ವಿಜಯನಗರ ಸಾಮ್ರಾಜ್ಯದ ಬಹುಪಾಲು ಭೂಪ್ರದೇಶವು ಅಲ್ಪಾವಧಿಯ ಮುಂಗಾರು (ಮಾನ್‌ಸೂನ್‌) ಮಳೆಯ ಮೇಲೆ ಅವಲಂಬಿತವಾಗಿತ್ತು. ತುಂಗಭದ್ರೆ ಹಾಗೂ ಕಾವೇರಿ ಎರಡೇ ಸರ್ವಋತು ನದಿಗಳಾಗಿದ್ದು ಮಿಕ್ಕ ನದಿಗಳು, ಹಳ್ಳಗಳು ಕೇವಲ ಮಳೆಗಾಲದಲ್ಲಿ ಹರಿಯುತ್ತಿದ್ದವು. ಈ ಕಾರಣದಿಂದಾಗಿ ನೀರಾವರಿ ಕಾರ್ಯಗಳಿಗೆ ಅಂದಿನವರು ವಿವಿಧ ಕ್ರಮ ಕೈಗೊಂಡರು. ಮೇಲೆ ವಿವರಿಸಿದ ನದಿ ಮತ್ತು ಕೆರೆ ನೀರಾವರಿಯ ವಿಧಾನದಿಂದ ನೀರಾವರಿ ಕಾರ್ಯಗಳ ಅವಶ್ಯಕತೆ ಸಂಪೂರ್ಣವಾಗಿ ನಿವಾರಿಸಲಾಗುತ್ತಿದ್ದಿಲ್ಲ. ಹೀಗಾಗಿ ಅವರು ಅಂತರ್ಜಲ ಮೂಲಗಳನ್ನೂ ಅವಲಂಬಿಸಲೇಬೇಕಾಯಿತು. ಇದರಿಂದ ಪ್ರದೇಶ ವೈಶಿಷ್ಟ್ಯಗಳಿಗೆ ಅನುಗುಣವಾಗಿ ಬಾವಿಗಳನ್ನು ಅಗೆದು ಬೇಸಾಯಕ್ಕೆ ಬಳಸಿಕೊಂಡರು. ವಿಧವಾದ ಬಾವಿ ನೀರಾವರಿಯಿಂದ ಒಂದರಿಂದ ಇಪ್ಪತ್ತು ಎಕರೆ ಭೂಮಿಗೆ ನೀರುಣಿಸಬಹುದಾಗಿತ್ತು. ಹೀಗೆ ಬಾವಿ ನೀರಾವರಿ ಕಾರ್ಯ ಸ್ಥಳೀಯ ಮತ್ತು ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ ಸಾಧ್ಯವಾಗುತ್ತಿತ್ತು. ಆದರೂ ಅದು ಅನಿವಾರ್ಯವಾಗಿತ್ತು. ಹೀಗಾಗಿ ನದಿ ಮತ್ತು ಕಾಲುವೆಗಳಿಂದ ದೂರದಲ್ಲಿರುವ ಪ್ರದೇಶಗಳಲ್ಲಿ ನೂರಾರು ಬಾವಿಗಳು ತಲೆ ಎತ್ತಿದವು. ಇದಲ್ಲದೆ ಭಾರತೀಯ ಧರ್ಮದಲ್ಲಿ ಬಾವಿಗಳಿಗೆ ಪವಿತ್ರ ಸ್ಥಾನವೂ ಇದ್ದುದರಿಂದ ಅವು ಅಧಿಕ ಸಂಖ್ಯೆಯಲ್ಲಿ ಜಾರಿಯಲ್ಲಿದ್ದವು.

ಹೀಗೆ ತೋಡಲಾದ ಬಾವಿಗಳಿಂದ ನೀರನ್ನು ತಾಂತ್ರಿಕ ವಿಧಾನಗಳಿಂದ ಮೇಲೆತ್ತಿ ಸಾಗುವಳಿಗೆ ಬೇಕಾದ ನೀರನ್ನು ಪಡೆಯಲಾಗುತ್ತಿತ್ತು. ಕ್ರಿ.ಶ. ೧೯೦೭ರಲ್ಲಿಯ ಸರ್ವೇಕ್ಷಣ (ಸರ್ವೇ) ಕಾರ್ಯದಂತೆ ಭಾರತದ ಶೇಕಡಾ ೩೦ ನೀರಾವರಿ ಕಾರ್ಯಗಳು ಬಾವಿಗಳಿಂದಲೇ ಜರುಗುತ್ತಿತ್ತು.[1] ಈ ಅಂಕಿಸಂಖ್ಯೆಗಳು ಭಾರತದ ನೀರಾವರಿಯಲ್ಲಿ ಬಾವಿಗಳಿಗೆ ಇದ್ದ ಮಹತ್ವವನ್ನು ಎತ್ತಿ ತೋರಿಸುತ್ತದೆ.

ನಮ್ಮ ಈ ಅಧ್ಯಯನದಲ್ಲಿ ಎರಡು ವಿಧವಾದ ಬಾವಿಗಳನ್ನು ಕಾಣಬಹುದು. ಮೊದಲನೆಯ ವರ್ಗವೆಂದರೆ ಖಾಯಂ ಆಗಿ ನೀರು ದೊರೆಯುವ ಸರ್ವಋತು ಬಾವಿಗಳು, ಎರಡನೆಯ ವರ್ಗದ ಬಾವಿಗಳೆಂದರೆ ನದಿ ಹಾಗೂ ಹಳ್ಳಗಳಲ್ಲಿ ತಾತ್ಕಾಲಿಕವಾಗಿ ತೋಡಲಾದ ಬಾವಿಗಳು, ಇವನ್ನು ‘ಒರತೆಗಳು’ ಎಂದೂ ಕರೆಯುತ್ತಾರೆ. ಯಾವುದೇ ಬಗೆಯ ಬಾವಿಗಳೇ ಇದ್ದರೂ ಅವು ಅಧಿಕ ಪ್ರದೇಶಗಳಿಗೆ ನೀರು ನೀಡುವ ಸಾಮರ್ಥ್ಯ ಹೊಂದಿರುತ್ತಿರಲಿಲ್ಲ. ಹೀಗಾಗಿ ಈ ದಿಶೆಯಲ್ಲಿ ನಮಗೆ ನದಿ ನೀರಾವರಿಯಲ್ಲಿ ದೊರಕಿದಂತೆ ವಿಫುಲ ಮಾಹಿತಿ ದೊರೆಯುವುದಿಲ್ಲ.

ಈಗಾಗಲೇ ವಿವರಿಸಿದ ನೀರಾವರಿ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಮತ್ತು ಧಾರ್ಮಿಕವಾಗಿ ಬಾವಿಗಳಿಗೆ ತನ್ನದೇ ಆದ ಸ್ಥಾನ ಇದೆ ಎಂಬುದನ್ನು ಮರೆಯಲಾಗದು. ಏಕೆಂದರೆ ವಿಷ್ಣುಧಮೋತ್ತರದಲ್ಲಿ ಸಾರ್ವಜನಿಕರ ಹಿತಕ್ಕಾಗಿ ಬಾವಿ ಅಗೆಸಿದವನು ವರುಣ ಲೋಕದಲ್ಲಿ ಸ್ಥಾನ ಪಡೆಯುತ್ತಾನೆ ಎಂದು ತಿಳಿಸಿದೆ.[2] ಸಾಹಿತ್ಯ ಕೃತಿಗಳಾದ ಬಾಣನ ಬರಹ ಹಾಗೂ ಮಿಶ್ರ ಚಕ್ರಪಾಣಿಯ ವಿಶ್ವವಲ್ಲಭ ಮುಂತಾದ ಪುರಾತನ ಗ್ರಂಥಗಳಲ್ಲಿ ಬಾವಿಗಳ ಬಗೆಗೆ ಪವಿತ್ರ ಮತ್ತು ಪುಣ್ಯಭಾವನೆಗಳನ್ನು ವ್ಯಕ್ತಪಡಿಸಿದೆ.[3] ವಿವಿಧ ಹೆಸರಿನ ಬಾವಿಗಳನ್ನು ತಿಳಿಸಲಾಗಿದ್ದು, ಅವು ಹೀಗಿವೆ ಶ್ರೀಮುಖ, ವಿಜಯ, ಪ್ರಾಂತ, ಧುಂದುಬಿ, ಮನೋಹರ, ಚೂಡಾಮಣಿ, ಭದ್ರ, ಜಯ, ಮಂದ ಮತ್ತು ಶಂಕರ.[4]

ಬಾವಿಗಳು, ನೀರಾವರಿ ಉಪಯೋಗಕ್ಕಲ್ಲದೆ, ಮಾನವರ ಸಾಮಾಜಿಕ ಮತ್ತು ಧಾರ್ಮಿಕ ಜೀವನದ ಅಂಗಗಳಾಗಿದ್ದವು. ಅನೇಕ ವೇಳೆ ಅವು ದೇವಾಲಯದ ಹಾಗೂ ದೇವರುಗಳ ವಿವಿಧ ಕಾರ್ಯಗಳಿಗೆಂದೇ ನಿರ್ಮಿಸಲಾಗಿದ್ದವು. ಅನೇಕ ಶುಭ ಕಾರ್ಯಗಳಿಗೆಂದೇ ಜನರು ಇಂದಿಗೂ ಬಾವಿಗಳನ್ನು ಅವಲಂಬಿಸಿದ್ದಾರೆ. ಬಾವಿಯಲ್ಲಿ ಗಂಗಮ್ಮ ಇರುತ್ತಾಳೆ ಎಂದೇ ಅನೇಕರು ಭಾವನೆಯಾಗಿದೆ. ವಿಜಯನಗರ ಅವಧಿಯ ಒಂದು ಶಾಸನವು ಬಾವಿಗಳನ್ನು ಕಟ್ಟಿಸುವುದು ಒಂದು ಪುಣ್ಯ ಕಾರ್ಯವೆಂದೇ ನಿರೂಪಿಸಿದೆ. ಈ ದಿಶೆಯಲ್ಲಿ ರಾಜ್ಯದ ಮಂತ್ರಿಯಾಗಿದ್ದ ಲಕ್ಷ್ಮಣ, ಅಮಾತ್ಯಗೆ ಅವನ ತಾಯಿಯ ಉಪದೇಶ ‘ಕೆರೆಯಂ ನಿರ್ಮಿಸು ಬಾವಿಯಂ ಸವೆಯಿಸು’ ಎಂಬುದನ್ನು ಸ್ಮರಿಸಬಹುದು.[5]

ಹಿಂದಿನ ಕಾಲದಲ್ಲಿ ನೀರು ಎಲ್ಲಿ ದೊರೆಯಬಹುದು ಎಂಬುದನ್ನು ತಿಳಿಯಲು ವಿವಿಧ ಮಾರ್ಗಗಳನ್ನು, ಜನರು ತಮ್ಮ ಅನುಭವದಿಂದ ಅರಿತಿದ್ದರು. ಈ ವಿಧಾನಗಳು ಪ್ರದೇಶದಿಂದ, ಪ್ರದೇಶಕ್ಕೆ ವಿಭಿನ್ನವಾಗಿದ್ದವು. ಜಲ ಸಂಶೋಧಕರು ತಮ್ಮದೇ ಆದ ವಿಧಾನಗಳಿಂದ, ಎಲ್ಲಿ ನೀರು ದೊರೆಯಬಹುದು ಎಂಬ ಸ್ಥಳಗಳನ್ನು ಗುರುತಿಸುತ್ತಿದ್ದರು. ಆ ಸ್ಥಳಗಳಲ್ಲಿ ಬಾವಿಯನ್ನು ತೋಡುತ್ತಿದ್ದರು. ಹಲವು ಜನ ಸಂಶೋಧಕರು ಆಲದ ಮರದ ಕವಲು ರೆಂಬೆಯ ಸಹಾಯದಿಂದ ನೀರಿರುವ ಜಾಗವನ್ನು ಪತ್ತೆ ಹಚ್ಚುತ್ತಿದ್ದರು. ಹನ್ನೊಂದನೆಯ ಶತಮಾನಕ್ಕೆ ಸೇರಿದ ‘ಲೋಕೊಪಕಾರ’ ಎಂಬ ಕನ್ನಡ ಕೃತಿಯಲ್ಲಿ ಜಲಸಂಶೋಧನೆಯ ಕುರಿತು ಒಂದು ಅಧ್ಯಾಯವನ್ನೇ ಹೊಂದಿದೆ. ಅದು ಹಲವಾರು ಗಿಡ, ಬಳ್ಳಿಗಳು ಬೆಳೆದಿದ್ದರೆ ಅದರಡಿಯಲ್ಲಿ ನೀರು ದೊರೆಯುತ್ತದೆ ಎಂಬುದನ್ನು ಸೂಚಿಸಿದೆ. ಅದು ಹೇಳುವಂತೆ ಆಲದ ಮರ, ಅಂಜೂರಗಿಡ ಮತ್ತು ಹಾವಿನ ಹುತ್ತು, ಪಚ್ಚೆಕಲ್ಲು, ಅಭ್ರಕ ಹಾಗೂ ಪಾದರಸ, ಲೋಹಗಳು ಇರುವ ಸ್ಥಾನದಲ್ಲಿ ನೀರು ಇರುತ್ತದೆ ಎಂದು ಹೇಳಿದೆ.[6] ಕೊಯಂಬತ್ತೂರು ಪ್ರದೇಶದಲ್ಲಿ ಒಂದು ವಿಚಿತ್ರ ವಿಧಾನವಿದೆ. ಅದೇನೆಂದರೆ ಒಂದು ವಿಶೇಷ ಮಾದರಿಯ ಕುರಿಯ ತಲೆಯ ಮೇಲೆ ನೀರು ಸುರಿಯಲಾಗುತ್ತದೆ. ಆ ಕುರಿ ಯಾವ ಜಾಗದಲ್ಲಿ ನಿಂತು ತನ್ನ ತಲೆಯ ಮೇಲಿನ ನೀರನ್ನು ಕೊಡಸಿಕೊಳ್ಳುವುದೋ ಆ ಸ್ಥಳ ಜಲಸಂಪನ್ಮೂಲದಿಂದ ಕೂಡಿದೆ ಎಂದು ಭಾವಿಸಬೇಕು. ಹಾಗೂ ಅಲ್ಲಿ ಬಾವಿಯನ್ನು ಅಗೆಸಬೇಕು.[7] ಹೀಗೆ ಜನರಲ್ಲಿ ಜಲಸಂಪನ್ಮೂಲಗಳ ಬಗೆಗೆ ವಿವಿಧ ನಂಬಿಕೆಗಳಿದ್ದವು. ಆದರೆ ಈ ವಿಧಾನಗಳೆಲ್ಲವೂ ನಿಜವೆಂದೇ ಭಾವಿಸಬಾರದು. ಅನೇಕ ಬಾರಿ ನಾವು ಎಣಿಸಿದ ಫಲ ದೊರೆಯದೇ ಹೋಗಲೂಬಹುದು.

ಸಾಮಾನ್ಯವಾಗಿ, ನೀರಾವರಿಗೆಂದೇ ನಿರ್ಮಿಸಿದ ಬಾವಿಗಳು ಊರಿನಿಂದ ಹೊರಗಡೆಯ ಪ್ರದೇಶಗಳಾದ ಹೊಲ, ತೋಟ ಗದ್ದೆಗಳಲ್ಲಿರುತ್ತಿದ್ದವು. ಆದರೆ ಜನರಿಗೆ ಕುಡಿಯಲು ಮತ್ತು ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಗಳಿಗೆಂದೇ ತೆಗೆಸಿದ ಬಾವಿಗಳು ಜನವಸತಿ ಪ್ರದೇಶದಲ್ಲಿರುತ್ತಿದ್ದವು. ಇವುಗಳ ರಚನೆ ಸಂಕಿರಣತೆಯಿಂದ ಒಡಗೂಡಿರುತ್ತಿತ್ತು. ಏಕೆಂದರೆ ಕೆಲವು ಬಾವಿಗಳು ದೇವತಾ ಮೂರ್ತಿಗಳಿಂದಲೂ, ಮಂಟಪಗಳಿಂದಲೂ, ನಾಲ್ಕೂ ಬದಿಯಲ್ಲಿ ಪಾವಟಿಗೆಗಳಿಂದಲೂ ಒಡಗೂಡಿರುತ್ತಿದ್ದವು. ಅದೇ ಸಮಯದಲ್ಲಿ ಅವು ದೇವಸ್ಥಾನದ ಹೂದೋಟಕ್ಕೆ ನೀರುಣಿಸುತ್ತಿದ್ದುದ್ದುಂಟು. ಈಚಿನ ದಿನಗಳಲ್ಲಿ ವಿಜಯನಗರ ಪಟ್ಟಣದಲ್ಲಿ ಈ ಬಗೆಗೆ ಹಲವಾರು ಶಾಸನಗಳು ದೊರೆತಿವೆ. ಅವು ಅನೇಕ ವಿವರಗಳಿಂದ ಕೂಡಿವೆ.

ಕ್ರಿ.ಶ. ೧೩೮೦ ಎರಡನೆ ಹರಿಹರರಾಯನು ಅಳುತ್ತಿದ್ದಾಗ ಒಂದು “ಒರ್ತೆಕುಂಡ”ವನ್ನು ಬಡ್ಡೆಯ ನಾಯಕ ಎಂಬ ಬೇಟೆಗಾರ ಯಡವಂಕ ಎಂಬಲ್ಲಿದ್ದ ಊಟೆಯ ಬಳಿ ಕೊಳ ಒಂದನ್ನು ನಿರ್ಮಿಸಿದ. ಅವನು ಅರಸನ ಆಸ್ಥಾನದ ಸೇವಕನಾಗಿದ್ದ. ಈ ಊಟಿಯ ಬಾವಿಯನ್ನು ಮೈಲಾರ ದೇವನ ಪವಿತ್ರ ಅಭಿಷೇಕದ ನೀರಿಗೆಂದೇ ಅಗೆಸಲಾಗಿತ್ತು ಹೀಗಾಗಿ ಆ ದೇವರನ್ನು ‘ವರ್ತಿಯ ಮೈಲಾರದೇವ’ನೆಂದೇ ಕರೆಯಲಾಯಿತು. ಅದೇ ಸಮಯದಲ್ಲಿ ದೇವಸ್ಥಾನದ ಆಗ್ನೇಯ ಭಾಗದಲ್ಲಿ ಆಲದ ಮರಗಳನ್ನೂ ನೆಡಲಾಯಿತು. ಮೇಲೆ ಹೇಳಿದಂತೆ ಈ ಬಾವಿಯನ್ನು ದೇವಸ್ಥಾನದ ಧಾರ್ಮಿಕ ಕಾರ್ಯಗಳಿಗೆ ಮಾತ್ರ ಉಪಯೋಗಿಸಲಾಗುತ್ತಿತ್ತು. ಈ ಶಾಸನವು ಹಂಪಿಯಲ್ಲಿದೆ.[8] ಮತ್ತೊಂದು ಕ್ರಿ.ಶ. ೧೩೭೭ರ ಶಾಸನವು ಭಕ್ತರನಾಗಪ್ಪ ಎಂಬುವನು ಒಂದು ಬಾವಿಯನ್ನು ಹಾಗೂ ಅದರ ಬಳಿಯಲ್ಲಿ ಒಂದು ಅಶ್ವತ್ಥ ವೃಕ್ಷವನ್ನೂ ನೆಡಿಸಿದನು. ಈ ಕಾರಣದಿಂದಾಗಿ ಈ ಸ್ಥಳವನ್ನು ಒಂದು ತೀರ್ಥವೆಂದೇ ಭಾವಿಸಿದರು. ಈ ದಾಖಲೆಯನ್ನೂ ಹಂಪೆಯಿಂದಲೇ ಪಡೆಯಲಾಗಿದೆ.[9] ಕ್ರಿ.ಶ. ೧೩೯೦ರ ಒಂದು ಹಂಪೆಯ ಶಾಸನದಂತೆ ಈ ಭಕ್ತರ ನಾಗಪ್ಪನು ಕ್ರಿಯಾಶಕ್ತಿ ಒಡೆಯರ ಶಿಷ್ಯನಾಗಿದ್ದು ಮತ್ತೊಂದು ಬಾವಿಯನ್ನು ಕಟ್ಟಿಸಿದ್ದನು. ಈ ಬಾವಿಯು ಗಣೇಶ ಮಂದಿರ ಮತ್ತು ಅಶ್ವಥ್ ವೃಕ್ಷವನ್ನು ಹೊಂದಿತ್ತು. ಈ ಎಲ್ಲಾ ಕಾರ್ಯಗಳೂ ಒಂದೇ ಸಮಯದಲ್ಲಿ ಜರುಗಿರಬಹುದು.[10] ಹಂಪಿಯ ಎರಡು ತೇದಿಗಳಲ್ಲಿದ್ದ ಶಾಸನಗಳು ಲಿಂಗಬಾವಿ ಹಾಗೂ ರಂಗನಾಥುನಿ ಬಾವಿ ಎಂಬ ಎರಡು ಬಾವಿಗಳನ್ನು ಪ್ರಸ್ತಾಪಿಸಿದೆ. ಬಹುಶಃ ಈ ಎರಡು ಬಾವಿಗಳು ಅವು ಹೊಂದಿದ್ದ ದೇವರುಗಳನ್ನು ಸೂಚಿಸುತ್ತವೆ.[11] ಅದೇ ಸ್ಥಳದಲ್ಲಿ ಮತ್ತೊಂದು ಶಾಸನವು ಪಿಲಿಕುಮಚಲಕನು, ಭೈರವನಿಗೆ ಒಂದು ಬಾವಿಯನ್ನು ನೀಡಿರುವುದನ್ನು ತಿಳಿಸುತ್ತದೆ.[12]

ಅದೇ ಸ್ಥಲದಲ್ಲಿ ದೊರೆತ ಮತ್ತೊಂದು ಶಾಸನವು ನಾರಸಿಮಠದ ನಂಜದೇವನೆಂಬ ಗುರುವಿಗೆ ದೇವರಪಲ್ಲಿ ಮುಮ್ಮಡಿಶೆಟ್ಟಿ ಎಂಬ ವರ್ತಕನು ಭೂಮಿ ಹಾಗೂ ಒಂದು ಬಾವಿಯನ್ನು ದಾನ ನೀಡಿದ್ದನ್ನು ತಿಳಿಸುತ್ತದೆ.[13]

ತುಮಕೂರು ಜಿಲ್ಲೆಯ ತಟಸಂದ್ರ ಹಳ್ಳಿಯ ಬಳ್ಳಿಯ ತೇದಿಯಿಲ್ಲದ ಒಂದು ಶಾಸನವು ಒಕ್ಕರಣೆ ಬಾವಿಯ ಬಗೆಗೆ ಪ್ರಸ್ತಾಪಿಸಿದೆ. ಒಕ್ಕರಣೆ ಪದವು ಕನ್ನಡದಲ್ಲಿ ಪುಷ್ಕರಣಿಗೆ ಸರಿಸಮವಾದುದು. ಪುಷ್ಕರಣಿ ಎಂದರೆ ದೇವಸ್ಥಾನದ ಬದಿಯಲ್ಲಿರುವ ಬಾವಿ. ಇದನ್ನು ಕೇವಲ ಧಾರ್ಮಿಕ ಕಾರ್ಯಗಳಿಗೆ ಮಾತ್ರ ಉಪಯೋಗಿಸುತ್ತಾರೆ. ತಟಸಂದ್ರ ಹೆಸರೇ ಒಂದು ಕೆರೆಯನ್ನು ಸೂಚಿಸುತ್ತದೆ. ಕೆರೆಯ ಹೆಸರನ್ನೇ ಊರಿಗೆ ಇಡಲಾಗಿದೆ. ಈ ಒಕ್ಕರಣೆ ಬಾವಿಯನ್ನು, ಓರ್ವ ಅಧಿಕಾರ ಗಿರಿಯಣ್ಣ ನಾಯಕನು ಆನಂದ ಸಂವತ್ಸರದಲ್ಲಿ ನಿರ್ಮಿಸಿದನಂತೆ.[14]

ಈ ಒಂದು ಹಿನ್ನೆಲೆಯಲ್ಲಿ ಮಲಪನಗುಡಿಯ ಒಂದು ದಾಖಲೆಯ ತುಂಬಾ ಕುತೂಹಲಕಾರಿಯಾಗಿದೆ. ಮಲಪನಗುಡಿಯು ಹಿಂದೆ ವಿಜಯನಗರದ ಪರಿಮಿತಿಯಲ್ಲಿದ್ದುದರಿಂದ ಈ ಶಾಸನಕ್ಕೆ ಅಧಿಕ ಮಹತ್ವ. ಈ ಶಾಸನವು ಕ್ರಿ.ಶ. ೧೪೧೨ಕ್ಕೆ ಸೇರಿದೆ. ಇದು ಹೇಳುವಂತೆ ಮಾಳಿಕೆ-ಕೂಪ-ಆರಾಮ ಅಂದರೆ ಬಾವಿತೋಟದಿಂದೊಡಗೂಡಿದ ವಿಶ್ರಾಂತಿ ಧಾಮ. ಈ ಬಾವಿಯನ್ನು ನಾವು ಇಂದಿಗೂ ಈ ಹಳ್ಳಿಯ ಹೊರವಲಯದಲ್ಲಿ ಕಾಣಬಹುದು. ಈ ಬಾವಿಯ ಉದ್ದೇಶವೆಂದರೆ, ವಿಜಯನಗರದ ಹೆದ್ದಾರಿಯಲ್ಲಿ ಹೋಗುವ ಪ್ರಯಾಣಿಕರಿಗೆ ಅರವಟ್ಟಿಗೆಯನ್ನು ರಚಿಸಿ ಬಾಯಾರಿಕೆಯನ್ನು ಹಿಂಗಿಸುವುದು ಹಾಗೂ ಅವರ ಮಾರ್ಗಾಯಾಸ ಪರಿಹಾರಕ್ಕೆ ತೋಟ ನಿರ್ಮಿಸಿದ್ದರು. ಹೀಗಾಗಿ ಬಾವಿಯ ಬಳಿ ಗಿಡಮರಗಳ ತೋಪನ್ನು ನಿರ್ಮಿಸಲಾಗಿತ್ತು. ಹೀಗೆ ಈ ಅರವಟ್ಟಿಗೆ ಹಾಗೂ ತೋಟದ ಉಸ್ತುವಾರಿಗೆಂದೇ ಬುಳ್ಳಯ್ಯ ನಾಯಕನ ಮಗನಾದ ಹೆಗಡೆ ಸೋವನ್ನನೆಂಬ ದಾನಿಯು ಭೂಮಿಯನ್ನು ನೀಡಿದ್ದನು. ಹೀಗೆ ಭೂಮಿಯಿಂದ ಬಂದ ಆದಾಯವನ್ನು ಹಲವಾರು ಮಂದಿ ಹಂಚಿಕೊಳ್ಳಬೇಕೆಂಬ ಕರಾರಿನಂತೆ, ಅರವಟ್ಟಿಗೆಯ ಮಾಲಿಕನಾದ ವಿರುಪಣ್ಣ ಆದಾಯದ ಒಂದು ಮೂರಾಂಶವನ್ನು, ಮಿಕ್ಕ ಎರಡು ಮೂರಾಂಶ ಆದಾಯವನ್ನೂ ಅರವಟ್ಟಿಗೆಗೆ ನೀರು ಹೊತ್ತು ಹಾಕುವರ, ಗಡಿಗೆ ಮುಂತಾದ ಸಾಮಗ್ರಿಗಳ ಖರೀದಿ ಮಾಡಲು, ತೋಟಕ್ಕೆ ನೀರು ಹಾಕುವರ ಕೂಲಿ ಹಾಗೂ ಇತರ ದುರಸ್ತಿ ಕಾರ್ಯಗಳಿಗೆ ಉಪಯೋಗಿಸಲಾಗುತ್ತಿತ್ತು. ಅಲ್ಲದೆ ಹೀಗೆ ದಾನ ಪಡೆದ ವಿರುಪಣ್ಣ ಮತ್ತು ಅವನ ವಂಶಜರು ಈ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಬೇಕು. ಒಂದು ವೇಳೆ ಅವರು ಈ ಕಾರ್ಯದಲ್ಲಿ ತಪ್ಪಿದರೆ, ಯಾವ ಧರ್ಮಿಷ್ಟನಾದರೂ ಈ ಶಾಸನವನ್ನು ಬಹಿರಂಗವಾಗಿ ಓದಿ, ಜನತೆಗೆ ತಿಳಿಸಿ, ಈ ಧಾರ್ಮಿಕ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಬಹುದು ಹಾಗೂ ಉತ್ಪನ್ನದ ಆದಾಯವನ್ನೂ ಪಡೆಯಬಹುದು ಎಂದೇ ಸೂಚಿಸಿದೆ. ಇದು ಬಾವಿಗಳ ಬಗೆಗೆ ಹಾಗೂ ಅವುಗಳ ಉಪಯುಕ್ತತೆಗೆ ಉತ್ತಮ ಉದಾಹರಣೆಯಾಗಿದೆ. ಈ ದೃಷ್ಟಾಂತವು ಅಂದಿನ ದಿನಗಳಲ್ಲಿಯ ಸಮಾಜದಲ್ಲಿ ದಾರಿಹೋಕರಿಗೂ, ಪ್ರಯಾಣಿಕರ ಬಗೆಗೂ ಇದ್ದ ಸದ್ಭಾವನೆಯನ್ನು ಸೂಚಿಸುತ್ತದೆ.[15] ವಿಜಯನಗರದ ಆಡಳಿತದಲ್ಲಿ ಜನ ಜೀವನದಲ್ಲಿ ಬಾವಿಗಳ ಪಾತ್ರವನ್ನು ಎತ್ತಿತೋರಿಸಲು ಇದೊಂದು ಉತ್ತಮ ನಿದರ್ಶನ.

ಕ್ರಿ.ಶ. ೧೪೩೦ರ ಒಂದು ಶಾಸನವು ಸೋಮಯಾಜಿಲು ಎಂಬುವರು ಮೂರು ಕಲ್ಲುಕಟ್ಟೆಯಿಂದ ಕೂಡಿದ ಬಾವಿಗಳನ್ನು, ನಾಲ್ಕು ಕೆರೆಗಳನ್ನು ಹಾಗೂ ಒಂದು ದೇವಾಲಯವನ್ನು ನಿರ್ಮಿಸಿದ ವಿಷಯವನ್ನು ಅರುಹುತ್ತದೆ.[16]

ಹಾಳು ಹಂಪೆಯಲ್ಲಿಯ ಒಂದು ಶಾಸನವು ಧಾರ್ಮಶಾಲೆಯ ಬಳಿ ಕಟ್ಟಲಾದ ಬಾವಿಯ ಬಗ್ಗೆ ತಿಳಿಸುತ್ತದೆ. ಸೋಜಿಗದ ಸಂಗತಿ ಎಂದರೆ ಈ ಧರ್ಮಶಾಲೆ ಹಾಗೂ ಬಾವಿಯ ಕಾರ್ಯಕ್ಕೆ ದಾನ ನೀಡಿದವನು ಅಹಮದ್‌ಖಾನ್‌ಎಂಬ ಓರ್ವ ಮುಸ್ಲಿಂ ಅಧಿಕಾರಿ. ಇದನ್ನು ಸಾರ್ವಜನಿಕರ ಸೌಖ್ಯಕ್ಕಾಗಿ ಹಾಗೂ ಅವನ ಒಡೆಯನಾದ ಎರಡನೆಯ ದೇವರಾಯನ ಪುಣ್ಯಸ್ಮರಣೆಗಾಗಿ ಕ್ರಿ.ಶ. ೧೪೩೯ರಲ್ಲಿ ನಿರ್ಮಿಸಿದ.[17]

ಕ್ರಿ.ಶ. ೧೪೭೩ರಲ್ಲಿ ಸಾಳುವ ನರಸಿಂಹರಾಜ ಒಡೆಯರು ಒಂದು ಕೋನೇರಿಯನ್ನು ನಿರ್ಮಿಸಿದ. ಕೋನೇರಿ ಎಂದರೆ ನಾಲ್ಕೂ ನಿಟ್ಟಿನಲ್ಲಿ ಪಾವಟಿಗೆಗಳನ್ನು ಹೊಂದಿರುವ ಒಂದು ಚಿಕ್ಕ ಕೊಳ. ಅದೊಂದು ಪುಷ್ಕರಣಿ ಎಂದೇ ಹೇಳಬಹುದು. ಈ ಬಗೆಯ ಕೋನೇರಿಗಳನ್ನು ದೇವಾಲಯದ ಪಕ್ಕದಲ್ಲಿಯೇ ಕಟ್ಟಲಾಗುತ್ತಿತ್ತು. ಹೀಗಾಗಿ ದೇವರ ಅಭಿಷೇಕಕ್ಕೆ, ದರ್ಶನಾರ್ಥಿಗಳು ಮೀಯಲಿಕ್ಕೆ ಹಾಗೂ ದೇವಸ್ಥಾನದ ಉದ್ಯಾನಗಳಿಗೆ ನೀರು ಹಾಯಿಸುವ ಮುಂತಾದ ಅನೇಕ ಕಾರ್ಯಗಳಿಗೆ ನೆರವಾಗುತ್ತಿದ್ದವು.

ಬಳ್ಳಾರಿ ಜಿಲ್ಲೆಯ ಕುರುಗೋಡು ಹಳ್ಳಿಯ ಶಾಂತ ಮಲ್ಲಿಕಾರ್ಜುನ ದೇವಾಲಯದ ಬಾವಿಯನ್ನು ಮಲ್ಲಪ್ಪ ನಾಯಕನೆಂಬ ಅಧಿಕಾರಿಯ ಪತ್ನಿ ಮಲ್ಲಮ್ಮ, ಬಲಕುಂದಿ ಅಧಿಕಾರಿಯಾದ ಮಾದಪ್ಪ ನಾಯಕನ ಮಗಳು, ದುರಸ್ತಿ ಮಾಡಿಸಿದ್ದನ್ನು ವಿವರಿಸುತ್ತದೆ. ಹೀಗೆ ರಿಪೇರಿ ಮಾಡಿಸಿದ ಬಾವಿಯನ್ನು, ಮಲ್ಲಿಕಾರ್ಜುನ ದೇವಾಲಯದ ಹೂದೋಟದ ಉಪಯೋಗಕ್ಕೆಂದು ಕ್ರಿ.ಶ. ೧೫೧೨ರಲ್ಲಿ ದಾನ ಮಾಡಲಾಯಿತು.[18]

ಕ್ರಿ.ಶ. ೧೫೩೧ರ ಒಂದು ದಾಖಲೆ ಹಂಪಿಯ ಬಳಿಯ ಕಾಮಲಾಪುರದ ಬಳಿಯಲ್ಲಿ ದೊರೆತಿದ್ದು ಅದು ಎರಡು ವಿಧವಾದ ಬಾವಿಗಳನ್ನು ಸೂಚಿಸುತ್ತದೆ. ನಡಬಾವಿ, ಕಪ್ಪಿಲೆ ಬಾವಿ. ಇದು ಅಂದಿನ ಬಾವಿಗಳ ರಚನೆಯ ವಿಧಾನವನ್ನು ಸೂಚಿಸುತ್ತದೆ. ಮೊದಲನೆಯ ವಿಧವಾದ ಬಾವಿಯನ್ನು ತಮಿಳು ಭಾಷೆಯಲ್ಲಿ ನಡೈಬಾವಿ ಎಂದು ಕರೆಯಲಾಗಿದೆ. ಕನ್ನಡದಲ್ಲಿ ನಡೆ ಬಾವಿ ಅಂದರೆ ಸುತ್ತಲೂ ಪಾವಟಿಗೆ ಅಥವಾ ಸೋಪಾನಗಳ ಬಾವಿ ಎಂದೇ ತಿಳಿಯಬೇಕು. ಮತ್ತೊಂದು ವಿಧವಾದ ಕಪ್ಪಿಲೆ ಬಾವಿಯಲ್ಲಿ ನೀರನ್ನು ಸಾಮಾನ್ಯವಾಗಿ ಯಂತ್ರ ಸಹಾಯದಿಂದ ಮೇಲೆ ಎತ್ತಲಾಗುವುದು. ದೊಡ್ಡ ತೊಗಲಿನ ಚೀಲವನ್ನು ನಿರ್ಮಿಸಿ, ಹಗ್ಗದ ಸಹಾಯದಿಂದ ನೀರನ್ನು ಎತ್ತಿ ತೋಟಗಳಲ್ಲಿ ಹರಿಸಲಾಗುವುದು. ವಿವರಗಳನ್ನು ಬೇರೆ ಎಡೆಯಲ್ಲಿ ನೀಡಿದೆ. ಈ ಬಾವಿಗಳ ಬಗೆಗೆ ತಿಳಿಸಲಾದ ವಿವರದಂತೆ, ಕಪ್ಪಿಲೆ ಬಾವಿಯನ್ನು ಕೊಂಡಮಾರಸಯ್ಯನೂ, ನಡದ ಬಾವಿಯನ್ನು ವಲ್ಲಭಯ್ಯನು ನಿರ್ಮಿಸಿದರು. ನರಸಿಂಹದೇವರಿಗೆ ಭೂಮಿ ದಾನ ನೀಡಿದ್ದನ್ನೂ ನಾವು ಕಾಣಬಹುದು.[19] ಕೊಯಂಬತ್ತೂರು ಜಿಲ್ಲೆಯ ಯರಗನಹಳ್ಳಿಯ ಕ್ರಿ.ಶ. ೧೫೩.೨ರ ಒಂದು ಶಾಸನವು ಡೋಣಿಬಾವಿಯನ್ನು ಸೂಚಿಸಿದೆ. ಇದೊಂದು ಕುಂಟೆಯಂತೆ ಚಿಕ್ಕಬಾವಿಯಾಗಿದ್ದು ಗುಡ್ಡದ ಮೇಲೆ ಹರಿದು ಬಂದ ನೀರನ್ನು ಸಂಗ್ರಹಿಸಿ ನೀರಾವರಿ ಕಾರ್ಯಕ್ಕೆ ಬಳಸಲಾಗುತ್ತಿತ್ತು.[20]

ಬರಗಾಲದಲ್ಲಿ ನೀರಿನ ಅಭಾವದಿಂದ ಕಷ್ಟಕ್ಕೆ ಈಡಾದ ಜನರಿಗೆಂದೇ ಒಂದು ಬಾವಿಯನ್ನು ದುರಸ್ತಿ ಮಾಡಿದ ಬಗ್ಗೆ ಪ್ರಸ್ತಾಪಿಸಲಾಗಿದೆ. ಕ್ರಿ.ಶ. ೧೫೪೦ರಲ್ಲಿ ಈರ್ವರು ಕಾಳ ಮಲ್ಲಿಕಾರ್ಜುನ ದೇವ, ಮತ್ತು ಕೆಂಪಿನ ಲಿಂಗಣ್ಣ ಒಡೆಯ ದೇವರುಗಳು ಉಮ್ಮತ್ತೂರು ಸಿಂಹಾಸನದ ಮಠದ ಗುರುಗಳಾದ ಚೆನ್ನಬಸವರಾಜ ದೇವರ ಆದೇಶದಂತೆ ಒಂದು ಬಾವಿಯನ್ನು ಕಟ್ಟಿಸಿದರು. ಬರಗಾಲ ಎಷ್ಟು ಭೀಕರವಾಗಿತ್ತೆಂದರೆ ಒಂದು ಬಂಗಾರದ ನಾಣ್ಯಕ್ಕೆ ಏಳುಮಣ ಧಾನ್ಯ ನೀಡಲಾಗುತ್ತಿತ್ತು ಹಾಗೂ ಮನುಷ್ಯರನ್ನೇ ಮನುಷ್ಯರು ಭಕ್ತಿಸುವಷ್ಟು ಬರ ತೀಕ್ಷಣವಾಗಿತ್ತು.

ಕ್ರಿ.ಶ.೧೫೪೮ರ ಒಂದು ಶಾಸನದ ದಾಖಲೆಯು ತಿಳಿಸುವಂತೆ ಬಳ್ಳಾರಿ ಜಿಲ್ಲೆಯ ಛತ್ರದಹಳ್ಳಿಯ ಯಲ್ಲವಣ್ಣನು ಪ್ರಯಾಣಿಕರ ಸೌಕರ್ಯಕ್ಕೆಂದೇ ಒಂದು ಬಾವಿ ಹಾಗೂ ತೋಪನ್ನು ನಿರ್ಮಿಸಿದ ವಿವರವನ್ನು, ಬಾವಿಯ ಪ್ರವೇಶ ಮಾರ್ಗದ ಬಂಡೆಯ ಮೇಲೆ ಕೆತ್ತಲಾಗಿದೆ.[21]

ಚಿಕ್ಕ ಬಾವಿಗಳು, ನೀರು ಶೇಖರಿಸಿಡುವ ಚಿಕ್ಕ ದೊಣೆಗಳನ್ನು ಕುಡಿಯಲು, ಬಟ್ಟೆ, ಒಗೆಯಲು, ಸ್ನಾನ ಮುಂತಾದ ಕಾರ್ಯಗಳಿಗೆ ಉಪಯೋಗಿಸಲಾಗುತ್ತಿತ್ತು. ಅಲ್ಲದೆ ಉಲ್ಲಾಸಕ್ಕೆಂದೇ ಚಿಕ್ಕ ಉದ್ಯಾನಗಳನ್ನು, ಅದರಲ್ಲಿಯೂ ಅರಮನೆಗಳ ಹತ್ತಿರದಲ್ಲಿ ನಿರ್ಮಿಸಲಾಗುತ್ತಿತ್ತು. ಈ ಬಗೆಯ ಅನೇಕ ಕೆರೆ ಕುಂಟೆಗಳನ್ನು ನಾವು ಇಂದು ಹಾಳು ಬಿದ್ದ ವಿಜಯನಗರದಲ್ಲಿ ನೋಡಬಹುದಾಗಿದೆ.

ಹಂಪೆಯಲ್ಲಿ ಈ ವಿಧವಾಗಿ ನೀರನ್ನು ಸಂಗ್ರಹಿಸಿಡುತ್ತಿದ್ದ ಸ್ಥಳಗಳನ್ನು ರಾಣಿಯರ ಸ್ನಾನಗೃಹ, ಅಷ್ಟಕೋನ ಸ್ನಾನಗೃಹ, ಸಾರ್ವಜನಿಕ ಸ್ನಾನಗೃಹ, ಇಳಿಯುವ ಬಾವಿ, ಜಲಮಂಟಪ, ವಿಹಾರ ಮಂಟಪ ಮುಂತಾದ ನೂತನ ಹೆಸರಿನಿಂದ ಕರೆಯುತ್ತಿರುವುದನ್ನು ಕಾಣಬಹುದಾಗಿದೆ. ಈ ಎಲ್ಲಾ ಸ್ಥಳಗಳಿಗೂ ಕಾಮಲಾಪುರದ ಕೆರೆಯಿಂದಲೇ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ಈ ಕೆರೆಗೆ ರಾಯರ ಕಾಲುವೆಯಿಂದ ನೀರನ್ನು ಬಿಡಲಾಗುತ್ತಿತ್ತು. ಈ ಎಲ್ಲಾ ಸ್ನಾನ ಕುಂಡಗಳಿಗೆ ನೀರನ್ನು ಒಳಗೆ ಹರಿಸುವ ಹಾಗೂ ಹೊರಗಡೆ ಹೋಗುವ ಕಿಂಡಿ ಮಾರ್ಗಗಳನ್ನು ಬುದ್ದಿವಂತಿಕೆಯಿಂದ ರಚಿಸಿದ್ದರು. ಈ ದಿಶೆಯಲ್ಲಿ ನೀರಿನ ಕೊಳವೆ, ಕಾಲುವೆ, ಕಲ್ಲು ಕಾಲುವೆ ಅಥವಾ ಗಾರೆ ನಿರ್ಮಿತ ಕಾಂಕ್ರಿಟ್ ಕಾಲುವೆಗಳ ಮುಖಾಂತರ ನೀರು ಹರಿಸುವ ದೃಶ್ಯವು ಮನಮೋಹಕವಲ್ಲದೆ, ಅವರ ನೀರು ಹಾಯಿಸುವ ಉತ್ತಮ ತಂತ್ರಜ್ಞಾನದ ಮಟ್ಟವನ್ನೂ ಎತ್ತಿ ತೋರಿಸುತ್ತದೆ. ಈ ಕಾರ್ಯಗಳಲ್ಲಿ ಅಂದಿನವರು, ಭೂಮಟ್ಟ ಶಾಸ್ತ್ರದ ಬಗೆಗೆ ಹೊಂದಿದ್ದ ಜ್ಞಾನವನ್ನೂ ವಿವರಿಸುತ್ತದೆ. ಏಕೆಂದರೆ ಭೂಮಿಯ ಗುರುತ್ವಾಕರ್ಷಣೆ ಹಾಗೂ ಏರುಪೇರುಗಳನ್ನು ಅರಿತಿದ್ದುದರಿಂದಲೇ ಅವರು ಕಂಬಗಳ ಮೇಲೆ ನೀರನ್ನು ಹರಿಸುವ ಕ್ರಮ ಕೈಗೊಂಡಿದ್ದರು. ಅಲ್ಲದೆ ಅವರು ನೀರು ಹಾಯಿಸಲು ಸುಟ್ಟ ಮಣ್ಣಿನ ಕೊಳವೆಗಳನ್ನು ಉಪಯೋಗಿಸಿದ್ದು, ಉತ್ತಮ ಮಟ್ಟದ ತಂತ್ರಜ್ಞಾನವನ್ನು ಅವರು ಅಂದೇ ಅರಿತಿದ್ದರು ಎಂದು ತೋರುತ್ತದೆ. ಅಂದಿನ ತಂತ್ರಜ್ಞರು ನೀರಿನ ಹಂಚಿಕೆಯನ್ನು ಬಹು ಸಮರ್ಥ ರೀತಿಯಿಂದ ಜರುಗಿಸುತ್ತಿದ್ದರು. ಏಕೆಂದರೆ ಸುಟ್ಟ ಮಣ್ಣಿನ ಪೈಪುಗಳನ್ನು ಸುಣ್ಣದಕಲ್ಲಿನ ಕಾಂಕ್ರೀಟ್‌ಮಧ್ಯದಲ್ಲಿ ಭದ್ರಗೊಳಿಸಿ ತಮಗೆ ಬೇಕಾದೆಡೆಗೆ ನೀರನ್ನು ಹರಿಸಿಕೊಂಡು ಹೋಗುತ್ತಿದ್ದರು. ಹಲವು ಬಾರಿ ಕೇವಲ ಒಂದೇ ಪೈಪಲ್ಲದೆ, ಅನೇಕ ಪೈಪುಗಳ ಮೂಲಕ ನೀರನ್ನು ಹರಿಸುತ್ತಿದ್ದರು. ಇದರ ಉದ್ದೇಶವೆಂದರೆ, ಒಂದು ಪೈಪು ಒಡೆದರೆ, ಇತರ ಪೈಪುಗಳ ಮೂಲಕ ನೀರಿನ ಸರಬರಾಜು ಯಾವ ಅಡೆತಡೆಯಿಲ್ಲದೆ ಮುಂದುವರಿಯುತ್ತಿತ್ತು. ಮುಂದುವರಿದ ಅವರ ತಂತ್ರಜ್ಞಾನಕ್ಕೆ ಉತ್ತಮ ನಿದರ್ಶನವೆಂದರೆ, ಅವರು ಸಮಾನಾಂತರವಾಗಿ ಮಣ್ಣಿನ ಕೊಳವೆ ಪೈಪುಗಳ ಮುಖಾಂತರ ನೀರು ಹರಿಸುತ್ತಿದ್ದರು. ಇದರ ಉದ್ದೇಶವೆಂದರೆ, ಒಂದೇ ಪೈಪಿನಲ್ಲಿ ನೀರು ಹರಿಸಿದರೆ ನೀರಿನ ಅಧಿಕ ಒತ್ತಡವನ್ನು ನಿವಾರಿಸಲೆಂದೇ ಸಮಾನಾಂತರವಾಗಿ ಮತ್ತೊಂದು ಪೈಪಿನಲ್ಲಿ ನೀರನ್ನು ಹರಿಸಿಕೊಂಡು ಬರಲಾಗುತ್ತಿತ್ತು. ಈ ವಿಧಾನವು ಪೈಪುಗಳಿಗೆ ಧಕ್ಕೆಯಾಗದಂತೆ ರಕ್ಷಣೆ ಒದಗಿಸುತ್ತಿತ್ತು. ಇದು ಅವರು ಹೊಂದಿದ ಉನ್ನತಮಟ್ಟದ ಜಲವಿತರಣೆಯ ತಂತ್ರದ ದ್ಯೋತಕವಾಗಿತ್ತು.

ಅಂದಿನ ದಿನಗಳಲ್ಲಿ ನೀರನ್ನೂ ಸಂಗ್ರಹಿಸುವ ವಿಧಾನ ಹಾಗೂ ಅದನ್ನು ಸಂಗ್ರಹಿಸುತ್ತಿದ್ದ ರಚನೆಗಳು ಇಂದು ಹಾಳು ಬಿದ್ದಿವೆ. ೧೫೬೫ರ ಯುದ್ಧದ ನಂತರ ಇವು ಹಾಳಾಗಿ ಹೋದುದ್ದು ಎಲ್ಲರಿಗೂ ತಿಳಿದ ವಿಷಯ. ಆದರೂ ಅಲ್ಲಲ್ಲಿ ಕಂಡುಬರುವ ಕೆಲವು ಉದಾಹರಣೆಗಳಿವೆ. ಅವನ್ನು ನೋಡಿದಾಗ ಅಂದಿನ ವಿಶಿಷ್ಟ ವ್ಯವಸ್ಥೆಯ ಬಗೆಗೆ ಕುತೂಲಹ ಮೂಡದೇ ಇರಲಾರದು.[22] ವಿಜಯನಗರದ ಹಾಳುಬಿದ್ದ ಪ್ರದೇಶಗಳಿಗೆ ಅತಿ ಸನಿಹದಲ್ಲಿ, ಹೊಸಪೇಟೆಯ ಬಳಿ ಇರುವ ಜಂಬುನಾಥ ಇದಕ್ಕೆ ಉದಾಹರಣೆಯಾಗಿದೆ. ಈ ಜಂಬುನಾಥ ಗುಡ್ಡದಲ್ಲಿ ಒಂದು ಬಾವಿ ಇದೆ. ಈ ಬಾವಿ ಮತ್ತು ಅದರ ವಿನ್ಯಾಸವನ್ನು ನೋಡಿದಾಗ ವಿಜಯನಗರದ ಕಾಲದವರು ಹೊಂದಿದ್ದ ಅಗಾಧ ಜಲತಂತ್ರ ವಿಷಯದ ಬಗ್ಗೆ ತಿಳಿದುಬರುತ್ತದೆ. ಈ ಬಾವಿಯಲ್ಲಿ ಗುಡ್ಡಗಳ ಶಿಲಾಬಂಡೆಗಳಿಂದ ಒಸರಿ ಬರುವ ಊಟೆಯಿಂದ ಹೊರ ಹೊಮ್ಮಿದ ನೀರು ಸಂಗ್ರಹವಾಗುತ್ತದೆ. ಇದಕ್ಕೆಂದೇ ಒಂದು ಚೌಕಾಕಾರದ ಕಣಶಿಲೆ ಬಂಡೆಗಳ ಕುಂಡವನ್ನು ರಚಿಸಿದೆ. ಇಲ್ಲಿ ನಾವು ಗಮನಿಸಬೇಕಾದ ವಿಷಯ ಎಂದರೆ, ಈ ಕುಂಡದಲ್ಲಿ ನೀರಿನ ಮಟ್ಟವು ಒಂದು ಎತ್ತರಕ್ಕೆ ಬಂದ ಮೇಲೆ ಹೆಚ್ಚುವರಿ ನೀರು ತಾನೇ ತಾನಾಗಿ ಹರಿದು ಹೋಗುವ ವ್ಯವಸ್ಥೆ. ಇದೊಂದು ಅಘಾದವಾದ ತಂತ್ರ, ನೀರಿನ ಮಟ್ಟವನ್ನು ಕಾಪಾಡಿಕೊಂಡು ಬಂದಿದೆ. ಮತ್ತೊಂದು ಕುತೂಹಲಕಾರಿ ಸಂಗತಿ ಎಂದರೆ, ಕಡು ಬೇಸಿಗೆಯಲ್ಲಿಯೂ ಇದು ತನ್ನ ಮಟ್ಟವನ್ನು ಕಾದುಕೊಂಡು ಬರುತ್ತದೆ. ಎಂದೂ ಇದು ಬತ್ತಿ ಹೋಗದ ಸರ್ವಋತು ಚಿಲುಮೆಯಾಗಿದೆ. ಇದರ ನೀರು ಸಿಹಿಯಾಗಿದ್ದರೂ ಅನೇಕ ಖನಿಜ ಲವಣಗಳಿಂದ ಕೂಡಿದ್ದು, ರೋಗ ನಿವಾರಕ ಶಕ್ತಿಯನ್ನು ಹೊಂದಿದೆ. ಈ ನೀರನ್ನು ದೇವರ ಅಭಿಷೇಕ ಹಾಗೂ ಧಾರ್ಮಿಕ ಕಾರ್ಯಗಳಿಗೆ ಉಪಯೋಗಿಸಲಾಗುತ್ತದೆ. ಈ ಬಾವಿಯ ಮೇಲ್ಭಾಗದಲ್ಲಿ ಶಿಖರವನ್ನು ರಚಿಸಿರುವುದರಿಂದ ಸೂರ್ಯನ ಬಿಸಿಲು ಈ ಬಾವಿಯಲ್ಲಿ ಪಕ್ಕದಲ್ಲಿ ಜಂಬುಕೇಶ್ವರನ ಗುಡಿ ಇದೆ. ಇದು ವಿಜಯನಗರದ ಸಮಯದಲ್ಲಿ ನಿರ್ಮಿಸಿದ್ದು ಎಂದು ತಿಳಿದುಬಂದಿದೆ.

೧೫೬೫ರ ಅವಧಿಯವರೆಗೂ ಪೆನುಗೊಂಡೆಯು ವಿಜಯನಗರ ಸಾಮ್ರಾಜ್ಯದ ಪ್ರಾಂತೀಯ ಮುಖ್ಯ ಪಟ್ಟಣಗಳಲ್ಲಿ ಒಂದಾಗಿತ್ತು. ರಕ್ಕಸತಂಗಡಿ ಕದನದ ನಂತರ ಅದೇ ರಾಜಧಾನಿಯಾಗಿ, ಸಾಮ್ರಾಜ್ಯ ಅಧಿಕಾರ ಅಲ್ಲಿಂದಲೇ ನಡೆಯಿತು. ಹೀಗಾಗಿ ರಾಜಧಾನಿಯ ವಿವಿಧ ಅವಶ್ಯಕತೆಗಳನ್ನು ಪೂರೈಸಲು ಆ ನಗರದಲ್ಲಿ ಅನೇಕ ಬಾವಿಗಳನ್ನು ನಿರ್ಮಿಸಲಾಯಿತು. ಇಂದಿಗೂ ಅಲ್ಲಿ ನಾವು ಗಚ್ಚಿನ ಗೋಡೆಗಳನ್ನು ಹೊಂದಿರುವ ಅನೇಕ ಪುರಾತನ ಬಾವಿಗಳನ್ನು ಕಾಣಬಹುದು. ಕೌತುಕದ ಸಂಗತಿ ಎಂದರೆ ಒಂದು ಬಾವಿಗೆ ವಿಶೇಷ ಮಾದರಿಯ ಪ್ರವೇಶದ್ವಾರವನ್ನು ನಿರ್ಮಿಸಲಾಗಿದೆ. ಅದು ನಂದಿಯ ಆಕಾರ ಹೊಂದಿದ್ದು ಇಟ್ಟಿಗೆ ಮತ್ತು ಗಾರೆಯ ಕಾರ್ಯದಿಂದ ಒಡಗೂಡಿದೆ. ನಂದಿಯ ನಾಲ್ಕು ಕಾಲುಗಳ ಅಡಿಯಲ್ಲಿ ಕಮಾನುಗಳನ್ನು ರಚಿಸಿ, ಈ ಕಮಾನುಗಳಿಂದ ನಾಲ್ಕು ದಿಕ್ಕಿನಲ್ಲಿಯೂ ಬಾವಿಯ ಒಳಗಡೆ ಇಳಿದು ಹೋಗಲು ಸೋಪಾನಗಳಿವೆ. ಬಹುಶಃ ಈ ಬಾವಿಯನ್ನೂ ಕೇವಲ ಧಾರ್ಮಿಕ ಹಾಗೂ ಕುಡಿಯುವ ನೀರಿಗೆಂದೇ ರಚಿಸಿರಬಹುದು. ಸಾಂಪ್ರದಾಯಿಕ ಹೇಳಿಕೆಯಂತೆ ಈ ನಗರದ ಬಾವಿಗಳನ್ನು ವಿಜಯನಗರದ ಚಕ್ರವರ್ತಿಯಾಗಿದ್ದ ಕೃಷ್ಣದೇವರಾಯನು ಕಟ್ಟಿಸಿದನೆಂದೇ ಹೇಳಲಾಗುತ್ತದೆ. ಏಕೆಂದರೆ ಅರಸನ ವಸತಿ ನಗರಗಳಲ್ಲಿ ಇದೂ ಒಂದಾಗಿತ್ತು.[23]

ವಿಜಯನಗರದ ಅವಧಿಯಲ್ಲಿಯ ಎರಡನೆ ವರ್ಗದ ಬಾವಿಗಳೆಂದರೆ ಊಟಿಬಾವಿಗಳು. ಬೇಸಾಯಗಾರರು ಇವುಗಳನ್ನು ಉಪಯೋಗಿಸುತ್ತಿದ್ದರು. ಕೃಷ್ಣದೇವರಾಯನ ಅಧಿಕಾರಾವಧಿಯಲ್ಲಿ ಹಂಪೆಗೆ ಭೇಟಿ ನೀಡಿದ್ದ ಪೋರ್ಚುಗೀಸ್‌ವರದಿಗಾರನಾದ ಪೇಸ್‌ನು ಇದರ ಬಗ್ಗೆ ಹೇಳಿರುವನು. ‘…. ಈ ದೇಶವು ಅಂದರೆ ವಿಜಯನಗರ ಸಾಮ್ರಾಜ್ಯಕ್ಕೆ ನೀರು ಬೇಕು ಏಕೆಂದರೆ ಈ ದೇಶವು ತುಂಬಾ ವಿಶಾಲವಾಗಿದ್ದು, ಇದರಲ್ಲಿ ನದಿಗಳು ಅಧಿಕವಾಗಿಲ್ಲ. ಅದುದರಿಂದ ಅವರು ಸರೋವರಗಳನ್ನು ನಿರ್ಮಿಸಿದ್ದಾರೆ….’ ಅಲ್ಲದೆ ಜನರು ನದೀ ತಳಗಳಲ್ಲಿ ಸಂಚರಿಸಿ ತೂತುಗಳನ್ನು ತೆಗೆದು ನೀರನ್ನು ಪಡೆಯುತ್ತಾರೆ….’[24]

ಈಗಾಗಲೇ ವಿವರಿಸಿದಂತೆ, ಎರಡೂ ವರ್ಗದ ಬಾವಿಗಳು, ಭೂಮಿಯಡಿಯಲ್ಲಿಯ ಅಂತರ್ಜಲದಿಂದಲೇ ನೀರನ್ನು ಪಡೆಯಲು ಆಳವಾದ ಬಾವಿ ಮತ್ತು ಊಟಿ ಬಾವಿಗಳನ್ನು ತೋಡಿದ್ದರು. ಆದರೆ ಊಟೆ ಬಾವಿಗಳು ತಾತ್ಕಾಲಿಕ ಹಾಗೂ ಭೂ ತಳದ ಮೇಲಿಂದ ಹೆಚ್ಚು ಆಳವಾಗಿರದ ಬಾವಿಗಳು. ಇನ್ನೊಂದು ಮಾದರಿಯ ಬಾವಿಗಳು ಅಧಿಕ ಆಳವಾಗಿದ್ದು ಸರ್ವಋತು ಬಾವಿಗಳಾಗಿದ್ದವು. ಈ ಮಾದರಿಯ ಬಾವಿಗಳ ನಿರ್ಮಾಣ ಕಾಯಕ್ಕೆ ಅಧಿಕ ಶ್ರಮವಹಿಸಬೇಕಾಗಿತ್ತು. ಸಾಮಾನ್ಯವಾಗಿ ಊಟೆ ಬಾವಿಗಳನ್ನು ನದಿಯು ಹರಿಯುವ ಪಾತ್ರದಲ್ಲಿಯ ಉಸುಕು ಅಥವಾ ಮರಳಿನ ಭೂಮಿಯಲ್ಲಿ ಸುಲಭವಾಗಿ ತೋಡಬಹುದಾಗಿತ್ತು. ಹೀಗೆ ನೆಲದ ಮೇಲ್ಮಟ್ಟದಿಂದ ಶೀಘ್ರವಾಗಿ ದೊರೆಯುವ ಜಲವನ್ನು ಹೊಲಗಳಿಗೆ ಹರಿಸಿ ಬೇಸಾಯ ಕಾರ್ಯ ಜರುಗಿಸುತ್ತಿದ್ದರು. ಇದು ಒಂದು ಕಾಲಕ್ಕೆ ಮಾತ್ರ ಸೀಮಿತವಾಗಿರುತ್ತಿತ್ತು. ಇನ್ನೊಂದು ಮಾದರಿಯ ಊಟೆ ಬಾವಿಗಳೆಂದರೆ ಪರ್ವತದ ಬದಿಯಲ್ಲಿಯೇ ಗಟ್ಟಿಯಾಗಿರದ ಬಂಡೆಳ ಪೊದರುಗಳಲ್ಲಿ ರಂಧ್ರ ನಿರ್ಮಿಸಿ ಅದರಡಿಯಲ್ಲಿದ್ದ ನೀರನ್ನು ಪಡೆಯಲಾಗುತ್ತಿತ್ತು. ಈ ಎಲ್ಲಾ ಕಾರ್ಯಗಳು ವ್ಯಕ್ತಿಗತ ಮಟ್ಟದಲ್ಲಿ ಜರುಗುತ್ತಿದ್ದವು. ಹೀಗಾಗಿ ಈ ಬಾವಿಗಳ ಬಗೆಗೆ ಹೆಚ್ಚು ದಾಖಲೆಗಳು ಲಭ್ಯವಿಲ್ಲ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಈ ಮಾದರಿಯ ಬಾವಿಗಳನ್ನು ಸರವುಬಾವಿಗಳೆಂದೇ ಕರೆಯುತ್ತಾರೆ ಮತ್ತು ಅವುಗಳಿಗೆ ನದಿಯ ಬಳಿ ಇರುವ ಮರಳಿನ ತಳದಿಂದಲೇ ನೀರನ್ನು ಪಡೆಯುತ್ತಾರೆ.[25] ಕರ್ನಾಟಕದಲ್ಲಿ ಈ ಬಾವಿಗಳಿಗೆ ಜಲಪರಿಗೆ ಎಂದೇ ಕರೆಯುತ್ತಾರೆ. ಹೀಗೆ ಸಂಗ್ರಹವಾದ ನೀರನ್ನು ಅಸುಪಾಸಿನಲ್ಲಿಯ ಜಮೀನುಗಳಿಗೆ ಏತದ ಸಹಾಯದಿಂದ ಅಥವಾ ಕಪ್ಪಿಲೆಯಿಂದ ಪಡೆದು ಹರಿಸಿ, ನೀರಾವರಿಯ ಕಾರ್ಯ ಕೈಗೆತ್ತಿಕೊಳ್ಳುತ್ತಿದ್ದರು.

ಹಲವು ಎಡೆಗಳಲ್ಲಿ ಈ ಊಟೆಬಾವಿಗಳ ಸುತ್ತಲೂ ಗೋಡೆಯನ್ನು ನಿರ್ಮಿಸಿ ಅದರಲ್ಲಿ ಉಸುಗು ಅಥವಾ ಮರಳು ಹರಿದು ಬಾರದಂತೆ ರಕ್ಷಿಸಲಾಗುತ್ತಿತ್ತು. ತಮಿಳು ಪ್ರಾಂತದ ರಾಮನಾಡು ಜಿಲ್ಲೆಯ ಒಂದು ದಾಖಲೆ ತಿಳಿಸುವಂತೆ, ಒಂದು ಊಟೆ ಬಾವಿಗೆ ಕಟ್ಟಡದ ರಚನೆಯನ್ನೂ ಮಾಡಲಾಗಿತ್ತಂತೆ. ಇದನ್ನು ಕಟ್ಟಿಸಿದವನು ಸುಂದರಸೋಳಪುರದ ಅಧಿಕಾರಿ, ಪಂಬಿಯೂರುಡಿಯನ್ ಪೊನ್ನದೂರು ತಿರಕ್ಕಾವೇಲ.

ಹೊಸಕೋಟೆ ಬಳಿಯಲ್ಲಿ ಒಂದು ಮಠವನ್ನು ಚಿಲುಮೆ ಮಠವೆಂದೇ ಕರೆಯುತ್ತಾರೆ. ಏಕೆಂದರೆ ಆ ಮಠಕ್ಕೆ ಬೇಕಾದ ನೀರನ್ನು ಅದರ ಬಳಿಯಲ್ಲಿದ್ದ ಚಿಲುಮೆಯಿಂದಲೇ ಪಡೆಯಲಾಗುತ್ತಿತ್ತು.[26]

ಆಕರ
ವಿಜಯನಗರ ಸಾಮ್ರಾಜ್ಯದ ನೀರಾವರಿ ವ್ಯವಸ್ಥೆ, ೨೦೦೧, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಆಯ್ದ ಭಾಗಗಳು.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] Imperial Gazetteer of India, Vol, III, p. 318

[2] Neumbaurer J.J. : The Setp Wells of Gujarat, Delhi 1981, p.6

[3] Ibid

[4] Dikshit D.D.: Agriculture, Irrigaion and Horticulture in Ancient Sri Lanka, Delhi, 1986: p. 217, fn. 520 quoted from Agriculture in Ancient India’

[5] S.I.I. Vol. IV, 267, p.65 dated 1410 A.D. Details already referred above.

[6] Karnataka State Gazetteer, pt. I, p. 669

[7] Coimbatore District Gazetteer, p. 192

[8] Vijayanagara – Progress of Research, Vol. III, Mysore 1991, 105. P. 49 & 50

[9] Ibid. No. 27, p.33

[10] Ibid, No. 26. P.32

[11] Ibid. No. 108 and 110, p. 50 & 51

[12] Ibid. No. 99. p.48

[13] Ibid. No. 98, p.48

[14] Epi Carn., Vol. X II, Kunigal, 21. p.93

[15] S.I.I. Vol. I X , pt. II, 436, p. 445-46; for detailed study refer-patil C.S.: Malige-Kupa-Arama at Malapangudi in Vijayanagara Progress of Research. 1984-87, Mysore 1991, p. 177, ff.

[16] Nellore Inscriptions, pt. I, p.496

[17] S.I.I. Vol. I X pt. II 447, p. 457 & Vijayagara Progress of Research (1979). P.63

[18] S.I.I. Vol. I X , pt. II, 477, p. 492

[19] S.I.I. Vol. I X , pt. II, 533, p. 584

[20] Ibid, 545, p. 564

[21] Topo List, NO. 151, p. 276 & A.R.S.I. Ep., 1915, 909. P.51

[22] Annual Report – A.S.I 1) 1904-05, p.30,2) 1908-09, p.24

[23] Ananthapur District Gazetter, 1905, p. 191

[24] Fillozat, V: Vijayagara Empire: D. Pacs & F. Nuniz, N. Delhi, 1977, p.20

[25] Op. Cit., (48), p.49

[26] My. A.R. Mysore, 1919, p.6