ದಕ್ಷಿಣ ಭಾರತದಾದ್ಯಂತ ವ್ಯಾಪಿಸಿದ್ದ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ವಿಜಯನಗರ ಪಟ್ಟಣವು ಸುಮಾರು ೨೫ ಚ.ಕಿ.ಮೀ.ಗಳಷ್ಟು ದೊಡ್ಡದಾಗಿತ್ತು. ಪಟ್ಟಣದ ಸುತ್ತ ಅನೇಕ ಜನನಿಬಿಡ ಉಪನಗರ ಪ್ರದೇಶಗಳೂ ಇದ್ದವು. ರಾಜಧಾನಿ ಮತ್ತು ಸುತ್ತಲಿನ ಉಪನಗರ ಪ್ರದೇಶಗಳಿಗೆ ಉತ್ತಮವಾದ ನೀರಿನ ಸೌಕರ್ಯವಿದ್ದುದು ಇತಿಹಾಸಕಾರರಿಗೆ ತಿಳಿದಿರುವ ವಿಷಯವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಶಾಸನಗಳ ಕಡೆಗೆ ಗಮನ ಹರಿಸುವುದೇ ಈ ಪ್ರಬಂಧದ ಉದ್ದೇಶ. ಜನರ ದೈನಂದಿನ ಉಪಯೋಗಕ್ಕೆ, ಹೊಲ, ಗದ್ದೆ, ತೋಟಗಳಿಗೆ ಮತ್ತು ಪ್ರವಾಸಿಗಳಿಗೆ ಒದಗಿಸಿದ್ದ ನೀರಿನ ಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ಆಣೆಕಟ್ಟು, ಕಾಲುವೆ, ಕೆರೆ, ಬಾವಿ ಅರವಟ್ಟಿಗೆ ಮುಂತಾದವುಗಳನ್ನು ಇಲ್ಲಿ ಪರಿಶೀಲಿಸಲಾಗಿದೆ.

ಜನರಿಗೆ, ಪ್ರಾಣಿಗಳಿಗೆ ಮತ್ತು ವ್ಯವಸಾಯಕ್ಕೆ ನೀರಿನ ವ್ಯವಸ್ಥೆಯನ್ನು ಒದಗಿಸುವುದು ಒಂದು ಸಾಮಾಜಿಕ ಜವಾಬ್ದಾರಿಯಾಗಿತ್ತೆಂಬುದು ಹಂಪೆಯ ಕಡಲೆಕಾಳು ಕಣೇಶನ ಗುಡಿಯ ಮುಂದಿರುವ ಅಗುಸೆಯಲ್ಲಿರುವ ಶಾಸನದಿಂದ ತಿಳಿದುಬರುತ್ತದೆ. ವಿಜಯನಗರದ ಪ್ರೌಢ ಪ್ರತಾಪ ದೇವರಾಯನ ಮಂತ್ರಿಯಾದ ಲಕ್ಷ್ಮೀಧರನ ಶಾಸನವೆಂದು ಪ್ರಸಿದ್ಧವಾಗಿರುವ ಈ ಶಾಸನದ ಕಾಲ ಕ್ರಿ.ಶ.೧೪೧೧. ದೇವರಾಯನ (ಕ್ರಿ.ಶ.೧೪೦೬-೨೨) ಮಂತ್ರಿಗಳಾದ ಮಾದರಸ ಮತ್ತು ಸಾಯಣರ ಬಗ್ಗೆ ಶಾಸನವು ಕೆಳಗಿನಂತೆ ಉಲ್ಲೇಖಿಸುತ್ತದೆ.[1]

“ತೋಡದ ಬಾವಿಯಲ್ಲಿ ಮರೆಕಟಟ್ದ ಪೆರ್ಗ್ಗೆರೆಯಿಲ್ಲ
ಲೀಲೆಯಿಂ ಮಾಡದ ದೇವತಾಭವನಮಿಲ್ಲೊಲವಿಂ ಬಿಡದಗ್ಗ್ರಹಾರಮಿ
ಲ್ಲಾಡಲದೇನೊ ಭೂಭುವನಭುಂಭುಕಮಾದುದು ಕೀರ್ತಿಬಾಪು
ನಾ ಪಾಡಿಯೆ ಸೈಪು ಮಾದರಸ ಸಾಯಣರೆಂಬ ಮಹಾಪ್ರಧಾನರಾ ||”

ಇದೇ ಶಾಸನದಲ್ಲಿ ಲಕ್ಷ್ಮೀಧರ ಕೂಸಾಗಿದ್ದಾಗ ಅವನ ತಾಯಿ ಹಾಡಿ ಹಾಲೆರೆಯುತ್ತಾ ಕಿವಿಯಲ್ಲಿ ಹೇಳಿದ ಒಂದು ಪದ್ಯ ಹೀಗಿದೆ

“ಕೆರೆಯಂ ಕಟ್ಟಿಸು ಬಾವಿಯಂ ಸವಸು ದೇವಾಗಾರಮಂ
ಮಾಡಿಸಜ್ಜೆರೆಯೊಳ್ಸಿಲ್ಕಿದನಾಥರಂ ಬಿಡಿಸು ವಿತ್ರರ್ಗ್ಗಿಂಬುಕೆಯಿ
ನಂಬಿದರ್ಗ್ಗೆರೆವೆಟ್ಟಾಗಿರುವ ಶಿಷ್ಟರಂ ಪೊರೆಯೆನ್ನುತ್ತಿಂತೆಲ್ಲವಂ
ಪಿಂದೆ ತಾಯೆರದಳ್ಪಲೆರವಂದು ತೊಟ್ಟು ಕಿವಿಯೊಳ್‌
ಲಕ್ಷ್ಮೀಧರಾಮಾತ್ಯನಾ |”

ಆಣೆಕಟ್ಟು

ವಿಜಯನಗರ ಪಟ್ಟಣದ ಪಕ್ಕದಲ್ಲಿಯೇ ಹರಿಯುತ್ತಿರುವ ತುಂಗಭದ್ರಾ ನದಿಗೆ ವಿಜಯನಗರ ಕಾಲದಲ್ಲಿ ಕಟ್ಟಿದ ಅನೇಕ ಆಣೆಕಟ್ಟುಗಳು ಈಗಲೂ ಉಪಯೋಗದಲ್ಲಿವೆ. ಇವುಗಳಲ್ಲಿ ಈಗ ವಿಜಯನಗರ ತುರ್ತಾ ಕಾಲುವೆ ಆಣೆಕಟ್ಟು ನಂ.೧ ಎಂದು ಕರೆಯಲಾಗುವ ಆಣೆಕಟ್ಟನ್ನು ಚಿಂತಾಯಕ ದೇವಣ್ಣನು ಕಟ್ಟಿಸಿದನೆಂದೂ ಮತ್ತು ಕಟ್ಟಿದವನು ಬೊಮ್ಮೋಜನೆಂದೂ ಅಲ್ಲಿಯ ಶಾಸನದಿಂದ ತಿಳಿಯುತ್ತದೆ.[2] ಈ ಆಣೆಕಟ್ಟು ಹಂಪೆಯಿಂದ ಪಶ್ಚಿಮಕ್ಕೆ ಸುಮಾರು ಮೂರು ಕಿ.ಮೀ. ದೂರದಲ್ಲಿದ್ದು, ಈಗಲೂ ಸುಸ್ಥಿತಿಯಲ್ಲಿದೆ.

ಕಾಲುವೆಗಳು

ವಿಜಯನಗರ ತುರ್ತಾ ಕಾಲುವೆ ಆಣೆಕಟ್ಟಿನಿಂದ ಪ್ರಾರಂಭವಾಗುವ ಕಾಲುವೆ ಆಣೆಕಟ್ಟಿನಿಂದ ೬.೨ ಕಿ.ಮೀ. ದೂರದಲ್ಲಿ ಮತಂಗ ಪರ್ವತದ ಪೂರ್ವಕ್ಕೆ ಒಂದು ಕಲ್ಲು ಗುಂಡನ್ನು ಸೀಳಿಕೊಂಡು ಮುಂದೆ ಸಾಗುತ್ತದೆ. ಗುಂಡನ್ನು ಒಡೆಸಿ ಕಾಲುವೆಯನ್ನು ಕಟ್ಟಿಸಿದ್ದು ಪಕ್ಕದಲ್ಲಿಯ ಮತ್ತೊಂದು ಗುಂಡಿನ ಮೇಲಿರುವ ಶಾಸನದಿಂದ ತಿಳಿಯುತ್ತದೆ. ವಿಜಯನಗರ ಅರಸ ವಿರೂಪಾಕ್ಷರಾಯರ (ಕ್ರಿ.ಶ.೧೪೦೪-೦೬) ಆದೇಶದ ಮೇರೆಗೆ ಹೆಗಡೆ ಹಿತ್ತಲಬಾಗಿಲ ಬಸವಣ್ಣ ಅಣ್ಣ ಗುಂಡನ್ನು ಒಡೆಸಿ ಕಾಲುವೆಯನ್ನು ಕಟ್ಟಿಸಿದನೆಂದು ಶಾಸನವು ತಿಳಿಸುತ್ತದೆ.[3] ಕಾಲುವೆಯನ್ನು ಗುಡ್ಡದ ಬದಿಯಲ್ಲಿ ನಿರ್ಧಾರಿತ ಮಟ್ಟದಲ್ಲಿಯೇ ಹರಿಸಬೇಕಾದುದರಿಂದ ಕಾಲುವೆಗೆ ಅಡ್ಡ ಬಂದ ಗುಂಡನ್ನು ಒಡೆಸಿ ಕಾಲುವೆಯನ್ನು ನಿರ್ಮಿಸಲಾಗಿದೆ. ಕಲ್ಲನ್ನು U ಆಕಾರದಲ್ಲಿ ಒಡೆದಿರುವುದರಿಂದ ಉಳಿದ ಭಾಗವನ್ನು ಕಾಲುವೆಯ ಎರಡೂ ಬದಿಗಳಲ್ಲೂ ಮತ್ತು ತಳಭಾಗದಲ್ಲಿಯೂ ನೋಡಬಹುದು.

ಈಗಿನ ತುರ್ತಾ ಕಾಲುವೆಯ ಮೂಲ ಹೆಸರು ಹಿರಿಯ ಕಾಲುವೆ ಆಗಿತ್ತೆಂಬುದು ಶಾಸನಗಳಿಂದ ತಿಳಿಯುತ್ತದೆ. ಕಡ್ಡಿರಾಂಪುರ-ಹಂಪೆ ರಸ್ತೆಯ ಪೂರ್ವಕ್ಕೆ ತುರ್ತಾ ಕಾಲುವೆಗೆ ಸೇತುವೆಯನ್ನು ನಿರ್ಮಿಸಿ ಅದರ ಮೇಲೆ ದೇವಾಲಯವನ್ನು ಕಟ್ಟಲಾಗಿದೆ. ಈ ಕಾಲುವೆ ಮತ್ತು ದೇವಾಲಯದ ಬಗ್ಗೆ ಉಲ್ಲೇಖಿಸುವ ಶಾಸನವು ಪಕ್ಕದಲ್ಲಿಯೇ ಇದೆ. ವಿಜಯನಗರದ ಅರಸ ಕೃಷ್ಣದೇವರಾಯನ ಕ್ರಿ.ಶ.೧೫೨೪ರ ಈ ಶಾಸನದ ಪಾಠ ಹೀಗಿದೆ

“…. ತೆರಕಣಂಬಿಯ ವಿರೂಪಾಕ್ಷ ಭಟರ ಮಕ್ಕಳು ಗೋಪಿನಾಥ ದೀಕ್ಷಿತರು
ಹಿರಿಯ ಕಾಲುವೆಯಲ್ಲಿ ಪ್ರತಿಷ್ಠೆಯ ಮಾಡಿದ ರಘುನಾಥಗೆ ಪಂಪಾ
ವಿರೂಪಾಕ್ಷ ದೇವರು ಮಾಡಿದ ಅಮೃತಪಡಿ ಕಟ್ಟಳೆ ದಿನ ೧ಕ್ಕೆ…”

ಅದೇ ಕಲ್ಲಿನ ಮತ್ತೊಂದು ಬದಿಗೆ ಇರುವ ಶಾಸನವು ಈ ದೇವರನ್ನು ಹಿರಿಯ ಕಾಲುವೆಯ ರಘುನಾಥ ಎಂದು ಸಂಬೋಧಿಸುತ್ತದೆ.[4] ಇಲ್ಲಿಂದ ಕಾಲುವೆಯ ಪೂರ್ವಾಭಿಮುಖವಾಗಿ ಹರಿದು ಉದ್ದಾನ ವೀರಭದ್ರ ದೇವಾಲಯದ ಹತ್ತಿರ ಸಾಗುತ್ತದೆ. ಉದ್ದಾನ ವೀರಭದ್ರ ದೇವಾಲಯದಲ್ಲಿರುವ ಸದಾಶಿವರಾಯನ ಕಾಲದ ಕ್ರಿ.ಶ.೧೫೪೫ರ ಶಾಸನವು ಕೃಷ್ಣಾಪುರದ ಪೇಟೆಯ ಹಿರಿಯ ಕಾಲುವೆಯ ಛತ್ರದ ಬಳಿಯಲೂ ಕಟಿಸ್ತಂಥಾ ಮುದುವೀರಂಣನ ಪ್ರತಿಷ್ಠೆಯನೂ ಮಾಡಿ… ಒಂದು ಉಲ್ಲೇಖಿಸುತ್ತದೆ.[5] ಇದೇ ಸ್ಥಳದಲ್ಲಿರುವ ಚಂಡಿಕೇಶ್ವರ ದೇವಾಲಯದಲ್ಲಿರುವ ಇದೇ ಕಾಲದ ಶಾಸನವು ಕೃಷ್ಣಾಪುರದ ಪೇಟೆಯ ಹಿರಿಯಕಾಲುವೆಯ ಛತ್ರದ ಬಳಿಯಲು ಕಟಿಸ್ತಂಥಾ ತಿರು …. ಎಂದು ಉಲ್ಲೇಖಿಸುತ್ತದೆ.[6] ಉದ್ದಾನ ವೀರಭದ್ರ (ಮೂಲ ಹೆಸರು ಮುದುವೀರಂಣ) ಮತ್ತು ಚಂಡಿಕೇಶ್ವರ (ಮೂಲ ಹೆಸರು ತಿರುವೆಂಗಳನಾಥ) ದೇವಾಲಯಗಳ ಪಕ್ಕದಲ್ಲಿ ಸುಮಾರು ಆರು ನೂರು ಕಂಬಗಳಿರುವ ದೊಡ್ಡ ಮಂಟಪವಿದೆ. ಇದೇ ಹಿರಿಯ ಕಾಲುವೆಯ ಛತ್ರ. ಹತ್ತಿರದಲ್ಲಿಯೇ ಹರಿಯುವ ತುರ್ತಾ ಕಾಲುವೆಯೇ ಹಿರಿಯ ಕಾಲುವೆ.

ಕ್ರಿ.ಶ.೧೫೫೯ರಲ್ಲಿ ವಿಠಲ ದೇವಾಲಯಕ್ಕೆ ದಾನವಾಗಿ ಕೊಟ್ಟ ತೋಟದ ಚತುಸ್ಸೀಮೆಯ ವಿವರ ನೀಡುವಾಗ ಪೂರ್ವಕ್ಕೆ ಬೊಮ್ಮದೇವರ ಗುಡಿ ಮುಂದಣ ಕಾಲುವೆ, ದಕ್ಷಿಣಕ್ಕೆ ಅಗಸರ ಕಾಲುವೆ ಮತ್ತು ಉತ್ತರಕ್ಕೆ ಅನಂತನ ಕಾಲುವೆ ಇದ್ದುದನ್ನು ಶಾಸನವು ತಿಳಿಸುತ್ತದೆ.[7] ಈ ಕಾಲುವೆಗಳನ್ನು ಈಗ ಗುರುತಿಸಲು ಆಗುವುದಿಲ್ಲ.

ಕಮಲಾಪುರಂದಿಂದ ಹಂಪೆಗೆ ಹೋಗುವ ದಾರಿಯಲ್ಲಿ ಮಹಾನವಮಿ ದಿಬ್ಬವಿರುವ ಆವರಣದ ಬಳಿ ರಸ್ತೆಯ ಎಡಕ್ಕೆ ಭೋಜನಶಾಲೆಯೆಂದು ಕರೆಯುವ ಸ್ಥಳವಿದೆ. ಇಲ್ಲಿ ಒಂದು ಚಿಕ್ಕ ಕಾಲುವೆಯ ದಂಡೆಯ ಮೇಲೆ ಹಸಿರು ಬಣ್ಣದ ಕಲ್ಲು ಚಪ್ಪಡಿಗಳನ್ನು ಜೋಡಿಸಿದೆ. ಚಪ್ಪಡಿಗಳ ಮಧ್ಯದಲ್ಲಿ ತಟ್ಟೆ ಮತ್ತು ಬಾಳೆ ಎಲೆಯ ಆಕಾರದ ತಗ್ಗು ಇದ್ದು ಸುತ್ತಲೂ ಬಟ್ಟಲಿನಾಕಾರದ ತಗ್ಗುಗಳಿವೆ. ಇವುಗಳನ್ನು ಊಟಕ್ಕೆ ಉಪಯೊಗಿಸುತ್ತಿದ್ದರೆಂಬುದು ನಿಸ್ಸಂದೇಹ. ಈ ಕಾಲುವೆಯನ್ನು ಊಟದ ಕಾಲುವೆಯೆಂದು ಕರೆಯುತ್ತಿದ್ದರೆಂದು ತೋರುತ್ತದೆ. ಇಂತಹ ಊಟದ ಕಾಲುವೆಯ ಉಲ್ಲೇಖ ಪೆನುಗೊಂಡೆ ಬಾಗಿಲ ಹತ್ತಿರವಿರುವ ಶಾಸನದಲ್ಲಿದೆ. ಕ್ರಿ.ಶ.೧೫೪೦ರ ಈ ಶಾಸನ ರಘುನಾಥ ದೇವರಿಗೆ ದಾನವಾಗಿ ಕೊಟ್ಟ ಭೂಮಿಯ ವಿವರವನ್ನು ಕೊಡುವಾಗ “ಮಾದಲಾಪುರದ ಗ್ರಾಮದ ಕೆರೆವೊಳಗೆ ಊಟಕಾಲುವೆ ಸ್ಥಳದಲ್ಲೂ ಲಕುಮಯ್ಯ ಹೊಂನ್ನಯ್ಯ ಮಲ್ಲಯ್ಯಗಳ ಗದ್ದೆ ಖ ೧” ಎಂದು ಉಲ್ಲೇಖಿಸುತ್ತದೆ.[8] ಮೇಲೆ ವಿವರಿಸಿದ ಊಟದ ಕಾಲುವೆಯೇ ಶಾಸನದಲ್ಲಿ ಉಲ್ಲೇಖಗೊಂಡಿರುವ ಊಟಕಾಲುವೆಯೆಂದು ಹೇಳುವುದಕ್ಕೆ ಆಧಾರವಿಲ್ಲ. ಆದರೆ ಶಾಸನದಲ್ಲಿ ಉಲ್ಲೇಖಗೊಂಡ ಊಟ ಕಾಲುವೆ ಮೇಲೆ ವಿವರಿಸಿದ ಊಟದ ಕಾಲುವಂತೆಯೇ ಇದ್ದಿರಬಹುದೆಂದು ನಿರ್ಧರಿಸಬಹುದು. ಇದೇ ಶಾಸನದಲ್ಲಿ ಮತ್ತೊಂದು ಭೂಮಿಯ ವಿವರವನ್ನು “ಕಳಸಾಪುರದ ಮಾಗಣಿಗೆ ಸಲುವ ರೇವತಾಪುರದ ಗ್ರಾಮದಲ್ಲೂ ಹಾಳ ಕಾಲುವೆಯ ಕೆಳಗೆ ಸೇನಬೋವ ವಿರುಪರಸನು ಮಾಡುವ ಜುಗಿನಗದ್ದೆ ಸ್ಥಳ ಉಖ ೧” ಎಂದು ಉಲ್ಲೇಖಿಸುತ್ತದೆ. ಕಳಸಾಪುರವು ಮೌಲ್ಯವಂತ ಪರ್ವತದ ಹತ್ತಿರವಿರುವ ಉದಯಗಿರಿ ಬಾಗಿಲ ಪೂರ್ವಕ್ಕೆ ಇದೆ. ರೇವತಾಪುರವನ್ನು ಈಗ ಗುರುತಿಸಲಾಗುವುದಿಲ್ಲ. ಇಲ್ಲಿರುವ ಕಾಲುವೆಯು ವಿಜಯನಗರ ಕಾಲದಲ್ಲಿಯೇ ಹಾಳಾಗಿದ್ದುದು ಶಾಸನದಿಂದ ತಿಳಿಯುತ್ತದೆ.

ಕಲ್ಲನ್ನು ಕಡಿಸಿ ಕಾಲುವೆ ಮಾಡಿಸಿದ ಉದಾಹರಣೆ ಬುಕ್ಕಸಾಗರದಲ್ಲಿದೆ. ಇಲ್ಲಿಯ ಕ್ರಿ.ಶ.೧೫೨೮ರ ಶಾಸನವು ಜಮಾನಖಾನನ ಮಯಿಕದ ರಾಮಸಾಗರದ ಅವಿಕಧವಿತರಸನು-ಅರೆಕಡಿಸಿ ಕಾಲುವೆ ಮಾಡಿಸಿದನೆಂದು ತಿಳಿಸಿ ಸಕಲ ಪ್ರಾಣಿಗಳು ಸುಖದಲಿ ಅನುಭವಿಸಲೆಂದು ತಿಳಿಸುತ್ತದೆ.[9]

ಕೆರೆಗಳು

ಅಚ್ಯುತರಾಯ ದೇವಾಲಯದ ದಕ್ಷಿಣಕ್ಕೆ ಭೂಪತಿ ಕೆರೆ ಇದ್ದುದು ದೇವಾಲಯದಲ್ಲಿಯ ಕ್ರಿ.ಶ. ೧೫೩೪ರ ಶಾಸನದಿಂದ ತಿಳಿಯುತ್ತದೆ.[10] ಈ ಕೆರೆಯು ಈಗ ಹೂತುಹೋಗಿ ಗದ್ದೆಗಳಾಗಿ ಮಾರ್ಪಾಡಾಗಿದೆ. ಮತಂಗ ಪರ್ವತದ ದಕ್ಷಿಣಕ್ಕಿರುವ ಮಂಟಪದಲ್ಲಿಯ ಶಾಸನ[11] ಮತ್ತು ಕೃಷ್ಣದೇವಾಲಯದಲ್ಲಿರುವ ಕ್ರಿ.ಶ.೧೫೧೫ರ ಶಾಸನ[12] ಸಹ ಈ ಕೆರೆಯನ್ನು ಉಲ್ಲೇಖಿಸುತ್ತವೆ. ವಿಜಯನಗರದಲ್ಲಿಯ ಅತಿ ದೊಡ್ಡ ಕೆರೆ ಕಮಲಾಪುರ ಕೆರೆ. ಪೆನುಗೊಂಡೆ ಬಾಗಿಲ ಹತ್ತಿರದ ರಘುನಾಥ ದೇವಾಲಯದಲ್ಲಿರುವ ಕ್ರಿ.ಶ.೧೫೪೦ರ ಶಾಸನವು ಕಮಲಾಪುರದ ಕೆರೆಯ ಕೆಳಗೆ ಗದ್ದೆಯನ್ನು ದೇವರಿಗೆ ದಾನವಾಗಿ ಕೊಟ್ಟದ್ದನ್ನು ಉಲ್ಲೇಖಿಸುತ್ತದೆ.[13] ಇದೇ ಶಾಸನವು ಅನಂತಾಪುರದ ಕೆರೆಯನ್ನೂ ಉಲ್ಲೇಖಿಸುತ್ತದೆ. ಮೌಲ್ಯವಂತ ಪರ್ವತದ ಈಶಾನ್ಯಕ್ಕೆ ಕಾಲುವೆಯ ದಂಡೆಯ ಮೇಲಿರುವ ಶಾಸನದಿಂದ ಅಲ್ಲಿ ಕೃಷ್ಣರಾಯ ಸಮುದ್ರವೆಂಬ ಕೆರೆ ಇತ್ತೆಂಬುದು ತಿಳಿಯುತ್ತದೆ.[14] ಕೆರೆಗಳಿದ್ದ ಸ್ಥಳದಲ್ಲೀಗ ಗದ್ದೆಗಳಿವೆ. ಕಡ್ಡಿರಾಂಪುರದ ಹತ್ತಿರವಿದ್ದ ಕೆರೆಯನ್ನು ರಾಮಾಪುರ ಕೆರೆಯೆಂದು ಕರೆಯುತ್ತಿದ್ದುದು ಪ್ರಸನ್ನ ವಿರೂಪಾಕ್ಷ (ಭೂಮಿಯ ಕೆಳಮಟ್ಟದ) ದೇವಾಲಯದ ಹತ್ತಿರ ಹೊಲದಲ್ಲಿರುವ ಕ್ರಿ.ಶ.೧೩೬೬ರ ಶಾಸನದಿಂದ ತಿಳಿಯುತ್ತದೆ.[15]

ಕಮಲಾಪುರದ ಪೂರ್ವಕ್ಕೆ ಸೀತಾರಾಮ ತಾಂಡದ ಹತ್ತಿರವಿರುವ ಕ್ರಿ.ಶ.೧೫೩೯ರ ಶಾಸನವು ನಲತಿಂಮಬೋಯಿಯ ಅಚ್ಯುತರಾಯನ ಮಗ ವೆಂಕಟಾದ್ರಿ ಚಿಕ್ಕರಾಯನಿಗೆ ಪುಣ್ಯವಾಗಲೆಂದು ಕೆರೆಯನ್ನು ಕಟ್ಟಿಸಿದನೆಂದು ತಿಳಿಸುತ್ತದೆ.[16] ಕೆರೆ ಇರಬೇಕಾಗಿದ್ದ ಸ್ಥಳದಲ್ಲಿ ಈಗ ಹೊಲಗಳಿವೆ.

ಹೊಸಪೇಟೆಯ ಈಶಾನ್ಯಕ್ಕಿರುವ ನಾಗೇನಹಳ್ಳಿಯ ಬಳಿ ಒಂದು ದೊಡ್ಡ ಕೆರೆಯಿದೆ. ಈ ಕೆರೆಯ ಹೆಸರು ನಾಗಾಂಬಿಕಾಸಮುದ್ರ ಅಥವಾ ನಾಗಸಮುದ್ರ. ಇದನ್ನು ಕೃಷ್ಣದೇವರಾಯನ ತಾಯಿ ನಾಗಲಾದೇವಿಯ ಹೆಸರಿನಲ್ಲಿ ಕ್ರಿ.ಶ.೧೫೧೬ರಲ್ಲಿ ರಂಗನಾಥ ದೀಕ್ಷಿತನು ಕಟ್ಟಿಸಿದನೆಂದು ನಾಗೇನಹಳ್ಳಿಯ ರಂಗನಾಥ ದೇವಾಲಯದಲ್ಲಿನ ಶಾಸನದಿಂದ ತಿಳಿಯುತ್ತದೆ.[17]

ಪಂಪಾಸರಸ್ಸು

ವಿಠಲ ದೇವಾಲಯಕ್ಕೆ ಹೋಗುವ ದಾರಿಯಲ್ಲಿ ಸೀತಾಕೊಂಡದ ಹತ್ತಿರ ನರಸಿಂಹ ದೇವಾಲಯವಿದೆ. ದೇವಾಲಯದ ಹತ್ತಿರವಿರುವ ಕೊಂಡದ ದಡದಲ್ಲಿರುವ ಕ್ರಿ.ಶ.೧೪೦೦ರ ಶಾಸನವು ತುಂಗಭದ್ರಾ ತೀರದಲ್ಲಿ ಭಾಸ್ಕರ ಕ್ಷೇತ್ರದಲ್ಲಿ ಪಂಪಾಸರಸ್ಸಿನ ಸಮೀಪವಾದ ನರಸಿಂಹದೇವರ ಸನ್ನಿಧಿಯಲ್ಲಿ ನಾಗೆಯನಾಯಕನು ಕೇಶವಗುಂಡವನ್ನು ಮಾಡಿಸಿದನೆಂದು ತಿಳಿಸುತ್ತದೆ.[18] ಪಂಪಾಸರಸ್ಸು ನರಸಿಂಹ ದೇವಾಲಯದ ಹತ್ತಿರವಿರುವುದೆಂದು ಈ ಶಾಸನ ಸ್ಪಷ್ಟಪಡಿಸುತ್ತದೆ. ಆದರೆ ಈಗಿನ ಪಂಪಾಸರಸ್ಸು ನದಿಯ ಆಚೆಗೆ ಎಡದಂಡೆಯಿಂದ ದೂರವಿದೆ. ನರಸಿಂಹ ದೇವಾಲಯವಿರುವುದು ನದಿಯ ಬಲದಂಡೆಯ ಹತ್ತಿರ. ಈಗಿನ ಪಂಪಾಸರಸ್ಸಿನಿಂದ ಮತಂಗ ಪರ್ವತ ಮತ್ತು ಕೋಟಿಲಿಂಗದವರೆಗಿನ ಎಲ್ಲಾ ಪ್ರದೇಶವು ರಾಮಾಯಣ ಕಾಲದಲ್ಲಿ ಜಲಮಯವಾಗಿದ್ದು. ಈ ಪ್ರದೇಶವನ್ನು ಪಂಪಾಸರಸ್ಸೆಂದು ಕರೆಯುತ್ತಿದ್ದರೆಂದು ಸಿ.ಟಿ.ಎಂ.ಕೊಟ್ರಯ್ಯನವರು ಅಭಿಪ್ರಾಯಪಡುತ್ತಾರೆ.[19]

ಕೊಂಡಗಳು

ಮೇಲೆ ಉಲ್ಲೇಖಿಸಿದ ಶಾಸನವಿರುವ ಕೊಂಡವನ್ನು ನಾಗೆಯನಾಯಕನು ತನ್ನ ತಂದೆಯ ಹೆಸರಿನಲ್ಲಿ ಕೇಶವಗುಂಡವಾಗಿ ಮಾಡಿಸಿದನೆಂಬುದು ತಿಳಿಯುತ್ತದೆ. ಕಲ್ಲನ್ನು ಕಡೆದು ಈ ಕೊಂಡವನ್ನು ಮಾಡಿದೆ. ನರಸಿಂಹ ದೇವಾಲಯದ ಉತ್ತರಕ್ಕೆ ನದಿಯ ದಡದಲ್ಲಿ ಸೀತಾಕೊಂಡವಿದೆ. ಅಚ್ಯುತರಾಯ ಪೇಟೆಯ ಉತ್ತರಕ್ಕೆ ಸೀತಾಕೊಂಡದವರೆಗೆ ವಿಸ್ತರಿಸಿತ್ತೆಂಬುದು ಅಚ್ಯುತರಾಯ ದೇವಾಲಯದಲ್ಲಿಯ ಕ್ರಿ.ಶ.೧೫೩೪ರ ಶಾಸನದಿಂದ ತಿಳಿಯುತ್ತದೆ.[20] ಬೇಟೆಕಾರರ ಹೆಬ್ಬಾಲಿನ ಪೂರ್ವಕ್ಕಿರುವ ಒರತೆಯ ಮೈಲಾರದೇವರ ದೇವಾಲಯದ ಹತ್ತಿರ ಒಂದು ಕೊಂಡವಿದೆ. ಕೊಂಡದ ದಡದಲ್ಲಿರುವ ಹರಿಹರರಾಯನ ಕಾಲದ ಕ್ರಿ.ಶ.೧೩೮೦ರ ಶಾಸನವು ಬೇಟೆಕಾರ ಮಲಗೆಯ ನಾಯಕನ ಮಗ ಬಥ್ಥೆಯ ನಾಯಕನು ಬೇಟೆಕಾರರ ಹೆಬ್ಬಾಗಿಲ ಪೂರ್ವ ದಿಕ್ಕಿಗೆ ಒರತೆಯ ಮೈಲಾರ ದೇವರನ್ನು ಪ್ರತಿಷ್ಟೆ ಮಾಡಿ ದೇವರ ವಾಯವ್ಯ ದಿಕ್ಕೆಗೆ ಒರತೆಯ ಕೊಂಡವನ್ನು ಮಾಡಿಸಿದನೆಂದು ತಿಳಿಸುತ್ತದೆ.[21]

ತೀರ್ಥಗಳು

ಮೇಲೆ ಉಲ್ಲೇಖಿಸಿದ ನರಸಿಂಹ ದೇವಾಲಯದ ಪಕ್ಕದಲ್ಲಿ ಬಂಡೆಯ ಮೇಲೆ ನೈಸರ್ಗಿಕವಾಗಿರುವ ಚಿಕ್ಕ ತೊಟ್ಟಿಯಾಕಾರದ ತಗ್ಗಿದೆ. ಪಕ್ಕದಲ್ಲಿರುವ ಶಾಸನವು ಈ ತೊಟ್ಟಿಯನ್ನು ಭವನಾಸಿ ತೀರ್ಥವೆಂದು ಉಲ್ಲೇಖಿಸುತ್ತದೆ.[22] ಇದೇ ರೀತಿ ಬೇಟೆಕಾರರ ಹೆಬ್ಬಾಗಿಲ ಈಶಾನ್ಯಕ್ಕಿರುವ ಒಂದು ದೇವಾಲಯದ ಹತ್ತಿರವಿರುವ ನೈಸರ್ಗಿಕ ಒರತೆಯನ್ನು ಪಕ್ಕದಲ್ಲಿರುವ ಶಾಸನವು ಮುಕ್ತಿಋಣ ನಿರ್ಮಲ ತೀರ್ಥವೆಂದು ಉಲ್ಲೇಖಿಸುತ್ತದೆ.[23]

ಬಾವಿಗಳು

ಹೇಮಕೂಟದ ಪಶ್ಚಿಮಕ್ಕೆ ಇರುವ ಕ್ರಿ.ಶ.೧೩೭೭ ಮತ್ತು ೧೩೯೦ರ ಎರಡು ಶಾಸನಗಳಲ್ಲಿ[24] ಭಕ್ತರ ನಾಗಪ್ಪನು ಒಂದು ಬಾವಿಯನ್ನು ಕಟ್ಟಿಸಿದ ಉಲ್ಲೇಖವಿದೆ. ವಿರೂಪಾಕ್ಷ ದೇವಾಲಯದ ತೇರುಬೀದಿಯ ಎದುರು ಬಸವನ ದಕ್ಷಿಣಕ್ಕೆ ಮತಂಗ ಪರ್ವತದ ಹತ್ತಿರ ಒಂದು ಬಾವಿಯಿದೆ. ದೊಡ್ಡ ಗುಂಡೊಂದು ಬಾವಿಯನ್ನು ಭಾಗಶಃ ಮುಚ್ಚಿದೆ. ಬಾವಿಯ ಹೆಸರನ್ನು ಗುಂಡಿನ ಮೇಲಿರುವ ಶಾಸನದಲ್ಲಿ ಮಹಾದೇವಿಯಕ್ಕ ಬಾವಿ ಮತ್ತು ಕೆಳಬಾವಿ ಎಂದು ಉಲ್ಲೇಖಿಸಿದೆ.[25] ಹೊದೆಯ ಬಾಗಿಲ ಉತ್ತರಕ್ಕೆ ಗುಡ್ಡದ ಪಕ್ಕದಲ್ಲಿ ಒಂದು ಬದಿಗೆ ಮೆಟ್ಟಿಲಿರುವ ಚಿಕ್ಕ ಬಾವಿಯಿದೆ. ಬಾವಿಯ ಹತ್ತಿರವಿರುವ ಗುಂಡಿನ ಮೇಲಿನ ಶಾಸನದಿಂದ ನರಹರಿದೇವನ ಮಗ ದೇವರಾಯನು ಕ್ರಿ.ಶ.೧೪೧೧ರಲ್ಲಿ ಈ ಬಾವಿಯನ್ನು ಕಟ್ಟಿಸಿದನೆಂದು ತಿಳಿಯುತ್ತದೆ. ಇದನ್ನು ಬೆನಕನ ಬಾವಿಯೆಂದು ಕರೆಯುತ್ತಿದ್ದುದು ಶಾಸನದಿಂದ ತಿಳಿಯುತ್ತದೆ. ಶಾಸನದ ಪಕ್ಕದಲ್ಲಿ ಗಣೇಶನ ಅಪೂರ್ಣವಾದ ಶಿಲ್ಪವಿದೆ.[26]

ಸಿಂಘಾರದ ಹೆಬ್ಬಾಗಿಲಿನಿಂದ ಈಶಾನ್ಯಕ್ಕೆ ಹೋದಾಗ ಮುಸ್ಲೀಮರು ವಾಸವಾಗಿದ್ದ ಪ್ರದೇಶವನ್ನು ಸೇರುತ್ತೇವೆ. ಇಲ್ಲಿ ಅನೇಕ ಗೋರಿಗಳು ಮತ್ತು ಎರಡು ಮಸೀದಿಗಳಿವೆ. ಒಂದು ಮಸೀದಿಯಲ್ಲಿರುವ ಶಾಸನದಿಂದ ಅದೊಂದು ಧರ್ಮಶಾಲೆಯಾಗಿತ್ತೆಂಬುದು ತಿಳಿಯುತ್ತದೆ. ಈ ಶಾಸನದ ಪ್ರಕಾರ ಈ ಧರ್ಮಶಾಲೆ ಮತ್ತು ಪಕ್ಕದಲ್ಲಿರುವ ಬಾವಿಯನ್ನು ಕಟಿಗೆಯ ಅಹ್ಮದ್‌ಖಾನನು ತನ್ನ ಅರಸ ದೇವರಾಯನಿಗೆ ಧರ್ಮವಾಗಬೇಕೆಂದು ಕ್ರಿ.ಶ.೧೪೩೯ರಲ್ಲಿ ಕಟ್ಟಿಸಿದನು.[27] ಮಸೀದಿ ಅಥವಾ ಧರ್ಮಶಾಲೆಗೆ ಬರುವವರ ಉಪಯೋಗಕ್ಕಾಗಿ ಈ ಬಾವಿಯನ್ನು ಕಟ್ಟಿಸಿದೆ. ಅಹ್ಮದ್‌ಖಾನನ ಧರ್ಮಶಾಲೆಯ ಪಶ್ಚಿಮಕ್ಕೆ ಗುಡ್ಡದ ಮೇಲಿರುವ ಬಾವಿಯನ್ನು ದೇವರಪಲ್ಲಿ ಮುಮ್ಮಡಿಸೆಟ್ಟಿಗೆ ಪುಣ್ಯವಾಗಲೆಂದು ನಂಜೇದೇವರ ನಿರಾಸಿಮಠಕ್ಕೆ ದಾನಮಾಡಿದ್ದು ಬಾವಿಯ ಪಕ್ಕದಲ್ಲಿರುವ ಶಾಸನದಿಂದ ತಿಳಿಯುತ್ತದೆ.[28] ಅಹ್ಮದ್‌ಖಾನನ ಧರ್ಮಶಾಲೆಯ ದಕ್ಷಿಣಕ್ಕಿರುವ ಶಾಸನವು ಮತ್ತೊಂದು ಬಾವಿಯನ್ನು ಕಬಿರಾವುತನ ಮಗ ಪಿಲಿಕುಂಚಲಕನು ಬಯಿರಾವುತನಿಗೆ ಕೊಟ್ಟಿದ್ದನ್ನು ಉಲ್ಲೇಖಿಸುತ್ತದೆ.[29]

ಈಗ ತಳವಾರಘಟ್ಟ ಬಾಗಿಲೆಂದು ಕರೆಯುವ ಬಾಗಿಲಿನ ಮೂಲ ಹೆಸರು ಅರೆಶಂಕರಬಾವಿ ಬಾಗಿಲು ಎಂಬುದು ವಿಠಲ ದೇವಾಲಯದಲ್ಲಿರುವ ಕ್ರಿ.ಶ.೧೫೫೯ರ ಶಾಸನದಿಂದ ತಿಳಿಯುತ್ತದೆ.[30] ಬಾಗಿಲ ಹತ್ತಿರ ಅರೆಶಂಕರಬಾವಿ ಇತ್ತೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈ ಪ್ರದೇಶದಲ್ಲಿ ಅಗಸರ ಬಾವಿ ಇದ್ದುದು ಇದೇ ಶಾಸನದಿಂದ ತಿಳಿಯುತ್ತದೆ. ಉದಯಗಿರಿಯ ಬಾಗಿಲ ಹತ್ತಿರವಿರುವ ಶಾಸನವು ಆ ಪ್ರದೇಶದಲ್ಲಿ ಒಂದು ಬಾವಿ ಇದ್ದುದನ್ನು ಉಲ್ಲೇಖಿಸುತ್ತದೆ.[31] ಸರಸ್ವತಿ ದೇವಾಲಯದ ಹತ್ತಿರವಿರುವ ಶಾಸನದಿಂದ ಒಬ್ಬ ಮಹಿಳೆಯು ಒಂದು ಬಾವಿಯನ್ನು ಕಟ್ಟಿಸಿದ್ದು ತಿಳಿಯುತ್ತದೆ.

ಬೇಟೆಕಾರರ ಹೆಬ್ಬಾಗಿಲ ಈಶಾನ್ಯಕ್ಕೆ ಎರಡು ಬಾವಿಗಳಿವೆ. ಒಂದರ ಹೆಸರು ಲಿಂಗಬಾವಿ ಮತ್ತು ಇನ್ನೊಂದರ ಹೆಸರು ರಂಗನಾಥ ಬಾವಿ ಎಂಬುದು ಅಲ್ಲಿರುವ ಶಾಸನಗಳಿಂದ ತಿಳಿಯುತ್ತದೆ.[32] ರಂಗನಾಥ ಬಾವಿಯನ್ನು ತಿರಿವಿದ ಚಿಟಿನಾಗಿನೆನಿಯ ಮಗ ಚಿನ್ನಪನಾಯಂಡು ಕಟ್ಟಿಸಿದನು.

ದೇವಾಲಯಗಳ ಕೊಳಗಳು

ಸಾಮಾನ್ಯವಾಗಿ ದೇವಾಲಯಗಳು ತಮ್ಮದೇ ಆದ ಕೊಳ ಅಥವಾ ಬಾವಿಗಳನ್ನು ಹೊಂದಿವೆ. ಹೇಮಕೂಟದ ಮೇಲಿನ ಎರಡು ಶಾಸನಗಳು ಮಾತ್ರ ದೇವಾಲಯದೊಂದಿಗೆ ಕೊಳವನ್ನು ಅಗೆಸಿದ್ದನ್ನು ಉಲ್ಲೇಖಿಸುತ್ತವೆ. ರಾಘವಪಂಡಿತ ಮತ್ತು ಕಮಲಾಂಬರ ಮಕ್ಕಳು ವಿರೂಪಾಕ್ಷ ಪಂಡಿತ ಮತ್ತು ವಿನಾಯಕ ಪಂಡಿತರು ವಿರೂಪಾಕ್ಷ ಸಿದ್ಧ ಶ್ರೀಪಾದ ಶ್ರೀವಲ್ಲಭರ ದೇವಾಲಯವನ್ನು ಕಟ್ಟಿಸಿ ದೇವಾಲಯದ ಎಡಭಾಗದಲ್ಲಿ ಕೊಳವನ್ನು ಅಗೆಸಿದರು.[33]

ಮಾಳಿಗೆಕೂಪಾರಾಮ

ಹೊಸಪೇಟೆಯಿಂದ ವಿಜಯನಗರಕ್ಕೆ ಬರುವ ದಾರಿಯಲ್ಲಿ ಮಲಪನಗುಡಿಯ ಹತ್ತಿರ ರಸ್ತೆ ಬದಿಗೆ ಒಂದು ಬಾವಿಯಿದೆ. ಈ ಬಾವಿಯನ್ನು ಸೂಳೆಬಾವಿ ಅಥವಾ ಸುಳಿಬಾವಿಯೆಂದು ಕರೆಯುತ್ತಾರೆ. ಆದರೆ ಊರೊಳಗಿನ ಮಲ್ಲಿಕಾರ್ಜುನ ದೇವಾಲಯದ ಮುಂದಿರುವ ಶಾಸನ ಇದನ್ನು ಅರ್ಥಪೂರ್ಣವಾಗಿ ಮಾಳಿಗೆಕೂಪಾರಾಮವೆಂದು ಉಲ್ಲೇಖಿಸುತ್ತದೆ.[34] ವಿಜಯನಗರದ ಅರಸ ಒಂದನೇ ದೇವರಾಯನ ಕಾಲದಲ್ಲಿ ಕ್ರಿ.ಶ.೧೪೧೨ರಲ್ಲಿ ಬಿಸಿಲಹಳ್ಳಿಯ ಕಣಿವೆ ಮತ್ತು ಬಡವಲಿಯ ಕಣಿವೆ ಹಾದಿ ಕೂಡಿದ ಮಹಾಪಥದಲ್ಲಿ ಬುಳ್ಳೆನಾಯ್ಯನ ಮಗ ಹೆಗ್ಗಡೆ ಸೋವಣ್ಣ ಅಣ್ಣ ಅರವಟಿಗೆಯನ್ನಿಕ್ಕಿಸಿ ಮಾಳಿಗೆಕೂಪಾ ರಾಮವನ್ನು ಮಾಡಿಸಿದನು.

ಮಾಳಿಗೆಕೂಪಾರಾಮವು ಮಾಳಿಗೆ, ಕೂಪ ಮತ್ತು ಆರಾಮ ಅಶಬ್ದಗಳಿಂದ ಕೂಡಿದೆ. ಮಾಳಿಗೆ ಎಂದರೆ ಮೇಲ್ಛಾವಣಿ ಅಥವಾ ಮನೆಯ ಮೇಲಿನ ಹೊದಿಕೆ, ಕೂಪ ಎಂದರೆ ಬಾವಿ ಮತ್ತು ಆರಾಮ ಎಂದರೆ ವಿಶ್ರಾಂತಿಗಾಗಿ ಮಾಡಿದ ತೋಟ ಅಥವಾ ವನ. ಈಗ ಸ್ಥಳದಲ್ಲಿ ನಮಗೆ ಕಾಣುವುದು ಮಾಳಿಗೆ ಮತ್ತು ಕೂಪ ಮಾತ್ರ. ಸುತ್ತಲೂ ಇರಬೇಕಾಗಿದ್ದ ಅರಾಮ ಈಗಿಲ್ಲ. ಆಳವಾದ ಬಾವಿಗೆ ಪೂರ್ವಕ್ಕೆ ಮೆಟ್ಟಿಲುಗಳಿವೆ. ಬಾವಿಯ ಕೆಳಭಾಗ ಚೌಕಾಕಾರವಾಗಿದ್ದು, ಮೇಲ್ಭಾಗ ಅಷ್ಟಭುಜಾಕಾರವಾಗಿದೆ. ಅಷ್ಟಭುಜಾಕಾರದ ಭಾಗದಲ್ಲಿ ಸುತ್ತಲೂ ಕೈಸಾಲೆಯಿದೆ. ಮೆಟ್ಟಿಲುಗಳ ಮೂಲಕ ಕೈಸಾಲೆಯ ಒಳಗೆ ಹೋಗಬಹುದು. ಕೈಸಾಲೆಯಿಂದ ಕಮಾನುಗಳು ಬಾವಿಯೊಳಕ್ಕೆ ತೆರೆದುಕೊಳ್ಳುತ್ತವೆ. ಕೈಸಾಲೆಯ ಮೇಲಿನ ಮಾಳಿಗೆಯಿಂದ ಮಾಳಿಗೆ ಶಬ್ದವು ಕೂಪದೊಂದಿಗೆ ಸೇರಿ ಸುತ್ತಲೂ ಇದ್ದ ಅರಾಮದೊಂದಿಗೆ ಮಾಳಿಗೆಕೂಪಾರಾಮವಾಗಿದೆ.

ಸೋವಣ್ಣ ಅಣ್ಣನು ಮಾಡಿದ ಭೂದಾನದಿಂದ ಮಾಳಿಗೆಕೂಪಾರಾಮ ಮತ್ತು ಅರವಟ್ಟಿಗೆಯನ್ನು ಹೇಗೆ ನಿರ್ಮಿಸಬೇಕೆಂಬುದನ್ನು ಶಾಸನದಲ್ಲಿ ವಿವರಿಸಲಾಗಿ ತಿಳಿಸಲಾಗಿದೆ.

“ಯೀ ಮೂರು ವ್ರಿತ್ತಿಯ ಬೆಳೆಯ ಆದಾಯವನು ಮೂರು ಭಾಗವಮಾಡಿ ಆ
ಅರವಟ್ಟಿಗೆ ನಡೆಸುವ ವಿರುಪಂಣಗಳಿಗೆ ವೊಂದು ಭಾಗೆ ಅರವಟ್ಟಿಗೆಗೆ ನೀರ
ಹೊಯಿವುದಕ್ಕೆ ಮರಗಳಿಗೆ ನೀರನೆರವದಕ್ಕೆ ಮಾಳಿಗೆ ಗಿಳಿಲಾದರೆ ಕಟ್ಟುವದಕ್ಕೆ
ಅರವಟ್ಟಿಗೆಗೆ ಗುಡಾಣ ಬಿಂದಿಗೆ ಕರಗ ಮಾಘೆಗಳ ಕ್ರಯಕ್ಕೆ ಸುತ್ತಣ ಮನಿ
ಅಣಿಮಾಡಿಕೊಂಡು ಯಿಹದಕ್ಕೆ ಬಾವಿ ಹೊಳಿದರೆ ತೋಡುವುದಕ್ಕೆ ಯಿಷ್ಟರ
ಉಪಕ್ಷಯಕ್ಕೆ ಮಿಕ್ಕ ಎರಡು ಭಾಗೆ ಸಲುಉದು ಯೀ ಮರಿಯಾದೆಯಲು ಆ
ವಿರುಪಂಣಗಳು ತಂನ ಮಕ್ಕಳು ಮಕ್ಕಳು ತಪ್ಪದೆ ಅರವಟಿಗೆಯ ಧಂರ್ಮವನು
ನಡೆಸದೆ ಉಳಿದರೆ ಆರಾದರೆ ಧಂಮ್ಮಿಷ್ಟರಾಗಿ ಯಿದ್ದವರು ಯೀ ಶಾಸನವನು
ವೋದಿಸಿ, ನೋಡ ಆ ವ್ರಿತ್ತಿಗಳನೂ ವಿಚಾರವ ಮಾಡಿ ಮುಂದೆ ಆ
ಅರವಟಿಗೆಯ ಧಂರ್ಮ್ಮವ ನಡೆಸುವಾತಗೆ ವೊಂದು ಭಾಗ ಸಲುಉದು
ಅರವಟಿಗೆಗೆ ನೀರನೆರವರ ಜೀವಿತ ಮೊದಲಾದ ಎಲ್ಲಾ ಉಪಕ್ಷಯಕ್ಕೆ ಆ
ಉಳಿದ ಎರಡು ಭಾಗೆ ಸಲುಉದು.”

ಪ್ರವಾಸಿಗಳಿಗೆ ರಸ್ತೆ ಬದಿಯ ಸೌಲಭ್ಯಗಳು ಹೇಗಿರಬೇಕೆಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.

ತೊಟ್ಟಿಗಳು

ವಿಜಯನಗರದಲ್ಲಿ ಏಕಶಿಲೆಯಲ್ಲಿ ಮಾಡಿದ ತೊಟ್ಟೆಗಳನ್ನು ಅಲ್ಲಲ್ಲಿ ಕಾಣುತ್ತೇವೆ. ಇವುಗಳಲ್ಲಿ ಮೂರರ ಬಗ್ಗೆ ಶಾಸನಗಳಲ್ಲಿ ಉಲ್ಲೇಖಗಳಿವೆ. ವಿರೂಪಾಕ್ಷ ತೇರು ಬೀದಿಯಲ್ಲಿ ಕಂಪ್ಲಿಮಠದ ಪಕ್ಕದಲ್ಲಿರುವ ತೊಟ್ಟಿಯನ್ನು ಅಬರಾಜು ತಿಮಪ ಮಾಡಿಸಿದನು.[35] ಕೋದಂಡರಾಮ ದೇವಾಲಯದ ಹತ್ತಿರವಿರುವ ತೊಟ್ಟಿಯನ್ನು ತುಳುಬನನಾಸಿಯ ಮಗ ಕತ್ತೆಲಬಯ್ಯನು ಮಾಡಿಸಿದನು.[36] ಮಾಲ್ಯವಂತ ಪರ್ವತದ ಈಶಾನ್ಯಕ್ಕೆ ತುರ್ತಾ ಕಾಲುವೆಯ ಬಲದಂಡೆಯ ಹತ್ತಿರ ದೊಡ್ಡ ಕಲ್ಲಿನೊಳಗೆ ಮಾಡಿದ ತೊಟ್ಟಿಯನ್ನು ಓಬಯವ್ವೆಯು ದುರಗಂಟು ರಘುನಾಥ ದೇವರಿಗೆ ಮಾಡಿಸಿದಳು.[37]

ಅರವಟ್ಟಿಗೆ

ಯಾತ್ರಿಕರ ಅನುಕೂಲಕ್ಕಾಗಿ ರಸ್ತೆ ಬದಿಯಲ್ಲಿ ಅರವಟ್ಟಿಗೆಗಳನ್ನಿಡುವ ಪದ್ಧತಿಯಿತ್ತು. ಮಲಪನಗುಡಿಯಲ್ಲಿದ್ದ ಅರವಟ್ಟಿಗೆಯನ್ನು ಈಗಾಗಲೇ ಗಮನಿಸಿದ್ದೇವೆ. ಆನೆಗೊಂದಿಯ ಉತ್ತರಕ್ಕಿರುವ ಸುಂಕದ ಬಾಗಿಲಿನ ಹತ್ತಿರ ಇದ್ದ ಅರವಟ್ಟಿಗೆಗೆ ಭೂಮಿಯನ್ನು ದಾನವಾಗಿ ಕೊಟ್ಟಿದ್ದು ಅಲ್ಲಿಯ ಎರಡು ಶಾಸನಗಳಿಂದ ತಿಳಿಯುತ್ತದೆ.[38]

ನೀರಿನ ವ್ಯವಸ್ಥೆಗೆ ಸಂಬಂಧಿಸಿದಂತೆ ವಿವಿಧ ಮಹತ್ವಪೂರ್ಣ ಮಾಹಿತಿಯನ್ನೊಳಗೊಂಡ ಶಾಸನಗಳು ವಿಜಯನಗರದ ನೀರಿನ ವ್ಯವಸ್ಥೆಯನ್ನು ಕೂಲಂಕಷವಾಗಿ ಅಧ್ಯಯನ ನಡೆಸುವುದಕ್ಕೆ ಅತ್ಯಗತ್ಯವಾದ ಪೂರಕ ಮಾಹಿತಿಯನ್ನು ಒದಗಿಸುತ್ತವೆ.

ಆಕರ
ವಿಜಯನಗರ ಅಧ್ಯಯನ, ಸಂ.೧ ೧೯೯೬, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು, ಪು. ೬೨-೭೫.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] ಸೌಇಂಇ, ೪, ಸಂ. ೨೬೭

[2] ವಿಪ್ರೊರೀ., ೧೯೮೪-೮೭, ಸಂ.೧

[3] ಅದೇ, ಸಂ.೭೩

[4] ಅದೇ, ಸಂ. ೧೮

[5] ಸೌಇಂಇ, ೪, ಸಂ. ೨೬೬

[6] ಅದೇ, ಸಂ. ೨೬೫

[7] ಅದೇ, ೯(೨), ಸಂ. ೬೬೮

[8] ಅದೇ, ೪, ಸಂ. ೨೪೫

[9] ವಿಪ್ರೋರೀ, ೧೯೮೮-೯೧, ಸಂ.೨

[10] ಸೌಇಂಇ, ೯(೨), ಸಂ. ೫೦೪

[11] ವಿಪ್ರೊರೀ, ೧೯೮೩-೮೪, ಸಂ.೪೩

[12] ಸೌಇಂಇ, ೪, ಸಂ. ೨೫೫

[13] ಅದೇ, ಸಂ. ೨೪೫

[14] ವಿಪ್ರೊರೀ, ೧೯೮೪-೮೭, ಸಂ. ೧೨೯

[15] ಅದೇ, ಸಂ. ೮೯

[16] ಅದೇ.ಸಂ. ೧೪೫

[17] ಸೌಇಂಇ, ೯(೨), ಸಂ. ೫೦೪

[18] ವಿಪ್ರೊರೀ, ೧೯೮೩-೮೪, ಸಂ. ೧೨

[19] ಸಿ.ಟಿ.ಎಂ. ಕೊಟ್ರಯ್ಯ, ೧೯೯೫, ಪಂಪಾ ಸರಸ್ಸು, ಕಿಷ್ಕಿಂದ ಅಂಡ್ ಹಂಪಿ ಎಪಿಗ್ರಾಫಿ, ನ್ಯೂಮಿಸ್ಟ್ಯಾ ಅಂಡ್ ಅದರ್ ಅಸ್ಪಕ್ಟ್ಸ್ ಇನ್ ಕರ್ನಾಟಕ, (ಸಂ.) ಡಿ.ವಿ. ದೇವರಾಜ ಮತ್ತು ಚನ್ನಬಸಪ್ಪ ಎಸ್. ಪಾಟೀಲ, ಮೈಸೂರು, ಪು. ೧೪೩-೧೪೮.

[20] ಸೌಇಂಇ, ೯(೨), ಸಂ. ೫೬೪

[21] ವಿಪ್ರೊರೀ, ೧೯೮೪-೮೭, ಸಂ. ೧೦೫

[22] ಅದೇ, ೧೯೮೩-೮೪, ಸಂ.೫೮

[23] ಅದೇ, ೧೯೮೪-೮೭, ಸಂ. ೧೦೯

[24] ಅದೇ, ೧೯೮೪-೮೭, ಸಂ. ೨೬, ೨೭

[25] ಅದೇ, ೧೯೮೪-೮೭, ಸಂ. ೨೮

[26] ಅದೇ, ೧೯೮೪-೮೭, ಸಂ. ೧೫

[27] ಸೌಇಂಇ, ೯(೨), ಸಂ. ೪೪೭

[28] ವಿಪ್ರೊರೀ, ೧೯೮೪-೮೭, ಸಂ.೯೮

[29] ಅದೇ, ಸಂ.೯೯

[30] ಸೌಇಂಇ, ೯(೨), ಸಂ. ೬೬೮

[31] ವಿಪ್ರೊರೀ, ೧೯೮೪-೮೭, ಸಂ. ೧೩೮

[32] ವಿಪ್ರೊರೀ, ೧೯೮೪-೮೭, ಸಂ. ೧೦೭, ೧೦೮, ೧೧೦

[33] ಆರಿಇಂಎ, ೧೯೩೪-೩೫, ಸಂ.ಬಿ. ೩೫೧

[34] ಸೌಇಂಇ, ೯(೨), ಸಂ.೪೩೬

[35] ವಿಪ್ರೊರೀ, ೧೯೮೪-೮೭, ಸಂ.೩೩

[36] ಅದೇ, ಸಂ. ೬೮

[37] ಅದೇ, ಸಂ. ೧೨೮

[38] ಅದೇ, ಸಂ. ೧೬೬-೧೬೭