ಕರ್ನಾಟಕದಲ್ಲಿ ಅತ್ಯಧಿಕವಾಗಿ ಕೆರೆಗಳು ಏಕೆ ನಿರ್ಮಾಣಗೊಂಡವು ಎಂಬ ಪ್ರಶ್ನೆಗೆ ಉತ್ತರವನ್ನು ನಾವು ಇಂದಿನ ಮತ್ತು ಪ್ರಾಚೀನ ಕಾಲದ, ಮುಖ್ಯವಾಗಿ, ಕ್ರಿ.ಶ. ಹತ್ತನೆಯ ಶತಮಾನದ ಹವಾಮಾನಗಳನ್ನು ಪರಿಶೀಲಿಸಿದಾಗ ಕಂಡುಕೊಳ್ಳಬಹುದು. ಇತ್ತೀಚೆಗೆ ನಡೆಸಿದ ಕೆಲವು ವೈಜ್ಞಾನಿಕ ಸಂಶೋಧನೆಗಳಿಂದ ಇಂದಿನ ಹವಾಮಾನವು ಮತ್ತು ಹದಿನೈದನೆಯ ಶತಮಾನದ ಹವಾಮಾನವು ಒಂದೇ ಆಗಿತ್ತೆಂದು ದೃಢಪಟ್ಟಿದೆ.

[1] ಕ್ರಿ.ಶ.ಒಂದನೆಯ ಶತಮಾನದಲ್ಲಿದ್ದಂತಹ ಹವಾಮಾನವು ಅನೇಕ ಶತಮಾನಗಳಿಂದ ಬದಲಾವಣೆಗೊಳ್ಳುತ್ತಲೇ ಬಂದಿದೆ. ಹದಿನೈದನೆಯ ಶತಮಾನದ ಹವಾಮಾನವು ಇಂದಿನ ಹವಾಮಾನದಂತಿರುವುದರಿಂದ ಈಗಿರುವಂತೆಯೇ, ಬಳ್ಳಾರಿ ಜಿಲ್ಲೆಯನ್ನು ಒಳಗೊಂಡ ಕರ್ನಾಟಕದ ಉತ್ತರ ಭಾಗಗಳನ್ನು ಮಳೆಯನ್ನು ಸಾಕಷ್ಟು ಪಡೆಯುತ್ತಿರಲಿಲ್ಲವೆಂದು ಹೇಳಬಹುದು. ಈ ಕಾರಣದಿಂದಾಗಿ ಅಂದಿನ ಕಾಲದಲ್ಲಿ ಕೃತಕ ಜಲ ಸಂಗ್ರಾಹಕಗಳ ಅವಶ್ಯಕತೆಯುಂಟಾಯಿತು. ಮತ್ತು ವಿಜಯನಗರ ಕಾಲದಲ್ಲಿ ಅಧಿಕವಾಗಿ ಕೆರೆ, ಕುಂಟೆ ಮತ್ತು ಕಾಲುವೆಗಳನ್ನು ನಿರ್ಮಿಸಲಾಯಿತು. ಇದರೊಂದಿಗೆ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರವನ್ನು ಪೂರೈಸುವ ಸಲುವಾಗಿ ಹೆಚ್ಚುವರಿ ಭೂಮಿಯನ್ನು ಕೃಷಿಗೆ ಒಳಪಡಿಸಲಾಯಿತು. ಇವುಗಳಿಗೆ ನೀರನ್ನು ಪೂರೈಸಲು ಕೃತಕ ಜಲಸಂಗ್ರಾಹಕಗಳಾದ ಕೆರೆಗಳು ಹೆಚ್ಚು ಬಳಕೆಗೆ ಬಂದವು.

ಹಂಪಿ ಪರಿಸರದಲ್ಲಿ (ಇಂದಿನ) ಕಂಡುಬರುವಂತಹ ಅನೇಕ ಕೆರೆಗಳು ಮಳೆಯನ್ನೇ ಆಶ್ರಯಿಸಿವೆ. ಕೆಲವು ಕೆರೆಗಳನ್ನು ಜೀವಂತವಾಗಿರಿಸುವ ಸಲುವಾಗಿ ಸರ್ಕಾರದ ಲೋಕೋಪಯೋಗಿ ಮತ್ತು ನೀರಾವರಿ ಇಲಾಖೆಯವರು ಕೆಲವು ಮಳೆ ಆಶ್ರಿತ ಕೆರೆಗಳನ್ನು ನದಿ ಆಶ್ರಿತ ಕೆರೆಯನ್ನಾಗಿಸಿದ್ದಾರೆ. ಕಮಲಾಪುರದ ಕೆರೆ, ಅಳ್ಳಿಕೆರೆ ಕೆರೆ, ದರೋಜಿ ಕೆರೆ ಮುಂತಾದವುಗಳು ನದಿಯನ್ನು ಅವಲಂಬಿಸಿವೆ. ದಣ್ಣನಾಯಕನ ಕೆರೆ, ಜಂಭಯ್ಯನ ಕೆರೆ, ಹುಲಿಕುಂಟೆ ಕೆರೆ ಇತ್ಯಾದಿ ಕೆರೆಗಳು ಇಂದಿಗೂ ಮಳೆಯನ್ನೇ ಆಶ್ರಯಿಸಿವೆ. ವಿಜಯನಗರದ ಅರಸರ ಕಾಲದಲ್ಲಿ ಬಳ್ಳಾರಿ ಜಿಲ್ಲೆಯ ಮಳೆಯ ವೈಪರಿತ್ಯ ಸ್ವಭಾವಗಳನ್ನು ಪರಿಗಣಿಸಿ ಕೆರೆಗಳನ್ನು ನಿರ್ಮಿಸುವಾಗ ಕೇವಲ ಒಂದು ಕೆರೆಯನ್ನು ನಿರ್ಮಿಸದೆ, ಎರಡು ಅಥವಾ ಮೂರು ಕೆರೆಗಳ ಒಂದು ಶೃಂಖಲೆಯನ್ನು ನಿರ್ಮಿಸಿರುವುದು ಗಮನಾರ್ಹ. ನಿಸರ್ಗದ ಭೌಗೋಳಿಕ ಲಕ್ಷಣ, ಮಳೆಯ ಅತೀವೃಷ್ಟಿ ಮತ್ತು ಅನಾವೃಷ್ಟಿಯ ಸ್ವಭಾವವನ್ನರಿತು ಕೆರೆಗಳನ್ನು ವಿವಿಧ ಭೂಮಟ್ಟದಲ್ಲಿ ಒಂದಕ್ಕೊಂದು ಹೊಂದಿಕೊಂಡಿರುವಂತೆ ನಿರ್ಮಿಸಿರುತ್ತಾರೆ. ಇದರಿಂದಾಗಿ ಮೊದಲ ಕೆರೆಯು ಮೇಲ್ಮಟ್ಟದಲ್ಲಿದ್ದು, ಮಳೆಯ ನೀರು ಅದರಲ್ಲಿ ಸಂಗ್ರಹಗೊಳ್ಳುತ್ತದೆ. ಹೆಚ್ಚುವರಿ ನೀರು ಬಂದಲ್ಲಿ ಆ ನೀರು ಕೋಡಿಯ ಮೂಲಕ ಹರಿದು ಬಂದು ಎರಡನೆಯ ಕೆರೆಯಲ್ಲಿ ಸಂಗ್ರಹವಾಗುತ್ತದೆ. ಈ ವಿಶಿಷ್ಟ ಪದ್ಧತಿಯಿಂದ ಒಮ್ಮೆ ಹೆಚ್ಚುವರಿ ನೀರು ಮೊದಲ ಕೆರೆಗೆ ಬಂದರೂ, ಕೆರೆಯು ಒಡೆಯದಂತೆ ಇರುತ್ತದೆ ಹಾಗೂ ನೀರು ಪೋಲಾಗುವುದನ್ನು ಸಹ ಎರಡನೆಯ ಕೆರೆಯು ತಪ್ಪಿಸುತ್ತದೆ. ಇಂತಹ ಕೆಲವು ಕೆರೆಗಳ ಸಮೂಹವನ್ನು ಹೊಸಪೇಟೆ ತಾಲೂಕಿನ ತಿಮ್ಮಲಾಪುರ ಗ್ರಾಮದಲ್ಲಿ ನೋಡಬಹುದು.

ವಿಜಯನಗರ ಕಾಲದ ಶಾಸನಗಳ ಸಮೀಕ್ಷೆಯಿಂದ ಈ ಕೆಳಕಂಡ ಕೆಲವು ಕುತೂಹಲಕಾರಿಯಾದ ಅಂಕಿ ಅಂಶಗಳು ಬೆಳಕಿಗೆ ಬಂದಿವೆ.[2]

ಕೋಷ್ಟಕ ೧

ಕೆರೆ ಕಟ್ಟಿಸಿದವರು ಶೇಕಡಾವಾರು
ರಾಜರು ೫.೭೨
ಮಂತ್ರಿಗಳು ೭.೯೦
ರಾಜ್ಯೋದ್ಯೋಗಿಗಳು ೫.೭೨
ಮಾಂಡಲಿಕರು ೩.೬೬
ಸ್ಥಳೀಯ ಅಧಿಕಾರಿಗಳು ೨೯.೯೦
ಸಾಮಂತರು ೨೦.೫೪
(ವ್ಯಾಪಾರಿ, ಶ್ರೀಸಾಮಾನ್ಯ ಇತ್ಯಾದಿ)

ಮೇಲೆ ನೀಡಿರುವ ಕೋಷ್ಟಕದಲ್ಲಿ ಕಾಣಸಿಗುವಂತೆ, ಕೆರೆಯ ನಿರ್ಮಾಣಗಳನ್ನು ಸ್ಥಳೀಯ ಅಧಿಕಾರಿಗಳು ಹೆಚ್ಚಾಗಿ ನಿರ್ಮಿಸಿರುವುದನ್ನು ಕಾಣಬಹುದು. ಇವರ ನಂತರ ಜನಸಾಮಾನ್ಯರು ಈ ಕೆಲಸದಲ್ಲಿ ತೊಡಗಿರುವರೆಂಬುದು ಗಮನಿಸತಕ್ಕ ವಿಷಯ. ವಿಜಯನಗರದ ಕಾಲದಲ್ಲಿ ಕೇಂದ್ರಿಕೃತ ಆಡಳಿತವನ್ನು ವಿಕೇಂದ್ರಿಕೃತಗೊಳಿಸಿ, ನಾಯಕರು (ಅಮರನಾಯಕತ್ವ) ಆಡಳಿತ ನಡೆಸುತ್ತಿದ್ದ ಕಾರಣದಿಂದ ಇಂತಹ ಜನೋಪಯೋಗಿ ಕಾರ್ಯಗಳು ಹೆಚ್ಚಾಗಿ ಈ ಕಾಲದಲ್ಲಿ ನಡೆದವೆಂದು ಕೊಟ್ರಯ್ಯನವರು ಅಭಿಪ್ರಾಯಪಡುತ್ತಾರೆ.[3]

ವಿಜಯನಗರ ಕಾಲದಲ್ಲಿ ಕೆರೆ ಕಟ್ಟುವುದರ ಬಗೆಗಿನ ಮಾಹಿತಿಗಳು ಶಾಸನಗಳಿಂದ ತಿಳಿಯಬರುತ್ತವೆ. ಆ ಕಾಲಕ್ಕೆ ಸಂಬಂಧಿಸಿದ ಅನೇಕ ಶಾಸನಗಳು ದಕ್ಷಿಣ ಭಾರತದಾದ್ಯಂತ ಲಭ್ಯವಿದೆ.[4] ಅವುಗಳಲ್ಲಿನ ಕೆಲವು ಮುಖ್ಯ ಶಾಸನಗಳ ವಿವರಗಳು ಇಂತಿವೆ. ಕೆರೆಗಳನ್ನು ‘ಉಪ್ಪಾರರು’ ಎಂಬ ಜನಾಂಗದವರು ನಿರ್ಮಿಸಲು ತಮ್ಮನ್ನು ತೊಡಗಿಸಿಕೊಂಡಿದ್ದರು ಎಂಬುದಕ್ಕೆ ಶಾಸನಾಧಾರವಿದೆ.[5] ಕಟ್ಟಿಗರು ಎಂಬ ಜನಾಂಗದವರು ಸಹ ಕೆರೆಗಳನ್ನು ನಿರ್ಮಿಸುವ ಕಾರ್ಯದಲ್ಲಿ ತೊಡಗಿದ್ದರು ಎಂಬುದು ಕೆಲವು ತೆಲಗು ಭಾಷೆಯ ಶಾಸನಗಳಿಂದ ತಿಳಿದುಬಂದಿದೆ. ಇವರುಗಳು ಉಪ್ಪಾರರೊಂದಿಗೆ ಕೂಡಿ ಕೆರೆಯನ್ನು ನಿರ್ಮಿಸುತ್ತಿದ್ದರು ಎಂದು ಅಭಿಪ್ರಾಯಪಡಬಹುದು. ಉಪ್ಪಾರರನ್ನು ಒಳಗೊಂಡು ಬೇರೆ ವರ್ಗಗಳ ಜನರು ಸಹ ಈ ಕೆರೆ ಕಟ್ಟುವ ಕಾರ್ಯದಲ್ಲಿ ತೊಡಗಿದ್ದರಬಹುದೆಂದು ನಾವು ಊಹಿಸಬಹುದು. ಕೆರೆ ಕಟ್ಟುವಂತಹ ಕೆಲಸಕ್ಕೆ ಅನೇಕ ವ್ಯಕ್ತಿಗಳ ನೆರವು ಮತ್ತು ಸಹಕಾರಗಳು ಬೇಕಿದ್ದರಿಂದ, ಕೇವಲ ಒಂದು ಜನಾಂಗದವರು ಮಾತ್ರವೇ ಈ ಕೆಲಸವನ್ನು ಮಾಡುತ್ತಿದ್ದರು ಎಂದು ಒಪ್ಪಿಕೊಳ್ಳುವುದು ಅಷ್ಟು ಸಮಂಜಸವಾಗುವುದಿಲ್ಲ.

ಒಂದು ಶಾಸನವು ಕೆರೆಯ ನಿರ್ಮಾಣವನ್ನು ಕುರಿತು ಪೂರ್ಣ ಮಾಹಿತಿಯನ್ನು ನೀಡುತ್ತದೆ. ಕೆರೆಗಳ ಬಗೆಗಿನ ಅನೇಕ ಮಾಹಿತಿಗಳನ್ನು ಅರಿಯಲು ಸಹಕಾರಿಯಾಗಿರುವುದರಿಂದ ಈ ಶಾಸನವು ಕೆರೆಗಳ ಅಧ್ಯಯನಕ್ಕೆ ಅತೀ ಮುಖ್ಯವಾಗಿದ್ದು ಇದನ್ನು ಒಂದು ಮೈಲಿಗಲ್ಲು ಎಂದು ಹೇಳಬಹುದು. ಈ ಶಾಸನವು ಆಂಧ್ರಪ್ರದೇಶದಲ್ಲಿರುವ ಕಡಪ ಜಿಲ್ಲೆಯ ಪೊರುಮಾಮಿಳ್ಲ ಎಂಬ ಗ್ರಾಮದ ಕೆರೆಯ ದಂಡೆಯಲ್ಲಿ ದೊರಕಿದ್ದು ಯುವರಾಜ ಭಾಸ್ಕರನ ಹೆಸರನ್ನು ಉಲ್ಲೇಖಿಸುತ್ತದೆ. ಇದರ ತೇದಿಯು ಕ್ರಿ.ಶ. ೧೩೬೯ ಆಗಿದ್ದು ಮೊದಲನೆಯ ಬುಕ್ಕರಾಯನ ಕಾಲಕ್ಕೆ ಸೇರಿದುದಾಗಿದೆ.[6] ಸುತ್ತಲೂ ಇರುವ ನಾಲ್ಕು ಬೆಟ್ಟಗಳ ಸಮೂಹದಿಂದ ಕಟ್ಟಿರುವ ಈ ಕೆರೆಯನ್ನು ಅನಂತರಾಜಸಾಗರವೆಂದು ಶಾಸನವು ಉಲ್ಲೇಖಿಸುತ್ತದೆ. ಕೆರೆಯ ಉದ್ದವು ೪೫,೦೦೦ ಅಡಿಗಳು. ಆಳವು ೧೨ ಅಡಿಗಳು. ಕಟ್ಟಲ್ಪಟ್ಟ ಕೆರೆಯ ಉದ್ದವು ೧೪,೫೦೦ ಅಡಿಗಳು, ಏರಿಯ ತಳಹದಿಯ ಅಗಲ ೧೫೦ ಅಡಿ ಮತ್ತು ಏರಿಯ ಮೇಲ್ಭಾಗದ ಅಗಲ ೧೨ ಅಡಿಗಳಾಗಿವೆ.[7]

ಒಂದು ಕೆರೆಯನ್ನು ನಿರ್ಮಿಸಬೇಕಾದರೆ, ಏನೆಲ್ಲಾ ಕ್ರಮ ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದು ತಿಳಿಸುವುದರಲ್ಲಿ ಶಾಸನದ ಮುಖ್ಯತ್ವವು ಅಡಗಿದೆ. ಆ ವಿವರಗಳು ಕೆಳಕಂಡಂತೆ ಇವೆ.

೧. (ಕೆರೆ ಕಟ್ಟುವವನಾದ) ರಾಜನು ಸಂತೃಪ್ತನಾಗಿಯೂ, ಸಂತೋಷದಿಂದ ಕೂಡಿದವನಾಗಿಯೂ ಮತ್ತು ಆಚಂದ್ರಾರ್ಕವಾಗಿ ಹೆಸರುಗಳಿಸಿಕೊಳ್ಳುವವನಾಗಿ (ಇರಬೇಕು) ಅಂತಹವನು ಕೆರೆಯ ನಿರ್ಮಾಣಕ್ಕೆ ತೊಡಗಿಕೊಳ್ಳಬೇಕು.

೨. ಜಲಶಾಸ್ತ್ರದಲ್ಲಿ (ಪಯಸ್‌ಶಾಸ್ತ್ರ)ದಲ್ಲಿ ನೈಪುಣ್ಯತೆಯನ್ನು ಹೊಂದಿದ ಬ್ರಾಹ್ಮಣನು ಈ ಕಾಯದಲ್ಲಿ ತೊಡಗಬೇಕು.

೩. ಉತ್ತಮ ಜೇಡಿಮಣ್ಣು ಕೂಡಿರುವಂತಹ ಪ್ರದೇಶವನ್ನು (ಕೆರೆ ಕಟ್ಟುವುದಕ್ಕೆ ಆಯ್ದುಕೊಳ್ಳಬೇಕು).

೪. ನದಿಯ ನೀರಿನ ಆಶ್ರಯವು ಅಥವಾ ಬುಗ್ಗೆಯ ಕೆರೆಯಿಂದ ಸುಮಾರು ಮೂರು ಯೋಜನೆಗಳಷ್ಟು ದೂರದಲ್ಲಿರಬೇಕು.

೫. ಬೆಟ್ಟಗಳ ಸಾಲುಗಳ ಇದ್ದಲ್ಲಿ, ಅವುಗಳನ್ನು ಕೆರೆಯನ್ನು ನಿರ್ಮಿಸಲು ಉಪಯೋಗಿಸಿಕೊಳ್ಳಬೇಕು.

೬. (ಬೆಟ್ಟಗಳ) ನಡುವಿನ (ಕಣಿವೆ) ಪ್ರದೇಶದಲ್ಲಿ ಅತಿ ದೊಡ್ಡದಲ್ಲದ ಮತ್ತು ಸದೃಢವಾದ ಗೋಡೆ(ಏರಿ)ಯನ್ನು (ಕಟ್ಟಬೇಕು).

೭. (ಕೆರೆಯ ಪ್ರದೇಶದಲ್ಲಿ) ಸಮೀಪದಲ್ಲಿ ಫಲ ಕೊಡುವ ಭೂಮಿಯಿರಬೇಕು.

೮. ಕೆರೆಯ ನೀರಿನ ಹರವು ವಿಸ್ತೀರ್ಣವಾಗಿರಬೇಕು, ಹಾಗೆಯೇ ಆಳವಾಗಿಯೂ ಇರಬೇಕು.

೯. ಸಮೀಪದಲ್ಲಿಯೇ ಕಲ್ಲು ಗಣಿಗಳು ಇದ್ದು ಅಲ್ಲಿ ಉದ್ದವಾದ ಮತ್ತು ಸಮನಾದ ಕಲ್ಲುಗಳು ದೊರೆಯಬೇಕು.

೧೦. (ಕೆರೆಯ) ಸಮೀಪದಲ್ಲಿರುವ ಜಮೀನು ಫಲವತ್ತಾಗಿರಬೇಕು ಹಾಗು ಅಲ್ಲಿ ಹಣ್ಣು, ಹಂಪಲುಗಳ ವನಗಳು ಇರಬೇಕು ಮತ್ತು ಜಮೀನು ಸಮನಾಗಿ ಏರಿಳಿತವಿಲ್ಲದೆ ಇರಬೇಕು.

೧೧. (ಕೆರೆಯ) ತೂಬುಗಳಲ್ಲಿನ ಕಲ್ಲು ಅಥವಾ ನಿಯಂತ್ರಕಗಳು ಭದ್ರವಾಗಿರಬೇಕು ಮತ್ತು ಇದನ್ನು ನೀರಿನ ಒತ್ತಡದಿಂದ ಕಾಪಾಡುವಷ್ಟು ಸದೃಢವಾಗಿರಬೇಕು ಹಾಗೂ ಕೊನೆಯಾದಾಗಿ,

೧೨. ಕೆರೆಗಳನ್ನು ಕಟ್ಟುವ ತಂತ್ರಜ್ಞಾನವನ್ನು ಹೊಂದಿರುವಂತಹ ಹನ್ನೆರಡು ಮಂದಿಯಿರಬೇಕು ಮತ್ತು ಅವರೆಲ್ಲರೂ ಮೇಲೆ ಉಲ್ಲೇಖಿಸಿದ ಹನ್ನೊಂದು ಅಂಶಗಳನ್ನು ಅರಿತಿರಬೇಕು. ಒಂದು ಕೆರೆಯನ್ನು ನಿರ್ಮಿಸಬೇಕಾದ ತೆಗೆದುಕೊಳ್ಳಬೇಕಾದ ಅತೀ ಮುಖ್ಯವಾದ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಇದೇ ಶಾಸನ ತಿಳಿಯುತ್ತದೆ. ಅವುಗಳು ಈ ರೀತಿಯಾಗಿವೆ.

೧. ಕೆರೆಯಿಂದ ನೀರು ಸ್ರವಿಸಬಾರದು.

೨. ಕೆರೆಯ ಪಾತ್ರದಲ್ಲಿನ ಮಣ್ಣು ಉಪ್ಪಿನಂಶದಿಂದ ಕೂಡಿರಬಾರದು.

೩. ಎರಡು ರಾಜ್ಯಗಳ ನಡುವಿನ ಗಡಿ ಪ್ರದೇಶವನ್ನು ಆಯ್ಕೆಮಾಡಬಾರದು.

೪. ಕೆರೆಯ ಮಧ್ಯಭಾಗವನ್ನು ಕೂರ್ಮ ಪ್ರದೇಶ ಗಮನಿಸಬೇಕು, ಅವು ಎತ್ತರ ಅಥವಾ ಉಬ್ಬಾಗಿರಬಾರದು.

೫. ಅತ್ಯಲ್ಪ ನೀರು ಬರುವ ಪ್ರದೇಶವನ್ನು ಆಯ್ಕೆ ಮಾಡಬಾರದು ಮತ್ತು ಅತಿಹೆಚ್ಚು ಆಯಕಟ್ಟು ಇರುವ ಜಾಗವನ್ನು ಆರಿಸಬಾರದು.

೬. ಸ್ವಲ್ಪ ಜಮೀನಿದ್ದು ಅಧಿಕ ನೀರು ಬರುವಂತಹ ಜಾಗವನ್ನು ಆಯ್ಕೆ ಮಾಡಬಾರದು.

ವಿಜಯನಗರ ಕಾಲದಲ್ಲಿ ತಂತ್ರಜ್ಞಾನವು ಎಷ್ಟರ ಮಟ್ಟಿಗೆ ಬೆಳೆದ್ದಿತು ಎಂಬುದು ನಮಗೆ ಈ ಶಾಸನದಿಂದ ತಿಳಿದುಬರುತ್ತದೆ. ಅವರು ನಿಸರ್ಗವನ್ನು ಉಪಯುಕ್ತವಾಗಿ ಬಳಸಿಕೊಂಡು ಕೆರೆ ಕಟ್ಟುವ ಕಾರ್ಯವನ್ನು ಸಾಕಷ್ಟು ಮಹತ್ವವನ್ನು ನೀಡಿದ್ದರೆಂಬುದು ಮೇಲಿನ ಶಾಸನದಿಂದ ಸ್ಪಷ್ಟವಾಗುತ್ತದೆ ಕೆರೆಗಳನ್ನು ನಿರ್ಮಿಸುವುದಕ್ಕೆ ಕಲ್ಲು, ಕಲ್ಲಿನ ತೂಬು, ಇಟ್ಟಿಗೆ, ಸುಣ್ಣ ಮತ್ತು ಗಾರೆ ಮುಂತಾದ ಸಾಮಗ್ರಿಗಳನ್ನು ಬಳಸುತ್ತಿದ್ದರು ಎಂದು ಶಾಸನವು ತಿಳಿಸುತ್ತದೆ.[8] ಕಲ್ಲು ಎಂದರೆ, ಸಾಮಾನ್ಯವಾಗಿ ಉರುಟು ಒರಟು ಕಲ್ಲು ಎಂದು ಪರಿಗಣಿಸಬೇಕು. ಇವುಗಳಲ್ಲದೇ ಮಣ್ಣು ಸಹ ಉಪಯೋಗಿಸುತ್ತಿದ್ದರು ಎಂಬುದು ನಿಸ್ಸಂಶಯವಾದ ಸಂಗತಿ.

ಕೆರೆಗಳು ವಿವಿಧ ಆಕಾರಗಳನ್ನು ಹೊಂದಿರುತ್ತಿದ್ದವು. ಕೆರೆಗಳ ಆಕಾರವು ಬಹುತೇಕವಾಗಿ ಭೌಗೋಳಿಕ ಪರಿಸರವನ್ನು ಅವಲಂಬಿಸಿರುತ್ತಿದ್ದವು. ಚಕ್ರಪಾಣಿ ಮಿಶ್ರನ ವಿಶ್ವವಲ್ಲಭ ಕೃತಿಯು ವಿವಿಧ ಆಕಾರದ ಕೆರೆಗಳನ್ನು ಪ್ರಸ್ತಾಪಿಸುತ್ತದೆ. ಅವುಗಳಲ್ಲಿ ವೃತ್ತಾಕಾರ, ಚತುಷ್ಕೋನ, ಬಹುಕೋನಾಕೃತಿ, ಲಂಬಾಕಾರ, ಅರ್ಧಚಂದ್ರಕಾರಗಳು ಮತ್ತು ಆಯತಾಕಾರಗಳಲ್ಲಿ ಸೇರಿವೆ[9] ಕಶ್ಯಪನು ಕೃಷಿ ಸೂಕ್ತಿಯಲ್ಲಿ ವೃತ್ತ, ಲಂಭ ಮತ್ತು ಅರ್ಧಚಂದ್ರಾಕಾರಗಳಲ್ಲಿ  ಕೆರೆಯ ಆಕಾರವು ಇರಬಹುದೆಂದು ತಿಳಿಸುತ್ತಾನೆ.[10] ಹಾವಿನಕುಂಟೆ ಎಂಬ ಕುಂಟೆ ಸರ್ಪಾಕೃತಿಯಲ್ಲಿದ್ದ ಕಾರಣದಿಂದ ಕೆಲವು ಕೆರೆಗಳು ಸರ್ಪಾಕೃತಿಯಲ್ಲಿದ್ದವು ಎಂದು ಊಹಿಸಬಹುದು. ಶಾಸ್ತ್ರಗ್ರಂಥದಲ್ಲಿರುವುದಕ್ಕಿಂತ ಭಿನ್ನಾಕಾರದ ಕೆಲವು ಕೆರೆಗಳು ವಿಜಯನಗರ ಕಾಲದಲ್ಲಿ ಮಾತ್ರವಲ್ಲದೇ ಅದಕ್ಕೂ ಮುಂಚೆಯೂ ನಿರ್ಮಾಣವಾಗಿರುವುದನ್ನು ನಾವು ಕಾಣಬಹುದು. ಇದಕ್ಕೆ ಮೂಲಭೂತ ಕಾರಣವು ಆ ಪ್ರದೇಶ ಭೌಗೋಳಿಕ ಲಕ್ಷಣಗಳು. ಆ ಪರಿಸರಕ್ಕೆ ಅನುಗುಣವಾಗಿ ಕೆರೆಗಳನ್ನು ನಿರ್ಮಿಸಿರುವುದು ಸಹಜವಷ್ಟೇ. ಕೆರೆಗಳ ರಕ್ಷಣೆ ಮತ್ತು ದೀರ್ಘಕಾಲ ಬಾಳಿಕೆ ಬರಬೇಕೆಂದು, ಕೆರೆಯ ಏರಿಯನ್ನು ಯಾವಾಗಲೂ ಅಂಕುಡೊಂಕಾಗಿ ನಿರ್ಮಿಸುತ್ತಿದ್ದರು. ಇದರಿಂದಾಗಿ ನೀರಿನ ಒತ್ತಡವು ಕೆರೆಯ ಏರಿಯ ಸಣ್ಣ ಭಾಗವು ಮಾತ್ರವೇ ಒಡೆಯುತ್ತಿತ್ತು. ಇದನ್ನು ದುರಸ್ತಿಗೊಳಿಸುವುದು ಸುಲಭವಾಗಿದ್ದ ಕಾರಣದಿಂದ ಕೆರೆಯನ್ನು ಅಂಕುಡೊಂಕಾಗಿ ನಿರ್ಮಿಸುತ್ತಿದ್ದರು.

ವಿಜಯನಗರ ಕಾಲದ ಅರಸರುಗಳಲ್ಲಿಯೇ ಮೊದಲನೆಯ ಬುಕ್ಕರಾಯನ (ಕ್ರಿ.ಶ.೧೩೫೬-೭೭) ಆಳ್ವಿಕೆಯ ಮಹತ್ವವುಳ್ಳದಾಗಿದ್ದು ಅವನು ಕೆರೆಗಳ ನಿರ್ಮಾಣ ಕಾರ್ಯಕ್ಕೆ ಭದ್ರ ಬುನಾದಿಯನ್ನು ಹಾಕಿದನು ಎಂದರೆ ತಪ್ಪಾಗಲಾರದು. ಈ ಮೊದಲೇ ಚರ್ಚಿಸಿದ ಪೊರುಮಾವಿಲ್ಲ ಕೆರೆಯು ಇವನ ಕಾಲಕ್ಕೆ ಸೇರಿದ್ದು ಎಂಬುದು ಗಮನಿಸಬೇಕಾದ ಸಂಗತಿ.

ವಿರೂಪಾಕ್ಷ ಪಂಡಿತ ಮತ್ತು ವಿನಾಯಕ ಪಂಡಿತರೆಂಬ ಅಣ್ಣ ತಮ್ಮಂದಿರು ವಿಜಯನಗರ ಕಾಲದ ಹೆಸರಾಂತ ವಿದ್ವಾಂಸರುಗಳು. ಇವರು ಹಂಪೆಯಲ್ಲಿ ಒಂದು ದೇವಾಲಯವನ್ನು ನಿರ್ಮಿಸಿ ಅದರ ಸಮೀಪದಲ್ಲಿಯೇ ಒಂದು ಕೆರೆಯನ್ನು ಸಹ ಕಟ್ಟಿಸಿದರು ಎಂದು ಕ್ರಿ.ಶ. ೧೩೯೬ರ ಶಾಸನದಿಂದ ತಿಳಿದುಬರುತ್ತದೆ. ವಿರೂಪಾಕ್ಷ ಪಂಡಿತನು ಸಂಸ್ಕೃತ ಭಾಷೆಯಲ್ಲಿ ಸುಮಾರು ೧೩ ಗ್ರಂಥಗಳನ್ನು ರಚಿಸಿರುತ್ತಾನೆ.[11]

ವಿಜಯನಗರ ಕಾಲದಲ್ಲಿ ಮಹಿಳೆಯರಿಗೂ ಪೂರ್ಣ ಸ್ವಾತಂತ್ರ್ಯವಿದ್ದುದು ಕಂಡುಬರುತ್ತದೆ. ಇವರುಗಳು ಮಿಕ್ಕವರಂತೆಯೇ ಕೆರೆ ಕಟ್ಟಿಸುವಿಕೆ, ಭೂದಾನ ನೀಡುವಿಕೆ ಮುಂತಾದ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಅನೇಕ ಶಾಸನಗಳು ತಿಳಿಸುತ್ತವೆ. ಇದಕ್ಕೆ ಪೂರಕವಾಗಿ ಒಂದು ಕುತೂಹಲಕಾರಿಯಾದ ಶಾಸನವನ್ನು ಇಲ್ಲಿ ಉಲ್ಲೇಖಿಸುವುದು ಉಚಿತವಾಗುತ್ತದೆ. ಪೆನುಗೊಂಡೆ ರಾಜ್ಯದ ಜೊಮ್ಮದೇವಿಯು ಬುಕ್ಕರಾಯನ ಮಗಳು, ತಿರುಮಣಿಯೂರು ಎಂಬ ಗ್ರಾಮಲ್ಲಿ ಒಂದು ಕೆರೆಗೆ ನೀರು ಹರಿದುಬರಲು ಕಾಲುವೆಯನ್ನು ಅಗೆಸಬೇಕೆಂದು ಆಶಿಸಿ, ತನ್ನ ಮಂತ್ರಿಗಳಾದ ನಾಗರಾಜ ಮತ್ತು ಮಾಯಾನಯನಿಗಳಿಗೆ ಆದೇಶಿಸುತ್ತಾಳೆ. ಯುವರಾಣಿಯ ನಿರೂಪದಂತೆ ಮಂತ್ರಿಗಳು ಪೆದ್ದ ಬಯಿರಾವೋಜ ಮತ್ತು ಪಿನ ಬಯಿರಾವೋಜರೆಂಬ ಇಬ್ಬರು ಕರ್ಮಿಗಳಿಗೆ ಆ ಕೆಲಸವನ್ನು ವಹಿಸುತ್ತಾರೆ. ಈ ಕಾರ್ಯವನ್ನು ಅವರಿಗೆ ವಹಿಸಿಕೊಡುವಾಗ, ಕೆರೆಯ ನೀರು ನಾಲೆಯಲ್ಲಿ ಸರಿಯಾಗಿ ಹರಿಯಬೇಕು ಎಂದು ಷರತ್ತನ್ನು ವಿಧಿಸುತ್ತಾರೆ. ಒಂದು ವೇಳೆ ಕೆರೆಯ ನೀರು ಸರಿಯಾಗಿ ಬಂದ ಪಕ್ಷದಲ್ಲಿ ಅವರುಗಳಿಗೆ ೧೩೦ ಸ್ವಣ ನಾಣ್ಯಗಳನ್ನು ಸಿಂಗೆಯ ಗದ್ಯಾಣ, ಭೂಮಿ, ತೂಬಿನ ಹತ್ತಿರ ಮನೆ ಮತ್ತು ಬಂಗಾರದ ಕಡಗಗಳನ್ನು ನೀಡುವುದಾಗಿಯೂ, ಒಂದು ವೇಳೆ ಕೆಲಸವು ಅಸಮರ್ಪಕವಾಗಿದ್ದಲ್ಲಿ ಅವುಗಳನ್ನು ನೀಡುವುದಿಲ್ಲವೆಂದು ಒಪ್ಪಂದವನ್ನು ಮಾಡಿಕೊಂಡಿರುತ್ತಾರೆ. ಆದರೆ ಆ ಕೆರೆಯನ್ನು ಅತ್ಯಂತ ಸಮರ್ಪಕವಾಗಿ ಕಟ್ಟಿ ಆ ಬಹುಮಾನಗಳನ್ನು ಅವರಗಳು ಪಡೆಯುತ್ತಾರೆ ಎಂಬುದಾಗಿ ಕ್ರಿ.ಶ.೧೩೯೭ರ ಶಾಸನವು ತಿಳಿಸುತ್ತದೆ. ಕೆಲವು ವಿಧಿವತ್ತಾದ ಧಾರ್ಮಿಕ ಆಚರಣೆಗಳ ನಂತರವೇ ಆ ಕೆರೆಯನ್ನು ಬಳಸಿಕೊಳ್ಳಲಾಯಿತು ಎಂದು ಈ ಶಾಸನವು ಉಲ್ಲೇಖಿಸುತ್ತದೆ.[12]

ದಶವಿದ್ಯಾ ಚಕ್ರವರ್ತಿ ಸಿಂಗಯ್ಯ ಭಟ್ಟನು ಕ್ರಿ.ಶ.೧೩೮೯ರಲ್ಲಿ ಸಿರಿವುರೆ ಕೆರೆಗೆ ಒಂದು ಕಾಲುವೆಯನ್ನು ನಿರ್ಮಿಸಿದನೆಂದು ಒಂದು ಶಾಸನದಿಂದ ತಿಳಿದುಬರುತ್ತದೆ. ಅವನ ಬಿರುದಾದ ‘ದಶವಿದ್ಯಾ ಚಕ್ರವರ್ತಿ’ಯಿಂದ, ಅವನು ಕೆರೆಯನ್ನು ಕಟ್ಟುವುದರಲ್ಲಿ ನಿಸ್ಸೀಮನಾಗಿದ್ದನೆಂದು ಅರಿಯಬಹುದು. ಈ ಕಾಲುವೆಗೆ ‘ಪ್ರತಾಪ ಬುಕ್ಕರಾಯ ಮಂಡಲ ಕಾಲುವೆ’ ಎಂದು ಹೆಸರಿಸಿರುವುದು ಗಮನಾರ್ಹವಾದ ಸಂಗತಿ.[13]

ಸಾಮಾನ್ಯವಾಗಿ ಕೆರೆಯನ್ನು ಕಟ್ಟಿಸಿದ ನಂತರ ಆ ಕೆರೆಯನ್ನು ಕಟ್ಟಿಸಿದವರಿಗೆ, ಆ ಕೆರೆಯ ಆಯಕಟ್ಟಿನ ಪ್ರದೇಶದಲ್ಲೇ ಭೂಮಿ ಗದ್ದೆಯನ್ನು ನೀಡುತ್ತಿದ್ದುದು ವಾಡಿಕೆಯಲ್ಲಿತ್ತು. ಒಂದು ನಿರ್ದಿಷ್ಟ ಅಳತೆಯಷ್ಟು ಭೂಭಾಗವನ್ನು ಕೆರೆಯನ್ನು ನಿರ್ಮಿಸಿದವನಿಗೆ ನೀಡಲಾಗುತ್ತಿತ್ತು. ಸಾಮಾನ್ಯವಾಗಿ ಮೂರರಲ್ಲಿ ಒಂದು ಭಾಗವು ಅವರಿಗೆ ಸೇರುತ್ತಿತ್ತು.[14] ಕೆಲವು ನಿದರ್ಶನಗಳಲ್ಲಿ ಕೆರೆಯು ದೇವಸ್ಥಾನಕ್ಕೆ ಒಳಪಟ್ಟಿದ್ದರೆ, ಆ ಕೆರೆಯ ಆಯಕಟ್ಟಿನ ಉತ್ಪನ್ನಗಳು ದೇವಾಲಯಕ್ಕೆ ಸೇರುತ್ತಿದ್ದವು. ತ್ರಯಂಬಕಪುರದ ಶಾಸನವು ಈ ನಿಟ್ಟಿನಲ್ಲಿ ಬೆಳಕನ್ನು ಚೆಲ್ಲುತ್ತದೆ. ಈ ಶಾಸನದಂತೆ ಒಟ್ಟು ಹದಿನೆಂಟು ಕೆರೆಗಳ ಆಯಕಟ್ಟಿನ ಉತ್ಪನ್ನಗಳು ತ್ರಯಂಬಕೇಶ್ವರ ದೇವರ ಸೇವೆಗೆ ಸಲ್ಲುತ್ತಿತ್ತು. ಹದಿನೆಂಟು ಕೆರೆಗಳ ಹೆಸರುಗಳು ಈ ರೀತಿಯಾಗಿವೆ. ಹಳಲಕೋಟೆ ಕೆರೆ, ಅರಕವಾಡಿ ಕೆರೆ, ನರಸಮಂಗಲದ ಕೆರೆ, ಹೆಗವಾಡಿಯ ಕೆರೆ, ಅಂಕೆಹಳ್ಳಿಯ ಕೆರೆ, ಹಗುಲದ ಕೆರೆ, ಕೋಡಿಹಳ್ಳಿಯ ಕೆರೆ, ಕುಂತನೂರು ಕೆರೆ, ವಿಜಯನಗರದ ಕೆರೆ, ನಲುವೂರ ಕೆರೆ, ರಾಘವಪುರದ ಕೆರೆ, ಎಡತಲೆಯ ಕೆರೆ, ಕೆಲಸೂರು ಕೆರೆ, ವೊಡೆಯನ ಕೆರೆ ಮತ್ತು ಸಗಡೆಯ ಕೆರೆ.[15]

ಕೆರೆಯನ್ನು ಕಟ್ಟಿದ ನಂತರ ಕೆಲವೊಂದು ಸಂದರ್ಭಗಳಲ್ಲಿ ಮಾರುವ ಹಕ್ಕು ಇತ್ತೆಂದು ತಿಳಿದುಬರುತ್ತದೆ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ವೆಂಕಟಾಪುರದ ಶಾಸನದಲ್ಲಿ ಇದರ ವಿವರಗಳು ದೊರಕುತ್ತವೆ. ಇದು ಒಂದು ಕ್ರಯ ಶಾಸನವಾಗಿರುವುದು ವಿಶೇಷವಾದ ಸಂಗತಿ. ಕೆರೆಯನ್ನು ಕಟ್ಟಿಸಿದವನು, ಬೋಯವೀಡು ಮತ್ತು ಕುಡುಚಿಲಪಾಡು ಎಂಬ ಗ್ರಾಮದಲ್ಲಿ ದಸವಂದದ ಪ್ರಕಾರವಾಗಿ ಕಟ್ಟಲಾದ ಕೆರೆಯನ್ನು ಬಯಿಚನ ಬೋಯಡು ಎಂಬುವವನಿಗೆ ಆ ಕೆರೆಯ ಸಂಬಂಧಿಸಿದ ಎಲ್ಲಾ ಸ್ವಾಮ್ಯವನ್ನು ಒಳಗೊಂಡು ಮಾರುತ್ತಾನೆಂದು ಕ್ರಿ. ಶ. ೧೪೨೬ರ ಶಾಸನವು ಹೇಳುತ್ತದೆ.[16] ಇದರಿಂದ ದಸವಂದ ಎಂಬ ಪ್ರಕಾರವು ಕೆರೆಯನ್ನು ನಿರ್ಮಿಸಿದವನಿಗೆ, ಕೆರೆಯ ಮೇಲೆ ಇದ್ದ ಹಕ್ಕನ್ನು ನಮಗೆ ತಿಳಿಸಿಕೊಡುತ್ತದೆ. ದಸವಂದವು ಒಂದು ತೆರಿಗೆಯೆಂದು ಪರಿಗಣಿಸಿದರೆ, ಈ ಮೇಲೆ ನೀಡಿದ ನಿದರ್ಶನದಲ್ಲಿ ದಸವಂದವು ಕೆರೆಯನ್ನು ಕಟ್ಟಿಸಿದವನಿಗೆ ಇದ್ದ ಹಕ್ಕು ಎಂದು ಅರ್ಥೈಸಬಹುದು.

ಹಂಪೆಯ ಬಳಿಯಲ್ಲಿ ಕನ್ನಡಿಯ ಕೆರೆ ಇತ್ತೆಂದು ವಿಜಯನಗರ ಅರಸರ ಮಂತ್ರಿಯಾದ ಲಕ್ಷ್ಮೀಧರನ ಕ್ರಿ.ಶ. ೧೪೧೦ರ ಒಂದು ಶಾಸನ ಉಲ್ಲೇಖಿಸಿರುವುದು ಗಮನಿಸತಕ್ಕ ವಿಷಯ. ಬಹುಶಃ ಈ ಕೆರೆಯು ಅತ್ಯಂತ ಸುಂದರವಾಗಿದ್ದು ಅದರ ನೀರು ತಿಳಿಯಾಗಿದ್ದಿರಬೇಕು ಎಂದು ಊಹಿಸಬಹುದು. ಈಗ ಕೆರೆಯು ಸಂಪೂರ್ಣವಾಗಿ ನಶಿಸಿಹೋಗಿದೆ.[17]

ಹಂಪೆಯ ಸಮೀಪದಲ್ಲಿಯೇ ಕೆಲವು ಕೆರೆಗಳು ಇದ್ದು ಅಂದಿನ ರಾಜಧಾನಿಯನ್ನು ಒಳಗೊಂಡು ಸುತ್ತಮುತ್ತಲ ಜನರಿಗೆ ಅವಶ್ಯಕವಾದ ನೀರನ್ನು ಪೂರೈಸುತ್ತಿತ್ತು ಎಂದು ಶಾಸನಗಳಿಂದ ತಿಳಿದುಬರುವ ವಿಷಯವಾಗಿದೆ. ಕವಕಿಯ ಕಟ್ಟೆ, ಭೂಪತಿಯ ಕೆರೆ, ಗೌರಜೀಯ ಕೆರೆ, ನಾಗಲಾಪುರ ಕೆರೆಗಳು ಹಂಪೆಯ ಸಮೀಪದಲ್ಲಿದ್ದರೆ,[18] ಚಿಕ್ಕರಾಯ ಕೆರೆ ಎಂಬ ಕೆರೆಯು ವಿಜಯನಗರ ಪಟ್ಟಣದಲ್ಲಿಯೇ ಇತ್ತು ಎಂದು ಶಾಸನಗಳು ದಾಖಲಿಸಿವೆ.[19] ಚಿಕ್ಕಹಂಸನ ಕೆರೆಯು ಸಹ ವಿಜಯನಗರ ಪಟ್ಟಣದಲ್ಲಿ ಇತ್ತೆಂಬುದಾಗಿ ಕಮಲಾಪುರದ ಕ್ರಿ.ಶ. ೧೫೨೨ರ ಶಾಸನವು ಉಲ್ಲೇಖಿಸುತ್ತದೆ.[20]

ಕೆಲವೊಂದು ಉದಾಹರಣೆಗಳಲ್ಲಿ ಚಿಕ್ಕ ಕೆರೆ ಅಥವಾ ಕುಂಟೆಗಳನ್ನು ಕಾಲಾನುಕ್ರಮದಲ್ಲಿ ವಿಸ್ತರಿಸಿದ ವಿವರಗಳು ವಿಜಯನಗರ ಕಾಲದಲ್ಲಿ ದೊರಕಿದೆ. ಸಂಡೂರು ಪ್ರದೇಶದಲ್ಲಿರುವ ತಳೂರು ಗ್ರಾಮದ ಕುಂಟೆಯ ಪ್ರವಾಹ ಬಂದು ಒಡೆಯಲಾಗಿ, ಅದನ್ನು ಜೀರ್ಣೋದ್ಧಾರ ಮಾಡುವ ಸಮಯಕ್ಕೆ ವಿಸ್ತರಿಸಲಾಯಿತು. ಈ ವಿಸ್ತರಣಾ ಕಾರ್ಯವನ್ನು ಮಹಾ ಮಂಡಲೇಶ್ವರ ಚಿಕ್ಕ ತಿಮ್ಮಯ್ಯದೇವನ ಮಗನಾದ ತಮ್ಮ ರಾಜರಸು ಮಾಡಿದನೆಂಬುದಾಗಿ ಕ್ರಿ.ಶ.೧೫೧೨ರ ಶಾಸನವು ದಾಖಲಿಸಿದೆ.[21] ಹಂಪೆಯ ಅಚ್ಯುತರಾಯ ದೇವಸ್ಥಾನ ಒಂದು ಶಾಸನವು ಭೂಪತಿ ಕೆರೆಯನ್ನು ಕುರಿತು ಉಲ್ಲೇಖಿಸುತ್ತದೆ. ಈ ಶಾಸನದ ತೇದಿಯು ಕ್ರಿ.ಶ. ೧೫೩೪. ಈ ಕೆರೆಯು ಅಚ್ಯುತರಾಯಪೇಟೆಯ ದಕ್ಷಿಣಕ್ಕೆ ಇತ್ತೆಂದು ಉಲ್ಲೇಖಿಸುವುದು ಗಮನಾರ್ಹವಾದ ವಿಷಯ. ಈ ಕೆರೆಯನ್ನು ಕುರಿತು ಮತ್ತೊಂದು ಶಾಸನವು ದಾಖಲಿಸಿದೆ.[22]

ಈ ಕೆರೆಯು ಮಾತಂಗ ಪರ್ವತದ ಕೆಳಗಿರುವ ಕಣಿವೆಯಲ್ಲಿದೆಯೆಂದು ಡಾಮ್‌ನಿಕ್‌ರವರು ಶೋಧಗಳಿಂದ ಸರಿಯಾಗಿ ಗುರುತಿಸಿದ್ದಾರೆ. ಇಂದು ಕೆರೆಯ ರೂಪದಲ್ಲಿ ಇದು ಕಂಡುಬರದಿದ್ದರೂ, ಒಂದು ಒಡ್ಡು ಕಟ್ಟಿ ಕೆರೆಯಂತೆ ನಿರ್ಮಿಸಲಾಗಿದೆ. ಅಚ್ಯುತಾಪುರದ ದಕ್ಷಿಣ ಗಡಿ ಭಾಗದಲ್ಲಿರುವ ಈ ನಿರ್ಮಿತಿಯನ್ನು ಗುರುತಿಸಲಾಗಿದೆ. ಇದು ಪೂರ್ಣ ಪ್ರಮಾಣದ ಕೆರೆಯಾಗಿರದೆ ನೀರಿನ ಸಂಗ್ರಾಹಕವಾಗಿದ್ದು, ಅಚ್ಯುತಾಪುರಕ್ಕೆ ಅಲ್ಲಿಂದಲೇ ನೀರು ಪೂರೈಸಲಾಗುತ್ತಿತ್ತು ಎಂದು ಊಹಿಸಬಹುದು. ಅಚ್ಯುತಾಪುರವು ನಿರ್ಜನಗೊಂಡ ತರುವಾಯದಲ್ಲಿ, ಅಲ್ಲಿಯ ನೀರನ್ನು ವ್ಯವಸಾಯಕ್ಕೆ ಬಳಸಿಕೊಂಡಿರಬಹುದೆಂದು ಮತ್ತು ಮಣ್ಣನ್ನು ಹಿರಿಯ ಕಾಲುವೆಯನ್ನು ನಿರ್ಮಿಸುವಾಗ ಬಳಸಿಕೊಂಡಿರಬೇಕೆಂದು ಡಾಮ್‌ನಿಕ್‌ರವರು ಅಭಿಪ್ರಾಯಪಟ್ಟಿದ್ದಾರೆ.[23]

ವಿಜಯನಗರ ಅರಸರ ಆಳ್ವಿಕೆಯಲ್ಲಿ ಸರ್ವಧರ್ಮಗಳಿಗೂ ಸಮಾನ ಸ್ಥಾನಮಾನಗಳು ಇದ್ದ ವಿಷಯವನ್ನು ಎಲ್ಲರೂ ಬಲ್ಲರಷ್ಟೇ. ಒಂದು ಕುತೂಹಲಕಾರಿಯಾದ ಸಂಗತಿಯನ್ನು ಇಲ್ಲಿ ಉದಾಹರಿಸುವುದು ಸೂಕ್ತ. ವಿಜಯನಗರ ಅರಸರ ಕಾಲದ ದಿಲುವಾರಖಾನ್‌ಸೀತಾಪನಮಲುಕ್ತಪಾರುನು ಎಂಬ ಮುಸಲ್ಮಾನ ಅಧಿಕಾರಿ ಕಾರ್ಯಕರ್ತ ಕೋಡಿರಾಮ ಸಮುದ್ರಭಟ್ಟ ಅಗ್ರಹಾರವನ್ನು ವೀರಯ್ಯನೆಂಬುವನಿಗೆ ದಾನಮಾಡಿದ ವಿಷಯವನ್ನು ಕೋಲಾರ ಜಿಲ್ಲೆಯ ತಮಕು ಶಾಸನವು ತಿಳಿಸುತ್ತದೆ.[24]

ಹಂಪಿ ಪರಿಸರದಲ್ಲಿ ಸುಮಾರು ೬೦ಕ್ಕೂ ಮಿಗಿಲಾದ ಕೆರೆಗಳಿವೆ. ಇವುಗಳಲ್ಲಿ ಸುಮಾರು ೫೫ಕ್ಕೂ ಅಧಿಕವಾದ ಕೆರೆಗಳು ವಿಜಯನಗರ ಕಾಲದಲ್ಲಿ ನಿರ್ಮಿಸಿದಂತಹ ಕೆರೆಗಳೇ ಆಗಿವೆ. ಅವುಗಳಲ್ಲಿ ಕೆಲವು ಕೆರೆಗಳು ವಿಜಯನಗರ ಪೂರ್ವದಲ್ಲಿಯೇ ಇದ್ದವು. ಅಂತಹ ಕೆಲವು ಕೆರೆಗಳನ್ನು ವಿಜಯನಗರ ಅರಸರ ಕಾಲದಲ್ಲಿ ವಿಸ್ತರಿಸಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ವಿಜಯನಗರ ಕಾಲದ ಕೆರೆಗಳನ್ನು ೧. ಶಾಸನಾಧಾರ, ೨. ತೂಬಿನ ಮೇಲಿರುವ ಗಜಲಕ್ಷ್ಮಿಯ ಉಬ್ಬುಶಿಲ್ಪ, ೩. ಕೈಫಿಯತ್ತುಗಳು ಮತ್ತು ೪. ಕಟ್ಟುವಾಡಗಳ ರಚನಾ ವಿಧಾನಗಳಿಂದ ಗುರುತಿಸಬಹುದು. ಹಂಪಿ ಪರಿಸರದ ವಿಜಯನಗರ ಕಾಲದ ಕೆರೆಗಳು ಸುಮಾರು ೫೫ಕ್ಕೂ ಮಿಗಿಲಾಗಿದೆಯೆಂದು ಈ ಮುಂಚೆಯೇ ಉಲ್ಲೇಖಿಸಲಾಗಿದೆ. ಈ ಕೆರೆಗಳನ್ನು ವೈಜ್ಞಾನಿಕವಾಗಿ ಎರಡು ಗುಂಪುಗಳನ್ನಾಗಿ ವಿಂಗಡಿಸಬಹುದು. ಅದರಂತೆ ಮೊದಲ ಕೆರೆಗಳ ಸಮೂಹವು ಸಮುದ್ರ ಮಟ್ಟದಿಂದ ಸುಮಾರು ೫೦೦ ಮೀಟರ್‌ಗಳಷ್ಟು ಎತ್ತರದಲ್ಲಿರುವಂತಹವುಗಳು ಮತ್ತು ಎರಡನೆಯ ಗುಂಪು ೪೦೦, ೫೦೦ ಮೀಟರ್‌ಗಳಷ್ಟು ಎತ್ತರದಲ್ಲಿರುವಂತಹವುಗಳೇ ಆಗಿವೆ. ಇವುಗಳಲ್ಲಿ ಒಂದು ಅಂಶವು ಅತ್ಯಂತ ಕುತೂಹಲಕಾರಿಯಾಗಿದೆ. ಬಹುತೇಕ ಕೆರೆಗಳು ಸುಮಾರು ೫೦೦ ಮೀಟರ್‌ನಷ್ಟು ಎತ್ತರದ ಪ್ರದೇಶಗಳಲ್ಲಿಯೇ ನಿರ್ಮಿಸಲಾಗಿದೆ. ಎಲ್ಲ ಕೆರೆಗಳು ಒಂದೇ ಕಾಲದಲ್ಲಿ ನಿರ್ಮಾಣಗೊಂಡಿಲ್ಲ. ಅವುಗಳನ್ನು ಬೇರೆ ಬೇರೆ ಕಾಲಘಟ್ಟಗಳಲ್ಲಿ ನಿರ್ಮಿಸಿರುತ್ತಾರೆ. ಆದರೂ ಈ ಎಲ್ಲ ಕೆರೆಗಳ ಸರಾಸರಿ ಎತ್ತರವನ್ನು ನಾವು ಗಣನೆಗೆ ತೆಗೆದುಕೊಂಡರೆ, ಇವು ಸುಮಾರು ೫೦೦ ಮೀಟರ್‌ಗಳ ವ್ಯಾಪ್ತಿಯಲ್ಲಿಯೇ ಬರುತ್ತವೆ. ಮತ್ತೊಂದು ಸಂಗತಿಯೆಂದರೆ, ತುಂಗಭದ್ರಾ ನದಿಯು ಸಹ ಸಮುದ್ರ ಮಟ್ಟದಿಂದ ೫೦೦ ಮೀಟರ್‌ನಷ್ಟು ಎತ್ತರದಲ್ಲಿ ಹರಿಯುತ್ತದೆ. ಆ ನದಿಯ ಪಾತ್ರದ ಎತ್ತರ ಮತ್ತು ವಿಜಯನಗರ ಕಾಲದ ಕೆರೆಗಳ ಎತ್ತರವೂ ಒಂದೇ ಆಗಿದೆ. ವಿಜಯನಗರ ಕಾಲದಲ್ಲಿ ಕೆರೆ ಕಟ್ಟುವುದರಲ್ಲಿ ಇದ್ದ ನೈಪುಣ್ಯತೆ ಹಾಗೂ ಉನ್ನತ ತಾಂತ್ರಿಕ ಜ್ಞಾನಮಟ್ಟವು ಎಷ್ಟರಮಟ್ಟಿಗೆ ಇತ್ತೆಂದು ತಿಳಿಸುವುದರೊಂದಿಗೆ ಆ ಕಾಲದಲ್ಲಿ ಇಂತಹ ರಚನೆಗಳಿಗೆ ಅವರು ನೀಡುತ್ತಿದ್ದ ಪ್ರಾಮುಖ್ಯತೆಯನ್ನು ನಮಗೆ ಪರಿಚಯಿಸಿಕೊಡುತ್ತದೆ.

ಇಲ್ಲಿನ ವಿಜಯನಗರ ಕಾಲದ ಕೆರೆಗಳ ಏರಿಗಳು ಸಹ ಒಂದು ನಿರ್ದಿಷ್ಟವಾದ ದಿಕ್ಕಿಗೆ ಇರುವುದು ಸಹ ಗಮನಾರ್ಹ ಸಂಗತಿ. ಬಹುತೇಕ ಕೆರೆ ಏರಿಗಳು ಉತ್ತರದಿಕ್ಕಿನಲ್ಲಿ ಇವೆ. ಹೊಸಪೇಟೆ ತಾಲೂಕಿನ ದಕ್ಷಿಣ ಭಾಗವು ಎತ್ತರವಾಗಿದ್ದು, ಈ ಪ್ರದೇಶದಲ್ಲಿ ಬೀಳುವ ಮಳೆಯು ಸಣ್ಣ ತೊರೆಗಳಾಗಿ ಉತ್ತರ ಭಾಗಕ್ಕೆ ಹರಿಯುತ್ತವೆ ಮತ್ತು ತುಂಗಭದ್ರಾ ನದಿಯನ್ನು ಸೇರುತ್ತದೆ. ಆದ್ದರಿಂದ ಅಂತಹ ಸಣ್ಣ ತೊರೆಗಳ ಸಹಾಯದಿಂದ ಕೆರೆಗೆ ನೀರನ್ನು ಹಾಯಿಸಿಕೊಂಡು ನೈಸರ್ಗಿಕ ಕ್ಷಿತಿಜ ಭೂಮಟ್ಟಕ್ಕೆ ಅನುಗುಣವಾಗಿ ಆಯಕಟ್ಟಿನ ಕಾಲುವೆಗಳನ್ನು ನಿರ್ಮಿಸಿರುತ್ತಾರೆ. ಆದುದರಿಂದ ಕೆರೆ ಏರಿಗಳನ್ನು ಸಹ ಉತ್ತರ ದಿಕ್ಕಿಗೆ ಕಟ್ಟಲಾಗಿದೆ.

ವಿಜಯನಗರ ಕಾಲದಲ್ಲಿ ಹವಾಮಾನವು ಇಂದಿನ ಹವಾಮಾನದಂತೆಯೇ ಇದ್ದು, ಇಂದು ಬೆಳೆಯಲಾಗುತ್ತಿರುವ ಮುಖ್ಯ ಬೆಳೆಗಳಾದ ಭತ್ತ, ಜೋಳ, ಕಬ್ಬು ಮತ್ತು ಬಾಳೆಗಳನ್ನು ಅಂದು ಸಹ ಬೆಳೆಯುತ್ತಿದ್ದರು. ಆ ಕಾಲಕ್ಕೆ ಸೇರಿದ ಅನೇಕ ಶಾಸನಗಳು ಮುಖ್ಯ ಬೆಳೆಗಳನ್ನು ಕುರಿತು ತಿಳಿಸುತ್ತವೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಮುಖ ಕೃಷಿ ಹವಾಮಾನದತ್ತ ಗಮನಹರಿಸಿ ವಿಜಯನಗರ ಕಾಲದಲ್ಲಿ ಏಕೆ ನೂರಾರು ಕೆರೆಗಳು, ಕಟ್ಟೆಗಳು, ಕುಂಟೆಗಳೇ ಮುಂತಾದ ನೀರಾವರಿ ರಚನೆಗಳು ನಿರ್ಮಾಣಗೊಂಡವೆಂದು ಅರಿಯುವ ಪ್ರಯತ್ನವನ್ನು ಮಾಡಬಹುದು.

ಈ ಪ್ರದೇಶವು ಕರ್ನಾಟಕದ ಅಧಿಕ ಬಯಲು ಸೀಮೆ ಅಥವಾ ಮೈದಾನ ಭೂಭಾಗವು ಪ್ರದೇಶಗಳನ್ನು ಒಳಗೊಂಡಿದ್ದು ಶೇ. ೭೨ರಷ್ಟು ಪ್ರದೇಶವು ಕೃಷಿಗೆ ಸಹಕಾರಿಯಾಗಿದೆ. ಇಲ್ಲಿಯ ವಾರ್ಷಿಕ ಸರಾಸರಿ ಮಳೆಯು ೪೦೦ ರಿಂದ ೮೦೦ ಮಿ.ಮೀ.ಗಳಷ್ಟು ಇದ್ದು ವಾಣಿಜ್ಯ ಬೆಳೆಗಳನ್ನು ಒಳಗೊಂಡು ಭತ್ತ, ರಾಗಿ, ಮೆಣಸಿನಕಾಯಿ ಮುಂತಾದ ಅನೇಕ ಬೆಳೆಗಳನ್ನು ಈ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಈ ಪ್ರದೇಶವು ಪದೇ ಪದೇ ಕ್ಷಾಮಕ್ಕೆ ಸಹ ಒಳಗಾಗುತ್ತದೆ. ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳು ಈ ಭಾಗದಲ್ಲಿ ಸೇರಿದ್ದು ಇಲ್ಲಿಯ ಮಳೆಯು ಅತ್ಯಲ್ಪವಾಗಿದೆ. ಅಂಕಿ ಅಂಶದ ಪ್ರಕಾರ ಇಲ್ಲಿಯ ಮಳೆಯ ಪ್ರಮಾಣವು ಒಂದು ವರ್ಷದಲ್ಲಿ ೨೯ ರಿಂದ ೪೦ ಮಳೆಯ ದಿನಗಳಾಗಿವೆ. ಸರಾಸರಿ ಒಂದು ದಿನದಲ್ಲಿ ೨.೫ ಮಿ.ಮೀ.ಯಷ್ಟು ಮಳೆಯಾದ ದಿನವನ್ನು ಒಂದು ಮಳೆಯ ದಿನ ಎಂದು ಪರಿಗಣಿಸಲಾಗುತ್ತದೆ. ಮಳೆಯು ಕಡಿಮೆ ಇರುವ ಕಾರಣ ಬೇಸಿಗೆಯಲ್ಲಿ ತುಂಗಭದ್ರಾ ಮತ್ತು ಮಲಪ್ರಭಾದಂತಹ ನದಿಗಳು ಸಹ ಒಣಗುವ ಸಂಭವವೇ ಜಾಸ್ತಿಯಿದ್ದ ಕಾರಣವಾಗಿ ತುಂಗಭದ್ರಾ ನದಿಗೆ ಅಡ್ಡಲಾಗಿ ಅಲ್ಲಲ್ಲಿ ಕಟ್ಟೆಗಳನ್ನು ನಿರ್ಮಿಸಿ ನೀರನ್ನು ನಾಲೆಗಳ ಮೂಲಕ ಹಾಯಿಸಿ ಕೃಷಿಗೆ ಬಳಸಿಕೊಂಡಿರುವುದನ್ನು ಕಾಣಬಹುದು. ಅಂತರ್ಜಲವು ಕರಾವಳಿ ಮತ್ತು ಮಲೆನಾಡಿಗಿಂತಲೂ ಈ ಭಾಗದಲ್ಲಿ ಜಾಸ್ತಿಯಗಿರುತ್ತದೆ ಎಂಬುದು ಗಮನಿಸತಕ್ಕ ವಿಷಯ. ಈ ರೀತಿಯಾಗಿ ಕಟ್ಟೆಗಳನ್ನು ನಿರ್ಮಿಸುವ ಕಾರ್ಯವನ್ನು ವಿಜಯನಗರದ ಅರಸರು ಮೊಟ್ಟಮೊದಲು ೧೪ನೆಯ ಶತಮಾನದಲ್ಲಿ ಪ್ರಾರಂಭಿಸಿದರೆಂದು ಅಧ್ಯಯನದಿಂದ ತಿಳಿದುಬರುತ್ತದೆ.

ಮಳೆಯ ನೀರನ್ನು ಆಶ್ರಯಿಸಿರುವಂತಹ ಈ ಪರಿಸರದ ಕೆರೆಗಳನ್ನು ನಿರ್ಮಿಸುವಾಗ ಪರಿಸರಕ್ಕನುಗುಣವಾಗಿ, ಮೂರು ಅಥವಾ ನಾಲ್ಕು ಕೆರೆಗಳನ್ನು ಸಮೀಪದಲ್ಲಿಯೇ, ಒಂದಕ್ಕೊಂದು ಹೊಂದಿಕೊಂಡಿರುವಂತೆ ಕಟ್ಟಿರುವುದನ್ನು ಗಮನಿಸಬಹುದು. ಈ ರೀತಿಯಾದ ವ್ಯವಸ್ಥೆಯಿಂದ ಎರಡು ಪ್ರಯೋಜನಗಳಿವೆ. ಮೊದಲನೆದಾಗಿ ಒಂದು ಕೆರೆ ತುಂಬಿದಾಗ, ಹೆಚ್ಚುವರಿ ನೀರು ಮತ್ತೊಂದು ಕೆರೆಗೆ ಹರಿದುಬರುತ್ತದೆ. ಇದರಿಂದಾಗಿ ಎತ್ತರದಲ್ಲಿರುವ ಕೆರೆಗೆ ಮೊದಲನೆಯ ಕೆರೆಗೆ ಹೆಚ್ಚುವರಿ ನೀರು ಬಂದ ಪಕ್ಷದಲ್ಲಿಯೂ ಏರಿಗೆ ಯಾವುದೇ ವಿಧದ ಅಪಾಯವುಂಟಾಗುವದಿಲ್ಲ. ಆ ಕೆರೆಯ ಸುರಕ್ಷಿತವಾಗಿರುತ್ತದೆ. ಎರಡನೆಯ ಪ್ರಯೋಜನವು ಏನೆಂದರೆ ಹೆಚ್ಚುವರಿ ನೀರು, ವ್ಯರ್ಥವಾಗದಂತೆ ಎರಡನೆಯ ಕೆರೆಯಲ್ಲಿ ಶೇಖರಗೊಳ್ಳುತ್ತದೆ. ಇದು ನಮ್ಮ ಪೂರ್ವಜರು ತಮ್ಮ ದೀರ್ಘ ಅನುಭವದಿಂದ ಈ ವಿಷಯಗಳನ್ನು ಕಂಡುಕೊಂಡು ಅತ್ಯಂತ ವೈಜ್ಞಾನಿಕವಾಗಿ ತಮ್ಮ ದೈನಂದಿನ ಜೀವನದಲ್ಲಿ ಬಳಕೆಗೆ ತಂದಿರುವುದು ನಿಜಕ್ಕೂ ಶ್ಲಾಘನೀಯ. ಈ ಪರಿಸರದಲ್ಲಿ ತಾಲೂಕಿನಲ್ಲಿ ಇಂತಹ ಮಳೆ ಆಶ್ರಿತ ಕೆರೆಗಳ ಸಮುಚ್ಛಯವನ್ನು ಇಂದಿಗೂ ನಾವು ಕಾಣಬಹುದು.

ಕೆರೆಗೆ ಸಂಬಂಧಿಸಿದಂತೆ ಕೆಲವು ಮುಖ್ಯ ಭಾಗಗಳು ಈ ರೀತಿಯಾಗಿವೆ.

 

[1] ಈ ಮಾಹಿತಿಯನ್ನು ನೀಡಿದ ಪ್ರೊ. ಎಸ್‌.ಎನ್‌.ರಾಜಗುರು, ಮುಖ್ಯಸ್ಥ (ನಿವೃತ್ತ), ಡೆಕ್ಕನ್ ಕಾಲೇಜ್‌ಆಂಡ್ ಪೋಸ್ಟ್ ಗ್ರಾಜುಯೇಟ್ ರಿಸರ್ಚ್‌ಇನ್ಸ್‌ಟಿಟ್ಯೂಟ್‌, ಪುಣೆ ಅವರಿಗೆ ಕೃತಜ್ಞನಾಗಿದ್ದೇನೆ.

[2] ಐಎಸ್‌ವಿಇ, ಪು. ೬೬, ಕುಪ್ಪುಸ್ವಾಮಿ, ಜಿ.ಆ., ಕ್ಯೂಜೆಎಂಎಸ್‌, ಸಂ.L X X IV ಸಂ. ೪, ಪು. ೪೨೦

[3] ಐಎಸ್‌ವಿಇ, ಪು. ೬೭

[4] ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳಲ್ಲಿ ನಾಲ್ಕು ಸಾವಿರಕ್ಕೂ ಅಧಿಕವಾದ ವಿಜಯನಗರ ಕಾಲದ ಶಾಸನಗಳು ದೊರಕಿವೆ.

[5] ನೆಲ್ಲೂರು ಇನ್ಸ್‌ಕ್ಸಪ್ಯನ್ಸ್‌, ಭಾಗ ೧, ಸಂ. ೩೮೨ ಮತ್ತು ಪು. ೪೭೧, ಹೆಚ್‌ಎಎಸ್‌, ಸಂ. X III, ಸಂ. ೫೩ ಮತ್ತು ೫೪, ಪು. ೬೩ ಮತ್ತು ಐಎಸ್‌ವಿಇ, ಪು. ೬೭

[6] ಎಪ್‌ಇಂಡ್‌, ಸಂ. X IV, ಪು. ೧೦೮-೧೯, ಐಎಸ್‌ವಿಇ, ಪು. ೬೭-೬೮, ದೀಕ್ಷಿತ್‌, ಜಿ.ಎಸ್‌. ಮತ್ತು ಇತರರು, ಟ್ಯಾಂಕ್‌ಇರಿಗೇಷನ್‌ಇನ್‌ಕರ್ನಾಟಕ, ಪು. ೧೩೯-೪೨.

[7] ದೀಕ್ಷಿತ, ಜಿ.ಎಸ್‌ಮತ್ತು ಇತರರು, ಪೂರ್ವೋಕ್ತ, ಪು. ೧೩೯-೪೨.

[8] ಎಪ್‌ಕಾರ್ನ್‌(ಹಳೆ), ಸಂ. X , ಸಂ. ಎಂ.ಬಿ. ೧೭೨.

[9] ಧ್ರುವನಾರಾಯಣ ಎಂ. (ಅನು), ಕೊಟ್ರಯ್ಯ ಸಿ.ಟಿ.ಎಂ. (ಮೂಲ), ವಿಜಯನಗರ ಸಾಮ್ರಾಜ್ಯದ ನೀರಾವರಿ ವ್ಯವಸ್ಥೆ, ಪು. ೭೪-೭೫.

[10] ಅದೇ, ಪು. ೭೫.

[11] ಎಆರ್ ಎಸ್‌೧೯೩೪-೩೫, ಸಂ. ೩೫೧

[12] ಎಪ್‌ಕಾರ್ನ್‌, (ಹಳೆ) ಸಂ. V, ಸಂ. ಬಿಜಿ ೧೦, ಪು. ೪೪, ಧ್ರುವನಾರಾಯಣ ಎಂ. (ಅನು), ಪೂರ್ವೋಕ್ತ, ಪು. ೮೧.

[13] ಎಪ್‌ಕಾರ್ನ್‌(ಹಳೆಯ), ಸಂ. V, ಸಂ. ಬಿಜಿ ೧೦

[14] ಅದೇ, ಸ. X ಸಂ. ಜಿಬಿ ೬

[15] ಮಹಾಲಿಂಗಂ, ಟಿ.ವಿ., ಆಡ್‌ಮಿನಿಸ್ಟ್ರೇಟಿವ್‌ಅಂಡ್‌ಸೋಶಿಯಲ್ ಲೈಫ್‌ಅಂಡರ್ ವಿಜಯನಗರ, ಭಾಗ II, ಪು. ೭೮, ಎಪ್‌. ಕಾನ್‌, ಸಂ. III (ಹಳೆಯ) ಸಂ. ಸಿಪಿ ೧೬೯.

[16] ಎಪ್‌ಕಾನ್‌(ಹಳೆಯ), ಸಂ. III, ಸಂ. ಜಿಯು ೧೪೯.

[17] ಐಎಸ್‌ವಿಇ, ಪು. ೭೬

[18] ಐಎಸ್‌ಐಐ, ಸಂ. IV, ಸಂ. ೨೬೭

[19] ಅದೇ, ಸಂ. ೪೯೧

[20] ಅದೇ, ಸಂ. ೫೧೦

[21] ಅದೇ, ಸಂ. ೨೪೯

[22] ಅದೇ, ಸಂ. ೨೫೦

[23] ಅದೇ, ಸಂ. I X , ಭಾಗ-೨, ಸಂ. ೫೬೪, ಡಾಮ್‌ನಿಕ್‌ಜೆ. ಡೇವಿಸನ್‌ಜೆನ್‌ಕಿನ್ಸ್‌, ದಿ ಇರಿಗೇಶನ್ ಅಂಡ್‌ವಾಟರ್ ಸಪ್ಲೆ ಸಿಸ್ಟಮ್ಸ್‌ಆಫ್ ವಿಜಯನಗರ, ಪು. ೬೨ ಮತ್ತು ಛಾಯಾಚಿತ್ರ ೪,೮೨, ೪.೮೩ ಮತ್ತು ೪.೮೪ ರೇಖಾಚಿತ್ರ ೪.೮೫

[24] ಎಪ್‌ಕಾರ್ನ್‌(ಹಳೆಯ), ಸಂ. X , ಸಂ. ಕೆಎಲ್‌, ೧೪೭, ಪು. ೩೦-೩೧, ಧ್ರುವನಾರಾಯಣ ಎಂ. (ಅನು), ಪೂರ್ವೋಕ್ತ ಪು. ೮೬.