ಸುತ್ತಲೂ ಬಿತ್ತರದ ಹಾಳು ಬೀಳಿನ ಗೋಳು.
ಹೆಜ್ಜೆ ಹೆಜ್ಜೆಗು ಕಾಲಿಗುರುಳಾಗಿ ತಡೆಯುತಿದೆ
ನೂರು ನರಳಿನ ನೆರಳು ! ಅರೆವಿರಿದ ನೂರಾರು
ತೆರೆದ ತುಟಿ ಬಿರುಕಿನಲಿ ಹಳೆಯ ಬಾಳಿನ ಬೆಳಕು
ಜಿನುಗಲೆಳಸಿದೆ ಸೋತು ! ಮುರಿದ ಬಯಕೆಯ ನೂರು
ಕೊರಳೆತ್ತಿ ಮಲಗಿಹವು ಭಗ್ನಮಂದಿರ ಪಂಕ್ತಿ !
ಇದ್ದಿತೇ ಇಲ್ಲೊಂದು ಸಾಮ್ರಾಜ್ಯ ? ಹೊನ್ನ ಹುಡಿ
ತೂರಿತ್ತೆ ಈ ಕಲ್ಲು ಮಣ್ಣಿನೆಡೆ ? ರಾಜರೋ-
ಲಗ ಸಾಲೆ ನೆರೆಯುತಿತ್ತೇನು ಈ ದಿಬ್ಬದಲಿ ?
ಮಿಂದು ನಲಿದಾಡಿದರೆ ರಾಜರಾಣಿಯರಿಲ್ಲಿ
ಈ ಸ್ನಾನ ಮಂದಿರದಿ ? ಗಜ ತುರಗ ರಥಪಂಕ್ತಿ
ನಿಲುತಿತ್ತೇ ಇಲ್ಲಿ ? ಇತ್ತೆಂದರೂ ಕೂಡ
ನಂಬದಾಗಿದೆ ಮನಸು ! ಗಿಡಬಳ್ಳಿಗಳ ಸಂತೆ
ಸತ್ತಿಗೆಯನೆತ್ತಿಹವು ಉಪಚಾರಕೆಂಬಂತೆ !