ಈ ಕೃತಿಯ ಸಿದ್ಧತೆಯಲ್ಲಿ ಅನೇಕರು ನೆರವು ನೀಡಿದ್ದಾರೆ. ಕೆಲವರು ಪರೋಕ್ಷವಾಗಿ ಕಾರಣಕರ್ತರಾಗಿದ್ದಾರೆ. ಮೊದಲನೆಯದಾಗಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ವಾತಾವರಣವಿದೆ. ಅದಿಲ್ಲದಿದ್ದರೆ ನನಗೆ ಇದನ್ನು ಸಿದ್ಧಪಡಿಸುವುದು ಸಾಧ್ಯವಾಗುತ್ತಿರಲಿಲ್ಲ. ಅದಕ್ಕೆ ವಿವಿಗೆ ನಾನು ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಎರಡನೆಯದಾಗಿ ನನ್ನ ವಿಭಾಗದ ಸಹೋದ್ಯೋಗಿಗಳು ನೇರವಾಗಿಯಲ್ಲದಿದ್ದರೂ ಕಮ್ಮಟಗಳಲ್ಲಿ, ವಿಭಾಗದ ಸಭೆಗಳಲ್ಲಿ, ಅನೌಪಚಾರಿಕವಾಗಿ ಒಟ್ಟಿಗೆ ಕೂಡಿದಾಗ ಚರ್ಚೆ ಮಾಡುವುದರ ಮೂಲಕ ನನ್ನ ತಿಳುವಳಿಕೆ ವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ. ಅದರಿಂದ ನಾನು ಅನೇಕ ಪಾಠ ಕಲಿತ್ತಿದ್ದೇನೆ. ಅವರೆಲ್ಲರಿಗೂ ನನ್ನ ನಮನಗಳನ್ನು ಅರ್ಪಿಸುತ್ತೇನೆ. ಮೂರನೆಯದಾಗಿ ನನ್ನ ಸಹೋದ್ಯೋಗಿಯೂ ಮತ್ತು ಪಿಎಚ್.ಡಿ. ವಿದ್ಯಾರ್ಥಿಯೂ ಆದ ಶ್ರೀ ಜನಾರ್ಧನ ಅವರು ಬೇರೆ ಬೇರೆ ರೀತಿಯಲ್ಲಿ ಇಲ್ಲಿನ ಪ್ರಬಂಧಗಳ ಸಿದ್ಧತೆಯಲ್ಲಿ ಕಾಣಿಕೆ ನೀಡಿದ್ದಾರೆ. ನನಗೆ ಅಗತ್ಯವಾದ ಮಾಹಿತಿಯನ್ನು ಕಲೆಹಾಕಿ ಕೊಟ್ಟಿದ್ದಾರೆ. ಅವರಿಗೆ ನಾನು ಋಣಿಯಾಗಿದ್ದೇನೆ. ನಾಲ್ಕನೆಯದಾಗಿ ಇಲ್ಲಿನ ಪ್ರಬಂಧಗಳು ಬೇರೆ ಬೇರೆ ಸಂದರ್ಭಗಳಲ್ಲಿ ವಿಭಾಗದ ಯೋಜನೆಗಳಿಗಾಗಿ, ವಿಚಾರ ಸಂಕಿರಣಗಳಿಗಾಗಿ, ಕಮ್ಮಟಗಳಿಗಾಗಿ, ನಿಯತ ಕಾಲಿಕೆಗಳಿಗಾಗಿ ಬರೆಯಲಾಗಿದೆ. ಆದರೆ ಅವು ಮುಂದೆ ಅನೇಕ ತಿದ್ದುಪಡಿಗೆ, ಪರಿಷ್ಕಾರಕ್ಕೆ ಒಳಗಾಗಿವೆ. ಈ ರೀತಿಯಲ್ಲಿ ಅಧ್ಯಯನ ಕೈಗೊಳ್ಳಲು ಅನುವು ಮಾಡಿಕೊಟ್ಟ ನಮ್ಮ ವಿಶ್ವವಿದ್ಯಾಲಯಕ್ಕೆ, ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿನ ವಿದ್ವಾಂಸರಿಗೆ, ನಿಯತಕಾಲಿಕೆಗಳ ಸಂಪಾದಕರಿಗೆ, ಸಂಶೋಧನಾ ಸಂಸ್ಥೆಗಳಿಗೆ ನನ್ನ ನಮನಗಳು.

ಐದನೆಯದಾಗಿ ನನ್ನ ಕೃತಿಗಳಿಗೆ ಅಗತ್ಯವಾದ ಮೌಲ್ಯಮಾಪನ ವರದಿಗಳನ್ನು ಸಮಯಕ್ಕೆ ಸರಿಯಾಗಿ ನೀಡಿದ ಮೌಲ್ಯಮಾಪಕ ವಿದ್ವಾಂಸರಿಗೆ ನನ್ನ ವಂದನೆಗಳು ಸಲ್ಲಬೇಕು. ಈ ಕೃತಿಯನ್ನು ಅಂದವಾಗಿ ಮುದ್ರಿಸಿ ಪ್ರಕಟಿಸುತ್ತಿರುವ ನಮ್ಮ ಪ್ರಸಾರಾಂಗದ ನಿರ್ದೇಶಕರಿಗೆ, ಪುಸ್ತಕ ವಿನ್ಯಾಸ ಮಾಡಿಕೊಟ್ಟ ಸುಜ್ಞಾನಮೂರ್ತಿ ಅವರಿಗೆ, ಮುಖಪುಟ ಮಾಡಿಕೊಟ್ಟ ಕಲಾವಿದ ಕೆ.ಕೆ. ಮಕಾಳಿ ಅವರಿಗೆ, ಅಕ್ಷರ ಜೋಡಣೆ ಮಾಡಿಕೊಟ್ಟ ಶ್ರೀಮತಿ ಎ. ನಾಗವೇಣಿ, ಪುಟವಿನ್ಯಾಸ ಮಾಡಿಕೊಟ್ಟ ಶ್ರೀ ಜೆ. ಶಿವಕುಮಾರ್ ಅವರಿಗೆಲ್ಲ ನಾನು ಆಭಾರಿಯಾಗಿದ್ದೇನೆ.

ನನ್ನ ಅಧ್ಯಯನ ಕಾರ್ಯದ ಹಿಂದೆ ಸದಾ ಶಕ್ತಿಯಾಗಿ ನಿಂತು ಪ್ರೋತ್ಸಾಹ ಮತ್ತು ಪ್ರಶಂಸೆ ನೀಡುತ್ತಿರುವ ಮಾನ್ಯ ಕುಲಪತಿ ಅವರಿಗೆ ಮತ್ತು ಮಾನ್ಯ ಕುಲಸಚಿವರಿಗೆ ನಾನು ನನ್ನ ನಮನಗಳನ್ನು ಸಲ್ಲಿಸುತ್ತೇನೆ.

ಟಿ.ಆರ್. ಚಂದ್ರಶೇಖರ
ಸಂಕ್ರಾಂತಿ
ವಿದ್ಯಾರಣ್ಯ