈಲಿಯನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ನೋಡಿ ಸದಾನಂದ ಕನವಳ್ಳಿ (ಅನುವಾದ,) ರಾಬರ್ಟ್‌ಸೀವೆಲ್‌(ಮೂಲ) ಮರೆತು ಹೋದ ಮಹಾಸಾಮ್ರಾಜ್ಞ, ಪು.೬೫ ಮತ್ತು ಬಾಲಸುಬ್ರಹ್ಮಣ್ಯ (ಅನುವಾದ,) ಬಿ.ಸೂರ್ಯನಾರಾಯಣರಾವ್‌ (ಮೂಲ,) ಮರೆಯಲಾಗದ ಮಹಾಸಾಮ್ರಾಜ್ಯ, ಪು.೨೧

[4] ಮಹದೇವಯ್ಯ ಎಂ.ಪಿ. “ಪ್ರಾಚೀನ ಕರ್ನಾಟಕದಲ್ಲಿ ನೌಕಯುದ್ಧಗಳು”, ಇತಿಹಾಸ ದರ್ಶನ, ಸಂ.೧೧, ಪು.೧೫೮-೧೬೧. ವ್ಯಾಪಾರ, ನೌಕಾ ಪಡೆಗಳಿಗೆ ಮತ್ತು ಸಾಗರೋತ್ತರ ಚಟುವಟಿಕೆಗಳಿಗೆ ನೌಕೆಗಳನ್ನು ಬಳಸಲಾಗುತ್ತಿತ್ತು.

[5] ಇ ಐ ಎ, ಸಂ.೧, ಪು.೮೨ ಮತ್ತು ಸಂ.೨, ಪು.೨೯೭

[6] ಅದೇ, ಸಂ.೧, ಪು.೨೯೬ ಮತ್ತು ಸಂ.೨, ಪು.೧೭೨-೧೭೫

[7] ಇ ಐ ಎ, ಸಂ.೧, ಪು.೨೬೯-೨೯೭

[8] ಅದೇ

[9] ವಿರೂಪಾಕ್ಷಿ ಪೂಜಾರಹಳ್ಳಿ, ‘ವಿಜಯನಗರ ಕಾಲದ ಮೀನಗಾರಿಕೆ ಮತ್ತು ಅಂಬಿಗತನ’, ವಿಜಯನಗರ ಅಧ್ಯಯನ, ಸಂ.೬, ಪು.೭೪-೮೩, ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಆನೆಗೊಂದಿ ತಳವಾರಘಟ್ಟ ಸೇತುವೆ ಪೂರ್ಣಗೊಂಡರೆ, ವಂಶಪಾರಂಪರ್ಯವಾಗಿ ನಡೆಸುವ ಅಂಬಿಗರ ಜೀವನಕ್ಕೆ ತೊಂದರೆಯಾಗುವ ಸಾಧ್ಯತೆಗಳತ್ತ ಲೇಖಕರು ಗಮನ ಸೆಳೆದಿದ್ದಾರೆ. ಹರಗೋಲು ಮತ್ತು ಹರಿಗೋಲು ಎರಡೂ ಪದಗಳು (ಹರು>ಹರಿ) ಬಳಕೆಯಲ್ಲಿವೆ.

[10] ಸದಾನಂದ ಕನವಳ್ಳಿ (ಅನು.) ಪೂರ್ವೋಕ್ತ, ಪು.೨೭೭

[11] ಅದೇ

[12] ಸೋಮಶೇಖರ ಎಸ್‌.ವೈ. ಹಂಪೆಯ ಬಜಾರುಗಳು, ಪು.೧೩

[13] ಸದಾನಂದ ಕನವಳ್ಳಿ (ಅನು.) ಪೂರ್ವೋಕ್ತ, ಪು.೫೯, ಟಿಪ್ಪಣಿ ೧೨

[14] ಅದೇ, ಪು.೫೭

[15] ಶೇಷಶಾಸ್ತ್ರಿ ಆರ್., ಕರ್ನಾಟಕದ ವೀರಗಲ್ಲುಗಳು, ಪು.೧೨೭

[16] ವಿರೂಪಾಕ್ಷಿ ಪೂಜಾರಹಳ್ಳಿ, ಪೂರ್ವೋಕ್ತ, ಪು.೮೨. ಲೇಖಕರು ಇಂದಿನ ಹಂಪಿ ಪರಿಸರದ ಅಂಬಿಗರ ನೆಲೆಗಳನ್ನು ಗುರುತಿಸುವ ಪ್ರಯತ್ನವನ್ನು ಮಾಡಿದ್ದಾರೆ. ಸಾಂದರ್ಭಿಕವಾಗಿ ಹರಗೋಲುಗಳನ್ನು ಬಿಡಲಾಗುವ ಇಂದಿನ ಕೆಲವು ಸ್ಥಳಗಳನ್ನು ಗುರುತಿಸಿದ್ದಾರೆ. ಇಂದಿನ ಪುರಂದರ ಮಂಟಪ ಮತ್ತು ಚಕ್ರತೀರ್ಥದ ಕಡೆಯಿಂದ ನದಿಯಲ್ಲಿ ಇಳಿಮುಖವಾಗಿ, ಅಂದರೆ ನೀರು ಹರಿಯುವ ದಿಕ್ಕಿನಲ್ಲಿ ಸಾಗಿ, ಆನೆಗೊಂದಿ ತಲುಪಲು ಸುಲಭ ಸಾಧ್ಯವಿದೆ. ಇವುಗಳಲ್ಲಿ ನದಿಯ ಎರಡೂ ಕಡೆಗಳಿಂದ ಹಲವಾರು ಸ್ಥಳಗಳಲ್ಲಿ ಹರಗೋಲುಗಳನ್ನು ಬಿಡಲಾಗುತ್ತದೆ. ಆದರೆ ಕೆಲವು ಕಡೆ ಮಾತ್ರ ನದಿಯಲ್ಲಿ ಬಂಡೆಗಳಿಲ್ಲದೆ ಹರಗೋಲು ಹಾಯಲು ಸ್ಥಳಗಳು ಸೂಕ್ತವಾಗಿವೆ ಮತ್ತು ನದಿ ದಂಡೆಯಲ್ಲಿ ಹರಗೋಲು ಹಾಯಲು ಸ್ಥಳಗಳು ಸೂಕ್ತವಾಗಿವೆ. ಮತ್ತು ನದಿ ದಂಡೆಯಲ್ಲಿ ಹರಗೋಲು ಹತ್ತಲು ಹಾಗೂ ಇಳಿಯಲು ಕೆಲವು ಆಯ್ದ ಜಾಗಗಳೇ ಪ್ರಶಸ್ತವಾಗಿದೆ. ನೋಡಿ ವಸುಂಧರಾ ಫಿಲಿಯೋಜಾ, ಅಳಿದುಳಿದ ಹಂಪೆ, ಪು.೯೩

[17] ವಸಂತಮಾಧವ ಕೆ.ಜಿ. “ವಿಜಯನಗರ ಅರಸರ ಸಾಗರೋತ್ತರ ವ್ಯಾಪಾರ ಒಂದು ಅಧ್ಯಯನ,” ವಿಜಯನಗರ ಅಧ್ಯಯನ, ಎಂ.ವಿ.ಕೃಷ್ಣಪ್ಪ ಮತ್ತು ಹೆಚ್‌.ಡಿ.ತಳವಾರ (ಸಂ) ಸಂ.೬, ಪು.೧೦೪-೧೦೮

[18] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೩, ಸಂ.೨೦೮ (ಇನ್ನು ಮುಂದೆ ಕವಿಶಾ) ಮತ್ತು ಸೌಥ್‌ಇಂಡಿಯನ್‌ಇನ್ಸ್‌ಕ್ರಿಷ್ಯನ್‌(ಇನ್ನು ಮುಂದೆ ಎಸ್‌.ಐ.ಐ.), ಸಂ., ಸಂ.೨೭೭

[19] ಕವಿಶಾ, ಸಂ.೩, ಸಂ.೭೪, ಮತ್ತು ಎಸ್‌.ಐ.ಐ, ಸಂ.IV, ಸಂ.೨೫೫; ಸೋಮಶೇಖರ ಎಸ್‌.ವೈ., ಪೂರ್ವೋಕ್ತ, ಪು.೧೩

[20] ಕವಿಶಾ, ಸಂ.೩, ಸಂ.೧೯೨, ಎಸ್‌.ಐ.ಐ.ಸಂ.IX, ಭಾಗ ii, ಸಂ.೫೩೪ ಮತ್ತು ಸಂ. Xviii, ಸಂ.೩

[21] ಕವಿಶಾ, ಸಂ.೨, ಗಂಗಾವತಿ ಸಂ.೩೭, ಕ್ವಾಟರ್ನರಿ ಜರ್ನಲ್ ಆಫ್ ಮಿಥಿಕ್ ಸೊಸೈಟಿ, ಸಂ.೭; ಅನ್ಯುಯಲ್ ರಿಪೋರ್ಟ್‌ನ್ಯೂ ಆನ್‌ಎಫಿಗ್ರಾಫಿ, ೧೯೫೮-೫೯, ಸಂ.೬೮೩

[22] ಕವಿಶಾ, ಸಂ.೨, ಗಂಗಾವತಿ ಸಂ.೩೮

[23] ಕವಿಶಾ, ಸಂ.೨, ಗಂಗಾವತಿ ಸಂ.೨೬

[24] ಕವಿಶಾ, ಸಂ.೨, ಸಂ.೨೭