ನಾನೂ ನಿನ್ನ ದೊಡ್ಡಿಗೆ ಸೇರಿ
ನನ್ನ ಮೈಮೇಲೆ ಬೆಳೆದ ತುಪ್ಪಟವನ್ನೊಪ್ಪಿಸುತ್ತಾ
ಬ್ಯಾ ಬ್ಯಾ ಎಂದು ಅರಚಲೆ !

ಅಥವಾ ನಿನ್ನ ಚೌಡಿಯ ಗುಡಿಗೆ ಹರಕೆ ಹೊತ್ತು
ಬಂಡಾರ ಬಳಿದು, ಬೇವಿನ ಸೊಪ್ಪು ಉಟ್ಟು
ಬಾಯಿ-ಬೀಗದ ಹರಕೆ ಸಲ್ಲಿಸುತ ಕುಣಿಯಲೆ ?

ಅಥವಾ ನಿನ್ನ ಬೆಟ್ಟಕ್ಕೆ ಕಾಣಿಕೆ ಕಟ್ಟಿ
ನಿನ್ನ ಮಹಾದ್ವಾರದೆದುರು ಮಂಡೆಯೊಪ್ಪಿಸಿ
ದಿಂಡುರುಳು ಬೀಳಲೆ?

ಎಂತೆಂಥ ಹೊಳಪುಳ್ಳ ಕನ್ನಡಿಗಳೇ ಈಗ
ಹೊಗೆ ಹಿಡಿದು ಬಿದ್ದಿವೆಯಲ್ಲೊ ನಿನ್ನ ಬಚ್ಚಲು ಮನೆಯ
ರೊಚ್ಚೆಯಲ್ಲಿ !

ಲೊಚಗುಟ್ಟಿಕೊಂಡರೇನಂತೆ ಬಿಡು, ನಿನಗೇನು
ಎಲ್ಲೋ ಯಾವುದೋ ಜಂತೆಯಲಿ
ನಾಲ್ಕು ನರಸತ್ತ ಹಲ್ಲಿ.