ನಮ್ಮ ದೇಶದಲ್ಲಿ ಹೂವುಗಳ ಸಂಖ್ಯೆಯೇನೂ ಕಮ್ಮಿ ಇಲ್ಲ. ದೇವಲೋಕದ ‘ಪಾರಿಜಾತ’ವೇ ನಮ್ಮದು. ದೇವ ಕಣಿಗಲೆ, ಬಕುಳ ಪುಷ್ಪ, ಬೆಟ್ಟದ ತಾವರೆ, ಗಿರಿಕರ್ಣಿಕೆ ಹೀಗೆ ಹತ್ತು ಹಲವಾರು ಹೂವುಗಳು ನಮ್ಮಲ್ಲೇ ಬೆಳೆಯುತ್ತಿವೆ. ಆದರೂ ಬೇರೆಲ್ಲಾದರೂ ಒಂದು ಸುಂದರ ಹೂವು ಕಂಡಾಗ ಅದು ನಮ್ಮಲ್ಲಿಲ್ಲವಲ್ಲಾ? ಅನ್ನಿಸದೆ ಇರದು.

ಹಾಗೆ ಬೇರೆ ಬೇರೆ ದೇಶಗಳಿಂದ ಹಲವಾರು ಹೂಗಳು ನಮ್ಮಲ್ಲಿಗೆ ಬಂದು ನೆಲಸಿವೆ. ಜರಬೆರ, ಕಾರೋನೇಶನ್, ಟ್ಯುಲಿಪ್, ಇವೆಲ್ಲ ಹಳೆಯದಾದವು. ಈಗ ಮನೆ ಮನೆಗೆ ಲಗ್ಗೆ ಇಡುತ್ತಿರುವ ಹೂವು ಆಫ್ರಿಕ ಮೂಲದ್ದು. ಹೆಸರಿಗೆ ಹೂವಿನ ಗಿಡವಾದರೂ ಹೂವು ನೋಡಲು ಥೇಟ್ ಹಕ್ಕಿಯ ಹಾಗೇ. ಕ್ರೇನ್ ಫ್ಲವರ್ ಎಂಬ ಇನ್ನೊಂದು ಹೆಸರು ಈ ಹೂವಿಗೆ. ಎರೆಡು ಮೀಟರ್ ಎತ್ತರಕ್ಕೆ ಬೆಳೆಯುವ ಗಿಡ. ೧೦ರಿಂದ ೨೮” ಉದ್ದದ ಎಲೆಗಳು. ಸದಾ ಹಸಿರಾಗಿರುವ ಎಲೆಗಳು ಉದ್ದ ದೇಟಿನ ತುದಿಯಲ್ಲಿ ಅರಳುವ ಸುಂದರ ಹೂವು, ಮೂರು ಕಿತ್ತಳೆ ಬಣ್ಣದ ದಳಗಳು. ಒಂದಕ್ಕೊಂದು ಅಂಟಿಕೊಂಡಿರುವ,  ಬಾಣದಂತೆ ಚೂಪಾಗಿರುವ, ತುದಿಯ ನೇರಳೆ ಬಣ್ಣದ ದಳ. ಒಟ್ಟು ಆಕಾರ, ಹಾರುತ್ತಿರುವ ಪಕ್ಷಿಯ ಹಾಗೆ. ಹಾಗಾಗಿ ಇದಕ್ಕೆ ಸ್ವರ್ಗ ಲೋಕದ ಪಕ್ಷಿ, ‘ಬರ್ಡ್ ಆಫ್ ಪ್ಯಾರಡೈಸ್’ ಎಂಬ ಹೆಸರು.

ನೀರು ಬಸಿದು ಹೋಗುವ ಮಣ್ಣು ಈ ಗಿಡಕ್ಕೆ ಸೂಕ್ತ. ಬಹು ಬೇಗ ಹರಢುವ ಗುಣ. ಹೆಚ್ಚು ಬೆಳಕು, ಬಿಸಿಲು ಅಗತ್ಯ. ಛಳಿಗಾಲದಲ್ಲಿ ಬಿಸಿಲಿರುವೆಡೆಗೆ ವರ್ಗಾಯಿಸ ಬೇಕು. ಮಂಜು ಬೀಳುವಾಗ ಬೆಳವಣಿಗೆ ಕುಂಠಿತವಾಗುತ್ತೆ. ಒಣಗಿದ ಎಲೆಗಳು, ಬಾಡಿದ ಹೂ ಆಗಿಂದ್ದಾಗ್ಯೆ ಕತ್ತರಿಸುತ್ತಿದ್ದರೆ ಗಿಡ ನೋಡಲು ಸುಂದರವಾಗಿರುತ್ತೆ. ದೊಡ್ಡದಾಗಿ ಬೆಳೆದ ಗಿಡದ ಬುಡದ ಹತ್ತಿರ ಬೇರುಗಳನ್ನು ವಿಂಗಡಿಸಿ ಸಸ್ಯಾಭಿವೃದ್ಧಿ ಮಾಡ ಬಹುದು. ಆದರೆ ಈ ವಿಂಗಡಣೆ ಕಷ್ಟಸಾಧ್ಯ. ಗಿಡ ನೆಡುವಾಗ ತುಂಬ ಆಳದಲ್ಲಿ ನೆಡುವುದು ಬೇಡ.  ಬುಡದಲ್ಲಿ ಮುಚ್ಚಿಗೆ ಮಾಡುವುದರಿಂದ ಗಿಡಕ್ಕೆ ತೇವಾಂಶ ದೊರೆಯುತ್ತೆ.

ಅಕ್ಟೋಬರ್, ನವೆಂಬರ್ ತಿಂಗಳುಗಳಲ್ಲಿ ಸಸ್ಯವಿಂಗಡಣೆ ಮಾಡಿ, ನಂತರದ ದಿನಗಳಲ್ಲಿ ಗೊಬ್ಬರ ಕೊಡಬಹುದು. ದಪ್ಪ ಎಲೆಗಳಾದ್ದರಿಂದ ಆಗಿಂದ್ಧಾಗ್ಗೆ ಒರೆಸುತ್ತಿದ್ದರೆ ಅಥವ ನೀರು ಚುಮುಕಿಸುತ್ತಿದ್ದರೆ ಗಿಡ ಆರೋಗ್ಯವಾಗಿರುತ್ತದೆ. ಬೇಸಿಗೆಯಲ್ಲಿ ಹೂವು ಹೆಚ್ಚಿಗೆ ಬಿಡುವುದರಿಂದ ಗೊಬ್ಬರದ ಆವಶ್ಯಕತೆ ಜಾಸ್ತಿ ಕುಂಡಗಳಲ್ಲಿ ಬಹಳ ಚೆನ್ನಾಗಿ ಬೆಳೆಯುತ್ತದೆ. ಗಿಡ ಸುದೃಢವಾಗಿ ಬೆಳೆಯುವುದರಿಂದ ಸಾಕಷ್ಟು ದೊಡ್ಡ ಕುಂಡ ಬಳಸುವುದು ಸೂಕ್ತ.   ಮೇಲಿಂದ ಮೇಲೆ ಕುಂಡ ಬದಲಾಯಿಸುವ ಆವಶ್ಯಕತೆ ಇಲ್ಲ. (ರೀ ಪಾಟಿಂಗ್). ೩ಅಡಿ ಎತ್ತರ ಬೆಳೆಯುವವರೆಗೆ ಮೇಲಿನ ೩’ ಮಣ್ಣು ತೆಗೆದು ಹೊಸ ಮಣ್ಣು ಹಾಕಿದರೆ ಸಾಕು. ಹೆಚ್ಚಿನ ರೋಗ ರುಜಿನಗಳಿಲ್ಲದ, ಹೆಚ್ಚಿನ ಆರೈಕೆ ಬೇಡದ ಗಿಡ.

ಹಾರುವ ಹಕ್ಕಿಯನ್ನು ಹೋಲುವ ಈ ಹೂವಿನ ಅಲಂಕಾರ ಮದುವೆಯ ಮನೆಗಳಲ್ಲಿ ಜಾಸ್ತಿ. ಮಂಟಪದ ಹಿಂದಿನ ಪರದೆಯ ಮೇಲೆ ಅಲ್ಲಲ್ಲಿ ಈ ಹೂವನ್ನು ಅಂಟಿಸಿ, ಅಲ್ಲೊಂದು ‘ದೃಶ್ಯ ಕಾವ್ಯ’ ವನ್ನೇ ಸೃಷ್ಟಿ ಮಾಡಿಬಿಡುತ್ತಾರೆ. ಈಹೂವಿಗೆ ಬೇಡಿಕೆ ಹೆಚ್ಚಾದಷ್ಟೂ, ಬೆಲೆ ಸಹ ಹೆಚ್ಚುತ್ತ ಹೋಗುತ್ತದೆ.  ಈ ಸಂಭ್ರಮ ಎಲ್ಲರ ಪಾಲಿಗೂ ದೊರಕ ಬೇಕಾದರೆ ಈ ಗಿಡ ನಾವೇ ಬೆಳೆದು ಕೊಳ್ಳ ಬೇಕು. ಸ್ವಲ್ಪ ಬೆಲೆ ಜಾಸ್ತಿಯಾದರೂ ಚಿಂತೆ ಇಲ್ಲ ಎಂದು ಒಂದು ಗಿಡ ನರ್ಸರಿಯಿಂದ ತಂದರೆ ವರ್ಷದೊಳಗೆ ಈ ಹೂವು ನಮ್ಮದಾದೀತು. ಸ್ವಲ್ಪ ಸಹನೆ ಬೆಳೆಸಿಕೊಂಡರೆ ಅದೇ ನಾಲ್ಕಾರು ಗಿಡವಾದೀತು.

ಕೊನೆಹನಿ: ಗಿಡವೊಂದಕ್ಕೆ ನರ್ಸರಿಗಳಲ್ಲಿ ೭೫ರಿಂದ ೧೫೦ ರೂ ಧಾರಣೆ ಇದೆ. ಹಿತ್ತಿಲಲ್ಲಿ ಬೆಳೆಸಿದ ಗಿಡಗಳ ಸಸಿಗಳನ್ನು ಮಾರಾಟ ಮಾಡುವುದರಿಂದ ಆದಾಯಕ್ಕೊಂದು ದಾರಿ ಮಾಡಿ ಕೊಳ್ಳ ಬಹುದು. ಹೂವಿನ ಮಾರಾಟ ಸಹ ಒಳ್ಳೆಯ ಆದಾಯಕ್ಕೆ ದಾರಿ.  ಹಿತ್ತಿಲಿದ್ದವರು ಈ ಬಗ್ಗೆ ಯೋಚಿಸಿ. ಹತ್ತಾರು ಗಿಡಗಳನ್ನು ಬೆಳೆಸಿಕೊಳ್ಳಿ. ಗಿಡ ಬೆಳೆಸುವದರಲ್ಲಿರುವ ಸುಖ, ಅದು ಆದಾಯದ ಮೂಲವಾದಾಗ ಮತ್ತಷ್ಟು ಹೆಚ್ಚಾಗ ಬಹುದು.

ಚಿತ್ರಗಳು : ಎಆರ್ಎಸ್ ಶರ್ಮ