ನಿಲ್ಲಿಲ್ಲಿ ಒಂದು ಚಣ ; ನಾಟ್ಯಮಂದಿರವಂತೆ
ಇಲ್ಲಿರುವ ಕಟ್ಟಡವು. ಬಾ ಒಳಗೆ, ತುಸು ನಿಲ್ಲು.
ಬಾವಲಿಗಳಾಡುತಿವೆ ಸ್ವಚ್ಛಂದ ಛಂದದಲಿ,
ನಡೆಯುತಿತ್ತೇ ಇಲ್ಲಿ ನೂರು ನರ್ತನಶೈಲಿ !

ತಂಬೂರಿದನಿ ತುಳುಕಿ ತುಂಬುತಿರೆ ಮೌನವನು
ಮಧುರ ಗಂಭೀರ ಮುರಜ ಧ್ವನಿಯ ಸಂಗಮದಿ
ಹರಿಯುತಿರೆ ವಿವಿಧವಾದ್ಯದ ಹೊನಲು, ಬಹುಕಲಾ
ಪರಿಣತಿಯ ಪಡೆದ ಲಲನಾಮಣಿಯ ಲಲಿತ ಲಾ-
ಸ್ಯದ ಲಯಕೆ ಮತ್ತೆ ನೂಪುರ ರವಕೆ ಪಡಿಗುಡುತ
ರೋಮಾಂಚನವ ತಾಳಿದೀ ಮಂದಿರವು, ಇಂದು
ಅಂದಿನನುಭವದ ಸವಿನೆನಪುಗಳ ಹಿಡಿದ ಸಂ-
ಪುಟದಂತೆ ತೋರುತಿದೆ ಮೌನಭಾರದಿ ಹೂತು.
ಈ ಹಾಳು ಹಂಪೆಯಲಿ ನಡೆಯುತಿರೆ ಸಂಚಾರಿ
ಒಂದೊಂದು ಮಂದಿರವು ಸವಿನೆನಪುಗಳ ಗೋರಿ !