ಪ್ರಸ್ತಾವನೆ

ಅಭಿವೃದ್ಧಿಯನ್ನು ಕುರಿತಂತೆ ಸೈದ್ಧಾಂತಿಕ ಚರ್ಚೆಗಳು ಇಂದಿಗೂ ನಡೆಯುತ್ತಿವೆ. ಅದೊಂದು ವಿಕಾಸ – ವಿಸ್ತೃತಗೊಳ್ಳುತ್ತಿರುವ ವಿಚಾರ ಪ್ರಣಾಳಿಕೆಯಾಗಿದೆ. ‘ವರಮಾನ ವರ್ಧನಾ ಅಭಿವೃದ್ಧಿ ಸಿದ್ಧಾಂತ’ಕ್ಕೆ ಪರ್ಯಾಯವಾಗಿ ‘ಜನರ ಧಾರಣಾ ಸಾಮರ್ಥ್ಯ ವರ್ಧನಾ ಅಭಿವೃದ್ಧಿ ಸಿದ್ಧಾಂತ’ವನ್ನು ರೂಪಿಸಿದ ಅಮರ್ತ್ಯಸೆನ್ ಆರಂಭದಲ್ಲಿ ಜನರ ಧಾರಣಾ ಸಾಮರ್ಥ್ಯ ಮತ್ತು ಹಕ್ಕುದಾರಿಕೆ ನೆಲೆಗಳಲ್ಲಿ ಅಭಿವೃದ್ಧಿಯನ್ನು ನಿರ್ವಚಿಸುತ್ತಿದ್ದರು. ಮುಂದೆ ಅವರೇ ಅಭಿವೃದ್ಧಿಯನ್ನು ‘ಸ್ವಾತಂತ್ರ್ಯ’ದ ಪರಿಭಾಷೆಯಲ್ಲಿ ಪರಿಭಾವಿಸಿಕೊಳ್ಳಲು ಪ್ರಯತ್ನಿಸಿದರು. ಈಗ ಅವರು ಮಾನವ ಹಕ್ಕುಗಳ ಪರಿಭಾಷೆಯಲ್ಲಿ ಅಭಿವೃದ್ಧಿಯನ್ನು ಹಿಡಿದಿಡಲು ಪ್ರಯತ್ನಿಸುತ್ತಿದ್ದಾರೆ. ಪ್ರಸ್ತುತ ಪ್ರಬಂಧದಲ್ಲಿ ‘ಮಾನವ ಅಭಿವೃದ್ಧಿ’ ವಿಚಾರ ಪ್ರಣಾಳಿಕೆಯ ವಿವಿಧ ನೆಲೆಗಳನ್ನು ಕುರಿತಂತೆ ಚರ್ಚಿಸಲಾಗುವುದು. ಈ ದಿಶೆಯಲ್ಲಿ ಕರ್ನಾಟಕದ ಸಿದ್ಧಿ – ಸಾಧನೆಗಳನ್ನು ಇಲ್ಲಿ ಗುರುತಿಸಲು ಪ್ರಯತ್ನಿಸಲಾಗಿದೆ. ಯುಎನ್‌ಡಿಪಿಯು ೧೯೯೦ ರಿಂದಲೂ ಪ್ರತಿ ವರ್ಷವೂ ಪ್ರಕಟಿಸಿಕೊಂಡು ಬರುತ್ತಿರುವ ‘ಮಾನವ ಅಭಿವೃದ್ಧಿ ವರದಿ’ಗಳ ಮಾದರಿಯಲ್ಲಿ ಕರ್ನಾಟಕ ಸರ್ಕಾರವು ಮಾನವ ಅಭಿವೃದ್ಧಿ ಕುರಿತ ಮೊದಲ ವರದಿಯನ್ನು ೧೯೯೯ ರಲ್ಲಿಯೂ, ಎರಡನೆಯ ವರದಿಯನ್ನು ೨೦೦೫ ರಲ್ಲೂ ಪ್ರಕಟಿಸಿದೆ. ಈ ವರದಿಗಳಲ್ಲಿ ಕರ್ನಾಟಕದ ಜಿಲ್ಲೆಗಳ ಮಟ್ಟದಲ್ಲಿ ಮಾನವ ಅಭಿವೃದ್ಧಿಯ ಸ್ಥಿತಿಗತಿಗಳನ್ನು ಹಿಡಿದಿಡಲಾಗಿದೆ. ಮಾನವ ಅಭಿವೃದ್ಧಿ ವಿಚಾರ ಪ್ರಣಾಳಿಕೆಯು ಲಿಂಗ ಸಂಬಂಧಿ ಆಯಾಮವನ್ನು ಒಳಗೊಂಡಿದೆ ಕರ್ನಾಟಕದಲ್ಲಿ ಮಹಿಳೆಯರ ಅಭಿವೃದ್ಧಿ ಸ್ಥಿತಿಗತಿಯನ್ನು ವಿವರವಾಗಿ ಇಲ್ಲಿ ಚರ್ಚೆಗೆ ಒಳಪಡಿಸಲಾಗಿದೆ. ಪ್ರಸ್ತಾವನೆಯ ಭಾಗವನ್ನು ಬಿಟ್ಟು ಪ್ರಬಂಧದಲ್ಲಿ ಐದು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಮಾನವ ಅಭಿವೃದ್ಧಿಯ ಅರ್ಥವ್ಯಾಪ್ತಿಯನ್ನು ಚರ್ಚಿಸಲಾಗಿದೆ. ಎರಡನೆಯ ಭಾಗದಲ್ಲಿ ವರಮಾನ ಅಭಿವೃದ್ಧಿ ಮತ್ತು ಮಾನವ ಅಭಿವೃದ್ಧಿಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸಲು ಪ್ರಯತ್ನಿಸಲಾಗಿದೆ. ಮೂರನೆಯ ಭಾಗದಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕದ ಬಗ್ಗೆ ವಿವರಣೆ ನೀಡಲಾಗಿದೆ. ನಾಲ್ಕನೆಯ ಭಾಗದಲ್ಲಿ ಮಾನವ ಅಭಿವೃದ್ಧಿಗೆ ಸಂಬಂಧಿಸಿದಂತೆ ಕರ್ನಾಟಕದ ಸಾಧನೆಯನ್ನು ೧೯೯೧ ಮತ್ತು ೨೦೦೧ ಎರಡು ಕಾಲಘಟ್ಟಗಳಿಗೆ ಸಂಬಂಧಿಸಿದಂತೆ ದಾಖಲಿಸಲಾಗಿದೆ ಮತ್ತು ಕರ್ನಾಟಕದ ಜಿಲ್ಲೆಗಳನ್ನು ವವಿಧ ಪ್ರಕಾರಗಳಲ್ಲಿ ವರ್ಗೀಕರಿಸಿ ಅವುಗಳು ಅಭಿವೃದ್ಧಿಯ ತುಲನಾತ್ಮಕ ಸ್ಥಿತಿಗತಿಗಳನ್ನು ಚರ್ಚಿಸಲಾಗಿದೆ. ಕೊನೆಯ ಐದನೆಯ ಭಾಗದಲ್ಲಿ ಅಧ್ಯಯನದ ಮುಖ್ಯ ತಥ್ಯಗಳನ್ನು ಸಂಗ್ರಹ ರೂಪದಲ್ಲಿ ನೀಡಲಾಗಿದೆ.

ಭಾಗ
ಮಾನವ ಅಭಿವೃದ್ಧಿ ನಿರ್ವಚನ

ಪ್ರಖ್ಯಾತ ಅರ್ಥವಿಜ್ಞಾನಿ ದೀಪಕ್ ನಯ್ಯಾರ್ ತಮ್ಮ ಇತ್ತೀಚಿಗಿನ (೨೦೦೬) ಪ್ರಸಿದ್ಧ ಪ್ರಬಂಧವೊಂದರಲ್ಲಿ ‘ಇಪ್ಪತ್ತನೆಯ ಶತಮಾನದ ಉತ್ತರಾರ್ಧ ಭಾಗದಲ್ಲಿ (೧೯೫೦ರ ನಂತರದ) ಭಾರತವು ಅನುಭವಿಸಿದ ದೊಡ್ಡ ವೈಫಲ್ಯವೆಂದರೆ ವರ್ಧನೆಯಾದ ವರಮಾನವನ್ನು ಅಭಿವೃದ್ಧಿಯನ್ನಾಗಿ ಪರಿವರ್ತನೆ ಮಾಡಿಕೊಳ್ಳದಿರುವುದು’ ಎಂಬ ಮಾತು ಹೇಳಿದ್ದಾರೆ. ಯುಎನ್‌ಡಿಪಿಯು ಪ್ರಕಟಿಸಿರುವ ೨೦೦೭ರ ಮಾನವ ಅಭಿವೃದ್ಧಿ ವರದಿಯನ್ನು ಕುರಿತಂತೆ ಚರ್ಚಿಸುತ್ತ ಪಿ.ಸಾಯಿನಾಥ್‌ತಮ್ಮ ‘ದಿ ಹಿಂದು’ ಪತ್ರಿಕೆಯ ಅಂಕಣದಲ್ಲಿ ಭಾರತವನ್ನು ‘ವರಮಾನದಲ್ಲಿ ಉನ್ನತ ಮಟ್ಟವನ್ನು – ಅಭಿವೃದ್ಧಿಯಲ್ಲಿ ಕೆಳಮಟ್ಟವನ್ನು ಸಾಧಿಸಿಕೊಂಡಿರುವ ದೇಶ’ವೆಂದು ಬಣ್ಣಿಸಿದ್ದಾರೆ (ದಿ ಹಿಂದೂ, ಡಿಸೆಂಬರ್ ೨೪, ೨೦೦೭). ‘ವರಮಾನದ ಮೊತ್ತವೇ ಜನರ ಬದುಕಲ್ಲ’ ಎಂಬ ಮಾತನ್ನು ಮೆಹಬೂಬ್‌ ಉಲ್ ಹಕ್ ಹೇಳುತ್ತಾರೆ (೧೯೯೬).

ಅತ್ಯಂತ ಕುತೂಹಲದ ಸಂಗತಿಯೆಂದರೆ ವರಮಾನ ವರ್ಧನಾ ಅಭಿವೃದ್ಧಿ ಸಿದ್ಧಾಂತದ ಇತಿಮಿತಿಗಳನ್ನು ಇನ್ನಿಲ್ಲದಂತೆ ಅಮರ್ತ್ಯಸೆನ್, ಮೆಹಬೂಬ್‌ ಉಲ್‌ಹಕ್, ಜೀನ್ ಡ್ರೀಜ್‌, ಮಾರ್ಥ ನುಸ್‌ಬಾಮ್‌ ಮುಂತಾದವರು ಮತ್ತು ಯುಎನ್‌ಡಿಪಿ ಯಂತಹ ಸಂಸ್ಥೆ ತಿಳಿ ಹೇಳುತ್ತಿದ್ದರೂ ಸರ್ಕಾರಗಳು ವಿಶ್ವಾದ್ಯಂತ ‘ವರಮಾನದ ವರ್ಧನೆಯೇ ಅಭಿವೃದ್ಧಿ’ ಎಂಬ ಪ್ರಮೇಯಕ್ಕೆ ಗಂಟು ಬಿದ್ದಿರುವುದು ಕಂಡುಬರುತ್ತದೆ. ಭಾರತದ ಹನ್ನೊಂದನೆಯ ಪಂಚವಾರ್ಷಿಕ ಯೋಜನೆ ಕುರಿತಂತೆ ೨೦೦೭ ರಲ್ಲಿ ಸಾಕಷ್ಟು ಚರ್ಚೆಯಾಗಿದೆ. ಅದು ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಅನುಮೋದನೆಯನ್ನು ಪಡೆದುಕೊಂಡಿದೆ. ಆದರೆ ಅಲ್ಲಿ ಆದ್ಯತೆ ದೊರಕಿರುವುದು ವರಮಾನ ವರ್ಧನೆಯ ಪ್ರಮಾಣ ವಾರ್ಷಿಕ ಶೇ.೯ ಇರಬೇಕೋ ಅಥವಾ ಶೇ.೧೦ ಇರಬೇಕೋ ಎಂಬುದಾಗಿದೆ. ಹನ್ನೊಂದನೆಯ ಯೋಜನೆಯ ‘ಆಶಯಪತ್ರ’ವನ್ನು ಪ್ರಕಟಿಸಿರುವ ಯೋಜನಾ ಆಯೋಗವು ಅಭಿವೃದ್ಧಿಯಲ್ಲಿ ಶಿಕ್ಷಣ ಮತ್ತು ಆರೋಗ್ಯದ ಮಹತ್ವವನ್ನು ಒತ್ತಿ ಹೇಳಿದೆ. ‘ಜನರನ್ನು ಒಳಗೊಳ್ಳುವ ಅಭಿವೃದ್ದಿ’ ಎಂಬ ಹೊಸ ಮಂತ್ರವನ್ನು ಜಪಿಸಲಾಗುತ್ತಿದೆ. ಆದರೂ ಮಾನವ ಅಭಿವೃದ್ಧಿಗೆ ಆದ್ಯತೆ ನೀಡುವಲ್ಲಿ ರಾಷ್ಟ್ರಗಳು ಹಿಂಜರಿಯುತ್ತಿವೆ.

ವಾಸ್ತವಿಕವಾಗಿ ವರಮಾನ ವರ್ಧನಾ ಅಭಿವೃದ್ಧಿ ಮಾದರಿಯ ವೈಫಲ್ಯವೇ ಮಾನವ ಅಭಿವೃದ್ಧಿ ಮಾದರಿಯ ಹುಟ್ಟಿಗೆ ಕಾರಣವಾಗಿದೆ. ಜನರ ಸುಖ – ಸಮೃದ್ಧಿಯನ್ನು ನಲಿವು – ನೆಮ್ಮದಿಯನ್ನು ವರಮಾನದಿಂದ ಸಾಧಿಸಿಕೊಳ್ಳುತ್ತೇವೆ ಎಂಬುದು, ಅಭಿವೃದ್ಧಿಯನ್ನು ವರಮಾನದ ವರ್ಧನೆಯ ಮೂಲಕ ಮಾಪನ ಮಾಡುತ್ತೇವೆ ಎಂಬುದು ಸರಿಯಲ್ಲ. ವರಮಾನವೆಂಬುದು ಅಭಿವೃದ್ಧಿಯ ಸಾಧನವೇ ವಿನಾ ಅದೇ ಅಭಿವೃದ್ಧಿಯಲ್ಲ. ಅಭಿವೃದ್ಧಿಯನ್ನು ಸಾಧಿಸಿಕೊಳ್ಳಲು ವರಮಾನವು ತುಂಬಾ ಅಗತ್ಯ. ಅದೊಂದು ಬಹುಮಹತ್ವದ ಆಯ್ಕೆಯಾಗಿದೆ. ಆದರೆ ಅದೊಂದೆ ಅಭಿವೃದ್ಧಿಯನ್ನು ಒಳಗೊಳ್ಳುವುದು ಸಾಧ್ಯವಿಲ್ಲ. ಅಭಿವೃದ್ಧಿಯೆಂಬುದು ವರಮಾನದ ವಿತರಣೆಗೆ ಸಂಬಂಧಿಸಿದ ಸಮಸ್ಯೆ ಇದು ಜನರ ಹಕ್ಕುದಾರಿಕೆಗೆ – ಜನರ ಧಾರಣ ಸಾಮರ್ಥ್ಯಕ್ಕೆ ಸಂಬಂಧಿಸಿದ ಸಂಗತಿಯಾಗಿದೆ. ಅಭಿವೃದ್ಧಿಯೆಂಬುದು ದಾನ – ದತ್ತಿ – ಉಂಬಳಿ ಅಲ್ಲ. ಅದು ಹಕ್ಕು. ಹಂಗಿನ ಬದುಕು ಅಭಿವೃದ್ಧಿಯೆನಿಸಿಕೊಳ್ಳಲಾರದು. ಹಂಗಿನ ಬದುಕನ್ನು ಹಕ್ಕಿನ ಬದುಕನ್ನಾಗಿ ಪರಿವರ್ತಿಸಿಕೊಳ್ಳಬೇಕಾಗುತ್ತದೆ.

ಹಾಗಾದರೆ ಮಾನವ ಅಭಿವೃದ್ಧಿಯೆಂದರೇನು?

ಯುಎನ್‌ಡಿಪಿಯು ೧೯೯೦ ರಲ್ಲಿ ಪ್ರಕಟಿಸಿದ ಮೊದಲ ಮಾನವ ಅಭಿವೃದ್ಧಿ ವರದಿಯಲ್ಲಿ ಅದನ್ನು ಹೀಗೆ ನಿರ್ವಚಿಸಲಾಗಿದೆ.

ಜನರ ಆಯ್ಕೆಗಳ ವ್ಯಾಪ್ತಿಯನ್ನು ವಿಸ್ತೃತಗೊಳಿಸುವುದೇ ಮಾನವ ಅಭಿವೃದ್ಧಿ. ಅತ್ಯಂತ ಮುಖ್ಯವಾದ ಮತ್ತು ವಿಸ್ತೃತವಾದ ಆಯ್ಕೆಗಳಾವುವೆಂದರೆ ಆರೋಗ್ಯಕಾಯರಾಗಿ ಮತ್ತು ಸುದೀರ್ಘ ಕಾಲ ಜನರು ಬದುಕುವುದು, ವಿದ್ಯಾ ಸಂಪನ್ನರಾಗುವುದು ಮತ್ತು ಗೌರವಯುತ ಬದುಕಿಗೆ ಅಗತ್ಯವಾದ ಸಂಪನ್ಮೂಲಗಳ ಮೇಲೆ ಹಕ್ಕುದಾರಿಕೆ ಸಾಧಿಸುವುದು

ಮುಂದುವರಿದು

ರಾಷ್ಟ್ರವೊಂದರ ನಿಜವಾದ ಸಂಪತ್ತೆಂದರೆ ಅಲ್ಲಿನ ಮಹಿಳೆಯರು ಹಾಗೂ ಪುರುಷರನ್ನು ಒಳಗೊಂಡ ಜನಸಮೂಹ.

ಯುಎ‌ನ್‌ಡಿಪಿಯು ೧೯೯೫ ರಲ್ಲಿ ಪ್ರಕಟಿಸಿದ ಮಾನವ ಅಭಿವೃದ್ಧಿ ವರದಿಯಲ್ಲಿ ಮಾನವ ಅಭಿವೃದ್ಧಿಯನ್ನು ಹೀಗೆ ಗುರುತಿಸಿದೆ.

ಎಲ್ಲ ಜನರಅಂದರೆ ಮಹಿಳೆಯರು ಮತ್ತು ಪುರುಷರನ್ನು ಒಳಗೊಂಡಂತೆಆಯ್ಕೆಗಳನ್ನು ವಿಸ್ತರಿಸುವುದೇ ಮಾನವ ಅಭಿವೃದ್ಧಿ. ಸಮಾಜದ ಒಂದು ಜನವರ್ಗದ ಆಯ್ಕೆಗಳ ವ್ಯಾಪ್ತಿಯನ್ನು ವಿಸ್ತೃತ ಗೊಳಿಸುವುದು ಮಾನವ ಅಭಿವೃದ್ಧಿಯಲ್ಲ. ವಿಸ್ತೃತಗೊಳ್ಳುವ ಆಯ್ಕೆಗಳ ವ್ಯಾಪ್ತಿಯಿಂದ ಮಹಿಳೆಯರನ್ನು ಒಂದು ವೇಳೆ ಹೊರಗಿಟ್ಟರೆ ಅದು ಅನ್ಯಾಯಯುತವಾದ ಮತ್ತು ತಾರತಮ್ಯವಾದಿಯಾದ ಪ್ರಕ್ರಿಯೆಯಾಗುತ್ತದೆ.

ಅತ್ಯಂತ ಸರಳವಾಗಿ ಹೇಳುವುದಾದರೆ ಜನರ ಬದುಕು ಉತ್ತಮಗೊಳ್ಳುವ ಪ್ರಕ್ರಿಯೆಯನ್ನು ಮಾನವ ಅಭಿವೃದ್ಧಿಯೆಂದು ಹೇಳಬಹುದು. ‘ಜನರು’ ಎಂಬುದು ಮಹಿಳೆಯರನ್ನು ಒಳಗೊಂಡಂತೆ ಎಂದು ಪರಿಭಾವಿಸಿಕೊಳ್ಳಬೇಕು. ಮಾನವ ಅಭಿವೃದ್ಧಿ ವಿಚಾರ ಪ್ರಣಾಳಿಕೆಯಲ್ಲಿ ಜನರು ಆರ್ಥಿಕ – ಅಮೂರ್ತ ಸಂಗತಿಗಳಾಗುವುದಕ್ಕೆ ಪ್ರತಿಯಾಗಿ ಜೀವಂತ – ಕ್ರಿಯಾಶೀಲ ಕರ್ತೃಗಳಾಗಿರುತ್ತಾರೆ. ಅವರು ಅಭಿವೃದ್ಧಿಯ ಬಲಿಪಶುಗಳಾಗುವುದಕ್ಕೆ ಪ್ರತಿಯಾಗಿ ಅಭಿವೃದ್ಧಿಯ ಪ್ರಭುಗಳಾಗಿರುತ್ತಾರೆ.

ಈ ವಿಚಾರ ಪ್ರಣಾಳಿಕೆಯ ಬಹುಮುಖ್ಯ ಸಂದೇಶವೆಂದರೆ ‘ಜನರಿಗಾಗಿ ಅಭಿವೃದ್ಧಿಯೇ ವಿನಾ ಅಭಿವೃದ್ಧಿಗಾಗಿ ಜನರಲ್ಲ’. ಜನರು ಅಭಿವೃದ್ಧಿಯ ‘ಸಾಧನ’ವೂ ಹೌದು ಮತ್ತು ಅದರ ‘ಸಾಧ್ಯ’ವೂ ಹೌದು.

ಈ ವಿಚಾರ ಪ್ರಣಾಳಿಕೆ ಪ್ರಕಾರ ಅಭಿವೃದ್ಧಿಯು ಎರಡು ಪ್ರಕ್ರಿಯೆಗಳನ್ನು ಒಳಗೊಂಡ ಒಂದು ಸಂಗತಿಯಾಗಿದೆ. ಮೊದಲನೆಯದಾಗಿ ಜನರು ತಮ್ಮ ಬದುಕನ್ನು ಉತ್ತಮ ಪಡಿಸಿಕೊಳ್ಳಲು ಅಗತ್ಯವಾದ ಅವಕಾಶಗಳ ಮತ್ತು ಅವಕಾಶಗಳಲ್ಲಿ ಆಯ್ಕೆಗಳ ವ್ಯಾಪ್ತಿಯನ್ನು ಅಭಿವೃದ್ಧಿಯು ವಿಸ್ತೃತಗೊಳಿಸಬೇಕು. ಎರಡನೆಯದಾಗಿ ವಿಸ್ತೃತಗೊಂಡ ಅವಕಾಶ ಮತ್ತು ಅವುಗಳಲ್ಲಿನ ವ್ಯಾಪ್ತಿಯ ವಿಸ್ತೃತತೆಯನ್ನು ತಮ್ಮದಾಗಿಸಿಕೊಳ್ಳಲು ಅಗತ್ಯವಾದ ಜನರ ಧಾರಣ ಸಾಮರ್ಥ್ಯವನ್ನು ವರ್ಧಿಸಬೇಕು.

ಅವಕಾಶಗಳ ವರ್ಧನೆ ಹಾಗೂ ಧಾರಣ ಸಾಮರ್ಥ್ಯದ ವರ್ಧನೆಗಳು ಅಭಿವೃದ್ಧಿಯಲ್ಲಿ ಏಕಕಾಲದಲ್ಲಿ ನಡೆಯಬೇಕು.

ಮಾನವ ಅಭಿವೃದ್ಧಿ ವಿಚಾರ ಪ್ರಣಾಳಿಕೆ ಕುರಿತಂತೆ ಮೆಹಬೂಬ್‌ ಉಲ್‌ಹಕ್ (೧೯೯೬) ಹೀಗೆ ಬರೆದಿದ್ದಾರೆ.

ಅಭಿವೃದ್ಧಿಯ ಉದ್ದೇಶ ಕೇವಲ ವರಮಾನದ ವರ್ಧನೆಯಲ್ಲ. ಅಭಿವೃದ್ಧಿಯೆಂದರೆ ಜನರ ಬದುಕನ್ನು ಉತ್ತಮಪಡಿಸಿಕೊಳ್ಳಲು ಅಗತ್ಯವಾದ ಅವಕಾಶಗಳ ವರ್ಧನೆ. ಅವಕಾಶಗಳ ವರ್ಧನೆಯಲ್ಲಿ ಶಿಕ್ಷಣ, ಒಳ್ಳೆಯ ಆರೋಗ್ಯ, ರಾಜಕೀಯ ಸ್ವಾತಂತ್ರ್ಯ, ಸಾಂಸ್ಕೃತಿಕ ಅನನ್ಯತೆ, ಸಾಮುದಾಯಕ ಸಹಭಾಗಿತ್ವ, ಪರಿಸರ ಸಂಬಂಧಿ ಭದ್ರತೆ ಮುಂತಾದವುಗಳು ಸೇರಿಕೊಂಡಿವೆ. ಅಭಿವೃದ್ಧಿಯೆಂಬುದು ಇಡೀ ಸಮಾಜವನ್ನು ಒಳಗೊಳ್ಳಬೇಕು. ಅದು ಕೇವಲ ಆರ್ಥಿಕತೆಗೆ ಸಂಬಂಧಿಸಿದ ಸಂಗತಿಯಲ್ಲ. ಅಲ್ಲಿ ಜನರು ಪ್ರಧಾನ ಧಾತು.

ಅಮರ್ತ್ಯಸೆನ್‌ ಅವರು ರಾಷ್ಟ್ರೀಯ ವರಮಾನವೆಂಬ ಸೀಮಿತ ಚೌಕಟ್ಟನ್ನು ಮೀರಿ ಅಭಿವೃದ್ಧಿಯನ್ನು ಸ್ವಾತಂತ್ರ್ಯಕ್ಕೆ ಸಂವಾದಿಯಾಗಿ ನಿರ್ವಚಿಸಿದ್ದಾರೆ. ಈ ಬಗೆಯ ಚರ್ಚೆಯನ್ನು ಅವರ ‘ಸ್ವಾತಂತ್ರ್ಯವಾಗಿ ಅಭಿವೃದ್ಧಿ’ (೧೯೯೯) ಎಂಬ ಕೃತಿಯಲ್ಲಿ ನೋಡಬಹುದಾಗಿದೆ. ಸ್ವಾತಂತ್ರ್ಯವನ್ನು ಮೂಲಧಾತುವನ್ನಾಗಿ ಮಾಡಿಕೊಂಡಿರುವ ಅವರ ಅಭಿವೃದ್ಧಿ ಕುರಿತ ನಿರ್ವಚನವು ಅದನ್ನು ಸಾಂಪ್ರದಾಯಿಕವಾಗಿ ವರಮಾನದ ವರ್ಧನೆಗೆ, ವ್ಯಕ್ತಿಗತ ಆದಾಯದ ಏರಿಕೆಗೆ, ಕೈಗಾರಿಕೀಕರಣಕ್ಕೆ, ತಾಂತ್ರಿಕ ಪ್ರಗತಿಗೆ, ಆಧುನೀಕರಣಕ್ಕೆ ಸಂವಾದಿಯಾಗಿ ಮಾಡಿಕೊಂಡು ಬಂದಿರುವ ವೈಚಾರಿಕ ಆಕೃತಿಗೆ ಸಂಪೂರ್ಣ ಭಿನ್ನವಾಗಿದೆ.

ಸಾಂಪ್ರದಾಯಿಕ ಅಭಿವೃದ್ಧಿ ಸಿದ್ಧಾಂತಗಳಲ್ಲಿ ಅಭಿವೃದ್ಧಿಯ ಸಾಧನಗಳಿಗೆ ಮಹತ್ವವನ್ನು ನೀಡಲಾಗಿತ್ತು. ಅಮರ್ತ್ಯಸೆ ಮತ್ತು ಮೆಹಬೂಬ್ ಉಲ್ ಹಕ್ ಅವರ ಬಹುದೊಡ್ಡ ಕೊಡುಗೆಯೆಂದರೆ ಅಭಿವೃದ್ಧಿ ಕುರಿತ ಸೈದ್ಧಾಂತಿಕ ಚರ್ಚೆಗಳಲ್ಲಿ ಗಮನವನ್ನು ‘ಸಾಧನ’ಗಳಿಂದ ‘ಸಾಧ್ಯ’ದ ಕಡೆಗೆ ಪಲ್ಲಟಗೊಳಿಸಿದ್ದಾಗಿದೆ.

‘ಸ್ವಾತಂತ್ರ್ಯವಾಗಿ ಅಭಿವೃದ್ಧಿ’ ಎಂದಾಗ ಸ್ವಾತಂತ್ರ್ಯವನ್ನು ಅಮರ್ತ್ಯಸೆನ್ ನಿರ್ದಿಷ್ಟವಾದ ಅರ್ಥದಲ್ಲಿ ಬಳಸುತ್ತಾರೆ. ಸಾಮಾನ್ಯವಾಗಿ ಸ್ವಾತಂತ್ರ್ಯವನ್ನು ‘ನಿಯಂತ್ರಣ’ ‘ಹತೋಟಿ’ – ‘ಬಂಧನ’ಗಳಿಲ್ಲದ ಸ್ಥಿತಿಯೆಂದು ತಿಳಿದುಕೊಳ್ಳಲಾಗುತ್ತದೆ. ಇದು ಸರಿಯಿರಬಹುದು. ಆದರೆ ಇದು ಸ್ವಾತಂತ್ರ್ಯದ ಒಂದು ಮುಖ ಮಾತ್ರವಾಗಿದೆ. ಇದನ್ನು ಸೆನ್ ‘ನೇತ್ಯಾತ್ಮಕ ಸ್ವಾತಂತ್ರ್ಯ’ವೆಂದು ಕರೆದಿದ್ದಾರೆ. ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಅಮರ್ತ್ಯಸೆನ್ ಸ್ವಾತಂತ್ರ್ಯವನ್ನು ಜನರು ಏನು ಮಾಡಬಲ್ಲರು – ಏನು ಮಾಡಲಾರರು ಎಂಬ ನೆಲೆಯಲ್ಲಿ ಪರಿಭಾವಿಸಿಕೊಳ್ಳುತ್ತಾರೆ (ವಿವರಗಳಿಗೆ ನೋಡಿ : ಅಮರ್ತ್ಯಸೆನ್‌ರ ‘ಆಹಾರ ಮತ್ತು ಸ್ವಾತಂತ್ರ್ಯ’, ಅನು : ಟಿ.ಆರ್.ಚಂದ್ರಶೇಖರ, ೨೦೦೩).

ನಾಗರಿಕರ ಬದುಕು ಎಂಬುದು ವ್ಯಕ್ತಿಗಳ, ಸಂಸ್ಥೆಗಳ, ಸರ್ಕಾರದ ಹಸ್ತಕ್ಷೇಪದಿಂದ ಮುಕ್ತವಾಗಿರುವ ಸ್ಥಿತಿಯನ್ನು ನೇತ್ಯಾತ್ಮಕ ಸ್ವಾತಂತ್ರ್ಯವೆಂದು ಕರೆಯಬಹುದು. ಆದರೆ ಇತ್ಯಾತ್ಮಕ ಸ್ವಾತಂತ್ರ್ಯದಲ್ಲಿ ‘ಹಸ್ತಕ್ಷೇಪ’ ಮುಖ್ಯವಾಗಿರುವುದಿಲ್ಲ. ನಾಗರಿಕರು ಏನನ್ನು ಮಾಡಬಲ್ಲರು ಅಥವಾ ಮಾಡಲಾರರು ಎಂಬ ಜನರ ಸಾಮರ್ಥ್ಯವನ್ನು ಇತ್ಯಾತ್ಮಕ ಸ್ವಾತಂತ್ರ್ಯವೆಂದು ಕರೆಯಬಹುದು. ಎರಡೊತ್ತಿನ ಕೂಳು ದೊರೆಯದ ನಾಗರಿಕರು ಹಸಿವಿನಿಂದ ನರಳುತ್ತಿದ್ದರೆ ಅದು ಇತ್ಯಾತ್ಮಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಸಂಗತಿಯಾಗಿದೆ. ನೇತ್ಯಾತ್ಮಕ ಸ್ವಾತಂತ್ರ್ಯ ನಾಗರಿಕರಿಗಿರಬಹುದು. ಅದು ಇದ್ದೂ ಕೂಡ ಜನರು ಇತ್ಯಾತ್ಮಕ ಸ್ವಾತಂತ್ರ್ಯದಿಂದ ವಂಚಿತರಾಗಿರಬಹುದು. ವೈಚಾರಿಕ ಇತಿಹಾಸವನ್ನು ಒಮ್ಮೆ ಪರಿಶೀಲಿಸಿದರೆ ಅಲ್ಲಿ ಬೇರೆ ಬೇರೆ ಚಿಂತರು ಇವೆರಡೂ ಬಗೆಯ ಸ್ವಾತಂತ್ರ್ಯ ಪ್ರಕಾರಗಳಲ್ಲಿ ಒಂದರ ಪರ ನಿಲ್ಲುವುದು ಕಂಡುಬರುತ್ತದೆ. ಮಿಲ್ಟನ್‌ಫ್ರಿಡ್‌ಮನ್ ಮತ್ತು ಜೇಮ್ಸ್‌ಬುಕಾನನ್ ಅವರು ಸ್ವಾತಂತ್ರ್ಯದ ನೇತ್ಯಾತ್ಮಕ ದೃಷ್ಟಿಕೋನದ ಪ್ರತಿಪಾದಕರಾಗಿದ್ದಾರೆ ಮತ್ತು ಸರ್ಕಾರ, ಸಂಸ್ಥೆಗಳು, ಸರ್ಕಾರಗಳ ಹಸ್ತಕ್ಷೇಪದಿಂದ ಮುಕ್ತವಾದ ಸ್ವಾತಂತ್ರ್ಯದ ಬಗ್ಗೆ ಅವರು ಮಾತನಾಡುತ್ತಾರೆ. ಇದಕ್ಕೆ ಪ್ರತಿಯಾಗಿ ಬೆಂಥಮ್ ಮತ್ತು ಮಾರ್ಕ್ಸ್ ಅವರು ಇತ್ಯಾತ್ಮಕ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಾರೆ. ಸ್ವಾತಂತ್ರ್ಯವೆಂಬುದು ಸರಳವಾದ ಸಂಗತಿಯಲ್ಲ. ಅದನ್ನು ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಸೆನ್ ನಿರ್ದಿಷ್ಟ ನೆಲೆಯಲ್ಲಿ ಬಳಸುತ್ತಾರೆ. ಸೆನ್, ಹಕ್ ಅವರು ಮುಖ್ಯವಾಗಿ ಪ್ರತಿಪಾದಿಸುತ್ತಿರುವ ಸಂಗತಿಯೆಂದರೆ ವರಮಾನದ ವರ್ಧನೆಗೂ ಮತ್ತು ಅಭಿವೃದ್ಧಿಗೂ ನಡುವೆ ನೇರ ಸಂಬಂಧದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ. ಇವೆರಡರ ನಡುವೆ ಅವರು ನಾಲ್ಕು ಬಗೆಯ ಸಂಬಂಧಗಳನ್ನು ಗುರುತಿಸಿದ್ದಾರೆ.

೧. ವರಮಾನ ವರ್ಧನೆ ಹಾಗೂ ಅಭಿವೃದ್ಧಿಯ ಮಟ್ಟ ಎರಡೂ ಉನ್ನತವಾಗಿರುವ ದೇಶಗಳೂ ಇವೆ.

೨. ವರಮಾನ ವರ್ಧನೆ ಹಾಗೂ ಅಬಿವೃದ್ಧಿಯ ಮಟ್ಟಗಳು ಎರಡೂ ಕೆಳಸ್ಥಿತಿಯಲ್ಲಿರುವ ದೇಶಗಳೂ ಇವೆ.

ಇವೆರಡೂ ಸೈದ್ಧಾಂತಿಕವಾಗಿ ನಿರೀಕ್ಷಿಸಿದ ರೀತಿಯಲ್ಲಿವೆ. ವರಮಾನ ವರ್ಧನೆಯು ಅಭಿವೃದ್ಧಿಯನ್ನು ಉನ್ನತ ಮಟ್ಟಕ್ಕೇರಿಸಿರುವುದು ಮೊದಲನೆಯ ಮಾದರಿಯಲ್ಲಿ ಕಂಡುಬಂದರೆ ಕೆಳಮಟ್ಟದಲ್ಲಿರುವ ವರಮಾನವು ಅಭಿವೃದ್ಧಿಯನ್ನು ಕೆಳಮಟ್ಟದಲ್ಲಿಟ್ಟಿರುವುದು ಎರಡನೆಯ ಮಾದರಿಯಿಂದ ತಿಳಿದುಬರುತ್ತದೆ.

೩. ವರಮಾನದ ಮಟ್ಟವು ಉನ್ನತವಾಗಿದ್ದು ಅಭಿವೃದ್ಧಿಯು ಕೆಳಮಟ್ಟದಲ್ಲಿರುವ ದೇಶಗಳೂ ಇವೆ.

೪. ವರಮಾನದ ಮಟ್ಟವು ಕಡಿಮೆಯಿದ್ದು ಅಭಿವೃದ್ಧಿಯ ಮಟ್ಟವು ಉನ್ನತವಾಗಿರುವ ದೇಶಗಳೂ ಇವೆ.

ಮೊದಲ ಎರಡು ಬಗೆಗಳು ನಿರೀಕ್ಷಿಸಿದ ರೀತಿಯಲ್ಲಿವೆ. ಆದರೆ ಕೊನೆಯ ಎರಡು ಬಗೆಗಳು ಅಪವಾದದಂತೆ ಕಾಣುತ್ತವೆ. ಈ ಬಗೆಯ ಸಂಬಂಧಗಳಿಂದ ವರಮಾನ ವರ್ಧನೆ ಮತ್ತು ಅಭಿವೃದ್ಧಿಗಳ ನಡುವೆ ನೇರ ಸಂಬಂಧ ಸಾಧ್ಯವಿಲ್ಲವೆಂಬುದು ತಿಳಿದುಬರುತ್ತದೆ.

ಈ ಬಗ್ಗೆ ಸೆನ್‌ನೀಡಿರುವ ಕೆಲವು ಉದಾಹರಣೆಗಳನ್ನು ಇಲ್ಲಿ ನೋಡಬಹುದು.

  • ತಲಾವರಮಾನದ ದೃಷ್ಟಿಯಿಂದ ದಕ್ಷಿಣ ಆಫ್ರಿಕಾ, ಬ್ರೆಜಿಲ್‌, ಗಬಾನ್ ಮತ್ತು ಒಮೆನ್‌ ದೇಶಗಳ ಸ್ಥಿತಿಯು ಚೀನಾ ಮತ್ತು ಶ್ರೀಲಂಕಾ ದೇಶಗಳ ತಲಾ ವರಮಾನಕ್ಕಿಂತ ಆರುಪಟ್ಟು ಅಧಿಕವಾಗಿದೆ. ಆದರೆ ಸಾಪೇಕ್ಷವಾಗಿ ಶ್ರೀಮಂತವಾದ ದೇಶಗಳಲ್ಲಿ ಜನರ ಆಯುಷ್ಯವು ಉಳಿದೆರಡು ದೇಶಗಳ ಆಯುಷ್ಯಕ್ಕಿಂತ ತುಂಬಾ ಕೆಳಮಟ್ಟದಲ್ಲಿದೆ.
  • ದಕ್ಷಿಣ ಆಫ್ರಿಕಾ, ಬ್ರೆಜಿಲ್, ಗಬಾನ್ ಮತ್ತು ಒಮೆನ್‌ಗಳಿಗಿಂತ ತೀವ್ರ ಬಡತನ ಎದುರಿಸುತ್ತಿರುವ ಕೊಸ್ಟರಿಕಾದಲ್ಲಿ ಜನರ ಆಯುಷ್ಯವು ಈ ನಾಲ್ಕು ದೇಶಗಳಲ್ಲಿನ ಆಯುಷ್ಯಕ್ಕಿಂತ ಅಧಿಕವಾಗಿದೆ.
  • ಭಾರತಕ್ಕೆ ಸಂಬಂಧಿಸಿದಂತೆ ವರಮಾನದ ಪ್ರಮಾಣ ಹಾಗೂ ವರ್ಧನೆಯಲ್ಲಿ ಕೇರಳದ ಸಾಧನೆ ಹೇಳಿಕೊಳ್ಳುವಂತಿಲ್ಲ. ಆದರೆ ಅದು ಅಭಿವೃದ್ಧಿಯಲ್ಲಿ ಉನ್ನತ ಮಟ್ಟವನ್ನು ಸಾಧಿಸಿಕೊಂಡಿದೆ. ಅಲ್ಲಿ ಜನರ ಆಯುಷ್ಯ ಉತ್ತಮವಾಗಿದೆ. ಶಿಶು ಮರಣ ಪ್ರಮಾಣ ಕೆಳಮಟ್ಟದಲ್ಲಿದೆ. ಸಾಕ್ಷರತೆ – ಮಹಿಳಾ ಸಾಕ್ಷರತೆ ಅತ್ಯಂತ ಉನ್ನತ ಮಟ್ಟದಲ್ಲಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಕೆಲವು ಜಿಲ್ಲೆಗಳ ಉದಾಹರಣೆ ನೀಡಬಹುದಾಗಿದೆ.

ರಾಜ್ಯದ ೨೭ ಜಿಲ್ಲೆಗಳ ಪೈಕಿ ತಲಾವರಮಾನದಲ್ಲಿ (೨೦೦೩ – ೦೪) ಬಳ್ಳಾರಿ ಮೂರನೆಯ, ಮೈಸೂರು ಒಂಬತ್ತನೆಯ ಮತ್ತು ಕೊಪ್ಪಳ ಹತ್ತನೆಯ ಸ್ಥಾನದಲ್ಲಿವೆ. ಆದರೆ ಅವು ಅಭಿವೃದ್ಧಿಯಲ್ಲಿ ಕ್ರಮವಾಗಿ ಹದಿನೆಂಟನೆಯ, ಹದಿನಾಲ್ಕನೆಯ ಮತ್ತು ಇಪ್ಪತ್ನಾಲ್ಕನೆಯ ಸ್ಥಾನದಲ್ಲಿವೆ. ಇಲ್ಲಿ ವರ್ಧನೆಯಾದ ವರಮಾನವು ಜನರ ಬದುಕಾಗಿ ಪರಿವರ್ತನೆಯಾಗಿಲ್ಲ. ಇದಕ್ಕೆ ಪ್ರತಿಯಾಗಿ ತಲಾವರಮಾನದ ದೃಷ್ಟಿಯಿಂದ ರಾಜ್ಯದ ೨೭ ಜಿಲ್ಲೆಗಳ ಪೈಕಿ ಉತ್ತರ ಕನ್ನಡ ಹನ್ನೆರಡನೆಯ ಸ್ಥಾನದಲ್ಲಿ, ಹಾಸನವು ಹದಿಮೂರನೆಯ ಸ್ಥಾನದಲ್ಲೂ ಮತ್ತು ದಾವಣಗೆರೆ ಹದಿನಾರನೆಯ ಸ್ಥಾನದಲ್ಲಿವೆ. ಆದರೆ ಅಭಿವೃದ್ಧಿಯಲ್ಲಿ ಅವು ಕ್ರಮವಾಗಿ ಏಳನೆಯ, ಹನ್ನೊಂದನೆಯ ಹಾಗೂ ಹನ್ನೆರಡನೆಯ ಸ್ಥಾನದಲ್ಲಿವೆ.

ಈ ಎಲ್ಲ ನಿರ್ದಶನಗಳಿಂದ ತಿಳಿದುಬರುವುದೇನೆಂದರೆ ವರಮಾನ ವರ್ಧನೆಯು ತನ್ನಷ್ಟಕ್ಕೆ ತಾನೆ, ಸಹಜವಾಗಿ ಏಕಾಏಕಿ ಜನರ ಬದುಕಾಗಿ ಪರಿವರ್ತನೆಗೊಳ್ಳುವುದಿಲ್ಲ. ಈ ಬಗೆಯ ಪರಿವರ್ತನೆಯನ್ನು ಪ್ರಜ್ಞಾಪೂರ್ವಕವಾಗಿ ಸಾಧಿಸಿಕೊಳ್ಳಬೇಕಾಗುತ್ತದೆ.

ವರಮಾನ ವರ್ಧನೆಯನ್ನು ಅಭಿವೃದ್ಧಿಯನ್ನಾಗಿಸಲು ಏನು ಮಾಡಬೇಕು.

ಈ ಪರಿವರ್ತನೆಯನ್ನು ಸಾಧಿಸಿಕೊಳ್ಳಲು ಕೆಳಕಂಡ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

೧. ಅಭಿವೃದ್ಧಿಯ ಮೂಲಧಾತು ಜನರು ಎಂಬುದನ್ನು ಗುರುತಿಸಬೇಕು. ಅಭಿವೃದ್ಧಿಯನ್ನು ಜನರ ಬದುಕಿನ ನೆಲೆಯಿಂದ ಪರಿಭಾವಿಸಿಕೊಳ್ಳಬೇಕು. ಅಭಿವೃದ್ಧಿ ನೀತಿಯ ಯಶಸ್ಸಿನ ಅಳತೆಗೋಲು ಜನರ ಬದುಕು ಎಷ್ಟರಮಟ್ಟಿಗೆ ಉತ್ತಮಗೊಂಡಿದೆ ಎಂಬುದಾಗಬೇಕೆ ವಿನಾ ಉತ್ಪಾದನೆಯಲ್ಲಿ, ವರಮಾನದಲ್ಲಿ ಎಷ್ಟರಮಟ್ಟಿಗೆ ವರ್ಧನೆಯಾಗಿದೆ ಎಂಬುದಲ್ಲ.

೨. ಅವಕಾಶಗಳ ವರ್ಧನೆ, ಅವಕಾಶಗಳಲ್ಲಿ ಆಯ್ಕೆಯ ವ್ಯಾಪ್ತಿಯ ವಿಸ್ತೃತತೆಯನ್ನು ಮತ್ತು ಜನರ ಧಾರಣಾ ಸಾಮರ್ಥ್ಯದ ವರ್ಧನೆ ಎಲ್ಲವನ್ನು ಏಕಕಾಲದಲ್ಲಿ ಸಾಧಿಸಿಕೊಳ್ಳಬೇಕು.

೩. ಅಭಿವೃದ್ಧಿಯ ಸಾಧನೆ ಮತ್ತು ಸಾಧ್ಯಗಳ ನಡುವೆ ಸೂಕ್ಷ್ಮವಾಗಿ ಭಿನ್ನತೆಯನ್ನು ಗುರುತಿಸಿಕೊಳ್ಳಬೇಕು. ಜನರು ಅಭಿವೃದ್ಧಿಯ ಸಾಧನವೂ ಹೌದು ಮತ್ತು ಅದರ ಸಾಧ್ಯವೂ ಹೌದು. ವರಮಾನದ ವರ್ಧನೆಯು ಅವಕಾಶಗಳ ವರ್ಧನೆಯಲ್ಲಿ ಮುಖ್ಯವಾದ ಪಾತ್ರ ವಹಿಸುತ್ತದೆ. ಆದರೆ ವರ್ಧನೆಯಾದ ವರಮಾನವು ಜನರ ಬದುಕನ್ನು ಎಷ್ಟರಮಟ್ಟಿಗೆ ಉತ್ತಮಪಡಿಸಿದೆ ಎಂಬುದು ಅಭಿವೃದ್ಧಿಯ ಮೌಲ್ಯಮಾಪನದ ಮಾನದಂಡವಾಗಬೇಕು.

೪. ಅಭಿವೃದ್ಧಿಯು ಕೇವಲ ಆರ್ಥಿಕತೆಗೆ ಮಾತ್ರ ಸೀಮಿತಗೊಳ್ಳದೆ ಇಡೀ ಸಮಾಜವನ್ನು ಒಳಗೊಳ್ಳುವಂತಾಗಬೇಕು.

ಈ ಹಿನ್ನೆಲೆಯಲ್ಲಿ ೧೯೯೪ರ ಮಾನವ ಅಭಿವೃದ್ಧಿ ವರದಿಯಲ್ಲಿನ ವ್ಯಾಖ್ಯೆಯನ್ನು ಪರಿಗಣಿಸಬೇಕು.

“ವರಮಾನದ ವರ್ಧನೆಯ ಜೊತೆ ಅದರ ಸಮಾನ ವಿತರಣೆಯು ಮಾನವ ಅಭಿವೃದ್ಧಿ ಎನಿಸಿಕೊಳ್ಳುತ್ತದೆ. ಅದು ಪರಿಸರವನ್ನು ರಕ್ಷಿಸುತ್ತದೆ ವಿನಾ ನಾಶ ಮಾಡುವುದಿಲ್ಲ. ಅದು ಜನರನ್ನು ಸಶಕ್ತರನ್ನಾಗಿಸುತ್ತದೆ ವಿನಾ ಅಶಕ್ತರನ್ನಾಗಿ ಮಾಡುವುದಿಲ್ಲ. ಅಲ್ಲಿ ಬಡವರು ಅಭಿವೃದ್ಧಿಯ ಮೂಲಧಾತುವಾಗಿರುತ್ತಾರೆ. ಅವರ ಆಯ್ಕೆಯ ವ್ಯಾಪ್ತಿ ವಿಸ್ತರಣೆಯಾಗುತ್ತದೆ, ಅವಕಾಶಗಳ ವರ್ಧನೆಯಾಗುತ್ತದೆ ಮತ್ತು ನೀತಿ – ನಿರೂಪಣೆ ಚಟುವಟಿಕೆಗಳಲ್ಲಿ ಜನರು ಭಾಗವಹಿಸಲು ಅವಕಾಶವಿರುತ್ತದೆ. ಅದು ಜನರಿಗೆ ಅಭಿಮುಖವಾಗಿರುತ್ತದೆ, ಪರಿಸರಕ್ಕೆ ಪೂರಕವಾಗಿರುತ್ತದೆ, ದುಡಿಮೆಗೆ ಸಹಾಯಕವಾಗಿರುತ್ತದೆ ಮತ್ತು ಲಿಂಗ ಸ್ಪಂದಿಯಾಗಿರುತ್ತದೆ.”

ಸ್ವಾತಂತ್ರ್ಯಸಾಕ್ಷರತೆ ಮತ್ತು ಅಭಿವೃದ್ಧಿ

ಸ್ವಾತಂತ್ರ್ಯವನ್ನಾಗಿ ಅಭಿವೃದ್ಧಿಯನ್ನು ಪರಿಭಾವಿಸಿಕೊಳ್ಳುವ, ನಿರ್ವಚಿಸುವ ಕ್ರಮವೊಂದು ಇಂದು ರೂಢಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದ ಚರ್ಚೆಯನ್ನು ಸೆನ್ ಅವರ ‘ಸ್ವಾತಂತ್ರ್ಯವಾಗಿ ಅಭಿವೃದ್ಧಿ’ (೧೯೯೯) ಎಂಬ ಕೃತಿಯಲ್ಲಿ ನೋಡಬಹುದು. ಈ ವಿಷಯ ಕುರಿತಂತೆ ಮೆಹಬೂಬ್ ಉಲ್ ಹಕ್ ಕೂಡ ಕಾಣಿಕೆ ನೀಡಿದ್ದಾರೆ (೧೯೯೬). ಸ್ವಾತಂತ್ರ್ಯವನ್ನು ‘ಬಂಧನವಿಲ್ಲದ ಸ್ಥಿತಿ’ ಎಂಬುದಕ್ಕಿಂತ ಭಿನ್ನವಾದ ‘ಜನರು ಏನು ಮಾಡಬಲ್ಲರು’, ‘ಅವರು ಏನಾಗಿದ್ದಾರೆ’ ಎಂಬ ಅರ್ಥದಲ್ಲಿ ಅವರು ಪರಿಭಾವಿಸಿಕೊಂಡಿದ್ದಾರೆ. ಇದನ್ನು ಸೆನ್ ‘ಇತ್ಯಾತ್ಮಕ ಸ್ವಾತಂತ್ರ್ಯ’ವೆಂದು ಕರೆದಿದ್ದಾರೆ. ಬಂಧನ – ನಿಯಂತ್ರಣಗಳಿಲ್ಲದ ಸ್ಥಿತಿಯನ್ನು ‘ನೇತ್ಯಾತ್ಮಕ ಸ್ವಾತಂತ್ರ್ಯ’ವೆಂದು ಕರೆಯಲಾಗಿದೆ. ಜನರು ಏನು ಮಾಡಬಲ್ಲರು – ಅವರು ಏನಾಗಿದ್ದಾರೆ ಎಂಬುದು ವರಮಾನಕ್ಕಿಂತ ಮಿಗಿಲಾಗಿ ಸಾಕ್ಷರತೆ, ಶಿಕ್ಷಣ, ಆರೋಗ್ಯ, ಸಾಮಾಜಿಕ ಸ್ಥಾನಮಾನ ಮುಂತಾದವುಗಳನ್ನು ಅವಲಂಬಿಸಿದೆ. ಜನರು ಏನಾಗಿದ್ದಾರೆ ಮತ್ತು ಅವರು ಏನು ಮಾಡಬಲ್ಲರು ಎಂಬುದು ಬಹಳ ಮುಖ್ಯವಾಗಿ ಸಾಕ್ಷರತೆಯನ್ನು ಅವಲಂಬಿಸಿದೆ.

ಅನಕ್ಷರತೆಯ ಸಂಕೋಲೆಯಿಂದ ಜನರು ಮುಕ್ತರಾಗಿದ್ದಾರಾ ಎಂಬುದು ಒಂದು ಬಗೆಯ ಪ್ರಶ್ನೆಯಾದರೆ ಜನರು ‘ಓದುವ – ಬರೆಯುವ’ ಸಾಮರ್ಥ್ಯ ಪಡೆದಿದ್ದಾರೆಯೆ ಎಂಬುದು ಇನ್ನೊಂದು ಬಗೆಯ ಪ್ರಶ್ನೆಯಾಗಿದೆ. ಅನಕ್ಷರತೆಯನ್ನು ಅಮರ್ತ್ಯಸೆನ್ ‘ಸಾಮಾಜಿಕ ಸಂಕೋಲೆ’ಯೆಂದು ಕರೆದಿದ್ದಾರೆ. ಸಾಕ್ಷರತೆಯನ್ನು ಸಾಮಾನ್ಯವಾಗಿ ಅಭಿವೃದ್ಧಿಯ ಸಾಧನವನ್ನಾಗಿ ಪರಿಭಾವಿಸಿಕೊಂಡು ಬರಲಾಗಿದೆ. ಇದು ಒಂದು ಮಟ್ಟದವರೆಗೆ ಸರಿಯಿರಬಹುದು. ಆದರೆ ಅದು ಅಭಿವೃದ್ಧಿಯ ಅಂತರ್ಗತ – ಅವಿಭಾಜ್ಯ ಅಂಗವೆಂಬುದನ್ನು ನಾವು ಪರಿಗಣಿಸಬೇಕಾಗುತ್ತದೆ. ಅಭಿವೃದ್ಧಿಯನ್ನು ಮೌಲ್ಯಮಾಪನ ಮಾಡುವ ಒಂದು ಮಾನದಂಡ ಸಾಕ್ಷರತೆ.

ಸಾಮಾಜಿಕ ಬದುಕನ್ನು ಅರ್ಥ ಮಾಡಿಕೊಳ್ಳಲು ತುಂಬಾ ಅಗತ್ಯವಾದ ಒಂದು ಸಾಮರ್ಥ್ಯವೆಂದರೆ ಬರಹದ ಕುಶಲತೆ. ಜನರು ತಮ್ಮ ಸ್ಥಿತಿಗತಿಯನ್ನು ಅರ್ಥ ಮಾಡಿಕೊಳ್ಳಲು – ವಿಶ್ಲೇಷಣೆ ಮಾಡಲು ಅಕ್ಷರ ಜ್ಞಾನ ತುಂಬಾ ಅಗತ್ಯ. ಸಾಮಾಜಿಕ ಬದಲಾವಣೆಯ ದಿಶೆಯಲ್ಲಿ ಸಾಕ್ಷರತೆಯ ಪಾತ್ರವು ತುಂಬಾ ಮಹತ್ವದ್ದಾಗಿದೆ. ಸಾಕ್ಷರತೆಯಿಲ್ಲದಿದ್ದರೆ ಸ್ವಾತಂತ್ರ್ಯಕ್ಕೆ ಯಾವುದೇ ಅರ್ಥವಿರುವುದಿಲ್ಲ. ಬದುಕನ್ನು ಉತ್ತಮಪಡಿಸಿಕೊಳ್ಳಲು ಲಭ್ಯವಿರುವ ಅವಕಾಶಗಳನ್ನು ಸಮರ್ಥವಾಗಿ ಧಾರಣೆ ಮಾಡಿಕೊಳ್ಳಲು ಅಕ್ಷರಜ್ಞಾನವು ತುಂಬಾ ಅಗತ್ಯವಾಗಿದೆ. ಈ ಬಗೆಯ ಧಾರಣಾ ಸಾಮರ್ಥ್ಯದ ಕೊರತೆಯನ್ನೇ ಅಮರ್ತ್ಯಸೆನ್ ಬಡತನವೆಂದು ಕರೆದಿದ್ದಾರೆ.

ಸಾಕ್ಷರತೆಯು ಹೀಗೆ ಅಭಿವೃದ್ಧಿಯ ಸಾಧನವಾಗಿ ಹಾಗೂ ಅದರ ಸಾಧ್ಯವಾಗಿ ಕೆಲಸ ಮಾಡುತ್ತದೆ. ಅದು ಜನರಿಗೆ ಸ್ವಾತಂತ್ರ್ಯವನ್ನು ಒದಗಿಸುತ್ತದೆ. ಜನರು ಸಂದರ್ಭ – ಸನ್ನಿವೇಶದ ಬಂಧಿಗಳಾಗಿದ್ದಾರೋ ಅಥವಾ ಅವುಗಳ ಪ್ರಭುಗಳಾಗಿದ್ದಾರೋ ಎಂಬುದು ಜನರ ಅಕ್ಷರ ಸಂಪತ್ತನ್ನು ಅವಲಂಬಿಸಿದೆ. ಸಂದರ್ಭ – ಸನ್ನಿವೇಶದ ಮೇಲೆ ಜನರ ನಿಯಂತ್ರಣ ಸಾಧಿಸಬೇಕೇ ವಿನಾ ಅವರು ಅವುಗಳ ನಿಯಂತ್ರಣಕ್ಕೆ ನಿಲುಕಬಾರದು. ಈ ಬಗೆಯ ಸ್ವಾತಂತ್ರ್ಯವನ್ನು ಸಾಧಿಸಿಕೊಳ್ಳಲು ಅಕ್ಷರ ಸಂಸ್ಕೃತಿಯ ಅಗತ್ಯವಿದೆ.

ದುರದೃಷ್ಟದ ಸಂಗತಿಯೆಂದರೆ ನಮ್ಮ ಸಮಾಜ ಮತ್ತು ಸರ್ಕಾರಗಳು ಸಾಕ್ಷರತೆಯ ಮಹತ್ವವನ್ನು ಗುರುತಿಸಿದಂತೆ ಕಾಣಲಿಲ್ಲ. ಏಕೆಂದರೆ ಅದು ಬಡವರ, ವಂಚಿತರ, ಹಸಿದವರ ಪ್ರಶ್ನೆಯಾಗಿದೆ. ಜನರ ಧಾರಣಾ ಸಾಮರ್ಥ್ಯದ ವರ್ಧನೆಯೇ ಅಭಿವೃದ್ಧಿ ಎಂಬುದಾದರೆ ಅಂತಹ ಧಾರಣಾ ಸಾಮಾರ್ಥ್ಯವನ್ನು ನಿರ್ಧರಿಸುವ ಬಹುಮುಖ್ಯ ಸಂಗತಿ ಸಾಕ್ಷರತೆ. ಸಾಕ್ಷರತೆ ಜನರಿಗೆ ಸ್ವಾತಂತ್ರ್ಯವನ್ನು ಒದಗಿಸುತ್ತದೆ. ಸ್ವಾತಂತ್ರ್ಯ ಸಂಗ್ರಾಮದ ಕಾಲಾವಧಿಯಲ್ಲಿ ಇದು ದೃಢಪಟ್ಟಿದೆ. ಬ್ರಿಟಿಷರು ಇಲ್ಲಿ ಅಭಿವೃದ್ಧಿಪಡಿಸಿದ ಶಿಕ್ಷಣ ವ್ಯವಸ್ಥೆಯಿಂದಾಗಿ ಜನರಿಗೆ ಸ್ವಾತಂತ್ರ್ಯದ ಮಹತ್ವ ಅರಿವಾಯಿತು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಮೂರು ಮುಕ್ಕಾಲು ಮೀಸೆ ಪಾಲು ಜನರು ಬ್ರಿಟಿಷರು ಆರಂಭಿಸಿದ ಶಿಕ್ಷಣ ವ್ಯವಸ್ಥೆಯ ಫಲವಾಗಿದ್ದರು ಎಂಬುದನ್ನು ನಾವು ಮರೆಯಬಾರದು. ಬಡತನದ ನಿವಾರಣೆಗೆ ಅಭಿವೃದ್ಧಿ ಕಾರ್ಯಕ್ರಮಗಳು ಬೇಕು, ನಿಜ. ಆದರೆ ಜನರಿಗೆ ತಾವು ಬಡವರಾಗಿ ಏಕೆ ಉಳಿದಿದ್ದಾರೆ ಎಂಬುದು ಅರ್ಥವಾಗಬೇಕು. ಬಡತನದ ಮೂಲದಲ್ಲಿನ ಸಾಮಾಜಿಕ – ರಾಜಕೀಯ ನೆಲೆಗಳನ್ನು ಬಡವರಿಗೆ ಗುರುತಿಸುವುದು ಸಾಧ್ಯವಾಗಬೇಕು. ಬಡತನ ಕುರಿತ ಮೀಮಾಂಸೆಯ ಪಾಠ ಮೊದಲು ಬಡವರಿಗಾಗಬೇಕು.

ಅಭಿವೃದ್ಧಿಯೆಂಬುದು, ಸಾಕ್ಷರತೆ – ಶಿಕ್ಷಣ ಎಂಬ ಸಂಗತಿಗಳು ಭಿಕ್ಷೆಯಲ್ಲಿ. ಅವು ನಮ್ಮ ಹಕ್ಕುಗಳು ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಅದಕ್ಕೆ ಜನರು ಸಾಕ್ಷರರಾಗಬೇಕು. ಅಕ್ಷರಸ್ಥರಾಗಿ ಬಿಟ್ಟರೆ ಇವೆಲ್ಲ ಜನರಿಗೆ ಅರ್ಥವಾಗಿ ಬಿಡುತ್ತವೆ ಎಂದು ಹೇಳಲು ಬರುವುದಿಲ್ಲ, ನಿಜ. ಆದರೆ ಇಂತಹ ಕೊರತೆಯ ಹಿನ್ನೆಲೆಯಲ್ಲಿ ಸಾಕ್ಷರತೆಯ ಅಗತ್ಯವನ್ನೇ ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಹಂಗಿನ ಬದುಕನ್ನು ಹಕ್ಕಿನ ಬದುಕನ್ನಾಗಿ ಪರಿವರ್ತಿಸಿಕೊಳ್ಳುವ ಕ್ರಮವನ್ನು ಅಭಿವೃದ್ಧಿ ಎಂದು ಹೇಳಬಹುದು.

ಭಾಗ
ಮಾನವ ಅಭಿವೃದ್ದಿವರಮಾನ ಅಭಿವೃದ್ಧಿಗಳ ನಡುವೆ ವ್ಯತ್ಯಾಸಗಳು

ಮೆಹಬೂಬ್ ಉಲ್ ಹಕ್ ಸ್ಪಷ್ಟವಾಗಿ ವಾದಿಸಿರುವಂತೆ ಮಾನವ ಅಭಿವೃದ್ಧಿ ವಿಚಾರ ಪ್ರಣಾಳಿಕೆಯು ಹೊಸ ಸಂಶೋಧನೆಯೇನಲ್ಲ. ಅನೇಕ ಚಿಂತಕರು ಬಹಳ ಹಿಂದಿನ ಕಾಲದಿಂದಲೂ ಇದನ್ನು ಗುರುತಿಸಿಕೊಂಡು ಬಂದಿದ್ದಾರೆ. ಸಾಮಾಜಿಕ ವ್ಯವಸ್ಥೆಯು ಎಷ್ಟರ ಮಟ್ಟಿಗೆ ಜನರ ಬದುಕನ್ನು ಉತ್ತಮಪಡಿಸುವಲ್ಲಿ ಸಮರ್ಥವಾಗಿದೆ ಮತ್ತು ತಕ್ಕುದಾಗಿದೆ ಎಂಬುದೇ ಅದರ ಮೌಲ್ಯಮಾಪನದ ಅಳತೆಗೋಲಾಗಬೇಕು ಎಂಬ ವಿಚಾರವನ್ನು ಅರಿಸ್ಟಾಟಲ್‌ನ ಬರಹಗಳಲ್ಲಿ ಗುರುತಿಸಬಹುದಾಗಿದೆ. ಯಾವಾಗಲೂ ಜನರನ್ನು ಅಭಿವೃದ್ಧಿಯ ‘ಸಾಧ್ಯ’ವೆಂದು ಪರಿಗಣಿಸಬೇಕೇ ವಿನಾ ‘ಸಾಧನ’ವಾಗಿಯಲ್ಲ ಎಂಬ ವಿಚಾರವನ್ನು ಕಾಂಟ್ ಮಂಡಿಸಿದ್ದಾರೆ. ಇದೇ ಬಗೆಯ ವಿಚಾರಗಳನ್ನು ಆಡಂಸ್ಮಿತ್, ಮಾಲ್ಥಸ್, ಕಾರ್ಲ್‌‌ಮಾರ್ಕ್ಸ್, ಜೆ.ಎಸ್. ಮಿಲ್ ಮುಂತಾದವರ ಬರಹಗಳಲ್ಲಿ ಕಾಣಬಹುದು. ಜನರು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಅಮೂರ್ತ – ನಿರ್ಜೀವಿ ಸಂಗತಿಗಳಲ್ಲ. ಅವರು ಅದರ ಜೀವಂತ – ಮೂರ್ತ ಕರ್ತೃಗಳಾಗಿದ್ದಾರೆ. ಜನರು ಅಭಿವೃದ್ಧಿಯ ಗುಲಾಮರೂ ಅಲ್ಲ ಅಥವಾ ಅದರ ಬಲಿಪಶುಗಳೂ ಅಲ್ಲ. ಅವರು ಅದರ ಹರಿಕಾರರು ಕರ್ತೃಗಳು.

ವರಮಾನ ವರ್ಧನಾ ಅಭಿವೃದ್ಧಿ ಮಾದರಿ ಮತ್ತು ಮಾನವ ಅಭಿವೃದ್ಧಿ ಮಾದರಿಗಳ ನಡುವಿನ ಭಿನ್ನತೆಗಳನ್ನು ಕೆಳಗೆ ಗುರುತಿಸಲಾಗಿದೆ.

೧. ಮೊದಲನೆಯ ಮಾದರಿಯಲ್ಲಿ ವರಮಾನವು ಅಭಿವೃದ್ಧಿಯ ಅಂತಿಮ ಹಾಗೂ ಅಂತರ್ಗತ ಗುರಿಯಾಗಿದೆ.

ಆದರೆ ಎರಡನೆಯ ಮಾದರಿಯಲ್ಲಿ ವರಮಾನವು ಅಭಿವೃದ್ಧಿಯ ಸಾಧನವೇ ವಿನಾ ಅದು ಅಭಿವೃದ್ಧಿಯ ಸಾಧ್ಯವಲ್ಲ.

೨. ಮೊದಲನೆಯ ಮಾದರಿಯಲ್ಲಿ ವರಮಾನವು ವರ್ಧನೆಯೇ ಅಭಿವೃದ್ಧಿ. ಎರಡನೆಯ ಮಾದರಿಯಲ್ಲಿ ಜನರ ಬದುಕು ಉತ್ತಮಗೊಳ್ಳುವ ಪರಿಯೇ ಮಾನವ ಅಭಿವೃದ್ಧಿ.

೩. ಇದು ಸಾರಾಸಗಟಾಗಿ ಆರ್ಥಿಕ ರಂಗಕ್ಕೆ ಸೇರಿದ ಪ್ರಕ್ರಿಯೆಯಾಗಿದೆ. ಅದೊಂದು ಆರ್ಥಿಕ ಪ್ರಕ್ರಿಯೆಯಾಗಿದೆ.

ಆದರೆ ಎರಡನೆಯ ಮಾದರಿಯಲ್ಲಿ ಅಭಿವೃದ್ಧಿಯು ಇಡೀ ಸಮಾಜವನ್ನು ಒಳಗೊಳ್ಳುವ ಪ್ರಕ್ರಿಯೆಯಾಗಿದೆ. ಅದು ಸಾಮಾಜಿಕ, ರಾಜಕೀಯ, ಆರ್ಥಿಕ ಸಂಗತಿಗಳನ್ನು ಒಳಗೊಂಡ ಪ್ರಕ್ರಿಯೆಯಾಗಿದೆ.

೪. ಮೊದಲನೆಯ ಮಾದರಿಯಲ್ಲಿ ಅಭಿವೃದ್ಧಿಯು ಏಕರೂಪಿ – ಏಕಮುಖಿ ಪ್ರಕ್ರಿಯೆಯಾಗಿದೆ. ಎರಡನೆಯದರಲ್ಲಿ ಅದನ್ನು ಬಹುರೂಪಿ – ಬಹುಮುಖಿ ಪ್ರಕ್ರಿಯೆಯಾಗಿ ಪರಿಭಾವಿಸಿಕೊಳ್ಳಲಾಗಿದೆ.

೫. ವರಮಾನ ವರ್ಧನಾ ಸಿದ್ಧಾಂತವು ಲಿಂಗ ನಿರಪೇಕ್ಷವಾದುದಾಗಿದೆ. ಅದು ಲಿಂಗ ಸಂಬಂಧಗಳಿಗೆ ಅತೀತವಾದ ಸಿದ್ಧಾಂತವಾಗಿದೆ.

ಮಾನವ ಅಭಿವೃದ್ಧಿಯು ಲಿಂಗ ಸಂಬಂಧಗಳನ್ನು ಒಳಗೊಂಡ ವಿಚಾರ ಪ್ರಣಾಳಿಕೆಯಾಗಿದೆ.

೬. ವರ್ಧನೆಯಾದ ವರಮಾನದ ಮೊತ್ತವೇ ಜನರ ಬದುಕಲ್ಲ. ಎರಡನೆಯ ಮಾದರಿಯಲ್ಲಿ ಅಭಿವೃದ್ಧಿಯು ವರಮಾನದ ಜೊತೆಗೆ ಶಿಕ್ಷಣ, ಆರೋಗ್ಯ, ಆಹಾರ ಭದ್ರತೆ ಮುಂತಾದವುಗಳನ್ನು ಒಳಗೊಂಡ ಸಂಯುಕ್ತ ಪ್ರಕ್ರಿಯೆಯಾಗಿದೆ.

೭. ವರಮಾನವು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಒಂದು ಚಾಲಕ ಶಕ್ತಿಯಾಗಿದೆ. ಅದೇ ಅಭಿವೃದ್ಧಿಯಲ್ಲ. ಮಾನವ ಅಭಿವೃದ್ಧಿಯು ವರಮಾನದ ಜೊತೆಗೆ ಅನೇಕ ಸಾಮಾಜಿಕ – ರಾಜಕೀಯ ಸಂಗತಿಗಳನ್ನು ಒಳಗೊಂಡಿದೆ.

೮. ವರಮಾನ ವರ್ಧನೆ ಸಿದ್ಧಾಂತವು ಜನರ ಬದುಕನ್ನು ಉತ್ತಮಗೊಳಿಸವ ಪ್ರಕ್ರಿಯೆಗೆ ಸಂಬಂಧಿಸಿದಂತೆ ‘ಅವಕಾಶ’ಗಳನ್ನು ಮಾತ್ರ ವರ್ಧಿಸುವ ಸಂಗತಿಯನ್ನು ಒಳಗೊಂಡಿದೆ. ಆದರೆ ಮಾನವ ಅಭಿವೃದ್ಧಿಯು ಜನರ ವರಮಾನ ವರ್ಧನೆಯ ಜೊತೆಗೆ, ಅವರ ಧಾರಣಾ ಸಾಮರ್ಥ್ಯ ವರ್ಧನೆಯನ್ನು ಒಳಗೊಂಡಿದೆ. ಎರಡೂ ಕ್ರಿಯೆಗಳು ಏಕಕಾಲದಲ್ಲಿ ನಡೆಯಬೇಕು.

೯. ವರಮಾನ ವರ್ಧನೆಯ ಅಭಿವೃದ್ಧಿಯಲ್ಲಿ ಜನರು ಅಭಿವೃದ್ಧಿಯ ಸಾಧನ ಮಾತ್ರ. ಜನರನ್ನು ಇಲ್ಲಿ ಕೇವಲ ಫಲಾನುಭವಿಗಳಾಗಿ ಮಾತ್ರ ಪರಿಗಣಿಸಲಾಗುತ್ತದೆ. ಆದರೆ ಮಾನವ ಅಭಿವೃದ್ಧಿ ಮಾದರಿಯಲ್ಲಿ ಜನರು ಅಭಿವೃದ್ಧಿಯ ಸಾಧನವೂ ಹೌದು ಮತ್ತು ಅದರ ಗುರಿಯೂ ಹೌದು.

೧೦. ವರಮಾನದ ವರ್ಧನಾ ಅಭಿವೃದ್ಧಿ ಸಿದ್ಧಾಂತದಲ್ಲಿ ಅಭಿವೃದ್ಧಿಯು ‘ಜನರಿಗಾಗಿ ಇರುತ್ತದೆ. ಆದರೆ ಮಾನವ ಅಭಿವೃದ್ಧಿ ಮೀಮಾಂಸೆಯಲ್ಲಿ ಅಭಿವೃದ್ಧಿಯು ‘ಜನರಿಂದ’ – ‘ಜನರಿಗಾಗಿ’ ಇರುತ್ತದೆ.

೧೧. ಮೊದಲನೆಯದರಲ್ಲಿ ಜನರು ಅಭಿವೃದ್ಧಿಯ ಫಲಾನುಭವಿಗಳು ಎರಡನೆಯದರಲ್ಲಿ ಜನರು ಅಭಿವೃದ್ಧಿಯ ಕರ್ತೃಗಳು.

೧೨. ಸುಖಮಯ ಬದುಕು ಎಂದರೆ ಸರಕು ಮತ್ತು ಸೇವೆಗಳ ಅನುಭೋಗದಿಂದ ಜನರು ಪಡೆಯುವ ಗರಿಷ್ಟ ತುಷ್ಟಿಗುಣವಾಗಿದೆ. ಆದರೆ ಅಮರ್ತ್ಯಸೆನ್ ಪ್ರಕಾರ ಸುಖಮಯ ಬದುಕು ಎನ್ನುವುದು ಗರಿಷ್ಟ ತುಷ್ಟಿಗುಣದ ಜೊತೆ ಸ್ವಾತಂತ್ರ್ಯವನ್ನು, ಹಕ್ಕುಗಳನ್ನು, ಜನರ ಕರ್ತೃತ್ವವನ್ನು ಒಳಗೊಂಡಿರುತ್ತದೆ. ಹಂಗಿನ ಬದುಕು ಅಭಿವೃದ್ಧಿಯಲ್ಲ. ಹಕ್ಕಿನ ಬದುಕು ಅಭಿವೃದ್ಧಿ.

೧೩. ವರ್ಧನೆಯಾದ ವರಮಾನವು ಜನರು ಎದುರಿಸುವ ಇತರೆ ಸಮಸ್ಯೆಗಳಾದ ಹಸಿವು, ಅಸಮಾನತೆ, ಲಿಂಗ ತಾರತಮ್ಯ, ಆಹಾರ ಅಭದ್ರತೆ ಮುಂತಾದವುಗಳನ್ನು ಪರಿಹರಿಸುತ್ತದೆ ಎಂದು ಪ್ರತಿಪಾದಿಸುತ್ತಾರೆ. ಆದರೆ ಎರಡನೆಯ ಮಾದರಿಯಲ್ಲಿ ವರ್ಧನೆಯಾದ ವರಮಾನವನ್ನು ಪ್ರಜ್ಞಾಪೂರ್ವಕವಾಗಿ ಜನರ ಬದುಕಾಗಿ ಪರಿವರ್ತಿಸಿಕೊಳ್ಳಬೇಕಾಗುತ್ತದೆ. ವರಮಾನವು ತನ್ನಷ್ಟಕ್ಕೆ ತಾನೆ ಜನರ ಬದುಕಾಗಿ, ಜನರ ಅಕ್ಷರವಾಗಿ, ಜನರ ಆರೋಗ್ಯವಾಗಿ, ಜನರ ಆಹಾರವಾಗಿ ಪರಿವರ್ತನೆಯಾಗುವುದಿಲ್ಲ. ಈ ಪರಿವರ್ತನೆಯನ್ನು ಉದ್ದೇಶಪೂರ್ವಕವಾಗಿ ಸಾಧಿಸಿಕೊಳ್ಳ ಬೇಕಾಗುತ್ತದೆ.

೧೪. ಮೊದಲನೆಯದರಲ್ಲಿ ಅಭಿವೃದ್ಧಿಯನ್ನು ‘ಜಿಡಿಪಿ/ಜಿಎನ್‌ಪಿ’ ಮೂಲಕ ಅಳತೆ ಮಾಡಲಾಗುತ್ತದೆ. ಇದು ವರಮಾನವನ್ನು ಮಾತ್ರ ಒಳಗೊಂಡ ಸೂಚಿಯಾಗಿದೆ. ಆದರೆ ಎರಡನೆಯದರಲ್ಲಿ ಅಭಿವೃದ್ಧಿಯನ್ನು ‘ಎಚ್‌ಡಿಐ’ನಿಂದ ಅಳತೆ ಮಾಡಲಾಗುತ್ತದೆ. ಅದು ಆರೋಗ್ಯ, ಶಿಕ್ಷಣ ಮತ್ತು ವರಮಾನ – ಹೀಗೆ ಮೂರು ಸೂಚಿಗಳನ್ನು ಒಳಗೊಂಡ ಸಂಯುಕ್ತ ಸೂಚ್ಯಂಕವಾಗಿದೆ.