ಭಾಗ
ಮಾನವ ಅಭಿವೃದ್ಧಿ ಸೂಚ್ಯಂಕ (ಎಚ್ಡಿಐ)

ಮಾನವ ಅಭಿವೃದ್ಧಿಯನ್ನು ಪರಿಮಾಣಾತ್ಮಕವಾಗಿ ಮಾಪನ ಮಾಡಲು ಯುಎನ್‌ಡಿಪಿಯು ರೂಪಿಸಿರುವ ಸೂತ್ರವೇ ಮಾನವ ಅಭಿವೃದ್ಧಿ ಸೂಚ್ಯಂಕ (ಎಚ್‌ಡಿಐ). ಇದೊಂದು ಸಂಯುಕ್ತ ಸೂಚ್ಯಂಕವಾಗಿದೆ. ಅಂದರೆ ಇದು ಮೂರು ಸೂಚಿಗಳನ್ನು ಒಳಗೊಂಡ ಮಾಪನವಾಗಿದೆ. ಎಚ್.ಡಿ.ಐ. ಒಳಗೊಳ್ಳುವ ಮೂರು ಸೂಚಿಗಳು :

೧. ಜನನ ಕಾಲದಿಂದ ಎಷ್ಟು ವರ್ಷ ಬದುಕುತ್ತಾರೆ ಎಂಬುದರ ಆಧಾರದ ಮೇಲೆ ಲೆಕ್ಕ ಹಾಕುವ ಜನರ ಜೀವನಾಯುಷ್ಯ.

೨. ಜನರ ಸಾಕ್ಷರತಾ ಪ್ರಮಾಣ ಹಾಗೂ ದಾಖಲಾತಿ ಪ್ರಮಾಣಗಳನ್ನು ಒಳಗೊಂಡ ಶೈಕ್ಷಣಿಕ ಸಾಧನೆಯ ಸೂಚಿ. ಇಲ್ಲಿ ಸಾಕ್ಷರತಾ ಪ್ರಮಾಣಕ್ಕೆ ೨/೩ ರಷ್ಟು ತೂಕವನ್ನು ಮತ್ತು ದಾಖಲಾತಿಗೆ ೧/೩ ರಷ್ಟು ತೂಕನೀಡಲಾಗುತ್ತದೆ.

೩. ಡಾಲರ್‌ನ ಕೊಳ್ಳುವ ಶಕ್ತಿಯ ಆಧಾರದ ಮೇಲೆ ಲೆಕ್ಕ ಹಾಕುವ ಜನರ ತಲಾ ಜಿ.ಡಿ.ಪಿ. ಅಥವಾ ತಲಾ ವರಮಾನ.

ಈ ಮೂರು ಸೂಚಿಗಳ ಸರಾಸರಿ ಮೌಲ್ಯವೇ ಮಾನವ ಅಭಿವೃದ್ಧಿ ಸೂಚ್ಯಂಕ. ಎಚ್‌ಡಿಐ = (ಆಯುರ್ಮಾನ ಸೂಚಿ + ಶೈಕ್ಷಣಿಕ ಸಾಧನೆ ಸೂಚಿ + ತಲಾ ವರಮಾನ ಸೂಚಿ) / ೩

ಪ್ರತಿಯೊಂದು ಸೂಚಿಯನ್ನು ಲೆಕ್ಕ ಹಾಕಲು ಕೆಳಗಿನ ಸೂತ್ರವನ್ನು ಬಳಸಬಹುದಾಗಿದೆ.

= ಸೂಚಿಯ ವಾಸ್ತವ ಮೌಲ್ಯ – ಸೂಚಿಯ ಕನಿಷ್ಟ ಮೌಲ್ಯ / ಸೂಚಿಯ ಗರಿಷ್ಠ ಮೌಲ್ಯ – ಸೂಚಿಯ ಕನಿಷ್ಟ ಮೌಲ್ಯ

ಕರ್ನಾಟಕದ ೨೦೦೧ರ ಮಾನವ ಅಭಿವೃದ್ಧಿ ಸೂಚ್ಯಂಕದ ಲೆಕ್ಕಾಚಾರ

ಸೂಚಿಗಳ ವಿವರ

೧. ಜನನ ಕಾಲದಲ್ಲಿ ಜೀವನಾಯುಷ್ಯ – ೬೫.೮೦ ವರ್ಷಗಳು

೨. ಸಾಕ್ಷರತಾ ಪ್ರಮಾಣ (೨೦೦೧) – ಶೇ. ೬೬.೬೪

೩. ದಾಖಲಾತಿ ಪ್ರಮಾಣ  – ಶೇ. ೮೦.೨೮

೪. ಪಿಪಿಪಿ ಡಾಲರ್‌ನಲ್ಲಿ ನೈಜ ತಲಾವರಮಾನ $ ೨,೮೫೪.೦೦

ಕನಿಷ್ಟ ಮತ್ತು ಗರಿಷ್ಟ ಮೌಲ್ಯಗಳು

೧. ಜನನ ಕಾಲದಲ್ಲಿ ಆಯಸ್ಸು : ಕನಿಷ್ಟ : ೨೫ ವರ್ಷಗಳು, ಗರಿಷ್ಟ : ೮೫ ವರ್ಷಗಳು.

೨. ಸಾಕ್ಷರತಾ ಪ್ರಮಾಣ : ಕನಿಷ್ಟ : ಶೇ. ೦. ಗರಿಷ್ಟ : ಶೇ. ೧೦೦.

೩. ದಾಖಲಾತಿ ಪ್ರಮಾಣ : ಕನಿಷ್ಟ : ಶೇ. ೦, ಗರಿಷ್ಟ : ಶೇ. ೧೦೦.

೪. ತಲಾ ವರಮಾನ (ಪಿಪಿಪಿ ಡಾಲರ್‌ನಲ್ಲಿ) : ಕನಿಷ್ಟ : ಡಾಲರ್ ೧೦೦. ಗರಿಷ್ಟ : ಡಾಲರ್‌೪೦,೦೦೦.

ಮೇಲಿನ ಎಲ್ಲ ವಿವರಗಳನ್ನು ಆಧರಿಸಿ ಕರ್ನಾಟಕದ ೨೦೦೧ರ ಎಚ್‌ಡಿಐ ಲೆಕ್ಕ ಹಾಕಬಹುದಾಗಿದೆ.

ಸೂಚಿಗಳ ಲೆಕ್ಕಾಚಾರ

೧. ಆಯುರ್ಮಾನ ಸೂಚಿ = ೫.೮೦ – ೨೫ / ೮೫ – ೨೫ = ೦.೬೮೦

೨. ಸಾಕ್ಷರತಾ ಸೂಚಿ = ೬೬.೬೪ – ೦ / ೧೦೦ – ೦ = ೦.೬೭೦

೩. ದಾಖಲಾತಿ ಸೂಚಿ = ೮೦.೨೮ – ೦ / ೧೦೦ – ೦ = ೦.೮೦೩

೪. ಶೈಕ್ಷಣಿಕ ಸಾಧನೆ ಸೂಚಿ = ೨/೩ (ಸಾಕ್ಷರತಾ ಸೂಚಿ) + ೧/೩ (ದಾಖಲಾತಿ ಸೂಚಿ) = ೨/೩ (೦.೬೭೦) + ೧/೩ (೦.೮೦೩) = ೦.೭೧೨

೫. ನೈಜತಲಾ ಜಿಡಿಪಿ ಸೂಚಿ = ಲಾಗ್ ೨೮೫೪ – ಲಾಗ್ ೧೦೦ = ೦.೫೫೯ / ಲಾಗ್‌೪೦೦೦೦ – ಲಾಗ್ ೧೦೦

ಮಾನವ ಅಭಿವೃದ್ಧಿ ಸೂಚ್ಯಂಕ = (೦.೬೮೦+೦.೭೧೨+೦.೫೫೯)/೩ = ೦.೬೫೦

ಇದೇ ರೀತಿ ಕರ್ನಾಟಕದ ಜಿಲ್ಲೆಗಳಿಗೂ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಲೆಕ್ಕ ಹಾಕಬಹುದಾಗಿದೆ.

ಭಾಗ
ಮಾನವ ಅಭಿವೃದ್ಧಿ ಸೂಚ್ಯಂಕ : ಕರ್ನಾಟಕದ ಸಾಧನೆ

ಮಾನವ ಅಭಿವೃದ್ಧಿಗೆ ಸಂಬಂಧಿಸಿದಂತೆ ಕರ್ನಾಟಕದ ಸಾಧನೆಯನ್ನುಎರಡು ನೆಲೆಗಳಲ್ಲಿ ಚರ್ಚಿಸಬಹುದಾಗಿದೆ. ಮೊದಲನೆಯದಾಗಿ ಅಖಿಲ ಭಾರತ ಮಟ್ಟದಲ್ಲಿ ಮಾನವ ಅಭಿವೃದ್ಧಿಗೆ ಸಂಬಂಧಿಸಿದಂತೆ ಕರ್ನಾಟಕದ ಸಾಧನೆಯನ್ನು ಗುರುತಿಸಬಹುದಾಗಿದೆ. ಎರಡನೆಯದಾಗಿ ಕರ್ನಾಟಕದ ಜಿಲ್ಲೆಗಳು ಮಾನವ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾಧಿಸಿದ ಸಾಧನೆಗಳನ್ನು ಗುರುತಿಸಬಹುದಾಗಿದೆ.

: ಅಖಿಲ ಭಾರತ ಮಟ್ಟದಲ್ಲಿ ಕರ್ನಾಟಕದ ಸಾಧನೆ

ಕೋಷ್ಟಕ ೧ ರಲ್ಲಿ ದೇಶದ ೧೫ ಪ್ರಧಾನ ರಾಜ್ಯಗಳ ೨೦೦೧ ಮತ್ತು ೨೦೦೬ರ ಮಾನವ ಅಭಿವೃದ್ಧಿ ಸೂಚ್ಯಂಕಗಳನ್ನು ನೀಡಲಾಗಿದೆ. ಇಲ್ಲಿ ಎಚ್.ಡಿ.ಐ.ಯನ್ನು ಯುಎ‌ನ್‌ಡಿಪಿ ಮಾದರಿಯಲ್ಲಿ ಮಾಪನ ಮಾಡಲಾಗಿದೆ. ಬಹಳ ಸರಳವಾಗಿ ಗಮನಿಸಬಹುದಾದ ಸಂಗತಿಯೆಂದರೆ ಕರ್ನಾಟಕದ ಎಚ್‌ಡಿಐ (೦.೬೫೦)ಯು ಅಖಿಲ ಭಾರತ ಎಚ್‌.ಡಿ.ಐ. (೦.೬೨೧) ಗಿಂತ ಅಧಿಕ ಮಟ್ಟದಲ್ಲಿದೆ. ಅಖಿಲ ಭಾರತ ಮಟ್ಟದ ೧೫ ಪ್ರಧಾನ ರಾಜ್ಯಗಳ ಪೈಕಿ ಕರ್ನಾಟಕವು ಎಚ್‌ಡಿಐನಲ್ಲಿ ಏಳನೆಯ ಸ್ಥಾನ ಪಡೆದುಕೊಂಡಿದೆ. ಇಲ್ಲಿ ಕರ್ನಾಟಕವು ತನ್ನ ಮಧ್ಯಮಗತಿ ಸ್ಥಾನವನ್ನು ಕಾಯ್ದುಕೊಂಡಿರುವುದು ಕಂಡುಬರುತ್ತದೆ.

ಇಲ್ಲಿ ಆತಂಕಪಡುವ ಸಂಗತಿಯೆಂದರೆ ದಕ್ಷಿಣ ಭಾರತದಲ್ಲಿನ ಕೇರಳ ಮತ್ತು ತಮಿಳುನಾಡು ರಾಜಯಗಳು ಎಚ್‌ಡಿಐನಲ್ಲಿ ಕ್ರಮವಾಗಿ ಮೊದಲನೆಯ ಹಾಗೂ ಮೂರನೆಯ ಸ್ಥಾನ ಪಡೆದುಕೊಂಡಿದೆ. ಇವೆರಡೂ ರಾಜ್ಯಗಳ ಮುಂದೆ ಕರ್ನಾಟಕದ ಸಾಧನೆಯು ದುರ್ಬಲವಾಗಿದೆ.

ಕೇರಳ ರಾಜ್ಯದ ಎಚ್‌ಡಿಐಗೆ ಹೋಲಿಸಿದರೆ ಕರ್ನಾಟಕದ ಎಚ್‌ಡಿಐಯು ಅದರ ಶೇ. ೮೭.೧೩ ರಷ್ಟಿದೆ. ಈ ದಿಶೆಯಲ್ಲಿ ಕರ್ನಾಟಕವು ಸಾಗಬೇಕಾದ ದಾರಿ ದೂರಿವಿದೆ. ಮಾನವ ಅಭಿವೃದ್ಧಿ ವಿಷಯದಲ್ಲಿ ರಾಜ್ಯವು ಹೆಚ್ಚು ಬಂಡವಾಳ ಹೂಡುವ ಅಗತ್ಯವಿದೆ.

ಕರ್ನಾಟಕದ ಎಚ್‌ಡಿಐಯು ೧೯೯೧ರಲ್ಲಿ ೦.೫೪೧ ರಷ್ಟಿತ್ತು. ಅದು ೨೦೦೧ರಲ್ಲಿ ೦.೬೫೦ ಕ್ಕೇರಿದೆ. ಆದರೆ ಮುಂದೆ ೨೦೦೬ರಲ್ಲಿ ಅದು ಕೇವಲ ೦.೬೫೮ ಕ್ಕೇರಿದೆ. ಇಲ್ಲಿನ ಏರಿಕೆಯು ಅತ್ಯಂತ ಮಂದಗತಿಯದ್ದಾಗಿದೆ. ಇದರಿಂದಾಗಿ ಕರ್ನಾಟಕದ ಎಚ್‌ಡಿಐನ ಸ್ಥಾನ ೨೦೦೧ ರಲ್ಲಿ ೭ ಇದ್ದುದು ೨೦೦೬ ರಲ್ಲಿ ೮ ಕ್ಕಿಳಿದಿದೆ. ಇದಕ್ಕೆ ಅನೇಕ ಕಾರಣಗಳನ್ನು ನೀಡಬಹುದು. ಒಟ್ಟು ಸೂಚ್ಯಂಕದಲ್ಲಿ ಉಂಟಾಗಿರುವ ಏರಿಕೆಯೂ ಸಾಪೇಕ್ಷವಾಗಿ ಕೆಳಮಟ್ಟದ್ದಾಗಿದೆ (ಶೇ.೧.೨೩) ಆದರೆ ಕೇರಳ ರಾಜ್ಯದಲ್ಲಿ ಅದು ಶೇ. ೩.೮೯ ರಷ್ಟು ಏರಿಕೆಯಾಗಿದ್ದರೆ ತಮಿಳುನಾಡಿನಲ್ಲಿ ಅದು ಶೇ. ೧.೦೨ ರಷ್ಟು ಏರಿಕೆಯಾಗಿದೆ. ಮಾನವ ಅಭಿವೃದ್ಧಿಯಲ್ಲಿ ಕರ್ನಾಟಕದ ಸಾಧನೆಯು ಹೇಳಿಕೊಳ್ಳುವಂತಹ ರೀತಿಯಲ್ಲಿಲ್ಲ.

ಮಾನವ ಅಭಿವೃದ್ದಿ ಸೂಚ್ಯಂಕಗಳು : ೨೦೦೧ ಮತ್ತು ೨೦೦೬

ಕೋಷ್ಟಕ

ಕ್ರ.ಸಂ. ರಾಜ್ಯಗಳು ಎಚ್‌ಡಿಐ
(೨೦೦೧)
ಸ್ಥಾನ ಎಚ್‌ಡಿಐ
(೨೦೦೬)
ಸ್ಥಾನ
೧. ಆಂಧ್ರಪ್ರದೇಶ ೦.೬೦೯ ೦೯ ೦.೬೨೭ ೧೦
೨. ಅಸ್ಸಾಂ ೦.೫೭೮ ೧೧ ೦.೬೪೫ ೦೯
೩. ಬಿಹಾರ ೦.೪೯೫ ೧೫ ೦.೫೫೨ ೧೫
೪. ಗುಜರಾತ್ ೦.೬೫೫ ೦.೬೭೪ ೦೬
೫. ಹರಿಯಾಣ ೦.೬೫೩ ೦.೬೮೬ ೦೫
೬. ಕರ್ನಾಟಕ ೦.೬೫೦ ೦.೬೫೮ ೦೮
೭. ಕೇರಳ ೦.೭೪೬ ೦.೭೭೫ ೦೧
೮. ಮಧ್ಯಪ್ರದೇಶ ೦.೫೭೧ ೧೨ ೦.೫೮೫ ೧೩
೯. ಮಹಾರಾಷ್ಟ್ರ ೦.೭೦೬ ೦೨ ೦.೭೧೬ ೦೨
೧೦. ಒರಿಸ್ಸಾ ೦.೫೬೯ ೧೩ ೦.೫೯೨ ೧೧
೧೧. ಪಂಜಾಬ ೦.೬೭೯ ೦೪ ೦.೭೦೧ ೦೩
೧೨. ರಾಜಸ್ಥಾನ ೦.೫೯೬ ೧೦ ೦.೫೯೧ ೧೨
೧೩. ತಮಿಳುನಾಡು ೦.೬೮೭ ೦೩ ೦.೬೯೪ ೦೪
೧೪. ಉತ್ತರ ಪ್ರದೇಶ ೦.೫೩೫ ೧೪ ೦.೫೮೨ ೧೪
೧೫. ಪಶ್ಚಿಮ ಬಂಗಾಳ ೦.೬೪೭ ೦೮ ೦.೬೭೧ ೦೭

ಮೂಲ : . ಕರ್ನಾಟಕದ ಮಾನವ ಅಭಿವೃದ್ಧಿ ವರದಿ : ೨೦೦೫, ಪು. ೩೫೩
. ಭಾರತ ಸರ್ಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

: ಕರ್ನಾಟಕದ ಜಿಲ್ಲೆಗಳ ಮಾನವ ಅಭಿವೃದ್ಧಿ

ಕರ್ನಾಟಕ ಸರ್ಕಾರದ ಯೋಜನಾ ಇಲಾಖೆಯು ಸಿದ್ಧಪಡಿಸಿರುವ ‘ಕರ್ನಾಟಕ ಮಾನವ ಅಭಿವೃದ್ಧಿ ವರದಿ – ೨೦೦೫’ ರಲ್ಲಿ ಕರ್ನಾಟಕದ ೨೭ ಜಿಲ್ಲೆಗಳ ಮಾನವ ಅಭಿವೃದ್ಧಿ ಸೂಚ್ಯಂಕಗಳನ್ನು ೧೯೯೧ ಮತ್ತು ೨೦೦೧ ಕಾಲಘಟ್ಟಗಳಿಗೆ ಮಾಪನ ಮಾಡಿ ನೀಡಲಾಗಿದೆ. ಇದರ ವಿವರಗಳನ್ನು ಕೋಷ್ಟಕ – ೨ ರಲ್ಲಿ ನೀಡಿದೆ.

ಮಾನವ ಅಭಿವೃದ್ಧಿ ಸೂಚ್ಯಂಕ : ೧೯೯೧ ಮತ್ತು ೨೦೦೧, ಜಿಲ್ಲಾವಾರು

ಕೋಷ್ಟಕ

ಕ್ರ.ಸಂ ಜಿಲ್ಲೆಗಳು ಮಾನವ ಅಭಿವೃದ್ಧಿ ೧೯೯೧ ಮಾನವ ಅಭಿವೃದ್ಧಿ ೨೦೦೧
ಸೂಚ್ಯಂಕ ಸ್ಥಾನ ಸೂಚ್ಯಂಕ ಸ್ಥಾನ
೧. ಬಾಗಲಕೋಟೆ ೦.೫೦೫ ೨೦ ೦.೫೯೧ ೨೨
೨. ಬೆಂಗಳೂರು ಗ್ರಾಮೀಣ ೦.೫೩೯ ೧೧ ೦.೬೫೩ ೦೬
೩. ಬೆಂಗಳೂರು ನಗರ ೦.೬೨೩ ೦೪ ೦.೭೫೩ ೦೧
೪. ಬೆಳಗಾವಿ ೦.೫೪೫ ೦೯ ೦.೬೪೮ ೦೮
೫. ಬಳ್ಳಾರಿ ೦.೫೧೨ ೧೮ ೦.೬೧೭ ೧೮
೬. ಬೀದರ್ ೦.೪೯೬ ೨೩ ೦.೫೯೯ ೨೧
೭. ವಿಜಾಪುರ ೦.೫೦೪ ೨೧ ೦.೫೮೯ ೨೩
೮. ಚಾಮರಾಜನಗರ ೦.೪೮೮ ೨೪ ೦.೫೭೬ ೨೫
೯. ಚಿಕ್ಕಮಗಳೂರು ೦.೫೫೯ ೦೭ ೦.೬೪೭ ೦೯
೧೦. ಚಿತ್ರದುರ್ಗ ೦.೫೩೫ ೧೩ ೦.೬೨೭ ೧೬
೧೧. ದಕ್ಷಿಣ ಕನ್ನಡ ೦.೬೬೧ ೦೧ ೦.೭೨೨ ೦೨
೧೨. ದಾವಣಗೆರೆ ೦೫೪೮ ೦೮ ೦.೬೩೫ ೧೨
೧೩. ಧಾರವಾಡ ೦.೫೩೯ ೧೦ ೦.೬೪೨ ೧೦
೧೪. ಗದಗ ೦.೫೧೬ ೧೭ ೦.೬೩೪ ೧೩
೧೫. ಗುಲಬರ್ಗಾ ೦.೪೫೩ ೨೫ ೦.೫೬೪ ೨೬
೧೬. ಹಾಸನ ೦.೫೧೯ ೧೬ ೦.೬೩೯ ೧೧
೧೭. ಹಾವೇರಿ ೦.೪೯೬ ೨೨ ೦.೬೦೩ ೨೦
೧೮. ಕೊಡಗು ೦.೬೨೩ ೦೩ ೦.೬೯೭ ೦೪
೧೯. ಕೋಲಾರ ೦.೫೨೨ ೧೫ ೦.೬೨೫ ೧೭
೨೦. ಕೊಪ್ಪಳ ೦.೪೪೬ ೨೬ ೦.೫೮೨ ೨೪
೨೧. ಮಂಡ್ಯ ೦.೫೧೧ ೧೯ ೦.೬೦೯ ೧೯
೨೨. ಮೈಸೂರು ೦.೫೨೪ ೧೪ ೦.೬೩೧ ೧೪
೨೩. ರಾಯಚೂರು ೦.೪೪೩ ೨೭ ೦.೫೪೭ ೨೭
೨೪. ಶಿವಮೊಗ್ಗ ೦.೫೮೪ ೦೫ ೦.೬೭೩ ೦೫
೨೫. ತುಮಕೂರು ೦.೫೩೯ ೧೨ ೦.೬೩೦ ೧೫
೨೬. ಉಡುಪಿ ೦.೬೫೯ ೦೨ ೦.೭೧೪ ೦೩
೨೭. ಉತ್ತರ ಕನ್ನಡ ೦.೫೬೭ ೦೬ ೦.೬೫೩ ೦೭
೨೮. ಕರ್ನಾಟಕ ರಾಜ್ಯ ೦.೫೪೧ ೦.೬೫೦

ಮೂಲ: ಕರ್ನಾಟಕದ ಮಾನವ ಅಭಿವೃದ್ಧಿ ವರದಿ: ೨೦೦೫, ಪು. ೧೯

ಕೋಷ್ಟಕ – ೨ ರಲ್ಲಿ ತೋರಿಸಿರುವಂತೆ ಕರ್ನಾಟಕದ ಮಾನವ ಅಭಿವೃದ್ಧಿ ಸೂಚ್ಯಂಕವು ೧೯೯೧ ರಲ್ಲಿ ೦.೫೪೧ ರಷ್ಟಿದ್ದುದು ೨೦೦೧ ರಲ್ಲಿ ೦.೬೫೦ ಕ್ಕೇರಿದೆ. ಇದೊಂದು ಮೆಚ್ಚತಕ್ಕ ಸಾಧನೆಯಾಗಿದೆ. ರಾಜ್ಯದಲ್ಲಿ ೧೯೯೧ರಲ್ಲಿ ರಾಜ್ಯ ಮಟ್ಟದ ಸೂಚ್ಯಂಕಕ್ಕಿಂತ ೯ ಜಿಲ್ಲೆಗಳಲ್ಲಿ ಸೂಚ್ಯಂಕವು ಅಧಿಕವಾಗಿದ್ದರೆ ೨೦೦೧ರಲ್ಲಿ ರಾಜ್ಯ ಮಟ್ಟದ ಸೂಚ್ಯಂಕಕ್ಕಿಂತ ಕೇವಲ ೭ ಜಿಲ್ಲೆಗಳಲ್ಲಿ ಮಾತ್ರ ಎಚ್‌ಡಿಐ ಮೌಲ್ಯ ಅಧಿಕವಾಗಿದೆ. ರಾಜ್ಯದಲ್ಲಿ ೧೯೯೧ರಲ್ಲಿ ಸೂಚ್ಯಂಕ ೦.೫೦೦ ಕ್ಕಿಂತ ಕಡಿಮೆ ಸೂಚ್ಯಂಕ ಹೊಂದಿದ್ದ ಜಿಲ್ಲೆಗಳ ಸಂಖ್ಯೆ ಆರು. ಆದರೆ ೨೦೦೧ರಲ್ಲಿ ೦.೬೦೦ ಕ್ಕಿಂತ ಕಡಿಮೆ ಸೂಚ್ಯಂಕ ಪಡೆದ ಜಿಲ್ಲೆಗಳ ಸಂಖ್ಯೆ ಆರು.

ಅತ್ಯಂತ ಕುತೂಹಲದ ಸಂಗತಿಯೆಂದರೆ ೧೯೯೧ರಲ್ಲಿ ಕನಿಷ್ಟ ಸೂಚ್ಯಂಕ ೦.೪೪೩ ರಾಯಚೂರು ಜಿಲ್ಲೆಯಲ್ಲಿತ್ತು. ಅದರ ಸ್ಥಾನ ಕಟ್ಟಕಡೆಯ ೨೭ನೆಯದಾಗಿತ್ತು. ಈಗ ೨೦೦೧ರಲ್ಲಿ ಅದು ಕನಿಷ್ಟ ಸೂಚ್ಯಂಕ ೦.೫೪೭ ರೊಂದಿಗೆ ೨೭ನೆಯ ಸ್ಥಾನದಲ್ಲೇ ಮುಂದುವರಿದಿದೆ.

ಕೋಷ್ಟಕ – ೩ರಲ್ಲಿ ಕರ್ನಾಟಕದ ಜಿಲ್ಲೆಗಳನ್ನು ವರಮಾನ ಮತ್ತು ಅಭಿವೃದ್ಧಿಗಳ ನಡುವಣ ಸಂಬಂಧವನ್ನು ಅವಲಂಬಿಸಿ ನಾಲ್ಕು ಗುಂಪುಗಳಾಗಿ ವರ್ಗೀಕರಿಸಲಾಗಿದೆ.

ಮೊದಲನೆಯ ಗುಂಪಿನಲ್ಲಿ ಆರು ಜಿಲ್ಲೆಗಳಿವೆ. ಇವು ವರಮಾನದಲ್ಲಿ ಉನ್ನತಮಟ್ಟ ತಲುಪಿವೆ ಹಾಗೂ ಮಾನವ ಅಭಿವೃದ್ಧಿಯಲ್ಲೂ ಉತ್ತಮ ಸಾಧನೆ ಸಾಧಿಸಿಕೊಂಡಿವೆ. ಈ ಜಿಲ್ಲೆಗಳಲ್ಲಿ ವರ್ಧನೆಯಾದ ವರಮಾನವು ಜನರ ಬದುಕಾಗಿ ಪರಿವರ್ತನೆಯಾಗಿದೆ. ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಉತ್ತಮ ಸ್ಥಿತಿಯಲ್ಲಿರುವ ಜಿಲ್ಲೆಗಳು ಆರು.

ಈ ಜಿಲ್ಲೆಗಳ ಗುಂಪಿಗೆ ಸಂಪೂರ್ಣವಾಗಿ ವಿರುದ್ಧವಾಗಿರುವ ಎರಡನೆಯ ಗುಂಪಿನಲ್ಲಿ ನಾಲ್ಕು ಜಿಲ್ಲೆಗಳಿವೆ. ಈ ನಾಲ್ಕು ಜಿಲ್ಲೆಗಳು ಅಭಿವೃದ್ಧಿಯ ದೃಷ್ಟಿಯಿಂದ ಸಂಕೀರ್ಣ ಸಮಸ್ಯೆ ಎದುರಿಸುತ್ತಿವೆ. ಏಕೆಂದರೆ ವರಮಾನ ಹಾಗೂ ಮಾನವ ಅಭಿವೃದ್ಧಿ ಎರಡೂ ನೆಲೆಗಳಿಂದಲೂ ಇವು ತೀವ್ರ ಹಿಂದುಳಿದಿರುವ ಸ್ಥಿತಿಯಲ್ಲಿವೆ. ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಗಳು ಇವಾಗಿವೆ. ಪ್ರಾದೇಸಿಕವಾಗಿ ಈ ಗುಂಪಿನ ಬೀದರ್, ಗುಲಬರ್ಗಾ ಮತ್ತು ರಾಯಚೂರು ಜಿಲ್ಲೆಗಳು ಗುಲಬರ್ಗಾ ವಿಭಾಗಕ್ಕೆ ಸೇರಿದರೆ ವಿಜಾಪುರವು ಬೆಳಗಾವಿ ವಿಭಾಗಕ್ಕೆ ಸೇರುತ್ತದೆ.

ಮೂರನೆಯ ಗುಂಪಿನಲ್ಲಿ ಏಳು ಜಿಲ್ಲೆಗಳಿವೆ. ಈ ಜಿಲ್ಲೆಗಳು ರಾಜ್ಯದಲ್ಲಿ ವರಮಾನದ ದೃಷ್ಟಿಯಿಂದ ಉತ್ತಮ ಸ್ಥಾನದಲ್ಲಿವೆ. ಕೊಪ್ಪಳದಂತಹ ಹಿಂದುಳಿದ ಜಿಲ್ಲೆಯು ರಾಜ್ಯದಲ್ಲಿ ವರಮಾನ ವರ್ಧನೆಯ ದೃಷ್ಟಿಯಿಂದ ೧೪ನೆಯ ಸ್ಥಾನದಲ್ಲಿವೆ. ಆದರೆ ಈ ಜಿಲ್ಲೆಗಳು ತಾವು ಸಾಧಿಸಿಕೊಂಡ ವರಮಾನ ವರ್ಧನೆಯನ್ನು ಅಭಿವೃದ್ಧಿಯನ್ನಾಗಿ ಪರಿವರ್ತಿಸಿಕೊಳ್ಳುವಲ್ಲಿ ವಿಫಲವಾಗಿವೆ. ಕೊಪ್ಪಳ ಜಿಲ್ಲೆಯು ವರಮಾನದ ದೃಷ್ಟಿಯಿಂದ ತುಮಕೂರು, ದಾವಣಗೆರೆ ಮತ್ತು ಹಾಸನ ಜಿಲ್ಲೆಗಳಿಗಿಂತ ಉತ್ತಮ ಸ್ಥಿತಿಯಲ್ಲಿದೆ. ಆದರೆ ಮಾನವ ಅಭಿವೃದ್ಧಿಯಲ್ಲಿ ಅದರ ಸ್ಥಾನ ೨೪. ಈ ಗುಂಪಿನ ಜಿಲ್ಲೆಗಳಲ್ಲಿ ವರಮಾನವನ್ನು ಜನರ ಬದುಕನ್ನಾಗಿ ಪರಿವರ್ತಿಸುವ ಅಗತ್ಯವಿದೆ. ವರ್ಧನೆಯಾದ ವರಮಾನವು ಜನರ ಆರೋಗ್ಯ, ಅಕ್ಷರ, ಆಹಾರವಾಗಿ ಪರಿವರ್ತನೆ ಆಗಬೇಕು. ಈ ಬಗ್ಗೆ ಅಲ್ಲಿ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿದೆ.

ಕರ್ನಾಟಕದ ಮಾನವ ಅಭಿವೃದ್ಧಿ : ೨೦೦೧

ಕೋಷ್ಟಕ

ಕ್ರ.ಸಂ. ಜಿಲ್ಲೆಗಳು ವರಮಾನ ಸ್ಥಾನ ಮಾನವ ಅಭಿವೃದ್ಧಿ ಸ್ಥಾನ
(ವರಮಾನ ಅಧಿಕ: ಮಾನವ ಅಭಿವೃದ್ಧಿಯು ಅಧಿಕವಿರುವ ಜಿಲ್ಲೆಗಳು)
೦೧. ಬೆಂಗಳೂರು ಗ್ರಾಮೀಣ ೦೪ ೦೬
೦೨. ಬೆಂಗಳೂರು ನಗರ ೦೧ ೦೧
೦೩. ಚಿಕ್ಕಮಗಳೂರು ೦೬ ೦೯
೦೪. ದಕ್ಷಿಣ ಕನ್ನಡ ೦೨ ೦೨
೦೫. ಕೊಡಗು ೦೩ ೦೪
೦೬. ಉಡುಪಿ ೦೫ ೦೩
(ವರಮಾನ ಕಡಿಮೆ: ಮಾನವ ಅಭಿವೃದ್ಧಿಯೂ ಕಡಿಮೆಯಿರುವ ಜಿಲ್ಲೆಗಳು)
೦೭. ಬೀದರ್ ೨೬ ೨೧
೦೮. ಗುಲಬರ್ಗಾ ೨೫ ೨೬
೦೯. ವಿಜಾಪುರ ೨೩ ೨೩
೧೦. ರಾಯಚೂರು ೨೭ ೨೭
(ವರಮಾನ ಅಧಿಕ: ಮಾನವ ಅಭಿವೃದ್ಧಿ ಕೆಳಮಟ್ಟದಲ್ಲಿರುವ ಜಿಲ್ಲೆಗಳು)
೧೧. ಬಾಗಲಕೋಟೆ ೧೨ ೨೨
೧೨. ಬಳ್ಳಾರಿ ೦೯ ೧೮
೧೩. ಧಾರವಾಡ ೦೮ ೧೦
೧೪. ಕೊಪ್ಪಳ ೧೪ ೨೪
೧೫. ಮೈಸೂರು ೦೭ ೧೪
೧೬. ಚಾಮರಾಜನಗರ ೧೭ ೨೫
೧೭. ಧಾರವಾಡ ೦೮ ೧೦
(ವರಮಾನ ಕಡಿಮೆ: ಮಾನವ ಅಭಿವೃದ್ಧಿ ಅಧಿಕ ಮಟ್ಟದಲ್ಲಿರುವ ಜಿಲ್ಲೆಗಳು)
೧೮. ಬೆಳಗಾವಿ ೧೩ ೦೮
೧೯. ದಾವಣಗೆರೆ ೧೯ ೧೨
೨೦. ಹಾಸನ ೧೬ ೧೧
೨೧. ಹಾವೇರಿ ೨೪ ೨೦
೨೨. ಕೋಲಾರ ೨೧ ೧೭
೨೩. ತುಮಕೂರು ೨೨ ೧೫
೨೪. ಶಿವಮೊಗ್ಗ ೧೦ ೦೫
೨೫. ಉತ್ತರ ಕನ್ನಡ ೧೧ ೦೭
೨೬. ಚಿತ್ರದುರ್ಗ ೧೮ ೧೬
೨೭. ಗದಗ ೧೫ ೧೩

ಮೂಲ: ಕರ್ನಾಟಕದ ಮಾನವ ಅಭಿವೃದ್ಧಿ ವರದಿ: ೨೦೦೫, ಪು. ೧೮ (೨೦೦೬)

ಕೊನೆಯ ಗುಂಪಿನಲ್ಲಿ ೧೦ ಜಿಲ್ಲಗಳಿವೆ. ಇವು ಸಾಧಿಸಿಕೊಂಡಿರುವ ಸಾಧನೆಯ ಕುತೂಹಲಕಾರಿಯಾಗಿದೆ. ಏಕೆಂದರೆ ಇವೆಲ್ಲವೂ ವರಮಾನದ ದೃಷ್ಟಿಯಿಂದ ಬಡ ಜಿಲ್ಲೆಗಳಾಗಿವೆ. ಉದಾಹರಣೆಗೆ ತುಮಕೂರು ಜಿಲ್ಲೆ ರಾಜ್ಯದಲ್ಲಿ ವರಮಾನದಲ್ಲಿ ೨೨ನೆಯ ಸ್ಥಾನದಲ್ಲಿದೆ. ದಾವಣಗೆರೆಯು ೧೯ನೆಯ ಸ್ಥಾನದಲ್ಲಿದೆ. ಶಿವಮೊಗ್ಗವು ೧೦ನೆಯ ಸ್ಥಾನದಲ್ಲಿದೆ. ಆದರೆ ಈ ಜಿಲ್ಲೆಗಳು ವರ್ಧನೆಯಾದ ವರಮಾನವನ್ನು ಜನರ ಬದುಕನ್ನಾಗಿ ಪರಿವರ್ತಿಸಿಕೊಳ್ಳುವಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿಕೊಂಡಿವೆ. ವರಮಾನ ಕಡಿಮೆಯಿದ್ದರೂ ಕೂಡ ಅವು ಶಿಕ್ಷಣ, ಸಾಕ್ಷರತೆ, ಆರೋಗ್ಯಗಳಲ್ಲಿ ಉನ್ನತ ಸ್ಥಾನ ಪಡೆದುಕೊಂಡಿವೆ. ವರಮಾನದಲ್ಲಿ ೨೨ನೆಯ ಸ್ಥಾನದಲ್ಲಿರುವ ತುಮಕೂರು ಮಾನವ ಅಭಿವೃದ್ಧಿಯಲ್ಲಿ ೧೫ನೆಯ ಸ್ಥಾನ ಪಡೆದಿದೆ. ವರಮಾನದಲ್ಲಿ ೧೦ನೆಯ ಸ್ಥಾನ ಪಡೆದಿರುವ ಶಿವಮೊಗ್ಗವು ಮಾನವ ಅಭಿವೃದ್ಧಿಯಲ್ಲಿ ರಾಜ್ಯದಲ್ಲಿ ೫ನೆಯ ಸ್ಥಾನ ಪಡೆದಿದೆ. ಈ ಬಗೆಯ ವರ್ಗೀಕರಣದಿಂದ ಹಾಗೂ ವಿಶ್ಲೇಷಣೆಯಿಂದ ತಿಳಿದುಬರುವ ಸಂಗತಿಯೆಂದರೆ ವರಮಾನ ಏರಿಕೆಯು ತನ್ನಷ್ಟಕ್ಕೆ ತಾನೆ, ಸಹಜವಾಗಿ, ಏಕಾಏಕಿ ಜನರ ಬದುಕಾಗಿ, ಜನರ ಆರೋಗ್ಯವಾಗಿ, ಜನರ ಅಕ್ಷರವಾಗಿ ಪರಿವರ್ತನೆಯಾಗುವುದಿಲ್ಲ. ಮೇಲೆ ತಿಳಿಸಿರುವ ನಾಲ್ಕು ಗುಂಪುಗಳಲ್ಲಿ ಕೊನೆಯ ಗುಂಪಿನ ಜಿಲ್ಲೆಗಳು ನೇರವಾಗಿ ಮಾನವ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿಉನ್ನತ ಬದುಕನ್ನು ಸಾಧಿಸಿಕೊಂಡಿವೆ. ಆದರೆ ಮೂರನೆಯ ಗುಂಪಿನ ಜಿಲ್ಲೆಗಳು ವರಮಾನದಲ್ಲಿ ತೀವ್ರ ವರ್ಧನೆ ಕಂಡಿದ್ದರೂ ಅಲ್ಲಿ ಜನರ ಬದುಕು ಹಸನಾಗಿಲ್ಲ. ಈ ದಿಶೆಯಲ್ಲಿ ಮಾನವ ಅಭಿವೃದ್ಧಿಯನ್ನು ಸಾಧಿಸಿಕೊಳ್ಳಲು ಜಿಲ್ಲಾ ಮಟ್ಟದಲ್ಲಿ ವಿಶೇಷ ಪ್ರಯತ್ನ ಮಾಡಬೇಕಾದ ಅಗತ್ಯವಿದೆ.

ವರಮಾನದ ವರ್ಧನೆಯೇ ಅಭಿವೃದ್ಧಿಯಲ್ಲವೆಂಬುದು ಮೇಲಿನ ಚರ್ಚೆಯಿಂದ ತಿಳಿದುಬರುತ್ತದೆ. ಮಾನವ ಅಭಿವೃದ್ಧಿಗೆ ಪೂರಕವಾದ ನೀತಿ – ನಿರೂಪಣೆಗಳಿದ್ದರೆ ಕೆಳಮಟ್ಟದ ವರಮಾನದ ಸ್ಥಿತಿಯಿದ್ದರೂ ಜನರ ಉತ್ತಮ ಬದುಕನ್ನು ಸಾಧಿಸಿಕೊಳ್ಳುವುದು ಸಾಧ್ಯ. ಅಂತಹ ನೀತಿ – ಕಾರ್ಯಕ್ರಮಗಳನ್ನು ಕೈಗೊಳ್ಳುವ ಅಗತ್ಯವನ್ನು ಇಲ್ಲಿನ ಚರ್ಚೆಯು ತಿಳಿಸುತ್ತದೆ.

ಭಾಗ
ಅಧ್ಯಯನ ಪ್ರಬಂಧದ ತಥ್ಯಗಳು

ಮಾನವ ಅಭಿವೃದ್ಧಿ ವಿಚಾರ ಪ್ರಣಾಳಿಕೆಯ ಸೈದ್ಧಾಂತಿಕ ನೆಲೆಗಳನ್ನು ವಿವರವಾಗಿ ಇಲ್ಲಿ ಚರ್ಚಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ೧೯೯೦ರಲ್ಲಿ ಆರಂಭವಾದ ಮಾನವ ಅಭಿವೃದ್ಧಿ ವರದಿಗಳ ಪರಕಟಣೆಯು ಇಂದು ದೇಶ – ರಾಜ್ಯಗಳ ಮಟ್ಟಕ್ಕೆ ಬೆಳೆದುಬಂದಿದೆ. ಕರ್ನಾಟಕವು ಮಾನವ ಅಭಿವೃದ್ಧಿಗೆ ಸಂಬಂಧಿಸಿದಂತೆ ಎರಡು ವರದಿಗಳನ್ನು ಪ್ರಕಟಿಸಿದೆ. ಈಗ ಜಿಲ್ಲಾ ಮಟ್ಟದಲ್ಲಿ ಅದನ್ನು ಸಿದ್ಧಪಡಿಸುವ ಕಾರ್ಯವೂ ಆರಂಭವಾಗಿದೆ. ಮಾವನ ಅಭಿವೃದ್ಧಿಯನ್ನು ಪರಿಮಾಣಾತ್ಮಕವಾಗಿ ಅಳೆಯಲು ಲಿಂಗ ಸಂಬಂಧಿ ಅಭಿವೃದ್ಧಿ ಸೂಚ್ಯಂಕ (ಜಿಡಿಐ) ಎಂಬ ಮಾಪನವನ್ನು ಯುಎನ್‌ಡಿಪಿಯು ರೂಪಿಸಿದೆ. ಅಭಿವೃದ್ಧಿಯು ಕೇವಲ ವರಮಾನ ವರ್ಧನೆಗೆ ಸೀಮಿತವಾದಾಗ ಮತ್ತು ಅದು ಲಿಂಗ ನಿರಪೇಕ್ಷವಾದ ಅದು ಹೇಗೆ ಮಹಿಳೆಯರಿಗೆ ಅಭಿಶಾಪವಾಗುತ್ತದೆ ಎಂಬುದನ್ನು ಸದರಿ ವಿಚಾರಪ್ರಣಾಳಿಕೆಯು ನಮಗೆ ಮನದಟ್ಟು ಮಾಡಿಕೊಟ್ಟಿದೆ.

ಈ ಪ್ರಬಂಧದಲ್ಲಿ ಪ್ರತಿಪಾದಿಸಿರುವ ಬಹುಮುಖ್ಯ ಸಂಗತಿಯೆಂದರೆ ವರಮಾನ ವರ್ಧನೆಯೆಂಬುದು ತನ್ನಷ್ಟಕ್ಕೆ ತಾನೆ ಸಹಜವಾಗಿ ಜನರ ಬದುಕಾಗಿ ಪರಿವರ್ತನೆಯಾಗುವುದಿಲ್ಲ. ಅದಕ್ಕಾಗಿ ವಿಶೇಷ ಪ್ರಯತ್ನ ನಡೆಸಬೇಕಾಗುತ್ತದೆ ಎಂಬುದಾಗಿದೆ. ಎರಡನೆಯದಾಗಿ ಸಾಕ್ಷರತೆ, ಶಿಕ್ಷಣ, ಆರೋಗ್ಯ ಮುಂತಾದವುಗಳನ್ನು ಅಭಿವೃದ್ಧಿಯ ಸಾಧನವೆಂದು ನೋಡುವುದರ ಜೊತೆಗೆ ಅವುಗಳನ್ನು ಅಭಿವೃದ್ಧಿಯ ಅಂತರ್ಗತ ಅಂಶಗಳನ್ನಾಗಿ ನೋಡುವ ಕ್ರಮವನ್ನು ಮಾನವ ಅಭಿವೃದ್ಧಿ ವಿಚಾರ ಪ್ರಣಾಳಿಕೆಯು ನಮಗೆ ತೋರಿಸಿಕೊಟ್ಟಿದೆ. ಮೂರನೆಯದಾಗಿ ಅಭಿವೃದ್ಧಿಯನ್ನು ಸಾಕ್ಷರತೆ, ಸ್ವಾತಂತ್ರ್ಯ, ಧಾರಣಾ ಸಾಮರ್ಥ್ಯಗಳ ನೆಲೆಯಲ್ಲಿ ಪರಿಭಾವಿಸಿಕೊಳ್ಳುವ ತರ್ಕಪ್ರಮಾಣವನ್ನು ಇಲ್ಲಿ ಮಂಡಿಸಲಾಗಿದೆ.

ಅಖಿಲ ಭಾರತ ಮಟ್ಟದಲ್ಲಿ ಮಾನವ ಅಭಿವೃದ್ಧಿಗೆ ಸಂಬಂಧಿಸಿದಂತೆ ಕರ್ನಾಟಕದ ಸಾಧನೆಯು ಮಹತ್ವದ್ದಾಗಿದೆ. ಆದರೆ ಕೇರಳ ಮತ್ತು ತಮಿಳುನಾಡು ರಾಜ್ಯಗಳು ಮಾನವ ಅಭಿವೃದ್ಧಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದಲ್ಲಿವೆ. ಈ ದಿಶೆಯಲ್ಲಿ ಕರ್ನಾಟಕವು ಇನ್ನೂ ಸಾಗಬೇಕಾದ ದಾರಿ ಬಹಳ ದೂರವಿದೆ.

ಪರಾಮರ್ಶನ ಸೂಚಿ

ಕರ್ನಾಟಕ ಸರ್ಕಾರ ೧೯೯೯, ಕರ್ನಾಟಕ ಮಾನವ ಅಭಿವೃದ್ಧಿ ವರದಿ, ಯೋಜನಾ ಇಲಾಖೆ, ಬೆಂಗಳೂರು.

ಕರ್ನಾಟಕ ಸರ್ಕಾರ ೨೦೦೬, ಕರ್ನಾಟಕ ಮಾನವ ಅಭಿವೃದ್ಧಿ ವರದಿ೨೦೦೫, ಯೋಜನಾ ಇಲಾಖೆ, ಬೆಂಗಳೂರು.

ದೀಪಕ್ ನಯ್ಯಾರ್, ೨೦೦೬, ಇಕಾನಾಮಿಕ್ ಗ್ರೋಥ್ ಇನ್ ಇಂಡಿಯಾ: ರನ್ನಿಂಗ್ ಹಾರ್ಸ್‌ ಆರ್ ಲಂಬರಿಂಗ್ ಎಲಿಫೆಂಟ್, ಎಕಾನಿಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ. ಮೆಹಬೂಬ್ ಉಲ್ ಹಕ್, ೧೯೯೬, ರಿಫ್ಲೆಕ್ಷನ್ಸ್ಆನ್ ಹೂಮನ್ ಡೆವಲಪ್ಮೆಂಟ್, ಆಕ್ಸ್‌ಫರ್ಡ್‌ಯೂನಿವರ್ಸಿಟಿ ಪ್ರೆಸ್, ನವದೆಹಲಿ.

ಅಮರ್ತ್ಯಸೆನ್, ೧೯೯೯, ಫ್ರೀಡಮ್ ಆಸ್ ಡೆವಲಪ್ಮೆಂಟ್, ಆಕ್ಸ್‌ಫರ್ಡ್‌ಯೂನಿವರ್ಸಿಟಿ ಪ್ರೆಸ್, ನವದೆಹಲಿ.

ಮಾರ್ಥ ಸಿ. ನುಸ್‌ಬೌಮ್, ೨೦೦೦, ವುಮೆನ್ ಆಂಡ್ ಹೂಮನ್ ಡೆವಲಪ್ಮೆಂಟ್: ದಿ ಕೆಫಬಲಿಟೀಸ್ಅಪ್ರೋಚ್, ಕೇಂಬ್ರಿಡ್ಜ್‌ಯೂನಿವರ್ಸಿಟಿ ಪ್ರೆಸ್, ಕೇಂಬ್ರಿಡ್ಜ್‌ಯುಎನ್‌ಡಿಪಿ, ೧೯೯೦, ಹೂಮನ್ ಡೆವಲಪ್ಮೆಂಟ್ ರಿಪೋರ್ಟ್, ಆಕ್ಸ್‌ಫರ್ಡ್‌ಯೂನಿವರ್ಸಿಟಿ ಪ್ರೆಸ್, ನವದೆಹಲಿ.

ಯುಎನ್‌ಡಿಪಿ, ೧೯೯೫, ಹೂಮನ್ ಡೆವಲಪ್ಮೆಂಟ್ ರಿಪೋರ್ಟ್, ಆಕ್ಸಫರ್ಡ್‌ಯೂನಿವರ್ಸಿಟಿ ಪ್ರೆಸ್, ನವದೆಹಲಿ.

ಕರ್ನಾಟಕ ಸರ್ಕಾರ ೨೦೦೮, ವಿಜಾಪುರ ಜಿಲ್ಲಾ ಮಾನವ ಅಭಿವೃದ್ಧಿ ವರದಿ೨೦೦೮ ಯೋಜನಾ ಇಲಾಖೆ, ಬೆಂಗಳೂರು.