ನೀರಿನ ಭಾರಕೆ ಜೋಲುವ ಮೋಡಕೆ
ನೆಲಕಿಳಿಯುವ ತವಕ,
ಮುಗಿಲಿನಪ್ಪುಗೆಗೆ ಮಣ್ಣ ಮೈ ತುಂಬ
ಅಪೂರ್ವ ಸಂಭ್ರಮ – ಪುಲಕ.

ಗಿಡಗಿಡದೊಡಲಿನ ಹೂವಿನ ಕಂಪಿಗೆ
ಗರಿಬಿಚ್ಚುವ ತವಕ,
ಭೃಂಗಮಾರ್ಗದಲಿ ಟೊಂಗೆ ಟೊಂಗೆಯಲಿ
ಜೇನಾಗುವ ತನಕ.

ಬಿಸಿಲ ಹಿಡಿದು ಮೇಲೇರಿದ ಕಡಲಿಗೆ
ಬಾನಲೆಯುವ ತವಕ,
ಗಾಳಿಯ ಜತೆಯೊಳು ಮಳೆಯಾಗಿಳಿಯುತ
ಹೊಳೆಯಾಗುವ ತನಕ.
ಮನದ ಮೌನದಲಿ ತೊಳಲುವ ಭಾವಕೆ
ಹಾಡಾಗುವ ತವಕ,
ಸಮಾನ ಹೃದಯದ ಸಮ್ಮೇಳನದಲಿ
ರಸವಾಗುವ ತನಕ.