ವಿಜಯನಗರದ ಕಾಲದಲ್ಲಿ ಕೆರೆ, ಕುಂಟೆ ಮತ್ತು ಬಾವಿಗಳ ನಿರ್ಮಾಣದೊಂದಿಗೆ ಚಿಕ್ಕ ಚಿಕ್ಕ ಆಣೆಕಟ್ಟುಗಳನ್ನು ನದಿಗಳಿಗೆ ಮತ್ತು ತೊರೆಗಳಿಗೆ ನಿರ್ಮಿಸಿ ನೀರನ್ನು ಅತ್ಯಂತ ಸಮರ್ಪಕವಾಗಿ ಉಪಯೋಗಿಸುತ್ತಿದ್ದರು. ಹಂಪಿ ಸಮೀಪದ ತುಂಗಭದ್ರಾ ನದಿಗೆ ಅಡ್ಡವಾಗಿ ಆಣೆಕಟ್ಟು ನಿರ್ಮಿಸಿ ಆ ನೀರನ್ನು ಕೃಷಿಗೆ ಮತ್ತು ಕುಡಿಯುವ ಸಲುವಾಗಿ ಬಳಸುತ್ತಿದ್ದರು. ಈ ತಾಲೂಕಿನಲ್ಲಿಯೇ ತುಂಗಭದ್ರಾ ನದಿಗೆ ಅಡ್ಡಲಾಗಿ ಹನ್ನೆರಡು ಆಣೆಕಟ್ಟುಗಳನ್ನು ಕಟ್ಟಿರುವುದು ವಿಶೇಷದ ಸಂಗತಿಯೇ ಸರಿ.

[1] ಇದಕ್ಕೆ ಮತ್ತೊಂದು ಬಲವಾದ ಕಾರಣವೂ ಇದೆ. ಇದು ವಿಜಯನಗರದ ಪಟ್ಟಣ ಅಥವಾ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪೆಯಾಗಿದ್ದು, ಇದು ಇಂದಿನ ಹೊಸಪೇಟೆ ತಾಲೂಕಿನಲ್ಲಿದೆ. ರಾಜಧಾನಿಗೆ ನೀರಿನ ವ್ಯವಸ್ಥೆಯನ್ನು ಪೂರೈಸುವ ಸಲುವಾಗಿ ತಾಲೂಕಿನಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ಅಲ್ಲಲ್ಲಿ ಕಟ್ಟೆಗಳನ್ನು ನಿರ್ಮಿಸಿರುವುದನ್ನು ಕಾಣಬಹುದಾಗಿದೆ. ವಿಜಯನಗರ ಕಾಲದ ತಂತ್ರಜ್ಞರು ಕಟ್ಟೆಗಳನ್ನು ನಿರ್ಮಿಸುವುದರಲ್ಲಿ ಅದ್ವಿತೀಯ ನಿಪುಣತೆಯನ್ನು ಹೊಂದಿದ್ದರೆಂಬುದಕ್ಕೆ ಸಾಕ್ಷಿಯಾಗಿ ಅವರುಗಳು ಕಟ್ಟೆ ಕಟ್ಟುವುದಕ್ಕೆ ಆಯ್ಕೆ ಮಾಡಿರುವಂತಹ ಪ್ರದೇಶವನ್ನು ಗಮನಿಸಿದಾಗ ತಿಳಿದುಬರುತ್ತದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಬಹು ಸಮರ್ಪಕವಾಗಿ ಕಟ್ಟಿರುವುದು ನಿಜಕ್ಕೂ ಶ್ಲಾಘನೀಯ. ನೈಸರ್ಗಿಕವಾಗಿ ದೊರೆಯುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ಪರಿಸರ, ನದಿಯ ನೀರಿನ ವೇಗ, ನದಿಯ ಪಾತ್ರ ಮತ್ತು ನದಿ ಪಾತ್ರದಲ್ಲಿರುವ ನೈಸರ್ಗಿಕ ರಚನೆಗಳನ್ನು ಗಮನಿಸಿ ಆಯಾ ಪ್ರದೇಶಗಳಲ್ಲಿ ಕಟ್ಟೆಗಳನ್ನು ನಿರ್ಮಿಸಿ ಕಾಲುವೆಗಳನ್ನು ಕ್ಷಿತಿಜ ಭೂಮಟ್ಟ ರೇಖೆಗೆ (ಕಾಂಟೂರ್ Contour) ಅನುಗುಣವಾಗಿ ನೀರು ಹಾಯಿಸಿರುವುದು ಅಂದಿನ ಕಾಲದ ಅವರ ಉನ್ನತ ಮಟ್ಟದ ತಾಂತ್ರಿಕ ಜ್ಞಾನವನ್ನು ಪರಿಚಯಿಸಿಕೊಡುತ್ತದೆ.

ವಿಜಯನಗರ ಕಾಲದಲ್ಲಿ ಆಣೆಕಟ್ಟುಗಳನ್ನು ಬಹಳ ಕಡಿಮೆ ಖರ್ಚಿನಲ್ಲಿ ಕಟ್ಟುತ್ತಿದ್ದರು. ಈ ಕೆಲಸಕ್ಕೆ ಬಂಡೆಗಲ್ಲು, ಆಕಾರ ಕೊಟ್ಟ ಕಲ್ಲುಗಳನ್ನು (Dressed Stone) ಆಯಾತಾಕಾರ ಮತ್ತು ಚೌಕಾಕಾರ ಮಾದರಿಯಾಗಿ ರೂಪಿಸಿ ಅವುಗಳನ್ನು ನದಿಯ ಪಾತ್ರದಲ್ಲಿ ಒಂದರ ಮೇಲೊಂದರಂತೆ ಜೋಡಿಸುತ್ತಿದ್ದರು. ಇವುಗಳಿಗೆ ಅಡಿಪಾಯವಾಗಿ ನದಿ ಪಾತ್ರದಲ್ಲಿರುವಂತಹ ನೈಸರ್ಗಿಕ ಕಲ್ಲುಬಂಡೆಗಳನ್ನೇ ಉಪಯೋಗಿಸಿಕೊಳ್ಳುತ್ತಿದ್ದರು. ನದಿಯ ತಿರುವುಗಳಲ್ಲಿಯೂ ಇಂತಹ ಕಟ್ಟೆಗಳನ್ನು ನಿರ್ಮಿಸುತ್ತಿದ್ದರು. ಈ ರೀತಿಯಾಗಿ ಪೇರಿಸಿಟ್ಟ ಕಲ್ಲಿನ ಗೋಡೆಗೆ ಯಾವುದೇ ವಿಧವಾದ ಗಚ್ಚು ಗಾರೆಗಳನ್ನು (ಮಾರ್ಟರ್ Mortar) ಬಳಸುತ್ತಿರಲಿಲ್ಲ. ಕಲ್ಲುಗಳನ್ನು ಜಾಗರೂಕತೆಯಿಂದ ಜೋಡಿಸುತ್ತಿದ್ದರು. ಇದರಿಂದಾಗಿ ಕಲ್ಲುಗಳ ನಡುವೆ ಯಾವುದೇ ವಿಧವಾದ ಜೋಡಣೆಯ ಸಾಧನಗಳ ಅವಶ್ಯಕತೆ ಇರುತ್ತಿರಲಿಲ್ಲ. ತೀರಾ ಅವಶ್ಯಕತೆ ಇದ್ದಲ್ಲಿ ಮಾತ್ರವೇ ಗಾರೆಯನ್ನು ಉಪಯೋಗಿಸುತ್ತಿದ್ದರು. ನದಿಯಲ್ಲಿ ಹರಿದು ಬರುವಂತಹ ಮಣ್ಣು, ಕಲ್ಮಶಗಳು ಮತ್ತು ಇನ್ನಿತರೆ ವಸ್ತುಗಳ ಬಂಡೆಗಲ್ಲಿನ ಸಂದುಗಳಿಂದ ನೀರು ಸದಾ ಕಾಲವು ಸ್ರವಿಸುತ್ತಿತ್ತು. ಇಂದಿಗೂ ನೀರು ಸ್ರವಿಸುವುದನ್ನು ಕಾಣಬಹುದು. ಇವುಗಳಿಂದ ಎರಡು ರೀತಿಯ ಪ್ರಯೋಜನಗಳಿವೆ. ಮೊದಲನೆಯದಾಗಿ ನೀರು ಹೆಚ್ಚಾಗಿ ಹರಿದುಬಂದಾಗ ಈ ಸಂಧಿಗಳ ಮೂಲಕ ಹರಿದುಹೋಗುತ್ತದೆ. ಇದರ ಪರಿಣಾಮವಾಗಿ ಕಟ್ಟೆಯಲ್ಲಿ ನೀರು ಯಾವಾಗಲೂ ಒಂದೇ ಮಟ್ಟದಲ್ಲಿ ನಿಲ್ಲುತ್ತದೆ. ಮತ್ತು ಕಟ್ಟೆಗೆ ಯಾವುದೇ ವಿಧವಾದ ಧಕ್ಕೆ ಉಂಟಾಗುವುದಿಲ್ಲ. ಎರಡನೆಯ ಪ್ರಯೋಜನವು ಸ್ರವಿಸಿದ ನೀರು ಹರಿದುಹೋಗಿ ಜನ ಸಾಮಾನ್ಯರಿಗೆ ಹಾಗೂ ಪಶುಪಕ್ಷಿಗಳಿಗೆ ನೀರು ದೊರಕುತ್ತದೆ. ಇದು ಅಂದಿನ ಕಾಲದ ಜನರು ದೂರದೃಷ್ಟಿ ಮತ್ತು ತಂತ್ರಜ್ಞಾನದ ಔನ್ನತ್ಯವನ್ನು ಸೂಚಿಸುತ್ತದೆ.

ಕೆಲವೊಂದು ಸಂದರ್ಭಗಳಲ್ಲಿ ಕಬ್ಬಿಣದ ಬಿಗಿ ಕೊಂಡಿ ಅಥವಾ ಬಿಗಿಹಿಡಿಕೆ (ಕ್ಲಾಂಪ್‌)ಗಳನ್ನು ಬಳಸಿ ಕಲ್ಲುಗಳನ್ನು ಜೋಡಿಸಿಡುತ್ತಿದ್ದರು. ಕಟ್ಟೆ ಗೋಡೆಯ ಇನ್ನೊಂದು ಬದಿಗೆ ಕೆಲವು ಕುಳಿಗಳನ್ನು ಬಂಡೆಗಲ್ಲಿನಲ್ಲಿ ಕೊರೆಯಲಾಗುತ್ತಿತ್ತು. ಪ್ರವಾಹ ಬಂದಾಗ ಆಣೆಕಟ್ಟೆಯ ಗೋಡೆಗಳು ಕೊಚ್ಚಿಕೊಂಡು ಹೋದರೂ, ಈ ಕುಳಿಗಳಲ್ಲಿ ಬಂಡೆಕಲ್ಲುಗಳು ಕುಳಿತುಕೊಳ್ಳುವಂತೆ ವ್ಯವಸ್ಥೆಯನ್ನು ಮಾಡಲಾಗಿದೆ. ಸಾಮಾನ್ಯವಾಗಿ ಆಣೆಕಟ್ಟಿನ ಗೋಡೆಗಳು ನದಿಗೆ ನೇರವಾದ ಗೋಡೆಯಂತೆ ಅಡ್ಡಲಾಗಿ ನಿರ್ಮಿಸುತ್ತಿರಲಿಲ್ಲ. ಗೋಡೆಗಳನ್ನು ಡೊಂಕಾಗಿ ಅಂದರೆ ಅರ್ಧಚಂದ್ರಾಕಾರವಾಗಿ ಕಟ್ಟುತ್ತಿದ್ದರು. ಇದರಿಂದ ನೀರಿನ ಒತ್ತಡವು ಗೋಡೆಯ ಮೇಲೆ ಬೀಳುತ್ತಿರಲಿಲ್ಲ. ಗೋಡೆ ಡೊಂಕಾಗಿರುವ ಕಾರಣದಿಂದಾಗಿ ನದಿಯ ನೀರಿನ ಒತ್ತಡವು ಸಮನಾಗಿ ಹಂಚಿಹೋಗುವ ಸಲುವಾಗಿ ಈ ರೀತಿಯ ರಚನೆಯು ಅವಶ್ಯವಾಗಿದ್ದಿತು. ಅಂಕುಡೊಂಕು ಆಣೆಕಟ್ಟು ಗೋಡೆಗಳು ಸುಭದ್ರವಾಗಿರುವುದನ್ನು ಇಂದಿಗೂ ನಾವು ಕಾಣಬಹುದು. ಕೆಲವೊಮ್ಮೆ ಕಟ್ಟೆಯ ಗೋಡೆಯು ನದಿಗೆ ಅಡ್ಡವಾಗಿ ಸ್ವಲ್ಪ ದೂರ ಮಾತ್ರವೇ ಇರುತ್ತಿದ್ದವು. ಇನ್ನು ಕೆಲವು ನಿದರ್ಶನಗಳಲ್ಲಿ ನದಿಯ ಅರ್ಧಭಾಗಕ್ಕೆ ಮಾತ್ರ ಈ ಕಟ್ಟೆಯನ್ನು ನಿರ್ಮಿಸಲಾಗುತ್ತಿತ್ತು. ಇವುಗಳು ನೀರಿನ ಅವಶ್ಯಕತೆಗಳಿಗನುಸಾರವಾಗಿ ಇರುತ್ತಿದ್ದಂತಹ ರಚನೆಗಳು ಎಂಬುದನ್ನು ಇಲ್ಲಿ ಮರೆಯಬಾರದು. ನದಿಗೆ ಅಡ್ಡಲಾಗಿ ಕಟ್ಟಿರುವ ಕಟ್ಟೆಗಳು ಒಂದು ದೊಡ್ಡ ಕೋಡಿ ಅವುಗಳು ಕೆರೆಯ ಕೋಡಿಗಳಂತೆಯೇ ಕೆಲಸ ನಿರ್ವಹಿಸುತ್ತಿದ್ದವು ಎಂದು ಕೊಟ್ರಯ್ಯನವರು ಸರಿಯಾಗಿ ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಹಂಪಿ ಪರಿಸರದ ಕೆಲವು ಮುಖ್ಯ ಆಣೆಕಟ್ಟು ಮತ್ತು ಕಾಲುವೆಗಳನ್ನು ಕುರಿತು ಇಲ್ಲಿ ಚರ್ಚಿಸಲಾಗಿದೆ.

ತುರ್ತಾ ಆಣೆಕಟ್ಟು ಮತ್ತು ತುರ್ತಾ ಕಾಲುವೆ

ತುರ್ತಾ ಆಣೆಕಟ್ಟು ವಿಜಯನಗರ ಕಾಲದಲ್ಲಿ ತುಂಗಭದ್ರಾ ನದಿಗೆ ನಿರ್ಮಿಸಲಾದ ಒಂದು ನೀರಾವರಿ ರಚನೆ. ಇತ್ತೀಚೆಗೆ ಒಂದು ಶಾಸನವು ಕಟ್ಟೆಯ ಸಮೀಪದಲ್ಲಿರುವ ಒಂದು ಬಂಡೆಯ ಮೇಲೆ ದೊರೆತಿದ್ದು, ಈ ಕಟ್ಟೆಯನ್ನು ಚಿಂತಯ್ಯಕ ದೇವಣ್ಣನೆಂಬುವನು ಕಟ್ಟಿಸಿದನು ಮತ್ತು ಆ ಕೆಲಸವನ್ನು ಬೊಮೋಜನು ನಿರ್ವಹಿಸಿದನು ಎಂದು ದಾಖಲಿಸಿದೆ.[2] ಈ ಆಣೆಕಟ್ಟಿನಿಂದ ಒಂದು ನಾಲೆಯು ಹೊರಡುತ್ತದೆ. ಇದನ್ನು ತುರ್ತಾ ಕಾಲುವೆಯೆಂದು ಕರೆಯುತ್ತಾರೆ. ಈ ಕಾಲುವೆಯು ಸುಮಾರು ಇಪ್ಪತ್ತೇಳು ಕಿ.ಮೀ.ಗಳಷ್ಟು ಉದ್ದವಾಗಿದ್ದು ಬಹುಶಃ ವಿಜಯನಗರಪಟ್ಟಣಕ್ಕೆ ನೀರು ಸರಬರಾಜು ಮಾಡುತ್ತಿತ್ತೆಂದು ಶೋಧಗಳಿಂದ ತಿಳಿದುಬಂದಿದೆ. ತುರ್ತಾ ಕಾಲುವೆ ಅಥವಾ ಹಿರಿಯ ಕಾಲುವೆಯನ್ನು ಕ್ರಿ.ಶ.೧೫೨೪ರ ಮುಂಚೆಯೇ ನಿರ್ಮಿಸಲಾಗಿತ್ತೆಂದು ಶಾಸನಾಧಾರಗಳು ಸೂಚಿಸುತ್ತವೆ.[3]

ತುರ್ತಾ ಆಣೆಕಟ್ಟು

ತುರ್ತಾ ಆಣೆಕಟ್ಟು

ಈ ಕಾಲುವೆಯು ಹಂಪೆಯ ಪಶ್ಚಿಮಕ್ಕೆ ಸುಮಾರು ಮೂರು ಕಿ.ಮೀ. ದೂರದಲ್ಲಿ ಪ್ರಾರಂಭವಾಗುತ್ತದೆ. ಇದನ್ನು ಹಿರಿಯ ಕಾಲುವೆಯೆಂದು ಶಾಸನಗಳು ದಾಖಲಿಸಿವೆ. ಈ ಕಾಲುವೆಯ ಬಗೆಗೆ ಹೊಸಪೇಟೆಯ ಲೋಕೋಪಯೋಗಿ ಇಲಾಖೆಯವರ ಬಳಿಯಲ್ಲಿರುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಈ ಕಾಲುವೆಯು ಕ್ಷಿತಿಜ ಭೂಮಟ್ಟದ ರೇಖೆಯಲ್ಲಿಯೇ (Contour level) ಹಾಯ್ದು ನೂರಾರು ಎಕರೆ ಭೂಮಿಗೆ ನೀರುಣಿಸಿ ನಂತರ ತುಂಗಭದ್ರೆಯನ್ನು ಸೇರಿಕೊಳ್ಳುತ್ತದೆ. ಈ ಕಾಲುವೆಯ ಉದ್ದಕ್ಕೂ ಅನೇಕ ತೂಬುಗಳನ್ನು ಜೋಡಿಸಲಾಗಿದ್ದು ಇವುಗಳಿಂದ ಆಯಕಟ್ಟು ಪ್ರದೇಶಗಳಿಗೆ ನೀರನ್ನು ಪೂರೈಸಲಾಗುತ್ತಿದೆ. ಈಗ ಈ ಕಾಲುವೆಯು ಲೋಕೋಪಯೋಗಿ ಮತ್ತು ನೀರಾವರಿ ಇಲಾಖೆಯವರ ಸುಪರ್ದಿನಲ್ಲಿ ಇದ್ದು ಹೊಸಪೇಟೆ, ಕಮಲಾಪುರ ಮತ್ತು ಹಂಪೆಯ ಕೃಷಿಕರಿಗೆ ನೀರನ್ನು ಸಮರ್ಪಕವಾಗಿ ಪೂರೈಸುತ್ತಿದೆ. ಇಂದಿಗೂ ಈ ಕಾಲುವೆಯ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿರುವುದು ಅಂದಿನ ಕಾಲದ ತಂತ್ರಜ್ಞಾನವನ್ನು ಪರಿಚಯಿಸುತ್ತದೆ.

ತುರ್ತಾ ಆಣೆಕಟ್ಟು ವಿವರಗಳು

ಈ ಆಣೆಕಟ್ಟು ಹಂಪೆಯು ಬಳಿಯಿಂದ ಪ್ರಾರಂಭವಾಗುತ್ತದೆ. ಇವರ ಒಟ್ಟು ಕಟ್ಟಿಲ್ಪಟ್ಟ ಭಾಗದ ಉದ್ದವು ಸುಮಾರು ೧,೦೦೦ ಅಡಿಗಳಷ್ಟು ಮಾತ್ರವೇ. ಇದು ಒಟ್ಟು ಹದಿನೈದು ಭಾಗಗಳಲ್ಲಿದೆ. ನೈಸರ್ಗಿಕ ಬಂಡೆ, ಕಲ್ಲು ಮತ್ತು ನದಿಪಾತ್ರದ ಕಲ್ಲುಗಳನ್ನು ಬಳಸಿಕೊಂಡು ಕಟ್ಟಲಾಗಿದೆ. ಈ ಆಣೆಕಟ್ಟು ನೇರವಾಗಿರದೆ ಅಂಕುಡೊಂಕಾಗಿದ್ದು ಇದರ ಬಲದಂಡೆಯಿಂದ ಒಂದು ಕಾಲುವೆಯು ಪ್ರಾರಂಭವಾಗುತ್ತದೆ.[4] ಈ ಆಣೆಕಟ್ಟಿನ ಒಂದು ತುದಿಯಿಂದ ಮತ್ತೊಂದ ತುದಿಯವರೆಗೆ ಇರುವ ರಚನಾ ವಿಧಾನವನ್ನು ಇಲ್ಲಿ ನೀಡಲಾಗಿದೆ.

ಕೋಷ್ಟಕ ೧:

ರಚನಾ ವಿಧಾನ  ಉದ್ದ (ಅಡಿಗಳಲ್ಲಿ)
೧. ಒರಟುಕಲ್ಲುಗಳ ಸಮೂಹ(ಬಲದಂಡೆಯಿಂದ) ೨೦
೨. ಒರಟುಕಲ್ಲುಗಳ ಹಿಂಭಾಗದ ಗೋಡೆ ೫೩
೩. ನದಿಪಾತ್ರದ ಕಲ್ಲು ೧೬
೪. ಒರಟುಕಲ್ಲು ಗೋಡೆ (ಹಿಂಬದಿಯಿಂದ ಒರಟು ಕಲ್ಲುಗಳನ್ನು ಹೊಂದಿದೆ) ೫೩
೫. ಚಿಕ್ಕ ಗುಡ್ಡ ೧೩
೬. ಚಿಕ್ಕ ಗುಡ್ಡ ಮತ್ತು ಒರಟುಕಲ್ಲು ಗೋಡೆ ಮತ್ತ ಬಂಡೆಗಲ್ಲು ೨೧೦
೭. ದೊಡ್ಡ ಬಂಡೆಗಳು ಮತ್ತು ಒರಟುಕಲ್ಲು ಗೋಡೆ ೧೫
೮. ದೊಡ್ಡ ಹಾಸುಕಲ್ಲು ಮತ್ತು ಒರಟುಕಲ್ಲು ಹಿಂಬದಿಯಲ್ಲಿ (ಚಂದ್ರಾಕೃತಿಯ ಗೋಡೆ) ೧೫೦
೯. ದೊಡ್ಡ ಹಾಸುಕಲ್ಲು ಮತ್ತು ಒರಟುಕಲ್ಲು ಹಿಂಬದಿಯಲ್ಲಿ ಚಂದ್ರಕೃತಿ ಚಂದ್ರಾಕೃತಿಯ ಗೋಡೆ ೧೫೦
೧೦ ದೊಡ್ಡ ಬಂಡೆ ಹಾಸುಗಲ್ಲು ಮತ್ತು ಒರಟುಕಲ್ಲು ಗೋಡೆಯ ‘ಎಪ್ರಿನ್’ ೮೩
೧೧ ಬಂಡೆ ಹಾಸುಗಲ್ಲು ೭೫
೧೨ ಒರಟುಕಲ್ಲು ಮತ್ತು ಒರಟುಕಲ್ಲು ಗೋಡೆ ೧೫.೫
೧೩ ಒರಟುಕಲ್ಲು ಮತ್ತು ಒರಟಕಲ್ಲು ಗೋಡೆ ಹಿಂಬದಿಯಲ್ಲಿ ೨೧೩
೧೪ ಬಂಡೆ ಹಾಸುಗಲ್ಲು ೪೪.೫
೧೫ ಬಂಡೆಕಲ್ಲು ಗೋಡೆ ೪೮
೧೬ ಬಂಡೆ ಹಾಸುಗಲ್ಲು ೪೫
೧೭ ಒರಟುಕಲ್ಲು ಗೋಡೆ ೪೦
೧೮ ಹಾಸುಗಲ್ಲು
೧೯ ಹಾಸುಗಲ್ಲು
೨೦ ಒರಟುಕಲ್ಲುಗಳು ೧೨
೨೧ ದೊಡ್ಡ ಗುಡ್ಡ ಮತ್ತು ಒರಟುಕಲ್ಲುಗಳ ಗೋಡೆ ೧೦೯ (ಎಡದಂತೆ)

ಈ ಮೇಲೆ ವಿವರಿಸಿದ ರೀತಿಯಲ್ಲಿ ಆಣೆಕಟ್ಟನ್ನು ಕಟ್ಟಿರುವ ಕಾರಣ ಈ ಆಣೆಕಟ್ಟನ್ನು ಒಂದು ದಡದಿಂದ ಯಾರೂ ಸಂಪೂರ್ಣವಾಗಿ ನೋಡಲು ಆಗುವುದಿಲ್ಲ.

ಸಾಮಾನ್ಯವಾಗಿ ಆಣೆಕಟ್ಟುಗಳು ಎರಡರಿಂದ ಐದು ಅಥವಾ ಐದೂವರೇ ಅಡಿಗಳಷ್ಟು ಎತ್ತರವಾಗಿರುತ್ತವೆ. ಇದಕ್ಕೂ ಎತ್ತರವಾದ ಗೋಡೆಗಳನ್ನು ನಿರ್ಮಿಸಿರುವುದಿಲ್ಲ. ಮತ್ತೊಂದು ವಿಶೇಷ ಸಂಗತಿಯೆಂದರೆ, ನಿಸರ್ಗದ ಕೊಡುಗೆಯನ್ನು ಉಪಯೋಗಿಸಿ ಕೆಲವು ಕಡೆಗಳಲ್ಲಿ, ಎರಡು ಅಡಿಗಳಷ್ಟು ಗೋಡೆಯನ್ನು ಮಾತ್ರವೇ ನಿರ್ಮಿಸಿದ್ದಾರೆ. ಇದರಿಂದ ಪ್ರವಾಹ ಬಂದಾಗ ಸಹ ಆಣೆಕಟ್ಟು ನಾಶವಾಗದಂತೆ ಇಂದಿಗೂ ಉಳಿದಿದೆ. ಎರಡು ಸಾವಿರ ಎಕರೆಗಳಷ್ಟು ಪ್ರದೇಶವು ನೀರಾವರಿಗೊಳಪಟ್ಟಿದೆ.

ಮತ್ತೊಂದು ಮುಖ್ಯವಾದ ಆಣೆಕಟ್ಟು ರಾಮಸಾಗರದ ಬಳಿಯಲ್ಲಿದೆ. ಇದು, ಬುಕ್ಕಸಾಗರ ಗ್ರಾಮದ ಬಳಿಯಲ್ಲಿ ತುಂಗಭದ್ರೆಗೆ ಅಡ್ಡಲಾಗಿ ನಿರ್ಮಿಸಿರುವ ಕಟ್ಟೆ, ಇದನ್ನು ಸಹ ತುರ್ತಾ ಆಣೆಕಟ್ಟು, ಕಟ್ಟಿರುವ ರೀತಿಯಲ್ಲಿಯೇ ಕಟ್ಟಿದ್ದಾರೆ. ಮತ್ತೊಂದು ಆಣೆಕಟ್ಟು ಇಂದಿನ ರಾಯಚೂರು ಜಿಲ್ಲೆಯ ಹಿರೇಜಂತುಕಲ್ಲು ಎಂಬಲ್ಲಿ ಕಟ್ಟಲಾಗಿದೆ. ಇವೆರಡೂ ಕಟ್ಟೆಗಳು ಒಂದೇ ಗೆರೆಯಲ್ಲಿರುವಂತೆ ಇದ್ದರೂ, ಇವುಗಳನ್ನು ಪೂರ್ಣವಾಗಿ ಸೇರಿಸಿಲ್ಲ. ಎರಡೂ ಕಟ್ಟೆಗಳು ನದಿಯ ಅರ್ಧಕ್ಕೆ ಬಂದು ನಿಲ್ಲುತ್ತವೆ. ಇದರಿಂದಾಗಿ ಅವುಗಳು ಪೂರ್ಣವಾಗಿ ನೀರನ್ನ ತಡೆಹಿಡಿಯುವುದಿಲ್ಲ. ಈ ಕಾರಣದಿಂದ ಇಲ್ಲಿ ಹೂಳು ಶೇಖರವಾಗುವುದಿಲ್ಲ ಮತ್ತು ಕಟ್ಟೆಗೆ ಯಾವುದೇ ವಿಧದಲ್ಲಿ ಧಕ್ಕೆ ಉಂಟಾಗುವುದಿಲ್ಲ. ಈ ಕಟ್ಟೆಯು ೨,೨೫೦ ಅಡಿಗಳಷ್ಟು ಉದ್ದವಾಗಿದೆ. ಬಳ್ಳಾರಿ ಜಿಲ್ಲೆಯ ಕಡೆಯಿಂದ ೩,೬೦೦ ಅಡಿಗಳಷ್ಟು ಉದ್ದ ಹಾಗೂ ರಾಯಚೂರು ಕಡೆಯಿಂದ ಇದರ ಅಗಲವು ೪ ಅಡಿಗಳಾಗಿವೆ. ಆಣೆಕಟ್ಟಿನಿಂದ ಹೊರಡುವ ಕಾಲುವೆಗೆ ಗಂಗಾವತಿ ಮೇಲ್ದಂಡೆ ಕಾಲುವೆಯಿಂದ ಕರೆಯುತ್ತಾರೆ. ಇದು ಸುಮಾರು ಐದು ಹಳ್ಳಿಗಳಿಗೆ ಮತ್ತು ೨,೦೭೫ ಎಕರೆಗಳಿಗೆ ನೀರನ್ನು ಪೂರೈಸುತ್ತದೆ.

ಆಕರ
ಹಂಪಿ ಪರಿಸರದ ಕೆರೆಗಳು, ೨೦೦೧, ಕನ್ನಡ ವಿಶ್ವವಿದ್ಯಾಲಯ, ಹಂಪಿ ಆಧರಿಸಿದೆ.

 

[1] ವಾಸುದೇವನ್ ಸಿ.ಎಸ್‌., ಹಂಪಿ ಪರಿಸರದ ಕೆರೆಗಳು, ಪು.೬೧-೭೫, ಧ್ರುವನಾರಾಯಣ ಎಂ. (ಅನು.) ಕೊಟ್ರಯ್ಯ ಸಿ.ಟಿ.ಎಂ. ಮೂಲ, ವಿಜಯನಗರ ಸಾಮ್ರಾಜ್ಯದ ನೀರಾವರಿ ವ್ಯವಸ್ಥೆ, ಪು.೧೭೨-೧೭೫

[2] ವಿಜಯನಗರ ಪ್ರೋಗ್ರೆಸ್‌ಆಫ್ ರಿಸಿರ್ಚ್‌, ೧೯೮೪-೮೭, ಶಾಸನ ಸಂ. ೧, ಪು. ೨೭

[3] ಡಾಮ್‌ನಿಕ್ ಜೆ. ಡೆವಿಸನ್ ಜೆನ್‌ಕಿನ್ಸ್‌, ದಿ ಇರ್ರಿಗೇಶನ್ ಅಂಡ್‌ವಾಟರ್ ಸಪ್ಲೆ ಸಿಸ್ಟಮ್ಸ್ ಆಫ್ ವಿಜಯನಗರ, ಪು.೬೨

[4] ವಾಸುದೇವನ್ ಸಿ.ಎಸ್‌., ಪೂರ್ವೋಕ್ತ, ಪು. ೬೪-೬೫, ಹಂಪಿ ಪರಿಸರದ ಕೆರೆಗಳು, ೨೦೦೧ ಆಧರಿಸಿದೆ.