ಭಾಗ
ಅಭಿವೃದ್ಧಿ ಯೋಜನೆಗಳ ಮೌಲ್ಯಮಾಪನ

ಕರ್ನಾಟಕವು ಹತ್ತು ಪಂಚವಾರ್ಷಿಕ ಯೋಜನೆಗಳನ್ನು ಮುಗಿಸಿ ೨೦೦೭ ರಿಂದ ಹನ್ನೊಂದನೆಯ ಯೋಜನೆಯನ್ನು ಆರಂಭಿಸಿದೆ. ಕಳೆದ ೫೦ ವರ್ಷಗಳಲ್ಲಿ ರಾಜ್ಯವು ಗಣನೀಯವಾದ ಅಭಿವೃದ್ಧಿಯನ್ನು ಸಾಧಿಸಿಕೊಂಡಿದೆ. ಸಾಮಾಜಿಕ – ರಾಜಕೀಯ ಬದಲಾವಣೆಗಳು ಸಂಭವಿಸಿವೆ. ಅದರ ವರಮಾನದ ವಾರ್ಷಿಕ ಬೆಳವಣಿಗೆ ಪ್ರಮಾಣವು ಎರಡಂಕಿ ಮುಟ್ಟುವ ಹಂತದಲ್ಲಿದೆ. ಕೃಷಿ, ಕೈಗಾರಿಕೆ, ಸಾರಿಗೆ, ಸಂಪರ್ಕ, ಬ್ಯಾಂಕಿಂಗ್‌, ವಿದ್ಯುತ್ತು, ನೀರಾವರಿ, ವ್ಯಾಪಾರ, ಶಿಕ್ಷಣ, ಆರೋಗ್ಯ – ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಅದು ಪ್ರಗತಿ ಸಾಧಿಸಿಕೊಂಡಿದೆ. ಈಗಾಗಲೆ ತಿಳಿಸಿರುವಂತೆ ಅವರ ಸಾಧನೆಯು ಕ್ರಾಂತಿಕಾರಕ ಅಥವಾ ಕಣ್ಣು ಕೋರೈಸುವಂತಹದ್ದಲ್ಲ. ಆದರೆ ಅದು ತಲೆತಗ್ಗಿಸು ವಂತಹದ್ದೂ ಅಲ್ಲ.

ಸಾಮಾಜಿಕ ಅಭಿವೃದ್ಧಿಯ ಹರವು ವಿಸ್ತೃತಗೊಂಡಿದೆ. ರಾಜ್ಯದಲ್ಲಿ ಕೃಷಿ ಅವಲಂಬನೆಯ ಪ್ರಮಾಣ ೧೯೯೧ರಲ್ಲಿ ಶೇ. ೬೩.೧೩ ರಷ್ಟಿದ್ದುದು ೨೦೦೧ ರಲ್ಲಿ ಶೇ. ೫೫.೮೮ ಕ್ಕಿಳಿದಿದೆ. ಅಂದರೆ ಕೃಷಿಯೇತರ ಚಟುವಟಿಕೆಗಳ ಪ್ರಮಾಣವು ಸಾಪೇಕ್ಷವಾಗಿ ಏರಿಕೆಯಾಗುತ್ತಿದೆ. ಈ ಬಗೆಯ ಬದಲಾವಣೆಯು ಮಂದಗತಿಯಲ್ಲಿ – ಮಧ್ಯಮಗತಿಯಲ್ಲಿ ನಡೆದಿದೆ. ಸಮಾಜದಲ್ಲಿ ವಂಚಿತ ವರ್ಗವು ಅಭಿವೃದ್ಧಿಯಲ್ಲಿ ಪಾಲು ಪಡೆಯ ತೊಡಗಿದೆ ಮತ್ತು ಫಲವನ್ನು ಒತ್ತಾಯಿಸುತ್ತಿದೆ. ಆರ್ಥಿಕವಾಗಿ ಸದೃಢವಾಗಿ ರಾಜ್ಯವು ಅಭಿವೃದ್ಧಿ ಸಾಧಿಸಿಕೊಂಡಿದೆ. ಆದರೆ ಆತಂಕದ ಸಂಗತಿಯೆಂದರೆ ವರಮಾನಕ್ಕೆ ಸಂಬಂಧಿಸಿದಂತೆ ಅಸಮಾನತೆಯು ತೀವ್ರವಾಗುತ್ತಿದೆ. ಉದಾಹರಣೆಗೆ ೧೯೬೦/೬೧ ರಲ್ಲಿ ರಾಜ್ಯದ ಒಟ್ಟು ದುಡಿಮೆಗಾರರಲ್ಲಿ ಶೇ. ೭೫ ರಷ್ಟು ಜನರು ರಾಜ್ಯದ ಒಟ್ಟು ವರಮಾನದಲ್ಲಿ ಶೇ. ೬೧ರಷ್ಟನ್ನು ಅನುಭವಿಸುತ್ತಿದ್ದರು. ಆದರೆ ೨೦೦೦ – ೦೧ ರಲ್ಲಿ ಒಟ್ಟು ದುಡಿಮೆಗಾರರಲ್ಲಿ ಶೇ. ೬೦ ರಷ್ಟು ಜನರು ರಾಜ್ಯದ ವರಮಾನದ ಕೇವಲ ಶೇ.೨೭ ರಷ್ಟನ್ನು ಮಾತ್ರ ಅನುಭವಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ೧೯೬೦/೬೧ರಲ್ಲಿ ಪ್ರಾಥಮಿಕೇತರ ವಲಯದ ಶೇ.೨೫ ರಷ್ಟು ದುಡಿಮೆಗಾರರು ವರಮಾನದ ಶೇ. ೩೯ ರಷ್ಟನ್ನು ಪಾಲು ಪಡೆದಿದ್ದರು. ಇದು ೨೦೦೦ – ೦೧ ರಲ್ಲಿ ತೀವ್ರ ಬದಲಾವಣೆಯಾಗಿದೆ. ಪ್ರಾಥಮಿಕೇತರ ವಲಯದ ಶೇ. ೪೦ ರಷ್ಟು ದುಡಿಮೆಗಾರರು ವರಮಾನದ ಶೇ. ೭೩ ರಷ್ಟು ಪಾಲು ಅನುಭವಿಸುತ್ತಿದ್ದಾರೆ. ಈ ಸಂಗತಿಯು ಸ್ಥೂಲವಾಗಿ ರಾಜ್ಯದಲ್ಲಿ ಅಸಮಾನತೆಯು ತೀವ್ರವಾಗಿ ಏರಿಕೆಯಾಗಿರುವುದನ್ನು ಸೂಚಿಸುತ್ತದೆ. ಕರ್ನಾಟಕ ರಾಜ್ಯದ ತಲಾ ವರಮಾನವು ೧೯೬೪ – ೬೫ ರಲ್ಲಿ ರಾಷ್ಟ್ರಮಟ್ಟದ ತಲಾವರಮಾನದ ಶೇ. ೯೧.೬೬ ರಷ್ಟಿದ್ದುದು ೨೦೦೨ – ೦೩ ರಲ್ಲಿ ಅದು ಶೇ. ೯೭.೨೭ ರಷ್ಟಾಗಿದೆ. ರಾಜ್ಯದ ಒಟ್ಟು ಸಾಕ್ಷರತೆಯು ೧೯೬೧ ರಲ್ಲಿ ದೇಶದಲ್ಲಿನ ಸಾಕ್ಷರತೆಯ ಶೇ.೮೮.೩೪ ರಷ್ಟಿದ್ದುದು ೨೦೦೧ ಅದು ಶೇ. ೧೦೩.೯೨ ರಷ್ಟಾಗಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಸಾಕ್ಷರತೆಯು ೧೯೯೧ ರಲ್ಲಿ ಒಟ್ಟು ಜನಸಂಖ್ಯೆಯ ಸಾಕ್ಷರತೆಯ ಶೇ. ೬೭.೯೧ ರಷ್ಟಿದ್ದುದು ೨೦೦೧ರಲ್ಲಿ ಅದು ಶೇ. ೭೮.೯೧ ರಷ್ಟಾಗಿದೆ. ಮಹಿಳೆಯರ ಸಾಕ್ಷರತೆಯು ೧೯೬೧ ರಲ್ಲಿ ಪುರುಷರ ಸಾಕ್ಷರತೆಯ ಶೇ. ೩೯.೪೯ ರಷ್ಟಿದ್ದುದು ೨೦೦೧ ರಲ್ಲಿ ಅದು ಶೇ. ೭೪.೭೧ ರಷ್ಟಾಗಿದೆ.

ಹೀಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅದರ ಪ್ರಗತಿಯು ಉತ್ತೇಜನಕಾರಿಯಾಗಿದೆ. ಪ್ರಾಕೃತಿಕ ಸಂಪನ್ಮೂಲದ ದೃಷ್ಟಿಯಿಂದ ಅನನುಕೂಲ ಸ್ಥಿತಿಯಲ್ಲಿರುವ ರಾಜ್ಯವು ಕಳೆದ ೫೦ ವರ್ಷಗಳಲ್ಲಿ ಸಾಧಿಸಿಕೊಂಡಿರುವ ಸಾಧನೆಯು ಕಡಿಮೆಯಾದುದೇನಲ್ಲ. ಜನಸಂಖ್ಯೆಯ ಬೆಳವಣಿಗೆಯನ್ನು ಅದು ಸಮರ್ಥವಾಗಿ ನಿಯಂತ್ರಿಸುವುದರಲ್ಲಿ ಯಶಸ್ವಿಯಾಗಿದೆ. ಇಡೀ ದೇಶದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ೦ – ೬ ವಯೋಮಾನದ ಮಕ್ಕಳ ಪ್ರಮಾಣವು ೨೦೦೧ ರಲ್ಲಿ ಶೇ. ೧೫.೩೭ ರಷ್ಟಿದ್ದರೆ ಕರ್ನಾಟಕದಲ್ಲಿ ಅವರ ಪ್ರಮಾಣ ಶೇ. ೧೩.೫೯. ವಾರ್ಷಿಕ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ ೧೯೯೧ – ೨೦೦೧ ರಲ್ಲಿ ರಾಷ್ಟ್ರಮಟ್ಟದಲ್ಲಿ ಶೇ. ೨.೧೩ರಷ್ಟಿದ್ದರೆ ಕರ್ನಾಟಕದಲ್ಲಿ ಅದು ೧.೭೨ ರಷ್ಟಿದೆ.

ಕೃಷಿಗೆ ಸಂಬಂಧಿಸಿದಂತೆ ರಾಜ್ಯವು ಇಂದು ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಬಿಕ್ಕಟ್ಟು ಕೇವಲ ರೈತರ ಆತ್ಮಹತ್ಯೆಗೆ ಸಂಬಂಧಿಸಿದುದಲ್ಲ. ಅದು ನಮ್ಮ ಒಟ್ಟಾರೆ ಆರ್ಥಿಕ ನೀತಿಗೆ ಸಂಬಂಧಿಸಿದ ಸಂಗತಿಯಾಗಿದೆ. ಕರ್ನಾಟಕದಲ್ಲಿ ಇಂದು ೧೩೧ ಲಕ್ಷ ದುಡಿಮೆಗಾರರು ಕೃಷಿಯನ್ನು ಅವಲಂಬಿಸಿಕೊಂಡಿದ್ದಾರೆ. ಇದರಲ್ಲಿ ದಿನಗೂಲಿ ದುಡಿಮೆಗಾರರ ಸಂಖ್ಯೆ ೬೨ ರಲ್ಲಿ. ಈ ೬೨ ಲಕ್ಷ ದುಡಿಮೆಗಾರರ ದಿನಗೂಲಿ ಸರಾಸರಿ ರೂ. ೫೦ ರಿಂದ ರೂ. ೭೦ ದಾಟುವುದಿಲ್ಲ. ಈ ೬೨ ಲಕ್ಷ ದಿನಗೂಲಿ ಸರಾಸರಿ ರೂ. ೫೦ ರಿಂದ ರೂ. ೭೦ ದಾಟುವುದಿಲ್ಲ. ಈ ೬೨ ಲಕ್ಷ ದಿನಗೂಲಿ ಕೃಷಿ ದುಡಿಮೆಗಾರರಲ್ಲಿ ಮಹಿಳೆಯರ ಸಂಖ್ಯೆ ೩೬ (ಶೇ.೫೮). ಇವರ ಬದುಕು ಅತ್ಯಂತ ದುಸ್ಥಿತಿಯಲ್ಲಿದೆ. ಇವರೆಲ್ಲರೂ ಆಹಾರ ಅಭದ್ರತೆಯಿಂದ ನರಳುತ್ತಿದ್ದಾರೆ. ಆರೋಗ್ಯ ಮತ್ತು ಶಿಕ್ಷಣಗಳಿಂದ ಇದು ವಂಚಿತವಾದ ವರ್ಗವಾಗಿದೆ.

ಇದಕ್ಕಿಂತ ಮುಖ್ಯವಾಗಿ ಕೃಷಿಗೆ ಸಂಬಂಧಿಸಿದಂತೆ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಂಗತಿಯೆಂದರೆ ಒಣಭೂಮಿ ಬೇಸಾಯ. ಸುಮಾರು ೭೫ ಲಕ್ಷ ಹೆಕ್ಟೇರು ಭೂಮಿ ರಾಜ್ಯದಲ್ಲಿ ಮಳೆಯನ್ನು ಆಶ್ರಯಿಸಿಕೊಂಡಿದೆ. ಆದರೆ ಒಣಭೂಮಿ ಬೇಸಾಯದ ಮೇಲೆ ಸರ್ಕಾರವು ತೊಡಗಿಸುತ್ತಿರುವ ಬಂಡವಾಳ ನಿಕೃಷ್ಣವಾದುದು. ಅನೇಕ ರಾಷ್ಟ್ರ ಮಟ್ಟದ ಅಧ್ಯಯನಗಳು ತೋರಿಸಿರುವಂತೆ ಬಡತನದ ಪ್ರಮಾಣವನ್ನು ಕಡಿಮೆ ಮಾಡಲು ಇರುವ ಪರಿಣಾಮಕಾರಿ ಮಾರ್ಗವೆಂದರೆ ಕೃಷಿ ಕ್ಷೇತ್ರದಲ್ಲಿ ತೀವ್ರ ಬೆಳವಣಿಗೆ ಸಾಧಿಸಿಕೊಳ್ಳುವುದಾಗಿದೆ (ವಿವರಗಳಿಗೆ ನೋಡಿ : ಮಾರ್ಟಿನ್ ರಾವೇಲಿಯನ್ : ೨೦೦೦, ಶೆನ್‌ಗೆನ್‌ಪಾನ್, ಪೀಟರ್ ಹಾಜೆಲ್ : ೨೦೦೦).

ಕೃಷಿ ಕ್ಷೇತ್ರವನ್ನು ಅವಲಂಬಿಸಿಕೊಂಡಿರುವ ದಿನಗೂಲಿಗಳ ಆರೋಗ್ಯದ ಮಟ್ಟ ಹಾಗೂ ಶಿಕ್ಷಣದ ಮಟ್ಟವನ್ನು ಸುಧಾರಿಸುವುದರಿಂದಲೂ ಬಡತನದ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ. ಏಕೆಂದರೆ ಅಮರ್ತ್ಯಸೆನ್, ಮೆಹಬೂಬ್ ಉಲ್‌‌ಹಕ್ ಮುಂತಾದವರ ಪ್ರಕಾರ ಜನರ ಧಾರಣ ಸಾಮರ್ಥ್ಯವನ್ನು ನಿರ್ಧರಿಸುವ ಬಹುಮುಖ್ಯ ಚಲಗಳೆಂದರೆ ಶಿಕ್ಷಣ ಮತ್ತು ಆರೋಗ್ಯ. ಮುಂದಿನ ಪಂಚವಾರ್ಷಿಕ ಯೋಜನೆಗಳಲ್ಲಿ ಕರ್ನಾಟಕ ಸರ್ಕಾರವು ಕೆಳಕಂಡ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು.

೧. ಕೃಷಿಯ ಮೇಲೆ, ಅದರಲ್ಲೂ ಒಣಭೂಮಿ ಬೇಸಾಯದ ಮೇಲೆ ತೊಡಗಿಸುವ ಬಂಡವಾಳವನ್ನು ಅಧಿಕಗೊಳಿಸಬೇಕು. ಕೃಷಿಕ್ಷೇತ್ರದಲ್ಲಿ ಉನ್ನತ ಮಟ್ಟದ ಬೆಳವಣಿಗೆ ಸಾಧಿಸಿಕೊಳ್ಳದೆ ಮತ್ತು ಅದರಲ್ಲಿದ ದೃಢತೆಯನ್ನು ಸಾಧಿಸಿಕೊಳ್ಳದೆ ಬಡತನವನ್ನು ಕಡಿಮೆ ಮಾಡುವುದು ಸಾಧ್ಯವಾಗುವುದಿಲ್ಲ.

೨. ಕೃಷಿಯೇತರ ಕ್ಷೇತ್ರಗಳ ವಿಸ್ತರಣೆಯ ಲಾಭವನ್ನು ರಾಜ್ಯದ ಬಡವರ್ಗ ಪಡೆದುಕೊಳ್ಳಬೇಕಾದರೆ ಧಾರಣ ಸಾಮರ್ಥ್ಯವನ್ನು ಉತ್ತಮಪಡಿಸಬೇಕಾಗುತ್ತದೆ. ಅದಕ್ಕಾಗಿ ಸರ್ಕಾರವು ಮುಂದಿನ ಯೋಜನೆಗಳಲ್ಲಿ ಅತ್ಯಂತ ದುಸ್ಥಿತಿಯಲ್ಲಿರುವ ಗ್ರಾಮೀಣ ಆರೋಗ್ಯ ವ್ಯವಸ್ಥೆಯನ್ನು ಹಾಗೂ ಪ್ರಾಥಮಿಕ ಶಿಕ್ಷಣವನ್ನು ತುಂಬಾ ಸುಧಾರಿಸ ಬೇಕಾಗುತ್ತದೆ.

ರಾಜ್ಯವು ಸಾಧಿಸಿಕೊಂಡ ಅಭಿವೃದ್ಧಿಯ ಫಲವು ವಂಚಿತ ವರ್ಗಕ್ಕೆ ದೊರೆಯ ಬೇಕಾದರೆ ಅವರ ಧಾರಣ ಶಕ್ತಿ ಉತ್ತಮವಾಗಬೇಕು. ಅದಕ್ಕಾಗಿ ಮಾನವ ಅಭಿವೃದ್ಧಿಯ ಸೂಚಿಗಳ ಮೇಲೆ ಹೆಚ್ಚಿನ ಬಂಡವಾಳ ತೊಡಗಿಸಬೇಕಾಗುತ್ತದೆ. ರಾಜ್ಯದಲ್ಲಿ ಒಣಭೂಮಿ ಬೇಸಾಯದ ಮೇಲೆ ಹೆಚ್ಚಿನ ಬಂಡವಾಳ ತೊಡಗಿಸುವುದು ಮತ್ತು ಗ್ರಾಮೀಣ ಪ್ರಾಥಮಿಕ ಆರೋಗ್ಯ ಹಾಗೂ ಪ್ರಾಥಮಿಕ ಶಿಕ್ಷಣದ ಮೇಲೆ ಹಣ ತೊಡಗಿಸುವುದೆಂದರೆ ರಾಜ್ಯದ ಹಿಂದುಳಿದ ಪ್ರದೇಶಗಳ ಮೇಲೆ ಬಂಡವಾಳ ತೊಡಗಿಸಿದಂತೆ ಲೆಕ್ಕ. ಇಂತಹ ಕ್ರಮಗಳಿಂದ ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮತೋಲನವನ್ನು ಸರಿಪಡಿಸಬಹುದಾಗಿದೆ.

ಲಿಂಗ ಸಂಬಂಧಿ ಅಭಿವೃದ್ಧಿ

ರಾಜ್ಯದ ಪಂಚವಾರ್ಷಿಕ ಯೋಜನೆಗಳ ಬಹುದೊಡ್ಡ ಲೋಪದ ಸಂಗತಿಯೆಂದರೆ ಲಿಂಗ ಸಂಬಂಧಿ ಅಭಿವೃದ್ಧಿಯ ನಿರ್ಲಕ್ಷ್ಯ. ಜನಪ್ರಿಯ ಮಟ್ಟದಲ್ಲಿ ಮಹಿಳೆಯರ ಅಭಿವೃದ್ಧಿ ಕುರಿತಂತೆ ಸರ್ಕಾರವು ತೀವ್ರ ಸ್ವರೂಪದ ಲಿಂಗ ಸ್ಪಂದಿ ಮನೋಭಾವವನ್ನು ವ್ಯಕ್ತಪಡಿಸುತ್ತದೆ. ಆದರೆ ಅವು ಮಹಿಳೆಯರ ದೈನಂದಿನ ಹಿತಾಸಕ್ತಿಗಳನ್ನು ಈಡೇರಿಸಬಲ್ಲವೇ ವಿನಾ ಅವರ ಸಂಘರ್ಷಣಾತ್ಮಕ ಹಿತಾಸಕ್ತಿಗಳನ್ನು ಹಿಡಿದಿಡಲಾರವು. ಮಹಿಳೆಯರ ಸ್ಥಿತಿಗತಿ ಉತ್ತಮಪಡಿಸುವ ಉದ್ದೇಶದ ಹತ್ತಾರು ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಜಾರಿಗೊಳಿಸಲಾದೆ. ಆದರೆ ಅವು ಎಷ್ಟರಮಟ್ಟಿಗೆ ಮಹಿಳಾ ಸ್ವಾಯತ್ತತೆಯನ್ನು ಸಬಲೀಕರಣವನ್ನು ಸಾಧಿಸಿವೆ ಎಂಬುದು ಅನುಮಾನಾಸ್ಪದವಾದ ಸಂಗತಿಯಾಗಿದೆ.

ಸ್ತ್ರೀಶಕ್ತಿ, ಸ್ವಶಕ್ತಿ, ಯಶಸ್ವಿನಿ, ನಮ್ಮ ಮಕ್ಕಳು – ನಮ್ಮ ಭಾಗ್ಯ ಮುಂತಾದ ರಂಜನೀಯ ವಾದ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೊಳಿಸಿದೆ. ಆದರೆ ಅವು ಮೂಲಭೂತವಾಗಿ ‘ಸುಧಾರಣಾವಾದಿ’ ಕ್ರಮಗಳಾಗಿವೆ. ಇವು ಪರಿವರ್ತನಾವಾದಿ ಕ್ರಮಗಳಲ್ಲ. ಉದಾಹರಣೆಗೆ ಕೆಳಗಿನ ಸಂಗತಿಗಳನ್ನು ನೋಡಬಹುದು (ಕೋಷ್ಟಕ ೨೬).

ಲಿಂಗ ಸಂಬಂಧಿ ಸೂಚಿಗಳು

ಕೋಷ್ಟಕ೨೬

ವಿವರಗಳು ವರ್ಷಗಳು
೧೯೮೧ ೧೯೯೧ ೨೦೦೧
ಜನಸಂಖ್ಯೆಯಲ್ಲಿ ಮಹಿಳೆಯ ಪ್ರಮಾಣ ಶೇ. ೪೯.೦೪ ೪೮.೯೭ ೪೯.೦೮
ಒಟ್ಟು ದುಡಿಮೆಗಾರರಲ್ಲಿ ಮಹಿಳೆಯರ ಪ್ರಮಾಣ ಶೇ. ೩೦.೮೭ ೩೪.೨೭ ೩೫.೦೭
ಕೃಷಿ ಕೂಲಿಕಾರರಲ್ಲಿ ಮಹಿಳೆಯರ ಪ್ರಮಾಣ ಶೇ. ೪೬.೯೪ ೪೯.೭೫ ೫೮.೧೯
ಅಕ್ಷರಸ್ಥರಲ್ಲಿ ಮಹಿಳೆಯರ ಪ್ರಮಾಣ ಶೇ. ೩೫.೧೫ ೪೧.೭೦ ೪೨.೧೦
ಅನಕ್ಷರಸ್ಥರಲ್ಲಿ ಮಹಿಳೆಯರ ಪ್ರಮಾಣ ಶೇ. ೬೦.೮೫ ೬೨.೦೦ ೬೩.೪೦

ಮೂಲ : ಜನಗಣತಿ ವರದಿಗಳು

ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರವೇನು, ಪಾತ್ರವೆಷ್ಟು ಎಂಬುದನ್ನು ಮೇಲಿನ ಸಂಗತಿಗಳು ಸೂಚಿಸುತ್ತವೆ. ಆದರೆ ಪಂಚವಾರ್ಷಿಕ ಯೋಜನೆಗಳಲ್ಲಿ ನಿರ್ದಿಷ್ಟವಾಗಿ ದುಡಿಯುವ ಮಹಿಳೆಯರ ಅಭಿವೃದ್ಧಿಗಾಗಿ ಪರಿವರ್ತನಾವಾದಿ – ಸಂಘರ್ಷಣಾವಾದಿ ಕಾರ್ಯಕ್ರಮಗಳು ಕಂಡುಬರುವುದಿಲ್ಲ.

ಅಭಿವೃದ್ಧಿ ಕೊಡಮಾಡುವ ಫಲಗಳಲ್ಲಿ ಮಹಿಳೆಯರ ಪಾಲು ಕಡಿಮೆ. ಆದರೆ ದುಸ್ಥಿತಿಯಲ್ಲಿ ಅವರ ಪಾಲು ಅಧಿಕ. ಇದಕ್ಕೆ ರಾಜ್ಯದಲ್ಲಿನ ಕೃಷಿ ಅವಲಂಬನೆಯನ್ನು ನೋಡಬಹುದು (ಕೋಷ್ಟಕ – ೨೭).

ಕೃಷಿ ಅವಲಂಬನೆಯ ಲಿಂಗ ಸಂಬಂಧಿ ಸ್ವರೂಪ

ಕೋಷ್ಟಕ೨೭                                          (ಲಕ್ಷಗಳಲ್ಲಿ)

ವಿವರಗಳು ೧೯೯೧ ೨೦೦೧
ಗಂಡು ಹೆಣ್ಣು ಒಟ್ಟು ಗಂಡು ಹೆಣ್ಣು ಒಟ್ಟು
ಕೃಷಿ ಸಾಗುವಳಿದಾರರು ೪೬.೨೮ ೧೨.೮೮ ೫೯.೧೬ ೪೮.೩೩ ೨೦.೫೧ ೬೮.೮೪
ಕೃಷಿ ದಿನಗೂಲಿಗಳು ೨೫.೧೨ ೨೪.೮೭ ೪೯.೯೯ ೨೬.೨೦ ೩೬.೦೫ ೬೨.೨೫
ಒಟ್ಟು ಕೃಷಿ ಅವಲಂಬಿತರು ೭೧.೪೦
(೫೨.೧೨)
೩೭.೭೫
(೭೫.೩೯)
೧೦೯.೧೫
(೬೩.೧೨)
೭೪.೫೩
(೪೮.೯೨)
೫೬.೫೬
(೬೮.೧೫)
೧೩೧.೦೯
(೫೫.೭೦)
ಒಟ್ಟು ದುಡಿಮೆಗಾರರು ೧೨೨.೮೫ ೫೦.೦೭ ೧೭೨.೯೨ ೧೫೨.೩೫ ೮೨.೯೯ ೨೩೫.೩೪

ಟಿಪ್ಪಣಿ : ಆವರಣದಲ್ಲಿ ಅಂಕಿಗಳು ಒಟ್ಟು ಮೊತ್ತದ ಶೇಕಡ ಪ್ರಮಾಣ ತೋರಿಸುತ್ತವೆ.

ಮೂಲ : ಜನಗಣತಿ ವರದಿಗಳು : ೧೯೯೧ ಮತ್ತು ೨೦೦೧.

ಕೃಷಿಯ ಅವಲಂಬನೆಯು ಪುರುಷ ದುಡಿಮೆಗಾರರಿಗಿಂತ ಮಹಿಳಾ ದುಡಿಮೆಗಾರರಲ್ಲಿ ಅಧಿಕವಾಗಿದೆ. ಒಟ್ಟು ಕೃಷಿ ಅವಲಂಬನೆ ಶೇ. ೫೫ ರಷ್ಟಿದ್ದರೆ ಮಹಿಳೆಯರ ಕೃಷಿ ಅವಲಂಬನೆ ಶೇ.೬೮ ರಷ್ಟಿದೆ. ಆದರೆ ಪುರುಷ ದುಡಿಮೆಗಾರರ ಕೃಷಿ ಅವಲಂಬನೆಯು ಕೇವಲ ಶೇ. ೪೮.೯೨ (೨೦೦೧). ಯಾವ ವೃತ್ತಿಯಲ್ಲಿ ಕೂಲಿ ಕಡಿಮೆಯಿರುತ್ತದೋ ಮತ್ತು ಯಾವುದು ಹಂಗಾಮಿಯಾಗಿರುವುದೋ ಅಲ್ಲಿ ಮಹಿಳೆಯರು ಅಧಿಕವಾಗಿರುತ್ತಾರೆ.

  • ಕೃಷಿ ಕೂಲಿಕಾರರಲ್ಲಿ ಮಹಿಳೆಯರ ಪ್ರಮಾಣವು ೧೯೯೧ರಲ್ಲಿ ಸರಿಸುಮಾರು ಶೇ. ೫೦ ರಷ್ಟಿದ್ದರೆ ೨೦೦೧ರಲ್ಲಿ ಅವರ ಪ್ರಮಾಣವು ಶೇ. ೫೭.೯೧ ಕ್ಕೇರಿದೆ.
  • ಅಕ್ಷರಸ್ಥರಲ್ಲಿ ಪುರುಷರ ಪ್ರಮಾಣ ಅಧಿಕವಾಗಿದ್ದರೆ ಅನಕ್ಷರಸ್ಥರಲ್ಲಿ ಮಹಿಳೆಯರ ಪ್ರಮಾಣವು ಅಧಿಕವಾಗಿದೆ.

ಈ ಬಗೆಯಲ್ಲಿ ಅಭಿವೃದ್ಧಿಯು ಮಹಿಳೆಯರಿಗೆ ಪ್ರತಿಕೂಲವಾಗಿದೆ. ಆದರೆ ಪಂಚ ವಾರ್ಷಿಕ ಯೋಜನೆಗಳಲ್ಲಿ ಮಹಿಳೆಯರ ಅಭಿವೃದ್ಧಿಗಾಗಿ ಮಹತ್ವದ್ದೆನ್ನಬಹುದಾದ ಕಾರ್ಯಯೋಜನೆ ಕಂಡುಬರುವುದಿಲ್ಲ. ಅಭಿವೃದ್ಧಿಯು ರಾಜ್ಯದಲ್ಲಿ ಪುರುಷಶಾಹಿಯಿಂದ ಮೆರೆಯುತ್ತಿದೆ ಎಂಬುದಕ್ಕೆ ೨೦೦೬ರಲ್ಲಿ ರಾಜ್ಯದ ಸಚಿವಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯವಿಲ್ಲದಿರುವುದು ನಿದರ್ಶನವಾಗಿದೆ. ಮಹಿಳೆಯರು ರಾಜ್ಯದಲ್ಲಿ ಎಂತಹ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ ಎಂದರೆ ರಾಜ್ಯ ಮಹಿಳಾ ಆಯೋಗವು ಮುಖ್ಯಸ್ಥರಿಲ್ಲದೆ ನಡೆದಿದೆ (೨೦೦೭ – ೨೦೧೦). ಇದು ಕೇವಲ ತಾತ್ಕಾಲಿಕವಾದ ಒಂದು ಅಪವಾದವೆಂದು ಯಾರಾದರೂ ಹೇಳಬಹುದು. ಆದರೆ ಇಂತಹ ಸೂಕ್ಷ್ಮಸಂಗತಿಗಳು ಆಡಳಿತ – ಅಭಿವೃದ್ಧಿಯ ಮೂಲದಲ್ಲಿ ಕೆಲಸ ಮಾಡುತ್ತಿರುವವರ ಮನೋಭಾವವನ್ನು ಸೂಚಿಸುತ್ತವೆ. ಲಿಂಗ ಸಮಾನತೆ ಅಥವಾ ಮಹಿಳೆಯರ ಸಬಲೀಕರಣವೆಂಬುದು ಅಭಿವೃದ್ಧಿಯೊಂದಿಗೆ ಸಹಜವಾಗಿ ಸಂಭವಿಸುವ ಸಂಗತಿಗಳಲ್ಲ. ಅದನ್ನು ನಾವು ಪ್ರಜ್ಞಾಪೂರ್ವಕವಾಗಿ ಸಾಧಿಸಿಕೊಳ್ಳಬೇಕಾಗುತ್ತದೆ. ಈ ದಿಶೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಯೋಚಿಸಬೇಕಾಗುತ್ತದೆ. ಪಂಚವಾರ್ಷಿಕ ಯೋಜನೆಗಳಲ್ಲಿ ಕನಿಷ್ಟ ಶೇ.೩೩ ರಷ್ಟು ಬಂಡವಾಳವನ್ನು ಮಹಿಳೆಯರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮೀಡಲಿಡಬೇಕಾಗುತ್ತದೆ.

ಸರ್ಕಾರವು ಜಾರಿಗೊಳಿಸುವ ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳಿಂದ ಮಹಿಳೆಯರ ಸ್ಥಿತಿಗತಿ ಉತ್ತಮವಾಗಬಹುದು. ಆದರೆ ಸಮಾಜದಲ್ಲಿ ಮತ್ತು ಪುರುಷರಿಗೆ ಸಾಪೇಕ್ಷವಾಗಿ ಮಹಿಳೆಯರ ಸ್ಥಾನಮಾನವು ಉತ್ತಮವಾಗಲಿಕ್ಕಿಲ್ಲ. ಏಕೆಂದರೆ ಸ್ಥಿತಿಗತಿಯೆನ್ನುವುದು ಸಾಪೇಕ್ಷವಾದುದು. ಆದರೆ ಸ್ಥಾನಮಾನವೆನ್ನುವುದು ಸಂಬಂಧವಾದಿ ಸಂಗತಿಯಾಗಿದೆ. ಇದು ಅಧಿಕಾರಕ್ಕೆ ಸಂಬಂಧಿಸಿದ ಸಂಗತಿಯಾಗಿದೆ. ಉದಾಹರಣೆಗೆ ಮಹಳೆಯರಿಗೆ ಶಿಕ್ಷಣ ಮುಖ್ಯ. ಆದರೆ ಶಿಕ್ಷಣದಿಂದ ಲಿಂಗಸಮಾನತೆ ಅಥವಾ ಮಹಿಳೆಯರ ಸ್ವಾಯತ್ತತೆ ಸಾಧ್ಯವಾಗುವುದಿಲ್ಲ. ಮನೆಯ ಹೊರಗೆ ಉದ್ಯೋಗ ದೊರೆತು ಬಿಟ್ಟರೆ ಮಹಿಳೆಗೆ ವಿಮೋಚನೆ ದೊರೆಯುತ್ತದೆ ಎಂಬುದೂ ಸರಿಯಲ್ಲ. ಮಹಿಳೆಯರು ಮತ್ತು ಪುರುಷರ ನಡುವಿನ ಅಧಿಕಾರ ಸಂಬಂಧವನ್ನು ಬದಲಾಯಿಸುವ ದಿಶೆಯಲ್ಲಿ ತೆಗೆದುಕೊಳ್ಳುವ ಕ್ರಮಗಳು ತುಂಬಾ ಮುಖ್ಯವಾಗುತ್ತವೆ. ಉದಾಹರಣೆಗೆ ಆಸ್ತಿ ಹಕ್ಕು, ಕುಟುಂಬದಲ್ಲಿ ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆಯರ ಸಹಭಾಗಿತ್ವ, ಗೃಹವಾರ್ತೆಯನ್ನು ಪುರುಷರೊಂದಿಗೆ ಹಂಚಿಕೊಳ್ಳುವುದು, ಲಿಂಗ ಸಂಬಂಧಿ ಶ್ರಮ ವಿಭಜನೆಯನ್ನು ತಿರಸ್ಕರಿಸುವುದು ಮುಂತಾದವು ಮಹಿಳೆಯರ ಬದುಕಿನ ದೃಷ್ಟಿಯಿಂದ ಮುಖ್ಯವಾಗುತ್ತವೆ.

ಪಂಚವಾರ್ಷಿಕ ಯೋಜನೆಗಳಲ್ಲಿ ಮಹಿಳೆಯರ ಸಂಘರ್ಷಣಾತ್ಮಕ ಸಂಗತಿಗಳು ಬಗ್ಗೆ ಯಾವುದೇ ಚಿಂತನೆ ನಡೆಲಿಲ್ಲ. ಲಿಂಗ ಸಂಬಂಧಗಳ ದೃಷ್ಟಿಯಿಂದ ನಮ್ಮ ಯೋಜನೆಗಳು ಲಿಂಗ ನಿರಪೇಕ್ಷವಾಗಿವೆ. ಅವುಗಳನ್ನು ಲಿಂಗ ಸ್ಪಂದಿಯನ್ನಾಗಿ ಮಾಡುವುದರ ಬಗ್ಗೆ ನಾವು ಯೋಚಿಸಬೇಕಾಗಿದೆ.

ಮಾನವ ಅಭಿವೃದ್ಧಿ ವೈಫಲ್ಯಗಳು

ಬದುಕನ್ನು ಉತ್ತಮಪಡಿಸಿಕೊಳ್ಳಲು ಲಭ್ಯವಿರುವ ಅವಕಾಶಗಳಲ್ಲಿ ಅಗತ್ಯವಾದುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಹಾಗೂ ಸಾಮರ್ಥ್ಯಗಳ ವರ್ಧನೆಯನ್ನು ಅಮರ್ತಸೆನ್ ಅಭಿವೃದ್ಧಿಯೆಂದು ನಿರ್ವಚಿಸಿದ್ದಾರೆ. ಕರ್ನಾಟಕದಲ್ಲಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯದಿಂದ ವಂಚಿತವಾದ ೬೨ ಲಕ್ಷ ಭೂರಹಿತ ಕೃಷಿ ಕೂಲಿಕಾರರಿದ್ದಾರೆ. ಇವರ ಸಾಕ್ಷರತೆ, ಶಿಕ್ಷಣ, ಆರೋಗ್ಯ, ಆಹಾರ ಭದ್ರತ ಎಲ್ಲವೂ ಆತಂಕಕಾರಿ ಸ್ಥಿತಿಯಲ್ಲಿವೆ. ಈ ೬೨ ಲಕ್ಷ ಭೂರಹಿತ ಕೃಷಿಕೂಲಿಕಾರರಲ್ಲಿ ಪರಿಶಿಷ್ಟ ಜಾತಿಯವರ ಜಾತಿಯವರ ಪ್ರಮಾಣ ಶೇ. ೨೭.೮೯ ಮತ್ತು ಪರಿಶಿಷ್ಟ ಪಂಗಡದವರ ಪ್ರಮಾಣ ಶೇ. ೧೧.೮೩. ರಾಜ್ಯದ ಜನಸಂಖ್ಯೆಯಲ್ಲಿ ಒಟ್ಟು ಪರಿಶಿಷ್ಟರ (ಪ.ಜಾ.+ಪ.ಪಂ) ಪ್ರಮಾಣ ಶೇ. ೨೨.೯೧ ರಷ್ಟಾದರೆ ಕೂಲಿಕಾರರಲ್ಲಿ ಅವರ ಪ್ರಮಾಣ ಶೇ. ೩೯.೭೧.

ಮಾನವ ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯದಲ್ಲಿ ಅತ್ಯಂತ ಕೆಳಮಟ್ಟದಲ್ಲಿರುವವರೆಂದರೆ ಪರಿಶಿಷ್ಟರಾಗಿದ್ದಾರೆ (ಪ.ಜಾ.+ಪ.ಪಂ.) ರಾಜ್ಯದಲ್ಲಿ ಒಟ್ಟು ಕೂಲಿಕಾರರ ಸಂಖ್ಯೆ ೬೨ ಲಕ್ಷವಾದರೆ ಪರಿಶಿಷ್ಟ ಕೂಲಿಕಾರರ ಸಂಖ್ಯೆ ೨೪.೭೪ ಲಕ್ಷ. ಇವರಿಗೆ ಹೊಟ್ಟೆ ಬಟ್ಟೆ ಬದುಕೇ ಕಷ್ಟಕರವಾಗಿರುವುದರಿಂದ ಅವರು ಶಿಕ್ಷಣ ಪಡದುಕೊಳ್ಳುವಲ್ಲಿ ತೀವ್ರ ಹಿಂದುಳಿದಿದ್ದಾರೆ ಮತ್ತು ಆರೋಗ್ಯದ ಬಗ್ಗೆ ಅವರಿಗೆ ಚಿಂತಿಸಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಾರೆ.

ರಾಜ್ಯದ ೬೨ ಲಕ್ಷ ದಿನಗೂಲಿ ದುಡಿಮೆಗಾರರು ಆಹಾರ ಅಭದ್ರತೆಯನ್ನು ಎದುರಿಸುತ್ತಿದ್ದಾರೆ. ಆರೋಗ್ಯ ಕಾರ್ಯಕ್ರಮವು ರೋಗ ನಿರ್ದಿಷ್ಟವಾಗುತ್ತಿರುವುದರಿಂದ ಸಾರ್ವತ್ರಿಕ ಪ್ರಾಥಮಿಕ ಆರೋಗ್ಯ ಸೇವೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಒಂದೊಂದು ರೋಗಕ್ಕೆ ಒಂದೊಂದು ಸಂಸ್ಥೆಗಳನ್ನು ಸ್ಥಾಪಿಸಲಾಗುತ್ತಿದೆ. ಇದು ಬೇಕು. ಆದರೆ ಏಕೀಕೃತವಾದ ಆರೋಗ್ಯ ಸೇವೆಯನ್ನು ಒಂದು ನೆಲೆಯಲ್ಲಿ ಕೊಡುವುದರಿಂದ ಬಡವರಿಗೆ ಅನುಕೂಲವಾಗುತ್ತದೆ. ಯೋಜನೆಗಳಲ್ಲಿ ಮಾನವ ಅಭಿವೃದ್ಧಿ ಸೂಚಿಗಳ ನಿರ್ವಹಣೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ.

ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮತೋಲನ

ಆರಂಭದ ಪಂಚವಾರ್ಷಿಕ ಯೋಜನೆಯಿಂದಲೂ ಪ್ರಾದೇಶಿಕವಾಗಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮತೋಲನವನ್ನು ಸಾಧಿಸಿಕೊಳ್ಳಲು ಪ್ರಯತ್ನಿಸುತ್ತಾ ಬರಲಾಗಿದೆ. ಹಿಂದುಳಿದ ಪ್ರದೇಶ / ಜಿಲ್ಲೆಗಳ ಅಭಿವೃದ್ಧಿಗಾಗಿ ವಿಶೇಷ ಮಂಡಳಿಗಳನ್ನು ಸರ್ಕಾರವು ರಚಿಸಿದೆ. ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಹಣಕಾಸು ವಿನಿಯೋಗವು ಜಿಲ್ಲೆಗಳ ಹಿಂದುಳಿದಿರುವಿಕೆಯನ್ನು ಆಧರಿಸಿ ನೀಡಲಾಗುತ್ತಿದೆ. ಈ ಸಮಸ್ಯೆಯ ಅಧ್ಯಯನಕ್ಕಾಗಿ ಸರ್ಕಾರವು ನೇಮಿಸಿದ್ದ ಸಮಿತಿಯು ೨೦೦೨ ರಲ್ಲಿ ತನ್ನ ಬೃಹತ್ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

ಪ್ರಾದೇಶಿಕ ಅಸಮಾನತೆಯೆನ್ನುವುದು ಕರ್ನಾಟಕ ರಾಜ್ಯದ ಹುಟ್ಟಿನೊಂದಿಗೆ ಬೆಳೆದು ಕೊಂಡು ಬರುತ್ತಿರುವ ಬಾಲಗ್ರಹ ಪೀಡೆಯಾಗಿದೆ. ರಾಜ್ಯದ ೨೭ ಜಿಲ್ಲೆಗಳ ಪೈಕಿ ಗುಲಬರ್ಗಾ ವಿಭಾಗದ ಐದು ಹಾಗೂ ಬೆಳಗಾವಿ ವಿಭಾಗದ ಎರಡು – ಒಟ್ಟು ಏಳು ಜಿಲ್ಲೆಗಳು ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿರುವುದನ್ನು ಅನೇಕ ಅಧ್ಯಯನಗಳು ಹಾಗೂ ಸರ್ಕಾರದ ವರದಿಗಳು ದೃಢಪಡಿಸಿವೆ.

ಪಂಚವಾರ್ಷಿಕ ಯೋಜನೆಗಳಲ್ಲಿ ತೀವ್ರ ಪ್ರಯತ್ನ ನಡೆದರೂ ಅಸಮಾನತೆಯು ಮುಂದುವರಿದಿದೆ. ಈ ಬಗ್ಗೆ ತುಂಬಾ ಗಂಭೀರವಾಗಿ ಯೋಜಿಸಬೇಕಾಗಿದೆ. ಏಕೀಕರಣಕ್ಕಾಗಿ ಹೋರಾಟ ನಡೆಯುವ ಸಂದರ್ಭದಲ್ಲಿ ಇಂತಹ ಸಮಸ್ಯೆಯನ್ನು ವಿದ್ವಾಂಸರು ಗುರುತಿಸಿದ್ದರು.

ಹೈದರಾಬಾದ್ – ಕರ್ನಾಟಕ ಪ್ರದೇಶದ ಬೀದರ್, ಕಲಬುರ್ಗಿ, ರಾಯಚೂರು ಮತ್ತು ಕೊಪ್ಪಳ, ಬೆಳಗಾವಿ ವಿಭಾಗದ ಬಾಗಲಕೋಟೆ ಮತ್ತು ಬಿಜಾಪುರ ಹಾಗೂ ಹಿಂದಿನ ಮದರಾಸು ಪ್ರಾಂತದ ಭಾಗವಾಗಿದ್ದ ಬಳ್ಳಾರಿ – ಇವು ಅತ್ಯಂತ ಹಿಂದುಳಿದಿರುವ ಜಿಲ್ಲೆಗಳು. ಈ ಜಿಲ್ಲೆಗಳ ಹಿಂದುಳಿದಿರುವಿಕೆಗೆ ಅನೇಕ ಕಾರಣಗಳನ್ನು ನೀಡಲಾಗುತ್ತಿದೆ.

ಸರ್ಕಾರದ ಮಲತಾಯಿ ಧೋರಣೆಯನ್ನು ಇದಕ್ಕೆ ಕಾರಣವನ್ನಾಗಿ ಮಾಡಲಾಗುತ್ತಿದೆ. ಇದರಲ್ಲಿ ಹುರುಳಿದೆಯೆಂದು ಹೇಳಲು ಸಾಧ್ಯವಿಲ್ಲ. ಇದನ್ನು ಇನ್ನೊಂದು ರೀತಿಯಲ್ಲಿ ಹೇಳಬಹುದು. ಬಡವರು, ದುರ್ಬಲರು, ದಲಿತರು, ಹಿಂದುಳಿದ ಪ್ರದೇಶ – ಇವುಗಳ ಬಗ್ಗೆ ಸರ್ಕಾರಗಳು ಆದ್ಯತೆ ನೀಡುವುದು ಕಡಿಮೆ. ಏಕೆಂದರೆ ಸರ್ಕಾರಕ್ಕೆ ಎದ್ದು ಕಾಣುವಂತಹ ಫಲಿತಾಂಶ ನೀಡಬಲ್ಲ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಆಸಕ್ತಿ ಇರುತ್ತದೆ. ಹಿಂದುಳಿದ ಪ್ರದೇಶಗಳ ಮೇಲೆ ಬಂಡವಾಳ ತೊಡಗಿಸುವುದರಿಂದ ತಕ್ಷಣದ ಪ್ರತಿಫಲ ಸಾಧ್ಯವಿಲ್ಲ. ಈ ಕಾರಣದಿಂದ ಸರ್ಕಾರಗಳು ಈ ವಿಷಯಗಳಲ್ಲಿ ಒಂದು ಬಗೆಯ ಔದಾಸೀನ್ಯ ಭಾವ ತಳೆಯುತ್ತವೆ.

ಆದರೆ ಪ್ರಾದೇಶಿಕ ಅಸಮಾನತೆ ನಿವಾರಣೆ ಬಗ್ಗೆ ಆಶ್ವಾಸನೆಗಳ, ಭರವಸೆಗಳ ಮಹಾಪುರ ಹರಿಯುತ್ತದೆ. ಡಾ. ಡಿ.ಎಂ. ನಂಜುಂಡಪ್ಪ ವರದಿಯನ್ನು ಜಪದಂತೆ ಜಪಿಸಲಾಗುತ್ತಿದೆ. ಆದರೆ ನಿರ್ದಿಷ್ಟವಾಗಿ ಒಂದೇ ಒಂದು ಕಾರ್ಯಕ್ರಮವನ್ನು ಸರ್ಕಾರವು ಪ್ರಾದೇಶಿಕ ಅಸಮಾನತೆ ನಿವಾರಣೆ ಬಗ್ಗೆ ಬಡವರ ನೆಲೆಯಿಂದ ಜಾರಿಗೊಳಿಸಲಿಲ್ಲ.

ಅಕ್ಷರ ದಾಸೋಹ ಕಾರ್ಯಕ್ರಮವನ್ನು ಮೊದಲು ಹಿಂದುಳಿದ ಜಿಲ್ಲೆಗಳಲ್ಲಿ ಆರಂಭಿಸಲಾಯಿತು. ಅದರ ಯಶಸ್ವಿನಿಂದ ಪ್ರಭಾವಿತಗೊಂಡ ಸರ್ಕಾರವು ಅದೇ ಯೋಜನೆಯನ್ನು ರಾಜ್ಯದ ಎಲ್ಲ ಭಾಗಗಳಿಗೂ ವಿಸ್ತರಿಸಿತು. ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ, ಶೇ. ೫೦ ರಷ್ಟು ಶಾಲೆಯನ್ನು ಮಧ್ಯದಲ್ಲಿ ಬಿಡುವ ಮಕ್ಕಳಿರುವ ಜಿಲ್ಲೆಗಳಲ್ಲಿ, ಸಾಕ್ಷರತೆ ಶೇ. ೪೫ ದಾಟದಿರುವ ತಾಲ್ಲೂಕುಗಳಲ್ಲಿ ಅದನ್ನು ಹೆಚ್ಚು ಅರ್ಥಪೂರ್ಣವಾಗಿ ಅನುಷ್ಟಾನಗೊಳಿಸಬೇಕೆಂಬ ಜ್ಞಾನ ಸರ್ಕಾರಕ್ಕೆ ಹೊಳೆಯಲಿಲ್ಲ. ಶಾಲೆಯನ್ನು ಮಧ್ಯದಲ್ಲಿ ಬಿಡುವ ಮಕ್ಕಳ ಪ್ರಮಾಣ ಶೇ.೧೦ ರಷ್ಟಿರುವ ಭಾಗಗಳಲ್ಲಿ ಮಧ್ಯಾಹ್ನದ ಊಟದ ಸೌಲಭ್ಯವಿದೆ. ಅದೇ ಸೌಲಭ್ಯ ಶಾಲೆಯನ್ನು ಮಧ್ಯದಲ್ಲಿ ಬಿಡುವ ಮಕ್ಕಳ ಪ್ರಮಾಣ ಶೇ. ೫೦ ರಷ್ಟಿರುವ ಭಾಗದಲ್ಲೂ ಆಚರಣೆಯಲ್ಲಿದೆ. ಹಿಂದುಳಿದ ಜಿಲ್ಲೆ – ತಾಲ್ಲೂಕುಗಳಲ್ಲಿ ಎರಡು ಹೊತ್ತು ಊಟ ಒದಗಿಸುವ ಬಗ್ಗೆ ಸರ್ಕಾರವು ಯೋಚಿಸಬಹುದಿತ್ತು.

ಕೃಷಿ ಕೂಲಿಕಾರರು

ರಾಜ್ಯದ ಒಟ್ಟು ದುಡಿಮೆಗಾರರಲ್ಲಿ ಕೂಲಿಕಾರರ ಪ್ರಮಾಣ ಶೇ. ೨೬.೪೫. ಆದರೆ ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಅದು ಶೇ. ೧೯.೩೭ ರಷ್ಟಿದೆ. ಕಲಬುರ್ಗಿ ವಿಭಾಗದಲ್ಲಿ ಅದರ ಪ್ರಮಾಣ ಶೇ.೪೦.೫೯.

ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಸಾಗುವಳಿದಾರರ ಸಂಖ್ಯೆಯು ಕೂಲಿಕಾರರ ಸಂಖ್ಯೆಗಿಂತ ಅಧಿಕವಿದೆ. ಆದರೆ ಉತ್ತರ ಕರ್ನಾಟಕ ಪ್ರದೇಶದಲ್ಲಿ ಇದು ತಿರುವು ಮುರುವಾಗಿದೆ.

ಭೂರಹಿತ ಕೃಷಿ ಕೂಲಿಕಾರರು ಒಂದು ಪ್ರದೇಶದಲ್ಲಿ ಅಗಾಧವಾಗಿರುವುದಕ್ಕೂ ಮತ್ತು ಅಲ್ಲಿ ಸಾಕ್ಷರತೆ ಕೆಳಮಟ್ಟದಲ್ಲಿರುವುದಕ್ಕೂ ಸಂಬಂಧವಿರುತ್ತದೆ. ಇಂತಹ ಪ್ರದೇಶಗಳು ಸಹಜವಾಗಿ ವಲಸೆ ಪ್ರವೃತ್ತಿ ಹೊಂದಿರುತ್ತವೆ. ಅಲ್ಲಿ ಶಾಲೆಯನ್ನು ಮಧ್ಯದಲ್ಲಿ ಬಿಡುವ ಮಕ್ಕಳ ಪ್ರಮಾಣ ಅಧಿಕವಾಗಿರುತ್ತದೆ. ಈ ಪ್ರದೇಶಗಳು ಸಾಮಾನ್ಯವಾಗಿ ಒಣಭೂಮಿ ಬೇಸಾಯ ಹೊಂದಿರುತ್ತವೆ.

ಆದ್ದರಿಂದ ಬಡವರನ್ನು, ದಲಿತರನ್ನು, ಮಹಿಳೆಯರನ್ನು ಮುಖ್ಯಧಾತುವನ್ನಾಗಿ ಮಾಡಿಕೊಂಡು ಅಭಿವೃದ್ಧಿಯನ್ನು ನಿರ್ವಹಿಸಿದಾಗ ಮಾತ್ರ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸುವುದು ಸಾಧ್ಯ. ನಂಜುಂಡಪ್ಪ ವರದಿಯನ್ನು ಜಪ ಮಾಡಿಬಿಟ್ಟರೆ ಪ್ರಾದೇಶಿಕ ಅಸಮಾನತೆ ಬಗೆಹರಿಯುವುದಿಲ್ಲ.

ಪಂಚವಾರ್ಷಿಕ ಯೋಜನೆಗಳಲ್ಲಿ ಪ್ರಾದೇಶಿಕ ಅಸಮಾನತೆಯ ಸಮಸ್ಯೆಯನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. ಆದರೆ ಅದರ ಪರಿಹಾರಕ್ಕೆ ಸಮರ್ಪಕ ಕಾರ್ಯಕ್ರಮಗಳನ್ನು ಯೋಜನೆಗಳಲ್ಲಿ ರೂಪಿಸುವುದು ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಅಭಿವೃದ್ಧಿ ಯೋಜನೆಗಳ ಬಹುದೊಡ್ಡ ವೈಫಲ್ಯವೆಂದರೆ ಇದಾಗಿದೆ. ಈ ಬಗ್ಗೆ ತುಂಬಾ ಗಂಭೀರವಾಗಿ ಆಲೋಚಿಸುವ ಅಗತ್ಯವಿದೆ. ಈ ಸಮಸ್ಯೆಯನ್ನು ೫೦ ವರ್ಷಗಳ ನಂತರವೂ ಬಗೆಹರಿಸಿಕೊಂಡಿಲ್ಲವೆಂದರೆ ಸಮಸ್ಯೆ ಸಂಕೀರ್ಣತೆಯನ್ನು ಊಹಿಸಿಕೊಳ್ಳಬಹುದು.

ಸಂಗ್ರಹ

ಈ ಭಾಗದಲ್ಲಿ ಎರಡು ಸಂಗತಿಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಮೊದಲು ಇಲ್ಲಿ ಅಧ್ಯಯನದ ಮುಖ್ಯ ತಥ್ಯಗಳನ್ನು ಗುರುತಿಸಲಾಗಿದೆ. ಕೊನೆಯ ಭಾಗದಲ್ಲಿ ಅಭಿವೃದ್ಧಿಯ ಹಾಗೂ ಯೋಜನೆಯ ಮುನ್ನೋಟವನ್ನು ಕುರಿತಂತೆ ಕೆಲವು ಸಂಗತಿಗಳನ್ನು ಚರ್ಚಿಸಲಾಗಿದೆ. ಕರ್ನಾಟಕದ ಮುಂದಿನ ಅಭಿವೃದ್ಧಿಯ ಪಥವನ್ನು ಗುರಿತಿಸಲು ಇಲ್ಲಿ ಪ್ರಯತ್ನಿಸಲಾಗಿದೆ.

ಮುಖ್ಯ ತಥ್ಯಗಳು

೧ ಕರ್ನಾಟಕದ ಅಭಿವೃದ್ದಿಯ ಅಧ್ಯಯನದಿಂದ ರೂಪಿಸಬಹುದಾದೊಂದು ಪ್ರಮೇಯವೆಂದರೆ ಅದು ಎಂ.ಎನ್.ಶ್ರೀನಿವಾಸ್, ಜೇಮ್ಸ್ ಮೇನರ್ ಮುಂತಾದವರು ಗುರುತಿಸಿರುವ ‘ಮಧ್ಯಮ ಗತಿ’ – ‘ಮಧ್ಯಮ ಸ್ಥಿತಿ’ ಸ್ವರೂಪಕ್ಕೆ ಅನುಗುಣವಾಗಿ ಅಲ್ಲಿ ಅಭಿವೃದ್ಧಿ ನಡೆದಿದೆ ಎಂಬುದಾಗಿದೆ. ‘ಆರಕ್ಕೆ ಏಳಲಿಲ್ಲ – ಮೂರಕ್ಕೆ ಬೀಳಲಿಲ್ಲ’ ಎಂಬಂತೆ ಅದರ ಅಭಿವೃದ್ಧಿ ನಡೆದಿದೆ.

೨. ಜನಸಂಖ್ಯೆಯ ಬೆಳವಣಿಗೆಗೆ ಸಂಬಂಧಿಸಿದಂತೆ ಅದು ಯಶಸ್ವಿಯಾಗಿದೆ. ಕೇರಳ, ತಮಿಳುನಾಡುಗಳ ನಂತರ ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕವು ಮೂರನೆಯ ಸ್ಥಾನ ಪಡೆಯಬಲ್ಲದಾಗಿದೆ.

೩. ಕರ್ನಾಟಕದ ಅಭಿವೃದ್ಧಿಯ ಅತ್ಯಂತ ದುರ್ಬಲವಾದ ಅಂಶವೆಂದರೆ ಕೃಷಿ ವಲಯ. ಈ ವಲಯವನ್ನು ರಾಜ್ಯದ ಒಟ್ಟು ದುಡಿಮೆಗಾರರಲ್ಲಿ ಶೇ. ೫೫ ರಷ್ಟು (೧೩೧ ಲಕ್ಷ) ಇದನ್ನು ಅವಲಂಬಿಸಿಕೊಂಡಿದ್ದಾರೆ. ಆದರೆ ಅದನ್ನು ಸದೃಢವಾದ ನೆಲೆಯಲ್ಲಿ ಅಭಿವೃದ್ಧಿಪಿಸುವುದು ನಮಗೆ ಸಾಧ್ಯವಾಗಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಒಣಭೂಮಿ ಬೇಸಾಯವನ್ನು ನಾವು ಅಲಕ್ಷ್ಯ ಮಾಡಿದ್ದು ಎಂದು ಹೇಳಬಹುದು. ನೀರಾವರಿ ಯೋಜನೆಗಳ ಮೇಲೆ ತೊಡಗಿಸಿದ ಬಂಡವಾಳದಲ್ಲಿ ಅರ್ಧದಷ್ಟಾನ್ನಾದರೂ ಒಣಭೂಮಿ ಬೇಸಾಯದ ಮೇಲೆ ತೊಡಗಿಸಿದ್ದರೆ ನಮ್ಮ ಕೃಷಿ ಕ್ಷೇತ್ರದ ಚಿತ್ರವು ಬೇರೆಯೇ ಆಗಿಬಿಡುತ್ತಿತ್ತು. ಹಣ್ಣು, ಹೂವು, ತರಕಾರಿ ಮುಂತಾದವುಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವುದರ ಬಗ್ಗೆ ಯೋಜನೆಗಳಲ್ಲಿ ಪ್ರಯತ್ನ ನಡೆಯಲಿಲ್ಲ. ಈ ದಿಶೆಯಲ್ಲಿ ನಾವು ಯೋಚಿಸ ಬೇಕಾಗಿದೆ.

೪. ಮೊದಲ ಮೂರು – ನಾಲ್ಕು ಯೋಜನೆಗಳಲ್ಲಿ ‘ಸಾಮಾಜಿಕ ಸೇವೆ’ಯನ್ನು ನಿರ್ಲಕ್ಷಿಸಲಾಗಿತ್ತು. ಆದರೆ ೬ – ೭ನೆಯ ಯೋಜನೆಗಳು ನಂತರ ಸಾಮಾಜಿಕ ಸೇವೆಗೆ ಆದ್ಯತೆ ದೊರೆಯತೊಡಗಿತು. ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಇದೊಂದು ಮಹತ್ವ ಬದಲಾವಣೆಯೆಂದು ಹೇಳಬಹುದು.

೫. ರಾಜ್ಯವು ೧೯೮೭ರ ನಂತರ ವಿಕೇಂದ್ರೀಕೃತ ಯೋಜನೆಯನ್ನು ದೊಡ್ಡ ಪ್ರಮಾಣದಲ್ಲಿ ಆರಂಭಿಸಿತು. ಎಂಬತ್ತು ಮತ್ತು ತೊಂಬತ್ತರ ದಶಕಗಳಲ್ಲಿ ರಾಜ್ಯವು ಕ್ರಾಂತಿಕಾರಕವಾದ ರೀತಿಯಲ್ಲಿ ಅಭಿವೃದ್ಧಿಯನ್ನು ತಳಮಟ್ಟದಿಂದ ರೂಪಿಸುವ ಕ್ರಿಯೆಗೆ ಮೂರ್ತ ರೂಪ ನೀಡಲಾಯಿತು. ದುರದೃಷ್ಟದ ಸಂಗತಿಯೆಂದರೆ ಇಂದು ಪಂಚಾಯತ್‌ರಾಜ್‌ವ್ಯವಸ್ಥೆಯು ರಾಜ್ಯದಲ್ಲಿ ಒಂದು ರೀತಿಯ ‘ಹಿನ್ನೆಡೆ’ಗೆ ಒಳಗಾಗಿದೆ. ರಾಜ್ಯ – ರಾಷ್ಟ್ರಮಟ್ಟದ ಉನ್ನತ ಸಂಸ್ಥೆಗಳ ಜನಪ್ರತಿನಿಧಿಗಳು ಅಟ್ಟಹಾಸವು ಜೋರಿನಿಂದ ನಡೆಸಿದೆ.

೬. ಮಾನವ ಅಭಿವೃದ್ಧಿಯಲ್ಲಿ ಕರ್ನಾಟಕದ ಸಾಧನೆಯು ಕೇರಳ ಮತ್ತು ತಮಿಳು ನಾಡುಗಳಿಗೆ ಹೋಲಿಸಿದರೆ ತೀರಾ ದುರ್ಬಲವಾಗಿದೆ. ಅದೇ ರೀತಿ ಲಿಂಗ ಸಂಬಂಧಗಳನ್ನು ಕುರಿತಂತೆಯೂ ರಾಜ್ಯದ ಸಾಧನೆ ಹೇಳಿಕೊಳ್ಳುವ ಸ್ಥಿತಿಯಲ್ಲಿಲ್ಲ. ಇಂದು ೨೦೦೬ ರಲ್ಲಿ ರಾಜ್ಯದ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯವಿಲ್ಲ. ರಾಜ್ಯ ಮಹಿಳಾ ಆಯೋಗದ ಮುಖ್ಯಸ್ಥರ ಸ್ಥಾನ ಖಾಲಿ ಇದೆ. ಮಾನವ ಅಭಿವೃದ್ಧಿ ಮತ್ತು ಲಿಂಗ ಸಂಬಂಧಗಳ ಬಗ್ಗೆ ಹೆಚ್ಚಿನ ಗಮನನೀಡುವ ಅಗತ್ಯವಿದೆ.

೭. ಪ್ರಾದೇಶಿಕ ಅಸಮಾನತೆ ಬಗ್ಗೆ ಜನಜಾಗೃತಿ ಉಂಟಾಗಿದೆ. ಸರ್ಕಾರವು ಅದನ್ನು ನಿರ್ಲಕ್ಷಿಸುವುದು ಸಾಧ್ಯವಿಲ್ಲ. ಇಷ್ಟಾದರೂ ಬೆಂಗಳೂರು ಬ್ರಹ್ಮರಾಕ್ಷಸನಂತೆ ಇಡೀ ರಾಜ್ಯವನ್ನೆ ನುಂಗುವಂತೆ ಬೃಹದಾಕಾರವಾಗಿ ಬೆಳೆಯುತ್ತಿದೆ. ಇದರಿಂದಾಗಿ ರಾಜ್ಯದ ಒಳನಾಡು ರೋಗಗ್ರಸ್ಥವಾಗಿ ಬಿಟ್ಟಿದೆ.

ಮುನ್ನೋಟ

ಕರ್ನಾಟಕವು ಇನ್ನು ಮುಂದೆಯೂ ತನ್ನ ಮಧ್ಯಮಗತಿ ಸ್ಥಾನದಲ್ಲೇ ಮುಂದುವರಿಯುವ ಸಾಧ್ಯತೆಯಿದೆ. ಅದರ ಮಧ್ಯಮ ಸ್ಥಿತಿಗೆ ಯಾವುದೇ ಬಗೆಯದಕ್ಕೆ ಬರುವ ಸಾಧ್ಯತೆಯಿಲ್ಲ. ಅದು ಕಳೆದ ೫೦ ವರ್ಷಗಳಲ್ಲಿ ಸಾಧಿಸಿದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಹೇಳುವುದಾದರೆ ಅದಕ್ಕೆ ಮಧ್ಯಮಗತಿಯನ್ನು ಮೀರಿ ಬೆಳೆಯುವುದು ಸಾಧ್ಯವಾಗಿಲ್ಲ. ಇದಕ್ಕೆ ಬಹುಮುಖ್ಯ ಕಾರಣವೆಂದರೆ ಪ್ರಾಕೃತಿಕ ಸಂಪನ್ಮೂಲಗಳಿಗೆ ಸಂಬಂಧಿಸಿದಂತೆ ಇರುವ ಅನಾನುಕೂಲತೆ. ಮಧ್ಯಮಗತಿ ಅಭಿವೃದ್ಧಿಗೆ ತನ್ನದೇ ಆದ ಕೆಲವು ಅನುಕೂಲ ಗಳಿರುತ್ತವೆ. ಬಹಳ ಮುಖ್ಯವಾಗಿ ಅದರಿಂದ ಪರಿಸರದ ಸಮತೋಲನವು ತೀವ್ರ ಹದಗೆಡುವುದಿಲ್ಲ.

ಇನ್ನು ಮುಂದೆ ರಾಜ್ಯದಲ್ಲಿನ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯಿಂದ ಮಾತ್ರ ಕರ್ನಾಟಕವು ಉನ್ನತ ಅಭಿವೃದ್ಧಿ ಸಾಧಿಸಿಕೊಳ್ಳಬಹುದು. ಪ್ರಾದೇಶಿಕ ಅಸಮತೋಲನವನ್ನು ರಾಜ್ಯವು ಮುಂದೆ ಸರಿಪಡಿಸಿಕೊಳ್ಳಬೇಕಾಗುತ್ತದೆ. ಇದು ರಾಜ್ಯದ ಅಭಿವೃದ್ಧಿ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ.

ಲಿಂಗ ಸಂಬಂಧಗಳನ್ನು ಕುರಿತಂತೆಯೂ ಮುಂದೆ ರಾಜ್ಯವು ಹೆಚ್ಚಿನ ಸಾಧನೆಯನ್ನು ತೋರಬಹುದಾಗಿದೆ. ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ, ದುಡಿಮೆಗಾರರಲ್ಲಿ ೨/೩ ರಷ್ಟಿರುವ ಮಹಿಳೆಯರ ಕೊಡುಗೆ ರಾಜ್ಯದ ಅಭಿವೃದ್ಧಿಗೆ ಅಧಿಕಗೊಳ್ಳುವ ಸಾಧ್ಯತೆಯಿದೆ.

ವಿಕೇಂದ್ರೀಕೃತ ಯೋಜನೆಯು ತಾತ್ಕಾಲಿಕವಾಗಿ ಹಿನ್ನೆಡೆ ಅನುಭವಿಸುತ್ತಿದ್ದರೂ ಮುಂದೆ ಅದು ಸಬಲವಾಗುತ್ತದೆ. ಪ್ರತಿಯೊಂದು ಗ್ರಾಮವೂ ಅಭಿವೃದ್ಧಿಯ ಘಟಕವಾಗುವ ಸಾಧ್ಯತೆಯಿದೆ.

ಆಕರ ಸೂಚಿ

೧. ಕರ್ನಾಟಕ ಸರ್ಕಾರ ೨೦೦೫, ಆರ್ಥಿಕ ಸಮೀಕ್ಷೆ : ೨೦೦೪ – ೦೫, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಬೆಂಗಳೂರು

೨. ಕರ್ನಾಟಕ ಸರ್ಕಾರ ೨೦೦೬, ಆರ್ಥಿಕ ಸಮೀಕ್ಷೆ : ೨೦೦೪ – ೦೫, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಬೆಂಗಳೂರು

೩. ಗೌವರ್ನಮೆಂಟ್ ಆಫ್ ಮೈಸೂರು : ೧೯೭೦, ಎಕಾನಾಮಿಕ್ ಡೆವಲಪ್ಮೆಂಟ್ ಆಫ್ ಮೈಸೂರು : ೧೯೫೬೧೯೬೯, ಬ್ಯೂರೋ ಆಫ್‌ ಇಕಾನಾಮಿಕ್ಸ್ ಆಂಡ್ ಸ್ಟಾಟಿಸ್ಟಿಕ್ಸ್, ಬೆಂಗಳೂರು.

೪. ಗೌವರ್ನಮೆಂಟ್ ಆಫ್ ಮೈಸೂರು : ೧೯೮೦, ಡ್ರಾಪ್ಟ್ ಸಿಕ್ಸ್ಥ್ ಫೈ ಇಯರ್ ಪ್ಲಾನ್ : ೧೯೮೦೧೯೫೮, ಯೋಜನಾ ಇಲಾಖೆ, ಬೆಂಗಳೂರು.

೫. ಗೌವರ್ನಮೆಂಟ್ ಆಫ್ ಮೈಸೂರು : ೧೯೯೦, ಡ್ರಾಪ್ಟ್ ಸಿಕ್ಸ್ಥ್ ಫೈ ಇಯರ್ ಪ್ಲಾನ್ : ೧೯೯೦೧೯೯೫, ಯೋಜನಾ ಇಲಾಖೆ, ಬೆಂಗಳೂರು.

೬. ಗೌವರ್ನಮೆಂಟ್ ಆಫ್ ಕರ್ನಾಟಕ : ೧೯೯೭, ನೈನ್ಥ್ ಪ್ಲಾನ್‌: ೧೯೯೭೨೦೦೨, ಯೋಜನಾ ಇಲಾಖೆ, ಬೆಂಗಳೂರು.

೭. ಜೇಮ್ಸ್‌ಮೇನರ್, ೧೯೯೭ ‘ಕರ್ನಾಟಕ : ಕಾಸ್ಟ್‌, ಕ್ಲಾಸ್‌, ಡಾಮಿನೆನ್ಸ್‌ಆಂಡ್ ಪಾಲಿಟಿಕ್ಸ್‌ ಇನ್‌ ಎ ಕೊಹೆಸಿವ್‌ಸೊಸೈಟಿ’ ಇಲ್ಲಿ ಸುದಿಪ್ತ ಕವಿರಾಜ್ (ಸಂ.) ಪಾಲಿಟಿಕ್ಸ್ ಇನ್ ಇಂಡಿಯಾ, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌, ನವದೆಹಲಿ, ಪು. ೨೬೨ – ೨೭೩

೮. ಮಾರ್ಟಿನ್‌ರವೇಲಿಯನ್‌, ೨೦೦೦ ‘ವಾಟ್‌ಇಸ್ ನೀಡೆಡ್ ಫಾರ್ ಎ ಮೋರ್‌ ಪ್ರೊ ಪೂರ್ ಗ್ರೋಥ್‌ ಪ್ರೊಸಸ್ ಇನ್ ಇಂಡಿಯಾ?’, ಎಕಾನಾಮಿಕ್ ಆಂಡ್ ಪೊಲಿಟಿಕಲ್ ವೀಕಿ, ಮಾರ್ಚ್‌೨೫.

೯. ಮಿಹಿರ್ ಶಹಾ ಮತ್ತ ಇತರರು, ೧೯೯೮, ಇಂಡಿಯಾಸ್ ಡ್ರೈ ಲ್ಯಾಂಡ್ಸ್, ಆಕ್ಸಫರ್ಡ್ ಯೂನಿವರ್ಸಿಟಿ ಪ್ರೆಸ್, ನವದೆಹಲಿ.

೧೦. ವಿನೋದ್ ವ್ಯಾಸುಲು ೧೯೯೧, ಫ್ಯಾಸೆಟ್ಸ್ ಆಫ್ ಡೆವಲಪ್ಮೆಂಟ್ : ಸ್ಟಡೀಸ್ ಇನ್ ಕರ್ನಾಟಕ, ರಾವತ್ ಪಬ್ಲಿಕೇಶನ್ಸ್, ಜೈಪುರ್‌

೧೧. ಶೆನ್‌ಗೆನ್ ಫ್ಯಾನ್‌, ಪೀಟರ್ ಹೆಜೆಲ್ ೨೦೦೦, ‘ಶುಡ್ ಡೆವಲಪಿಂಗ್ ಕಂಟ್ರೀಸ್‌ ಇನ್‌ ವೆಸ್ಟ್ ಮೋರ್ ಇನ್ ಲೆಸ್ ಫೇವರ್ಡ್ ಏರಿಯಾಸ್? : ಆನ್ ಎಂಫೆರಿಕಲ್ ಅನಾಲಿಸಿಸ್ ಆಫ್ ರೂರಲ್ ಇಂಡಿಡಯಾ’, ಎಕಾನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ಏಪ್ರಿಲ್ ೨೨.

೧೨. ಶ್ರೀನಿವಾಸ್ ಎಂ.ಎನ್., ಪಾನಿನಿ ಎಂ.ಎನ್., ೧೯೪೪, ‘ಪಾಲಿಟಿಕ್ಸ್‌ಆಂಡ್ ಸೊಸೈಟಿ ಇನ್ ಕರ್ನಾಟಕ’, ಎಕಾನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ಜನವರಿ ೧೪, ಪುಟ.೬೯ – ೭೫

೧೩. ಸೆನ್ಸ್‌ಸ್ ಆಫ್ ಇಂಡಿಯಾ : ೧೯೯೧, ಸೀರಿಸ್‌ – ೧೧, ಕರ್ನಾಟಕ ಪಾರ್ಟ್ – ೧೧ಬಿ ಪ್ರೈಮರಿ ಸೆನ್ಸ್ಸ್ ಅಬ್ಸ್ಟ್ರಾಕ್ಟ್: ಜನರಲ್ ಪಾಪುಲೇಶನ್, ಡೈರೆಕ್ಟರೇಟ್ ಆಫ್ ಸೆನ್ಸ್‌ಸ್ ಆಫರೇಶನ್, ಕರ್ನಾಟಕ

೧೪. ಸೆನ್ಸ್‌ಸ್ ಆಫ್ ಇಂಡಿಯಾ : ೧೯೯೧, ಸೀರಿಸ್‌ – ೧೧, ಕರ್ನಾಟಕ ಪಾರ್ಟ್ – ೧೧ಬಿ ಪ್ರೈಮರಿ ಸೆನ್ಸ್ಸ್ ಅಬ್ಸ್ಟ್ರಾಕ್ಟ್: ಜನರಲ್ ಪಾಪುಲೇಶನ್, ಡೈರೆಕ್ಟರೇಟ್ ಆಫ್ ಸೆನ್ಸ್‌ಸ್ ಆಫರೇಶನ್, ಕರ್ನಾಟಕ

೧೫. ಸೆನ್ಸ್‌ಸ್ ಆಫ್ ಇಂಡಿಯಾ : ೧೯೯೧, ಸೀರಿಸ್‌ – ೩೦, ಕರ್ನಾಟಕ ಪ್ರೈಮರಿ ಸೆನ್ಸ್ಸ್ ಅಬ್ಸ್ಟ್ರಾಕ್ಟ್: ಜನರಲ್ ಪಾಪುಲೇಶನ್, ಡೈರೆಕ್ಟರೇಟ್ ಆಫ್ ಸೆನ್ಸ್‌ಸ್ ಆಫರೇಶನ್, ಕರ್ನಾಟಕ