ಹಂಪೆ ಎಂದಾಕ್ಷಣ ಅಲ್ಲಿ ಬಾಳಿ ಬೆಳಗಿದ ವಿಜಯನಗರ ಸಾಮ್ರಾಜ್ಯದ ನೆನಪು ನಮಗೆ ಆಗುತ್ತದೆ. ಇದು ಕೇವಲ ಕರ್ನಾಟಕದವರಿಗಷ್ಟೇ ಅಲ್ಲ, ಕೃಷ್ಣೆಯ ದಕ್ಷಿಣದ ಪ್ರದೇಶಗಳಾದ ಕರ್ನಾಟಕ, ಆಂಧ್ರ, ತಮಿಳುನಾಡಿನ ಜನರೂ ಈ ಹೆಸರಿನಿಂದ ಪುಳಕಗೊಳ್ಳುತ್ತಾರೆ. ಬಳ್ಳಾರಿ ಜಿಲ್ಲೆ ಮೈಸೂರು ರಾಜ್ಯದಲ್ಲಿ ವಿಲೀನವಾದಾಗಲೂ ಕೆಲವು ಕಾಲ ಆಂಧ್ರದ ಜನರು ಇದನ್ನು ತಮ್ಮ ಸಾಂಸ್ಕೃತಿಕ ಕೇಂದ್ರವೆಂದೇ ಭಾವಿಸಿದ್ದರು. ವಿಜಯನಗರ ಕೃಷ್ಣದೇವರಾಯ ಇಂದಿಗೂ ಆಂಧ್ರದ ಜನರ ಕಣ್ಮಣಿ. ಕ್ರಿ.ಶ. ೧೩೩೬ ರಿಂದ ೧೫೬೫ರ ವರೆಗೆ ಸುಮಾರು ೨೩೬ ವರ್ಷ ಹಂಪಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ ಅರಸರು ದಕ್ಷಿಣ ಭಾರತದ ಜನರ ಮನಸ್ಸಿನ ಮೇಲೆ ಬೀರಿರುವ ಪ್ರಭಾವ ಅಷ್ಟಿಷ್ಟಲ್ಲ. ಇಂತಹ ಸಾಮ್ರಾಜ್ಯವು ಸೋಲನ್ನು ಅನುಭವಿಸಿ ಹಂಪೆಯಿಂದ ಹೊರ ನಡೆದಾಗ ಕೆಲವು ವರ್ಷ ಹಂಪೆ ಅನಾಥವಾಯಿತು. ಛತ್ರಪತಿ ಶಿವಾಜಿಯು ಇಲ್ಲಿಗೆ ಬಂದು ಇಲ್ಲಿನ ದುಃಸ್ಥಿತಿಯನ್ನು ಕಂಡು ಮಮ್ಮಲ ಮರುಗಿ ವಿರೂಪಾಕ್ಷನ ಪೂಜಾಸೇವೆ ಸಾಂಗೋಪಾಂಗವಾಗಿ ನೆರವೇರಬೇಕೆಂದು ಆಶಿಸಿ ಇದರ ಏರ್ಪಾಡಿಗಾಗಿ ಕೆಲವು ಮಾಗಣೆಗಳನ್ನು ಆನೆಗೊಂದಿ ಅರಸರಿಗೆ ಬಿಟ್ಟುಕೊಟ್ಟಿದ್ದು ನಮಗೆ ತಿಳಿದುಬರುತ್ತದೆ. ಮುಂದೆ ಚಿತ್ರದುರ್ಗದ ಭರಮಣ್ಣನಾಯಕ ಇಲ್ಲಿಗೆ ಬಂದಹೋದ. ವಿರೂಪಾಕ್ಷನ ಪೂಜೆ ಮತ್ತೆ ಮುಂದುವರಿದು ಹಂಪೆಯು ಧಾರ್ಮಿಕ ಕ್ಷೇತ್ರವಾಯಿತು. ಹಾಳುಪಟ್ಟಣವಾದ ವಿಜಯನಗರವು ಗತವೈಭವದ ಕುರುಹಾಗಿ ನಿಲ್ಲುವಂತಾಯಿತು. ಇಂತಹ ಹಂಪಿಯನ್ನು ಶಾಸನಗಳಲ್ಲಿ ಹಾಗೂ ಕಾವ್ಯಗಳಲ್ಲಿ ಪಂಪಾಕ್ಷೇತ್ರ, ಪಂಪಾತೀರ್ಥ, ಪಂಪಾತಟ, ಭಾಸ್ಕರಕ್ಷೇತ್ರ, ಹಂಪೆ ಇವೇ ಮುಂತಾದ ಹೆಸರುಗಳಿಂದ ಕರೆಯಲಾಗಿದೆ. ರಾಜ್ಯಗಳಿರಲಿ ರಾಜ್ಯಗಳುರುಳಲಿ ಹಂಪೆಯನ್ನು ಜನಸಾಮಾನ್ಯರು ಮರೆತಿಲ್ಲವೆಂಬುದು ಇದಕ್ಕೆ ಕಾರಣ.

ಹೀಗೆ ಜನಸಾಮಾನ್ಯರ ಮನಸ್ಸಿನಲ್ಲಿ ನೆಲೆ ನಿಂತ ಈ ಹಂಪೆಯು ಪುರಾಣಗಳ ಕಾಲಕ್ಕೆ ಇದು ಕಿಷ್ಕಿಂಧೆಯಾಗಿ ವಾನರ ರಾಜ್ಯದ ಪ್ರಮುಖ ನೆಲೆಯಾಗಿತ್ತು. ಪಂಪಾತಟದ ಉತ್ತರಕ್ಕೆ ಕಿಃಕಿಂಧೆ ಇತ್ತೆಂದು ಗಂಗಾವತಿ ತಾಲೂಕಿನ ದೇವಿಗಾಟ್ ರ ಶಾಸನವೊಂದು ನಮಗೆ ತಿಳಿಸುತ್ತದೆ. ಇದು ಪುರಾಣಗಳ ಹೇಳಿಕೆಯನ್ನು ಪುಷ್ಟೀಕರಿಸುತ್ತದೆ. ಇದು ೩೩ ದೇವತೆಗಳ ಸ್ಥಾನವಾಗಿತ್ತೆಂಬ ಅಂಶವನ್ನು ಈ ಶಾಸನ ತಿಳಿಸುತ್ತದೆ. ಇದಕ್ಕೆ ಪೂರಕವಾಗಿ ಸಮೀಪದ ಹಿರೇಬೆಣಕಲ್ ಬೆಟ್ಟದಲ್ಲಿನ ಪ್ರಾಗೈತಿಹಾಸಿಕ ಕಾಲದ ಮಾನವಾಕೃತಿಯ ರೇಖಾಚಿತ್ರಗಳಲ್ಲಿ ಮಾನವನಿಗೆ ಬಾಲವನ್ನು ಬಿಡಿಸಲಾಗಿದೆ. ಇಂತಹ ಚಿತ್ರಗಳು ಆನೆಗೊಂದಿ, ಮಲ್ಲಾಪುರದ ಬಳಿಯಲ್ಲೂ ದೊರೆತಿವೆ. ಹಂಪಿ ಮತ್ತು ಸುತ್ತಮುತ್ತಲ ಪ್ರದೇಶವು ಬಹುಹಿಂದಿನಿಂದಲೂ ರಾಮಾಯಣದ ಕಥೆಯೊಂದಿಗೆ ತಾದಾತ್ಮ್ಯ ಸಂಬಂಧವನ್ನು ಹೊಂದಿರಬೇಕು. ಇಲ್ಲಿಯ ವಾಲಿದಿಬ್ಬ, ಸೀತೆ ಸೆರಗು ಮುಂತಾದ ಸ್ಥಳಗಳು ರಾಮಾಯಣ ಕಾಲದಿಂದ ಇಲ್ಲಿ ಜನವಸತಿ ಇತ್ತೆಂಬುದನ್ನು ನಮಗೆ ನೆನಪಿಸುತ್ತದೆ.

ಹಂಪೆ ಮತ್ತು ಅದರ ಪರಿಸರದಲ್ಲಿ ಪ್ರಾಗೈತಿಹಾಸಿಕ ನೆಲೆಗಳು ಕಂಡುಬರುತ್ತವೆ. ಹಳೆಯ ಶಿಲಾಯುಗ, ನೂತನ ಶಿಲಾಯುಗ, ಕಬ್ಬಿಣ ಸಂಸ್ಕೃತಿಯುಗಗಳೂ ಕಂಡುಬಂದಿರುವುದನ್ನು ವಿದ್ವಾಂಸರು ಈಗಾಗಲೆ ಗುರುತಿಸಿದ್ದಾರೆ. ಹಾಗೆಯೇ ಹಂಪಿಗೆ ಸಮೀಪದ ಅಂಜನಹಳ್ಳಿ, ಆನೆಗೊಂದಿ, ವೆಂಕಟಾಪುರ ಮುಂತಾದ ಕಡೆಗಳಲ್ಲಿ ಕೆಂಪುಬಣ್ಣದಲ್ಲಿ ಬರೆದಿರುವ ಹಲವಾರು ಚಿತ್ರಗಳಿವೆ. ಹಂಪಿಯಲ್ಲಿಯೂ ಅನೇಕ ಕಡೆಗಳಲ್ಲಿ ಈ ಬಗೆಯ ಚಿತ್ರಗಳು ಕಂಡುಬರುತ್ತವೆ. ವಿರೂಪಾಕ್ಷ ದೇವಾಲಯದ ಹಿಂಬದಿಯಲ್ಲಿನ ಬಾಗಿದ ಗುಂಡಿನ ಮೇಲಿನ ಚಿತ್ರಗಳಲ್ಲಿ ಗಂಡುಹೆಣ್ಣಿನ ಚಿತ್ರಗಳನ್ನು ನಾವು ಕಾಣಬಹುದು. ವಿಠಲದೇವಾಲಯದ ಬಳಿಯ ಮೊಸಳಯ್ಯನ ಗುಡ್ಡದಲ್ಲಿ ಪ್ರಾಣಿಗಳ ಚಿತ್ರಗಳನ್ನು ಬಿಡಿಸಲಾಗಿದೆ.

ಇವೆಲ್ಲಕ್ಕಿಂತ ಇಂದಿಗೂ ಬಹಳ ಕಾಲದಿಂದ ಆಚರಣೆಯಲ್ಲಿರುವ ಪದ್ಧತಿಯೊಂದು ಇಲ್ಲಿ ಜೀವಂತವಾಗಿರುವುದನ್ನು ಚಕ್ರತೀರ್ಥದ ಬಳಿ ನಾವು ಕಾಣಬಹುದು. ಚಕ್ರತೀರ್ಥದಲ್ಲಿ ನಡೆಯುವ ಪ್ರಮುಖ ಕಾರ್ಯವೆಂದರೆ ಫಲಪೂಜೆ. ಫಲಪೂಜೆ ಇಲ್ಲಿ ಜನಸಾಮಾನ್ಯರ ಬದುಕಿನ ಪ್ರಮುಖ ವಿಷಯ. ಈ ಪ್ರದೇಶದಲ್ಲಿ ಫಲಪೂಜೆ ನಂತರವೇ ಮದುವೆಗಳ ನಿಶ್ಚಯ, ಮದುವೆಗಳು ನಡೆಯುವುದು. ಅಷ್ಟೇ ಅಲ್ಲ ಆದಿಮಕಾಲದಿಂದ ನಡೆದುಬಂದ ಸಂಪ್ರದಾಯವೊಂದು ಇಂದಿಗೂ ಇಲ್ಲಿ ಸವಕಲಾಗಿ ನಡೆದುಬರುತ್ತಿರುವ ವಿಷಯವನ್ನು ಅನೇಕರು ಗಮನಿಸಿರಬಹುದು. ಚಕ್ರತೀರ್ಥದಲ್ಲಿ ಮಿಂದು ಮೇಲಿನಬೆಟ್ಟದಲ್ಲಿ ಮೂರು ಕಲ್ಲಿಟ್ಟು ಅದರ ಮೇಲೆ ಮತ್ತೊಂದು ಕಲ್ಲನ್ನಿಟ್ಟು ಮನೆ ರಚಿಸುತ್ತಾರೆ. ಅನಂತರ ಸಣ್ಣ ಕಲ್ಲೊಂದನ್ನು ತೆಗೆದುಕೊಂಡು ಗಿಡದ ಟೊಂಗೆಗೆ ಬಟ್ಟೆಯಲ್ಲಿ ಸುತ್ತಿ ತೊಟ್ಟಿಲಿನಂತೆ ನೇತಾಡುವಂತೆ ಕಟ್ಟುತ್ತಾರೆ. ಹೀಗೆ ಮಾಡಿದರೆ ತಮ್ಮ ಅಭೀಪ್ಸೆಗಳು ಈಡೇರುತ್ತವೆಯೆಂಬ ನಂಬಿಕೆ ಆ ಜನರದ್ದು. ಇಂತಹದೇ ಕಾರ್ಯಗಳು ಬೇರೆಡೆಯ ಪ್ರಾಗೈತಿಹಾಸಿಕ ನೆಲೆಗಳಲ್ಲಿ ಇಂದಿಗೂ ನಡೆಯುತ್ತವೆ. ಹೀಗೆ ಕಟ್ಟಿದ ಮನೆಗಳು ಶತಶತಮಾನಗಳ ಕಾಲ ಬೀಳುತ್ತವೆ. ಮತ್ತು ರಚನೆಯಾಗುತ್ತವೆ. ಇಂತಹ ರಚನೆಗಳಲ್ಲಿ ಕೆಲವು ಬೃಹತ್ತಾಗಿರುವುದೂ ಉಂಟು. ಹಂಪೆಯಲ್ಲಿ ಈ ಸ್ಥಳವನ್ನು ಬಿಟ್ಟರೆ ಬೇರೆಡೆ, ಜನ ಈ ಕಟ್ಟಣೆ ಕಾರ್ಯ ಮಾಡುವುದಿಲ್ಲ. ಪಾರಂಪರಿಕವಾಗಿ ಅನೂಚೂನವಾಗಿ ಇದು ನಡೆಯುತ್ತಾ ಬಂದಿದೆ.

ಹಂಪೆ ಮೂಲತಃ ತೀರ್ಥ. ಇಲ್ಲಿ ಹರಿಯುವ ತುಂಗಭದ್ರ ನದಿಯೇ ಶ್ರೇಷ್ಠ. ವಿರೂಪಾಕ್ಷ ಮತ್ತು ಪಂಪಾಂಬಿಕೆ ನಂತರ ಬಂದವರು. ಇಂದಿಗೂ ಜನರು ಈ ತೀರ್ಥಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ. ರಾಜಕೀಯ ಆಡಳಿತಕ್ಕಾಗಿ ಬಂದ ಜನ ರಾಜಕೀಯ ಬೀಳಿನ ನಂತರ ಹೊರಟುಹೋದರೂ, ಸಾಂಸ್ಕೃತಿಕ ಮನಸ್ಸಿನ ಜನ ಈ ಸ್ಥಳವನ್ನು ಬಿಡಲಿಲ್ಲ.

ಪಂಪಾ ಸ್ಥಳದ ಉಲ್ಲೇಖ ನಮಗೆ ಕ್ರಿ.ಶ. ೬೮೬ರ ತಾಮ್ರಪಟದಲ್ಲಿ ಕಂಡುಬಂದರೂ ನಂತರ ಸುಮಾರು ಕ್ರಿ.ಶ. ೧೦೧೧ನೆಯ ಶತಮಾನದವರೆಗೆ ಇದರ ಉಲ್ಲೇಖ ನಮಗೆ ದೊರೆತಿಲ್ಲ. ಕ್ರಿ.ಶ. ೧೧ ನೆಯ ಶತಮಾನದಲ್ಲಿ ಈ ಕ್ಷೇತ್ರ ತನ್ನ ಹರವನ್ನು ವಿಸ್ತಾರಗೊಳಿಸಿಕೊಂಡು ಇಲ್ಲಿಯ ದೈವವಾದ ವಿರೂಪಾಕ್ಷ ತನ್ನ ಪ್ರಭಾವವನ್ನು ಬೀರಿರುತ್ತಾನೆ. ಕೊಪ್ಪಳ ಜಿಲ್ಲೆಯ ಪುರದ ಶಾಸನ, ಬಾಗಳಿ ಶಾಸನ ಮುಂತಾದವುಗಳಲ್ಲಿ ಇದೊಂದು ಪುಣ್ಯಕ್ಷೇತ್ರವಾಗಿತ್ತೆಂಬ ಉಲ್ಲೇಖ ಬರುತ್ತದೆ. ದೂರ ದೂರದ ಜನರು ಹಂಪೆಗೆ ಬಂದು ದಾನ ನೀಡುತ್ತಿದ್ದರು ಇಲ್ಲವೇ ದಾನ ಪಡೆಯುತ್ತಿದ್ದರು ಎಂಬ ಉಲ್ಲೇಖಗಳು ಸಾಕಷ್ಟಿವೆ.

ಹಂಪಿ ಹೆಚ್ಚಿನ ಪ್ರಸಿದ್ಧಿಗೆ ಬಂದದ್ದು ಇಲ್ಲಿ ನೆಲೆಸಿ ಕಾವ್ಯ ಬರೆದ ಕವಿಗಳಿಂದ. ಹರಿಹರ, ರಾಘವಾಂಕ, ಚಂದ್ರಮ, ಅದೃಶ್ಯಕವಿ, ಲಕ್ಕಣದಂಡೇಶ ಇನ್ನೂ ಮೊದಲಾದವರು ವಿರೂಪಾಕ್ಷನನ್ನು ಮನಸಾರೆ ಸ್ತುತಿಸಿದ್ದಲ್ಲದೆ ಈ ಸ್ಥಳದ ಮಹಿಮೆ ಹೆಚ್ಚಾಗಲು ಕಾರಣರಾಗಿದ್ದರು. ಹರಿಹರನಿಗೆ ಹಂಪೆಯ ವಿರೂಪಾಕ್ಷನೇ ಸರ್ವಸ್ವ. ಇವನ ಪ್ರಕಾರ ಕಾಮದಹನವಾದದ್ದು ಹೇಮಕೂಟದಲ್ಲಿ. ರಾಘವಾಂಕನು ವಸಿಷ್ಠಮುನಿಗಳ ಆಶ್ರಮ ಇಲ್ಲೇ ಇತ್ತೆಂದು ಹೇಳುತ್ತಾನೆ. ಹಂಪಿಯು ಹೀಗೆ ಕವಿ, ಕಾವ್ಯ ಮತ್ತು ಸ್ಥಳ ಇವುಗಳ ಅವಿನಾಸಂಬಂಧ ಇಲ್ಲಿಯ ಕವಿಗಳ ಕಾವ್ಯದಲ್ಲಿ ಪ್ರತಿಧ್ವನಿಸಿದೆ.

ಇದಕ್ಕೆ ವಿಭಿನ್ನವಾಗಿ ಯೋಚಿಸುವ ಜನರ ಪ್ರಕಾರ ಇದು ಪಂಪಾದೇವಿಯ ಕ್ಷೇತ್ರ. ಇಲ್ಲಿ ಬಾಲ ಪಂಪಾದೇವಿ, ಹಿರಿಯ ಪಂಪಾದೇವಿ ನೆಲೆಸಿದ್ದ ಸ್ಥಳ. ಸೋಮನಾಥನು ಬರೆದ ಉದ್ಭಟಕಾವ್ಯದಲ್ಲಿ ಇಲ್ಲಿಯ ಹಿರಿಯ ಪಂಪಾದೇವಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ಕನ್ನಿಕಾಪೂಜೆಯ ಬಗ್ಗೆ ವರ್ಣಿಸಿದ್ದಾನೆ. ಆತ ಬಹಳಷ್ಟು ವಿವರಗಳನ್ನು ನೀಡಿದ್ದಾನೆ.

ಪಂಪಾ ಎಂಬುದು ಒಂದು ದ್ರಾವಿಡ ಭಾಷೆಯ ಪದ. ಸೀಳಿ ಮತ್ತೆ ಸೇರು ಎಂಬ ಕ್ರಿಯಾಸೂಚಕವಾದುದು. ತುಂಗಭದ್ರಾ ನದಿ ಈ ಪ್ರದೇಶದಲ್ಲಿ ಸೀಳು ಸೀಳಾಗಿ ಒಡೆದು ಹರಿಯುವುದು, ಮತ್ತೆ ಒಂದಾಗುವುದು ಭೌತಿಕವಾಗಿ ನಮಗೆ ಕಾಣುತ್ತದೆ. ಇದನ್ನು ಗಮನಿಸಿದವರು ಈ ನದಿಯನ್ನು ಪಂಪಾ ಎಂದು ಕರೆದ ಹಾಗೆ ತೋರುತ್ತದೆ. ಇದು ಈ ಪ್ರದೇಶದಲ್ಲಿ ಹಂಪಿ ಹೊಳೆ ಎಂದೇ ಗುರುತಿಸಿಕೊಂಡಿದೆ. ಅನೇಕರು ಇದನ್ನೇ ತಮ್ಮ ಮನೆಯ ಹೆಸರನ್ನಾಗಿಯೂ ಇರಿಸಿಕೊಂಡಿದ್ದಾರೆ. ಈ ರೀತಿಯಿಂದಲೂ ಈ ಹೊಳೆಯು ಶತಮಾನಗಳಿಂದ ಜೀವಂತವಾಗಿದೆ.

ಹಂಪೆ ಮತ್ತದರ ಪರಿಸರವು ಬಾದಾಮಿ ಚಲುಕ್ಯರು, ಕಲ್ಯಾಣದ ಚಾಳುಕ್ಯರು, ದ್ವಾರ ಸಮುದ್ರದ ಹೊಯ್ಸಳರು, ಕುಮ್ಮಟದುರ್ಗದ ಅರಸರು, ಕುರುಗೋಡಿನ ಸಿಂಧರು ಮೊದಲಾದ ಅರಿಸರಿಗೆ ಪರಿಚಿತ ಸ್ಥಳವಾಗಿತ್ತು. ಈ ರಾಜ್ಯರೆಲ್ಲ ಇಲ್ಲಿ ಬಂದು ದಾನ ನೀಡಿದ್ದಾರೆ, ಇಲ್ಲವೇ ಇಲ್ಲಿಯ ದೈವದ ಹೆಸರಿನಲ್ಲಿ ದೂರದಲ್ಲಿ ದಾನ ನೀಡಿದ್ದಾರೆ. ಈ ವಿರೂಪಾಕ್ಷನ ಹೆಸರಿನಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ದೇವಾಲಯಗಳನ್ನು ಸ್ಥಾಪಿಸಿದ್ದಾರೆ. ಕುರುಗೋಡಿನ ಸಿಂಧರು ಮನ್ಮುಖತೀರ್ಥದ ಬಳಿ ಇರುವ ದುರ್ಗಾದೇವಾಲಯಕ್ಕೂ ದತ್ತಿ ನೀಡಿರುವುದನ್ನು ನಾವು ಸ್ಮರಿಸಬಹುದು. ಇಂತಹ ದಾನದತ್ತಿಗಳಿಂದ ಈ ಕ್ಷೇತ್ರದ ಕೀರ್ತಿ ಬೇರೆ ಬೇರೆಡೆ ಹಬ್ಬಲು ಕಾರಣವಾಯಿತು.

ಸಂಗಮ ವಂಶದ ಹರಿಹರ ಬುಕ್ಕ ಮೊದಲಾದ ಐದು ಜನ ಸಹೋದರರು ಮೊದಲು ಆನೆಗೊಂದಿಯಲ್ಲಿ ರಾಜ್ಯಸ್ಥಾಪನೆ ಮಾಡಿ ಆನೆಗೊಂದಿಯನ್ನು ರಾಜ್ಯಧಾನಿಯನ್ನಾಗಿ ಮಾಡಿಕೊಂಡರೂ ಕೆಲವೇ ವರ್ಷಗಳಲ್ಲಿ ವಿರೂಪಾಕ್ಷನ ಸನ್ನಿಧಿಯಲ್ಲಿ ನಗರವೊಂದನ್ನು ನಿರ್ಮಿಸಿ ಅಲ್ಲಿಗೆ ರಾಜಧಾನಿಯನ್ನು ಬದಲಾಯಿಸಿದರು. ಹಂಪೆಯ ಇತಿಹಾಸದಲ್ಲಿ ಇದೊಂದು ಸುವರ್ಣ ಅಧ್ಯಾಯವೇ ಸರಿ. ಇದು ರಾಜಧಾನಿಯಾದ ಕೂಡಲೇ ಇಲ್ಲಿಗೆ ನಾನಾ ಬಗೆಯ ಜನರು ಬಂದರು. ಸೈನಿಕರು, ಸಾಧು ಸನ್ಯಾಸಿಗಳು, ವ್ಯಾಪಾರಿಗಳು, ಕೃಷಿಕರು, ಕಟ್ಟಣೆಗಾರರು, ಹೀಗೆ ಅನೇಕ ವೃತ್ತಿ-ಪ್ರವೃತ್ತಿಗಳ ಜನರು ಬಂದು ನೆಲೆಸಿದರು. ರಾಜಧಾನಿ ಹೊಸದಾಗಿ ನಿರ್ಮಾಣವಾದ್ದರಿಂದ ಕಟ್ಟಣೆಕಾರ್ಯ ಮಾಡುವ ಜನರಿಗೆ ಸಾಮಾನ್ಯವಾಗಿ ಹೆಚ್ಚಿನ ಬೇಡಿಕೆ ಇತ್ತು. ವಾಸಿಸುವ ಸ್ಥಳಕ್ಕೆ ಚಿನ್ನದ ಬೆಲೆ. ಹೀಗಾಗಿ ಬಡವರು ಬೆಟ್ಟಗುಡ್ಡಗಳ ಬಯಲು ಪ್ರದೇಶವನ್ನು ಆರಿಸಿಕೊಂಡರು. ಇವರಲ್ಲಿ ಕೆಲವು ರಾವುತರೂ ಇದ್ದರು. ಅಂತಹ ರಾವುತರ ಬಿಡಾರದ ಪ್ರದೇಶದಲ್ಲಿ ಕುದುರೆಗಳನ್ನು ಕಟ್ಟಲು ಬಂಡೆಯಲ್ಲಿ ಹಿಡಿಕೆಯನ್ನು ಬಿಡಿಸಲಾಗಿದೆ. ಹಂಪಿಯ ಬಳಿ ರಚಿತವಾದ ವಿಜಯನಗರವೆಂಬ ರಾಜಧಾನಿಯ ಹೆಸರನ್ನೇ ಮುಂದಕ್ಕೆ ರಾಜ್ಯವೂ ಪಡೆಯಿತು. ಕೃಷ್ಣಾ ನದಿಯ ದಕ್ಷಿಣದ ಬಹುತೇಕ ಭಾಗ ವಿಜಯನಗರದ ಅರಸರ ಕೈಯಲ್ಲಿದ್ದುದರಿಂದ ಆ ಕಾಲಕ್ಕೆ ಭಾರತಕ್ಕೆ ಬಂದಿದ್ದ ಯುರೋಪಿನ ಪ್ರವಾಸಿಗರಲ್ಲದೆ, ಬೇರೆ ಪ್ರದೇಶದ ಪ್ರವಾಸಿಗರು ಈ ನಗರಕ್ಕೆ ಭೇಟಿ ನೀಡಿ ಮುಕ್ತವಾಗಿ ಇಲ್ಲಿಯ ವೈಭವದ ಬಗ್ಗೆ ವರ್ಣಿಸಿದ್ದಾರೆ.

ವಿಜಯನಗರದ ಅರಸರು ಕೇವಲ ರಾಜಕೀಯಕ್ಕಷ್ಟೇ ತಮ್ಮ ಜೀವನವನ್ನು ಮುಡಿಪಾಗಿಡಲಿಲ್ಲ. ಕಲೆ, ಕ್ರೀಡೆ, ಕಟ್ಟಡ ನಿರ್ಮಾಣ, ಕೆರೆಗಳ ರಚನೆ ಮುಂತಾದವುಗಳ ಕಡೆಗೂ ಹೆಚ್ಚಿನ ಗಮನ ಹರಿಸಿದರು. ನೀರಾವರಿಗಂತೂ ಹೆಚ್ಚಿನ ಪ್ರೋತ್ಸಾಹವನ್ನು ಅವರು ನೀಡಿದ್ದರು. ಉಳಿದುಕೊಂಡು ಬಂದಿರುವ ನಾಲೆಗಳು, ಕಟ್ಟೆಗಳು ಅವರ ಕೆಲಸಗಳ ಸಾಕ್ಷಿಯಾಗಿ ಇಂದಿಗೂ ನಾವು ನೋಡಬಹುದು. ವೀರಹರಿಹರರಾಯನ ಮಗ ಪ್ರತಾಪಬುಕ್ಕರಾಯನು ಪೆನುಗೊಂಡೆ ಪಟ್ಟಣದಲ್ಲಿ ಆಳುತ್ತಿದ್ದಾಗ ಪೆನುಗೊಂಡೆಗೆ ಪೆನ್ನೆಯ ನದಿಯ ನೀರನ್ನು ತರಬೇಕೆಂದು ದಶವಿದ್ಯಾ ಚಕ್ರವರ್ತಿ ಜನಸೂತ್ರದ ಸಿಂಗಾಯಭಟ್ಟನಿಗೆ ನಿರೂಪವನ್ನು ನೀಡುತ್ತಾನೆ. ಅದರಂತೆ ಸಿಂಗಾಯಭಟ್ಟನು ಪೆನ್ನೆಗೆ ಕಾಲುವೆಯನ್ನು ತೋಡಿ ಆ ನೀರನ್ನು, ಸಮೀಪದ ಕೆರೆಗೆ ತಂದ ಉಲ್ಲೇಖ ಗೌರಿಬಿದನೂರು ತಾಲೂಕಿನ ಶಾಸನವೊಂದರಲ್ಲಿ ಉಲ್ಲೇಖಿತವಾಗಿದೆ. ಈ ಶಾಸನದ ಕಾಲ ಕ್ರಿ.ಶ. ೧೩೮೮. ವಿಜಯನಗರ ಸಾಮ್ರಾಜ್ಯದ ಆರಂಭದಲ್ಲಿ ಜೀರ್ಣ ದೇವಾಲಯಗಳ ಜೀರ್ಣೋದ್ಧಾರ ಹಾಗೂ ನೀರಾವರಿಯ ವ್ಯವಸ್ಥಾ ಕಾರ್ಯವನ್ನು ಆದ್ಯಕಾರ್ಯವನ್ನಾಗಿ ಕೈಗೊಂಡಿದ್ದರು. ಇದನ್ನೇ ಒಂದನೆಯ ದೇವರಾಯನ ಕಾಲದ ಕ್ರಿ.ಶ. ೧೪೧೧ರ ಹಂಪೆಯ ಶಾಸನದಲ್ಲಿ ಮಾದರಸ, ಸಾಯಣರ ಕಾರ್ಯಗಳ ಬಗ್ಗೆ ಹೇಳುವಾಗ:

ತೋಡದ ಬಾವಿಯಿಲ್ಲ ಮರೆಕಟ್ಟದ ಪೆರ್ಗ್ಗೆರೆಯಿಲ್ಲ, ಲೀಲೆಯಿಂ
ಮಾಡದ ದೇವತಾಭವನಮಿಲ್ಲೊಲವಿಂ ಬಿಡದಗ್ರಹಾರಮಿಲ್ಲಾ…

ಎಂದು ಮುಕ್ತವಾಗಿ ಹೊಗಳಿದೆ. ಬಾವಿ ತೋಡುವ ದೊಡ್ಡ ದೊಡ್ಡ ಕೆರೆಗಳನ್ನು ನಿರ್ಮಿಸುವ ಕಲೆಯಲ್ಲಿ ವಿಜಯನಗರದ ಅರಸರ ಕಾಲದ ಜನ ಜಲಸೂತ್ರ ಪರಿಣತರಾಗಿದ್ದರು. ಇಂತಹ ಪರಿಣತರು ಬಹಳಷ್ಟು ಮಂದಿ ಇದ್ದಿರಬಹುದಾದರೂ ಅವರೆಲ್ಲರ ಹೆಸರುಗಳು ನಮಗೆ ತಿಳಿಯುವುದಿಲ್ಲ. ತುಂಗಭದ್ರಾನದಿಗೆ ಅಡ್ಡಕಟ್ಟೆ ಕಟ್ಟಿ ತುರ್ತಾ ಕಾಲುವೆಯನ್ನು ಹಂಪೆಗೆ ತರಲಾಗಿದೆಯಷ್ಟೆ? ಇದರ ಸಮಪಾತಳಿಯನ್ನು ಕಾಪಾಡಿಕೊಳ್ಳಲು ಅಲ್ಲಲ್ಲಿ ಎದುರು ಬಂದ ಗುಂಡುಗಳನ್ನು ಒಡೆದಿರುವುದು, ಇಲ್ಲವೇ ಆ ಗುಂಡುಗಳನ್ನೇ ಸೀಳಿ ಮಧ್ಯದಲ್ಲಿ ನೀರು ಹರಿಯುವಂತೆ ಮಾಡಿರುವುದು ಇದರ ಹಿಂದಿನ ತಾಂತ್ರಿಕ ಕೌಶಲವನ್ನು ತಿಳಿಯಲು ಇಂದು ನಮಗೆ ಸಾಧನಗಳಿಲ್ಲ.

ನೀರಾವರಿಯಲ್ಲದೆ ಕಲ್ಲಿನಲ್ಲಿ ದೇವಾಲಯ ಕಟ್ಟಡ ರಚನೆ, ದೇವಾಲಯದ ಮುಂಬದಿಯಲ್ಲಿ ಗಾರೆಯಲ್ಲಿ ಗೋಪುರ ರಚನೆ, ನಗರ ನಿಮಾಣದಲ್ಲಿನ ಶಿಸ್ತು ಇವೂ ಸಹ ನಮಗೆ ಅಚ್ಚರಿಯನ್ನುಂಟುಮಾಡಿವೆ. ವಿದೇಶಿಯರ ಬರೆಹಗಳಲ್ಲಿ ಕೆಲವೆಡೆ ಕೋಟೆ ರಚನೆಯಲ್ಲಿ ಪೋರ್ಚುಗೀಸರ ಸಹಕಾರ ಪಡೆದಂತೆ ಹೇಳಲಾಗಿದೆ. ಹೀಗಾಗಿ ವಿಜಯನಗರದ ಅನೇಕ ಕಟ್ಟಣೆಗಳಲ್ಲಿ ಇವರ ಸಹಕಾರವನ್ನು ಪಡೆದಿರಬಹುದಾದ ಸಾಧ್ಯತೆಗಳಿವೆ.

ಒಂದೆರಡು ಬಾರಿ ಹಂಪೆಗೆ ಮುಸ್ಲಿಂ ಅರಸರು ದಾಳಿ ಮಾಡಿದ್ದನ್ನು ಬಿಟ್ಟರೆ ವಿಜಯನಗರವು ಬಹುತೇಕ ಶಾಂತಿಯಿಂದ ಕೂಡಿದ, ಅಪಾಯರಹಿತ ರಾಜಧಾನಿಯಾಗಿತ್ತು. ಈ ಕಾರಣದಿಂದ ಇದರ ಬೆಳವಣೆಗೆ ಬಹು ಶೀಘ್ರಗತಿಯನ್ನು ಬೆಳೆದುದಲ್ಲದೆ. ಸಮೃದ್ಧಿಗೂ ಕಾರಣವಾಯಿತು. ಈ ಸಮೃದ್ಧಿಯ ಕಲೆ, ಸಾಹಿತ್ಯ ಬೆಳೆಯಲು ಪರ್ಯಾಯವಾಗಿ ಕಾರಣವಾಯಿತು. ಈ ಸಮೃದ್ಧಿಯನ್ನು ಧಾರ್ಮಿಕ ಕಟ್ಟಡಗಳಲ್ಲೇ ಅಲ್ಲದೆ ವಸತಿಗೃಹ, ಸ್ನಾನದ ಗೃಹ, ಮಹಾನವಮಿ ದಿಬ್ಬ ಮುಂತಾದ ರಚನೆಗಳಲ್ಲಿ ಕಾಣಬಹುದಾಗಿದೆ.

ಪ್ರಸ್ತುತ ಈ ಸಂಪಾದನ ಕೃತಿಯಲ್ಲಿ ಮೂರು ಭಾಗಗಳಿವೆ. ಅವೆಂದರೆ ಕಲೆ, ಕ್ರೀಡೆ ಮತ್ತು ಕೌಶಲ. ಇವು ಒಂದು ಇನ್ನೊಂದಕ್ಕೆ ಪೂರಕವಾಗಿವೆ. ಇದು ಇದೇ ವರ್ಗಕ್ಕೆ ಬರುತ್ತದೆಂದು ಗೆರೆ ಎಳೆದು ಹೇಳುವುದು ಕಷ್ಟವೇ ಸರಿ. ಆದರೂ ಮೇಲ್ನೋಟಕ್ಕೆ ಕಾಣುವ ಸಂಗತಿಗಳನ್ನು ಗಮನದಲ್ಲಿರಿಸಿಕೊಂಡು ಪ್ರಬಂಧಗಳನ್ನು ಇಲ್ಲಿ ಸಂಗ್ರಹಿಸಿ ವಿಂಗಡಿಸಲಾಗಿದೆ. ಕಲೆ, ಕ್ರೀಡೆ ಮತ್ತು ಕೌಶಲದ ಬಗ್ಗೆ ಲೇಖನಗಳನ್ನು ಸಂಗ್ರಹಿಸುವಾಗ ಕೇವಲ ಕನ್ನಡ ಲೇಖನಗಳಿಗಷ್ಟೇ ನಮ್ಮ ಗಮನವನ್ನು ಕೇಂದ್ರೀಕರಿಸಿಕೊಂಡಿದ್ದೇವೆ. ಆಂಗ್ಲ ಭಾಷೆಯಲ್ಲಿ ಪ್ರಕಟವಾಗಿರುವ ಲೇಖನಗಳನ್ನು ಗಣನೆಗೆ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಸಾಮಾನ್ಯವಾಗಿ ಹಂಪಿಯನ್ನು ಕುರಿತು ಅಭ್ಯಾಸ ಮಾಡುವವರು ಧಾರ್ಮಿಕ ವಾಸ್ತುವಿನ ಅಭ್ಯಾಸಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಉಳಿದ ವಿವರಗಳ ಕಡೆಗೆ ಗಮನ ಹರಿಸುವುದು ಕಡಿಮೆ. ಆದ್ದರಿಂದ ಈ ಸಮಪುಟದಲ್ಲಿ ಹೆಚ್ಚಿಗೆ ವಿದ್ವಾಂಸರ ಗಮನ ಸೆಳೆಯದಿರುವ ಕಲೆ, ಕ್ರೀಡೆ, ಕೌಶಲದ ಕಡೆಗೆ ವಿಶೇಷ ಒತ್ತು ನೀಡಲಾಗಿದೆ. ಧಾರ್ಮಿಕ ರಚನೆಗಳು ಹಾಗೂ ಶಿಲ್ಪಗಳನ್ನು ಕಲಾ ವಿಭಾಗದಲ್ಲಾಗಲೀ, ಕೌಶಲದ ವಿಭಾಗದಲ್ಲಾಗಲೀ, ಕೌಶಲದ ವಿಭಾಗದಲ್ಲಾಗಲಿ ಸೇರಿಸಿರುವುದಿಲ್ಲ. ಈ ಕೃತಿಯನ್ನು ಸಂಪಾದಿಸಲು ದೊರೆತ ಕಾಲಮಿತಿ ಬಹು ಕಡಿಮೆಯಿದ್ದು, ಅದರಲ್ಲಿಯೇ ಈ ಸಂಗ್ರಹ ಸಾಧನಕಾರ್ಯವನ್ನು ಮಾಡಲಾಗಿದೆ. ಹೀಗಾಗಿ ಕೆಲವು ಸಂಬಂಧಿತ ಲೇಖನಗಳು ಇದರಲ್ಲಿ ಸೇರ್ಪಡೆಯಾಗದೆ ತಪ್ಪಿ ಹೋಗಿರುವ ಸಾಧ್ಯತೆಗಳಿವೆಯೆಂದು ನಮಗೆ ಗೊತ್ತು. ಈ ಸಂಗತಿಯನ್ನು ವಿನಮ್ರದಿಂದ ತಿಳಿಸಲಿಚ್ಛಿಸುತ್ತೇವೆ. ಹಾಗೆಯೇ ಸಂಶೋಧನಾತ್ಮಕ ಲೇಖನಗಳಿಗೇ ಇಲ್ಲಿ ಆದ್ಯತೆಯನ್ನು ನೀಡಲಾಗಿದೆ.

ಹಾಗೆಯೇ ಕ್ರೀಡಾ ವಿಭಾಗದಲ್ಲಿ, ಕ್ರೀಡೆಯೆಂದು  ಪರಿಗಣಿಸುವಾಗ ಪ್ರದರ್ಶನಾತ್ಮಕ ಜಾನಪದ ಕಲೆಗಳನ್ನು ಕ್ರೀಡೆಯೆಂದೆ ಪರಿಗಣಿಸಿ ಕ್ರೀಡಾ ವಿಭಾಗದಲ್ಲಿ ಸೇರಿಸಿಕೊಳ್ಳಲಾಗಿದೆ. ಕಲಾ ವಿಭಾಗದಲ್ಲಿ ಕಲೆಯ ಬಗ್ಗೆ ಹೇಳುವಾಗ ಪ್ರಾಗೈತಿಹಾಸಿಕ ರೇಖಾಚಿತ್ರದಿಂದ ಪ್ರಾರಂಭಿಸಿ ವಿಜಯನಗರ ಕಾಲದ ಭಿತ್ತಿಚಿತ್ರಗಳವರೆಗೆ ದೊರೆತ ಮಾಹಿತಿಯನ್ನು ಸ್ವೀಕರಿಸಲಾಗಿದೆ. ಕೌಶಲ ಭಾಗದಲ್ಲಿ ರಕ್ಷಣಾವಾಸ್ತು, ನೀರಾವರಿ, ನಗರ ರಚನೆ, ಸಾರಿಗೆ ವ್ಯವಸ್ಥೆ ಇವುಗಳಿಗೆ ಸಂಬಂಧಿಸಿದ ಲೇಖನಗಳಿಗೆ ವಿಶೇಷವಾಗಿ ಒತ್ತು ನೀಡಲಾಗಿದೆ.

ಈ ಮಹಾಸಂಪುಟವು ಈರೂಪಕ್ಕೆ ಬರಲು ಕಾರಣಕರ್ತರಾದ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಎ. ವಿವೇಕ ರೈ ಅವರು. ಇವರು ಕಾಲಕಾಲಕ್ಕೆ ಅಮೂಲ್ಯ ಸಲಹೆಗಳನ್ನು ಕೊಟ್ಟು, ಪ್ರಗತಿ ಪರಿಶೀಲಿಸಿ ಪ್ರೋತ್ಸಾಹಿಸಿದ್ದಾರೆ. ಇವರಿಗೆ ನನ್ನ ಕೃತಜ್ಞತೆಗಳು.

ಈ ಮಹಾಸಂಪುಟಕ್ಕಾಗಿ ಕರ್ನಾಟಕದ ಬೇರೆಬೇರೆ ಲೇಖಕರ ಅಮೂಲ್ಯ ಲೇಖನಗಳನ್ನು ಸೌಜನ್ಯಪೂರ್ವಕವಾಗಿ ಇಲ್ಲಿ ಬಳಸಿಕೊಳ್ಳಲಾಗಿದೆ. ಆ ಎಲ್ಲ ವಿದ್ವಾಂಸ ಮಹನೀಯರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಸಂಪುಟದಲ್ಲಿ ಬಳಸಿಕೊಳ್ಳಲಾಗಿರುವ ರೇಖಾಚಿತ್ರ ಮತ್ತು ನಕಾಶೆಗಳನ್ನು ಬೇರೆ ಬೇರೆ ಮೂಲಗಳಿಂದ ಬಳಸಿಕೊಳ್ಳಲಾಗಿದೆ. ಆ ಎಲ್ಲ ಸಂಸ್ಥೆಗಳಿಗೂ ಆಭಾರಿಯಾಗಿದ್ದೇನೆ. ಹಾಗೆಯೇ ನನ್ನೊಂದಿಗೆ ಲೇಖನಗಳನ್ನು ಆಯ್ಕೆ ಮಾಡುವುದರಿಂದ ಹಿಡಿದು, ಅವುಗಳನ್ನು ಪರಿಶೀಲಿಸಿ, ಅಕ್ಷರ ಸಂಯೋಜಿಸಿ, ಅವುಗಳ ಕರಡಚ್ಚನ್ನು ತಿದ್ದಿ ಸಹಕರಿಸಿದ ಡಾ. ಸಿ.ಎಸ್. ವಾಸುದೇವನ್, ಡಾ. ಎಂ. ಕೊಟ್ರೇಶ್, ಡಾ. ಎಸ್. ವೈ. ಸೋಮಶೇಖರ್ ಅವರಿಗೂ ವಂದನೆಗಳು.

ಛಾಯಾಚಿತ್ರಗಳನ್ನು ನೀಡಿದ ಡಾ. ಎಸ್.ವೈ. ಸೋಮಶೇಖರ್, ಶ್ರೀ ಗಣೇಶ ಯಾಜಿ ಅವರಿಗೂ, ಸಂಪುಟದ ಕೆಲವು ಲೇಖನಗಳ ಕರಡಚ್ಚನ್ನು ತಿದ್ದುವಲ್ಲಿ ಸಹಕರಿಸಿದ ಡಾ. ಶ್ರೀಧರರಾವ್ ಪಿಸ್ಸೆಯವರಿಗೂ ನನ್ನ ಕೃತಜ್ಞತೆಗಳು.

ನಮ್ಮ ಈ ಕಾರ್ಯಗಳಿಗೆ ನಾನಾ ರೀತಿಯ ಸಲಹೆ ಸೂಚನೆ ನೀಡಿ ಈ ಸಂಪುಟವು ಅಂದವಾಗಿ ಬರಲು ಕಾರಣರಾದ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರಿಗೂ ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರಿಗೂ ಗಣಕಕೇಂದ್ರದ ವೈ.ಎಂ. ಶರಣಬಸವ, ಜೆ. ಬಸವರಾಜ ಮತ್ತು ಜೆ. ಶಿವಕುಮಾರ ಅವರಿಗೂ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಸಂಪಾದಕರು