ಪ್ರಸ್ತಾವನೆ

ಕರ್ನಾಟಕವು ತನ್ನ ಉದಯದ ೫೦ನೆಯ ವರ್ಷವನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ (೨೦೦೬) ಕರ್ನಾಟಕತ್ವೆಂಬ ಕುತೂಹಲಕಾರಿಯೂ, ರಾಜಕೀಯವಾಗಿ ಆಸ್ಫೋಟಕಾರಿಯೂ ಮತ್ತು ಸಾಮಾಜಿಕವಾಗಿ ವಿಸ್ತೃತ ವ್ಯಾಪ್ತಿ ಹೊಂದಿದ್ದ ಮೀಮಾಂಸೆಯೊಂದನ್ನು ರೂಪಿಸಲು ಪ್ರಯತ್ನಿಸಿದ ಹಾಗೂ ಕರ್ನಾಟಕ ಏಕೀಕರಣ ಹೋರಾಟವನ್ನು ಹುಟ್ಟುಹಾಕಿ ಅದಕ್ಕಾಗಿ ಅಹರ್ನಿಶಿ ದುಡಿದ ಆಲೂರು ವೆಂಕಟರಾಯರನ್ನು (೧೮೮೦ – ೧೯೬೪) ಹಾಗೂ ಅವರ ವಿಚಾರಗಳನ್ನು – ಹೋರಾಟವನ್ನು ಇಂದು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಅವರು ರೂಪಿಸಿದ್ದ ಕರ್ನಾಟಕತ್ವ ಮೀಮಾಂಸೆಯ ವಿವಿಧ ಆಯಾಮಗಳನ್ನು ಪ್ರಸ್ತುತ ಪ್ರಬಂಧದಲ್ಲಿ ಚರ್ಚಿಸಲು ಪ್ರಯತ್ನಿಸಲಾಗಿದೆ.

ಅವರ ೧೯೫೭ರಲ್ಲಿ ಪ್ರಕಟವಾದ ೨೫೨ ಪುಟಗಳ ‘ಕರ್ನಾಟಕತ್ವದ ವಿಕಾಸ’ ಕೃತಿಯು ರಾಜಕೀಯ – ಸಾಮಾಜಿಕ ಸಂಗತಿಗಳನ್ನು ಕುರಿತ ಸೈದ್ಧಾಂತಿಕ ಚರ್ಚೆಯನ್ನು ಒಳಗೊಂಡಿದೆ. ಅವರು ತಮ್ಮ ಕೃತಿಯಲ್ಲಿ ಮತ್ತೆ ಮತ್ತೆ ಸ್ಪಷ್ಟಪಡಿಸಿರುವಂತೆ ಅವರ ಕರ್ನಾಟಕತ್ವು ಪ್ರಾಂತೀಯತೆ – ಪ್ರಾದೇಶಿಕತೆಗಳೆಂಬ ಸಂಕುಚಿತ ಸಂಗತಿಗಳಿಗೆ ಸಂಬಂಧಿಸಿದುದಲ್ಲ. ಅದು ಕೇವಲ ಭಾಷೆ – ಸಾಹಿತ್ಯಕ್ಕೆ ಸಂಬಂಧಿಸಿದ ಸಂವಾದವೂ ಅಲ್ಲ. ಅದೊಂದು ರಾಜಕೀಯ – ಸಾಮಾಜಿಕ ಸಿದ್ಧಾಂತ. ಆಲೂರರ ಕರ್ನಾಟಕತ್ವದ ವಿವಿಧ ಆಯಾಮಗಳನ್ನು ಕುರಿತಂತೆ ನಮ್ಮ ವಿದ್ವಾಂಸರು ಹೆಚ್ಚು ಚರ್ಚೆ ಮಾಡಿದಂತೆ ಕಾಣಲಿಲ್ಲ. ಅವರ ವಿಚಾರಗಳನ್ನು ಕುರಿತಂತೆ ಅನುಸಂಧಾನ ಹೆಚ್ಚು ನಡೆಯಲಿಲ್ಲ. ಡಾ. ಡಿ.ಆರ್. ನಾಗರಾಜ್ (೧೯೯೬) ಮತ್ತು ಡಾ.ಕೆ. ರಾಘವೇಂದ್ರರಾವ್‌ (೨೦೦೦) ಅವರು ಮಾತ್ರ ಆಲೂರರ ಕರ್ನಾಟಕತ್ವದ ಸೈದ್ಧಾಂತಿಕ ನೆಲೆಗಳನ್ನು ಹಿಡಿದಿಡಲು ಪ್ರಯತ್ನಿಸಿದರು. ಉಳಿದಂತೆ ಅದರ ಬಗ್ಗೆ ಚರ್ಚೆ ನಡೆದಂತೆ ಕಾಣಲಿಲ್ಲ. ಸಮಾಜ ವಿಜ್ಞಾನಿಗಳಿಗೆ ಅವರ ಕೃತಿಯು ವಿಚಾರಗಳ ನಿಕ್ಷೇಪದಂತಿದೆ. ದುರದೃಷ್ಟದ ಸಂಗತಿಯೆಂದರೆ ಕರ್ನಾಟಕದಲ್ಲಿ ಸಮಾಜ ವಿಜ್ಞಾನಿಗಳು ಅವರ ಕೃತಿಯನ್ನು ಕುರಿತು ಅಧ್ಯಯನ ನಡೆಸಲಿಲ್ಲ (ಡಾ. ರಾಘವೇಂದ್ರರಾವ್ ಮಾತ್ರ ಇದಕ್ಕೆ ಅಪವಾದ).

ಅಬ್ಬರಆರ್ಭಟ

ಸುವರ್ಣ ವರ್ಷಾಚರಣೆಯ ಅಬ್ಬರ – ಆರ್ಭಟದಲ್ಲಿ ಆಲೂರರನ್ನು ನೆನಪಿಸಿಕೊಳ್ಳುವ ಪ್ರಯತ್ನವನ್ನು ಕರ್ನಾಟಕ ಮಾಡದಿರುವುದು ತುಂಬಾ ದುರದೃಷ್ಟಕರ. ಕರ್ನಾಟಕ ಏಕೀಕರಣವನ್ನು ತಪಸ್ಸಿನಂತೆ ಧ್ಯಾನಿಸಿದವರು ಅವರು. ಅತ್ಯಂತ ಸುಲಭವಾಗಿ ಪಡೆದುಕೊಳ್ಳಬಹುದಾಗಿದ್ದ ರಾಷ್ಟ್ರೀಯ ವೇದಿಕೆಯನ್ನು ಅಲ್ಲಿನ ನಾಯಕತ್ವವನ್ನು ಅವರು ಕರ್ನಾಟಕತ್ವಕ್ಕಾಗಿ ಅಂದು ಬಿಟ್ಟುಕೊಟ್ಟರು. ‘ಕರ್ನಾಟಕ ಚಳುವಳಿಯೆಂದರೂ ನಾನೇ, ನಾನು ಎಂದರೇನೆ ಕರ್ನಾಟಕ ಚಳುವಳಿ’ ಎಂಬ ಮಾತುಗಳನ್ನು ಅವರು ‘ಕರ್ನಾಟಕತ್ವದ ವಿಕಾಸ’ದ ಮುನ್ನುಡಿಯಲ್ಲಿ ಬರೆದಿದ್ದಾರೆ. ಇನ್ನೊಂದು ಕಡೆ ‘ಕರ್ನಾಟಕವೆಂಬುದು ನನ್ನ ವಿಶಿಷ್ಟ ವಿಚಾರ. ಆ ಶಬ್ಧವೂ ಕೂಡ ನನ್ನ ಟಂಕಸಾಲೆಯಲ್ಲಿ ಹುಟ್ಟಿದ್ದು’ (ಪು.೯) ಎಂಬ ಮಾತುಗಳನ್ನು ಅವರು ಬರೆದಿದ್ದಾರೆ. ಅವರ ಸ್ವಾಭಿಮಾನ ಮತ್ತು ಆತ್ಮಸ್ಥೈರ್ಯವು ಅನುಕರಣೀಯವಾದುದಾಗಿದೆ. ಕರ್ನಾಟಕ ಏಕೀಕರಣಕ್ಕೆ ೫೦ ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಅದರ ಆದ್ಯ ಪ್ರವರ್ತಕರಾದ ಆಲೂರು ವೆಂಕಟರಾಯರನ್ನು ನೆನೆಯುವುದು ಅತ್ಯಂತ ಪ್ರಸ್ತುತವೆಂದು ನಾನು ಭಾವಿಸಿದ್ದೇನೆ (ಅವರ ‘ಕರ್ನಾಟಕತ್ವದ ವಿಕಾಸ’ ಕೃತಿಗೂ ೨೦೦೭ಕ್ಕೆ ೫೦ ವರ್ಷ ತುಂಬುತ್ತದೆ). ವಾಸ್ತವವಾಗಿ ಕರ್ನಾಟಕದ ಏಕೀಕರಣಕ್ಕೆ ಒಂದು ಶತಮಾನಕ್ಕೂ ಮಿಕ್ಕಿದ ಇತಿಹಾಸವಿದೆ. ಆದರೆ ಈ ಇತಿಹಾಸದ ಬೇರುಗಳಿರುವುದು. ಉತ್ತರ ಕರ್ನಾಟಕದಲ್ಲಿಮತ್ತು ಮುಖ್ಯವಾಗಿ ಧಾರವಾಡದಲ್ಲಿ. ಇದಕ್ಕೆ ಸಂಬಂಧಿಸಿದ ಪ್ರಯತ್ನಗಳು ಹತ್ತೊಂಬತ್ತನೆಯ ಶತಮಾನದ ಕೊನೆಯ ದಶಕದಲ್ಲೇ ಆರಂಭವಾಗಿರುವುದನ್ನು ಗುರುತಿಸಬಹುದು. ಅದು ಮುಖ್ಯವಾಗಿ ಹಿಂದುಳಿದವರ, ಬಡವರ, ವಂಚಿತರ ಒಂದು ಪ್ರಯತ್ನವಾಗಿತ್ತು.

ಕರ್ನಾಟಕತ್ವವು ಭಾಷಾ ರಾಜಕಾರಣವಲ್ಲ

ಕರ್ನಾಟಕತ್ವವೆಂಬುದು ಅವರು ರೂಪಿಸಿದ ವಿಚಾರ ಪ್ರಣಾಳಿಕೆಯಾಗಿದೆ. ಭಾಷಾ ರಾಜಕಾರಣದ ಭಾಗವಾಗಿ ಅವರು ಅದನ್ನು ಪರಿಭಾವಿಸಿಕೊಂಡಿರಲಿಲ್ಲ. ಅವರು ಅದನ್ನು ಸಾಮಾಜಿಕ – ಆರ್ಥಿಕ – ರಾಜಕಾರಣದ ಒಂದು ಸಿದ್ಧಾಂತವನ್ನಾಗಿ ರೂಪಿಸಿದರು. ಅದು ಭಾಷೆ – ಸಾಹಿತ್ಯಕ್ಕೆ ಮಾತ್ರ ಸೀಮಿತಗೊಂಡ ಸಂಗತಿಯಾಗಿರಲಿಲ್ಲ. ಏಕೀಕರಣ ಪೂರ್ವದಲ್ಲಿ ಚಳುವಳಿ ನಡೆಸುತ್ತಿದ್ದ ಆಲೂರರಿಗೆ ಮತ್ತು ಅವರ ಸಮಕಾಲೀನರಿಗೆ ಕರ್ನಾಟಕತ್ವದ ಬಗ್ಗೆ ಖಚಿತವಾದ ವಿಚಾರಗಳಿದ್ದವು. ಕರ್ನಾಟಕ ಏಕೀಕರಣ ಏಕೆಬೇಕು ಎಂಬುದರ ಬಗ್ಗೆ ಅವರಿಗೆ ಅರಿವಿತ್ತು ಮತ್ತು ಅದನ್ನು ಕುರಿತಂತೆ ಅವರು ಚಿಂತನೆ ಮಾಡಿದ್ದರು. ಸಾಮಾಜಿಕ – ರಾಜಕೀಯ ನೆಲೆಯಲ್ಲಿ ಅದನ್ನು ಕಟ್ಟಲು ಅವರು ಪ್ರಯತ್ನಿಸಿದರು.

ಆಲೂರರು ೧೯೨೦ರಲ್ಲಿ ಧಾರವಾಡದಲ್ಲಿ ಸಂಘಟಿಸಿದ್ದ ಅಖಿಲ ಕರ್ನಾಟಕ ರಾಷ್ಟ್ರೀಯ ಪರಿಷತ್ತಿನ ಅಧಿವೇಶನದಲ್ಲಿ ಚರ್ಚಿಸಿದ ವಿಷಯಗಳ ಪಟ್ಟಿಯನ್ನು ತಮ್ಮ ಕೃತಿಯಲ್ಲಿ ನೀಡಿದ್ದಾರೆ (ಪು.೮೪). ರಾಜಕಾರಣ, ವಾಙ್ಮಯ, ವ್ಯಾಪಾರ, ವೃತ್ತಪತ್ರಿಕೆ ಬೆಳವಣಿಗೆ, ಕರ್ನಾಟಕದಲ್ಲಿ ರೈಲ್ವೇ ತೊಂದರೆ, ಪೋಸ್ಟುಗಳ ತೊಂದರೆ, ಬಂದರು, ನೀರು ಕಾಲುವೆ, ಹೈಕೋರ್ಟ್‌, ವಿಶ್ವವಿದ್ಯಾಲಯ, ಮೋಟಾರಿನ ಅನನುಕೂಲತೆ, ರಸ್ತೆಗಳು, ಸೇತುವೆಗಳು, ಕನ್ನಡ ಶಾಲೆ ಮುಂತಾದ ಸಂಗತಿಗಳ ಬಗ್ಗೆ ಅಲ್ಲಿ ಚರ್ಚೆ ನಡೆಸಲಾಗಿದೆ.

ಮತ್ತೊಂದು ಕಡೆ ಇದನ್ನು ಅವರು ಇನ್ನಷ್ಟು ಸ್ಪಷ್ಟವಾಗಿ ಹೀಗೆ ನುಡಿದಿದ್ದಾರೆ. ‘ಕರ್ನಾಟಕತ್ವವೆಂದರೆ ಕನ್ನಡ ವಾಙ್ಮಯವಲ್ಲ. ಕನ್ನಡ ನುಡಿಯೆಂದರೆ ಕರ್ನಾಟಕದ ಸರ್ವಸ್ವವೆಂದು ತಿಳಿಯುವುದೊಂದು ವರ್ಗವಿದೆ. ಅದು ಅಷ್ಟು ಸರಿಯಲ್ಲ. ಕರ್ನಾಟಕತ್ವವು ವ್ಯಾಪಾರ, ಕಲೆ, ಭೂಸುಧಾರಣೆ, ಬಂದರು ಸುಧಾರಣೆ, ಆಯುರ್ವೇದ ಮುಂತಾದ ಸಂಗತಿಗಳನ್ನು ಒಳಗೊಂಡಿದೆ’ (ಪು. ೧೪೭).

ಅವರು ಬಳಸಿರುವ ಭೂಸುಧಾರಣೆ, ಬಂದರು ಅಭಿವೃದ್ಧಿ, ಶಾಲೆಗಳು ಮುಂತಾದ ಸಂಗತಿಗಳಿಂದ ಅವರ ವಿಚಾರ ಪ್ರಣಾಳಿಕೆಯ ವ್ಯಾಪ್ತಿ ಎಷ್ಟು ವಿಸ್ತೃತವಾಗಿತ್ತು ಎಂಬುದು ತಿಳಿಯುತ್ತದೆ. ದ್ವಿಭಾಷಾ ವಲಯದಲ್ಲಿದ್ದ ಕನ್ನಡ ಮಾತನಾಡುತ್ತಿದ್ದ ಪ್ರದೇಶಗಳನ್ನು ಕರ್ನಾಟಕದಲ್ಲಿ ವಿಲೀನಗೊಳಿಸುವ ಗುರಿಯ ಹಿನ್ನೆಲೆಯಲ್ಲಿ ಆಲೂರರ ಮೇಲ್ಕಂಡ ವಿಚಾರಧಾರೆಯು ತುಂಬಾ ಉಪಯುಕ್ತವಾದುದಾಗಿತ್ತು. ಅದು ಜನರನ್ನು ಒಳಗೊಳ್ಳುವ ಪರಿಯದಾಗಿತ್ತು. ಆಲೂರರಂತೆಯೇ ಕರ್ನಾಟಕತ್ವದ ವ್ರತ ಕೈಗೊಂಡಿದ್ದ ಅಂದಿನ ಖ್ಯಾತ ಕಥೆಗಾರ ಕೃಷ್ಣಕುಮಾರ ಕಲ್ಲೂರ ಏಕೀಕರಣ ಕುರಿತಂತೆ ಹೀಗೆ ಬರೆದಿದ್ದಾರೆ.

‘….ಸಂಯುಕ್ತ ಕರ್ನಾಟಕದ ಬೇಡಿಕೆ ಹೊರ ಹೊರಗೆ ಭಾಷಾತ್ಮಕವಾಗಿದ್ದರೂ ನಿಜವಾಗಿ ಅದು ಆರ್ಥಿಕ ದೃಷ್ಟಿಯಲ್ಲಿ ಹಿಂದುಳಿದವರ ಕೂಗಾಗಿತ್ತು. ಆದುದರಿಂದ ಈಗ ಒಂದಾಗಿರುವ ಸಂಯುಕ್ತ ಕರ್ನಾಟಕ ಹಿಂದುಳಿದ ಪ್ರದೇಶಗಳದೇ ಒಂದು ಸಂಯುಕ್ತ ರಾಜ್ಯವೆಂತಲೂ, ಭಾಷೆ ಒಂದಾಗಿರುವುದು ಒಂದು ಹೆಚ್ಚಿನ ಅನುಕೂಲವೆಂದೂ ಭಾವಿಸಿಕೊಳ್ಳಬೇಕು. ಆದುದರಿಂದ ಭಾಷೆ ಸಾಹಿತ್ಯಗಳ ಬೆಳವಣಿಗೆಗಿಂತಲೂ ಹಿಂದುಳಿದ ಪ್ರದೇಶಗಳ ಆರ್ಥಿಕ ಬೆಳವಣಿಗೆಯೇ ಕರ್ನಾಟಕ ರಾಜ್ಯದ ಗುರಿ ಎಂದು ಬಗೆಗೆ ಬೇಕು’ (ಮೈಸೂರು ರಾಜ್ಯ ೧೯೫೬ ಕರ್ನಾಟಕ ಸರ್ಕಾರ, ಬೆಂಗಳೂರು). ಇದು ತುಂಬಾ ಮಹತ್ವದ ವಿಚಾರವಾಗಿದೆ. ಅಭಿವೃದ್ಧಿಯೇ ಏಕೀಕರಣದ ಮುಖ್ಯ ಗುರಿಯೆಂಬುದನ್ನು ಇವರು ಸ್ಪಷ್ಟವಾಗಿ ಗುರುತಿಸಿದ್ದಾರೆ.

ಕರ್ನಾಟಕ, ಏಕೀಕರಣ ಮತ್ತು ರಾಜ್ಯೋತ್ಸವಗಳು ಕೇವಲ ಭಾಷೆ – ಸಾಹಿತ್ಯಕ್ಕೆ ಮೀಸಲಾಗಿರುವ ಇಂದಿನ ದಿನಮಾನಗಳಲ್ಲಿ ಕಲ್ಲೂರರ ವಿಚಾರಗಳು, ಆಲೂರರ ಸಿದ್ಧಾಂತ ನಮ್ಮ ಕಣ್ಣು ತೆರೆಸಬೇಕಾಗಿದೆ. ಇಂದು ನಾವು ಯಾವುದನ್ನು ಪ್ರಾದೇಶಿಕ ಅಸಮಾನತೆಯೆಂದು ಗುರುತಿಸುತ್ತಿದ್ದೇವೆಯೋ ಅದರ ಬಗ್ಗೆ ೧೯೫೬ರಲ್ಲಿ ಕಲ್ಲೂರರು ಬರೆದಿರುವ ಮಾತುಗಳು ನಿಜಕ್ಕೂ ದಂಗುಬಡಿಸುತ್ತವೆ.

….ನಿಜ ಕರ್ನಾಟಕ ಕೊಡಗು, ಕನ್ನಡ ಜಿಲ್ಲೆ, ಶಿವಮೊಗ್ಗ, ಚಿತ್ರದುರ್ಗ, ಬಿಜಾಪುರ, ಗುಲಬರ್ಗಾಗಳ ಪ್ರದೇಶದಲ್ಲಿರುವುದಲ್ಲದೆ ಬೆಂಗಳೂರುಮಂಗಳೂರುಮೈಸೂರು ನಗರಗಳಲ್ಲಿಲ್ಲ. ಇದನ್ನು ಮನದಟ್ಟಾಗುವಂತೆ ಅರಿತಾಗ ಮಾತ್ರ ನಾವು ನಮ್ಮ ನಾಡಿಗೆ ಸಮರ್ಪಕವಾದ ಸಂಚಾರ ಸಂಪರ್ಕಗಳ ಸಾಧನಗಳನ್ನು ಸಂಯೋಜಿಸಿಕೊಳ್ಳಬಲ್ಲೆವು. ಕರ್ನಾಟಕದ ಬಹು ಭಾಗ ನಾಡಿನ ಪಶ್ಚಿಮ ಹಾಗೂ ಉತ್ತರ ನಿಟ್ಟಿನಲ್ಲಿರುವುದರಿಂದಲೂ ಅದರಲ್ಲಿ ಕೆಲಭಾಗ ರಾಜಧಾನಿಯಿಂದ ಅತಿದೂರದಲ್ಲಿರುವುದರಿಂದಲೂ, ಬೆಂಗಳೂರು ಇನ್ನು ಮುಂದೆ ಉತ್ತರಾಭಿಮುಖವಾಗಬೇಕು. ಸಂಸಾರಿಯಾದವನಿಗೆ ಹೊರಗಿನ ದೊಡ್ಡಸ್ಥಿಕೆ ಎಷ್ಟೇ ಇದ್ದರೂ, ತನ್ನ ಕುಟುಂಬದ ಹೊಣೆ ಹೇಗೆ ಆದ್ಯ ಕರ್ತವ್ಯವೋ ಹಾಗೆ ಬೆಂಗಳೂರು ತನ್ನ ಅಂತಾ ಭಾರತೀಯಅಂತಾರಾಷ್ಟ್ರೀಯ ಹಿರಿಮೆ ಎಷ್ಟೇ ಇದ್ದರೂ ಕರ್ನಾಟಕದ ಆರ್ಥಿಕ ಅಂತರ್ವ್ಯವಸ್ಥೆ ಹೆಚ್ಚು ಕೀಳಾಗಿರುವಲ್ಲಿ ತನ್ನ ಹೊಣೆ ಹೆಚ್ಚಿದೆಯೆಂದು ಬಗೆದುಕೊಳ್ಳಬೇಕು”.

ದಾರ್ಶನಿಕರಂತೆ ೨೦೦೬ರಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ೧೯೫೬ರಲ್ಲಿ ಮುಂಗಂಡು ಕಲ್ಲೂರ ಅವರು ಕರ್ನಾಟಕದ ಅಭಿವೃದ್ಧಿ ಕುರಿತಂತೆ ಚರ್ಚೆಮಾಡಿದ್ದಾರೆ. ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆ ಬಗ್ಗೆ ಅವರು ಅಲ್ಲಿ ಮಾತನಾಡಿದ್ದಾರೆ. ಕಲ್ಲೂರರ ಪ್ರಕಾರ ೧೯೫೬ರಲ್ಲಿ ಕರ್ನಾಟಕದಲ್ಲಿ ವಿಲೀನವಾದ ಮತ್ತು ಅಲ್ಲಿಯವರೆಗೆ ಬೇರೆ ಪ್ರಾಂತ – ಸರ್ಕಾರಗಳ ಆಡಳಿತದಲ್ಲಿದ್ದ ಭಾಗಗಳು ಅಭಿವೃದ್ಧಿಯ ದೃಷ್ಟಿಯಿಂದ ಹಿಂದುಳಿದಿದ್ದವು. ಈ ಎಲ್ಲ ಭಾಗ – ಪ್ರದೇಶಗಳನ್ನು ಕರ್ನಾಟಕದಲ್ಲಿ ವಿಲೀನಗೊಳಿಸಬೇಕೆಂಬ ಏಕೀಕರಣದ ಹಿಂದಿನ ಉದ್ದೇಶವು ಮುಖ್ಯವಾಗಿ ಅಭಿವೃದ್ಧಿಗೆ ಸಂಬಂಧಿಸಿದ್ದುದಾಗಿತ್ತು. ನಿಜ, ಭಾಷೆಯು ಒಂದು ಮುಖ್ಯ ಸಂಗತಿಯಾಗಿತ್ತು. ಏಕೀಕರಣಕ್ಕೆ ಜನರನ್ನು ಸಂಘಟಿಸಲು ಭಾಷೆಯನ್ನು ಒಂದು ಅಸ್ತ್ರವನ್ನಾಗಿ ಬಳಸಲಾಗಿತ್ತು. ಆದರೆ ಈ ವಿಷಯದಲ್ಲಿ ನಿರ್ಣಾಯಕ ಸಂಗತಿ ಅಭಿವೃದ್ಧಿಯದಾಗಿತ್ತು. ನೆರೆ ಪ್ರಾಂತರಾಜ್ಯಗಳ ಭಾಗಗಳು ಸಂಬಂಧಿಸಿದ ಆಡಳಿತದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದವು. ಇಂದಿಗೂ ಗಡಿಭಾಗದ ದ್ವಿಭಾಷಾ ಪ್ರದೇಶಗಳ ಸ್ಥಿತಿ ಹಿಂದಿನದಕ್ಕಿಂತಲೂ ಭಿನ್ನವಾಗಿಲ್ಲ. ಏಕೀಕರಣದ ವೈಫಲ್ಯವನ್ನು ಭಾಷೆಯ ನೆಲೆಯಿಂದ ನೋಡುವುದಕ್ಕೆ ಪ್ರತಿಯಾಗಿ ನಾವು ಅಭಿವೃದ್ಧಿಯ ನೆಲೆಯಿಂದ ಅದನ್ನು ನೋಡುವುದು ಅಗತ್ಯ ಒಟ್ಟಂದದಲ್ಲಿ ಕರ್ನಾಟಕ, ಏಕೀಕರಣವೆಂಬ ಸಂಗತಿಗಳು ಭಾಷೆಗೆ, ಸಾಹಿತ್ಯಕ್ಕೆ ಮಾತ್ರ ಸಂಬಂಧಿಸಿದ ಸಂಗತಿಗಳಾಗಿರಲಿಲ್ಲ. ಈ ಬಗೆಯ ವಿಕೃತಿ ೧೯೫೬ರ ನಂತರ ಉಂಟಾಗಿದೆ. ಏಕೀಕರಣದ ಕನಸು ಕಂಡವರು, ಅದನ್ನು ಉಪಾಸನೆ ಮಾಡಿರುವರು, ಅದನ್ನು ವಿಶಾಲವಾದ ಚೌಕಟ್ಟಿನಲ್ಲಿ ಪರಿಭಾವಿಸಿಕೊಂಡಿದ್ದರು.

ಕರ್ನಾಟಕ ರಾಷ್ಟ್ರೀಯತೆ

ಡಾ. ಕೆ.ರಾಘವೇಂದ್ರರಾವ್ ಅವರು ಏಕೀಕರಣದ ದುರೀಣರ ಬಗ್ಗೆ ಬರೆದ ಮಹತ್ವದ ಕೃತಿಯಲ್ಲಿ (೨೦೦೦) ಸರಿಯಾಗಿ ಗುರುತಿಸಿರುವಂತೆ ನಿರ್ಧಿಷ್ಟವಾದ ಹಾಗೂ ಖಚಿತವಾದ ಐತಿಹಾಸಿ, ಸಾಮಾಜಿಕ, ಪ್ರಾದೇಶಿಕ ಹಾಗೂ ರಾಜಕೀಯ ವ್ಯಕ್ತಿತ್ವವನ್ನು ಪಡೆದ ನಾಡು ಕರ್ನಾಟಕ. ಈ ಬಗೆಯ ಅದರ ನಿರ್ದಿಷ್ಟ ವ್ಯಕ್ತಿತ್ವ – ವಿಶಿಷ್ಟತೆಗೆ ಸರಿಸುಮಾರು ಸಾವಿರ ವರ್ಷಗಳ ಇತಿಹಾಸವಿದೆ. ಈ ಬಗೆಯ ವಿಚಾರಗಳ ಹಿನ್ನೆಲೆಯಲ್ಲಿ ಆಲೂರರು ‘ಕರ್ನಾಟಕ ರಾಷ್ಟ್ರೀಯತೆ’ ಎಂಬ ನುಡಿ ಬಳಸಿದ್ದಾರೆ (ಪು.೮೩). ಈ ಕುರಿತಂತೆ ಅವರ ಮಾತುಗಳು ಅರ್ಥಗರ್ಭಿತವಾಗಿವೆ. ‘ರಾಷ್ಟ್ರೀಯತ್ವಕ್ಕೂ ಕರ್ನಾಟಕಕ್ಕೂ ನನಗೆ ವಿಶೇಷ ಬೇಧವೇ ತೋರುವುದಿಲ್ಲ. ಕರ್ನಾಟಕತ್ವವನ್ನಷ್ಟೇ ಕಾರ್ಯಕ್ಷೇತ್ರವನ್ನಾಗಿ ತಕ್ಕೊಂಡು ರಾಷ್ಟ್ರೀಯತ್ವದಲ್ಲಿ ಕೆಲಸ ಮಾಡಿದೆನು. ಇದಕ್ಕೆ ಪ್ರಾದೇಶಿಕ ರಾಷ್ಟ್ರೀಯತ್ವ ಅಥವಾಕರ್ನಾಟಕ ರಾಷ್ಟ್ರೀಯತ್ವವೆಂದು ಕರೆಯಬಹುದು’ (ಪು.೭೫). ಕರ್ನಾಟಕ ರಾಷ್ಟ್ರೀಯತೆ ಎಂಬ ನುಡಿಯನ್ನು ಅದರ ಸೈದ್ಧಾಂತಿಕ ನೆಲೆಯಲ್ಲಿ ಮೊದಲು ಬಳಸಿದವರೇ ಆಲೂರರು. ಕರ್ನಾಟಕವೆಂಬುದು ಅವರಿಗೆ ಕೇವಲ ಭಾರತೀಯ ಒಕ್ಕೂಟದೊಳಗಿನ ಒಂದು ಘಟಕವಾಗಿರಲಿಲ್ಲ. ಪರಿಪೂರ್ಣವಾದ ರಾಷ್ಟ್ರೀಯತೆಯ ವ್ಯಕ್ತಿತ್ವವನ್ನು ಪಡೆದುಕೊಂಡಿದ್ದ ನಾಡು ಕರ್ನಾಟಕ. ಈಬಗ್ಗೆ ಅವರು ಕರ್ನಾಟಕತ್ವವನ್ನು ಪರಿಭಾವಿಸಿಕೊಂಡು ಬಗೆಯನ್ನು ಪರಿಶೀಲಿಸಿದರೆ ಅವರ ಕರ್ನಾಟಕ ರಾಷ್ಟ್ರೀಯತೆಯ ಅರ್ಥ ತಿಳಿಯುತ್ತದೆ. ಅವರು ಈ ಬಗ್ಗೆ ಹೀಗೆ ಬರೆಯುತ್ತಾರೆ.

‘ಕರ್ನಾಟಕತ್ವದ ನನ್ನ ಕಲ್ಪನೆಯು ಸರ್ವವ್ಯಾಪ್ತಿಯಾಗಿದೆ. ಹಲವರು ತಿಳಿಯುವಂತೆ ಅದು ಸಂಕುಚಿತವಾಗಿಲ್ಲ. ನಮ್ಮ ಕರ್ನಾಟಕವು ಭರತ ಖಂಡಕ್ಕಿಂತಲೂ ದೊಡ್ಡದಾಗಿದೆ. ಏಷ್ಯಾ ಖಂಡವನ್ನು ಮಿಕ್ಕಿದೆ, ವಿಶ್ವವನ್ನು ವ್ಯಾಪಿಸಿದೆ. ಇದನ್ನು ಕೇಳಿ ಅನೇಕರು ಆಶ್ಚರ್ಯಗೊಳ್ಳಬಹುದು. ಭರತ ಖಂಡದ ಭಾವೈಕ್ಯ ಮಾತ್ರವಾದ ಕರ್ನಾಟಕವು ಭರತ ಖಂಡಕ್ಕಿಂತಲೂ ದೊಡ್ಡದಿರುವುದು ಎಂದಿಗಾದರೂ ಸಂಭವನೀಯವೇ ಎಂದು ಅವರು ಶಂಕಿಸಬಹುದು. ಅಹುದು, ಅದು ನಿಜವಾಗಿಯೂ ದೊಡ್ಡದಾಗಿದೆ. ಏಕೆಂದರೆ ಕರ್ನಾಟಕದ ಸ್ಥೂಲ ಶರೀರವು ಸಂಕುಚಿತವಾಗಿದ್ದರೂ ಸೂಕ್ಷ್ಮ ಶರೀರವು ಅತಿ ವಿಸ್ತಾರವಾದುದಾಗಿದೆ. ಕರ್ನಾಟಕದಿಂದ ಪ್ರಸ್ತುತವಾದ ವಿಚಾರಗಳು ಇಂದಿಗೆ ಇಡೀ ಪ್ರಪಂಚದಲ್ಲಿ ಹರಡಿಕೊಂಡಿವೆ. ಕರ್ನಾಟಕ ಸಂಸ್ಕೃತಿಯು ಇಡೀ ಪ್ರಪಂಚವನ್ನು ಕೈವಶ ಮಾಡಿಕೊಂಡಿದೆ…. ಕರ್ನಾಟಕವು ಭರತಖಂಡದ ಸಂಸ್ಕೃತಿಯನ್ನೆಲ್ಲ ಪಚನ ಮಾಡಿಕೊಂಡಿರುವುದಲ್ಲದೆ, ತನ್ನ ವಿಶಿಷ್ಟ ಸಂಸ್ಕೃತಿಯನ್ನು ಅದರಲ್ಲಿ ಬೆರಸಿ ಅದನ್ನು ಮತ್ತಷ್ಟು ಪುಷ್ಟಿಯನ್ನಾಗಿಯೂ, ವ್ಯಾಪಕವನ್ನಾಗಿಯೂ ಮಾಡಿರುವುದು’ (ಪು. ೧೬೯). ಆಲೂರರ ಕರ್ನಾಟಕತ್ವದ ವಿಚಾರಗಳನ್ನು ಇಷ್ಟೊಂದು ದೀರ್ಘವಾಗಿ ಉಲ್ಲೇಖಿಸಿರುವುದಕ್ಕೆ ಕಾರಣವಿದೆ. ಇವೆಲ್ಲವೂ ಅವರ ಬೀಜ ನುಡಿಗಳು. ಕರ್ನಾಟಕವನ್ನು ಅಖಿಲ ಭಾರತ ಚೌಕಟ್ಟಿನಲ್ಲಿ ಪರಿಭಾವಿಸಿಕೊಳ್ಳುವುದಕ್ಕಷ್ಟೆ ನಾವು ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಆಲೂರರು ಅದನ್ನು ಜಾಗತಿಕ ಮಟ್ಟದಲ್ಲಿ ನಿಲ್ಲಿಸಲು ಪ್ರಯತ್ನಿಸಿದರು. ಸ್ಥೂಲ – ಸೂಕ್ಷ್ಮ – ಕಾರಣವೆಂಬ ಶರೀರಕ್ಕೆ ಸಂಬಂಧಿಸಿದ ಆಧ್ಯಾತ್ಮಿಕ ತತ್ವವನ್ನು ಆಲೂರರು ರಾಷ್ಟ್ರಕ್ಕೆ ಅಂದರೆ ಕರ್ನಾಟಕಕ್ಕೆ ಅನ್ವಯಿಸಿ ತಮ್ಮ ವಿಚಾರ ಬೆಳೆಸಿದ್ದಾರೆ.

ಭಾರತೀಯ ಸಂಸ್ಕೃತಿಕರ್ನಾಟಕ ಸಂಸ್ಕೃತಿ

ಆಲೂರರು ಕರ್ನಾಟಕ ಸಂಸ್ಕೃತಿಯನ್ನು ಕಲ್ಪಿಸಿಕೊಂಡಿರುವ ಬಗೆಯು ವಿನೂತನವಾದುದಾಗಿದೆ ವಿಶಿಷ್ಟವಾದುದಾಗಿದೆ. ಭಾರತೀಯ ಮತ್ತು ಕರ್ನಾಟಕ ಸಂಸ್ಕೃತಿಗಳ ಸಂಬಂಧವನ್ನು ಸಾಮಾನ್ಯವಾಗಿ ನಾವು ತಿಳಿದುಕೊಂಡಿರುವುದಕ್ಕಿಂತ ಭಿನ್ನವಾದ ನೆಲೆಯಲ್ಲಿ ಅವರು ಅದನ್ನು ಪರಿಭಾವಿಸಿಕೊಂಡಿದ್ದಾರೆ. ಇವೆರಡರ ಸಂಬಂಧವನ್ನು ತಿರುವು ಮುರುವು ಮಾಡಿ ಅವರು ತಮ್ಮ ಕರ್ನಾಟಕತ್ವದ ವಿಚಾರವನ್ನು ಬೆಳೆಸಿದ್ದಾರೆ.

ಈ ಬಗ್ಗೆ ಅವರ ವಿಚಾರ ಹೀಗೆ.

ಕರ್ನಾಟಕ ಸಂಸ್ಕೃತಿಯೆಂಬುದು ಬೇರೆ ಸಂಸ್ಕೃತಿಯೇ ಅಲ್ಲ. ಇಡಿ ಭಾರತಕ್ಕೆಲ್ಲ ಒಂದೇ ಸಂಸ್ಕೃತಿ ಅದೆ. ಅದೆಂದರೆ ಆಧ್ಯಾತ್ಮಸಂಸ್ಕೃತಿ ಎಂದು ಹಲವರ ಕಲ್ಪನೆ. ಅದು ಅಷ್ಟು ಸರಿಯಲ್ಲ. ಏಕೆಂದರೆ ಭಾರತೀಯ ಸಂಸ್ಕೃತಿಯೆಂಬುದು ಇಡೀ ಭಾರತ ಖಂಡಕ್ಕೇನೆ ಒಂದೇ ಇರುತ್ತದೆಂಬುದನ್ನು ನಾನೂ ಒಪ್ಪುತ್ತೇನೆ. ಆದರೆ ಸಂಸ್ಕೃತಿಗೆ ಕರ್ನಾಟಕವು ತನ್ನ ವಿಶಿಷ್ಟ ಸಂಸ್ಕೃತಿಯನ್ನು ಬೆರೆಸಿ ಅದನ್ನು ಪುಷ್ಟಿ ಗೊಳಿಸುತ್ತದೆಂಬುದನ್ನೂ ವಿಶಿಷ್ಟ ಸ್ವರೂಪವನ್ನು ಕೊಡುತ್ತಿದೆಂಬುದನ್ನೂ ಯಾರೂ ಮರೆಯಬಾರದು”.

ಮುಂದುವರಿದು “ಕರ್ನಾಟಕ ಸಂಸ್ಕೃತಿಯೆಂಬುದು ಭಾರತ ಸಂಸ್ಕೃತಿಯನ್ನು ಒಳಗೊಂಡಿರುವುದಲ್ಲದೆ ಅದನ್ನು ತನ್ನ ವಿಶಿಷ್ಟ ಸಂಸ್ಕೃತಿಯಿಂದ ಪುಷ್ಟಿಗೊಳಿಸಿದೆ” (ಪು.೧೧).

ಇಂದಿಗೂ ಅಸ್ಫೋಟಿಕಾರಿಯೆನ್ನಬಹುದಾದ ಅವರ ಕರ್ನಾಟಕತ್ವ, ಕರ್ನಾಟಕ ಸಂಸ್ಕೃತಿ ಕುರಿತ ವಿಚಾರಗಳ ತಾತ್ವಿಕ – ದಾರ್ಶನಿಕ ಮೇರೆಗಳನ್ನು ಹಿಡಿದಿಡುವುದು ನಮಗೆ ಇನ್ನೂ ಸಾಧ್ಯವಾಗಿಲ್ಲ. ಭಾರತೀಯವೆನ್ನುವುದು ಕರ್ನಾಟಕತ್ವವನ್ನು ಒಳಗೊಂಡಿದೆಯೆಂಬ ಜನಪ್ರಿಯ ವ್ಯಾಪಕ ನಂಬಿಕೆಗೆ ಭಿನ್ನವಾದ ರೀತಿಯಲ್ಲಿ ಕರ್ನಾಟಕತ್ವವೆನ್ನುವುದು ಭಾರತೀಯತೆಯನ್ನು ಒಳಗೊಂಡಿದೆಯೆಂಬ ಅವರ ವಿಚಾರವು ಬೀಜ ಸದೃಶ್ಯವಾದ ನುಡಿಯಾಗಿದೆ. ರಾಜಕೀಯವಾಗಿ ಒಕ್ಕೂಟ ವ್ಯವಸ್ಥೆಗೆ ಹೊಸವ್ಯಾಖ್ಯೆಯನ್ನು ನೀಡುವಷ್ಟು ಅವರ ವಿಚಾರಗಳು ಸೃಜನಶೀಲವಾಗಿವೆ. ಕೇಂದ್ರ ರಾಜ್ಯ ಸಂಬಂಧದ ಬಗ್ಗೆ ಆಲೂರರ ವಿಚಾರಗಳ ಹಿನ್ನೆಲೆಯಲ್ಲಿ ಹೆಚ್ಚಿನ ಅಧ್ಯಯನ ನಡೆಯುವ ಅಗತ್ಯವಿದೆ.

ಕರ್ನಾಟಕತ್ವಕೃಷ್ಣಕುಮಾರ್ ಕಲ್ಲೂರರ ವಿಚಾರಗಳು (೧೯೦೯೧೯೮೨)

ಆಲೂರು ವೆಂಕಟರಾಯರ ಗರಡಿಯಲ್ಲಿ ಬೆಳೆದ ಕೃಷ್ಣಕುಮಾರ ಕಲ್ಲೂರ ಅವರು ಕರ್ನಾಟಕತ್ವದ ಉಗ್ರ ಪ್ರತಿಪಾದಕರಾಗಿದ್ದರು. ಏಕೀಕರಣದ ಸಂದರ್ಭದಲ್ಲಿ( ೧೯೫೬) ರಾಜ್ಯಕ್ಕೆ ಕರ್ನಾಟಕವೆಂಬ ಹೆಸರಿಗೆ ಪ್ರತಿಯಾಗಿ ‘ಮೈಸೂರು’ ಎಂಬ ಹೆಸರು ಘೋಷಿತವಾದಾಗ ಕಲ್ಲೂರ ಅವರು ‘ಲೇಖನಿ ಸಂನ್ಯಾಸ’ ಕೈಗೊಂಡರು. ಕನ್ನಡದಲ್ಲಿ ಬರೆಯುವುದನ್ನೇ ಅವರು ನಿಲ್ಲಿಸಿದರು. ಅವರೊಬ್ಬ ಉಗ್ರ ಕರ್ನಾಟಕತ್ವದ ಉಪಾಸಕರಾಗಿದ್ದರು. ಕರ್ನಾಟಕದ ಕುರಿತು ಕನ್ನಡದಲ್ಲಿ ಬರೆಯುವುದಿಲ್ಲವೆಂಬ ಪ್ರತಿಜ್ಞೆಯನ್ನು ಅವರು ರಾಜ್ಯಕ್ಕೆ ಕರ್ನಾಟಕವೆಂಬ ಹೆಸರು ಬಂದ ೧೯೭೩ರಲ್ಲಿ ಮುರಿದರು.

ಕರ್ನಾಟಕವು ನುಡಿ, ನಾಡು ಮತ್ತು ನಾಡವರು – ಮೂರನ್ನು ಪ್ರತಿನಿಧಿಸುವ ಪರಿಭಾವನೆಯೆಂಬುದು ಕಲ್ಲೂರರ ಅಭಿಮತ. ನುಡಿಗಿಂತ ನಾಡು ಹೆಚ್ಚು. ನಾಡಿಗಿಂತ ನಾಡವರು ಹೆಚ್ಚು ಎಂಬುದು ಅವರ ಮೀಮಾಂಸೆಯಾಗಿತ್ತು. ಅವರ ಪ್ರಕಾರ ‘ಕನ್ನಡಗಿ’ ಎಂಬುದಕ್ಕಿಂತ ‘ಕರ್ನಾಟಕಸ್ಥ’ ಎಂಬುದು ಹೆಚ್ಚು ವ್ಯಾಪಕವೆಂಬುದು ಅವರ ವಾದವಾಗಿತ್ತು. ಕನ್ನಡಿಗ ಕನ್ನಡಕ್ಕೆ ಅಂಟಿಕೊಂಡವ; ಕರ್ನಾಟಕಸ್ಥ ಎಲ್ಲ ಸ್ವತ್ತುಗಳಿಗೂ ಹಕ್ಕುದಾರ. ಕನ್ನಡ, ಕನ್ನಡಿಗ, ಕನ್ನಡನಾಡು – ಇವು ಎಂದೆಂದಿಗೂ ‘ಕರ್ನಾಟಕಾಂರ್ಗತ’ ಎಂಬುದು ಕಲ್ಲೂರ ಗಟ್ಟಿ ನಂಬಿಕೆಯಾಗಿತ್ತು (ಇವರ ವಿಚಾರಗಳ ವಿವರಕ್ಕೆ ನೋಡಿ ‘ಕೃಷ್ಣಕುಮಾರ ಕಲ್ಲೂರ: ಸಾಹಿತ್ಯ ವಾಚಿಕೆ,ಸಂ: ಕೃಷ್ಣ ಕೊಲ್ಲಾರ ಕುಲಕರ್ಣಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು: ೧೯೯೪).

ಕನ್ನಡ ಸಾಹಿತ್ಯ ಪರಿಷತ್ತು/ಕರ್ನಾಟಕ ಸಾಹಿತ್ಯ ಪರಿಷತ್ತು

ಈ ಸಂಸ್ಥೆಯ ಉಗಮದ ಬಗ್ಗೆ ಅವರು ಹೀಗೆ ಬರೆದಿದ್ದಾರೆ.

ಕರ್ನಾಟಕ ಸಾಹಿತ್ಯ ಪರಿಷತ್ತಿನ ಮೂಲ ಸಂಸ್ಥಾಪಕನು ನಾನು. ನಾನೊಬ್ಬನೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ. ಏಕೆಂದರೆ ಅದನ್ನು ಸ್ಥಾಪಿಸುವುದಕ್ಕೆ ೧೦ ವರ್ಷ ಎಡೆಬಿಡದೆ ಸ್ವಂತ ಖರ್ಚಿ ನಿಂದ ಬೆಂಗಳೂರುಮೈಸೂರುಗಳಿಗೆ ಎಡತಾಕಿದ್ದೇನೆ”(ಪು. ೧೫೫).

ಇದು ಉಗಮವಾದಾಗ(೧೯೧೫) ಅದರ ಹೆಸರು ಕರ್ನಾಟಕ ಸಾಹಿತ್ಯ ಪರಿಷತ್ತು ಎಂದೇ ಇತ್ತು. ಆದರೆ ಇದಕ್ಕೆ ಮೈಸೂರಿನವರ (ಮುಖ್ಯವಾಗಿ ಬಿ.ಎಂ.ಶ್ರೀ) ವಿರೋಧವಿತ್ತು. ಅವರು ಅದನ್ನು ಕನ್ನಡ ಸಾಹಿತ್ಯ ಪರಿಷತ್ತನ್ನಾಗಿ ಮಾಡಿದರು. ಇದರಿಂದ ಬೇಸತ್ತು ಆಲೂರರು ೧೯೩೮ರಲ್ಲಿ ತಾವೇ ಹುಟ್ಟು ಹಾಕಿದ್ದ ಸಂಸ್ಥೆಯಿಂದ ಹೊರಬರುತ್ತಾರೆ. ಆಲೂರರ ಕರ್ನಾಟಕತ್ವವು ಎಷ್ಟೊಂದು ವಿಸ್ತೃತವಾಗಿತ್ತು ಎಂಬುದು (ಪು.೧೫೭) ಇದರಿಂದ ತಿಳಿದುಬರುತ್ತದೆ. ಅವರು ಭಾಷಾವಾರು ಪ್ರಾಂತಗಳ ಬಗ್ಗೆ ಚಿಂತಿಸುತ್ತಿದ್ದ ರೀತಿಯ ನಿಜಕ್ಕೂ ಕುತೂಹಲಕಾರಿಯಾಗಿತ್ತು. ಕರ್ನಾಟಕಕ್ಕೆ ಕನ್ನಡವೆಂಬ ಅರ್ಥ ಕೊಡುವುದಕ್ಕೆ ಅವರು ವಿರೋಧಿಯಾಗಿದ್ದರು. ಅವರ ಕರ್ನಾಟಕತ್ವವು ಸಾರ್ವತ್ರಿಕ – ಸಾರ್ವಜನಿಕವಾದ ಒಂದು ವಿಚಾರಕಲ್ಪವಾಗಿತ್ತು.

ಅವರ ಕೆಥೋಲಿಕ್ ಗುಣಗಳ ಬಗ್ಗೆ ದಂಡಿಯಾಗಿ ನಮಗೆ ನಿದರ್ಶನಗಳು ದೊರೆಯುತ್ತವೆ. ಅವರು ಕರ್ನಾಟಕವು ಉದಯವಾದ ೦೧.೧೦.೧೯೫೬ರಂದು ನೀಡಿದ ಸಂದೇಶದಲ್ಲಿ ಕೆಳಗಿನ ಮಾತುಗಳಿವೆ.

ರಾಜ್ಯವು ಸುಪ್ರಜಾರಾಜ್ಯವೆನಿಸುವುದಕ್ಕೆ ಬಹುಸಂಖ್ಯಾತರ ತುಷ್ಟಿ ಪುಷ್ಟಿಗಳಿಗಿಂತಲೂ ಅಲ್ಪಸಂಖ್ಯಾತರ ತುಷ್ಟಪುಷ್ಟಿಗಳೇ ಹೆಚ್ಚಿನ ಮಾಪಕ ಗಳು”(ಪು. )

ಅತ್ಯಂತ ಕುತೂಹಲಕಾರಿಯಾದ ಮೇಲಿನ ಮಾತುಗಳನ್ನು ೨೦೦೬ರಲ್ಲಿ ಯಾರಾದರೂ ನುಡಿದಿದ್ದರೆ ಆಶ್ಚರ್ಯವುಂಟಾಗುತ್ತಿರಲಿಲ್ಲ. ಆದರೆ ಆಲೂರರು ೨೦೦೬ರ ಪರಿಭಾಷೆಯನ್ನು ೧೯೫೬ರಲ್ಲಿ ನುಡಿದಿದ್ದಾರೆ. ಆಲೂರರ ವಿಚಾರಗಳಲ್ಲಿನ ಕೆಥೋಲಿಕ್ ಗುಣಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ. ಏಕೆಂದರೆ ಅವರು ಮೂಲತಃ ಧಾರ್ಮಿಕ ವ್ಯಕ್ತಿಗಳು. ಅವರು ಆಧ್ಯಾತ್ಮವಾದಿಗಳು. ತಮ್ಮ ಕೃತಿಯ ಮುನ್ನುಡಿಯಲ್ಲಿ ತನ್ನ ಆಯುಷ್ಯದ ಮುಖ್ಯ ಧ್ಯೇಯಗಳು ಸ್ವಾತಂತ್ರ್ಯ, ಅಖಂಡ ಕರ್ನಾಟಕ ಮತ್ತು ಆಧ್ಯಾತ್ಮ ಸಾಧನೆ (ಪು. ) ಎಂದು ಘೋಷಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮೇಲಿನ ಮಾತುಗಳನ್ನು ಗಮನಿಸಿದಾಗ ಅವರ ಪ್ರಜಾಪ್ರಭುತ್ವವಾದಿ ಧೋರಣೆಯು ತಿಳಿಯುತ್ತದೆ. ಎಲ್ಲರನ್ನು ಒಳಗೊಳ್ಳುವ ಅವರ ಪ್ರಜಾಪ್ರಭುತ್ವವಾದಿ ಧೋರಣೆಯು ತಿಳಿಯುತ್ತದೆ. ಎಲ್ಲರನ್ನು ಒಳಗೊಳ್ಳುವ ಅವರ ಕರ್ನಾಟಕತ್ವ ಮೀಮಾಂಸೆಯ ಚೌಕಟ್ಟಿನಲ್ಲಿ ಅವರು ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಅಲ್ಪಸಂಖ್ಯಾತರ ಬಗ್ಗೆ ಅವರ ಮೀಮಾಂಸೆಯು ‘ಒಳಗಣ’ತನದಿಂದ ಕೂಡಿತ್ತೆ ವಿನಾ ಹೊರಗಣತನದಿಂದ ಕೂಡಿರಲಿಲ್ಲ.

ವಿಚಾರವಿಮರ್ಶೆ

ಈ ಭಾಗದಲ್ಲಿ ಆಲೂರ ವೆಂಕಟರಾಯರ ಕರ್ನಾಟಕತ್ವದ ಮೂಲದಲ್ಲಿರುವ ಸೈದ್ಧಾಂತಿಕ ಸಂಗತಿಗಳನ್ನು ಚರ್ಚಿಸಲಾಗಿದೆ ಮತ್ತು ಅದರ ಇತಿಮಿತಿ ಹಾಗೂ ಮಹತ್ವವನ್ನು ವಿಶ್ಲೇಷಿಸಲಾಗಿದೆ. ಆಲೂರರು ತಮ್ಮ ರಾಷ್ಟ್ರೀಯತೆ (ಭಾರತೀಯ – ಕರ್ನಾಟಕ)ಯ ಸಿದ್ಧಾಂತವನ್ನು ಧಾರ್ಮಿಕ ಅಂದರೆ ಸನಾತನ ಧರ್ಮದ ನೆಲೆಗಟ್ಟಿನಲ್ಲಿ ಕಟ್ಟಿದ್ದಾರೆ. ಇದನ್ನು ಧಾರ್ಮಿಕ ರಾಷ್ಟ್ರೀಯತೆಯೆಂದು ಕರೆಯಬಹುದು (ಡಾ. ಡಿ.ಆರ್. ನಾಗರಾಜ್ ಇದನ್ನು ಆಧ್ಯಾತ್ಮಿಕ ರಾಷ್ಟ್ರೀಯತೆ ಎಂದು ಕರೆದಿದ್ದಾರೆ). ಇದರಲ್ಲಿ ಅವರು ಮಧ್ವಾಚಾರ್ಯರ ದೈತ ಸಿದ್ಧಾಂತವನ್ನು ಹಾಗೂ ಗೀತೆಯ ಸಾರವನ್ನು ಸಂಪನ್ಮೂಲವನ್ನಾಗಿ ಬಳಸಿಕೊಂಡಿದ್ದಾರೆ. ಡಾ. ಡಿ. ಆರ್. ನಾಗರಾಜ್ ಮತ್ತು ಡಾ. ಕೆ. ರಾಘವೇಂದ್ರರಾವ್ ಅವರು ಸರಿಯಾಗಿ ಗುರುತಿಸಿರುವಂತೆ ಆಲೂರರ ಧಾರ್ಮಿಕ – ಆಧ್ಯಾತ್ಮಿಕ ರಾಷ್ಟ್ರಿಯತೆಯನ್ನು ಬಹಳ ಎಚ್ಚರಿಕೆಯಿಂದ ಪರಿಗಣಿಸಬೇಕಾಗಿದೆ.

ಇಂದು ವ್ಯಾಪಕವಾಗಿ ಕೇಳಿಬರುತ್ತಿರುವ ಸಾಂಸ್ಕೃತಿಕ ರಾಷ್ಟ್ರೀಯತೆಗಿಂತ ತೀವ್ರ ಭಿನ್ನವಾದ ವಿಚಾರ ಪ್ರಣಾಳಿಕೆ ಅವರದಾಗಿತ್ತು. ಅವರ ರಾಷ್ಟ್ರೀಯತೆಯು ಯಾವುದೋ ಒಂದು ಧಾರ್ಮಿಕ ಸೂತ್ರದ ಚೌಕಟ್ಟಿಗೆ ಕಟ್ಟಿದ ವಿಚಾರ ಪ್ರಣಾಳಿಕೆಯಾಗಿರಲಿಲ್ಲ. ಇದಕ್ಕಿಂತ ಭಿನ್ನವಾಗಿ ಅವರ ರಾಷ್ಟ್ರೀಯತೆಯು ಆಧುನಿಕತೆ ಹಾಗೂ ಸನಾತನಗಳೆರಡನ್ನು ಒಳಗೊಂಡ ಒಂದು ಸೂತ್ರವಾಗಿತ್ತು. (ಡಾ. ಡಿ.ಆರ್. ನಾಗರಾಜ್, ಸಾಹಿತ್ಯ ಕಥನ, ೧೯೯೬,ಪು.೨೭೯) ಆಧುನಿಕ ಪರಿಭಾಷೆಯಲ್ಲಿ ಹೇಳುವುದಾದರೆ ಅವರ ರಾಷ್ಟ್ರೀಯತೆಯು ಉದಾರವಾದಿ ಪ್ರಜಾಪ್ರಭುತ್ವ ಚೌಕಟ್ಟನ್ನು ಹೊಂದಿತ್ತು. ಆಲೂರರ ವಿಚಾರ ಪ್ರಣಾಳಿಕಯ ಎರಡು ಪ್ರಮುಖ ಲಕ್ಷಣಗಳನ್ನು ಕೆ. ರಾಘವೇಂದ್ರರಾವ್ ಗುರುತಿಸಿದ್ದಾರೆ.

ಮೊದಲನೆಯದು ಅದರ ಸಂಬಂಧವಾದಿ ನೆಲೆ. ಕರ್ನಾಟಕತ್ವ, ಭಾರತೀಯತೆ, ಜಾಗತಿಕತೆ, ಧಾರ್ಮಿಕತೆ ಮುಂತಾದವು ಪರಸ್ಪರ ಅವಲಂಬಿತವಾದ ಮತ್ತು ಪರಸ್ಪರ ಸಂಬಂಧವುಳ್ಳ ಸಂಗತಿಗಳನ್ನಾಗಿ ಅವರು ಪರಿಭಾವಿಸಿಕೊಂಡಿದ್ದರು. ಇವುಗಳಲ್ಲಿ ಯಾವುದಕ್ಕೂ ಪ್ರತ್ಯೇಕವಾದ ನಿರಂಕುಶವಾದ ಸ್ಥಾನವಿರಲು ಅವರ ವೈಚಾರಿಕತೆಯಲ್ಲಿ ಅವಕಾಶವಿರಲಿಲ್ಲ. ಸಂಬಂಧವಾದಿತ್ವವು ಅವರ ವಿಚಾರ ಪ್ರಣಾಳಿಕೆಯ ಒಂದು ಪ್ರಮುಖ ಲಕ್ಷಣವಾಗಿತ್ತು. ತಮ್ಮ ‘ಕರ್ನಾಟಕತ್ವದ ವಿಕಾಸ’ ಕೃತಿಯ ‘ಸಮರ್ಪಣ’ದಲ್ಲಿ ಹೀಗೆ ಅವರು ಬರೆದುಕೊಂಡಿದ್ದಾರೆ.

ಕರ್ನಾಟಕಾಂತರ್ಯಾಮಿಯಾದ ಭಾರತೀದೇವಿಗೆ
ಭಾರತಾಂತಾರ್ಯಾಮಿಯಾದ
ಭೂದೇವಿಗೆ
ಭಕ್ತಪೂರ್ವಕ
ಸಮರ್ಪಣ” – ಕರ್ನಾಟಕಸುಧಾಮಆಲೂರು ವೆಂಕಟರಾಯ.

ಎರಡನೆಯದಾಗಿ ಎಲ್ಲರನ್ನೂ ಒಳಗೊಳ್ಳುವಂತಹ ಕೆಥೋಲಿಕ್ ಗುಣ. ಅವರದು ಸಂಘರ್ಷವಾದಿ ವಿಚಾರ ಪ್ರಣಾಳಿಕೆಯಾಗಿರಲಿಲ್ಲ. ಅವರದು ಹೊರಗಣತನದ ರಾಷ್ಟ್ರೀಯತೆಯಾಗಿರಲಿಲ್ಲ. ಅದು ಬಹುತ್ವದಿಂದ ಕೂಡಿದ ಸಿದ್ಧಾಂತವಾಗಿತ್ತು. ಎಲ್ಲರನ್ನೂ – ಎಲ್ಲವನ್ನೂ ಒಳಗೊಳ್ಳುವ ಗುಣ ಅದಕ್ಕಿತ್ತು.

ಈಗಾಗಲೇ ತಿಳಿಸಿರುವಂತೆ ದ್ವೈತ ಸಿದ್ಧಾಂತವನ್ನು ತಮ್ಮ ಆಧ್ಯಾತ್ಮ ಸಾಧನೆಯ ಮಾರ್ಗವನ್ನಾಗಿ ಆಲೂರರು ಮಾಡಿಕೊಂಡಿದ್ದರು. ಅವರು ರೂಪಿಸಿದ್ದ ಕನಾಟಕತ್ವವೆಂಬ ರಾಜಕೀಯ ವಿಚಾರ ಪ್ರಣಾಳಿಕೆಗೂ ಮತ್ತು ದ್ವೈತ ಸಿದ್ಧಾಂತಕ್ಕೂ ನಡುವೆ ಸಂಬಂಧವನ್ನು ಗುರುತಿಸಬಹುದು.

ಕೇಂದ್ರ – ರಾಜ್ಯಗಳ ನಡುವಣ ಸಂಬಂಧದ ಬಗ್ಗೆ ಅವರ ವಿಚಾರಗಳು ಇಂದಿಗೂ ಕ್ರಾಂತಿಕಾರಕವಾಗಿ ಕಾಣುತ್ತವೆ. ಒಕ್ಕೂಟ ವ್ಯವಸ್ಥೆಯನ್ನು – ಕೇಂದ್ರ – ಭಾಷಾವಾರು ಪ್ರಾಂತಗಳ ನಡುವಣ ಸಂಬಂಧವನ್ನು ಅವರು ಪರಿಭಾವಿಸಿಕೊಂಡಿದ್ದ ರೀತಿಗೂ ಮತ್ತು ಆತ್ಮ – ಪರಮಾತ್ಮಗಳ ಭಿನ್ನ ಅಸ್ತಿತ್ವವನ್ನು ಮನ್ನಿಸಿದ ದ್ವೈತ ಸಿದ್ಧಾಂತಗಳ ನಡುವೆ ಸಂಬಂಧವನ್ನು ಗುರುತಿಸಲು ಸಾಧ್ಯ. ಅವರ ವಿಚಾರ ಪ್ರಣಾಳಿಕೆಯಲ್ಲಿ ಪ್ರಾಂತಕ್ಕೆ ಸ್ವತಂತ್ರ ಸ್ವಾಯತ್ತ ಸ್ಥಾನ – ಅಧಿಕಾರವಿತ್ತು ಅದು ಕೇಂದ್ರದ ಬಾಲಂಗೋಚಿಯಲ್ಲ. ಅಭಿನ್ನತೆಯೊಳಗೆ ಭಿನ್ನತೆಯನ್ನು ತುಂಬಾ ಆರೋಗ್ಯಕಾರಿ ನೆಲೆಯಲ್ಲಿ ಪರಿಭಾವಿಸಿ ಕೊಳ್ಳುವುದ ಆಲೂರರಿಗೆ ಸಾಧ್ಯವಾಗಿತ್ತು. ಈ ಒಂದು ಶಕ್ತಿ – ಪ್ರೇರಣೆ ದಿಶೆಯು ದ್ವೈತ ಸಿದ್ಧಾಂತದಿಂದ ಅವರಿಗೆ ಬಂದಂತೆ ಕಾಣುತ್ತದೆ.

ಅನನ್ಯತೆಯ ರಾಜಕಾರಣ

ಆಲೂರರ ಕರ್ನಾಟಕತ್ವ ವಿಚಾರ ಪ್ರಣಾಳಿಕೆಯನ್ನು ಅನನ್ಯತೆಯ ರಾಜಕಾರಣದ ಚೌಕಟ್ಟಿನಲ್ಲಿಯು ಅಧ್ಯಯನ ಮಾಡಬಹುದು. ಈಗಾಗಲೇ ತಿಳಿಸಿರುವಂತೆ ಅವರ ವಿಚಾರ ಪ್ರಣಾಳಿಕೆಯಲ್ಲಿ ಕರ್ನಾಟಕಕ್ಕೆ ಭಾರತೀಯತೆಯ ಒಂದು ನೆಲೆಯೂ ಇದೆ ಮತ್ತು ತನ್ನ ವಿಶಿಷ್ಟತೆಯ ನೆಲೆಯೂ ಇದೆ. ಅದೇ ರೀತಿ ಭಾರತೀಯತೆಗೆ ಜಾಗತಿಕವಾದ ಒಂದು ನೆಲೆಯಿದೆ ಹಾಗೂ ಅದಕ್ಕೆ ಕರ್ನಾಟಕತ್ವದ ಒಂದು ನೆಲೆಯಿದೆ. ಆಲೂರರ ರಾಷ್ಟ್ರೀಯತೆ ಸಿದ್ಧಾಂತದಲ್ಲಿ ಕರ್ನಾಟಕತ್ವವಿಲ್ಲದೆ ಭಾರತೀಯತೆಗೆ ಅಸ್ತಿತ್ವವಿಲ್ಲ. ಆಲೂರರ ಕರ್ನಾಟಕತ್ವವು ಭಾರತೀಯತೆಯು ತಿಂದು ತೇಗಿ ಅರಗಿಸಿಕೊಂಡು ಬಿಡುವ ಸ್ವರೂಪದ್ದಾಗಿರಲಿಲ್ಲ. ಕರ್ನಾಟಕತ್ವದಿಂದ ಭಾರತೀಯತೆಯು ಭಾರತೀಯತೆಯಿಂದ ಕರ್ನಾಟಕತ್ವವು ಅಸ್ತಿತ್ವವನ್ನು ಪಡೆದುಕೊಂಡ ಸಂಗತಿಗಳನ್ನಾಗಿ ಅವರು ಅವುಗಳನ್ನು ಪರಿಭಾವಿಸಿ ಕೊಂಡಿದ್ದಾರೆ. ಇದನ್ನು ಏಕತೆ – ಅನೇಕತೆಯೆಂಬ ಕ್ಲಿಷೆಯ ಚೌಕಟ್ಟಿನಲ್ಲಿ ಪರಿಶೀಲಿಸಲು ಸಾಧ್ಯವಿಲ್ಲ. ಭಾರತೀಯ ಸಂಸ್ಕೃತಿಯ ಏಕತೆ – ಅನೇಕತೆಗಳ ನಡುವಣ ಸಂಬಂಧವನ್ನು ಅವರು ಮರು ಪರಿಶೋಧಕ್ಕೆ ಒಳಪಡಿಸಿದರು. ಇವೆರಡರ ನಡುವಣ ಸಂಬಂಧವನ್ನು ಅವರು ಚಲನಶೀಲವಾದ ಹಾಗೂ ಸಂಕೀರ್ಣವಾದ ನೆಲೆಯಲ್ಲಿ ಪರಿಭಾವಿಸಿಕೊಂಡಿದ್ದರು. ಇವೆರಡೂ ಪರಸ್ಪರ ಪೂರಕವಾದ ಸಂಗತಿಗಳಾಗಿವೆಯೆ ವಿನಾ ಪರಸ್ಪರ ಪರ್ಯಾಯವಾದ ಸಂಗತಿಗಳಲ್ಲ. ಈ ಬಗೆಯ ಚಿಂತನೆಯ ಕಾರಣದಿಂದಾಗಿಯೇ ಅವರಿಗೆ ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕ ಏಕೀಕರಣ ಹೋರಾಟಗಳ ನಡುವೆ ವೈರುಧ್ಯ ಕಾಣಲಿಲ್ಲ. ಭಾರತೀಯ ಸ್ವಾತಂತ್ರ್ಯ ಅಥವಾ ಕರ್ನಾಟಕ ಏಕೀಕರಣಯೆಂಬುದು ಅವರ ಮುಂದಿದ್ದ ಗುರಿಯಲ್ಲ. ಅವರ ಮುಂದಿದ್ದ ಗುರಿ ‘ಸ್ವಾತಂತ್ರ್ಯ’ ಹಾಗೂ ‘ಏಕೀಕರಣ’. ಆಲೂರಿರಿಗೆ ಇವೆರಡೂ ಸಾಯವವಾಗಿ ಪರಸ್ಪರ ಬೆಸೆದುಕೊಂಡು ಸಂಗತಿಗಳಾಗಿದ್ದವು.

ಆಲೂರರು ತಮ್ಮ ವಿಚಾರ ಪ್ರಣಾಳಿಕೆಯನ್ನು ಕಟ್ಟುವ ದಿಶೆಯಲ್ಲಿ ಅನೇಕ ಸಮಸ್ಯೆಗಳನ್ನು ಹಾಗೂ ಪ್ರಶ್ನೆಗಳನ್ನು ಎದುರಿಸಿದಂತೆ ಕಾಣುತ್ತದೆ. ಏಕೆಂದರೆ ವಸಾಹತುಶಾಹಿ ಸಂದರ್ಭದಲ್ಲಿ ರಾಷ್ಟ್ರೀಯತೆಯನ್ನು ಅಥವಾ ಕರ್ನಾಟಕ ಏಕೀಕರಣ ವನ್ನು ಸ್ವಾತಂತ್ರ್ಯ ಹೋರಾಟಕ್ಕೆ ಅತೀತವಾದ ನೆಲೆಯಲ್ಲಿ ಊಹಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಆದರೆ ಅವರಿಗೆ ಇವೆರಡನ್ನು ಸಂಯೋಜಿಸುವಂತಹ ಸಿದ್ಧಾಂತವೊಂದರ ಅಗತ್ಯವಿತ್ತು. ಇದರಿಂದಾಗಿ ಅವರಿಗೆ ಭಾರತೀಯ ರಾಷ್ಟ್ರೀಯತೆಯನ್ನು ಅಥವಾ ಭಾರತೀಯ ಸಂಸ್ಕೃತಿಯನ್ನು ಪುನರ್ ಪರಿಶೋಧಿಸುವ ಪ್ರಮೇಯ ಉಂಟಾಯಿತು.

ಇದಕ್ಕೆ ಅವರು ಕಂಡುಕೊಂಡ ಪರಿಹಾರವು ತುಂಬಾ ಕುತೂಹಲಕಾರಿಯಾಗಿದೆ. ಅವರ ಮೀಮಾಂಸೆಯಲ್ಲಿ ಭಾರತೀಯತೆ ಹಾಗೂ ಕರ್ನಾಟಕತ್ವ ಇವೆರಡನ್ನೂ ಅವರು ಜಾಗತಿಕತೆಯ ಚೌಕಟ್ಟಿನಲ್ಲಿ ಅಸ್ತಿತ್ವ ಪಡೆದ ಸಂಗತಿಗಳನ್ನಾಗಿ ಪರಿಭಾವಿಸಿಕೊಂಡರು. ಭಾರತೀಯತೆ – ಕರ್ನಾಟಕತ್ವ, ಜಾಗತಿಕತೆ – ಸನಾತನತೆ ಇವುಗಳ ಸಂಬಂಧವನ್ನು ಅವರು ಪುನರ್ ವ್ಯಾಖ್ಯಾನಕ್ಕೆ ಒಳಪಡಿಸಿದರು. ಕರ್ನಾಟಕತ್ವದ ಹಾಗೂ ಭಾರತೀಯತೆಗಳ ಪ್ರತ್ಯೇಕ ಅಸ್ತಿತ್ವವನ್ನು ಒಪ್ಪುತ್ತಲೇ ಅವುಗಳ ನಡುವಣ ಸಂಬಂಧವನ್ನು ಅವರು ಹೊಸ ರೀತಿಯಲ್ಲಿ ಕಟ್ಟಿಕೊಳ್ಳಲು ಪ್ರಯತ್ನಿಸಿದರು. ಅವರ ಮೀಮಾಂಸೆಯಲ್ಲಿ ಕರ್ನಾಟಕತ್ವವು ಒಂದು ಪ್ರತ್ಯೇಕವಾದ ಅನನ್ಯತೆ. ಆದರೆ ಅದು ಪ್ರತ್ಯೇಕವಾದ ಒಂದು ಸಂಗತಿಯಾದರೂ ಅವರ ಮೀಮಾಂಸೆಯಲ್ಲಿ ಇತರೆ ಅನನ್ಯತೆಗಳಿಗೂ ಅವಕಾಶವಿತ್ತು. ಕನ್ನಡಿಗ, ಕರ್ನಾಟಕಸ್ಥ, ಭಾರತೀಯ ಹಾಗೂ ಜಾಗತಿಕ ನಾಗರಿಕ ಹೀಗೆ ಎಲ್ಲವೂ ಏಕಕಾಲದಲ್ಲಿ ಅಸ್ತಿತ್ವದಲ್ಲಿರ ಬಲ್ಲವು ಮತ್ತು ಇರಬೇಕು ಹಾಗೂ ಇರುತ್ತವೆ ಎಂಬುದು ಆಲೂರರ ಸಿದ್ಧಾಂತವಾಗಿತ್ತು. ಇವೆಲ್ಲವೂ ಏಕಕಾಲದಲ್ಲಿ ಅಸ್ತಿತ್ವದಲ್ಲಿರಲು ಸಾಧ್ಯವೆಂಬ ಸಂಗತಿಯನ್ನು ಅವರು ಪ್ರತಿಪಾದಿಸಿದರು.

ಪಶ್ಚಿಮದಲ್ಲಿ ದೈತ್ಯರೂಪದಲ್ಲಿ ಬೆಳೆಯುತ್ತಿದ್ದ ಸಾಮ್ರಾಜ್ಯಶಾಹಿ ರಾಷ್ಟ್ರೀಯತೆಯನ್ನು ಅವರು ತಿರಸ್ಕರಿಸಿದರು. ಅವರದು ಎಲ್ಲರನ್ನೂ ಒಳಗೊಳ್ಳುವ ಮೀಮಾಂಸೆಯಾಗಿತ್ತು. ಈಗಾಗಲೇ ತಿಳಿಸಿರುವಂತೆ ಹೊರಗಣತನ ಅಥವಾ ತಿರಸ್ಕಾರವಾದಿ ವಿಚಾರ ಪ್ರಣಾಳಿಕೆ ಅದಾಗಿರಲಿಲ್ಲ. ಕರ್ನಾಟಕತ್ವದ ಬಗ್ಗೆ ಅವರು ಮಾತನಾಡುತ್ತಿದ್ದರೂ ಅವರ ವಿಚಾರಗಳು ಕರ್ನಾಟಕತ್ವದ ವ್ಯಾಪ್ತಿಯನ್ನು ಮೀರಿದ ನೆಲೆಯನ್ನು ಪಡೆದುಕೊಂಡಿದ್ದವು. ಅವರ ಪ್ರಾದೇಶಿಕ ರಾಜಕಾರಣ ಸಿದ್ಧಾಂತವು ಕರ್ನಾಟಕವನ್ನು ಬಿಟ್ಟು ಉಳಿದ ಪ್ರಾಂತಗಳಿಗೂ ಅನ್ವಯವಾಗುವ ಸೈದ್ಧಾಂತಿಕ ಗುಣವನ್ನು ಪಡೆದಿತ್ತು. ತಾವು ರಚಿಸಿದ ಕರ್ನಾಟಕತ್ವದ ಸೂತ್ರಗಳ ಬಗ್ಗೆ ಬರೆಯುತ್ತಾ ಅವರು ‘ಈ ಸೂತ್ರಗಳು ಕರ್ನಾಟಕಕ್ಕೆ ಮಾತ್ರ ಅನ್ವಯಿಸದೆ, ತಕ್ಕ ಅದಲು ಬದಲುಗಳಿಂದ ಮಿಕ್ಕ ಪ್ರಾಂತಗಳಿಗೂ ಅನ್ವಯಿಸುವವು. ಎಲ್ಲ ಪ್ರಾಂತಗಳು ಕೂಡಿ ಒಟ್ಟಾರೆ ಪ್ರಯತ್ನಿಸಬೇಕೆಂಬುದೇ ನನ್ನ ಉದ್ದೇಶ’ ಎಂಬ ವಿಚಾರವನ್ನು ಮಂಡಿಸುತ್ತಾರೆ (ಪು. ೧೮೯). ಬಹುರೂಪಿ ಅಸ್ತಿತ್ವಕ್ಕೆ ಸಂಬಂಧಿಸಿದ ಘರ್ಷಣೆಗಳಿಗೆ ಆಲೂರರು ತಮ್ಮಮೀಮಾಂಸೆಯಲ್ಲಿ ಪರಿಹಾರದ ಮಾರ್ಗಗಳನ್ನು ರೂಪಿಸಿದ್ದರು. ಈ ಬಗೆಯ ಕಾರ್ಯತಂತ್ರವನ್ನು ಕೆ.ರಾಘವೇಂದ್ರರಾವ್ ‘ಬಹುರೂಪಿ ಅಸ್ತಿತ್ವದ ನಿರ್ವಹಣೆ ಕಾರ್ಯತಂತ್ರ’ವೆಂದು ಕರೆದಿದ್ದಾರೆ. ಭಾರತೀಯ ರಾಷ್ಟ್ರೀಯತೆ – ಕರ್ನಾಟಕತ್ವಗಳ ಸಂಬಂಧ ಕುರಿತಂತೆ ಬರೆಯುವಾಗ ಆಲೂರರು ತಮ್ಮನ್ನು ತಾವು ಕನ್ನಡಿಗನನ್ನಾಗಿ, ಕರ್ನಾಟಕಸ್ಥನನ್ನಾಗಿ, ಭಾರತೀಯನನ್ನಾಗಿ, ಜಾಗತಿಕ ನಾಗರಿಕನನ್ನಾಗಿ ಪರಿಭಾವಿಸಿಕೊಳ್ಳುತ್ತಾರೆ. ಇವೆಲ್ಲ ಅಸ್ತಿತ್ವಗಳ ಜೊತೆಯಲ್ಲಿ ಅವರು ಆಧುನಿಕ ನಾಗರಿಕನ ವ್ಯಕ್ತಿತ್ವವನ್ನು ತಬ್ಬಿಕೊಳ್ಳಲು ಪ್ರಯತ್ನಿಸುತ್ತಾರೆ.

ಅಭಿನ್ನ ಕರ್ನಾಟಕ

ಆಲೂರರ ಕರ್ನಾಟಕತ್ವವು ಅಭಿನ್ನವಾದ – ಅಖಂಡವಾದ ವಿಚಾರ ಪ್ರಣಾಳಿಕೆಯಾಗಿರಲಿಲ್ಲ. ಇದಕ್ಕೆ ಪ್ರತಿಯಾಗಿ ಭಿನ್ನತೆಯನ್ನು ಒಳಗೊಂಡೂ ಅಭೀನ್ನವಾಗುವ, ಏಕಭಾಷೆಯನ್ನು ಮೀರಿಯೂ ಭಾಷಾ ಪ್ರಾಂತವಾದ, ಅಂದರೆ ಭಿನ್ನ ಧರ್ಮಗಳು, ಜಾತಿಗಳು, ಭಾಷೆಗಳ ಜನರನ್ನು ಒಟ್ಟಿಗೆ ಒಳಗೊಳ್ಳುವ ಒಂದು ರಾಜಕೀಯ ಚಿಂತನೆ ಅದಾಗಿತ್ತು. ಕರಾವಳಿ ಕರ್ನಾಟಕ, ಕೊಡಗು ಕರ್ನಾಟಕ, ಹೈದರಾಬಾದ್ – ಕರ್ನಾಟಕ, ಮಲೆಗಳ ಕರ್ನಾಟಕ, ದಕ್ಷಿಣ ಕರ್ನಾಟಕ, ಮುಂಬೈ ಕರ್ನಾಟಕ – ಹೀಗೆ ಹಲವು ಕರ್ನಾಟಕಗಳ ಸಂಯೋಜಿತ ಪ್ರಾಂತ ಕರ್ನಾಟಕ. ಈ ಬಗೆಯ ಭಿನ್ನತೆಗಳನ್ನು ಒಪ್ಪಿಕೊಳ್ಳದೆ – ಮನ್ನಿಸದೆ ಬೇರೆ ಮಾರ್ಗವಿರಲಿಲ್ಲ. ಇಡೀ ಕರ್ನಾಟಕವನ್ನು ಗ್ರಹಿಸುವ ಮಾರ್ಗವೆಂದರೆ ಅದರ ಭಿನ್ನತೆಯನ್ನು ಮನ್ನಿಸುವುದೇ ಆಗಿತ್ತು. ತಮ್ಮ ಕರ್ನಾಟಕತ್ವ ಮೀಮಾಂಸೆಯು ಕರ್ನಾಕಟವನ್ನೂ, ಭಾರತವನ್ನೂ ಮೀರಿದ ಜಾಗತಿಕ ವಿಚಾರ ಪ್ರಣಾಳಿಕೆಯೆಂದು ಆಲೂರರು ಪ್ರತಿಪಾದಿಸಿದಾಗ ಇದೇ ಅರ್ಥದಲ್ಲಿ ಎಂಬುದನ್ನು ನಾವು ಗಮನಿಸಬೇಕು. ಇದೊಂದು ತಾತ್ವಿಕ ಪ್ರಣಾಳಿಕೆ. ಅದೊಂದು ಮೀಮಾಂಸೆ. ಭಾರತದ ಒಕ್ಕೂಟ ವ್ಯವಸ್ಥೆಯ ಸಂದರ್ಭದಲ್ಲಿ ರಾಷ್ಟ್ರೀಯತೆಯನ್ನು, ಭಾರತೀಯತೆಯನ್ನು ಪರಿಭಾವಿಸಿಕೊಳ್ಳಲು ಅಗತ್ಯವಾದ ಸೈದ್ಧಾಂತಿಕ ಕ್ರಮವೊಂದನ್ನು ಆಲೂರರು ತಮ್ಮ ಕನಾಟಕತ್ವ ಮೀಮಾಂಸೆಯಲ್ಲಿ ಪ್ರತಿಪಾದಿಸಿದ್ದಾರೆ. ಭಾಷಾವಾರು ಪ್ರಾಂತ ಕುರಿತಂತೆ ಪ್ರಬಲ ಹೋರಾಟವನ್ನು ಸಂಘಟಿಸುತ್ತಲೇ, ಅಂತಹ ವಿಚಾರವನ್ನು ಪ್ರತಿಪಾದಿಸುತ್ತಲೇ ಅವರು ಅದನ್ನು ಮೀರುವ ದಾರಿಗಳನ್ನು ಕಂಡುಕೊಂಡಿದ್ದರು.

ಪದಾರ್ಥ ಮತ್ತು ಪರಮಾರ್ಥ

ಈ ಹಿಂದೆ ನೋಡಿದಂತೆ ಆಲೂರರು ಮೂಲತಃ ಧಾರ್ಮಿಕ ವ್ಯಕ್ತಿ. ತಮ್ಮ ಬದುಕಿನ ಮೂರು ಧ್ಯೇಯಗಳಲ್ಲಿ ಆಧ್ಯಾತ್ಮ ಸಾಧನೆಯನ್ನು ಅವರು ಸೇರಿಸುತ್ತಾರೆ. ಆದರೆ ಅವರ ಬದುಕನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅವರು ಲೌಕಿಕವನ್ನು ಹೇಗೆ ತಬ್ಬಿಕೊಂಡಿದ್ದರು. ಎಂಬುದು ತಿಳಿಯುತ್ತದೆ. ರಾಷ್ಟ್ರೀಯತೆ – ಪ್ರಾದೇಶಿಕತೆ, ಆಧುನಿಕತೆ – ಸನಾತನಗಳನ್ನು ಹೇಗೆ ಸಂಯೋಜಿಸಲು ಅವರು ಪ್ರಯತ್ನಿಸಿದರೋ ಅದೇ ರೀತಿ ಅವರು ಪದಾರ್ಥ ಮತ್ತು ಪರಮಾರ್ಥಗಳನ್ನು ಸಂಯೋಜಿಸಲು ಪ್ರಯತ್ನಿಸಿದರು. ಅವರು ಬೆಂಕಿಪೊಟ್ಟಣ ಕಾರ್ಖಾನೆ, ಸೀಸದಕಡ್ಡಿ ಕಾರ್ಖಾನೆ, ಬಟ್ಟೆ ಕಾರ್ಖಾನೆಗಳನ್ನು ಆರಂಭಿಸುತ್ತಾರೆ. ಚಿತ್ರಕಲಾ ಶಾಲೆ ತೆರೆಯುತ್ತಾರೆ. ಸಕ್ಕರೆ ಕಾರ್ಖಾನೆ, ಬಟ್ಟೆ ಕಾರ್ಖಾನೆಗಳನ್ನು ಆರಂಭಿಸುತ್ತಾರೆ. ಚಿತ್ರಕಲಾ ಶಾಲೆ ತೆರೆಯುತ್ತಾರೆ. ಸಕ್ಕರೆ ಕಾರ್ಖಾನೆ ಶುರು ಮಾಡುತ್ತಾರೆ. ಮಂಗಳೂರು ಹೆಂಚಿನ ಕಾರ್ಖಾನೆ ತೆಗೆಯುತ್ತಾರೆ. ಹತ್ತಿ ನೂಲಿನ ಗಿರಣಿ ಸ್ಥಾಪಿಸುತ್ತಾರೆ. ಜವಳಿ ಅಂಗಡಿ ಪ್ರಾರಂಭಿಸುತ್ತಾರೆ. ಪರಸ್ಪರ ಸ್ವಸಹಾಯ ಹಣಕಾಸು ಸೊಸೈಟಿಯನ್ನು ತೆರೆಯುತ್ತಾರೆ. ಅವರು ಹತ್ತಾರು ವ್ಯಾಪಾರ – ವಾಣಿಜ್ಯ ಸಾಹಸಗಳಿಗೆ ಕೈ ಹಾಕುತ್ತಾರೆ. ಅವುಗಳಲ್ಲಿ ಅವರು ಯಶಸ್ವಿಯಾಗಲಿಲ್ಲವೆಂಬುದು ಬೇರೆ ಮಾತು. ಈ ಎಲ್ಲ ಪ್ರಯತ್ನ – ಪ್ರಯೋಗಗಳನ್ನು ಕೇವಲ ಸಂಪತ್ತಿನ ಸಂಗ್ರಹದ ಸಂಗತಿಯಾಗಿ ನೋಡಲು ಸಾಧ್ಯವಿಲ್ಲ. ಆಧುನಿಕತೆ – ಕೈಗಾರಿಕೆ – ವಾಣಿಜ್ಯ ಮನೋಭಾವವನ್ನು ಬೆಳೆಸಿಕೊಳ್ಳಲು ಮತ್ತು ಅಂತಹ ಸಂಗತಿಗಳಿಗೆ ನಾಡು ತೆರೆದುಕೊಳ್ಳಬೇಕು ಎಂಬುದನ್ನು ತೋರಿಸಿಕೊಡಲು ಅವರು ಇಂತಹ ಸಾಹಸಗಳನ್ನು ಕೈಗೊಂಡಂತೆ ಕಾಣುತ್ತದೆ. ಈ ಎಲ್ಲ ಪ್ರಯತ್ನಗಳ ಮೂಲಕ ಅವರು ಕಂಡುಕೊಂಡ ತಥ್ಯವೆಂದರೆ ಕರ್ನಾಟಕ ಏಕೀಕರಣವಿಲ್ಲದೆ ಅದರ ಅಭಿವೃದ್ಧಿ, ಕೈಗಾರಿಕಾ ಪ್ರಗತಿ ಸಾಧ್ಯವಿಲ್ಲವೆಂಬುದಾಗಿತ್ತು. ಆಲೂರರು ಆಧುನಿಕತೆಯನ್ನು ಸೈದ್ಧಾಂತಿಕ ಹಾಗೂ ಆಚರಣೆ ಮಟ್ಟದಲ್ಲಿ ಮೈಗೂಡಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಅವರ ವಿಚಾರಗಳ ಮೂಲಬೇರು ಧಾರ್ಮಿಕ ನಂಬಿಕೆಯಲ್ಲಿತ್ತು ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆಲೂರರು ಕರ್ನಾಟಕತ್ವವನ್ನು ಭಾಷೆಗಿಂತ ಮಿಗಿಲಾಗಿ ಜನರ ಬದುಕಿನ ನೆಲೆಯಲ್ಲಿ ಪರಿಭಾವಿಸಿಕೊಳ್ಳಲು ಪ್ರಯತ್ನಿಸಿದ್ದರು. ಆಧುನಿಕತೆ ಹಾಗೂ ಆಧ್ಯಾತ್ಮಿಕತೆಗಳ ನಡುವೆ ಒಂದು ಬಗೆಯ ಸಮತೋಲನ ಸಾಧಿಸಿಕೊಳ್ಳುವ ಪ್ರಯತ್ನ ಅವರದಾಗಿತ್ತು.

ಕವಿರಾಜಮಾರ್ಗಕಾರನ ಕನ್ನಡ ಜಗತ್ತು ಮತ್ತು ಆಲೂರರ ಕರ್ನಾಟಕತ್ವ

ಆಲೂರರ ಕರ್ನಾಟಕತ್ವ ಹಾಗೂ ಕವಿರಾಜಮಾರ್ಗಕಾರನ ಕನ್ನಡ ಜಗತ್ತುಗಳ ನಡುವೆ ಸಂಬಂಧವನ್ನು ಕಲ್ಪಿಸುವುದು ಅರ್ಥರಹಿತವಾದ ಪ್ರಯತ್ನವಾದರೂ ತುಂಬಾ ಕುತೂಹಲಕರ ಸಂಗತಿಯಾಗಿದೆ. ಕವಿರಾಜಮಾರ್ಗಕಾರನು ಕನ್ನಡವನ್ನು, ಕನ್ನಡ ಜಗತ್ತನ್ನು ವಸುಧೆಯೊಳಗೆ ಒಂದು ಸ್ವಾಯತ್ತ ಘಟಕವಾಗಿ ಕಲ್ಪಿಸಿಕೊಂಡಿರುವುದನ್ನು ಅನೇಕ ವಿದ್ವಾಂಸರು ಗುರುತಿಸಿದ್ದಾರೆ. ಈ ಬಗ್ಗೆ ಕೆ.ವಿ. ಸುಬ್ಬಣ್ಣ ಹೀಗೆ ಬರೆಯುತ್ತಾರೆ. (೨೦೦೦).

‘ಕವಿರಾಜಮಾರ್ಗವೆಂಬ ಈ ಗ್ರಂಥವು, ತನ್ನ ಕಿರು ಭಾಷೆಯ ಅಂಗೈನೆಲದಲ್ಲಿ ಪ್ರಪಂಚ ಜಗತ್ತನ್ನು ಆವಾಹಿಸಿ ಅರಗಿಸಿಕೊಂಡು ಕನ್ನಡವೆಂಬ ನಿಸ್ಸೀಮೆಯ ಪ್ರತಿ ಜಗತ್ತನ್ನು ಹೇಗೆ ಸೃಷ್ಟಿಸಿಕೊಳ್ಳಬೇಕೆಂಬುದನ್ನು ಕುರಿತು ಚಿಂತಿಸುತ್ತದೆ. ಕವಿರಾಜಮಾರ್ಗದಲ್ಲಿನ ಒಂದು ಕಿರು ಕಂದ ಪದ್ಯವು ಅದನ್ನು ಮನೋಜ್ಞಾನವಾಗಿ ಬಣ್ಣಿಸುತ್ತದೆ’.

ಆ ಕಂದ ಪದ್ಯ ಇದು

ಕಾವೇರಿಯಿಂದ ಮಾ ಗೋ
ದಾವರಿವರಮಿರ್ಪ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸು
ಧಾವಳಯ ವಿಲೀನ ವಿಶದ ವಿಷಯ ವಿಶೇಷಂ

ಕೆ.ವಿ. ಸುಬ್ಬಣ್ಣ ಪ್ರಸ್ತುತ ಪದ್ಯವನ್ನು ಹೀಗೆ ವಿವರಿಸಿದ್ದಾರೆ. “ಈ ನಾಡು ಮತ್ತು ಜನಪದವು ತತ್ಕಾಲದಲ್ಲಿ ಕಾಣಿಸುತ್ತಿದ್ದ ಭೌಗೋಳಿಕ ಘಟಕವಷ್ಟೇ ಅಲ್ಲ, ಅದು ಭಾವಿತವಾದದ್ದು. ಅಂದರೆ ‘ಕನ್ನಡ’ವೆಂಬುದು ಒಂದು ಚಿತ್ ಜಗತ್ತು, ಒಂದು ಕಣಸು, ದರ್ಶನ ಮತ್ತು ಇದು ವಸುಧಾ – ವಲಯ – ವಿಲೀನ – ವಿಶದ – ವಿಷಯ – ವಿಶೇಷಂ”.

“ವಸುಧಾ(ಭೂಮಿ) ಎನ್ನುವುದು ಅನಂತ ಬ್ರಹ್ಮಾಂಡದೊಳಗಿನ ಒಂದು ‘ವಲಯ’ ಅಷ್ಟೇ: ಮತ್ತು ‘ಕನ್ನಡ’ವೆಂಬ ‘ವಿಷಯ’(ನಾಡು)ವು ಆ ವಸುಧಾ ವಲಯದಲ್ಲಿ ‘ವಿಲೀನ’ವಾಗಿದೆ. ಸಮರಸವಾಗಿ ಬೆರೆತುಕೊಂಡಿದೆ. ಹಾಗೆಂದು ಮಾತ್ರಕ್ಕೆ ಇದು ಸ್ವಂತಿಕೆಯ ಚಹರೆಯಿಲ್ಲದೆ ವಸುಧೆಯಲ್ಲಿ ಗುರುತು ಸಿಗದಂತೆ ಮುಳಿಗಿ ಹೋದುದ್ದಲ್ಲ; ತನ್ನದೇ ‘ವಿಶೇಷಂ’ (ವೈಶಿಷ್ಟ್ಯ) ಇರುವ ನಾಡು. ಅಷ್ಟೇ ಅಲ್ಲ – ಇದು ‘ವಿಶದ’ ವಾದದ್ದು; ವಸುಧೆ ಅಥವಾ ಬ್ರಹ್ಮಾಂಡದಷ್ಟೇ ವ್ಯಾಪಕವಾದದ್ದು. ವಸುಧೆಯೊಳಗಿನ ಒಂದು ಕಿರು ಬಿಂದುವಾಗಿದ್ದೂ ತನ್ನೊಳಗೆ ಆ ವಸುಧೆಯನ್ನೇ ಅರಗಿಸಿಕೊಂಡಿರುವ ‘ಕನ್ನಡ’ದ ಇಂಥ ಪ್ರತಿಮೆಯನ್ನು ‘ಕವಿರಾಜಮಾರ್ಗವು’ ಕಂಡಿರಿಸಿದೆ”. ಕನ್ನಡದೊಳಗೆ ವಸುಧೆಯು ವಿಲೀನವಾಗಿರುವ ಸಂಗತಿಯನ್ನು ಕವಿರಾಜ ಮಾರ್ಗಕಾರ ಹೇಳಿದ್ದರೆ ಆಲೂರರು ‘ಕರ್ನಾಟಕ ಸಂಸ್ಕೃತಿಯು ಇಡೀ ಪ್ರಪಂಚವನ್ನು ಕೈವಶಮಾಡಿಕೊಂಡಿದೆ’ ಎಂದೂ ‘ಕರ್ನಾಟಕವೂ ಭರತ ಖಂಡದ ಸಂಸ್ಕೃತಿಯನ್ನೆಲ್ಲ ಪಚನ ಮಾಡಿಕೊಂಡಿದೆ’ ಎಂದು ಹೇಳುತ್ತಾರೆ.

ಸರಿಸುಮಾರು ಸಾವಿರ ವರ್ಷಗಳ ಹಿಂದೆ ಕನ್ನಡವನ್ನು, ಕನ್ನಡವನ್ನಾಡುತ್ತಿದ್ದ ಪ್ರದೇಶವನ್ನು ಸ್ವಾಯತ್ತವಾಗಿ ಪರಿಭಾವಿಸಿಕೊಳ್ಳುವ ಚಿಂತನೆ ಇಲ್ಲಿನ ನೆಲದಲ್ಲಿ ನಡೆದಿತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ‘ಕವಿರಾಜಮಾರ್ಗ’ದಲ್ಲಿನ ವಿಚಾರ ಮತ್ತು ಅದನ್ನು ಕೆ.ವಿ.ಸುಬ್ಬಣ್ಣ ಪರಿಭಾವಿಸಿಕೊಂಡಿರುವ ಬಗೆಗಳನ್ನು ಹಾಗೂ ಆಲೂರು ವೆಂಕಟರಾಯರು ಕನಾðಟಕತ್ವ ಹಾಗೂ ಕರ್ನಾಟಕ ಸಂಸ್ಕೃತಿ ಬಗ್ಗೆ ಆಡಿರುವ ಮಾತುಗಳ ನಡುವಿನ ಸಾದೃಶ್ಯವು ನನಗೆ ಕುತೂಹಲಕಾರಿಯಾಗಿ ಕಾಣುತ್ತದೆ. ಕರ್ನಾಟಕ ಸಂಸ್ಕೃತಿ ಮತ್ತು ಭಾರತೀಯ ಸಂಸ್ಕೃತಿಗಳ ನಡುವಣ ಸಂಬಂಧ ಕುರಿತಂತೆ ಆಲೂರರು ಹೇಳುವ ಮಾತು ಹಾಗೂ ಅವರು ಕರ್ನಾಟಕತ್ವವನ್ನು ನಿರ್ವಚಿಸುವ ರೀತಿಯನ್ನು ನಾವು ಇದಕ್ಕೆ ನಿದರ್ಶನವಾಗಿ ನೋಡಬಹುದು. ಭಾರತೀಯ ಸಂಸ್ಕೃತಿಯೆಂಬುದನ್ನು ಒಪ್ಪಿಕೊಳ್ಳುವ ಆಲೂರರು ಅದು ಕರ್ನಾಟಕ ಸಂಸ್ಕೃತಿಯಿಂದ ಪುಷ್ಟಿಗೊಂಡಿದೆಯೆಂದು ತಿಳಿಯುತ್ತಾರೆ. ಅವರ ಮಾತುಗಳು ಹೀಗಿವೆ.

“ಆ(ಭಾರತೀಯ) ಸಂಸ್ಕೃತಿಗೆ ಕರ್ನಾಟಕವು ತನ್ನ ‘ವಿಶಿಷ್ಟ’ ಸಂಸ್ಕೃತಿಯನ್ನು ಬೆರೆಸಿ ಅದನ್ನು ಪುಷ್ಟಿಗೊಳಿಸುತ್ತದೆಯೆಂಬುದನ್ನೂ ‘ವಿಶಿಷ್ಟ’ ಸ್ವರೂಪವನ್ನು ಕೊಡುತ್ತದೆಂಬುದನ್ನೂ ಯಾರೂ ಮರೆಯ ಕೂಡದು” (ಪು.೧೧)

ಮುಂದುವರಿದು ಅವರು ಹೀಗೆ ಬರೆಯುತ್ತಾರೆ.

“ಕರ್ನಾಟಕವು ಭರತ ಖಂಡದ ಸಂಸ್ಕೃತಿಯನ್ನೆಲ್ಲ ಪಚನ ಮಾಡಿಕೊಂಡಿರುವುದಲ್ಲದೆ, ತನ್ನ ‘ವಿಶಿಷ್ಟ’ ಸಂಸ್ಕೃತಿಯನ್ನು ಅದರಲ್ಲಿ ಬೆರೆಸಿ ಅದನ್ನು ಮತ್ತಷ್ಟು ಪುಷ್ಟವನ್ನಾಗಿಯೂ ವ್ಯಾಪಕವನ್ನಾಗಿಯೂ ಮಾಡಿರುವುದು” (ಪು.೧೬೯)

ಆಲೂರರ ಉಲ್ಲೇಖಗಳಲ್ಲಿ ಮತ್ತೆ ಮತ್ತೆ ಬರುವ ‘ವಿಶಿಷ್ಟ’ವೆಂಬ ನುಡಿ ಹಾಗೂ ಕವಿರಾಜಮಾರ್ಗದಲ್ಲಿನ ಕಂದಪದ್ಯದಲ್ಲಿನ ‘ವಿಶೇಷ’ಗಳು ಒಂದೇ ಅರ್ಥವನ್ನು ಸೂಚಿಸುತ್ತಿರುವಂತೆ ಕಾಣುತ್ತದೆ.

ಕವಿರಾಜಮಾರ್ಗಕಾರನಂತೆ ಆಲೂರರು ಕರ್ನಾಟಕವನ್ನು ವಸುಧೆಯೊಳಗೆ ಗುರುತಿಸಲು ಪ್ರಯತ್ನಿಸುತ್ತಾರೆ. ಏಕೆಂದರೆ ಅವರ ಕರ್ನಾಟಕವು ಭರತಖಂಡವನ್ನೂ ಮತ್ತು ವಿಶ್ವವನ್ನೂ ವ್ಯಾಪಿಸಿಕೊಂಡಿರುವ ಜ್ಞಾನಕಲ್ಪವಾಗಿದೆ. ವಸುಧೆಯೊಳಗೆ ವಿಲೀನವಾಗಿದ್ದು ಕನ್ನಡ – ಕರ್ನಾಟಕವು ತನ್ನ ವಿಶೇಷ ವ್ಯಕ್ತಿತ್ವ – ಅಸ್ತಿತ್ವವನ್ನು ಉಳಿಸಿಕೊಂಡಿರುವುದನ್ನು ಕವಿರಾಜಮಾರ್ಗಕಾರನು ಹೇಳುತ್ತಿದ್ದಾನೆ ಮತ್ತು ಅದನ್ನೇ ಮತ್ತೊಂದು ಬಗೆಯಲ್ಲಿ ಆಲೂರರು ಹೇಳುತ್ತಿದ್ದಾರೆ.

ಕವಿರಾಜಮಾರ್ಗ ಮತ್ತು ಆಲೂರರ ಕರ್ನಾಟಕತ್ವದ ಮೀಮಾಂಸೆಗಳು ಇಂದಿನ ಕೇಂದ್ರ – ರಾಜ್ಯ ಸಂಬಂಧಗಳನ್ನು, ಭಾಷಾವಾರು ಪ್ರಾಂತದ ಪ್ರಶ್ನೆಯನ್ನು ಭಿನ್ನವಾದ ನೆಲೆಯಲ್ಲಿ ಅರ್ಥಮಾಡಿಕೊಳ್ಳಲು ನೆರವಾಗುತ್ತವೆ. ಆಲೂರರಾಗಲಿ ಅಥವಾ ಕವಿರಾಜ ಮಾರ್ಗದಲ್ಲಿನ ಕನ್ನಡ ಜಗತ್ತನ್ನು ಗುರುತಿಸಲು ಪ್ರಯತ್ನಿಸಿದ ಕೆ.ವಿ. ಸುಬ್ಬಣ್ಣ ಅವರಾಗಲಿ ಕವಿರಾಜಮಾರ್ಗಕಾರರಿಬ್ಬರೂ ಕನ್ನಡವನ್ನೂ ಕರ್ನಾಟಕವನ್ನೂ ಭಾರತದ ಒಕ್ಕೂಟ ಹಾಗೂ ಜಾಗತಿಕ ಚೌಕಟ್ಟಿನಲ್ಲಿ ಗುರುತಿಸಲು ಪ್ರಯತ್ನಿಸಿದ್ದಾರೆ. ಇದು ತುಂಬಾ ಮುಖ್ಯ. ಕನ್ನಡ – ಕರ್ನಾಟಕದ ವಿಶಿಷ್ಟತೆ ಬಗ್ಗೆ ಇಬ್ಬರೂ ಮಾತನಾಡುತ್ತಿದ್ದಾರೆ. ಒಂದು ಪ್ರದೇಶದ ಜನ ಜೀವನದ ಅನನ್ಯತೆಯನ್ನು ಹೀಗೆ ರಾಜಕಾರಣದ ಚೌಕಟ್ಟಿನಲ್ಲಿ ನೋಡಿದ ಪ್ರಯತ್ನಗಳು ತುಂಬಾ ಅರ್ಥಪೂರ್ಣವಾಗಿವೆ.

ಆಲೂರರ ಕರ್ನಾಟಕತ್ವದ ಬಗ್ಗೆ ಚರ್ಚಿಸುತ್ತಾ ಡಿ.ಆರ್. ನಾಗರಾಜ್ ಅವರು ಅದರ ಮಹತ್ವವನ್ನು ಗುರುತಿಸಿದ್ದಾರೆ (‘ಕನ್ನಡ ರಾಷ್ಟ್ರೀಯತೆಯ ಸ್ವರೂಪ’ ಸಾಹಿತ್ಯ ಕಥನ: ೧೯೯೬:೨೭೯ – ೨೮೯). ಈಗಾಗಲೇ ಗುರುತಿಸಿರುವಂತೆ ಕವಿರಾಜಮಾರ್ಗಕಾರ, ಕೆ.ವಿ.ಸುಬ್ಬಣ್ಣ, ಆಲೂರು ವೆಂಕಟರಾಯರು ಒತ್ತಿ ಹೇಳಿರುವ ಕನ್ನಡ – ಕರ್ನಾಟಕದ ವಿಶಿಷ್ಟತೆಯನ್ನು ನಾಗರಾಜ್ ಅವರೂ ತಮ್ಮ ಲೇಖನದಲ್ಲಿ ಚರ್ಚಿಸಿದ್ದಾರೆ. ವಿಶಿಷ್ಟವಾಗುತ್ತಲೇ ವಿಶ್ವಾತ್ಮಕವಾಗುವ ಬಗೆಯನ್ನು ಕುರಿತಂತೆ ಡಿ.ಆರ್. ಬರೆದಿದ್ದಾರೆ. ಅವರ ಲೇಖನದ ಕೊನೆಯ ವಾಕ್ಯ ಹೀಗಿದೆ.

“ವಿಶಿಷ್ಟವಾಗುವ ಮೂಲಕವೇ ವಿಶ್ವಾತ್ಮಕವಾಗುವುದು ಕಷ್ಟದ ದಾರಿ. ಆದರೆ, ತಕ್ಷಣದ ಆರೋಗ್ಯಕಾರಿ ರಾಜಕಾರಣದ ದೃಷ್ಟಿಯಿಂದ ಮಾತ್ರವಲ್ಲ, ನಿಜವಾದ ಮಾನವೀಯ ವಿಕಾಸದ ದೃಷ್ಟಿಯಿಂದ ಕೂಡ ಇದು ಸರಿಯಾದ ದಾರಿ” (೧೯೯೬:೨೮೯) ಇದು ಕೇಂದ್ರ – ರಾಜ್ಯಗಳ ನಡುವಣ ಸಂಬಂಧವನ್ನು ಸರಿಯಾಗಿ ನೋಡುವ ದೃಷ್ಟಿಕೋನ ಎಂಬುದನ್ನು ಡಿ.ಆರ್. ಇಲ್ಲಿ ಸೂಚಿಸುತ್ತಿದ್ದಾರೆ.

ಆಲೂರರ ಕರ್ನಾಟಕತ್ವ ಮೀಮಾಂಸೆಯನ್ನು ಡಿ.ಆರ್. ಆಧ್ಯಾತ್ಮಿಕ ರಾಷ್ಟ್ರೀಯತೆಯೆಂದು ಕರೆದಿದ್ದಾರೆ. ಯಾವುದೇ ಕಾರಣಕ್ಕೂ ಆಲೂರರ ವಿಚಾರಗಳನ್ನು ಹಿಂದೂ ರಾಷ್ಟ್ರೀಯತೆ ಅಥವಾ ಸಾಂಸ್ಕೃತಿಕ ರಾಷ್ಟ್ರೀಯತೆಯ ಚೌಕಟ್ಟಿನಲ್ಲಿ ಗುರುತಿಸಲು ಸಾಧ್ಯವಿಲ್ಲ. ಹಿಂದುತ್ವದ ಬಗ್ಗೆ ಆಲೂರರು ಮಾತನಾಡಿದರೂ ಅದು ಅನುಷಂಗಿಕವಾದುದು. ಸಾಮ್ರಾಜ್ಯದ ಹಂಬಲದಲ್ಲಿ ರಾಷ್ಟ್ರೀಯತೆ ಹುಟ್ಟುತ್ತದೆ ಎಂಬ ಡಿ.ಆರ್. ನಾಗಾರಾಜರ ಪ್ರಮೇಯವನ್ನು ಒಪ್ಪಿಕೊಂಡರೂ ಆಲೂರರ ಹಂಪಿಯ ವಿಜಯನಗರದ ಹಂಬಲವು ಸಾಮ್ರಾಜ್ಯಶಾಹಿ ಸ್ವರೂಪದ್ದಲ್ಲವೆಂಬುದು ಅವರ ಕೃತಿಯ ಸೂಕ್ಷ್ಮ ಅಧ್ಯಯನದಿಂದ ತಿಳಿಯುತ್ತದೆ. ಈ ಬಗ್ಗೆ ಡಿ.ಆರ್. ಅವರೇ ಹೇಳುವ ಮಾತುಗಳು ಅರ್ಥಪೂರ್ಣವಾಗಿದೆ. ಅವರು ಹೀಗೆ ಬರೆಯುತ್ತಾರೆ. “..ಆಲೂರರ ಮುಖ್ಯಗುಣವೆಂದರೆ ತಮ್ಮ ಉಳಿದ ವಿಶಾಲ ಹಾಗೂ ಸೂಕ್ಷ್ಮ ಪರಿಕಲ್ಪನೆಗಳ ಮೂಲಕ ಆ ಹಿಂದುತ್ವವನ್ನು ಮುಚ್ಚಲು ಪ್ರಯತ್ನಿಸುತ್ತಾರೆ. ಅವರಲ್ಲಿ ಹಿಂದುತ್ವವೆಂಬುದು ವಿಶಿಷ್ಟ ಅಸ್ತಿತ್ವದ ಒಂದು ರೂಪವೇ ಹೊರತು ಏಕಮಾತ್ರ ರೂಪವಲ್ಲ” (ಪು.೨೮೭) ಏಕೆಂದರೆ ಆಲೂರರು ೧೯೫೬ರಲ್ಲಿ ಕನ್ನಡಿಗರಿಗೆ ನೀಡಿದ ಸಂದೇಶದಲ್ಲಿ ನಾಡಿನ ಅಲ್ಪಸಂಖ್ಯಾತರ ಬಗ್ಗೆ ಮಾತನಾಡುತ್ತಾರೆ. ಇದನ್ನು ಡಿ.ಆರ್. ಸಹ ಗುರುತಿಸಿದ್ದಾರೆ. ಕರ್ನಾಟಕ ಸಂಸ್ಕೃತಿಗೆ ಮುಸ್ಲಿಮರ ಹಾಗೂ ಕ್ರೈಸ್ತ್ರ ಕೊಡುಗೆ ಕುರಿತಂತೆ ಆಲೂರರು ಚರ್ಚಿಸುವುದಿಲ್ಲ ನಿಜ. ಆದರೆ ಅವರ ಕರ್ನಾಟಕತ್ವವು ಅವುಗಳನ್ನು ಒಳಗೊಳ್ಳಬಲ್ಲ ವಿಸ್ತೃತವಾದ ಪರಿಭಾವನೆಯಾಗಿದೆ. ಏಕೆಂದರೆ ಈಗಾಗಲೇ ತಿಳಿಸಿರುವಂತೆ ಅವರ ಕರ್ನಾಟಕತ್ವ ಮೀಮಾಂಸೆಯ ಎರಡು ಪ್ರಮುಖ ಲಕ್ಷಣಗಳೆಂದರೆ ಸಂಬಂಧವಾದಿತ್ವ ಮತ್ತು ಎಲ್ಲರನ್ನೂ ಒಳಗೊಳ್ಳುವ ಗುಣ (ಕೆ. ರಾಘವೇಂದ್ರರಾವ್: ೨೦೦೦ : ಪು. ೧೦೮). ಬಹಳ ಕುತೂಹಲಕಾರಿಯಾದ ಸಂಗತಿಯೆಂದರೆ ಆಲೂರರು ಆ ಕಾಲಕ್ಕೆ ಕರ್ನಾಟಕತ್ವದ ಮೀಮಾಂಸೆಯನ್ನು ಕಟ್ಟುವ ದಿಶೆಯಲ್ಲಿ ಮಹಿಳೆಯರನ್ನು ತೊಡಗಿಸಲು ಪ್ರಯತ್ನಿಸುತ್ತಾರೆ (ನೋಡಿ: ಪು.೧೨೨ – ೧೨೩). ಧಾರವಾಡದಲ್ಲಿ ಕರ್ನಾಟಕತ್ವವನ್ನು ಜನರಲ್ಲಿ ಒಡಮೂಡಿಸುವ ಕಾರ್ಯದಲ್ಲಿ ಮಹಿಳೆಯರನ್ನು ತೊಡಗಿಸುವ ಕೆಲಸವನ್ನು ಆಲೂರರು ೨೦ನೆಯ ಶತಮಾಣದ ಆರಂಭದ ದಶಕಗಳಲ್ಲೇ ಪ್ರಯತ್ನಿಸಿದ್ದು ಕಂಡುಬರುತ್ತದೆ. ಕರ್ನಾಟಕ ಮಹಿಳಾ ವಿದ್ಯಾಲಯವೆಂಬ ಸಂಸ್ಥೆಯನ್ನು ಕಟ್ಟಿ ಅದರ ಕಾರ್ಯಕ್ರಮಗಳಲ್ಲಿ ಅನೇಕ ಮಹಿಳೆಯರನ್ನು ತೊಡಗಿಸಿದ್ದು ಕಂಡುಬರುತ್ತದೆ. ಅದರ ವಾರ್ಷಿಕ ಸಮಾರಂಭಗಳಿಗೆ ಅನೇಕ ಮಹಿಳೆಯರನ್ನು ಕರೆಸಿದ್ದು ಅವರ ಲಿಂಗಸ್ಪಂದಿ ಗುಣವನ್ನು ತೋರಿಸುತ್ತದೆ. ತಮ್ಮ ಕೃತಿಯ ಉಪಸಂಹಾರ ಭಾಗದಲ್ಲಿ ಆಲೂರರು ತಮ್ಮ ಕರ್ನಾಟಕತ್ವ ಕುರಿತ ಚಳವಳಿಯಲ್ಲಿ ತಮ್ಮ ಹೆಂಡತಿ ಲಕ್ಷ್ಮೀಬಾಯಿ ಹೇಗೆ ನೆರವಾದರು ಎಂಬುದನ್ನು ಎರಡು ಪುಟಗಳಲ್ಲಿ ವಿವರಿಸಿದ್ದಾರೆ. ಅವರು ಅಲ್ಲಿ ನುಡಿದಿರುವ ‘ಅವಳು ನನ್ನನ್ನು ದೇಶ ಕಾರ್ಯಕ್ಕೆ ಮೀಸಲಾಗಿ ಬಿಟ್ಟು ತಾನೇ ಬಡತನದಿಂದ ಸಂಸಾರ ಸಾಗಿಸುವ ಭಾರ ಹೊತ್ತಳು’ (ಪು. ೧೮೨) ಎಂಬ ಮಾತು ತುಂಬಾ ಅರ್ಥಪೂರ್ಣವಾಗಿದೆ. ತಾವು ಕೈಗೊಂಡ ಎಲ್ಲ ಚಟುವಟಿಕೆಗಳ ಹಿಂದಿನ ಶಕ್ತಿಯೆಂದು ಅವರು ತಮ್ಮ ಹೆಂಡತಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾರೆ (ಪು. ೧೮೩). ಇದು ತುಂಬಾ ಔಪಚಾರಿಕ ಸಂಗತಿಯಂತೆ ಕಂಡರೂ ಅಂದಿನ ದಿನಮಾನದಲ್ಲಿ ಬಹಳ ಅರ್ಥಪೂರ್ಣ ವಾದ ಸಂಗತಿಯಾಗಿ ಕಂಡುಬರುತ್ತದೆ. ‘ಕನ್ನಡ ಸಂಸ್ಕೃತಿ: ನಮ್ಮ ಹೆಮ್ಮೆ’ ಎಂಬ ರೀತಿಯ ಪರಿಭಾವನೆ ಅದಲ್ಲ. ‘ಕರ್ನಾಟಕವೆಂದರೆ ಬೇರೆ ಬೇರೆ ಭಾಷೆಗಳನ್ನು ಮಾತನಾಡುವ ಅಲ್ಪಸಂಖ್ಯಾತರಿದ್ದಾರೆ. ಅವರ ಹಿತರಕ್ಷಣೆಯಲ್ಲೇ ಈ ರಾಜ್ಯದ ಹಿತವಿದೆ’ ಎಂಬ ಸಂಗತಿಯನ್ನು ಡಿ.ಆರ್. ಅವರು ಲಂಕೇಶ್‌ರಿಗೆ ಸಂಬಂಧಿಸಿದಂತೆ ಚರ್ಚಿಸುತ್ತಾರೆ. ಆಲೂರರೂ ಇದೆ ನೆಲೆಯಲ್ಲಿ ಕರ್ನಾಟಕತ್ವವನ್ನು ಪರಿಭಾವಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಅವರು ಅಲ್ಪಸಂಖ್ಯಾತರ ಬಗ್ಗೆ ೧೯೫೬ರಲ್ಲಿ ಮಾತನಾಡುತ್ತಾರೆ.

ನನ್ನ ಈ ಲೇಖನವು ೨೦೦೬ರಲ್ಲಿ ಪ್ರಕಟವಾದಾಗ (ಹೊಸತು) ಬಂದ ಬುಮುಖ್ಯ ಟೀಕೆಯೆಂದರೆ ಅದು ‘ವಿಮರ್ಶಾತ್ಮಕವಾಗಿಲ್ಲ’ ಎಂಬುದಾಗಿತ್ತು. ಇದು ನಿಜವಿರಬಹುದು. ಆದರೆ ಲೇಖನವು ‘ಆರಾಧನಾ’ ಮನೋಭಾವದಲ್ಲಿಲ್ಲವೆಂಬುದನ್ನು ಹೇಳಬಹುದು. ಒಂದು ದೃಷ್ಟಿಯಲ್ಲಿ ಆಲೂರರನ್ನು ನೆವ ಮಾಡಿಕೊಂಡು ಇಲ್ಲಿ ಕೇಂದ್ರದ ಅಧಿಕಾರದ ದಬ್ಬಾಳಿಕೆಯನ್ನು ಟೀಕಿಸುವ ಹಾಗೂ ಕರ್ನಾಟಕದ ಸ್ವಾಯತ್ತತೆಯನ್ನು ಪ್ರತಿಪಾದಿಸುವವ ವಿರುದ್ಧವಾಗಿ ಪರಿಭಾವಿಸಿಕೊಳ್ಳುವ ಅಗತ್ಯವಿಲ್ಲವೆಂದು ಇಲ್ಲಿ ಹೇಳಲಾಗಿದೆ.

ಆಲೂರರು ಮಾಧ್ವ ಪಂಥದ ಪ್ರತಿಪಾದಕರಾಗಿದ್ದರು. ಅದೊಂದು ಸಂಕುಚಿತ ವ್ಯಾಪ್ತಿಯ ವಿಚಾರ ಪ್ರಣಾಳಿಕೆ. ಆದರೆ ಆಲೂರರ ವಿಚಾರಗಳು ಮಾಧ್ವ ಪಂಥದ ಸೀಮಿತ ಚೌಕಟ್ಟನ್ನು ಮೀರಿ ಬೆಳೆದಿದ್ದವು. ಆಲೂರರನ್ನು ಆಧ್ಯಾತ್ಮಕವಾದಿಯೆಂದೇ ಪರಿಗಣಿಸಬೇಕಾಗುತ್ತದೆ. ಮಾಧ್ವ ಪಂಥದ ಚೌಕಟ್ಟನ್ನು ಅವರು ಮೀರಿ ಕರ್ನಾಟಕತ್ವವನ್ನು ಪ್ರತಿಪಾದಿಸಿದ್ದಾರೆಂಬುದು ಅವರು ಬರಹ – ವಿಚಾರಗಳಿಂದ ತಿಳಿಯುತ್ತದೆ. ಆಲೂರರ ಮೂಲಕ ಕನಾಟಕತ್ವವನ್ನು ಚಾರಿತ್ರಿಕವಾಗಿ ನೋಡಲು ಇಲ್ಲಿ ಪ್ರಯತ್ನಿಸಲಾಗಿದೆ. ಕರ್ನಾಟಕತ್ವ ವಿಚಾರ ಪ್ರಣಾಳಿಕೆಯು ಸಾಮಾಜಿಕ – ಆರ್ಥಿಕ ಸಂಗತಿಗಳನ್ನು ಒಳಗೊಂಡಿದೆ. ಆಲೂರರ ವ್ಯಕ್ತಿತ್ವವು ಸಂಕೀರ್ಣತೆಯ ಒಂದು ಮೊತ್ತವಾಗಿದೆ. ಏಕೆಂದರೆ ಅವರ ಪರಮಾರ್ಥ ಮತ್ತು ಪದಾರ್ಥವನ್ನು, ಆಧುನಿಕತೆ – ಆಧ್ಯಾತ್ಮಿಕತೆಯನ್ನು ಲೌಕಿಕತೆ – ಧಾರ್ಮಿಕತೆಗಳನ್ನು, ಪ್ರಾದೇಶಿಕತೆ – ರಾಷ್ಟ್ರೀಯತೆಗಳನ್ನು ಸಂಯೋಜಿಸುವ ಪ್ರಯತ್ನ ನಡೆಸಿದ್ದರು. ಏಕಕಾಲದಲ್ಲಿ ಇವೆಲ್ಲವನ್ನೂ ಅವರು ನಿರ್ವಹಿಸಲು ಪ್ರಯತ್ನಿಸಿದರು. ಇವರ ಗರಡಿಯಲ್ಲಿ ಬೆಳೆದ ಕೃಷ್ಣಕುಮಾರ ಕಲ್ಲೂರ ಅವರಿಗೆ ‘ನುಡಿಗಿಂತ ನಾಡು ಹೆಚ್ಚು: ನಾಡಿಗಿಂತ ನಾಡವರು ಹೆಚ್ಚು’ ಎಂಬ ಘೋಷಣೆ ನೀಡುವುದು ಸಾಧ್ಯವಾಯಿತು.

ಸಂಗ್ರಹ

ಕರ್ನಾಟಕತ್ವವೆಂಬ ಪರಿಭಾವನೆಯನ್ನು ಹುಟ್ಟುಹಾಕಿ. ಅದಕ್ಕೆ ಸಂಬಂಧಿಸಿದ ಮೀಮಾಂಸೆಯನ್ನು ಕಟ್ಟಿ, ಅದಕ್ಕೆ ಸಂಬಂಧಿಸಿದಂತೆ ಅಕ್ಷರಶಃ ಹತ್ತಾರು ಚಳುವಳಿಗಳನ್ನು ಸಂಘಟಿಸಿ, ಅದರ ಅಮೂರ್ತ ಹಾಗೂ ಮೂರ್ತ ರೂಪವನ್ನು ಕಡೆದಿರಿಸಿ, ಅದನ್ನು ತಪಸ್ಸಿನಂತೆ ಧ್ಯಾನಿಸಿದ ವ್ಯಕ್ತಿ ಆಲೂರು ವೆಂಟರಾಯರು. ಕರ್ನಾಟಕತ್ವದ ವಿವಿಧ ಆಯಾಮಗಳನ್ನು ಕುರಿತಂತೆ ಮೊಟ್ಟ ಮೊದಲ ಬಾರಿಗೆ ಚಿಂತನೆ ನಡೆಸಿದವರು ಅವರು. ಅವರು ತಮ್ಮ ಕೃತಿಯಲ್ಲಿ ಈ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ. ರಾಜಕಾರಣದಲ್ಲಿ ಕರ್ನಾಟಕತ್ವ, ವಾಙ್ಮಯದಲ್ಲಿ ಕರ್ನಾಟಕತ್ವ, ಧರ್ಮದಲ್ಲಿ ಕರ್ನಾಟಕತ್ವ ಮುಂತಾದ ಶೀರ್ಷಿಕೆಗಳಲ್ಲಿ ಕರ್ನಾಟಕತ್ವವನ್ನು ಒಂದು ಜ್ಞಾನ ಕಲ್ಪವಾಗಿ ಕಟ್ಟುವಲ್ಲಿ ಅವರ ನಡೆಸಿದ ಪ್ರಯತ್ನವನ್ನು ಗುರುತಿಸಬಹುದಾಗಿದೆ. ಕರ್ನಾಟಕವು ತನ್ನ ಏಕೀಕರಣದ ೫೦ನೆಯ ವರ್ಷಾಚರಣೆ ಮಾಡುತ್ತಿರುವ ಸಂದರ್ಭದಲ್ಲಿ ಆಲೂರರ ಕರ್ನಾಟಕತ್ವ ಮೀಮಾಂಸೆಯನ್ನು ಕುರಿತಂತೆ ತುಂಬಾ ವಿಸ್ತೃತವಾಗಿ ಚರ್ಚಿಸುವ ಅಗತ್ಯವಿದೆ. ಅಂತಹ ಚರ್ಚೆಗೆ ಪ್ರಸ್ತುತ ಪ್ರಬಂಧವು ಅನುವು ಮಾಡಿಕೊಡುತ್ತದೆ ಎಂದು ಭಾವಿಸಲಾಗಿದೆ.

ಆಕರಸೂಚಿ

ಆಲೂರು ವೆಂಕಟರಾಯರು, ೧೯೯೯, (ಮೂಲ : ೧೯೫೭), ಕರ್ನಾಟಕತ್ವದ ವಿಕಾಸ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ಕೃಷ್ಣಕುಮಾರ್ ಕಲ್ಲೂರು, ೨೦೦೧, (ಮೂಲ:೧೯೫೬), ಕನ್ನಡ ನಾಡಿನ ಸಂಚಾರ ಸಂಪರ್ಕ (ಸಂ.ಟಿ.ಆರ್. ಚಂದ್ರಶೇಖರ), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ

ನಾಗರಾಜ್ ಡಿ.ಆರ್., ೧೯೯೬, ‘ಕನ್ನಡ ರಾಷ್ಟ್ರೀಯತೆಯ ಸ್ವರೂಪ’, ಸಾಹಿತ್ಯ ಕಥನ, ೧೯೯೬, ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ

ರಾಘವೇಂದ್ರರಾವ್‌ ಕೆ.,೨೦೦೦, ಇಮ್ಯಾಜಿನಿಂಗ್ ಆನ್ ಇಮ್ಯಾಜಿನಬಲ್ ಕಮ್ಯುನಿಟೀಸ್, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲ, ಹಂಪಿ, ವಿದ್ಯಾರಣ್ಯ

ಸುಬ್ಬಣ್ಣ ಕೆ.ವಿ., ೨೦೦೦, ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು, ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ