ಪ್ರಸ್ತಾವನೆ

ಅಸ್ಪೃಶ್ಯತೆ ಆಚರಣೆಯನ್ನು ಸಾಮಾಜಿಕ ಪಿಡುಗು ಎಂಬ ರೀತಿಯಲ್ಲಿ ನೋಡಲಾಗುತ್ತಿದೆ. ಅದನ್ನು ಧಾರ್ಮಿಕ ಸಂಗತಿಯನ್ನಾಗಿಯೂ ನೋಡಲಾಗುತ್ತಿದೆ. ಮಡಿಮೈಲಿಗೆಗಳ ಹಿನ್ನೆಲೆಯಲ್ಲಿ ಅದನ್ನು ಪರಿಭಾವಿಸಿಕೊಳ್ಳುವ ಕ್ರಮವಿದೆ. ಇದೆಲ್ಲ ಸರಿ. ಆದರೆ ಅದನ್ನು ಅಭಿವೃದ್ಧಿಯ ಚೌಕಟ್ಟಿನಲ್ಲಿ ಪರಿಭಾವಿಸಿಕೊಳ್ಳುವ ಅಗತ್ಯವಿದೆ. ದೇಶದ ಅಭಿವೃದ್ಧಿಗೆ ಅದು ಕಂಟಕವಾಗಿದೆ ಎನ್ನುವ ನೆಲೆಯಲ್ಲಿ ಅದನ್ನು ಪರಿಭಾವಿಸಿಕೊಳ್ಳಬೇಕಾಗಿದೆ. ಅದನ್ನು ಕೇವಲ ಪರಿಶಿಷ್ಟರ ಸಮಸ್ಯೆಯನ್ನಾಗಿ ಸೀಮಿತಗೊಳಿಸುವುದಕ್ಕೆ ಪ್ರತಿಯಾಗಿ ಅದೊಂದು ದೇಶಕ್ಕೆ – ಸಮಾಜಕ್ಕೆ ಸಂಬಂಧಿಸಿದ ಸಮಸ್ಯೆಯನ್ನಾಗಿ ಪರಿಭಾವಿಸಿಕೊಳ್ಳುವ ಅಗತ್ಯವಿದೆ

[1]. ಇದರ ಆಚರಣೆಯಿಂದಾಗಿ ಇಡೀ ಸಮಾಜವು ಅಭಿವೃದ್ಧಿಯಿಂದ ವಂಚಿತವಾಗಿರುವ ಸಂಗತಿಯನ್ನು ಗುರುತಿಸಬೇಕಾಗಿದೆ. ದೇಶದ ಜನಸಂಖ್ಯೆಯ ಸರಿಸುಮಾರು ಶೇ.೨೪ರಷ್ಟಿರುವ ಪರಿಶಿಷ್ಟರು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪೂರ್ಣವಾಗಿ ತೊಡಗುವುದು ಸಾಧ್ಯವಾಗಿಲ್ಲ. ಅವರ ಶ್ರಮಶಕ್ತಿ – ಬುದ್ಧಿಶಕ್ತಿ ಪೂರ್ಣವಾಗಿ ಅಭಿವೃದ್ಧಿಗೆ ಸಲ್ಲುತ್ತಿಲ್ಲ. ಪ್ರಸ್ತುತ ಪ್ರಬಂಧದಲ್ಲಿ ಅಸ್ಪೃಶ್ಯತೆಯನ್ನು ಅಭಿವೃದ್ಧಿಯ ಚೌಕಟ್ಟಿನಲ್ಲಿ ಪರಿಭಾವಿಸಿಕೊಳ್ಳಲು ಪ್ರಯತ್ನಿಸಲಾಗಿದೆ. ಅಸ್ಪೃಶ್ಯತೆ ಮತ್ತು ಅಭಿವೃದ್ಧಿಗಳ ನಡುವಿನ ಸಂಬಂಧವನ್ನು ಕುರಿತಂತೆ ಚರ್ಚಿಸಲಾಗಿದೆ.

ಭಾರತದ – ಕರ್ನಾಟಕದ ಅಭಿವೃದ್ಧಿಯ ಪರಿಶಿಷ್ಟ ಮತ್ತು ಶಿಷ್ಟ ನೆಲೆಗಳನ್ನು ಗುರುತಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.[2] ಇಲ್ಲಿ ಚರ್ಚೆಯನ್ನು ಹಾಗೂ ಅಂಕಿ – ಅಂಶಗಳನ್ನು ಕರ್ನಾಟಕಕ್ಕೆ ಮಾತ್ರ ಸೀಮಿತಗೊಳಿಸಿ ಕೊಳ್ಳಲಾಗಿದೆ. ನಮ್ಮ ಸಮಾಜ ಸಂದರ್ಭದಲ್ಲಿ ಅಭಿವೃದ್ಧಿಯಿಂದ ವಂಚಿತವಾದ ಮತ್ತು ತೀವ್ರ ದುಸ್ಥಿತಿಯಲ್ಲಿರುವ ಜನ ಸಮುದಾಯವೆಂದರೆ ಪರಿಶಿಷ್ಟರು. ಆದ್ದರಿಂದ ಅಭಿವೃದ್ಧಿಯನ್ನು ಸಮಾಜದಲ್ಲಿ ಅಂಚಿನಲ್ಲಿರುವ ವಂಚಿತರ ನೆಲೆಯಿಂದ ಪರಿಭಾವಿಸಿಕೊಳ್ಳಬೇಕಾದ ಅಗತ್ಯವನ್ನು ಇಲ್ಲಿ ಪ್ರತಿಪಾದಿಸಲಾಗಿದೆ. ಅಭಿವೃದ್ಧಿಯ ಆರಂಭವು ಪರಿಶಿಷ್ಟರ ನೆಲೆಯಿಂದ ಆರಂಭವಾಗಬೇಕಾಗಿದೆ. ಪರಿಶಿಷ್ಟರ ಪದತಲದಿಂದ ಅಭಿವೃದ್ಧಿಯ ಆರಂಭವು ನಡೆಯಬೇಕು. ಸಾಮಾನ್ಯವಾಗಿ ಅಭಿವೃದ್ಧಿಯನ್ನು ಅಖಂಡ ನೆಲೆಯಲ್ಲಿ ಪರಿಭಾವಿಸಿಕೊಳ್ಳುವ ಪರಿಪಾಠವಿದೆ. ಅಭಿವೃದ್ಧಿಯ ಫಲಗಳು ಸಮಾಜದ ಎಲ್ಲರಿಗೂ ಕಾಲಾನುಕ್ರಮದಲ್ಲಿ ದೊರೆಯುತ್ತದೆ. ಎಂಬುದು ಇಲ್ಲಿನ ಪ್ರಮೇಯವಾಗಿದೆ. ಅಭಿವೃದ್ಧಿಗೆ ಎಲ್ಲ ಜನರನ್ನು ಒಳಗೊಳ್ಳುವ ಗುಣವಿದೆಯೆಂದು ಹೇಳಲಾಗಿದೆ. ಆದರೆ ವಸ್ತುಸ್ಥಿತಿ ಹೀಗಿಲ್ಲ. ಅಭಿವೃದ್ಧಿಯ ಫಲಗಳು ಮೇಲಿನಿಂದ ಕೆಳಗೆ ಹರಿದು ಸಮಾಜದ ಕಟ್ಟಕಡೆಯ ಬಡವನನ್ನು ತಲುಪುತ್ತವೆ ಎಂಬುದು ಇದರ ಇನ್ನೊಂದು ಪ್ರಮೇಯವಾಗಿದೆ. ನಮ್ಮ ಸಮಾಜದ ಸಂದರ್ಭದಲ್ಲಿ ಅಭಿವೃದ್ಧಿಯು ಅಖಂಡವಾಗಿರಲು ಸಾಧ್ಯವಿಲ್ಲವೆಂಬುದನ್ನು ತೋರಿಸಲು ಪ್ರಸ್ತುತ ಪ್ರಬಂಧದಲ್ಲಿ ಪ್ರಯತ್ನಿಸಲಾಗಿದೆ. ಸಮಾಜದ ವಿವಿಧ ಜನಸಮುದಾಯಗಳು ಅಭಿವೃದ್ಧಿಯಲ್ಲಿ ಪಾಲನ್ನು ಹೇಗೆ ಪಡೆಯುತ್ತಿವೆ ಎಂಬುದನ್ನು ಗುರುತಿಸುವುದು ಕುತೂಹಲಕರ ಸಂಗತಿಯಾಗಿದೆ.

ಅಭಿವೃದ್ಧಿಯ ಪರಿಶಿಷ್ಟ ಮತ್ತು ಶಿಷ್ಟ ಸ್ವರೂಪಕ್ಕೆ ಲಿಂಗ ಸಂಬಂಧಿ ಆಯಾಮವಿರುವುದನ್ನು ಇಲ್ಲಿ ಚರ್ಚಿಸಲಾಗಿದೆ. ಈ ದೃಷ್ಟಿಯಿಂದಲೂ ಅಖಂಡವಾದ ವಿಶ್ಲೇಷಣೆ ಸಾಧ್ಯವಿಲ್ಲ. ವಾಸ್ತವವಾಗಿ ಅಭಿವೃದ್ಧಿಯಿಂದ ತೀವ್ರ ವಂಚಿತವಾಗಿರುವ ಹಾಗೂ ತೀವ್ರ ದುಸ್ಥಿತಿಯಲ್ಲಿರುವ ಗುಂಪೆಂದರೆ ಪರಿಶಿಷ್ಟ ಮಹಿಳೆಯರು. ಅಭಿವೃದ್ಧಿಯ ಲಿಂಗ ಸಂಬಂಧಿ ಆಯಾಮವನ್ನು ಅಲಕ್ಷಿಸಲು ಸಾಧ್ಯವಿಲ್ಲ. ಪ್ರಸ್ತುತ ಪ್ರಬಂಧದಲ್ಲಿ ಅಭಿವೃದ್ಧಿಯನ್ನು ವಿವಿಧ ಜನಸಮೂಹಗಳ ನೆಲೆಯಿಂದ ಪರಿಭಾವಿಸಿಕೊಳ್ಳಲು ಪ್ರಯತ್ನಿಸಲಾಗಿದೆ. ಪರಿಶಿಷ್ಟರು ಅಭಿವೃದ್ಧಿಯಿಂದ ವಂಚಿತರಾಗಿದ್ದರೆ ಅದರ ಮೂಲದಲ್ಲಿ ಅಸ್ಪೃಶ್ಯತೆಯ ಆಚರಣೆ ಕ್ರಿಯಾಶೀಲವಾಗಿರುವುದನ್ನು ನಾವು ಗುರುತಿಸಬೇಕಾಗುತ್ತದೆ. ಪ್ರಸ್ತುತ ಪ್ರಬಂಧವನ್ನು ೧೯೯೧ ಮತ್ತು ೨೦೦೧ರ ಜನಗಣತಿ ವರದಿಗಳಿಂದ ಪಡೆದ ಮಾಹಿತಿಯ ಮೇಲೆ ಕಟ್ಟಲಾಗಿದೆ. ಪ್ರಸ್ತಾವನೆಯನ್ನು ಸೇರಿಸಿಕೊಂಡು ಐದು ಭಾಗಗಳಲ್ಲಿ ಪ್ರಬಂಧವನ್ನು ಕಟ್ಟಲಾಗಿದೆ. ಎರಡನೆಯ ಭಾಗದಲ್ಲಿ ಅಕ್ಷರ ಸಂಸ್ಕೃತಿಯ ಶಿಷ್ಟ ಮತ್ತು ಪರಿಶಿಷ್ಟ ನೆಲೆಗಳನ್ನು ಕುರಿತಂತೆ ಚರ್ಚಿಸಲಾಗಿದೆ. ಮೂರನೆಯ ಭಾಗದಲ್ಲಿ ದುಡುಮೆಗಾರರ ಶಿಷ್ಟ ಮತ್ತು ಪರಿಶಿಷ್ಟ ನೆಲೆಗಳನ್ನು ಕುರಿತಂತೆ ಚರ್ಚಿಸಲಾಗಿದೆ. ಮೂರನೆಯ ಭಾಗದಲ್ಲಿ ದುಡುಮೆಗಾರರ ಶಿಷ್ಟ ಮತ್ತು ಪರಿಶಿಷ್ಟ ನೆಲೆಗಳನ್ನು ಪರಿಶೋಧಿಸಲಾಗಿದೆ. ಅಸ್ಪೃಶ್ಯತೆಯ ಬದಲಾಗುತ್ತಿರುವ ಸ್ವರೂಪವನ್ನು ನಾಲ್ಕನೆಯ ಭಾಗದಲ್ಲಿ ಚರ್ಚಿಸಲಾಗಿದೆ. ಐದನೆಯ ಭಾಗದಲ್ಲಿ ಶಿಶು ಮರಣ ಪ್ರಮಾಣಕ್ಕೆ ಸಂಬಂಧಿಸಿದ ಜಾತಿ ಸ್ವರೂಪವನ್ನು ಹಿಡಿದಿಡಲಾಗಿದೆ. ಇಡೀ ಚರ್ಚೆಯ ಸಾರಾಂಶವನ್ನು ಕೊನೆಯ ಭಾಗದಲ್ಲಿ ನೀಡಲಾಗಿದೆ. ಚರ್ಚೆಗೆ ಅಗತ್ಯವಾದ ಅಂಕಿ – ಅಂಶಗಳನ್ನು ಕೋಷ್ಟಕಗಳ ರೂಪದಲ್ಲಿ ನೀಡಲಾಗಿದೆ.

ಭಾಗ
ಅಕ್ಷರ ಸಂಸ್ಕೃತಿ ಮತ್ತು ಅಸ್ಪೃಶ್ಯತೆ

ಅಕ್ಷರ ಸಂಸ್ಕೃತಿಯನ್ನು ಅಖಂಡವಾದಿ ನೆಲೆಯಲ್ಲಿ ಚರ್ಚಿಸಿದರೆ ನಮಗೆ ಅದರ ಪರಿಶಿಷ್ಟ ಮತ್ತು ಶಿಷ್ಟ ಸ್ವರೂಪವು ಅರಿವಿಗೆ ಬರುವುದಿಲ್ಲ. ಅಖಂಡವಾದಿ ಚರ್ಚೆಗಳು ಅನೇಕ ಸೂಕ್ಷ್ಮ ಸಂಗತಿಗಳನ್ನು ಮುಚ್ಚಿಹಾಕಿ ಬಿಡುತ್ತವೆ. ಸಾಕ್ಷಾರತೆಗೆ ಸಂಬಂಧಿಸಿದಂತೆ ವಿವರಗಳು ಕೆಳಕಂಡಂತೆ ದೊರೆಯುತ್ತವೆ.

ಸಾಕ್ಷರತೆ : ಜನಗಣತಿ ಮಾಹಿತಿ : ೨೦೦೧

ಕೋಷ್ಟಕ

ಕ್ರ.ಸಂ. ವಿವರಗಳು ಒಟ್ಟು ಮಹಿಳೆಯರು ಪುರುಷರು
ರಾಜ್ಯದ ಒಟ್ಟು ಜನಸಂಖ್ಯೆ ಶೇ. ೬೭.೦೪ ೫೭.೪೫ ೭೬.೨೯
ಪರಿಶಿಷ್ಟ ಜಾತಿ ಶೇ. ೫೨.೯೦ ೪೧.೭೦ ೬೩.೮೦
ಪರಿಶಿಷ್ಟ ವರ್ಗ ಶೇ. ೪೮.೩೦ ೩೬.೬೦ ೫೯.೭೦
ಅಂತರ : ಪ.ಜಾ(೧ – ೨)  – ೧೪.೧೪  – ೧೫.೨೫  – ೧೨.೪೯
೫. ಅಂತರ : ಪ.ಪಂ. (೧ – ೩)  – ೧೮.೭೪  – ೨೦.೮೫  – ೧೬.೫೯

ಈ ಬಗೆಯ ಮಾಪನದಲ್ಲಿ ಸಮಸ್ಯೆಯ ಪೂರ್ಣ ಚಿತ್ರವು ಅನಾವರಣವಾಗುವುದಿಲ್ಲ. ಪರಿಶಿಷ್ಟರ ಸಾಕ್ಷರತೆಯ ಮಟ್ಟವನ್ನೇನೋ ಇದು ಒದಗಿಸುತ್ತದೆ. ಆದರೆ ಶಿಷ್ಟರ ಸಾಕ್ಷರತೆಯ ವಿವರಗಳು ಇಲ್ಲಿ ದೊರೆಯುವುದಿಲ್ಲ. ಶಿಷ್ಟರನ್ನು ಇಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಸೇರಿಸಿ ಬಿಡಲಾಗಿದೆ. ಸಾಕ್ಷರತೆಗೆ ಸಂಬಂಧಿಸಿದ ಅಸಮಾನತೆಯನ್ನು ಇಂತಹ ಮಾನಪನವು ಪೂರ್ಣವಾಗಿ ನೀಡಲು ಸಾಧ್ಯವಿಲ್ಲ.[3]

ಆದ್ದರಿಂದ ಸಾಕ್ಷರತೆಯನ್ನು ಶಿಷ್ಟ ಮತ್ತು ಪರಿಶಿಷ್ಟರಿಗೆ ಸಂಬಂಧಿಸಿದಂತೆ ಮಾಪನ ಮಾಡಿದಾಗ ಅದಕ್ಕೆ ಸಂಬಂಧಿಸಿದ ಅಸಮಾನತೆಯ ಆಳ – ಅಗಲಗಳ ಅರಿವು ನಮಗೆ ಉಂತಾಗುತ್ತದೆ. ಇದನ್ನು ಕೆಳಗಿನ ಕೋಷ್ಟಕ – ೨ರಲ್ಲಿ ತೋರಿಸಿದೆ.

ಸಾಕ್ಷರತೆ: ಶಿಷ್ಟಪರಿಶಿಷ್ಟ ನೆಲೆಗಳು೨೦೦೧

ಕೋಷ್ಟಕ

ವಿವರಗಳು ಅಂತರ
(೪-೩)
ರಾಜ್ಯದ ಒಟ್ಟು
ಜನಸಂಖ್ಯೆ
ಪರಿಶಿಷ್ಟ
ಜನಸಂಖ್ಯೆ
ಶಿಷ್ಟಜನ ಸಂಖ್ಯೆ ಸಾಕ್ಷರತಾ
ಶೇಕಡ ಅಂಶ
ಸಾಕ್ಷರತೆ:ಒಟ್ಟು ಶೇ ೬೭.೦೪ ೫೧.೫೫ ೭೧.೪೫  – ೧೯.೯೦
ಮ. ಶೇ.೫೭.೪೫ ೪೦.೨೩ ೬೩.೩೯  – ೨೩.೧೬
ಪು. ಶೇ ೭೬.೨೯ ೬೨.೫೮ ೮೦.೧೮  – ೧೭.೬೦

ಜನಗಣತಿ ವರದಿ ಪ್ರಕಾರ ಪರಿಶಿಷ್ಟ ಜಾತಿಗೆ ಸಂಬಂಧಿಸಿದಂತೆ ಸಾಕ್ಷರತಾ ಅಂತರ ಶೇ. ೧೪.೧೪ ಅಂಶಗಳಷ್ಟಿದ್ದರೆ. ಪರಿಶಿಷ್ಟ ವರ್ಗಕ್ಕೆ ಸಂಬಂಧಿಸಿದಂತೆ ಅಂತರವು ಶೇ.೧೮.೭೪ರಷ್ಟಿದೆ. ಇದನ್ನು ಶಿಷ್ಟ – ಪರಿಶಿಷ್ಟರಿಗೆ ಸಂಬಂಧಿಸಿದಂತೆ ಲೆಕ್ಕ ಹಾಕಿದಾಗ ಅಂತರವು ಅಧಿಕವಾಗಿರುವುದನ್ನು ಕೋಷ್ಟಕ – ೨ರಲ್ಲಿ ನೋಡಬಹುದುದು. ಒಟ್ಟು ಜನಸಂಖ್ಯೆಗೆ ಸಂಬಂಧಿಸಿದಂತೆ ಸಾಕ್ಷರತೆ ಶೇ. ೬೭.೦೪ ಆದರೆ ಶಿಷ್ಟರ ಸಾಕ್ಷರತೆ ಶೇ. ೭೧.೪೫ ಆದರೆ ಪರಿಶಿಷ್ಟ (ಪ.ಜಾ.+ಪ.ಪಂ) ಸಾಕ್ಷರತೆ ಶೇ. ೫೧.೫೫ ಇಲ್ಲಿನ ಶಿಷ್ಟ – ಪರಿಶಿಷ್ಟರ ನಡುವಿನ ಸಾಕ್ಷರತಾ ಅಂತರ ಶೇ. ೧೯.೯೦ ಅಂಶಗಳಷ್ಟಿದೆ. ಇದು ಕೋಷ್ಟಕ – ೧ರಲ್ಲಿ ಅಂತರಗಳಿಗಿಂತ ಇದು ಅಧಿಕವಾಗಿದೆ.

ಸಾಕ್ಷರತೆಗೆ ಸಂಬಂಧಿಸಿದ ಶಿಷ್ಟ – ಪರಿಶಿಷ್ಟರ ನಡುವಿನ ಅಸಮಾನತೆ ಪ್ರಮಾಣವನ್ನು ಇನ್ನೊಂದು ರೀತಿಯಲ್ಲೂ ತೋರಿಸಬಹುದಾಗಿದೆ. ಇದನ್ನು ಕೋಷ್ಟಕ – ೩ರಲ್ಲಿ ನೋಡಬಹುದು. ಅನೇಕ ದೃಷ್ಟಿಯಿಂದ ಸದರಿ ಕೋಷ್ಟಕವು ಮಹತ್ವದ್ದಾಗಿದೆ.

ಮೊದಲನೆಯದಾಗಿ ಅಕ್ಷರ ಸಂಪತ್ತಿನಲ್ಲಿ ಪರಿಶಿಷ್ಟರ ಪಾಲು ಎಷ್ಟು ಎಂಬುದನ್ನು ಇಲ್ಲಿ ದೃಢಪಡಿಸಿಕೊಳ್ಳಬಹುದು. ಬಹಳ ಸ್ಪಷ್ಟವಾಗಿ ಕಂಡಬರುವ ಸಂಗತಿಯೆಂದರೆ ಪರಿಶಿಷ್ಟರು ಜನಸಂಖ್ಯೆಯಲ್ಲಿ ಎಷ್ಟು ಪಾಲು ಪಡೆದಿದ್ದಾರೋ ಅದಕ್ಕಿಂತ ಕಡಿಮೆ ಪಾಲನ್ನು ಅಕ್ಷರಸ್ಥರಿಗೆ ಸಂಬಂಧಿಸಿದಂತೆ ಪಡೆದಿದ್ದಾರೆ.

ಅಭಿವೃದ್ಧಿಯ ಶಿಷ್ಟ ಮತ್ತು ಪರಿಶಿಷ್ಟ ನೆಲೆಗಳು: ಸಾಕ್ಷರತೆ ೧೯೯೧ ಮತ್ತು ೨೦೦೧

ಕೋಷ್ಟಕ

ವಿವರಗಳು ರಾಜ್ಯದ ಒಟ್ಟು ಮೊತ್ತ ಪರಿಶಿಷ್ಟ / ದಲಿತರು ಶಿಷ್ಯ / ದಲಿತೇರರು
೧೯೯೧ ೨೦೦೧ ೧೯೯೧ ೨೦೦೧ ೧೯೯೧ ೨೦೦೧
೧. ಜನಸಂಖ್ಯೆ (ಲಕ್ಷಗಳಲ್ಲಿ) ಒಟ್ಟು ೪೪೯.೭೭ ೫೨೭.೩೪ ೯೨.೮೫ ೧೨೦.೨೮ ೩೫೬.೯೨ ೪೦೭.೦೬
(೨೦.೬೪) (೨೨.೮೧) (೭೯.೩೬) (೭೭.೧೯)
೨೨೦.೨೫ ೨೫೮.೭೭ ೪೫.೫೨ ೫೯.೩೧ ೧೭೪.೭೩ ೧೯೯.೪೬
(೨೦.೬೬) (೨೨.೯೨) (೭೯.೩೪) (೭೭.೦೮)
ಪು ೨೨೯.೫೧ ೨೬೮.೫೬ ೪೭.೩೩ ೬೦.೯೫ ೧೮೨.೧೮ ೨೦೭.೬೦
(೨೦.೬೨) (೨೨.೬೯) (೭೯.೩೮) (೭೭.೩೧)
೨. ಅಕ್ಷರಸ್ಥರು
(ಲಕ್ಷಗಳಲ್ಲಿ)
ಒಟ್ಟು ೨೧೦.೨೩ ೩೦೭.೭೫ ೨೮.೨೨ ೫೨.೪೯ ೧೮೨.೦೧ ೨೫೫.೨೬
(೧೩.೪೩) (೧೭.೦೬) (೮೬.೫೭) (೮೨.೯೪)
೮೧.೧೪ ೧೨೯.೫೭ ೯.೩೫ ೨೦.೨೩ ೭೧.೭೯ ೧೦೯.೩೪
(೧೧.೪೯) (೧೫.೬೧) (೮೮.೫೧) (೮೪.೩೯)
ಪು ೧೨೮.೮೨ ೧೭೮.೧೮ ೧೮.೮೭ ೩೨.೨೬ ೧೦೯.೯೨ ೧೪೫.೬೨
(೧೪.೬೫) (೧೮.೧೦) (೮೫.೩೫) (೮೧.೮೯)
೩. ಅನಕ್ಷಸ್ಥರು (ಲಕ್ಷಗಳಲ್ಲಿ) ಒಟ್ಟು ೧೬೪.೮೫ ೧೫೧.೩೩ ೪೬.೮೭ ೪೯.೩೩ ೧೧೮.೦೭ ೧೦೧.೯೯
(೨೮.೩೮) (೩೧.೬೦) (೭೧.೬೨) (೬೭.೪೦)
೧೦೨.೨೨ ೯೫.೯೬ ೨೭.೪೦ ೩೦.೬೦ ೭೪.೮೨ ೬೫.೯೨
(೨೬.೮೦) (೩೧.೩೦) (೭೩.೨೦) (೬೮.೭೦)
ಪು ೬೨.೬೩ ೫೫.೩೭ ೧೯.೩೮ ೧೯.೨೯ ೪೩.೨೫ ೩೬.೦೮
(೩೦.೯೯) (೩೪.೮೪) (೬೯.೦೧) (೬೫.೧೬)

ಟಿಪ್ಪಣಿ: ಆವರಣದಲ್ಲಿ ಅಂಕಿ ಒಟ್ಟು ಮೊತ್ತ ಶೇಕಡ ಪ್ರಮಾಣವನ್ನು ಪ್ರತಿನಿಧಿಸುತ್ತವೆ.

ಆದರೆ ಅನಕ್ಷಸ್ಥರಿಗೆ ಸಂಬಂಧಿಸಿದಂತೆ ಮಾತ್ರ ಪರಿಶಿಷ್ಟರ ಪಾಲು ಅವರು ಜನಸಂಖ್ಯೆಯಲ್ಲಿ ಪಡೆದಿರುವುದಕ್ಕಿಂತ ಅಧಿಕವಾಗಿದೆ. ಇದು ೧೯೯೧ ಮತ್ತು ೨೦೦೧ ಎರಡೂ ಕಾಲಘಟ್ಟಗಳಿಗೆ ಅನ್ವಯವಾಗುತ್ತದೆ. ಜನಸಂಖ್ಯೆಯಲ್ಲಿ ಪರಿಶಿಷ್ಟರ ಪಾಲು ೧೯೯೧ರಲ್ಲಿ ಶೇ. ೨೦.೬೪ರಷ್ಟಿದ್ದರೆ ೨೦೦೧ರಲ್ಲಿ ಅವರ ಪಾಲು ಶೇ ೨೨.೮೧ಕ್ಕೇರಿದೆ. ಆದರೆ ಅಕ್ಷರಸ್ಥರಲ್ಲಿ ಅವರ ಪಾಲು ೧೯೯೧ರಲ್ಲಿ ಶೇ ೧೩.೪೩ ರಷ್ಟಿದ್ದರೆ ೨೦೦೧ರಲ್ಲಿ ಅವರ ಪಾಲು ಶೇ ೧೭.೦೬ಕ್ಕೇರಿದೆ. ಇದಕ್ಕೆ ಭಿನ್ನವಾಗಿ ಅನಕ್ಷರಸ್ಥರ‍ಲ್ಲಿ ಅವರ ಪಾಲು ೧೯೯೧ರಲ್ಲಿ ಶೇ ೨೮.೩೮ರಷ್ಟಿದ್ದರೆ ೨೦೦೧ರಲ್ಲಿ ಅದು ಶೇ ೩೨.೬೦ಕ್ಕೇರಿದೆ. ಆದರೆ ಶಿಷ್ಟರಿಗೆ ಸಂಬಂಧಿಸಿದಂತೆ ಅನಕ್ಷರಸ್ಥರ ಪಾಲು ೧೯೯೧ರಲ್ಲಿ ಶೇ. ೭೧.೬೨ರಷ್ಟಿದ್ದುದು ೨೦೦೧ರಲ್ಲಿ ಶೇ. ೬೭.೪೦ಕ್ಕಿಳಿದಿದೆ. ಇದು ಕುತೂಹಲಕಾರಿ ಸಂಗತಿಯಾಗಿದೆ. ಅಕ್ಷರಸ್ಥರಿಗೆ ಸಂಬಂಧಿಸಿದಂತೆ ಪರಿಶಿಷ್ಟರ ಪಾಲು ಅಧಿಕವಾಗುತ್ತಿದ್ದು ಶಿಷ್ಟರ ಪಾಲು ಅಷ್ಟರಮಟ್ಟಿಗೆ ಕಡಿಮೆಯಾಗುತ್ತಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಆದರೆ ಅನಕ್ಷರಸ್ಥರಲ್ಲಿ ಶಿಷ್ಟರ ಪಾಲು ಕಡಿಮೆಯಾಗುತ್ತಿದ್ದು ಪರಿಶಿಷ್ಟರ ಪಾಲು ಅಧಿಕಗೊಳ್ಳುತ್ತಿದೆ. ಇದರ ಇಂತಾರ್ಥವೇನೆಂದರೆ ಶಿಷ್ಟರ ಸಾಕ್ಷರತೆಯು ಯಾವ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆಯೋ ಅದೇ ಪ್ರಮಾಣದಲ್ಲಿ ಪರಿಶಿಷ್ಟ ಅನಕ್ಷರಸ್ಥತಾ ಪ್ರಮಾಣ ಕಡಿಮೆಯಾಗುತ್ತಿಲ್ಲ. ಈ ಸಂಗತಿಯ ಮತ್ತೊಂದು ಮುಗ್ಗುಲನ್ನು ನಾವು ಪರಿಗಣಿಸಬೇಕಾಗುತ್ತದೆ. ಅದು ಸಾಕ್ಷರತೆಯ ಲಿಂಗ ಸಂಬಂಧಿ ಆಯಾಮ ಹಾಗೂ ಅದರ ಶಿಷ್ಟ – ಪರಿಶಿಷ್ಟ ಆಯಾಮ. ಕೋಷ್ಟಕ – ೧ರಲ್ಲಿ ತೋರಿಸಿರುವಂತೆ ಕನಿಷ್ಟ ಸಾಕ್ಷರತೆ ೨೦೦೧ರಲ್ಲಿ ಪರಿಶಿಷ್ಟ ವರ್ಗದ ಮಹಿಳೆಯರಲ್ಲಿ ಕಾಣಬಹುದು(ಶೇ.೩೬.೬೦). ಅದೇ ರೀತಿ ಕೋಷ್ಟಕ – ೨ರಲ್ಲಿ ತೋರಿಸಿದಂತೆ ಶಿಷ್ಟ ಮತ್ತು ಪರಿಶಿಷ್ಟರ ನಡುವಿನ ಸಾಕ್ಷರತಾ ಅಂತರವು ಪುರುಷರಿಗೆ ಸಂಬಂಧಿಸಿದಂತೆ ಶೇ. ೧೭.೬೦ ಅಂಶಗಳಷ್ಟಿದ್ದರೆ ಮಹಿಳೆಯರಿಗೆ ಸಂಬಂಧಿಸಿದಂತೆ ಅದು ಶೇ ೨೩.೧೬ ಅಂಶಗಳಷ್ಟಿದೆ.

ಶಿಷ್ಟ – ಪರಿಶಿಷ್ಟರಿಗೆ ಸಂಬಂಧಿಸಿದಂತೆ ಸಾಕ್ಷರತೆಯ ಮಟ್ಟ ಪರಿಶಿಷ್ಟರಲ್ಲಿ ಕಡಿಮೆಯಿದೆ. ಆದರೆ ಪರಿಶಿಷ್ಟರನ್ನು ತೆಗೆದುಕೊಂಡಾಗ ಕನಿಷ್ಟ ಸಾಕ್ಷರತೆಯು ಪರಿಶಿಷ್ಟ ಮಹಿಳೆಯರಲ್ಲಿದೆ. ಶಿಷ್ಟ ಮತ್ತು ಪರಿಷ್ಟರ ಸಂಬಂಧಗಳನ್ನು ಅಖಂಡವಾಗಿ ಪರಿಭಾವಿಸಿಕೊಂಡಾಗ ಪರಿಶಿಷ್ಟರ ಸ್ಥಾನ ಅಂಚಿನಲ್ಲಿರುತ್ತದೆ. ಆದರೆ ಅವುಗಳ ಸಂಬಂಧಗಳನ್ನು ಲಿಂಗಸ್ವರೂಪದ ನೆಲೆಯಿಂದ ಪರಿಭಾವಿಸಿಕೊಂಡಾಗ ಪರಿಶಿಷ್ಟ ಮಹಿಳೆಯರ ಸ್ಥಾನವು ಅತ್ಯಂತ ಕನಿಷ್ಟತಮವಿರುವುದು ಕಂಡುಬರುತ್ತದೆ.

ಸಾಕ್ಷರತೆಯನ್ನು ಅಭಿವೃದ್ಧಿಯ ಸೂಚಿಯನ್ನಾಗಿ ಮತ್ತು ಅನಕ್ಷರತೆಯನ್ನು ದುಸ್ಥಿತಿಯ ಸೂಚಿಯಾಗಿ ಪರಿಗಣಿಸಿದರೆ ಕರ್ನಾಟಕದಲ್ಲಿ ಪರಿಶಿಷ್ಟರು ತೀವ್ರ ತಾರತಮ್ಯದಿಂದ ದುಸ್ಥಿತಿಯಿಂದ ನರಳುತ್ತಿರುವುದು ಕಂಡುಬರುತ್ತದೆ. ಅಕ್ಷರ ಸಂಸ್ಕೃತಿಯನ್ನು ಶಿಷ್ಟರು ಸಾಪೇಕ್ಷವಾಗಿ ಗುತ್ತಿಗೆ ಹಿಡಿದುಕೊಂಡುಬಿಟ್ಟಿರುವುದು ತಿಳಿಯುತ್ತದೆ. ಅಕ್ಷರ ಸಂಸ್ಕೃತಿಯ ಮಹತ್ವವನ್ನು ಪರಿಶಿಷ್ಟರಿಗೆ ಸಂಬಂಧಿಸಿದಂತೆ ಡಾ. ಬಿ.ಆರ್. ಅಂಬೇಡ್ಕರ್ ಸ್ಪಷ್ಟವಾಗಿ ಗುರುತಿಸಿದ್ದರು. ಲಿಖಿತ ಅಕ್ಷರವನ್ನು ಅವರು ಆರಾಧಿಸುತ್ತಿದ್ದರು. ತಮ್ಮ ಜೀವಮಾನದುದ್ದಕ್ಕೂ ಅವರು ಯಾವುದೇ ಸಮಿತಿ, ಆಯೋಗ ಅಥವಾ ಸರ್ಕಾರದ ಮುಂದೆ ವಾದ ಮಂಡಿಸಬೇಕಾಗಿದ್ದರೆ ಅವರು ಲಿಖಿತ ರೂಪದಲ್ಲಿ ತಮ್ಮ ಅಭಿಪ್ರಾಯವನ್ನು ಸೂಚಿಸುತ್ತಿದ್ದರು. ಮೌಖಿಕ ಸಂಪ್ರದಾಯವನ್ನು ತಬ್ಬಿಕೊಂಡಿರುವ ಪರಿಶೀಷ್ಟರಿಗೆ ಸಮಾಜದಲ್ಲಿ, ಅದರಲ್ಲೂ ಪ್ರತಿಷ್ಠಿತ ಸಮಾಜದ ಎದುರಿಗೆ ಗೌರವನ್ನು ದಕ್ಕಿಸಿಕೊಳ್ಳಬೇಕಾದರೆ ಪರಿಶಿಷ್ಟರು ಅಕ್ಷರ ಸಂಸ್ಕೃತಿಯನ್ನು ಮೈಗುಡಿಸಿಕೊಳ್ಳಬೇಕೆಂಬುದು ಅವರ ನಂಬಿಕೆಯಾಗಿತ್ತು. ಅಕ್ಷರ ಸಂಸ್ಕೃತಿಯ ಮೇಲೆ ಬಾಬಾ ಸಾಹೇಬ್ ಪ್ರಭುತ್ವವನ್ನು ಸಾಧಿಸಿಕೊಂಡಿದ್ದರಿಂದ ಭಾರತ ಅಸ್ಪೃಶ್ಯ ಸಮಾಜದ ನೋವನ್ನು ಪ್ರಪಂಚಕ್ಕೆ ತಿಳಿಸುವುದು ಅವರಿಗೆ ಸಾಧ್ಯವಾಯಿತು. ಅಕ್ಷರವು ನೀಡಿದ ಅಧಿಕಾರದಿಂದ ಅವರು ಬ್ರಾಹ್ಮಣಶಾಹಿಯನ್ನು ಎದುರಿಸುವುದು ಸಾಧ್ಯವಾಯಿತು. ಅಕ್ಷರಕ್ಕೂ ಅಧಿಕಾರಕ್ಕೂ ನಡುವೆ ಇರುವ ಸಂಬಂಧವನ್ನು ಇಂದಿಗೂ ಅಲ್ಲಗಳೆಯುವುದು ಸಾಧ್ಯವಿಲ್ಲ. ಈ ದೃಷ್ಟಿಯಿಂದ ಪರಿಶಿಷ್ಟರಿಗೆ ಅಕ್ಷರವು ತುಂಬಾ ಮಹತ್ವವಾದ ಸಂಗತಿಯಾಗಿದೆ. ಅಕ್ಷರ ಸಂಪತ್ತಿನಿಂದ ವಂಚಿತರಾದ ಪರಿಶಿಷ್ಟರ ಶಿಕ್ಷಣಕ್ಕೆ ವಿಶೇಷ ಗಮನ ನೀಡಬೇಕಾದ ಅಗತ್ಯವಿದೆ.[4] ಶಿಷ್ಟ ಮತ್ತು ಪರಿಶಿಷ್ಟಗಳ ನಡುವಿನ ಭಿನ್ನತೆಯನ್ನು ಸೂಚಿಸುವ ಬಹುಮುಖ್ಯ ಸಂಗತಿಯೆಂದರೆ ಅಕ್ಷರದ ಮೇಲಿನ ಅಧಿಕಾರವಾಗಿದೆ.

ಭಾಗ
ದುಡಿಮೆ : ಶಿಷ್ಟಪರಿಶಿಷ್ಟ ನೆಲೆಗಳು

ಕರ್ನಾಟಕಕ್ಕೆ – ಭಾರತಕ್ಕೆ ಸಂಬಂಧಿಸಿದಂತೆ ದುಡಿಮೆಯ ಶಿಷ್ಟ ಮತ್ತು ಪರಿಶಿಷ್ಟ ನೆಲೆಗಳನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಈ ಬಗೆಯಲ್ಲಿ ದುಡಿಮೆಯನ್ನು, ದುಡಿಮೆಗಾರರನ್ನು ಕುರಿತಂತೆ ಚರ್ಚಿಸದಿದ್ದರೆ ನಮಗೆ ದುಡಿಮೆಗೆ ಸಂಬಂಧಿಸಿದ ಸೂಕ್ಷ್ಮ ಸಂಗತಿಗಳು ಗೋಚರವಾಗುವುದಿಲ್ಲ. ಬಂಡವಾಳ ಸಂಚಯನವು ಶಿಷ್ಟರಿಗೆ ಪೂರಕವಾಗಿರುವುದನ್ನು ಅರ್ಥಮಾಡಿಕೊಳ್ಳಬೇಕಾದರೆ ನಾವು ದುಡಿಮೆಗೆ ಸಂಬಂಧಿಸಿದ ಶಿಷ್ಟ – ಪರಿಶಿಷ್ಟ ನೆಲೆಗಳನ್ನು ಕೂಲಂಕಷವಾಗಿ ಚರ್ಚಿಸಬೇಕಾಗುತ್ತದೆ. ಈ ಬಗೆಯ ವಿಶ್ಲೇಷಣೆಯಿಂದ ಮಾತ್ರ ನಮ್ಮ ಸಮಾಜದ ಸಂದರ್ಭದಲ್ಲಿ ಅಭಿವೃದ್ಧಿಯು ಶಿಷ್ಟರಿಗೆ ಅಭಿಮುಖಿಯಾಗಿರುವ ಮತ್ತು ಪರಿಶಿಷ್ಟರಿಗೆ ವಿಮುಖಿಯಾಗಿರುವ ಸ್ವರೂಪವನ್ನು ಅರ್ಥಮಾಡಿಕೊಳ್ಳಬಹುದು. ದುಡಿಮೆಗೆ ಸಂಬಂಧಿಸಿದ ಒತ್ತಡವನ್ನು ಪರಿಶಿಷ್ಟರು ನಿರ್ವಹಿಸುತ್ತಿದ್ದರೆ ಬಂಡವಾಳ ಸಂಚಯನದ ಅನುಕೂಲಗಳನ್ನು ಶಿಷ್ಟರು ಅನುಭವಿಸುತ್ತಿದ್ದಾರೆ. ಬಂಡವಾಳ ಸಂಚಯನ(ಕ್ಯಾಫಿಟಲ್ ಅಕ್ಯುಮ್ಯುಲೇಶನ್) ಎಂಬುದನ್ನೇ ಅಭಿವೃದ್ಧಿಯೆಂದು ಕರೆಯುವುದಾದರೆ ಅದನ್ನು ಶಿಷ್ಟರು ಗುತ್ತಿಗೆ ಹಿಡಿದಿರುವುದನ್ನು ಗುರುತಿಸಬಹುದಾಗಿದೆ. ಪರಿಶಿಷ್ಟರು ಅಭಿವೃದ್ಧಿಯನ್ನು ಸಾಧಿಸಿಕೊಳ್ಳುವುದಿರಲಿ, ದುಸ್ಥಿತಿಯ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳುವುದರಲ್ಲಿ ವಿಫಲರಾಗುತ್ತಿದ್ದಾರೆ. ಪ್ರಸ್ತುತ ಪ್ರಬಂಧದ ಭಾಗ – ೨ರಲ್ಲಿ ಇದನ್ನು ಸಾಕ್ಷರತೆ – ಅಕ್ಷರ ಸಂಸ್ಕೃತಿಗೆ ಸಂಬಂಧಿಸಿದಂತೆ ಚರ್ಚಿಸಲಾಗಿದೆ. ಈ ಭಾಗ – ೩ರಲ್ಲಿ ದುಡಿಮೆಗೆ ಸಂಬಂಧಿಸಿದ ಶಿಷ್ಟ – ಪರಿಶಿಷ್ಟ ನೆಲೆಗಳನ್ನು ಶೋಧಿಸಲು ಪ್ರಯತ್ನಿಸಲಾಗಿದೆ. ಅಭಿವೃದ್ಧಿ ಮತ್ತು ದುಡಿಮೆಗಳ ನಡುವಿನ ಸಂಬಂಧವನ್ನು ಒತ್ತಿ ಹೇಳುವ ಅಗತ್ಯವಿಲ್ಲ. ದುಡಿಮೆಯ ಶಿಷ್ಟ – ಪರಿಶಿಷ್ಟ ನೆಲೆಗಳನ್ನು ಕುರಿತಂತೆ ಚರ್ಚಿಸುವುದರ ಜೊತೆಗೆ ಇಲ್ಲಿ ಅದರ ಲಿಂಗ ಸಂಬಂಧಿ ಸ್ವರೂಪವನ್ನು ಹಿಡಿದಿಡಲಾಇದೆ. ಅಸ್ಪೃಶ್ಯತೆಯ ಆಚರಣೆಯಿಂದ ಹೆಚ್ಚು ದೌರ್ಜನ್ಯಕ್ಕೆ, ಹಿಂಸೆಗೆ ಪರಿಶಿಷ್ಟ ಮಹಿಳೆಯರು ಒಳಗಾಗಿದ್ದಾರೆ. ಭಾಗ – ೩ರಲ್ಲಿ ದುಡಿಮೆಗೆ ಸಂಬಂಧಿಸಿದ ಶಿಷ್ಟ – ಪರಿಶಿಷ್ಟ ನೆಲೆಗಳನ್ನು ಶೋಧಿಸಲು ಪ್ರಯತ್ನಿಸಲಾಗಿದೆ. ಅಭಿವೃದ್ಧಿ ಮತ್ತು ದುಡಿಮೆಗಳ ನಡುವಿನ ಸಂಬಮಧವನ್ನು ಒತ್ತಿ ಹೇಳುವ ಅಗತ್ಯವಿಲ್ಲ. ದುಡಿಮೆಯ ಶಿಷ್ಟ – ಪರಿಶಿಷ್ಟ ನೆಲೆಗಳನ್ನು ಕುರಿತಂತೆ ಚರ್ಚಿಸುವುದರ ಜೊತೆಗೆ ಇಲ್ಲಿ ಅದರ ಲಿಂಗ ಸಂಬಂಧಿ ಸ್ವರೂಪವನ್ನು ಹಿಡಿದಿಡಲಾಗಿದೆ. ಅಸ್ಪೃಶ್ಯತೆಯ ಆಚರಣೆಯಿಂದ ಹೆಚ್ಚು ದೌರ್ಜನ್ಯಕ್ಕೆ, ಹಿಂಸೆಗೆ ಪರಿಶಿಷ್ಟ ಮಹಿಳೆಯರು ಒಳಗಾಗಿದ್ದಾರೆ. ಭಾಗ – ೩ರಲ್ಲಿ ನಾಲ್ಕು ಉಪಭಾಗಗಳಿವೆ. ಮೊದಲನೆಯ ಉಪಭಾಗ (೩.೧)ದಲ್ಲಿ ದುಡಿಮೆಯ ರಾಚನಿಕ ಸ್ವರೂಪವನ್ನು ಶಿಷ್ಟ – ಪರಿಶಿಷ್ಟ ನೆಲೆಯಲ್ಲಿ ಪರಿಭಾವಿಸಿಕೊಳ್ಳಲಾಗಿದೆ. ದುಡಿಮೆಯಯ ರಾಚನಿಕ ಸ್ವರೂಪವನ್ನು ಗುರುತಿಸುವುದರ ಮೂಲಕ ನಮ್ಮ ಸಮಾಜದ ಸಂದರ್ಭದಲ್ಲಿ ಪರಿಶಿಷ್ಟರು ಕೃಷಿ, ಗಣಿಗಾರಿಕೆ, ಮೀನುಗಾರಿಕೆ, ಕಲ್ಲು ಒಡೆಯುವುದು ಮುಂತಾದ ಚಟುವಟಿಕೆಗಳನ್ನು ಒಳಗೊಂಡ ಪ್ರಾಥಮಿಕ ವಲಯದಲ್ಲಿ ಮುಗಿಬಿದ್ದಿರುವುದನ್ನು ಮತ್ತು ಶಿಷ್ಟರು ಹೆಚ್ಚು ವರಮಾನ ತರುವ, ಪ್ರವರ್ಧಮಾನಕ್ಕೆ ಬರುತ್ತಿರುವ ಉದ್ದಿಮೆ ಮತ್ತು ಸೇವಾ ವಲಯಗಳಿಗೆ ಲಗ್ಗೆ ಹಾಕಿರುವುದನ್ನು ತೋರಿಸಲು ಪ್ರಯತ್ನಿಸಲಾಗಿದೆ. ಅಭಿವೃದ್ಧಿಯ ಮುಂಚೂಣಿಯಲ್ಲಿ ಶಿಷ್ಟರಿದ್ದರೆ ಪರಿಶಿಷ್ಟರು ಅದರಿಂದ ವಂಚಿತರಾಗಿ ಅಂಚಿಗೆ ತಳ್ಳಲ್ಪಟ್ಟಿದ್ದಾರೆ. ಭಾಗ – ೩.೨ರಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಕೃಷಿ ಅವಲಂಬನೆಯ ಶಿಷ್ಟ – ಪರಿಶಿಷ್ಟ ನೆಲೆಗಳನ್ನು ಶೋಧಿಸಲು ಪ್ರಯತ್ನಿಸಲಾಗಿದೆ. ಕೃಷಿ ಅವಲಂಬನೆಯ ಸ್ವರೂಪವನ್ನು ೧೯೯೧ ಮತ್ತು ೨೦೦೧ ಎರಡು ಕಾಲಘಟ್ಟಗಳಿಗೆ ಸಂಬಂಧಿಸಿದಂತೆ ಗುರುತಿಸಲಾಗಿದೆ. ಭಾಗ – ೩.೩ರಲ್ಲಿ ದಿನಗೂಲಿ ದುಡಿಮೆಗಾರರ ಪ್ರಮಾಣವನ್ನು ಶಿಷ್ಟರಿಗೆ ಮತ್ತು ಪರಿಶಿಷ್ಟರಿಗೆ ಸಂಬಂಧಿಸಿದಂತೆ ಗುರುತಿಸಲಾಗಿದೆ. ಕೃಷಿ ಅವಲಂನೆಯು ಹಾಗೂ ದಿನಗೂಲಿ ದುಡಿಮೆಗಾರರ ಪ್ರಮಾಣ ಪರಿಶಿಷ್ಟರಿಗೆ ಸಂಬಂಧಿಸಿದಂತೆ ಅಧಿಕವಾಗಿರುವುದನ್ನು ಮಾಪನ ಮಾಡುವುದರ ಮೂಲಕ ಪರಿಶಿಷ್ಟ ದುಡಿಮೆಗಾರರು ಯಾವ ಬಗೆಯ ಬಡತನವನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಸಾಧಿಸಲು ಪ್ರಯತ್ನಿಸಲಾಗಿದೆ.

ಭಾಗ – ೩.೪ರಲ್ಲಿ ದುಡಿಮೆಯ ಲಿಂಗ ಸಂಬಂಧಿ ನೆಲೆಗಳನ್ನು ವಿಶ್ಲೇಷಿಸಲಾಗಿದೆ.ಇದು ಪ್ರಸ್ತುತ ಪ್ರಬಂಧದ ಮಹತ್ವದ ಭಾಗವೆಂದು ಭಾವಿಸಲಾಗಿದೆ.

ದುಡಿಮೆಯ ರಾಚನಿಕ ಸ್ವರೂಪ

ಕೋಷ್ಟಕ – ೪ ರಲ್ಲಿ ೧೯೯೧ಕ್ಕೆ ಸಂಬಂಧಿಸಿದ ದುಡಿಮೆಗಾರರ ರಾಚನಿಕ ಸ್ವರೂಪವನ್ನು ಮಂಡಿಸಲಾಗಿದೆ.

ಕರ್ನಾಟಕ: ದುಡಿಮೆಯ ರಾಚನಿಕ ಸ್ವರೂಪ : ಶಿಷ್ಟಪರಿಶಿಷ್ಟ ನೆಲೆಗಳು ೧೯೯೧

ಕೋಷ್ಟಕ
(ಸಂಖ್ಯೆ : ಲಕ್ಷಗಳಲ್ಲಿ)

ವಿವರಗಳು ಪ್ರಾಥಮಿಕ ವಲಯ ದ್ವಿತೀಯವಲಯ ತೃತೀಯ ವಲಯ ಒಟ್ಟು
ಸಂಖ್ಯೆ ಶೇಕಡಾ ಸಂಖ್ಯೆ ಶೇಕಡಾ ಸಂಖ್ಯೆ ಶೇಕಡಾ ಸಂಖ್ಯೆ ಶೇಕಡಾ
ಪರಿಶಿಷ್ಟರು / ದಲಿತರು ೩೧.೧೫ ೮೦.೨೨ ೩.೭೩ ೯.೫೮ ೩.೯೬ ೧೦.೨೦ ೩೮.೮೩ ೧೦೦.೦೦
ಶಿಷ್ಟರು ೮೫.೩೪ ೬೩.೬೪ ೧೯.೦೭ ೧೪.೨೨ ೨೯.೬೮ ೨೨.೧೪ ೧೩೪.೯ ೧೦೦.೦೦
ಒಟ್ಟು ೧೧೩.೪೯ ೬೭.೩೭ ೨೨.೭೯ ೧೩.೧೮ ೩೩.೬೪ ೧೯.೪೫ ೧೭೨.೯೨ ೧೦೦.೦೦

ಟಿಪ್ಪಣಿ : ವಿವರಗಳನ್ನು ೧೯೯೧ಕ್ಕೆ ಸೀಮಿತಗೊಳಿಸಿಕೊಳ್ಳಲಾಗಿದೆ. ದುಡಿಮೆಗಾರರ ವಲಯವಾರು ಹಂಚಿಕೆಯ ೨೦೦೧ರ ಜನಗಣತಿ ವಿವರಗಳು ಪ್ರಕಾರದಲ್ಲಿ ದೊರೆಯುತ್ತಿಲ್ಲ.

ಅರ್ಥಶಾಸ್ತ್ರ ಮತ್ತು ಅಭಿವೃದ್ಧಿ ಸಿದ್ಧಾಂತಗಳಲ್ಲಿ ಪ್ರತಿಪಾದಿತವಾಗುತ್ತಿರುವ ಪ್ರಮೇಯವೆಂದರೆ ಯಾವ ಆರ್ಥಿಕತೆಯಲ್ಲಿ ದುಡಿಮೆಗಾರ ವರ್ಗ ಅಧಿಕವಾಗಿ ಪ್ರಾಥಮಿಕ ವಲಯವನ್ನು ಅವಲಂಬಿಸಿಕೊಂಡಿರುವುದೋ ಅಲ್ಲಿ ಆರ್ಥಿಕ ದುಸ್ಥಿತಿ ತೀವ್ರವಾಗಿರುತ್ತದೆ ಎಂಬುದಾಗಿದೆ.[5] ಇಡೀ ಕರ್ನಾಟಕವನ್ನೇ ತೆಗೆದುಕೊಂಡರೆ ಪ್ರಾಥಮಿಕ ವಲಯದ ಅವಲಂಬನೆ ಅಗಾಧವಾಗಿದೆ. ಆದರೆ ಈ ಅವಲಂಬನೆಯ ಪ್ರಮಾಣವು ಶಿಷ್ಟರು ಮತ್ತು ಪರಿಶಿಷ್ಟರ ನಡುವೆ ಭಿನ್ನವಾಗಿದೆ. ಪರಿಶಿಷ್ಟರಿಗೆ ಸಂಬಂಧಿಸಿದಂತೆ ಪ್ರಾಥಮಿಕ ವಲಯದ ಅವಲಂಬನೆ ಶೇ. ೮೦.೨೨ರಷ್ಟಿದ್ದರೆ ದ್ವಿತೀಯ ಮತ್ತು ತೃತೀಯ ವಲಯಗಳ ಅವಲಂಬನೆ ಕೇವಲ ಶೇ. ೧೯.೭೮ ಆದರೆ ಶಿಷ್ಟರಿಗೆ ಸಂಬಂಧಿಸಿದಂತೆ ದುಡಿಮೆಗಾರರು ಪ್ರಾಥಮಿಕ ವಲಯವನ್ನು ಬಿಟ್ಟು ದ್ವಿತೀಯ ಹಾಗೂ ತೃತೀಯ ವಲಯಗಳಿಗೆ ನುಗ್ಗುತ್ತಿದ್ದಾರೆ. ಇವರಲ್ಲಿ ಪ್ರಾಥಮಿಕಕೇತರ ವಲಯಗಳ ಅವಲಂಬನೆ ಶೇ. ೩೬.೩೬.

ಸರ್ವೆಸಾಮಾನ್ಯವಾಗಿ ತಿಳಿದಿರುವಂತೆ ಪ್ರಾಥಮಿಕ ವಲಯದಲ್ಲಿ ತಲಾ ಉತ್ಪನ್ನದ ಪ್ರಮಾಣವು ಪ್ರಾಥಮಿಕೇತರ ವಲಯದಲ್ಲಿನ ತಲಾ ಪ್ರಮಾಣಕ್ಕಿಂತ ಕಡಿಮೆ ಇರುತ್ತದೆ.[6] ಈ ಕಾರಣದಿಂದಾಗಿ ಪ್ರಾಥಮಿಕ ವಲಯವನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರರ ಜೀವನ ಮಟ್ಟವು ಪ್ರಾಥಮಿಕೇತರ ವಲಯಗಳನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರರ ಜೀವನ ಮಟ್ಟಕ್ಕಿಂತ ಕಡಿಮೆಯಿರುತ್ತದೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ೧೯೯೫ – ೯೬ರಲ್ಲಿ ಪ್ರಾಥಮಿಕ ವಲದಯಲ್ಲಿನ ತಲಾ ಉತ್ಪನ್ನ (ಚಾಲ್ತಿ ಬೆಲೆಗಳಲ್ಲಿ) ರೂ ೨೭೦೦. ಆದರೆ ಪ್ರಾಥಮಿಕೇತರ ವಲಯದಲ್ಲಿನ ತಲಾ ಉತ್ಪನ್ನ ರೂ. ೧೦,೨೪೭. ದುಡಿಮೆಯ ರಾಚನಿಕ ಸ್ವರೂಪದ ಶಿಷ್ಟ – ಪರಿಶಿಷ್ಟ ನೆಲೆಗಳನ್ನು ಗುರುತಿಸುವುದರ ಮೂಲಕ ಸಮಾಜದ ಯಾವ ವರ್ಗ ಪ್ರಾಥಮಿಕೇತರ ವಲಯವನ್ನು ಪ್ರವೇಶಿಸುತ್ತಿದೆ. ಮತ್ತು ಅಧಿಕ ಪ್ರಮಾಣದ ತಲಾ ಉತ್ಪನ್ನವನ್ನು ಪಡೆಯುತ್ತಿದೆ ಎಂಬುದನ್ನು ಹಿಡಿದಿಡಬಹುದಾಗಿದೆ.

ಅಭಿವೃದ್ಧಿಯನ್ನು ಅಖಂಡವಾದಿ ನೆಲೆಯಲ್ಲಿ ಪರಿಭಾವಿಸಿಕೊಳ್ಳುವುದಕ್ಕೆ ಪ್ರತಿಯಾಗಿ ಬಿಡಿ ಬಿಡಿಯಾಗಿ ಪೃಥಕ್ಕರಿಸಿದಾಗ ನಮಗೆ ಆರ್ಥಿಕತೆಯಲ್ಲಿನ ಅಸಮಾನತೆಯ ಸೂಕ್ಷ್ಮ ನೆಲೆಗಳ ದರ್ಶನವಾಗುತ್ತದೆ. ಅಸ್ಪೃಶ್ಯತೆ, ತಾರತಮ್ಯ, ಮಡಿ – ಮೈಲಿಗೆ, ಶೋಷಣೆಗಳಿಂದ ಪರಿಶಿಷ್ಟರು ಅಕ್ಷರ ಸಂಪತ್ತಿನಿಂದ ವಂಚಿತರಾಗಿದ್ದಾರೆ. ಅಕ್ಷರ ಸಂಸ್ಕೃತಿಯಿಂದ ವಂಚಿತರಾದ ಕಾರಣದಿಂದಾಗಿ ಪ್ರಾಥಮಿಕೇತರ ವಲಯವನ್ನು ಹೆಚ್ಚು ಹೆಚ್ಚಾಗಿ ಪ್ರವೇಶಿಸಲು ಅವರಿಗೆ ಸಾಧ್ಯವಿಲ್ಲವಾಗಿದೆ. ಜಾಗತೀಕರಣವು ಸಮಾಜದಲ್ಲಿ ಆಳವಾಗಿ ಬೇರೂರಿರುವ ತಾರತಮ್ಯ – ಅಸಮಾನತೆಗಳನ್ನು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆಯನ್ನು ಇಲ್ಲಿ ಗುರುತಿಸಬಹುದಾಗಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ, ಉದ್ದಿಮೆಗೆ ಸಂಬಂಧಿಸಿದಂತೆ ಸರ್ಕಾರವು ಹಿಂದೆ ಸರಿಯುತ್ತಿರುವುದರಿಂದಾಗಿ ಮತ್ತು ಖಾಸಗಿ ವಲಯದ ವರ್ಧನೆಯಿಂದಾಗಿ, ಮಾರ್ಕೆಟ್ಟೀಕರಣದಿಂದಾಗಿ ಪರಿಶಿಷ್ಟರು ಶಿಕ್ಷಣ ಪಡೆಯುವುದು ದುರ್ಲಬವಾಗುತ್ತಿದೆ. ಶಿಕ್ಷಣದಿಂದ ವಂಚಿತರಾದ ಪರಿಶಿಷ್ಟರು ತೀವ್ರಗತಿಯಲ್ಲಿ ವರ್ಧಿಸುತ್ತಿರುವ ಸೇವಾವಲಯವನ್ನು ಪ್ರವೇಶಿಸುವುದು ಕಷ್ಟವಾಗುತ್ತದೆ. ಜಾಗತೀಕರಣ, ಉದಾರವಾದ, ಖಾಸಗೀಕರಣಗಳು ಸಮಾಜದಲ್ಲಿ ಲಾಗಾಯ್ತಿನಿಂದ ಹರಿದುಕೊಂಡು ಬರುತ್ತಿರುವ ಅಸಮಾನತೆ – ತಾರತಮ್ಯಗಳನ್ನು ಗಟ್ಟಿಗೊಳಿಸುತ್ತವೆ ವಿನಾ ನಾಶಮಾಡುತ್ತಿಲ್ಲ.

ಅಭಿವೃದ್ಧಿಗೆ ಸಂಬಂಧಿಸಿದ ಪರಿಶಿಷ್ಟ ಮತ್ತು ಶಿಷ್ಟರ ನಡುವಿನ ಅಸಮಾನತೆಯನ್ನು ಅಮರ್ತ್ಯಸೆನ್ ‘ಅನೂಚಾನವಾಗಿ ಹರಿದುಕೊಂಡು ಬಂದ ಸಂಗತಿಗಳು’ ಎಂದು ಗುರುತಿಸುತ್ತಾರೆ (೨೦೦೨:೨೫೬). ಅವರ ಪ್ರಕಾರ ಜನತಾಂತ್ರಿಕ ಸಂಸ್ಥೆಗಳ ಸಾಧನೆಯು ವಿಸ್ತೃತವಾದ ಸಾಮಾಜಿಕ ಸ್ಥಿತಿಗಳನ್ನು ಅವಲಂಬಿಸಿದೆ. ಭಾರತದಲ್ಲಿನ ಪ್ರಜಾಪ್ರಭುತ್ವದ ವೈಫಲ್ಯಕ್ಕೂ ಮತ್ತು ಅನೂಚಾನವಾಗಿ ಹರಿದುಕೊಂಡು ಬಂದಿರುವ ಸಾಮಾಜಿಕ ಅಸಮಾನತೆಗಳಿಗೂ ನಡುವೆ ಸಂಬಂಧವಿದೆ.[7] ದುಡಿಮೆಯ ರಾಚನಿಕ ಸ್ವರೂಪದ ಶಿಷ್ಟ – ಪರಿಶಿಷ್ಟ ನೆಲೆಗಳನ್ನು ಗತಕಾಲದಿಂದ ಹರಿದುಕೊಂಡು ಬಂದಿರುವ ಸಾಮಾಜಿಕ ಅಸಮಾನತೆಯ ಪರಿಣಾಮವೆಂದು ನೋಡಬೇಕಾಗುತ್ತದೆ.

ಕೃಷಿ ಅವಲಂಬನೆ: ಶಿಷ್ಟಪರಿಶಿಷ್ಟ ನೆಲೆಗಳು

ಶ್ರಮ ಮತ್ತು ಭೂಮಿಗಳ ನಡುವಿನ ಸಂಬಂಧವನ್ನು ಗುರುತಿಸದೆ ಕೃಷಿ ಅಭಿವೃದ್ಧಿಯ ಶಿಷ್ಟ – ಪರಿಶಿಷ್ಟ ನೆಲೆಗಳನ್ನು ಹಿಡಿದಿರುವುದು ಸಾಧ್ಯವಿಲ್ಲ. ದುಡಿಮೆಯ ಅವಕಾಶ ಬಹಳಷ್ಟುಮಟ್ಟಿಗೆ ಭೂಮಾಲೀಕರ ಸಾಮರ್ಥ್ಯವನ್ನು ಅವಲಂಬಿಸಿದೆ. ಶ್ರಮಶಕ್ತಿಯ ಮೇಲಿನ ಭೂಮಾಲೀಕರ ಅಧಿಕಾರವು ಸಮಾಜದಲ್ಲಿನ ಜಾತಿ ಸಂಬಂಧಿ – ಜಾತಿ ತಾರತಮ್ಯಗಳನ್ನು ಅವಲಂಬಿಸಿದೆ. ದುಡಿಮೆಗಾರರ ಕೃಷಿ ಅವಲಂಬನೆಗೂ ಮತ್ತು ಅಸ್ಪೃಶ್ಯತೆಗೂ ಸಂಬಂಧವನ್ನು ಗುರುತಿಸಬಹುದಾಗಿದೆ. ಈ ಸಂಬಂಧದ ಮೂಲಕ ಬಂಡವಾಳ ಸಂಚಯನು ಹೇಗೆ ಶಿಷ್ಟರ – ಭೂಮಾಲೀಕರ ಪರವಾಗಿ ರೂಪುಗೊಳ್ಳುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದಾಗಿದೆ. ಕೋಷ್ಟಕ – ೫ರಲ್ಲಿ ದುಡಿಮೆಗಾರರ ಕೃಷಿ ಅವಲಂಬನೆಯ ಶಿಷ್ಟ – ಪರಿಶಿಷ್ಟ ನೆಲೆಗಳನ್ನು ಗುರುತಿಸಲಾಗಿದೆ.

ಅಭಿವೃದ್ಧಿಯ ಶಿಷ್ಟ ಮತ್ತು ಪರಿಶಿಷ್ಟ ನೆಲೆಗಳು : ದುಡಿಮೆಗಾರರ ಸ್ವರೂಪ ೧೯೯೧ ಮತ್ತು ೨೦೦೧

ಕೋಷ್ಟಕ

ವಿವರಗಳು ರಾಜ್ಯದ ಒಟ್ಟು ಮೊತ್ತ ಪರಿಶಿಷ್ಟ / ದಲಿತರು ಶಿಷ್ಯ/ ದಲಿತೇರರು
೧೯೯೧ ೨೦೦೧ ೧೯೯೧ ೨೦೦೧ ೧೯೯೧ ೨೦೦೧
೧. ಒಟ್ಟು ಪ್ರಧಾನ ದುಡಿಮೆಗಾರರು ಒಟ್ಟು ೧೭೨.೯೨ ೧೯೩.೫೭ ೩೮.೮೩ ೪೪.೪೧ ೧೩೪.೦೯ ೧೪೯.೧೬
೫೦.೦೭ ೫೪.೧೩ ೧೩.೯೭ ೧೫.೨೧ ೩೬.೧೦ ೩೯.೯೨
ಪು ೧೨೨.೮೫ ೧೩೯.೪೪ ೨೪.೮೬ ೨೪೯.೨೦ ೯೩.೯೯ ೧೧೦.೨೪
೨. ಕೃಷಿ ಅವಲಂಬನೆ ಒಟ್ಟು (ಸಾಗುವಳಿದಾರರು + ದಿನಗೂಲಿ ಕೃಷಿ ದುಡಿಮೆಗಾರರು) ೧೦೯.೧೬ ೯೯.೭೦ ೨೯.೦೨ ೨೮.೨೪ ೮೦.೧೪ ೭೧.೪೬
(೬೩.೧೩) (೫೧.೫೧) (೭೪.೭೪) (೬೩.೫೯) (೫೫.೭೭) (೪೭.೯೧)
೩೯.೭೬ ೩೩.೪೧ ೧೧.೫೫ ೧೦.೭೧ ೨೬.೨೧ ೨೨.೭೦
(೭೫.೪೧) (೬೧.೭೨) (೮೨.೬೮) (೭೦.೪೧) (೭೨.೬೦) (೫೮.೩೨)
ಪು ೭೧.೪೦ ೬೬.೨೯ ೧೭.೪೭ ೧೭.೫೩ ೫೩.೯೩ ೪೮.೭೬
(೫೮.೧೨) (೪೭.೫೪) (೭೦.೨೭) (೬೦.೦೩) (೫೫.೦೪) (೪೪.೨೩)

ಟಿಪ್ಪಣಿ: ಆವರಣದಲ್ಲಿ ಕೊಟ್ಟಿರುವ ಅಂಕಿಗಳು ಸಂಬಂಧಿಸಿದ ಒಟ್ಟು ಮೊತ್ತದ ಶೇಕಡ ಪ್ರಮಾಣವನ್ನು ಸೂಚಿಸುತ್ತವೆ.

ಈ ಕೋಷ್ಟಕದಲ್ಲಿ ದುಡಿಮೆಗಾರರ ಕೃಷಿ ಅವಲಂಬನೆ ಪ್ರಮಾಣವನ್ನು ತೋರಿಸಿದೆ. ಕೃಷಿ ಅವಲಂಬನೆಯನ್ನು ಕೋಷ್ಟಕದಲ್ಲಿ ಲಿಂಗವಾರು ಹಾಗೂ ಜಾತಿವಾರು ತೋರಿಸಲಾಗಿದೆ. ಈ ವಿವರಗಳನ್ನು ಎರಡು ಕಾಲಘಟ್ಟಗಳಿಗೆ (೧೯೯೧ ಮತ್ತು ೨೦೦೧) ಸಂಬಂಧಿಸಿದಂತೆ ನೀಡಲಾಗಿದೆ. ಈ ಕೋಷ್ಟಕದ ವಿವರಗಳನ್ನು ಹೀಗೆ ಸಂಕ್ಷಿಪ್ತವಾಗಿ ಸಂಗ್ರಹಿಸಬಹುದಾಗಿದೆ.

  • ಕರ್ನಾಟಕದ ಒಟ್ಟು ಪ್ರಧಾನ ದುಡಿಮೆಗಾರರಲ್ಲಿ ಕೃಷಿ ಅವಲಂಬನೆಯು ೧೯೯೧ರಲ್ಲಿ ಶೇ. ೬೩.೧೩ ಇದ್ದುದು ೨೦೦೧ರಲ್ಲಿ ಅದು ಶೇ ೫೧.೫೧ ಕ್ಕಿಳಿದಿದೆ. ಮಹಿಳೆಯರು ಮತ್ತು ಪುರುಷರಿಗೆ ಸಂಬಂಧಿಸಿದಂತೆಯೂ ಇದು ಕುಸಿದಿದೆ.
  • ಎರಡೂ ಕಾಲಘಟ್ಟಕ್ಕೆ ಸಂಬಂಧಿಸಿದಂತೆ ಕೃಷಿ ಅವಲಂಬನೆಯ ಪ್ರಮಾಣವು ಸಾಪೇಕ್ಷವಾಗಿ ಅತ್ಯಧಿಕ ಮಟ್ಟದಲ್ಲಿದೆ.
  • ಶಿಷ್ಟ ದುಡಿಮೆಗಾರರ ಕೃಷಿ ಅವಲಂಬನೆಯು ಪರಿಶಿಷ್ಟರಿಗಿಂತ ಕಡಿಮೆಯಿದೆ.
  • ಶಿಷ್ಟರು ಮತ್ತು ಪರಿಶಿಷ್ಟರು – ಎರಡೂ ಗುಂಪುಗಳನ್ನು ತೆಗೆದುಕೊಂಡರೆ ಕೃಷಿ ಅವಲಂಬನೆಯು ಪುರುಷರಿಗಿಂತ ಮಹಿಳೆಯರಲ್ಲಿ ಅಧಿಕವಾಗಿದೆ. ಇತ್ತೀಚಿಗಿನ ೨೦೦೧ರ ಜನಗಣತಿಯಂತೆ ಕೃಷಿ ಅವಲಂಬನೆ ಅತ್ಯಧಿಕ ಶೇ ೭೦.೪೧ ಪರಿಶಿಷ್ಟ ಮಹಿಳೆಯರಲ್ಲಿದೆ. ಅತ್ಯಂತ ಕನಿಷ್ಟ ಕೃಷಿ ಅವಲಂಬನೆ ೨೦೦೧ರಲ್ಲಿ ಶೇ ೪೪.೨೩ ಶಿಷ್ಟ ಪುರುಷರಲ್ಲಿ ಕಂಡುಬರುತ್ತದೆ.
  • ಕೃಷಿ ಅವಲಂಬನೆ ಪ್ರಮಾಣವು ಶಿಷ್ಟ ಹಾಗೂ ಪರಿಶಿಷ್ಟ ಇಬ್ಬರಿಗೂ ಸಂಬಂಧಿಸಿದಂತೆ ೧೯೯೧ರಿಂದ ೨೦೦೧ರ ಕಾಲಾವಧಿಯಲ್ಲಿ ಕಡಿಮೆಯಾಗುತ್ತ ನಡೆದಿದೆ.
  • ಈ ಕೋಷ್ಟಕದಲ್ಲಿ (೫) ಕೃಷಿ ಅವಲಂಬನೆಯನ್ನು ಸಾಗುವಳಿದಾರರು ಮತ್ತು ದಿನಗೂಲಿ ಕೃಷಿ ದುಡಿಮೆಗಾರರನ್ನು ಕೂಡಿಸಿ ಲೆಕ್ಕ ಹಾಕಲಾಗಿದೆ.

ಕೋಷ್ಟಕ – ೬ರಲ್ಲಿ ಕೃಷಿ ಅವಲಂಬನೆಯ ಶಿಷ್ಟ – ಪರಿಶಿಷ್ಟ ನೆಲೆಗಳನ್ನು ಬೇರೊಂದು ರೂಪದಲ್ಲಿ ನೀಡಲಾಗಿದೆ. ರಾಜ್ಯದ ಒಟ್ಟು ದುಡಿಮೆಗಾರರಲ್ಲಿ ಪರಿಶಿಷ್ಟರ ಹಾಗೂ ಶಿಷ್ಟ ದುಡಿಮೆಗಾರರ ಪ್ರಮಾಣವನ್ನು ಲೆಕ್ಕ ಹಾಕಲಾಗಿದೆ. ಕೃಷಿ ಅವಲಂಬನೆಯು ಶಿಷ್ಟರಿಗಿಂತ ಸಾಪೇಕ್ಷವಾಗಿ ಪರಿಶಿಷ್ಟರಲ್ಲಿ ಅಧಿಕವಾಗಿದೆ ಎಂಬುದನ್ನು ತೋರಿಸಲು ಪ್ರಸ್ತುತ ಕೋಷ್ಟಕವನ್ನು(೫) ರೂಪಿಸಲಾಗಿದೆ. ಎರಡು ಕಾಲಘಟ್ಟಕ್ಕೆ ಸಂಬಂಧಿಸಿದಂತೆ(೧೯೯೧ ಮತ್ತು ೨೦೦೧) ಕೃಷಿಯನ್ನು ಅವಲಂಬಿಸಿರುವ ದುಡಿಮೆಗಾರರ ಸಂಖ್ಯೆ ಕಡಿಮೆ ಯಾಗುತ್ತಿದೆ. ಇದು ಶಿಷ್ಟರಲ್ಲೂ ಮತ್ತು ಪರಿಶಿಷ್ಟರಲ್ಲೂ ಕಂಡುಬರುತ್ತದೆ. ಕುತೂಹಲದ ಸಂಗತಿಯೆಂದರೆ ರಾಜ್ಯದ ಒಟ್ಟು ಕೃಷಿ ಅವಲಂಬಿತ ದುಡಿಮೆಗಾರರಲ್ಲಿ ಪರಿಶಿಷ್ಟರ ಶೇಕಡಾ ಪ್ರಮಾಣವು ೧೯೯೧ ರಿಂದ ೨೦೦೧ರ ಅವಧಿಯಲ್ಲಿ ಅಧಿಕಗೊಂಡಿದೆ. ಅದು ೧೯೯೧ರಲ್ಲಿ ಶೇ ೨೬.೫೮ರಷ್ಟಿದ್ದುದು ೨೦೦೧ರಲ್ಲಿ ಶೇ ೨೮.೩೨ಕ್ಕೆರಿದೆ. ಕೃಷಿಯನ್ನು ಅವಲಂಬಿಸಿಕೊಂಡಿರುವ ಪರಿಶಿಷ್ಟರ ಸಂಖ್ಯೆ ೧೯೯೧ರಲ್ಲಿ ೨೯.೦೨ ಲಕ್ಷವಿದ್ದುದು ೨೦೦೧ರಲ್ಲಿ ೨೮.೨೪ ಲಕ್ಷಕ್ಕೆ ಇಳಿದಿದೆ. ಆದರೆ ರಾಜ್ಯದ ಒಟ್ಟು ಅವಲಂಬಿತ ದುಡಿಮೆಗಾರರಲ್ಲಿ ಪರಿಶಿಷ್ಟರ ಪ್ರಮಾಣವು ಶೇ ೨೬.೫೮ರಿಂದ ಶೇ ೨೮.೩೨ಕ್ಕೇರಿದೆ. ಕೃಷಿಯನ್ನು ಅವಲಂಬಿಸಿಕೊಂಡಿರುವ ರಾಜ್ಯದ ಒಟ್ಟು ದುಡಿಮೆಗಾರರಲ್ಲಿ ೧೯೯೧ ರಿಂದ ೨೦೦೧ರ ಅವಧಿಯಲ್ಲಿ ಕಡಿಮೆಯಾದದ್ದು ೯.೪೬ ಲಕ್ಷ. ಇದರಲ್ಲಿ ಪರಿಶಿಷ್ಟ ಪಾಲು ಕೇವಲ ೦.೭೮ ಲಕ್ಷವಾದರೆ ಶಿಷ್ಟರ ಪಾಲು ೮.೬೮ಲಕ್ಷ. ಶಿಷ್ಟರಿಗೆ ಸಂಬಂಧಿಸಿದಂತೆ ಕೃಷಿ ಅವಲಂಬನೆಯಲ್ಲಿ ಕಡಿಮೆಯಾಗಿರುವ ಪ್ರಮಾಣವು ಪರಿಶಿಷ್ಟರಲ್ಲಿ ಕಡಿಮೆ ಯಾಗಿರುವ ಪ್ರಮಾಣಕ್ಕಿಂತ ತೀವ್ರ ಅಧಿಕವಾಗಿದೆ.

ರಾಜ್ಯದ ಒಟ್ಟು ದುಡಿಮೆಗಾರರಲ್ಲಿ ಪರಿಶಿಷ್ಟರ ಪ್ರಮಾಣ ಎರಡೂ ಕಾಲಘಟ್ಟಗಳಲ್ಲಿ ಸರಿಸುಮಾರು ಶೇ ೨೩ರಷ್ಟಿದೆ. ಆದರೆ ಕೃಷಿಯನ್ನು ನಂಬಿಕೊಂಡಿರುವ ದುಡಿಮೆಗಾರರಲ್ಲಿ ಪರಿಶಿಷ್ಟರ ಪ್ರಮಾಣ ೧೯೯೧ರಲ್ಲಿ ಶೇ ೨೬.೫೮ರಷ್ಟಿದ್ದುದು ೨೦೦೧ರಲ್ಲಿ ಶೇ ೨೮.೩೨ರಷ್ಟಾಗಿದೆ. ಒಟ್ಟು ದುಡಿಮೆಗಾರರಲ್ಲಿ ಪರಿಶಿಷ್ಟರು ಪಡೆದಿರುವ ಪಾಲಿಗಿಂತ ಹೆಚ್ಚಿನ ಪಾಲನ್ನು ಅವರು ಕೃಷಿ ಅವಲಂಬನೆಗೆ ಸಂಬಂಧಿಸಿದಂತೆ ಪಡೆದಿದ್ದಾರೆ. ಇದು ಏನನ್ನು ಸೂಚಿಸುತ್ತದೆ?

ಕೋಷ್ಟಕ ೫ ಮತ್ತು ೬ ಕೃಷಿಯ ಅವಲಂಬನೆಯ ಒತ್ತಡ ಪರಿಶಿಷ್ಟರ ಮೇಲೆ ಅಧಿಕವಾಗಿರುವುದನ್ನು ತೋರಿಸಿವೆ. ಕೃಷಿ ಅವಲಂಬನೆಯು ಪರಿಶಿಷ್ಟರಿಗೆ ಸಂಬಂಧಿಸಿದಂತೆ ಅಧಿಕವಾಗಿರುವುದರ ಇಂಗಿತಾರ್ಥವೇನು? ಕೃಷಿ ಸಂಬಂಧಿಸಿದ ದುಡಿಮೆಯ ಸಂಕೋಲೆಯಲ್ಲಿ ಪರಿಶಿಷ್ಟರು ಮುಳಿಗಿರುವುದನ್ನು ಇದು ತೋರಿಸುತ್ತಿದೆ.

ಪರಿಶಿಷ್ಟರ ಕೃಷಿ ಅವಲಂಬನೆಯು ಭೂಮಾಲೀಕತ್ವಕ್ಕಿಂತ ಭಿನ್ನವಾಗಿ ಕೂಲಿ, ಜೀತ ಮುಂತಾದ ರೂಪದಲ್ಲಿರಲು ಸಾಧ್ಯ. ಆದರೆ ಶಿಷ್ಟರಿಗೆ ಸಂಬಂಧಿಸಿದಂತೆ ಕೃಷಿ ಅವಲಂಬನೆಯು ಭೂಮಾಲೀಕತ್ವ ಸ್ವರೂಪದಲ್ಲಿರುತ್ತದೆ. ಕೃಷಿ ಕೂಲಿಯ ಅವಲಂಬನೆಯು ಪರಿಶಿಷ್ಟರಿಗೆ ಸಂಬಂಧಿಸಿದಂತೆ ಅಧಿಕವಾಗಿದೆ. ಏಕೆಂದರೆ ಪರಿಶಿಷ್ಟರಲ್ಲಿ ಕೃಷಿ ಅವಲಂಬಿಸಿಕೊಂಡಿರುವ ದುಡಿಮೆಗಾರರಲ್ಲಿ ಸಾಗುವಳಿದಾರರ ಅಥವಾ ಭೂಮಾಲೀಕರ ಪ್ರಮಾಣವು ಶೇ ೪೩.೨೭ರಷ್ಟಾದರೆ ಶಿಷ್ಟರಲ್ಲಿ ಭೂಮಾಲೀಕರ ಪ್ರಮಾಣ ಶೇ ೯೬.೪೮ ಈ ಚರ್ಚೆಯ ತಥ್ಯವೆಂದರೆ ಕೃಷಿಗೆ ಸಂಬಂಧಿಸಿದಂತೆ ಬೆವರು, ಕಣ್ಣೀರು ಮತ್ತು ರಕ್ತ ಹರಿಸಿ ದುಡಿಯುವ ಮಂದಿ ಪರಿಶಿಷ್ಟರಾದರೆ ಅದರ ಫಲವನ್ನು ಅಧಿಕವಾಗಿ ಶಿಷ್ಟರು ಅನುಭವಿಸುತ್ತಿದ್ದಾರೆ. ಮುಂದಿನ ಭಾಗದಲ್ಲಿ (೩.೩) ಬಡತನದ ತೀವ್ರತೆ ಹಾಗೂ ಒತ್ತಡವು ಪರಿಶಿಷ್ಟರಿಗೆ ಸಂಬಂಧಿಸಿದಂತೆ ಅಧಿಕವಾಗಿರುವುದನ್ನು ಕುರಿತಂತೆ ಚರ್ಚಿಸಲಾಗಿದೆ.

[1] ಅಸ್ಪೃಶ್ಯತೆ, ಅಂಬೇಡ್ಕರ್, ಸಂವಿಧಾನ, ಅಭಿವೃದ್ಧಿ ಮುಂತಾದ ವಿಷಯಗಳನ್ನು ಕುರಿತ ಚರ್ಚೆಗೆ ನೋಡಿ ವಲೇರಿಯನ್ ರೋಡ್ರಿಗಸ್‌(ಸಂ), ಬಿ.ಆರ್. ಅಂಬೇಡ್ಕರ್ ಅವರ ಸಾತ್ವಿಕ ಬರಹಗಳು ೨೦೦೨. ಇದರಲ್ಲಿನ ಸಂಪಾದಕರ ಪ್ರಸ್ತಾವನೆ ಭಾಗ ನೋಡಿ. ಮನೋಹರ್ ಯಾದವ್ ೨೦೦೩ ಇವರ ಕೃತಿಯಲ್ಲೂ ಇದರ ಬಗ್ಗೆ ಚರ್ಚೆಗಳಿವೆ.

[2] ಪ್ರಸ್ತುತ ಪ್ರಬಂಧದಲ್ಲಿ ‘ಪರಿಶಿಷ್ಟ’ ಎಂಬುದನ್ನು ಎರಡು ನೆಲೆಗಳಲ್ಲಿ ಪರಿಭಾವಿಸಿ ಕೊಳ್ಳಲಾಗಿದೆ. ಮೊದಲನೆಯದಾಗಿ ಅದು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟವರ್ಗಗಳ ಮೊತ್ತವಾಗಿ ಇಲ್ಲಿ ಬಳಸಲಾಗಿದೆ. ಎರಡನೆಯದಾಗಿ ಬಹಳ ಮುಖ್ಯವಾಗಿ ಅದನ್ನು ಸಾಮಾಜಿಕ ರಚನೆಯ ಅಡಿಪಾಯ, ತಳಮಟ್ಟ ‘ಬುಡ’ ಎಂಬ ಅರ್ಥದಲ್ಲಿ ಬಳಸಲಾಗಿದೆ.

[3] ಕೋಷ್ಟಕ ೧ರಲ್ಲಿ ಮೂರು ಗುಂಪುಗಳಿಗೆ ಸಂಬಂಧಿಸಿದಂತೆ ಸಾಕ್ಷರತೆ ಪ್ರಮಾಣವನ್ನು ನೀಡಲಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ ಎಂಬುದನ್ನು ಪರಿಶಿಷ್ಟ (ಪ.ಜಾ+ಪ.ವ) ಮತ್ತು ಇತರೆ ಜನಸಮೂಹವನ್ನು ಒಳಗೊಂಡಿದೆ. ಅಂದರೆ ಅದು ಕರ್ನಾಟಕದ ಏಳುವರ್ಷಕ್ಕೆ ಮೇಲ್ಪಟ್ಟ ಜನಸಂಖ್ಯೆಯಾದ ೪೫೯.೦೮ಲಕ್ಷ ಹಾಗೂ ಅದರಲ್ಲಿನ ಅಕ್ಷರಸ್ಥರಾದ ೩೦೭೭೫ ಲಕ್ಷ ಜನರನ್ನು ಪ್ರತಿನಿಧಿಸುತ್ತದೆ. ಇದು ಪರಿಶಿಷ್ಟರನ್ನೂ ಒಳಗೊಂಡಿರುವುದರಿಂದ ಒಟ್ಟು ಸಾಕ್ಷರತೆ ಪ್ರಮಾಣ ಕೆಳಮಟ್ಟದಲ್ಲಿರುವುದು ಸಾಧ್ಯ. ಈ ವೈರುಧ್ಯವನ್ನು ನಿವಾರಿಸಲು ಪ್ರಸ್ತುತ ಪ್ರಬಂಧಕ್ಕಾಗಿಯೇ ಪರಿಶಿಷ್ಟರು ಮತ್ತು ಶಿಷ್ಟರರಿಗೆ ಪ್ರತ್ಯೇಕವಾಗಿ ಸಾಕ್ಷರತೆಯನ್ನು ಕಂಡು ಹಿಡಿಯಲಾಗಿದೆ. (ಕೋಷ್ಟಕ ೨) ಇದರ ಪ್ರಕಾರ ಶಿಷ್ಟರ ಒಟ್ಟು ಸಾಕ್ಷರತೆ ಶೇ ೭೧.೪೫ ಪರಿಶಿಷ್ಟರ ಸಾಕ್ಷರತೆ ಶೇ. ೫೧.೫೫.ಇಲ್ಲಿ ಅಂತರ ಶೇ. ೧೯.೯೦. ಅಂಶಗಳಷ್ಟಾಗಿದೆ. ಕೋಷ್ಟಕ ೧ರಲ್ಲಿ ತೋರಿಸಿರುವ ಅಂತರಕ್ಕಿಂತ ಕೋಷ್ಟಕ ೨ರಲ್ಲಿ ತೋರಿಸಿರುವ ಅಂತರವು ಅಧಿಕವಾಗಿದೆ.

[4] ಪರಿಶಿಷ್ಟರ ಅಗತ್ಯಗಳು, ಅಭಿವೃದ್ಧಿ, ಅಕ್ಷರ ಸಂಪಾದನೆ ಮುಂತಾದ ಸಂಗತಿಗಳ ಸ್ವರೂಪವು ಶಿಷ್ಟರ ಅಗತ್ಯಗಳು ಮತ್ತು ಅಭಿವೃದ್ಧಿ ಸ್ವರೂಪಕ್ಕಿಂತ ಭಿನ್ನವಾಗಿರುತ್ತದೆ. ಕರ್ನಾಟಕದ ಇಡೀ ಜನಸಮೂಹವನ್ನು ಒಂದು ಅಖಂಡ ವರ್ಗವಾಗಿ ಪರಿಭಾವಿಸಿಕೊಳ್ಳುವುದು ಅಭಿವೃದ್ಧಿಯ ದೃಷ್ಟಿಯಿಂದ ತುಂಬಾ ಉಪಯುಕ್ತವಾಗಲಾರದು. ಆದ್ದರಿಂದ ಪರಿಶಿಷ್ಟರ ಶಿಕ್ಷಣ, ಉದ್ಯೋಗ, ಆಹಾರ ಭದ್ರತೆ ಮುಂತಾದವುಗಳನ್ನು ವಿಶೇಷವಾಗಿ ಸರ್ಕಾರವು ಪರಿಗಣಿಸುವ ಅಗತ್ಯವಿದೆ. ಈ ಜನವರ್ಗಕ್ಕೆ ಸಂಬಂಧಿಸಿದಂತೆ ಇಲ್ಲ. ಈ ಕಾರಣಕ್ಕೆ ಬಾಬಾ ಸಾಹೇಬ ಅಂಬೇಡ್ಕರ್ ಅವರು ಪರಿಶಿಷ್ಟರನ್ನು ಕುರಿತ ತಮ್ಮ ಪ್ರಸಿದ್ಧ ಪ್ರಬಂಧದಲ್ಲಿ ಅವರನ್ನು “Outside the Fold” ಅಂತ ಕರೆಯುತ್ತಾರೆ. ಅಸ್ಪೃಶ್ಯತೆಯ ವಿವಿಧ ಆಯಾಮ ಗಳನ್ನು ಅರ್ಥ ಮಾಡಿಕೊಳ್ಳಲು ಅಂಬೇಡ್ಕರ್ ಅವರ ಔಟ್‌ಸೈಡ್ ದಿ ಪೊಲ್ಡ್ (ಪರಿಧಿಯಿಂದಾಚಿಗಿನ) ಪ್ರಬಂಧವನ್ನು ಕಡ್ಡಾಯವಾಗಿ ಓದಬೇಕು (ನೋಡಿ: ವಲೇರಿಯನ್ ರೋಗ್ರಿಗಸ್(ಸಂ) ೨೦೦೨ : ೩೨೨ – .೩೩೨.)

[5] ಶ್ರಮಶಕ್ತಿಯ ಮತ್ತು ವರಮಾನ ಸಂರಚನೆಗಳಿಗೆ ಸಂಬಂಧಿಸಿದ ರಾಚನಿಕ ಪರಿವರ್ತನೆ ಕುರಿತಂತೆ ಅಭಿವೃದ್ಧಿ ಅಧ್ಯಯನದಲ್ಲಿ ವ್ಯಾಪಕ ಅಧ್ಯಯನಗಳಾಗಿವೆ. ಇದಕ್ಕೆ ಸಂಬಂಧಿಸಿದ ತಾತ್ವಿಕ ಹಾಗೂ ಪ್ರಾಯೋಗಿಕ ವಿವರಗಳಿಗೆ ನೋಡಿ ಶೇಷಾದ್ರಿ ಬಿ., ೧೯೯೧: ೨೫ – ೨೬.

[6] ಅಭಿವೃದ್ಧಿಯ ಮಟ್ಟವು ಉನ್ನತಕ್ಕೇರಿದಂತೆ, ರಾಚನಿಕ ಬದಲಾವಣೆ ತೀವ್ರವಾದಂತೆ ಶ್ರಮಶಕ್ತಿಯು ಪ್ರಾಥಮಿಕ ವಲಯದಿಂದ ಪ್ರಾಥಮಿಕೇತರ ವಲಯಗಳಿಗೆ ವರ್ಗಾವಣೆಯಾಗಬೇಕಾಗುತ್ತದೆ. ಆದರೆ ನಮ್ಮ ಸಮಾಜದ ಸಂದರ್ಭದಲ್ಲಿ ಪ್ರಾಥಮಿಕ ವಲಯವು ಶ್ರಮಶಕ್ತಿಯ ಬಾಹಳ್ಯದಿಂದ ಕೂಡಿದೆ. ಆದರೆ ಅದರಿಂದ ಹರಿದು ಬರುವ ವರಮಾನದ ಪ್ರಮಾಣ ಕಡಿಮೆಯಾಗುತ್ತಿದೆ. ಈ ಕಾರಣದಿಂದ ಪ್ರಾಥಮಿಕ ವಲಯದಲ್ಲಿ ತಲಾ ಉತ್ಪನ್ನವು ಕಡಿಮೆಯಿರುತ್ತದೆ.

[7] ಪರಿಶಿಷ್ಟರು, ಕರ್ನಾಟಕದ ಸಂದರ್ಭದಲ್ಲಿ ೧೨೦.೨೮ಲಕ್ಷ ಜನವರ್ಗ ಸಮಾಜದ ಅಂಚಿನಲ್ಲಿ ನೆಲೆಗೊಂಡಿದೆ. ಇದನ್ನೇ ಅಂಬೇಡ್ಕರ್ ‘ಔಟ್‌ಸೈಡ್ ದಿ ಪೊಲ್ಡ್‌’ ಅಂತಾ ಕರೆದಿದ್ದಾರೆ. ಈ ಜನಸಮೂಹವು ಅಕ್ಷರ ಸಂಸ್ಕೃತಿಯಿಂದ, ಆಹಾರ ಭದ್ರತೆಯಿಂದ, ಆರೋಗ್ಯ ಭಾಗ್ಯದಿಂದ ವಂಚಿತವಾಗಿದೆ. ಇವು ಪ್ರಜಾಪ್ರಭುತ್ವವು ಗಟ್ಟಿಯಾಗಿ ಸಮಾಜದಲ್ಲಿ ಬೇರೂರಲು ಸಾಧ್ಯವಾಗದಿರುವುದಕ್ಕೆ ಕಾರಣವಾಗಿವೆ. ಈ ಕುರಿತ ಚರ್ಚೆ ನೋಡಿ ಜೀನ್‌ಡ್ರೀಜ್ ಮತ್ತು ಅಮರ್ತ್ಯಸೆನ್‌: ೨೦೦೨:೩೫೬, ಮನೋಹರ್ ಯಾದವ್: ೨೦೦೩:೯೪.