ಅಭಿವೃದ್ಧಿ ಅಧ್ಯಯನ ಪ್ರಬಂಧಗಳ ಪ್ರಸ್ತುತ ಸಂಕಲನ ‘ಹಕ್ಕು ಮತ್ತು ಹಂಗು’ ನಲ್ಲಿ ಒಟ್ಟು ಹತ್ತು ಪ್ರಬಂಧಗಳಿವೆ. ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಸೈದ್ಧಾಂತಿಕ ಸಂಗತಿಗಳನ್ನು ಇಲ್ಲಿ ಚರ್ಚೆ ಮಾಡಲಾಗಿದೆ. ಈ ಕೃತಿಯ ಶೀರ್ಷಿಕೆ ಬಗ್ಗೆ ಎರಡು ಮಾತುಗಳನ್ನು ಇಲ್ಲಿಯೇ ಹೇಳಿಬಿಡಬಹುದೆಂದು ಕಾಣುತ್ತದೆ. ಇಲ್ಲಿನ ಎಲ್ಲ ಪ್ರಬಂಧಗಳ ಹಿಂದಿರುವ ಸೈದ್ಧಾಂತಿಕ ಚೌಕಟ್ಟನ್ನು ಅದು ನಿರ್ದೇಶಿಸುತ್ತದೆ. ನಮ್ಮ ಸಮಾಜದ ಸಂದರ್ಭದಲ್ಲಿ ಹಕ್ಕಿನ ಪರಿಭಾಷೆಗಿಂತ ಹಂಗಿನ ಪರಿಭಾಷೆಗೆ ಹೆಚ್ಚಿನ ಮನ್ನಣೆಯಿದೆ. ಇದಕ್ಕೆ ಅನೇಕ ಸಾಮಾಜಿಕ, ಆರ್ಥಿಕ, ರಾಜಕೀಯ, ಚಾರಿತ್ರಿಕ ಕಾರಣಗಳಿರಬಹುದು. ಆದರೆ ಇದಕ್ಕೆ ಕಾರಣವಾಗಿರುವ ಬಹು ಮುಖ್ಯ ಸಂಗತಿಯೆಂದರೆ ನಮ್ಮ ಪರಂಪರೆ. ಪರಂಪರೆಯು ಕೇವಲ ಅನುಕರಣೀಯ ಮತ್ತು ಉನ್ನತವಾದ ಸಂಗತಿಗಳನ್ನು ಮಾತ್ರ ಒಳಗೊಂಡಿಲ್ಲ. ಅದರಲ್ಲಿ ಅನೇಕ ಅನಿಷ್ಟಕಾರಿ ಮತ್ತು ಅಪಾಯಕಾರಿಯಾದ ಆಚರಣೆಗಳೂ ಇರಲು ಸಾಧ್ಯ. ಅಂತಹ ಒಂದು ಅನಿಷ್ಟಕಾರಿ ಸಂಗತಿಯೆಂದರೆ ಹಂಗಿನ ಸಂಸ್ಕೃತಿ, ದಾನ, ದಕ್ಷಿಣೆ, ದತ್ತಿ, ಉಂಬಳಿ ಮುಂತಾದವುಗಳನ್ನು ನಮ್ಮ ಸಮಾಜದಲ್ಲಿ ವೈಭವೀಕರಿಸಿಕೊಂಡು ಬರಲಾಗಿದೆ. ಅಭಿವೃದ್ಧಿಯೆನ್ನುವುದನ್ನು ಹಂಗಿನ ಸಂಗತಿಯನ್ನಾಗಿ ಪರಿಭಾವಿಸಿಕೊಂಡಿರುವುದಕ್ಕೆ ನಮಗೆ ಪುರಾವೆಗಳು ದೊರೆಯುತ್ತವೆ. ಮಹಿಳೆಯರ ಅಭಿವೃದ್ಧಿ ಕಾರ್ಯಕ್ರಮವೆಂದು ಹೇಳಿಕೊಂಡು ಅವರಿಗೆ ಉಚಿತವಾಗಿ ಸೀರೆ ಕೊಡುವ ಸರ್ಕಾರದ ಕ್ರಮವನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಉಚಿತ ವೈದ್ಯಕೀಯ ಶಿಬಿರವೆಂದು ಹೇಳಿಕೊಂಡು ಸರ್ಕಾರದ ಕಾರ್ಯಕ್ರಮವನ್ನು ದತ್ತಿ – ಧರ್ಮದ ಕಾರ್ಯಕ್ರಮವನ್ನಾಗಿ, ಸ್ವಂತದ ಕಾರ್ಯಕ್ರಮಗಳನ್ನಾಗಿ ಎತ್ತಾಕಿಕೊಳ್ಳುವ ಜನಪ್ರತಿನಿಧಿಗಳ ಕ್ರಮಗಳನ್ನು ಹೇಗೆ ಅರ್ಥಮಾಡಿಕೊಳ್ಳುವುದು? ಮಳೆಯು ಅಭಾವವಾದಾಗ, ಅದು ಕಾಲಕ್ಕೆ ಸರಿಯಾಗಿ ಬಾರದಿದ್ದಾಗ ಗುಡಿ – ಗುಂಡಾರಗಳಲ್ಲಿ ಸರ್ಕಾರವು ಪೂಜೆ – ಆರಾಧನೆ – ಅಭಿಷೇಕ ಮಾಡಿಸಿದರೆ ಅದನ್ನು ಹೇಗೆ ವಿವರಿಸುವುದು? ದೇವಾಲಯಗಳಿಗೆ ಭೇಟಿಕೊಡುವುದು, ಯಜ್ಞ – ಯಾಗ, ಹೋಮ – ಹವನ ಮಾಡುವುದೇ ಸರ್ಕಾರದ ಮುಂದಾಳುಗಳಿಗೆ ಕೆಲಸವಾಗಿ ಬಿಟ್ಟರೆ ಆಡಳಿತ – ಅಭಿವೃದ್ಧಿಯ ಕಥೆಯೇನು? ಅದು ಯಾವ ಬಗೆಯ ಸಂದೇಶವನ್ನು ಜನತೆಗೆ ನೀಡುತ್ತದೆ ಎಂಬುದರ ಬಗ್ಗೆ ನಾವು ಯೋಚಿಸಬೇಕಲ್ಲವೆ? ವೈಯಕ್ತಿಕ ನಂಬಿಕೆಗಳು ಬೇರೆ. ಸಾರ್ವಜನಿಕ ಜವಾಬುದಾರಿಯ ನಿರ್ವಹಣೆ ಬೇರೆ. ವಾಸ್ತವವಾಗಿ ಮಹಿಳೆಯರ ಅಭಿವೃದ್ಧಿಗೆ ಸಂಬಂಧಿಸಿದಂತೆ ‘ಕಲ್ಯಾಣವಾದಿ’ ದೃಷ್ಟಿಕೋನವನ್ನು ಬಿಟ್ಟು ಅನೇಕ ದಶಕಗಳೇ ಆಗಿವೆ. ಆದರೂ ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ಅಂತಹ ನೆಲೆಯಲ್ಲಿ ಅಭಿವೃದ್ಧಿಯನ್ನು ನಿರ್ವಹಿಸಲು ಉತ್ಸುಕರಾಗಿರುವುದು ಕಂಡುಬರುತ್ತದೆ. ಎರಡನೆಯದಾಗಿ ಅಭಿವೃದ್ಧಿಯನ್ನು ಪರಮಾರ್ಥದ ನೆಲೆಯಲ್ಲಿ ಪರಿಭಾವಿಸಿಕೊಳ್ಳುವ ಕ್ರಮವೂ ವ್ಯಾಪಕವಾಗಿದೆ. ಹಂಗಿನ ಸಂಸ್ಕೃತಿಯ ಮೆರೆದಾಟಕ್ಕೆ ಇದು ಮತ್ತೊಂದು ಕಾರಣವಾಗಿದೆ. ಈ ಬಗೆಯ ಪರಮಾರ್ಥದ ಮೆರೆದಾಟ ಇತ್ತೀಚಿಗೆ ನಮ್ಮ ರಾಜ್ಯದಲ್ಲಿ ಅತಿಯಾಗಿದೆ. ಅಭಿವೃದ್ಧಿಯು ಮೂಲತಃ ಪದಾರ್ಥವಾದಿಯಾದುದು ಮತ್ತು ಅದು ಜನರ ಹಕ್ಕೇ ವಿನಾ ದತ್ತಿ ಅಥವಾ ಉಂಬಳಿಯಲ್ಲ. ಪದಾರ್ಥವಾದಿತ್ವದ ಮಿತಿಗಳ ಬಗ್ಗೆ ನನಗೆ ಅರಿವಿದೆ. ಅದರಿಂದ ಮಾತ್ರವೇ ಜನರಿಗೆ ಸುಖಮಯ ಬದುಕು ಸಾಧ್ಯವಿಲ್ಲ. ಆದರೆ ಪರಮಾರ್ಥವಾದಿತ್ವಕ್ಕೆ ಯಾವುದೇ ಸಮರ್ಥನೆ ಸಾಧ್ಯವಿಲ್ಲ. ಪ್ರಸ್ತುತ ಕೃತಿಯಲ್ಲಿನ ಪ್ರಧಾನ ಸೈದ್ಧಾಂತಿಕ ನೆಲೆಗಟ್ಟೆಂದರೆ ಅಭಿವೃದ್ಧಿಯನ್ನು ಹಕ್ಕುಗಳ ಪರಿಭಾಷೆಯಲ್ಲಿ ಪರಿಭಾವಿಸಿಕೊಂಡಿರುವುದು. ಈ ಕಾರಣದಿಂದ ಈ ಕೃತಿಯ ಶೀರ್ಷಿಕೆಯನ್ನು ‘ಹಕ್ಕು – ಹಂಗು’ ಎಂದು ಕರೆಯಲಾಗಿದೆ. ಹಂಗಿನ ಸಂಸ್ಕೃತಿಯು ಹಕ್ಕಿನ ಸಂಸ್ಕೃತಿಯಾಗಿ ಪರಿವರ್ತನೆಯಾಗುವ ಪ್ರಕ್ರಿಯೆಯೇ ಅಭಿವೃದ್ಧಿ.

ಈ ವಿಷಯ ಕುರಿತಂತೆ ಅಲ್ಲಪ್ರಬುವಿನ ವಚನವೊಂದು ನಮಗೆ ಹೊಸ ಬೆಳಕನ್ನು ನೀಡಬಲ್ಲದು.

ಅಂಗವಿಡಿದು ಅರಿವ ಅರಿವು ಅರಿವಲ್ಲದೆ
ಗುರುವಿಡಿದು ಅರಿವ ಅರಿವು ಅರಿವಲ್ಲ.
ಗುರುವಿಡಿದು ಲಿಂಗವುಂಟೆಂಬುದು ಕಲ್ಪಿತ
ತನ್ನಿಂದ ತಾನಹುದಲ್ಲದೆ
ಗುಹೇಶ್ವರ ಲಿಂಗದಲ್ಲಿ ಹಂಗು ಹರಿಯದನ್ನಕ್ಕರ
ತಾನಾಗಬಾರದ ಕಾಣಾ. (ಸ.ವ. ಸಂ: ೭೧೯).

ಅಲ್ಲಮನ ಪ್ರಕಾರ ಹಂಗಿನ ಬದುಕಿನಲ್ಲಿ ದೇವರ ಅನುಗ್ರಹ ಸಿಗುವುದಿಲ್ಲ. ತನ್ನಿಂದ ತಾನಾದಾಗ ಮಾತ್ರ ಗುಹೆಶ್ವರ ಕೃಪೆ ಸಾಧ್ಯ. ಅದೇ ರೀತಿಯಲ್ಲಿ ಹಂಗಿನ ಬದುಕಿನಿಂದ ಮುಕ್ತಿ ಪಡೆಯದ ಹೊರತು ಬದುಕು ಸಮೃದ್ಧವಾಗುವುದಿಲ್ಲ. ವಚನದ ‘ಹಂಗು ಹರಿಯದನ್ನಕ್ಕರ’ ಎಂಬ ನುಡಿಯಲ್ಲಿ ಈ ಅರ್ಥವನ್ನು ಗುರುತಿಸಿಕೊಳ್ಳಬಹುದು. ಈ ವಚನವು ಪರಮಾರ್ಥವನ್ನು ನಿರಾಕರಿಸುತ್ತಿದೆ. ಏಕೆಂದರೆ ಇಲ್ಲಿ ಲೌಕಿಕವಾದ ಸಂಗತಿಗಳ ಮೂಲಕವೇ ಅರಿವನ್ನು ಪಡೆಯಬೇಕು. ಪರಮಾರ್ಥದಿಂದ ಅದು ದೊರೆಯುವುದಿಲ್ಲ. ಗುರುವಿನ ಪಾತ್ರವನ್ನೇ ಲ್ಲಿ ತಿರಸ್ಕರಿಸಲಾಗಿದೆ. ಸ್ವಂತದ ಪರಿಶ್ರಮಕ್ಕೆ ಇಲ್ಲಿ ಆದ್ಯತೆಯನ್ನು ನೀಡಲಾಗಿದೆ. ಈ ಅರ್ಥ ವಚನದ ‘ಅಂಗವಿಡಿದು’ ಎಂಬ ನುಡಿಯಲ್ಲಿ ಸ್ಪಷ್ಟವಾಗಿದೆ. ಅಭಿವೃದ್ಧಿಯನ್ನು ಹಕ್ಕಿನ ಪರಿಭಾಷೆಯಲ್ಲಿ ಪರಿಭಾವಿಸಿಕೊಳ್ಳಬೇಕೆಂದು ಪ್ರತಿಪಾದಿಸಿದಾಗ ಅದಕ್ಕೆ ಶಾಸನದ ಅಧಿಕೃತವಾದ ಮನ್ನಣೆಯು ಇರಲೇಬೇಕೆಂಬುದೇನಿಲ್ಲ.

ಇದೇ ಅರ್ಥ ಬರುವ ಬಸವಣ್ಣನ ವಚನವೊಂದು ನಮಗೆ ನಿಗಿನಿಗಿಯಾದ ಸ್ವಾವಲಂಬಿ ಬದುಕಿಗೆ ಉದಾಹರಣೆಯಾಗಬಹುದು.

ಕಾಯದ ಕಳವಳಕ್ಕಂಜಿಕಾಯಯ್ಯಾ’, ಎನ್ನೆನು
ಜೀವನೋಪಾಯಕ್ಕಾಗಿಈಯಯ್ಯಾ’, ಎನ್ನೆನು.
ಉರಿ ಬರಲಿ, ಸಿರಿ ಬರಲಿ, ಬೇಕು ಬೇಡೆನ್ನನಯ್ಯಾ
ನಿಮ್ಮ ಹಾರೆನು: ಮಾನವರ ಬೇಡೆನು
ಆಣೆ, ನಿಮ್ಮಾಣೆ, ಕೂಡಲಸಂಗಮದೇವಾ.

ಯಾವ ಕಾರಣಕ್ಕೂ ಬೇಡಿ ಬದುಕುವುದಿಲ್ಲ. ಇದು ಬಸವನ ನಿರ್ಧಾರ. ಇದು ನಮಗೆ ದಾರಿದೀಪ. ಇದು ನಮ್ಮ ಹಕ್ಕು.

ಶಾಸನಾತ್ಮಕವಾದುದು ಮಾತ್ರ ಹಕ್ಕು ಎಂಬ ವಾದವನ್ನು ಒಪ್ಪುವ ಅಗತ್ಯವೇನಿಲ್ಲ. ಶಾಸನದ ಬೆಂಬಲವಿಲ್ಲದ್ದು ಹಕ್ಕಾಗಬಹುದು. ಈ ನೆಲೆಯಲ್ಲಿನ ಇಲ್ಲಿನ ಪ್ರಬಂಧಗಳನ್ನು ರೂಪಿಸಲಾಗಿದೆ. ಹಕ್ಕು ಎಂಬುದು ನೈತಿಕ ನಂಬಿಕೆ. ಅದೊಂದು ನೈತಿಕ ಪ್ರಣಾಳಿಕೆ. ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನಿಗೆ ಗೌರವ ನೀಡಬೇಕೆಂಬುದಕ್ಕೆ ಯಾವ ಶಾಸನ ಬೇಕು?

ಸಾಂಪ್ರದಾಯಿಕ ಅಭಿವೃದ್ಧಿ ಸಿದ್ಧಾಂತಗಳ ಬಗ್ಗೆ ಇಲ್ಲಿ ಟೀಕೆಯಿದೆ. ಅದಕ್ಕೆ ಪರ್ಯಾಯವಲ್ಲದಿದ್ದರೂ ಅದರ ಮಿತಿಗಳನ್ನು ಭರಿಸಬಲ್ಲ ಮಾನವ ಅಭಿವೃದ್ಧಿ ಪ್ರಣಾಳಿಕೆಯನ್ನು ಆಧಾರವಾಗಿಟ್ಟುಕೊಂಡು ಇಲ್ಲಿ ಚರ್ಚೆಯನ್ನು ಬೆಳೆಸಲಾಗಿದೆ. ಇಲ್ಲಿ ಮೌಲ್ಯ ನಿರಪೇಕ್ಷತೆಯನ್ನು ಪ್ರಜ್ಞಾಪೂರ್ವಕವಾಗಿ ತಿರಸ್ಕರಿಸಲಾಗಿದೆ. ಆದ್ದರಿಂದ ಸಹಜವಾಗಿ ಇಲ್ಲಿನ ಪ್ರಬಂಧಗಳು ಲಿಂಗ ಸಾಪೇಕ್ಷವಾಗಿವೆ – ಲಿಂಗ ಸ್ಪಂದಿಯಾಗಿವೆ. ‘ಅಭಿವೃದ್ಧಿ ಮೀಮಾಂಸೆ’ ಎಂಬ ಮೊದಲನೆಯ ಪ್ರಬಂಧದಲ್ಲಿ ಈ ಬಗೆಯ ಚರ್ಚೆಯನ್ನು ಕಾಣಬಹುದು.

ಎರಡನೆಯ ಅಧ್ಯಯನ ಪ್ರಬಂಧದಲ್ಲಿ ಮಾನವ ಅಭಿವೃದ್ಧಿಯಲ್ಲಿ ಕರ್ನಾಟಕವು ಸಾಧಿಸಿರುವ ಸಾಧನೆ – ವೈಫಲ್ಯಗಳನ್ನು ಗುರುತಿಸಲು ಪ್ರಯತ್ನಿಸಲಾಗಿದೆ. ಇಲ್ಲಿನ ಎಲ್ಲ ಪ್ರಬಂಧಗಳೂ ಪ್ರಾದೇಶಿಕತೆಯ ಹರವನ್ನು ಹೊಂದಿದ್ದಾನೆ. ವರಮಾನ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾಧಿಸಿಕೊಂಡ ಸಾಧನೆಯು ಯಾಕೆ ಜನರ ಬದುಕನ್ನು ಸಮೃದ್ಧಿಗೊಳಿಸಲು ಸಾಧ್ಯವಿಲ್ಲ ಮತ್ತು ಧಾರಣಾ ಸಾಮರ್ಥ್ಯವನ್ನು ವಿಸ್ತೃತಗೊಳಿಸುವ ಅಭಿವೃದ್ಧಿಯು ಯಾಕೆ ಜನರ ಬದುಕನ್ನು ಸಮೃದ್ಧಗೊಳಿಸುತ್ತದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಕರ್ನಾಟಕವು ಮಾನವ ಅಭಿವೃದ್ಧಿಯಲ್ಲಿ ಸಾಧಿಸಿಕೊಂಡಿರುವ ಸಾಧನೆಯನ್ನು ಜಿಲ್ಲಾವಾರು ಇಲ್ಲಿ ಚರ್ಚಿಸಲಾಗಿದೆ.

ಕರ್ನಾಟಕವು ಅಸ್ತಿತ್ವಕ್ಕೆ ಬಂದು ೨೦೦೬ ಕ್ಕೆ ಐವತ್ತು ವರ್ಷಗಳು ತುಂಬಿದವು. ಆ ಸಂದರ್ಭದಲ್ಲಿ ಸರ್ಕಾರವು ಏಕೀಕರಣದ ಸುವರ್ಣ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿತು. ಆದರೆ ಅದನ್ನು ಅಲ್ಲಿ ಕೇವಲ ಭಾಷೆಗೆ ಸೀಮಿತಗೊಳಿಸಿಕೊಂಡಿದ್ದು ಮಾತ್ರ ವಿಚಿತ್ರವಾಗಿ ಕಂಡು ಬಂತು. ಕರ್ನಾಟಕದ ಸಾಧನೆಯನ್ನು ಅರ್ಥ, ಸಮಾಜ ಮತ್ತು ರಾಜಕಾರಣಗಳ ನೆಲೆಯಿಂದ ಮೌಲ್ಯಮಾಪನ ಮಾಡಬಹುದಾಗಿದ್ದ ಒಂದು ಸಂದರ್ಭವನ್ನು ರಾಜ್ಯ ಕಳೆದುಕೊಂಡಿತು. ಈ ಸಂಕಲನದ ಮೂರನೆಯ ಪ್ರಬಂಧದಲ್ಲಿ ಕರ್ನಾಟಕವು ೧೯೫೬ ರಿಂದ ೨೦೦೬ ರವರೆಗೆ ಸಾಧಿಸಿಕೊಂಡಿರುವ ಯಶಸ್ಸನ್ನು ದಾಖಲಿಸಲು ಪ್ರಯತ್ನಿಸಲಾಗಿದೆ.

ಇಲ್ಲಿನ ನಾಲ್ಕನೆಯ ಪ್ರಬಂಧದಲ್ಲಿ ಬುಡಕಟ್ಟು ಅಭಿವೃದ್ಧಿಯ ವಿವಿಧ ಮುಖಗಳನ್ನು ಪರಿಶೀಲಿಸಲು ಪ್ರಯತ್ನಿಸಲಾಗಿದೆ. ಬುಡಕಟ್ಟು ಸಮುದಾಯದ ಅಭಿವೃದ್ಧಿ ಕುರಿತಂತೆ ಇರುವ ಒಂದು ಬಹುಮುಖ್ಯವಾದ ಸಮಸ್ಯೆಯೆಂದರೆ ಅವರನ್ನು ಸಮಾಜದ ಅಭಿವೃದ್ಧಿಯ ಪ್ರಧಾನಧಾರೆಯಲ್ಲಿ ವಿಲೀನಗೊಳಿಸಬೇಕೋ ಅಥವಾ ಅವರ ಅನನ್ಯತೆಯನ್ನು, ಸಾಂಸ್ಕೃತಿಕ ವಿಭಿನ್ನತೆಯನ್ನು ರವಷ್ಟೂ ಮುಕ್ಕಾದದಂತೆ ಕಾಯ್ದು ಕೊಳ್ಳಬೇಕೋ ಎಂಬುದಾಗಿದೆ. ಮತ್ತೊಂದು ಸಮಸ್ಯೆಯೆಂದರೆ ಅವರ ಸಾಮುದಾಯಿಕ ವ್ಯವಸ್ಥೆಯನ್ನು ಕಾಯ್ದುಕೊಳ್ಳಬೇಕೋ ಅಥವಾ ಅವರನ್ನು ನಮ್ಮ ಸಂವಿಧಾನಿಕ ವ್ಯವಸ್ಥೆಯೊಳಗೆ ವೈಯುಕ್ತಿಕ ಸ್ವಾತಂತ್ರ್ಯ – ಸಮಾನತೆ – ಸ್ವಾಯತ್ತತೆಯ ಚೌಕಟ್ಟಿನಲ್ಲಿ ಸಮ್ಮಿಳನ ಗೊಳಿಸಬೇಕೋ ಎಂಬುದಾಗಿದೆ. ಮೊದಲನೆಯದಕ್ಕೆ ಸಂಬಂಧಿಸಿದಂತೆ ಇದು ಬೇಕು ಅದು ಬೇಡ ಎಂಬ ಸಂಗತಿಯನ್ನು ಬಿಟ್ಟು ಇವೆರಡನ್ನೂ ಸಂಯೋಜಿಸುವ ಬಗ್ಗೆ ಯೋಚಿಸುವ ಅಗತ್ಯವನ್ನು ಇಲ್ಲಿನ ಟಿಪ್ಪಣಿಗಳಲ್ಲಿ ಪ್ರತಿಪಾದಿಸಲಾಗಿದೆ. ಎರಡನೆಯ ಪ್ರಶ್ನೆಯ ಬಗ್ಗೆಯೂ ಅಷ್ಟೇ. ಸಾಮುದಾಯಿಕ ಸೂತ್ರಗಳು ಸಂವಿಧಾನಿಕ ವೈಯುಕ್ತಿಕ ಸ್ವಾತಂತ್ರ್ಯಕ್ಕೆ ದಕ್ಕೆಯೊದಗಿಸಿದಂತೆ ಇದ್ದರೆ ಅದನ್ನು ಉಳಿಸಿಕೊಂಡು, ಸ್ವಾಯತ್ತತೆಯನ್ನು ಕಾಪಾಡಿಕೊಂಡು ಅವರ ಅಭಿವೃದ್ಧಿಯನ್ನು ನಿರ್ವಹಿಸಬಹುದು. ಆದರೆ ಸಮಸ್ಯೆಯೆಲ್ಲಿದೆಯೆಂದರೆ ಬುಡಕಟ್ಟು ಸಮುದಾಯವನ್ನು ಅಭಿವೃದ್ಧಿಯ ದೃಷ್ಟಿಯಿಂದ ಮೂಲೆಗುಂಪು ಮಾಡಿರುವುದರಲ್ಲಿದೆ. ಅವರನ್ನು ಅಭಿವೃದ್ಧಿಯ ದೃಷ್ಟಿಯಿಂದ ಮೂಲೆಗುಂಪು ಮಾಡಿರುವುದರಲ್ಲಿದೆ. ಅವರನ್ನು ಅಭಿವೃದ್ಧಿಯ ಪ್ರಧಾನ ಧಾರೆಯಲ್ಲಿ ಸಂಯೋಜಿಸುವ ಹೆಸರಿನಲ್ಲಿ ಅವರ ಜಮೀನನ್ನು ಉಳಿದವರು ಲಪಟಾಯಿಸುವ ದಂದೆಯಲ್ಲಿ, ಅವರ ಅರಣ್ಯಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಕಬಳಿಸುತ್ತಿರುವುದರಲ್ಲಿ ಸಮಸ್ಯೆಯಿದೆ. ಈ ಎಲ್ಲ ಸಂಗತಿಗಳನ್ನು ಇಲ್ಲಿ ಚರ್ಚೆಗೆ ಒಳಪಡಿಸಲಾಗಿದೆ.

ಇಲ್ಲಿನ ಐದನೆಯ ಪ್ರಬಂಧದಲ್ಲಿ ‘ಕರ್ನಾಟಕತ್ವ’ ಮೀಮಾಂಸೆಯನ್ನು ಪ್ರತಿಪಾದಿಸಿದ್ದ ಆಲೂರು ವೆಂಕಟರಾಯರ ವಿಚಾರಗಳನ್ನು ಒಂದು ಸೈದ್ಧಾಂತಿಕ ನೆಲೆಯಲ್ಲಿ ಮಂಡಿಸಲಾಗಿದೆ. ಆಲೂರು ವೆಂಕಟರಾಯರ ಕರ್ನಾಟಕತ್ವ ಮೀಮಾಂಸೆಯ ವಿಶಿಷ್ಟತೆಯೆಂದರೆ ಅವರು ಅದನ್ನು ಜಾಗತಿಕ ಮಟ್ಟದಲ್ಲಿ ಪರಿಭಾವಿಸಿಕೊಳ್ಳಲು ಪ್ರಯತ್ನಿಸಿದ್ದು. ಬಹಳ ಮುಖ್ಯವಾಗಿ ಇಲ್ಲಿ ನಾವು ಪರಿಗಣಿಸಬೇಕಾದ ಸಂಗತಿಯೆಂದರೆ ಅವರ ವಿಚಾರವು ಪ್ರಾಂತೀಯತೆಯ ಪೂರ್ವಗ್ರಹವನ್ನು ಮೀರಿದುದಾಗಿತ್ತು. ಕರ್ನಾಟಕತ್ವವೆಂಬುದು ಕೇವಲ ಭಾವನಾತ್ಮಕ ಅಥವಾ ಭಾಷೆಗೆ ಸಂಬಂಧಿಸಿದ ಸಂಗತಿಯಲ್ಲ. ಕರ್ನಾಟಕ ಏಕೀಕರಣವೆಂಬುದು ಮೂಲಭೂತವಾಗಿ ಅಭಿವೃದ್ಧಿಯ ಸಂಗತಿಯಾಗಿತ್ತು. ಆಧುನಿಕತೆಯನ್ನು ಒಪ್ಪಿಕೊಂಡಿದ್ದ ಆಲೂರರು ಅಖಿಲ ಭಾರತ ಮಟ್ಟದಲ್ಲಿ, ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಅಸ್ತಿತ್ವವನ್ನು ಪ್ರತಿಪಾದಿಸಲು ಪ್ರಯತ್ನಿಸಿದರು. ಆಲೂರರ ವಿಚಾರಗಳನ್ನು ಇಂದು ಚರ್ಚಿಸುವುದಕ್ಕೆ ಒಂದು ಕಾರಣವಿದೆ. ಅವರು ಕನ್ನಡದ ಪ್ರಾಚೀನ ಕೃತಿಯಾದ ಕವಿರಾಜಮಾರ್ಗದಲ್ಲಿ ಕನ್ನಡ ನಾಡನ್ನು ಹೇಗೆ ಸ್ವತಂತ್ರ ನಾಡನ್ನಾಗಿ ಪರಿಭಾವಿಸಿ ಕೊಳ್ಳಲಾಗಿತ್ತೋ ಅದೇ ರೀತಿಯಲ್ಲಿ ಅವರು ಪರಿಭಾವಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಅದನ್ನು ಡಾ. ಡಿ.ಆರ್.ನಾಗರಾಜ್‌ಅವರು ಗುರುತಿಸಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕವು ಹೇಗೆ ತನ್ನ ಅಸ್ತಿತ್ವವನ್ನು ನಾಶ ಮಾಡಿಕೊಳ್ಳದೆ ಭಾರತ ನಾಡಿನ ಭಾಗವಾಗಿ ಹೇಗೆ ಉಳಿದುಕೊಂಡಿದೆ ಮತ್ತು ಅದನ್ನು ಉಳಿಸಿಕೊಳ್ಳಬೇಕು ಎಂಬುದನ್ನು ಈ ಪ್ರಬಂಧದಲ್ಲಿ ಚರ್ಚಿಸಲಾಗಿದೆ.

ನಮ್ಮದು ಮೂಲಭೂತವಾಗಿ ಶ್ರೇಣೀಕೃತ ಸಮಾಜ. ಇಲ್ಲಿ ಅಭಿವೃದ್ಧಿಯು ಶ್ರೇಣೀಕರಣಕ್ಕೆ ತಕ್ಕಂತೆ ಸಂಭವಿಸುತ್ತಿರುವುದನ್ನು ಅನೇಕ ಅಧ್ಯಯನಗಳು ಗುರುತಿಸಿವೆ. ಈ ಬಗೆಯ ಶ್ರೇಣೀಕೃತ ಅಭಿವೃದ್ಧಿಯು ಸಂಭವಿಸುತ್ತಿರುವುದಕ್ಕೆ ಮುಖ್ಯ ಕಾರಣವನ್ನು ಇಲ್ಲಿ ಅನೂಚಾನವಾಗಿ ಹರಿದುಕೊಂಡು ಬರುತ್ತಿರುವ ಅಸ್ಪೃಶ್ಯತೆಯು ಕಾರಣ ಎಂಬುದನ್ನು ಪ್ರಸಕ್ತ ಕೃತಿಯ ಆರನೆಯ ಪ್ರಬಂಧದಲ್ಲಿ ಚರ್ಚಿಸಲಾಗಿದೆ. ಅಸ್ಪೃಶ್ಯತೆಯಂತಹ ಆಚರಣೆಯಿಂದಾಗಿ ನಮ್ಮಲ್ಲಿ ಅಭಿವೃದ್ಧಿಯು ದಲಿತರಿಗೆ ಅನುಕೂಲವನ್ನು ಒದಗಿಸುತ್ತಿಲ್ಲ. ಬಹಳ ವಿಚಿತ್ರವಾದ ಸಂಗತಿಯೆಂದರೆ ಇಂದು ಇಂತಹ ಅನಿಷ್ಟಕಾರಿ ಆಚರಣೆಯನ್ನು ತಮ್ಮ ಮಠಕ್ಕೆ ಸಂಬಂಧಿಸಿದಂತೆ ತೊರೆಯುವುದು (ಬಿಟ್ಟಕೊಡುವುದು) ಸಂಪ್ರದಾಯಕ್ಕೆ ವಿರೋಧವಾಗುತ್ತದೆ ಎಂದು ಹೇಳುತ್ತಾ ಅದನ್ನು ಅಲ್ಲಿ ಆಚರಿಸುತ್ತಿರುವವರೇ ಮತ್ತು ಅದನ್ನು ಮುಗುಮ್ಮಾಗಿ ಸಮರ್ಥಿಸುತ್ತಿರುವವರೇ ಅದರ ವಿರುದ್ಧ ಪಾದಯಾತ್ರೆಯನ್ನು ನಡೆಸುತ್ತಿದ್ದಾರೆ. ಅಂದರೆ ಅಸ್ಪೃಶ್ಯತೆಯಂತಹ ಆಚರಣೆಯನ್ನು ಬಿಡಲಾರದ ಸ್ವಾಮಿಯೊಬ್ಬರು ಅದರ ವಿರುದ್ಧ ಉಪದೇಶ ನೀಡಲು ಹೇಗಾದರೂ ಮುಂದಾದರು ಎಂಬುದು ಅಚ್ಛರಿ ಮೂಡಿಸುತ್ತದೆ. ಆಷಾಡಭೂತಿತನಕ್ಕೆ ಮೇರೆಯೇ ಇಲ್ಲದಂತಾಗಿದೆ. ಈ ಆಚರಣೆಯು ಹೇಗೆ ಅಭಿವೃದ್ಧಿಗೆ ಅಡ್ಡಿಯುಂಟು ಮಾಡಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಅಭಿವೃದ್ಧಿಯ ಶಿಷ್ಟ – ಪರಿಶಿಷ್ಟ ನೆಲೆಗಳನ್ನು ಗುರುತಿಸಲು ಇಲ್ಲಿ ಪ್ರಯತ್ನಿಸಲಾಗಿದೆ.

ಮುಂದಿನ ಏಳನೆಯ ಮತ್ತು ಎಂಟನೆಯ ಪ್ರಬಂಧಗಳಲ್ಲಿ ಕರ್ನಾಟಕವನ್ನು ಕಾಡುತ್ತಿರುವ ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆಯ ವಿವಿಧ ನೆಲೆಗಳನ್ನು ಅನಾವರಣ ಮಾಡಲಾಗಿದೆ. ಏಳನೆಯ ಪ್ರಬಂಧದಲ್ಲಿ ಅದರ ಚಾರಿತ್ರಿಕ ನೆಲೆಯನ್ನು ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಎಂಟನೆಯ ಪ್ರಬಂಧದಲ್ಲಿ ಅದನ್ನು ಡಾ. ಡಿ.ಎಂ. ನಂಜುಂಡಪ್ಪ ಸಮಿತಿಯು ಹೇಗೆ ಪರಿಭಾವಿಸಿಕೊಂಡಿದೆ ಎಂಬುದನ್ನು ವಿಶ್ಲೇಷಣೆ ಮಾಡಲಾಗಿದೆ. ಇಂದು ಕರ್ನಾಟಕವು ಎದುರಿಸುತ್ತಿರುವ ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆಗೆ ಚಾರಿತ್ರಿಕ ನೆಲೆಯಿದೆ ಎಂಬುದನ್ನು ತೋರಿಸಲು ಏಳನೆಯ ಪ್ರಬಂಧದಲ್ಲಿ ಪ್ರಯತ್ನಿಸಲಾಗಿದೆ. ಸಾಮಾಜಿಕವಾಗಿ ಕಳೆದ ಐವತ್ತು ವರ್ಷಗಳಲ್ಲಿ ಬಂಡವಾಳಶಾಯಿ ವ್ಯವಸ್ಥೆಯು ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಬೇರೂರುವುದರಲ್ಲಿ ಯಶಸ್ವಿಯಾದರೆ ಉತ್ತರ ಕರ್ನಾಟಕ ಪ್ರದೇಶದಲ್ಲಿ ಜಮೀನ್ದಾರಿ ಪಾಳೆಗಾರಿಕೆಯು ಗಟ್ಟಿಯಾಗಿ ಮುಂದುವರಿಯುತ್ತಿರುವುದನ್ನು ಇಲ್ಲಿ ಗುರುತಿಸಲಾಗಿದೆ. ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆಯ ಮೂಲದಲ್ಲಿ ಹೈದರಾಬಾದ್ ನಿಜಾಮನ ಸಂಸ್ಥಾನವನ್ನು ಮೂರು ಭಾಷಾ ಪ್ರಾಂತಗಳಲ್ಲಿ ಹಂಚಿದ ಕ್ರಮದಲ್ಲಿದೆ ಎಂಬುದು ಇಲ್ಲಿನ ಪ್ರಮುಖ ಪ್ರತಿಪಾದನೆಯಾಗಿದೆ.

ಪ್ರಾದೇಶಿಕ ಅಸಮಾನತೆಯ ಅಧ್ಯಯನಕ್ಕಾಗಿ ಸರ್ಕಾರವು ನೇಮಿಸಿದ್ದ ಡಾ. ಡಿ.ಎಂ. ನಂಜುಂಡಪ್ಪ ಸಮಿತಿಯು ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆಯ ಪ್ರಮಾಣವನ್ನು ಮಾಪನ ಮಾಡಲು ಪ್ರಯತ್ನಿಸಿತು. ಅದಕ್ಕಾಗಿ ಅದು ಹೊಸ ಮಾಪನಗಳನ್ನು ಆವಿಷ್ಕರಿಸಿತು. ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆಯ ನಿವಾರಣೆಗಾಗಿ ಅದು ಅನೇಕ ಶಿಫಾರಸ್ಸುಗಳನ್ನು ನೀಡಿದೆ. ಅವುಗಳ ಸ್ಥೂಲ ವಿವರಗಳನ್ನು ಕೃತಿಯ ಎಂಟನೆಯ ಪ್ರಬಂಧದಲ್ಲಿ ನೀಡಲಾಗಿದೆ.

ಯುಎನ್‌ಡಿಪಿಯು ತನ್ನ ಮಾನವ ಅಭಿವೃದ್ದಿ ವರದಿಗಳಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕಗಳನ್ನು ಮಾಪನ ಮಾಡಿ ಪ್ರಕಟಿಸುತ್ತಿದೆ. ಅದರಲ್ಲಿ ಮೂರು ಸೂಚಿಗಳಿರುತ್ತವೆ. ಮೊದಲನೆಯದು ಆರೋಗ್ಯವಾದರೆ ಎರಡನೆಯದು ಸಾಕ್ಷರತೆ ಮತ್ತು ಶಾಲಾ ದಾಖಲಾತಿಗಳನ್ನೊಳಗೊಂಡ ಶೈಕ್ಷಣಿಕ ಸಾಧನಾ ಸಂಯುಕ್ತ ಸೂಚ್ಯಂಕ. ಅಂದರೆ ಮಾನವ ಅಭಿವೃದ್ಧಿ ಪ್ರಣಾಳಿಕೆಯಲ್ಲಿ ಸಾಕ್ಷರತೆ ಮತ್ತು ಶಿಕ್ಷಣವು ಅಭಿವೃದ್ಧಿಯನ್ನು ನಿರ್ಧರಿಸುವ ಸೂಚಿಗಳೂ ಹೌದು, ಅವು ಅಭಿವೃದ್ಧಿಯು ಒಳಗೊಳ್ಳುವ ಸಂಗತಿಗಳೂ ಹೌದು. ಇದಲ್ಲದೆ ಅವು ಅಭಿವೃದ್ಧಿಯ ಮೌಲ್ಯಮಾಪನ ಸೂಚಿಗಳೂ ಹೌದು. ಈ ಹಿನ್ನೆಲೆಯಲ್ಲಿ ಪ್ರಸ್ತುತ ಕೃತಿಯ ಒಂಬತ್ತನೆಯ ಪ್ರಬಂಧದಲ್ಲಿ ಕರ್ನಾಟಕವು ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿಕೊಂಡಿರುವ ಸಂಗತಿಗಳನ್ನು ದಾಖಲಿಸಲು ಪ್ರಯತ್ನಿಸಲಾಗಿದೆ. ಪ್ರಾಥಮಿಕ ಶಿಕ್ಷಣದ ಶಿಷ್ಟ – ಪರಿಶಿಷ್ಟ ನೆಲೆಗಳನ್ನು ಗುರುತಿಸಲಾಗಿದೆ. ಅದರ ಪ್ರಾದೇಶಿಕ ನೆಲೆಗಳನ್ನು ಪರಿಶೋಧಿಸಲಾಗಿದೆ. ಈ ಅಧ್ಯಯನದಲ್ಲಿ ಶಿಕ್ಷಣ ಮತ್ತು ಅಭಿವೃದ್ಧಿಗಳ ನಡುವಿನ ಸಂಬಂಧವನ್ನು ಚರ್ಚೆಗೆ ಒಳಪಡಿಸಲಾಗಿದೆ.

ಹತ್ತನೆಯ ಪ್ರಬಂಧದಲ್ಲಿ ಕರ್ನಾಟಕವು ಪಂಚವಾರ್ಷಿಕ ಯೋಜನೆಗಳ (೧೯೫೧ – ೨೦೦೭) ಅವಧಿಯಲ್ಲಿ ಸಾಧಿಸಿಕೊಂಡಿರುವ ಸಾಧನೆಯ ಸಮೀಕ್ಷೆ ಮಾಡಲಾಗಿದೆ. ಕಳೆದ ಐವತ್ತು ವರ್ಷಗಳಲ್ಲಿ ನಮ್ಮ ಕೃಷಿ, ಕೈಗಾರಿಕೆ, ಸೇವಾ ವಲಯ, ಶಿಕ್ಷಣ, ಆರೋಗ್ಯ, ಮೂಲಭೂತ ಸೌಲಭ್ಯ ಮುಂತಾದ ಸಂಗತಿಗಳಲ್ಲಿ ರಾಜ್ಯವು ಸಾಕಷ್ಟು ಅಭಿವೃದ್ಧಿಯನ್ನು ಸಾಧಿಸಿಕೊಂಡಿದೆ. ವಿಕೇಂದ್ರೀಕೃತ ಯೋಜನೆಗೆ ಸ್ಪಷ್ಟ ರೂಪವನ್ನು ನೀಡಲಾಗಿದೆ. ವರಮಾನ ಸೂಚಿಯಲ್ಲಿ ಮತ್ತು ಮಾನವ ಅಭಿವೃದ್ಧಿ ಸೂಚಿಯಲ್ಲಿ ರಾಜ್ಯವು ಪ್ರಗತಿಯನ್ನು ಅನುಭವಿಸಿದೆ. ಇಲ್ಲಿನ ಸಮಸ್ಯೆಗಳಿವೆ. ನಾವು ಸಾಧಿಸಿಕೊಂಡಿರುವ ಅಭಿವೃದ್ಧಿಯಲ್ಲಿ ಅನೇಕ ಮಿತಿಗಳಿವೆ. ಅದರ ವ್ಯಾಪ್ತಿಯು ಸೀಮಿತವಾದುದು. ಅದರ ವ್ಯಾಪ್ತಿಯನ್ನು ಹೇಗೆ ವಿಸ್ತರಿಸುವುದು? ಅದು ಜನರನ್ನು ಒಳಗೊಳ್ಳುವಂತೆ ಮಾಡುವುದು ಹೇಗೆ? ಇವು ಪರಿಹರಿಸಿಕೊಳ್ಳಲು ಸಾಧ್ಯವಿಲ್ಲದ ಸಮಸ್ಯೆಗಳಲ್ಲ. ಈ ಬಗ್ಗೆ ನಮ್ಮ ಯೋಜನೆಗಳ ವೈಫಲ್ಯಗಳನ್ನು ಇಲ್ಲಿ ಚರ್ಚಿಸಲಾಗಿದೆ.

ಒಟ್ಟಾರೆ ಪ್ರಸ್ತುತ ಕೃತಿಯಲ್ಲಿನ ಪ್ರಬಂಧಗಳು ಕರ್ನಾಟಕದ ಅಭಿವೃದ್ಧಿ ಕುರಿತಂತೆ ಒಂದು ವಿರಾಟ್ ಚಿತ್ರವನ್ನು ನೀಡುತ್ತವೆ. ಇಲ್ಲಿ ಚರ್ಚೆಯನ್ನು ಕೇವಲ ಆರ್ಥಿಕ ಸಂಗತಿಗಳಿಗೆ ಸೀಮಿತಗೊಳಿಸಿಕೊಳ್ಳುವುದಕ್ಕೆ ಪ್ರತಿಯಾಗಿ ಅಭಿವೃದ್ಧಿಯ ಸಾಮಾಜಿಕ ಮತ್ತು ರಾಜಕೀಯ ನೆಲೆಗಳನ್ನು ಪರಿಶೋಧಿಸಲು ಪ್ರಯತ್ನಿಸಲಾಗಿದೆ. ಅಭಿವೃದ್ಧಿಯ ಶಿಷ್ಟ – ಪರಿಶಿಷ್ಟ ನೆಲೆಗಳನ್ನು ಅನಾವರಣ ಮಾಡಲಾಗಿದೆ. ಅಭಿವೃದ್ಧಿಯ ಲಿಂಗ ಸಂಬಂಧಿ ಆಯಾಮಗಳನ್ನು ಇಲ್ಲಿ ಚರ್ಚೆಯ ಮುಂಚೂಣಿಗೆ ತರಲಾಗಿದೆ. ವರಮಾನ ವರ್ಧನಾ ಪ್ರಣಾಳಿಕೆಯನ್ನು ತೀವ್ರ ವಿಮರ್ಶೆಗೆ ಇಲ್ಲಿ ಒಳಪಡಿಸಲಾಗಿದೆ. ಮಾನವ ಅಭಿವೃದ್ಧಿ ಪ್ರಣಾಳಿಕೆಯ ವಿವಿಧ ನೆಲೆಗಳನ್ನು ಇಲ್ಲಿ ಪರಿಚಯಿಸಲು ಪ್ರಯತ್ನಿಸಲಾಗಿದೆ.