ಓ ಇವನೆ ಉಗ್ರನರಸಿಂಹ ! ಕಂಬವನ್ನೊಡೆದು
ಭಕ್ತನನ್ನುದ್ಧರಿಸೆ ಮೂಡಿ ಬಂದವನಿಂದು
ಭಗ್ನನಾಗಿಹನಿಲ್ಲಿ. ಬದಿಯಲೇ ಕುಳಿತಿಹುದು
ಎತ್ತರದ ಶಿವಲಿಂಗ. ಹೆಸರಿಗೆ ಇವನು ಸಾಸಿವೆ
ಕಾಳು ಕಣಪ ; ಗಾತ್ರದಲೊ ಗಜಭೀಮ. ಜೈನರ
ಬಸದಿ ನೋಂಪಿಗೊಂಡಿಹವಿಲ್ಲಿ. ವಿಜಯವಿಠ್ಠಲ
ದೇವನಾಲಯವಿದಿಗೊ ಕಲೆಯ ಕನಸಿನ ತೇರು !
ಹಜಾರ ರಾಮನ ಗುಡಿ ಮೌನ ನೀರವ ಮಗ್ನ.
ಉದ್ದಂಡ ವೀರಭದ್ರನು ಕೂಡ ಮಂಕಾಗಿ
ನೋಡುವನು. ಎನಿತು ಚೆಲುವಿನ ಕಲೆಯ ಕೊರಳು ಮುರಿ-
ದಿಹುದಿಲ್ಲಿ ನರರ ಸಮರಕೆ ಸಂದು ! ಒಂದೊಂದು
ಮುರುಕುಗಳು ಕಲೆ ಸುರಿದ ಕಣ್ಣೀರುಗಳ ಬಿಂದು.
ಕಲೆಯನುಳಿಸದ ಮತ್ತೆ ಬೆಳೆಸದ ಬಾಳು ಬಾಳೆ ?
ಮನುಜ ಪಶುವಾದಾಗ ಪಶುವಿಗಿಂತಲು ಕೀಳೆ !