೧. ಭಾರತದ ಸಂದರ್ಭದಲ್ಲಿ ಬುಡಕಟ್ಟು ಜನರ ಅಭಿವೃದ್ಧಿಗಾಗಿ ಕಾರ್ಯ ಕ್ರಮಗಳಿವೆ ವಿನಾ ಬುಡಕಟ್ಟು ಅಭಿವೃದ್ಧಿ ನೀತಿ ಎಂಬುದೇನೂ ಇಲ್ಲ. ‘ನೀತಿ’ ಬೇರೆ ‘ಕಾರ್ಯಕ್ರಮ’ ಬೇರೆ. ‘ನೀತಿ’ ಅಂದರೆ ಪ್ರಜ್ಞಾಪೂರ್ವಕವಾಗಿ ರೂಪಿಸಿದ ಉದ್ದೇಶಗಳನ್ನು ಒಳಗೊಂಡ ಒಂದು ಕಾಯಕಲ್ಪ. ಈ ಕಾಯಕಲ್ಪದ ಉದ್ದೇಶಗಳನ್ನು ಈಡೇರಿಸಲು ಇರುವ ಚಟುವಟಿಕೆಗಳೇ ‘ಕಾರ್ಯಕ್ರಮ’. ಬುಡಕಟ್ಟು ಜನರನ್ನು ಗಮನದಲ್ಲಿಟ್ಟುಕೊಂಡು ಅವರ ಸಾಂಸ್ಕೃತಿಕ ಭಿನ್ನತೆ – ಅನನ್ಯತೆ, ಅವರ ಕಾರ್ಯಕ್ಷೇತ್ರ, ಅವರ ಕಸಬು ಇವುಗಳ ಹಿನ್ನೆಲೆಯಲ್ಲಿ ಅವರ ಅಭಿವೃದ್ಧಿಯನ್ನು ಪರಿಭಾವಿಸಿಕೊಳ್ಳುವ ಕ್ರಮ ಅಭಿವೃದ್ಧಿ ಮೀಮಾಂಸೆಯಲ್ಲಿ ಇಲ್ಲ. ಅಭಿವೃದ್ಧಿಯನ್ನು ಕುರಿತಂತೆ ‘ನೀತಿ’ಯಿದೆ. ಬುಡಕಟ್ಟು ಅಭಿವೃದ್ಧಿಯೆನ್ನುವುದು ಅಭಿವೃದ್ಧಿ ನೀತಿಯ ಒಂದು ಭಾಗವೇ ವಿನಾ ಅದೇ ನೀತಿಯಲ್ಲ. ಈ ಕಾರಣಕ್ಕೆ ಬುಡಕಟ್ಟು ಅಭಿವೃದ್ಧಿಯೆನ್ನುವುದು ಕೇವಲ ಕಾರ್ಯಕ್ರಮವೇ ವಿನಾ ಅದೇನೂ ‘ನೀತಿ’ಯಲ್ಲವೆಂದು ಹೇಳಬೇಕಾಗಿದೆ.

ಅಭಿವೃದ್ಧಿಯನ್ನು ಪರಿಭಾವಿಸಿಕೊಂಡಿರುವ ಕ್ರಮವನ್ನು ನೋಡಿದರೆ ಅಲ್ಲಿ ಸೈದ್ಧಾಂತಿಕ ವಾಗಿಯೇ ಬುಡಕಟ್ಟು ಅಭಿವೃದ್ಧಿ ನೀತಿಯೆಂಬುದು ಸಾಧ್ಯವಿಲ್ಲವಾಗಿದೆ. ಇಡೀ ರಾಷ್ಟ್ರದ ಅಭಿವೃದ್ಧಿಯಲ್ಲಿ ಬುಡಕಟ್ಟುಗಳು ಅಂತರ್ಗತ ಭಾಗವೇ ಆಗಿರುವಾಗ ಅವುಗಳ ಅಭಿವೃದ್ಧಿಯನ್ನು ಪ್ರತ್ಯೇಕವಾಗಿ ಪರಿಭಾವಿಸಿಕೊಳ್ಳುವ ಪ್ರಮೇಯ ಉದ್ಭವಿಸುವುದೇ ಇಲ್ಲ. ಇಡೀ ರಾಷ್ಟ್ರದ ಅಭಿವೃದ್ಧಿಯಲ್ಲಿ ಬುಡಕಟ್ಟುಗಳು ‘ಲೀನ’ವಾಗಿ ಹೋಗಬೇಕಾಗಿರುವುದರಿಂದ ಅವುಗಳ ಪ್ರತ್ಯೇಕ ಅಸ್ತಿತ್ವವನ್ನು ಒಪ್ಪಿಕೊಳ್ಳುವುದೇ ಅಲ್ಲಿ ಸಾಧ್ಯವಿಲ್ಲ.

೨. ನಾಗರಿಕ ಸಮಾಜ – ಬುಡಕಟ್ಟು ಸಮಾಜ ಎಂಬ ನುಡಿಗಳನ್ನು ಬಳಸಲಾಗುತ್ತಿದೆ. ಇವೆರಡರ ನಡುವಿನ ಸಂಬಂಧವು ಶ್ರೇಣೀಕೃತವಾದುದಾಗಿದೆ. ನಾಗರಿಕ ಸಮಾಜದ ಸಾಧನೆಯು ಉನ್ನತ ಮಟ್ಟದ್ದಾದರೆ ಬುಡಕಟ್ಟು ಸಮಾಜದ ಸಾಧನೆ ಕೆಳಕಮಟ್ಟದ್ದಾಗಿದೆ. ‘ನಾಗರಿಕ’ ಮತ್ತು ‘ಪ್ರಜೆ’ ಎಂಬ ನುಡಿಗಳನ್ನು ಒಂದೇ ಅರ್ಥದಲ್ಲಿ ಬಳಸುವುದು ರೂಢಿಯಲ್ಲಿದೆ. ಇವು ರಾಜಕೀಯ ಪ್ರಭುತ್ವಕ್ಕೆ ಸಂಬಂಧಿಸಿದ ಪರಿಭಾವನೆಗಳಾಗಿವೆ. ‘ನಾಗರಿಕ’ದ ಅರ್ಥವ್ಯಾಪ್ತಿಯು ‘ಪ್ರಜೆ’ಯ ಅರ್ಥವ್ಯಾಪ್ತಿಗಿಂತ ವಿಶಾಲವಾದುದಾಗಿದೆ. ಒಂದು ನಿರ್ದಿಷ್ಟ ಭೌಗೋಳಿಕ ಗಡಿಯಲ್ಲಿ ಸ್ಥಾಪಿತವಾದ ರಾಷ್ಟ್ರಪ್ರಭುತ್ವವೊಂದರ ಸದಸ್ಯರನ್ನು ಪ್ರಜೆಗಳು ಎಂದು ಕರೆಯಲಾಗುತ್ತದೆ. ರಾಷ್ಟ್ರ ಪ್ರಭುತ್ವವಿಲ್ಲದೆ ಪ್ರಜೆಗಳಿರಲು ಸಾಧ್ಯವಿಲ್ಲ. ‘ನಾಗರಿಕ’ ಎಂಬುದು ಪ್ರಜೆ ಎಂಬುದರ ಅರ್ಥವನ್ನು ಹೊಂದಿದ. ಆದರೆ ಈ ನುಡಿಯು ಪ್ರಜೆಯಲ್ಲದೆ ಅನ್ಯ ಅರ್ಥಗಳನ್ನು ಹೊಂದಿದೆ. ಅದೊಂದು ಮೌಲ್ಯ ನಿರ್ದಿಷ್ಟ ನುಡಿಯಾಗಿದೆ. ಅದೊಂದು ಗುಣ. ವಾಸ್ತವವಾಗಿ ‘ನಾಗರಿಕ’ ಎಂಬುದು ಬುಡಕಟ್ಟಿನ ವಿರುದ್ಧವಾಗಿ ಬಳಸಲಾಗುತ್ತಿದೆ. ಏಕೆಂದರೆ ‘ನಾಗರಿಕ’ ಎಂಬುದು ನಾಗರಿಕತೆ ಎಂಬ ಸಂಗತಿಯ ಜೊತೆ ಸಂಬಂಧ ಹೊಂದಿದೆ.

ನಾಗರಿಕರು ಎಂದರೆ ಅವರು ಅಕ್ಷರಸ್ಥರಾಗಿರುತ್ತಾರೆ, ಶಿಕ್ಷಿತರಾಗಿರುತ್ತಾರೆ. ಒಂದು ವೃತ್ತಿಯಲ್ಲಿ ಪರಿಣತರಾಗಿರುತ್ತಾರೆ. ಅವರೆಲ್ಲ ಒಂದು ಸಾಮಾಜಿಕ ಗುಂಪಿಗೆ ಸೇರಿರುತ್ತಾರೆ. ಅವರು ಬಹುಭಾಷಿಕರಾಗಿರುತ್ತಾರೆ. ರಾಷ್ಟ್ರಪ್ರಭುತ್ವವು ಕೊಡಮಾಡಿದ ಹಕ್ಕುಗಳು ಹಾಗೂ ಅದು ನಿಯಮಿಸಿದ ಕರ್ತವ್ಯಗಳೂ ಅವರಿಗೆ ಇರುತ್ತವೆ. ‘ನಾಗರಿಕ’ದ ಒಂದು ಬಹುಮುಖ್ಯ ಲಕ್ಷಣವೆಂದರೆ ನಾಗರಿಕನು ‘ವ್ಯಕ್ತಿ’ಯಾಗಿರುತ್ತಾನೆ.

ಈ ಎಲ್ಲ ಗುಣಗಳಿಗೆ ವಿರುದ್ಧವಾದುದೇ ಬುಡಕಟ್ಟು ಅದೊಂದು ಕುಲಸಂಬಂಧಿ ಸಂಗತಿಯಾಗಿದೆ. ಅಲ್ಲಿ ಒಂದು ಭಾಷೆ ಮಾತ್ರ ಇರಬಲ್ಲುದಾಗಿದೆ. ಅಲ್ಲಿ ‘ಸಮುದಾಯ’ ಮುಖ್ಯವಾಗಿರುತ್ತದೆ. ವ್ಯಕ್ತಿಯು ಸಮುದಾಯಕ್ಕೆ ನಿಷ್ಟನಾಗಿರಬೇಕಾಗುತ್ತದೆ. ಸಮುದಾಯ ನಿಯಮಿಸುವ ಕಟ್ಟಳೆಗಳಿಗೆ ವ್ಯಕ್ತಿ ಬದ್ಧನಾಗಿರಬೇಕಾಗುತ್ತದೆ.

೩. ಬುಡಕಟ್ಟು ಜನಾಂಗವೆಂದರೆ ಯಾರು? ಇದು ಸರಳವಾದ ಪ್ರಶ್ನೆಯಲ್ಲ. ಭಾರತದಲ್ಲಿ ಬುಡಕಟ್ಟುಗಳೇ ಇಲ್ಲ ಎಂಬ ವಾದದಿಂದ ಹಿಡಿದು ಅನೇಕ ಬುಡಕಟ್ಟುಗಳ ವಾಸಸ್ಥಾನ ಭಾರತ ಎನ್ನುವವರೆಗೆ ಬುಡಕಟ್ಟು ಜನಾಂಗದ ನಿರ್ವಚನದ ವ್ಯಾಪ್ತಿ ಹರಡಿದೆ. ಬುಡಕಟ್ಟುತನವೆನ್ನುವುದು ಆಧುನಿಕಪೂರ್ವ ಸ್ಥಿತಿ. ಬುಡಕಟ್ಟುಗಳು ತಮ್ಮ ಆಧುನಿಕಪೂರ್ವ ಸ್ಥಿತಿಯಿಂದ ಆಧುನಿಕ ಸ್ಥಿತಿಗೆ ವಿಕಾಸ ಹೊಂದಲೇ ಬೇಕಾಗುತ್ತದೆ. ಬುಡಕಟ್ಟುತನವೆನ್ನುವುದು ನಾಗರಿಕತೆಯ ವಿಕಾಸದಲ್ಲಿ ಒಂದು ಹಂತವಾಗಿದೆ.

ಬುಡಕಟ್ಟುತನವೆನ್ನುವುದು ಆಧುನಿಕಪೂರ್ವ ಸ್ಥಿತಿಯೆ? ಬುಡಕಟ್ಟುತನ ಹಾಗೂ ಆಧುನಿಕತೆಗಳು ಒಟ್ಟಿಗೆ ಇರಲು ಸಾಧ್ಯವಿಲ್ಲವೆ? ಆಧುನಿಕತೆಯ ಪ್ರಕ್ರಿಯೆಯಲ್ಲಿ ಬುಡಕಟ್ಟುಗಳ ಅಸ್ತಿತ್ವ ಇಲ್ಲವಾಗುತ್ತದೆಯೆ? ಇಂತಹ ಪ್ರಶ್ನೆಗಳನ್ನು ಕೇಳಿಕೊಂಡಾಗ ಉತ್ತರ ಸರಳವಾಗಿರುವುದಿಲ್ಲ. ಆಧುನಿಕತೆ ಹಾಗೂ ಬುಡಕಟ್ಟುಗಳು ಒಟ್ಟಿಗೆ ಬದುಕುತ್ತಿರುವ ಸ್ಥಿತಿಯನ್ನು ಇಂದು ನಾವು ನೋಡಬಹುದಾಗಿದೆ. ಆಧುನಿಕತೆ ಹಾಗೂ ಬುಡಕಟ್ಟುಗಳು ಪರಸ್ಪರ ವಿರುದ್ಧವಾದ ಸಂಗತಿಗಳಾಗಬೇಕಾಗಿಲ್ಲ. ನಾಗರಿಕತೆಯನ್ನು ರೇಖಾತ್ಮಕವಾಗಿ ಪರಿಭಾವಿಸಿಕೊಳ್ಳುವವರು ಮಾತ್ರ ಆಧುನಿಕಪೂರ್ವ ಸ್ಥಿತಿಯಿಂದ ಆಧುನಿಕ ಸ್ಥಿತಿಗೆ ಪರಿವರ್ತನೆಯಾದಾಗ ಬುಡಕಟ್ಟುತನವು ಇಲ್ಲವಾಗುತ್ತದೆ ಅಥವಾ ನಶಿಸುತ್ತದೆ ಎಂದು ವಾದಿಸಬಲ್ಲರು. ಬುಡಕಟ್ಟುಗಳು ಆಧುನಿಕತೆಯೊಂದಿಗೆ ಸಹ ಜೀವನ ನಡೆಸುತ್ತಿರುವ ಸಂಗತಿಯು ನಮ್ಮ ಮುಂದಿದೆ.

೪. ಅಭಿವೃದ್ಧಿಯನ್ನು ಚಾರ್ಲ್ಸ್‌ಡಾರ್ವಿನ್ನನ ವಿಕಾಸವಾದದ ಹಿನ್ನೆಲೆಯಲ್ಲಿ ರೇಖಾತ್ಮಕವಾಗಿ ಪರಿಭಾವಿಸಿಕೊಂಡು ಬರಲಾಗಿದೆ. ಅಭಿವೃದ್ಧಿಯನ್ನು ರಾಷ್ಟ್ರಪ್ರಭುತ್ವದ ಒಂದು ಚೌಕಟ್ಟಿನಲ್ಲಿ ಪರಿಭಾವಿಸಿಕೊಳ್ಳಲಾಗಿದೆ. ವಾಸ್ತವವಾಗಿ ರಾಷ್ಟ್ರಪ್ರಭುತ್ವ ಮತ್ತು ಅಭಿವೃದ್ಧಿ ಮೀಮಾಂಸೆಗಳು ಜೊತೆಜೊತೆಯಾಗಿ ರೂಪುಗೊಂಡ ಸಂಗತಿಗಳಾಗಿವೆ. ಇದಿಷ್ಟೇ ಅಲ್ಲ, ಆಧುನಿಕತೆಯೆಂಬ ವಿಚಾರ ಪ್ರಣಾಳಿಕೆಯೂ ಕೂಡ ರಾಷ್ಟ್ರಪ್ರಭುತ್ವ ಮತ್ತು ಅಭಿವೃದ್ಧಿ ಮೀಮಾಂಸೆಗಳ ಜೊತೆ ಬೆಳೆದ ಸಿದ್ಧಾಂತವಾಗಿದೆ. ಇವು ಮೂರು ಕಳೆದ ೫೦ – ೬೦ ವರ್ಷಗಳ ಕಾಲ ವಿಶ್ವದ ರಾಜಕೀಯ – ಆರ್ಥಿಕ – ಸಾಮಾಜಿಕ – ಸಾಂಸ್ಕೃತಿಕ ಸಂಗತಿಗಳನ್ನು ನಿಯಂತ್ರಿಸುತ್ತಾ, ಪ್ರಭಾವಿಸುತ್ತಾ, ರೂಪಿಸುತ್ತಾ ಬಂದ ಮಹಾಸಂಕಥನಗಳಾಗಿವೆ. ರಾಷ್ಟ್ರಪ್ರಭುತ್ವವೆನ್ನುವುದು ರಾಜಕೀಯ ಪರಿಭಾಷೆಗೆ ಸೇರಿದ ಸಂಗತಿಯಾದರೆ ಅಭಿವೃದ್ಧಿ ಮೀಮಾಂಸೆಯು ಆರ್ಥಿಕ ಜಗತ್ತಿಗೆ ಸೇರಿದ ಸಂಗತಿಯಾಗಿದೆ. ಆಧುನಿಕತೆಯೆಂಬುದು ಸಮಾಜಶಾಸ್ತ್ರದ ವಿಷಯವ್ಯಾಪ್ತಿಯಲ್ಲಿ ಒಂದು ವಿಚಾರ ಪ್ರಣಾಳಿಕೆಯಲ್ಲಿ ರೂಪುತಳೆದ ಸಂಕಥನವಾಗಿದೆ. ಈ ಮೂರು ಮಹಾಸಂಕಥನಗಳ ಚೌಕಟ್ಟಿನಲ್ಲಿ ಬುಡಕಟ್ಟು ಅಭಿವೃದ್ಧಿಯನ್ನು ಪರಿಭಾವಿಸಿಕೊಳ್ಳಬೇಕಾಗಿದೆ. ಈ ಮೂರು ಮಹಾಸಂಕಥನಗಳು ತಾತ್ವಿಕವಾಗಿ ಅಖಂಡವಾದಿ – ಅಭಿನ್ನವಾದಿ – ವಿಶ್ವಾತ್ಮಕ ವಿಚಾರ ಪ್ರಣಾಳಿಕೆಗಳಾಗಿವೆ. ಈ ಸಂಕಥನಗಳ ಅಖಂಡ ಸ್ವರೂಪವು ನಮಗೆ ಬಹಳ ಮುಖ್ಯವಾಗಿದೆ. ಈ ಮೂರು ಸಂಕಥನಗಳು ಪರಸ್ಪರವಾಗಿ ರೂಪ ಪಡೆಯುತ್ತಾ ಬಂದಿವೆ.

ಆರಂಭದಿಂದಲೂ ಅಭಿವೃದ್ಧಿಯನ್ನು ವರಮಾನದ ಚೌಕಟ್ಟಿನಲ್ಲಿ ಪರಿಭಾವಿಸಿಕೊಂಡು ಬರಲಾಗಿದೆ. ಒಂದು ದೇಶ/ರಾಷ್ಟ್ರದ ವರಮಾನದ ವರ್ಧನೆಯೇ ಅಭಿವೃದ್ಧಿ. ಭಾರತದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ನೀತಿ – ನಿರೂಪಣೆ – ನಿರ್ಣಯಿಸುವ ಎರಡೂ ಸಂಸ್ಥೆಗಳು ರಾಷ್ಟ್ರ ಮಟ್ಟದ ಸಂಸ್ಥೆಗಳಾಗಿವೆ. ಮೊದಲನೆಯದು ರಾಷ್ಟ್ರೀಯ ಯೋಜನಾ ಆಯೋಗ, ಎರಡನೆಯದು ರಾಷ್ಟ್ರೀಯ ಅಭಿವೃದ್ಧಿ ಮಂಡಳಿ. ಇವೆರಡೂ ಸಂಸ್ಥೆಗಳ ಹೆಸರುಗಳಲ್ಲಿರುವ ರಾಷ್ಟ್ರೀಯ ಎನ್ನುವುದು ಅಭಿವೃದ್ಧಿಯ ಅಖಂಡ ಸ್ವರೂಪವನ್ನು ಸೂಚಿಸುತ್ತದೆ. ಇದೇ ರೀತಿ ಅಭಿವೃದ್ಧಿಯ ಮಾಪನವಾದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿ.ಎನ್.ಪಿ.) ದಲ್ಲಿನ ರಾಷ್ಟ್ರೀಯ ಕೂಡ ಅಭಿವೃದ್ಧಿ ಮೀಮಾಂಸೆಯ ಅಖಂಡ ಸ್ವರೂಪವನ್ನು ಸೂಚಿಸುತ್ತದೆ. ಹೀಗೆ ಪರಿಭಾವಿಸಿಕೊಂಡ ಅಭಿವೃದ್ಧಿ ಮೀಮಾಂಸೆಯಲ್ಲಿ, ಅಭಿವೃದ್ಧಿ ನೀತಿಯಲ್ಲಿ ‘ಬುಡಕಟ್ಟು ಅಭಿವೃದ್ಧಿ’ ಎಂಬುದಕ್ಕೆ ಯಾವುದೇ ಅರ್ಥವೂ ಇಲ್ಲವಾಗಿದೆ.

೫. ಅಭಿವೃದ್ಧಿ ಮೀಮಾಂಸೆಯು ಎರಡು ಮುಖ್ಯಧಾರೆಗಳಲ್ಲಿ ಬೆಳೆದುಕೊಂಡು ಬಂದಿದೆ. ಮೊದಲನೆಯದು ಬಂಡವಾಳಶಾಹಿ ವಿಚಾರ ಪ್ರಣಾಳಿಕೆ ಮತ್ತು ಎರಡನೆಯದು ಮಾರ್ಕ್ಸ್‌ವಾದಿ ವಿಚಾರ ಪ್ರಣಾಳಿಕೆ ಇವೆರಡೂ ಧಾರೆಗಳೂ ಮೂಲತಃ ಅಖಂಡವಾದಿ ಧಾರೆಗಳಾಗಿವೆ. ಇವೆರಡೂ ರಾಷ್ಟ್ರೀಯವಾದಿ ವಿಚಾರಧಾರೆಗಳಾಗಿವೆ. ರಾಷ್ಟ್ರಪ್ರಭುತ್ವದ ನೆಲೆಯಲ್ಲಿ ಎರಡೂ ವಿಚಾರಧಾರೆಗಳು ಬೆಳೆದುಕೊಂಡು ಬಂದಿವೆ. ಈ ಕಾರಣದಿಂದಾಗಿ ಅಲ್ಲಿ ಬುಡಕಟ್ಟುಗಳ ಕುಲಸಂಬಂಧಗಳಿಗೆ ಅವಕಾಶವಿಲ್ಲವಾಗಿದೆ. ಇವೆರೆಡೂ ವಿಚಾರ ಧಾರೆಗಳಲ್ಲಿ ಬುಡಕಟ್ಟುಗಳನ್ನು ‘ಆಧುನಿಕಪೂರ್ವ’ ಹಂತವೆಂದು ಪರಿಗಣಿಸಲಾಗಿದೆ. ಮಾರ್ಕ್ಸ್‌‌ವಾದಿಗಳಿಗೆ ‘ಸಾಮಾಜಿಕ ವರ್ಗ’ ಮುಖ್ಯವಾಗಿದ್ದರೆ, ಬಂಡವಾಳಶಾಹಿ ವ್ಯವಸ್ಥೆಗೆ ‘ಶ್ರಮ’ ಮತ್ತು ‘ಬಂಡವಾಳ’ ಮುಖ್ಯವಾಗಿವೆ. ಅಲ್ಲಿ ಬುಡಕಟ್ಟುಗಳಿಗೆ ಅಸ್ತಿತ್ವವೇ ಇಲ್ಲವಾಗಿದೆ.

ಅಭಿವೃದ್ಧಿ ಮೀಮಾಂಸೆಯು ಕಳೆದ ೫ – ೬ ದಶಕಗಳಲ್ಲಿ ಅನೇಕ ಪಲ್ಲಟ – ಪರಿವರ್ತನೆಗಳನ್ನು ಕಂಡಿದೆ. ಪರ್ಯಾಯ ಸಂಕಥನಗಳು ಹುಟ್ಟಿವೆ. ಈ ಬಗೆಯ ವಿಚಾರ ಪ್ರಣಾಳಿಕೆಯಲ್ಲಿ ಒಮ್ಮೆ ‘ಮೂರನೆಯ ವಿಶ್ವ’ ಕೇಂದ್ರಬಿಂದುವಾದರೆ, ‘ಪರಿಸರ’ ಇನ್ನೊಮ್ಮೆ ಪ್ರಧಾನ ವಿಷಯ ವಸ್ತುವಾಗಿದೆ. ‘ಜನಸಂಖ್ಯೆ’ಯು ಮಗದೊಮ್ಮೆ ಚರ್ಚೆಯ ಮುಂಚೂಣಿಗೆ ಬಂದಿದೆ. ‘ಸುಸ್ಥಿರಗತಿ ಬೆಳವಣಿಗೆ’ ಬಗ್ಗೆ ಒಮ್ಮೆ ಆಸಕ್ತಿ ಸ್ಫೋಟವಾದರೆ ಮತ್ತೊಮ್ಮೆ ‘ಲಿಂಗ ಸಂಬಂಧಗಳು’ ಅಧ್ಯಯನದ ಆದ್ಯತಾ ವಿಷಯಗಳಾಗಿ ಬಿಟ್ಟಿವೆ. ಆದರೆ ಈ ಯಾವುದೇ ಪಲ್ಲಟ – ಪರಿವರ್ತನೆ – ಪರ್ಯಾಯಗಳಲ್ಲಿ ಬುಡಕಟ್ಟುಗಳು ಕೇಂದ್ರ ಸ್ಥಾನಕ್ಕೆ ಬಂದುದಿಲ್ಲ. ಎಲ್ಲ ಧಾರೆಗಳಲ್ಲೂ, ಎಲ್ಲ ವಿಚಾರ ಪ್ರಣಾಳಿಕೆಗಳಲ್ಲೂ, ಪರ್ಯಾಯ ಚಿಂತನೆಗಳಲ್ಲೂ ಬುಡಕಟ್ಟುಗಳನ್ನು ಪ್ರಧಾನಧಾರೆಯಲ್ಲಿ ‘ಲೀನ’ಗೊಳಿಸುವ ‘ವಿಲೀನ’ಗೊಳಿಸುವ ಸಂಗತಿಗಳಿಗೆ ಮನ್ನಣೆ ನೀಡಲಾಗಿದೆ.

. ಎತ್ನೋಸೈಡ್ ಮತ್ತು ಎತ್ನೋಡೆವಲಪ್ಮೆಂಟ್

ಬುಡಕಟ್ಟುಗಳ ದೃಷ್ಟಿಯಿಂದ ಅಭಿವೃದ್ಧಿ ಎನ್ನುವುದು ಅಮೃತಸೇಚನವಾಗುವುದಕ್ಕೆ ಪ್ರತಿಯಾಗಿ ವಿಷಪ್ರಾಶನವಾಗಿಬಿಟ್ಟಿದೆ. ಬುಡಕಟ್ಟುತನವನ್ನು ಇಲ್ಲವಾಗಿಸುವುದೇ ಅಭಿವೃದ್ಧಿಯ ಕಾರ್ಯತಂತ್ರವಾಗಿ ಬಿಟ್ಟಿದೆ. ಜಗತ್ತಿನ ಚರಿತ್ರೆಯಲ್ಲಿ ರಾಷ್ಟ್ರೀಯತೆಯ ಹೆಸರಿನಲ್ಲಿ ಜನಸಮೂಹವನ್ನು ನಾಶ ಮಾಡಿದ ಉದಾಹರಣೆಗಳು ದೊರೆಯುತ್ತವೆ. ಅದನ್ನು ‘ಜಿನೋಸೈಡ್’ ಎಂದು ಕರೆಯುತ್ತಾರೆ. ಅದೊಂದು ಹತ್ಯಾಕಾಂಡ. ಇಂತಹ ಜೀವವಿರೋಧಿ ಸಂಗತಿ ಬಗ್ಗೆ ಜನರ ವಿರೋಧ ಪ್ರಕಟಗೊಂಡಿದೆ. ಇದನ್ನು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ‘ಅಪರಾಧ’ವೆಂದು ಘೋಷಿಸಲಾಗಿದೆ. ಆದರೆ ಬುಡಕಟ್ಟುಗಳ ಸಾಂಸ್ಕೃತಿಕ ಅನನ್ಯತೆ – ಸ್ವಾಯತ್ತತೆಯ ನಾಶವನ್ನು ಅಪರಾಧವೆಂದು ಪರಿಗಣಿಸಲ್ಲ. ಇದನ್ನೇ ಇಲ್ಲಿ ‘ಎತ್ನೋಸೈಡ್’ ಎಂದು ಕರೆಯಲಾಗಿದೆ. ಏಕತೆ – ಐಕ್ಯತೆ – ಏಕರೂಪಗಳ ಹೆಸರಿನಲ್ಲಿ ರಾಷ್ಟ್ರಪ್ರಭುತ್ವಗಳು ಬುಡಕಟ್ಟುಗಳ ಬುಡಕಟ್ಟುತನವನ್ನು ನಾಸಮಾಡುವ ಕ್ರಿಯೆಯಲ್ಲಿ ತೊಡಗಿವೆ. ಯುರೂಪಿನ ಅನೇಕ ದೇಶಗಳಲ್ಲಿ ಹೀಗೆ ಬುಡಕಟ್ಟುಗಳನ್ನು ರಾಷ್ಟ್ರೀಯತೆ ಹೆಸರಿನಲ್ಲಿ ನಾಶ ಮಾಡಿರುವುದಕ್ಕೆ ದಂಡಿಯಾಗಿ ಉದಾಹರಣೆಗಳು ದೊರೆಯುತ್ತವೆ. ಇಂಗ್ಲೆಂಡ್‌ನಂತಹ ಪ್ರೌಢ ಜನತಂತ್ರ ವ್ಯವಸ್ಥೆಗೆ ಬುಡಕಟ್ಟು ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ.

ಈ ಬಗೆಯ ಎತ್ನೋಸೈಡ್‌ಗೆ ಪ್ರತಿಯಾಗಿ ಎತ್ನೋಡೆವಲಪ್‌ಮೆಂಟ್ ನುಡಿಯನ್ನು ಬಳಸಲಾಗುತ್ತಿದೆ. ಬುಡಕಟ್ಟು ಅಭಿವೃದ್ಧಿಯನ್ನು ಒಂದು ರಾಷ್ಟ್ರಪ್ರಭುತ್ವದೊಳಗಿರುವ ಬುಡಕಟ್ಟು ಜನರ ಸ್ವಾಯತ್ತವಾದಿ ಅಭಿವೃದ್ಧಿ ಎಂದು ನಿರ್ವಚಿಸಬಹುದಾಗಿದೆ. ಬುಡಕಟ್ಟು ಅಭಿವೃದ್ಧಿಯು ರೇಖಾತ್ಮಕ – ಅಖಂಡವಾದಿ – ಅಭಿನ್ನವಾದಿ – ಏಕರೂಪ ವಿಚಾರ ಪ್ರಣಾಳಿಕೆಗೆ ವಿರುದ್ಧವಾದ ಒಂದು ವಿಚಾರಧಾರೆಯಾಗಿದೆ. ಅಲ್ಲಿ ಅಭಿವೃದ್ಧಿ ಅನ್ನೋದು ಬಹುರೂಪಿಯೂ, ಬಹುಮುಖಿಯೂ ಆದುದಾಗಿರುತ್ತದೆ. ಆಧುನಿಕ ಪೂರ್ವ, ಆಧುನಿಕ ಮತ್ತು ಆಧುನಿಕೋತ್ತರ – ಇವು ಮೂರು ಏಕಕಾಲದಲ್ಲಿ ಒಂದು ರಾಷ್ಟ್ರ ಪ್ರಭುತ್ವದೊಳಗೆ ಅಸ್ತಿತ್ವದಲ್ಲಿರಲು ಸಾಧ್ಯ.

ಸಮಾಜ, ಆರ್ಥಿಕತೆ, ರಾಕಾರಣಗಳು ಮತ್ತು ಜ್ಞಾನಶಿಸ್ತುಗಳು ಬುಡಕಟ್ಟುಗಳನ್ನು ಅಧ್ಯಯನ ಮತ್ತು ವಿಷಯ ವಸ್ತುವನ್ನಾಗಿ ಮಾಡಿಕೊಳ್ಳುವುದರಲ್ಲಿ ವಿಫಲವಾಗಿವೆ. ಅಭಿವೃದ್ಧಿ ಮೀಮಾಂಸೆಯಲ್ಲಿ ಅಧ್ಯನದ ಮೂಲಮಾನ ‘ವ್ಯಕ್ತಿ’ಯೇ ವಿನಾ ಸಮುದಾಯವಲ್ಲ. ಸಮುದಾಯವಾದಿ ಸಂಬಂಧಗಳು ಅಥವಾ ಕುಲಸಂಬಂಧಗಳು ಆಧುನಿಕಪೂವð ಸ್ಥಿತಿಯನ್ನು ಸೂಚಿಸುತ್ತವೆ. ಇದೊದು ನಾಗರಿಕತೆಯಲ್ಲಿನ – ವಿಕಾಸ ಪಥದಲ್ಲಿನ ಹಂತ ಅದು ಪಲ್ಲಟಗೊಳ್ಳಲೇಬೇಕು. ಈ ಕಾರಣಕ್ಕೆ ಸಮಾಜ ವಿಜ್ಞಾನಗಳು ಬುಡಕಟ್ಟುಗಳನ್ನು ಅಧ್ಯಯನದ ವಿಷಯವನ್ನಾಗಿ ಮಾಡಿಕೊಳ್ಳಲಿಲ್ಲ. ಸಮಾಜ ವಿಜ್ಞಾನಗಳು ಬುಡಕಟ್ಟುಗಳಿಗೆ ಸಂಬಂಧಿಸಿದ ಸಂಗತಿಗಳನ್ನು ತಮ್ಮ ಸಿದ್ಧಾಂತಗಳಲ್ಲಿ ಅಂತರ್ಗತ ಮಾಡಿಕೊಳ್ಳಲಿಲ್ಲ. ಎಲ್ಲ ಬಗೆಯ ಸಮಾಜವಿಜ್ಞಾನಗಳೂ ಸಾಂಸ್ಕೃತಿಕ ಸಂಗತಿಗಳು ಮೂಲತಃ ಸಾಮುದಾಯಿಕವಾಗಿದ್ದವು. ಅಲ್ಲಿ ವ್ಯಕ್ತಿಗಿಂತ ಸಮುದಾಯವು ಕೇಂದ್ರಬಿಂದುವಾಗಿತ್ತು. ವ್ಯಕ್ತಿಯನ್ನು ಮೂಲಘಟಕವನ್ನಾಗಿ ಮಾಡಿಕೊಂಡ ಸಮಾಜ ವಿಜ್ಞಾನಗಳು ಸಮುದಾಯವಾದಿ ಬುಡಕಟ್ಟುಗಳನ್ನು ಸೈದ್ಧಾಂತಿಕವಾಗಿ ಪರಿಗಣಿಸುವುದು ಸಾಧ್ಯವಿರಲಿಲ್ಲ.

೭. ಬುಡಕಟ್ಟುತನವನ್ನು ಹಿಂದುಳಿದಿರುವಿಕೆಯ ಸೂಚಿಯಾಗಿ ಬಳಸುವುದು ರೂಢಿಯಲ್ಲಿದೆ. ಆದರೆ ಆಧುನಿಕಪೂರ್ವ ಸ್ಥಿತಿಯೇ ಅದರ ಹಿಂದುಳಿದಿರುವಿಕೆಯನ್ನು ಸೂಚಿಸುತ್ತದೆ ಎನ್ನಲಾಗಿದೆ. ಕುಲ ಸಂಬಂಧಗಳಿಗೆ ಅಂಟಿಕೊಂಡ ಒಂದು ವ್ಯವಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲವೆಂದು ಭಾವಿಸಲಾಗಿದೆ. ಬುಡಕಟ್ಟುಗಳು ಅಭಿವೃದ್ಧಿಗಿರುವ ಬಹುದೊಡ್ಡ ಕಂಟಕವೆಂದು ಹೇಳಲಾಗಿದೆ. ಅಲ್ಲಿ ಜನತಾಂತ್ರಿಕ ವ್ಯಕ್ತಿವಾದಿ ಸಂಸ್ಥೆಗಳಿಗೆ ಅವಕಾಶ ಇರುವುದಿಲ್ಲ. ಅಲ್ಲಿಯ ಬದುಕು ಮೂಲತಃ ಜೈವಿಕ ಸ್ವರೂಪದ್ದಾಗಿರುತ್ತದೆ ವಿನಾಃ ವಾಣಿಜ್ಯಿಕವಾಗಿರುವುದಿಲ್ಲ. ಬುಡಕಟ್ಟುತನ ಹಾಗೂ ಜೈವಿಕ ಸ್ವರೂಪ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ವಾಣಿಜ್ಯಿಕ ಮನೋಭಾವವನ್ನು ಮೈಗೂಡಿಸಿಕೊಳ್ಳದೆ ಅಭಿವೃದ್ಧಿ ಸಾಧ್ಯವಿಲ್ಲ. ಈ ಬಗೆಯ ಮನೋಭಾವವೇ ಅಭಿವೃದ್ಧಿಗೆ ಕಂಟಕವಾದುದಾಗಿದೆ. ಬುಡಕಟ್ಟು ಸಮಾಜವು ಸಂಪರ್ಕರಹಿತ ದ್ವೀಪದಂತಹ ಬದುಕನ್ನು ಬಯಸುತ್ತದೆ. ಆದರೆ ಅಭಿವೃದ್ದಿಗೆ ಸಂಪರ್ಕ ಸಂಚಲನೆ ತುಂಬಾ ಮುಖ್ಯ ಆಧುನಿಕ ಯುಗದ ಅಭಿವೃದ್ಧಿಯ ಬಹು ಮುಖ್ಯ ಲಕ್ಷಣವೆಂದರೆ ಚಲನೆ. ಇಡೀ ಸಮಾಜ – ಜನಸ್ತೋಮವೇ ಚಲನೆಯಲ್ಲಿರಬೇಕು. ಆದರೆ ಬುಡಕಟ್ಟುಗಳಲ್ಲಿ ಚಲನೆಗೆ ಅವಕಾಶ ಕಡಿಮೆ.

ಇವೆಲ್ಲಕ್ಕಿಂತ ಹೆಚ್ಚಾಗಿ ಬುಡಕಟ್ಟು ಮತ್ತು ಪರಿಸರಗಳ ನಡುವಿನ ಸಂಬಂಧವು ಜೈವಿಕವಾದುದು ಮತ್ತು ಸಾವಯವವಾದುದು. ಆದರೆ ಅಭಿವೃದ್ಧಿ ಮತ್ತು ಪರಿಸರಗಳ ನಡುವಿನ ಸಂಬಂಧ ಆಕ್ರಮಣಕಾರಿಯಾದುದಾಗಿದೆ. ಪ್ರಕೃತಿ ಪರಿಸರ ಇಲ್ಲಿ ಬದುಕಿನ ಅವಿಭಾಜ್ಯ ಅಂಗ. ಜನರು ಮತ್ತು ಪರಿಸರ ಬೇರೆ ಬೇರೆ ಅಲ್ಲ. ಇವೆರಡರ ನಡುವೆ ಹೊಕ್ಕಳುಬಳ್ಳಿ ಸಂಬಂಧ ಅಲ್ಲಿರುತ್ತದೆ. ಆಧುನಿಕತೆ – ಅಭಿವೃದ್ಧಿ ರಾಷ್ಟ್ರಪ್ರಭುತ್ವಗಳಿಗೆ ‘ಬುಡಕಟ್ಟುಗಳು’ ನಿವಾರಿಸಿಕೊಳ್ಳಬೇಕಾದ ಒಂದು ಸಂಗತಿಯಾಗಿದೆ. ಆಧುನಿಕತೆಯ ದೃಷ್ಟಿಯಿಂದ ಅವು ಜೈವಿಕವಾಗಿಯೂ – ಅವಾಣೀಜ್ಯೀಕವೂ ಆಗಿವೆ. ರಾಷ್ಟ್ರಪ್ರಭುತ್ವಕ್ಕೆ ಅವು ಏಕತೆಗೆ ಭಿನ್ನವಾದ ಸಂಗತಿಗಳಾಗಿವೆ. ಹೀಗೆ ಕಳೆದ ೨೦೦ ವರ್ಷಗಳಿಂದ ಬೆಳೆದುಕೊಂಡು ಬಂದ ಜ್ಞಾನಶಿಸ್ತುಗಳು ಅಲ್ಲಿ ರೂಪಿತವಾದ ಸಿದ್ಧಾಂತಗಳು ಬುಡಕಟ್ಟುಗಳನ್ನು, ಬುಡಕಟ್ಟು ಸಮಾಜವನ್ನು, ಬುಡಕಟ್ಟು ಸಂಸ್ಕೃತಿಯನ್ನು ಆಧುನಿಕತೆಗೆ ಸವಾಲೆಂಬಂತೆ, ಅಭಿವೃದ್ಧಿಗೆ ಕಂಟಕವೆಂಬಂತೆ, ರಾಷ್ಟ್ರಪ್ರಭುತ್ವಕ್ಕೆ ವಿರುದ್ಧವಾದ ಸಂಗತಿಯೆಂಬಂತೆ ಪರಿಭಾವಿಸಿಕೊಂಡು ಬಂದಿವೆ. ಇಲ್ಲಿ ಬುಡಕಟ್ಟುತನವೆಂಬುದು ಬಿಟ್ಟುಕೊಡಬೇಕಾದ ಒಂದು ಸಂಗತಿಯಾಗಿದೆ.

೮. ಬುಡಕಟ್ಟು ಮತ್ತು ಅಭಿವೃದ್ಧಿಗಳ ನಡುವಿನ ಸಂಬಂಧವು ಸಂಘರ್ಷಣಾತ್ಮಕವಾದುದಾಗಿದೆ. ಇವೆರಡರ ನಡುವೆ ಘರ್ಷಣೆಗೆ ಕಾರಣವಾಗಿರುವ ಅನೇಕ ಸಂಗತಿಗಳಿವೆ. ಮೊದಲನೆಯದು ರಾಷ್ಟ್ರ ಪ್ರಭುತ್ವದ ‘ಜೀರ್ಣೋಭವ’ ಸ್ವರೂಪ. ಅಲ್ಲಿ ಭಿನ್ನತೆಗೆ, ಭಿನ್ನ ಸಂಸ್ಕೃತಿಗಳ ಸಹಜೀವನಕ್ಕೆ ಅವಕಾಶವಿಲ್ಲ. ಅಲ್ಲಿ ಭಿನ್ನತೆಯನ್ನು ವಿಶಿಷ್ಟತೆಯನ್ನು ವಿಛ್ಛಿದ್ರಕಾರಿ ಶಕ್ತಿಯೆಂದು ಪರಿಗಣಿಸಲಾಗುತ್ತದೆ. ರಾಷ್ಟ್ರಪ್ರಭುತ್ವವು ಬುಡಕಟ್ಟುಗಳೆಲ್ಲವೂ ತನ್ನಲ್ಲಿ ‘ಜೀರ್ಣ’ವಾಗಿ ಬಿಡಬೇಕು, ‘ಲೀನ’ವಾಗಿ ಬಿಡಬೇಕು ಎಂದು ಬಯಸುತ್ತದೆ.

ಇವೆರಡರ ನಡುವೆ ಘರ್ಷಣೆಗೆ ಕಾರಣವಾಗಿರುವ ಎರಡನೆಯ ಸಂಗತಿಯೆಂದರೆ ಅಭಿವೃದ್ಧಿಯ ‘ಏಕರೂಪೀರಕಣ’ ಸ್ವರೂಪ. ಇದು ರಾಷ್ಟ್ರಪ್ರಭುತ್ವದ ಬಹುಮುಖ್ಯ ಲಕ್ಷಣವಾಗಿದೆ. ಒಂದು ರಾಷ್ಟ್ರ. ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಧರ್ಮ. ಒಂದು ಚರಿತ್ರೆ ಮುಂತಾದ ಸಂಗತಿಗಳ ಮೇಲೆ ರಾಷ್ಟ್ರಪ್ರಭುತ್ವವು ನಿಂತಿರುತ್ತದೆ. ಬುಡಕಟ್ಟುಗಳ ‘ಅನೇಕತನ’ವು ರಾಷ್ಟ್ರೀಯತೆಗೆ ಮಾರಕವೆಂದು ಭಾವಿಸಲಾಗಿದೆ. ಅಭಿವೃದ್ಧಿಯ ಸಾಧನಗಳಾದ ನಗರೀಕರಣ. ಕೈಗಾರಿಕೀಕರಣ, ಶ್ರಮವಿಭಜನೆ, ವಾಣಿಜ್ಯೀಕರಣ, ಆಡಳಿತೀಕರಣಗಳ ಪ್ರಕ್ರಿಯೆಯಿಂದಾಗಿ ಬುಡಕಟ್ಟೊಂದು ಬುಡಕಟ್ಟಾಗಿ ಉಳಿಯಲು ಸಾಧ್ಯವಿಲ್ಲ.

ಘರ್ಷಣೆಗೆ ಕಾರಣವಾಗಿರುವ ಮೂರನೆಯ ಸಂಗತಿಯೆಂದರೆ ಆಧುನಿಕವಿಜ್ಞಾನ ಶಿಸ್ತುಗಳ ‘ಯಾಜಮಾನ್ಯ’ ಪ್ರವೃತ್ತಿ. ಆಧುನೀಕರಣ, ಅಭಿವೃದ್ಧಿ, ರಾಷ್ಟ್ರಪ್ರಭುತ್ವ ಇವೆಲ್ಲವೂ ಯಜಮಾನವಾದಿ ಮಹಾಸಂಕಥನಗಳಾಗಿವೆ. ಇದರಿಂದಾಗಿ ಬುಡಕಟ್ಟು ಮತ್ತು ಅಭಿವೃದ್ಧಿಗಳ ನಡುವಿನ ಸಂಬಂಧವು ‘ಶ್ರೇಣೀಕೃತ’ವಾಗಿ ಬಿಡುತ್ತದೆ.

೯. ‘ಬುಡಕಟ್ಟು ಅಭಿವೃದ್ಧಿ’ಯೆನ್ನುವ ಸೈದ್ಧಾಂತಿಕ ರಚನೆಯೊಂದು ಇನ್ನೂ ರೂಪಿತವಾಗಿಲ್ಲ. ಆಧುನಿಕ ಜ್ಞಾನಶಿಸ್ತುಗಳು ಬುಡಕಟ್ಟು ಸಮಾಜ – ಬುಡಕಟ್ಟು ಸಂಸ್ಕೃತಿಯೆನ್ನುವುದೊಂದು ಅಧ್ಯಯನ ಶಿಸ್ತು ಎಂದು ಆಧುನಿಕ ಜ್ಞಾನಶಿಸ್ತುಗಳು ಪರಿಗಣಿಸಿಲ್ಲ. ‘ಬುಡಕಟ್ಟು – ಅಭಿವೃದ್ಧಿ’, ‘ಬುಡಕಟ್ಟು – ರಾಷ್ಟ್ರಪ್ರಭುತ್ವ’, ‘ಬುಡಕಟ್ಟು – ಆಧುನಿಕತೆಗಳ’ ನಡುವಿನ ಸಂಬಂಧವನ್ನು ಅಧ್ಯಯನಕ್ಕೆ ಒಳಪಡಿಸುವ, ಈ ಸಂಬಂಧಗಳನ್ನು ಸೈದ್ಧಾಂತಿಕಗೊಳಿಸುವ ಕೆಲಸವಿನ್ನು ಪ್ರಾರಂಭವಾಗಿಲ್ಲ. ಬುಡಕಟ್ಟುಗಳ ಬಗೆಗಿನ ಪೂರ್ವಗ್ರಹಗಳಿಂದ ಆಧುನಿಕ ಜ್ಞಾನಶಿಸ್ತುಗಳು ಹೊರಬರಬೇಕಾಗಿದೆ. ಅಭಿವೃದ್ಧಿ ಮೀಮಾಂಸೆಯಲ್ಲಿ, ಆಧುನೀಕರಣದ ಚರ್ಚೆಯಲ್ಲಿ ಮತ್ತು ರಾಷ್ಟ್ರ ಪ್ರಭುತ್ವದ ಅಧಿಕಾರದಲ್ಲಿ ಬುಡಕಟ್ಟುಗಳಿಗೆ ಸ್ಥಾನ – ಅವಕಾಶವಿಲ್ಲವೆಂಬುದು ಇಲ್ಲಿನವರೆಗಿನ ಚರ್ಚೆಯಿಂದ ಸ್ಪಷ್ಟವಾಗಿದೆ. ಆದರೆ ನಮ್ಮ ಎದುರಿಗಿರುವ ವಾಸ್ತವವೆಂದರೆ ರಾಷ್ಟ್ರಪ್ರಭುತ್ವಗಳಿಗೆ ಬುಡಕಟ್ಟುಗಳನ್ನು ಜೀರ್ಣಿಸಿಕೊಳ್ಳುವುದು ಸಾಧ್ಯವಾಗಿಲ್ಲ. ರಾಷ್ಟ್ರೀಯ ಪ್ರಧಾನಧಾರೆಯಲ್ಲಿ ಬುಡಕಟ್ಟುಗಳು ವಿಲೀನಗೊಂಡಿಲ್ಲ. ಆಧುನೀಕರಣವು ಆಧುನಿಕ ಪೂರ್ವಸ್ಥಿತಿಯಿಂದ ಬುಡಕಟ್ಟುಗಳನ್ನು ಪರಿವರ್ತಿಸುವಲ್ಲಿ ಯಶಸ್ವಿಯಾಗಿಲ್ಲ. ಅಭಿವೃದ್ಧಿ ಪ್ರಕ್ರಿಯೆಗೆ ಬುಡಕಟ್ಟುಗಳ ವಿಶಿಷ್ಟತೆಯನ್ನು ಅಳಿಸಿಹಾಕಿ ಅವುಗಳಿಗೆ ವಿಶ್ವಾತ್ಮಕ ರೂಪನೀಡುವುದು ಸಾಧ್ಯವಾಗಿಲ್ಲ. ಇಂದು ವಿಶ್ವದ ಎಲ್ಲ ದೇಶಗಳಲ್ಲೂ ಬುಡಕಟ್ಟುಗಳು ತಮ್ಮ ಅನನ್ಯತೆ, ವಿಶಿಷ್ಟತೆಗಳನ್ನು ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿವೆ. ಈ ಬಗೆಯ ಸಂಗತಿಗಳನ್ನು ಚರ್ಚೆಯ – ಅನುಸಂಧಾನದ ಚೌಕಟ್ಟಿಗೆ ತರುವುದರ ಮೂಲಕ ಅಭಿವೃದ್ಧಿ ಮತ್ತು ಬುಡಕಟ್ಟುಗಳ ನಡುವಿನ ಘರ್ಷಣೆಯ ನೆಲೆಗಳನ್ನು ಸರಿಪಡಿಸಬಹುದು. ವ್ಯಕ್ತಿಗತ ಮೌಲ್ಯಗಳನ್ನು ತಿರಸ್ಕರಿಸುವ ಅಗತ್ಯವಿಲ್ಲ. ಅದೇ ರೀತಿ ಸಮುದಾಯಗಳ ಸ್ವಾಯತ್ತತೆ – ವಿಭಿನ್ನತೆ – ವಿಶಿಷ್ಟತೆಗಳನ್ನು ವೈಭವೀಕರಿಸಿ ಸ್ವಾತಂತ್ರ್ಯ – ಸಮಾನತೆಗಳನ್ನು ತಿರಸ್ಕರಿಸುವ ಅಗತ್ಯವಿಲ್ಲ. ಇವೆರಡನ್ನೂ ಎಲ್ಲೋ ಒಂದು ಕಡೆ ಒಂದಾಗುವಂತೆ ಮಾಡಬೇಕಾಗುತ್ತದೆ. ಈ ಕಾರಣಕ್ಕೆ ಇಂತಹ ಸಂಗತಿಗಳು ನಮ್ಮ ಅಧ್ಯಯನಗಳ ಭಾಗವಾಗಬೇಕು. ಜನತಂತ್ರ ವ್ಯವಸ್ಥೆಯಲ್ಲಿ ಉಂಟಾಗುವ ಘರ್ಷಣೆಗಳನ್ನು ಪರಿಹರಿಸಿಕೊಳ್ಳುವ ಮಾರ್ಗಗಳನ್ನು ರೂಪಿಸಿಕೊಳ್ಳುತ್ತಿರಬೇಕಾಗುತ್ತದೆ. ಈ ಮೂರು ಸಂಕಥನಗಳು ತಮ್ಮ ಉದ್ದೇಶವನ್ನು ತೀರಿಸಿಕೊಳ್ಳುವಲ್ಲಿ ವಿಫಲವಾಗಿದ್ದಾವೆಯೆಂದು ಇದರ ಅರ್ಥವಲ್ಲ. ಮಹಾ ಸಂಕಥನಗಳು ತಮ್ಮ ಕೈಂಕರ್ಯವನ್ನು ಮುಂದುವರಿಸಿವೆ. ಅದೇ ರೀತಿ ಬುಡಕಟ್ಟುಗಳು ರಾಷ್ಟ್ರಪ್ರಭುತ್ವದೊಳಗೆ, ಆಧುನೀಕರಣದ ಮಹಾಪ್ರವಾಹದಲ್ಲಿ ಹಾಗೂ ಅಭಿವೃದ್ಧಿಯ ಪ್ರಕ್ರಿಯೆಯ ಮಧ್ಯ ತಮ್ಮ ಅಸ್ತಿತ್ವವನ್ನು ಬಹಳ ಗಟ್ಟಿಯಾಗಿ ಉಳಿಸಿಕೊಂಡಿವೆ.

ಅಂದ ಮೇಲೆ ಬುಡಕಟ್ಟುಗಳನ್ನು ಬುಡಕಟ್ಟು ಸಂಸ್ಕೃತಿಯನ್ನು ಸುಲಭವಾಗಿ ಸರಳವಾಗಿ ನಿರ್ಲಕ್ಷಿಸಲು ಬರುವುದಿಲ್ಲ. ರಾಷ್ಟ್ರೀಯಧಾರೆ ಹಾಗೂ ಬುಡಕಟ್ಟುಗಳ ಧಾರೆ, ಆಧುನೀಕರಣ ಹಾಗೂ ಆಧುನಿಕಪೂರ್ವ ಸ್ಥಿತಿ ಮತ್ತು ಅಭಿವೃದ್ಧಿ ಹಾಗೂ ಹೊಟ್ಟೆಬಟ್ಟೆ ಸ್ಥಿತಿಗಳು ಒಟ್ಟೊಟ್ಟಿಗೆ ಇಂದು ಮುಂದುವರಿದಿರುವುದನ್ನು ಕಾಣಬಹುದಾಗಿದೆ.

ಭಾರತದ ಸಂದರ್ಭದಲ್ಲಿ ಬುಡಕಟ್ಟುಗಳು ರಾಜಕೀಯ ಸಂಘಟನೆಯಲ್ಲಿ ತೊಡಗಿವೆ. ರಾಷ್ಟ್ರಪಭುತ್ವದಲ್ಲಿ ಪಾಲು ಪಡೆಯಲು ಅವು ಹವಣಿಸುತ್ತಿವೆ. ಬುಡಕಟ್ಟುಗಳ ರಾಜಕೀಯ ಸಂಘಟನೆಯನ್ನು ಅವುಗಳ ಸಾಂಸ್ಕೃತಿಕ ಅಗತ್ಯತೆಯ ಹೋರಾಟದ ಭಾಗವಾಗಿ ನೋಡುವ ಕ್ರಮವೊಂದಿದೆ ಮತ್ತು ಅದನ್ನು ಅಭಿವೃದ್ಧಿಯತ್ತ ಪಾಲು ಪಡೆದುಕೊಳ್ಳುವ ರಾಜಕಾರಣದ ಒಂದು ಭಾಗವಾಗಿ ನೋಡುವ ಕ್ರಮವೂ ಇದೆ. ಇವೆರಡರಲ್ಲೂ ಎರಡನೆಯ ಕ್ರಮವೇ ಸರಿಯೆಂದು ಕಾಣುತ್ತದೆ. ಬುಡಕಟ್ಟುಗಳು ಒಂದು ಕಡೆ ತಮ್ಮ ಸಾಂಸ್ಕೃತಿಕ ಸ್ವಾಯತ್ತತೆ ಹಾಗೂ ಸಾಮುದಾಯಿಕ ಸ್ವರೂಪವನ್ನು ಕಾಯ್ದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಅದೇ ರೀತಿ ಇನ್ನೊಂದು ಕಡೆ ರಾಷ್ಟ್ರೀಯ ಧಾರೆಯಲ್ಲಿ ಬೆರೆತು ರಾಜಕೀಯ ಅಧಿಕಾರಿದಲ್ಲಿ ಪಾಲನ್ನೂ ಪಡೆಯುವ ಪ್ರಯತ್ನವನ್ನು ಮುಂದುವರಿಸಿವೆ.

ಈಗ ನಮ್ಮ ಮುಂದಿರುವ ಸಮಸ್ಯೆ, ಸವಾಲು ಎಂದರೆ, ಇಂತಹ ಸಂಕೀರ್ಣ ಸ್ಥಿತಿಯಲ್ಲಿ ಬುಡಕಟ್ಟು ಅಭಿವೃದ್ಧಿಯನ್ನು ಹೇಗೆ ಪರಿಭಾವಿಸಿಕೊಳ್ಳುವುದು? ಲಿಬರಲ್ ರಾಜಕಾರಣವು ಏಕ ಸಂಸ್ಕೃತಿಯ ಚೌಕಟ್ಟಿನಲ್ಲಿ ವ್ಯಕ್ತಿಗತ ಸ್ವಾತಂತ್ರ್ಯ, ಮಾನವ ಹಕ್ಕುಗಳು, ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕುರಿತ ಸಂಕಥನವನ್ನು ಕಟ್ಟುತ್ತಿದ್ದರೆ, ಸಾಮುದಾಯಿಕವಾದಿಗಳು ಬುಡಕಟ್ಟು ಸಂಸ್ಕೃತಿಗಳ ಅನನ್ಯತೆ, ವಿಶಿಷ್ಟತೆಯನ್ನು ರಕ್ಷಿಸುವ ರಾಜಕಾರಣದಲ್ಲಿ ತೊಡಗಿದ್ದಾರೆ. ಒಂದು ಏಕರೂಪೀಕರಣದ ಮಾತನಾಡುತ್ತಿದ್ದರೆ, ಇನ್ನೊಂದು ಬಹುರುಪೀಕರಣದ ಮಾತನಾಡುತ್ತಿದೆ. ವ್ಯಕ್ತಿಗತ ಸ್ವಾತಂತ್ರ್ಯ – ಸಮಾನತೆಗಳು – ಸಾಮುದಾಯಿಕತೆಗಳು ಮುಖಾಮುಖಿಯಾಗಿವೆ. ಇಂತಹ ಸ್ಥಿತಿಯಲ್ಲಿ ಅಭಿವೃದ್ಧಿಯನ್ನು ಬಹುಸಂಸ್ಕೃತಿಗಳ ಚೌಕಟ್ಟಿನಲ್ಲಿ ಪರಿಭಾವಿಸಿಕೊಳ್ಳುವುದು ಸೂಕ್ತ. ಇಲ್ಲಿ ಹೇಳಿರುವ ಮಹಾಸಂಕಥನಗಳು ಇಂದು ಎದುರಿಸುತ್ತಿರುವ ಒಂದು ದೊಡ್ಡ ಸಮಸ್ಯೆಯೆಂದರೆ ಬುಡಕಟ್ಟುಗಳ ಅನನ್ಯತೆ – ವಿಶಿಷ್ಟತೆಗಳನ್ನು ಸೈದ್ಧಾಂತಿಕವಾಗಿ ಅಂತರ್ಗತ ಮಾಡಿಕೊಳ್ಳುವುದು ಹೇಗೆ ಎಂಬುದಾಗಿದೆ. ಇದನ್ನು ಬಹುಸಂಸ್ಕೃತಿವಾದದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಬಹುದಾಗಿದೆ. ಅಭಿವೃದ್ಧಿಯ ದೃಷ್ಟಿಯಿಂದ ಬಹುಸಂಸ್ಕೃತಿವಾದವು ಅನೇಕ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತದೆ. ಒಂದು ರಾಷ್ಟ್ರಪ್ರಭುತ್ವದೊಳಗೆ ೫೦ – ೬೦ ಬುಡಕಟ್ಟುಗಳಿದ್ದರೆ, ಅವುಗಳೆಲ್ಲವನ್ನು ಪ್ರತ್ಯೇಕ ಘಟಕಗಳೆಂದು ಪರಿಗಣಿಸಲು ಸಾಧ್ಯವೆ? ಪ್ರತಿಯೊಂದು ಬುಡಕಟ್ಟುಗಳ ಸಾಮುದಾಯಿಕ ಹಕ್ಕುಗಳನ್ನು ಪ್ರಭುತ್ವವು ಮನ್ನಿಸಬೇಕೇ ಹೇಗೆ? ಮನ್ನಿಸಿದರೆ ಅವುಗಳ ನಿರ್ವಹಣೆ ಹೇಗೆ? ಪ್ರತಿಯೊಂದು ಬುಡಕಟ್ಟು ಸಮುದಾಯದ ಶಿಕ್ಷಣವೂ ಅವರವರ ಭಾಷೆಯಲ್ಲಿ ನಡೆಯಬೇಕೆ? ಪ್ರತಿಯೊಂದು ಬುಡಕಟ್ಟುವಿಗೂ ಪ್ರತ್ಯೇಕ ಅಭಿವೃದ್ಧಿ ಕಾರ್ಯನೀತಿ – ಕಾರ್ಯತಂತ್ರವನ್ನು ರೂಪಿಸಲು ಸಾಧ್ಯವೆ?

ಬುಡಕಟ್ಟುತನವು ಅನೇಕ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದೆ. ಬುಡಕಟ್ಟುಗಳು ಸಾಮುದಾಯಿಕ ಮೌಲ್ಯಗಳಿಗೆ ಹೆಚ್ಚಿನ ಮನ್ನಣೆ ನೀಡುವುದರಿಂದ ಅಲ್ಲಿ ಜನರ ವೈಯಕ್ತಿಕ ಹಕ್ಕು ಸ್ವಾತಂತ್ರ್ಯಗಳಿಗೆ ದಕ್ಕೆ ಉಂಟಾಗುತ್ತದೆ. ಬುಡಕಟ್ಟುತನವು ಅನೇಕ ವೇಳೆ ಬುಡಕಟ್ಟುಗಳ ಸದಸ್ಯರ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡಬಹುದು. ಬುಡಕಟ್ಟುತನವು ತುಂಬಾ ‘ಅತಿ’ಯಾದರೆ, ಅವು ಸ್ವಾಯತ್ತತೆಯನ್ನು ತೀವ್ರವಾಗಿ ಒತ್ತಾಯಿಸಿಬಿಟ್ಟರೆ ಅದು ವಿಚ್ಛಿದ್ರಕಾರಿಯಾಗಿ ಬಿಡಬಹುದು – ಪ್ರತ್ಯೇಕವಾದಿಯಾಗಿ ಬಿಡಬಹುದು. ಬುಡಕಟ್ಟುಗಳು ಇಂದು ರಾಷ್ಟ್ರಪ್ರಭುತ್ವದೊಳಗೆ ಜೀವಿಸಬೇಕೆಂಬುದನ್ನು ಮರೆಯಬಾರದು. ಇದಕ್ಕೆ ರಾಷ್ಟ್ರಪಭುತ್ವ ಮತ್ತು ಬುಡಕಟ್ಟುಗಳ ನಡುವೆ ಸಂಧಾನ – ಸಂವಾದ ಸಾಧ್ಯವಾಗಬೇಕು. ಈ ಬಗೆಯ ಒಡಂಬಡಿಕೆಯ ಮೂಲಕ ಇವೆರಡೂ ಒಟ್ಟಿಗೆ ಸೌಹಾರ್ದತೆಯಿಂದ ಬದುಕುವುದು ಹೇಗೆ ಎಂಬುದನ್ನು ಕಂಡುಕೊಳ್ಳಬೇಕು. ಬುಡಕಟ್ಟುಗಳು ಆಧುನಿಕಪೂರ್ವ ಸ್ಥಿತಿಯಲ್ಲೇ ಇರಲು ಸಾಧ್ಯವಿಲ್ಲ. ಆಧುನೀಕರಣ ಪ್ರವಾಹದಿಂದ ಅವು ಅಲಾಯದವಾಗಿರಲು ಸಾಧ್ಯವಿಲ್ಲ. ಬುಡಕಟ್ಟುಗಳ ಅಭಿವೃದ್ಧಿಯನ್ನು ಪುನರ್ ನಿರ್ವಚಿಸುವ ಅಗತ್ಯವಿದೆ. ಬುಡಕಟ್ಟುತನವನ್ನೇ ಹಿಂದುಳಿದಿರುವಿಕೆಯೆಂದು ಪರಿಗಣಿಸುವುದರಲ್ಲಿ ಅರ್ಥವಿಲ್ಲ. ಬುಡಕಟ್ಟುತನವನ್ನು ಬುಡಕಟ್ಟುಗಳು ಬಿಟ್ಟುಕೊಡುವುದೇ ಅಭಿವೃದ್ಧಿ ಎಂಬ ನಿರ್ವಚನವನ್ನು ಮರುಪರಿಶೀಲಿಸುವ ಅಗತ್ಯವಿದೆ. ಸಮುದಾಯ ವಾದಿಗಳು ಪ್ರತಿಪಾದಿಸುತ್ತಿರುವ ಬುಡಕಟ್ಟುಗಳ ಸಾಂಸ್ಕೃತಿಕ ಅನನ್ಯತೆಯ ಅತಿಯಾದ ಒತ್ತಾಯವನ್ನು ಹಾಗೂ ಅಭಿವೃದ್ಧಿ ಮೀಮಾಂಸಕರು ಆಧುನೀಕರಣ ಪ್ರತಿಪಾದಕರು ರಾಷ್ಟ್ರಪ್ರಭುತ್ವವಾದಿಗಳು ಪ್ರತಿಪಾದಿಸುತ್ತಿರುವ ಬುಡಕಟ್ಟುಗಳನ್ನು ಜೀರ್ಣಿಸಿಕೊಳ್ಳುವ ಸಂಗತಿಯನ್ನು ಕೈಬಿಟ್ಟು ಇವೆರಡನ್ನು ಹೊಂದಾಣಿಕೆ ಮಾಡಿಕೊಂಡು ಒಂದು ರಾಜಕೀಯ ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿದೆ. ಇದನ್ನು ಖ್ಯಾತ ರಾಜ್ಯಶಾಸ್ತ್ರಜ್ಞ ರಾಜೀವ್‌ಭಾರ್ಗವ ಅವರು ‘ಜನತಾಂತ್ರಿಕ ಬಹುಸಂಸ್ಕೃತಿವಾದ’ವೆಂದು ಕರೆದಿದ್ದಾರೆ. ಅವರ ಪ್ರಕಾರ ಜನತಾಂತ್ರಿಕ ಬಹುಸಂಸ್ಕೃತಿಕ ವಾದವು ಮಾತ್ರವೇ ಸಾಂಸ್ಕೃತಿಕ ಅನನ್ಯತೆ ಹಾಗೂ ವ್ಯಕ್ತಿಗತ ಸ್ವಾತಂತ್ರ್ಯ ಹಕ್ಕುಗಳ ನಡುವಿನ ಘರ್ಷಣೆಗಳನ್ನು ರಾಜಕೀಯ ಪ್ರಕ್ರಿಯೆಗೆ ಒಳಪಡಿಸಿ ಅವುಗಳನ್ನು ಪರಿಹರಿಸುವ ಸಾಮರ್ಥ್ಯ ಪಡೆದಿದೆ. ಭಾರತದಂತಹ ಸಂದರ್ಭದಲ್ಲಿ ಜನತಾಂತ್ರಿಕ ಬಹುಸಂಸ್ಕೃತಿವಾದ ಅತ್ಯಂತ ಸೂಕ್ತವಾದುದಾಗಿದೆ. ಬುಡಕಟ್ಟುಗಳಿಗೆ ಸಂಬಂಧಿಸಿದ ಅನೇಕ ಬಗೆಯ ಹಿಂಸೆಯ – ಕ್ರೂರತನದ ಸಂಗತಿಗಳನ್ನು ನಿವಾರಿಸಿಕೊಳ್ಳಲು ಜನತಾಂತ್ರಿಕ ಪ್ರಭುತ್ವವೊಂದರ ಅಗತ್ಯವಿದೆ. ಅದೇ ರೀತಿ ಸಾಂಸ್ಕೃತಿಕ ಅನನ್ಯತೆಯನ್ನು ವಿಶಿಷ್ಟತೆಯನ್ನು ಕಾಯ್ದುಕೊಳ್ಳಲು ಪ್ರಭುತ್ವಕ್ಕೆ ಹೊರಾದ ಅನೇಕ ಸಂಸ್ಥೆ – ಆಚರಣೆಗಳನ್ನು ಪ್ರಭುತ್ವವು ಬಳಸಿಕೊಳ್ಳಬೇಕಾಗುತ್ತದೆ. ಈ ಬಗೆಯ ಚೌಕಟ್ಟಿನಲ್ಲಿ, ಅಂದರೆ ಜನತಾಂತ್ರಿಕ ಬಹುಸಂಸ್ಕೃತಿ ವ್ಯವಸ್ಥೆಯಲ್ಲಿ ಬುಡಕಟ್ಟುಗಳ ಅಭಿವೃದ್ಧಿಯನ್ನು ಸೂಕ್ತವಾಗಿ ನಿರ್ವಹಿಸಬಹುದಾಗಿದೆ.

ಬುಡಕಟ್ಟು ಅಭಿವೃದ್ಧಿಯನ್ನು ಪರಿಭಾವಿಸಿಕೊಳ್ಳವಾಗ ನಾವು ಎರಡು ಸಂಗತಿಗಳನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

೧. ಬುಡಕಟ್ಟುಗಳು ಒಂದು ಸಮಾಜದಲ್ಲಿ ಇತರರ ಜೊತೆ ಶಾಂತಿ ಸೌಹಾರ್ದತೆಯಿಂದ ಬದುಕಲು ಪರಿಣಾಮಕಾರಿಯಾದ ಪ್ರಭುತ್ವವೊಂದು ಅತ್ಯಂತ ಅಗತ್ಯ.

೨. ಜನತಾಂತ್ರಿಕ ವ್ಯವಸ್ಥೆಯಲ್ಲಿ ಮಾತ್ರ ಸಾಂಸ್ಕೃತಿಕ ಘರ್ಷಣೆಗಳಿಗೆ ಪರಿಹಾರಗಳನ್ನು ರೂಪಿಸಿಕೊಳ್ಳಬಹುದು.

ಒಟ್ಟಂದದಲ್ಲಿ ಬುಡಕಟ್ಟುತನವನ್ನು, ಸಾಂಸ್ಕೃತಿಕ ಅನನ್ಯತೆಯನ್ನು ಬಿಟ್ಟುಕೊಡದೆ, ವ್ಯಕ್ತಿಗತ ಸ್ವಾತಂತ್ರ್ಯ ಸಮಾನತೆಗಳನ್ನು ಊರ್ಜಿತಗೊಳಿಸುತ್ತ ಅಭಿವೃದ್ಧಿಯನ್ನು ಸಾಧಿಸಿಕೊಳ್ಳಬೇಕಾದರೆ ಅದು ಜನತಾಂತ್ರಿಕ ಬಹುಸಂಸ್ಕೃತಿ ಚೌಕಟ್ಟಿನಲ್ಲಿ ಮಾತ್ರ ಸಾಧ್ಯ.

೧೦. ಪ್ರಧಾನಧಾರೆ ಅಭಿವೃದ್ಧಿ ಮೀಮಾಂಸೆಯು ರೂಪಿಸಿರುವ ಅಘಾತಕಾರಿ ಸಂಗತಿಯೆಂದರೆ ‘ಬುಡಕಟ್ಟುಗಳು ಇಂದು ಹಿಂದುಳಿದಿದ್ದರೆ, ಅವು ಆಧುನಿಕಪೂರ್ವ ಸ್ಥಿತಿಯಲ್ಲಿದ್ದರೆ, ಅವು ಅಭಿವೃದ್ಧಿಯ ಪ್ರವಾಹದಲ್ಲಿ ಬೆರೆಯದಿದ್ದರೆ ಅದಕ್ಕೆ ಬುಡಕಟ್ಟುಗಳೇ ಕಾರಣ’ ಎಂಬುದಾಗಿದೆ. ಅಭಿವೃದ್ಧಿ ಮೀಮಾಂಸೆಯು ಅಭಿವೃದ್ಧಿಯ ಸಾಮರ್ಥ್ಯವಿರುವ ಪ್ರದೇಶ ಹಾಗೂ ವರ್ಗಗಳಲ್ಲಿ ಹೆಚ್ಚು ವಿಶ್ವಾಸವನ್ನು ತೋರಿಸಿತು. ಈ ಬಗೆಯ ಅಭಿವೃದ್ಧಿ ಮೀಮಾಂಸೆಯನ್ನು ಆಧರಿಸಿದ ಅಭಿವೃದ್ಧಿ ಕಾರ್ಯಕ್ರಮಗಳು ಅಭಿವೃದ್ಧಿ ಯಶಸ್ವಿಯಾಗಬಹುದಾದ ಸ್ಥಾನಗಳನ್ನು ಆಯ್ಕೆ ಮಾಡಿಕೊಂಡು ಕ್ರಿಯಾಶೀಲವಾಗಿದ್ದವು. ಈಬಗೆಯ ಕಾರ್ಯಕ್ರಮಗಳಿಗೆ ‘ಪ್ರಗತಿಪರ’ ರೈತನಂತಹ ಸಾಧನ ಬೇಕಾಗಿತ್ತು. ಬುಡಕಟ್ಟುಗಳ ಅಭಿವೃದ್ಧಿ ಸಾಮರ್ಥ್ಯವನ್ನು ಗುರುತಿಸುವುದು ಸರ್ಕಾರಗಳಿಗೆ ಸಾಧ್ಯವಾಗಲಿಲ್ಲ. ಏಕೆಂದರೆ ಸರ್ಕಾರವು ಅಭಿವೃದ್ಧಿಯನ್ನು ಗುರುತಿಸಲಿಕ್ಕೆ ಬಳಸುತ್ತಿದ್ದ ಸಾಧನಗಳು ಬುಡಕಟ್ಟು ಸಮಾಜಕ್ಕೆ ಸೂಕ್ತವಾಗಿರಲಿಲ್ಲ. ಏಕೆಂದರೆ ಆಧುನಿಕಪೂರ್ವ ಸ್ಥಿತಿಯಲ್ಲಿದ್ದ ಬುಡಕಟ್ಟುಗಳ ಅಭೀವೃದ್ಧಿ ಸಾಮರ್ಥ್ಯವು ಕನಿಷ್ಟತಮವಾಗಿದ್ದರೆ ಅದರಲ್ಲಿ ಆಶ್ಚರ್ಯಪಡುವಂತಹದೇನೂ ಇರಲಿಲ್ಲ. ಬುಡಕಟ್ಟುಗಳಾಗಿ ಅಭಿವೃದ್ಧಿ ಹೊಂದುವುದು ಸಾಧ್ಯವೇ ಇಲ್ಲವೆಂದು ಪ್ರಧಾನಧಾರೆ ಅಭಿವೃದ್ಧಿ ಮೀಮಾಂಸೆ ಪ್ರತಿಪಾದಿಸಿತು. ಈ ಕಾರಣದಿಂದಾಗಿಯೆ ಬುಡಕಟ್ಟುಗಳ ಬುಡಕಟ್ಟುತನವನ್ನು ಅಳಿಸಿ ಹಾಕುವಂತಹ ದಿಶೆಯಲ್ಲಿ ಅಭಿವೃದ್ಧಿ ಮೀಮಾಂಸೆಯು ತನ್ನ ಸಂಕಥನವನ್ನು ಬೆಳೆಸಿತು.

ಬುಡಕಟ್ಟುಗಳ ಹಿಂದುಳಿದಿರುವಿಕೆಗೆ ಬುಡಕಟ್ಟುಗಳನ್ನೇ ಕಾರಣವನ್ನಾಗಿಸುವ ಅಭಿವೃದ್ಧಿ ಮೀಮಾಂಸೆಯ ತರ್ಕವು ಇಂದು ಯಾವುದೇ ಅರ್ಥವನ್ನು ಪಡೆದಿಲ್ಲ. ಬುಡಕಟ್ಟುಗಳ ಅಭಿವೃದ್ಧಿಯನ್ನು ಬುಡಕಟ್ಟುಗಳ ಸಾಂಸ್ಕೃತಿಕ ಅಗತ್ಯತೆಯ ನೆಲೆಯಿಂದ ಅಭಿವೃದ್ಧಿ ಮೀಮಾಂಸೆಯನ್ನು ಪರಿಭಾವಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಅಭಿವೃದ್ಧಿಯನ್ನು ಆಧುನೀಕರಣ ವಿಚಾರ ಪ್ರಣಾಳಿಕೆಯ ನೆಲೆಯಿಂದ ಪರಿಭಾವಿಸಿಕೊಂಡಿರುವುದರಿಂದ ಅಭಿವೃದ್ಧಿ ಮೀಮಾಂಸೆಯಲ್ಲಿ ಬುಡಕಟ್ಟುಗಳ ಅಭಿವೃದ್ಧಿಗೆ ಯಾವುದೇ ಸ್ಥಾನವಿಲ್ಲದಂತಾಗಿದೆ. ಬುಡಕಟ್ಟುಗಳ ನೆಲೆಯಿಂದ ಅವುಗಳ ಅಭಿವೃದ್ಧಿಯನ್ನು ಪರಿಭಾವಿಸಿಕೊಳ್ಳುವ ಅಗತ್ಯವಿದೆ. ಇಂದು ಬುಡಕಟ್ಟುಗಳ ಅಭಿವೃದ್ಧಿ ಅನ್ನುವುದು ಪ್ರಧಾನಧಾರೆಯ ಜ್ಞಾನಶಿಸ್ತುಗಳ ಭಾಗವಾಗದಿದ್ದರೆ ಅದು ಬುಡಕಟ್ಟುಗಳ ತಪ್ಪಲ್ಲ. ಬುಡಕಟ್ಟುಗಳನ್ನು ಬುಡಕಟ್ಟುಗಳ ಜಗತ್ತಿನ ಹೊರಗೆ ನಿಂತು ಪರಿಭಾವಿಸಿಕೊಂಡ ಕಾರಣದಿಂದಾಗಿ ಅಭಿವೃದ್ಧಿ ಮೀಮಾಂಸೆಯು ಬುಡಕಟ್ಟುಗಳ ಅಭಿವೃದ್ಧಿ ಅನ್ನುವುದಿದ್ದರೆ ಬುಡಕಟ್ಟುಗಳ ಅಭಿವೃದ್ಧಿಯೇ ವಿನಾ ಬುಡಕಟ್ಟೇತರರ ಅಭಿವೃದ್ಧಿಯಲ್ಲ. ನಾಗರಿಕನೆಂದು ತನ್ನನ್ನು ಕರೆದುಕೊಳ್ಳುವ ಸಮಾಜವು ತನ್ನದೇ ಆದ ಮೌಲ್ಯ, ನಂಬಿಕೆ ಆಚರಣೆಗಳ ನೆಲೆಯಿಂದ ಬುಡಕಟ್ಟುಗಳು ‘ಅನಾಗರಿಕ’ವಾಗಿ ಕಂಡುಬರುವುದು ಸಾಧ್ಯವಿಲ್ಲ. ಬುಡಕಟ್ಟುಗಳ ಅಭಿವೃದ್ಧಿಗೆ ಮಾನದಂಡ ಬುಡಕಟ್ಟು ಸಮಾಜದೊಳಗಿನಿಂದಲೇ ಮೂಡಿಬರಬೇಕಾಗುತ್ತದೆ. ಬುಡಕಟ್ಟುಗಳದ್ದೇ ಆದ ಮಾನದಂಡಗಳಿಂದ ಬುಡಕಟ್ಟುಗಳನ್ನು ಪರಿಭಾವಿಸಿಕೊಳ್ಳಬೇಕಾಗುತ್ತದೆ.

ಈಗಾಗಲೇ ಎಚ್ಚರಿಸಿರುವಂತೆ ಬುಡಕಟ್ಟುಗಳನ್ನು ಜನತಾಂತ್ರಿಕ ಬಹುಸಂಸ್ಕೃತಿ ವ್ಯವಸ್ಥೆಯಲ್ಲಿ ಪರಿಭಾವಿಸಿಕೊಳ್ಳಬೇಕಾಗುತ್ತದೆ. ಬುಡಕಟ್ಟುಗಳು ಜನತಾಂತ್ರಿಕ ಪ್ರಭುತ್ವ ದೊಳಗೆ ಬದುಕಬೇಕು. ಅದನ್ನು ಬಿಟ್ಟು ತಮ್ಮ ವಿಶಿಷ್ಟತೆ – ಅನನ್ಯತೆಯನ್ನು ಅತಿಗೆ ಒಯ್ದು ಬುಡಕಟ್ಟುಗಳು ಪ್ರತ್ಯೇಕವಾಗಿ ಬದುಕು ಕಟ್ಟಿಕೊಳ್ಳುವುದು ಇಂದು ಸಾಧ್ಯವಿಲ್ಲ. ಇದೇ ರೀತಿ ಜನತಾಂತ್ರಿಕ ವ್ಯವಸ್ಥೆಯು ಬುಡಕಟ್ಟುಗಳ ಅನನ್ಯತೆಯನ್ನು ಮನ್ನಿಸಬೇಕು.

೧೧. ಇಂದು ಪ್ರಪಂಚವು ವಿಚಿತ್ರ ಸನ್ನಿವೇಶದಲ್ಲಿ ಬದುಕುತ್ತಿದೆ. ಒಂದು ದಿಶೆಯಲ್ಲಿ ಜಾಗತೀಕರಣವು ಸಣ್ಣಪುಟ್ಟ ಸಮುದಾಯಗಳ ಚಹರೆಯನ್ನು ಅಳಿಸಿಹಾಕಿ ಏಕರೂಪ ಜಗತ್ತನ್ನು ಕಟ್ಟುವ ಕೈಂಕರ್ಯದಲ್ಲಿ ತೊಡಗಿದೆ. ಇನ್ನೊಂದು ದಿಕ್ಕಿನಲ್ಲಿ ಆಧುನಿಕೋತ್ತರವಾದಿಗಳು ಬುಡಕಟ್ಟುಗಳು – ಸಣ್ಣಪುಟ್ಟ ಸಮುದಾಯಗಳ ಸಾಂಸ್ಕೃತಿಕ ಅನನ್ಯತೆಯ ವಿಷಯವನ್ನು ತುಂಬಾ ‘ಅತಿ’ಗೆ ಒಯ್ದು ‘ವಿಶಿಷ್ಟತೆ’ಯ ಆರಾಧನೆಯಲ್ಲಿ, ಭಿನ್ನತೆಯ ರಾಜಕಾರಣದ ಅಲೆಯಲ್ಲಿ ತೇಲುತ್ತಿದ್ದಾರೆ. ಏಕರೂಪೀಕರಣ ಮತ್ತು ಬಹುರೂಪೀಕರಣಗಳು ಮುಖಾಮುಖಿಯಾಗಿವೆ. ಇವೆರಡೂ ಅತಿಯಾದ ಪ್ರಕ್ರಿಯೆಗಳ ನಡುವೆ ನಾವು ಅಭಿವೃದ್ಧಿಯನ್ನು ಗುರುತಿಸಿಕೊಳ್ಳಬೇಕಾಗಿದೆ.

ಜಾಗತೀಕರಣ ಪ್ರವಾಹದಲ್ಲಿ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಅನನ್ಯತೆ ಅಳಿಸಿ ಹೋಗಬಾರದು ಎಂಬುದು ಎಷ್ಟು ಮುಖ್ಯವೋ, ಅವುಗಳು ರಾಷ್ಟ್ರಪ್ರಭುತ್ವವನ್ನು ಒಪ್ಪಿಕೊಂಡು ಜನತಾಂತ್ರಿಕ ಬಹುಸಂಸ್ಕೃತಿ ವ್ಯವಸ್ಥೆಯಲ್ಲಿ ಬದುಕನ್ನು ರೂಪಿಸಿಕೊಳ್ಳಬೇಕಾದುದು ಅಷ್ಟೇ ಮುಖ್ಯವಾದುದಾಗಿದೆ. ಬುಡಕಟ್ಟುಗಳು ರಾಷ್ಟ್ರೀಯ ಪ್ರವಾಹದಲ್ಲಿ ಮುಳುಗಿ ಹೋಗಬೇಕು ಎಂಬುದೇ ಅಭಿವೃದ್ಧಿಯಲ್ಲ. ಅವುಗಳ ಅನನ್ಯತೆಯ ಒಡಲಲ್ಲೆ ಅವರ ಬದುಕು ಉತ್ತಮವಾಗುವಂತೆ ಮಾಡುವುದೇ ಅಭಿವೃದ್ಧಿ. ಬುಡಕಟ್ಟುಗಳ ಅನನ್ಯತೆಯನ್ನು ಜನತಂತ್ರದ ಪ್ರಕ್ರಿಯೆಗೆ ಮತ್ತು ಜನತಂತ್ರವನ್ನು ಸಾಂಸ್ಕೃತಿಕ ಪ್ರಕ್ರಿಯೆಗೆ ಒಳಪಡಿಸುವ ಅಗತ್ಯವಿದೆ. ಜನತಂತ್ರವಿಲ್ಲದೆ ಬಹುಸಂಸ್ಕೃತಿವಾದ ಉಳಿಯುವುದು ಸಾಧ್ಯವಿಲ್ಲ. ಬಹುಸಂಸ್ಕೃತಿಯಿಲ್ಲದೆ ಬುಡಕಟ್ಟುಗಳ ಅನನ್ಯತೆಯನ್ನು ಜನತಂತ್ರ ಒಪ್ಪಿಕೊಳ್ಳಬೇಕು. ಅಭಿವೃದ್ದಿ ಮೀಮಾಂಸೆಯು ಜನತಂತ್ರ ಹಾಗೂ ಸಂಸ್ಕೃತೀಕರಣ ಪ್ರಕ್ರಿಯೆಗೆ ಒಳಗಾಗಬೇಕಾಗಿದೆ.

೧೨. ಜನತಾಂತ್ರಿಕ ಬಹುಸಂಸ್ಕೃತಿವಾದದ ಚೌಕಟ್ಟಿನಲ್ಲಿ ಅಭಿವೃದ್ಧಿಯನ್ನು ಪರಿಭಾವಿಸಿ ಕೊಳ್ಳಬೇಕಾಗಿದೆ. ಇದು ಇಂದು ನಡೆಯಬೇಕಾದ ಒಂದು ಕಾರ್ಯವಾಗಿದೆ. ಹೀಗೆ ಪರಿಭಾವಿಸಿಕೊಂಡಾಗ ಬುಡಕಟ್ಟುಗಳ ಅಭಿವೃದ್ಧಿ ಅನ್ನುವುದಕ್ಕೆ ಅರ್ಥ ಬರುತ್ತದೆ, ಮಹತ್ವ ಪ್ರಾಪ್ತವಾಗುತ್ತದೆ. ಬುಡಕಟ್ಟುಗಳನ್ನು ಬುಡಕಟ್ಟುಗಳಾಗಿ ಅಭಿವೃದ್ದಿಪಡಿಸುವುದು ಹೇಗೆ? ಬುಡಕಟ್ಟುಗಳನ್ನು ಜನತಂತ್ರ ಪ್ರಕ್ರಿಯೆಗೆ ಒಳಪಡಿಸುವುದು ಹೇಗೆ? ಅಭಿವೃದ್ಧಿ ಮೀಮಾಂಸೆಯಲ್ಲಿ ಸಾಂಸ್ಕೃತಿಕ ಹಾಗೂ ರಾಜಕಾರಣದ ಸಂಗತಿಗಳನ್ನು ಅಂತರ್ಗತ ಮಾಡುವುದು ಹೇಗೆ? ವ್ಯಷ್ಟಿ ಹಾಗೂ ಸಮಷ್ಟಿ ಮೌಲ್ಯಗಳಿಗೆ ಸರಿಸಮವಾದ ಸ್ಥಾನಮಾನ ಕಲ್ಪಿಸುವುದು ಹೇಗೆ? ಸಮುದಾಯವಾದಿ ಅನನ್ಯತೆಯು ವ್ಯಕ್ತಿಗತ ಸ್ವಾತಂತ್ರ್ಯ ಸ್ವಾಯತ್ತತೆಗೆ ಮಾರಕವಾಗದಂತೆ ಮಾಡುವುದು ಹೇಗೆ? ಇಂತಹ ಇನ್ನೂ ಹಲವಾರು ಪ್ರಶ್ನೆಗಳನ್ನು ಅಭಿವೃದ್ಧಿಯು ಅಂತರ್ಗತ ಮಾಡಿಕೊಳ್ಳದೆ ಅಭಿವೃದ್ಧಿ ಮೀಮಾಂಸೆ ಅರ್ಥಪೂರ್ಣವೂ, ಉಪಯುಕ್ತವೂ ಆಗುವುದು ಸಾಧ್ಯವಿಲ್ಲ. ಅಭಿವೃದ್ಧಿ ಮೀಮಾಂಸೆಯು ಇಂತಹ ಸವಾಲುಗಳನ್ನು ಹೇಗೆ ಎದುರಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.