ಅಭಿವೃದ್ಧಿ ಎನ್ನುವುದು ಇಂದು ಅತ್ಯಂತ ಜನಜನಿತವಾದ ಒಂದು ಪರಿಭಾವನೆಯಾಗಿದೆ. ವಿಶ್ವಾದ್ಯಂತ ಸರ್ಕಾರಗಳು ಅದಕ್ಕೆ ಮುಗಿಬಿದ್ದಿದ್ದಾವೆ. ಅದಕ್ಕೆ ಸಂಬಂಧಿಸಿದಂತೆ ವಿದ್ವಾಂಸರು ದಂಡಿಯಾಗಿ ಸಿದ್ಧಾಂತಗಳನ್ನು, ಸಮೀಕರಣಗಳನ್ನು, ಸೂತ್ರಗಳನ್ನು ಮಂಡಿಸುತ್ತಿದ್ದಾರೆ. ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು, ಸರ್ಕಾರಗಳು, ವಿಶ್ವವಿದ್ಯಾಲಯಗಳು ಅದನ್ನು ಕುರಿತಂತೆ ಚರ್ಚೆ ಮಾಡುತ್ತಿವೆ. ಇತ್ತೀಚೆಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ರಾಜಕೀಯ ಪಕ್ಷಗಳು ತಮ್ಮನ್ನು ತಾವು ‘ಅಭಿವೃದ್ಧಿ ರಂಗ’ವೆಂದು ಬಿಂಬಿಸಿಕೊಳ್ಳುತ್ತಿವೆ (೨೦೦೬). ಕೇಂದ್ರ ಹಣಕಾಸು ಮಂತ್ರಿ ಪಿ. ಚಿದಂಬರಮ್‌ ಅವರು ‘ತನ್ನ ಮುಖ್ಯ ಧ್ಯೇಯವೆಂದರೆ ಭಾರತದ ಅಭಿವೃದ್ಧಿಯನ್ನು ಶೇ. ೮ ರಷ್ಟಕ್ಕೆ ಏರಿಸುವುದು’ ಎಂದು ಹೇಳಿದ್ದಾರೆ (ದಿ ಹಿಂದೂ: ೧೧.೦೯.೦೬). ಮುಂದುವರಿದು ‘ಈ ಸಾಧನೆಯ ಹಾದಿಯಲ್ಲಿ ಯಾವುದೇ ಭಿನ್ನಮತ ಬಂದರೂ ಅದನ್ನು ನಾನು ಎದುರಿಸುತ್ತೇನೆ’ ಎಂದು ಎಚ್ಚರಿಸಿದ್ದಾರೆ. ನಮ್ಮ ಪ್ರಧಾನಮಂತ್ರಿಗಳೂ ಕೂಡ ಅಭಿವೃದ್ಧಿಯ ಗತಿಯನ್ನು ಶೇ. ೮ ಕ್ಕಿಂತ ಅಧಿಕಗೊಳಿಸುವ ಬಗ್ಗೆ ಒತ್ತಾಯಿಸುತ್ತಿದ್ದಾರೆ. ಹತ್ತನೆಯ ಪಂಚವಾರ್ಷಿಕ (೨೦೦೨ – ೨೦೦೭) ಯೋಜನೆಯ ಕರಡನ್ನು ಬಿಡುಗಡೆ ಮಾಡುತ್ತಾ ಅಂದಿನನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಶೇ. ೮ರ ಅಭಿವೃದ್ಧಿ ಗತಿ ಬಗ್ಗೆ ಮಾತನಾಡಿದ್ದರು. ನಮ್ಮ ರಾಷ್ಟ್ರಪತಿಗಳು ೨೦೨೦ – ೨೦೨೫ ರೊಳಗೆ ‘ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರ’ವಾಗಬೇಕು ಎಂದು ಕರೆ ನೀಡುತ್ತಿದ್ದಾರೆ. ನಮ್ಮ ಮುಖ್ಯಮಂತ್ರಿ ಅವರು ‘ಒಂದೆರಡು ವರ್ಷಗಳಲ್ಲಿ ನಮ್ಮ ಬಜೆಟ್ಟಿನ ಗಾತ್ರವನ್ನು ಒಂದು ಲಕ್ಷ ಕೋಟಿಗೇರಿಸಲಾಗುವುದು’ ಎಂದು ಹೇಳುತ್ತಿದ್ದಾರೆ. ಒಟ್ಟಾರೆ ಒಂದು ಬಗೆಯ ವ್ಯಸನದಂತೆ ಅಭಿವೃದ್ಧಿಯನ್ನು, ಅದರ ಗತಿಯನ್ನು ಜನರು, ಸರ್ಕಾರಗಳು, ರಾಜಕೀಯ ಪಕ್ಷಗಳು, ನಾಯಕರು ಹಚ್ಚಿಕೊಂಡಂತೆ ಕಾಣುತ್ತದೆ. ಪ್ರಸ್ತುತ ಪ್ರಬಂಧದಲ್ಲಿ ಅಭಿವೃದ್ಧಿಯನ್ನು ಕುರಿತಂತೆ ರೂಪುಗೊಂಡಿರುವ ವಿವಿಧ ಸೈದ್ಧಾಂತಿಕ ಧಾರೆಗಳನ್ನು ಕುರಿತಂತೆ ಚರ್ಚಿಸಲಾಗುವುದು. ಅಮರ್ತ್ಯಸೆನ್ ರೂಪಿಸಿರುವ ಮಾನವ ಅಭಿವೃದ್ಧಿಯ ತಾತ್ವಿಕ ನೆಲೆಗಳನ್ನು ಪರಿಚಯಿಸಲು ಇಲ್ಲಿ ಪ್ರಯತ್ನಿಸಲಾಗಿದೆ.

ವರಮಾನದ ವರ್ಧನೆ

ಸಾಂಪ್ರದಾಯಿಕವಾಗಿ ದೇಶ/ಪ್ರದೇಶವೊಂದರ ವರಮಾನದಲ್ಲಿನ (ಜಿಡಿಪಿ/ಎಸ್‌ಡಿಪಿ) ವಾರ್ಷಿಕ ಏರಿಕೆಯನ್ನು ಅಭಿವೃದ್ಧಿಯೆಂದು ಗುರುತಿಸುತ್ತಾ ಬರಲಾಗಿದೆ. ಸಮಾಜದಲ್ಲಿ ಜನರು ಎದುರಿಸುವ ಎಲ್ಲ ಸಮಸ್ಯೆಗಳಿಗೂ ಅದು ಸಿದ್ಧೌಷದವೆನ್ನುವಂತೆ ಅದನ್ನು ನೆಮ್ಮಿಕೊಳ್ಳಲಾಗಿದೆ. ಜನರ ದುಸ್ಥಿತಿ – ದುಮ್ಮಾನಗಳಿಗೆ ಪರಿಹಾರವನ್ನು ವರಮಾನ ವರ್ಧನೆಯಲ್ಲಿ ಕಂಡುಕೊಳ್ಳಲಾಗಿದೆ. ಏರಿಕೆಯಾದ ವರಮಾನದ ಫಲಗಳು ಸಮಾಜದಲ್ಲಿ ಎಲ್ಲ ವರ್ಗ – ಜಾತಿ – ವೃತ್ತಿ – ಪ್ರದೇಶ – ಲಿಂಗಗಳಿಗೂ ಸಾವಕಾಶವಾಗಿ ಮತ್ತು ಸಮಾನವಾಗಿ ಒದಗುತ್ತವೆ ಎಂದು ಪ್ರತಿಪಾದಿಸಿಕೊಂಡು ಬರಲಾಗಿದೆ. ಅಭಿವೃದ್ಧಿಯನ್ನು ಒಂದು ಅಖಂಡ ಪ್ರಕ್ರಿಯೆಗಾಗಿ ಪರಿಭಾವಿಸಿಕೊಂಡು ಬರಲಾಗಿದೆ. ಸಾಂಪ್ರದಾಯಿಕ – ಪ್ರಾಥಮಿಕವೆನ್ನಬಹುದಾದ ಚಟುವಟಿಕೆಗಳಾದ ಕೃಷಿ, ಗಣಿಗಾರಿಕೆ, ಅರಣ್ಯಗಾರಿಕೆ, ಮೀನುಗಾರಿಕೆ ಮುಂತಾದವುಗಳ ಮೇಲಿನ ದುಡಿಮೆಗಾರರ ಅವಲಂಬನೆ ಕಡಿಮೆಯಾಗಿ ಕೈಗಾರಿಕೆ – ಉದ್ದಿಮೆ, ವ್ಯಾಪಾರ, ಸಾರಿಗೆ, ಬ್ಯಾಂಕಿಂಗ್ ಮುಂತಾದ ಚಟುವಟಿಕೆಗಳ ಮೇಲಿನ ದುಡಿಮೆಗಾರರ ಅವಲಂಬನೆಯು ಅಧಿಕಗೊಳ್ಳುವ ಪ್ರಕ್ರಿಯೆಯನ್ನು ಅಭಿವೃದ್ಧಿಯೆಂದು ನಿರ್ವಚಿಸಿಕೊಂಡು ಬರಲಾಗಿದೆ. ಇದನ್ನು ನಗರೀಕರಣ, ಕೈಗಾರಿಕೀಕರಣ, ಆಧುನೀಕರಣ ಮುಂತಾದ ಪ್ರಕ್ರಿಯೆಗಳಲ್ಲಿ ಹಿಡಿದಿಡಲಾಗಿದೆ. ಒಟ್ಟಂದದಲ್ಲಿ ಅಭಿವೃದ್ಧಿಯನ್ನು ಉತ್ಪನ್ನ, ಉದ್ಯೋಗ, ವರಮಾನಗಳ ವರ್ಧನೆಯಲ್ಲಿ ಗುರುತಿಸುವುದು ವಾಡಿಕೆಯಲ್ಲಿದೆ. ಆಹಾರೋತ್ಪಾದನೆಯಲ್ಲಿ ಸಾಧಿಸಿಕೊಂಡ ಸ್ವಾವಲಂಬನೆಯನ್ನು, ಆ ಮೂಲಕ ನನಸಾಗಿಸಿಕೊಂಡ ರಾಷ್ಟ್ರದ ‘ಆಹಾರ ಭದ್ರತೆ’ಯನ್ನು ಅಭಿವೃದ್ದಿ ಎಂದು ಕರೆಯಲಾಗಿದೆ.

ವರಮಾನದ ಕೊರತೆಯೇ ಬಡತನ!

ಈ ಪ್ರಧಾನಧಾರೆ ವಿಚಾರ ಪ್ರಣಾಳಿಕೆಯಲ್ಲಿ ಬಡತನ – ದುಸ್ಥಿತಿಯನ್ನು ‘ವರಮಾನದ ಕೊರತೆ’ಯಲ್ಲಿ ಕಂಡುಕೊಳ್ಳಲಾಗಿದೆ. ಒಬ್ಬ ವ್ಯಕ್ತಿ ಗೌರವಯುತವಾಗಿ ಬದುಕಲು ಎಷ್ಟು ವರಮಾನ ಅಗತ್ಯವೆಂದು ನಿಗದಿಪಡಿಸಲಾಗಿದೆಯೋ ಅದಕ್ಕಿಂತ ಯಾರ ವರಮಾನವು ಕಡಿಮೆಯಿರುತ್ತದೋ ಅವರನ್ನು ಬಡವರೆಂದು ಪರಿಗಣಿಸಲಾಗುತ್ತದೆ (ಬಡತನದ ರೇಖೆ). ಸ್ಥೂಲವಾಗಿ ವರಮಾನದ ವರ್ಧನೆಯು ಅಭಿವೃದ್ಧಿಯೆನಿಸಿಕೊಂಡರೆ ‘ವರಮಾನದ ಕೊರತೆ’ಯು ದುಸ್ಥಿತಿ – ಬಡತನವೆನಿಸಿಕೊಳ್ಳುತ್ತದೆ. ಇವುಗಳನ್ನು ಅನುಕ್ರಮವಾಗಿ ‘ವರಮಾನದ ಅಭಿವೃದ್ಧಿ’ಯೆಂದು ಮತ್ತು ‘ವರಮಾನ ಬಡತನ’ವೆಂದೂ ಯುಎನ್‌ಡಿಪಿಯು ತನ್ನ ಮಾನವ ಅಭಿವೃದ್ಧಿ ವರದಿಗಳಲ್ಲಿ ಗುರುತಿಸಿದೆ. ವರಮಾನವೆನ್ನುವುದು ವಾಸ್ತವವಾಗಿ ‘ಉತ್ಪನ್ನ’ದ (ಸರಕು ಮತ್ತು ಸೇವೆಗಳು) ಹಣರೂಪಿ ಮೌಲ್ಯವಾಗಿದೆ. ಈ ಕಾರಣದಿಂದಾಗಿಯೇ ದೇಶವೊಂದರ ವರಮಾನವನ್ನು ‘ಒಟ್ಟು ರಾಷ್ಟ್ರೀಯ ಉತ್ಪನ್ನ, (ಜಿಎನ್‌ಪಿ) ಅಥವಾ ‘ಒಟ್ಟು ದೇಶೀಯ ಉತ್ಪನ್ನ’ (ಜಿಡಿಪಿ)ವೆಂದು ಕರೆಯಲಾಗಿದೆ. ಈ ಬಗೆಯ ವಿಚಾರ ಪ್ರಣಾಳಿಕೆಯಲ್ಲಿ ಸುಖಮಯ ಬದುಕು ಅಥವಾ ಜೀವನಮಟ್ಟ ಎಂಬುದನ್ನು ಉತ್ಪನ್ನಗಳ ಅನುಭೋಗದಿಂದ ಜನರು ಪಡೆದುಕೊಂಡು ‘ಒಟ್ಟು ತೃಪ್ತಿ’ಯ ಗರಿಷ್ಟ ಪ್ರಮಾಣದಿಂದ ಅಳೆಯಲಾಗುತ್ತದೆ. ಈ ವಿಚಾರ ಪ್ರಣಾಳಿಕೆಯನ್ನು ‘ಉತ್ಪನ್ನವಾದಿ ಮೀಮಾಂಸೆ’ಯೆಂದು ಕರೆಯಬಹುದು. ಈ ಮೀಮಾಂಸೆಯಲ್ಲಿ ಉತ್ಪನ್ನವೇ ಪ್ರಧಾನ ಮತ್ತು ಪ್ರಥಮ.

ಭಿನ್ನಮತ

ಆದರೆ ಮೆಹಬೂಬ್ ಉಲ್ ಹಕ್ (೧೯೯೦), ಅಮರ್ತ್ಯಸೆನ್ (೧೯೯೯) ಮಾರ್ತ ನುಸ್‌ಬಾಮ್ (೨೦೦೦) ಜೀನ್‌ಡ್ರೀಜ್ (೨೦೦೨), ಸುಧೀರ್ ಆನಂದ್ (೧೯೯೪) ನೈಲಾ ಕಬೀರ್ (೧೯೯೪) ಮುಂತಾದವರು ವಾದಿಸುವಂತೆ ವರಮಾನವು ಅಭಿವೃದ್ಧಿಯನ್ನು ಸಾಧಿಸಿಕೊಳ್ಳಲು ಅಗತ್ಯವಾದ ಒಂದು ಸಾಧನವೇ ವಿನಾ ಅದು ಅದರ ‘ಸಾಧ್ಯ’ವಲ್ಲ. ಬದುಕನ್ನು ಉತ್ತಮಪಡಿಸಿಕೊಳ್ಳಲು – ಸುಖಮಯವನ್ನಾಗಿ ಮಾಡಿಕೊಳ್ಳಲು ಅಗತ್ಯವಾದ ಅನೇಕ ಸಂಗತಿಗಳಲ್ಲಿ ವರಮಾನವು ಒಂದಾಗಿದೆ. ವರಮಾನದ ಮೊತ್ತವೇ ಜನರ ಬದುಕಲ್ಲ. ಉತ್ಪನ್ನದ ಮೇಲಿನ ಹಕ್ಕುದಾರಿಕೆ – ಮಾಲೀಕತ್ವ – ಪರಮಾಧಿಕಾರ ವೊಂದರಿಂದಲೇ ಜನರು ತಮ್ಮ ಬದುಕನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಿಲ್ಲ. ವರಮಾನದ ದೃಷ್ಟಿಯಿಂದ ನಮ್ಮ ರಾಜ್ಯದ ೨೭ ಜಿಲ್ಲೆಗಳ ಪೈಕಿ ಕೊಪ್ಪಳ ಮತ್ತು ಮೈಸೂರು ಜಿಲ್ಲೆಗಳ ಸ್ಥಾನ ಕ್ರಮವಾಗಿ ಹದಿನಾಲ್ಕು ಮತ್ತು ಏಳನೆಯದಾಗಿದೆ (೨೦೦೧). ಆದರೆ ಆರೋಗ್ಯ ಮತ್ತು ಶೈಕ್ಷಣಿಕ ಸಾಧನೆಗೆ ಸಂಬಂಧಿಸಿದಂತೆ ಅವುಗಳ ಸ್ಥಾನ ಅನುಕ್ರಮವಾಗಿ ೧೬ ಮತ್ತು ೨೪ ಹಾಗೂ ೧೧ ಮತ್ತು ೧೯. ವರಮಾನದ ಮಟ್ಟವು ಇಲ್ಲಿ ಉತ್ತಮವಾಗಿದ್ದರೂ ಜನರ ಬದುಕು ಸುಖಮಯವಾಗಿಲ್ಲ. ಇಲ್ಲಿ ವರಮಾನದ ವರ್ಧನೆಯು ಜನರ ಆರೋಗ್ಯವಾಗಿ, ಅಕ್ಷರ ಭಾಗ್ಯವಾಗಿ ಪರಿವರ್ತನೆಯಾಗಿಲ್ಲ. ಜನರ ಬದುಕನ್ನು ವರಮಾನದ ಮೊತ್ತಕ್ಕೆ ಸಂವಾದಿಯನ್ನಾಗಿ ಮಾಡುವುದು ಸರಿಯಲ್ಲ.

ಮಾನವ ಅಭಿವೃದ್ಧಿ

ಸರೀಕರ ಮುಂದೆ ತಲೆ ಎತ್ತಿ ನಿಲ್ಲುವ, ಮೈತುಂಬಾ ಬಟ್ಟೆ ಧರಿಸುವ, ಓದಲು ಬರೆಯಲು ಬರುವ, ಅಂಕಿ – ಸಂಖ್ಯೆಗಳ ಜ್ಞಾನವುಳ್ಳ, ದೀರ್ಘಕಾಲ ಆರೋಗ್ಯಕಾಯರಾಗಿ ಬದುಕುವ ಜನರ ಸಾಮರ್ಥ್ಯವನ್ನು ಅಮರ್ತ್ಯಸೆನ್‌ ಅಭಿವೃದ್ಧಿಯೆಂದು ಕರೆದಿದ್ದಾರೆ. ಮಾನವ ಹಕ್ಕುಗಳು, ಜನರ ಸ್ವಾತಂತ್ರ್ಯ, ಜನರ ಕರ್ತೃತ್ವ ಸಾಮರ್ಥ್ಯಗಳನ್ನು ಜನರ ಬದುಕು ಒಳಗೊಳ್ಳಬೇಕಾಗುತ್ತದೆ. ಉತ್ಪನ್ನದ ಅನುಭೋಗದಿಂದ ಪಡೆದ ಗರಿಷ್ಟ ತೃಪ್ತಿಯೇ ಜನರ ಸುಖಮಯ ಬದುಕಿಗೆ ಪುರಾವೆಯಾಗುವುದಿಲ್ಲ. ಬದುಕನ್ನು ಉತ್ತಮಪಡಿಸಿಕೊಳ್ಳಲು ಲಭ್ಯವಿರುವ ಅವಕಾಶಗಳಲ್ಲಿ ಜನರು ತಮಗೆ ಅಗತ್ಯವೆನಿಸಿದ್ದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಮತ್ತು ಸಾಮರ್ಥ್ಯಗಳನ್ನು ಅಭಿವೃದ್ಧಿಯೆಂದು ನಿರ್ವಚಿಸಬಹುದು. ಬದುಕನ್ನು ಉತ್ತಮಪಡಿಸಿಕೊಳ್ಳಲು ಅವಕಾಶಗಳು ಹರಿದು ಬರುತ್ತಿರುತ್ತವೆ. ಹೀಗೆ ಹರಿದು ಬರುತ್ತಿರುವ ಅವಕಾಶಗಳನ್ನು ಧಾರಣೆ ಮಾಡಿಕೊಳ್ಳುವ ಜನರ ಸಾಮರ್ಥ್ಯವನ್ನು ಅಭಿವೃದ್ಧಿಯೆಂದು ಕರೆಯಬಹುದು. ಜನರ ಆಯ್ಕೆಯ ವ್ಯಾಪ್ತಿಯ ವರ್ಧನೆಯೇ ಅಭಿವೃದ್ಧಿ. ಅದನ್ನು ಉತ್ಪನ್ನಕ್ಕೆ – ವರಮಾನಕ್ಕೆ ಮಾತ್ರ ಸೀಮಿತಗೊಳಿಸುವ ಅಗತ್ಯವಿಲ್ಲ. ಇದನ್ನು ನಮ್ಮ ಸಮಾಜದ ಸಂದರ್ಭದಲ್ಲಿನ ಒಂದು ನಿದರ್ಶನದಿಂದ ಸ್ಪಷ್ಟಪಡಿಸಬಹುದು.

ನಮ್ಮ ಗ್ರಾಮೀಣ ಪ್ರದೇಶದಲ್ಲಿನ ಹೋಟೇಲ್‌ಗಳಲ್ಲಿ ಕೆಲವು ನಿರ್ದಿಷ್ಟ ಸಮಾಜಿಕ ಗುಂಪಿನ ಜನರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಹಾಗೂ ತಿಂಡಿ – ಪಾನೀಯ ಸರಬರಾಜು ವ್ಯವಸ್ಥೆಯಿರುತ್ತದೆ. ಗ್ರಾಮದಲ್ಲಿನ ಇತರೆ ಜನವರ್ಗಗಳಿಗೆ ಒಂದು ವ್ಯವಸ್ಥೆಯಿದ್ದರೆ ಇವರಿಗೆ ಮತ್ತೊಂದು ವ್ಯವಸ್ಥೆ. ಈ ಬಗೆಯ ತಾರತಮ್ಯ – ಅವಮಾನಗಳನ್ನು ಶಾಸನಾತ್ಮಕವಾಗಿ ನಿಷೇಧಿಸಲಾಗಿದೆ. ಆದರೆ ಅವು ಇಂದಿಗೂ ಆಚರಣೆಯಲ್ಲಿವೆ. ಇದಕ್ಕೆ ಅಪವಾದಗಳಿರಬಹುದು. ಈ ಬಗೆಯ ತಾರತಮ್ಯ ಭಾವನೆ, ಪಕ್ಷಪಾತ ಧೋರಣೆ, ಅಮಾನವೀಯ ನಡವಳಿಕೆಗಳಿಗೂ ವರಮಾನದ ಮಟ್ಟಕ್ಕೂ ಸಂಬಂಧವಿಲ್ಲ. ಉತ್ತಮ ಬದುಕು ಅಥವಾ ಸುಖಮಯ ಬದುಕು ಎಂದು ಯಾವುದನ್ನು ಗುರುತಿಸಲಾಗಿದೆಯೋ ಅದು ಮೇಲಿನ ಸಂಗತಿಯನ್ನು ಒಳಗೊಳ್ಳಬೇಕಾಗುತ್ತದೆ. ಸರೀಕರ ಮುಂದೆ ಅವಮಾನವನ್ನು ಅನುಭವಿಸಬೇಕಾದ ಸಂಗತಿಯಿಂದಾಗಿ ಅದನ್ನು ಎದುರಿಸುವ ಜನರ ಬದುಕು ವರಮಾನವೆಷ್ಟೇಯಿರಲಿ ಸುಖಮಯವಾಗಿರಲು ಸಾಧ್ಯವಿಲ್ಲ. ಸರೀಕರ ಮುಂದೆ ಸಮಾನವಾಗಿ ನಿಲ್ಲುವ ಸ್ವಾತಂತ್ರ್ಯದಿಂದ ಜನರು ಇಲ್ಲಿ ವಂಚಿತರಾಗಿದ್ದಾರೆ. ನಾಲ್ಕು ಜನರಿಗೆ ಸರಿಸಮನಾಗಿ ಊರ ಮುಂದಿನ ದೇವಾಲಯದ ಕಟ್ಟೆಯ ಮೇಲೆ ಕೂರುವ ಅವಕಾಶದಿಂದ ವಂಚಿತರಾದ ಜನರ ಬದುಕು ವರಮಾನ ಎಷ್ಟೇ ಇದ್ದರೂ ಗೌರವಯುತವಾಗಿರಲು ಸಾಧ್ಯವಿಲ್ಲ. ಇವರು ಸ್ವಾತಂತ್ರ್ಯದಿಂದ ವಂಚಿತರಾಗಿದ್ದಾರೆ. ಸ್ವಾತಂತ್ರ್ಯವನ್ನು ಜನರು ‘ಏನಾಗಿದ್ದಾರೆ’ ಮತ್ತು ಅವರು ಏನು ‘ಮಾಡಬಲ್ಲರು’ ಎಂಬ ನೆಲೆಯಿಂದ ಪರಿಭಾವಿಸಿಕೊಳ್ಳುವ ಕ್ರಮವನ್ನು ಸೆನ್ ಪ್ರತಿಪಾದಿಸುತ್ತಿದ್ದಾರೆ. ನಿಯಂತ್ರಣಗಳಿಲ್ಲದ ಮುಕ್ತವಾದ ಸ್ಥಿತಿಯನ್ನು ಸ್ವಾತಂತ್ರ್ಯವೆಂದು ಸಾಮಾನ್ಯವಾಗಿ ನಿರ್ವಚಿಸಿಕೊಳ್ಳಲಾಗಿದೆ. ಇದು ನೇತ್ಯಾತ್ಮಕ ಸ್ವಾತಂತ್ರ್ಯ, ಅಭಿವೃದ್ಧಿಯ ದೃಷ್ಟಿಯಿಂದ ಇತ್ಯಾತ್ಮಕ ಸ್ವಾತಂತ್ರ್ಯವು ಬಹಳ ಮುಖ್ಯವಾಗುತ್ತದೆ. ಹಸಿವಿನಿಂದ ಬಿಡುಗಡೆ ಪಡೆಯಲು ಜನರು ಸಮರ್ಥರಾಗಿದ್ದಾರೆಯೆ? ರೋಗರುಜಿನಗಳಿಂದ ಮುಕ್ತರಾಗಿ ದೀರ್ಘಕಾಲ ಮತ್ತು ಆರೋಗ್ಯಕಾಯರಾಗಿ ಬದುಕುವ ಸಾಮರ್ಥ್ಯ ಜನರಿಗಿದೆಯೆ? ಮನೆಗೆಲಸವನ್ನು ಗಂಡನ ಜೊತೆ ಹಂಚಿಕೊಂಡು ಬದುಕು ಮಾಡುವ ಸಾಮರ್ಥ್ಯ ಹೆಂಡತಿಗಿದೆಯೆ? ಸಾರ್ವಜನಿಕ ಸ್ಥಾನಗಳಿಗೆ – ಸ್ಥಳಗಳಿಗೆ ಪ್ರವೇಶ ಪಡೆಯಲು ಜನರು ಸ್ವಾತಂತ್ರ್ಯ ಪಡೆದಿದ್ದಾರೆಯೆ? ಸ್ವಾತಂತ್ರ್ಯವನ್ನು ಅಭಿವೃದ್ಧಿಯೆಂದು (೧೯೯೯) ಸೆನ್ ನಿರ್ವಚಿಸಿದಾಗ ಮೇಲಿನ ಅರ್ಥದಲ್ಲಿ ಅವನು ಅದನ್ನು ಪರಿಭಾವಿಸಿಕೊಂಡಿದ್ದನೆ.

ಜನರ ಕರ್ತೃತ್ವದ ಪಾತ್ರ

ಜನರನ್ನು ಮತ್ತು ಅವರ ಬೌದ್ಧಿಕ ಹಾಗೂ ದೈಹಿಕ ಶಕ್ತಿ – ಸಾಮರ್ಥ್ಯಗಳನ್ನು ಕೇವಲ ಸಂಪನ್ಮೂಲವನ್ನಾಗಿ ನೋಡುವ ಕ್ರಮವೊಂದಿದೆ. ಮಾನವ ಸಂಪನ್ಮೂಲವೆಂಬ ನುಡಿ ಇದನ್ನು ಸರಿಯಾಗಿ ಸೂಚಿಸುತ್ತದೆ. ಜನರನ್ನು ಕೇವಲ ಫಲಾನುಭವಿಗಳನ್ನಾಗಿ ನೋಡುವ ಮಾದರಿಯೂ ಇದೆ. ಸಾಂಪ್ರದಾಯಿಕ ಅಭಿವೃದ್ಧಿ ಸಿದ್ಧಾಂತಗಳಲ್ಲಿ ‘ಮಾನವ ಸಂಪನ್ಮೂಲ’ – ‘ಮಾನವ ಬಂಡವಾಳ’ವೆಂಬ ನುಡಿಗಟ್ಟುಗಳು ಪ್ರಚಲಿತದಲ್ಲಿವೆ. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಂಪನ್ಮೂಲ – ಬಂಡವಾಳದ ಪಾತ್ರ ನಿರ್ಣಾಯಕವಾದುದಾಗಿದೆ. ಅಕ್ಷರ ಸಂಪತ್ತು, ಆರೋಗ್ಯ ಭಾಗ್ಯ, ಆಹಾರ ಭದ್ರತೆ, ಆಶ್ರಯ ಮುಂತಾದವುಗಳನ್ನು ಅಭಿವೃದ್ಧಿಯ ಸಂಪನ್ಮೂಲಗಳೆಂದು ಗುರುತಿಸುವುದು ರೂಢಿಯಲ್ಲಿದೆ. ಈ ಸಂಪನ್ಮೂಲ – ಬಂಡವಾಳದ ಮೇಲೆ ಅಧಿಕಾರವನ್ನು – ಹಕ್ಕುದಾರಿಕೆಯನ್ನು ಸಾಧಿಸಿಕೊಳ್ಳುವುದರಿಂದ ಜನರ ಬದುಕು ಉತ್ತಮಗೊಳ್ಳುತ್ತದೆ. ಇದನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ. ಈ ಬಗೆಯಲ್ಲಿ ಸಂಪನ್ಮೂಲ – ಬಂಡವಾಳವನ್ನು ಹೊಂದುವುದರಿಂದ ಜನರ ಉತ್ಪಾದನಾ ಕ್ಷಮತೆ ಉತ್ತಮಗೊಳ್ಳುತ್ತದೆ.

ಜನರನ್ನು ಹೀಗೆ ಸಂಪನ್ಮೂಲ – ಬಂಡವಾಳವನ್ನಾಗಿ ನೋಡುವುದರ ಜೊತೆಗೆ ಅವರನ್ನು ಬದಲಾವಣೆಯ ಕರ್ತೃಗಳನ್ನಾಗಿ ನೋಡುವ ಕ್ರಮವನ್ನು ಅಮರ್ತ್ಯಸೆನ್‌ ಒತ್ತಿ ಹೇಳುತ್ತಿದ್ದಾರೆ. ಜನರ ಕರ್ತೃತ್ವದ ಪಾತ್ರವನ್ನು ಅಭಿವೃದ್ಧಿಯು ಒಳಗೊಳ್ಳಬೇಕು ಎಂಬುದು ಸೆನ್‌ರ ಅಭಿಮತವಾಗಿದೆ. ಜನರ ಉತ್ಪಾದನಾ ಕ್ಷಮತೆ ಉತ್ತಮಗೊಂಡಿರುವುದೇ ಸುಖಮಯ ಬದುಕಿನ ಸೂಚಿಯಾಗುವುದಿಲ್ಲ. ಸುಖಮಯ ಬದುಕು ಎಂಬುದು ಉತ್ಪನ್ನವಾದಿ ನೆಲೆಗಿಂತ ವಿಸ್ತೃತವಾದುದಾಗಿದೆ. ಸಮಾನತೆ, ಸ್ವಾತಂತ್ರ್ಯ, ಹಕ್ಕುಗಳು ಇಲ್ಲಿ ಮುಖ್ಯವಾಗುತ್ತವೆ. ಈ ಹಕ್ಕುಗಳನ್ನು – ಸ್ವಾತಂತ್ರ್ಯವನ್ನು ಪಡೆದುಕೊಳ್ಳಲು, ಸಮಾನತೆಯನ್ನು ಸಾಧಿಸಿಕೊಳ್ಳಲು ಜನರು ನಡೆಸುವ ಪ್ರಯತ್ನಗಳು ಇಲ್ಲಿ ಮುಖ್ಯವಾಗುತ್ತವೆ. ಈ ಬಗೆಯ ಪ್ರಯತ್ನಗಳು ವ್ಯಕ್ತಿಗತವಾಗಿರಬಹುದು ಅಥವಾ ಸಂಘಟಿತ ಸ್ವರೂಪದಲ್ಲಿರಬಹುದು. ಜನರ ಬದುಕಿನ ಸ್ಥಿತಿಗತಿ ಉತ್ತಮವಾಗುವ ಪರಿ ಒಂದಾದರೆ ಜನರು ತಮ್ಮ ಬದುಕಿನ ಸ್ಥಿತಿಗತಿಗಳನ್ನು ಉತ್ತಮಪಡಿಸಿಕೊಳ್ಳುವ ದಿಶೆಯಲ್ಲಿ ಪ್ರಯತ್ನಿಸ ಬಲ್ಲರು ಎಂಬುದು ಇನ್ನೊಂದು ಬಗೆ. ಜನರು ತಮ್ಮ ಬದುಕಿನ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವ, ಅಸ್ತಿತ್ವದಲ್ಲಿರುವ ಸ್ಥಿತಿಗತಿಗಳನ್ನು ಬದಲಾವಣೆ ಮಾಡಲು ಏನು ಮಾಡಬೇಕು ಎಂಬುದನ್ನು ಅರಿತುಕೊಳ್ಳಲು ಪ್ರಯತ್ನಿಸುವ, ತಮ್ಮ ಹಿತಾಸಕ್ತಿಗಳು ಯಾವುವು ಎಂಬುದನ್ನು ಗುರುತಿಸಿಕೊಳ್ಳಲು ಪ್ರಯತ್ನಿಸುವ ಪರಿಯನ್ನು ಸೆನ್‌‘ಕರ್ತೃತ್ವ’ವೆಂದು ಕರೆದಿದ್ದಾರೆ. ನಾವೇಕೆ ಬಡವರಾಗಿದ್ದೇವೆ? ನಾವೇಕೆ ಅನಕ್ಷರಸ್ಥರಾಗಿದ್ದೇವೆ? ನಮಗೇಕೆ ಸಮಾಜದಲ್ಲಿ ಎಲ್ಲ ಕಡೆ ಮುಕ್ತ ಪ್ರವೇಶವಿಲ್ಲ? ನಮ್ಮ ಕಾರ್ಯಕ್ಷೇತ್ರವೇಕೆ ಗೃಹವಾರ್ತೆಗೆ ಮಾತ್ರ ಸೀಮಿತವಾಗಿರಬೇಕು? ನಮಗೇಕೆ ಆಸ್ತಿಪಾಸ್ತಿಯಿಲ್ಲ? – ಮುಂತಾದ ಪ್ರಶ್ನೆಗಳನ್ನು ರೂಪಿಸಿಕೊಳ್ಳುವ, ಕೇಳಿಕೊಳ್ಳುವ ಹಾಗೂ ಕೇಳುವ ಸ್ವಾತಂತ್ರ್ಯ ಹಾಗೂ ಆ ದಿಶೆಯಲ್ಲಿ ನಡೆಸುವ ಪ್ರಯತ್ನಗಳು ಸಾಮಾಜಿಕ ಬದಲಾವಣೆ ದೃಷ್ಟಿಯಿಂದ ತುಂಬಾ ಮುಖ್ಯವಾಗಿರುತ್ತದೆ ಜನರ ಕರ್ತೃತ್ವದ ಪಾತ್ರವು ಅಭಿವೃದ್ಧಿಯಲ್ಲಿ ನಿರ್ಣಾಯಕವಾದುದಾಗಿದೆ.

ಸಾಕ್ಷರತೆ – ಶಿಕ್ಷಣದಿಂದ ಜನನ ಪ್ರಮಾಣವನ್ನು, ಶಿಶುಮರಣ ಪ್ರಮಾಣವನ್ನು ಕಡಿಮೆ ಮಾಡಬಹುದೆಂಬುದು ಅಧ್ಯಯನಗಳಿಂದ ದೃಢಪಟ್ಟಿದೆ. ಆದರೆ ಈ ವಿಷಯಗಳಿಗೆ ಸಂಬಂಧಿಸಿದಂತೆ ಮಹಿಳೆಯರ ಸಾಕ್ಷರತೆ – ಶಿಕ್ಷಣದ ಸುಧಾರಣೆಯಿಂದ ಜನನ ಪ್ರಮಾಣವನ್ನು ಹಾಗೂ ಶಿಶುಮರಣ ಪ್ರಮಾಣವನ್ನು ತೀವ್ರವಾಗಿ ಕಡಿಮೆ ಮಾಡಬಹುದು ಎಂಬುದು ಜೀನ್‌ ಡ್ರೀಜ್‌ ಅಧ್ಯಯನದಿಂದ ತಿಳಿದುಬಂದಿದೆ. ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುವುದರಿಂದ ಹಾಗೂ ಅವರ ಧಾರಣಾ ಸಾಮರ್ಥ್ಯವನ್ನು ವರ್ಧಿಸುವುದರಿಂದ ಉಂಟಾಗುವ ಸುಧಾರಣೆಯು ಆರ್ಥಿಕ ಅಭಿವೃದ್ಧಿಯಿಂದ ಉಂಟಾಗುವ ಸುಧಾರಣೆಗಿಂತ ಅಧಿಕತಮವಾಗಿರುತ್ತದೆ. ಹೀಗೆ ಮಹಿಳೆಯರ – ಒಟ್ಟಾರೆ ಜನರ ಕರ್ತೃತ್ವ ಸಾಮರ್ಥ್ಯದ ವರ್ಧನೆ, ಕರ್ತೃತ್ವದ ಸ್ವಾತಂತ್ರ್ಯ ಅಭಿವೃದ್ಧಿಯಲ್ಲಿ ಹಾಗೂ ಸಾಮಾಜಿಕ ಬದಲಾವಣೆ ಪ್ರಕ್ರಿಯೆಯಲ್ಲಿ ಮಹತ್ತರ ಪಾತ್ರವಹಿಸುತ್ತವೆ.

ಧಾರಣಾ ಸಾಮರ್ಥ್ಯ

ಈಗಾಗಲೆ ತಿಳಿಸಿರುವಂತೆ ವರಮಾನದ ಕೊರತೆಯಿಂದ ಬಡತನವನ್ನು ನೋಡುವ ಬಗೆಯು ಒಂದಾದರೆ ಅದನ್ನು ಧಾರಣಾ ಸಾಮರ್ಥ್ಯದ ಕೊರತೆಯ ನೆಲೆಯಿಂದ ನೋಡುವುದು ಇನ್ನೊಂದು ಬಗೆ. ಎರಡನೆಯ ದೃಷ್ಟಿಕೋನವು ಮೊದಲನೆಯ ದೃಷ್ಟಿಕೋನಕ್ಕಿಂತ ಹೆಚ್ಚು ಉಪಯುಕ್ತವಾದುದು. ಹೀಗೆ ಧಾರಣಾ ಸಾಮರ್ಥ್ಯದ ಕೊರತೆಯ ನೆಲೆಯಿಂದ ಬಡತನವನ್ನು ಪರಿಭಾವಿಸಿಕೊಳ್ಳುವುದರಿಂದ ಮೊದಲನೆಯದಾಗಿ ಇದರಿಂದ ಬಡತನದ ಪ್ರಮಾಣ ಹಾಗೂ ತೀವ್ರತೆಯನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಎರಡನೆಯದಾಗಿ ಬಡತನಕ್ಕೆ ಕಾರಣವಾದ ಪ್ರಕ್ರಿಯೆಯನ್ನು ಅರಿತುಕೊಳ್ಳಬಹುದು. ನೀತಿ – ನಿರೂಪಣೆ ದೃಷ್ಟಿಯಿಂದ ಇದು ತುಂಬಾ ಮುಖ್ಯವಾದುದಾಗಿದೆ. ಬಡತನವನ್ನು ವರಮಾನಕ್ಕೆ ಅಂದರೆ ಆರ್ಥಿಕ ಸಂಗತಿಗೆ ಮಾತ್ರ ಮೊದಲನೆಯ ಧಾರೆಯಲ್ಲಿ ಸೀಮಿತಗೊಳಿಸಿದ್ದರೆ ಎರಡನೆಯ ಧಾರೆಯಲ್ಲಿ ಅದನ್ನು ಸಾಮಾಜಿಕ ನ್ಯಾಯದ ನೆಲೆಯಿಂದ ವಿಸ್ತೃತವಾದ ರೀತಿಯಲ್ಲಿ ಪರಿಭಾವಿಸಿಕೊಳ್ಳಲಾಗಿದೆ.

ವರಮಾನದ ವರ್ಧನೆಯಿಂದ ಉತ್ಪಾದನಾ ಕ್ಷಮತೆಯು ಉತ್ತಮಗೊಳ್ಳುತ್ತದೆ ಎಂಬುದನ್ನು ಖಚಿತವಾಗಿ ಹೇಳಲು ಬರುವುದಿಲ್ಲ. ಆದರೆ ಧಾರಣಾ ಸಾಮರ್ಥ್ಯದ ವರ್ಧನೆಯಿಂದ ಜನರ ಉತ್ಪಾದನಾ ಕ್ಷಮತೆಯು ವರ್ಧಿಸುತ್ತದೆ ಮತ್ತು ಜನರ ವರಮಾನ ಸಂಪಾದಿಸುವ ಸಾಮರ್ಥ್ಯವೂ ಅಧಿಕಗೊಳ್ಳುತ್ತದೆ. ಹೀಗೆ ಧಾರಣಾ ಸಾಮರ್ಥ್ಯದ ವರ್ಧನೆಯಿಂದ ವರಮಾನದ ಸಂಬಂಧಿ ಬಡತನವನ್ನು ನಿವಾರಿಸಿಕೊಳ್ಳಬಹುದು. ಅಕ್ಷರ ಸಂಪತ್ತು, ಆರೋಗ್ಯ ಭಾಗ್ಯ, ಶಿಕ್ಷಣ, ಆಹಾರ ಭದ್ತೆ, ತಾಂತ್ರಿಕ ತರಬೇತಿ ಮುಂತಾದವು ಜನರ ಬದುಕನ್ನು ಉತ್ತಮಪಡಿಸುತ್ತವೆ ಮತ್ತು ಅದಕ್ಕಿಂತ ಮುಖ್ಯವಾಗಿ ಜನರ ವರಮಾನ ಗಳಿಸುವ ಸಾಮರ್ಥ್ಯವನ್ನು ಅವು ವರ್ಧಿಸುತ್ತವೆ ಹಾಗೂ ಲಭ್ಯವಿರುವ ಅವಕಾಶಗಳಲ್ಲಿ ಬಯಸಿದ್ದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯದ ವ್ಯಾಪ್ತಿಯನ್ನು ಅವು ವಿಸ್ತರಿಸುತ್ತವೆ.

ಹೀಗೆ ಅಭಿವೃದ್ಧಿಯನ್ನು, ಬಡತನವನ್ನು ಭಿನ್ನ ನೆಲೆಯಿಂದ ನೋಡುವ ಕ್ರಮವೊಂದನ್ನು ಮೆಹಬೂಬ್ ಉಲ್‌ ಹಕ್ ಹಾಗೂ ಅಮರ್ತ್ಯಸೆನ್‌ ರೂಪಿಸಿದ್ದಾರೆ. ಈ ಬಗೆಯ ವಿಚಾರ ಪ್ರಣಾಳಿಕೆಯನ್ನು ‘ಮಾನವ ಅಭಿವೃದ್ಧಿ’ಯೆಂದು ಕರೆಯಲಾಗಿದೆ. ಅಕ್ಷರ, ಆರೋಗ್ಯ, ಆಹಾರ, ಆಶ್ರಯ ಮುಂತಾದ ಸಂಗತಿಗಳನ್ನು ಎರಡು ವಿಭಿನ್ನ ನೆಲೆಗಳಿಂದ ನೋಡುವ ಪರಿಯನ್ನು ಇವರಿಬ್ಬರೂ ಒತ್ತಿ ಹೇಳುತ್ತಿದ್ದಾರೆ. ಇವೆಲ್ಲವೂ ಜನರ ಉತ್ಪಾದನಾ ಕ್ಷಮತೆಯನ್ನು, ಗಳಿಕೆಯ ಸಾಮರ್ಥ್ಯವನ್ನು ಹಾಗೂ ಸಂಪನ್ಮೂಲಗಳ ಮೇಲಿನ ಹಕ್ಕುದಾರಿಕೆಯನ್ನು ವರ್ಧಿಸುತ್ತವೆ. ಇದು ಒಂದು ನೆಲೆ. ಇದಕ್ಕಿಂತ ಮುಖ್ಯವಾಗಿ ಅವುಗಳಿಗೆ ತಮ್ಮದೇ ಆದ ಮಹತ್ವವಿದೆ. ಅವು ಜನರಿಗೆ ವ್ಯಕ್ತಿತ್ವವನ್ನು, ಅನನ್ಯತೆಯನ್ನು ಒದಗಿಸುತ್ತವೆ. ಅವುಗಳನ್ನು ಸಾಧನಗಳನ್ನಾಗಿ ನೋಡುವುದರ ಜೊತೆಗೆ ಅಭಿವೃದ್ಧಿಯ ಅಂತಸ್ಥಗುಣಗಳನ್ನಾಗಿ ನೋಡುವ ವಿಚಾರವನ್ನು ಇಲ್ಲಿ ಹೇಳಲಾಗಿದೆ. ಕುಟುಂಬವೊಂದರ ವರಮಾನದ ಮಟ್ಟವು ಆ ಕುಟುಂಬದ ಮಹಿಳೆಯೊಬ್ಬಳು ಮನೆಯ ಹೊರಗೆ ದುಡಿಮೆ ಮಾಡುವುದರಿಂದ ಉತ್ತಮಗೊಳ್ಳುತ್ತದೆ. ವರಮಾನದ ವರ್ಧನೆಗೆ ಮಹಿಳೆಯ ಮನೆಯ ಹೊರಗಿನ ದುಡಿಮೆಯು ಒಂದು ಸಾಧನ. ಇದಕ್ಕಿಂತ ಮುಖ್ಯವಾಗಿ ಮನೆಯ ಹೊರಗೆ ಹೆಣ್ಣು ದುಡಿಯುವುದರ ಮಹತ್ವವೆಲ್ಲಿದೆಯೆಂದರೆ ಅದು ಆಕೆಗೆ ವ್ಯಕ್ತಿತ್ವವೊಂದನ್ನು ನೀಡುತ್ತದೆ. ಅದು ಅವಳ ಸ್ವಾತಂತ್ರ್ಯದ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಆಕೆಯ ಅರಿವಿನ ಪರಿಧಿಯನ್ನು ಅದು ವಿಸ್ತರಿಸುತ್ತದೆ. ತನ್ನ ದುಡಿಮೆಯ ಮಹತ್ವದ ಅರಿವು ಅವಳಿಗುಂಟಾಗುತ್ತದೆ.

ಸಾಂಪ್ರದಾಯಿಕ ವಿಚಾರ ಪ್ರಣಾಳಿಕೆಯಲ್ಲಿನ ‘ಸಾಧನವಾದಿ’ ನೆಲೆಯನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ. ಆದರೆ ಎರಡನೆಯ ದೃಷ್ಟಿಕೋನವೂ ತುಂಬಾ ಮಹತ್ವವಾದುದಾಗಿದೆ. ಮಹಿಳೆಯರ ಮನೆಯೊಳಗಿನ ಹಾಗೂ ಮನೆಯ ಹೊರಗಿನ ದುಡಿಮೆಯು ಆಕೆಯ ಮಕ್ಕಳ, ಗಂಡನ, ಕುಟುಂಬದ ಔನ್ನತ್ಯದಲ್ಲಿ ಲೀನವಾಗಿ ಹೋಗಿಬಿಡಬಾರದು. ಅದು ಮಹಿಳೆಗೆ ಒಂದು ವ್ಯಕ್ತಿತ್ವವನ್ನು ನೀಡುತ್ತದೆ. ಅದು ಮಹಿಳೆಯ ಕರ್ತೃತ್ವ ಪಾತ್ರದ ನಿರ್ವಹಣೆಗೆ ಅವಕಾಶ ಮಾಡಿಕೊಡುತ್ತದೆ. ಹೀಗೆ ಅಭಿವೃದ್ಧಿಯನ್ನು ಕುರಿತ ಧಾರಣಾ ಸಾಮರ್ಥ್ಯ ಸಂಬಂಧಿ ದೃಷ್ಟಿಕೋನವು ಸಾಂಪ್ರದಾಯಿಕ ವರಮಾನ ಸಂಬಂಧಿ ದೃಷ್ಟಿಕೋನಕ್ಕಿಂತ ವಿಸ್ತೃತವಾದುದಾಗಿದೆ ಮತ್ತು ನೀತಿ – ನಿರೂಪಣೆಯ ದೃಷ್ಟಿಯಿಂದ ಹೆಚ್ಚು ಉಪಯುಕ್ತವಾದುದಾಗಿದೆ.

ಲಿಂಗ ನಿರಪೇಕ್ಷತೆ

ಸಾಂಪ್ರದಾಯಿಕ ಅಭಿವೃದ್ಧಿ ವಿಚಾರ ಪ್ರಣಾಳಿಕೆಯು ಲಿಂಗ ನಿರಪೇಕ್ಷವಾದುದಾಗಿದೆ. ಅಲ್ಲಿ ಲಿಂಗ ಸಂಬಂಧಿ ನೆಲೆಗಳಿಗೆ ಅವಕಾಶವಿಲ್ಲವಾಗಿದೆ. ಆರ್ಥಿಕ ಅಭಿವೃದ್ಧಿ ಕುರಿತ ಅಧಿಕೃತ ಸಿದ್ಧಾಂತಗಳಲ್ಲಿ ಮಹಿಳೆಯರ ಸ್ಥಾನಮಾನವನ್ನು ಒಂದು ಪ್ರಮುಖ ಸಂಗತಿಯನ್ನಾಗಿ ಪ್ರತ್ಯೇಕವಾಗಿ ಪರಿಗಣಿಸುವುದರ ಬಗ್ಗೆ ತೀವ್ರ ಹಿಂಜರಿಕೆಯಿದೆಯೆಂದು ಅಮರ್ತ್ಯಸೆನ್ ತಮ್ಮ ಒಂದು ಪ್ರಸಿದ್ಧ ಪ್ರಬಂಧದಲ್ಲಿ ಬರೆದಿದ್ದಾರೆ (೧೯೯೦). ಸಮಾಜದಲ್ಲಿ ಅನೇಕ ಬಗೆಯ ಅಸಮಾನತೆಗಳಿರುತ್ತವೆ. ಆದರೆ ಅಭಿವೃದ್ಧಿ ಸಿದ್ಧಾಂತಗಳಲ್ಲಿ ಅವುಗಳನ್ನು ಕೇವಲ ವರಮಾನದ – ವರ್ಗದ ನೆಲೆಗೆ ಸೀಮಿತಗೊಳಿಸಿರುವುದು ಕಂಡುಬರುತ್ತದೆ. ಅಭಿವೃದ್ಧಿಗೆ ಸಂಬಂಧಿಸಿದಂತೆ ಲಿಂಗ ಸಂಬಂಧಗಳನ್ನು ಕುರಿತ ಚರ್ಚೆಯನ್ನು ‘ವಿಘಟನಾಕಾರಿ’ಯೆಂದು ಟೀಕಿಸುವುದು ಕಂಡುಬರುತ್ತದೆ. ವಾಸ್ತವವಾಗಿ ವರ್ಗ – ಜಾತಿ – ವೃತ್ತಿ ಮುಂತಾದ ಸಂಗತಿಗಳಿಗೆ ಸಂಬಂಧಿಸಿದ ಅಸಮಾನತೆ ಕುರಿತ ಚರ್ಚೆಗೆ ಲಿಂಗ ಸಂಬಂಧಿ ಅಸಮಾನತೆ ಕುರಿತ ಚರ್ಚೆಯು ಪೂರಕವಾಗಿರುತ್ತದೆ ವಿನಾ ಪರ್ಯಾಯವಾಗಿರುವುದಿಲ್ಲವೆಂಬುದನ್ನು ಸೆನ್ ತೋರಿಸಿಕೊಟ್ಟಿದ್ದಾರೆ. ಅಸಮಾನತೆಯ ಬಹುರೂಪಿ ನೆಲೆಗಳ ಬಗ್ಗೆ ಸೆನ್‌ತುಂಬಾ ಬರೆದಿದ್ದಾರೆ.

ಅಭಿವೃದ್ಧಿ ಕುರಿತ ಚರ್ಚೆಗಳಲ್ಲಿ ಲಿಂಗ ಸಂಬಂಧಗಳಿಗೆ ಪ್ರಮುಖ ಸ್ಥಾನ ನೀಡಬೇಕು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸೆನ್ ಒಂದು ಮುಖ್ಯ ಪ್ರಶ್ನೆ ಎತ್ತಿದ್ದಾರೆ. ವೈದ್ಯ ಶಾಸ್ತ್ರದ ಪ್ರಕಾರ ಹಾಗೂ ಅದಕ್ಕೆ ಸಂಬಂಧಿಸಿದ ಪುರಾವೆಗಳು ತೋರಿಸುತ್ತಿರುವಂತೆ ಸಮಾಜದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಅವಕಾಶಗಳು ಸಮಾನವಾಗಿದ್ದ ಪಕ್ಷದಲ್ಲಿ ಮಹಿಳೆಯರ ಬದುಕುಳಿಯುವ ಸಾಧ್ಯತೆ ಹಾಗೂ ಜೀವನಾಯುಷ್ಯಗಳು ಪುರುಷರಿಗಿಂತ ಅಧಿಕವಾಗಿರುತ್ತದೆ. ಆದರೆ ವಾಸ್ತವ ಸ್ಥಿತಿ ಭಾರತದಲ್ಲಿ, ಅದರಂತೆ ಕರ್ನಾಟಕದಲ್ಲಿ ಅದಕ್ಕಿಂತ ಭಿನ್ನವಾಗಿದೆ. ನಮ್ಮ ಸಮಾಜದ ಸಂದರ್ಭದಲ್ಲಿ ೩೫ನೆಯ ವರ್ಷದವರೆಗೆ ಮಹಿಳೆಯರ ಮರಣ ಪ್ರಮಾಣವು ಪುರುಷರ ಮರಣ ಪ್ರಮಾಣಕ್ಕಿಂತ ಅಧಿಕವಿದೆ. ಶಿಶುಮರಣ ಹಾಗೂ ಮಕ್ಕಳ ಮರಣಗಳಿಗೆ ಸಂಬಂಧಿಸಿದಂತೆಯೂ ಲಿಂಗತಾರತಮ್ಯ ಕಂಡುಬರುತ್ತದೆ. ಇದರ ಪರಿಣಾಮವಾಗಿ ಲಿಂಗ ಅನುಪಾತವು ಮಹಿಳೆಯರಿಗೆ ಪ್ರತಿಕೂಲವಾಗಿ ಪರಿಣಮಿಸಿದೆ. ಭಾರತದಲ್ಲಿ ಲಿಂಗ ಅನುಪಾತವು ೯೩೩ ರಷ್ಟಿದ್ದರೆ ಕರ್ನಾಟಕದಲ್ಲಿ ಅದು ೯೬೪ ರಷ್ಟಿದೆ. ಅಂದರೆ ೨೦೦೧ ರಲ್ಲಿ ಅಖಿಲ ಭಾರತ ಮಟ್ಟದಲ್ಲಿ ೩೫೫.೩೯ ಲಕ್ಷ ಮಹಿಳೆಯರು ಕಾಣೆಯಾಗಿದ್ದರೆ ಕರ್ನಾಟಕದಲ್ಲಿ ೯.೭೯ ಲಕ್ಷ ಮಹಿಳೆಯರು ಕಾಣೆಯಾಗಿದ್ದಾರೆ. ಇದಕ್ಕಿಂತ ಆತಂಕಕಾಗಿ ಸಂಗತಿಯೆಂದರೆ ೦ – ೬ ವಯೋಮಾನದ ಮಕ್ಕಳಿಗೆ ಸಂಬಂಧಿಸಿದಂತೆ ಲಿಂಗ ಅನುಪಾತವು ೧೯೯೧ ರಲ್ಲಿ ಅಖಿಲ ಭಾರತ ಮಟ್ಟದಲ್ಲಿ ೯೪೫ ರಷ್ಟಿದ್ದುದು ೨೦೦೧ ರಲ್ಲಿ ೯೨೭ ಕ್ಕೆ ಕುಸಿದಿದೆ. ಕರ್ನಾಟಕದಲ್ಲಿ ಅದು ೯೬೦ ರಿಂದ ೯೪೯ ಕ್ಕೆ ಇಳಿದಿದೆ. ಇದನ್ನು ಸೆನ್ ಲಿಂಗತಾರತಮ್ಯದ ಸೂಚಿಯನ್ನಾಗಿ ಬಳಸುತ್ತಾರೆ. ಲಿಂಗ ಅನುಪಾತದಲ್ಲಿನ ಕೊರತೆಯನ್ನು ಅವರು ‘ಕಾಣೆಯಾದ ಮಹಿಳೆಯರು’ ಎಂದು ಕರೆದಿದ್ದಾರೆ. ಇಂತಹ ವಿಕೃತಿಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಸರಿಪಡಿಸಲು ಅಭಿವೃದ್ಧಿಯ ಲಿಂಗ ಸಂಬಂಧಿ ಆಯಾಮಗಳನ್ನು ಕುರಿತಂತೆ ಚರ್ಚಿಸಬೇಕಾಗುತ್ತದೆ.

ಮಹಿಳಾ ದುಡಿಮೆಗಾರರು

ಕರ್ನಾಟಕದಲ್ಲಿ ೨೦೦೧ರ ಜನಗಣತಿ ಪ್ರಕಾರ ಒಟ್ಟು ದುಡಿಮೆಗಾರರ ಸಂಖ್ಯೆ ೨೩೫.೨೨ ಲಕ್ಷ. ಇವರಲ್ಲಿ ಮಹಿಳಾ ದುಡಿಮೆಗಾರರ ಪ್ರಮಾಣ ಶೇ. ೩೫.೦೭. ಆದರೆ ರಾಜ್ಯದಲ್ಲಿರುವ ಒಟ್ಟು ದಿನಗೂಲಿ ದುಡಿಮೆಗಾರರ ಸಂಖ್ಯೆ ೬೨.೦೯ ಲಕ್ಷ. ಇವರಲ್ಲಿ ಮಹಿಳಾ ದಿನಗೂಲಿ ದುಡಿಮೆಗಾರರ ಪ್ರಮಾಣ ಶೇ. ೫೮.೧೯. ಕರ್ನಾಟಕದಲ್ಲಿ ಕೃಷಿಯನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರರ ಸಂಖ್ಯೆ ೧೩೧.೪೪ ಲಕ್ಷ. ಅವರಲ್ಲಿ ಮಹಿಳೆಯರ ಪ್ರಮಾಣ ಶೇ. ೪೩. ಆದರೆ ಕೃಷಿಯೇತರ ಚಟುವಟಿಕೆಗಳನ್ನು ತೆಗೆದುಕೊಂಡರೆ ಮಹಿಳಾ ದುಡಿಮೆಗಾರರ ಪ್ರಮಾಣ ಕೇವಲ ಶೇ. ೨೪.೨೭ ರಷ್ಟಿದೆ.

ಇದರಿಂದ ಸ್ಪಷ್ಟವಾಗುವ ಸಂಗತಿಯೆಂದರೆ ಸಮಾಜದಲ್ಲಿ ಯಾವುದಕ್ಕೆ ಕಡಿಮೆ ಕೂಲಿಯಿದೆಯೋ ಮತ್ತು ಯಾವುದು ಕೆಳಮಟ್ಟದ ಸ್ಥಾನಮಾನ ಹೊಂದಿದೆಯೋ ಅಂತಹ ದುಡಿಮೆಯಲ್ಲಿ ಮಹಿಳೆಯರ ಪ್ರಮಾಣವು ಪುರುಷರ ಪ್ರಮಾಣಕ್ಕಿಂತ ಅಧಿಕವಾಗಿದೆ. ಇದಕ್ಕಿಂತ ಮುಖ್ಯವಾಗಿ ಮಹಿಳೆಯರು ಮನೆಯೊಳಗಿನ ಮತ್ತು ಮನೆಯ ಹೊರಗಿನ ದುಡಿಮೆಗಳೆರಡನ್ನು ನಿಭಾಯಿಸಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿದ್ದಾರೆ. ಸಾಮಾನ್ಯವಾಗಿ ಗೃಹವಾರ್ತೆ ದುಡಿಮೆಯಿಂದ ಪುರುಷರಿಗೆ ವಿನಾಯಿತಿಯಿದೆ. ನಮ್ಮ ಸಂದರ್ಭದಲ್ಲಿ ಮನೆಯ ಹೊರಗೆ ದುಡಿಯುವ ಮಹಿಳೆಯರು ಇಬ್ಬಗೆಯ ಹೊಣೆಗಾರಿಕೆಯನ್ನು ನಿರ್ವಹಿಸಬೇಕಾದ ಸ್ಥಿತಿ ಎದುರಿಸುತ್ತಿದ್ದಾರೆ. ಮಹಿಳೆಯರು ಮನೆಯೊಳಗೆ ನಿರ್ವಹಿಸುವ ಸಂತಾನೋತ್ಪತ್ತಿ ಹಾಗೂ ಸಂಗೋಪನಾ ದುಡಿಮೆಯನ್ನು ಜೈವಿಕವೆಂದು ವರ್ಗೀಕರಿಸಲಾಗಿದೆ. ಅವುಗಳನ್ನು ಉತ್ಪಾದನಾ ಚಟುವಟಿಕೆಗಳ ಚೌಕಟ್ಟಿಗೆ ಸೇರಿಸುವುದಿಲ್ಲ.

ಸಾಮಾಜಿಕ ತಂತ್ರಜ್ಞಾನ

ಮಹಿಳೆಯರ ಮನೆಯೊಳಗಿನ ಹಾಗೂ ಸಂಭಾವನಾರಹಿತ ದುಡಿಮೆಯು ಉತ್ಪಾದನಾ ದುಡಿಮೆಯೋ ಅಥವಾ ಅನುತ್ಪಾದಕವೋ ಎಂಬುದರ ಬಗ್ಗೆ ಸೆನ್ ತಮ್ಮ ಪ್ರಸಿದ್ಧ (ಜೆಂಡರ್ ಆಂಡ್ ಕೊಆಪರೇಟಿವ್ ಕಾನ್ಪಿಕ್ಟ್ನ: ೧೯೯೦) ಪ್ರಬಂಧದಲ್ಲಿ ವಿವರವಾಗಿ ಚರ್ಚಿಸಿದ್ದಾರೆ. ನಿಜಕ್ಕೂ ಇಲ್ಲಿ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ ಮಹಿಳೆಯರ ದುಡಿಮೆಯನ್ನು ಬಿಟ್ಟು ಸಮಾಜದಲ್ಲಿ ಉತ್ಪಾದನಾ ಚಟುವಟಿಕೆಗಳೆಂದು ಯಾವುದನ್ನು ಕರೆಯಲಾಗುತ್ತಿದೆಯೋ ಅದು ನಡೆಯಲು ಸಾಧ್ಯವೇ? ಇವೆರಡೂ ಪರಸ್ಪರಾವಲಂಬನೆಯ ಸಂಗತಿಗಳಾಗಿವೆ.

ಉತ್ಪಾದನೆಯೆಂಬುದು ಕೇವಲ ಕಚ್ಚಾ ಸರಕು ಮತ್ತು ಸಿದ್ಧಸರಕುಗಳ ನಡುವಣ ಸಂಬಂಧಕ್ಕೆ ಮಾತ್ರ ಸೀಮಿತವಾದ ಸಂಗತಿಯಲ್ಲ. ಏಕೆಂದರೆ ಅದು ಸಾಮಾಜಿಕ ವ್ಯವಸ್ಥೆಯೊಂದರ ನಡುವೆ ನಡೆಯಬೇಕಾಗುತ್ತದೆ. ಆದ್ದರಿಂದ ಕಾರ್ಖಾನೆ, ಉದ್ದಿಮೆ, ಕೃಷಿ – ಯಾವುದೇ ಚಟುವಟಿಕೆಯಾದರೂ ಅವು ಸಾಮಾಜಿಕ ವ್ಯವಸ್ಥೆಯ ಭಾಗವಾಗಿ ಜರುಗಬೇಕು.

ಉತ್ಪಾದನಾ ದುಡಿಮೆಯೆಂಬುದು ಇತರೆ ಅನೇಕ ಬಗೆಯ, ಅಂದರೆ ಗೃಹವಾರ್ತೆ, ಸಂಗೋಪನೆ, ಸಂತಾನೋತ್ಪತ್ತಿ, ಸಾಂತ್ವನ, ಹೊಲಗದ್ದೆಗಳಿಗೆ ಊಟ ಒಯ್ಯುವುದು ಮುಂತಾದವುಗಳನ್ನು ಅವಲಂಬಿಸಿಕೊಂಡಿದೆ. ತಂತ್ರಜ್ಞಾನವೆಂಬುದು ಕೇವಲ ಉಪಕರಣ, ಯಂತ್ರ – ತಂತ್ರಗಳಿಗೆ ಮಾತ್ರ ಸಂಬಂಧಿಸಿದ ಸಂಗತಿಯಲ್ಲ. ಅದು ಸಾಮಾಜಿಕ ವ್ಯವಸ್ಥಾಪನೆಯ ಚೌಕಟ್ಟಿನಲ್ಲಿ ನಡೆಯುವ ಒಂದು ಚಟುವಟಿಕೆಯಾಗಿದೆ.

ಗೃಹವಾರ್ತೆಯನ್ನು ನಿಕೃಷ್ಟವಾಗಿ ಕಾಣಲಾಗುತ್ತದೆ. ಸಂಗೋಪನೆ, ಸಂತಾನೋತ್ಪತ್ತಿ, ಗೃಹವಾರ್ತೆ ಮುಂತಾದವುಗಳ ಮಹತ್ವವನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ ಉತ್ಪಾದನಾ ಚಟುವಟಿಕೆಗಳಿಗೆ ಅವುಗಳ ಕಾಣಿಕೆಯಿದೆ ಎಂಬುದನ್ನು ಮಾತ್ರ ಒಪ್ಪಲು ಸಮಾಜ ಸಿದ್ಧವಿಲ್ಲ. ಆದ್ದರಿಂದ ಅಂತಹ ಚಟುವಟಿಕೆಗಳನ್ನು ಅನುತ್ಪಾದಕನೆಂದು ವರ್ಗೀಕರಿಸಲಾಗಿದೆ. ಆದರೆ ಮನೆಯೊಳಗಿನ ಹಾಗೂ ಮನೆಯ ಹೊರಗಿನ ಚಟುವಟಿಕೆಗಳನ್ನು ಸಂಯುಕ್ತವಾಗಿ ಉತ್ಪಾದನಾ ಚಟುವಟಿಕೆಗಳೆಂದು ಪರಿಗಣಿಸುವ ಅಗತ್ಯವನ್ನು ಸೆನ್ ಒತ್ತಾಯಿಸುತ್ತಿದ್ದಾರೆ. ಕುಟುಂಬವೊಂದರ ಅಭ್ಯುದಯವು ಇವೆರಡೂ ಬಗೆಯ ಚಟುವಟಿಕೆಗಳ – ಅಂದರೆ ವರಮಾನ ಗಳಿಸುವ, ಸರಕುಗಳನ್ನು ಉತ್ಪಾದಿಸುವ, ಖರೀದಿಸುವ, ಆಹಾರ ಪದಾರ್ಥಗಳನ್ನು ಸಂಗ್ರಹಿಸುವ ಮುಂತಾದವುಗಳ ಒಟ್ಟು ಪರಿಣಾಮವನ್ನು ಅವಲಂಬಿಸಿದೆ. ಒಟ್ಟು ಕುಟುಂಬವೊಂದರ ಪ್ರಗತಿಯು ದುಡಿಮೆಯ ಲಿಂಗ ಸಂಬಂಧಿ ವರ್ಗೀಕರಣವನ್ನು ಅವಲಂಬಿಸಿದೆ. ಕುಟುಂಬ ವ್ಯವಸ್ಥೆಯಲ್ಲಿ ಅದರ ಸದಸ್ಯರು ಎರಡು ಬಗೆಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಮೊದಲನೆಯದು ಕುಟುಂಬದ ಸಂಪತ್ತಿಗೆ ಕೊಡುಗೆ ನೀಡುವುದು. ಇದು ಸಹಕಾರವನ್ನು ಬಯಸುತ್ತದೆ. ಎರಡನೆಯದು ಕುಟುಂಬದ ಸಂಪತ್ತನ್ನು ಸದಸ್ಯರೆಲ್ಲರೂ ಹಂಚಿಕೊಳ್ಳುವುದು. ಇದು ಸಂಘರ್ಷದ ಸಂಗತಿಯಾಗಿದೆ. ಯಾರು ಯಾವ ಚಟುವಟಿಕೆ ಮಾಡಬೇಕು, ಯಾರು ಯಾವುದನ್ನು ಬಳಸಬೇಕು, ಯಾರು ತೀರ್ಮಾನ ತೆಗೆದುಕೊಳ್ಳಬೇಕು ಮುಂತಾದವುಗಳ ನ್ನೊಳಗೊಂಡ ಸಾಮಾಜಿಕ ವ್ಯವಸ್ಥೆಯು ಲಿಂಗ ಸಂಬಂಧಿ ಶ್ರಮವಿಭಜನೆಯನ್ನು ಅವಲಂಬಿಸಿದೆ. ಲಿಂಗ ಸಂಬಂಧಿ ಶ್ರಮ ವಿಭಜನೆಯೆಂಬುದು ಅಂತಹ ಒಂದು ಸಾಮಾಜಿಕ ವ್ಯವಸ್ಥೆಯಾಗಿದೆ.

ಸಾಮಾಜಿಕ ವ್ಯವಸ್ಥೆಯನ್ನು ವಿಶಾಲವಾದ ನೆಲೆಯಲ್ಲಿ ತಂತ್ರಜ್ಞಾನವೆಂದೂ, ಉತ್ಪಾದನೆಯೆಂದು ಪರಿಗಣಿಸುವುದರಿಂದ ಅನೇಕ ಉಪಯೋಗಗಳಿವೆ. ಮೊದಲನೆಯದಾಗಿ ಯಾವುದನ್ನು ಇದುವರೆವಿಗೂ ‘ಸಾಂಸ್ಕೃತಿಕ’ವೆಂದು ವರ್ಗೀಕರಿಸಿಕೊಂಡು ಬರಲಾಗಿದೆಯೋ ಅದನ್ನು ಉತ್ಪಾದನಾ ನೆಲೆಯಿಂದ ಪರಿಭಾವಿಸಿಕೊಳ್ಳಬೇಕಾದ ಅಗತ್ಯವನ್ನು ಅದು ತೋರಿಸುತ್ತದೆ. ಇದುವರೆವಿಗೂ ಯಾವುದನ್ನು ಉತ್ಪಾದನಾ ಚೌಕಟ್ಟಿನೊಳಗೆ ಸೇರಿಸಿರಲಿಲ್ಲವೋ ಅವುಗಳನ್ನು ಉತ್ಪಾದನಾ ಚಟುವಟಿಕೆಗಳೆಂದು ಈಗ ಗುರುತಿಸುವುದು ಸಾಧ್ಯವಾಗುತ್ತದೆ. ಎರಡನೆಯದಾಗಿ ತೀವ್ರ ಅಸಮಾನತೆಯಿಂದ ಕೂಡಿರುವ ಲಿಂಗ ಸಂಬಂಧಿ ವರ್ಗೀಕರಣದ ನೆಲೆಗಳನ್ನು ಇದು ಅನಾವರಣ ಮಾಡುತ್ತದೆ. ಮೂರನೆಯದಾಗಿ ಸಂಭಾವನಾ ಸಹಿತ ಮತ್ತು ಸಂಭಾವನಾ ರಹಿತವೆಂಬ ವರ್ಗೀಕರಣವು ಉಂಟು ಮಾಡುತ್ತಿರುವ ತಾರತಮ್ಯವಾದಿ ಪರಿಣಾಮಗಳನ್ನು ಇದು ತೋರಿಸುತ್ತದೆ.

ಹಿತಾಸಕ್ತಿಗಳ ರಾಜಕಾರಣ

ಮಹಿಳೆಯರಿಗೆ ಅವರದೇ ಆದ ‘ಹಿತಾಸಕ್ತಿ’ಗಳಿರುವುದು ಸಾಧ್ಯವಿಲ್ಲವೆಂಬ ಸಂಗತಿಯು ವ್ಯಾಪಕವಾಗಿ ನೆಲೆಯೂರಿದೆ. ಹೀಗೆ ‘ಹಿತಾಸಕ್ತಿ’ಗಳ ಬಗ್ಗೆ ಯೋಜಿಸುವುದು ‘ಮಹಿಳೆಗೆ’ ತಕ್ಕುದಲ್ಲವೆಂಬ ನಂಬಿಕೆಯನ್ನು ಸಮಾಜದಲ್ಲಿ ಬಿತ್ತಲಾಗಿದೆ. ನಮ್ಮ ಸಮಾಜದ ಸಂದರ್ಭದಲ್ಲಿ ಮಹಿಳೆಯೊಬ್ಬಳನ್ನು ‘ನಿನಗೇನು ಬೇಕು’ ಎಂಬ ಪ್ರಶ್ನೆ ಕೇಳಿದರೆ ಸಹಜವಾಗಿ ಆಕೆಯ ಗಂಡನ, ಮಕ್ಕಳ, ಕುಟುಂಬದ ಕ್ಷೇಮಾಭ್ಯುದಯವನ್ನು ಹಾರೈಸುತ್ತಾಳೆ ವಿನಾ ‘ತನಗೆ’ ಏನು ಬೇಕು, ತನ್ನ ಹಿತಾಸಕ್ತಿಗಳೇನು ಎಂಬುದನ್ನು ಹೇಳುವುದಿಲ್ಲ. ತನಗೂ ಹಿತಾಸಕ್ತಿಗಳಿವೆ, ಹಿತಾಸಕ್ತಿಗಳಿರಬಹುದು, ಅವುಗಳ ಬಗ್ಗೆ ಯೋಜಿಸಬೇಕು ಎಂಬ ವಿಚಾರಗಳು ಮಹಿಳೆಯರ ಮನಸ್ಸಿನಲ್ಲಿ ಮೂಡದಂತೆ ಅವರನ್ನು ಬೆಳಸಲಾಗಿರುತ್ತದೆ. ಮಹಿಳೆಯರು ತಮ್ಮ ಹಿತಾಸಕ್ತಿಗಳೇನು ಎಂಬುದನ್ನು ಪರಿಭಾವಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲದಿರುವ ಸಂಗತಿಯ ಆಧಾರದ ಮೇಲೆ ಅವರಿಗೆ ಹಿತಾಸಕ್ತಿಗಳೇ ಇಲ್ಲವೆಂದು ಹೇಳುವುದು ಸರಿಯಾಗುವುದಿಲ್ಲ. ಅವರು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಬಗ್ಗೆ, ತಮ್ಮ ಬದುಕನ್ನು ಕಟ್ಟಿಕೊಳ್ಳುವ ಬಗ್ಗೆ, ತಮ್ಮ ಹಿತಾಸಕ್ತಿಗಳನ್ನು ಗುರುತಿಸಿಕೊಳ್ಳುವ ಬಗ್ಗೆ ಯೋಜಿಸುವಂತಾಗಬೇಕು. ಈ ನೆಲೆಯಿಂದ ಹುಟ್ಟಿಕೊಂಡ ಚರ್ಚೆಯ ಫಲವೇ ‘ಸಶಕ್ತೀಕರಣ ಸಿದ್ಧಾಂತ’. ಸಶಕ್ತೀಕರಣವೆಂದರೆ ಸ್ವಂತ ಕಾಲ ಮೇಲೆ ನಿಲ್ಲುವುದು, ಲಿಂಗ ಸಮಾನತೆ, ಸ್ವತಂತ್ರ ವರಮಾನದ ಮೂಲವನ್ನು ಹೊಂದುವುದು ಮುಂತಾದ ರೀತಿಯಲ್ಲಿ ನಿರ್ವಚಿಸಲಾಗುತ್ತಿದೆ. ಆದರೆ ಸಶಕ್ತೀಕರಣವನ್ನು ತುಂಬಾ ವ್ಯಾಪಕವಾದ ಹಾಗೂ ನಿರ್ದಿಷ್ಟವಾದ ನೆಲೆಯಲ್ಲಿ ಪರಿಭಾವಿಸಿಕೊಳ್ಳುವ ಅಗತ್ಯವಿದೆ. ಅದೊಂದು ರಾಜಕೀಯ ಪರಿಭಾವನೆ. ಅದು ಅಧಿಕಾರ ಹಂಚಿಕೆಗೆ ಸಂಬಂಧಿಸಿದ ಸಂಗತಿ. ಮಹಿಳೆಯರ ಆಸ್ತಿ ಹಕ್ಕು, ಗೃಹವಾರ್ತೆಯನ್ನು ಗಂಡನೊಂದಿಗೆ ಹಂಚಿಕೊಳ್ಳುವುದು, ಕೌಟುಂಬಿಕ ಸಂಗತಿಗಳಿಗೆ ಸಂಬಂಧಿಸಿದಂತೆ ತೀರ್ಮಾನ ತೆಗೆದುಕೊಳ್ಳುವುದು ಮುಂತಾದ ಸಂಗತಿಗಳನ್ನು ಸಶಕ್ತೀಕರಣ ಒಳಗೊಂಡಿದೆ. ತನ್ನ ವ್ಯಕ್ತಿತ್ವ – ಬದುಕು – ದೈಹಿಕ ಭದ್ರತೆಗಳಿಗೆ ಸಂಬಂಧಿಸಿದಂತೆ ತೀರ್ಮಾನ ತೆಗೆದುಕೊಳ್ಳುವ ಹಕ್ಕು ಮಹಿಳೆಗಿರಬೇಕು. ಹೀಗೆ ಇಂತಹ ಹಕ್ಕುಗಳನ್ನು ಪಡೆದುಕೊಳ್ಳುವ ಪ್ರಕ್ರಿಯೆಯೇ ಸಶಕ್ತೀಕರಣ. ಅಮರ್ತ್ಯಸೆನ್ ಹೇಳುವ ಧಾರಣಾ ಸಾಮರ್ಥ್ಯ, ಕರ್ತೃತ್ವ, ಸಶಕ್ತೀಕರಣ, ಸಂಘರ್ಷ ಮುಂತಾದ ಸಂಗತಿಗಳು ಸ್ತ್ರೀವಾದಿ ಅರ್ಥಶಾಸ್ತ್ರದ ಬೆಳವಣಿಗೆಗೆ ಕಾರಣವಾಗಿವೆ. ಅಮರ್ತ್ಯಸೆನ್ ತನ್ನನ್ನು ತಾನು ‘ಸ್ತ್ರೀವಾದಿ ಅರ್ಥಶಾಸ್ತ್ರಜ್ಞ’ನೆಂದು ಕರೆದುಕೊಂಡಿದ್ದಾನೆ.

ಅಭಿವೃದ್ಧಿ ಕುರಿತಂತೆ ಚರ್ಚಿಸುವಾಗ, ಯೋಜನೆ ರೂಪಿಸುವಾಗ ನಾಡಿನ ಸರಿ ಸುಮಾರು ಅರ್ಧದಷ್ಟಿರುವ ಮಹಿಳೆಯರನ್ನು ‘ಅಯ್ಯೋ ಪಾಪ’ ಎನ್ನುವ ನೆಲೆಗೆ ಪ್ರತಿಯಾಗಿ ಹಕ್ಕಿನ ಸಂಗತಿಯಾಗಿ ಪರಿಗಣಿಸಬೇಕು ಎಂಬುದು ಇಂದು ನಿರ್ವಿವಾದದ ಸಂಗತಿಯಾಗಿದೆ.

ಸಂಗ್ರಹ

ಅಭಿವೃದ್ದಿಯನ್ನು ಕುರಿತಂತೆ ಎರಡು ತಾತ್ವಿಕ ಧಾರೆಗಳು ಇಂದು ಪ್ರಚಲಿತದಲ್ಲಿನ ಮೊದಲನೆಯದು ವರಮಾನ ಅಭಿವೃದ್ಧಿ ವಿಚಾರಧಾರೆ ಮತ್ತು ಎರಡನೆಯದು ಮಾನವ ಅಭಿವೃದ್ಧಿ ವಿಚಾರಧಾರೆ. ವರಮಾನ ಅಭಿವೃದ್ಧಿ ವಿಚಾರಧಾರೆಯ ಮಿತಿಗಳನ್ನು ಅದು ಉಂಟು ಮಾಡಿರುವ ವಿಕಾರಗಳನ್ನು ಕುರಿತಂತೆ ಅಮರ್ತ್ಯಸೆನ್, ಮೆಹಬೂಬ್‌ ಉಲ್‌ಹಕ್, ಮಾರ್ತನುಸ್‌ಬಾಮ್, ಜೀನ್ ಡ್ರೀಜ್ ಮುಂತಾದವರು ಚರ್ಚೆ ಮಾಡಿದ್ದಾರೆ. ಈ ಬಗೆಯ ವಿಚಾರಧಾರೆಗೆ ಪ್ರತಿಯಾಗಿ ಮಾನವ ಅಭಿವೃದ್ಧಿ ವಿಚಾರಧಾರೆಯನ್ನು ರೂಪಿಸಲಾಗಿದೆ.

ಜನರ ಬದುಕು ಅನ್ನೋದು ವರಮಾನ, ಉತ್ಪನ್ನ, ಉದ್ಯೋಗಗಳನ್ನು ಮೀರಿ ಹಕ್ಕುಗಳು, ಸ್ವಾತಂತ್ರ್ಯ ಮತ್ತು ಕರ್ತೃತ್ವಗಳನ್ನು ಒಳಗೊಳ್ಳಬೇಕು ಎಂಬುದು ಸೆನ್‌ ಮತ್ತು ಹಕ್ ಅವರ ಪ್ರತಿಪಾದನೆ. ಅಭಿವೃದ್ಧಿಯು ಮಹಿಳೆಯರ ಬದುಕನ್ನು ಒಳಗೊಳ್ಳಬೇಕಾಗುತ್ತದೆ. ಲಿಂಗ ನಿರಪೇಕ್ಷತೆಯೆಂಬುದು ಲಿಂಗ ತಾರತಮ್ಯಕ್ಕೆ ಒಂದು ಸಾಧನವಾಗಿ ಬಿಟ್ಟಿದೆ. ಜನರು ಏನಾಗಿದ್ದಾರೆ ಮತ್ತು ಅವರು ಏನು ಮಾಡಬಲ್ಲರು ಎಂಬುದು ಅಭಿವೃದ್ಧಿಯ ದೃಷ್ಟಿಯಿಂದ ಮುಖ್ಯವಾಗಬೇಕು.

ಅಕ್ಷರ, ಆರೋಗ್ಯ, ಆಹಾರ, ಆದಾಯ ಮತ್ತು ಆಸರೆಗಳನ್ನು ಒಳಗೊಂಡಂತೆ ನಾವು ಅಭಿವೃದ್ಧಿಯನ್ನು ಪರಿಭಾವಿಸಿಕೊಳ್ಳಬೇಕಾಗಿದೆ. ಅಕ್ಷರ, ಆರೋಗ್ಯ, ಆಹಾರ, ಮುಂತಾದವು ಕೇವಲ ಅಭಿವೃದ್ಧಿಯ ಸಾಧನಗಳು ಮಾತ್ರವಲ್ಲ. ಅವು ಅಭಿವೃದ್ಧಿಯ ಅಂತರ್ಗತ ಸಂಗತಿಗಳಾಗಿವೆ. ಲಿಂಗ ಸಂಬಂಧಗಳಿಗೆ ಅತೀತವಾದ ನೆಲೆಯಲ್ಲಿ ಅಭಿವೃದ್ಧಿಯನ್ನು ಪರಿಭಾವಿಸಿಕೊಳ್ಳುವುದು ಸರಿಯಲ್ಲ. ಮಹಿಳೆಯರ ಅಭಿವೃದ್ಧಿ ಮತ್ತು ಲಿಂಗ ಸಮಾನತೆ ಎಂಬ ಸಂಗತಿಗಳು ಮಹಿಳೆಯರಿಗೆ ಮಾತ್ರ ಸಂಬಂಧಿಸಿದ ವಿಷಯಗಳಲ್ಲ. ಅವು ಸಮಾಜದ, ಅಭಿವೃದ್ಧಿಯ ಸಂಗತಿಗಳು. ಮಹಿಳೆಯರ ನಿರ್ವಹಿಸುವ ಗೃಹವಾರ್ತೆ, ಸಂಗೋಪನೆ, ಸಂತಾನೋತ್ಪತ್ತಿಗಳನ್ನು ಉತ್ಪಾದನಾ ದುಡಿಮೆಯೆಂದು ಪರಿಗಣಿಸುವ ಸಂಗತಿಯನ್ನು ಸೆನ್ ಒತ್ತಾಯಿಸುತ್ತಿದ್ದಾರೆ. ಅಭಿವೃದ್ಧಿಯೆನ್ನುವುದು ದತ್ತಿ ಅಥವಾ ಉಂಬಳಿಯಲ್ಲ. ಅದು ಜನರ ಹಕ್ಕು. ಅದನ್ನು ದಕ್ಕಿಸಿ ಕೊಳ್ಳುವ ಸಾಮರ್ಥ್ಯವನ್ನು ಪಡೆದುಕೊಳ್ಳಬೇಕು. ಇಂತಹ ಸಾಮರ್ಥ್ಯದ ವರ್ಧನೆಯೇ ಅಭಿವೃದ್ಧಿ.

ಪರಾಮರ್ಶನ ಸೂಚಿ

ಮೆಹಬೂಬ್‌ಉಲ್ ಹಕ್, ೧೯೯೬, ರಿಫ್ಲೆಕ್ಷನ್ಸ್ ಆನ್ ಹೂಮನ್ ಡೆವಲಪ್ಮೆಂಟ್, ಆಕ್ಸಫರ್ಡ್ ಯೂನಿವರ್ಸಿಟಿ ಪ್ರೆಸ್, ನವದೆಹಲಿ.

ಮೆಹಬೂಬ್ ಉಲ್ ಹಕ್‌, ೧೯೯೦, ಹ್ಯೂಮನ್ಡೆವಲಪ್ಮೆಂಟ್ ರಿಪೋರ್ಟ್, ಯುಎನ್‌ಡಿಪಿ, ನವದೆಹಲಿ.

ಅಮರ್ತ್ಯಸೆನ್, ೧೯೯೯, ಫ್ರೀಡಮ್ಆಸ್ ಡೆವಲಪ್ಮೆಂಟ್, ಆಕ್ಸಫರ್ಡ್‌ ಯೂನಿವರ್ಸಿಟಿ ಪ್ರೆಸ್, ನವದೆಹಲಿ.

ಮಾರ್ಥ ಸಿ. ನುಸ್‌ಬೌಮ್, ೨೦೦೦, ವುಮೆನ್ ಆಂಡ್ ಹೂಮನ್ ಡೆವಲಪ್ಮೆಂಟ್ : ದಿ ಕೆಫಬಲಿಟೀಸ್ ಅಪ್ರೋಚ್, ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, ಕೇಂಬ್ರಿಡ್ಜ್‌

ಜೀನ್‌ಡ್ರೀಜ್, ಅಮರ್ತ್ಯಸೆನ್, ೨೦೦೨, ಇಂಡಿಯಾ : ಡೆವಲಪ್ಮೆಂಟ್ ಆಂಡ್ ಪಾರ್ಟಿಸಿಪೇಶನ್, ಆಕ್ಸಫರ್ಡ್ ಯೂನಿವರ್ಸಿಟಿ ಪ್ರೆಸ್, ನವದೆಹಲಿ.

ಸುಧೀರ್ ಆನಂದ್, ೧೯೯೪, ಡೆವಲಪ್‌ಮೆಂಟ್ ಆಂಡ್ ಫ್ರೀಡಮ್, ಇಲ್ಲಿ ಪಾಪ್ಯೂ ಲೇಶನ್ಪಾಲಿಸೀಸ್ ರಿಕನ್ಸಿಡರ್ಡ್: ಹೆಲ್ಥ್, ಎಂಪವರ್ಮೆಂಟ್, ಆಂಡ್ ರೈಟ್ಸ್(ಸಂ.) ಗೀತಾ ಸೆನ್ ಮತ್ತು ಇತರರು (ಹಾರ್ ವರ್ಡ್ ಸಿರೀಸ್ ಆನ್ ಪಾಪ್ಯೂಲೇಶನ್ ಆಂಡ್ ಇಂಟರ್ ನ್ಯಾಷನಲ್ ಹೆಲ್ಥ್)

ನೈಲಾ ಕಬೀರ್, ೧೯೯೪, ರಿವರ್ಸಡ್ ರಿಯಾಯಸಲಿಟೀಸ್ : ಹೈರಾರ್ಕೀಸ್ ಇನ್ ಡೆವಲಪ್ಮೆಂಟ್ ಥಾಟ್, ಕಾಳಿ ಫಾರ್ ವುಮೆನ್, ನವದೆಹಲಿ.

ಅಮರ್ತ್ಯಸೆನ್, ೧೯೯೦, ‘ಜೆಂಡರ್ ಆಂಡ್ ಕೋಆಪರೇಟಿವ್ ಕಾನ್ಪಿಕ್ಟ್ಸ್‌’ ಇಲ್ಲಿ ಐರನಿ ಟಿಂಕರ್ (ಸಂ) ಪರ್ಸಿಸ್ಟಿಂಗ್ಇನಿಕ್ವಾಲಿಟೀಸ್, ಆಕ್ಸಫರ್ಡ್ ಯೂನಿವರ್ಸಿಟಿ ಪ್ರೆಸ್, ನವದೆಹಲಿ.

ಕರ್ನಾಟಕ ಸರ್ಕಾರ ೨೦೦೧, ಸೆನ್ಸಸ್‌ ಆಫ್ ಇಂಡಿಯಾ, ೨೦೦೧, ಪ್ರೈಮರಿ ಸೆನ್ಸ್ಸ್ಅಬ್ಸ್ಟ್ರಾಕ್ಟ್.