ನೀರಾವರಿಯ ಅವಶ್ಯಕತೆ: ಪುರಾತನ ಕಾಲದಿಂದಲೂ ನಮ್ಮದು ವ್ಯವಸಾಯ ಪ್ರಧಾನ ದೇಶವಾಗಿದ್ದು, ಪ್ರಜೆಗಳ ಕಲ್ಯಾಣವು ವ್ಯವಸಾಯೋತ್ಪನ್ನಗಳ ಮೇಲೆ ಆಧಾರಿತವಾಗಿದೆಯಷ್ಟೇ? ಎಂದರೆ ಆ ಸಮೃದ್ಧವಾದ ವ್ಯವಸಾಯೋತ್ಪನ್ನಗಳಿಗಾಗಿ ದೇಶವು ಮಳೆಯನ್ನವಲಂಬಿಸಿದೆ.[1] ಆದರೆ ಈ ವಿಶಾಲ ದೇಶದಲ್ಲಿ ಪ್ರತಿ ವರ್ಷವೂ ಒಂದಿಲ್ಲೊಂದು ಭಾಗವು ಅನಾವೃಷ್ಟಿ, ಅನಿಶ್ಚಿತವೃಷ್ಟಿ, ಅಕಾಲವೃಷ್ಟಿ ಮತ್ತು ಅತಿವೃಷ್ಟಿಗಳಿಗೆ ಬಲಿಯಾಗಿ ಅದರಿಂದಾಗಿ ವ್ಯವಸಾಯೋತ್ಪನ್ನಗಳು ಕುಂಠಿತಗೊಂಡು ಪ್ರಜೆಗಳು ಸಂಕಷ್ಟಗಳಿಗೀಡಾಗುತ್ತಿದ್ದ ನಿದರ್ಶನಗಳು ವಿಫುಲವಾಗಿ ತಿಳಿದುಬರುತ್ತವೆ. ರಾಮಾಯಣ ಮತ್ತು ಮಹಾಭಾರತಗಳ ಕಾಲಗಳಲ್ಲಿ ಸಹ ಅನಾವೃಷ್ಟಿ ಮತ್ತು ಕ್ಷಾಮಗಳ ಬಗ್ಗೆ ಉಲ್ಲೇಖನಗಳಿವೆ. ಮತ್ತು ಅವುಗಳ ನಿವಾರಣೆಗಾಗಿ ಅರಸರು ಹಾಗೂ ಇತರ ಅಧಿಕಾರಿಗಳು ಕೈಗೊಂಡ ವಿವಿಧ ಕ್ರಮಗಳ ಬಗ್ಗೆಯೂ ಉಲ್ಲೇಖನಗಳಿವೆ. ಇಂಥ ನಿವಾರಣಾ ಕ್ರಮಗಳಲ್ಲಿ ಮುಖ್ಯವಾದು ಅದು ನೀರಾವರಿ ಬೇಸಾಯಕ್ಕೆ ಬೇಕಾದ ಅನುಕೂಲತೆಗಳನ್ನೊದಗಿಸುವುದು. ಅಂಥ ಕ್ರಮಗಳಿಂದಾಗಿ, ಅನಾವೃಷ್ಟಿ ಮುಂತಾದ ಕಾರಣಗಳಿಂದಾಗಿ ಒದಗಬಹುದಾದ ದುಷ್ಪರಿಣಾಮಗಳನ್ನು ನಿವಾರಿಸುವಲ್ಲಿ ಅಥವಾ ಅವುಗಳ ಭೀಕರತೆಯನ್ನಾದೂ ಕನಿಷ್ಠಗೊಳಿಸುವಲ್ಲಿ ಸಾಧ್ಯವಾಗುತ್ತಿತ್ತು. ಆದುದರಿಂದ ನೀರಾವರಿ ಬೇಸಾಯಕ್ಕೆ ಯಾವಾಗಲೂ ಹೆಚ್ಚಿನ ಪ್ರಾಧಾನ್ಯತೆಯನ್ನು ರಾಜರೂ ಮತ್ತು ಪ್ರಜೆಗಳೂ ನೀಡುತ್ತಾ ಬಂದಿದ್ದಾರೆ.

ನೀರಾವರಿಯ ವಿಧಾನಗಳು: ನೀರಾವರಿ ಬೇಸಾಯವು ಸಾಮಾನ್ಯವಾಗಿ ಮೂರು ತೆರನಾಗಿದೆ. ಮೊದಲನೆಯದು ಕೆರೆ ಏರಿಗಳನ್ನು ನಿರ್ಮಿಸಿ ಮತ್ತು ಮಳೆಗಾಲದಲ್ಲಿ ನೀರನ್ನು ಕೆರೆಗಳಲ್ಲಿ ಶೇಖರಿಸಿ, ಬೇಕಾದಾಗ ಆ ನೀರನ್ನು ಜಮೀನುಗಳಿಗೆ ಕಾಲುವೆಗಳ ಮೂಲಕ ಹಾಯಿಸಿ ಬೆಳೆಗಳನ್ನು ಬೆಳೆಯುವುದು. ಬಾವಿಗಳನ್ನು ತೋಡಿ, ಏತ ಅಥವಾ ಕಪಿಲೆ ಮುಂತಾದ ಸಾಧನಗಳಿಂದ, ನೀರನ್ನು ಮೇಲಕ್ಕೆ ಎತ್ತಿ ಜಮೀನುಗಳಿಗೆ ಕೊಡುವುದರಿಂದ ಬೇಸಾಯ ಮಾಡುವುದು, ಮತ್ತೊಂದು ಪದ್ಧತಿ. ಕೊನೆಯದು ಹಾಗೂ ಬಹು ಲಾಭದಾಯಕವಾದ ವಿಧಾನವೆಂದರೆ, ನದಿಗಳಿಗೆ ಆಣೆಕಟ್ಟೆಗಳನ್ನು ಕಟ್ಟುವುದರ ಮೂಲಕ ನದಿಯ ನೀರಿನ ಮಟ್ಟವನ್ನು ಎತ್ತರಿಸಿದ ನಂತರ ಆ ನೀರಿನ ಕೆಲಭಾಗವನ್ನು ಕಾಲುವೆಗಳ ಮೂಲಕ ಜಮೀನುಗಳಿಗೆ ಹರಿಸುವುದು.

ಈ ವಿಧಾನಗಳ ಪ್ರಾಚೀನತೆ: ಮೇಲೆ ತಿಳಿಸಿದ ಎಲ್ಲಾ ವಿಧಾನಗಳೂ ನಮ್ಮ ದೇಶದಲ್ಲಿ ವೇದ ಉಪನಿಷತ್ತುಗಳ ಕಾಲದಿಂದಲೂ ಮಿತ ಪ್ರಮಾಣದಲ್ಲಿ ಬಳಕೆಯಲ್ಲಿದ್ದುದಾಗಿ ತಿಳಿದುಬರುತ್ತದೆ. ಅಥರ್ವ ವೇದದಲ್ಲಿ ನದಿಯಿಂದ ಕಾಲುವೆಗಳನ್ನು ತೋಡಿ ನೀರನ್ನು ಬೇಕಾದ ಸ್ಥಳಕ್ಕೆ ಹರಿಸಿಕೊಳ್ಳುತ್ತಿದ್ದ ವಿವರಣೆಯನ್ನು ಕಾಣಬಹುದು.[2] ಅರ್ಥಶಾಸ್ತ್ರದ ಕರ್ತೃವಾದ ಕೌಟಿಲ್ಯ ಚಾಣಕ್ಯನು ಸಹ ನೀರಾವರಿ ಬೇಸಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟಿರುತ್ತಾನೆ. ಅವನ ಸಮಕಾಲೀನನೂ ಹಾಗೂ ಮೌರ್ಯ ವಂಶದ ಪ್ರಸಿದ್ದ ಅರಸರಲ್ಲೊಬ್ಬನಾದ ಚಂದ್ರಗುಪ್ತನು (ಕ್ರಿ.ಪೂ.೩೨೦ ರಿಂದ ೨೯೭ ರವರೆಗೆ ಆಳಿದ) ಗುಜರಾತಿನ ಗಿರಿನಾರದ ಬಳಿ ಕೆಲವು ಹಳ್ಳಿಗಳಿಗೆ ಅಡ್ಡಲಾಗಿ ಏರಿಯನ್ನು ಹಾಕಿಸುವುದರಿಂದ ನಿಮಾರ್ಣವಾದ ಕೆರೆಗೆ ‘ಸುದರ್ಶನ’ ವೆಂದು ಹೆಸರಿಸಲಾಗಿತ್ತು. ನಂತರ ಮತ್ತು ಅದೇ ವಂಶದ ಬಹು ಖ್ಯಾತಿವೆತ್ತ ಅಶೋಕ ಚಕ್ರವರ್ತಿಯು (ರಿ.ಪೂ.೨೯೩ ರಿಂದ ೨೩೨ ರವರೆಗೆ ಆಳಿದ) ಅದೇ ಸುದರ್ಶನ ಕೆರೆಗೆ ಕೆಲವು ಜೀರ್ಣೋದ್ಧಾರ ಕಾರ್ಯಗಳನ್ನು ಮಾಡಿಸಿದನೆಂದು ಪ್ರತೀತಿ.[3] ಹೀಗೆ ನೀರಾವರಿ ಬೇಸಾಯದ ಬಗ್ಗೆ ಪ್ರಯತ್ನಗಳು ಮೊದಲಿನಿಂದಲೂ ನಡೆಯುತ್ತಾ ಬಂದು, ಚರಿತ್ರೆಯ ಮಧ್ಯಯುಗದಲ್ಲಿ ಈ ಪ್ರಯತ್ನಗಳಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಬೇಕಾಯಿತು. ಬಹುಶಃ ಆ ವೇಳೆಗಾಗಲೇ ಜನಸಂಖ್ಯೆಯಲ್ಲಿ ಗಮನಾರ್ಹ ಬೆಳವಣಿಗೆಯಾಗಿ, ಅಧಿಕ ವ್ಯವಸಾಯೋತ್ಪನ್ನಗಳ ಅವಶ್ಯಕತೆ ಹೆಚ್ಚಾಗಿದ್ದಿರಬೇಕು. ಆದುದರಿಂದ ಚರಿತ್ರೆಯ ಮಧ್ಯಯುಗದಲ್ಲಿ, ಬಾದಾಮಿಯ ಚಾಳುಕ್ಯರು, ರಾಷ್ಟ್ರಕೂಟರು, ಕಲ್ಯಾಣಿಯ ಚಾಳುಕ್ಯರು, ಹೊಯಿಸಳರು ಮುಂತಾದ ಅರಸು ಮನೆತನಗಳು, ನೀರಾವರಿ ಬೇಸಾಯಕ್ಕೆ ಆದ್ಯತೆ ನೀಡಿ, ಈ ಭಾಗದಲ್ಲಿ ಕೆರೆಗಳನ್ನು ಭಾವಿಗಳನ್ನು ಕೆಲವು ಆಣೆಕಟ್ಟುಗಳನ್ನು ನಿರ್ಮಿಸಿದರು. ಈಗಲೂ ಬಾದಾಮಿ, ಹಳೇಬೀಡುಗಳ ಹೊರವಲಯಗಳಲ್ಲಿ ಕಾಣಬರುವ ವಿಶಾಲ ಕೆರೆಗಳು, ಅಲ್ಲಿಯ ರಾಜರು ನೀರಾವರಿ ಕಾಮಗಾರಿಗಳಿಗೆ ನೀಡಿದ ಆದ್ಯತೆಯ ಮುಖ್ಯ ನಿದರ್ಶನಗಳಾಗಿವೆ. ಹೀಗಾಗಿ ದಕ್ಷಿಣ ಭಾರತವೇ, ಅತೀ ಪುರಾತನ ಕಾಲದಿಂದಲೂ ನೀರಾವರಿ ಬೇಸಾಯ ಕ್ರಮಗಳನ್ನು ಅನುಸರಿಸಿದ ಪ್ರದೇಶವೆಂದು ಪರಿಗಣಿಸಲಾಗಿದೆ.

ವಿಜಯನಗರದ ಅರಸರ ಕಾಲದಲ್ಲಿ: ವಿಜಯನಗರದ ಅರಸರ ಆಡಳಿತ ಕಾಲದಲ್ಲಿ, ಇಂಥ ಕೆಲಸಗಳಿಗೆ ವಿಶೇಷ ಪ್ರೋತ್ಸಾಹವನ್ನು ನೀಡಲಾಯಿತು. ಈ ಕಾರ್ಯಗಳಲ್ಲಿ ಅರಸರೂ, ಅಧಿಕಾರಿಗಳೂ, ದೇವಮಂದಿರ, ಮಠ ಮುಂತಾದ ಸಂಸ್ಥೆಗಳೂ, ಪ್ರಜೆಗಳೂ ಭಾಗವಹಿಸಲು ಮುಂದಾಗುತ್ತಿದ್ದರು. ಈ ವಿಷಯವನ್ನು ದೃಢೀಕರಿಸುವಲ್ಲಿ, ವಿಫುಲವಾಗಿ ದೊರೆಯುವ ಸಮಕಾಲೀನ ಶಾಸನ ಮತ್ತು ಗ್ರಂಥ ಸಾಹಿತ್ಯಗಳು ನೆರವಾಗುತ್ತವೆ. ಉದಾಹರಣೆಗೆ, ಅನಂತಪುರ ಜಿಲ್ಲೆಯ ಗೊರ್ರೆಪಲ್ಲಿ ಗ್ರಾಮದ ಲಕ್ಷ್ಮೀದೇವಿ ಗುಡಿಯಲ್ಲಿ ಕಾಣಬರುವ ಶಾಸನವು[4] ‘….ಮೊದೆಯಕ್ಕೆ ಪ್ರತಿನಾಮವಾದ ಅಚ್ಯುತರಾಯಪುರವೆಂಬ ಗ್ರಾಮದ ಉತ್ತರ ಭಾಗದಲ್ಲಿ ತಲಪರಿಗೆಯನು ತೆಗೆಸಿ ನೂತನ ತುಂಗಭದ್ರೆಯೆಂಬ ಹೆಸರುಳ್ಳ ಕಾಲುವೆಯನೂ ತಂದು ಈ ಕಾಲುವೆಯ ನೀರು ಹರಿದು ಬೆಳೆವಷ್ಟು….’ ಎಂದು ಮುಂತಾಗಿ ತಿಳಿಸುತ್ತದೆ. ಎಂದರೆ ಒಂದು ಕಾಲುವೆಗೆ ‘ನೂತನ ತುಂಗಭದ್ರೆ’ ಎಂದು ಕರೆಯುವಂತೆ ಅವರ ಸಂತೋಷ ಮತ್ತು ಉತ್ಸಾಹಗಳಿದ್ದುದು ವ್ಯಕ್ತವಾಗುತ್ತದೆ. ಹೀಗೆ ನೀರಾವರಿ ಅಭಿವೃದ್ಧಿಗಾಗಿ ಕೈಗೊಂಡ ವಿವಿಧ ಕ್ರಮಗಳನ್ನು ಉಲ್ಲೇಖಿಸುವ ಶಾಸನಾಧಾರಗಳನ್ನು ಸಾವಿರಾರು ಸಂಖ್ಯೆಯ ಸಂಖ್ಯೆಯಲ್ಲಿ ಉದಾಹರಿಸಬಹುದು.

ಹಾಗೆಯೇ ಗ್ರಂಥ ಸಾಹಿತ್ಯಾಧಾರಗಳು ಸಹ ವಿಫುಲವಾಗಿವೆಯಾದರೂ ಪ್ರಸ್ತುತದಲ್ಲಿ ಅತಿ ಮುಖ್ಯವಾದ ಒಂದು ಉದಾಹರಣೆಯನ್ನು ತಿಳಿಯೋಣ. ವಿಜಯನಗರದ ಶ್ರೇಷ್ಠ ಅರಸರುಗಳಲ್ಲೊಬ್ಬನಾದ ಕೃಷ್ಣದೇವರಾಯ ಮಹಾರಾಯನು ತಾನೇ ಬರೆದ ‘ಅಮುಕ್ತಮಾಲ್ಯದ’[5] ಎಂಬ ಗ್ರಂಥದಲ್ಲಿ ಯಾವುದೇ ರಾಜ್ಯದ ಆಥಿಕ ಸಮೃದ್ಧಿಯು ಅದರ ಕೆರೆ ಮತ್ತು ಕಾಲುವೆಗಳ ನೀರಿನಿಂದಾಗುವ ಬೇಸಾಯದ ಪ್ರಮಾಣವನ್ನು ಅವಲಂಬಿಸಿದೆಯೆಂದು ಪ್ರತಿಪಾದಿಸಿರುತ್ತಾನೆ.

ಅಂತೆಯೇ ವಿಜಯನಗರ ಸಾಮ್ರಾಜ್ಯವನ್ನು ಸಂದರ್ಶಿಸಿ ವಿದೇಶಿ ಪ್ರವಾಸಿಗರೂ ಸಹ, ಆ ರಾಜ್ಯದಲ್ಲಿನ ನೀರಾವರಿ ಕ್ರಮಗಳನ್ನು ಕುರಿತು ವಿಶೇಷವಾಗಿ ಹೊಗಳಿ ಬರೆದಿರುತ್ತಾರೆ. ಅಲ್ಲದೇ ವಿದೇಶಿ ತಂತ್ರಜ್ಞ (engineers)ರನ್ನೂ ಇಂತಹ ಯೋಜನೆಗಳಿಗಾಗಿ ನಿಯಮಿಸಿಕೊಳ್ಳುತ್ತಿದ್ದರೆಂದೂ ತಿಳಿದುಬರುತ್ತದೆ. ಜೊಡೆಲ್ಲಾ ಪೊಂಟ (Jao Della Ponte).[6] ಎಂಬ ಪೋರ್ಚುಗಲ್‌ದೇಶದ ತಂತ್ರಜ್ಞನನ್ನು ಕೃಷ್ಣದೇವ ಮಹಾರಾಯನು ಒಂದು ದೊಡ್ಡ ಕೆರೆಯ ನಿರ್ಮಾಣ ಕಾರ್ಯಕ್ಕಾಗಿ ನಿಯಮಿಸಿಕೊಂಡಿದ್ದನೆಂದು ತಿಳಿದುಬರುತ್ತದೆ. ಈ ಸಂದರ್ಭದಲ್ಲಿ ಕೊಟ್ಟಿರುವ ವಿವರಣೆಗಳನ್ನೆಲ್ಲಾ ಗಣನೆಗೆ ತೆಗೆದುಕೊಂಡು ಹೋಲಿಸಿದ್ದಲ್ಲಿ, ಹೊಸಪೇಟೆಗೆ ಪಶ್ಚಿಮಕ್ಕೆ ಈಗಲೂ ಕಾಣಬರುವ ರಾಯರ ಕೆರೆಯೇ ಆ ದೊಡ್ಡ ಕೆರೆ ಮತ್ತು ಈ ಕೆರೆಯ ನಿರ್ಮಾಣದಲ್ಲಿಯೇ ಮೇಲೆ ತಿಳಿಸಿದ ಪೋರ್ಚುಗೀಸ್‌ತಂತ್ರಜ್ಞನು ನಿರತನಾಗಿದ್ದನೆಂದು ಹೇಳಬಹುದು.

ಪ್ರಜೆಗಳ ಕಲ್ಯಾಣ ಮತ್ತು ಆರ್ಥಿಕ ಸಮೃದ್ಧಿಯನ್ನು ಧ್ಯೇಯವಾಗಿಟ್ಟುಕೊಂಡು ನೀರಾವರಿ ಅಭಿವೃದ್ಧಿ ಕಾರ್ಯಗಳು ಎಷ್ಟು ಬಿರುಸಿನಿಂದ ನಡೆದುವೆಂದರೆ, ಕೆಲ ಶತಮಾನಗಳ ನಂತರ ಆಡಳಿತಾಧಿಕಾರಿಗಳಾಗಿ ಬಂದ ಇಂಗ್ಲೀಷು ಅಧಿಕಾರಿಗಳು, ಅವುಗಳನ್ನು ನೋಡಿ ಅಚ್ಚರಿ ಪಟ್ಟುದಲ್ಲದೇ ಮೆಚ್ಚಿ ಹೊಗಳಿ ಬರೆದಿಟ್ಟಿರುತ್ತಾರೆ. ಕ್ರೋಲ್‌[7] ಎಂಬ ಇಂಗ್ಲೀಷ್‌ಅಧಿಕಾರಿಯು ವಿಜಯನಗರದ ನೀರಾವರಿ ಕ್ರಮಗಳನ್ನು ಕುರಿತು ‘……..ನೀರಿನ ಲಭ್ಯತೆ ಎಷ್ಟೇ ಚಿಕ್ಕ ಪ್ರಮಾಣದಲ್ಲಿರಲಿ, ಅಲ್ಲೆಲ್ಲಾ ಒಂದು ಕಟ್ಟೆಯನ್ನು ಕಟ್ಟಲಾಯಿತ್ತಲ್ಲದೇ, ಹೆಚ್ಚು ನೀರಾವರಿ ಬೆಳೆಗಳನ್ನು ಬೆಳೆಯಿಸಲು ಉಪಯೋಗಿಸಿಕೊಳ್ಳಲಾಯಿತ್ತಲ್ಲದೇ, ಹೆಚ್ಚು ನೀರಾವರಿ ಬೆಳೆಗಳನ್ನು ಬೆಳೆಯಿಸಲು ಉಪಯೋಗಿಸಿಕೊಳ್ಳಲಾಗಿತ್ತು ಎಂದು ಹೇಳಿರುತ್ತಾನೆ. ಸರ್‌ಥಾಮಸ್‌ಮನ್ರೋ[8] ಎಂಬ ಇನ್ನೊಬ್ಬ ಆಂಗ್ಲ ಅಧಿಕಾರಿಯು ಬರೆದಿರುವುದು ಸಹ ಸೂಕ್ತ ಮೆಚ್ಚುಗೆಯದಾಗಿದೆ. ‘……….. ನಾವು ಹೊಸದಾಗಿ ಕಟ್ಟೆಗಳನ್ನು ನೀರಾವರಿಗಾಗಿ ನಿರ್ಮಿಸಬೇಕೆಂಬ ಮಾತು ನಿರರ್ಥಕವಾದದ್ದು, ಏಕೆಂದರೆ ನೀರಾವರಿಗಾಗಿ ಅನುಕೂಲವಿರುವ ನಿವೇಶನಗಳಲ್ಲಿ ಒಂದನ್ನೂ ಬಿಡದೆ ಎಲ್ಲವನ್ನೂ ಈ ಪೂರ್ವದಲ್ಲಿಯೇ ಉಪಯೋಗ ಮಾಡಿಕೊಳ್ಳಲಾಗಿದೆ. ಇಂತಹ ಸಂದರ್ಭದಲ್ಲಿ ಮಾಡಬೇಕಾಗಿ ಉಳಿದಿರುವ ಪ್ರಜೋಪಯೋಗಿ ಕೆಲಸವೆಂದರೆ, ಪೂರ್ವದ ಈ ಕಟ್ಟೆಗಳಿಗೆ ದುರಸ್ತಿ ಕಾರ್ಯಗಳು ಮತ್ತು ಹೂಳು ತೆಗೆಯುವುದು. ತತ್ಪರಿಣಾಮವಾಗಿ ನೀರಾವರಿ ಸೌಲಭ್ಯವು ಮೊದಲಿನಂತೆ ಅಥವಾ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವಂತೆ ಏರ್ಪಡಿಸುವುದಾಗಿದೆ…..’ ಹೀಗೆ ಜನತೆಯ ಆರ್ಥಿಕ ಸಮೃದ್ಧಿಯನ್ನು ಗುರಿಯಾಗಿರಿಸಿಕೊಂಡು ಪೂರ್ವದಿಂದಲೂ ನೀರಾವರಿ ವ್ಯವಸಾಯಕ್ಕೆ ಅವಶ್ಯವಿದ್ದ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಾ ಬಂದಿವೆ.

ನೀರಾವರಿಗೆ ಧಾರ್ಮಿಕ ಸಮ್ಮತಿ: ನೀರಾವರಿ ಬೇಸಾಯದ ದಿಸೆಯಲ್ಲಿ ನಡೆದ ಸತತ ಪ್ರಯತ್ನಗಳಿಗೆ ಹಿಂದೂ ಸಮಾಜದಲ್ಲಿ ಪ್ರಚಲಿತದಲ್ಲಿದ್ದ ಮತ್ತು ಈಗಲೂ ಇರುವ ಧಾರ್ಮಿಕ ಸಮ್ಮತಿ ಮತ್ತು ನಂಬಿಕೆಗಳೂ ಸಹ ಮುಖ್ಯ ಕಾರಣಗಳಾಗಿವೆ. ನೀರನ್ನು ಸಂಗ್ರಹಿಸುವುದಕ್ಕಾಗಿ ಕೆರೆ ಕಟ್ಟೆಗಳನ್ನು ಕಟಟಿಸುವುದರಿಂದ ವಿಶೇಷ ಪುಣ್ಯ ಲಭಿಸುತ್ತದೆಂದು ನಮ್ಮ ಧಾರ್ಮಿಕ ಗ್ರಂಥಗಳು ಸಾರುತ್ತವೆ. ಕೆರೆಯನ್ನು ಕಟ್ಟಿಸುವುದು ಏಳು ಮಹಾಪುಣ್ಯ ಕಾರ್ಯಗಳಲ್ಲಿ ಅತಿಮುಖ್ಯವಾದುದೆಂದು ಹೇಳಲಾಗಿದೆ. ಏಕೆಂದರೆ, ಈ ನಿರ್ಮಾಣ ಕಾರ್ಯಗಳಿಂದ ಶೇಖರಿಸಲ್ಪಟ್ಟ ನೀರು ಭೂಮಿಯ ಮೇಲೆ ವಾಸಿಸುವ ಚರಾಚರ ಪ್ರಾಣಿಗಳೆಲ್ಲವುಗಳಿಂದಲೂ ಉಪಯೋಗಿಸಲ್ಪಡುತ್ತದೆ. ಆದುದರಿಂದ ಇಂಥ ಕಾರ್ಯಗಳನ್ನು ಕೈಗೊಳ್ಳುವುದರಿಂದ ಲಭ್ಯವಾಗುವ ಪುಣ್ಯ ವಿಶೇಷವನ್ನು ಬ್ರಹ್ಮನೂ ಸಹಾ ಎಣಿಕೆ ಮಾಡಲು ಅಶಕ್ತನೆಂದು ಕಡಪಾ ಜಿಲ್ಲೆಯ ಶಿಲಾಶಾಸನದಿಂದ[9] ತಿಳಿದುಬರುತ್ತದೆ.

ಹನ್ನೆರಡನೇ ಶತಮಾನದವನಾದ ಸೊನ್ನಲಾಪುರ (ಈಗಿನ ಸೊಲ್ಲಾಪುರ)ದ ಸಿದ್ಧರಾಮನಂತಹ[10] ಶಿವಯೋಗಿಯು ತನ್ನ ಅನುಚರರೊಂದಿಗೆ ಕೆರೆಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿ ಆ ಮೂಲಕ ಜನಾಂಗದ ಶ್ರೇಯೋಭಿವೃದ್ಧಿಗೆ ಕಾರಣರಾಗಿ ಮೋಕ್ಷವನ್ನು ಕಂಡುಕೊಂಡರು. ಹೀಗೆ ನೀರಾವರಿ ಕಾಮಗಾರಿಗಳಲ್ಲಿ ಧಾರ್ಮಿಕ ಭಾವನೆಗಳೂ ಸಹ ಅಡಗಿದ್ದುದರಿಂದಾಗಿ, ಅವುಗಳ ನಿರ್ಮಾಣ ಕಾರ್ಯಗಳಲ್ಲಿ ಸಮಾಜದ ಎಲ್ಲಾ ವರ್ಗಗಳ ಅದರಲ್ಲೂ ದಕ್ಷಿಣ ಭಾರತದಲ್ಲಿ, ನೀರಾವರಿಯ ಏರ್ಪಾಟಿನ ಕುರುಹುಗಳು ಈಗಲೂ ವಿಶೇಷವಾಗಿ ಕಾಣಬರುತ್ತವೆ.

ಆಗಾಗ್ಗೆ ಕೆಲವು ದುರಸ್ತಿ ಕಾರ್ಯಗಳು ನಡೆದು ಮತ್ತು ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಕೆಲವು ಹೊಂದಾಣಿಕೆಗಳೊಂದಿಗೆ ಬಹುತೇಕವಾಗಿ ಎಲ್ಲವೂ ಈಗಲೂ ಉಪಯೋಗದಲ್ಲಿದೆ.

ಆಣೆಕಟ್ಟೆಗಳ ಪರಂಪರೆ: ಇದುವರೆಗೆ ನೀರಾವರಿ ಬೇಸಾಯಕ್ಕಾಗಿ ಮಾಡಿದ ಏರ್ಪಾಡುಗಳ ಬಗ್ಗೆ ಸಾಮಾನ್ಯವಾಗಿ (in general) ತಿಳಿಯಲಾಯಿತಲ್ಲವೆ? ಈಗ ಈ ಲೇಖನದ ವಿಷಯವಾದ ಆಣೆಕಟ್ಟೆಗಳ ಕುರಿತು ನೋಡೋಣ. ಇತರ ನೀರಾವರಿ ಕ್ರಮಗಳಂತೆ, ನದಿಯ ನೀರನ್ನು ನೀರಾವರಿಗೆ ಉಪಯೋಗಿಸುವ ಪದ್ಧತಿಯು ಸಹ ಹಿಂದಿನಿಂದಲೂ ಪ್ರಚಲಿತದಲ್ಲಿದ್ದಂತೆ, ಈಗಾಗಲೇ ಮೇಲೆ ಸೂಚ್ಯವಾಗಿ ಹೇಳಿರುವ ಪ್ರಕಾರ ತಿಳಿದುಬರುತ್ತದೆ. ಕರ್ನಾಟಕದಲ್ಲಿ ಅತ್ಯಂತ ಹಳೆಯದಾದ ನದೀ ಆಣೆಕಟ್ಟೆ ಹೊಯಿಸಳ ಅರಸರ ಕಾಲದಲ್ಲಿ ಕಾವೇರಿ ನದಿಗೆ ತಲಕಾಡಿನ[11] ಹತ್ತಿರ ಕಟ್ಟಲಾಯಿತು. ಅದೇ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಇತರೆ ಆಣೆಕಟ್ಟೆಗಳು ತಲಕಾಡಿನದಕ್ಕಿಂತಲೂ ಈಚಿನವೆಂದು ಹೇಳಲಾಗುತ್ತಿದೆ.

ಹೀಗೆ ವಿಜಯನಗರ ಸಾಮ್ರಾಜ್ಯದ ಕಾಲಕ್ಕಿಂತಲೂ ಮೊದಲೇ ನದಿಗಳಿಗೆ ಆಣೆಕಟ್ಟೆಗಳನ್ನು ಕಟ್ಟುವ ಕ್ರಮಗಳು ಪ್ರಚಲಿತದಲ್ಲಿದ್ದವು. ಅದೇ ಪದ್ಧತಿಯನ್ನು ವಿಜಯನಗರದ ಅರಸರು, ಅವರ ಅಧಿಕಾರಿಗಳು ಮತ್ತು ಪ್ರಜೆಗಳು ಮುಂದುವರಿಸಿಕೊಂಡು ಬಂದುದದಲ್ಲದೆ, ತಮಗೆ ಹೆಚ್ಚು ಅನುಕೂಲವೂ, ಲಾಭದಾಯವಕವೂ ಮತ್ತು ಅವಶ್ಯವೆನಿಸಿದ ನಿವೇಶನಗಳಲ್ಲಿ ಇಂತಹ ನಿರ್ಮಾಣ ಕಾರ್ಯಗಳನ್ನು ಹೆಚ್ಚಿನ ಉತ್ಸಾಹದಿಂದ ಕೈಗೊಂಡರು.

ವಿಜಯನಗರದ ರಾಜರು ಕೆಲ ವಿಶಿಷ್ಟ ಕಾರಣಗಳಿಗಾಗಿ ತಮ್ಮ ರಾಜಧಾನಿಯನ್ನು ಹಂಪೆಯ ಪರಿಸರದಲ್ಲಿ ಕಟ್ಟಬೇಕಾಯಿತಲ್ಲವೆ? ಆ ನಿವೇಶನವೋ ಗುಡ್ಡ ಗಾಡುಗಳಿಂದ, ಗುಂಡು ಬಂಡೆಗಳಿಂದ ತುಂಬಿ ಹರಡಿದುದಾಗಿದ್ದುದರಿಂದಲೂ ಮತ್ತು ನಗರವು ಅತಿ ಶೀಘ್ರದಲ್ಲಿಯೇ ಬೆಲೆಯತೊಡಗಿದ್ದರಿಂದಲೂ, ಆ ನಗರಕ್ಕೆ ಬೇಕಾದ ನೀರಿನ ಸರಬರಾಜಿನ ಏರ್ಪಾಟು ಮಾಡುವುದು ಅತ್ಯವಶ್ಯಕವೆನಿಸಿತು. ಆ ನೀರು ಕುಡಿಯುವುದಕ್ಕೂ, ಜಾನುವಾರಗಳ ಉಪಯೋಗಕ್ಕೂ ಮತ್ತಿತರ ಬಳಕೆಗಳಿಗೂ ಬೇಕಾಗಿದ್ದುದರಿಂದ, ಹೆಚ್ಚಿನ ಪ್ರಮಾಣದಲ್ಲಿಯೇ ಏರ್ಪಾಡು ಮಾಡಬೇಕಾಗಿ ಬಂದಿತು. ಎಂದರೆ ಕೆರೆಕುಂಟೆ ಮತ್ತು ಭಾವಿಗಳ ನೀರು ಸಾಕಾಗದಂತಾಯಿತು. ಅಲ್ಲದೆ ಸುಭದ್ರ ಸರಕಾರ, ಸುವ್ಯವಸ್ಥೆಯಿಂದ ಕೂಡಿದ ಆಡಳಿತ ಮತ್ತ ಇತರೆ ಪ್ರಜೋಪಯೋಗಿ ಕಾಮಗಾರಿಗಳಿಂದಾಗಿ ರಾಜ್ಯದಲ್ಲಿ ಶಾಂತಿ ಸೌಖ್ಯಗಳು ನೆಲೆಸಿ, ಅದರ ಜನಸಂಖ್ಯೆಯು ವಿಶೇಷವಾಗಿ ಬೆಳೆಯಿತು. ಅದಕ್ಕನುಗುಣವಾಗಿ ವ್ಯವಸಾಯೋತ್ಪನ್ನಗಳನ್ನು ವೃದ್ಧಿಪಡಿಸುವುದು ಅನಿವಾರ್ಯವಾಯಿತು. ಆಗ ಅರಸರು ವಿಫುಲ ನೀರಿನಿಂದ ಸತತವಾಗಿ ಮತ್ತು ಹತ್ತಿರದಲ್ಲಿಯೇ ಹರಿಯುತ್ತಿದ್ದ ತುಂಗಭದ್ರೆಯನ್ನು ಆಶ್ರಯಿಸಬೇಕಾಯಿತು. ಸಾಹಸೀ ಪ್ರವೃತ್ತಿ, ಜಾಣ್ಮೆ, ಶ್ರಮ, ತಾಂತ್ರಿಕ ಕುಶಲತೆ, ಪ್ರಜಾಶ್ರೇಯೋಭಿವೃದ್ಧಿಯೇ ಗುರಿ ಮುಂತಾದ ಸದುದ್ದೇಶಗಳ ಪರಿಣಾಮವಾಗಿ, ತುಂಗಭದ್ರಾ ನದಿಗೆ ಅನೇಕ ಕಡೆ ಆಣೆಕಟ್ಟೆಗಳನ್ನು ವಿಜಯನಗರದ ಅರಸರ ಕಾಲದಲ್ಲಿ ಕಟ್ಟಲಾಯಿತು. ಈ ನಿರ್ಮಾಣಗಳಿಗೆ ಅವರು ಆರಿಸಿದ ನಿವೇಶನಗಳನ್ನು ಪರಿಶೀಲಿಸಿದಲ್ಲಿ, ಈ ವಿಷಯದಲ್ಲಿ ಅವರಿಗಿದ್ದ ತಾಂತ್ರಿಕ ಜ್ಞಾನ, ಪರಿಪೂರ್ಣ ಕುಶಲತೆ ಮತ್ತು ಸಾಹಸೀ ಪ್ರವೃತ್ತಿಗಳು ವೇದ್ಯವಾಗಿ ವೀಕ್ಷಕರಿಗೆ ಅಚ್ಚರಿಯನ್ನುಂಟು ಮಾಡದೆ ಇರವು ಅವುಗಳ ನಿರ್ಮಾಣದಲ್ಲಿ ಪ್ರದರ್ಶಿತವಾಗಿರುವ ತಾಂತ್ರಿಕ ಕುಶಲತೆ, ಈಗಿನ ಜಲತಂತ್ರಜ್ಞರನ್ನೂ ಸಹ ಬೆರಗುಗೊಳಿಸುವಂತಿದೆ.

ಪರಂಪರಾನುಗತವಾಗಿ ಬಂದಿರುವ ಹೇಳಿಕೆಯ ಪ್ರಕಾರ, ಈ ಆಣೆಕಟ್ಟೆಗಳೆಲ್ಲವೂ, ವಿಜಯನಗರದ ಕೃಷ್ಣದೇವ ಮಹಾರಾಯನಲ್ಲಿ ದಣ್ಣಾಯಕ ಅಥವಾ ದಂಡನಾಯಕನಾಗಿದ್ದ (ಈಗಿನ ಮಹಾಸೇನಾಧಿಪತಿಯಂತೆ) ಮುದ್ದನೆಂಬ[12] ಹೆಸರಿನ ಅಧಿಕಾರಿಯಿಂದ ಕಟ್ಟಲ್ಪಟ್ಟವು. ಈಗಲೂ ಹೊಸಪೇಟೆಯಿಂದ ಸುಮಾರು ಹನ್ನೆರಡು ಮೈಲು ದೂರದಲ್ಲಿರುವ ವಿಶಾಲವಾದ ದಣ್ಣಾಯಕನ ಕೆರೆಯು, ಹೆಸರಿನ ಅನ್ಯೋನ್ಯತೆಯಿಂದಾಗಿ ಹೇಳುವುದಾದರೆ, ಆ ಮುದ್ದನು ಕಟ್ಟಿಸುದಾಗಿರಬೇಕು. ಆ ಮುದ್ದನು ಕೆರೆಗಳನ್ನು ಮತ್ತು ಆಣೆಕಟ್ಟುಗಳನ್ನು ಕಟ್ಟಿಸಿದುದಲ್ಲದೆ, ಅನೇಕ ಕಾಲುವೆಗಳನ್ನು ತೋಡಿಸಿ, ನೀರನ್ನು ಅವುಗಳ ಮೂಲಕ ಅವಶ್ಯಕತೆ ಇರುವಲ್ಲಿಗೆ ಹರಿಸಿಕೊಂಡು ಹೋಗುವಲ್ಲಿ ಕಾರಣನಾಗಿದ್ದನೆಂದು ಸಹ ಹೇಳಲಾಗುತ್ತಿದೆ. ಮತ್ತು ಹೊಸಪೇಟೆಯ ಹತ್ತಿರದಲ್ಲಿರುವ ರಾಯರ ಕೆರೆಯ ಬೃಹತ್ ಪ್ರಮಾಣದ ಏರಿಯಲ್ಲಿ ಅವನ ಮೃತ ದೇಹವನ್ನು ಹೊಳಲಾಗಿದೆ ಎಂಬುದು ಇಲ್ಲಿಯ ಪ್ರತೀತಿ. ಈ ಪರಂಪರಾನುಗತ ಹೇಳಿಕೆಗಳಲ್ಲದೆ, ಅದೇ ಹೆಸರಿನಿಂದ ಆರಂಭವಾಗುವ ಹೆಸರುಗಳನ್ನು (ಉದಾಹರಣೆಗೆ ಮುದ್ದಾಪುರ, ಮುದ್ದಲಾಪುರ ಮುಂತಾದವುಗಳು) ಮತ್ತು ಅವುಗಳ ಪರಿಸರದಲ್ಲಿ ಈಗಲೂ ಕಾಣಬರುವ ನೀರಾವರಿ ಸೌಲಭ್ಯಗಳನ್ನು ಪರಿಶೀಲಿಸಿದಲ್ಲಿ, ಮುದ್ದನೆಂಬ ಅಧಿಕಾರಿಯೊಬ್ಬನು ಇಂತಹ ಜಲ ಪ್ರತಿಬನ್ಧನ ಕಾರ್ಯಗಳಲ್ಲಿ ಆಸಕ್ತಿಯುಳ್ಳವನೂ, ಜಾಣ್ಮೆಯುಳ್ಳವನೂ ಮತ್ತು ಕೃತಕೃತ್ಯನೂ ಆದವನು ನಿಜವಾಗಿಯೂ ಇದ್ದಿರಬೇಕೆಂದು ಹೇಳಲು ಅವಕಾಶವಿದೆ.

ವಿಜಯನಗರದ ಬುಕ್ಕರಾಯನು ಕ್ರಿ.ಶ.೧೩೮೮ರಲ್ಲಿ ಪೆನ್ನಾರು ನದಿಗೆ ಆಣೆಕಟ್ಟೆಯನ್ನು ನಿರ್ಮಿಸಿದ ವಿಷಯವು ಶಿಲಾಶಾಸನವೊಂದರಿಂದ ತಿಳಿದುಬರುತ್ತದೆ.[13] ಇದರಿಂದ ಹೊರಟ ಕಾಲುವೆಯು ಸುಮಾರು ಹತ್ತು ಮೈಲು ಉದ್ದವಾಗಿಯೂ ಇದ್ದಂತೆ ತಿಳಿದುಬರುತ್ತದೆ. ಹರಿಹರದ ಹತ್ತಿರ ಹರಿದ್ರಾನದಿಗೆ ಸಹ ಒಂದು ಆಣೆಕಟ್ಟೆಯನ್ನು ಕ್ರಿ.ಶ.೧೪೧೦ರಲ್ಲಿ ಕಟ್ಟಲಾಯಿತು. ಕಾರಣಾಂತರಗಳಿಂದ ಕ್ರಿ.ಶ.೧೪೯೨ರಲ್ಲಿ ಅದಕ್ಕೆ ದುರಸ್ತಿ ಮಾಡಬೇಕಾಯಿತು.[14]

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ (ಕ್ರಿ.ಶ.೧೩೩೬ ರಿಂದ ೧೫೬೫ರ ವರೆಗೆ) ಹಂಪೆಯ ಪರಿಸರದಲ್ಲಿ ಸುಮಾರು ೧೧ ಆಣೆಕಟ್ಟೆಗಳನ್ನು ಕಟ್ಟಲಾಯಿತು. ಅವುಗಳ ಪೈಕಿ ಎರಡನ್ನು ಬಿಟ್ಟರೆ, ಉಳಿದವುಗಳನ್ನು ಕಟ್ಟಿದ ಕಾಲ, ಅರಸು, ಮುಂತಾದವುಗಳನ್ನು ಕುರಿತಾದ ವಿವರಣೆಗಳು ಖಚಿತವಾಗಿ ತಿಳಿದುಬರುತ್ತಿಲ್ಲ. ಅವುಗಳ ನಿವೇಶನ, ಉಪಯೋಗ, ಅವುಗಳಲ್ಲಡಕವಾಗಿರುವ ತಾಂತ್ರಿಕ ಕುಶಲತೆ, ನಿರ್ಮಾಣ ಪದ್ಧತಿ, ಪ್ರಯೋಜನ ಪಡೆಯುತ್ತಿರುವ ಅಚ್ಚುಕಟ್ಟು ಪ್ರದೇಶ ಮುಂತಾದವುಗಳನ್ನು ಗಣನೆಗೆ ತೆಗೆದುಕೊಂಡಲ್ಲಿ ಮತ್ತು ಅವುಗಳಲ್ಲಿರುವ ಅನ್ಯೋನ್ಯತೆಯಿಂದಾಗಿ, ಇವುಗಳೆಲ್ಲವೂ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕಟ್ಟಲಾಗಿರಬೇಕೆಂದು ನಿಃಸಂದೇಹವಾಗಿ ಹೇಳಬಹುದು.

ಹಂಪೆಯ ವಿರೂಪಾಕ್ಷಸ್ವಾಮಿಯ ದೇವಸ್ಥಾನದಿಂದ ಕೆಲದೂರದಲ್ಲಿ ಕಟ್ಟಲಾಗಿರುವ ತುರ್ತು ಆಣೆಕಟ್ಟೆ ಎರಡನೆಯ ಬುಕ್ಕಮಹಾರಾಜನಿಂದ (ಕ್ರಿ.ಶ.೧೩೯೯ರಿಂದ ೧೪೦೬ರ ವರೆಗೆ ರಾಜ್ಯಭಾರ ಮಾಡಿದನು) ಕಟ್ಟಲ್ಪಟ್ಟಿತು.[15] ಅದರಿಂದ ಹೊರಟ ತುರ್ತು ಕಾಲುವೆಯ ನೀರು, ರಾಜಧಾನಿಯ ಜನತೆಗೆ ಉಪಯೋಗವಾಯಿತು. ಹೀಗೆ ವಿಜಯನಗರ ರಾಜಧಾನಿಯ ಪ್ರಜೆಗಳಿಗೆ ಮೊದಲನೇ ಬಾರಿಗೆ ನೀರು ಸರಬರಾಜಿನ ವ್ಯವಸ್ಥೆಯ ಸಮರ್ಪಕವಾಗಿ ಎರಡನೇ ಬುಕ್ಕಮಹಾರಾಜನಿಂದ ಜರುಗಿತು. ಈಗಲೂ ಈ ತುರ್ತು ಕಾಲುವೆಯು ಮತ್ತು ಅದರ ಉಪಕಾಲುವೆಗಳು ಹರಿಯು ಪ್ರದೇಶವನ್ನು ಗಣನೆಗೆ ತೆಗೆದುಕೊಂಡಲ್ಲಿ, ಮೇಲಿನ ವಿಷಯವು ದೃಢವಾಗಿ ವೇದ್ಯವಾಗುತ್ತದೆ. ಅಲ್ಲದೆ ಈ ಕಾಲುವೆಗಳ ನೀರು ತೋಟ ಗದ್ದೆಗಳಿಗೂ ಸಹ ಉಪಯೋಗವಾಯಿತು. ಇದೇ ರೀತಿಯಾಗಿ ವಿಜಯಿನಗರದ ಅರಸರು ತಮ್ಮ ರಾಜ್ಯಾದ್ಯಂತ ಜನೋಪಯೋಗೀ ನೀರಾವರಿ ಕಾಮಗಾರಿಗಳನ್ನು ಕೈಗೊಂಡರು ಮತ್ತು ಇತರರಿಗೂ, ಈ ದಿಸೆಯಲ್ಲಿ ಪ್ರೊತ್ಸಾಹವನ್ನಿತ್ತರು. ತತ್ಫಲವಾಗಿ ರಾಜಧಾನಿಯಲ್ಲಿ ಮಾತ್ರವಲ್ಲದೆ ರಾಜ್ಯಾದ್ಯಂತ ಆರ್ಥಿಕ ಸಮೃದ್ಧಿಯು ಗಮನಾರ್ಹ ಪ್ರಮಾಣದಲ್ಲಿ ಕಂಡುಬಂದಿತು. ಹೀಗೆ ಕಂಡುಬಂದ ಮಹತ್ಸಾಧನೆಯನ್ನು ವಿಶೇಷವಾಗಿ ಪರದೇಶೀ ಪ್ರವಾಸಿಗರು ಅನೇಕ ವಿವರಗಳೊಂದಿಗೆ ವಿಫುಲವಾಗಿ ಹೊಗಳಿ ಬರೆದಿಟ್ಟಿರುವುದು ಈಗಾಗಲೇ ಸರ್ವವಿದಿತವಾದ ವಿಷಯವಾಗಿದೆ.

ಈಗ ಈ ಆಣೆಕಟ್ಟುಗಳ ಬಗ್ಗೆ ಲಭ್ಯವಿರುವ ವಿವರಗಳನ್ನು ಒಂದೊಂದಾಗಿ ತಿಳಿಯೋಣ. ಮೊದಲಿಗೆ ಬಲದಂಡೆಯ (ಬಳ್ಳಾರಿ ಜಿಲ್ಲೆಯ ಭಾಗ) ಆಣೆಕಟ್ಟೆಗಳನ್ನು ಕುರಿತು ತಿಳಿಯೋಣ.[16]

ವಲ್ಲಭಾಪುರದ ಆಣೆಕಟ್ಟೆ: ಇದು ಈಗಿನ ತುಂಗಭದ್ರಾ ಜಲಾಶಯದಲ್ಲಿ ಮುಳುಗಡೆಯಾಗಿದೆ. ಕ್ರಿ.ಶ.೧೫೨೧ರಲ್ಲಿ ಎಂದರೆ ಕೃಷ್ಣದೇವರಾಯ ಮಹಾರಾಯನ ಆಳ್ವಿಕೆಯ ಕಾಲದಲ್ಲಿ ಕಟ್ಟಲಾಗಿದ್ದಿತೆಂದು ಅದರ ಪರಿಸರದಲ್ಲಿಯೇ ಇದ್ದ ಒಂದು ಶಿಲಾಶಾಸನದಿಂದ[17] ತಿಳಿದುಬಂದಿದೆ. ಇದನ್ನು ಹೊಸಪೇಟೆಯಿಂದ ಪಶ್ಚಿಮಕ್ಕೆ ಸುಮಾರು ೧೨ ಮೈಲುಗಳು ದೂರದಲ್ಲಿ ಕಟ್ಟಲಾಗಿತ್ತು. ಇದನ್ನು ಬಲದಂಡೆ ಮತ್ತು ನದಿಪಾತ್ರದಲ್ಲಿದ್ದ ಒಂದು ದೊಡ್ಡ ನಡುಗಡ್ಡೆ, ಇವುಗಳ ನಡುವೆ ಸುಮಾರು ೯೦೦ ಅಡಿಗಳಷ್ಟು ಉದ್ದಕ್ಕೆ ಕಟ್ಟಲಾಗಿತ್ತು. ಈ ವಲ್ಲಭಾಪುರದ ಆಣೆಕಟ್ಟೆಗೆ ಎದುರಾಗಿ, ಎಂದರೆ ಎಡದಂಡೆಯಿಂದ (ರಾಯಚೂರು ಜಿಲ್ಲೆಯ ಭಾಗ) ಕಟ್ಟಲಾದ ಭಾಗಕ್ಕೆ ಕೊರಗಲ್ಲು ಆಣೆಕಟ್ಟೆ ಎಂದು ಹೆಸರಿತ್ತು. ಈ ವಲ್ಲಭಾಪುರದ ಆಣೆಕಟ್ಟೆಯಿಂದ ಆರಂಭವಾಗುತ್ತಿದ್ದ ಕಾಲುವೆಗೆ ಬಸವಣ್ಣ ಕಾಲುವೆ ಎಂದು ಹೆಸರು. ಈ ಕಾಲುವೆಯು ಹೊಸಪೇಟೆ ನಗರದ ಮೂಲಕವಾಗಿ ಈಗಲೂ ಹರಿಯುತ್ತದಲ್ಲದೇ, ಮೊದಲಿನ ಆಯಕಟ್ಟಿನ ಕೆಲಭಾಗಗಳಿಗೆ ನೀರನ್ನೊದಗಿಸುತ್ತದೆ. ಆದರೆ ಈ ಕಾಲುವೆಗೆ ಬೇಕಾದ ನೀರನ್ನು, ಈಗಿನ ತುಂಗಭದ್ರಾ ಜಲಾಶಯವು ನಿರ್ಮಾಣವಾದಂದಿನಿಂದ, ಅದರಿಂದ ಬಿಡುವಂತೆ ಏರ್ಪಾಟು ಮಾಡಲಾಗಿದೆ. ಮೊದಲಿನ ಆಣೆಕಟ್ಟೆ ತುಂಗಭದ್ರಾ ಜಲಾಶಯದಲ್ಲಿ ಮುಳುಗಡೆಯಾಗಿದೆ ಎಂಬ ಕಾರಣದಿಂದಾಗಿ ಕೆಲವು ಅವಶ್ಯಕ ಬದಲಾವಣೆ ಮತ್ತು ಸುಧಾರಣೆಗಳಿಮದಾಗಿ, ಈ ಬಸವಣ್ಣ ಕಾಲುವೆಯಿಂದ ಪ್ರಯೋಜನ ಪಡೆಯುವ ಅಚ್ಚುಕಟ್ಟು ಪ್ರದೇಶ ಹೆಚ್ಚಾಗಿದೆಯೆಂದೂ ಹೇಳಬಹುದು.

ರಾಮಣ್ಣ, ಕುರುದಗಡ್ಡೆ ಅಥವಾ ಹೊಸಕೋಟೆ ಆಣೆಕಟ್ಟೆ: ಇಲ್ಲಿ ವಾಸ್ತವಿಕವಾಗಿ ಎರಡು ಆಣೆಕಟ್ಟುಗಳು ನಿರ್ಮಾಣವಾದವು. ಎಂದರೆ ಮೊದಲು ಎಡದಂಡೆಯಿಂದ ಆರಂಭವಾಗಿ, ನದೀ ಪಾತ್ರದಲ್ಲಿದ್ದ ಕುರುದಗಡ್ಡೆ ಎಂಬ ನದೀ ದ್ವೀಪದ ಮೇಲಣ ತುದಿಯ ವರೆಗೆ ಕಟ್ಟಲಾಯಿತು. ಅದರಿಂದಾಗಿ ಬಲದಂಡೆಗೂ ಮತ್ತು ಕುರುದಗಡ್ಡೆಗೂ ಮಧ್ಯದಲ್ಲಿ ಹರಿಯುತ್ತಿದ್ದ ನದಿಯ ಒಂದು ಶಾಖೆಯಲ್ಲಿ ನೀರಿನ ಪ್ರಮಾಣವು ಹೆಚ್ಚಾದಂತಾಯಿತು. ಅದೇ ಉದ್ದೇಶಕ್ಕಾಗಿ ಹಾಗೆ ಕಟ್ಟಲಾಯಿತು. ಅನಂತರ ಈ ಅನುಕೂಲತೆಯನ್ನು ಉಪಯೋಗಿಸಿಕೊಳ್ಳುವುದಕ್ಕಾಗಿ, ಇನ್ನೂ ಕೆಳಗಿನ ನಿವೇಶನವೊಂದರಲ್ಲಿ, ಎಂದರೆ ಬಲದಂಡೆಗೂ ಮತ್ತು ಅದೇ ಕುರುದಗಡ್ಡೆಯ ಕೆಳತುದಿಗೂ ಮಧ್ಯದಲ್ಲಿ ಮತ್ತೊಂದು ಕಟ್ಟೆಯನ್ನು ನಿರ್ಮಿಸಿದರು. ತದನಂತರ ಅಲ್ಲಿ ಶೇಖರವಾದ ನೀರನ್ನು ಕಾಲುವೆಗಳ ಮೂಲಕ ವ್ಯವಸಾಯಕ್ಕಾಗಿ ಬಳಸಿಕೊಳ್ಳಲಾಯಿತು. ಇಲ್ಲಿಂದ ಹೊರಟ ಕಾಲುವೆಗೆ ರಾಯ ಕಾಲುವೆ ಎಂದು ಹೆಸರು. ಇದೂ ಸಹ ಹೊಸಪೇಟೆ ನಗರದ ಪರಿಸರದಲ್ಲಿ ಈಗಲೂ ಕಾಣಬರುತ್ತದೆಯಲ್ಲದೆ, ಈಗಲೂ ನೀರಾವರಿ ಬೇಸಾಯಕ್ಕೆ ಉಪಯೋಗವಾಗುತ್ತದೆ. ಅನಂತರ ಈ ಕಾಲುವೆಯ ನೀರು ಕಮಲಾಪುರದ ದೊಡ್ಡ ಕೆರೆಗೆ ಸೇರುತ್ತದೆ. ಈ ಏರ್ಪಾಟಿನಿಂದಾಗಿ ಕಮಲಾಪುರದ ಕೆರೆಯು ಮಳೆಯ ನೀರನ್ನೇ ಆಧರಿಸಬೇಕಾಗಿಲ್ಲ. ಹೀಗಾಗಿ ಈ ಕೆರೆಯು ಸದಾ ನೀರಿನಿಂದ ತುಂಬಿರುತ್ತದೆ. ಇಲ್ಲಿ ಶೇಖರವಾದ ನೀರು ಈಗಲೂ ಜನರಿಗೂ, ಬೇಸಾಯಕ್ಕೂ ಮತ್ತು ಪಶುಪಕ್ಷಿಗಳಿಗೂ ಉಪಯೋಗವಾಗುತ್ತಲಿದೆ. ಅಲ್ಲದೆ ಇಲ್ಲಿಯ ನೀರನ್ನೇ ಕಾಲುವೆಗಳ ಮೂಲಕ ಹಿಂದಿನ ಕಾಲದಲ್ಲಿ ವಿಜಯನಗರ ಪಟ್ಟಣಕ್ಕೂ ಸರಬರಾಜಾಗುವಂತೆ ಏರ್ಪಡಿಸಲಾಗಿತ್ತು. ರಾಜಧಾನಿಯಲ್ಲಿ ಎತ್ತರದಲ್ಲಿದ್ದ ಸೌಧಗಳಿಗೆ, ಇದೇ ನೀರನ್ನು ಏತಗಳ ಮೂಲಕ ಮೇಲಕ್ಕೆತ್ತಿ, ತದನಂತರ ಅವಶ್ಯವಿದ್ದೆಡೆಗಳಿಗೆಲ್ಲಾ ಒದಗಿಸಿಕೊಳ್ಳಲಾಗಿತ್ತು. ಈ ಏರ್ಪಾಟಿನ ಅವಶೇಷಗಳನ್ನು ಈಗಲೂ ಹಾಳಾಗಿರುವ ಹಂಪೆಯಲ್ಲಿ ನೋಡಬಹುದು. ಈ ಒಂದು ನಿದರ್ಶನದಿಂದ, ವಿಜಯನಗರದ ಜಲತಂತ್ರಜ್ಞರು ಆಣೆಕಟ್ಟೆಗಳ ನಿರ್ಮಾಣದಲ್ಲಿ ಮಾತ್ರವಲ್ಲದೆ, ಅವುಗಳ ಪ್ರಯೋಜನಗಳನ್ನು ವಿವಿಧೋದ್ದೇಶಗಳಿಗೆ ಪಡೆದುಕೊಂಡು ಜನಕಲ್ಯಾಣವನ್ನು ಸಾಧಿಸುವಲ್ಲಿ ಪರಿಗಣಿತರಿದ್ದರೆಂಬುದು ವೇದ್ಯವಾಗುತ್ತದೆ.

ಈ ಆಣೆಕಟ್ಟೆಯು ಸಹ ಪ್ರಸಕ್ತ ತುಂಗಭದ್ರಾ ಜಲಾಶಯದಲ್ಲಿ ಮುಳುಗಡೆಯಾಗಿರುವುದರಿಂದ ಇದರ ಕಾಲುವೆಗೆ ನೀರನ್ನು ಮೇಲಿನ ಜಲಾಶಯದಿಂದಲೇ ಕೊಡಲಾಗುತ್ತಿದ್ದು, ಅದು ತನ್ನ ಹಿಂದಿನ ವಿವಿಧೋದ್ದೇಶಿತ ಪಾತ್ರವನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಅನುಕೂಲವಾಗಿದೆ. ಅಷ್ಟೇ ಅಲ್ಲದೆ ಕೆಲ ಅವಶ್ಯಕ ಮಾರ್ಪಾಟುಗಳಿಂದಾಗಿ, ಈ ಕಾಲುವೆ ಕೆಳಗಣ ನೀರಾವರಿ ಪ್ರದೇಶವು ಜಾಸ್ತಿಯಾಗಿದೆಯೆಂದೂ ಹೇಳಬಹುದು.

ಬೆಲ್ಲ ಅಥವಾ ಹೊಸೂರು ಆಣೆಕಟ್ಟೆ: ಈ ಆಣೆಕಟ್ಟೆಯನ್ನು ಈಗಿನ ತುಂಗಭದ್ರಾ ಡ್ಯಾಮಿನಿಂದ ಸುಮಾರು ಎರಡು ಮೈಲು ಕೆಳಗೆ ಮತ್ತು ಹೊಸೂರಮ್ಮನ ಗುಡಿಗೆ ಹತ್ತಿರದಲ್ಲಿ ಕಟ್ಟವಾಗಿದ್ದು, ಅದನ್ನು ಈಗಲೂ ನೋಡಬಹುದು. ಇಲ್ಲಿಯ ಕಟ್ಟೆಯನ್ನು ಸುಮಾರು ಅರ್ಧ ದೂರದವರೆಗೆ, ಎಂದರೆ ನದೀ ಪಾತ್ರದಲ್ಲಿರುವ ಒಂದು ನಡುಗಡ್ಡೆಯವರೆಗೆ ಕಟ್ಟಲಾಗಿದೆ. ಉಳಿದರ್ಧ ಭಾಗದಲ್ಲಿ ನೈಸರ್ಗಿಕವಾಗಿ ದೊಡ್ಡ ಬಂಡೆಗಲ್ಲುಗಳಿರುವ ಅನುಕೂಲತೆಯನ್ನು ಉಪಯೋಗಿಸಿಕೊಂಡು, ಕಾಲುವೆಗಳಿಗೆ ನೀರನ್ನು ಒದಗಿಸಿಕೊಳ್ಳಲಾಗಿದೆ. ಈ ಕಟ್ಟೆಯನ್ನು ಸುಮಾರು ಒಂದು ಸಾವಿರ ಅಡಿಗಳಷ್ಟು ಉದ್ದ ಕಟ್ಟಲಾಗಿದೆ. ಇಲ್ಲಿಂದ ಹೊರಡುವ ಕಾಲುವೆಗೆ ಬೆಲ್ಲ ಕಾಲುವೆಯೆಂದು ಹೆಸರು.

ತುರ್ತು ಆಣೆಕಟ್ಟೆ: ಇಲ್ಲಿಂದ ಹೊರಡುವ ಕಾಲುವೆಯಲ್ಲಿಯ ನೀರು ಬಹು ರಭಸದಿಂದ ಎಂದರೆ ತುರ್ತಾಗಿ ಹರಿಯುತ್ತಿರುವುದರಿಂದಾಗಿ, ಮೇಲಿನ ಹೆಸರನ್ನು ಈ ಆಣೆಕಟ್ಟೆಗೂ ಹಾಗೂ ಕಾಲುವೆಗೂ ಕೊಡಲಾಗಿರಬೇಕು. ಇವುಗಳ ಇತ್ತೀಚಿನ ಹೆಸರುಗಳಾಗಿರಬೇಕು. ಏಕೆಂದರೆ ಹಂಪೆಯ ಕೃಷ್ಣಾಪುರದ ಭಾಗದಲ್ಲಿ ಕಾಣಬರುವ ಮೂರು ಶಿಲಾಶಾಸನಗಳಲ್ಲಿ, ಈ ಕಾಲುವೆಗೆ ಹಿರಿಯ ಕಾಲುವೆ ಮತ್ತು ಅದರ ಆಣೆಕಟ್ಟೆ ಬಹು ಮುಖ್ಯವಾದವುಗಳಿದ್ದಿರಬೇಕು. ಈ ಆಣೆಕಟ್ಟೆಯಿಂದ ಹೊರಡುವ ಮುಖ್ಯ ಕಾಲುವೆ ಮತ್ತು ಅದರ ಶಾಖೋಪಶಾಖೆಗಳು ಹಿಂದಿನ ವಿಜಯನಗರ ಪಟ್ಟಣ ಪ್ರದೇಶದಲ್ಲೆಲ್ಲಾ ಈಗಲೂ ಹರಿಯುತ್ತಿರುವುದನ್ನು ಗಣನೆಗೆ ತೆಗೆದುಕೊಂಡಲ್ಲಿ, ಅವುಗಳ ಪ್ರಾಮುಖ್ಯತೆಯ ಅರಿವಾಗದೆ ಇರದು.

ಅಲ್ಲದೆ ಈ ಮೊದಲೇ ತಿಳಿಸಿರುವಂತೆ, ಈ ಆಣೆಕಟ್ಟೆಯು ವಿಜಯನಗರದ ಅರಸ ಎರಡನೇ ಬುಕ್ಕ ಮಹಾರಾಜನ (ಕ್ರಿ.ಶ.೧೩೯೯ ರಿಂದ ಕ್ರಿ.ಶ.೧೪೦೬ರ ವರೆಗೆ ಅಳಿದ) ಕಾಲದಲ್ಲಿ ನಿರ್ಮಾಣಗೊಂಡಿತು. ಈ ಅರಸನು ರಾಜಧಾನಿಯ ನಿರ್ಮಾಣದಲ್ಲಿ ಕೆಲವೊಂದು ಸುಧಾರಣೆಗಳನ್ನು ಮಾಡಿದ್ದಲ್ಲದೆ ರಾಜಧಾನಿಯ ನಿವಾಸಿಗಳಿಗೆ ನೀರಿನ ಸರಬರಾಜಿನ ವ್ಯವಸ್ಥೆಯನ್ನು ಏರ್ಪಡಿಸದನೆಂದು ತಿಳಿದುಬಂದಿದೆ. ಮೇಲಿನ ವಿವರಣೆಗಳಿಂದ, ಎರಡನೇ ಬುಕ್ಕಮಹಾರಾಜನ ಈ ಕಾರ್ಯ ಸಾಧನೆಯು ದೃಢಪಟ್ಟಂತಾಯಿತಲ್ಲವೇ.

ಇದರ ನಿರ್ಮಾಣದ ಬಗ್ಗೆ ಪ್ರಚಲಿತದಲ್ಲಿರುವ ಒಂದು ಕೂತೂಹಲಕಾರಿ ದಂತ ಕಥೆಯನ್ನು[18] ಇಲ್ಲಿ ತಿಳಿಯಬಹುದು. ಆ ಕಥೆಯ ಪ್ರಕಾರ, ಎರಡನೇ ಬುಕ್ಕ ಮಹಾರಾಜನ ಆಜ್ಞೆ ಮೇರೆಗೆ ಒಂದು ಬೃಹತ್‌ಗಾತ್ರದ ಕಲ್ಲುಗುಂಡನ್ನು ಅನೇಕ ಆನೆಗಳ ಸಹಾಯದಿಂದ, ಈ ನಿವೇಶನದ ಒಂದು ಆರಿಸಿದ ಆಯಕಟ್ಟಿನ ಸ್ಥಳಕ್ಕೆ ಎಳೆದು ತರಲಾಯಿತು. ನಿರ್ದಿಷ್ಟ ಸುಮುರ್ಹೂತದಲ್ಲಿ ಆ ಗುಂಡನ್ನು ನದೀ ಪಾತ್ರಕ್ಕೆ, ತಳ್ಳಿಸಲಾಯಿತು. ಅಷ್ಟರಿಂದಲೇ ನದೀ ನೀರು, ಅರಸನು ಇಚ್ಛಿಸಿದ ಪ್ರಕಾರ, ಆಗಲೇ ತಯಾರಾಗಿದ್ದ ಕಾಲುವೆಗಳನ್ನು ಪ್ರವೇಶಿಸಿತು. ಆ ನೀರನ್ನು ಕಾಲುವೆ ಮತ್ತು ಉಪಕಾಲುವೆಗಳ ಮೂಲಕ ರಾಜಧಾನಿಯ ಎಲ್ಲಾ ಎಡೆಗಳಿಗೆ ಕೊಂಡೊಯ್ಯಲಾಯಿತು. ಅದರಿಂದ ಅನೇಕ ಹೂ ಹಣ್ಣುಗಳ ತೋಟಗಳು, ಗದ್ದೆಗಳು, ಇತರ ಜಮೀನುಗಳು ಲಾಭವನ್ನು ಪಡೆದವು.

ಈ ಆಣೆಕಟ್ಟೆಯ ವೈಶಿಷ್ಟ್ಯಗಳು ಬಹು ಕುತೂಹಲಕಾರಿಯಾಗಿದ್ದು ಉತ್ತಮ ಮಟ್ಟದ ತಾಂತ್ರಿಕ ಕುಶಲತೆಯನ್ನು ನಿರೂಪಿಸುವಂತವುಗಳಾಗಿವೆ. ಎಂದರೆ, ಈ ಕಟ್ಟೆಯನ್ನು ಮುಖ್ಯವಾಗಿ ನದೀ ಪಾತ್ರದಲ್ಲಿರತಕ್ಕಂಥ ನಡುಗಡ್ಡೆಗಳನ್ನು, ದೊಡ್ಡದಾದ ಕಲ್ಲುಗುಂಡುಗಳನ್ನು, ಹಾಸುಬಂಡೆಗಳನ್ನು ಉಪಯೋಗಿಸಿಕೊಳ್ಳುತ್ತಾ, ಅಲ್ಲಲ್ಲಿಗೆ ಎಂಟು ವಿಭಾಗಗಳಲ್ಲಿ ಕಟ್ಟಲಾಗಿದೆ. ಈ ಬಗೆಗೆ ಕೊಟ್ಟಿರುವ ನಕಾಶೆಯನ್ನು ನೋಡಬಹುದು. ಇದರ ಉದ್ದ ಸುಮಾರು ೧೨೨೭ ಅಡಿಗಳಷ್ಟಾಗಿದೆ.

 

[1] ಬಲದಂಡೆಯ ಜಮೀನಿಗೆ, ಎಂದರೆ ಬಳ್ಳಾರಿ ಜಿಲ್ಲೆಯ ಭಾಗಕ್ಕೆ ಉಪಯೋಗವಾಗುತ್ತಿದ್ದ ಆಣೆಕಟ್ಟೆಗಳನ್ನು ಕುರಿತು, ಇದೇ ಲೇಖಕನಿಂದ ಇಂಗ್ಲೀಷ್ ಭಾಷೆಯಲ್ಲಿ ಬರೆಯಲ್ಪಟ್ಟು The Indian Journal of Power and River Valley Development-Tungabhadra Project Number (Feb ೧೯೫೯ ಪುಟ ೪೫ ರಿಂದ ೫೩) ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಪ್ರಸ್ತುತ ಲೇಖನವು ಎರಡೂ ದಂಡೆಗಳಿಗೆ ಸಂಬಂಧಪಟ್ಟುದಾಗಿದ್ದು, ವಿಸ್ತೃತಪಡಿಸಿದುದಾಗಿದೆ.

[2] Satya Srava M: Irrigation in India Through the Ages.

[3] History and Culture of the Indian People (Bhavans). Vol. II. PP.87

[4] (South Indian Inscriptions, Vol, I X , pt-II, No. 583, pp. 599. ಇದು ಕ್ರಿ.ಶ.೧೫೩೮ರಲ್ಲಿ, ಎಂದರೆ ವಿಜಯನಗರದ ಅಚ್ಯತರಾಯನ ಕಾಲದ ಶಾಸನ.

[5] ವಿಜಯನಗರದ ಅತಿಶ್ರೇಷ್ಠ ಅರಸರಲ್ಲೊಬ್ಬನಾದ ಕೃಷ್ಣದೇವಮಹಾರಾಯನು ಬರೆದ ಆಮುಕ್ತಮಾಲ್ಯದ ಎಂಬ ತೆಲಗು ಕಾವ್ಯ ಗ್ರಂಥದಲ್ಲಿ IV; V; ೨೩೬ ನೋಡುವುದು.

[6] R.Sewll: Forgotten Empire, pp.266

[7] ತಮಿಳುನಾಡಿನಲ್ಲಿರುವ ಈ ಚಂಗಲ್‌ಪೇಟೆ ಜಿಲ್ಲೆಯು ವಿಜಯನಗರ ಸಾಮ್ರಾಜ್ಯದೊಳಗಿನ ಒಂದು ಪ್ರಮುಖ ಪ್ರದೇಶವಾಗಿತ್ತು.

[8] Quoted by T.V. Mahalingam in his book `Economic Life in Vijayanagara’ (Madras) pp.93

[9] E.I, Vol.l, X IV No.4, pp. 108

[10] ಕರ್ನಾಟಕ ಕವಿಚರಿತೆ ೧೯೭೨ ಆ.ನರಸಿಂಹಾಚಾರ್ಯ ಭಾಗ ೧, ಪುಟ ೧೯೭

[11] Mysore Gazetteer of Hayavadana Rao Vol.l, pp. 10 & Vol. III, pp. 164

[12] W.Francis: Bellary District Gazetteer (1916) pp. 95

[13] E.C. VOL. X GB-6

[14] Mysore Gazetteer Vol. II, Pt. I, pp.385 and E.C. Vol, X I DVG, 23 and 29

[15] Sewell: Forgotten Empire pp. 51, 301 etc.

[16] ಇಲ್ಲಿ ಕೊಟ್ಟಿರುವ ವಿವರಣೆಗಳನ್ನು Bellary District Gazetteer (೧೯೧೬) ದಿಂದ ತೆಗೆದುಕೊಳ್ಳಲಾಗಿದೆ.

[17] Bellary District Manual pp. 231 and Bellary District Gazetteer (1916) pp.95

[18] Francis: Bellary District Gazetteer (1916) pp.97