ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಹಲವಾರು ಐತಿಹಾಸಿಕ ಅವಶ್ಯಕತೆಗಳನ್ನು ಇತಿಹಾಸಕಾರರು ಹೇಳುತ್ತಾರೆ. ಅವುಗಳಲ್ಲಿ ಪ್ರಮುಖವಾಗಿ ಹಿಂದು ಧರ್ಮದ ಸಂರಕ್ಷಣೆ ಮತ್ತು ಸಂವರ್ಧನೆಯಾಗಿತ್ತು. ಉತ್ತರದಿಂದ ದಾಳಿ ಮಾಡುತ್ತಿದ್ದ ಮುಸ್ಲಿಂ ರಾಜ ಮತ್ತು ಧರ್ಮಾಂತರದ ಪ್ರಕ್ರಿಯೆಗೆ ತಡೆ ಹಾಕುವುದು ಈ ಅವಶ್ಯಕತೆಗಳಲ್ಲಿ ಒಂದಾಗಿತ್ತು. ಈ ಗುರಿ ಸಾಧನೆಗೆ ನೈಸರ್ಗಿಕವಾಗಿ ಸಂರಕ್ಷಿತ ಸ್ಥಳದ ಅವಶ್ಯಕತೆ ಇತ್ತು. ಇಂತಹ ಸ್ಥಳ ಹಂಪೆ ಎಂಬುದನ್ನು ಸಂಗಮ ವಂಶದ ಮೊದಲ ಅರಸು ಮೊದಲನೆಯ ಹರಹರನು ಗುರ್ತಿಸಿದನು.

ಉತ್ತರದಲ್ಲಿ ತುಂಬಿ ಹರಿಯುತ್ತಿದ್ದ ತುಂಗಭದ್ರಾ ನದಿ, ಸುತ್ತಲೂ ಹರಡಿರುವ ಎತ್ತರದ ಕಣ ಶಿಲೆಯ (Granite) ಶೈಲ ಮಾಲೆ; ಇವು ನೈಸಗಿಕ ಕಂದಕ ಮತ್ತು ಕೋಟೆಯ ರಕ್ಷಣೆಗಳನ್ನು ನೀಡಿದವು. ಹೀಗೆ ಕಣಶಿಲೆಯು ಹಂಪೆಯಲ್ಲಿ ಸಾಮ್ರಾಜ್ಯ ಸ್ಥಾಪನೆಗೆ ಅಪ್ರತ್ಯಕ್ಷವಾಗಿ ಕಾರಣವಾಯಿತು. ಇದೇ ಶಿಲೆಯ ಇಲ್ಲಿಯ ಬಹುಪಾಲು ಸಂಖ್ಯೆ ಸ್ಮಾರಕಗಳಿಗೆ (Monuments) ಮಾಧ್ಯಮವಾಯಿತು.

ಹಂಪೆಯಲ್ಲಿರುವ ಸ್ಮಾರಕಗಳ ವರ್ಗೀಕರಣ

ಹಂಪೆಯಲ್ಲಿರುವ ಸ್ಮಾರಕಗಳನ್ನು ಕಾಲಮಾನದ ದೃಷ್ಟಿಯಿಂದ ಎರಡು ವರ್ಗಗಳಲ್ಲಿ ವಿಂಗಡಿಸಬಹದು. ಒಂದು ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಪೂರ್ವ ಸ್ಮಾರಕಗಳು, ಎರಡು ವಿಜಯನಗರ ಸಾಮ್ರಾಜ್ಯದ ಅವಧಿಯ ಸ್ಮಾರಕಗಳು. ಅಂದರೆ ಮೊದಲನೇ ವರ್ಗದ ಸ್ಮಾರಕಗಳು ಕ್ರಿ.ಶ. ೧೩೩೬ ಕ್ಕಿಂತಲೂ ಪೂರ್ವದಲ್ಲಿ ನಿರ್ಮಿಸಲ್ಪಟ್ಟ ಕದಂಬ ನಾಗರ ಅಥವಾ ಕಳಿಂಗ ಶೈಲಿಯ ಸ್ಮಾರಕಗಳು. ಇವು ಪ್ರಮುಖವಾಗಿ ಹೇಮಕೂಟ ಬೆಟ್ಟದ ಮೇಲೆ ಇರುವ ರಚನೆಗಳು (Structures) ವಾಸ್ತುಶಿಲ್ಪದ ದೃಷ್ಟಿಯಿಂದ ಅಂಥ ಮಹತ್ವದ ಕಟ್ಟಡಗಳಲ್ಲವಾದರೂ ಕರ್ನಾಟಕದಲ್ಲಿರುವ ಕೆಲವೇ ಕೆಲವು ಕಳಿಂಗ ಶೈಲಿ ಕಟ್ಟಡಗಳು; ಆದ್ದರಿಂದಲೇ ಇವುಗಳನ್ನು ಗಮನಿಸಬೇಕಾಗುತ್ತದೆ. ಎರಡನೇ ವರ್ಗದ ರಚನೆಗಳು ಕರ್ನಾಟಕ ಅಷ್ಟೇ ಅಲ್ಲ. ಭಾರತದ ವಾಸ್ತುಶಿಲ್ಪಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ ವಿಜಯನಗರ ಶೈಲಿಗೆ ಸೇರಿದಂಥ ರಚನೆಗಳು. ಈ ಶೈಲಿಯ ರಚನೆಗಳು ಇಂದಿನ ಹಂಪೆಯ ತುಂಬ ಹರಡಿವೆ. ಅವುಗಳಲ್ಲಿ ವಿರೂಪಾಕ್ಷ ದೇವಾಲಯ, ಹಜಾರರಾಮ ದೇವಾಲಯ, ವಿಜಯವಿಠ್ಠಲ ದೇವಾಲಯ, ಮಹಾನವಮಿ ದಿಬ್ಬ ಇತ್ಯಾದಿ ಸ್ಮಾರಕಗಳು ಪ್ರಮುಖ ರಚನೆಗಳು. ಉಗ್ರನರಸಿಂಹ (ಲಕ್ಷ್ಮೀ ನರಸಿಂಹ), ಕಡಲೆಕಾಳು ಗಣಪತಿ, ಸಾಸಿವೆಕಾಳು ಗಣಪತಿ, ಉದ್ದಾನ ವೀರಭದ್ರ ಮತ್ತು ಬಡವಿ ಲಿಂಗ ಇವುಗಳು ಪ್ರಮುಖ ಶಿಲ್ಪಗಳು.

ಮೂರು ಬಗೆಯ ಶಿಲೆಗಳು

ಈ ಎರಡೂ ಶೈಲಿಗಳ ರಚನೆಗಳಿಗೆ ಪ್ರಮುಖ ಶಿಲೆ ಕಣಶಿಲೆ (ಚಿತ್ರ ೧, ೧ಎ, ಮತ್ತು ೨) ಅಪರೂಪವಾಗಿ ಒಡ್ಡು ಶಿಲೆಯನ್ನು (Dyke rock) ಬಳಸಲಾಗಿದೆ. ಬಡವಿ ಲಿಂಗವನ್ನು ಒಡ್ಡು ಶಿಲೆಯಲ್ಲಿ ಕಡೆಯಲಾಗಿದೆ (ಚಿತ್ರ ೩). ಹಜಾರ ರಾಮದೇವಾಲಯದ ರಂಗ ಮಂಟಪದ ಮಧ್ಯದಲ್ಲಿ ನಿಲ್ಲಿಸಲಾಗಿರುವ ಕಪ್ಪು ಶಿಲೆಯ ಕಂಬಗಳನ್ನು ಒಡ್ಡು ಶಿಲೆಯಲ್ಲಿ ಕಡೆಯಲಾಗಿದೆ.

ಮಹಾನವಮಿ ದಿಬ್ಬದ ಮಧ್ಯಭಾಗದಲ್ಲಿ ಸೂಕ್ಷ್ಮ ಉಬ್ಬುಶಿಲ್ಪಗಳಿಗಾಗಿ ಹಸಿರು ಮಿಶ್ರಿತ ಕಪ್ಪು ಬಣ್ಣದ ಶಿಲೆಯ ಫಿಲ್ಲೈಟ್‌(Phylite) ಬಳಸಲಾಗಿದೆ. ಹಾಗೆಯೇ ಇದೇ ಆವರಣದಲ್ಲಿರುವ ಕಲ್ಲಿನ ಪುಷ್ಕರಣಿಯನ್ನು ಕಪ್ಪು ಬಣ್ಣದ ಫಿಲೈಟಿನಲ್ಲಿ ಕಟ್ಟಲಾಗಿದೆ. ಉಗ್ರನರಸಿಂಹ, ಗಣಪತಿ ವಿಗ್ರಹಗಳೂ ಸೇರಿದಂತೆ ಎಲ್ಲಾ ದೇವಾಲಯಗಳ ರಚನೆಗೆ ಕಣಶಿಲೆಯನ್ನು ಬಳಸಲಾಗಿದೆ.

ಹಂಪಿ ದೇವಾಲಯಗಳ ಮಹಾದ್ವಾರಗಳ ಮೇಲೆ ಕಟ್ಟಲಾಗಿರುವ ವಿಮಾನಗಳು, ಕಮಲಮಹಲ್‌ಮತ್ತು ವಿಜಯನಗರ ಶೈಲಿಯ ವಿಶಿಷ್ಟ ಶಿಲ್ಪಗಳಾದ ಗಾರೆ ಶಿಲ್ಪಗಳನ್ನು ಮಣ್ಣಿನ ಇಟ್ಟಿಗೆ ಮತ್ತು ಸುಣ್ಣದ ಗಚ್ಚಿನಲ್ಲಿ (Lime Mortar) ಕಟ್ಟಲಾಗಿದೆ (ಚಿತ್ರ ೪), ಈ ಗಚ್ಚನ್ನು ಸುಣ್ಣ ಮತ್ತು ಮರಳನ್ನು ಕೆಲ ಅಂಟಿನ ಪದಾರ್ಥಗಳೊಂದಿಗೆ ಮಿಶ್ರಣ ಮಾಡಿ ಗಾಣದಲ್ಲಿ ರುಬ್ಬಿ ಸಿದ್ಧಪಡಿಸಲಾಗುತ್ತಿತ್ತು. ಅನುಭವದ ಮೇಲೆ ಅವುಗಳ ಮಿಶ್ರಣ ಮತ್ತು ರುಬ್ಬುವ ಕಾಲವನ್ನು ನಿರ್ಧರಿಸಲಾಗುತ್ತಿತ್ತು. ತುಂಗಭದ್ರಾ ನದಿಯಲ್ಲಿ ಸೂಕ್ತವಾದ ಮರಳು ಮತ್ತು ಹಂಪಿಯ ಸುತ್ತಮುತ್ತಲ ಪ್ರದೇಶದಲ್ಲಿ ಸುಣ್ಣದ ಉಂಡೆ (Lime Kankar) ಸಿಗುತ್ತದೆ. ಇವುಗಳನ್ನು ಉಪಯೋಗಿಸಿ ತಮಗೆ ಬೇಕಾದ ಗಚ್ಚನ್ನು ಅಂದಿನ ಸ್ಥಪತಿಗಳು ಸ್ಥಳೀಯವಾಗಿ ಸಿದ್ಧಪಡಿಸಿಕೊಳ್ಳುತ್ತಿದ್ದರು.

ವಿಜಯನಗರದ ಅರಸರಿಗಿಂತ ಪೂರ್ವದಲ್ಲಿ ಕರ್ನಾಟಕವನ್ನಾಳಿದ ಹೊಯ್ಸಳರು ಮತ್ತು ಕಲ್ಯಾಣದ ಚಾಲುಕ್ಯರ ಕಾಲದ ರಚನೆಗಳ ನಿರ್ಮಾಣಕ್ಕೆ ಹೆಚ್ಚಾಗಿ ಬಳಪದ ಕಲ್ಲನ್ನೇ (Soapstone) ಬಳಸಲಾಗಿದೆ. ಬಳ್ಳಾರಿ ಜಿಲ್ಲೆಯ ಹಡಗಲಿ, ಮತ್ತು ಹರಪನಹಳ್ಳಿ ತಾಲ್ಲೂಕುಗಳಲ್ಲಿರುವ ಚಾಳುಕ್ಯರ ಹಲವು ದೇವಾಲಯಗಳು (ಬಾಗಳಿ, ನೀಲಗುಂದ, ಹಡಗಲಿ, ಕುರುವೆತ್ತಿ, ಇತ್ಯಾದಿ) ಬಳಪದ ಕಲ್ಲಿನಲ್ಲಿ ನಿರ್ಮಿತವಾದ ಶ್ರೇಷ್ಠ ಮಟ್ಟದ ಕಲಾಕೃತಿಗಳು. ಇವು ಬೃಹತ್‌ರಚನೆಗಳಲ್ಲವಾದರೂ ಸೂಕ್ಷ್ಮ ಕೆತ್ತನೆಗೆ ಹೆಸರುವಾಸಿ.

ಸಂಗಮ ವಂಶದ ಅರಸರಿಗೂ ನಂತರ ಬಂದ ಇತರ ವಂಶದ ವಿಜಯನಗರದ ಅರಸರಿಗೂ ಬಹುಶಃ ತಮ್ಮ ಹಿಂದಿನ ವಂಶದ ಅರಸರ ಕಾಲದಲ್ಲಿ ಬೆಳೆದು ಬಂದಂಥ ಶೈಲಿಗಿಂತಲೂ ಭಿನ್ನವಾದ ಶೈಲಿಯಲ್ಲಿ ವಿಶಿಷ್ಟವಾದ ರಚನೆಗಳ ನಿರ್ಮಾಣದಲ್ಲಿ ಆಸಕ್ತಿ ಇದ್ದಂತೆ ಕಾಣುತ್ತದೆ. ಅದೂ ಅಲ್ಲದೆ ಸಂಗಮ ವಂಶದ ಅರಸರಿಗೆ ಬೃಹತ್‌ರಚನೆಗಳನ್ನು ರಚಿಸಿ ತಮ್ಮ ವೈಶಿಷ್ಟ್ಯತೆಯನ್ನು ಮೆರೆಸುವಲ್ಲಿ ಐತಿಹಾಸಿಕ ಕಾರಣಗಳಿಂದಾಗಿ ಆಸಕ್ತಿ ಇತ್ತು. ದಕ್ಷಿಣ ಭಾರತದ (ತಮಿಳುನಾಡಿನ) ಸ್ಥಪತಿಗಳನ್ನು ಕರೆಸಿ, ಅವರಿಂದ ದ್ರಾವಿಡ ಶೈಲಿಗೆ ಪ್ರಾಮುಖ್ಯತೆಯನ್ನು ನೀಡಿ ದೇವಾಲಯಗಳನ್ನು ರಚಿಸಲಾಯಿತೆಂದು ಕೆಲ ಇತಿಹಾಸಕಾರರ ಅಭಿಮತ. ಈ ಮಾತು ಚರ್ಚಾಸ್ಪದವೆನಿಸಬಹುದು. ಆದರೆ ಈ ದ್ರಾವಿಡ ಶೈಲಿಯನ್ನು ಅಳವಡಿಸಿಕೊಂಡು ಬೃಹತ್ ರಚನೆಗಳ ನಿರ್ಮಾಣ ಮಾಡಲು ಭೂವೈಜ್ಞಾನಿಕ ಕಾರಣಗಳೇ ಮೂಲ ಎಂಬುದು ನಿರ್ವಿವಾದ.

ಭೂವೈಜ್ಞಾನಿಕ ಕಾರಣಗಳು

ಹಂಪೆಯ ಸುತ್ತಮುತ್ತಲೂ ಹಾಗೂ ಸಮೀಪದಲ್ಲಿ ಬಳಪದ ಕಲ್ಲಿನ ನಿಕ್ಷೇಪಗಳಿಲ್ಲ. ಅತಿ ಸಮೀಪದ ಬಳಪದ ಕಲ್ಲಿನ ನಿಕ್ಷೇಪವೆಂದರೆ ನೀಲಗುಂದದ ನಿಕ್ಷೇಪ. ಇದು ಹಂಪೆಗೆ ಸುಮಾರು ೧೦೦ ಕಿ.ಮೀ. ದೂರದಲ್ಲಿದೆ. ಅದೂ ಅಲ್ಲದೆ ಬಳಪದ ಕಲ್ಲಿನ ನಿಕ್ಷೇಪದ ಪರಿಮಾಣ (Quantity) ಅಲ್ಲ.

ಬಳಪದ ಕಲ್ಲನ್ನು ಗಣಿ ಮಾಡಿ ಹೊರತೆಗೆದು, ಅದರಲ್ಲಿ ಕೆತ್ತನೆಗೆ ಉಪಯುಕ್ತವಾಗಬಹುದಾದಂಥ, ನ್ಯೂನ್ಯತೆಗಳಿಲ್ಲದ (Defect free) ದಿಮ್ಮಿಗಳನ್ನು (Blocks) ಆರಿಸಬೇಕಾಗುತ್ತದೆ. ಬಳಪದ ಕಲ್ಲಿನಲ್ಲಿ ಉಪಯುಕ್ತ ನ್ಯೂನತೆಗಳಿರುವ ಭಾಗ ಹೆಚ್ಚು. ಅದು ಅಲ್ಲದೆ ಬಳಪದ ಕಲ್ಲು ಅತಿ ಮೃದು ಮೆತ್ತನೆಯ ಶಿಲೆಯಾದುದರಿಂದ ಅದರಲ್ಲಿರುವ ನೀರಿನ ಅಂಶವನ್ನು ಹೊರಹಾಕಬೇಕಾಗುತ್ತದೆ. ಇಲ್ಲವಾದರೆ ಕಟ್ಟಡ ಬೇಗ ಶಿಥಿಲಗೊಳ್ಳುತ್ತದೆ. ಆದ್ದರಿಂದ ಬೃಹತ್ ರಚನೆಗಳಿಗೆ ಬೇಕಾಗುವಷ್ಟು ಪ್ರಮಾಣದ ಕಲ್ಲು, ಈ ಶಿಲೆಯಲ್ಲಿ ಸಿಗುವುದು ಕಷ್ಟ. ಹೀಗೆ ವಿಜಯನಗರದ ಕಾಲದ ಶಿಲ್ಪಗಳು ಮತ್ತು ಸ್ಥಪತಿಗಳು ತಮ್ಮ ಹಿಂದಿನ ಕಾಲದಲ್ಲಿ ಬಳಸಲಾದ ಶಿಲೆಯ ಗುಣಾವಗುಣಗಳನ್ನು ಅರಿತಿದ್ದರು.

ಆದರೆ, ಇದಕ್ಕೆ ಬದಲಾಗಿ ಹಂಪೆಯಲ್ಲಿಯೇ ಸಿಗುವ ಅಪಾರ ಪ್ರಮಾಣದ ಕಣಶಿಲೆಯನ್ನು ಈ ಸ್ಥಪತಿಗಳು ಸಹಜವಾಗಿಯೇ ಆರಿಸಿಕೊಂಡರು. ಕಣಶಿಲೆಯು ಬೃಹತ್ ರಚನೆಗಳಿಗೆ ಬೇಕಾಗುವ ದಿಮ್ಮಿಗಳನ್ನು ನೀಡಬಲ್ಲದು. ಹಂಪೆಯಲ್ಲಿ ಸಿಗುವ ಶಿಲೆ ಬೂದು (Grey Granite) ಬಣ್ಣದ ಮಧ್ಯಮ ಗಾತ್ರದ ಹರಳುಗಳನ್ನು (Meduim grained) ಹೊಂದಿರುವ ಕಣ ಶಿಲೆ (Grey Granite), ಸಮನಾದ ಹರಳುಗಳು ಮತ್ತು ಬೂದು ಬಣ್ಣ, ಸ್ಥಪತಿಗಳನ್ನು ಆಕರ್ಷಿಸಿರಬೇಕು. ಅತಿ ಸೂಕ್ಷ್ಮ ಕೆತ್ತನೆಯ ರಚನೆಗಳನ್ನು (ತುಲನಾತ್ಮಕವಾಗಿ) ಈ ಶಿಲೆಯಲ್ಲಿ ನಿರ್ಮಿಸಲು ಸಾಧ್ಯವಾಗದಿದ್ದರೂ, ಸಮನಾದ ಹರಳು ಮತ್ತು ಕಂದು ಬಣ್ಣದಿಂದಾಗಿ ಈ ಶಿಲೆಯು ಬೃಹತ್, ಭವ್ಯ ಹಾಗೂ ಕಲಾತ್ಮಕ ರಚನೆಗಳಿಗೆ ಸೂಕ್ತ ಎಂಬುದನ್ನು ಈ ಸ್ಥಪತಿಗಳು ಅರಿತಿದ್ದರು. ಅಲ್ಲದೆ, ಕಣ ಶಿಲೆ ಬಳಪದ ಶಿಲೆಗಿಂತ ತುಂಬಾ ಕಠಿಣ ಹಾಗೂ ಶಕ್ತಿಶಾಲಿ, ಈ ಬಗೆಯ ಕಾರಣಗಳಿಂದಾಗಿ ಸಹಜವಾಗಿಯೇ ಸ್ಥಪತಿಗಳು ಇಲ್ಲಿಯೇ ಲಭ್ಯವಿರುವ ಕಣ ಶಿಲೆಯನ್ನು ಸಾರ್ಥಕವಾಗಿ ಬಳಸಿದರು.

ಶಿಲೆಗಳ ವಿವರಣೆ

ಈ ಕಣಶಿಲೆಯು ಮಧ್ಯಮ ಗಾತ್ರದ ಖನಿಜಗಳ ಹರಳುಗಳುಳ್ಳ ೦.೫ ಮಿ.ಮೀ. ೨೦ ಮಿ.ಮೀ. ಶಿಲೆ. ಈ ಶಿಲೆಯಲ್ಲಿ ಕ್ವಾಟ್ಜ್‌(Quartz) ಬಯೋಟೈಟ್‌(Biotite) ಮತ್ತು ಹಾರ್ನಬ್ಲೆಂಡ್‌(Hornblende) ಕಡಿಮೆ ಪ್ರಮಾಣದಲ್ಲಿರುವ ಉಪ ಖನಿಜಗಳು. ಕಣ ಶಿಲೆಯು ಅಗ್ನಿಜನ್ಮ ಶಿಲೆ (Igneousrock). ಈ ಶಿಲೆಯು ಶಿಲಾಪಾಕವು (Magma) ಗಟ್ಟಿಗೊಳ್ಳುವುದರಿಂದ ಜನಿಸುತ್ತದೆ. ಗಟ್ಟಿಗೊಳ್ಳುವ ಪ್ರಕ್ರಿಯೆಯಲ್ಲಿಯೇ ಈ ಶಿಲೆಯ ಖನಿಜಗಳು ಜನಿಸುವುದರಿಂದ ಒಂದಕ್ಕೊಂದು ಸಹಜವಾಗಿಯೇ ಗಟ್ಟಿಯಾಗಿ ಬೆಸೆದುಕೊಂಡಿರುತ್ತದೆ.

ಹಂಪೆಯ ಸ್ಮಾರಕಗಳಲ್ಲಿ ತೀರ ಅಪರೂಪವಾಗಿ ಬಳಸಲಾದ ಶಿಲೆ ಡಾಲೋರೈಟ್‌ಒಡ್ಡು ಶಿಲೆ (Dolerite dyke rock). ಇದು ಕಡಿಮೆ ಪ್ರಮಾಣದಲ್ಲಿ ಸಿಗುತ್ತದೆ. ಇದರ ಬಣ್ಣ ಕಪ್ಪು ಅಥವಾ ಹಸಿರು ಮಿಶ್ರಿತ ಕಪ್ಪು. ಇದು ಅತಿ ಸೂಕ್ಷ್ಮ ಕಣಗಳ ಶಿಲೆ. ಇದರಲ್ಲಿರುವ ಖನಿಜಗಳನ್ನು ಸಾಮಾನ್ಯವಾಗಿ ಬರಿಕಣ್ಣಿನಿಂದ ನೋಡಲು ಸಾಧ್ಯವಿಲ್ಲ. ಈ ಶಿಲೆಯ ಅತಿ ತೆಳುವಾದ ಸ್ಲೈಡನ್ನು ಸಿದ್ಧಪಡಿಸಿ, ಆ ಸ್ಲೈಡನ್ನು ವಿಶೇಷ ಬಗೆಯ ಸೂಕ್ಷ್ಮದರ್ಶಕದಲ್ಲಿ ನೋಡಿದಾಗ ಮಾತ್ರ ಇದರ ಖನಿಜಗಳನ್ನು ನೋಡಲು ಸಾಧ್ಯ. ಪೈರಾಕ್ಸೀನ್ ಗುಂಪಿಗೆ ಸೇರಿದ ಖನಿಜಗಳು ಮತ್ತು ಫೆಲ್‌ಫ್‌ಖನಿಜಗಳು ಪ್ರಮುಖ ಖನಿಜಗಳು ಉಪಖನಿಜಗಳು. ಬಡವಿಲಿಂಗ ಮತ್ತು ಹಜಾರರಾಮ ದೇವಾಲಯದ ರಂಗಮಂಟಪದ ಇವುಗಳನ್ನು ಕಡೆಯಲು ಡಾಲೊರೈಟ್‌ಒಡ್ಡು ಶಿಲೆಯನ್ನು ಬಳಸಲಾಗಿದೆ. (ಚಿತ್ರ ೩)

ಶಿಲೆಯ ಶಿಥಿಲೀಕರಣ ಪ್ರಕ್ರಿಯೆ

ಯಾವುದೇ ಶಿಲೆಯು, ಎಷ್ಟೇ ಗಟ್ಟಿಯಾದರೂ ನೈಸರ್ಗಿಕ ನಿಯೋಗಿಗಳಾದ (Natural Agents) ಮಳೆ, ಬಿಸಿಲು, ಚಳಿ, ನೀರು ಮತ್ತು ಗಾಳಿಯ ಕ್ರಿಯೆಗಳಿಂದಾಗಿ ಕಾಲಾನುಕ್ರಮದಲ್ಲಿ ಶಿಥಿಲಗೊಳ್ಳುತ್ತದೆ. ಈ ನೈಸರ್ಗಿಕ ನಿಯೋಗಿಗಳ ಶಿಥಿಲೀಕರಣ ಕ್ರಿಯೆ (Weathering process) ಶಿಲೆಯ ಮೇಲೆ ಪರಿಣಾಮಗಳನ್ನು ಸಂಕ್ಷಿಪ್ತದಲ್ಲಿ ನೋಡೋಣ.

೧. ಶಿಲೆಯು ಒಂದು ಬಣ್ಣದಾಗಿದ್ದರೂ ಹೊರಮೈಮೇಲೆ ತಿಳಿ ಕೆಂಪು ಬಣ್ಣದ ಪೊರೆ (Layer) ಬರುತ್ತದೆ. ಶಿಲೆಯಲ್ಲಿರುವ ಕಬ್ಬಿಣಾಂಶವನ್ನು ಹೊಂದಿರುವ ಖನಿಜಗಳು ಶಿಥಿಲಗೊಳ್ಳುವುದರಿಂದ ಈ ಕೆಂಪು ಬಣ್ಣದ ಪೊರೆ ನೈಸರ್ಗಿಕ ಪೊರೆ ಕಟ್ಟಿಕೊಳ್ಳುತ್ತದೆ.

೨. ಶಿಲೆಯಲ್ಲಿರುವ ಛೇದಗಳು (Fractures) ಶಿಥೀಲಕರಣ ಕ್ರಿಯೆಯಿಂದ ದೊಡ್ಡದಾಗಿ ಶಿಲೆಯನ್ನು ಅಭದ್ರಗೊಳಿಸುತ್ತದೆ.

೩. ಉಷ್ಣಾಂಶದ ವ್ಯತ್ಯಾಸದಿಂದ ಶಿಲೆಯು ಸಿಪ್ಪೆಯಂತೆ ಸುಲಿಯಲ್ಪಡುತ್ತದೆ (E x foliation).

೪. ಧೂಳು ಸೇರಿಕೊಂಡು ಶಿಲೆಯ ನೈಸರ್ಗಿಕ ಬಣ್ಣ ಮಸಕಾಗುತ್ತದೆ.

ಈ ಮೇಲ್ಕಾಣಿಸಿದ ಪರಿಣಾಮಗಳನ್ನು ಗುಡ್ಡಗಳಲ್ಲಿರುವ ಶಿಲೆಯ ಮೇಲೆ ಕಂಡಂತೆ, ಈ ಶಿಲೆಗಳನ್ನು ಬಳಸಿದ ಶಿಲ್ಪಗಳ ಮೇಲೂ ಕಾಣಬಹುದು. ದೇವಾಲಯಗಳ ಮೇಲೆ ಮತ್ತು ಶಿಲ್ಪಗಳ ಮೇಲೆ ನೈಸರ್ಗಿಕ ನಿಯೋಗಿಗಳಿಗಿಂತಲೂ ಮಾನವನ ಕೈಗಳು ಮಾಡುವ ದುಷ್ಪರಿಣಾಮಗಳು ಅತ್ಯಂತ ಘೋರ ಹಾಗೂ ಗಂಭೀರ ಎಂಬುದಕ್ಕೆ ಹಂಪೆಯಲ್ಲಿ ಭಗ್ನಗೊಂಡಿರುವ ಮತ್ತು ವಿರೂಪಗೊಂಡಿರುವ ಸ್ಮಾರಕಗಳೇ ಸಾಕ್ಷಿ.

ಸಂರಕ್ಷಣಾ ಕ್ರಮಗಳು

ಯಾವುದೇ ಐತಿಹಾಸಿ ಸ್ಮಾರಕಗಳನ್ನು ನಮ್ಮ ಐತಿಹಾಸಿಕ ಪರಂಪರೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಸಂರಕ್ಷಿಸಬೇಕಾಗುತ್ತದೆ. ಹೀಗೆ ಸ್ಮಾರಕಗಳನ್ನು ಸಂರಕ್ಷಿಸುವಾಗ, ಆ ಸ್ಮಾರಕದ ನೈಸರ್ಗಿಕ ರೂಪ ಮತ್ತು ಬಣ್ಣ ಅಂದಗೆಡದಂತೆ ನೋಡಿಕೊಳ್ಳಬೇಕು. ಇದೇ ಸಂರಕ್ಷಣಾ ಕ್ರಮದ ಮೂಲತತ್ವ. ಈ ತತ್ವಕ್ಕೆ ಅನುಗುಣವಾಗಿ ಕೆಲವು ಸಾಮಾನ್ಯ ಕ್ರಮಗಳನ್ನು ಈ ಕೆಳಗೆ ನೀಡಲಾಗಿದೆ.

೧. ಸ್ಮಾರಕಗಳ ಮೇಲೆ ಕೂತಿರುವ ಧೂಳನ್ನು ಒಣ ಆದರೆ ಮೃದುವಾದ ಬಟ್ಟೆಯಿಂದ ಒರೆಸಬೇಕು.

೨. ಅಪರೂಪಕ್ಕೆ ನೀರು ಮತ್ತು ಸಾಬೂನಿನಿಂದ ತೊಳೆಯಬಹುದು. ಆದರೆ ತೊಳೆದ ನಂತರ ತೇವಾಂಶವಿಲ್ಲದೆ ಒರೆಸಬೇಕು.

೩. ತುಕ್ಕು ಹತ್ತಿದಂತೆ ಕಾಣುವ ಪೊರೆಯನ್ನು ದುರ್ಬಲ ಆಮ್ಲದಿಂದ (ಉದಾಹರಣೆಗೆ ೨% ಹೈಡ್ರೋಪ್ಲೋರಿಕ್‌ಆಮ್ಲ) ತೊಳೆದು ತೆಗೆಯಬಹುದು. ನಂತರ ಪುನಃ ನೀರನಿಂದ ತೊಲೆದು ಆಮ್ಲದಂಶ ಸ್ಮಾರಕದ ಮೇಲೆ ಉಳಿಯದಂತೆ ಒರೆಸಬೇಕು.

೪. ದೊಡ್ಡ ಗಾತ್ರದ ಸ್ಮಾರಕದ ಮೇಲೆ, ತುಂಬಾ ಗಟ್ಟಿಯಾದ ಪೊರೆ ಅಥವಾ ಧೂಳು ಕೂತಿದ್ದರೆ ಅದನ್ನು ಮರಳನ್ನು ಬ್ಲಾಸ್ಟ್‌ಮಾಡಿ (Send blasting) ಅಥವಾ ಒತ್ತಡದಿಂದ ಗಾಳಿಯನ್ನು ಕೊಳವೆ ಮೂಲಕ ಹಾಯಿಸುವುದರಿಂದ ಸ್ವಚ್ಛಗೊಳಿಸಬಹುದು.

೫. ಮಳೆಗಾಲಕ್ಕಿಂತ ಪೂರ್ವದಲ್ಲಿ ಅಥವಾ ಮಸ್ತಕಾಭಿಷೇಕಕ್ಕಿಂತ ಪೂರ್ವದಲ್ಲಿ ಲಿಕ್ವಿಡ್‌ಪ್ಯಾರಾಫಿನ್‌(Liquid Paraffin) ಲೇಪನ ಮಾಡಬೇಕು. ಆದರೆ ಈ ಪ್ಯಾರಾಫಿನ್‌ಲೇಪನಕ್ಕಿಂತ ಮುಂಚೆ ಶಿಲ್ಪದೊಳಗೆ ತೇವಾಂಶವಿರಕೂಡದು.

೬. ಸ್ಮಾರಕಗಳು ಅಥವಾ ಶಿಲ್ಪಗಳು ತುಂಡುಗಳಾಗಿ ಒಡೆದು ಹೋದರೆ ತುಂಡುಗಳನ್ನು ಕೆಲ ವಿಶೇಷ ಬಗೆಯ ರೆಸಿನ್‌ಮತ್ತು ಹಾರ್ಡನರ್ ಗಳನ್ನು ಬಳಸಿ ಜೋಡಿಸಿ ಪುನರ್ ರಚಿಸಬೇಕು.

೭. ನಮ್ಮ ಜನರಲ್ಲಿ ಶಿಲ್ಪಗಳಿಗೆ ಮತ್ತು ದೇವಾಲಯಗಳ ಕಂಬಗಳಿಗೆ ಎಣ್ಣೆ ಸುರಿವ ಕೆಟ್ಟ ಪದ್ಧತಿ ಇದೆ. ಇದರಿಂದ ಕೆಲವೇ ವರ್ಷಗಳಲ್ಲಿ ಶಿಲ್ಪದ ಮೇಲೆ ಕಪ್ಪು ಮೇಣದಂತೆ ಜಿಡ್ಡಿನ ದಪ್ಪನೆಯ ಪೊರೆ ಬೆಳೆಯುತ್ತದೆ. ಕಲೆ ಕಾಣದೆ, ಅಸಹ್ಯಕರವಾಗಿ ಕಾಣುವ ಒಂದು ಕಪ್ಪು ಮುದ್ದೆಯಂತೆ ಕಾಣುತ್ತದೆ. ಸುಂದರ ಶಿಲ್ಪ, ಈ ಪದ್ಧತಿಯನ್ನು ಜನರು ವರ್ಜಿಸಬೇಕು. ಅವಶ್ಯವೆನಿಸಿದರೆ ಕಾನೂನಿನ ರೀತಿ ಕ್ರಮಕೈಗೊಳ್ಳಬೇಕು.

ಕೊನೆಯಲ್ಲಿ ಒಂದು ಮಾತು. ನಾನು ಮೇಲೆ ಹೇಳಿದ ಸಂರಕ್ಷಣಾ ಕ್ರಮಗಳೆಲ್ಲಾ ಸರ್ಕಾರಿ ಇಲಾಖೆ ಅಥವಾ ಒಂದು ಸಂಬಂಧಪಟ್ಟ ಸಂಸ್ಥೆ ತೆಗೆದುಕೊಳ್ಳಬಹುದಾದ ಕ್ರಮಗಳು. ಇದಕ್ಕಿಂತಲೂ ದೊಡ್ಡ ಜವಾಬ್ದಾರಿ ಸಾಮಾನ್ಯ ಜನರ ಮೇಲೆ ಇದೆ. ಸ್ಮಾರಕಗಳ ಮೇಲೆ ಹೆಸರನ್ನು ಕೆತ್ತುವುದು, ಬಣ್ಣ ಹಚ್ಚುವುದು, ತಾರೀಖುಗಳನ್ನು ಕೆತ್ತುವುದು ಇತ್ಯಾದಿ ವಿರೂಪಗಳಿಸುವ ಕೆಲಸಗಳನ್ನು ನಮ್ಮ ಸ್ಮಾರಕಗಳಿಗೆ ಅಪಾರ ಹಾಗೂ ಪರಿಹರಿಸಲಾಗದಂಥ ಹಾನಿ ಉಂಟಾಗುತ್ತದೆ. ಈ ವಿರೂಪಗೊಳಿಸುವ ದುಷ್ಟ ಕೆಲಸಗಳಿಗೆ ನಾವು ಎಷ್ಟು ಬೇಗ ಪೂರ್ಣ ವಿರಾಮ ಹಾಕುತ್ತೇವೆಯೋ ಅಷ್ಟು ಒಳ್ಳೆಯದು. ಹಂಪೆಯ ಸ್ಮಾರಕಗಳಿಗೂ ಈ ಮಾತು ಅನ್ವಯವಾಗುತ್ತದೆ. ಹಲವಾರು ಚದುರ ಕಿ.ಲೋ. ಮೀಟರುಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿರುವ ಹಂಪೆಯ ಸ್ಮಾರಕಗಳು ನಮ್ಮೆಲ್ಲರ ಅಮೂಲ್ಯ ಆಸ್ತಿ. ಇಲ್ಲಿಯ ಸ್ಮಾರಕಗಳು ಕೇವಲ ನಮ್ಮ ಹೆಮ್ಮೆಯ ಆಸ್ತಿಯಲ್ಲ. ಇಡೀ ಮಾನವ ಜನಾಂಗವೇ ಹೆಮ್ಮೆ ಪಡಬಹುದಾದಂಥ ಕಲಾ ಪರಂಪರೆ. ಅದರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಈ ಅರಿವು ಶ್ರೀಸಾಮಾನ್ಯನಲ್ಲಿ ಮೂಡಿಬರಲಿ ಎಂದು ಹಾರೈಸುತ್ತೇನೆ.

ಆಕರ
ವಿಜಯನಗರ ಅಧ್ಯಯನ, ಸಂ. ೧೦, ೨೦೦೫, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು, ಪು. ೧೫೩-೧೫೯.