ರಾಮಸಾಗರ ಆಣೆಕಟ್ಟೆ: ಇದು ಬುಕ್ಕಸಾಗರ ಗ್ರಾಮದ ಹತ್ತಿರದಲ್ಲಿ ನಿರ್ಮಾಣಗೊಂಡಿದ್ದರೂ, ಇದಕ್ಕೆ ಈ ಹೆಸರು ಬಂದಿದೆ. ಇದನ್ನು ಬಲದಂಡೆಯಿಂದ ಎಡದಂಡೆಯ ವರೆಗೆ ಕಟ್ಟಲಾಗಿದೆ. ಎಡದಂಡೆಯಲ್ಲಿ ಇದೇ ಆಣೆಕಟ್ಟೆಗೆ ಹಿರೇ ಜಂತಗಲ್ಲು ಆಣೆಕಟ್ಟೆ ಎಂದು ಕರೆಯಲಾಗುತ್ತದೆ. ಈ ನಿವೇಶನದಲ್ಲೂ ಸಹ ನೇರವಾಗಿ ಕಟ್ಟದೆ, ನದೀ ಪಾತ್ರದಲ್ಲಿರುವ ನಡುಗಡ್ಡೆಗಳನ್ನೂ, ಗುಂಡುಬಂಡೆಗಳನ್ನೂ ಉಪಯೋಗಿಸಿಕೊಳ್ಳುತ್ತಾ ಎರಡೂ ದಂಡೆಗಳ ಕಡೆಗಳಿಂದ ಕಟ್ಟಲಾಗಿದೆ. ಇಲ್ಲಿಂದ ಹೊರಡುವ ಕಾಲುವೆಗೆ ರಾಮಸಾಗರ ಕಾಲುವೆ ಎಂದು ಕರೆಯಲಾಗುತ್ತದೆ. ಕೆಲವು ಸ್ಥಳಗಳಲ್ಲಿ, ಈ ಕಾಲುವೆಯ ನೀರು ಎತ್ತರ ಪ್ರದೇಶದಲ್ಲಿರುವ ಹೆಚ್ಚಿನ ಜಮೀನುಗಳಿಗೆ ಉಪಯೋಗವಾಗಲೆಂಬ ಉದ್ದೇಶಕ್ಕಾಗಿ, ಕಂಪಲಿ ಆಣೆಕಟ್ಟೆಯ ಕಾಲುವೆಯ ಮೇಲಿನಿಂದ, ಕಲ್ಲಿನದೋಣಿ ಕಾಲುವೆಗಳ ಮೂಲಕ ಹಾದು ಹೋಗುವ ಏರ್ಪಾಟನ್ನು ಮಾಡಲಾಗಿದೆ. ಈ ಏರ್ಪಾಡಿನಲ್ಲಿಯೂ ಸಹ ಹಿಂದಿನ ಜಲತಂತ್ರಜ್ಞರ ಪರಿಣತೆಯು ವೇದ್ಯವಾಗುತ್ತದೆ.

ಕಂಪಲಿ ಆಣೆಕಟ್ಟೆ: ಹೊಸಪೇಟೆ ತಾಲೂಕಿನ ಪ್ರದೇಶದಲ್ಲಿ ತುಂಗಭದ್ರಾ ನದಿಗೆ ಕಟ್ಟಲಾಗಿರುವ ಆಣೆಕಟ್ಟೆಗಳಲ್ಲಿ ಇದು ಕೊನೆಯದಾದರೂ ಬಹು ಮುಖ್ಯವಾದುದು. ಮೇಲಿನದರಂತೆ ಇದನ್ನು ಸಹ ಬಲದಂಡೆಯಿಂದ ಎಡದಂಡೆಯವರೆಗೆ ಪೂರ್ತಿಯಾಗಿ ಕಟ್ಟಲಾಗಿದೆ. ಎಡದಂಡೆಯಲ್ಲಿ ಇದಕ್ಕೆ ಚಿಕ್ಕ ಜಂತಗಲ್ಲು ಆಣೆಕಟ್ಟೆಂದು ಪ್ರತೀತಿ. ಇದು ಕೆಲ ದೂರ ಓರೆಯಾಗಿ ನದೀ ಮಧ್ಯದವರೆಗೆ ಸಾಗಿ ಅನಂತರ ನೇರವಾಗಿ ಎಡದಂಡೆಯನ್ನು ತಲುಪುತ್ತದೆ. ಇದು ಸುಮಾರು ಒಂದೂವರೆ ಮೈಲು ಉದ್ದವಾಗಿದೆ. ಇದು ಕಂಪಲಿ ಪರಿಸರದಲ್ಲಿರುವ ಭೂಮಿಗೆ ನೀರನ್ನೊದಗಿಸುತ್ತದೆ. ಈಗಾಗಲೇ ತಿಳಿಸಿರುವಂತೆ, ಈ ಕಾಲುವೆ ಮತ್ತು ರಾಮಸಾಗರದ ಕಾಲುವೆ ವಿಶಿಷ್ಟ ಏರ್ಪಾಟಿನಿಂದಾಗಿ ಒಂದನ್ನೊಂದು ದಾಟಿ ಹೋಗುತ್ತವೆ. ಹೀಗಾಗಿ ಇವುಗಳು ಹೆಚ್ಚಿನ ಪ್ರದೇಶಗಳಿಗೆ ನೀರನ್ನೊದಗಿಸಿ, ಹೆಚ್ಚು ಪ್ರಮಾಣದಲ್ಲಿ ಬೆಳೆಗಳನ್ನು ಬೆಳೆಸುವಲ್ಲಿ ಸಹಾಯಕವಾಗಿದೆ.

 

ರಾಮಸಾಗರ ಆಣೆಕಟ್ಟು

ರಾಮಸಾಗರ ಆಣೆಕಟ್ಟು

ಶಿರಗುಪ್ಪೆ ಆಣೆಕಟ್ಟೆ: ಇದನ್ನು ಕೆಂಚನಗುಡ್ಡದ ಎದುರಿನಲ್ಲಿ ಕಟ್ಟಲಾಗಿದೆ. ಈ ಸ್ಥಳದಲ್ಲಿ ನದಿಯು ಏಳು ಶಾಖೆಗಳಾಗಿ ಹರಿಯುತ್ತಿರುವುದರಿಂದ, ಏಳು ಕಟ್ಟೆಗಳನ್ನು ನಿರ್ಮಿಸಿ, ಅದರಿಂದಾಗಿ ಶೇಖರವಾಗುವ ನೀರನ್ನು ಕಾಲುವೆಗಳ ಮೂಲಕ ಉಪಯೋಗಿಸಿಕೊಳ್ಳಲಾಗಿದೆ. ಒಟ್ಟಿನಲ್ಲಿ ಕಟ್ಟೆಗಳು, ಗುಡ್ಡಗಳು ಮತ್ತು ಬಂಡೆಗಳೆಲ್ಲಾ ಸೇರಿ ಈ ಆಣೆಕಟ್ಟೆ ಸುಮಾರು ಮೂರು ಮೈಲಿ ಉದ್ದವಾಗಿದೆ.

ದಾಸನೂರ ಆಣೆಕಟ್ಟೆ: ತಾಂತ್ರಿಕ ದೃಷ್ಟಿಯಿಂದ ಈ ಕಟ್ಟೆಯು ಸಹ ಮುಖ್ಯವಾದುದಾಗಿದೆ. ದಾಸನೂರು ಎಂಬುದು ತುಂಗಭದ್ರಾ ನದಿಯ ಪಾತ್ರದಲ್ಲಿ ಕಾಣಬರುವ ನದೀ ದ್ವೀಪಗಳೆಲ್ಲಾ ಅತೀ ದೊಡ್ಡದಾಗಿದೆ. ಈ ನಿವೇಶನದಲ್ಲಿ ಸಹ ನದಿಯು ಏಳು ಶಾಖೆಗಳಾಗಿ ಹರಿಯುತ್ತದೆ. ಆದರೆ ದಾಸನೂರು ಆಣೆಕಟ್ಟೆಯನ್ನು ನಾಲ್ಕು ಶಾಖೆಗಳಿಗೆ ಮಾತ್ರ ಅಡ್ಡವಾಗಿ ಕಟ್ಟಲಾಗಿದ್ದು, ಅದರಿಂದಾಗಿ ಶೇಖರವಾಗುವ ನೀರನ್ನು ದಾಸನೂರು ಕಾಲುವೆಯ ಮೂಲಕ ಜಮೀನುಗಳಿಗೆ ತೆಗೆದುಕೊಳ್ಳಲಾಗುತ್ತದೆ. ಎಂದರೆ ಈ ಕಾಲುವೆಯು ದಾಸನೂರು ನಡುಗಡ್ಡೆಯ ಜಮೀನುಗಳಿಗೆ ಮಾತ್ರ ಉಪಯೋಗವಾಗುತ್ತಲಿದೆ. ತದನಂತರ ಈ ಕಾಲುವೆಯು ದ್ವೀಪದ ಕೆಳಗಡೆ ಪುನಃ ನದಿಯನ್ನು ಸೇರುತ್ತದೆ. ಹೀಗೆ ಈ ಆಣೆಕಟ್ಟೆ ಮತ್ತು ಅದರಿಂದ ಹೊರಡುವ ಕಾಲುವೆಗಳು, ನದೀ ಪಾತ್ರದಲ್ಲಿರುವ ವಿಶಾಲ ದ್ವೀಪದ ಜಮೀನುಗಳು ಮತ್ತು ಜನಗಳ ಉಪಯೋಗಕ್ಕಾಗಿ ನಿರ್ಮಿಸಲ್ಪಟ್ಟುದಾಗಿದೆ. ಹೀಗೆ ವಿಜಯನಗರದ ಕಾಲದ ಜಲತಂತ್ರಜ್ಞರು, ಅನುಕೂಲವಿದ್ದ ನಿವೇಶನಗಳನ್ನೆಲ್ಲ ನೀರಾವರಿ ಬೇಸಾಯಕ್ಕಾಗಿ ಬಳಸಿಕೊಂಡಿರುವ ವಿಷಯವು ಎಲ್ಲೆಡೆಯೂ ವೇದ್ಯವಾಗುತ್ತದೆ.

ರಾಮಪುರ ಆಣೆಕಟ್ಟೆ

[1]: ಇದು ಸುಮಾರು ಒಂದು ಮೈಲು ಉದ್ದವಾಗಿದೆ. ಆದರೆ ಇಲ್ಲಿ ನಿರ್ಮಾಣಕಾರರ ಉದ್ದೇಶವು ಅಷ್ಟೊಂದು ಸಫಲವಾಗಿಲ್ಲ ಏಕೆಂದರೆ, ಈ ಕಟ್ಟೆಯ ಎತ್ತರವು ಒಂದೇ ಸಮನಾಗಿರದೆ, ಕೆಲವು ಸ್ಥಳಗಳಲ್ಲಿ ಬಹಳ ಕಡಿಮೆ ಇರುವುದರಿಂದ ಬೇಸಿಗೆಯಲ್ಲೂ ಸಹ ಇಲ್ಲಿ ಹೆಚ್ಚು ನೀರು ಸಂಗ್ರಹವಾಗದೆ, ಮುಂದಕ್ಕೆ ಹರಿದು ಹೋಗುತ್ತದೆ. ಅಲ್ಲದೆ ಈ ಕಟ್ಟೆಯಿಂದ ಹೊರಡುವ ಕಾಲುವೆಗೂ ಮತ್ತು ನದಿಯ ದಂಡೆಗೂ ಹೆಚ್ಚು ಅಂತರವಿಲ್ಲದೆ ಇರುವುದರಿಂದ, ಮಹಾಪೂರಗಳ ಸಮಯದಲ್ಲಿ, ಇವೆರಡೂ ನೀರಿನಿಂದ ಆವರಿಸಿಕೊಂಡು ಒಂದಾಗಿ ಕಾಣಿಸುತ್ತವೆ. ಹೀಗಾಗಿ ಇದರಿಂದ ಹೆಚ್ಚಿನ ಉಪಯೋಗವಿಲ್ಲದಾಗಿದೆ.

ಈಗ ಎಡದಂಡೆಯಿಂದ (ರಾಯಚೂರು ಜಿಲ್ಲೆಯ ಭಾಗ) ಕಾಣಬರುವ ಆಣೆಕಟ್ಟೆಗಳ ಬಗ್ಗೆ ಲಭ್ಯವಿರುವ ವಿವರಣೆಗಳನ್ನು ತಿಳಿಯೋಣ.[2]

ಕೊರಗಲ್ಲು ಆಣೆಕಟ್ಟೆ: ಇದೇ ಆಣೆಕಟ್ಟೆಗೆ ಬಲದಂಡೆಯಲ್ಲಿ ‘ವಲ್ಲಭಾಪುರ ಆಣೆಕಟ್ಟೆ’ ಎಂದು ಕರೆಯಲಾಗುತ್ತಿದ್ದ ವಿಷಯವು ಈ ಮೊದಲೇ ತಿಳಿದುಬಂದಿದೆ. ಇದನ್ನು ಕ್ರಿ.ಶ.೧೫೨೧ರಲ್ಲಿ ಕಟ್ಟಲಾಯಿತೆಂಬ ವಿಷಯವನ್ನು ತಿಳಿಸಲಾಗಿದೆ. ಮತ್ತು ಇದೂ ಸಹ ಈಗಿನ ತುಂಗಭದ್ರಾ ಜಲಾಶಯದಲ್ಲಿ ಮುಳುಗಡೆಯಾಗಿರುವುದರಿಂದ ಹೆಚ್ಚಿನ ವಿವರಗಳು ಲಭ್ಯವಿರುವುದಿಲ್ಲ.

ಹುಲಗಿ ಆಣೆಕಟ್ಟೆ: ಇದನ್ನು ಸುಮಾರು ನಾಲ್ಕು ಸಾವಿರ ಅಡಿಗಳಷ್ಟು, ಉದ್ದವಾಗಿ ಕಟ್ಟಲಾಗಿದೆ. ಈ ಕಟ್ಟೆಯಿಂದ ಹೊರಡುವ ಹುಲಗಿ ಕಾಲುವೆಯು ಸುಮಾರು ಏಳು ಮೈಲಿಗಳವರೆಗೆ ಹರಿದು, ಸುಮಾರು ೬೫೫ ಎಕರೆ ಜಮೀನಿಗೆ ನೀರನ್ನೊದಗಿಸುವಲ್ಲಿ ಸಫಲವಾಗಿದೆ.

ಶಿವಪುರ ಆಣೆಕಟ್ಟೆ: ಈ ಆಣೆಕಟ್ಟೆಯನ್ನು ಕೊಪ್ಪಳ ತಾಲೂಕಿನ ಶಿವಪುರದ ಹತ್ತಿರ ನಿರ್ಮಿಸಲಾಗಿದೆ. ಈ ಜಲಾಶಯದಿಂದ ಹೊರಡುವ ಶಿವಪುರ ಕಾಲುವೆಯು ಸುಮಾರು ಒಂಭತ್ತು ಮೈಲಿಗಳವರೆಗೆ ಹರಿಯುತ್ತಾ, ಕೆಲವೆಡೆ ಹುಲಗಿ ಕಾಲುವೆಯೊಂದಿಗೆ ಕೂಡಿಕೊಂಡು, ೯೯೭ ಎಕರೆ ಜಮೀನಿಗೆ ನೀರನ್ನೊದಗಿಸುತ್ತದೆ. ಈಗಿನ ಅವಶ್ಯಕತೆಗಳಿಗನುಗುಣವಾಗಿ ಕೆಲವು ಮಾರ್ಪಾಟುಗಳು ಮತ್ತು ಸುಧಾರಣೆಗಳೊಂದಿಗೆ, ಈ ಕಾಲುವೆಯ ನೀರು ಬಹು ಪ್ರಯೋಜನಕಾರಿ ಎನಿಸಿಕೊಂಡಿದೆ.

ಸಾಣಾಪುರ ಆಣೆಕಟ್ಟೆ: ಇದು ಎಡದಂಡೆಯ ಆಣೆಕಟ್ಟೆಗಳಲ್ಲೆಲ್ಲಾ ಬಹು ಮುಖ್ಯುವಾದುದಾಗಿದೆ. ಇದನ್ನು ತುಂಗಭದ್ರಾ ನದಿಯ ಒಂದು ಶಾಖೆಗೆ ಮಾತ್ರ ಅಡ್ಡವಾಗಿ ಕಟ್ಟಲಾಗಿದೆ. ಇಲ್ಲಿಂದ ಹೊರಡುವ ಕಾಲುವೆಗೆ ಆನೆಗೊಂದಿ ಕಾಲುವೆ ಎಂದು ಹೆಸರು. ಇದು ಸುಮಾರು ಹನ್ನೆರಡು ಮೈಲಿಗಳವರೆಗೆ ಹರಿಯುತ್ತಾ ಬೇಸಾಯಕ್ಕಾಗಿ ಜಮೀನುಗಳಿಗೆ ನೀರನ್ನೊದಗಿಸುತ್ತದೆ. ಈ ಕಾಲುವೆಯ ನೀರಿನಿಂದ ಲಾಭ ಪಡೆಯುತ್ತಿರುವ ಪ್ರದೇಶವು ಸುಮಾರು ೨೨೨೦ ಎಕರೆಗಳು. ಈ ಕಟ್ಟೆಯ ನಿರ್ಮಾಣದಿಂದಾಗಿ ಜಲಾಶಯದ ಪ್ರಯೋಜನವನ್ನು ಈಗಲೂ ಪಡೆಯುತ್ತಿರುವ ಗ್ರಾಮಗಳೆಂದರೆ ಸಾಣಾಪುರ, ವಿರುಪಾಪುರಗಡ್ಡೆ, ಹನುಮನಹಳ್ಳಿ, ಆನೆಗೊಂದಿ, ರಾಮದುರ್ಗ, ಬರಮನದುರ್ಗ, ಕೃಷ್ಣಾಪುರ, ಸಂಗಾಪುರ, ಸಂಗನಗುಂಡು ಮತ್ತು ರಾಜಾಪುರ.

ಹಿರೇಜಂತಗಲ್ಲು ಮತ್ತು ಚಿಕ್ಕ ಜಂತಗಲ್ಲು ಆಣೆಕಟ್ಟೆಗಳು: ಇವೆರಡೂ ಗಂಗಾವತಿ ತಾಲೂಕಿನಲ್ಲಿವೆ. ಇವು ಕ್ರಮವಾಗಿ ಬಲದಂಡೆಯ ರಾಮಸಾಗರ ಆಣೆಕಟ್ಟೆ ಮತ್ತು ಕಂಪಲಿ ಆಣೆಕಟ್ಟೆಯ ಭಾಗಗಳಾಗಿವೆ. ಇವುಗಳ ಬಗ್ಗೆ ಹೆಚ್ಚಿನ ವಿವರಣೆಗಳು ಇನ್ನೂ ದೊರೆಯಬೇಕಾಗಿದೆ.

ಮೊದಲುಗಟ್ಟೆ ಸೂಗೂರ ಮತ್ತು ಮಂಟಸಾಲ ಆಣೆಕಟ್ಟೆಗಳು: ಇದುವರೆಗೂ ವಿವರಿಸಲಾದ ಆಣೆಕಟ್ಟೆಗಳಲ್ಲದೆ, ವಿಜಯನಗರದ ಸಾಮ್ರಾಜ್ಯ ಕಾಲದಲ್ಲಿಯೇ ಅಂಥ ಕೆಲ ಪ್ರಯತ್ನಗಳು ವಿಫಲಗೊಂಡ ನಿದರ್ಶನಗಳೂ ಇವೆ. ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಮೊದಲಗಟ್ಟೆ, ಬಳ್ಳಾರಿ ತಾಲೂಕಿನ ಸೂಗೂರು ಮತ್ತು ಆದವಾನಿ ತಾಲೂಕಿನ ಮಂಟಸಾಲ ಗ್ರಾಮಗಳ ಬಳಿ ಅದೇ ತುಂಗಭದ್ರಾ ನದಿಗೆ ಆಣೆಕಟ್ಟೆಗಳ ನಿರ್ಮಾಣದ ಪ್ರಯತ್ನಗಳು ನಡೆದರೂ, ಫಲಪ್ರದವಾಗಲಿಲ್ಲವಾಗಿ ತಿಳಿದುಬರುತ್ತದೆ. ಮೊದಲುಗಟ್ಟೆ ಎಂಬುದು, ಹೆಸರೇ ಸೂಚಿಸುವಂತೆ, ವಿಜಯನಗರದವರು ತುಂಗಭದ್ರಾನದಿಗೆ ಅಡ್ಡವಾಗಿ ಕಟ್ಟಲು ಪ್ರಯತ್ನಿಸಿದ ಮೊಟ್ಟ ಮೊದಲನೇ ಆಣೆಕಟ್ಟೆಗಾಗಿದ್ದಿರಬೇಕು. ಈ ನಿವೇಶನದಲ್ಲಿ ನಿರ್ಮಾಪಕರು ವಿಫಲಗೊಂಡರೂ ನಿರಾಶರಾಗದೆ ಇತರೆ ನಿವೇಶನಗಳಲ್ಲಿ ಪ್ರಯತ್ನಿಸಿ ಸಫಲರಾದರು.

ತಾತ್ಕಾಲಿಕ ಆಣೆಕಟ್ಟೆಗಳು: ಇದೇ ಕಾಲದಲ್ಲಿ, ಶಾಶ್ವತ ಆಣೆಕಟ್ಟೆಗಳಲ್ಲದೆ ತಾತ್ಕಾಲಿಕ ಆಣೆಕಟ್ಟೆಗಳಲ್ಲದೆ ತಾತ್ಕಾಲಿಕ ಆಣೆಕಟ್ಟೆಗಳ ಬಳಕೆಯೂ ಸಹ ಜನಾದರಣೀಯವಾದ್ದಿತು. ಇವುಗಳನ್ನು ಬಹುತೇಕವಾಗಿ ಪ್ರವಾಹದ ಪ್ರಮಾಣ ಕಡಿಮೆಯಾಗಿರುತ್ತಿದ್ದ ಸಣ್ಣ ಪುಟ್ಟ ಹಳ್ಳಿಗಳಿಗೆ ಅಡ್ಡವಾಗಿ ಹಾಕಲಾಗುತ್ತಿತ್ತು. ಇಂತಹ ಸಂದರ್ಭಗಳಲ್ಲಿ ಹತ್ತಿರದಲ್ಲಿಯೇ ಲಭ್ಯವಿರುತ್ತಿದ್ದ ಮರದ ದಿಮ್ಮೆಗಳನ್ನು ಗಿಡಗಳ ಕೊಂಬೆರೆಂಬೆಗಳನ್ನು, ಸೊಪ್ಪುಸೆದೆಗಳನ್ನು, ಕಲ್ಲು, ಮರಳು, ಕೆಸರು ಮುಂತಾದವುಗಳನ್ನು ಉಪಯೋಗಿಸಿ ನೀರನ್ನು ಕಾಲುವೆಗಳ ಮೂಲಕ ಜಮೀನುಗಳಿಗೆ ತೆಗೆದುಕೊಂಡು ಹೋಗುತ್ತಿದ್ದರು. ಸ್ವಲ್ಪ ಜಾಸ್ತಿ ಪ್ರಮಾಣದ ಮಳೆ ಬಿದ್ದರಾಗಲೀ, ಅತೀ ಕಡಿಮೆ ಪ್ರಮಾಣದ ಪ್ರವಾಹವು ಬಂದರಾಗಲೀ, ಈ ತಾತ್ಕಾಲಿಕ ಕಟ್ಟೆಗಳು ಕೊಚ್ಚಿ ಹೋಗುತ್ತಿದ್ದವು. ಪುನಃ ಅಂತಹುದೇ ತಾತ್ಕಾಲಿಕ ಕಟ್ಟೆಗಳು, ಪ್ರವಾಹ ಕಡಿಮೆಯಾದ ಮೇಲೆ ನಿರ್ಮಾಣವಾಗುತ್ತಿದ್ದವು. ಹೀಗೆ ಇಂತಹ ತಾತ್ಕಾಲಿಕವಾದವುಗಳನ್ನು ಒಂದೇ ವರ್ಷದಲ್ಲಿ ಅನೇಕ ಬಾರಿ ನಿರ್ಮಿಸಬೇಕಾಗುತ್ತಿತ್ತು. ಈ ಕ್ರಮಗಳಿಂದಾಗಿ ಹಣ ಮತ್ತು ಜನಶಕ್ತಿ ವಿಫುಲವಾಗಿ ವ್ಯಯವಾಗುತ್ತಿದ್ದವು. ಆದರೂ ಜನರು ಧೃತಿಗೆಡದೆ, ಇಂತಹ ಕಾರ್ಯಗಳಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದರು ಹಾಗೂ ಸಫಲರೂ ಆಗುತ್ತಿದ್ದರು. ಆರ್ಥಿಕಾಭಿವೃದ್ಧಿಯೇ ಗುರಿಯಾಗಿದ್ದುದರಿಂದ, ಚಿಕ್ಕ ಪುಟ್ಟ ವಿಫಲತೆಗಳಿಂದ ನಿರಾಶರಾಗುತ್ತಿರಲಿಲ್ಲ.

ಇನ್ನೂ ಕೆಲವು ಸಂದರ್ಭಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಹೊಂದಿದ್ದ ಹಳ್ಳ ತೊರೆಗಳಿಗೆ, ಕಟ್ಟೆಗಳನ್ನು, ಕಟ್ಟುವುದರಿಂದ, ಕೆರೆಗಳು ನಿರ್ಮಾಣವಾಗುತ್ತಿದ್ದವು. ಇದೇ ಜಿಲ್ಲೆಯ ದೊಡ್ಡ ಕೆರೆಗಳಲ್ಲೊಂದಾದ ದರೋಜಿ ಕೆರೆಯನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಇದು ಸೊಂಡೂರಿನ ಗುಡ್ಡಗಳಿಂದ ದೊಡ್ಡ ಪ್ರಮಾಣದಲ್ಲಿ ಮಳೆ ನೀರನ್ನು ಹರಿಸಿಕೊಂಡು ಬರುವ ನಾರೀಹಳ್ಳದ ನೀರಿನಿಂದ ನಿರ್ಮಾಣವಾಗಿದೆ. ಈ ಕೆರೆಯು ತುಂಬಿ ಅನಂತರ ಹೆಚ್ಚಾದ ನೀರು ಮುಂದಕ್ಕೆ ಹರಿದು, ಅದಕ್ಕೆ ಅಡ್ಡಲಾಗಿ ಅಲ್ಲಲ್ಲಿ ಕಟ್ಟಿರುವ ಚಿಕ್ಕ ಪ್ರಮಾಣದ ಏಳು ಕಟ್ಟೆಗಳಿಂದಾಗಿ ಏಳು ಕಡೆ ನೀರಾವರಿಗೆ ಉಪಯೋಗವಾಗಿದೆ. ಹೀಗೆ ನೀರಾವರಿ ಬೇಸಾಯಕ್ಕಾಗಿ ಬಹುವಿಧ ಪ್ರಯತ್ನಗಳು ನಡೆಯುತ್ತಿದ್ದವು.

ಈ ಕಟ್ಟೆಗಳ ನಿರ್ಮಾಣಗಳಿಗಾಗಿ ವಿಶೇಷ ಧನಬಲ ಮತ್ತು ಜನಬಲಗಳಿಂದ ಪ್ರಯತ್ನಗಳು ನಡೆದಾಗ್ಯೂ ಅವುಗಳಿಗನುಗುಣವಾಗಿ ಪ್ರತಿಫಲ ದೊರೆಯುತ್ತಿತ್ತೆಂದು ಯಾವಾಗಲೂ ಹೇಳುವುದಕ್ಕಾಗದು. ಏಕೆಂದರೆ ಬಳ್ಳಾರಿ ಜಿಲ್ಲೆಯಲ್ಲಿ ನದಿಯ ಪಾತ್ರವು ಬಹು ತಗ್ಗಿನಲ್ಲಿದ್ದು ಮತ್ತು ಬೇಸಾಯ ಯೋಗ್ಯ ಜಮೀನು ಎತ್ತರದಲ್ಲಿರುವುದರಿಂದ, ಈ ಕಟ್ಟೆಗಳ ನೀರು ಮಿತ ಪ್ರಮಾಣದಲ್ಲಿ ಉಪಯೋಗವಾಯಿತು. ಮೇಲೆ ಕಾಣಿಸಿದ ಬಲದಂಡೆಯ ಎಲ್ಲಾ ಆಣೆಕಟ್ಟೆಗಳಿಂದ, ಕ್ರಿ.ಶ.೧೯೦೪ರ ಒಂದು ಸರಕಾರೀ ದಾಖಲೆಯ[3] ಪ್ರಕಾರ, ಸುಮಾರು ೧೬೪೦೦ ಎಕರೆಗಳು ನೀರಾವರಿ ಸೌಲಭ್ಯವನ್ನು ಪಡೆಯುತ್ತಿದ್ದವು. ಈ ಕಟ್ಟೆಗಳ ನಿರ್ಮಾಣ ಸಮಯದಲ್ಲಿ ಎಷ್ಟೋ ಬಾರಿ ದುರ್ಘಟನೆಗಳು ಜರುಗಿ ಜನ ದನಗಳು ಪ್ರಾಣಹಾನಿಗೀಡಾಗುತ್ತಿತ್ತು. ಅಲ್ಲದೆ ಪ್ರಚಲಿತದಲ್ಲಿದ್ದ ನಂಬಿಕೆಗಳ ಪ್ರಕಾರ ಕೆಲವು ಬಾರಿ ಪ್ರಾಣಿಗಳನ್ನು ಬಲಿಕೊಡುವುದೂ ಇತ್ತು. ಆದರೂ ಅವರ ಉತ್ಸಾಹ ಮತ್ತು ಪ್ರಯತ್ನಶೀಲತೆಗೆ ಯಾವ ಕೊರತೆಯೂ ಇರಲಿಲ್ಲ. ಜನಕಲ್ಯಾಣದ (Welfare) ಉದ್ದೇಶದಿಂದ ಪ್ರಯತ್ನಗಳು ಅನವರತವಾಗಿ ನಡೆದೇ ಇರುತ್ತಿದ್ದವು ತತ್ಫಲವಾಗಿ, ತುಂಗಭದ್ರಾನದಿಯ ಆಣೆಕಟ್ಟೆಗಳು ವೀಕ್ಷಕರಿಗೆ ಅಚ್ಚರಿಯನ್ನುಂಟು ಮಾಡುತ್ತಾ ಮತ್ತು ಅವರ ಮಹತ್ಸಾಧನೆಯ ಕುರುಹುಗಳಾಗಿ ಈಗಲೂ ಕಾಣಬರುತ್ತದೆ.

ಇವುಗಳ ತಾಂತ್ರಿಕ ವಿಶಿಷ್ಟತೆಗಳು: ಈಗ ಈ ಆಣೆಕಟ್ಟಿನ ಕೆಲವು ತಾಂತ್ರಿಕ ವಿಶಿಷ್ಟತೆಗಳನ್ನು ತಿಳಿಯೋಣ. ಮೊದಲಿಗೆ, ಈ ಕಟ್ಟೆಗಳನ್ನು ಕಟ್ಟಿರುವ ನಿವೇಶನಗಳ ಆಯ್ಕೆಯಲ್ಲಿಯೇ, ಆ ಕಾಲದ ಜಲಸೂತ್ರ ತಜ್ಞರ (hydraulic engineers) ಕುಶಲತೆಯು ತಿಳಿದುಬರುತ್ತದೆ. ಸಾಮಾನ್ಯವಾಗಿ ನದೀ ಪಾತ್ರವು ಬಹು ಕಿರಿದಾಗಿದ್ದ ನಿವೇಶನವನ್ನು, ಈ ನಿರ್ಮಾಣ ಕಾರ್ಯಗಳಿಗಾಗಿ ಆಯ್ಕೆ ಮಾಡುತ್ತಿದ್ದರು. ಹಾಗೆ ಆಯ್ಕೆಯಾದ ನಿವೇಶನದಲ್ಲಿ, ಭದ್ರ ಬುನಾದಿಗಾಗಿ ಹುಟ್ಟುಕಲ್ಲು ಅಥವಾ ಹಾಸುಬಂಡೆಗಳು ಅವಶ್ಯವಾಗಿರುತ್ತಿದ್ದುದು ಮತ್ತೊಂದು ವೈಶಿಷ್ಟ್ಯವಾಗಿದೆ. ಇವುಗಳಲ್ಲದೆ ನದೀಗಡ್ಡೆ (river islands) ಗಳನ್ನು ಸಹ ಅವಶ್ಯವಾಗಿ ಉಪಯೋಗಿಸಿಕೊಳ್ಳಲಾಯಿತು. ಉದಾಹರಣೆಗೆ, ತುರ್ತು ಆಣೆಕಟ್ಟೆಯ ನಕಾಶೆಯನ್ನು[4] ಪರಿಶೀಲಿಸಿದಲ್ಲಿ, ಆ ಕಾಲದ ಜಲಸೂತ್ರಜ್ಞರು ತಾವು ಆರಿಸಿದ ನಿವೇಶನದಲ್ಲಿ ಲಭ್ಯವಿದ್ದ ನೈಸರ್ಗಿಕ ಅನುಕೂಲತೆಗಳನ್ನೆಲ್ಲಾ ಉಪಯೋಗಿಸಿಕೊಂಡು, ಅವಶ್ಯವಿದ್ದ ಎಡೆಗಳಲ್ಲಿ ಮಾತ್ರ ಕಟ್ಟೆಗಳನ್ನು ನಿರ್ಮಿಸಿ, ಇಚ್ಛಿತ ನೀರಾವರಿ ಸೌಕರ್ಯವನ್ನು ಪರಿಣಾಮಕಾರಿಯಾದ ರೀತಿಯಲ್ಲಿ ಹೊಂದುತ್ತಿದ್ದರೆಂಬುದು ವೇದ್ಯವಾಗುತ್ತದೆ. ನಾವು ತುರ್ತು ಆಣೆಕಟ್ಟೆಯ ನಿವೇಶನಕ್ಕೆ ಹೋಗಿ ಬಲದಂಡೆ (ಬಳ್ಳಾರಿ ಜಿಲ್ಲೆಯ ಭಾಗ)ಯಿಂದ ಆರಂಭಿಸಿದಲ್ಲಿ ಮೊದಲಿಗೆ, ಕಡೆಯದ ಒರಟು ಗುಂಡುಕಲ್ಲುಗಳಿಂದ ನಿರ್ಮಿಸಿದ ಕಟ್ಟೆ (೨೫೮ ಅಡಿಗಳಷ್ಟು ದೂರ) ಕಾಣಬರುತ್ತವೆ. ಆ ನಂತರ ಕ್ರಮವಾಗಿ[5] ದೊಡ್ಡ ಹುಟ್ಟುಬಂಡೆ, ಕಟ್ಟಡ (೧೩ ಅಡಿ), ಚಿಕ್ಕಗುಡ್ಡ, ಕಟ್ಟಡ, ಕಟ್ಟಡ ಮತ್ತು ಗುಂಡುಗಳು (೨೧೦ ಅಡಿ,) ದೊಡ್ಡ ಗುಂಡುಗಳು (೨೧೦ ಅಡಿ) ಗುಂಡುಗಳು, ಕಟ್ಟಡ (೧೫ ಅಡಿ), ಎತ್ತರವಾದ ಹುಟ್ಟು ಬಂಡೆ ಕಟ್ಟಡ (೪೦ ಅಡಿ), ಎತ್ತರವಾದ ಬಂಡೆಗಲ್ಲಿನಿಂದ ಕೂಡಿದ ನೆಲ, ಕಟ್ಟಡ ೧೫೦ ಅಡಿ, ಎತ್ತರವಾದ ನೆಲ, ಕಟ್ಟಡ (೬೩ ಅಡಿ) ಬಂಡೆಗಲ್ಲು, ಕಟ್ಟಡ (೨೩೧ ಅಡಿ), ಬಂಡೆಗಲ್ಲು, ಕಟ್ಟಡ (೧೫.೫ ಅಡಿ), ಬಂಡೆಗಲ್ಲು ಕಟ್ಟಡ (೬೦ ಅಡಿ), ಚಿಕ್ಕ ಗುಡ್ಡ, ಕಟ್ಟಡ (೧೦೯ ಅಡಿ), ಚಿಕ್ಕಗುಡ್ಡ, ತದನಂತರ ಎಡದಂಡೆಗಳು (ರಾಯಚೂರು ಜಿಲ್ಲೆಯ ಭಾಗ) ಕಾಣಬರುತ್ತದೆ. ಹೀಗೆ ಈ ಆಣೆಕಟ್ಟೆಗಳ ನಿರ್ಮಾಪಕರು ಸ್ಥಳದಲ್ಲಿಯೇ ಲಭ್ಯವಿದ್ದ ನೈಸರ್ಗಿಕ ಅನುಕೂಲತೆಗಳ ಗರಿಷ್ಠ ಪ್ರಯೋಜನವನ್ನು ಪಡೆಯುವಲ್ಲಿ ಹಿಂದಾಗುತ್ತಿರಲಿಲ್ಲವೆಂಬುದು ಇತರೆ ಆಣೆಕಟ್ಟುಗಳ ವೈಶಿಷ್ಟ್ಯಗಳನ್ನು ಪರಿಶೀಲಿಸಿದಾಗಲೂ ತಿಳಿದುಬರುತ್ತದೆ.

ಈ ಮೊದಲೇ ತಿಳಿದಿರುವಂತೆ, ಬಹುತೇಕವಾಗಿ ಆಣೆಕಟ್ಟೆಗಳನ್ನು ನೇರವಾಗಿ ಒಂದು ದಂಡೆಯಿಂದ ಇನ್ನೊಂದು ದಂಡೆಯವರೆಗೆ ಯಾವಾಗಲೂ ಕಟ್ಟುತ್ತಿರಲಿಲ್ಲ. ಅವುಗಳನ್ನು ಓರೆ ಕೋರೆಯಾಗಿ (Zig Zag manner) ಕಟ್ಟಲಾಗುತ್ತಿತ್ತು. ಈ ಪದ್ಧತಿಯನ್ನು ಅನುಸರಿಸಿದ ಪರಿಣಾಮವಾಗಿ, ಈ ಕಟ್ಟೆಗಳು ಪ್ರವಾಹದ ರಭಸಕ್ಕೆ ನಾಳವಾಗದೆ, ಶತಮಾನಗಳು ಕಳೆದರೂ, ಉಳಿದುಬಂದಿವೆ. ಈ ವೈಶಿಷ್ಟ್ಯವು ಅವರ ಪರಿಣತ ಕುಶಲತೆಯ ಉದಾಹರಣೆಯಾಗಿದೆ.

ಈ ಆಣೆಕಟ್ಟೆಗಳನ್ನು ಕಟ್ಟುವಲ್ಲಿ ಆಳವಾದ ಬುನಾದಿಗಳನ್ನು ಯಾವಾಗಲೂ ತೋಡಲಿಲ್ಲ. ಸಾಮಾನ್ಯವಾಗಿ ತಳದಲ್ಲಿ ಕಲ್ಲುಬಂಡೆಗಳಿರುವ ನಿವೇಶನಗಳನ್ನೇ ಆಯ್ಕೆ ಮಾಡುತ್ತಿದ್ದರೆಂಬುದನ್ನು ಈಗಾಗಲೇ ವಿವರಿಸಲಾಗಿದೆ. ಬಂಡೆಗಳ ಸ್ತರಗಳಲ್ಲಿಯೇ ಸ್ವಲ್ಪ ಆಳದವರೆಗೆ ಕೊರೆದು, ಅದರಲ್ಲಿಯೇ ದೊಡ್ಡ ದೊಡ್ಡ ಕಲ್ಲುಗಳನ್ನು ಕೊರೆಸುತ್ತಿದ್ದರು. ಕೊರೆಯುವಿಕೆಯು ಮತ್ತು ಹೊಂದಿಸುವಿಕೆಯು ಕಳಸ ಮಾಡಿದಂತಿರುತ್ತಿತ್ತು. ಈ ರೀತಿಯಾಗಿ ಕಲ್ಲುಗಳನ್ನು ಕೂಡಿಸುವ ಪದ್ಧತಿಯಿಂದಾಗಿ ಮತ್ತು ಉಪಯೋಗ ಮಾಡಲ್ಪಟ್ಟ ಕಲ್ಲುಗಳು ಭಾರವಾದವುಗಳಾಗಿದ್ದುದರಿಂದಾಗಿ, ನೀರಿನ ರಭಸದಿಂದಾಗಲೀ ಅಥವಾ ಪ್ರವಾಹದ ಪ್ರಮಾಣದಿಂದಾಗಲೀ ಕಟ್ಟೆಗೆ ಧಕ್ಕೆಯಾಗುತ್ತಿರಲಿಲ್ಲ. ಕೆಲವೆಡೆ ಬುನಾದಿಯ ಕಲ್ಲುಗಳನ್ನು ಕೂಡಿಸುವ ಸಮಯದಲ್ಲಿ ಗಾರೆ ಮತ್ತು ಕಲ್ಲುಗಳ ಮಿಶ್ರಣವನ್ನು ಉಪಯೋಗಿಸಲಾಗಿದೆ. ಆ ಕಾಲದ ಗಾರೆಯು, ಈಗಲೂ ಕೆಲವೆಡೆಗಳಲ್ಲಿ ಕಾಣಬರುವಂತೆ ಬಹು ಗಟ್ಟಿಯಾಗಿರುವುದಲ್ಲದೆ, ನೂರಾರು ವರ್ಷಗಳವರೆಗೆ ಬಾಳುವಂತಹ ಉತ್ತಮ ಗುಣಮಟ್ಟದ್ದಾಗಿದೆ.

ಈ ಕಟ್ಟೆಗಳ ನಿರ್ಮಾಣದಲ್ಲಿ ಉಪಯೋಗಿಸಲಾಗಿರುವ ಕಲ್ಲಗಳೂ ಸಹ ಬಹು ದೊಡ್ಡ ಗಾತ್ರದವುಗಳೂ ಮತ್ತು ಒಂದೊಂದು ಹಲವು ಟನ್ನುಗಳಷ್ಟು ಭಾರವಾದವುಗಳೂ ಆಗಿವೆ. ಅವುಗಳ ಗಾತ್ರ ಮತ್ತು ಬಾರಗಳನ್ನು ಗಣನೆಗೆ ತೆಗೆದುಕೊಂಡಲ್ಲಿ, ಅವುಗಳನ್ನು ಈ ನಿವೇಶನಗಳವರೆಗೆ ತಂದಿರುವ ವಿಷಯವೇ ಅಚ್ಚರಿಯನ್ನುಂಟು ಮಾಡುವುದು. ಸಾಮಾನ್ಯವಾಗಿ ತಳಭಾಗದಲ್ಲಿ ದೊಡ್ಡ ಗಾತ್ರದವುಗಳನ್ನು ಮತ್ತು ಮೇಲಿನ ಸ್ತರಗಳಲ್ಲಿ ಸ್ವಲ್ಪ ಕಡಿಮೆ ಗಾತ್ರದ ಕಲ್ಲುಗಳನ್ನು ಉಪಯೋಗಿಸಲಾಗಿದೆ. ಇದೇ ಕುಶಲತೆ ತಂತ್ರಜ್ಞತೆಗಳನ್ನು ಕೋಟೆಗೋಡೆಗಳನ್ನು ನಿರ್ಮಿಸುವಾಗಲೂ ಸಹ ಬಳಸಿಕೊಳ್ಳಲಾಗಿದೆ ಎಂಬುದನ್ನು ಈಗಲೂ ಹಂಪೆ ಮೊದಲಾದ ಸಮಕಾಲೀನ ಸ್ಥಳಗಳಲ್ಲಿ ನೋಡಿ ತಿಳಿದುಕೊಳ್ಳಬಹುದು.

ದೊಡ್ಡ ಪರಿಮಾಣದ ಕಲ್ಲುಗಳಿಂದ ಕಟ್ಟೆಗಳನ್ನು ಕಟ್ಟುವಲ್ಲಿ ಅವುಗಳನ್ನು ಜೋಡಿಸುವಾಗ ಉಂಟಾದ ಸಂದುಗಳಲ್ಲಿ ಗಾರೆಯನ್ನು ಉಪಯೋಗಿಸಿದೆ. ಆ ಸಂದುಗಳ ಮೂಲಕ ನೀರು ಹರಿದು ಹೋಗುವಂತೆ ಅವಕಾಶವನ್ನು ಉದ್ದೇಶಪೂರ್ವಕವಾಗಿ ಕಲ್ಪಿಸಲಾಗುತ್ತಿತ್ತು. ಈ ವ್ಯವಸ್ಥೆಯಿಂದಾಗಿ ಸಂದುಗಳ ಮೂಲಕ ನೀರು ಹರಿದು ಹೋಗುವುದರ ಜೊತೆಯಲ್ಲಿ ಪ್ರವಾಹದೊಂದಿಗೆ ಬಂದ ಒಡ್ಡು ಮಣ್ಣು (Silt) ಸಹ ಹರಿದು ಹೋಗುತ್ತಿತ್ತು. ಹೀಗಾಗಿ ನಾಲ್ಕು ನೂರು ವರ್ಷಗಳಿಗಿಂತಲೂ ಹೆಚ್ಚು ಸಂದು ಹೋಗಿದ್ದರೂ. ಈ ಆಣೆಕಟ್ಟುಗಳು ಒಡ್ಡು ಮಣ್ಣಿನಿಂದ ಸಂಪೂರ್ಣವಾಗಿ ಹೂತು ಹೋಗಿರದೆ, ಈಗಲೂ ಉಪಯೋಗದಲ್ಲಿವೆ. ಅಷ್ಟೇ ಅಲ್ಲದೆ ಆಧುನಿಕ ತಂತ್ರಜ್ಞರಿಗೆ ಒಂದು ಬೋಧಪ್ರದ ಉದಾಹರಣೆಗಳಾಗಿ ಉಳಿದಬಂದಿವೆ. ಮತ್ತು ಬೃಹತ್‌ಪ್ರಮಾಣದ ಆಣೆಕಟ್ಟೆಗಳಿಗಿಂತ ಚಿಕ್ಕ ಪ್ರಮಾಣದ ಆಣೆಕಟ್ಟೆಗಳು ಉದ್ದೇಶಿತ. ಪ್ರಯೋಜನವನ್ನು ಬಹುಕಾಲದವರೆಗೆ ಒದಗಿಸುವಲ್ಲಿ ಹೆಚ್ಚು ಸಮರ್ಥನೀಯವಾಗಿವೆ ಎಂಬ ವಿಷಯವನ್ನು ದೃಢಪಡಿಸುತ್ತವೆ ಹಾಗೂ ಮಾರ್ಗದರ್ಶಿಗಳಾಗಿವೆ ಎಂಬಲ್ಲಿ ಸಂದೇಹವೇ ಇರುವದಿಲ್ಲ. ಈ ಕ್ರಮದ ಉಪಯುಕ್ತತೆಯನ್ನು ಆಧುನಿಕ ಪರಿಣತರು ಗಣನೆಗೆ ತೆಗೆದುಕೊಂಡು ಕೆಲ ಅವಶ್ಯ ಮಾರ್ಪಾಟುಗಳೊಂದಿಗೆ ಅನುಕರಿಸಲು ಆರಂಭಿಸಿರುತ್ತಾರೆಂದರೆ, ಹಿಂದಿನ ನಿರ್ಮಾಪಕರು ಪ್ರಶಂಸಾರ್ಹರಲ್ಲವೆ?

ಈ ಕಟ್ಟೆಗಳ ನಿರ್ಮಾಣದಲ್ಲಿ ಬಳಸಲಾದ ಕಲ್ಲುಗಳನ್ನು ಜೊತೆಯಾಗಿ ಬಂಧಿಸಿ ಹಿಡಿದಿಡುವುದಕ್ಕಾಗಿ ಕೆಲವೆಡೆ ಕಬ್ಬಿಣದ ಹಿಡಿಪಟ್ಟೆಗಳನ್ನು (Clamps) ಬಳಸಲಾಗಿದೆ. ಮತ್ತು ರಾಮಣ್ಣ ಆಣೆಕಟ್ಟೆ ಮುಂತಾದೆಡೆಗಳಲ್ಲಿ ಕಲ್ಲಿನ ಹಿಡಿಪಟ್ಟಿಗಳನ್ನು (stone clamps) ಉಪಯೋಗಿಸಲಾಗಿದೆ. ಕಟ್ಟೆಯ ಕಲ್ಲುಗಳು ಪ್ರವಾಹದ ರಭಸಕ್ಕೆ ಅವ್ಯವಸ್ಥೆಗೊಂಡು ಜಾರಿಹೋಗದಂತೆ, ಕಟ್ಟೆಯ ಹೊರಬದಿಯಲ್ಲಿ ಕಲ್ಲಿನ ಗೂಟಗಳನ್ನು ಅಥವಾ ಬೆಣೆಗಳನ್ನು (pegs) ಭದ್ರವಾಗಿ ಕೂಡಿಸಿರುವ ಪದ್ಧತಿಯೂ ಸಹ ಕಾಣಬರುತ್ತದೆ. ಹಲವು ಬಾರಿ ತಳದಲ್ಲಿದ್ದ ಹಾಸುಗಲ್ಲಿನಲ್ಲಿ ಸರಿಪ್ರಮಾಣದ ತೂತುಗಳನ್ನು ಕೊರೆದು, ಅದರಲ್ಲಿ ಕಲ್ಲಿನಗೂಟಗಳನ್ನು ಭದ್ರವಾಗಿ ಕೂಡಿಸಿ, ಆ ಮೂಲಕ ಆಣೆಕಟ್ಟೆಯ ಭಾಗಗಳನ್ನು ವ್ಯವಸ್ಥಿತ ರೀತಿಯಲ್ಲಿ ಹಿಡಿದಿರಿಸಲು ಏರ್ಪಡಿಸಲಾಗಿದೆ.

ಸಾಮಾನ್ಯವಾಗಿ ಈ ಆಣೆಕಟ್ಟೆಗಳ ಗೋಡೆಗಳು ತಳದಲ್ಲಿ ೬ರಿಂದ ೫ ಅಡಿಗಳವರೆಗೆ ಮತ್ತು ಮೇಲ್ಗಡೆ ೫ ರಿಂದ ೪ ಅಡಿಗಳವರೆಗೆ ದಪ್ಪವಾಗಿದೆ. ತಳದ ಮತ್ತು ಮೇಲ್ಗಡೆಯ ದಪ್ಪದಲ್ಲಿ ಅಂತರವು ಕಡಿಮೆ ಇರುವುದಕ್ಕೆ ಮುಖ್ಯ ಕಾರಣವೆಂದರೆ, ಇವುಗಳ ಎತ್ತರವು ಹೆಚ್ಚಾಗಿಲ್ಲದಿರುವುದೇ ಇವುಗಳ ಎತ್ತರ ಸುಮಾರು ನಾಲ್ಕರಿಂದ ಎಂಟು ಅಡಿಗಳವರೆಗಿದೆ. ಇವುಗಳ ಮೇಲ್ಭಾಗವು ಸಮತಟ್ಟಾಗಿದ್ದು ನೀರು ಅವುಗಳ ಮೇಲಿಂದ ನಿರಾತಂಕವಾಗಿ ಹರಿದು ಹೋಗುತ್ತದೆ.

ಈ ಆಣೆಕಟ್ಟೆಗಳ ಇನ್ನೊಂದು ಗಮನೀಯ ವೈಶಿಷ್ಟ್ಯವೆಂದರೆ ಇವುಗಳಲ್ಲಿ ತೂಬು ಅಥವಾ ಬಾಗಿಲುಗಳು (sluices) ಇಲ್ಲದೇ ಇರುವುದು ಈ ಕಟ್ಟೆಗಳ ಎತ್ತರ ಅಷ್ಟೊಂದು ಹೆಚ್ಚಿನ ಪ್ರಮಾಣದಲ್ಲಿರದೆ ಇದ್ದುದರಿಂದ ತೂಬುಗಳ ಅವಶ್ಯಕತೆ ಇರಲಿಲ್ಲವಾಗಿ ತೋರುತ್ತದೆ. ಅಲ್ಲದೆ ಆಣೆಕಟ್ಟೆಗೆ ಅಪಾಯಕಾರಿಯಾಗುವಷ್ಟು ನೀರನ್ನು ತಡೆ ಹಾಕುವುದು ಈ ನಿರ್ಮಾಣ ಯೋಜನೆಯಾಗಿರಲಿಲ್ಲ. ಎಂದರೆ ಹೆಚ್ಚಾದ ನೀರು ಆಣೆಕಟ್ಟೆಯ ಸಂದುಗಳ ಮೂಲಕ ಮೇಲಿನಿಂದ ಮತ್ತು ಇತರ ಭಾಗಗಳ ಮೂಲಕ ಸುಲಭವಾಗಿ ಮತ್ತು ಶೀಘ್ರವಾಗಿ ಹರಿದುಹೋಗುವ ಅವಕಾಶವಿರುತ್ತಿತ್ತು. ತತ್ಪರಿಣಾಮವಾಗಿ ಅವುಗಳ ನಿರ್ಮಾಣವಾಗಿ ಶತಮಾನಗಳು ಗತಿಸಿದರೂ ಅವು ಇಂದಿಗೂ ಉಪಯೋಗದಲ್ಲಿವೆ. ಹಾಗೆಂದಲ್ಲಿ ಇವರಿಗೆ ತೂಬು ಅಥವಾ ಕವಾಟಗಳನ್ನು ನಿರ್ಮಿಸುವ ಮತ್ತು ಉಪಯೋಗಿಸುವ ತಂತ್ರಜ್ಞತೆ ತಿಳಿದಿಲಿಲ್ಲವೆಂದಲ್ಲ. ಕೆರೆಗಳ ನೀರನ್ನು ಉಪಯೋಗಿಸುವ ಸಂದರ್ಭಗಳಲ್ಲಿ ಅವಶ್ಯವಾಗಿ ತೂಬುಗಳನ್ನು ನಿರ್ಮಿಸಿ ಉಪಯೋಗಿಸುತ್ತಿದ್ದರು. ಆ ಕಾಲದ ಅನೇಕ ಶಿಲಾ ಶಾಸನಗಳಿಂದ[6] ಸಾಹಿತ್ಯಾಧಾರಗಳಿಂದ ಮತ್ತು ಈಗಲೂ ಉಪಯೋಗದಲ್ಲಿರುವ ಪುರಾತನ ಕೆರೆಗಳಲ್ಲಿಯ ತೂಬುಗಳಿಂದ ಈ ವಿಷಯವು ದೃಢವಾಗಿ ತಿಳಿದುಬರುತ್ತದೆ. ಅಲ್ಲದೆ ಇವೇ ಆಣೆಕಟ್ಟೆಗಳಿಂದ ನೀರನ್ನು ಕಾಲುವೆಗಳ ಮೂಲಕ ಹರಿಯಿಸಿಕೊಂಡು ಹೋಗಿ ಜಮೀನುಗಳನ್ನು ಹಂಚಿಕೊಳ್ಳುವ ಸಮಯದಲ್ಲಿ ಚಿಕ್ಕ ಪ್ರಮಾಣದ ತೂಬುಗಳ ಮತ್ತಿತರ ಕ್ರಮಗಳನ್ನು ಬಳಸಿಕೊಳ್ಳಲಾಗಿರುವುದು ಈಗಲೂ ತಿಳಿದುಬರುತ್ತದೆ. ಇಂತಹ ಕ್ರಮಗಳಿಂದಾಗಿ ನೀರನ್ನು ಬೇಕಾದ ಪ್ರಮಾಣಗಳಲ್ಲಿ ಉಪಯೋಗಿಸಿಕೊಳ್ಳಲು ಅನುಕೂಲವಾಗುತ್ತಿತ್ತು. ಆದರೂ ವ್ಯವಸ್ಥೆಗಳು ಅಷ್ಟೊಂದು ಸಮರ್ಪಕವಾಗಿರದೆ ಇದ್ದ ಕಾರಣದಿಂದಾಗಿ, ನೀರಿನ ಕೆಲವೊಂದು ಪ್ರಮಾಣವು ಅಪವ್ಯಯವಾಗುತ್ತಿತ್ತು ಎಂಬ ವಿಷಯವನ್ನು ಅಲ್ಲಗೆಳೆಯುವಂತಿಲ್ಲ.

ವಿತರಣಾ ವ್ಯವಸ್ಥೆ: ನೀರನ್ನು ಜಮೀನುಗಳಲ್ಲಿ ವಿತರಣೆ ಮಾಡುವ ವಿಷಯದಲ್ಲೂ ಸಹ ಅವರದೇ ಆದ ಒಂದು ಪದ್ಧತಿ ಇತ್ತು. ಅದರ ಪ್ರಕಾರ ವಿತರಣಾ ಜವಾಬ್ದಾರಿಯನ್ನು ಪ್ರತಿಯೊಂದು ಊರಿನ ನೀರಗಂಟಿ ಎಂಬ ಅಧಿಕಾರಿಗೆ ವಹಿಸಲಾಗುತ್ತಿತ್ತು. ಆತನು ವಿತರಣಾ ಕಾರ್ಯವನ್ನು ಸಮರ್ಪಕ ರೀತಿಯಲ್ಲಿ ಜರುಗಿಸಿಕೊಂಡು ಹೋಗುತ್ತಿದ್ದನು. ಅಲ್ಲದೆ ಏನಾದರೂ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಬೇಕಾಗಿದ್ದಲ್ಲಿ, ಸಂಬಂಧಿಸಿದವರಿಗೆ ತಿಳಿಸಿ, ಆ ಕಾರ್ಯಗಳಿಗೆ ಬೇಕಾಗುವ ಏರ್ಪಾಟುಗಳನ್ನು ಮಾಡುತ್ತಿದ್ದನು. ಚಿಕ್ಕ ಪುಟ್ಟ ಕಾರ್ಯಗಳಾಗಿದ್ದಲ್ಲಿ, ತಾನೇ ಸ್ವತಃ ಅಥವಾ ನೆರೆಯ ರೈತರ ಸಹಾಯದಿಂದ ನೆರವೇರಿಸುತ್ತಿದ್ದನು. ಸಮಯ ಬಂದಾಗ ರಾತ್ರಿ ಮತ್ತು ಹಗಲು ಎನ್ನದೆ ತನ್ನ ಕಾರ್ಯದಲ್ಲಿ ನಿರತನಾಗಿರುತ್ತಿದ್ದನು. ಅವನ ಸೇವೆಗೆ ಪ್ರತಿಫಲವಾಗಿ ಸರಿಯಾದ ಏರ್ಪಾಟುಗಳಿರುತ್ತಿದ್ದವು. ಆರಂಭದಲ್ಲಿಯೇ ಸ್ವಲ್ಪ ಜಮೀನನ್ನು ದಾನವಾಗಿ ನಿರ್ಮಾಪಕರಿಂದ ಪಡೆದಿರುತ್ತಿದ್ದನಲ್ಲದೆ ರೈತರಿಂದ ಪ್ರತಿವರ್ಷ ಇಂತಿಷ್ಟೆಂದು ದವಸಧಾನ್ಯಗಳನ್ನು ತನ್ನ ಸೇವೆಗೆ ಪ್ರತಿಫಲವಾಗಿ ಪಡೆಯುತ್ತಿದ್ದನು. ಈ ವ್ಯವಸ್ಥೆಗಳು ಒಬ್ಬನ ಜೀವನಪರ್ಯಂತವಾಗಿಯಲ್ಲದೆ, ಅವನ ವಂಶಪರಂಪರಾಗತವಾಗಿ ನಡೆಯುವಂತಹುಗಳಾಗಿರುತ್ತಿದ್ದವು. ಅಂತೆಯೇ ನೀರಗಂಟಿಯೂ ತನ್ನ ಸೇವಾಕಾರ್ಯ ನಿರ್ವಹಣೆಯಲ್ಲಿ ನಾಡಿನ ಧರ್ಮ ನಿರ್ಬಂಧನೆಗಳಿಂದ ಮಾರ್ಗದರ್ಶಿತನಾಗಿರುತ್ತಿದ್ದನು.

ದುರಸ್ತಿ ಕಾರ್ಯಗಳು: ಈ ಆಣೆಕಟ್ಟೆಗಳಿಗೆ ಆಗಾಗ್ಗೆ ಕೆಲವು ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿರುತ್ತಿತ್ತು. ಇಂತಹ ಜವಾಬ್ದಾರಿಗಳನ್ನು, ಆಣೆಕಟ್ಟೆಯ ನಿರ್ಮಾಣವಾದ ಸಮಯದಲ್ಲಿಯೇ ಅದಕ್ಕೆ ಸಂಬಂಧಿಸಿದ ಗ್ರಾಮ ಅಥವಾ ಗ್ರಾಮಗಳ ಜನರಿಗೆ ಅಥವಾ ಸ್ಥಳೀಯ ಅಧಿಕಾರಿಗಳು ವಹಿಸಿ ಏರ್ಪಾಟು ಮಾಡಲಾಗಿರುತ್ತಿತ್ತು. ಕೆಲವು ಬಾರಿ ಈ ಜವಾಬ್ದಾರಿಗಳನ್ನು ಸ್ಥಳೀಯ ಮಠಗಳಿಗೋ ಅಥವಾ ದೇವಾಲಯಗಳಿಗೋ ವಹಿಸಿಕೊಡಲಾಗುತ್ತಿತ್ತು. ಮತ್ತೆ ಕೆಲವು ಬಾರಿ ಅಂಥಾ ದುರಸ್ತಿ ಕಾರ್ಯಗಳಿಗಾಗಿ, ಸ್ಥಳೀಯ ಜನರಿಂದ ಚಂದಾ ಅಥವಾ ತೆರಿಗೆಯನ್ನು ಕಡ್ಡಾಯವಾಗಿ ಸಂಗ್ರಹಿಸುವ ಪದ್ಧತಿಯೂ ಇತ್ತು. ಇನ್ನೂ ಕೆಲವು ಸಮಯದಲ್ಲಿ ಅಧಿಕಾರಿಗಳೋ ಅಥವಾ ಪ್ರಜೆಗಳೋ ಸ್ವಯಂ ಸ್ಪೂರ್ತಿಯಿಂದ ಮುಂದೆ ಬಂತು ಅಂತಹ ದುರಸ್ತಿ ಕಾರ್ಯಗಳನ್ನು ನೆರವೇರಿಸಿ ಕೊಡುತ್ತಿದ್ದರು. ಹಾಗೆ ಮಾಡುವುದರಿಂದ ವಿಶೇಷ ಪುಣ್ಯ ಲಭಿಸುತ್ತದೆಂಬುದು ಅವರ ದೃಢವಾದ ನಂಬಿಕೆಯಾಗಿತ್ತು. ಈ ನಂಬಿಕೆಯನ್ನು ಸಮರ್ಥಿಸುತ್ತಾ ಕ್ರಿ.ಶ.೧೪೧೩ರಲ್ಲಿ ಹೊರಡಿಸಲಾದ ಒಂದು ಶಿಲಾಶಾಸನವು[7] ಈ ರೀತಿ ಹೇಳುತ್ತದೆ.

‘…. ಭಿಂನ ತಟಾಕ ಕೂಪಂ ಭ್ರಷ್ಟಸ್ತ ರಾಜ್ಯಂ ಶರಣಾಗತ……
ಬ್ರಾಣಂ ದೇವಗೃಹಂ ಚ ಜೀರ್ಣಂಯ ಉದ್ಧರೇ ಪೂರ್ವ ಚತುರ್ಗುಣಂ…..’

ಹೀಗೆ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಅರಸರೂ, ಅಧಿಕಾರಿಗಳೂ ಮತ್ತು ಪ್ರಜೆಗಳೂ ತುಂಗಭದ್ರಾ ನದಿಗೆ ಆಣೆಕಟ್ಟೆಗಳನ್ನು ನಿರ್ಮಿಸಿ ಜನಕಲ್ಯಾಣವನ್ನು ಸಾಧಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದರು. ಈ ದಿಶೆಯಲ್ಲಿ ಅವರು ಆದರ್ಶಪ್ರಾಯರೂ ಆಗಿದ್ದರೆಂಬಲ್ಲಿ ಸಂಶಯವೇ ಇಲ್ಲ ಅಲ್ಲದೆ ಅವರು ಈ ನಿರ್ಮಾಣ ಕಾರ್ಯಗಳಲ್ಲಿ ತೋರಿಸಿರುವ ತಾಂತ್ರಿಕ ಕುಶಲತೆ, ಜಾಣ್ಮೆ ಮತ್ತು ಪರಿಣತೆಗಳು ಸಾಮಾನ್ಯ ಗುಣಮಟ್ಟದವುಗಳಾಗಿರದೆ, ಆಧುನಿಕ ಜಲತಂತ್ರಜ್ಞರೂ ಸಹ ಗಣನೆಗೆ ತೆಗೆದುಕೊಳ್ಳಲು ಯೋಗ್ಯವಾದವುಗಳಾಗಿವೆ. ಅಲ್ಲದೆ ಆಧುನಿಕ ಅವಶ್ಯಕತೆಗಳಿಗನುಗುಣವಾಗಿ ಕೆಲವೊಂದು ಮಾರ್ಪಾಟುಗಳೊಂದಿಗೆ, ಅನುಕರಣೆ ಮತ್ತು ಅನುಷ್ಠಾನಗಳಿಗೆ ಅರ್ಹವಾದವುಗಳೆಂದು ಹೇಳಿದರೆ ಅತಿಶಯೋಕ್ತಿ ಎನ್ನಲಾಗದು ಮತ್ತು ಈ ಮೆಚ್ಚುಗೆಯ ಮಾತುಗಳಿಗೆ ಅವರು ಸರ್ವ ವಿಧದಲ್ಲಿಯೂ ಪಾತ್ರರೂ ಹೌದು.

ಆಕರ
ಹೇಮಕೂಟ, ಸಂ.೩, ಸಂ.೫, ೧೯೯೭, ಶ್ರೀ ಕೊಟ್ಟೂರುಸ್ವಾಮಿ ಮಠ, ಹಂಪಿ, ಆಯ್ದ ಭಾಗಗಳು.

 

[1] ಇದು ಆದವಾನಿ ತಾಲೂಕಿಗೆ ಸೇರಿದ್ದು, ಈಗ ಆಂಧ್ರಪ್ರದೇಶದಲ್ಲಿದೆ.

[2] ಇಲ್ಲಿ ಕೊಟ್ಟಿರುವ ಮುಖ್ಯ ವಿವರಣೆಗಳನ್ನು ಶ್ರೀವಸಂತ ಪಾಟೀಲ, ಅಸಿಸ್ಟಂಟ್‌ಎಂಜಿನಿಯರ್, ಮುನಿರಾಬಾದ್ ಅವರು ಸಹೃದಯದಿಂದ ಒದಗಿಸಿರುತ್ತಾರೆ.

[3] Francis: Bellary District Gazetter, pp.95

[4] ಇಲ್ಲಿ ಕೊಟ್ಟಿರುವ ನಕಾಶೆಯು ಶ್ರೀ ಷಡಕ್ಷರಯ್ಯ, ಅಸಿಸ್ಟಂಟ್‌ಎಂಜಿನಿಯರ ಬಳ್ಳಾರಿ ಇವರಿಂದ ತಯಾರಿಸಲ್ಪಟ್ಟುದಾಗಿದೆ.

[5] ನಕಾಶೆಯನ್ನು ನೋಡುವುದು.

[6] Butterworth and V. Chetty: Inscriptions of Nellore District, Pt. III pp. 1245 etc.

[7] E.C. Vol. VII Sh. 30 pp.42. ಈ ಶಾಸನವು, ವಿಜಯನಗರದ ಹರಿಹರ ಮಹಾರಾಯನ ಕಾಲದಲ್ಲಿ (ಕ್ರಿ.ಶ.೧೪೧೩) ಯರೆಲಖೆಯ ನಾಯಕನಿಂದ ತಟಾಕವೊಂದನ್ನು ನಿರ್ಮಿಸಿ, ಶ್ರೋತ್ರಿಯ ದಾನವನ್ನು ಕೊಡುವ ಸಂದರ್ಭದಲ್ಲಿ ಹೊರಡಿಸಿದ್ದು.