(ಕ್ರಿ. ಶ. ೧೭೭೮-೧೮೨೯) (ಡೇವೀ ರಕ್ಷಕ ದೀಪ)

ಗಣಿ ಕೆಲಸಗಾರರಿಗೆ ಪ್ರಾತಃ ಸ್ಮರಣೀಯನಾದ ಸರ್ ಹಂಫ್ರಿ ಡೇವಿ ೧೭೮೮ರಲ್ಲಿ ಜನಿಸಿದರು. ಆತನ ವಿದ್ಯಾರ್ಥಿ ಜೀವನವೇನೂ ಅಷ್ಟು ಅಸಾಧಾರಣವಾದದ್ದಾಗಿರಲಿಲ್ಲ. ಆತ ಮೊದಲು ಔಷಧ ವೈದ್ಯರೊಬ್ಬರ ಬಳಿ ಅಪ್ರೆಂಟೀಸ್ ಆಗಿ ವೃತ್ತಿ ಬದುಕನ್ನು ಆರಂಭಿಸಿದರು.

ಆದರೆ ತರುವಾಯದ ಆತನ ಬದುಕು ಅನೇಕ ಸಾಧನೆಗಳಿಂದ ಕೂಡಿದ್ದಾಗಿದೆ. ರಸಾಯನ ಶಾಸ್ತ್ರದಲ್ಲಿ ವಿಶೇಷ ಜ್ಞಾನ ಸಂಪಾದಿಸಿ ಆತ ಖ್ಯಾತ ರಸಾಯನಶಾಸ್ತ್ರಜ್ಞರಾದರು. ಮುಂದೆ ಲಂಡನಿನ ರಾಯಲ್ ಇನ್ ಸ್ಟಿಟ್ಯೂಟಿನಲ್ಲಿ ಉದ್ಯೋಗ ಪಡೆದರು. ವಿದ್ಯುತ್-ರಸಾಯನ ಶಾಸ್ತ್ರದಲ್ಲಿ ಸಂಶೋಧನೆಗಳನ್ನು ಮಾಡಿ ವಿಜ್ಞಾನ ಅಕಾಡೆಮಿಯ ಪುರಸ್ಕಾರ ಪಡೆದರು. ೧೮೦೬ರಲ್ಲಿ ಕ್ಲೋರೀನ್ ಅನಿಲದ ಗುಣಧರ್ಮಗಳನ್ನು ಕಂಡು ಹಿಡಿದರು. ಅವರು ಫ್ರಾನ್ಸ್ ದೇಶದಲ್ಲಿ ಪ್ರವಾಸ ಮಾಡಿ ಅಲ್ಲಿನ ಅನೇಕ ವಿಜ್ಞಾನಿಗಳ ಜತೆ ಭೇಟಿಯಾದರು, ರಸಾಯನಶಾಸ್ತ್ರದ ಬಗ್ಗೆ ಅವರೊಡನೆ ಚರ್ಚೆ ಮಾಡಿದರು. ೧೮೧೫ರಲ್ಲಿ ಇಂಗ್ಲೆಂಡಿಗೆ ವಾಪಸಾದರು.

ಆಗಾಗ್ಗೆ ಗಣಿಗಳಲ್ಲಿ ದೀಪಗಳಿಗೆ ಸಿಡಿವಾಯುಗಳ ಸಂಪರ್ಕ ಉಂಟಾಗಿ ದುರಂತಗಳು ಸಂಭವಿಸುತ್ತಿದ್ದುದನ್ನು ಗಮನಿಸಿದ ಆತ ಗಣಿ ಕೆಲಸಗಾರರ ಸುರಕ್ಷಿತತೆಗಾಗಿ ವಿಶೇಷವಾದ ಸುರಕ್ಷಿತ ದೀಪವನ್ನು ತಯಾರು ಮಾಡಲು ಶ್ರಮಿಸತೊಡಗಿದರು. ತನ್ನ ಪರಿಶ್ರಮದ ಫಲವಾಗಿ ಆತ ಮಿಥೇನ್ ಮತ್ತು ಸಿಡಿವಾಯುಗಳ ಮಿಶ್ರಣದ ವಿರುದ್ಧ ಗಣಿ ಕೆಲಸಗಾರರಿಗೆ ಸಂರಕ್ಷಣೆ ಒದಗಿಸಬಲ್ಲಂಥ ಸುರಕ್ಷಿತ ದೀಪವೊಂದನ್ನು ತಯಾರಿಸಿದರು. ಈ ದೀಪವನ್ನು “ಡೇವೀ ರಕ್ಷಕ ದೀಪ” (ಡೇವಿ ಸೇಫ್ಟಿ ಲ್ಯಾಂಪ್) ಎಂದೇ ಕರೆಯಲಾಗುತ್ತದೆ. ಈ ದೀಪದ ಬಳಕೆ ಗಣಿಗಳಲ್ಲಿ ಸಂಭವಿಸುವ ಭೂಗರ್ಭ ದುರಂತಗಳ ಸಾಧ್ಯತೆಯನ್ನು ಗಣನೀಯವಾಗಿ ತಗ್ಗಿಸಿತು.

ಸರ್ ಹಂಫ್ರಿ ಡೇವಿ ೧೮೨೯ರಲ್ಲಿ ನಿಧನ ಹೊಂದಿದರು.