ದಣ್ಣಾಯಕನ ಕೆರೆ

ಇದು ಹೊಸಪೇಟೆ ತಾಲೂಕಿನಲ್ಲಿರುವ ಒಂದು ದೊಡ್ಡ ಕೆರೆಯಾಗಿದೆ. ಇಂದಿಗೂ ಅದು ಸುಸ್ಥಿತಿಯಲ್ಲಿದ್ದು ಅದರ ಪ್ರಯೋಜನವನ್ನು ಜನರು ಪಡೆಯುತ್ತಿದ್ದಾರೆ. ಇದು ಹೊಸಪೇಟೆಯ ದಕ್ಷಿಣಕ್ಕೆ ಸುಮಾರು ೨೦ ಕಿ.ಮೀ. ದೂರದಲ್ಲಿದೆ. ಈ ಕೆರೆಯನ್ನು ಮುದ್ದಾ ಎಂಬುವವನು ಕಟ್ಟಿಸಿದನೆಂದು ನಂತರ ಆತನು ದಣ್ಣನಾಯಕ ಅಥವಾ ದಂಡನಾಯಕನಾದನೆಂದು ತಿಳಿದುಬರುತ್ತದೆ. ಈ ಕೆರೆಯ ಜಲಾನಯನ ಪ್ರದೇಶವು ೪೭.೭೭ ಮೈಲುಗಳು ಮತ್ತು ಅಚ್ಚುಕಟ್ಟು ಪ್ರದೇಶವು ೧೫೦೭.೫ ಎಕರೆಗಳು. ಈ ಕೆರೆ ಪ್ರದೇಶದ ಮೇಲ್ಭಾಗದಲ್ಲಿ ಸುಮಾರು ೧೫ಕ್ಕೂ ಹೆಚ್ಚು ಕೆರೆಗಳು ಇದ್ದು ಅವುಗಳು ಹೆಚ್ಚುವರಿ ನೀರು ಕೆರೆಯಲ್ಲಿ ಸಂಗ್ರಹಗೊಳ್ಳುತ್ತದೆ. ಈ ಕೆರೆ ಏರಿಯ ಉದ್ದ ೨೬.೨೫ ಮೀಟರ್, ಎತ್ತರ ೭.೯೬ ಮೀ. ಮತ್ತು ಏರಿಯ ಮೇಲ್ಭಾಗದ ಅಗಲ ೭.೯೬ ಮೀ. ಮತ್ತು ೪.೫೭ ಮೀ. ಇದರ ಮೇಲೆ ಒಂದು ಎತ್ತಿನಗಾಡಿ ಹೋಗಬಹುದು. ಕೆರೆಗೆ ಎರಡು ಕಾಲುವೆಗಳಿದ್ದು ಅವುಗಳು ೨೧೦೦ ಮೀ. ಉದ್ದವಾಗಿದೆ. ಇದಕ್ಕೆ ಪಿಸ್ಟನ್‌ಮಾದರಿಯ ಎರಡು ತೂಬುಗಳು ಇವೆ. ಅವುಗಳು ವಿವಿಧ ಎತ್ತರಗಳಲ್ಲಿ ಸುಮಾರು ಇಪ್ಪತ್ತು ಮೀಟರ್ ಅಂತರಗಳಲ್ಲಿವೆ. ತೂಬುಗಳನ್ನು ಹೊರಭಾಗದ ಇಳಿಜಾರಿನಲ್ಲಿ ಕಾಲುವೆಗೆ ಸೇರಿಸಿರುವುದು ಈ ಕೆರೆಯ ವಿಶೇಷ. ಇದರಿಂದಾಗಿ ಆಯಕಟ್ಟು ಪ್ರದೇಶಕ್ಕೆ ನೀರು ಸಮರ್ಪಕವಾಗಿ ಹರಿದುಹೋಗುತ್ತದೆ.

ಈ ಕೆರೆಯನ್ನು ಕುರಿತಂತೆ ಇರುವ ಪ್ರಚಲಿತ ದಂತಕಥೆಯಂತೆ ಕುರುಬ ಹುಡುಗನಾಗಿದ್ದ ಮುದ್ದನು ಬ್ರಾಹ್ಮಣನ ಪೋಷಣೆಯಲ್ಲಿ ದೊಡ್ಡವನಾದ. ಆ ಬ್ರಾಹ್ಮಣನು ದೊಡ್ಡ ಜ್ಯೋತಿಷ್ಯನಾಗಿದ್ದ. ಒಂದು ದಿನ ಮುದ್ದನು ಮಲಗಿರುವಾಗ ಒಂದು ಸರ್ಪವು ಹೆಡೆಯೆತ್ತಿ ಮುದ್ದನಿಗೆ ನೆರಳು ಕೊಡುತ್ತಿತ್ತು. ಅದನ್ನು ನೋಡಿದ ಬ್ರಾಹ್ಮಣನು, ಈ ಬಾಲಕನು ಮುಂದೆ ದೊಡ್ಡ ವ್ಯಕ್ತಿಯಾಗಿ ಪ್ರಜೆಗಳಿಗೆ ಹಿತಾತ್ಮಕ ಕಾರ್ಯಗಳನ್ನು ಮಾಡುತ್ತಾನೆ ಎಂದು ಭವಿಷ್ಯವನ್ನು ನುಡಿಯುತ್ತಾನೆ. ಮುದ್ದನೆ ಮುಂದೆ ಕೆರೆಯನ್ನು ಕಟ್ಟಿಸಿದನೆಂದು ಜನರು ನಂಬಿದ್ದಾರೆ. ಅವನು ಮಡಿದ ನಂತರ ಅವನ ದೇಹವನ್ನು ಇಂದಿನ ರಾಯರಕೆರೆಯ ಏರಿಯಲ್ಲಿ ಸಮಾಧಿ ಮಾಡಲಾಯಿತು ಎಂಬ ನಂಬಿಕೆಯಿದೆ.

ದರೋಜಿ ಕೆರೆ

ಹೊಸಪೇಟೆಯ ಪೂರ್ವಕ್ಕೆ ಸುಮಾರು ೨೫ ಕಿ.ಮೀ. ದೂರದಲ್ಲಿರುವ ಹೊಸಪೇಟೆ ಬಳ್ಳಾರಿ ರಸ್ತೆಯಲ್ಲಿ ದರೋಜಿ ಗ್ರಾಮವಿದೆ. ಇದು ಸಂಡೂರು ತಾಲೂಕಿನಲ್ಲಿದೆ. ಈ ಗ್ರಾಮದಲ್ಲಿ ಒಂದು ಕೆರೆಯಿದ್ದು, ಇದನ್ನು ಆ ಗ್ರಾಮನಾಮವಾದ ದರೋಜಿಯಿಂದ, ದರೋಜಿಕರೆಯೆಂದು ಕರೆಯಲಾಗುತ್ತಿದೆ. ಈ ಕೆರೆಯನ್ನು ಯಾರು ನಿರ್ಮಿಸಿದರು ಎಂಬುದರ ಬಗ್ಗೆ ಖಚಿತವಾದ ಮಾಹಿತಿಯು ದೊರೆಯುವುದಿಲ್ಲ. ಗ್ರಾಮದ ಜನರು ಪ್ರಚಲಿತ ನಂಬಿಕೆಗಳಂತೆ ಈ ಕೆರೆಯನ್ನು ಟೀಪುಸುಲ್ತಾನನು ಕಟ್ಟಿಸಿದ.

ದರೋಜಿ ಗ್ರಾಮದ ಕೈಫಿಯತ್ತು ಈ ಕೆರೆಯನ್ನು ಯಾರು ಕಟ್ಟಿಸಿದರು ಎಂಬುದರ ಬಗೆಗೆ ಕೆಲವು ವಿವರಗಳನ್ನು ನೀಡಿರುವುದು ಗಮನಾರ್ಹ. ಕಂಪಿಲರಾಯನ ಮಗನಾದ ಕುಮಾರರಾಮನು ಈ ಪ್ರದೇಶದಲ್ಲಿ ರಾಜ್ಯವಾಳುತ್ತಿರುವಾಗ ಸುಲ್ತಾನರು (ಪಾಛೆಯವರು) ಸುಮಾರು ಹನ್ನೆರಡು ಲಕ್ಷ ಫೌಜು ತೆಗೆದುಕೊಂಡು ದಾಳಿ ನಡೆಸಿ ಕುಮಾರರಾಮನನ್ನು ಹತ್ಯೆ ಮಾಡಿ ರಾಜ್ಯವನ್ನು ತಮ್ಮದಾಗಿಸಿಕೊಂಡು ತಮ್ಮ ದೇಶಕ್ಕೆ ಹಿಂತಿರುಗುವಾಗ ಗೆದ್ದ ರಾಜ್ಯದಲ್ಲಿ ಅವರ ಗುರುತು ಇರಬೇಕೆಂದು ಸರದಾರರನ್ನು ಕರೆಸಿ ಅವರ ಪಾಲಿನ ಭೂಪ್ರದೇಶಗಳಲ್ಲಿ ಒಂದು ಕೆರೆಯನ್ನ ನಿರ್ಮಿಸಲು ಅಪ್ಪಣೆ ಮಾಡುತ್ತಾನೆ. ಆ ಕೆರೆಗಳು ಸಮುದ್ರಕ್ಕೆ ಹೋಲುವಂತಹುಗಳಾಗಿ ಇರಬೇಕು ಎಂದು ಸಹ ತಿಳಿಸುತ್ತಾನೆ.

[1]

ಅವರ ಆದೇಶದಂತೆಯೇ ಮೂವರು ಸರದಾರರು ಮೂರು ಕೆರೆಗಳನ್ನು ದರೋಜಿಯ ಸಮೀಪದಲ್ಲಿಯೇ ಕಟ್ಟುತ್ತಾರೆ. ಸಿಂಗಸರದಾರರು ಸಿಂಗನಕೆರೆ, ಹಗಲಾಭತ್ತಾಖಾನನು ಕಟ್ಟಿಸಿದ ಕೆರೆಗೆ ಹಗಲಾಭತ್ತಾನಕೆರೆ ಮತ್ತು ಇನ್ನೊಂದು ಕೆರೆಗೆ ಖಾನ್‌ಕೆರೆಯೆಂದು ಹೆಸರಿಸಿದ್ದಾರೆ. ಮೂರನೆಯ ಕೆರೆಯನ್ನು ಬಾಹಾಳ ಸರದಾರ ಕಟ್ಟಸಿದನೆಂದು ತಿಳಿದುಬರುತ್ತದೆ. ಈ ಕೆರೆಯು ಸಮುದ್ರದಂತೆಯಿದ್ದು ‘ದರಿಯ ತಲಾಉ’ ಎಂದು ಹೆಸರಿದ್ದಾರೆ. ‘ದರಿಯ ತಲಾಉ’ ಎಂದರೆ ನೀರಿರುವ ಕೆರೆಯೆಂದು ಪರ್ಷಿಯನ್‌ಮತ್ತು ಹಿಂದಿ ಭಾಷೆಗಳಲ್ಲಿ ಅರ್ಥ. ಕನ್ನಡದಲ್ಲಿ ದರಿಯ ಕೆರೆಯೆಂದು ಕರೆಯಲ್ಪಟ್ಟು ನಂತರದಲ್ಲಿ ದರೋದಿಯಾಗಿ ನಂತರ ದರೋಜಿಯಾಯಿತು ಎಂದು ಕೈಫಿಯತ್ತು ತಿಳಿಸುತ್ತದೆ.[2]

ಈ ಕೆರೆಯ ಕೋಡಿಯು ಪಶ್ಚಿಮಕ್ಕೆ ಇದ್ದುದಾಗಿ ತಿಳಿಸುತ್ತಾ ಅಲ್ಲಿ ವೀರಭದ್ರ ದೇವಾಲಯವಿರುವುದನ್ನು ಉಲ್ಲೇಖಿಸುತ್ತದೆ. ಇಂದಿಗೂ ಅಲ್ಲಿ ಒಂದು ವೀರಭದ್ರ ದೇವಾಲಯವಿದ್ದು ಅದನ್ನು ಕೋಡಿ ವೀರಭದ್ರ ದೇವಾಲಯವೆಂದು ಜನರು ಕರೆಯುತ್ತಾರೆ. ಈ ಕೆರೆಯು ಒಮ್ಮೆ ಒಡೆದುಹೋದುದರ ಉಲ್ಲೇಖವು ಕೈಫಿಯತ್ತಿನಲ್ಲಿದೆ. ಬಹುಶಃ ಸಂಡೂರು ಪ್ರದೇಶದಲ್ಲಿ ಹೆಚ್ಚು ಮಳೆಯಾಗಿ ಅಲ್ಲಿರುವ ಕೆಲವು ಕೆರೆಗಳು ಒಡೆದು, ಆ ನೀರು ಆ ಕೆರೆಗೆ ಹರಿದುಬಂದು, ದರೋಜಿಕೆರೆಯು ಒಡೆದಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.[3] ಈ ಕೆರೆಯು ಒಡೆದ ನಂತರ ಅದನ್ನು ಸರಿಪಡಿಸಲು ಸಾಕಷ್ಟು ಕಾಲವಾಯಿತು ಎಂಬುದು ಕೈಫಿಯತ್ತಿನಿಂದ ತಿಳಿಯಬಹುದಾಗಿದೆ. ಕೆರೆಯನ್ನು ಕಟ್ಟುವುದರಲ್ಲಿ ಟೀಪುಸುಲ್ತಾನನು ಸಹಾಯ ಮಾಡಿರುವುದು ಸ್ಪಷ್ಟವಾಗುತ್ತದೆ. ಇವುಗಳಲ್ಲದೇ ಇನ್ನೆರಡು ಸಂಗತಿಗಳು ಸಹ ತಿಳಿದುಬರುತ್ತದೆ. ಅವುಗಳೆಂದರೆ, ಈ ಕೆರೆಯು ಒಡೆದ ಕಾರಣ ಹಳೇ ದರೋಜಿ ಗ್ರಾಮವು ಕೊಚ್ಚಿಕೊಂಡು ಹೋಯಿತು ಎಂಬುದೇ ಆಗಿದೆ. ಮತ್ತೊಂದು ವಿಷಯವು ಕೆರೆಯನ್ನು ಜೀರ್ಣೋದ್ಧಾರ ಮಾಡುವ ಕಾಲಕ್ಕೆ ಪಶ್ಚಿಮದ ಕೋಡಿಯ ಎತ್ತರವನ್ನು ತಗ್ಗಿಸಿದರು ಎಂಬುದಾಗಿದೆ. ಬಹುಶಃ ಇದಕ್ಕೆ ಮುಂಚೆ ಕೋಡಿಯು ಎತ್ತರವಾಗಿದ್ದು, ಕೆರೆಯಲ್ಲಿ ಈಗಿರುವ ನೀರು ಸಂಗ್ರಹ ಸಾಮರ್ಥ್ಯಕ್ಕಿಂತ ಅಧಿಕವಾಗಿತ್ತೆಂದು ಸುಲಭವಾಗಿ ಊಹಿಸಬಹುದು. ದರೋಜಿ ಕೆರೆಗೆ ನಾಲ್ಕು ತೂಬುಗಳಿದ್ದು ಅವುಗಳಲ್ಲಿ ಮೂರು ಮಾತ್ರವೇ ಕಾರ್ಯ ನಿರ್ವಹಿಸುತ್ತಿದ್ದವು ಎಂದು ಕೈಫಿಯತ್ತಿನಲ್ಲಿ ದಾಖಲಾಗಿದೆ.[4] ಇಂದಿಗೂ ಮೂರು ತೂಬುಗಳು ಮಾತ್ರವೇ ಕಾರ್ಯನಿರ್ವಹಿಸುತ್ತಿವೆ. ಮಾಗಣಿಗಳಿಗೆ ದರೋಜಿ ಕೆರೆಯಿಂದ ಎಷ್ಟು ನೀರು ಉಣಿಸುತ್ತಿದ್ದವು ಎಂಬುದನ್ನು ಮಾಗಣಿಗಳ ಹೆಸರಿನೊಂದಿಗೆ ಕೈಫಿಯತ್ತು ನೀಡಿದೆ.

ಟೀಪುವಿನ ಸೇನಾಪಡೆಯು ಮರಾಠರೊಂದಿಗೆ ಯುದ್ಧ ಮಾಡುವಾಗ ಸುಮಾರು ಮೂವತ್ತುಸಾವಿರ ಸೈನಿಕರ ಈ ಕೆರೆಯು ಬತ್ತಿದಾಗ ಅದರಲ್ಲಿ ಅಡಗಿಕೊಂಡಿದ್ದರು ಎಂಬ ಜನಪದ ನಂಬಿಕೆಯಿದೆ. ಈ ಕೆರೆಯು ಟೀಪುವಿನ ಕಾಲದಲ್ಲಿ ಒಣಗಿದ್ದು ಮತ್ತು ಕೆರೆಯ ಭಾಗದಲ್ಲಿ ಮೂವತ್ತು ಸಾವಿರ ಸೈನಿಕರು ಅಡಗಿಕೊಳ್ಳವಷ್ಟು ವಿಸ್ತಾರವಾಗಿತ್ತೆಂಬ ಎರಡು ಅಂಶಗಳು ತಿಳಿಯಬರುತ್ತವೆ. ಈ ಮೇಲಿನ ಅಂಶಗಳನ್ನು ಪರಿಗಣಿಸಿದಾಗ ಈ ಕೆರೆಯನ್ನು ಟೀಪುಸುಲ್ತಾನನ ಕಾಲದಲ್ಲಿ (೧೭-೧೮ನೇ ಶತಮಾನ) ಅಥವಾ ಅದಕ್ಕೂ ಮುಂಚೆ ಕಟ್ಟಿರುವ ಸಾಧ್ಯತೆಗಳಿವೆ.

ಈ ಕೆರೆಯು ಏರಿಯು ಸುಮಾರು ೩.೫ ಕಿ.ಮೀ. ಉದ್ದ ಮತ್ತು ೪೫ ಅಡಿಗಳಷ್ಟು ಎತ್ತರವಿದೆ. ದರೋಜಿ ಕೆರೆಯು ಸುಮಾರು ೨೦೦೦ಕ್ಕೂ ಎಕರೆಗಳಿಗೆ ನೀರುಣಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕೆರೆಗೆ ನಾರಿಹಳ್ಳದಿಂದ ನೀರು ಹರಿದುಬರುತ್ತದೆ.

ಕ್ರಿ.ಶ. ೧೮೫೧ರಲ್ಲಿ ಬಂದ ಪ್ರವಾಹದಿಂದ ಸಂಪೂರ್ಣವಾಗಿ ನಾಶವಾಗಿ ಅದನ್ನು ಎರಡು ವರ್ಷಗಳಲ್ಲಿ ಅಂದರೆ ಕ್ರಿ.ಶ. ೧೮೫೩ರಲ್ಲಿ ಪುನ್‌ನಿರ್ಮಾಣ ಮಾಡಲಾಯಿತು ಎಂಬುದಾಗಿ ದರೋಜಿ ಕೆರೆ ಕೋಡಿಯ ಸಮೀಪದಲ್ಲಿ ದೊರೆತ ಒಂದು ಶಾಸನವು ತಿಳಿಸುತ್ತದೆ. ಇದೇ ಶಾಸನವು ಪ್ರವಾಹಕ್ಕೆ ಕಾರಣವನ್ನು ತಿಳಿಸುವುದು ವಿಶೇಷ ಸಂಗತಿ. ಈ ಕೆರೆಯ ಮೇಲಣ ಭಾಗದಲ್ಲಿ ಇರುವ ಆವಿನಮಡುಗು ಎಂಬ ಕೆರೆಯು ತುಂಬಿ ಒಡೆಯಲಾಗಿ ಆ ಕೆರೆಯ ನೀರು ದರೋಜಿಕೆರೆಗೆ ನುಗ್ಗಿ ಬಂದು ಕೆರೆ ಒಡೆಯಲು ಕಾರಣವಾಯಿತೆಂದು ತಿಳಿಸುತ್ತದೆ.[5] ಇದಲ್ಲದೆ ದರೋಜಿ ಗ್ರಾಮವು ಇಂದಿನ ಹಳೇ ದರೋಜಿಗ್ರಾಮ ಇಂದಿನ ಹಳೇ ದರೋಜಿಗ್ರಾಮ ಸಹ ನಾಶವಾಯಿತು ಎಂದು ತಿಳಿದುಬರುತ್ತದೆ.[6]

ಕಮಲಾಪುರ ಕೆರೆ

ಕಮಲಾಪುರದ ಕೆರೆಯು ವಿಜಯನಗರ ಕಾಲದ ಕೆರೆಗಳಲ್ಲಿ ಒಂದಾಗಿದೆ. ಕಮಲಾಪುರ ಗ್ರಾಮವು ಹಂಪೆಯಷ್ಟೇ ಪ್ರಾಚೀನ ಗ್ರಾಮ. ವಿಜಯನಗರ ಶಾಸನಗಳಲ್ಲಿ ಈ ಗ್ರಾಮಕ್ಕೆ ಕಮಲಾಪುರ ಮತ್ತು ಕಮಲಾಪುರ ಎಂಬ ಎರಡೂ ಹೆಸರುಗಳನ್ನು ಬಳಸಲಾಗಿದೆ. ಕೆರೆಯು ಕಮಲಾಪುರ ಗ್ರಾಮದ ಪಶ್ಚಿಮಕ್ಕೆ ಇದೆ. ಹೊಸಪೇಟೆಗೆ ಈ ಕೆರೆ ಏರಿಯ ಮೇಲಿರುವ ರಸ್ತೆಯ ಮೂಲಕ ಹಾದುಹೋಗಬೇಕು. ಈ ಕೆರೆಯ ಏರಿಯು ಸುಮಾರು ಮೂರು ಕಿ.ಮೀ.ಗಳಷ್ಟು ಉದ್ದ ಇದ್ದು ನೀರಾವರಿ ಇಲಾಖೆಯವರು ಕೆರೆಯ ರಕ್ಷಣೆಯನ್ನು ಮಾಡುತ್ತಿದ್ದಾರೆ.

ಈ ಕೆರೆಯು, ವಿಜಯನಗರ ಪೂರ್ವಕಾಲದಲ್ಲಿ ಸಣ್ಣಕೆರೆಯಾಗಿದ್ದಿರಬೇಕು. ಕಾಲಕ್ರಮದಲ್ಲಿ ಈ ಪ್ರದೇಶವು ವಿಜಯನಗರ ಅರಸರ ಆಳ್ವಿಕೆಗೆ ಒಳಪಟ್ಟನಂತರ ಕೆರೆಯನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಬೇಕು. ಈ ಕೆರೆಯನ್ನು ಯಾರು ನಿರ್ಮಾಣ ಮಾಡಿದರೆಂಬುದರ ವಿವರಗಳು ನಮಗೆ ದೊರೆಯದ ಕಾರಣವಾಗಿ ಮೇಲೆ ಉಲ್ಲೇಖಿಸಿದ ತೀರ್ಮಾನಕ್ಕೆ ಬರಬೇಕಾಗಿದೆ.

ಕಮಲಾಪುರದ ಕೈಫಿಯತ್ತು ಈ ಕೆರೆಯನ್ನು ಅಚ್ಯುತರಾಯ ಮಹಾರಾಜನ ಮಗನಾದ ಪ್ರೌಢದೇವರಾಯ ಮಹಾರಾಜನು ನಿರ್ಮಿಸಿದನೆಂದು ಉಲ್ಲೇಖಿಸಿದೆ.[7] ಈ ಕೆರೆಯ ಬಗೆಗೆ ನಮಗೆ ದೊರೆಯುವ ಏಕೈಕ ಆಧಾರವು ಇದಾಗಿದೆ. ಈ ಕೆರೆಗೆ ತುಂಗಭದ್ರಾ ನದಿಯಿಂದ ಬಸವಣ್ಣ ಕಾಲುವೆ ಮತ್ತು ವಿಜಯನಗರ ಕಾಲುವೆ (ರಾಯ ಕಾಲುವೆ) ಎಂಬ ವಿಜಯನಗರ ಕಾಲದ ಎರಡು ಕಾಲುವೆಗಳ ಮೂಲಕ ನೀರು ಬಂದು ಶೇಖರಣೆಗೊಳ್ಳುತ್ತದೆ. ಕಾಲುವೆಗಳ ರಚನಾತ್ಮಕ ಶೈಲಿಯು ವಿಜಯನಗರ ಕಾಲದ ಶೈಲಿಯನ್ನು ಹೋಲುತ್ತದೆ. ಈ ಕೆರೆಗೆ ನಾಲ್ಕು ತೂಬುಗಳು ಇದ್ದು, ಅವುಗಳಲ್ಲಿ ಎರಡಕ್ಕೆ ಮರದ ತುಂಡುಗಳನ್ನು ಅಳವಡಿಸಿದ್ದರೆ, ಮಿಕ್ಕೆರಡಕ್ಕೆ ಕಬ್ಬಿಣದ ಬಾಗಿಲುಗಳನ್ನು (ಷಟ್ಟರ್‌Shutter) ಅಳವಡಿಸಲಾಗಿದೆ. ಈ ನಾಲ್ಕೂ ತೂಬುಗಳು ವಿವಿಧ ಎತ್ತರಗಳಲ್ಲಿದ್ದು ಅವುಗಳಿಗೆ ಅನುಗುಣವಾಗಿ ಕಾಲುವೆಗಳು ಸಹ ವಿವಿಧ ಎತ್ತರಗಳಲ್ಲಿ ಇರುವುದನ್ನು ಗಮನಿಸಬಹುದು. ಕೆರೆಯ ಆಯಕಟ್ಟು ಪ್ರದೇಶದಲ್ಲಿ ಕಬ್ಬು, ಭತ್ತ, ಬಾಳೆಹಣ್ಣು ಮುಂತಾದವುಗಳನ್ನು ಸರ್ವಕಾಲದಲ್ಲಿಯೂ ಬೆಳೆಯುತ್ತಾರೆ.[8]

ಅಳ್ಳಿಕೆರೆ ಕೆರೆ

ಅಳ್ಳಿಕೆರೆಯು ಕಮಲಾಪುರದ ಪೂರ್ವಕ್ಕೆ ಇರುವ ಪಾಪಿನಾಯಕನಹಳ್ಳಿಗೆ ಹೋಗುವ ಮಾರ್ಗದಲ್ಲಿದೆ. ಇದು ತುಂಗಭದ್ರಾ ನದಿಯಾಶ್ರಿತ ವಿಜಯನಗರ ಕಾಲದ ಕೆರೆಯಾಗಿದೆ. ಕಮಲಾಪುರ ಊರಿನಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿ ಬಟ್ಟಗಳ ಸಾಲಿನ ಮಧ್ಯೆ ಇದ್ದು ಪಾಪಿನಾಯಕನಹಳ್ಳಿ ಹಾಗೂ ಕಮಲಾಪುರ ನಿವಾಸಿಗಳು ಇದರ ಪ್ರಯೋಜನವನ್ನು ಹೊಂದುತ್ತಿದ್ದಾರೆ. ಈ ಕೆರೆಗೆ ತುಂಗಭದ್ರಾ ನದಿಯ ಉನ್ನತ ಮಟ್ಟದ ಕಾಲುವೆಯಿಂದ ನೀರು ಬಂದು ಸಂಗ್ರಹಗೊಳ್ಳುತ್ತದೆ. ಅಳ್ಳಿಕೆರೆ ಕೆರೆಯು ಸಹ ನೀರಾವರಿ ಇಲಾಖೆಯವರ ಅಧೀನದಲ್ಲಿಯೇ ಇದೆ. ಸಾಕಷ್ಟು ಆಧಾರಗಳು ದೊರೆಯದ ಕಾರಣ ಈ ಕೆರೆಯ ನಿರ್ಮಾತೃ, ಕಮಲಾಪುರದ ಕೆರೆಯಂತೆಯೇ, ಯಾರೆಂಬುದನ್ನು ಖಚಿತತೆಯಿಂದ ಹೇಳಲು ಸಾಧ್ಯವಿಲ್ಲ. ಆದರೆ ಈ ಕೆರೆಯು ವಿಜಯನಗರ ಕಾಲದಲ್ಲಿಯೇ ಇತ್ತೆಂಬುದಕ್ಕೆ ಆಧಾರಗಳಿವೆ.

ಶ್ರೀಕೃಷ್ಣದೇವರಾಯನು ಆಳ್ವಿಕೆಯಲ್ಲಿ (ಕ್ರಿ.ಶ.೧೫೦೯-೩೦) ಡಾಮಿಂಗೋ ಪಯಾಸ್‌ವಿಜಯನಗರಕ್ಕೆ ಭೇಟಿಯನ್ನಿತ್ತ ವಿದೇಶಿ ಪ್ರವಾಸಿಗರಲ್ಲಿ ಒಬ್ಬನು. ಈತ ವಿಜಯನಗರ ಪಟ್ಟಣಕ್ಕೆ ಬಂದಾಗ ಅಂದಿನ ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ರಾಜಕೀಯ ವಿಷಯಗಳನ್ನು ದಾಖಲಿಸುವಾಗ ಈ ಕೆರೆಯನ್ನು ಕುರಿತಂತೆ ಪ್ರಸ್ತಾಪಿಸಿದ್ದಾನೆ.[9] ಅದರಂತೆ ನವರಾತರಿ ಅಥವಾ ಮಹಾನವಮಿಯ ಹಬ್ಬಗಳು ಹತ್ತು ದಿನಗಳ ಕಾಲ ನಡೆಯುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಒಂಬತ್ತು ದಿನಗಳಾದ ನಂತರ ಹತ್ತನೆಯ ದಿನದಂದು ರಾಜನು ಆನೆಯ ಅಂಬಾರಿ ಮೇಲೆ ವಿಜಯನಗರ ಪಟ್ಟಣದ ಕೋಟೆ ಗೋಡೆಗಳ ಹೊರಗೆ ಸುಮಾರು ಒಂದು ಲೀಗ್‌ನಷ್ಟು ದೂರ ಪೂರ್ವಕ್ಕೆ ಬರುತ್ತಾನೆ. ಅಲ್ಲಿ ಒಂದು ವಿಶೇಷ ಗುಡಾರದಲ್ಲಿ ಒಂದು ದೇವತೆಯ ಪೂಜೆಯನ್ನು ಮಾಡುತ್ತಾನೆ. ದಾರಿಯ ಇಕ್ಕೆಲಗಳಲ್ಲಿಯೂ ಸೈನಿಕರು, ವಿವಿಧ ಅಧಿಕಾರಿಗಳು ಮತ್ತು ಜನಸಮೂಹವೇ ಇರುತ್ತದೆ. ರಾಜನು ದಾರಿಯಲ್ಲಿ ಈ ಸ್ಥಳವನ್ನು ತಲುಪುವಾಗ ಒಂದು ಕೆರೆಯನ್ನು ಹಾದುಹೋಗುತ್ತಾನೆ ಎಂದು ಬರೆದಿದ್ದಾನೆ.

ಜಾನ್‌ಫ್ರಿಟ್ಜ್‌ರವರು, ಪಯಾಸ್‌ವರ್ಣಿಸಿ ವಿವರಿಸಿರುವ ಸ್ಥಳದ ಪರಿವೀಕ್ಷಣೆಯನ್ನು ನಡೆಸಿ ಪಯಾಸ್‌ವರ್ಣಿಸಿರುವ ಕೆರೆಯು ಆಳ್ವಿಕೆರೆಯೆಂದು ಸರಿಯಾಗಿ ಗುರುತಿಸಿರುತ್ತಾರೆ.[10] ಈ ಕೆರೆಯ ಸಮೀಪವೇ ದೇವತೆಯ ಪೂಜೆಗೆಂದು ಗುಡಾರವನ್ನು ಹಾಕಲಾಗುತ್ತಿತ್ತು ಎಂದು, ಆ ಗುಡಾರವು ಪಯಾಸ್‌ವರ್ಣಿಸಿರುವಂತೆ ಬಟ್ಟೆಯದಲ್ಲವೆಂದು ಆದರೆ ಕಲ್ಲಿನಿಂದ ರಚಿಸಲ್ಪಟ್ಟ ಕಟ್ಟಡ ಎಂದು ಅಭಿಪ್ರಾಯಪಡುತ್ತಾರೆ. ಇಂದಿಗೂ ಒಂದು ಮಂಟಪವು ಕಮಲಾಪುರದ ಪೂರ್ವಕ್ಕೆ ಕೆರೆಯ ಪಶ್ಚಿಮಕ್ಕೆ ಇದೆ. ಈ ಮಂಟಪದ ಸಮೀಪವೇ ಒಂದು ಚಿಕ್ಕ ಗುಡಿಯೂ ಇದೆ. ಈ ಮಂಟಪಕ್ಕೆ ಯಾವುದೇ ಮೆಟ್ಟಿಲುಗಳು ಇಲ್ಲದ ಕಾರಣ, ಬಹುಶಃ ಎತ್ತರ ವಾಹನ-ಸವಾರಿಗಳ ಮೇಲಿನಿಂದ ಮಂಟಪಕ್ಕೆ ಪ್ರವೇಶ ಮಾಡುತ್ತಿದ್ದರು ಎಂದು ತಿಳಿಸುತ್ತಾರೆ.

ಮಂಟಪವಿರುವ ಸ್ಥಳವು ವಿಜಯನಗರ ಪಟ್ಟಣದಿಂದ ಒಂದು ಲೀಗ್ ದೂರದಲ್ಲಿದೆ ಎಂದು ಪಯಾಸ್‌ಬರೆದಿದ್ದಾನೆ. ಈ ದೂರವು ಪೋರ್ಚ್‌ಗೀಸ್‌ಭಾಷೆಯ ಲೇಗಾವ್‌ಇರಬಹುದು. ಇದು ಸುಮಾರು ೬.೨೦ ಕಿ.ಮೀ.ಯಷ್ಟು ದೂರವೆಂದು, ೧೮ನೆಯ ಶತಮಾನದ ಸ್ಟಾನಿಶ್‌ ಭಾಷೆಯಲ್ಲಿ ಒಂದು ಲೀಗವು ೪.೨೪ ಕಿ.ಮೀ. ದೂರಕ್ಕೆ ಸಮನಾಗಿರುತ್ತದೆ ಎಂದು ಜಾನ್‌ಫ್ರಿಟ್ಜ್‌ಅಭಿಪ್ರಾಯಿಸುತ್ತಾರೆ. ಪಾಯಸ್‌ನು ಬಳಸಿರುವ ಲೀಗ್‌೪.೨೪ ಅಥವಾ ೬.೨೦ ಯಾವುದೆಂದು ಸ್ಪಷ್ಟವಿಲ್ಲ ಮತ್ತು ಈ ದೂರವು ರಾಜಧಾನಿಯಾದ ವಿಜಯನಗರ ಪಟ್ಟಣಕ್ಕೆ ಸುಮಾರು ನಾಲ್ಕರಿಂದ ಐದು ಕಿ.ಮೀ.ಗಳಷ್ಟು ದೂರದಲ್ಲಿರುವುದರಿಂದ ಈ ಮಂಟಪವು ಪಯಾಸ್‌ವಿವರಿಸುವ ಸ್ಥಳವೆಂದೇ ಜಾನ್‌ರವರು ಅಭಿಪ್ರಾಯಪಡುತ್ತಾರೆ.[11] ಪಯಾಸ್‌ನು ಉಲ್ಲೇಖಿಸಿದ ಕೆರೆಯು ಇದುವೇ ಆಗಿತ್ತೆಂದು ಮೇಲಿನ ಆಧಾರಗಳಿಂದ ಯಾವುದೇ ಅನುಮಾನವಿಲ್ಲದೆ ಹೇಳಬಹುದು. ಮೇಲೆ ವಿವರಿಸಿದ ಸ್ಥಳದಲ್ಲಿ ಕಬ್ಬಿಣದ ಅಂಶವಿರುವ ಪದಾರ್ಥ (Slag) ಇಂದಿಗೂ ದೊರಕುತ್ತವೆ.

ಈ ಕೆರೆಗೆ ಎರಡು ತೂಬುಗಳಿವೆ. ನೀರಾವರಿ ಇಲಾಖೆಯವರು ಯಾಂತ್ರಿಕ ಸಲಕರಣೆಯನ್ನು ಪ್ರಾಚೀನ ತೂಬಿಗೆ ಜೋಡಿಸಿ ಉಪಯೋಗಿಸುತ್ತಿದ್ದಾರೆ. ಅದರಲ್ಲಿ ಮರವನ್ನು ಅಳವಡಿಸಲಾಗಿದೆ. ಮತ್ತೊಂದು ತೂಬನ್ನು ಉಪಯೋಗಸದೆ, ಹೊಸ ಮಾದರಿಯ ತೂಬನ್ನು ಏರಿಗೆ ಅಳವಡಿಸಿದ್ದಾರೆ. ಈ ಕೆರೆಯ ಏರಿಯು ಸುಮಾರು ೧.೫ ಕಿ.ಮೀ.ಯಷ್ಟು ಉದ್ದವಿದೆ. ಇದರ ನೀರು ಸಂಗ್ರಹಣ ಸಾಮರ್ಥ್ಯವು ೧.೫ ಟಿ.ಎಂ.ಸಿ.ಯ (೪೫.೭ ಅಡಿಗಳು) ಈ ಕೆರೆಯು ಸುಮಾರು ಮುನ್ನೂರ ಐವತ್ತು ಎಕರೆಗೆ ನೀರುಣಿಸುತ್ತದೆ. ಕಬ್ಬು, ಬಾಳೆ, ಭತ್ತವನ್ನು ಇಲ್ಲಿ ಬೆಳೆಯಲಾಗುತ್ತಿದೆ.

ಇತ್ತೀಚೆಗೆ ಬಯಲುವದ್ದಿಗೇರಿಯ ಕೆರೆ ಏರಿಯಲ್ಲಿ ಒಂದು ಶಾಸನವು ಪತ್ತೆಯಾಗಿದೆ. ಕೃಷ್ಣದೇವರಾಯನ ಕಾಲದಲ್ಲಿ ಆ ಕೆರೆಯನ್ನು ನಿರ್ಮಿಸಲಾಯಿತೆಂದು ಅದು ತಿಳಿಸುತ್ತದೆ.[12] ಅದರಂತೆಯೇ ಹೊಸಪೇಟೆಯ ಹೃದಯ ಭಾಗವಾದ ಬಸವಣ್ಣ ಬಡಾವಣೆಯಲ್ಲಿ ಶಾಸನ ಮತ್ತು ತೂಬು ಪತ್ತೆಯಾಗಿದೆ. ಈ ಭಾಗವು ವಿಜಯನಗರ ಕಾಲದಲ್ಲಿ ಕೆರೆಯಾಗಿತ್ತೆಂದು ಸಾಬೀತುಪಡಿಸುತ್ತದೆ.[13]

ಹಂಪಿ ಪರಿಸರದ ಕೆರೆಗಳನ್ನು ಕುರಿತು ಚರ್ಚಿಸುವಾಗ ಈ ದಿಸೆಯಲ್ಲಿ ಬಯಕಾರ ರಾಮಪ್ಪನ ಸಾಧನೆಗಳನ್ನು ಉಲ್ಲೇಖಿಸದಿದ್ದರೆ ಚರ್ಚೆಯು ಅಪೂರ್ಣವಾಗುತ್ತದೆ. ಬಯಕಾರ ರಾಮಪ್ಪನ ವಿಜಯನಗರದ ಅರಸನಾದ ಅಚ್ಯುತದೇವರಾಯನ ಕಾಲದಲ್ಲಿ ಕಂಡವೀಡು ರಾಜ್ಯದ ಅಧಿಪತಿಯಾಗಿದ್ದನು. ಈತ ಮೂಲತಃ ಆಂಧ್ರಪ್ರದೇಶದವನಾಗಿರಬೇಕು. ರಾಮಪ್ಪನು ಕೊಂಡವೀಡು ರಾಜ್ಯದ ಅಧಿಪತಿಯಾಗಿದ್ದರೂ ಹಂಪೆಯ ಬಳಿಯ ತಿಮ್ಮಲಾಪುರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೇ ಅವನ ಕಾರ್ಯಚಟುವಟಿಕೆಗಳು ಇದ್ದವು. ರಾಮಪ್ಪನು ಕೆಲವು ಅಗ್ರಹಾರಗಳನ್ನು ಸ್ಥಾಪಿಸಿ ದೇವಾಲಯಗಳನ್ನು ನಿರ್ಮಿಸಿ, ಕೆರೆಗಳನ್ನು ಕಟ್ಟಿಸಿದನೆಂದು ತನ್ನ ಶಾಸನಗಳಲ್ಲಿ ಹೇಳಿಕೊಂಡಿದ್ದಾನೆ.[14]

ಬಯಕಾರ ರಾಮಪ್ಪನು ತನ್ನ ರಕ್ತ ಸಂಬಂಧಿಗಳಿಗೆ ಪುಣ್ಯವಾಗಬೇಕೆಂದು ಅವರ ಹೆಸರಿನಲ್ಲಿ ಒಟ್ಟು ಹದಿನಾರು ಕೆರೆಗಳನ್ನು ಕಟ್ಟಿಸಿದ್ದಾನೆ. ಇವನ ಶಾಸನಗಳು ಬೇರೆ ಶಾಸನಗಳಿಗಿಂತ ಭಿನ್ನವಾಗಿದ್ದು ಶಾಸನದ ಮೊದಲ ಭಾಗವು ಕನ್ನಡ ಲಿಪಿ ಮತ್ತು ಭಾಷೆಯಲ್ಲಿದ್ದು ಕೆರೆಯನ್ನು ಯಾರ ಹೆಸರಿನಲ್ಲಿ ಕಟ್ಟಿಸಿದನೆಂದು ದಾಖಲಿಸಿರುತ್ತದೆ. ಶಾಸನದ ಎರಡೆಯ ಭಾಗವು ಕನ್ನಡ ಲಿಪಿ ಮತ್ತು ಸಂಸ್ಕೃತ ಭಾಷೆಯಲ್ಲಿದ್ದು ಅವನ ವಂಶಾವಳಿ, ಧರ್ಮ ಕಾರ್ಯಗಳ ವಿವರಣೆಯನ್ನು ನೀಡುತ್ತದೆ.

ಬಯಕಾರ ರಾಮಪ್ಪನ ಕಟ್ಟಲಾದ ಹದಿನಾರು ಕೆರೆಗಳು ಈ ರೀತಿಯಾಗಿವೆ.[15]

೧. ಬಾಚ ಸಮುದ್ರಂ, ೨. ರಾಮ ಸಮುದ್ರಮಂ, ೩. ಅಕ್ಕ ಸಮುದ್ರಂ, ೪. ಕಾಮ ಸಮುದ್ರಂ, ೫. ಅಮ್ಮ ಸಮುದ್ರಂ, ೬.ವೀರ ಸಮುದ್ರಂ, ೭. ಅಚ್ಯುತೇಂದ್ರ ಸಮುದ್ರಂ, ೮. ವೆಂಕಟೇಂದ್ರ ಸಮುದ್ರಂ, ೯. ಪಿಲನಕ್ಕ ಸಮುದ್ರಂ, ೧೦, ಚಿನತಿಪ್ಪ ಸಮುದ್ರಂ, ೧೧. ಪೇದಲಕ್ಕ ಸಮುದ್ರಂ, ೧೨. ಅಚ್ಯುತಮ್ಮ ಸಮುದ್ರಂ, ೧೩. ಲಿಂಗಾಲಯ್ಯ ತಾಟಕಂ, ೧೪. ವೆಂಕಟಯ್ಯ ತಟಾಕಂ, ೧೫. ಪೆದತಿಮ್ಮ ಸಮುದ್ರಂ, ೧೬. ಚಿನಬಾಚ ಸಮುದ್ರಂ.

ಮೇಲೆ ಉಲ್ಲೇಖಿಸಿದ ಕೆರೆಗಳಲ್ಲಿ ಕೆಲವೊಂದು ಇಂದಿಗೂ ಬಳಕೆಯಲ್ಲಿವೆ. ಕೆರೆಯ ಸಮೀಪವೇ ದೊರೆತ ಶಾಸನಗಳ ಆಧಾರದಿಂದ ಶಾಸನದಲ್ಲಿ ಹೆಸರಿಸಿರುವ ಕೆರೆಗಳನ್ನು ಗುರುತಿಸಲು ಸಾಧ್ಯವಾಗಿದೆ. ಇತ್ತೀಚೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಪುರಾತತ್ವಜ್ಞರಾದ ನರಸಿಂಹಮ್ ಅವರು ಬಯಕಾರ ರಾಮಪ್ಪನ ಹೊಸ ಶಾಸನಗಳನ್ನು ಸಂಶೋಧಿಸಿದ್ದಾರೆ.[16] ಅವರು ಕೆರೆಗಳನ್ನು ಶಾಸನಗಳ ಆಧಾರದಿಂದ ಸರಿಯಾಗಿ ಗುರುತಿಸಿರುತ್ತಾರೆ. ಈಗಾಗಲೇ ಪ್ರಕಟವಾಗಿರುವ ಸಂಡೂರು ತಾಲೂಕಿನ ಚಿಕ್ಕಕೆರೆಯಾಗಿನ ಹಳ್ಳಿಯ ಕೆರೆಯನ್ನು ಬಯಕಾರ ರಾಮಪ್ಪನ ತಾಯಿ ಹಿರಿಯ ಲಕ್ಕರಸಮ್ಮನಿಗೆ ಪುಣ್ಯವಾಗಬೇಕೆಂದು ಕ್ರಿ.ಶ. ೧೫೩೯ರಲ್ಲಿ ಕಟ್ಟಿಸಿದ್ದಾನೆ.[17] ಈ ಕೆರೆಯೇ ಹಿರಿಯಲಕ್ಕ (ಪೆದಲಕ್ಕ) ಸಮುದ್ರ ಕೆರೆ. ಇದೇ ತಾಲೂಕಿನ ಹುಲಿಕುಂಟೆ ಗ್ರಾಮದ ಕೆರೆಯನ್ನು ಅವನ ಮಗಳಾದ ಅಚ್ಯುತಮ್ಮನ ಹೆಸರಿನಲ್ಲಿ ನಿರ್ಮಿಸಲಾಗಿದೆ.[18] ಈ ಕೆರೆಯೇ ಅಚ್ಯುತ್ತಮ್ಮ ಸಮುದ್ರ. ಹೊಸಪೇಟೆ ತಾಲೂಕಿನ ಮಗಿಮಾವಿನ ಹಳ್ಳಿಯ ಶಾಸನವು ಅವನ ಇನ್ನೊಬ್ಬ ಮಗಳಾದ ಕಾಮಮ್ಮನ ಹೆಸರಿನಲ್ಲಿ ಕ್ರಿ.ಶ. ೧೫೪೪ರಲ್ಲಿ ಕಾಮಸಮುದ್ರವನ್ನು ನಿರ್ಮಿಸಿದನೆಂದು ಉಲ್ಲೇಖಿಸುತ್ತದೆ.

ಇತ್ತೀಚೆಗೆ ಸಂಶೋಧಿತ ನಾಲ್ಕು ಶಾಸನಗಳಿಂದ ಬಯಕಾರ ರಾಮಪ್ಪನ ಕಟ್ಟಿಸಿದ ನಾಲ್ಕು ಕೆರೆಗಳನ್ನು ನಾವು ಗುರುತಿಸಬಹುದಾಗಿದೆ. ಪೋತಲಕಟ್ಟೆ ಗ್ರಾಮದ ಕೆರೆ ಕೋಡಿಯ ಸಮೀಪ ದೊರೆತ ಶಾಸನವು ಅವನ ಮಗ ಆಕಪ್ಪನಿಗೆ ಪುಣ್ಯವಾಗಬೇಕೆಂದು ಕ್ರಿ.ಶ. ೧೫೩೯ರಲ್ಲಿ ಕಟ್ಟಿಸಿದನೆಂದು ತಿಳಿಸುತ್ತದೆ.[19] ಈ ಕೆರೆಗೆ ಆಕ ಸಮುದ್ರವೆಂದು ಹೆಸರಿಡುತ್ತಾನೆ. ತಿಮ್ಮಲಾಪುರದ ಜಂಭಯ್ಯನ ಕೆರೆ ಶಾಸನದಿಂದ ಅದನ್ನು ಅವನ ಚಿಕ್ಕಪ್ಪ ಬಾಚರಸಯ್ಯನ ಹೆಸರಿನಲ್ಲಿ ಬಾಚಸಮುದ್ರ ಕೆರೆಯನ್ನು ಕ್ರಿ.ಶ. ೧೫೩೯ರಲ್ಲಿ ಕಟ್ಟಿಸಿದನು ಎಂದು ತಿಳಿಯಬಹುದು.[20] ಒಂಟಿಗೋಡು ತಾಂಡದ ಕೆರೆಯ ಸಮೀಪದ ಶಾಸನದಿಂದ ಬಯಕಾರ ರಾಮಪ್ಪನು ಅವನ ಪತ್ನಿ ವೀರಮ್ಮನಿಗೆ ಪುಣ್ಯವಾಗಲೋಸುಗ ವೀರಸಮುದ್ರ ಕೆರೆಯನ್ನು ಕ್ರಿ.ಶ. ೧೫೩೯ರಲ್ಲಿ ಕಟ್ಟಿಸಿದನೆಂದು ತಿಳಿದುಬರುತ್ತದೆ.[21] ನಂದಿಬಂಡೆ ಕೆರೆಯ ಶಾಸನವು ಅವನ ತಂದೆ ತಿಮ್ಮರಸಯ್ಯನಿಗೆ ಪುಣ್ಯವಾಗಬೇಕೆಂದು ಅವರ ಹೆಸರಿನಲ್ಲಿ ತಿಮ್ಮಸಮುದ್ರ ಕೆರೆಯನ್ನು ಕ್ರಿ.ಶ. ೧೫೩೯ರಲ್ಲಿ ಕಟ್ಟಿಸಿದನೆಂದು ದಾಖಲಿಸುತ್ತದೆ.[22] ಹೊಸಪೇಟೆ ತಾಲೂಕಿನ ಹರಪನಹಳ್ಳಿಯ ಮಾರುತಿ ಕೆರೆಯ ಸಮೀಪ ಒಂದು ಶಾಸನವು ದೊರಕಿದ್ದು ಅದರ ಕೆಳಭಾಗದ ೧೯ ಸಾಲುಗಳು ಮಾತ್ರವೆ ಇವೆ.[23] ಶಾಸನದ ಮೇಲ್ಭಾಗವು ಒಡೆದಿರುವ ಕಾರಣ, ಈ ಕೆರೆಯನ್ನು ಯಾರ ಹೆಸರಿನಲ್ಲಿ ನಿರ್ಮಿಸಿದನೆಂಬುದು ತಿಳಿದುಬಂದಿಲ್ಲ.

ಕೋಷ್ಟಕ ೧: ಹಂಪಿ ಪರಿಸರದಲ್ಲಿರುವ ಕೆಲವು ಮುಖ್ಯ ಕೆರೆಗಳು

ಕ್ರ.ಸಂ ಕೆರೆಯ ಹೆಸರು ತೂಬುಗಳು ವಿವರಣೆ
೧. ಪೋತಲಕಟ್ಟೆ ಕೆರೆ
೨. ನಡುವಲ ಕೆರೆ
೩. ಒಂಟಿಕೋಡು ತಾಂಡ ಕೆರೆ
೪. ಜಂಭಯ್ಯನ ಕೆರೆ
೫. ಚಿಕ್ಕಕೆರೆಯಾಗಿನಹಳ್ಳಿ ಕೆರೆ ಸಂಡೂರು ತಾಲೂಕು
೬. ಹುಲಿಕುಂಟೆ ಕೆರೆ ಸಂಡೂರು ತಾಲೂಕು
೭. ನಾಗೇನಹಳ್ಳಿ ಕೆರೆ
೮. ರಾಯರ ಕೆರೆ
೯. ಪೋತಲಕಟ್ಟೆ ಕೆರೆ ಶಿಥಿಲ
೧೦. ಗೌರಮ್ಮನ ಕೆರೆ
೧೧. ವಿಠ್ಠಲಾಪುರ ಕೆರೆ
೧೨. ದರೋಜಿ ಕೆರೆ ಸಂಡೂರು ತಾಲೂಕು
೧೩. ಹಿರೇಕೆರೆ ಸಂಡೂರು ತಾಲೂಕು
೧೪. ದೇವಸಮುದ್ರ ಕೆರೆ
೧೫. ದೇವಲಾಪುರ ಕೆರೆ
೧೬. ಕಮಲಾಪುರ ಕೆರೆ
೧೭. ಅಳ್ಳಿಕೆರೆ ಕೆರೆ
೧೮. ಅಮ್ರವತಿ ಕೆರೆ
೧೯. ಭೈಲಗುಂದಿ ಕೆರೆ
೨೦. ಕೂಡನಾಯಕನಹಳ್ಳಿ ಕೆರೆ ಕೆರೆ ಕಟ್ಟೆ
೨೧. ಬಸವನದುರ್ಗ ಕೆರೆ
೨೨. ಗುಡಿ ಓಬಳಾಪುರ ಕೆರೆ ಇಲ್ಲ
೨೩. ಈಡಿಗರ ಕುಂಟೆ ಕೆರೆ
೨೪. ವೆಂಕಟಾಪುರ ಕೆರೆ
೨೫. ಸೀತಾರಾಂಪುರ ತಾಂಡಾ ಕೆರೆ ಇಲ್ಲ
೨೬. ನಂದಿಬಂಡೆ ಕೆರೆ
೨೭. ಉಪ್ಪಾರಹಳ್ಳಿ ಕೆರೆ
೨೮. ಮಲಪನಗುಡಿ ಕೆರೆ
೨೯. ವ್ಯಾಸನ ಕೆರೆ
೩೦. ನಾರಾಯಣದೇವನ ಕರೆ
೩೧. ಗೊಲ್ಲರಹಳ್ಳಿ ಹಿರೇಕೆರೆ
೩೨. ಗೊಲ್ಲರಹಳ್ಳಿ ಚಿಕ್ಕಕೆರೆ
೩೩. ಬುಕ್ಕಸಾಗರ ಬೆಳ್ಳಿಕೆರೆ
೩೪. ಕಂಪ್ಲಿ ಸೋಮಪ್ಪ ಕೆರೆ
೩೫. ಗರಗ ಸಣ್ಣ ಕೆರೆ
೩೬. ಗರಗ ದೊಡ್ಡ ಕೆರೆ
೩೭. ಇಂಗಳಗಿ ಚಿಕ್ಕಕೆರೆ
೩೮. ಕಾಕಬಾಳು ಸಿಗಟ್ಟೆಕೆರೆ
೩೯. ಚಿಲಕನ ಹಟ್ಟಿ ಜಾಮಿಗುಡ್ಡೆ ಕೆರೆ
೪೦. ಡಣಾಯಕನ ಕೆರೆ ಅತೀ ದೊಡ್ಡ ಕೆರೆ
೪೧. ಮೆಟ್ರಿ ಈರಣ್ಣನ ಕೆರೆ
೪೨. ಬೈಲುವದ್ದಿಗೇರಿ ಗಂಜಿನಗುಂಟೆ ಕೆರೆ
೪೩. ಬೈಲುವದ್ದಿಗೇರೆ ಹಿರೇಕೆರೆ
೪೪. ಬೈಲುವದ್ದಿಗೇರೆ ಚಿಕ್ಕ ಕೆರೆ
೪೫. ಅಯ್ಯನಹಳ್ಳಿ ಕೆರೆ
೪೬. ಕೆ.ತಿಮ್ಮಾಪುರ ಹಿರೇಕೆರೆ
೪೭. ಹಾರೋನಹಳ್ಳಿ ಕೆರೆ (ಅಮ್ಮಸಮುದ್ರ ಕೆರೆ) (ಮಾರಗಪಯನ ಕೆರೆ)
೪೮. ಡಾಣಪುರ ಮೌದನಾಯಕನ ಕೆರೆ
೪೯. ತಾಳೆ ಬಸಾಪುರಕೆರೆ
೫೦. ತಾಳೆ ಬಸಾಪುರ ಒಂಟಿಕೆರೆ
೫೧. ನಾಗಲಾಪುರ ಕಾಟ್ಟಣಕೆರೆ
೫೨. ನಾಗಲಾಪುರ ಕೆರೆ
೫೩. ಭೂಪತಿ ಕೆರೆ
೫೪. ಯಲ್ಲಪ್ಪಣ್ಣ ಕೆರೆ
೫೫. ಚಿಕ್ಕಹಂಸನ ಕೆರೆ

ಆಕರ
ಹಂಪಿ ಪರಿಸರದ ಕೆರೆಗಳು, ೨೦೦೧, ಕನ್ನಡ ವಿಶ್ವವಿದ್ಯಾಲಯ, ಹಂಪಿ ಆಧರಿಸಿದೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] ಕಲಬುರ್ಗಿ ಎಂ.ಎಂ., (ಸಂ.), ಕರ್ನಾಟಕದ ಕೈಫಿಯತ್ತುಗಳು, ಪು. ೫೦೮

[2] ಅದೇ, ಪು. ೫೦೯

[3] ಅದೇ, ಪು. ೫೧೧

[4] ಅದೇ, ಪು. ೫೧೭

[5] ಫ್ರಾನ್ಸ್‌ಸ್‌, ಡಬ್ಲ್ಯು, (ಸಂ.), ಮದ್ರಾಸ್‌ಡಿಸ್ಟ್ರಿಕ್ಟ್‌ಗ್ಯಾಸೆಟಿಯ್‌, ಬಳ್ಳಾರಿ

[6] ದೀಕ್ಷಿತ ಜಿ.ಎಸ್‌. ಮತ್ತು ಇತರರು, ಪೂರ್ವೋಕ್ತ, ಪು. ೨೬೪

[7] ಕಲಬುರ್ಗಿ ಎಂ.ಎಂ., (ಸಂ.), ಪೂರ್ವೋಕ್ತ, ಪು. ೫೧೭

[8] ಡಾಮ್‌ನಿಕ್‌ಜೆ., ಡೆವಿಸನ್‌ಜೆನ್‌ಕಿನ್ಸ್‌, ಪೂರ್ವೋಕ್ತ, ಪು. ೪೯-೫೬

[9] ಸಿವೆಲ್ ಆ., ಎ ಫರ್ಗಾಟೆನ್‌ಎಂಪೈರ್, ಪು. ೨೩೬-೯೦

[10] ಜಾನ್ ಎಂ. ಫ್ರಿಟ್ಜ್, “ಎಲಿವೇಟೆಡ್‌ಫ್ಲಾಟ್‌ಫಾರಂ ನಿಯರ್ ಕಮಲಾಪುರಂ”, ವಿಜಯನಗರ ಪ್ರೋಗೇಸ್‌ಆಫ್‌ರಿಸರ್ಚ್‌, ೧೯೮೭-೮೮, ಪು. ೧೦೫-೧೧೨

[11] ಅದೇ, ಪು. ೧೧೧

[12] ಈ ಶಾಸನವನ್ನು ಡಾ. ಬಾಲಸುಬ್ರಮಣ್ಯ ಪತ್ತೆ ಹಚ್ಚಿದ್ದಾರೆ. ಅವರು ನೀಡಿದ ಮಾಹಿತಿಗೆ ಕೃತಜ್ಞನಾಗಿದ್ದೇನೆ.

[13] ವಿಜಯನಗರ ಅರಸ ಕೃಷ್ಣದೇವರಾಯನ ಶಾಸನವನ್ನು ಮತ್ತೆ ಹಚ್ಚಿ ಅದರ ಪಾಠವನ್ನು ಪ್ರೊ. ಲಕ್ಷ್ಮಣ್ ತೆಲಗಾವಿಯವರು ಪ್ರಕಟಿಸಿರುತ್ತಾರೆ. ಈ ಶಾಸನಕ್ಕೆ ಗುಡಿಯನ್ನು ಕಟ್ಟಿ ಪೂಜಿಸಲಾಗುತ್ತಿದೆ. ಶ್ರೀ ಕೃಷ್ಣದೇವರಾಯನು ತಿರುಮಲದೇವಿಯರ ಪಟ್ಟಣದ ನಾಲ್ಕು ಬಾಗಿಲ ಬಳಿಯ ಶ್ರೀ ಕಾಶಿವಿಶ್ವೇಶ್ವರನ (ಶ್ರೀ ಕಾಶಿವಿಶ್ವನಾಥನ ದೇವರ) ಪ್ರತಿಷ್ಠಾ ಕಾಲದಲ್ಲಿ ಆ ದೇವರ ಪೂಜೆ ನೈವೇದ್ಯಗಳಿಗಾಗಿ ಆ ಪಟ್ಟಣದ ಕೋಟೆ ಪಶ್ಚಿಮಕ್ಕೆಯಿದ್ದ ಯಲ್ಲಪ್ಪಣ್ಣ ಕೆರೆಯನ್ನು ಆ ದೇವರಿಗೆ ಧಾರೆಯನೆರೆದು ಕೊಟ್ಟನೆಂದು ಶಾಸನ ಹೇಳುತ್ತದೆ. ಇದರಿಂದ ಈ ಕೆರೆಯು ಕೃಷ್ಣದೇವರಾಯನ ಆಳ್ವಿಕೆಯ ಪೂರ್ವದ ಕೆರೆಯಿರಬೇಕೆಂದು ಲಕ್ಷ್ಮಣ್ ತೆಲಗಾವಿಯವರು ಸರಿಯಾಗಿ ಅಭಿಪ್ರಾಯಪಟ್ಟಿದ್ದಾರೆ. ಶಾಸನದಂತೆ ಈ ಕೆರೆಯ ದಕ್ಷಿಣ ದಿಕ್ಕಿನ ದಂಡೆ ಮತ್ತು ಕೆರೆಯ ಹಿಂಬದಿಯ ಜಲಾವೃತ ಮೇರೆಯಲ್ಲಿ ತಿರುಮಲ ದೇವಿಯವರ ಪಟ್ಟಣದ ಕೋಟೆಯ ಅಗಳಿನವರೆಗೆ ವಿಸ್ತರಿಸಿತ್ತು. ಕೋಟೆ ಅಗಳಿಯ ಪ್ರಸ್ತಾಪಿಸಿರುವುದರಿಂದ ಅಗಳಿಗೆ ಈ ಕೆರೆಯ ನೀರನ್ನು ಅವಶೇಷ ಮತ್ತು ಇತರ ರಚನೆಗಳನ್ನು ಇಂದಿಗೂ ಕಾಣಬಹುದು. ನೋಡಿ ಲಕ್ಷ್ಮಣ್ ತೆಲಗಾವಿ, ‘ಕೃಷ್ಣದೇವರಾಯನ ಇನ್ನೊಂದು ಹೊಸ ಶಾಸನ’, ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ಸಂ. ೭೫, ಸಂಚಿಕೆ ೨, ದೀಪಾವಳಿ ಸಂಚಿಕೆ, ೧೯೯೭, ಪು. ೨೨-೨೭, ಇದನ್ನು ನನ್ನ ಗಮನಕ್ಕೆ ತಂದ ಪ್ರೊ. ಲಕ್ಷ್ಮಣ ತೆಲಗಾವಿ ಅವರಿಗೆ ಕೃತಜ್ಞನಾಗಿದ್ದೇನೆ.

[14] ಎಸ್‌ಐಐ, ಸಂ. ಭಾಗ ಸಂ. ೫೯೩ ಮತ್ತು ೬೬೦ ಎಆರ್ ಎಪ್‌, ೧೯೧೫, ಭಾಗ.. ಪ್ಯಾರ ೫೧, ಶಿವರುದ್ರಸ್ವಾಮಿ ಎಸ್‌.ಎನ್‌., ಬಯಕಾರ ರಾಮಪ್ಪ, ಪು. ೧೦೧೨ ಇವನಿಗೆ ಸ್ವರಮೇಳ ಕಳಾನಿಧಿ ಎಂಬ ಬಿರುದನ್ನು ಹೊಂದಿದ್ದ. ಅವನು ದಕ್ಷ ಆಡಳಿತಗಾರನಾಗಿ ಅನೇಕ ಪ್ರಜಾಹಿತ್ಮಾಕ ಕೆಲಸಗಳನ್ನು ಮಾಡಿದ್ದಾನೆ.

[15] ಎಸ್‌ಐಐ. ಸಂ. I X ಭಾಗ II ಸಂ. ೫೯೩

[16] ಶಾಸನ ಪಾಠವನ್ನು ಶ್ರೀ ನರಸಿಂಹಮ್‌ರವರು ನನಗೆ ಒದಗಿಸಿದ್ದಾರೆ.

[17] ಎಸ್‌ಐಐ, ಸಂ. I X ಭಾಗ II ಸಂ. ೫೯೩

[18] ಅದೇ, ಸಂ. ೬೬೦

[19] ನರಸಿಂಹಮ್‌, ಡಬ್ಲ್ಯು ವಿ.ಎಸ್‌., “ಬಯಕಾರ ರಾಮಪ್ಪನ ೧೬ನೆಯ ಶತಮಾನದ ಕೆಲವು ಹೊಸ ಶಾಸನಗಳು”…., ಇತಿಹಾಸ ದರ್ಶನ, ಸಂ. ೧೧, ಪು. ೧೨೫

[20] ಅದೇ,

[21] ಅದೇ,

[22] ಅದೇ,

[23] ಹೊಸಪೇಟೆ ತಾಲೂಕನ್ನು ಆವರಿಸಿರುವ ಕೂಡ್ಲಿಗಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕುಗಳಲ್ಲಿ ಕ್ಷೇತ್ರಕಾರ್ಯ ಕೈಗೊಂಡರೆ, ಬಯಕಾರ ರಾಮಪ್ಪನ ಇನ್ನೂ ಕೆಲವು ಶಾಸನಗಳು ದೊರಕುವ ಸಾಧ್ಯತೆಗಳಿವೆ.