ಜಲಾನಯನ ಪ್ರದೇಶ (ಕ್ಯಾಚ್‌ಮೆಂಟ್‌ಪ್ರದೇಶ)

ಈ ಪ್ರದೇಶವು ಸಾಮಾನ್ಯವಾಗಿ ಕೆರೆಯ ಭಾಗಕ್ಕಿಂತ ಎತ್ತರದಲ್ಲಿರುತ್ತದೆ. ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಅಧಿಕ ಮಳೆಯಾಗುತ್ತದೆ ಮತ್ತು ಇಲ್ಲಿ ಬೀಳುವ ಮಳೆಯ ನೀರು ಹರಿದು ಬಂದು ಕೆರೆಯನ್ನು ಸೇರುತ್ತದೆ. ಸಾಮಾನ್ಯವಾಗಿ ಗುಡ್ಡಗಳ ನಡುವಿನ ಕಣಿವೆ ಪ್ರದೇಶಕ್ಕೆ ಜಲಾನಯನ ಪ್ರದೇಶವೆಂದು ಹೆಸರು. ಇಲ್ಲಿರುವ ಕಾಡುಗಳು ಮತ್ತು ಸಸ್ಯರಾಶಿಗಳು, ಮಳೆಯ ನೀರನ್ನು ತಮ್ಮ ಬೇರುಗಳಲ್ಲಿ ಹಾಗೂ ಒಣಗಿದ ಎಲೆಗಳ ನಡುವಿನ ಪದರಗಳಲ್ಲಿ ಮತ್ತು ಮಳೆಯ ನೀರನ್ನು ತಮ್ಮ ಬೇರುಗಳಲ್ಲಿ ಹಾಗೂ ಒಣಗಿದ ಎಲೆಗಳ ನಡುವಿನ ಪದರಗಳಲ್ಲಿ ಮತ್ತು ಮಣ್ಣಿನಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತವೆ. ಕಾಲಕ್ರಮದಲ್ಲಿ ಈ ಪ್ರದೇಶದಲ್ಲಿ ಸಂಗ್ರಹಗೊಂಡ ನೀರು ಝರಿಯಂತೆ ಹರಿದುಬಂದ ನದಿಗಳಾಗಿ ಮಾರ್ಪಾಡಾಗುತ್ತದೆ. ಕೆಲವು ಝರಿಗಳು ಹಳ್ಳಗಳಾಗ ಕೆರೆಯ ಪ್ರದೇಶಕ್ಕೆ ಬಂದು ಸೇರುತ್ತದೆ.

ಸಾಮಾನ್ಯವಾಗಿ ಈ ರೀತಿಯಾಗಿ ಹರಿದುಬರುವಂತಹ ನೀರಿಗೆ ಅಡ್ಡಲಾಗಿ ಕಟ್ಟೆಯನ್ನು ನಿರ್ಮಿಸಿ ಕೆರೆಯನ್ನು ಕಟ್ಟುತ್ತಾರೆ. ಇದರಲ್ಲಿ ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ, ಮಳೆ ಬೀಳುವ ಪ್ರದೆಶ ಮತ್ತು ಕೆರೆಗೆ ಹರಿದುಬಂದು ಸೇರುವ ನೀರಿನ ಪ್ರಮಾಣಗಳು ಪರಸ್ಪರ ಸಂಬಂಧಗಳನ್ನು ಹೊಂದಿರುತ್ತದೆ.

ಕೆರೆಯ ತಳ (ಟ್ಯಾಂಕ್‌ಬೆಡ್‌)

ಕೆರೆಯ ತಳ ಎಂದು ಗುರುತಿಸುವ ಭಾಗವು ಸಾಮಾನ್ಯ ಭೂಪ್ರದೇಶವಾಗಿದ್ದು, ಇಲ್ಲಿ ನೀರು ಸಂಗ್ರಹಗೊಳ್ಳುತ್ತದೆ. ಕೆರೆಯು ಈ ಭಾಗದಲ್ಲಿ ಚಿಕ್ಕ ಹಳ್ಳಿಗಳಿಂದ ನೀರು ಹರಿದು ಬಂದು ಶೇಖರಗೊಳ್ಳುತ್ತದೆ. ಹೆಚ್ಚು ಮಳೆಯಾಗಿ ಅಧಿಕ ನೀರು ಬಂದಂತೆ, ನೀರಿನ ಹರವು ವಿಸ್ತಾರಗೊಳ್ಳುವುದರೊಂದಿಗೆ, ಕೆರೆಯ ತುಂಬುತ್ತಾ ಹೋಗುತ್ತದೆ. ಭೂಮಟ್ಟದಿಂದ ಕೆರೆ ಕಟ್ಟೆಯ ಗರಿಷ್ಠಮಟ್ಟ ಮುಟ್ಟಿದೆಯೆನ್ನುತ್ತಾರೆ. ಕನಿಷ್ಠ ಮಟ್ಟದ ನೀರು ನಿಲ್ಲುವ ಕೆರೆಯ ಭೂಭಾಗಕ್ಕೆ ಕೆರೆಯ ತಳ ಎಂದು ಹೆಸರು. ಕೆರೆಯಲ್ಲಿ ಒಬ್ಬ ವ್ಯಕ್ತಿಯ ಆಳೆತ್ತರ ಎತ್ತರದಷ್ಟೇ ನೀರು ಇರಬೇಕು ಮತ್ತು ತುಂಬಬೇಕು. ಅದಕ್ಕಿಂತ ಹೆಚ್ಚಿನ ನೀರು ಬಂದ ಪಕ್ಷದಲ್ಲಿ ಆ ನೀರು ಕೋಡಿಯ ಮೂಲಕ ಹರಿದು ಹೋಗಬೇಕು ಎಂದು ತಿಮ್ಮಲಾಪುರದ ಕೆರೆಯ ಸಮೀಪದಲ್ಲಿ ದೊರೆತಿರುವ ಶಾಸನವು ದಾಖಲಿಸಿರುವುದು ಪ್ರಶಂಸನಾರ್ಹ.[1] ಇದರಿಂದ ಒಂದು ಕೆರೆಯಲ್ಲಿ ಗರಿಷ್ಠ ಮಟ್ಟದ ನೀರಿನ ಪ್ರಮಾಣ ಎಷ್ಟಿರಬೇಕು ಎಂಬುದರ ಬಗೆಗೆ ತಿಳಿದುಬರುತ್ತದೆ. ಮತ್ತೊಂದು ಅಂಶವು, ಆ ಗರಿಷ್ಠ ಮಟ್ಟಕ್ಕಿಂತ (ಆಳೆತ್ತರ) ಅಧಿಕ ನೀರು ಬಂದಲ್ಲಿ ಕೆರೆ ಏರಿಗೆ ಅಪಾಯವಾಗಬಹುದು. ಈ ಪ್ರದೇಶದಲ್ಲಿ ಮೂರು ಕೆರೆಗಳು ಇದ್ದು, ಅವುಗಳು ಒಂದಕ್ಕೊಂದು ಹೊಂದಿಕೊಂಡಿವೆ. ಹೆಚ್ಚುವರಿ ನೀರು ಒಂದು ಕಡೆಗೆ ಹರಿದುಬಂದರೆ ಆ ನೀರು ಎರಡನೆಯ ಕೆರೆಯಲ್ಲಿ ಸಂಗ್ರಹವಾಗುತ್ತದೆ.

ಆಯಕಟ್ಟು ಅಥವಾ ಅಚ್ಚುಕಟ್ಟು ಪ್ರದೇಶ

ಕೆರೆಯ ಅಥವಾ ನೀರು ಸಂಗ್ರಹವಾಗುವ ವಿರುದ್ಧ ದಿಕ್ಕಿನ ಪ್ರದೇಶಕ್ಕೆ ಆಯಕಟ್ಟು ಅಥವಾ ಅಚ್ಚುಕಟ್ಟು ಪ್ರದೇಶವೆಂದು ಹೆಸರು. ಸಾಮಾನ್ಯವಾಗಿ ಈ ಪ್ರದೇಶದಲ್ಲಿಯೇ ವ್ಯವಸಾಯವನ್ನು ಮಾಡುತ್ತಾರೆ. ಕೆರೆಯ ನೀರಾವರಿಗೊಳಪಟ್ಟ, ಅಂದರೆ ಕೃಷಿ ಮಾಡಲ್ಪಡುವ, ಪ್ರದೇಶಕ್ಕೆ ಆಯಕಟ್ಟು ಅಥವಾ ಅಚ್ಚುಕಟ್ಟು, ಪ್ರದೇಶವೆಂದು ಹೆಸರು. ಆಯಕಟ್ಟು ಮತ್ತು ಅಚ್ಚುಕಟ್ಟು ಎಂಬ ಪದಗಳ ಬಳಕೆಯನ್ನು ವಿಜಯನಗರ ಕಾಲದ ಅನೇಕ ಶಾಸನಗಳಲ್ಲಿ ಕಾಣಬಹುದು. ಕೆರೆಯ ಆಯಕಟ್ಟು ಪ್ರದೇಶವನ್ನು ಮತ್ತು ಅದರ ಗುಣಮಟ್ಟವನ್ನು ಒಂದು ಶಾಸನವು ದಾಖಲಿಸುತ್ತದೆ. ಈ ಶಾಸನದ ತೇದಿಯು ಕ್ರಿ.ಶ. ೧೪೯೭ ಆಗಿದ್ದು, ಇದು ಗುಂಡನಹಳ್ಳಿಯಲ್ಲಿರುವ ಹಿರಿಯಕೆರೆಯನ್ನು ಕುರಿತು ಪ್ರಸ್ತಾಪಿಸುತ್ತಾ, ಆ ಕೆರೆಯ ಹೆಸರು ಕನ್ಯಾಕೆರೆಯೆಂದು ತಿಳಿಸುತ್ತದೆ. ಈ ಕೆರೆಯನ್ನು ನರಸಿಂಹದೇವನೆಂಬುವನು ತನ್ನ ಸ್ವಂತ ಖರ್ಚಿನಲ್ಲಿ ಕಟ್ಟಿಸಿದನು. ಕೆರೆಗೆ ಬೇಕಾಗುವ ವಸ್ತುಗಳ ಗುಣಮಟ್ಟವನ್ನು ಪರೀಕ್ಷಿಸಿ ಅವುಗಳನ್ನು ಅಲ್ಲಿ ಬಳಸಿದ್ದಾನೆಂದು ತಿಳಿಸಿರುವುದು ವಿಶೇಷವಾದ ಸಂಗತಿ. ಅವನು ಕೆರೆಯ ಏರಿಯನ್ನು ಮಣ್ಣಿನಿಂದ ಬಲಪಡಿಸುವುದರೊಂದಿಗೆ ಕಲ್ಲಿನ ಕಟ್ಟುವಾಡವನ್ನು ಸಹ ನಿರ್ಮಿಸಿ ತೂಬಿಗೆ ಒಳ್ಳೆಯ ಕಲ್ಲುಗಳನ್ನು ಬಳಸಿ ಅದನ್ನು ಇಟ್ಟಿಗೆ ಮತ್ತು ಗಚ್ಚಗಾರೆಯಿಂದ ಮತ್ತಷ್ಟು ಭದ್ರಪಡಿಸಿದನೆಂದು ಶಾಸನವು ಉಲ್ಲೇಖಿಸುತ್ತದೆ.[2]

ಈ ಶಾಸನವು ಮತ್ತಷ್ಟು ಕುತೂಹಲಕಾರಿಯಾದ ಸಂಗತಿಗಳನ್ನು ಹೊರಗೆಡವುತ್ತದೆ. ಆಯಕಟ್ಟಿನ ಪ್ರದೇಶವನ್ನು ಸಮಾನಾಗಿಸುವ ಕಾರ್ಯದಿಂದ ಕೆರೆಯ ನೀರು ಆಯಕಟ್ಟಿಗೆ ಸಮರ್ಪಕವಾಗಿ ಒದಗಿಸುತ್ತದೆ ಎಂದು ಸಹ ತಿಳಿಸುತ್ತದೆ. ಇದಲ್ಲದೆ ಆಯಕಟ್ಟಿನ ಪ್ರದೇಶವನ್ನು ಅದರ ಗುಣದಂತೆ ಉತ್ತಮ, ಮಧ್ಯಮ ಮತ್ತು ಅಧಮ ಎಂದು ವಿಂಗಡಿಸಿ, ಆ ಕೆರೆಯ ನೀರನ್ನು ಸಮರ್ಪಕವಾಗಿ ಹಂಚಿಕೊಳ್ಳಬೇಕು ಎಂದು ಈ ಶಾಸನವು ಹೇಳುತ್ತದೆ.[3] ಕಣಿವೆ ತಮ್ಮಲಾಪುರದ ಹಿರೇಕೆರೆ ಆಯಕಟ್ಟಿನ ಪ್ರದೇಶವನ್ನು ಕುರಿತು ಹೇಳುವುದಾದರೆ ಅದು ಮಧ್ಯಮ ವರ್ಗದ ಆಯಕಟ್ಟು ಎಂದು ಹೇಳಬಹುದು. ಎಕೆಂದರೆ, ಆಯಕಟ್ಟು ಪ್ರದೇಶದ ಸಮೀಪವೇ ಒಂದು ಚಿಕ್ಕ ಗುಡ್ಡವಿದೆ. ಪೊರುಮಿಲ್ಲ ಮತ್ತು ಗುಂಡನಹಳ್ಳಿಯ ಶಾಸನಗಳಂತೆ ಆಯಕಟ್ಟು ಪ್ರದೇಶವು ಸಮತಟ್ಟಾಗಿರಬೇಕು. ಹಿರೇಕೆರೆ ಆಯಕಟ್ಟಿನಲ್ಲಿ ಸಮನಾದ ಭೂಭಾಗವು ಇಲ್ಲದ ಕಾರಣ, ನಾವು ಈ ಆಯಕಟ್ಟು ಪ್ರದೇಶವನ್ನು ಮಧ್ಯಮ ವರ್ಗವೆಂದು ನಿಸ್ಸಂಶಯವಾಗಿ ಗುರುತಿಸಬಹುದು. ಈ ಕೆರೆಯ ಅತ್ಯಂತ ದೊಡ್ಡದಾಗಿದ್ದು, ಇಂದು ಅತ್ಯಂತ ದುಸ್ಥಿತಿಯಲ್ಲಿದೆ.

ಕೆರೆಯ ಏರಿ

ಏರಿಯು ಕೆರೆಯ ಒಂದು ಪ್ರಮುಖ ಭಾಗ. ಇದು ಕೆರೆಯಲ್ಲಿ ಸಂಗ್ರಹವಾಗುವ ನೀರನ್ನು ತಡೆಯುತ್ತದೆ. ಆದುದರಿಂದ ಈ ಭಾಗವು ಅತ್ಯಂತ ಗಟ್ಟಿಯಾಗಿರಬೇಕಾಗುತ್ತದೆ. ಈ ಭಾಗವು ಮಣ್ಣಿನಿಂದ ಕಟ್ಟಲ್ಪಡುತ್ತದೆ. ಮಣ್ಣನ್ನು ಹಾಕಿ, ನೀರಿನಿಂದ ನೆನೆಸಿ ಗಟ್ಟಿಮಾಡಿ, ಅದರ ಮೇಲೆ ಮತ್ತಷ್ಟು ಮಣ್ಣನ್ನು ಹಾಕುತ್ತಾ ಹೋಗುತ್ತಾರೆ. ಈ ರೀತಿ ಪದೇ ಪದೇ ಮಾಡುವುದರಿಂದ ಮಣ್ಣು ಚೆನ್ನಾಗಿ ಕೂಡಿಕೊಂಡು ಗಟ್ಟಿಯಾಗುತ್ತದೆ. ಬಹುತೇಕವಾಗಿ ಕೆರೆಯ ತಳಭಾಗದ ಮಣ್ಣನ್ನು ಅಗೆದು ಏರಿಕಟ್ಟಲು ಉಪಯೋಗಿಸುತ್ತಾರೆ. ಇದರಿಂದ ಕೆರೆಯ ತಳದಲ್ಲಿ ಹೆಚ್ಚು ನೀರು ಸಂಗ್ರಹಗೊಳ್ಳುತ್ತದೆ. ಸಾಮಾನ್ಯವಾಗಿ ಕೆರೆ ಏರಿಯ ತಳ ಭಾಗವು ವಿಶಾಲವಾಗಿದ್ದು ಅದು ಮೇಲಕ್ಕೆ ಹೋದಂತೆ ಕಿರಿದಾಗುತ್ತಾ ಹೋಗುತ್ತದೆ. ಕೆರೆಯ ಏರಿಯ ನೀರಿರುವ ಭಾಗಕ್ಕೆ ಸಾಮಾನ್ಯವಾಗಿ ಕಲ್ಲಿನ ಜೋಡಣೆಯನ್ನು ಹೊಂದಿಸಿರುತ್ತಾರೆ. ಇದಕ್ಕೆ ಕಟ್ಟುವಾಡ ಅಥವಾ ಕಟುವಾಡವೆಂದು ಹೆಸರು. ಕಲ್ಲಿನ ಜೋಡಣೆಯು ಇದ್ದ ಪಕ್ಷದಲ್ಲಿ ಏರಿಗೆ ಆಗುವ ಧಕ್ಕೆಯನ್ನು ಮತ್ತು ಮಣ್ಣು ಕೊರತೆಯನ್ನು ಸಹ ಸಾಕಷ್ಟು ಮಟ್ಟಿಗೆ ತಡೆಯುತ್ತದೆ. ಕೆಲವೊಮ್ಮೆ ಏರಿಯ ಎರಡೂ ಕಡೆಗಳಲ್ಲಿ ಕಟ್ಟುವಾಡಗಳನ್ನು ಗಮನಿಸಬಹುದು. ಏರಿಯ ಆಯಕಟ್ಟಿನ ಭಾಗವು ಇಳಿಜಾರಾಗಿರುತ್ತದೆ. ಈ ಇಳಿಜಾರು ರಚನೆಯು ನೀರಿನ ಒತ್ತಡವನ್ನು ವಿರುದ್ಧ ದಿಕ್ಕಿನಿಂದ ತಡೆದು ಏರಿಗೆ ಸಾಕಷ್ಟು ಬಲವನ್ನು ಕೊಡುವಲ್ಲಿ ಸಹಾಯಕವಾಗಿರುತ್ತದೆ. ಇಳಿಜಾರು ಭಾಗದಲ್ಲಿ ಕೆಲವು ಸಸ್ಯಗಳನ್ನು ಬೆಳೆಸಿ ಅದನ್ನು ಮತ್ತಷ್ಟು ಬಲಪಡಿಸುವ ಪದ್ಧತಿಯು ವಾಡಿಕೆಯಲ್ಲಿ ಇರುವುದನ್ನು ಗಮನಿಸಬಹುದು.

ದರೋಜಿ ಕೆರೆಯ ಏರಿಯು ಸುಮಾರು ೩.೫ ಕಿ.ಮೀ. ಉದ್ದವಾಗಿದೆ. ಕಮಲಾಪುರದ ಕೆರೆಯು ೩.೫ ಕಿ.ಮೀ. ಉದ್ದವಾಗಿದೆ. ಕೆರೆಯ ಏರಿಯನ್ನು ಯಾವಾಗಲೂ ಲಂಬವಾಗಿ ಕಟ್ಟದೇ, ಅಂಕುಡೊಂಕಾಗಿಯೇ ಕಟ್ಟುತ್ತಾರೆ. ಇದರಿಂದ ನೀರಿನಿಂದ ಏರಿಗೆ ಬೀಳುವ ಒತ್ತಡವು ಸಮನಾಗಿ ಹಂಚಿಹೋಗುತ್ತದೆ ಮತ್ತು ಏರಿ ಒಡೆದಲ್ಲಿ ಅದನ್ನು ಸರಿಪಡಿಸುವುದು ಸಹ ಸುಲಭ. ಆದ್ದರಿಂದ ಈ ರೀತಿಯ ರಚನೆಯು ವೈಜ್ಞಾನಿಕವಾಗಿ ಅವಶ್ಯವು.

ಕಾಲುವೆ

ಕಾಲುವೆಯು ಕೆರೆಯ ಇನ್ನೊಂದು ಭಾಗವಾಗಿದೆ. ಕೆರೆಯ ನೀರನ್ನು ನಿಯಂತ್ರಿಸಿ ಆಯಕಟ್ಟು ಪ್ರದೇಶಕ್ಕೆ ನೀರು ಹಾಯಿಸುವ ಮಾರ್ಗಕ್ಕೆ ಕಾಲುವೆ ಎಂದು ಹೆಸರು. ಕಾಲುವೆಗಳನ್ನು ನಾವು ಎರಡು ರೀತಿಯಾಗಿ ವರ್ಗೀಕರಿಸಬಹುದು. ಅದರಂತೆ ಮೊದಲನೆಯದು ಕೆರೆಗೆ ನೀರು ಬರುವ ಕಾಲುವೆ (Inlet canal) ಮತ್ತು ಎರಡನೆಯದು ಕೆರೆಯಿಂದ ಆಯಕಟ್ಟು, ಪ್ರದೇಶಕ್ಕೆ ನೀರು ಹಾಯಿಸುವ ಕಾಲುವೆಗಳು (Outlet canal) ಕೆರೆಗೆ ನೀರು ಬರುವ ಕಾಲುವೆಯನ್ನು ಕೆಲವೊಮ್ಮೆ, ವಿಜಯನಗರ ಪೂರ್ವಕಾಲದಲ್ಲಿ ಅತ್ಯಂತ ಕಲಾತ್ಮಕವಾಗಿ ಯೋಜಿಸುತ್ತಿದ್ದರು. ನೀರನ್ನು ಕಾಲುವೆಗಳ ಮೂಲಕ ಏರಿಯ ಕೆಳಭಾಗದಿಂದ ಹಾಯಿಸುತ್ತಿದ್ದರು. ಇವುಗಳಿಗೆ ತೂಬುಗಳನ್ನು ಇರಿಸಿ ಕೆರೆಯ ನೀರನ್ನು ಸಮರ್ಪಕವಾಗಿ ನಿಯಂತ್ರಿಸುತ್ತಿದ್ದರು. ಕಾಲುವೆಯ ಕೆರೆ ಏರಿಯು ಕೆಳಗಡೆಯಿಂದ ಹಾದುಬರುತ್ತದೆ. ಇವುಗಳನ್ನು ಸಹ ಕಲ್ಲುಗಳಿಂದ ಕಟ್ಟಲಾಗಿರುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ನಾಲೆಗೆ ಮರವನ್ನು ಬಳಸುತ್ತಿದ್ದರು. ಹತ್ತಿರದ ದೇವಾಲಯಕ್ಕೆ ನೀರನ್ನು ಹಾಯಿಸುವ ನಾಲೆಗೆ ಮರವನ್ನು ಬಳಸಿದ್ದರೆಂದು ತುಮಕೂರು ಜಿಲ್ಲೆಯ ರಾಮಚಂದ್ರನಹಳ್ಳಿಯ ಶಾಸನವು ತಿಳಿಸುತ್ತದೆ.[4] ಒಂದು ಕೆರೆಗೆ ಒಂದು, ಎರಡು, ಮೂರು ಅಥವಾ ನಾಲ್ಕು ಕಾಲುವೆಗಳು ಸಹ ಇರುತ್ತವೆ. ಅವುಗಳ ವಿವಿಧ ಎತ್ತರಗಳಲ್ಲಿ ಇರುತ್ತಿದ್ದವು. ಕೆರೆಯು ತುಂಬಿದ್ದಾಗ ಮೇಲ್ಮಟ್ಟದಲ್ಲಿದ್ದ ಕಾಲುವೆಯಿಂದ ನೀರನ್ನು ಹಾಯಿಸಿಕೊಳ್ಳಲಾಗುತ್ತಿತ್ತು. ನೀರು ಕೆಳಮಟ್ಟಕ್ಕೆ ಬಂದಾಗ ಕೆಳಮಟ್ಟದ ಕಾಲುವೆಗಳಿಂದ ನೀರನ್ನು ಹಾಯಿಸಲಾಗುತ್ತಿತ್ತು. ಈ ವಾಡಿಕೆಯು ಇಂದಿಗೂ ಪ್ರಚಲಿತವಾಗಿದೆ.

ತೂಬುಗಳು

ತೂಬುಗಳು ಕೆರೆಯ ಒಂದು ಮುಖ್ಯ ಅವಿಭಾಜ್ಯ ಅಂಗ. ತೂಬುಗಳೇ ಕೆರೆಯ ನೀರನ್ನು ಹೊರಗೆ ಹೋಗದಂತೆ ತಡೆ ಹಿಡಿದಿಡುವ ಸಾಧನಗಳು. ಅವುಗಳನ್ನು ನಾವು ಇಂದಿನ ನಲ್ಲಿಗಳಿಗೆ ಹೋಲಿಸಬಹುದು. ತೂಬುಗಳನ್ನು ಸಾಮಾನ್ಯವಾಗಿ ಕಲ್ಲಿನಿಂದ ರಚಿಸಿದ್ದು, ಎರಡು ಅಥವಾ ನಾಲ್ಕು ಕಂಬಗಳಿಂದ ಕೂಡಿರುತ್ತದೆ. ಎರಡು ಕಂಬಗಳ ನಡುವಿನಲ್ಲಿ ಒಂದು ಅಡ್ಡ ಕಲ್ಲನ್ನು ಇರಿಸಲಾಗುತ್ತದೆ. ನಂತರ ಉದ್ದವಾದ ಕಲ್ಲುಗಳ ಮೇಲ್ಭಾಗದಲ್ಲಿ ಅಡ್ಡಗಲ್ಲನ್ನು ಹಾಸಲಾಗುತ್ತದೆ. ಈ ಎರಡು ಅಡ್ಡಗಲ್ಲುಗಳು ನಡುವೆ ಸುಮಾರು ೨೫ ಸೆ.ಮೀ. ವ್ಯಾಸದ ರಂಧ್ರವಿರುತ್ತದೆ. ಇದರ ಮೂಲಕವಾಗಿ ರಂಧ್ರದ ಅಳತೆಗೆ ತಕ್ಕ ವ್ಯಾಸವುಳ್ಳ ಮರದ ತುಂಡನ್ನು ಇಟ್ಟು ರಂಧ್ರವನ್ನು ಮುಚ್ಚಲಾಗುತ್ತದೆ. ಆ ಮರದ ದಿಮ್ಮಿಯನ್ನು ಮೇಲೆಕ್ಕೆತ್ತಿದಾಗ ನೀರು ಕಾಲುವೆಯ ಮುಖಾಂತರ ಹರಿದು ಆಯಕಟ್ಟು ಪ್ರದೇಶಕ್ಕೆ ಹೋಗುತ್ತದೆ. ಮರದ ಒಂದು ವಿಶೇಷಯೇನೆಂದರೆ, ಅದು ನೀರಿನಲ್ಲಿ ನೆನೆದಾಗ, ನೀರು ಕುಡಿದು ಹಿಗ್ಗುತ್ತದೆ. ಈ ರೀತಿಯಾಗಿ ಹಿಗ್ಗಿದ ಮರದ ತುಂಡು ರಂಧ್ರದಲ್ಲಿ ಬಿಗಿಯಾಗಿ ಕುಳಿತು ಹೊರ ಕಾಲುವೆಯ ಮುಖಾಂತರ ನೀರು ಹರಿಯುವುದನ್ನು ಆದಷ್ಟು ಮಟ್ಟಿಗೆ ತಡೆಯುತ್ತದೆ. ಇಂದು, ಸಹ ಅನೇಕ ಕಡೆಗಳಲ್ಲಿ ಮರವನ್ನು ಬಳಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಲೋಹವನ್ನು ಬಳಕೆ ಮಾಡಲಾಗುತ್ತಿದೆ.

ತೂಬುಗಳಲ್ಲಿ ಎರಡು ವಿಧದ ತೂಬುಗಳನ್ನು ಗುರುತಿಸಲಾಗಿದೆ. ಅವುಗಳು ೧. ತೂಬು ಮತ್ತು ೨. ಗಡಿಗತೂಬು. ಮೊದಲು ಉಲ್ಲೇಖಿಸಿದಂತೆ ತೂಬು ಸಾಮಾನ್ಯವಾಗಿ ಎರಡು ಅಥವಾ ನಾಲ್ಕು ಕಂಬಗಳಿಂದ ಕೂಡಿರುತ್ತದೆ. ತೂಬಿನ ಮೇಲ್ಭಾಗದಲ್ಲಿರುವ ಕಲ್ಲಿನ ಮೇಲೆ ಸಾಮಾನ್ಯವಾಗಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿರುತ್ತದೆ. ಇದರಿಂದ ಆ  ಕೆರೆಯನ್ನು ವಿಜಯನಗರ ಕಾಲದ ಕೆರೆಯೆಂದು ಗುರುತಿಸಬಹುದಾಗಿದೆ. ಗಡಿಗೆಯ ಆಕಾರದಲ್ಲಿರುವ ತೂಬಿಗೆ ಗಡಿಗತೂಬು ಎಂದು ಹೆಸರು. ಇವು ಕೆಲವು ಕಡೆಗಳಲ್ಲಿ ಇಂದಿಗೂ ಬಳಕೆಯಲ್ಲಿವೆ. ವೃತ್ತಾಕಾರದ ಅಥವಾ ಪೀಪಾಯಿಯಂತೆ ಇರುವ ಗೂಬಹಳ ನಡುವಿನಲ್ಲಿ ಮರದ ತುಂಡನ್ನು ಹೊಂದಿಸಿ ನೀರನ್ನು ನಿಯಂತ್ರಿಸುತ್ತಾರೆ. ದರೋಜಿ ಕೆರೆಯಲ್ಲಿರುವ ನಾಲ್ಕು ತೂಬುಗಳೂ ಸಹ ನಾಲ್ಕು ಕಂಬಂಗಳಿಂದ ಕೂಡಿರುವಂತಹ ತೂಬುಗಳೇ ಆಗಿವೆ. ಜಂಭಯ್ಯನ ಕೆರೆಯಲ್ಲಿ ಗಡಿಗತೂಬು ಇರುವುದನ್ನು ಕಾಣಬಹುದು.

ತೂಬುಗಳನ್ನು ಕಾಲುವೆಗಳಿಗೆ ಅನುಗುಣವಾಗಿ ವಿವಿಧ ಎತ್ತರಗಳಲ್ಲಿ ಅಳವಡಿಸಲಾಗುತ್ತದೆ. ಒಮದು ಶಾಸನವು ನಡುವಣತೂಬು ಎಂದು ಉಲ್ಲೇಖಿಸುತ್ತದೆ.[5] ಆದ್ದರಿಂದ ಆ ಕೆರೆಗೆ ಅನೇಕ ತೂಬುಗಳು ವಿವಿಧ ಎತ್ತರಗಳಲ್‌ಇ ಇದ್ದಿರಬೇಕು ಎಂಬುದು ಸ್ಪಷ್ಟವಾಗುತ್ತದೆ. ಕೆರೆಯ ವಿಸ್ತೀರ್ಣತೆ, ನೀರು ಸಂಗ್ರಹ ಸಾಮರ್ಥ್ಯವನ್ನು ಗಮನದಲ್ಲಿರಿಸಿಕೊಂಡು, ತೂಬುಗಳನ್ನು ಅಳವಡಿಸಿಕೊಳ್ಳಲಾಗುವುದು, ಕಮಲಾಪುರ ಮತ್ತು ದರೋಜಿ ಕೆರೆಗಳಿಗೆ ನಾಲ್ಕು ತೂಬುಗಳಿವೆ.

ತಬೂಗಳನ್ನು ಸಾಮಾನ್ಯವಾಗಿ ಕೆರೆ ಏರಿಯಿಂದ ಸುಮಾರು ಹತ್ತರಿಂದ ಹದಿನೈದು ಅಡಿ ದೂರದಲ್ಲಿ ಇರಿಸುವುದು ವಾಡಿಕೆಯಾಗಿದ್ದಿತು. ಇದರಿಂದ ಕಾಲುವೆ, ತೂಬು ಮತ್ತು ಏರಿಗೆ ಯಾವುದೇ ವಿಧವಾದ ಅಪಾಯವಿರುವುದಿಲ್ಲ. ಇಂದಿನ ಕಾಲದಲ್ಲಿ ತೂಬುಗಳನ್ನು ಏರಿಗಳಲ್ಲಿಯೇ ಅಳವಡಿಸಲಾಗುತ್ತಿದೆ. ತೂಬುಗಳಿಂದ ನೀರು ಹಾಯಿಸುವ ಕಾರ್ಯವನ್ನು ನೀರುಗಂಟಿಗಳು ನಿರ್ವಹಿಸುತ್ತಿದ್ದರು. ನೀರು ಹಾಯಿಸಬೇಕೆಂದಾಗ ಅವರು ಕೆರೆಯ ನೀರಿನಲ್ಲಿ ಈಜಿಕೊಂಡು ಹೋಗಿ ತೂಬಿನ ಮರವನ್ನು ತೆಗೆದು ನೀರನ್ನು ಹಾಯಿಸುತ್ತಿದ್ದರು. ಆಯಕಟ್ಟಿನ ಪ್ರದೇಶಕ್ಕೆ ಬೇಕಾಗುವಷ್ಟು ನೀರು ಹಾಹಿಸಿ ನಂತರ ಮರವನ್ನು ತೂಬಿನ ನಿಯಂತ್ರಿಸುತ್ತಿದ್ದರು. ಪ್ರಸ್ತುತ, ಈ ರೀತಿಯಾಗಿ ಕೆರೆಯ ನೀರನ್ನು ಹಾಯಿಸುವ ಪ್ರಮಾಣವನ್ನು ಒಂದು ಸಲುಕ್ಕಿನೀರು ಅಥವಾ ಎರಡು ಸಲುಕ್ಕಿನೀರು ಎಂದು ತಿಮ್ಮಲಾಪುರದ ನೀರುಗಂಟಿಗಳು ತಿಳಿಸುತ್ತಾರೆ. ಇವರ ಸುಪರ್ದಿಯಲ್ಲಿ ಮೂರು ಕೆರೆಗಳಿವೆ.

ಈ ಸಂದರ್ಭದಲ್ಲಿ ಬೆಂಗಳೂರು ಜಿಲ್ಲೆಯ ಅರಳಲು ಗ್ರಾಮದ ಎರಡನೆಯ ಹರಿಹರನ ಕಾಲದ ಶಾಸನವನ್ನು ಇಲ್ಲಿ ಉಲ್ಲೇಖಿಸುವುದು ಉಚಿತವಾಗುತ್ತದೆ. ಮಾರಸಮುದ್ರ ಕೆರೆಯ ತೂಬನ್ನು ನಿಲ್ಲಿಸುವ ಸಮಯದಲ್ಲಿ ಅಲ್ಲಗೌಡ ಅಲ್ಲಗೌಡ ಎಂಬಾತನು ನೀರಿನಲ್ಲಿ ಮುಳುಗಿ ಸಾಯುತ್ತಾನೆ. ಈ ಮುಂಚೆಯೂ ಸಹ ಈ ಗೂಬನ್ನು ಸರಿ ಮಾಡಲು ಆಗಿರುವುದಿಲ್ಲ. ಆದ್ದರಿಂದ ಗುಳಿಯೋಜ ಎಂಬಾತನು ಅದನ್ನು ಸರಿಪಡಿಸಲೋಸುಗ ಎರಡು ಖಂಡುಗ ಗದ್ದೆ, ಒಂದು ಖಂಡುಗ ಹೊಲ ಮತ್ತು ಮೂರು ಅಂಕಣದ ಮನೆಯನ್ನು ಒಡೆದು ಸರಿಪಡಿಸುತ್ತಾನೆ. ನಂತರದಲ್ಲಿ ಆತನೇ ಆ ಕೆರೆಯ ತೂಬಿನ ಬಾಧ್ಯತೆಯನ್ನು ವಹಿಸಿಕೊಳ್ಳುತ್ತಾನೆ ಎಂಬುದಾಗಿ ಶಾಸನವು ದಾಖಲಿಸಿದೆ. [6] ವಿಜಯನಗರ ಕಾಲದ ಅನೇಕ ಶಾಸನಗಳು ತೂಬುಗಳನ್ನು ನಿರ್ಮಿಸಿದುದನ್ನು ಕುರಿತು ತಿಳಿಸುತ್ತವೆ. ಇವುಗಳನ್ನು ಕೊಟ್ರಯ್ಯನವರು ದೀರ್ಘವಾಗಿ ಚರ್ಚಿಸಿದ್ದಾರೆ. [7]

ವಿಜಯನಗರ ಕಾಲದಲ್ಲಿ ಮೇಲೆ ವಿವರಿಸಿದ ಬಿರಡೆ ಅಥವಾ ಮಾದರಿಯ ತೂಬುಗಳು ಮಾತ್ರವೇ ಬಳಕೆಯಲ್ಲಿದ್ದವು. ಮುಚ್ಚಳ ಮತ್ತು ತೊಟ್ಟಿಯ ಮಾದರಿಯ ತೂಬುಗಳನ್ನು ಸಹ ಕೆರೆಗಳಿಗೆ ಅಳವಡಿಸಲಾಗುತ್ತಿತ್ತು. ಪ್ರಾಚೀನ ಕಾಲದ ಕೆರೆಗಳನ್ನು ಪುನರುಜ್ಜೀನಗೊಳಿಸುವ ಸಂದರ್ಭದಲ್ಲಿ ಸರ್ಕಾರದ ನೀರಾವರಿ ಇಲಾಖೆಯವರು ಮೂಲ ತೂಬಿಗೆ ಯಾವುದೇ ವಿಧದ ದಕ್ಕೆ ಉಂಟಾಗದಂತೆ ಮರದ ತುಂಡನ್ನೆ ಬಳಸಿರುತ್ತಾರೆ. ಇಲಾಖೆಯವರು ತೂಬಿನ ರಂಧ್ರಕ್ಕೆ ದಕ್ಕೆ ಉಂಟಾಗದಂತೆ ಉರದ ತುಂಡನ್ನೇ ಬಳಸಿರುತ್ತಾರೆ. ಇಲಾಖೆಯವರು ತೂಬಿನ ರಂಧ್ರಕ್ಕೆ ಉರದ ತುಂಡು ಇಟ್ಟು ಅದರ ಮೇಲ್ಭಾಗಕ್ಕೆ ಕಬ್ಬಿಣದ ಸಲಾಕೆಯನ್ನು ಅಳವಡಿಸಿ ತಿರುಚುವ ಸ್ಕ್ರೂ ಮೂಲಕ ಯಾಂತ್ರೀಕರಿಸಿದ್ದಾರೆ. ಕೆರೆ ಏರಿಯಿಂದ ತೂಬಿರುವ ಜಾಗವನ್ನು ತಲುಪುವ ಕಬ್ಬಿಣದ ಚಿಕ್ಕ ಸೇತುವೆಯನ್ನು ಸಹ ಅಳವಡಿಸಿರುತ್ತಾರೆ. ಕೆಲವೊಂದು ಸಂದರ್ಭಗಳಲ್‌ಇ ಮರದ ಬದಲಿಗೆ ಕಬ್ಬಿಣದ ಬಾಗಿಲುಗಳನ್ನು ಷಟ್ಟರ್ (shutter) ಅಳವಡಿಸಿದ್ದಾರೆ. ಕಮಲಾಪುರದ ಕೆರೆಯಲ್ಲಿರುವ ನಾಲ್ಕು ತೂಬುಗಳಲ್ಲಿ ಎರಡಕ್ಕೆ ಮರವನ್ನು ಅಳವಡಿಸಿದ್ದರೆ, ಮಿಕ್ಕೆರಡು ತೂಬುಗಳಿಗೆ ಕಬ್ಬಿಣದ ಬಾಗಿಲುಗಳನ್ನು ಅಳವಡಿಸಿದ್ದಾರೆ.

ಕೋಡಿ

ಕೋಡಿಯು ಬಹಳ ಮುಖ್ಯವಾದ ಕೆರೆಯ ಭಾಗಗಳಲ್ಲೊಂದು. ಕೋಡಿಯ ಪ್ರದೇಶವನ್ನು ಆಯ್ಕೆಮಾಡಿ ಅದನ್ನು ಅಳವಡಿಸಿವುದರಲ್ಲಿಯೇ ಕೆರೆಯನ್ನು ಕಟ್ಟುವವನಿಗೆ ಇರುವ ಸಾಮರ್ಥ್ಯವನ್ನು ತೋರಿಸಿಕೊಡುತ್ತದೆ. ಸಾಮಾನ್ಯವಾಗಿ ಕೋಡಿಯು ಕೆರೆಯ ನೀರಿರುವ ಯಾವುದಾದರೂ ಒಂದು ದಿಕ್ಕಿಗೆ ಇರುತ್ತದೆ. ಏರಿಯ ದಿಕ್ಕಿನಲ್ಲಿ ಇರುವುದಿಲ್ಲ. ಕೆರೆಯಲ್ಲಿ ನೀರು ಸಂಗ್ರಹವಾಗಿ ಗರಿಷ್ಠಮಟ್ಟ ತಲುಪಿದಾಗ ಹೆಚ್ಚುವರಿ ನೀರು ಈ ಕೋಡಿಯ ಮೂಲಕ ಹಾದುಹೋಗುತ್ತದೆ. ಅತೀ ಹೆಚ್ಚು ನೀರು ಬಂದಾಗ ಕೆರೆ ಏರಿಗೆ ಒತ್ತಡ ಬೀಳುತ್ತದೆ. ಆ ಒತ್ತಡವನ್ನು ತಡೆಯಲು ಕೋಡಿಗಳನ್ನು ಅಳವಡಿಸಲಾಗುತ್ತದೆ. ಒಂದು ಕೆರೆಯ ಕೋಡಿ ಬಿತ್ತೆಂದರೆ ಆ ಕೆರೆಗೆ ಗರಿಷ್ಠ ಮಟ್ಟದ ನೀರು ಬಂದಿದೆಯೆಂದು ಅರ್ಥ. ಕೆಲವೊಂದು ಕಡೆಯಲ್ಲಿ ಕೋಡಿ ಬಿದ್ದು ನೀರು ಹರಿದುಹೋಗುವ ಪ್ರದೇಶದ ಸಮೀಪದಲ್ಲಿಯೇ ಮತ್ತೊಂದು ಕೆರೆಯನ್ನು ನಿರ್ಮಿಸಿರುವ ಉದಾಹರಣೆಗಳು ನಮಗೆ ದೊರೆತಿದ್ದು ಅವುಗಳನ್ನು ಈಗಾಗಲೆ ಚರ್ಚಿಸಿಲಾಗಿದೆ. ಕೆರೆಯ ಗರಿಷ್ಠ ಮಟ್ಟ ಹಾಗೂ ಕೋಡಿಯ ಮಟ್ಟ ಒಂದೇ ಆಗಿರಬೇಕು. ಕೆರೆಯು ಅತೀ ದೊಡ್ಡದಾಗಿದ್ದರೆ, ಎರಡು ಕೋಡಿಗಳಿರುವುದನ್ನು ನೋಡಬಹುದು. ಇವುಗಳನ್ನು ಸಾಮಾನ್ಯವಾಗಿ ಕಲ್ಲು, ಗಾರೆಗಳಿಂದಲೇ ಕಟ್ಟುತ್ತಾರೆ. ಕೋಡಿಯ ಇಕ್ಕೆಲಗಳಲ್ಲಿ ಕೆಲವೊಮ್ಮೆ ಭದ್ರವಾದ ಕಲ್ಲಿನ ಗೋಡೆಯನ್ನು ನಿರ್ಮಿಸಿ, ಕೆರೆ ಏರಿಯು ಕೋಡಿಯ ಮೇಲೆ ಕುಸಿದಂತೆ ಕಾಪಾಡುತ್ತಾರೆ. ಕೆಲವು ಉದಾಹರಣೆಗಳಲ್ಲಿ ಕೋಡಿಯಲ್ಲಿ ಕಂಬಗಳನ್ನು ಇರಿಸುವ ವಾಡಿಕೆಯಿತ್ತು. ಕೋಡಿಬಿದ್ದ ಸಂದರ್ಭಗಳಲ್ಲಿ ಈ ಕಂಬಗಳ ಮೂಲಕ ಕೆರೆ ಏರಿಯ ಒಂದು ತುದಿಯಿಂದ ಮತ್ತೊಂದು ತುದಿಗೆ ಹೋಗಲು ಅನುಕೂಲವಾಗುವಂತೆ ಅಳವಡಿಸಲಾಗುತ್ತದೆ. ಹೆಚ್ಚು ನೀರು ಸಂಗ್ರಹ ಮಾಡಬೇಕೆಂದಾಗ ಆ ಕಂಬಗಳಿಗೆ ಅಡ್ಡಲಾಗಿ ಕೆಲವು ಮರ, ಕಲ್ಲುಗಳನ್ನು ಇರಿಸಿ ಮುಚ್ಚಿ ನೀರನ್ನು ಶೇಖರಿಸುತ್ತಾರೆ. ಕರ್ನಾಟಕದಲ್ಲಿ ಅತ್ಯಂತ ದೊಡ್ಡ ಕೋಡಿಯು ಶಿವಮೊಗ್ಗ ಜಿಲ್ಲೆಯ ಮದಗ ಮಾಸೂರು ಕೆರೆಯಲ್ಲಿ ಇದೆ. ಇದರ ಉದ್ದವು ೧೫೭ ಅಡಿ ಇದ್ದು ಐದು ಅಡಿಗಳಷ್ಟು ಅಗಲವಿದೆ.

ವಿಜಯನಗರ ಕಾಲದಲ್ಲಿ ಕೆಲವು ತಜ್ಞರು ಕೋಡಿಯನ್ನು ಕಟ್ಟುವುದರಲ್ಲಿಯೇ ಪರಿಣತಿಯನ್ನು ಹೊಂದಿದ್ದರು ಎಂದು ಒಂದು ಶಾಸನವು ದಾಖಲಿಸಿದೆ. ವೆಂಕಟಪತಿರಾಯನ ಕಾಲದ ರುದ್ರಪ್ಪನಾಯಿಡು ಎಂಬಾತನು ಕೋಡಿಯನ್ನು ಕಟ್ಟುವುದರಲ್ಲಿ ಪರಿಣತಿಯನ್ನು ಹೊಂದಿದ್ದು ಅವನು ಕೊಲ್ಲೂರು ಕೆರೆಗೆ ಮೂವತ್ತಮೂರು ಕಂಬಗಳಿರುವ ಕೋಡಿಯನ್ನು ನಿರ್ಮಿಸುತ್ತಾನೆಂದು ಶಾಸನವು ಉಲ್ಲೇಖಿಸಿದೆ.[8] ಶಾಸನವನ್ನು ರಚಿಸಿರುವಾತನು ಮೂವತ್ತಮೂರು ಕಂಬಗಳನ್ನು ದೇವತೆಗಳ ರಾಜನಾದ ಇಂದ್ರನ ವೈಭವವಾದ ರಥಕ್ಕೆ ಹೋಲಿಸಿರುತ್ತಾನೆ.

ಮುಚ್ಚಿನಟ್ಲು ರಂಗಪ್ಪನಾಯನಿಯ ಮಗಳು ರಘುಪತಿ ಅಮ್ಮಗಾರು ಕೆರೆಯ ಏರಿಯನ್ನು ಬಲಪಡಿಸಿ ಮೂವತ್ತಮೂರು ಕಂಬಗಳಿರುವ ಕೋಡಿಯನ್ನು ಕಲ್ಲುಗಳಿಂದ ನಿರ್ಮಿಸುತ್ತಾಳೆ ಎಂದು ಆಂಧ್ರದ ನೆಲ್ಲೂರು ಜಿಲ್ಲೆಯ ಆತ್ಮಕೂರು ಶಾಸನವು ತಿಳಿಸುತ್ತದೆ. ಅವಳು ಕೋಡಿಯ ಇಕ್ಕೆಲಗಳನ್ನು ಕಲ್ಲಿನ ಗೋಡೆಯಿಂದ ಭದ್ರಪಡಿಸುತ್ತಾಳೆ ಎಂದು ಉಲ್ಲೇಖಿಸಿರುವುದು ವಿಶೇಷವಾದ ಸಂಗತಿ.[9] ಈ ಎಲ್ಲಾ ಶಾಸನಗಳಿಂದ ತಿಳಿದುಬರುವ ಅಂಶವೇನೆಂದರೆ, ಕೋಡಿಗಳಲ್ಲಿ ೩೩ ಕಂಬಗಳು ಇರುತ್ತಿದ್ದವು ಎಂಬುದೇ ಆಗಿದೆ. ಇವುಗಳು ನಿರ್ದಿಷ್ಟ ಸಂಖ್ಯೆಯಲ್ಲಿ ಇರುವುದಕ್ಕೆ ಮತ್ತು ಅದರ ಉಪಯುಕ್ತತೆಯನ್ನು ಇಂದು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅಂದಿನ ಕಾಲದ ಜನರಲ್ಲಿ ಈ ಸಂಖ್ಯೆಯಲ್ಲಿ ಆಳವಾದ ನಂಬಿಕೆಯು ಇದ್ದಿರಬಹುದು ಎಂದು ಅಭಿಪ್ರಾಯಪಡಬಹುದು.

ಕೆರೆಗಳ ನಿರ್ವಹಣೆ

ಕೆರೆಗಳನ್ನು ಯಾರು ನಿರ್ವಹಿಸುತ್ತಿದ್ದರು ಎಂಬ ಬಗೆಗೆ ಹಿಂದಿನ ಅಧ್ಯಾಯಗಳಲ್ಲಿ ಈಗಾಗಲೇ ಚರ್ಚಿಸಲಾಗಿದೆ. ಪ್ರಾಚೀನ ಭಾರತದಲ್ಲಿ ಕೆರೆಗಳ ನಿರ್ವಹಣೆಯ ಭಾದ್ಯತೆಯು ರಾಜ ಮತ್ತು ಪ್ರಜೆಗಳ ಮೇಲೆಯೇ ಇತ್ತೆಂಬುದು ತಿಳಿದ ವಿಷಯವಷ್ಟೆ. ರಾಜನ ಪ್ರತಿನಿಧಿಗಳು ಒಂದು ಗ್ರಾಮದ ಅಥವಾ ಮಂಡಲದ ಸಭೆಯ ಸದಸ್ಯರುಗಳು ಸಹ ಈ ಕಾರ್ಯಭಾರವನ್ನು ನಿರ್ವಹಿಸುತ್ತಿದ್ದರು. ಕೆಲವೊಂದು ಸಂದರ್ಭಗಳಲ್ಲಿ ಕೆರೆಯನ್ನು ಕಟ್ಟಿಸಿದವನಿಗೆ ಕೆರೆಯ ರಕ್ಷಣೆ ಮತ್ತು ನಿರ್ವಹಣಾ ಭಾದ್ಯತೆಯನ್ನು ಹೊರಿಸಲಾಗುತ್ತಿತ್ತು ಎಂಬುದು ಶಾಸನಗಳಿಂದ ತಿಳಿದುಬಂದಿರುವ ವಿಷಯ.

ಮಧ್ಯಕಾಲೀನ ಯುಗದಲ್ಲಿ, ಅಂದರೆ ಕ್ರಿ.ಶ. ಸುಮಾರು ೧೦ನೆಯ ಶತಮಾನದಿಂದ ಕೆರೆ ಕಟ್ಟುವ ಕೆಲಸವನ್ನು ಅಂದಿನ ರಾಜಮನೆತನಗಳು ಘೋಷಿಸಿದವು. ಈ ದಿಸೆಯಲ್ಲಿ ಅವರುಗಳು ಕಾರ್ಯಪ್ರವೃತ್ತರಾಗಲು ಮುಖ್ಯ ಕಾರಣವೇನೆಂದರೆ ಮೇಲೆ ಉಲ್ಲೇಖಿಸಿದ ಶತಮಾನದಲ್ಲಿ ಹವಾಮಾನವು ಬದಲಾಗುತ್ತಾ ಬಂದಿತು. ಅದನ್ನು ಇಂದಿನ ಶತಮಾನದ ಹವಾಮಾನಕ್ಕೆ ಹೋಲಿಸಬಹುದು. ಮಳೆಯು ಸಕಾಲಕ್ಕೆ ಬರುತ್ತಿರಲಿಲ್ಲ. ಮತ್ತು ಈ ಸಮಸ್ಯೆಯೊಂದಿಗೆ ಬೆಳೆಯುತ್ತಿದ್ದ ಜನಸಂಖ್ಯೆಗೆ ಅನುಗುಣವಾಗಿ ಆಹಾರವನ್ನು ಪೂರೈಸಲು ಅಧಿಕ ಕೃಷಿ ಉತ್ಪನ್ನಗಳು ಬೇಕಾಗಿದ್ದ ಕಾರಣ ಕೃತಕ ಜಲಸಂಗ್ರಾಹಕಗಳ ಅವಶ್ಯಕತೆಯು ತಲೆದೋರಿತು. ಅಧಿಕ ಸಂಖ್ಯೆಯಲ್ಲಿ ಕೆರೆ, ಕುಂಟೆಗಳು ನಿರ್ಮಾಣಗೊಂಡಂತೆಯೇ ಅವುಗಳನ್ನು ನಿರ್ವಹಿಸಲು ಅನೇಕ ನಿರ್ವಾಹಕರ ಅವಶ್ಯಕತೆಯು ಅನಿವಾರ್ಯವಾಗಿದ್ದಿತು. ಕೆರೆಗಳ ಮೇಲೆ ತೆರಿಗೆಗಳನ್ನು ವಿಧಿಸಿ ಕೆರೆಗಳ ರಕ್ಷಣೆ ಮತ್ತು ನಿರ್ವಹಣಾ ಕಾರ್ಯಗಳಿಗೆ ಅವುಗಳನ್ನು ಬಳಸುತ್ತಿದ್ದರು.

ಈ ಮೇಲೆ ಉಲ್ಲೇಖಿಸಿದ ನಿರ್ವಾಹಕರೊಂದಿಗೆ ನೀರುಗಂಟಿಗಳೆಂಬುವವರನ್ನು ಸಹ ನಿಯೋಜಿಸುತ್ತಿದ್ದರು. ಇವರುಗಳು ಕೆರೆಯಿಂದ ನೀರನ್ನು ಆಯಕಟ್ಟು ಪ್ರದೇಶಗಳಿಗೆ, ತೂಬುಗಳನ್ನು ನಿಯಂತ್ರಿಸಿ, ಕಾಲುವೆಗಳ ಮುಖಾಂತರ ಹಾಯಿಸುತ್ತಿದ್ದರು. ಇವರ ಈ ಸೇವೆಗೆ ಪ್ರತಿಫಲವಾಗಿ ಆಯಕಟ್ಟಿನ ಉಪಯೋಗಕಾರರು ನಿರ್ದಿಷ್ಟ ವೇತನವನ್ನು ಧನ ಅಥವಾ ಧಾನ್ಯಗಳ ರೂಪದಲ್ಲಿ ನೀಡುತ್ತಿದ್ದರು.

ಹೊಸಪೇಟೆ ತಾಲೂಕಿನ ತಿಮ್ಮಲಾಪುರದಲ್ಲಿ ಇಂದಿಗೂ ನೀರುಗುಂಟಿಗಳು, ಅಲ್ಲಿಯ ಪೊತಲಕಟ್ಟೆ, ನಡುವಲಕೆರೆ ಮತ್ತು ಜಂಭಯ್ಯನ ಕೆರೆಗಳ ನೀರನ್ನು ಆ ಕೆರೆಯ ಆಯಕಟ್ಟು ಪ್ರದೇಶಗಳಿಗೆ ಹಾಯಿಸುತ್ತಾರೆ. ಇವರುಗಳು ವಂಶಪಾರಂಪರಿಕವಾಗಿ ಈ ಕೆಲಸದಲ್ಲಿ ತೊಡಗಿರುವವರು. ಜಮೀನಿನ ಅವಶ್ಯಕತೆಗನುಗುಣವಾಗಿ ಒಂದು ಸಲುಕ್ಕಿ ಅಥವಾ ಎರಡು ಸಲುಕ್ಕಿಯಷ್ಟು ನೀರನ್ನು ಕೆರೆಯಿಂದ ಹಾಯಿಸುತ್ತಾರೆ. ಸಲುಕ್ಕಿಯೆಂದರೆ ಒಂದು ರಾತ್ರಿಯಲ್ಲಿ ಒಂದು ಎಕರೆಗೆ ಬೇಕಾಗುವಷ್ಟು ನೀರು ಎಂದು ಅರ್ಥ. ಇವರುಗಳು ಕೆರೆಯ ಹೂಳನ್ನು ಎತ್ತುವುದಿಲ್ಲ. ಕೆರೆಗಳು ಭರ್ತಿಯಾಗಿ ಆ ವರ್ಷ ಆಯಕಟ್ಟಿನಲ್ಲಿ ವ್ಯವಸಾಯವನ್ನು ಕೈಗೊಂಡರೆ ಮಾತ್ರ ಇವರುಗಳಿಗೆ ಕೆಲಸ. ಇಲ್ಲದಿದ್ದರೆ ಈ ನೀರುಗಂಟಿಗಳು ಬೇರೆ ಕಡೆಗಳಲ್ಲಿ ವ್ಯವಸಾಯ ಮತ್ತು ಇತರ ಕೂಲಿ ಕೆಲಸಕ್ಕೆ ಹೋಗಿ ಹೊಟ್ಟೆಯನ್ನು ತುಂಬಿಕೊಳ್ಳುತ್ತಾರೆ.

ಹಂಪಿ ಪರಿಸರದ ಕೆಲವು ನದಿ ಆಶ್ರಿತ ಕೆರೆಗಳಾದ ಕಮಲಾಪುರ ಕೆರೆ, ಅಳ್ಳಿಕೆರೆ ಕೆರೆ ಮುಂತಾದವುಗಳು ಸರ್ಕಾರದ ನೀರಾವರಿ ಇಲಾಖೆಯವರ ಅಧೀನದಲ್ಲಿವೆ. ಇವುಗಳ ಸಂರಕ್ಷಣಾ ಕಾರ್ಯವನ್ನು ಇಲಾಖೆಯವರೇ ಮಾಡುತ್ತಾ ಬಂದಿದ್ದಾರೆ. ಈ ಕೆರೆಗಳಿಂದ ನೀರನ್ನು ಕಿರಿಯ ಸಹಾಯಕರು ಆಯಕಟ್ಟು ಪ್ರದೇಶಗಳ ಜಮೀನಿಗೆ ಹಾಯಿಸುತ್ತಾರೆ. ಇವರುಗಳಿಗೆ ಸರ್ಕಾರವೇ ವೇತನವನ್ನು ನೀಡುತ್ತಲಿದೆ. ಜಮೀನಿನ ಮಾಲೀಕರು ಸರ್ಕಾರಕ್ಕೆ ಒಂದು ಎಕರೆಗೆ ಸರ್ಕಾರ ನಿಗದಿಪಡಿಸಿದ ಮೊತ್ತವನ್ನು ಜಮೆ ಮಾಡುತ್ತಾರೆ.

ಮೇಲೆ ಉಲ್ಲೇಖಿಸಿದ ಕೆರೆಗಳು ನದಿಯಾಶ್ರವನ್ನು ಹೊಂದಿದ್ದು, ಈ ಕೆರೆಗಳಲ್ಲಿ ನೀರು ಸರ್ವಕಾಲದಲ್ಲಿಯೂ ಇರುತ್ತದೆ. ಇದರಿಂದಾಗಿ ಕೆರೆಗಳಿಗೆ ನೀರು ಬರುವಾಗ ಅದರೊಂದಿಗೆ ಅಪಾರ ಪ್ರಮಾಣದಲ್ಲಿ ಮಣ್ಣು ಸಹ ನೀರಿನೊಡನೆ ಹರಿದುಬಂದು ಕೆರೆಗಳಲ್ಲಿ ಸಂಗ್ರಹವಾಗುತ್ತದೆ. ಈ ಕೆರೆಗಳ ಹೂಳೆತ್ತುವ ಕಾರ್ಯವನ್ನು ಇಲಾಖೆಯವರು ನೆರವೇರಿಸದ ಕಾರಣ ಹೂಳು ಶೇಖರಗೊಂಡು ಕೆರೆಯನ್ನು ನಿರ್ಮಿಸಿದಾಗ ಇದ್ದಂತಹ ಆಳವು ಇಂದು ಗಣನೀಯವಾಗಿ ಕಡಿಮೆಯಾಗಿ ನೀರು ಶೇಖರಣಾ ಸಾಮರ್ಥ್ಯವು ಕುಗ್ಗಿದೆ. ಕೆರೆಗಳನ್ನು ಸರ್ಕಾರವು ರಕ್ಷಿಸಬೇಕೆಂದಿದ್ದರೆ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ವಿಜಯನಗರ ಕಾಲದ ಕೆಲವು ಮುಖ್ಯ ಕೆರೆಗಳನ್ನು ಕುರಿತು ಇಲ್ಲಿ ಚರ್ಚಿಸಲಾಗುವುದು.

ರಾಯರ ಕೆರೆ

ಹೊಸಪೇಟೆ ನಗರದ ಹೊರಭಾಗದಲ್ಲಿರುವ ಬೆಂಗಳೂರು ಮರಿಯಮ್ಮನಹಳ್ಳಿ ರಸ್ತೆಯಲ್ಲಿ ಈ ಕೆರೆಯಿದೆ. ಇದನ್ನು ಕೃಷ್ಣದೇವರಾಯನು (ಕ್ರಿ.ಶ. ೧೫೦-೯೩೦) ಕಟ್ಟಿಸಿದನೆಂದು, ವಿವಿಧ ಮೂಲಗಳಲ್ಲಿಂದ ತಿಳಿಯಬರುತ್ತದೆ. ಈ ಪ್ರದೇಶವು ಇಂದು ಹೊಸಪೇಟೆಗೆ ದಕ್ಷಿಣ-ಪಶ್ಚಿಮ ದಿಕ್ಕಿನಲ್ಲಿ ಇದೆ. ಅಲ್ಲಿರುವ ಭೌಗೋಳಿಕ ಪರಿಸರ ಮತ್ತು ಜಲಾನಯನ ಪ್ರದೇಶವನ್ನು ಗಮನಿಸಿ ಎರಡು ಬೆಟ್ಟಗಳ ನಡುವೆ, ಒಂದು ಬೃಹತ್ ಪ್ರಮಾಣದ ಕೆರೆ ಮತ್ತು ಏರಿಯನ್ನು ಕಟ್ಟಿಸಿದನು. ಇದರಿಂದ ಆ ಪ್ರದೇಶಕ್ಕೆ ಕೆಲವು ಜನರು ವಲಸೆ ಹೋಗಿರುವ ಸಾಧ್ಯತೆಗಳಿವೆ. ರಾಜನು ಅಲ್ಲಿಗೆ ಅರಮನೆ ಮುಂತಾದ ವಸತಿಗೃಹಗಳನ್ನು ಸಹ ವರ್ಗಾಯಿಸದನೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ಕೆರೆಯನ್ನು ರಾಯರಕೆರೆಯೆಂದು ಗುರುತಿಸಲಾಗಿದೆ.

ವಿದೇಶಿ ಪ್ರವಾಸಿಗರ ಬರಹಗಳಿಂದ ಈ ಕೆರೆಯನ್ನು ಕುರಿತು ಮಾಹಿತಿಗಳು ತಿಳಿಯಬರುತ್ತದೆ. ಅವರ ಬರಹಗಳಲ್ಲಿ ಕೆರೆಯನ್ನು ಕಟ್ಟಿಸಿದುದರ ಮಾಹಿತಿಯೊಂದಿಗೆ ಅನೇಕ ಕುತೂಹಲಕಾರಿಯಾದ ಸಂಗತಿಗಳಿವೆ. ಈ ಕೆರೆಯನ್ನು ಜೊ ಡಿ ಲ ಪೋಂಟೆ (Jao de la pante) ಬ ಪೋರ್ಚಗಲ್ಲಿನ ತಜ್ಞನು ನಿರ್ಮಿಸಿದನೆಂದು ತಿಳಿಯಬರುತ್ತದೆ. ಕೆರೆಯನ್ನು ಎರಡು ಬೆಟ್ಟಗಳ ನಡುವೆ ನಿರ್ಮಿಸಿದುದರ ಕಾರಣವಾಗಿ ಬೆಟ್ಟಗಳ ಪ್ರದೇಶದಲ್ಲಿ ಬೀಳುವ ನೀರು ಬೆಟ್ಟಗಳ ನಡುವೆ ಸಂಗ್ರಹಿಸಿ ಮೂರು ಲೀಗ್ ದೂರದಿಂದ ಕಾಲುವೆಗಳ ಮೂಲಕ ಇಲ್ಲಿಗೆ ಹಾಯಿಸಲಾಗುತ್ತಿತ್ತು ಎಂದು ಡಾಮಿಂಗೊ ಪಾಯಸ್‌(Damingo pass) ಎಂಬ ಪೋರ್ಚುಗೀಸನ ಪ್ರವಾಸಿಗನು ದಾಖಲಿಸಿದ್ದಾನೆ. ಇವುಗಳಲ್ಲದೆ, ಕೆರೆಯಲ್ಲಿ ಮೂರು ಚಿತ್ರಿತ ಕಂಬಗಳು ತೂಬುಗಳು ಇದ್ದು ಇವುಗಳಿಂದ ಭತ್ತದ ಅಕ್ಕಿ ಗದ್ದೆಗಳಿಗೆ ನೀರು ಬೇಕೆಂದಾಗ ಹಾಯಿಸಲ್ಪಡುತ್ತಿದ್ದವು ಎಂದು ಬರೆದಿದ್ದಾನೆ. ಕೆರೆಯನ್ನು ಹೇಗೆ ನಿರ್ಮಿಸಲಾಯಿತೆಂದು ಸಹ ತಿಳಿಸುತ್ತಾನೆ. ಅದರಂತೆ ರಾಜನು, ಒಂದು ಬೆಟ್ಟವನ್ನು ಒಡೆದು ಆ ಪ್ರದೇಶದಲ್ಲಿ ಕೆರೆಯನ್ನು ಕಟ್ಟಿಸಿದ. ಆ ಪ್ರದೇಶದಲ್ಲಿ ಸುಮಾರು ಹದಿನೈದು ಸಾವಿರ ಅಥವಾ ಇಪ್ಪತ್ತುಸಾವಿರ ಜನರು, ಇರುವೆಗಳಂತೆ ತಮ್ಮ ಕೆಲಸವನ್ನು ಮಾಡುತ್ತಿದ್ದರು. ಅವರುಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಸಲುವಾಗಿ ರಾಜನ ಅನೇಕ ಮಂದಿ ಉದ್ಯೋಗಸ್ಥರುಗಳು ನಿಯೋಜಿತರಾಗಿದ್ದರು. ಆದಷ್ಟು ತ್ವರಿತದಲ್ಲಿ ಕೆಲಸವನ್ನು ಪೂರೈಸುವ ಉದ್ದೇಶದಿಂದ ಅನೇಕ ಉದ್ಯೋಗಸ್ಥರು ಈ ಕೆಲಸಕ್ಕೆ ನಿಯೋಜಿಸಲ್ಪಟ್ಟಿದ್ದರು ಎಂದು ತಿಳಿಸುತ್ತಾನೆ. ಇದಲ್ಲದೆ ಕೆರೆಯನ್ನು ಕುರಿತಂತೆ ಇದ್ದ ನಂಬಿಕೆಗಳ ಬಗೆಗೆ ಸಹ ಬೆಳಕನ್ನು ಚೆಲ್ಲುತ್ತಾನೆ. ಈ ಕೆರೆಯು ಪದೇ ಪದೇ ಒಡೆಯುತ್ತಿರಲಾಗಿ, ರಾಜನು ಬ್ರಾಹ್ಮಣರನ್ನು ವಿಚಾರಿಸಿದನು. ಅವರುಗಳು, ದೇವರು (ವಿಗ್ರಹ) ಅಸಂತೃಪ್ತನಾಗಿದ್ದಾನೆಂದು, ಅವನಿಗೆ ಬಲಿಯನ್ನು ನೀಡಬೇಕು ಎಂದು ಸೂಚಿಸುತ್ತಾರೆ. ಅದರಂತೆ ರಾಜನು ನರಬಲಿಯನ್ನು ನೀಡಿ, ನರರ ರಕ್ತ, ಕುದುರೆ ಮತ್ತು ಕೋಣಗಳನ್ನು ಬಲಿಕೊಡುತ್ತಾನೆ ಎಂದು ದಾಖಲಿಸಿದ್ದಾನೆ.[10]

ಈ ಕೆರೆಯನ್ನು ಕುರಿತು ಮತ್ತೊಬ್ಬ ಪೋರ್ಚ್‌ಗಲ್ಲಿನ ಪ್ರವಾಸಿಗನಾದ ಫೆರ್ನಾವೊ ನ್ಯೂಜಿಜ್‌(Fernao Nuniz) ಎಂಬುವವನು ಸಹ ಬರೆದಿದ್ದಾನೆ. ಅದರಂತೆ, ರಾಜನು ಮಹಿಳೆ (ರಾಣಿ)ಯರ ಗೌರವಾರ್ಥವಾಗಿ ನಾಗಲಾಪುರವೆಂಬ ಪುರವನ್ನು ನಿರ್ಮಿಸಿ ಗೋಡೆಗಳನ್ನು ನಿರ್ಮಿಸಿ ಅರಮನೆಯನ್ನು ಕಟ್ಟಿದನೆಂದು ತಿಳಿಸುತ್ತಾನೆ. ಅಲ್ಲಿಯ ದೊಡ್ಡ ಬೆಟ್ಟಗಳ (Serras) ನಡುವೆ ಕೆರೆ ಕಟ್ಟಿಸಿದನೆಂದು ಬರೆದಿದ್ದಾನೆ. ರಾಜ್ಯದಲ್ಲಿ ಇಂತಹ ಕೆರೆಯನ್ನು ನಿರ್ಮಿಸಲು ಸಮರ್ಥರಿಲ್ಲದ ಕಾರಣ ಅವನು ಗೋವೆಯಲ್ಲಿ ಇದ್ದ ಪೋರ್ಚುಗೀಸಿನ ತಂತ್ರಜ್ಞನಾದ ಜೊ ಡಿ ಲ ಪೋಂಟೆಯನ್ನು ಆಹ್ವಾನಿಸಿ ಕೆರೆಯನ್ನು ಕಟ್ಟಿಸುತ್ತಾನೆ. ಮುಂದೆ ಈ ಕೆರೆಯು ಒಡೆಯಲಾಗಿ ಅದಕ್ಕೆ ತನ್ನ ಖೈದಿಗಳನ್ನು ಮತ್ತು ಕೋಣಗಳನ್ನು ಬಲಿಕೊಡುತ್ತಾನೆ ಎಂದು ದಾಖಲಿಸಿದ್ದಾನೆ.[11]

ಕೆರೆಯ ಕಾಲುವೆಯನ್ನು ಕುರಿತು ತಿಳಿಸುತ್ತಾ ಆ ಕೆರೆಗೆ ಅನೇಕ ಕಾಲುವೆಗಳು ಏರಿಯಿಂದ ಹೊರಬರುತ್ತಿದ್ದು, ಅವುಗಳಿಂದ ನೀರನ್ನು ಹಾಯಿಸಿ ಬೇಸಾಯಕ್ಕೆ ಬಳಸಿ ಅಧಿಕ ಕೃಷಿಯನ್ನು ಪಡೆಯುತ್ತಿದ್ದರು ಎಂದು ಬಣ್ಣಿಸಿದ್ದಾನೆ. ಅಲ್ಲಿ ಮುಖ್ಯವಾಗಿ ಭತ್ತದ ಗದ್ದೆ ಮತ್ತು ತೋಟಗಳು ಇದ್ದವು ಅವಲ್ಲದೆ ಆ ಕೆರೆಯ ಆಯಕಟ್ಟಿನ ಪ್ರದೇಶದ ಕೃಷಿಕರಿಗೆ ಒಂಬತ್ತು ವರ್ಷಗಳ ಕಾಲ ತೆರಿಗೆಯನ್ನು ವಿನಾಯಿತಿಗೊಳಿಸುತ್ತಾನೆಂದು, ಇದರಿಂದ ರಾಜನ ಬೊಕ್ಕಸಕ್ಕೆ ೨೦,೦೦೦ ಪರ್ಡೊಸ್‌ಚಿನ್ನದ ನಾಣ್ಯಗಳು ನಷ್ಟು ಹೆಚ್ಚು ಲಾಭ ಬರಬೇಕೆಂದು ರಾಜನು ಉದ್ದೇಶಿಸಿರುವುದಾಗಿ ದಾಖಲಿಸಿದ್ದಾನೆ. ಈ ಕೆರೆಯು ಅತ್ಯಂತ ದೊಡ್ಡದಾಗಿದ್ದು ಅದರಲ್ಲಿ ನೀರು ತುಂಬಿರುವುದನ್ನು ಇಲ್ಲಿಯವರೆಗೆ ಯಾರೂ ನೋಡಿಲ್ಲವೆಂದು ಸ್ಥಳೀಯರು ತಿಳಿಸಿರುತ್ತಾರೆ.

 

[1] ಎಪ್‌. ಕಾನ್‌, (ಹಳೆಯ) ಸಂ. VII ಸಂ. ಎಸ್‌ಎಚ್‌. ೩೫

[2] ಅದೇ, ಸಂ. X ಸಂ. ಎಂಬಿ ೧೭೨

[3] ಅದೇ,

[4] ಐಎಸ್‌ವಿಇ, ಪು. ೭೯

[5] ಎಪ್‌ಕಾರ್ನ್‌, (ಹಳೆಯ) ಸಂ. II ಸಂ. ೫೬೩

[6] ಅದೇ, ಸಂ. I X , ಕೆ.ಎನಂ. ೯೭

[7] ಐಎಸ್‌ವಿಇ, ಪು. ೧೧೫-೨೦

[8] ಐಎಸ್‌ವಿಇ, ಪು. ೧೮೩; ದೀಕ್ಷಿತ, ಜಿ.ಎಸ್‌. ಮತ್ತು ಇತರರು, ಪೂರ್ವೋಕ್ತ, ಪು. ೨೫೮-೬೩

[9] ನೆಲ್ಲೂರು ಇನ್ಸ್‌ಕ್ರಿಪ್ಯನ್ಸ್‌, ಸಂ. I ಪು. ೨೪೫-೪೯, ಐಎಸ್‌ವಿಇ, ಪು. ೧೮೩

[10] ನೆಲ್ಲೂರು ಇನ್ಸ್‌ಕ್ರಿಪ್ಯನ್ಸ್‌, ಸಂ. I ಪು. ೧೯೯

[11] ವಸುಂಧರಾ ಫಿಲಿಯೋಜ, ದಿ ವಿಜಯನಗರ ಎಂಪೈರ್, (ಡಿ. ಪಯಾಸ್‌ಮತ್ತು ನ್ಯೂನಿಜ್‌), ಪು. ೨೬ ಮತ್ತು ೧೪೨-೪೩