ಪ್ರಸ್ತಾವನೆ

ಒಂದು ನಾಡಿಗೆ ಸಂಬಂಧಿಸಿದಂತೆ ೫೦ ವರ್ಷವು ದೀರ್ಘಾವಧಿಯೂ ಅಲ್ಲಿ ಅಲ್ಪಾವಧಿಯೂ ಅಲ್ಲ. ಅದೊಂದು ಸಂಧಿಕಾಲ. ಸಾಮಾಜಿಕವಾಗಿ ದೀರ್ಘ ಮತ್ತು ಅಲ್ಪಕಾಲವೆಂಬ ಸಂಗತಿಗಳು ಸಾಪೇಕ್ಷ. ಕಾಲದ ಹರವಿನ ವರ್ಗೀಕರಣವು ಸಂದರ್ಭವನ್ನು ಅವಲಂಬಿಸಿಕೊಂಡಿರುತ್ತದೆ. ಕರ್ನಾಟಕದ ಸಂದಭ್ದಲ್ಲಿ ಕಳೆದ ೫೦ ವರ್ಷ ತುಂಬಾ ಮುಖ್ಯವಾದ ಕಾಲಘಟ್ಟವಾಗಿದೆ. ಏಕೆಂದರೆ ನಾಡು ಉದಯವಾದ ೧೯೫೬ರಲ್ಲಿ ನಮ್ಮ ಎದುರಿಗೆ ಯಾವ ಪ್ರಶ್ನೆಗಳಿದ್ದವೋ ಅದಕ್ಕಿಂತ ಭಿನ್ನವಾದ ಪ್ರಶ್ನೆಗಳು ಇಂದು ನಮ್ಮನ್ನು ಕಾಡುತ್ತಿವೆ. ಏಕೀಕರಣದ ಆಶಯವು ಇಂದು ಪ್ರಶ್ನೆಗೆ ಒಳಗಾಗುತ್ತಿದೆ. ಆದ್ದರಿಂದ ೫೦ ವರ್ಷಗಳು ನಾಡಿಗೆ ತುಂಬುತ್ತಿರುವ ಕಾಲಘಟ್ಟವು ತುಂಬಾ ಮುಖ್ಯವಾಗಿದೆ.

ಸಾಮಾನ್ಯವಾಗಿ ಇಂತಹ ಸಂದರ್ಭವನ್ನು ಸಂಭ್ರಮ – ವೈಭವದಿಂದ ಆಚರಿಸುವುದು ವಾಡಿಕೆಯಲ್ಲಿದೆ. ನಾಡಿನ ಸಿದ್ಧಿ – ಸಾಧನೆಗಳನ್ನು ಗುಡ್ಡೆ ಹಾಕುವ, ಹಾಡಿ – ಹೊಗಳವು ಪರಿ ಕಂಡುಬರುತ್ತದೆ. ಹಾರ – ತುರಾಯಿಗಳು ಮತ್ತು ಬಾಜಾ – ಭಜಂತ್ರಿಗಳು ಮೆರೆದಾಡುತ್ತವೆ. ಸನ್ಮಾನ – ಸಮಾವೇಶ, ಅಭಿನಂದನೆ – ಅಭಿವಂದನೆಗಳು ಸಾಕುಬೇಕೆನ್ನಿಸುವಷ್ಟಿರುತ್ತದೆ. ಇದು ಉತ್ಸವದ ಸ್ವರೂಪ.

ಇದಕ್ಕೆ ಭಿನ್ನವಾದ ಬಗೆಯೊಂದಿದೆ. ಈ ೫೦ ವರ್ಷಗಳ ಅಭಿವೃದ್ಧಿಯನ್ನು ಆತ್ಮವಲೋಕನದ ಪರಿಯಲ್ಲಿ ಪರಿಭಾವಿಸಿಕೊಳ್ಳುವ ಬಗೆ ಇದು. ನಾಡಿನ ಮುತ್ಸದ್ದಿಗಳಿಗೆ, ವಿದ್ವಾಂಸರಿಗೆ, ಸಾಹಿತಿಗಳಿಗೆ, ಸಾಮಾಜಿಕರಿಗೆ ಇದೊಂದು ಆತ್ಮ ನಿರೀಕ್ಷಣೆಯ ಸಂದರ್ಭ. ಉತ್ಸವ – ದಿಬ್ಬಣ – ಭಾವಾವೇಸಗಳು ಬೇಕು ನಿಜ. ಆದರೆ ಉತ್ತರದಾಯಿತ್ವದ ಬಗ್ಗೆಯೂ ಯೋಚಿಸುವ ಅಗತ್ಯವಿದೆ. ಮೊದಲನೆಯ ಬಗೆಯು ಸುಲಭದ ದಾರಿ. ಎರಡನೆಯದು ಕಷ್ಟದ ದಾರಿ. ನಮ್ಮನ್ನು ನಾವು ಎದುರಿಗಿಟ್ಟುಕೊಂಡು ಪರೀಕ್ಷೆಗೆ – ಮೌಲ್ಯಮಾಪನಕ್ಕೆ ಒಳಪಡಿಸಿಕೊಳ್ಳುವುದಿದೆಯಲ್ಲಾ ಅದು ತಿಳಿದುಕೊಂಡಿರುವಷ್ಟು ಸರಳವಾದ ಸಂಗತಿಯಲ್ಲ.

ಪ್ರಸ್ತುತ ಅಧ್ಯಯನ ಪ್ರಬಂಧದಲ್ಲಿ ಕರ್ನಾಟಕವು ಕಳೆದ ೫೦ ವರ್ಷಗಳ ಕಾಳಾವಧಿಯಲ್ಲಿ ಅನುಭವಿಸಿದ ಸೋಲು – ಗೆಲುವುಗಳು ಮತ್ತು ಎದುರಿಸಿದ ಏಳು – ಬೀಳುಗಳನ್ನು ಆತ್ಮಾವಲೋಕನ ಪರಿಯಲ್ಲಿ ಪರಿಶೀಲಿಸಲು ಪ್ರಯತ್ನಿಸಲಾಗಿದೆ. ಇಲ್ಲಿ ಅಂಕಿ – ಅಂಶಗಳೇ ನಿಕಷವಲ್ಲ. ಅವುಗಳ ಅಡಿಯಲ್ಲಿ ಪ್ರಚಛನ್ನವಾಗಿ ಅಡಗಿರುವ ರಾಜಕೀಯ – ಸಾಮಾಜಿಕ ಸಂಗತಿಗಳನ್ನು ಚರ್ಚೆಯ ಮುಂಚೂಣಿಗೆ ತರುವ ಉದ್ದೇಶವಿದೆ.

ಈ ಪ್ರಬಂಧವನ್ನು ರೂಪಿಸಿರುವ ಸೈದ್ಧಾಂತಿಕ ಸಂಗತಿಗಳನ್ನು ಇಲ್ಲಿ ಉಲ್ಲೇಖಿಸುವುದು ಅಗತ್ಯ. ಅಭಿವೃದ್ಧಿಯನ್ನು ಇಲ್ಲಿ ಅಖಂಡ ಪ್ರಕ್ರಿಯೆಯಾಗಿ ಪರಿಭಾವಿಸಿಕೊಂಡಿಲ್ಲ. ಆದ್ದರಿಂದ ಕರ್ನಾಟಕದ ಅಭಿವೃದ್ಧಿಯ ಖಂಡ ಸ್ವರೂಪಿ ನೆಲೆಗಳನ್ನು ಕುರಿತಂತೆ ಚರ್ಚಿಸಲಾಗಿದೆ. ಜಾತಿಭೇದದ ನೆಲೆಯಿಂದ ಅಭಿವೃದ್ಧಿಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಲಿಂಗ ಸಂಬಂಧಗಳ ಚೌಕಟ್ಟಿನಲ್ಲಿ ನಾಡಿನ ಅಭಿವೃದ್ಧಿಯನ್ನು ಇಲ್ಲಿ ಪೃಥಕ್ಕರಿಸಲಾಗಿದೆ. ಪ್ರಾದೇಶಿಕವಾಗಿ ಅಭಿವೃದ್ಧಿಯ ಹರವನ್ನು ಪರಾಮರ್ಶೆಗೆ ಒಳಪಡಿಸಲಾಗಿದೆ. ವರಮಾನ ವರ್ಧನೆ ಹಾಗೂ ಜನರ ಧಾರಣಶಕ್ತಿಯ ಸಂವರ್ಧನೆಗಳನ್ನು ಇಲ್ಲಿ ಮುಖಾಮುಖಿಯಾಗಿಸಲಾಗಿದೆ. ಕೃಷಿ, ಉದ್ದಿಮೆ, ಸಾರಿಗೆ, ವ್ಯಾಪಾರ, ವಾಣಿಜ್ಯ ಮುಂತಾದ ಸಂಗತಿಗಳು ಅಭಿವೃದ್ಧಿಗೆ ಎಷ್ಟು ಮುಖ್ಯವೋ ಅಷ್ಟೇ ಸಾಕ್ಷರತೆ, ಶಿಕ್ಷಣ, ಆರೋಗ್ಯ, ಆಹಾರ ಭದ್ರತೆ ಮುಂತಾದವುಗಳು ಮುಖ್ಯವೆಂದು ಇಲ್ಲಿ ಪ್ರತಿಪಾದಿಸಲಾಗಿದೆ. ಅಭಿವೃದ್ಧಿಯೆನ್ನುವುದು ಕೇವಲ ಬಂಡವಾಳಕ್ಕೆ ಸೀಮಿತವಾದ ಸಂಗತಿಯಲ್ಲ.

ಕಳೆದ ೫೦ ವರ್ಷಗಳ ಕಾಲಖಂಡದಲ್ಲಿ ಅಭಿವೃದ್ಧಿಯು ಮಹಿಳೆಯರು ಮತ್ತು ದಲಿತರನ್ನು ಒಳಗೊಂಡಂತೆ ಜನರಿಗೆ ಅಭಿಮುಖವಾಗಿದೆಯೋ ಅಥವಾ ವಿಮುಖವಾಗಿದೆಯೋ ಎಂಬುದನ್ನು ಇಲ್ಲಿ ಮುಖ್ಯ ಪ್ರಶ್ನೆಯನ್ನಾಗಿ ಪರಿಗಣಿಸಲಾಗಿದೆ.

ಅಭಿವೃದ್ಧಿಯು ಜನರಿಗೆ ಆಹಾರವಾಗಿ, ಆರೋಗ್ಯವಾಗಿ, ಆಶ್ರಯವಾಗಿ, ಅಕ್ಷರವಾಗಿ ಒದಗುತ್ತಿದೆಯೆ ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ. ಕರ್ನಾಟಕದ ೫.೨೭ ಕೋಟಿ ಜನರನ್ನು ಅಭಿವೃದ್ಧಿ ಒಳಗೊಂಡಿದೆಯೆ ಎಂಬ ಪ್ರಶ್ನೆ ಇಲ್ಲಿ ತುಂಬಾ ಮುಖ್ಯವಾಗುತ್ತದೆ.

ಪ್ರಸ್ತಾವನೆಯನ್ನು ಸೇರಿಸಿಕೊಂಡು ಐದು ಭಾಗಗಳಲ್ಲಿ ಪ್ರಸ್ತುತ ಪ್ರಬಂಧವನ್ನು ಕಟ್ಟಲಾಗಿದೆ. ಪ್ರಸ್ತಾವನೆ ನಂತರ ಬರುವ ಎರಡನೆಯ ಭಾಗದಲ್ಲಿ ಅಭಿವೃದ್ಧಿಯ ಎತ್ತರ – ಭಿತ್ತರಗಳನ್ನು ವಿವಿಧ ಮಾನದಂಡಗಳ ಮೂಲಕ ಗುರುತಿಸಲಾಗಿದೆ. ಅಂಕಿ – ಅಂಶಗಳು ೧೯೬೧ರಿಂದ ೨೦೦೧ ರ ಅವಧಿಗೆ ದೊರೆಯುತ್ತವೆ. ಈ ಕಾಲಘಟ್ಟಗಳಿಗೆ ಸಂಬಂಧಿಸಿದಂತೆ ಅಂಕಿ – ಅಂಶಗಳನ್ನು ಇಲ್ಲಿ ಬಳಸಲಾಗಿದೆ.

ಮೂರನೆಯ ಪ್ರಧಾನ ಭಾಗದಲ್ಲಿ ಅಭಿವೃದ್ಧಿಯ ಖಂಡರೂಪಿ ನೆಲೆಗಳನ್ನು ಜಾತಿಭೇದ, ಲಿಂಗ ಸಂಬಂಧಗಳು ಮತ್ತು ಪ್ರಾದೇಶಿಕ ವಿಸ್ತೃತತೆ ಚೌಕಟ್ಟಿನಲ್ಲಿ ವಿಶ್ಲೇಷಿಸಲಾಗಿದೆ. ನಾಲ್ಕನೆಯ ಭಾಗದಲ್ಲಿ ‘ಸ್ವಾತಂತ್ರ್ಯವಾಗಿ ಅಭಿವೃದ್ಧಿ’ ಎಂಬ ಅಮರ್ತ್ಯಸೆನ್ ಅವರ ವಿಚಾರಗಳನ್ನು ಕರ್ನಾಟಕಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಗಿದೆ.

ಕೊನೆಯ ಭಾಗದಲ್ಲಿ ಅಧ್ಯಯನದ ಸಾರಾಂಶವನ್ನು ನೀಡುವುದರ ಜೊತೆಗೆ ಕರ್ನಾಟಕದ ಅಭಿವೃದ್ಧಿಯ ಪಥ ಮುಂದಿನ ವರ್ಷಗಳಲ್ಲಿ ಯಾವುದಿರಬಹುದು ಎಂಬುದನ್ನು ಹಾಗೂ ನಾಡ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಬೇಕು ಎಂಬ ಸಂಗತಿಯನ್ನು ನೀಡಲಾಗಿದೆ.

ಭಾಗ
ಅಭಿವೃದ್ಧಿಯ ಚಾಚು ಮತ್ತು ಹರವು

ಪ್ರಸ್ತುತ ಭಾಗದಲ್ಲಿ ಕರ್ನಾಟಕವು ಕಳೆದ ೫೦ ವರ್ಷಗಳಲ್ಲಿ ಸಾಧಿಸಿಕೊಂಡಿರುವ ಅಭಿವೃದ್ಧಿಯ ಎತ್ತರ – ಬಿತ್ತರಗಳನ್ನು ಹಿಡಿದಿಡಲು ಪ್ರಯತ್ನಿಸಲಾಗಿದೆ. ತಮಿಳುನಾಡು ಮತ್ತು ಕೇರಳ ರಾಜ್ಯಗಳು ಸಾಧಿಸಿಕೊಂಡಿರುವ ಅಭಿವೃದ್ಧಿಯಲ್ಲಿ ಸಮಾಜ ವಿಜ್ಞಾನಿಗಳು ‘ಮಾದರಿ’ಯನ್ನು ಕಂಡುಕೊಂಡಿದ್ದಾರೆ.

ಕರ್ನಾಟಕವು ಸಾಧಿಸಿಕೊಂಡಿರುವ ಅಭಿವೃದ್ಧಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅಲ್ಲಿ ನಮಗೆ ‘ಮಾದರಿ’ಯೊಂದು ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕವನ್ನು ‘ಮಧ್ಯಮಗತಿ ಸಮಾಜ’ವೆಂದೂ, ‘ಮಧ್ಯಗತಿ ಆರ್ಥಿಕತೆ’ಯೆಂದೂ ವಿವರಿಸಬಹುದಾಗಿದೆ. ಪ್ರಖ್ಯಾತ ಸಮಾಜಶಾಸ್ತ್ರಜ್ಞ ಎಂ.ಎನ್. ಶ್ರೀನಿವಸ್, ಕರ್ನಾಟಕ ಅಧ್ಯಯನದಲ್ಲಿ ಕಳೆದ ಮೂರ‍್ನಾಕು ದಶಕಗಳಿಂದ ತೊಡಗಿರುವ ಕರ್ನಾಟಕ ತಜ್ಞ ಜೇಮ್ಸ್‌ಮೇನರ್, ವಿನೋದ್‌ ವ್ಯಾಸುಲು ಮತ್ತು ಆರ್.ಎಲ್.ಎಮ್. ಪಾಟೀಲ್ ಮುಂತಾದವರು ಕರ್ನಾಟಕವನ್ನು ಮಧ್ಯಮಗತಿ ಸಮಾಜವೆಂದು ಕರೆದಿದ್ದಾರೆ. ಈ ಮಧ್ಯಮಗತಿ ಸಮಾಜವೆಂದು ಕರೆದಿದ್ದಾರೆ. ಈ ಮಧ್ಯಮ ಗತಿಯು ಆರ್ಥಿಕತೆ ಮತ್ತು ರಾಜಕಾರಣಕ್ಕೂ ಅನ್ವಯವಾಗುವ ಸಂಗತಿಯಾಗಿದೆ.

ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ (ಬಿಮಾರು) ರಾಜ್ಯಗಳಂತೆ ಕರ್ನಾಟಕವು ದುಸ್ಥಿತಿಯನ್ನು ಎದುರಿಸುತ್ತಿಲ್ಲ. ಹಾಗೆಯೇ ಪಂಜಾಬ್, ಹರಿಯಾಣ, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಂತೆ ಅಭಿವೃದ್ಧಿಯು ಔನ್ನತ್ಯವನ್ನು ಮೆರೆಯುತ್ತಿಲ್ಲ. ಇವೆರಡೂ ಗುಂಪುಗಳ ಅಭಿವೃದ್ಧಿಯ ಅನುಭವಗಳಿಗಿಂತ ಕರ್ನಾಟಕದ ಅಭಿವೃದ್ಧಿ ಸ್ವರೂಪ ಭಿನ್ನವಾಗಿದೆ. ರಾಜ್ಯದ ಅಭಿವೃದ್ಧಿಯ ಸ್ವರೂಪದಲ್ಲಿ ಅದ್ಭುತವಾದುದೇನಲ್ಲ. ಅದೇ ರೀತಿ ಅದರ ಸಾಧನೆಯು ಅಲ್ಲಗಳೆಯುವಂತಹದ್ದೇನಲ್ಲ. ಉಗ್ರ, ತೀವ್ರ ಎಂಬ ವಿಶೇಷಣಗಳನ್ನು ಇಲ್ಲಿ ಬಳಸಲು ಅವಕಾಶವಿಲ್ಲ. ಅದೇ ರೀತಿ ಅದನ್ನು ಯಥಾಸ್ಥಿತಿವಾದಿಯೆಂದೂ ಹೇಳಲು ಸಾಧ್ಯವಿಲ್ಲ. ನಮ್ಮ ಸಮಾಜ, ಆರ್ಥಿಕತೆ, ರಾಜಕಾರಣದ ಮೂಲಗುಣವೆಂದರೆ ಬದಲಾವಣೆ – ಅಭಿವೃದ್ಧಿಗಳನ್ನು ಸಾವಕಾಶವಾಗಿ ಮತ್ತು ಸತತವಾಗಿ ಧಾರಣೆ ಮಾಡಿಕೊಳ್ಳುವಂತಹದ್ದಾಗಿದೆ.

ಕೃಷಿಯಲ್ಲಿ ತಮಿಳುನಾಡು, ಆಂಧ್ರ, ಪಂಜಾಬುಗಳಂತೆ ಕರ್ನಾಟಕವು ತೀವ್ರಗತಿಯ ‘ಹಸಿರುಕ್ರಾಂತಿ’ಯನ್ನೇನು ಸಾಧಿಸಿಕೊಂಡಿಲ್ಲ. ಆದರೆ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು ಬೆಂಬಲದಿಂದ ಹಾಗೂ ಜನರ ಕರ್ತೃತ್ವ ಶಕ್ತಿಯಿಂದ ಒಣಭೂಮಿ ಬೇಸಾಯದಲ್ಲಿ ಕರ್ನಾಟಕವು ಸಾಕಷ್ಟು ಅಭಿವೃದ್ಧಿ ಸಾಧಿಸಿಕೊಂಡಿದೆ.

ಇಂದಿಗೂ ರಾಜ್ಯವು ಉದಯವಾಗಿ ೫೦ ವರ್ಷಗಳ ನಂತರವೂ ನೀರಾವರಿ ಪ್ರದೇಶದ ಪ್ರಮಾಣ ಶೇ. ೭೦ರಷ್ಟು ಒಣಬೇಸಾಯವಿದೆ. ರಾಷ್ಟ್ರದಲ್ಲಿ ಒಣಬೇಸಾಯದ ವಿಸ್ತೀರ್ಣದಲ್ಲಿ ಮೂರನೆಯ ಸ್ಥಾನದಲ್ಲಿ ರಾಜ್ಯವಿದೆ. ಈ ಎಲ್ಲ ಇತಿಮಿತಿಗಳನಡುವೆ ಅದು ಆಹಾರದಲ್ಲಿ ಸ್ವಾವಲಂಬಿಯಾಗಿದೆ. ಸತತವಾಗಿ ಮೂರು – ನಾಲ್ಕು ವರ್ಷಗಳು ಸಂಭವಿಸಿದ ಬರಗಾಲವನ್ನು ಸಮರ್ಥವಾಗಿ ರಾಜ್ಯ ಎದುರಿಸಿದೆ. ಕೃಷಿಗೆ ಸಂಬಂಧಿಸಿದಂತೆ ಕರ್ನಾಟಕದ ಸಾಧನೆಯು ನಿಜಕ್ಕೂ ಅದ್ಭುತವಾದುದು. ಇದರ ಕೀರ್ತಿ ನಾಡಿನ ಸರಿಸುಮಾರು ೧೩೦ ಲಕ್ಷ ಕೃಷಿ ದುಡಿಮೆಗಾರರಿಗೆ ಸಲ್ಲಬೇಕು.

ಉದ್ದಿಮೆಗಳಿಗೆ ಸಂಬಂಧಿಸಿದಂತೆ ಒಂದು ಕಾಲಕ್ಕೆ ರಾಷ್ಟ್ರದಲ್ಲಿ ರಾಜ್ಯಕ್ಕೆ ಉನ್ನತ ಸ್ಥಾನವಿತ್ತು. ರಾಜ್ಯದ ಉದ್ದಿಮೆ ವಲಯದ ಬೆಳವಣಿಗೆಯು ಸರಿಸುಮಾರು ೧೯೮೫ರಿಂದೀಚೆಗೆ ಸ್ಥಗಿತ ಗತಿಯಲ್ಲಿ ನಡೆದಿದೆ. ಅದನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರರ ಪ್ರಮಾಣ ಹಾಗೂ ಅದರಿಂದ ಪ್ರಾಪ್ತವಾಗುತ್ತಿರುವ ಉತ್ಪತ್ತಿ ಪ್ರಮಾಣವು ಕಳೆದ ೨೦ ವರ್ಷಗಳಿಂದ ಸ್ಥಿರವಾಗಿ ಬಿಟ್ಟಿದೆ. ಇದೀಗ ತೃತೀಯ ವಲಯದ ಸೇವಾ ಚಟುವಟಿಕೆಗಳು ಅಸ್ಟೋಟಕಾರಿ ಗತಿಯಲ್ಲಿ ಬೆಳೆಯುತ್ತಿವೆ. ಮಾಹಿತಿ ತಂತ್ರಜ್ಞಾನ, ಜೈವಿಕ ವಿಜ್ಞಾನ, ವಿದ್ಯುನ್ಮಾನ ಮಾಧ್ಯಮ ಮುಂತಾದ ಸೇವಾ ಚಟುವಟಿಕೆಗಳಲ್ಲಿ ನಾಗಾಲೋಟದ ಪ್ರಗತಿ ಕಂಡುಬಂದಿದೆ.

ಅಭಿವೃದ್ಧಿಯ ಸೀಮಿತ ವ್ಯಾಪ್ತಿ

ಕೊಲಿನ್ ಕ್ಲಾರ್ಕ್‌, ಸೈಮನ್ ಕುಜ್ನೆಟ್ಸ್ ಮುಂತಾದ ತಜ್ಞರು ಅಭಿವೃದ್ಧಿಯನ್ನು ವರಮಾನ ಹಾಗೂ ದುಡಿಮೆಗಾರರ ವಲಯವಾರು ಸಂರಚನೆಯಲ್ಲಿ ಉಂಟಾಗುವ ಬದಲಾವಣೆಗಳಲ್ಲಿ ಪರಿಭಾವಿಸಿಕೊಳ್ಳುತ್ತಾರೆ. ಮೂರು ವಲಯಗಳ ನಡುವೆ ರಾಜ್ಯದ ವರಮಾನ ಹಾಗೂ ದುಡಿಮೆಗಾರರ ಹಂಚಿಕೆಯ ಸಾಪೇಕ್ಷ ಪ್ರಮಾನಗಳಲ್ಲಿನ ಬದಲಾವಣೆಯಲ್ಲಿ ಅಭಿವೃದ್ಧಿಯನ್ನು ಗುರುತಿಸಲಾಗುತ್ತದೆ. ಪ್ರಾಥಮಿಕ ವಲಯದಿಂದ ಪ್ರಾಪ್ತವಾಗುವ ವರಮಾನದ ಪ್ರಮಾಣ ಹಾಗೂ ಅದನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರರ ಪ್ರಮಾಣವು ಕಡಿಮೆಯಾಗುತ್ತಾ ನಡೆದು ದ್ವಿತೀಯ ವಲಯ, ತದನಂತರ ತೃತೀಯ ವಲಯಗಳು ಕ್ರಮವಾಗಿ ಪ್ರಾಧಾನ್ಯತೆ ಪಡೆಯುವ ಕ್ರಮವನ್ನು ಅಭಿವೃದ್ಧಿಯೆಂದು ಹೇಳಬಹುದು. ಕರ್ನಾಟಕ ರಾಜ್ಯದ ರಾಚನಿಕ ಸ್ವರೂಪದಲ್ಲಿ ಉಂಟಾದ ಬದಲಾವಣೆಗಳನ್ನು ಕೋಷ್ಟಕ – ೧ರಲ್ಲಿ ತೋರಿಸಲಾಗಿದೆ. ಇದು ಅನೇಕ ದೃಷ್ಟಿಯಿಂದ ಕುತೂಹಲಕಾರಿಯಾಗಿದೆ. ವರಮಾನದ ರಚನೆಯಲ್ಲಿ ಅರ್ಥಶಾಸ್ತ್ರರು ಸೈದ್ಧಾಂತಿಕವಾಗಿ ಏನನ್ನು ನಿರೀಕ್ಷಿಸುತ್ತಿದ್ದಾರೋ ಅಂತಹ ಬದಲಾವಣೆ ಕಳೆದ ೫೦ ವರ್ಷಗಳ ಕಾಲಾವಧಿಯಲ್ಲಿ ಉಂಟಾಗಿದೆ. ಪ್ರಾಥಮಿಕ ವಲಯ (ಪ್ರಾ.ವ.)ದಿಂದ ಪ್ರಾಪ್ತವಾಗುವ ವರಮಾನದ ಪ್ರಮಾಣವು ೧೯೬೦ – ೬೧ರಲ್ಲಿ ಶೇ. ೬೭.೫೬ ರಷ್ಟಿದ್ದುದು ೨೦೦೦ – ೦೧ ರಲ್ಲಿ ಶೇ. ೨೭.೯೭ಕ್ಕೆ ಇಳಿದಿದೆ. ತೃತೀಯ ವಲಯದ ಕಾಣಿಕೆಯು ಇದೇ ಅವಧಿಯಲ್ಲಿ ಶೇ. ೨೬.೦೮ ಶೇ. ೪೯.೯೧ ಕ್ಕೆ ಏರಿಕೆಯಾಗಿದೆ. ಇದು ಅಭಿವೃದ್ಧಿ. ಅದು ಸಮೀಕರಣವಾದಿ ನಿಯಮಕ್ಕೆ ಅನುಗುಣವಾಗಿ ನಡೆದಿದೆ. ಕುತೂಹಲದ ಸಂಗತಿಯೆಂದರೆ ಇಂತಹ ಬದಲಾವಣೆಯು ದುಡಿಮೆಗಾರರ ಸಂರಚನೆಯಲ್ಲಿ ಉಂಟಾಗಿಲ್ಲ. ಇಂದಿಗೂ ಕನಾðಟಕವು ದುಡಿಮೆಗಾರರ ಅವಲಂಬನೆ ದೃಷ್ಟಿಯಿಂದ ಪ್ರಾಥಮಿಕ ವಲಯ ಪ್ರಧಾನ ಆರ್ಥಿಕತೆಯಾಗಿದೆ. ರಾಜ್ಯದಲ್ಲಿ ಒಟ್ಟು ದುಡಿಮೆಗಾರರಲ್ಲಿ ಶೇ. ೭೫ರಷ್ಟು ಮಂದಿ ೧೯೬೧ರಲ್ಲಿ ಪ್ರಾಥಮಿಕ ವಲಯವನ್ನು ಅವಲಂಬಿಸಿಕೊಂಡಿದ್ದರು. ಅವರ ಪ್ರಮಾಣ ೧೯೯೧ ರಲ್ಲಿ ಶೇ. ೬೭ ಕ್ಕೆ ಇಳಿದಿದೆ. ತೃತೀಯ ವಲಯವನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರರ ಪ್ರಮಾಣವು ಇದೇ ಅವಧಿಯಲ್ಲಿ ಶೇ. ೧೪.೧೩ರಿಂದ ಶೇ. ೨೧.೯೩ ಕ್ಕೆ ಏರಿದೆ. ವರಮಾನಕ್ಕೆ ಸಂಬಂಧಿಸಿದಂತೆ ರಾಚನಿಕ ಬದಲಾವಣೆ ನಡೆದಿದೆ. ಆದರೆ ದುಡಿಮೆಗಾರರಿಗೆ ಸಂಬಂಧಿಸಿದಂತೆ ಬದಲಾವಣೆ ತುಂಬಾ ಮಂದಗತಿಯಲ್ಲಿ ನಡೆದಿದೆ. ಪ್ರಾಥಮಿಕ ವಲಯದಲ್ಲಿ ಉತ್ಪತ್ತಿಯಾಗುವ ವರಮಾನದ ಪ್ರಮಾಣ ಕಡಿಮೆಯಾಗಿದೆ. ಆದರೆ ಅದನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರರ ಪ್ರಮಾನವು ಇನ್ನೂ ಅಗಾಧವಾಗಿದೆ. ಇದರಿಂದ ಉಂಟಾಗಿರುವ ವಿಕೃತಿಯನ್ನು ಗುರುತಿಸುವ ಅಗತ್ಯವಿದೆ. ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಬಹುಮುಖ್ಯ ವಿಕೃತಿಯನ್ನು ಕುರಿತಂತೆ ಚರ್ಚಿಸುವುದು ಅಪೇಕ್ಷಣೀಯ.

ವರಮಾನ ಮತ್ತು ದುಡಿಮೆಗಾರರ ರಾಚನಿಕ ಸ್ವರೂಪ : ಕರ್ನಾಟಕ

ಕೋಷ್ಟಕ      (ಶೇಕಡ)

ವಲಯಗಳು ೧೯೬೦/೧ ೧೯೭೦/೧ ೧೯೮೦/೧ ೧೯೯೦/೯೧ ೨೦೦೦/೦೧
ಪ್ರಾಥಮಿಕ (ವ) ೬೧.೫೬ ೫೨.೭೨ ೪೫.೮೧ ೩೪.೯೫ ೨೭.೯೭
ವಲಯ (ದು) ೭೫.೧೪ ೭೧.೩೪ ೭೧.೦೮ ೬೭.೩೭
ದ್ವಿತೀಯ (ವ) ೧೨.೩೬ ೨೦.೭೩ ೨೧.೧೨ ೨೫.೨೮ ೨೫.೦೬
ವಲಯ (ದು) ೧೦.೭೩ ೧೧.೯೯ ೧೩.೫೨ ೧೦.೭೦
ತೃತೀಯ (ವ) ೨೬.೦೮ ೨೬.೫೫ ೩೩.೦೭ ೩೯.೭೭ ೪೯.೯೭
ವಲಯ (ದು) ೧೪.೧೩ ೧೬.೬೭ ೧೫.೪೦ ೨೧.೯೩

ಆಕರ :  . ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಬೆಂಗಳೂರು ವಿವಿಧ ವರ್ಷದ ಪ್ರಕಟಣೆಗಳು.
. ಜನಗಣತಿ ವರದಿಗಳು (ವಿವಿಧ ವರ್ಷದ ವರದಿಗಳು) = ರಾಜ್ಯ ನಿವ್ವಳ ದೇಶೀಯ ಉತ್ಪನ್ನ. ದು = ದುಡಿಮೆಗಾರರು.

ಆರೋಹಣವಾದಿ ಅಸಮಾನತೆ

ಜೆನ್‌ಬ್ರಮೆನ್‌ರ ಪರಿಭಾಷೆಯಲ್ಲಿ ಹೇಳುವುದಾದರೆ ಕರ್ನಾಟಕದ ಅಭಿವೃದ್ಧಿಯು ಆರೋಹಣವಾದಿ ಅಸಮಾನತೆಯನ್ನು ಅನುಭವಿಸುತ್ತಿದೆ. ನಾಡು ಉದಯವಾದ ಸಂದರ್ಭದಲ್ಲಿ ಒಟ್ಟು ದುಡಿಮೆಗಾರರಲ್ಲಿ ಶೇ. ೭೫ ರಷ್ಟು ಮಂದಿ ರಾಜ್ಯದ ವರಮಾನದ ಶೇ. ೬೧.೫೬ ರಷ್ಟನ್ನು ಅನುಭವಿಸುತ್ತಿದ್ದರು. ಆದರೆ ಇಂದು ಶೇ. ೬೭ ರಷ್ಟು ದುಡಿಮೆ ಗಾರರು ಕೇವಲ ಶೇ. ೩೫ ರಷ್ಟು ವರಮಾನವನ್ನು ಪಡೆಯುತ್ತಿದ್ದಾರೆ. ಇದಕ್ಕೆ ಪ್ರತಿಯಾಗ ತೃತೀಯ ವಲಯದಲ್ಲಿ ೧೯೬೧ ರಲ್ಲಿ ಒಟ್ಟು ದುಡಿಮೆಗಾರರಲ್ಲಿ ಶೇ. ೧೪ ರಷ್ಟು ಮಂದಿ ರಾಜ್ಯದ ಒಟ್ಟು ವರಮಾನದ ಶೇ. ೨೬ ರಷ್ಟು ದುಡಿಮೆಗಾರರು ರಾಜ್ಯದ ವರಮಾನದ ಶೇ. ೪೦ ರಷ್ಟನ್ನು ನುಂಗಿ ನೊನೆಯುತ್ತಿದ್ದಾರೆ. ಪಿರಮಿಡ್ಡಿನೋಪಾದಿಯಲ್ಲಿರುವ ಸಾಮಾಜಿಕ ರಚನೆಯ ತುದಿಯಲ್ಲಿರುವ ಜನರ ವರಮಾನವು ಯಾವ ಗತಿಯಲ್ಲಿ ಬೆಳೆಯುತ್ತಿದೆಯೋ ಅದೇ ವೇಗದಲ್ಲಿ ಸಾಮಾಜಿಕ ರಚನೆಯ ಅಡಿಪಾಯದಲ್ಲಿರುವ ಜನರ ಬಡತನವು ಕಡಿಮೆಯಾಗುತ್ತಿಲ್ಲ. ಇದನ್ನು ಜೆನ್‌ಬ್ರಮೆನ್‌‘ಆರೋಹಣ ವಾದಿ ಅಸಮಾನತೆ’ ಎಂದು ಕರೆದಿದ್ದಾರೆ.

ಪ್ರಾಥಮಿಕ ವಲಯದಲ್ಲಿ ತಲಾ ಉತ್ಪನ್ನದ ಪ್ರಮಾಣವು ಅತ್ಯಂತ ಕೆಳಮಟ್ಟದಲ್ಲಿರುತ್ತದೆ. ಕಾರಣಗಳನ್ನು ವಿವರಿಸುವ ಅಗತ್ಯವಿಲ್ಲ. ಈ ವಲಯದಲ್ಲಿ ವರಮಾನದ ಗಾತ್ರ ಕಡಿಮೆ. ಆದರೆ ಅದನ್ನು ಹಂಚಿಕೊಳ್ಳಬೇಕಾದವರ ಸಂಖ್ಯೆ ಅಗಾಧ. ಸಹಜವಾಗಿ ತಲಾ ಉತ್ಪನ್ನ ಕೆಳಮಟ್ಟದಲ್ಲಿರುತ್ತದೆ. ಆದರೆ ತೃತೀಯ ವಲಯದಲ್ಲಿ ಪ್ರಾಪ್ತವಾಗುವ ವರಮಾನದ ಗಾತ್ರ ಬೃಹತ್ತಾಗಿರುತ್ತದೆ. ಅದನ್ನು ಹಂಚಿಕೊಳ್ಳಬೇಕಾದ ದುಡಿಮೆಗಾರರ ಸಂಖ್ಯೆ ಕಡಿಮೆಯಿರುತ್ತದೆ. ಇದರಿಂದಾಗಿ ಇಲ್ಲಿ ತಲಾ ಉತ್ಪನ್ನವು ಉನ್ನತ ಮಟ್ಟದಲ್ಲಿರುತ್ತದೆ.

ಈ ಬಗೆಯ ರಾಚನಿಕ ವಿಕೃತಿಯ ಮೂಲದಲ್ಲಿರುವ ಇನ್ನೊಂದು ಕುತೂಹಲಕಾರಿ ಸಂಗತಿಯನ್ನು ಪ್ರಸ್ತಾಪಿಸಬೇಕಾಗುತ್ತದೆ. ಪ್ರಾಥಮಿಕ ವಲಯವನ್ನು ಅವಲಂಬಿಸಿ ಕೊಂಡಿರುವ ದುಡಿಮೆಗಾರರಲ್ಲಿ ಸಾಪೇಕ್ಷವಾಗಿ ಪ.ಜಾ, ಪ.ಪಂ.ಗಳಿಗೆ ಸೇರಿದವರ ಪ್ರಮಾಣ ಅಧಿಕವಾಗಿರುತ್ತದೆ. ಹಿಂದುಳಿದ ಪ್ರದೇಶಕ್ಕೆ ಸೇರಿದ ದುಡಿಮೆಗಾರರ ಪ್ರಮಾಣವು ಸಾಪೇಕ್ಷವಾಗಿ ಅಧಿಕವಾಗಿರುತ್ತದೆ. ಲಿಂಗ ದೃಷ್ಟಿಯಿಂದ ಇಲ್ಲಿ ಮಹಿಳೆಯರ ಪ್ರಮಾಣವು ಸಾಕಷ್ಟಿರುತ್ತದೆ.

ಜಾತಿ, ವರ್ಗ, ಲಿಂಗ ಮತ್ತು ಪ್ರದೇಶದ ದೃಷ್ಟಿಯಿಂದ ಯಾರು ವಂಚಿತರಾಗಿದ್ದಾರೋ, ಯಾರು ಸಮಾಜದ ಅಂಚಿನಲ್ಲಿದ್ದಾರೋ, ಯಾರೂ ಅಧೀನ ಸ್ಥಿತಿಯಲ್ಲಿದ್ದಾರೋ ಅವರು ಹೆಚ್ಚಿನ ಪ್ರಮಾಣದಲ್ಲಿ ಪ್ರಾಥಮಿಕ ವಲಯವನ್ನು ಅವಲಂಬಿಸಿ ಕೊಂಡಿರುವ ಸ್ಥಿತಿಯಿದೆ. ಉದಾಹರಣೆಗೆ ೧೯೯೧ ರಲ್ಲಿ ರಾಜ್ಯದ ಪ್ರಾಥಮಿಕ ವಲಯದಲ್ಲಿದ್ದ ಒಟ್ಟು ದುಡಿಮೆಗಾರರ ಸಂಖ್ಯೆ ೧೧೬.೪೮ ಲಕ್ಷ. ರಾಜ್ಯದ ಒಟ್ಟು ದುಡಿಮೆಗಾರರಲ್ಲಿ ಪ.ಜಾ. ಮತ್ತು ಪ.ಪಂ.ಗಳಿಗೆ ಸೇರಿದ ದುಡಿಮೆಗಾರರ ಪ್ರಮಾಣ ಶೇ. ೨೨.೪೬. ಆದರೆ ಪ್ರಾಥಮಿಕ ವಲಯದಲ್ಲಿನ ದುಡಿಮೆಗಾರರಲ್ಲಿ ಇವರ ಪ್ರಮಾಣ ಶೇ. ೨೬.೭೩ ರಾಜ್ಯದ ಒಟ್ಟು ದುಡಿಮೆಗಾರರಲ್ಲಿ ಹೈದರಾಬಾದ್ – ಕರ್ನಾಟಕ ಪ್ರದೇಶದ ದುಡಿಮೆಗಾರರ ಪ್ರಮಾಣ ಶೇ. ೧೯. ಆದರೆ ಪ್ರಾಥಮಿಕ ವಲಯದಲ್ಲಿರುವ ದುಡಿಮೆಗಾರರಲ್ಲಿ ಹೈದರಾಬಾದ್ – ಕರ್ನಾಟಕ ಪ್ರದೇಶದ ದುಡಿಮೆಗಾರರ ಪ್ರಮಾಣ ಶೇ. ೨೨.೫೬. ರಾಜ್ಯದ ಒಟ್ಟು ದುಡಿಮೆಗಾರರಲ್ಲಿ ಮಹಿಳೆಯರ ಪ್ರಮಾಣ ಕೇವ. ಶೇ. ೨೮.೯೫. ಆದರೆ ಪ್ರಾಥಮಿಕ ವಲಯದ ದುಡಿಮೆಗಾರರಲ್ಲಿ ಮಹಿಳೆಯರ ಪ್ರಮಾಣ ಶೇ. ೩೩.೯೦. ಇದರ ತಥ್ಯ ಇಷ್ಟು. ಪ್ರಾಥಮಿಕ ವಲಯದ ಒಟ್ಟು ದುಡಿಮೆ ಗಾರರಲ್ಲಿ ವಂಚಿತರ, ದಲಿತರ, ಮಹಿಳೆಯರ, ಅಂಚಿನಲ್ಲಿರುವವರ ಪ್ರಮಾಣ ಅಧಿಕವಾಗಿದೆ. ತೃತೀಯ ವಲಯದಲ್ಲಿ ಉಳ್ಳವರ ಪ್ರಮಾಣ ಅಧಿಕವಾಗಿದೆ. ಉನ್ನತ ಜಾತಿಗಳ ಪ್ರಾತಿನಿಧ್ಯ ಪ್ರಧಾನವಾಗಿದೆ. ಅದು ಪುರುಷಶಾಹಿಯಿಂದ ಮೆರೆಯುತ್ತಿದೆ.

ಕಳೆದ ೫೦ ವರ್ಷಗಳಲ್ಲಿ ಕರ್ನಾಟಕವು ಅನುಭವಿಸಿದ ಮಧ್ಯಮಗತಿ ಅಭಿವೃದ್ಧಿಯು ಸಮಾಜದಲ್ಲಿ ಬೇರು ಬಿಟ್ಟಿರುವ ಸಾಮಾಜಿಕ ಅಸಮಾನತೆಯನ್ನು ಊರ್ಜಿತಗೊಳಿಸುವಂತೆ ಕಾಣುತ್ತಿದೆ. ಸಮಸ್ಯೆಗಳನ್ನು ಅಭಿವೃದ್ಧಿಯ ನೆಲೆಯಿಂದ ನೋಡಲಾಗುತ್ತಿದೆಯೆ ವಿನಾ ದುಸ್ಥಿತಿಯ ನೆಲೆಯಿಂದ ನೋಡುತ್ತಿಲ್ಲ. ಸಮಾಜದ ಅಂಚಿನಲ್ಲಿರುವ ವಂಚಿತರ ನೆಲೆಯಿಂದ ಅಭಿವೃದ್ಧಿಯನ್ನು ಪರಿಭಾವಿಸಿಕೊಳ್ಳುವ ಪ್ರಯತ್ನ ಕಾಣುತ್ತಿಲ್ಲ. ದಲಿತರನ್ನು, ಮಹಿಳೆಯರನ್ನು, ಹಿಂದುಳಿದ ವರ್ಗವನ್ನು ಎಲ್ಲಿಯವರೆಗೆ ಫಲಾನುಭವಿಗಳು – ಪರಾವಲಂಬಿಗಳೆಂದು ಪರಿಗಣಿಸಲಾಗುತ್ತದೋ ಮತ್ತು ಅವರನ್ನು ಎಲ್ಲಿಯವರೆಗೆ ಅಭಿವೃದ್ಧಿಯ ಕರ್ತೃಗಳೆಂದು ಪರಿಗಣಿಸಲಾಗುವುದಿಲ್ಲವೋ ಅಲ್ಲಿಯವರೆಗೆ ನಾಡು ಅಭಿವೃದ್ಧಿಯಾಗುತ್ತಿರುತ್ತದೆ. ಆದರೆ ಮಹಿಳೆಯರು, ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರನ್ನು ಒಳಗೊಂಡ ನಾಡವರು ದುಸ್ಥಿತಿಯಿಂದ ನರಳುತ್ತಿರುತ್ತಾರೆ.

ಭಾಗ
ಅಭಿವೃದ್ಧಿಯ
ಖಂಡರೂಪಿ ದರ್ಶನ

ಅರ್ಥಶಾಸ್ತ್ರದಲ್ಲಿ ಅಭಿವೃದ್ಧಿಯನ್ನು ಅಖಂಡ ಪ್ರಕ್ರಿಯೆಯಾಗಿ ಪರಿಭಾವಿಸಿಕೊಂಡು ಬರಲಾಗಿದೆ. ಇವತ್ತಿಗೂ ಅದೇ ನಂಬಿಕೆ ಮುಂದುವರಿದಿದೆ. ಅಭಿವೃದ್ಧಿಯೆನ್ನುವುದು, ಅಂದರೆ ವರಮಾನ, ಉತ್ಪನ್ನದ ವರ್ಧನೆಯು ತನ್ನಷ್ಟಕ್ಕೆ ತಾನೆ ಸಮಾಜದಲ್ಲಿ ಎಲ್ಲರನ್ನೂ ಒಳಗೊಳ್ಳುತ್ತದೆ ಎಂದು ಭಾವಿಸಲಾಗಿದೆ. ಆದ್ದರಿಂದ ಅಭಿವೃದ್ಧಿಯೆಂದರೆ ಜನರ ಕಲ್ಯಾಣವೆಂದರೆ ವರಮಾನದ ವರ್ಧನೆ. ಅದು ಜಾತಿ, ವರ್ಗ, ಲಿಂಗ ಮತ್ತು ಪ್ರದೇಶ ಸಂಬಂಧಿ ತಾರತಮ್ಯ ಮಾಡುವುದಿಲ್ಲವೆಂದು ಪ್ರತಿಪಾದಿಸಲಾಗಿದೆ. ಒಂದು ವೇಳೆ ತಾರತಮ್ಯಗಳು ಕಂಡುಬಂದರೆ ಅವು ತಾತ್ಪೂರ್ತಿಕವಾದ ವಿಕಾರಗಳು ಅಂತಿಮವಾಗಿ ಅವು ಎಲ್ಲರನ್ನೂ ತಲುಪುತ್ತವೆ ಮತ್ತು ಅದು ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತದೆ ಎಂದು ನಂಬಲಾಗಿದೆ. ಎಲ್ಲರನ್ನು ಒಳಗೊಳ್ಳುವ ಪ್ರಕ್ರಿಯೆಯು ಕೇವಲ ಕಾಲಕ್ಕೆ ಸಂಬಂಧಿಸಿದ ಸಂಗತಿಯಾಗಿದೆ. ಇದನ್ನು ಅರ್ಥವಿಜ್ಞಾನಿಗಳು ‘ಟ್ರಿಕಲ್ ಡೌನ್ ಥಿಯರಿ’ ಎಂದು ಕರೆದಿದ್ದಾರೆ. ಹರ್ಬಟ್‌ಸೈನ್ಸ್‌ರ್‌ನ ಸಾಮಾಜಿಕ ಡಾರ್ವಿನ್‌‌ವಾದವನ್ನು ಆಧರಿಸಿ ಅಭಿವೃದ್ಧಿ ಸಿದ್ಧಾಂತಗಳನ್ನು ಕಟ್ಟಿಕೊಂಡು ಬರಲಾಗಿದೆ. ಹಾಗೆ ನೋಡಿದರೆ ಸಮಾಜ ವಿಜ್ಞಾನಗಳಿಗೆ ಅಧ್ಯಯನ ಮಾದರಿಗಳು ಎಲ್ಲಿಂದ ಬಂದವೆಂದರೆ ಅವು ಭೌತವಿಜ್ಞಾನದಿಂದ – ಜೈವಿಕ ವಿಜ್ಞಾನದಿಂದ ಬಂದಿದ್ದಾನೆ. ಇಲ್ಲಿ ಮಾಹಿತಿ, ಪರಿವೀಕ್ಷಣೆ, ಪ್ರಯೋಗ, ವಸ್ತುನಿಷ್ಟತೆ, ಸಮೀಕರಣ, ಕಾರಣ – ಪರಿಣಾಮ ಸಂಬಂಧ ಮುಂತಾದ ಉಪಾದಿಗಳು ಮುಖ್ಯವಾಗಿವೆ. ಸಾಮಾಜಿಕ ಸಂಗತಿಗಳಾದ ಜಾತಿ, ವರ್ಗ, ಲಿಂಗ, ಪ್ರದೇಶ, ಅಲ್ಪಸಂಖ್ಯಾತರು ಮುಖ್ಯ ಸಂಗತಿಗಳಾಗುವುದಿಲ್ಲ. ಬಂಡವಾಳ ಹೂಡಿಕೆಯನ್ನು ಅಧಿಕಗೊಳಿಸುವುದರ ಮೂಲಕ ಬಡತನವನ್ನು ನಿವಾರಿಸಬಹುದು. ಅಭಿವೃದ್ಧಿಯನ್ನು ಸಾಧಿಸಿಕೊಳ್ಳಬಹುದು ಎಂಬ ಸಮೀಕರಣ ರೀತಿಯ ಸಿದ್ಧಾಂತಗಳು ಅರ್ಥಶಾಸ್ತ್ರದಲ್ಲಿ ರೂಪುಗೊಂಡಿದ್ದಾವೆ. ಬರಗಾಲ, ಹಸಿವು, ಆಹಾರ ಅಭದ್ರತೆ ಮುಂತಾದವುಗಳನ್ನು ನೀರಾವರಿ ಯೋಜನೆಗಳ ಮೂಲಕ, ಹಸಿರುಕ್ರಾಂತಿ ಮೂಲಕ ನಿವಾರಿಸಬಹುದು ಎಂಬುದು ಇಲ್ಲಿನ ಬಲವಾದ ನಂಬಿಕೆಯಾಗಿದೆ. ಪ್ರಯೋಗಾಲಯಗಳಲ್ಲಿ ಪ್ರಯೋಗಗಳ ಮೂಲಕ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಸಂಗತಿಗಳನ್ನು ನಿಯಂತ್ರಿಸುವುದರ ಮೂಲಕ ನಿಶ್ಚಿತ ಫಲಿತಾಂಶ ಪಡೆಯುವ ಕ್ರಮದಂತೆ ಅಭಿವೃದ್ಧಿಯನ್ನು ನಿರ್ಧರಿಸುವ ಸಂಗತಿಗಳನ್ನು ಅಗತ್ಯಕ್ಕೆ ತಕ್ಕಂತೆ ನಿಯಂತ್ರಿಸುವ – ನಿರ್ವಹಿಸುವ ಮೂಲಕ ನಿಶ್ಚಿತ ಪರಿಣಾಮಗಳನ್ನು ಪಡೆಯಲು ಸಾಧ್ಯ ಎಂಬ ನಂಬಿಕೆ ನೆಲೆಗೊಂಡಿತು.

ಕರ್ನಾಟಕದ ಅಭಿವೃದ್ಧಿಯ ಅನುಭವವು ಮೇಲೆ ವಿವರಿಸಿ ಕ್ರಮಕ್ಕಿಂತ ಭಿನ್ನವಾಗಿಲ್ಲ. ಉತ್ಪಾದನೆ – ವರಮಾನಗಳ ಪ್ರಮಾಣವನ್ನು ಹೆಚ್ಚಿಸಿಬಿಟ್ಟರೆ ಬಡತನ, ನಿರುದ್ಯೋಗ ನಿವಾರಣೆಯಾಗಿ ಬಿಡುತ್ತವೆ ಎಂಬ ನಂಬಿಕೆಯ ಮೇಲೆ ಕರ್ನಾಟಕವು ಕಳೆದ ೫೦ ವರ್ಷಗಳಿಂದ ಅಭಿವೃದ್ಧಿಯನ್ನು ನಿರ್ವಹಿಸಿಕೊಂಡು ಬಂದಿದೆ. ಅನಕ್ಷರತೆಯನ್ನು ಹೋಗಲಾಡಿಸುವುದು ಹೇಗೆ? ಹೇಗೆ ಅಂದರೆ ಶಾಲೆಗಳನ್ನು ತೆರೆಯುವುದರ ಮೂಲಕ, ಶಿಕ್ಷಕರನ್ನು ನೇಮಿಸುವುದರ ಮೂಲಕ, ಶಿಕ್ಷಣದ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ಎಂದು ಕರ್ನಾಟಕ ಅನುಸರಿಸಿಕೊಂಡು ಬಂದಿರುವ ಅಭಿವೃದ್ಧಿ ವಿಚಾರ ಪ್ರಣಾಳಿಕೆ ಹೇಳೀತು! ಇದೊಂದು ಮುಗ್ಧ – ಸರಳೀಕೃತ ನಂಬಿಕೆ ಎಂಬುದನ್ನು ಮುಂದಿನ ಚರ್ಚೆಯಲ್ಲಿ ತೋರಿಸಲಾಗಿದೆ.

ಅಭಿವೃದ್ಧಿಯ ಖಂಡರೂಪಿ ನೆಲೆಗಳನ್ನು ಮೂರು ವಿಷಯಗಳಿಗೆ ಸಂಬಂಧಿಸಿದಂತೆ ಇಲ್ಲಿ ಚರ್ಚಿಸಲಾಗಿದೆ. ಜಾತಿ ಸಂಬಂಧಗಳನ್ನು ಕುರಿತಂತೆ ಅಭಿವೃದ್ಧಿಯು ಹೇಗೆ ಶಿಷ್ಟಕ್ಕೆ ಅಭಿಮುಖವಾಗಿ ಮತ್ತು ಪರಿಶಿಷ್ಟಕ್ಕೆ ವಿಮುಖವಾಗಿ ಪ್ರವಹಿಸುತ್ತಿದೆ ಎಂಬುದನ್ನು, ಲಿಂಗ ಸಂಬಂಧಗಳನ್ನು ಪುರುಷರನ್ನು ಪ್ರಧಾನರನ್ನಾಗಿ ಮಹಿಳೆಯರನ್ನು ಅಧೀನರನ್ನಾಗಿ ಮಾಡಿರುವ ಪರಿಯನ್ನು ಮತ್ತು ಪ್ರದೇಶಗಳಿಗೆ ಸಂಬಂಧಿಸಿದಂತೆ ಸಂಪನ್ಮೂಲ ಹಾಗೂ ಚಾರಿತ್ರಿಕವಾಗಿ ಪ್ರಶಸ್ತವಾದ ಪ್ರದೇಶಗಳಲ್ಲಿ ಮಡುಗಟ್ಟಿ ಕೊಂಡಿರುವ ಸ್ವರೂಪವನ್ನು ಇಲ್ಲಿ ಚರ್ಚಿಸಲಾಗಿದೆ.

ಅಭಿವೃದ್ಧಿಯ ಶಿಷ್ಟಪರಿಶಿಷ್ಟ ನೆಲೆಗಳು

ಶಿಷ್ಟ – ಪರಿಶಿಷ್ಟ ಎಂಬ ವರ್ಗೀಕರಣ ಕುರಿತ ಚರ್ಚೆಗಳು ಕೇವಲ ಸಾಂಸ್ಕೃತಿಕ ಮತ್ತು ಸಾಮಾಜಿಕ ನೆಲೆಗೆ ಮೀಸಲಾಗಿಬಿಟ್ಟಿವೆ. ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಸ್ತುತ ಭಾಗದಲ್ಲಿ ಶಿಷ್ಟ – ಪರಿಶಿಷ್ಟ ನೆಲೆಗಳನ್ನು ಚರ್ಚಿಸಲಾಗಿದೆ.

ಅಕ್ಷರ ಸಂಸ್ಕೃತಿಯನ್ನು ಅಖಂಡ ನೆಲೆಯಲ್ಲಿ ಚರ್ಚಿಸಿದರೆ ಅದಕ್ಕೆ ಸಂಬಂಧಿಸಿದ ಶಿಷ್ಟ – ಪರಿಶಿಷ್ಟ ನೆಲೆಗಳು ಗೋಚರಿಸುವುದಿಲ್ಲ. ರಾಜ್ಯದ ಒಟ್ಟು ಜನಸಂಖ್ಯೆಯ ಸಾಕ್ಷರತೆ ೨೦೦೧ ರಲ್ಲಿ ಶೇ. ೬೭.೦೪ ಇತ್ತು. ಆದರೆ ಪರಿಶಿಷ್ಟರ (ಪ.ಜಾ.+ಪ.ಪಂ) ಸಾಕ್ಷರತೆಯ ಶೇ. ೫೧.೫೫ ಮತ್ತು ಶಿಷ್ಟರ ಸಾಕ್ಷರತೆ ಶೇ. ೭೧.೪೫. ಇಲ್ಲಿ ಶಿಷ್ಟ ಮತ್ತು ಪರಿಶಿಷ್ಟರ ನಡುವಿನ ಸಾಕ್ಷರತಾ ಅಂತರ ಶೇ. ೧೯.೯೦ ಅಂತರಗಳಷ್ಟಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಪರಿಶಿಷ್ಟರ ಪ್ರಮಾಣ ೧೯೬೦ – ೬೧ ರಲ್ಲಿ ಶೇ. ೧೪.೦೩. ಇಂದು ೨೦೦೧ ರಲ್ಲಿ ಅವರ ಪ್ರಮಾಣ ಶೇ. ೨೨.೮೧. ಆದರೆ ೨೦೦೧ ರಲ್ಲಿ ರಾಜ್ಯದ ಒಟ್ಟು ಅಕ್ಷರಸ್ಥ ಎಲ್ಲ ಪರಿಶಿಷ್ಟರ ಪ್ರಮಾಣ ಕೇವಲ ಶೇ. ೧೭.೦೬. ಅನಕ್ಷರಸ್ಥರಲ್ಲಿ ಮಾತ್ರ ಅವರ ಪ್ರಮಾಣ ಶೇ. ೩೨.೬೦. ಇಂದು ಜನಸಂಖ್ಯೆಯಲ್ಲಿ ಪರಿಶಿಷ್ಟರ ಪ್ರಮಾಣ ಎಷ್ಟಿದೆಯೋ ಅದಕ್ಕಿಂತ ಹೆಚ್ಚು ಅನಕ್ಷರಸ್ಥರಿಗೆ ಸಂಬಂಧಿಸಿದಂತೆ ಇದೆ. ಕುತೂಹಲದ ಸಂಗತಿಯೆಂದರೆ ಅನಕ್ಷರಸ್ಥರಲ್ಲಿ ಪರಿಶಿಷ್ಟರ ಪಾಲು ೧೯೯೧ ರಲ್ಲಿ ಶೇ. ೨೮.೩೮ ರಷ್ಟಿದ್ದುದು ೨೦೦೧ ರಲ್ಲಿ ಶೇ. ೩೨.೬ಕ್ಕೇರಿದೆ. ಇದೇ ಅವಧಿಯಲ್ಲಿ ಅನಕ್ಷರಸ್ಥರಲ್ಲಿ ಶಿಷ್ಟರ ಪಾಲು ಶೇ. ೭೧.೬೨ ರಿಂದ ೬೭.೪೦ ಕ್ಕೆ ಇಳಿದಿದೆ.

ಸಾಕ್ಷರತೆಯನ್ನು ಅಮರ್ತ್ಯಸೆನ್‌ರ ಪರಿಭಾಷೆ ಪ್ರಕಾರ ಅಭಿವೃದ್ಧಿಯ ಸೂಚಿಯನ್ನಾಗಿ ಮತ್ತು ಅನಕ್ಷರತೆಯನ್ನು ದುಸ್ಥಿತಿಯ ಸೂಚಿಯನ್ನಾಗಿ ಪರಿಭಾವಿಸಿಕೊಂಡರೆ ಕರ್ನಾಟಕದಲ್ಲಿ ಪರಿಶಿಷ್ಟರು ತಾರತಮ್ಯ – ದುಸ್ಥಿತಿಯಿಂದ ನರಳುತ್ತಿರುವುದು ಮತ್ತು ಶಿಷ್ಟರು ಅಕ್ಷರ ಸಂಪತ್ತನ್ನು ಗುತ್ತಿಗೆ ಹಿಡಿದಿರುವುದು ಸ್ಪಷ್ಟವಾಗುತ್ತದೆ.

ದುಡಿಮೆಗೆ ಸಂಬಂಧಿಸಿದಂತೆಯೂ ಶಿಷ್ಟ – ಪರಿಶಿಷ್ಟರ ನಡುವೆ ತೀವ್ರ ಅಂತರವಿರುವುದನ್ನು ಗುರುತಿಸಬಹುದಾಗಿದೆ. ಉದಾಹರಣೆಗೆ ೧೯೯೧ ರಲ್ಲಿ ಪ್ರಾಥಮಿಕ ವಲಯವನ್ನು ಅವಲಂಬಿಸಿಕೊಂಡಿದ್ದ ಶಿಷ್ಯ ದುಡಿಮೆಗಾರರ ಪ್ರಮಾಣ ಶೇ. ೬೨.೬೪ ರಷ್ಟಿದ್ದರೆ ಪರಿಶಿಷ್ಟರಲ್ಲಿ ಅವಲಂಬನೆ ಶೇ. ೮೦.೨೨ ರಷ್ಟಿತ್ತು. ಆದರೆ ತೃತೀಯ ವಲಯವನ್ನು ಅವಲಂಬಿಸಿಕೊಂಡಿರುವ ಶಿಷ್ಟರ ಪ್ರಮಾಣ ಶೇ. ೨೨.೧೪ ರಷ್ಟಿದ್ದರೆ ಪರಿಶಿಷ್ಟರಲ್ಲಿ ಅದು ಕೇವಲ ಶೇ. ೧೦.೨೦, ಇದೇ ರೀತಿ ರಾಜ್ಯದ ಒಟ್ಟು ದಿನಗೂಲಿ ದುಡಿಮೆಗಾರರಲ್ಲಿ ಶಿಷ್ಟರ ಪ್ರಮಾಣ ೨೦೦೧ ರಲ್ಲಿ ಶೇ. ೬೦.೨೪ ರಷ್ಟಿದ್ದರೆ ಪರಿಶಿಷ್ಟರ ಪ್ರಮಾಣ ಶೇ. ೩೯.೭೬. ರಾಜ್ಯದ ಜನಸಂಖ್ಯೆಯಲ್ಲಿ ಪರಿಶಿಷ್ಟರ ಪ್ರಮಾಣ ಎಷ್ಟಿದೆಯೋ ಅದಕ್ಕಿಂತ ಹೆಚ್ಚಿನ ಪ್ರಮಾಣ ದಿನಗೂಲಿ ದುಡಿಮೆಗಾರರಿಗೆ ಸಂಬಂಧಿಸಿದಂತೆ ಇದೆ. ದಿನಗೂಲಿ ದುಡಿಮೆಗಾರರಿಗೆ ಸಂಬಂಧಿಸಿದಂತೆ ಆಯ್ಕೆಗಳಿಲ್ಲ. ಆಯ್ಕೆಗಳಿಲ್ಲದ ಬದುಕನ್ನು ಪರಿಶಿಷ್ಟ ದುಡಿಮೆಗಾರರು ಬದುಕುತ್ತಿದ್ದಾರೆ.

ರಾಜ್ಯವು ಉದಯವಾಗುವ ಸಂದರ್ಭದಲ್ಲಿ ಏಕೀಕಣದ ಬಗ್ಗೆ ಮಾತನಾಡಲಾಗುತ್ತಿತ್ತು. ಅದಕ್ಕಾಗಿ ಹೋರಾಟ ನಡೆಸಲಾಯಿತು.ಆದರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಳೆದ ೫೦ ವರ್ಷಗಳಲ್ಲಿ ವಿಷಮತೆಯನ್ನು ಹೋಗಲಾಡಿಸುವುದು ಸಾಧ್ಯವಾಗಿಲ್ಲ. ಇಂದು ಪರಿಶಿಷ್ಟರ ಜನಸಂಖ್ಯೆ ೧೨೦ ಲಕ್ಷವನ್ನು ಮೀರಿದೆ. ಇಷ್ಟೊಂದು ದೊಡ್ಡ ಸಮುದಾಯವನ್ನು ಅರ್ಥಪೂರ್ಣವಾಗಿ ಅಭಿವೃದ್ಧಿಯ ವ್ಯಾಪ್ತಿಯಲ್ಲಿ ತರಲು ನಾಡಿಗೆ ಸಾಧ್ಯವಾಗಿಲ್ಲ. ಇದರ ಬಗ್ಗೆ ಮುಂದೆ ಹೆಚ್ಚಿನ ಚರ್ಚೆಯಿದೆ.

ಆರೋಗ್ಯ ಸಂಬಂಧಿ ಜಾತಿವಾರು ಅಸಮಾನತೆ

ಆರೋಗ್ಯ ಸೂಚಿಗಳಿಗೆ ಸಂಬಂಧಿಸಿದಂತೆ ವಿವಿಧ ಜಾತಿ ವರ್ಗಗಳ ನಡುವೆ ಅಸಮಾನತೆಯಿರುವುದನ್ನು ಕೋಷ್ಟಕ – ೨ ರಲ್ಲಿ ತೋರಿಸಿದೆ. ಅಭಿವೃದ್ಧಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ಆರೋಗ್ಯವಾಗಿ ಪರಿವರ್ತನೆಯಾಗದಿರುವ ಸ್ಥಿತಿಯನ್ನು ಕೋಷ್ಟಕವು ತೋರಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡವಾದ ೨ ಎಸ್.ಡಿ. ಅಪೌಷ್ಟಿಕತೆ ಮಾಪನದಲ್ಲಿ ಶೇ. ೫೫ ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಮಕ್ಕಳು ಕರ್ನಾಟಕದಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿದ್ದರೆ ಶಿಷ್ಟರಿಗೆ ಸಂಬಂಧಿಸಿದಂತೆ ಅಪೌಷ್ಟಿಕತೆ ಎದುರಿಸುತ್ತಿರುವ ಮಕ್ಕಳ ಪ್ರಮಾಣ ಕೇವಲ ಶೇ.೪೦.

ಆರೋಗ್ಯ ಸಂಬಂಧಿ ಅಸಮಾನತೆ : ಕರ್ನಾಟಕ : ೧೯೯೮೯೯

ಕೋಷ್ಟಕ

ಜಾತಿವಾರು ವರ್ಗೀಕರಣ ವಯೋಮಾನುವಾರು ತೂಕ೨ ಎಸ್‌.ಡಿ.ಗಿಂತ ಕೆಳಮಟ್ಟ (ಶೇಕಡ) ಶಿಶುಮರಣ ಪ್ರಮಾಣ (ಪ್ರತಿ ಸಾವಿರ ಜನನಕ್ಕೆ) ೫ ವರ್ಷ ವಯಸ್ಸಿನೊಳಗಣ ಮಕ್ಕಳ ಮರಣ ಪ್ರಮಾಣ (ಪ್ರತಿ ಸಾವಿರ ಜನನಕ್ಕೆ)
ಪ.ಜಾ. ೫೫.೮೦ ೭೦ ೧೦೫
ಪ.ಪಂ. ೫೫.೭೦ ೮೫ ೧೨೦
ಒಬಿಸಿ ೪೦.೦೦ ೬೦ ೭೮
ಇತರೆ ೪೧.೩೦ ೫೬ ೭೦

ಟಿಪ್ಪಣೆ : ವಿಶ್ವ ಆರೋಗ್ಯ ಸಂಸ್ತೆಯು ನಿಗದಿಪಡಿಸಿರುವ ಆದರ್ಶ ಎರಡು ಸ್ಟಾಂಡರ್ಡ್ ಡಿವಿ ಯೇಷನಗಿಂತ ಕಡಿಮೆ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳನ್ನು ಇಲ್ಲಿ ತೋರಿಸಲಾಗಿದೆ.

ಆಕರ : ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ ೨ ರಿಂದ ಮಾಹಿತಿ ಸಂಗ್ರಹಿಸಲಾಗಿದೆ.

ಅದೇ ರೀತಿ ಶಿಶುಮರಣ ಹಾಗೂ ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣಕ್ಕೆ ಸಂಬಂಧಿಸಿದಂತೆಯೂ ಶಿಷ್ಟ ಮತ್ತು ಪರಿಶಿಷ್ಟರ ನಡುವೆ ತೀವ್ರ ಅಂತರವಿರುವುದು ತಿಳಿಯುತ್ತದೆ. ಅಭಿವೃದ್ಧಿ ಕುರಿತ ಸಿದ್ಧಾಂತಕ್ಕೆ ಸಂಬಂಧಿಸಿದಂತೆ ಶಿಷ್ಟ ಮತ್ತು ಪರಿಶಿಷ್ಟರ ನಡುವಿನ ಅಸಮಾನತೆಯ ಇಂಪ್ಲಿಕೇಶನ್ ಏನು? ಈ ಬಗ್ಗೆ ಮುಂದೆ ಚರ್ಚಿಸಲಾಗಿದೆ.

ಅಭಿವೃದ್ಧಿಯ ಲಿಂಗ ಸಂಬಂಧಿ ಆಯಾಮಗಳು

ಅಭಿವೃದ್ಧಿಯನ್ನು ಕುರಿತ ಪಠ್ಯಗಳಲ್ಲಿ ಲಿಂಗ ಸಂಬಂಧಿಗಳನ್ನು ಕುರಿತಂತೆ ಚರ್ಚೆ ಕಂಡುಬರುವುದಿಲ್ಲ. ನಮ್ಮ ದೇಶದ, ಕರ್ನಾಟಕದ ವಿಶ್ವವಿದ್ಯಾಲಯಗಳ ಅಭಿವೃದ್ಧಿ ಸಂಬಂಧಿ ಪಠ್ಯಕ್ರಮದಲ್ಲೂ ಲಿಂಗ ಸಂಬಂಧಗಳನ್ನು ಕುರಿತ ಚರ್ಚೆಗೆ ಅವಕಾಶಗಳಿಲ್ಲ. ಏಕೆಂದರೆ ಅಭಿವೃದ್ಧಿಯನ್ನು ಕುರಿತ ಸಿದ್ಧಾಂತಗಳನ್ನು ಲಿಂಗ ನಿರಪೇಕ್ಷ ನೆಲೆಯಲ್ಲಿ ಕಟ್ಟಿಕೊಂಡು ಬರಲಾಗಿದೆ. ಲಿಂಗ ನಿರಪೇಕ್ಷತೆಯು ಅಭಿವೃದ್ಧಿ ಸಿದ್ಧಾಂತಗಳ ಅವಿಭಾಜ್ಯ – ಅಂತರ್ಗತ ಭಾಗವೇ ಆಗಿಬಿಟ್ಟಿದೆ. ಸರ್ಕಾರದ ಬಜೆಟ್‌ಗಳಲ್ಲಿ, ಅವು ವಾರ್ಷಿಕವಾಗಿ ಮಂಡಿಸುವ ಆರ್ಥಿಕ ಸಮೀಕ್ಷೆಗಳಲ್ಲಿ, ಅಭಿವೃದ್ಧಿ ಯೋಜನೆಗಳಲ್ಲಿ ಲಿಂಗ ಸಂಬಂಧಗಳು ಪ್ರಧಾನ ಸಂಗತಿಗಳಾಗುವುದಿಲ್ಲ. ಕರ್ನಾಟಕದ ಅಭಿವೃದ್ಧಿಯ ಅನುಭವಗಳು ಮೇಲೆ ವಿವರಿಸಿದ ಪರಿಗಿಂತ ಭಿನ್ನವಾಗಿರಲು ಸಾಧ್ಯವಿಲ್ಲ.

ಇಂದು ಅಭಿವೃದ್ಧಿಯ ಅಖಂಡ – ಲಿಂಗ ನಿರಪೇಕ್ಷ ಪ್ರತಿಪಾದನೆಗಳು ಸ್ತ್ರೀವಾದಿಗಳಿಂದ ತೀವ್ರ ಟೀಕೆಗೆ ಗುರಿಯಾಗಿವೆ. ಮಹಿಳೆಯರನ್ನು ಅನುಬಂಧದಂತೆ, ಜನಸಂಖ್ಯಾವಾಚಿ ಯಾಗಿ, ಫಲಾನುಭವಿಯಾಗಿ ಪರಿಭಾವಿಸಿಕೊಳ್ಳುವ ಅಭಿವೃದ್ಧಿ ಸಿದ್ಧಾಂತಗಳನ್ನು ಸ್ತ್ರೀವಾದಿಗಳು ಪ್ರಶ್ನಿಸುತ್ತಿದ್ದಾರೆ. ಲಿಂಗ ಸಂಬಂಧಗಳ ಪ್ರಶ್ನೆಯನ್ನು ಇಂದು ಸುಲಭವಾಗಿ ಅಭಿವೃದ್ಧಿ ಸಿದ್ಧಾಂತಗಳು ತಳ್ಳಿ ಹಾಕಲು ಸಾಧ್ಯವಿಲ್ಲ. ಆದರೆ ಸರ್ಕಾರಗಳು ಇಂದು ಸ್ತ್ರೀವಾದಿ ಅಜೆಂಡಾವನ್ನು ಎತ್ತಿ ಹಾಕಿಕೊಂಡು ಬಿಟ್ಟಿವೆ. ಕರ್ನಾಟಕದಲ್ಲಿ ಕಳೆದ ಹತ್ತಾರು ವರ್ಷಗಳಿಂದ ಸ್ತ್ರೀ ಶಕ್ತಿ, ಮಹಿಳೆಯರ ಸ್ವಸಹಾಯ ಗುಂಪುಗಳು, ಮಹಿಳೆಯರ ಅಭಿವೃದ್ಧಿ ಮುಂತಾದ ಸಂಗತಿಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಾ ಬಂದಿವೆ. ಸ್ತ್ರೀವಾದವನ್ನು ಸರ್ಕಾರವು ಎತ್ತಿ ಹಾಕಿಕೊಂಡ ಪರಿಣಾಮವಾಗಿ ಸಶಕ್ತೀಕರಣವೆಂಬ ಸಿದ್ಧಾಂತವು ನಿಸ್ಸಾರಗೊಂಡುಬಿಟ್ಟಿದೆ. ಮಹಿಳೆಯರ ಅಭಿವೃದ್ಧಿಯನ್ನು ಸರ್ಕಾರವು ತನ್ನ ಅಭಿವೃದ್ಧಿ ಕಾರ್ಯಕ್ರಮದ ಪುರವಣೆಯನ್ನಾಗಿ ಮಾಡಿಕೊಂಡು ಬಿಟ್ಟಿದೆ. ಅದು ಸ್ತ್ರೀಶಕ್ತಿಯ ಬಗ್ಗೆ ಮಹಿಳೆಯರ ಸ್ವಸಹಾಯ ಗುಂಪುಗಳ ಬಗ್ಗೆ ಮಾತನಾಡುತ್ತದೆ ವಿನಾ ಮಹಿಳೆಯರ ಆಸ್ತಿ ಹಕ್ಕಿನ ಬಗ್ಗೆ, ಲಿಂಗ ಸಂಬಂಧಿ ಶ್ರಮವಿಭಜನೆ ಬಗ್ಗೆ, ಗೃಹವಾರ್ತೆಯನ್ನು ಪುರುಷರ ಜೊತೆ ಹಂಚಿಕೊಳ್ಳುವ ಬಗ್ಗೆ, ಕೌಟುಂಬಿಕ ಹಿಂಸೆಯ ಬಗ್ಗೆ, ಸಾಮಾಜಿಕ ತಾರತಮ್ಯದ ಬಗ್ಗೆ ಅದು ಚಕಾರವೆತ್ತುವುದಿಲ್ಲ.

ಕಳೆದ ೫೦ ವರ್ಷಗಳ ಕರ್ನಾಟಕದ ಅಭಿವೃದ್ಧಿಯನ್ನು ಲಿಂಗ ಸಂಬಂಧಿ ನೆಲೆಯಿಂದ ಪೃಥಕ್ಕರಿಸಿದಾಗ ನಮಗೆ ಪ್ರೋತ್ಸಾಹದಾಯಕ ಚಿತ್ರವೇನೂ ದೊರೆಯುವುದಿಲ್ಲ. ಉದಾಹರಣೆಗೆ ೨೦೦೧ ರಲ್ಲಿ ಕಾಣೆಯಾದ ಮಹಿಳೆಯರ ಸಂಖ್ಯೆ ಸುಮಾರು ೯.೭೯ ಲಕ್ಷ. ಲಿಂಗ ಅನುಪಾತವು ಕ್ರಮಬದ್ಧವಾಗಿ ಎಷ್ಟಿರಬೇಕಿತ್ತೋ ಅಷ್ಟಿದ್ದಿದ್ದರೆ ಕರ್ನಾಟಕದ ಮಹಿಳೆಯರ ಸಂಖ್ಯೆ ೨೦೦೧ ರಲ್ಲಿ ೨೫೮.೭೭ ಲಕ್ಷ ಇರುವುದಕ್ಕೆ ಪ್ರತಿಯಾಗಿ ೨೬೮.೫೬ ಲಕ್ಷ ಇರಬೇಕಾಗಿತ್ತು. ಲಿಂಗ ಅನುಪಾತವು ಸಾವಿರಕ್ಕಿಂತ ಕಡಿಮೆಯಿರುವುದನ್ನು ಅಮರ್ತ್ಯಸೆನ್‌ಲಿಂಗ ಅಸಮಾನತೆಯ ಸೂಚಿಯಾಗಿ ಬಳಸುತ್ತಾರೆ. ಕರ್ನಾಟಕದಲ್ಲಿ ೦ – ೬ ವರ್ಷ ವಯೋಮಾನದ ಮಕ್ಕಳ ಲಿಂಗ ಅನುಪಾತವು ೧೯೯೧ ರಲ್ಲಿ ೯೬೦ ಇದ್ದುದು ೨೦೦೧ ರಲ್ಲಿ ೯೪೯ ಕ್ಕೆ ಕುಸಿದಿದೆ. ಇದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಲಿಂಗ ತಾರತಮ್ಯವೆಂಬುದು ಇಂದು ಹೆಣ್ಣು ಭ್ರೂಣ ಹತ್ಯೆಯವರೆಗೆ ಹಬ್ಬಿಬಿಟ್ಟಿದೆ. ಹೆಣ್ಣು ಭ್ರೂಣ ಹತ್ಯೆಯ ಮತ್ತು ಹೆಣ್ಣು ಶಿಶುಗಳ ಪರಿಪಾಲನೆಯಲ್ಲಿನ ಅಲಕ್ಷ್ಯದಿಂದಾಗಿ ಜನಸಂಖ್ಯೆಯಲ್ಲಿ ಅವರ ಪ್ರಮಾಣ ಕಡಿಮೆಯಾಗುತ್ತಾ ನಡೆದಿದೆ.

ಅಭಿವೃದ್ಧಿಯ ಪ್ರಾದೇಶಿಕ ವಿಸ್ತೃತತೆ

ಕರ್ನಾಟಕವು ತನ್ನ ಏಕೀಕರಣದ ಸುವರ್ಣ ವರ್ಷವನ್ನು ಆಚರಿಸಿಕೊಂಡ ಸಂದರ್ಭದಲ್ಲಿ ನಾವು ಚರ್ಚೆ ಮಾಡಲೇಬೇಕಾದ ಸಂಗತಿಯೆಂದರೆ ಅದು ಕಲೆದ ೫ ದಶಕಗಳ ಕಾಲಾವಧಿಯಲ್ಲಿ ಸಾಧಿಸಿಕೊಂಡ ಅಭಿವೃದ್ಧಿಯ ಪ್ರಾದೇಶಿಕ ವ್ಯಾಪ್ತಿ. ಏಕೆಂದರೆ ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆಯ ಸಮಸ್ಯೆಯು ಭೂತಾಕಾರದಂತೆ ಇಂದು ಕರ್ನಾಟಕವನ್ನು ಕಾಡುತ್ತಿದೆ. ನಮ್ಮ ನಾಡು ಉದಯವಾದ ೧೯೫೬ ರಲ್ಲಿ ಕರ್ನಾಟಕದ ಬಗ್ಗೆ ಕೃಷ್ಣಕುಮಾರ ಕಲ್ಲೂರ ಎಂಬ ವಿದ್ವಾಮಸರು ಬರೆದಿರುವ ಮಾತುಗಳನ್ನು ಇಲ್ಲಿ ನನಪಿಸಿಕೊಳ್ಳುವುದು ಅತ್ಯಂತ ಸೂಕ್ತ.

“….. ಸಂಯುಕ್ತ ಕರ್ನಾಟಕದ ಬೇಡಿಕೆ ಹೊರಹೊರಗೆ ಭಾಷಾತ್ಮಕವಾಗಿದ್ದರೂ, ನಿಜವಾಗಿ ಅದು ಆರ್ಥಿಕ ದೃಷ್ಟಿಯಲ್ಲಿ ಹಿಂದುಳಿದವರ ಕೂಗಾಗಿತ್ತು. ಆದುದರಿಂದ ಈಗ ಒಂದಾಗಿರುವ ಸಂಯುಕ್ತ ಕರ್ನಾಟಕ ಹಿಂದುಳಿದ ಪ್ರದೇಶಗಳದೇ ಒಂದು ಸಂಯುಕ್ತ ರಾಜ್ಯವೆಂತಲೂ, ಭಾಷೆ ಒಂದಾಗಿರುವುದು ಒಂದು ಹೆಚ್ಚಿನ ಅನುಕೂಲವೆಂದೂ ಭಾವಿಸಿಕೊಳ್ಳಬೇಕು. ಆದುದರಿಂದ ಭಾಷೆ, ಸಾಹಿತ್ಯಗಳ ಬೆಳವಣಿಗೆಗಿಂತಲೂ, ಹಿಂದುಳಿದ ಪ್ರದೇಶಗಳ ಆರ್ಥಿಕ ಬೆಳವಣಿಗೆಯೇ ಕರ್ನಾಟಕ ರಾಜ್ಯದ ಗುರಿ ಎಂದು ಬಗೆಯಬೇಕು. ವಿಷಯದಲ್ಲಿ ಮೈಸೂರು ಸಂಸ್ಥಾನದಲ್ಲೂ, ಬೆಂಗಳೂರು, ಮೈಸೂರು ಪರಿಸರದಲ್ಲಿ ಮಾತ್ರ ಸಾಕಷ್ಟು ಬೆಳವಣಿಗೆಯಾಗಿದೆಯೇ ಹೊರತು, ಮಿಕ್ಕ ಹಲಭಾಗ ಸಾಕಷ್ಟು ಹಿಂದುಳಿದಿದೆ. ಇದನ್ನೆಲ್ಲಾ ಬಗೆದರೆ, ನಿಜ ಕರ್ನಾಟಕ ಕೊಡಗು, ಕನ್ನಡ ಜಿಲ್ಲೆ, ಶಿವಮೊಗ್ಗ, ಚಿತ್ರದುರ್ಗ, ಬಿಜಾಪುರ, ಗುಲಬರ್ಗಾ ಪ್ರದೇಶದಲ್ಲಿರುವುದಲ್ಲದೆ ಬೆಂಗಳೂರುಮಂಗಳೂರುಮೈಸೂರು ನಗರಗಳಲ್ಲಿಲ್ಲ. ಇದನ್ನು ಮನದಟ್ಟಾಗುವಂತೆ ಅರಿತಾಗ ಮಾತ್ರ ನಾವು ನಮ್ಮ ನಾಡಿಗೆ ……………… (ಮೈಸೂರು ರಾಜ್ಯ ೧೯೫೬, ಕರ್ನಾಟಕ ಸರ್ಕಾರ.)

ಕೃಷ್ಣಕುಮಾರ ಕಲ್ಲೂರ ಅವರು ೧೯೫೬ ರಲ್ಲಿ ಬರೆದ ಮಾತುಗಳನ್ನು ೨೦೦೬ರಲ್ಲೂ ನಾವು ಮಾತನಾಡಬೇಕಾದ ಪ್ರಮೇಯ ಉಂಟಾಗಿದೆ. ಕಳೆದ ೫೦ ವರ್ಷಗಳಲ್ಲಿ ಏನೂ ಆಗಲಿಲ್ಲವೆ ಎಂದರೆ ಬಹಳಷ್ಟೂ ಆಗಿದೆ. ಆದರೆ ಇಡೀ ನಾಡನ್ನು, ನಾಡವರನ್ನು ಒಳಗೊಳ್ಳುವಂತೆ, ೫.೨೭ ಕೋಟಿ ಜನರಿಗೆ ಅಭಿಮುಖವಾಗುವಂತೆ ಕರ್ನಾಟಕದ ಅಭಿವೃದ್ಧಿ ನಡೆಯಲಿಲ್ಲ ಎಂಬುದನ್ನು ಅತ್ಯಂತ ವಿಷಾದದಿಂದ ಹೇಳಬೇಕಾಗುತ್ತದೆ. ಕಲ್ಲೂರ ಅವರು ವ್ಯಕ್ತಪಡಿಸಿರುವ ಅಪಾಯ ಇಂದು ಸಂಭವಿಸಿಬಿಟ್ಟಿದೆ. ನಾಡು ಬೆಂಗಳೂರು – ಮೈಸೂರುಗಳಿಗೆ ಅಭಿಮುಖವಾಗಿ ಬೆಳೆಯುತ್ತಿದೆಯೆ ವಿನಾ ಜೇವರ್ಗಿಗೆ, ದೇವದುರ್ಗಕ್ಕೆ, ಯಲಬುರ್ಗಾಕ್ಕೆ, ಶಿರಗುಪ್ಪಾಕ್ಕೆ, ಸಿಂದಗಿಗೆ ಅಭಿಮುಖವಾಗಿ ಬೆಳೆಯುತ್ತಿಲ್ಲ. ನಾಡಿನ ಅನೇಕ ಭಾಗಗಳು ೧೯೫೬ ಕ್ಕೆ ಪೂರ್ವದಲ್ಲಿ ಬೊಂಬಾಯಿ ಕಡೆಗೆ, ಮದರಾಸಿನ ಕಡೆಗೆ, ಹೈದರಾಬಾದಿನ ಕಡೆಗೆ ಮುಖ ಮಾಡಿಕೊಂಡಿದ್ದನ್ನು ಸರಿಪಡಿಸುವ ಸಲುವಾಗಿ ಏಕೀಕರಣ ಹೋರಾಟ ನಡೆಸಲಾಯಿತು. ಆದರೆ ಇಂದು ಏನಾಗಿದೆ? ಬೆಂಗಳೂರು ನಾಡಿ – ನಾಡವರಿಗೆ ಅಭಿಮುಖವಾಗುವುದಕ್ಕೆ ಪ್ರತಿಯಾಗಿ ಸಿಂಗಪುರದ ಕಡೆಗೆ, ಬಿಲ್‌ಗೇಡ್ಸ್‌ಕಡೆಗೆ, ಯುರೋಪಿನ ಕಡೆಗೆ ಮುಖ ಮಾಡಿಕೊಂಡಿದೆ.

ಪ್ರಾದೇಶಿಕ ಅಸಮಾನತೆ ಎಂಬುದು ಕೇವಲ ಹೈದರಾಬಾದ್ – ಕರ್ನಾಟಕ ಪ್ರದೇಶದವರ, ಉತ್ತರ ಕರ್ನಾಟಕದವರ ಕುಗಲ್ಲ. ಅದು ೫.೨೭ ಕೋಟಿ ಜನರ ಕೂಗಾಗಬೇಕಾದ ಅಗತ್ಯವಾಗಿದೆ. ಕರ್ನಾಟಕದಲ್ಲಿರುವ ಒಟ್ಟು ೧೫೧ ಲಕ್ಷ ಅನಕ್ಷರಸ್ಥರಲ್ಲಿ ಶೇ. ೨೪ ರಷ್ಟು ಹೈದರಾಬಾದ್ – ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿದ್ದಾರೆ. ರಾಜ್ಯದ ಒಟ್ಟು ಅಕ್ಷರಸ್ಥರಲ್ಲಿ ಉತ್ತರ ಕರ್ನಾಟಕದ ಪಾಲು ಶೇ. ೩೭.೯೨. ಆದರೆ ಅನಕ್ಷರಸ್ಥರಲ್ಲಿ ಅದರ ಪಾಲು ಶೇ.೫೦.

ಆಯ್ದ ಸೂಚಿಗಳು

  • ಕರ್ನಾಟಕ ರಾಜ್ಯದ ಒಟ್ಟು ವರಮಾನದಲ್ಲಿ (ರೂ. ೫೬೧೧.೪೮ ಕೋಟಿ) ಹೈದರಾಬಾದ್ – ಕನಾಟಕ ಪ್ರದೇಶದ ಪಾಲು ೧೯೮೦ – ೮೧ ರಲ್ಲಿ ಶೇ. ೧೬.೧೫ ರಷ್ಟಿತ್ತು. ಆದರೆ ೧೯೯೩ – ೯೪ ರಲ್ಲಿ ಶೇ. ೧೩.೭೯ಕ್ಕೆ ಮತ್ತು ೧೯೯೯ – ೨೦೦೦ ದಲ್ಲಿ ಶೇ. ೧೧.೫೦ ಕ್ಕೆ ಕುಸಿದಿದೆ. ಈ ಪ್ರದೇಶದ ಪಾಲು ೨೦೦೭ – ೦೮ ರಲ್ಲಿ ಶೇ. ೧೨.೮೨ ರಷ್ಟಾಗಿದೆ. ಪ್ರಾದೇಶಿಕ ಅಸಮಾನತೆಯ ತೀವ್ರಗೊಳ್ಳುತ್ತ ನಡೆದಿರುವುದನ್ನು ಇದು ಸೂಚಿಸುತ್ತದೆ.
  • ‘ಕೂಲಿಯಿದ್ದರೆ ಕೂಳು’ ಎಂಬ ಸ್ಥಿತಿಯಲ್ಲಿರುವ ದಿನಗೂಲಿ ದುಡಿಮೆಗಾರರು ರಾಜ್ಯದಲ್ಲಿ ೨೦೦೧ ರಲ್ಲಿ ೬೦.೪೧ ಲಕ್ಷ ಇದ್ದಾರೆ. ಇವರಲ್ಲಿ ಶೇ.೫೯ ರಷ್ಟು ಪಾಲು ಉತ್ತರ ಕರ್ನಾಟಕ ಪ್ರದೇಶದ್ದಾಗಿದೆ. ಜನಸಂಖ್ಯೆಯಲ್ಲಿ ಉತ್ತರ ಕರ್ನಾಟಕದ ಪಾಲು ಕೇವಲ ಶೇ. ೪೩. ಆದರೆ ದಿನಗೂಲಿ ದುಡಿಮೆಗಾರರಲ್ಲಿ ಮಾತ್ರ ಇದರ ಪಾಲು ಶೇ. ೫೯.
  • ರಾಜ್ಯ ಮಟ್ಟದಲ್ಲಿ ಒಟ್ಟು ದುಡಿಮೆಗಾರರಲ್ಲಿ ದಿನಗೂಲಿ ದುಡಿಮೆಗಾರರ ಪ್ರಮಾಣ ಕೇವಲ ಶೇ. ೨೬.೭೯. ದಕ್ಷಿಣ ಕರ್ನಾಟಕದಲ್ಲಿ ಇವರ ಪ್ರಮಾಣ ಶೇ. ೧೯.೩೭. ಆದರೆ ಹೈದರಾಬಾದ್ – ಕರ್ನಾಟಕ ಪ್ರದೇಶದಲ್ಲಿ ಇವರ ಪ್ರಮಾಣ ಶೇ. ೪೦.೫೯.
  • ಡಿ.ಎಂ. ನಂಜುಂಡಪ್ಪ ವರದಿಯ ಪ್ರಕಾರ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ೩೯ ತಾಲ್ಲೂಕುಗಳ ಪೈಕಿ ಹೈದರಾಬಾದ್ – ಕರ್ನಾಟಕ ಪ್ರದೇಶದ ಪಾಲು ಶೇ. ೫೩.೮೫ (೨೧ ತಾಲ್ಲೂಕುಗಳು). ಆದರೆ ರಾಜ್ಯದ ಮುಂದುವರಿದ ೬೧ ತಾಲ್ಲೂಕುಗಳ ಪೈಕಿ ಹೈದರಾಬಾದ್ – ಕರ್ನಾಟಕ ಪಾಲು ಶೇ.೫.
  • ಹೈದರಾಬಾದ್ – ಕರ್ನಾಟಕ ಪ್ರದೇಶದಲ್ಲಿನ ಒಟ್ಟು ತಾಲ್ಲೂಕುಗಳ ಸಂಖ್ಯೆ ೩೧. ಅವುಗಳಲ್ಲಿ ಮುಂದುವರಿದ ತಾಲ್ಲೂಕುಗಳ ಸಂಖ್ಯೆ ಕೇವಲ ೩ (ಶೇ.೯.೬೮) ಆದರೆ ಹಿಂದುಳಿದ ತಾಲ್ಲೂಕುಗಳ ಸಂಖ್ಯೆ ೨೮ (ಶೇ. ೯೦.೩೨). ಇಡೀ ರಾಜ್ಯದ ಒಟ್ಟು ತಾಲ್ಲೂಕುಗಳಾದ ೧೭೫ ರಲ್ಲಿ ಮುಂದುವರಿದ ತಾಲ್ಲೂಕುಗಳ ಪ್ರಮಾಣ ಶೇ. ೬೫.೧೪ ಮತ್ತು ಹಿಂದುಳಿದ ತಾಲ್ಲೂಕುಗಳ ಪ್ರಮಾಣ ಶೇ. ೩೪.೮೬.
  • ಕರ್ನಾಟಕದಲ್ಲಿ ೧೯೫೭ – ೫೮ ರಲ್ಲಿ ನೀರಾವರಿ ಪ್ರದೇಶದ ವಿಸ್ತೀರರ್ಣ ೭.೫೯ ಲಕ್ಷ ಹೆಕ್ಟೇರುಗಳು. ಇದರಲ್ಲಿ ಉತ್ತರ ಕರ್ನಾಟಕದ ಪಾಲು ಶೇ. ೨೯ ರಷ್ಟಿದ್ದರೆ ದಕ್ಷಿಣ ಕರ್ನಾಟಕದ ಪಾಲು ಶೇ.೭೧ ರಷ್ಟಿತ್ತು. ಆದರೆ ೨೦೦೨ – ೦೩ ರಲ್ಲಿ ಒಟ್ಟು ನೀರಾವರಿ ಪ್ರದೇಶ ರಾಜ್ಯದಲ್ಲಿ ೨೫.೫೦ ಲಕ್ಷ ಹೆಕ್ಟೇರ್‌ನಷ್ಟಿದೆ. ಇದರಲ್ಲಿ ಉತ್ತರ ಕರ್ನಾಟಕದ ಪಾಲು ಶೇ. ೫೫.೭೧ ರಷ್ಟಿದ್ದರೆ ದಕ್ಷಿಣ ಕರ್ನಾಟಕದ ಪಾಲು ಶೇ. ೪೪.೨೯ ರಷ್ಟಿದೆ. ಇದು ಆರೋಗ್ಯಕರ ಬೆಳವಣಿಗೆಯಾಗಿದೆ. ಆದರೆ ನಾವು ಗಮನಿಸಬೇಕಾದ ಸಂಗತಿಯೆಂದರೆ ಇಷ್ಟಾದರೂ ಇಂದು ದಕ್ಷಿಣ ಕರ್ನಾಟಕದಲ್ಲಿ ಒಟ್ಟು ಸಾಗುವಳಿ ಪ್ರದೇಶದಲ್ಲಿ ಶೇ. ೨೮.೦೫ ರಷ್ಟು ನೀರಾವರಿ ಸೌಲಭ್ಯ ಪಡೆಯುತ್ತಿದ್ದರೆ ಉತ್ತರ ಕರ್ನಾಟಕದಲ್ಲಿ ನೀರಾವರಿ ಸೌಲಭ್ಯ ಪಡೆಯುತ್ತಿರುವ ಪ್ರದೇಶದ ಪ್ರಮಾಣ ಕೇವಲ ಶೇ. ೨೨.೮೮.

ಅಭಿವೃದ್ಧಿ ಸಂಬಂಧಿಸಿದ ಇಂತಹ ಪ್ರಾದೇಶಿಕ ಅಸಮಾನತೆಯ ಗತಿ ಮತ್ತು ಗಾತ್ರವನ್ನು ಗುರುತಿಸುವುದಕ್ಕಿಂತ ಅದರ ಹಿಂದಿನ ಕಾರಣಗಳನ್ನು ಹಿಡಿದಿಡುವುದು ತುಂಬಾ ಮುಖ್ಯ. ರಾಜ್ಯ ಸರ್ಕಾರದ ಮಲತಾಯಿ ಧೋರಣೆಯನ್ನು ಇದಕ್ಕೆ ಕಾರಣ ಮಾಡುವ ಒಂದು ಜನಪ್ರಿಯ ವಾದವಿದೆ. ಇದು ಸ್ವಲ್ಪಮಟ್ಟಿಗೆ ನಿಜವಿರಬಹುದು. ಇಲ್ಲಿ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಬೀದರ್, ಗುಲಬರ್ಗಾ, ರಾಯಚೂರು, ಕೊಪ್ಪಳ, ಬಳ್ಳಾರಿ, ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಬಗ್ಗೆ ಮಲತಾಯಿ ಧೋರಣೆ ತಳೆದು ರಾಜ್ಯ ಸರ್ಕಾರವು ಬದುಕಿದ್ದಾದರೂ ಹೇಗೆ? ಈ ಜಿಲ್ಲೆಗಳ ಉತ್ಪಾದನಾ ಸಂಬಂಧ, ಸಾಮಾಜಿಕ ಸ್ವರೂಪ ಹಾಗೂ ರಾಜಕಾರಣಗಳಲ್ಲಿ ನಾವು ಅದರ ಹಿಂದುಳಿದಿರುವಿಕೆಯ ನೆಲೆಯನ್ನು ಗುರುತಿಸುವ ಅಗತ್ಯವಿದೆ. ಈ ಜಿಲ್ಲೆಗಳಿಗೆ ವಿಶಿಷ್ಟವಾದ ಸಂಗತಿಗಳಲ್ಲಿ ಅವುಗಳ ಹಿಂದುಳಿದಿರುವಿಕೆಯ ಸಂಕೀರ್ಣತೆಯನ್ನು ಹಿಡಿದಿಡಬೇಕಾಗಿದೆ. ಯಾಕೆ ಈ ಜಿಲ್ಲೆಗಳಲ್ಲಿ ಭೂರಹಿತ ದಿನಗೂಲಿ ದುಡಿಮೆಗಾರರ ಸಂಖ್ಯೆ ಅಪಾರವಾಗಿದೆ? ಈ ಜಿಲ್ಲೆಗಳಲ್ಲಿ ಮಾತ್ರ ಯಾಕೆ ನಮಗೆ ದುಡಿಮೆಗಾರರ ವಲಸೆ ಪ್ರವೃತ್ತಿ ಕಂಡುಬರುತ್ತದೆ? ಯಾಕೆ ಈ ಜಿಲ್ಲೆಗಳಲ್ಲಿ ಮಾತ್ರ ಸಾಕ್ಷರತೆ ಪ್ರಮಾಣ ಕೆಳಮಟ್ಟದಲ್ಲಿದೆ? ಇವುಗಳಿಗೆ ಉತ್ತರ ಕಂಡುಕೊಂಡರೆ ನಮಗೆ ಪ್ರಾದೇಶಿಕ ಅಸಮಾನತೆಯ ತಳಬುಡ ಅರ್ಥವಾಗುತ್ತದೆ. ಈ ಜಿಲ್ಲೆಗಳ ಯಾವ ಪ್ರತಿನಿಧಿಯೂ ದುಡಿಮೆಗಾರರ ವಲಸೆ ಬಗ್ಗೆ ಮಾತನಾಡುವುದಿಲ್ಲ. ಜೇವರ್ಗಿ ತಾಲ್ಲೂಕಿನ ಸಾಕ್ಷರತೆ ಪ್ರಮಾಣ ಯಾಕೆ ಇಡೀ ರಾಜ್ಯದಲ್ಲಿ ಕಡಿಮೆಯಿದೆ ಎಂಬುದರ ಬಗ್ಗೆ ಆ ತಾಲ್ಲೂಕಿನ ಶಾಸಕರು ತಲೆಕೆಡಿಸಿಕೊಂಡಿಲ್ಲ. ಈ ಸಮಸ್ಯೆಗಳ ಬಗ್ಗೆ, ಸಂಗತಿಗಳ ಮಾತನಾಡದೆಯೂ ಅಲ್ಲಿನ ಶಾಸಕರಾಗುವುದು ಅವರಿಗೆ ಸಾಧ್ಯವಾಗಿದೆ. ಇದು ಎಲ್ಲಿಯವರೆಗೆ ಬದಲಾಗುವುದಿಲ್ಲವೋ ಅಲ್ಲಿಯವರೆಗೆ ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆ ಸಮಸ್ಯೆ ಬಗೆಹರಿಯುವುದಿಲ್ಲ. ಮಲತಾಯಿ ಧೋರಣೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುವುದಕ್ಕೆ ಪ್ರತಿಯಾಗಿ ಸರ್ಕಾರಕ್ಕೆ ಮಲತಾಯಿ ಧೋರಣೆ ತಳೆಯುವುದು ಹೇಗೆ ಸಾಧ್ಯವಾಯಿತು ಎಂಬುದನ್ನು ನಾವು ಇಂದು ಅರ್ಥಮಾಡಿಕೊಳ್ಳಬೇಕಾಗಿದೆ.

ಡಿ.ಎಂ. ನಂಜುಂಡಪ್ಪ ವರದಿಯ ರೂ.೧೬,೦೦೦ ಕೋಟಿ ವಿಶೇಷ ಅಭಿವೃದ್ಧಿ ಯೋಜನೆ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಸಮಸ್ಯೆಯು ಬಂಡವಾಳದಲ್ಲ ಎಂಬುದನ್ನು ಇನ್ನಾದರೂ ನಾವು ಅರ್ಥಮಾಡಿಕೊಳ್ಳಬೇಕು. ಉತ್ಪಾದನಾ ಸಂಬಂಧಗಳ ನೆಲೆಯಿಂದ, ಜಾತಿ ರಚನೆಯ ನೆಲೆಯಿಂದ, ಲಿಂಗ ಸಂಬಂಧಗಳ ನೆಲೆಯಿಂದ ಅಭಿವೃದ್ಧಿಯನ್ನು, ಪ್ರಾದೇಶಿಕ ಅಸಮಾನತೆಯನ್ನು ಪರಿಶೀಲಿಸಬೇಕಾಗುತ್ತದೆ. ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಪ್ರಾದೇಶಿಕ ಅಸಮಾನತೆಯ ವಸ್ತುಸ್ಥಿತಿಯನ್ನು ತಿಳಿಯುವ ಅಗತ್ಯವಿದೆ.

ಭಾಗ
ಸ್ವಾತಂತ್ರ್ಯವಾಗಿ ಅಭಿವೃದ್ಧಿ

ಅಮರ್ತ್ಯಸೆನ್ ಅವರು ಅಭಿವೃದ್ಧಿಯನ್ನು ಸ್ವಾತಂತ್ರ್ಯದ ಪರಿಭಾಷೆಯಲ್ಲಿ ಮಾನವ ಹಕ್ಕುಗಳ ಚೌಕಟ್ಟಿನಲ್ಲಿ ನಿರ್ವಚಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಇತ್ತೀಚಿಗಿನ ಗ್ರಂಥದ ಹೆಸರು ‘ಸ್ವಾತಂತ್ರ್ಯವಾಗಿ ಅಭಿವೃದ್ಧಿ’ (ಡೆವಲಪ್‌ಮೆಂಟ್ ಆಸ್ ಫ್ರೀಡಮ್‌). ಆಡಂಸ್ಮಿತ್‌ನ ಕಾಲದಿಂದಲೂ ಅಭಿವೃದ್ಧಿಯನ್ನು ವರಮಾನದ ವರ್ಧನೆಯೆಂದೂ, ಕೈಗಾರಿಕೀಕರಣವೆಂದೂ, ಸಾಮಾಜಿಕ ಆಧುನಿಕೀಕರಣವೆಂದೂ ನಿರ್ವಚಿಸಿಕೊಂಡು ಬರಲಾಗಿದೆ. ಸೆನ್‌ಪ್ರಕಾರ ಇವೆಲ್ಲವೂ ಅಭಿವೃದ್ಧಿಯ ಸಾಧನೆಗಳು ಮಾತ್ರ. ಆದರೆ ಅದರ ಸಾಧ್ಯ ಜನರ ಧಾರಣಶಕ್ತಿಯ ಸಂವರ್ಧನೆ. ಬದುಕನ್ನು ತಮ್ಮ ಅಪೇಕ್ಷೆಗೆ ಅನುಗುಣವಾಗಿ ಕಟ್ಟಿಕೊಳ್ಳಲು ಜನರಿಗೆ ಅವಕಾಶವಿರಬೇಕು. ಈ ಅವಕಾಶಗಳ ಕೊರತೆಯನ್ನು ಸೆನ್‌ದುಸ್ಥಿತಿಯೆಂದು ಕರೆಯುತ್ತಾರೆ. ಅವಕಾಶಗಳಲ್ಲಿ ಆಯ್ಕೆಯ ಸ್ವಾತಂತ್ರ್ಯ ಇಲ್ಲದಿದ್ದರೆ ಅದು ದುಸ್ಥಿತಿ. ಮಾಹಿತಿ ಕ್ರಾಂತಿ ಕರ್ನಾಟಕದಲ್ಲಿ ನಡೆಯುತ್ತಿದೆ. ಆದರೆ ಜೇವರ್ಗಿಯ, ಶಿರಗುಪ್ಪದ, ದೇವದುರ್ಗದ ನಿರಕ್ಷರಕುಕ್ಷಿಗಳಿಗೆ ಮಾಹಿತಿಕ್ರಾಂತಿಯ ಅವಕಾಶವನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಿಂದುಳಿದ ಜಿಲ್ಲೆಗಳ ಲಕ್ಷಾಂತರ ದುಡಿಯುವ ಮಹಿಳೆಯರಿಗೆ ಸ್ಥಳೀಯವಾಗಿ ದೊರೆಯುವ ದಿನಗೂಲಿ ರೂ. ೧೦೦ ರಿಂದ ೧೨೦. ಅದನ್ನು ಅವರು ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಉಪವಾಸ. ಇಲ್ಲಿ ವಿಕಲ್ಪಗಳೇ ಇಲ್ಲ. ಇದು ದುಸ್ಥಿತಿ. ಗಂಡನು ಕುಡುಕನಾಗಿರಲಿ, ರೋಗಿಷ್ಠನಾಗಿರಲಿ, ಹೆಂಡತಿಯನ್ನು ಹಿಂಸಿಸಲಿ, ಅವನ ಹೆಂಡತಿಯಾದವಳು ಅವನನ್ನು ಗಂಡನೆಂದು, ಪರದೈವವೆಂದೂ ನಂಬಿ ಬದುಕಬೇಕು. ಅವಳಿಗೆ ವಿಕಲ್ಪಗಳಿಲ್ಲ. ಇದು ದುಸ್ಥಿತಿ. ಬಡತನದಿಂದ, ಹಸಿವಿನಿಂದ, ಅನಕ್ಷರತೆಯಿಂದ, ಅಸ್ವಸ್ಥತೆಯಿಂದ, ಹಿಂಸೆಯಿಂದ ಬಿಡುಗಡೆ ಪಡೆಯುವುದು ಅಭಿವೃದ್ಧಿ. ಇದು ಸಶಕ್ತೀಕರಣ. ಅಭಿವೃದ್ಧಿಯನ್ನು ಸಾಧನಗಳ ನೆಲೆಯಿಂದ ಪರಿಭಾವಿಸಿಕೊಳ್ಳುವುದಕ್ಕೆ ಪ್ರತಿಯಾಗಿ ಅಮರ್ತ್ಯಸೆನ್‌ಅದರ ಸಾಧ್ಯಗಳ ನೆಲೆಯಿಂದ ಪರಿಭಾವಿಸಿಕೊಳ್ಳುತ್ತಾರೆ. ವರಮಾನ, ಉತ್ಪನ್ನ, ಬಂಡವಾಳಗಳು ಆರೋಗ್ಯವಾಗಿ, ಅಕ್ಷರವಾಗಿ, ಆಶ್ರಯವಾಗಿ, ಆಹಾರವಾಗಿ ಒದಗುವುದನ್ನು ಅಭಿವೃದ್ಧಿಯೆಂದು ಕರೆಯುತ್ತಾರೆ. ಸ್ವಾತಂತ್ರ್ಯವೆಂಬುದು ಅಭಿವೃದ್ಧಿಯೂ ಹೌದು ಮತ್ತು ಅದನ್ನು ಮಾಪನ ಮಾಡುವ ಮಾನದಂಡವೂ ಹೌದು. ಸ್ವಾತಂತ್ರ್ಯವನ್ನು ಸೆನ್ ನಿರ್ಬಂಧ – ನಿಯಂತ್ರಣಗಳಲ್ಲಿನ ಸ್ಥಿತಿಯೆಂದು ಪರಿಭಾವಿಸುವುದಕ್ಕೆ ಪ್ರತಿಯಾಗಿ ಸಾಧಿಸಿಕೊಳ್ಳಲು ಅಗತ್ಯವಾದ ಸಾಮರ್ಥ್ಯವಾಗಿ ಪರಿಭಾವಿಸಿಕೊಳ್ಳುತ್ತಾರೆ. ನಿರ್ಬಂಧಗಳು – ನಿಯಂತ್ರಣಗಳೂ ಇಲ್ಲದ ಸ್ಥಿತಿಯನ್ನು ಉದಾರವಾದವೆಂದು, ಜಾಗತೀಕರಣವೆಂದೂ ಕರೆಯಲಾಗುತ್ತಿದೆ. ಇವೆಲ್ಲವೂ ಅಭಿವೃದ್ಧಿಗೆ ಅಗತ್ಯ. ಆದರೆ ಅವೇ ಅಭಿವೃದ್ಧಿಯಲ್ಲ. ತಮಗೆ ಅಗತ್ಯವಿರುವುದನ್ನು ಸಾಧಿಸಿಕೊಳ್ಳಲು ಜನರಲ್ಲಿರುವ ಸಾಮರ್ಥ್ಯವನ್ನು ಅಮರ್ತ್ಯಸೆನ್‌ಸ್ವಾತಂತ್ರ್ಯವೆನ್ನುತ್ತಾನೆ. ಈ ಸಾಮರ್ಥ್ಯ ಮತ್ತು ಸ್ವಾತಂತ್ರ್ಯಗಳನ್ನು ಕೂಡಿಸಿ ಅವರು ಧಾರಣಶಕ್ತಿ (ಕೆಫಬಲಿಟಿ) ಎಂದು ಕರೆಯುತ್ತಾರೆ. ಈ ಧಾರಣಶಕ್ತಿಯ ಸಂವರ್ಧನೆಯೇ ಅಭಿವೃದ್ದಿ. ಅದರ ಕೊರತೆಯೇ ದುಸ್ಥಿತಿ. ಅದರಿಂದ ವಂಚಿತರಾದವರೆ ಬಡವರು. ಕಳೆದ ೫೦ ವರ್ಷಗಳ ಕಾಲಾವಧಿಯಲ್ಲಿ ಧಾರಣಶಕ್ತಿಯಿಂದ ವಂಚಿತರಾದವರು ಯಾರು ಮತ್ತು ಅದರಿಂದ ಧನ್ಯರಾದವರು ಯಾರು ಎಂಬುದನ್ನು ನಾವು ವಿಶ್ಲೇಷಿಸಬಹುದು. ಸ್ವಾತಂತ್ರ್ಯವೆಂಬುದು ಅಖಂಡವಾದ ಸಂಗತಿಯೇನಲ್ಲ. ಮಹಿಳೆಯೊಬ್ಬಳಿಗೆ ತನ್ನ ಊರು ಬಿಟ್ಟು ಬೇರೊಂದು ಊರಿಗೆ ದುಡಿಯಲು ಹೋದರೆ ಕೂಲಿ ರೂ. ೧೦೦ ಕ್ರಕೆ ಪ್ರತಿಯಾಗಿ ರೂ.೧೫೦ ದೊರೆಯುತ್ತದೆ. ಆದರೆ ಸಂಚಾರ ಸಂಬಂಧಿ ಸಂಕೋಲೆಯಿಂದಾಗಿ, ಗೃಹವಾರ್ತೆಯ ಜವಾಬುದರಿಯಿಂದಾಗಿ, ಅನಕ್ಷರತೆಯಿಂದಾಗಿ ಅದನ್ನು ಪಡೆಯಲು ಮಹಿಳೆಯೊಬ್ಬಳಿಗೆ ಸಾಧ್ಯವಿಲ್ಲವಾದರೆ ಅದು ದುಸ್ಥಿತಿ. ಅಲ್ಲಿ ಸ್ವಾತಂತ್ರ್ಯವಿಲ್ಲ. ಈ ಬಗೆಯಲ್ಲಿ ಕರ್ನಾಟಕದ ಅಭಿವೃದ್ಧಿಯನ್ನು ಪರಿಭಾವಿಸಿಕೊಳ್ಳುವ ಪರಿ ಕಂಡುಬರುತ್ತಿಲ್ಲ. ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಅಭಿವೃದ್ಧಿಯನ್ನು ನಾವು ಪರಿಭಾವಿಸಿಕೊಳ್ಳುವ ಕ್ರಮದಲ್ಲಿ ಬದಲಾವಣೆ ತರಬೇಕಾಗಿದೆ. ಬದುಕನ್ನು ಕಟ್ಟಿಕೊಳ್ಳಲು ಅಗತ್ಯವಾದ ಅವಕಾಶಗಳ ವ್ಯಾಪ್ತಿ ವರ್ಧಿಸಬೇಕು. ವರ್ಧನೆಯಾದ ಅವಕಾಶಗಳಲ್ಲಿ ವಿಕಲ್ಪಗಳಿಗೆ ಎಣೆಯಿರಬೇಕು. ಇಂದಿಗೂ ಕರ್ನಾಟಕದಲ್ಲಿ ಯಾಕೆ ಲಕ್ಷಾಂತರ ದಲಿತರು ಗ್ರಾಮಗಳ ರಾಡಿ ನೀರು ಹರಿದುಹೋಗಿ ನಿಲ್ಲುವ ಊರಾಚೆಯಲ್ಲಿ, ಜನರು ಕಸ, ಗೊಬ್ಬರ ಹಾಕುವ ಸ್ಥಳಗಳಲ್ಲಿ ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಏಕೆ? ಇಲ್ಲಿ ಸ್ವಾತಂತ್ರ್ಯದ ದಮನವಾಗಿದೆ. ಇಲ್ಲಿ ಅಭಿವೃದ್ಧಿಗೆ ಅವಕಾಶವಿಲ್ಲವಾಗಿದೆ. ಈ ಹಿಂದೆ ಹೇಳಿರುವ ಕರ್ನಾಟಕದ ಹಿಂದುಳಿದ ಏಳು ಜಿಲ್ಲೆಗಳಲ್ಲಿ ನೀವು ಯಾವ ಪ್ರಾಥಮಿಕ ಶಾಲೆಗಳಿಗೆ ಭೇಟಿ ಕೊಟ್ಟರೂ, ಮೊದಲನೆಯ ತರಗತಿಯಲ್ಲಿ ನೂರು ಮಕ್ಕಳಿದ್ದರೆ ಏಳನೆಯ ತರಗತಿಯಲ್ಲಿ ೫೦ ಕ್ಕಿಂತ ಕಡಿಮೆ ಮಕ್ಕಳಿರುತ್ತಾರೆ. ಹಾಗಾದರೆ ಉಳಿದ ೫೦ ಮಕ್ಕಳು ಎಲ್ಲಿ ಹೋದರು? ಅವರಲ್ಲಿ ಬಹುಪಾಲು ಮಕ್ಕಳು ಪ.ಜಾ., ಪ.ಪಂ., ಒಬಿಸಿ, ಅಲ್ಪಸಂಖ್ಯಾತ ಗುಂಪುಗಳಿಗೆ ಸೇರಿದವರಾಗಿರುತ್ತಾರೆ. ಶಾಲೆಯನ್ನು ಮಧ್ಯದಲ್ಲಿ ಬಿಟ್ಟ ಮಕ್ಕಳಲ್ಲಿ ಶೇ.೫೦ ರಷ್ಟು ಬಾಲಕಿಯರಿರುತ್ತಾರೆ. ಇಲ್ಲಿ ಪ್ರಾಥಮಿಕ ಶಾಲೆಯ ಶ್ರೇಣಿಯಲ್ಲಿ ಮೇಲೆ ಹೋದಂತೆ ಉನ್ನತ ಶಾಲೆ – ವರ್ಗದವರ ಪ್ರಮಾಣ ಅಧಿಕವಿರುತ್ತದೆ. ಕೆಳಗಡೆ ವಂಚಿತರ, ಪರಿಶಿಷ್ಟರ, ಬಾಲಕಿಯರ ಪ್ರಮಾಣ ಅಧಿಕವಿರುತ್ತದೆ. ಈ ಶ್ರೇಣೀಕರಣದಲ್ಲಿ ತುದಿ ಸೀಮಿತವಾಗಿರುತ್ತದೆ. ಬುಡ ವಿಸ್ತೃತವಾಗಿರುತ್ತದೆ. ತುದಿಯಲ್ಲಿ ಉನ್ನತ ಜಾತಿ, ವರ್ಗದವರಿದ್ದರೆ ಬುಡದಲ್ಲಿ ವಂಚಿತರು ಇರುತ್ತಾರೆ. ಇದನ್ನೇ ಜೆನ್ ಬ್ರಮೆನ್‌ಅವರು ‘ಆರೋಹಣವಾದಿ ಅಸಮಾನತೆ’ಯೆಂದು ಕರೆದಿದ್ದಾರೆ. ಪಿರಮಿಡ್ಡಿನ ತುದಿಯಲ್ಲಿ ಸ್ವಾತಂತ್ರ್ಯವಿದ್ದರೆ ಬುಡದಲ್ಲಿ ದುಸ್ಥಿತಿಯಿದೆ. ಸ್ವಾತಂತ್ರ್ಯವು ತುದಿಯಲ್ಲಿ ಯಾವ ಗತಿಯಲ್ಲಿ ವರ್ಧನೆಯಾಗುತ್ತಿದೆಯೋ ಅದೇ ಗತಿಯಲ್ಲಿ ಬುಡದಲ್ಲಿ ಬಡತನವು ಕಡಿಮೆಯಾಗುತ್ತಿಲ್ಲ. ಕಳೆದ ೫೦ ವರ್ಷಗಳಲ್ಲಿ ಕರ್ನಾಟಕವು ಸಾಧಿಸಿಕೊಂಡಿದ್ದು ಆರೋಹಣವಾದಿ ಅಸಮಾನತೆ, ಇದನ್ನು ಸರಿಪಡಿಸುವ ಬಗ್ಗೆ ಇಂದು ಚರ್ಚೆಯಾಗಬೇಕು. ಸುವರ್ಣ ಮಹೋತ್ಸವದ ಸುವರ್ಣ ಶಪಥವು ಇದಾಗಬೇಕು.

ಭಾಗ

ಕಳೆದ ೫೦ ವರ್ಷಗಳ ಕಾಲಾವಧಿಯಲ್ಲಿ ವರಮಾನದ ವರ್ಧನೆಯ ದೃಷ್ಟಿಯಿಂದ ಅಭಿವೃದ್ಧಿಯಾಗಿದೆ. ಕೈಗಾರಿಕೀಕರಣವಾಗಿದೆ. ಸಮಾಜವು ಆಧುನೀಕರಣಗೊಳ್ಳುತ್ತಿದೆ. ಉತ್ಪಾದನೆ ಏರುಮುಖಿಯಾಗಿದೆ. ರಾಜ್ಯವು ಆಹಾರ ಭದ್ರತೆಯನ್ನು ಸಾಧಿಸಿಕೊಂಡಿದೆ. ರಾಷ್ಟ್ರಮಟ್ಟದ ಸಾಕ್ಷರತೆ ಪ್ರಮಾಣಕ್ಕಿಂತ ತುಸು ಹೆಚ್ಚಿನ ಸಾಕ್ಷರತೆಯನ್ನು ರಾಜ್ಯ ಸಾಧಿಸಿಕೊಂಡಿದೆ. ಕೃಷಿಯ ಅವಲಂಬನೆಯು ವರಮಾನದ ದೃಷ್ಟಿಯಿಂದ ಕಡಿಮೆಯಾಗಿದೆ. ರಸ್ತೆಗಳ ಉದ್ದ ಹಾಗೂ ಗುಣಮಟ್ಟ ಉತ್ತಮವಾಗಿದೆ. ಬ್ಯಾಂಕುಗಳು ಎಲ್ಲ ಕಡೆ ಕಾರ್ಯಾರಂಭ ಮಾಡಿವೆ. ಶಾಲಾ – ಕಾಲೇಜುಗಳು ನಗರಗಳಲ್ಲಿ ಜಗಮಗಿಸುತ್ತಿವೆ. ಬೆಂಗಳೂರು ಸಿಂಗಪುರವಾಗುತ್ತಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಿದ್ಧವಾಗುತ್ತಿದೆ. ಗುಲಬರ್ಗಾದಲ್ಲೂ ವಿಮಾನ ನಿಲ್ದಾಣ ಬೇಕೆಂದು ಶಾಸಕರು ಒತ್ತಾಯಿಸುತ್ತಿದ್ದಾರೆ. ಇವೆಲ್ಲ ಅಭಿವೃದ್ಧಿಯೆನ್ನುವುದಾದರೆ ಅದು ಅಭಿವೃದ್ಧಿ. ಅದರ ಮೆರೆದಾಟವೇ ಸುವರ್ಣ ಮಹೋತ್ಸವವೆನ್ನುವುದಾದರೆ ಅದು ಅಭಿವೃದ್ಧಿ. ಅದರ ಮೆರೆದಾಟವೇ ಸುವರ್ಣ ಮಹೋತ್ಸವವೆನ್ನುವುದಾದರೆ ಇನ್ನು ಒಂದು ವರ್ಷ ಕರ್ನಾಟಕದಲ್ಲಿ ಬಾಜಾ – ಭಜಂತ್ರಿಗೆ, ಹಾರ – ತುರಾಯಿಗಳಿಗೆ ಬರವಿಲ್ಲ.

ಒಣಭೂಮಿ ಬೇಸಾಯದ ರೈತ ಸಮುದಯದ ಅಳಲು ಮುಗಿಲು ಮುಟ್ಟುತ್ತಿದೆ. ಶಾಲೆ ಸೇರದ ಮಕ್ಕಳ ಪ್ರಮಾಣ ಹಿಂದುಳಿದ ಜಿಲ್ಲೆಗಳಲ್ಲಿ ಅಧಿಕವಾಗಿದೆ. ಸುಮಾರು ೯ ಲಕ್ಷ ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ. ಹೆಣ್ಣು ಮಕ್ಕಳು ಹುಟ್ಟುವುದೇ ಇಂದು ದುರ್ಲಭವಾಗುತ್ತಿದೆ. ರಾಜ್ಯದಲ್ಲಿ ೧೫೧ ಲಕ್ಷ ಅನಕ್ಷರಸ್ಥರಿದ್ದಾರೆ. ಸುಮಾರು ೬೦ ಲಕ್ಷ ದಿನಗೂಲಿ ದುಡಿಮೆಗಾರರು ‘ಕೂಲಿಯದ್ದರೆ ಕೂಳು’ ಎನ್ನುವ ಬದುಕು ದೂಡುತ್ತಿದ್ದಾರೆ. ಅಭಿವೃದ್ಧಿಗೆ ಪರಿಶಿಷ್ಟರ ಕಾಣಿಕೆ ಅಪಾರವಾಗಿದೆ. ಆದರೆ ಅದರಿಂದ ಪರಿಶಿಷ್ಟರಿಗೆ ದೊರಕುತ್ತಿರುವ ಫಲ ನಿಕೃಷ್ಟವಾಗಿದೆ. ಸಮಾಜ ವಿಜ್ಞಾನಿಗಳು ಗುರುತಿಸುವಂತೆ ಇಲ್ಲಿ ಬದಲಾವಣೆಗಳಾಗುತ್ತಿವೆ. ರಾಜ್ಯದಲ್ಲಿ ಅಭಿವೃದ್ಧಿಯಾಗುತ್ತಿದೆ. ಅದು ಪಿರಮಿಡ್ಡಿನ ಮೇಲು ಭಾಗದಲ್ಲಿ ಮಡುಗಟ್ಟಿಕೊಳ್ಳುತ್ತಿದೆ. ವಿಶಾಲವಾದ ಬುಡಮಟ್ಟದಲ್ಲಿ ದುಸ್ಥಿತಿ ತೀವ್ರವಾಗಿದೆ. ಇದೇ ‘ಆರೋಹಣವಾದಿ ಅಸಮಾನತೆ.’

ಈ ಪ್ರಬಂಧದಲ್ಲಿ ನಮ್ಮ ಅಭಿವೃದ್ಧಿ ಕಾರ್ಯತಂತ್ರ ಇನ್ನು ಮುಂದೆ ಯಾವುದಿರಬೇಕು ಎಂಬುದರ ಬಗ್ಗೆ ನೇರವಾಗಿ ಏನನ್ನು ಹೇಳಿಲ್ಲ. ಆದರೆ ಅದು ಪ್ರಚ್ಛನ್ನವಾಗಿ ಇಲ್ಲಿ ಕೆಲಸ ಮಾಡಿದೆ. ಸಮಾಜದಲ್ಲಿ ವಂಚಿತರಾಗಿದ್ದಾರೆ. ಅಲಕ್ಷಿತರಾರಿದ್ದಾರೆ, ಅಂಚಿನಲ್ಲಿರುವವರು ಯಾರಿದ್ದಾರೆ ಅವರ ಪದತಲದಿಂದ ಅಭಿವೃದ್ಧಿಯನ್ನು ಪರಿಭಾವಿಸಿಕೊಳ್ಳುವ ಅಗತ್ಯವಿದೆ. ರಾಜ್ಯವು ಆಹಾರ ಭದ್ರತೆಯಿಂದ ಕಂಗೊಳಿಸುತ್ತಿರಬಹುದು. ಅದು ಜನರ ಆಹಾರ ಭದ್ರತೆಯಾಗಿ ಪರಿವರ್ತನೆಯಾಗುವ ಅಗತ್ಯವಿದೆ. ಇನ್ನು ಮುಂದೆ ನಮ್ಮ ಅಭಿವೃದ್ಧಿ ಕಾರ್ಯತಂತ್ರವು ಅದರ ವ್ಯಾಪ್ತಿ ಮತ್ತು ಹರವನ್ನು ವಿಸ್ತೃತಗೊಳಿಸುವ ಸ್ವರೂಪದಲ್ಲಿರಬೇಕು. ಅಭಿವೃದ್ಧಿಯ ಮೂಲ ದ್ರವ್ಯ ಹಾಗೂ ಅದರ ಗುರಿ ಜನರ ಧಾರಣಶಕ್ತಿಯ ವರ್ಧನೆಯಾಗಿರಬೇಕು. ಅಭಿವೃದ್ಧಿಯ ಕಾರ್ಯತಂತ್ರ ಲಿಂಗಸ್ಪಂದಿಯಾಗಬೇಕಾಗುತ್ತದೆ. ಹಿಂದುಳಿದ ಪ್ರದೇಶಗಳಲ್ಲಿನ ಹಿಂದುಳಿದ ಜನರ ಬಗ್ಗೆ ಗಮನಹರಿಸ ಬೇಕಾಗುತ್ತದೆ.

ನೀರಾವರಿ ಬಗ್ಗೆ, ನೀರಾವರಿ ಯೋಜನೆಗಳ ಬಗ್ಗೆ ಕಳೆದ ೫೦ ವರ್ಷಗಳಿಂದ ನಾವು ಹೆಣಗಾಡಿದ್ದೇವೆ. ಅದು ಇನ್ನು ಸಾಕು. ಒಣಭೂಮಿ ಬೇಸಾಯದಲ್ಲಿ ನಿರತರಾಗಿರುವ ರೈತಾಪಿಗಳು ಇ‌ನ್ನು ಮುಂದೆ ನಮ್ಮ ಅಭಿವೃದ್ಧಿ ಕಾರ್ಯತಂತ್ರದ ಗುರಿಯಾಗಬೇಕು. ಇಂಗ್ಲಿಷ್ ಅನ್ನು ನಮ್ಮ ಮಕ್ಕಳು ಯಾವ ತರಗತಿಯಿಂದ ಕಲಿಯಬೇಕು ಎಂಬುದಕ್ಕಿಂತ ನಮ್ಮ ಗಮನ ಇನ್ನು ಮುಂದೆ ಪ್ರಾಥಮಿಕ ಶಾಲೆಗಳ, ಅದರಲ್ಲೂ ಗ್ರಾಮಾಂತರ ಪ್ರದೇಶದಲ್ಲಿರುವ ಶಾಲೆಗಳ ಗುಣಮಟ್ಟದ ಬಗ್ಗೆ ಹೆಚ್ಚು ಗಮನಹರಿಸಬೇಕಾಗಿದೆ. ‘ಎಲ್ಲರಿಗೂ ಆರೋಗ್ಯ’ ಎಂಬ ಘೋಷಣೆ ಸರಿಯಿರಬಹುದು. ಆದರೆ ಆರೋಗ್ಯ ಭಾಗ್ಯದಿಂದ ವಂಚಿತರಾಗಿರುವ ಜನರು ನಮ್ಮ ಆರೋಗ್ಯ ನೀತಿಯ ಮೂಲದ್ರವ್ಯವಾಗಬೇಕು. ಕಳೆದ ೫೦ ವರ್ಷಗಳ ನಮ್ಮ ಅಭಿವೃದ್ಧಿಯ ಅನುಭವಗಳ ಮೌಲ್ಯಮಾಪನಕ್ಕೆ ಮತ್ತು ಅದರ ಆಧಾರದ ಮೇಲೆ ಮುಂದಿನ ಅಭಿವೃದ್ಧಿಯ ಕಾರ್ಯತಂತ್ರ ಯಾವುದರಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಲು ಸುವರ್ಣ ಮಹೋತ್ಸವವು ಅನುವು ಮಾಡಿಕೊಡಬೇಕು. ಅಭಿವೃದ್ಧಿ ಕುರಿತಂತೆ ಆತ್ಮಾವಲೋಕನ ನಡೆಯಬೇಕು. ಅದರ ಆಧಾರದ ಮೇಲೆ ಮುಂದಿನ ಅಭಿವೃದ್ಧಿಯ ಕಾರ್ಯತಂತ್ರ ರೂಪುಗೊಳ್ಳಬೇಕು. ಮಧ್ಯಮಗತಿ ಅಭಿವೃದ್ಧಿಯನ್ನು ನಾವು ಮುಂದೆ ದೃತಗತಿ ಮಾಡುತ್ತೇವೆಯೋ ಇಲ್ಲವೋ ಅದು ಮುಖ್ಯವಲ್ಲ. ಆದರೆ ಅದು ಜನಮುಖಿಯಾಗುತ್ತದೆಯೋ – ಸಮಾಜಮುಖಿಯಾಗುತ್ತಿದೋ ಇಲ್ಲವೋ ಎಂಬುದು ಮುಖ್ಯವಾಗಬೇಕು.