ಹಂಪಿಯ ಕೇಂದ್ರ ಬಿಂದುವಿನಲ್ಲಿ ಕೆಲವು ಲೌಕಿಕ ಕಟ್ಟಡಗಳಿವೆ. ಇವು ಇಸ್ಲಾಂ ವಾಸ್ತುಶಿಲ್ಪದ ಲಕ್ಷಣವನ್ನು ಹೊಂದಿದೆ. ಈ ಸ್ಮಾರಕಗಳ ಬಗೆಗೆ ಚಾರಿತ್ರಿಕ, ಶಾಸನಾಧಾರಿತ, ಜನಪದ ಅಥವಾ ಸಾಹಿತ್ಯಕ ಆಧಾರಗಳು ದೊರೆತಿಲ್ಲ. ಈ ಸ್ಮಾರಕಗಳಲ್ಲಿ ಕೆಲವು ಅರಮನೆಗಳಾದರೆ, ಕೆಲವು ಸ್ನಾನಗೃಹ, ಕಾರಂಜಿ, ಆನೆಶಾಲೆ ಮತ್ತು ಜಲಕ್ರೀಡಾ ಸೌಧಗಳು. ಇವುಗಳೆಲ್ಲ ಒಂದೇ ರೀತಿಯ ವಿಶಿಷ್ಟ ವಾಸ್ತು ಲಕ್ಷಣವನ್ನು ಹೊಂದಿವೆ. ಸ್ಮಾರಕಗಳಲ್ಲಿ ಕೆಲವು ಮೂಲರೂಪದಲ್ಲಿದ್ದರೆ ಇನ್ನುಳಿದವುಗಳಲ್ಲಿ ಕಲ್ಲಿನ ತಳಪಾಯ ಮಾತ್ರ ಕಾಣಸಿಗುತ್ತವೆ. ಹೆಚ್ಚಿನ ಸ್ಮಾರಕಗಳ ಹೆಸರನ್ನು ಸಿವೆಲ್, ಲಾಂಗ್‌ಹರ್ಸ್ಟ್‌ಅವರು ನೀಡಿದ್ದಾರೆ. ಈ ಎಲ್ಲಾ ಸ್ಮಾರಕಗಳನ್ನು ವಿಜಯನಗರದರಸರು ನಿರ್ಮಿಸಿದ್ದಾರೆ. ಈ ನಿರ್ಮಿತಿಗಳನ್ನು ವಿಜಯನಗರದ ಅರಸರು, ಅಮಾತ್ಯರು, ಪ್ರತಿಷ್ಠಿತರು ಉಪಯೋಗಿಸಿರಬೇಕು.[1] ಇಲ್ಲಿಯ ಕೆಲವು ಕಟ್ಟಡಗಳು ಕ್ರಿ.ಶ. ೧೫೬೫ರ ನಂತರ ಅಂದರೆ ರಕ್ಕಸತಂಗಡಿ ಯುದ್ಧದ ನಂತರ ನಿರ್ಮಿಸಲಾಗಿದೆ ಎಂದು ಗುರುತಿಸಿದ್ದಾರೆ. ವಿಜಯನಗರದ ರಾಜಕೀಯ ಇತಿಹಾಸವನ್ನು ನೋಡಿದರೆ, ರಕ್ಕಸತಂಗಡಿಯ ನಿರ್ಣಾಯಕ ಯುದ್ಧದ ನಂತರ ವಿಜಯನಗರ ಪಟ್ಟಣದಲ್ಲಿ ಯಾವುದೇ ಭವ್ಯ ಕಟ್ಟಡ ಕಟ್ಟುವ ಪ್ರಕ್ರಿಯೆ ನಡೆದಿಲ್ಲವೆಂದು ಕಂಡುಬರುತ್ತದೆ. ಇದರಿಂದ ಈ ಕಟ್ಟಡಗಳನ್ನು ಕ್ರಿ.ಶ. ೧೫೬೫ರ ನಂತರ ನಿರ್ಮಾಣ ಮಾಡದೆ, ಅದಕ್ಕೂ ಮೊದಲೇ ಅಂದರೆ ವಿಜಯನಗರದ ಪ್ರಖ್ಯಾತ ರಾಜರ ಆಳ್ವಿಕೆಯಲ್ಲೇ ನಿರ್ಮಾಣವಾಗಿದೆ ಎಂದು ಹೇಳಬಹುದು.

ಕ್ರಿ.ಶ. ೧೪ನೇ ಶತಮಾನದಲ್ಲಿ ದೌಲತಾಬಾದ್ ಹಾಗೂ ಗುಲ್ಬರ್ಗಾಗಳಲ್ಲಿ ಮುಸ್ಲಿಂ ರಾಜರು ನೆಲಗಳನ್ನು ಹೊಂದಿದ್ದರು. ನಂತರದ ಎರಡು ಶತಮಾನಗಳಲ್ಲಿ ಇನ್ನೂ ಕೆಲವು ಪ್ರದೇಶಗಳಲ್ಲಿ ಮುಸ್ಲಿಂ ರಾಜ್ಯಗಳು ಅಸ್ತಿತ್ವಕ್ಕೆ ಬಂದವು. ಇವುಗಳಿಗೆ ಉತ್ತಮ ಉದಾಹರಣೆ ಎಂದರೆ ಬೀದರ್ ಹಾಗೂ ಫಿರೋಜಾಬಾದ್‌, ಕ್ರಿ.ಶ. ೧೬೧೭ರಲ್ಲಿ ಬಿಜಾಪುರ ಹಾಗೂ ಗೋಲ್ಕಂಡ ರಾಜ್ಯಗಳು ಪ್ರಖ್ಯಾತಿ ಹೊಂದಿದವು. ಹೊಸದಾಗಿ ಸ್ಥಾಪನೆಯಾದ ಎಲ್ಲ ಪ್ರದೇಶಗಳಲ್ಲಿ ಮುಸ್ಲಿಂ ಶೈಲಿಯ ಕಟ್ಟಡಗಳು, ಅರಮನೆ, ಹೆಬ್ಬಾಗಿಲು, ಗೋರಿಗಳು, ಗುಮ್ಮಟಗಳ ನಿರ್ಮಾಣವನ್ನು ಕಾಣಬಹುದು.

೧೫ನೇ ಶತಮಾನದ ಮುಸ್ಲಿಂ ವಾಸ್ತುಶಿಲ್ಪ ಸರಳವಾಗಿದ್ದು ಅಲಂಕರಣಾ ರಹಿತವಾಗಿದೆ. ಇಲ್ಲಿ ಕಂಬಗಳ ಮೇಲೆ ಕಮಾನುಗಳನ್ನು ನಿರ್ಮಿಸಿರುವುದನ್ನು ಕಾಣಬಹುದು. ಅಲ್ಲದೆ ಇಲ್ಲಿಯ ಗೋಡೆಗಳು ಇಳಿಜಾರು ಮೇಲ್ಮೈಯನ್ನು ಹೊಂದಿದೆ. ಕ್ರಿ.ಶ.೧೬ನೇ ಶತಮಾನದಲ್ಲಿ ಈ ವಾಸ್ತುವಿನಲ್ಲಿ ಹಲವು ಬದಲಾವಣೆಗಳನ್ನು ಕಾಣಬಹುದು. ಈ ಬದಲಾವಣೆಗಳು ಕಮಾನುಗಳ ನಿರ್ಮಾಣ, ಗುಮ್ಮಟ, ಗುಮ್ಮಟದ ಮೂಲೆಯ ಕಮಾನುಗಳು ಹೆಚ್ಚಾಗಿ ಕಾಣಸಿಗುತ್ತವೆ. ಇವುಗಳಲ್ಲದೆ ಕಟ್ಟಡದ ಮೇಲೆ ಇರುವ ಕೈಪಿಡಿ ಗೋಡೆ ಮತ್ತು ನಿಗದಿತ ಅಳತೆಯಲ್ಲಿ ನಿರ್ಮಿಸಿರುವ ಸಣ್ಣ ಮಿನಾರ್ ಗಳನ್ನು ಕಾಣಬಹುದು.

ವಿಜಯನಗರದ ವಾಸ್ತುಶಿಲ್ಪಿಗಳು ಮುಸ್ಲಿಂ ಶೈಲಿಯ ವಾಸ್ತುವಿನ ಬಗೆಗೆ ಅರಿವನ್ನು ಹೊಂದಿದ್ದರು. ವಿಜಯನಗರ ಹಾಗೂ ನೆರೆಯ ಬಹುಮನಿ ಸುಲ್ತಾನರೊಡನೆ ಆಗಿಂದಾಗ್ಗೆ ಯುದ್ಧ ನಡೆಯುತ್ತಿದ್ದವು. ಕೆಲವು ವಿಜಯನಗರದ ಅರಸರು ತಮ್ಮನ್ನು ಹಿಂದೂರಾಜ ಸುರತ್ರಾಣ ಎಂದು ಕರೆದುಕೊಂಡಿದ್ದಾರೆ. ಅಂದರೆ ಸುಲ್ತಾನ ಎನ್ನುವುದು ರಾಜತ್ವದ ಪರಾಕಾಷ್ಠೆ ಎಂದು ತಿಳಿದಿದ್ದರಿಂದ ಆ ಹೆಸರನ್ನು ಹೊಂದಿದ್ದರೆಂದು ತೋರುತ್ತದೆ. ಪದೇಪದೇ ಯುದ್ಧಗಳು ನಡೆಯುತ್ತಿದ್ದರಿಂದ ಉತ್ತಮ ಬಿಲ್ಲುಗಾರರು ಹಾಗೂ ಕುದುರೆ ಸವಾರರ ಅವಶ್ಯಕತೆ ಮನಗಂಡು ತಮ್ಮ ಸೈನ್ಯದಲ್ಲಿ ಪರಿಣಿತ ಕುದುರೆ ಸವಾರರು ಹಾಗೂ ಬಿಲ್ಲುಗಾರರನ್ನು ಸೇರಿಸಿಕೊಂಡಿದ್ದರು. ಈ ದಿಸೆಯಲ್ಲಿ ಮೊದಲು ಕಾರ್ಯಪ್ರವೃತ್ತನಾದವನು ಎರಡನೇ ದೇವರಾಯ, ಹಲವಾರು ಜನ ಮುಸ್ಲಿಂ ಸೈನಿಕರನ್ನು ತನ್ನ ಸೈನ್ಯದಲ್ಲಿ ಸೇರಿಸಿಕೊಂಡಿದ್ದನು. ಇವರಲ್ಲಿ ಮುಖ್ಯರಾದವರು ಮತ್ತು ಪ್ರಭಾವಿಗಳು ವಿಶಿಷ್ಟ ಶೈಲಿಯ ಕಟ್ಟಡಗಳ ನಿರ್ಮಾಣವನ್ನು ಮಾಡಿದರು. ಇಲ್ಲಿರುವ ಕೆಲವು ಗೋರಿಗಳು ೧೪೧೫ನೇ ಶತಮಾನದ ಗೋರಿಗಳ ಶೈಲಿಯನ್ನು, ಅಲ್ಲದೆ ಕೆಲವು ಗುಲ್ಬರ್ಗ ಗೋರಿಗಳ ಶೈಲಿಯನ್ನೂ ಹೋಲುತ್ತವೆ. ಇಲ್ಲಿರುವ ಕಟ್ಟಡಗಳು ರಾಜನಿಗೆ ಹಾಗೂ ರಕ್ಷಣ ವ್ಯವಸ್ಥೆಗೆ ಪೂರಕವಾಗಿವೆ.

ಈ ರೀತಿಯ ರಕ್ಷಣ ವ್ಯವಸ್ಥೆಗೆ ಅನುಕೂಲ ಕಲ್ಪಿಸುವ ಕಟ್ಟಡಗಳು ವಿಜಯನಗರದಲ್ಲಿ ಕ್ರಿ.ಶ.ಚ ೧೫೬೫ರ ನಂತರ ವಿಜಯನಗರದಲ್ಲಿ ಕಾಣಬರದಿದ್ದರೂ ಮುಂದೆ ಇವು ಚಂದ್ರಗಿರಿ ಹಾಗೂ ಪೆನುಗೊಂಡೆಯಲ್ಲಿ ವೃದ್ಧಿಯಾಗಿರುವುದನ್ನು ಕಾಣಬಹುದು.

ಕಮಲಾಪುರದಿಂದ ಹಂಪಿಗೆ ಹೋಗುವ ದಾರಿಯಲ್ಲಿ ಅಷ್ಟಕೋನಾಕೃತಿಯ ನೀರಿನ ಕಾರಂಜಿ ಮಂಟಪವಿದೆ. ಈ ಮಂಟಪದ ಮಧ್ಯದಲ್ಲಿ ಕೆಳಭಾಗಕ್ಕೆ ಹೊಂದಿಕೊಂಡಂತೆ ಕೆಲವು ಮೆಟ್ಟಿಲುಗಳಿವೆ. ಮೊದಲನೆಯದು ಅಷ್ಟಕೋನಾಕೃತಿಯಿದ್ದರೆ, ನಂತರದ್ದು ಕಮಲದ ದಳಗಳನ್ನು ಹೊಂದಿದೆ. ಅದರ ನಂತರ ಕೆಳಭಾಗ ಚೌಕಾಕೃತಿಯಲ್ಲಿನ ಕಾರಂಜಿಯ ವ್ಯವಸ್ಥೆ ಹೊಂದಿದೆ. ಈ ಅಷ್ಟಕೋನಾಕೃತಿಯ ಮಧ್ಯಭಾಗದಿಂದ ನಾಲ್ಕು ದಿಕ್ಕಿಗೂ ಚೂಪಾದ ಕಮಾನಿನ ದ್ವಾರಗಳಿವೆ. ಎರಡು ದ್ವಾರಗಳ ಮಧ್ಯೆ ಮೂಲೆಯ ಮೇಲೆ ಗೋಡೆಯಿದ್ದು, ಮಧ್ಯಭಾಗಕ್ಕೆ ಕಮಾನಿನ ಕಿಟಕಿಯಿದೆ. ಈ ಕಿಟಕಿಯ ಮೇಲೆ ಮತ್ತೊಂದು ಕಮಾನಿನ ಮಾದರಿಯನ್ನು ಗಾರೆಯಿಂದ ಮೂಡಿಸಲಾಗಿದೆ. ಒಟ್ಟು ನಾಲ್ಕು ಕಮಾನಿನ ಆಕಾರಗಳನ್ನು ಕಾಣಬಹುದು. ಇವುಗಳ ಮೇಲೆ ಗುಮ್ಮಟದ ಕೆಳಭಾಗದಲ್ಲಿ ಬಹು ಕಮಾನಿನ ಆಕಾರದ ಗೂಡುಗಳ ಪಟ್ಟಿಕೆಯಿದೆ. ಈ ಪಟ್ಟಿಕೆಗಳ ಕೆಳಭಾಗದಲ್ಲಿ ಬಾಣದ ಮೊನೆಯ ಅಲಂಕರಣೆಯಿದ್ದರೆ ಪಟ್ಟಿಕೆಯ ಮೇಲು ಭಾಗದಲ್ಲಿ ಜಾಲಂದ್ರದ ಸಣ್ಣ ಪಟ್ಟಿಕೆಯಿದೆ. ಇದರ ಮೇಲಿರುವ ಗುಮ್ಮಟದ ಒಳಭಾಗವು ಯಾವುದೇ ಅಲಂಕರಣೆ ಹೊಂದಿಲ್ಲ. ಇಲ್ಲಿರುವ ಏಕಶಿಲಾ ತೊಟ್ಟಿಯಲ್ಲಿ ಹಾಲನ್ನು ತುಂಬಿ ಹಬ್ಬದ ದಿನಗಳಲ್ಲಿ ಬಡವರಿಗೆ ನೀಡುತ್ತಿದ್ದರು ಎಂದು ಹೇಳಲಾಗಿದೆ.[2]

ಕಾರಂಜಿಯ ಮಧ್ಯಭಾಗದ ಸುತ್ತ ಪ್ರಾಂಗಣವಿದೆ. ಮಧ್ಯ ಕಮಾನುಗಳು ಮತ್ತು ಅಷ್ಟಕೋನಾಕೃತಿಯ ಗುಮ್ಮಟವಿದೆ. ಮಧ್ಯದ ಕಾರಂಜಿಯ ಸುತ್ತ ನಾಲ್ಕು ಬಾಗಿಲು ಹಾಗೂ ಕಿಟಕಿ ಹೊಂದಿದ ಗೋಡೆಯಿದೆ. ನಾಲ್ಕು ಬಾಗಿಲಿನ ಮುಂದಿರುವ ಪ್ರಾಂಗಣದ ಚತ್ತಿಗೆ ಅಷ್ಟಕೋನಾಕೃತಿಯ ಗುಮ್ಮಟವಿದೆ. ಅದೇ ರೀತಿ ಗೋಡೆಯ ಮಧ್ಯೆ ಕಿಟಕಿ ಹೊಂದಿರುವ ಪ್ರಾಂಗಣದ ಚತ್ತಿನಲ್ಲಿ ಷಡ್‌ಕೋನಾಕೃತಿಯ ಮೇಲ್ಛಾವಣಿ ಚೂಪಾಗಿದೆ.

ಈ ಕಟ್ಟಡದ ಹೊರಭಾಗ ಯಾವುದೇ ಅಲಂಕರಣೆ ಹೊಂದಿರುವುದಿಲ್ಲ. ಪೂರ್ವ, ಪಶ್ಚಿಮ ಮತ್ತು ದಕ್ಷಿಣ ಕಮಾನಿನ ಹೊರಭಾಗದಲ್ಲಿ ಬಹು ಕಮಾನಿನ ಗುಚ್ಛದ ಗಾರೆಯ ಉಬ್ಬು ಅಲಂಕರಣೆಯಿದೆ. ಕಟ್ಟಡದ ಮೇಲೆ ಕೈಪಿಡಿ ಗೋಡೆಯಿದೆ. ಇಲ್ಲಿ ಬಾಣದ ಮೊನೆಯ ಹಾಗೆಯೆ ಮೊನೆಯ ಹೊರ ತುದಿಯಲ್ಲಿ ದುಂಡನೆಯ ಮಣಿಗಳ ಅಲಂಕರಣವಿದೆ. ಮೂಲೆಗಳ ಮೇಲೆ ಅರೆ ಕಂಬಗಳಿವೆ. ಅದರ ಮೇಲೆ ಕಳಸದ ಅಲಂಕರಣೆಯಿದ್ದಿರಬೇಕು, ಆದರೆ ಇತ್ತೀಚಿನ ದಿನಗಳಲ್ಲಿ ಈ ಭಾಗ ಹಾಳಾಗಿದೆ ಎಂದು ತೋರುತ್ತದೆ. ಮುಖ್ಯ ಗೋಪುರದ ಹೊರಭಾಗವು ಅಲಂಕರಣೆಯಿಂದ ಕೂಡಿದೆ. ಇದರ ಮಧ್ಯಭಾಗವು ಅಷ್ಟಕೋನಾಕೃತಿಯ ಗುಮ್ಮಟವನ್ನು ಹೊಂದಿದ್ದು[3] ಅದರ ಮೇಲೆ ದುಂಡನೆಯ ಗೋಪುರ ಹಾಗೂ ಅದರ ತುದಿಯಲ್ಲಿ ಕಳಸವಿದ್ದಿರಬೇಕು.

ಈ ಕಾರಂಜಿಗೆ ನೀರನ್ನು ಸುಟ್ಟ ಮಣ್ಣಿನ ಕೊಳವೆಯ ಮೂಲಕ ಹಾಯಿಸಲಾಗುತ್ತಿತ್ತು. ಈ ರೀತಿ ನೀರು ಹಾಯಿಸಲು ಸುಟ್ಟ ಮಣ್ಣಿನ ಕೊಳವೆಗಳನ್ನು ಉಪಯೋಗಿಸುತ್ತಿದ್ದು, ಅವುಗಳ ಕುರುಹನ್ನು ಪೂರ್ವದಲ್ಲಿರುವ ಕೊಳವೆಗಳಿಂದ ಗುರುತಿಸಬಹುದಾಗಿದೆ. ಈ ಕಾರಂಜಿಗೆ ಪೂರ್ವ ದಿಕ್ಕಿನಲ್ಲಿ ಗಾರೆಯ ಒಂದು ದೊಡ್ಡ ತೊಟ್ಟಿಯಿದೆ. ಈ ತೊಟ್ಟಿಯಿಂದ ಮೂರು ಕೊಳವೆಗಳು ಬಂದಿವೆ. ಇವುಗಳಲ್ಲಿ ಒಂದನ್ನು ಉಪಯೋಗಿಸಿಕೊಂಡು ನೀರನ್ನು ಕಾರಂಜಿಗೆ ತಂದಿರಬೇಕು. ಇನ್ನುಳಿದ ಎರಡು ಕೊಳವೆಗಳು, ಈ ಕಟ್ಟಡದ ಮುಂಭಾಗದಿಂದ ಹಾಯ್ದು ಹೋಗುತ್ತದೆ. ಇಲ್ಲಿ ಕುರುಹುಗಳು ಹಾಳಾಗಿರುವುದರಿಂದ ಗುರುತಿಸುವುದು ಕಷ್ಟಕರವಾಗಿದೆ. ಈ ಜೋಡು ಕೊಳವೆಗಳನ್ನು ಇಟ್ಟಿಗೆ ಹಾಗೂ ಗಾರೆಯಿಂದ ವ್ಯವಸ್ಥಿತವಾಗಿ ಜೋಡಿಸಿ ಭದ್ರಪಡಿಸಲಾಗಿದೆ. ಈ ರೀತಿ ಮಾಡಿರುವುದರಿಂದ ಮಣ್ಣಿನ ಕೊಳವೆಗಳು ಗಟ್ಟಿಯಾಗಿ ಇರುವುದಲ್ಲದೆ, ಶೀಘ್ರವಾಗಿ ಹಾಳಾಗದ ರೀತಿ ಎಚ್ಚರವಹಿಸಲಾಗಿದೆ.

ಈ ಚೌಕಾಕಾರದ ತೊಟ್ಟಿಗೆ ಹೊರಗಿನಿಂದ ಅಂದರೆ, ಮಹಾನವಮಿ ದಿಬ್ಬದ ಬಳಿಯಿರುವ ನೀರಿನ ಕಾಲುವೆಯಿಂದ ನೀರನ್ನು ಒದಗಿಸುವ ವ್ಯವಸ್ಥೆ ಹೊಂದಿರಬೇಕು. ಇದಕ್ಕೆ ಸಂಬಂಧಿಸಿದಂತೆ ಅಲ್ಲಲ್ಲೆ ಮುರಿದು ಬಿದ್ದಿರುವ ಕೊಳವೆಗಳನ್ನು ಗುರುತಿಸಬಹುದಾಗಿದೆ.

ರಾಜಪ್ರಾಂಗಣದ ಪೂರ್ವಕ್ಕೆ ಮಂಟಪದ ಮಾದರಿಯ ಅಷ್ಟಕೋನಾಕೃತಿಯ ಕಟ್ಟಡವಿದೆ. ಇಲ್ಲಿ ಎರಡು ಸಾಲಿನ ಕಂಬಗಳಿದ್ದು ಪ್ರತಿ ಸಾಲಿನಲ್ಲಿಯೂ ೨೪ ಕಂಬಗಳಿವೆ. ಮಧ್ಯದಲ್ಲಿ ಅಷ್ಟಕೋನಾಕೃತಿಯ ವೇದಿಕೆಯಿದೆ. ತೊಟ್ಟೆಯ ಅಧಿಷ್ಠಾನದ ಭಾಗ ಹಾಗೂ ವೇದಿಕೆಯ ಅಧಿಕಷ್ಠಾನದ ಭಾಗವನ್ನು ದೇವಸ್ಥಾನಗಳ ಅಧಿಷ್ಠಾನದ ರೀತಿ ಸಿಂಗರಿಸಲಾಗಿದೆ.

ಈ ಅಷ್ಟಕೋನಾಕೃತಿಯ ಕಟ್ಟಡದ ಹೊರಭಾಗದಲ್ಲಿ ಯಾವುದೇ ರೀತಿಯ ಅಲಂಕರಣೆಯಿರುವುದಿಲ್ಲ. ಆದರೆ ಒಳಭಾಗದಲ್ಲಿ ಹೂ ಮತ್ತು ಬಳ್ಳಿಯ ಅಲಂಕರಣೆಯಿದೆ. ಮಧ್ಯದ ತೊಟ್ಟಿಗೆ ನೀರನ್ನು ಸಣ್ಣ ಕಾಲುವೆಗಳ ಮೂಲಕ ನೀರನ್ನು ಹಾಯಿಸಲು ವ್ಯವಸ್ಥೆಯಿದೆ. ಈ ಸ್ಥಳಕ್ಕೆ ನೀರನ್ನು ಎಲ್ಲಿಂದ ಹಾಯಿಸುತ್ತಿದ್ದರು ಎಂದು ಹೇಳುವುದು ಕಷ್ಟಕರ. ರಾಜಪ್ರಾಂಗಣಕ್ಕೆ ನೀರನ್ನು ಹಾಯಿಸುವ ಪ್ರಮುಖ ಕೊಳವೆಗಳ ಒಂದು ಟಿಸಿಲು ಕೊಳವೆ ಮೂಲಕ ಇಲ್ಲಿಗೆ ನೀರನ್ನು ಹಾಯಿಸಲಾಗುತ್ತಿತ್ತು ಎಂದು ತೋರುತ್ತದೆ. ಈ ಸ್ನಾನಗೃಹದ ಸುತ್ತ ಉತ್ಖನನ ಮಾಡಿದಾಗ ಮಾತ್ರ ಈ ಬಗ್ಗೆ ಹೆಚ್ಚಿನ ಮಾಹಿತಿ ದೊರಕಬಹುದೆಂದು ತೋರುತ್ತದೆ. ತೊಟ್ಟಿಯ ಕೆಳಭಾಗ, ಪಕ್ಕದ ಗೋಡೆ, ವೇದಿಕೆಯ ಮೇಲ್ಭಾಗ ಹಾಗೂ ಪಕ್ಕದ ಗೋಡೆಗಳನ್ನು ಗಾರೆಯಿಂದ ಸಿಂಗರಿಸಲಾಗಿದೆ. ಈ ಗೃಹದ ಪೂರ್ವಕ್ಕೆ ಆಯಾತಕಾರದ ಕಟ್ಟಡವಿದೆ. ಈ ಕಟ್ಟಡಕ್ಕೆ ಆ ಉತ್ತರದಲ್ಲಿ ಬಾಗಿಲಿದೆ. ಇದರ ಮೇಲ್ಛಾವಣಿ ಹಾಳಾಗಿದೆ. ಬಹುಶಃ ಇದು ಕಮಾನಿನಾಕೃತಿಯ ಮೇಲ್ಛಾವಣಿ ಹೊಂದಿರಬೇಕು ಎನಿಸುತ್ತದೆ. ಈ ಮಂಟಪದ ಹೊರಭಾಗ ಸಂಪೂರ್ಣ ಹಾಳಾಗಿದ್ದು ಯಾವುದೇ ಅಲಂಕರಣೆಯಿರುವುದಿಲ್ಲ.

ರಾಣಿಯರ ಸ್ನಾನಗೃಹ ಎಂದು ಕರೆಯುವ ಕಟ್ಟಡವು ಕಮಲಾಪುರ ಹಂಪಿ ರಸ್ತೆಯ ಬದಿಯಲ್ಲಿದೆ. ಈ ಸ್ನಾನಗೃಹ ಅಥವಾ ಜಲಕ್ರೀಡಾ ಸೌಧ ನಿರ್ಮಾಣದ ಬಗೆಗೆ ನಿಖರವಾದ ಮಾಹಿತಿಲ್ಲ. ಈ ಕಟ್ಟಡವನ್ನು ಯಾರು ನಿರ್ಮಾಣದ ಮಾಡಿದರು ಮತ್ತು ಇದರ ಉಪಯೋಗ ಮಾಡಿದ ಬಗೆಗೆ ನಿಖರವಾದ ದಾಖಲೆಗಳಿಲ್ಲ. ಈ ಕಟ್ಟಡವು ಚೌಕಾಕಾರವಾಗಿದ್ದು, ಅದರ ಸುತ್ತಲೂ ನೀರಿನ ಕಾಲುವೆ ಇದೆ.[4] ಪೂರ್ವ ಭಾಗದಲ್ಲಿರುವ ಸಣ್ಣ ದೋಣಿಯ ಮೂಲಕ ನೀರನ್ನು ಹರಿಸಲಾಗುತ್ತಿತ್ತು. ಈ ಕಟ್ಟಡದ ಮಧ್ಯದಲ್ಲಿರುವ ಚೌಕಾಕಾರದ ತೊಟ್ಟೆಯ ಸುತ್ತ ಸುಮಾರು ೪ ಮೀಟರ್ ಅಗಲದ ಪ್ರಾಂಗಣವಿದೆ. ಇಲ್ಲಿ ೨೪ ಕಾಮಾನಿನ ಚಾವಣಿ ಹಾಗೂ ಕಂಬಗಳಿವೆ.[5] ಪ್ರತಿ ಅಂಕಣದ ತುದಿಯಲ್ಲಿರುವ ಹೊರಗೋಡೆಯಲ್ಲಿ ಸಣ್ಣ ಕಮಾನುಗಳ ಕಿಟಕಿಗಳನ್ನು ನಿರ್ಮಿಸಲಾಗಿದೆ. ಪೂರ್ವ, ಪಶ್ಚಿಮ, ಉತ್ತರ ಗೋಡೆಗಳ ಮಧ್ಯಭಾಗದಲ್ಲಿ ದೊಡ್ಡದಾದ ತೆರೆದ ಕಮಾನುಗಳಿವೆ. ದಕ್ಷಿಣದ ಮಧ್ಯಭಾಗವು ಮುಂಚಾಚಿದ ಅಟ್ಟಣಿಗೆಯನ್ನು ಹೊಂದಿದೆ. ಇದು ಮುಂದಿರುವ ಕಾಲುವೆಯ ಮೇಲೆ ಚಾಚಿಕೊಂಡಿದೆ. ಈ ಅಟ್ಟಣಿಗೆಯ ಪಕ್ಕದಲ್ಲಿ ಚಿಕ್ಕಚಿಕ್ಕ ಕಮಾನುಗಳುಳ್ಳ ಪ್ರವೇಶದ್ವಾರವಿದೆ. ಈ ಪ್ರವೇಶದ್ವಾರದ ಪಕ್ಕದಲ್ಲಿ ಗೋಡೆಯು ಸ್ವಲ್ಪ ಮುಂಚಾಚನ್ನು ಹೊಂದಿದೆ ಇಲ್ಲಿ ಒಳಭಾಗಕ್ಕೆ ಹೊಂದಿಕೊಂಡಂತೆ ಉಪ್ಪರಿಗೆಯ ಮೇಲೆ ಹತ್ತಿ ಹೋಗಲು ಮೆಟ್ಟಿಲುಗಳಿವೆ.

ಈ ಕಟ್ಟಡದ ಒಳಭಾಗದಲ್ಲಿನ ಅಂಕಣದ ಸುತ್ತಲೂ ಚೂಪಾದ ಕಮಾನುಗಳನ್ನು ಮೂರು ಭಾಗದಲ್ಲಿ ಕಾಣಬಹುದು. ಈ ಕಮಾನುಗಳಲ್ಲಿರುವ ಮುಂಬೆಣೆ, ಹಿಂಬಣೆಗಳು ಆಧಾರವಾಗಿರುವ ಕಂಬದಲ್ಲೂ ಮುಂದುವರಿದಿದೆ. ಇಲ್ಲಿರುವ ಗುಮ್ಮಟಗಳು ಹಾಗೂ ಕಮಾನು ಛಾವಣಿಗಳು ಹಲವು ಬಗೆಯವು. ಕೆಲವು ಅಷ್ಟಕೋನಾಕೃತಿ, ದುಂಡಾಕೃತಿ ಮತ್ತು ಇತರ ಬಗೆಯದಾಗಿದೆ. ದುಂಡನೆಯ ಮತ್ತು ಅಷ್ಟಕೋನಾಕೃತಿಯ ಗುಮ್ಮಟಗಳು, ಅದರ ಕೆಳತುದಿಯಲ್ಲಿ ಅರೆಗಂಬಗಳು, ಪುಷ್ಪಾಕೃತಿಯ ಫಲಕಗಳು, ಕಮಲದ ಮೊಗ್ಗುಗಳು, ಹಂಸದ ಸಾಲು ಮತ್ತು ಕುಳಿತಿರುವ ಯಾಳಿಗಳು ಇಲ್ಲಿ ಮುಂತಾದ ಅಲಂಕಾರವಿದೆ. ಅಲ್ಲದೆ ಕಮಲದ ಹೂವಿನ ಗಾರೆಯ ಅಲಂಕರಣೆಯೂ ಇದೆ. ಗುಮ್ಮಟಗಳ ಒಳಭಾಗದಲ್ಲಿ ಬಾಗಿರುವಂತೆ ಹಲವು ಪಟ್ಟಿಕೆಗಳ ಸಮೂಹ, ಒಂದೆಡೆ, ಸೇರುವ ಪುಷ್ಪಾಕೃತಿ, ವಿಸ್ತೃತವಾದ ದಳಗಳು, ಮೂರು ದಗಳಗಳ ಆಕೃತಿಗಳು, ಗಿಳಿಗಳ ಸಾಲು, ಹಲವು ಬಗೆಯ ಬಳ್ಳಿಗಳು, ಲತಾಹಾರಗಳು, ಪರಸ್ಪರ ಛೇದಿಸುವ ಕೋನಾಕೃತಿಯವು, ಅಷ್ಟಕೋನಾಕೃತಿಯವು ಗುಮ್ಮಟವನ್ನು ಹೊತ್ತಿರುವಂತೆ ನಿರ್ಮಿಸಲಾಗಿದೆ. ಗೋಪುರದ ರೀತಿಯ ಕಮಾನುಗಳು ಉದ್ದನೆಯ ಅಲಂಕರಣಗಳ ಪಟ್ಟಿಕೆಗಳನ್ನು ಹೊಂದಿವೆ. ಇವುಗಳೊಡನೆ ಸರಪಳಿಗಳ ಪಟ್ಟಿಕೆಗಳೂ ಇವೆ. ಉತ್ತರ ಹಾಗೂ ಪಶ್ಚಿಮದ ಮಧ್ಯದ ಗುಮ್ಮಟಗಳು ಎತ್ತರವಾಗಿದ್ದು ಎರಡು ಸುತ್ತಿನ ಪಟ್ಟಿಕೆಗಳ ಅಲಂಕರಣೆಯಿದೆ. ಈ ಗುಮ್ಮಟಗಳ ಮಧ್ಯದ ಭಾಗ ಸಮತಟ್ಟಾಗಿದೆ. ಈ ಗುಮ್ಮಟಗಳ ಮಧ್ಯ ಭಾಗದಲ್ಲಿ ದೊಡ್ಡದಾದ ಕಮಲದ ಹೂಗಳ ಫಲಕವಿದೆ.

ಕಿಟಕಿಗಳು ಹಾಗೂ ಬಾಗಿಲಿನ ಕಮಾನುಗಳು ಚೂಪಾಗಿವೆ. ಮುಂಚಾಚಿದ ಅಟ್ಟಣಿಗೆ ಒಳಭಾಗದಲ್ಲಿ ಅತೀ ನಾಜೂಕಿನ ಗಾರೆಯಿಂದ ನಿರ್ಮಿಸಿದ ಜ್ಯಾಮಿತಿಯ ಮಾದರಿಗಳು, ಪುಷ್ಪ ಮಾಲೆ, ಹೆಂಸಗಳ ಸಾಲು, ಹೀಗೆ ಅನೇಕ ಮಾದರಿಗಳಿವೆ. ಈ ಅಟ್ಟಣಿಗೆಗಳು ಮುಂಭಾಗದ ಹಾಗೂ ಎರಡೂ ಪಕ್ಕದ ಭಾಗದಲ್ಲಿ ಎರಡು ಸಾಲಿನ ಕಿಟಕಿಗಳಿವೆ. ಈ ಸಾಲುಗಳ ಮಧ್ಯದಲ್ಲಿ ಉಬ್ಬಿದ ಅಲಂಕೃತ ಪಟ್ಟಿಕೆ ಎದ್ದು ಕಾಣುತ್ತದೆ. ಈ ಎರಡೂ ಸಾಲಿನ ಕಿಟಕಿಗಳೂ ಒಂದು ಆಯತಾಕಾರದ ನಿರ್ಮಿತಿಯೊಳಗಿವೆ. ಈ ಅಟ್ಟಣಿಗೆಯ ಒಳಭಾಗದಲ್ಲಿ ಚಿಕ್ಕದಾದ ಗುಮ್ಮಟದ ಮಾದರಿಗಳಿವೆ. ಕೆಲವು ದುಂಡಗೆ, ಚೌಕಾಕಾರವಾಗಿ, ಕೋನಾಕೃತಿಯಲ್ಲಿವೆ.

ಈ ಕಟ್ಟಡದ ಮಧ್ಯದಲ್ಲಿರುವ ನೀರಿನ ತೊಟ್ಟಿಗೆ ನೀರನ್ನು ಹಾಯಿಸುವ ಹರನಾಳದ ತುದಿಯು ಕಮಲದ ಹೂವಿನ ಆಕಾರವನ್ನು ಹೊಂದಿದೆ. ಈ ಅಟ್ಟಣಿಗೆಗಳನ್ನು ನಾಲ್ಕು ಉದ್ದನೆಯ ಮುಂಚಾಚಿದ ತೊಲೆಗಳ ಮೇಲೆ ನಿರ್ಮಿಸಲಾಗಿದೆ. ಒಳಭಾಗದಂತೆ ಈ ಅಟ್ಟಣಿಗೆಯ ಹೊರಭಾಗದಲ್ಲಿಯೂ ಸಹ ಅಲಂಕರಣೆಯಿದೆ. ಇಲ್ಲಿರುವ ಎರಡು ಸಾಲಿನ ಕಿಟಕಿಗಳಲ್ಲಿ ಮೇಲಿನವು ಚೂಪು ಕಮಾನನ್ನು ಹೊಂದಿದ್ದರೆ ಕೆಳಭಾಗದವು ಚೂಪು ಕಮಾನು ಹಾಗೂ ಆಯತಾಕಾರವನ್ನು ಹೊಂದಿವೆ. ಈ ಕಿಟಕಿಗಳ ಸುತ್ತ ನಿರ್ಮಿಸಲಾದ ಅಲಂಕರಣೆ ನೋಡುಗರ ಗಮನ ಸೆಳೆಯುತ್ತವೆ. ಕಿಟಕಿಗಳ ಮೇಲೆ ಸಣ್ಣ ಚಜ್ಜಾವಿದ್ದು ಅದನ್ನು ಹಾರುವ ಯಾಳಿಗಳು ಹೊತ್ತಿರಬೇಕು. ಇಲ್ಲಿ ಕೆಲವು ಹಾರುವ ಯಾಳಿಯ ಕುರುಹುಗಳಿವೆ. ಈ ಚಜ್ಜಾದ ಮೇಲಿನ ಸಣ್ಣ ಕೈಪಿಡಿ ಗೋಡೆಯ ಮೇಲೆ ಕಮಾನು, ಅರೆಗಂಬಗಳನ್ನು ಗಾರೆಯಲ್ಲಿ ಮೂಡಿಸಲಾಗಿದೆ. ಈ ಕಟ್ಟಡದ ಮಧ್ಯದ ನೀರಿನ ತೊಟ್ಟಿಗೆ ಇಳಿಯಲು ಉತ್ತರ ಭಾಗದಲ್ಲಿ ಮೆಟ್ಟಿಲುಗಳಿವೆ. ಈ ಕಟ್ಟಡದ ಒಳಭಾಗದ ಗೋಡೆಯ ಮೇಲೆ, ಅಂದರೆ ಅಟ್ಟಣಿಗೆಗಳ ಮೇಲೆ ದೊಡ್ಡ ಚಜ್ಜಾವನ್ನು ನಿರ್ಮಿಸಲಾಗಿದ್ದು, ಅವು ಹಾಳಾಗಿರುವುದರಿಂದ, ಚಜ್ಜಾಗೆ ಉಪಯೋಗಿಸಿದ ಅಡ್ಡ ತೊಲೆಗಳು ಒಂದು ಮೇಲೆ ಒಂದಿರುವುದನ್ನು ಕಾಣಬಹುದು. ಈ ಚಜ್ಜಾವನ್ನು ನೆಗೆಯುವ ಯಾಳಿಗಳು ಹೊತ್ತಂತೆ ನಿರ್ಮಿಸಲಾಗಿದೆ. ಈಗ ಅಲ್ಲಲ್ಲಿ ಅವುಗಳ ಕುರುಹುಗಳು ಗೋಡೆಯಲ್ಲಿವೆ. ಒಳಭಾಗದ ಗೋಡೆಯ ಮೇಲು ತುದಿಯಲ್ಲಿ ಕೈಪಿಡಿ ಗೋಡೆಯಿದೆ. ಇವುಗಳಲ್ಲಿ ಕಮಾನುಗಳು ಮತ್ತು ಕಮಾನಿನ ಸಣ್ಣ ಕಿಟಕಿಗಳನ್ನು ಇಟ್ಟು ಸಿಂಗರಿಸಲಾಗಿದೆ. ಇವುಗಳ ಮಧ್ಯೆ ಅಲ್ಲಲ್ಲಿ ಅರೆಗಂಬಗಳಿವೆ. ಈ ಕಮಾನುಗಳು ಹಾಗೂ ಅರೆಗಂಬಗಳ ಮೇಲೆ ತೆನೆಗಳ ಸಾಲನ್ನು ನಿರ್ಮಿಸಲಾಗಿದೆ.

ಈ ಕಟ್ಟಡವನ್ನು ಗಾರೆಶಿಲ್ಪಗಳಿಂದ ಸಿಂಗರಿಸಲಾಗಿತ್ತು. ಈ ಕಟ್ಟಡವು ರಾಜ ಪರಿವಾರದವರ ಉಪಯೋಗಕ್ಕೆ ಇದ್ದಿರಬೇಕು. ಈ ಕಟ್ಟಡದ ಅಲಂಕರಣೆಯ ಕೆಲವು ಕುರುಹುಗಳನ್ನು ಇಂದಿಗೂ ಅಲ್ಲಲ್ಲಿರುವ ಶಿಲ್ಪದ ತುಣುಕುಗಳಿಂದ ಗುರುತಿಸಬಹುದಾಗಿದೆ. ಈ ಕಟ್ಟಡವು ೧೯ನೇ ಶತಮಾನದಲ್ಲಿ ಈಗಿರುವುದಕ್ಕಿಂತ ಭಿನ್ನವಾಗಿತ್ತೆಂದು ತಿಳಿಯಲು ಕೆಲವು ದಾಖಲೆಗಳಿವೆ. ಉತ್ತರ ಭಾಗದ ಮಧ್ಯದ ಗುಮ್ಮಟ, ಉಪ್ಪರಿಗೆಗೆ ಹೋಗುವ ಮೆಟ್ಟಿಲುಗಳ ಮೇಲ್ಭಾಗದಲ್ಲಿ ಎರಡು ಅಂತಸ್ತಿನ ಮಾಳಿಗೆ ಹಾಗೂ ಚಜ್ಜಾಗಳಿದ್ದ ಬಗ್ಗೆ ಆಧಾರಗಳಿವೆ. ಈ ಕಟ್ಟಡಕ್ಕೆ ನೀರನ್ನು ಸಮೀಪದಲ್ಲೇ ಇರುವ ಚಂದ್ರಶೇಖರ ದೇವಸ್ಥಾನದ ಬಳಿಯಿರುವ ಗಾರೆಯಿಂದ ನಿರ್ಮಿಸಿದ ಸಣ್ಣ ಕಾಲುವೆಗಳಿಂದ ಹರಿಸಿರಬೇಕು.

ನೀರು ಹಾಯಿಸುವ ವ್ಯವಸ್ಥೆ, ಮಲಿನ ನೀರು ಹೊರಹೋಗಲು ಸಣ್ಣ ಕೊಳವೆಗಳ ಬಳಕೆ, ಇವು ವಿಜಯನಗರ ಕಾಲದ ತಾಂತ್ರಿಕತೆಗೆ ಉತ್ತಮ ಉದಾಹರಣೆಯಾಗಿವೆ.

ಕಾರಂಜಿ ಹಾಗೂ ಜಲ ಸೌಧಗಳು ಹಲವು ವಾಸ್ತು ಸಾಮೀಪ್ಯವನ್ನು ಹೊಂದಿವೆ. ಈ ಕಟ್ಟಡಗಳ ಕಾಲಮಾನವನ್ನು ನಿರ್ಧರಿಸುವುದು ಸುಲಭ ಸಾಧ್ಯವಾಗಿಲ್ಲ. ಈ ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಾಸನ ಮತ್ತು ಉಲ್ಲೇಖಗಳು ದೊರಕಿಲ್ಲ. ಈ ಕಟ್ಟಡಗಳು ಹಾಗೂ ಪೂರಕ ವ್ಯವಸ್ಥೆಗಳು ಕಾಲದಿಂದ ಕಾಲಕ್ಕೆ ಬದಲಾವಣೆಗೆ ಒಳಪಟ್ಟಿವೆ.

ಕಾರಂಜಿಗಳು, ರಾಣಿಯರ ಸ್ನಾನಗೃಹ ಅಥವಾ ಜಲಕ್ರೀಡಾ ಸೌಧ ಇವುಗಳ ಹಲವು ರೀತಿಯ ಸಮಾನ ವಿನ್ಯಾಸ, ವಾಸ್ತು ವಿಶೇಷತೆಗಳನ್ನು ಹೊಂದಿವೆ. ಕಮಾನುಗಳು, ಗುಮ್ಮಟ, ಪ್ರಾಂಗಣ, ಹೊರಭಾಗ ಹಾಗೆಯೆ ಒಳಭಾಗದ ಗೋಡೆಗಳು, ಗಾರೆಶಿಲ್ಪ, ನೀರಿನ ಪೂರೈಕಾ ವ್ಯವಸ್ಥೆ, ಇವು ಗಮನಿಸಬೇಕಾದ ಅಂಶಗಳು. ಇಲ್ಲಿ ಕೆಲವು ಭಾಗಗಳು ಹಲವು ಸಂದರ್ಭಗಳಲ್ಲಿ ಅನೇಕ ಬದಲಾವಣೆಗೆ ಒಳಪಟ್ಟಿವೆ. ವಿಶಿಷ್ಟ ಶೈಲಿಯ ವಾಸ್ತುಶಿಲ್ಪದ ನಿರ್ಮಾಣವು ಸಾಮಾಜಿಕ ಶಾಂತಿ, ಸುವ್ಯವಸ್ಥೆ, ಭದ್ರತೆ, ನೆಲೆಸಿದ್ದಾಗ ಆಗಿರಬಹುದಾಗಿದೆ. ಅಲ್ಲದೆ ೧೬ನೇ ಶತಮಾನದ ವಿಜಯನಗರ ಸಾಹಿತ್ಯದಲ್ಲಿ ಹಲವು ಸೌಧಗಳ ವರ್ಣನೆಗಳಿವೆ. ಈ ಕಾಲವು ವಿಜಯನಗರದ ಉಚ್ಛ್ರಾಯ ಕಾಲವಾಗಿದೆ. ಇವುಗಳ ಹಿನ್ನೆಲೆಯಲ್ಲಿ ಈ ಕಟ್ಟಡಗಳೂ ಸಹ ೧೬ನೇ ಶತಮಾನದ ನಿರ್ಮಾಣವಾಗಿರಬಹುದೆಂದು ತೋರುತ್ತದೆ.

ಆಕರ
ವಿಜಯನಗರ ಅಧ್ಯಯನ, ಸಂ.೭, ೨೦೦೩, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಹೊಸಪೇಟೆ, ಪು. ೧೧೦-೧೧೯

 

[1] Longhurst A.H., Hampi Ruins, Asia Educational Series, New Delhi, p.56, 1982

[2] Ibid, p. 56

[3] Deva Kunjari, H. Archacological Survey of India, New Delhi, p.43, 1983

[4] Dominic J. Devankins, Hydulic works in New light on Hampi, Marg publications, pp.

[5] Setter S., Hampi, Bangalore, p.74